ಪ್ರಥಮಾಂಕ ಮುಖಸಂಧಿ

ನಾಂದಿವೃತ್ತಂ

ಆವನ ಚಿತ್ಪ್ರಭಾವಳಿಯ ತೇಜದೊಳೀ ಭುವನಂಗಳಾವಗಂ |
ಭಾವಕ ರೂಪಮಂತಳೆದು ಮಾಯಕದೊಲ್ಸುಳಿದತ್ತಲೀಭವಂ ||
ಭಾವತರಂಗದೊಳ್ನೆಲಸಲೂರ್ಜಿತ ಶಕ್ತಿಯನಿತ್ತ ಕೃಷ್ಣಗಂ |
ಪಾವನ ಕಣ್ವನಾಮಕ ಪುರೋತ್ಥಿತಗಂಮಣಿದೀವೆ ಕೃತಿಯಂ  || ೧ ||

ಕಂದ

ಕೊಳಲೂದುತೆನವಿಲುಡೆಯಿಂ |
ನಲಿದಾವ್ರಜ ಭೂಮಿಯ ತುರುಗಳ ನಲವಿಂದಂ ||
ಸಲಹಿದ ಗೋಪಾಲಕ ಸಿರಿ |
ಚೆಲುವಣ್ಣನೆ ಪೊರೆಗೆ ಕಣ್ವ ಪುರಪತಿ ಕೃಷ್ಣಂ  || ೨ ||

ಬಿಡಲಾರದೆ ನಿನ್ನಡಿಯಂ |
ಪೊಡಮಟ್ಟುರುಭಕ್ತಿಯೊಳ್ನುತಿಸುವರ್ಗೆಂದುಂ ||
ಕುಡುಮೆಯಕೊಡುಗೈನೀಡುವ |
ಕುಡುಮ ಶ್ರೀ ಮಂಜುನಾಥನೀಯುಗೆ ಶುಭಮಂ  || ೩ ||

ವಾಗರ್ಥಂಗಳ ತೆರದಿಂ |
ದೇಗಳ್ ಬಳಿಸೇರ್ದಪಾರ್ವತೀಪರಮೇಶರ್ ||
ವಾಗರ್ಥಂಗಳನೀಯುತೆ |
ರಾಗವಿದೂರರ್ಸಲಹುಗೆ ಜನನೀ ಜನಕರ್  || ೪ ||

ಪಾರ್ವತಿಸುತನಂಧ್ಯಾನಿಸಿ |
ಪಾರ್ವತಿಸುತದೇಸಿಯೊಳೊವಜನ ಭಾವಿಸುತಂ ||
ಪೂರ್ವದ ಕಬ್ಬಿಗರಡಿಗಂ |
ಭಾವದಿಮಣಿದೀನವೀನ ಕೃತಿಯನುಸುರ್ವೆಂ  || ೫ ||

ರಾಗ ತೋಡಿ ಏಕತಾಳ

ಪೊರೆ ಸಿರಿವರದೆಯೆ ಕರುಣಾಕರೆ | ಭಾರತಿನೀನೊಲಿದತಿ ದಯದೀ || ಪಲ್ಲವಿ ||

ಅರಿಯೆನು ತಿಳಿದಿರಬೇಕಾದುದ | ನರಿತಿಹೆನರಿವಿಲ್ಲದಗರಿಮೆಯ |
ಕಿರಿದಿನ ಕಲೆಗಳನೀದಯ | ವಿರಿಸುತೆ ಪಾಲಿಸು ಗೀರ್ವಾಣಿಯೆ || ಪೊರೆಸಿರಿವರದೆಯೆ || ೬ ||

ಆತ್ಮನನರಿದಾಪರಮಾತ್ಮನ | ಆತ್ಮದೊಳಿರಿಸುತೆ ಪರತತ್ವವ |
ಸಾತ್ಮ್ಯದೊಳರುಹಿದ ಘನಮಹಿಮರ |  ನಾತ್ಮದೊಳಿರಿಸುತೆ ಪೂಜಿಸುವೆನು ||
ಪೊರೆಸಿರಿವರದೆಯೆ || ೭ ||

ರಸನೆಯೊಳೊಸರಲು ಕಬ್ಬದ ನವ | ರಸಕರುಣಿಸುಮತಿಯನು ಸರಸದೆ |
ಶಶಿಮುಖಿನಂಬಿದೆ ನಿನ್ನಡಿಯನು | ಬಿಸಜಾಂಬಕಿಯೆ ಸರ್ವೇಶ್ವರಿ || ಪೊರೆಸಿರಿವರದೆಯೆ || ೮ ||

ರಾಗ ಮಧ್ಯಮಾವತಿ ತ್ರಿವುಡೆತಾಳ

ಶ್ರೀಮದುನ್ನತ ಕನ್ನಡದ ಕವಿ | ತಾಮರಸರವಿಯೆನಿಪ ರನ್ನನ |
ಪ್ರೇಮದಾ ಕೃತಿರತ್ನ ಸಾಹಸ | ಭೀಮವಿಜಯಾ  || ೯ ||

ಭಾರತಾಬ್ಧಿಯ ಸೊದೆಯು ಕವಿಕುಲ | ಸಾರಸತ್ವದತಿರುಳು ಪಂಪನ |
ಚಾರುವಾಣಿಯ ವಿಕ್ರಮಾರ್ಜುನ | ವೀರವಿಜಯಾ  || ೧೦ ||

ಸಕ್ಕದದವರ ವೇಣಿಸಂಹಾ | ರಾಖ್ಯನಾಟಕ ಭೀಮವಿಜಯದೊ |
ಳಿರ್ಕೆಗೊಂಡಿಹುದಮಮಸೊಬಗಿನ | ಚುಕ್ಕೆಯೈಸೇ  || ೧೧ ||

ನೆಲನೊಳಾಸೆಯ ತೊರೆದು ಕ್ಷಾತ್ರದ | ಛಲಕೆಕಾದಿದ ಕೌರವೇಂದ್ರಗೆ |
ಕಳೆಯನಿತ್ತಿಹ ಕವಿಯ ಮೈಸಿರಿ | ತಿಳಿಯಲಿದುವೇ  || ೧೨ ||

ಚಂದ್ರವಂಶದ ಪೌರವೇಯರ | ಸಾಂದ್ರಚರಿತೆಯ ಲಕ್ಷ್ಯಲಕ್ಷಣ |
ದಂದಪೊಸತೆನೆ ತೋರ್ಪುದಿದರೊಳು | ಚಂದವಾಗೀ  || ೧೩ ||

ಕುರುಕುಲಾನ್ವಯ ತಿಲಕರೆನಿಸಿದ | ಕೌರವೇಂದ್ರನು ಪವನತನುಭವ |
ರರಿದುಕಾದಿದ ಧರ್ಮಸಮರದ | ಸರಸಕಥೆಯಾ  || ೧೪ ||

ಬಲ್ಲಿದರಪದಕೆರಗಿ ಚರಿತೆಯ | ಸೊಲ್ಲಯಕ್ಷರ ಪಾಡುಗಬ್ಬದೆ |
ಸೊಲ್ಲಿಸುವೆ ಪಾಂಚಾಲಿಕಬರಿಯ | ಗೆಲ್ಲವೆನಲೂ  || ೧೫ ||

* * *

[-ಪಾಂಡವರ ಪ್ರವೇಶಭೀಮನ ಜೊತೆಗೆ ನರ್ಮಸಚಿವನಿರುತ್ತಾನೆ-]

ಭಾಮಿನಿ

ಕುರುಧರಾತಳ ಧರ್ಮಕ್ಷೇತ್ರದೊ |
ಳೊರಗೆ ಪದಿನೇಳನೆಯ ದಿವಸದ |
ಧುರದಿಕರ್ಣನು ದಿವಸದರ್ಧದೊಳಳಿಯೆಮಾದ್ರೇಶ ||
ಕುರುಧರಾಧಿಪನಿರವ ಕಾಣದೆ |
ಮರುಗೆ ಧರ್ಮಜಪಾರ್ಥನಕುಲರು |
ವರವೃಕೋದರನಧಿಕ ರೋಷದೊಳೆಂದನಗ್ರಜಗೇ  || ೧೬ ||

ರಾಗ ಭೈರವಿ ಝಂಪೆತಾಳ

ಯೇತಕೀಸಂದೇಹ | ಆತತಾಯಿಗನವನ | ಘಾತಿಸದೆಬಿಡೆನಿಂದು | ಧೂರ್ತಕೌರವನಾ || ೧೭ ||
ತಲೆಮರೆಸೆ ಬಾಳುವನೆ | ಛಲದಂಕನಹದುರುಳ | ಬಲವಳಿಯೆ ಬೆಂಡಾದ | ನೆಲದಾಶೆ ತೊರೆದು ||೧೮||
ಎಲ್ಲಿರಲು ಬಿಡೆನವನ | ಸೊಲ್ಲುಗಳನರಿತಿಹುದು | ನಿಲ್ಲದರಸುವೆನೆನುತ | ಮಲ್ಲನವಪೊರಡೇ ||೧೯||

ವಚನ || ಇಂತೊರೆ ಭೀಮಂಜವದೊಳ್, ರಣಕಣದೊಳ್ ತಿರುತಿರುಂಗಿಶೋಧಿಸಿ ಕೌರವನಂ ಕಾಣದೆ ಮತ್ತಂ ||

ಕಂದ

ಬಲಯುತರೆನಿಸಿದ ಖಳರಂ |
ಬಲಿಗೊಟ್ಟಿರಿದೆನ್ನಯ ಗದೆಯಿಂ ಕುರುಕುಲಮ ||
ನ್ನಳಿಸಿದೆ ಭಾಷೆಯ ತೆರದಿಂ |
ದಳಿಯದೆ ದುರ್ಯೋಧನನುಳಿದನೆ ಪಗೆಶೇಷಂ  || ೨೦ ||

ವಚನ || ಇಂತಾಲೋಚಿಸುತ್ತಲಾ ಭೀಮಂ | ಕುರುರಂಗದೊಳ್ | ಕೌರವನಂ ಕಾಣದೆ ಬಸವಳಿದಿರೆ | ಮತ್ತಂ ಶಿಬಿರದೊಳ್ ಪಾಂಚಾಲನಂದನೆಯಾಗಳ್ |

[ದ್ರೌಪದಿ, ದೃಷ್ಟಾದೃಷ್ಟ ಪರಂಪರೆಯೆಂಬ ವೃದ್ಧಕಂಚುಕಿ, ಮತ್ತು ಬುದ್ಧಿಮತಿಯೆಂಬ ಮೇಳದ ಕೆಳದಿ, ಇವರ ಪ್ರವೇಶ]

ರಾಗ ವಸಂತ ಭೈರವಿ ಏಕತಾಳ

ಶ್ರೀರಮಣೀಮಣಿ ದ್ರುಪದಜೆಯೂ | ತಿಳಿಯದೆ | ನೀರನ ಕದನದ ಜಯಸಿರಿಯೂ || ಪಲ್ಲವಿ ||

ಮರುಗುತೆ ಮನದೊಳು ಹದಿಬದೆಯೂ | ಕುರುನೃಪಸೂದನ ಸಹಚರಿಯೂ ||
ಕರಕರೆಗೊಳುತತಿ ಬೆರಗಿನೊಳೂ | ತರಹರಿಸುತಲಗ್ನಿಜೆಯುಸುರಿದಳೂ ||
ಶ್ರೀರಮಣೀಮಣಿ  || ೨೧ ||

ನಂಜಿನ ಮೂಲವನುಳಿಸಿದೆಯಾ | ಎಂಜಲೆನುತಿನಿತಕೆ ತೊರೆದೆಯೊಹಾ |
ಭುಂಜಿಸಲೊಲ್ಲದೆ ಕುರುನೃಪನಾ | ಅಂಜಿದೆಯೇತಕೊಯೆನ್ನಯ ರಮಣಾ || ೨೨ ||

ತಾಳೆನು ಕೆಳದಿಯೆ ಪೊರಡೆನಲೂ | ತಿಳಿದಾ ಕಂಚುಕಿ ಜೊತೆಗಿರಲೂ ||
ಬಾಲೆಯುಬರೆ ರಣ ಭೂಮಿಯಲೀ | ಕಾಲಸ್ವರೂಪನು ನಿಂದಿರೆ ದೂರದಲೀ || ೨೩ ||

ವಚನ || ಆಗಳೆ ಬಂದಲ್ಲಿಗೆ ಪಾಂಚಾಲಿಯು ಮತ್ತಂ ||

ಕಂದ

ರಮಣನ ಪದಕೆರಗುತ್ತಂ |
ಸಮಯೋಚಿತ ಕಾರ್ಯದುಜ್ಜುಗದಿನವಗೆಂದಳ್ ||
ಭ್ರಮೆಯೇನಂತಾಳ್ದಿರ್ಪೆಯೊ |
ಕುಮತಿಯ ಸೀಳ್ದಿಕ್ಕದೇಕುರುನೃಪಾಲಕನಂ  || ೨೪ ||

ರಾಗ ಕೇತಾರಗೌಳ ಅಷ್ಟತಾಳ

ಅನುವಿಗೀಗಲೆ ಮಾಡೆ | ದನುಜಾರಿಪುದುವಾಳ | ಮುನಿಸಿರ್ದು ಮಾಳ್ಪುದೇನಾ ||
ತನುಜ ಶಂತನು ಪೇಳೆ | ಮನದಿನೋಯದೆ ಧರ್ಮ | ತನುಜಾತನೊಪ್ಪುಗೊಂಬಾ || ೨೫ ||

ಸಂಧಿ ಸಾಧಿಸಲತ್ತ | ಪಂದೆಗಳ್ ನಿಮಗಿನ್ನು | ಕುಂದೇನು ವನವಾಸದೀ ||
ಪಿಂದೆಜನ್ಮವನಿತ್ತ | ಅಂದಿನಗ್ನಿಯೊಳೆನ್ನ | ಚಂದಕರ್ಪಿಸುವೆನೋಡೂ || ೨೬ ||

ವಚನ || ಇಂತಾವಲ್ಲಭೆಯುಸುರಲ್ ಖತಿಯೊಳ್ ಪವನಸುತಂ ||

ರಾಗ ಮಾರವಿ ಏಕತಾಳ

ಬಿಡು ಬಿಡು ಶೋಕವ | ನುಡಿಯದಿರೇನನು | ಪೊಡವಿಪ ಕೌರವನಾ ||
ಬಡಿದರುಣೋದಕ | ವಿಡಿದೀ ಕರದೊಳೆ | ಮುಡಿಸುವೆ ವೇಣಿಯನೂ || ೨೭ ||

ವಾಯುಜನುಸುರಿದ | ಬಾಯ್ನುಡಿ ಬರಿದೇನ್ | ಬೀಯವದಾಗುವುದೇ ||
ಆಯದ ಶಿಲೆಯೊಳು | ಪಾಯದಿ ಕೊರೆದಿಹ | ಮಾಯದ ಲಿಪಿಯಹುದೂ || ೨೮ ||

ಉಸುರಿರೆ ಬಿಡುವೆನೆ ಪುಸಿನುಡಿಯಾಗಲು | ಸಸಿಮೊಗದೋರಬಲೇ ||
ವ್ಯಸನವದೇತಕೆ | ಬಿಸಜಾಕ್ಷನೆ ಪೊಸ | ತುಸುರಲು ಮೀರುವೆನೂ  || ೨೯ ||

ಅಂತಕ ಸುತನಾ | ತಂಕವಗಣಿಸೆನು | ಶಂತನುಸುತಮುಖರೂ ||
ಸಂತವಿಸಲು ಮನ | ದಂತರವನೆ ಬಿಡೆ | ಕೊಂತಿಯಮೀರುವೆನೂ || ೩೦ ||

ಕರದೊಳಗೆನ್ನಯ | ಧುರವಿಜಯದ ಗದೆ | ಯಿರೆ ಭುಜಸಿರಿಗೂಡೀ ||
ದುರುಳನ ಕೊಲ್ಲದೆ | ತೆರಳಲು ಸಂಧಿಗೆ | ಮರುಳನೆ ಪವನಜನೂ || ೩೧ ||

ವಚನ || ಆ ಮಾತಂ ಕೇಳ್ದಾಗಲೆ ದ್ರೌಪದಿ ನಚ್ಚಿನ ನಲ್ಲನಂ ಪೊಗಳಲ್ | ಭೀಮಸೇನನ ಮತದೊಳ್ | ಪರಿಹಾಸಕೇಳೀ ಶೀಲನೆನಿಸಿದ | ನರ್ಮಸಚಿವನಿಂತೆಂದಂ ||

ಕಂದ

ಮಾರುತಿ ನಿಜವೇಣೀ ಸಂ |
ಹಾರಂ ಮಾಡಿದೊಡೆ ಮಾಳ್ಪುದೆನಗಂ ನಿನಗಂ ||
ಪೂರಣೆಗೆ ಜಠರ ಪಿಠರಕ |
ಪೂರಣೆ ಗೇಂಮಾಡದೆಂತು ಕರವೆಂ ನಿನ್ನಂ  || ೩೨ ||

ವಚನ || ಎನೆ ಪವನಸುತಂ ||

ಕಂದ

ಕುರುಕುಲ ಜೀವಾಕರ್ಷಣ |
ಪರಿಣತ ಮಿದುಕಾಳಹಸ್ತಮಲ್ಲದೆ ಪರಮೇ ||
ಶ್ವರಿ ಕೇಶಹಸ್ತಮಕ್ಕುಮೆ |
ಪರಾಭವ ಜ್ವಲನ ಧೂಮಕೃಷ್ಣಂ ಕೃಷ್ಣೇ  || ೩೩ ||

ವಚನ || ಎಂದು ನಂಬುಗೆಯನೊರೆದು | ಅಳುತ್ತಂ ಬಂದಾ ದ್ರೌಪದಿಯಂ ನಗುತ್ತುಂ ಪೋಪಂತೆ ಸಂತೋಷವ ಮಾಡಿಸಿದುದರ್ಕೊಡಂಬಟ್ಟು ಚಾರುಹಾಸಿನಿ ನಿಜನಿವಾಸಕ್ಕೆ ಪೋಗಲ್ ಬಳಿಕಂ ||

[ಕೌರವ ಮತ್ತು ಸಂಜಯ ಇವರ ಪ್ರವೇಶ]

ರಾಗ ಭೈರವಿ ಝಂಪೆತಾಳ

ಅತ್ತ ಕುರು ಧರಣೀಶ | ಚಿತ್ತದೊಳು ಕುದಿಗೊಂಡು |
ಮತ್ತವನ ಪರಿಭವದ | ಕುತ್ತಗಳ ನೆನೆದೂ  || ೩೪ ||

ಸುರನದಿಯ ಪುತ್ರ ಹಾ | ಗುರು ಕುಂಭಸಂಭವನೆ |
ಮರೆಯಾದೆ ಸೈಂಧವನೆ | ಗರುವ ಹಾ ಕರ್ಣಾ  || ೩೫ ||

ಧರಣೀಶ ಭಗದತ್ತ | ತರುಣ ಹಾ ದುಶ್ಶಾಸ |
ನರನಾಥ ಮಾದ್ರೇಶ | ದೊರೆಸುಬಲಜಾತಾ  || ೩೬ ||

ಕುರುಕುಲದ ಹಿರಿಯ ಭೂ | ವರನೆ ಭೂರಿಶ್ರವನೆ |
ನರವೀರ ಬೃಹದಬಲ | ಕುರುವಿಂದ ನೃಪರೇ  || ೩೭ ||

ಕುರುಧರೆಯ ಬವರದೊಳು | ಕರುಬರೊಡನಾಹವದಿ |
ಧುರಕೊದಗುತೆನಗಾಗಿ | ಸಿರಿಮೈಯ್ಯನೀಗೀ  || ೩೮ ||

ಸುರಲೋಕದೆಡೆಗೊಂಡ | ನರವೀರರಿರನಮಿಪೆ |
ಬರುವೆನಾ ನಿಮ್ಮೆಡೆಗೆ | ಕರುಣವಿರಬೇಕೂ  || ೩೯ ||

ವಾರ್ಧಕ

ಸಾಗರದ ಮೇರೆಗಿಹ ಧರಣಿಯಂ ಪಾಲಿಸಿದೆ |
ಭೋಗಿಸಿದೆನುರ್ವರೆಯ ಸಂಪದಗಳೆನಿತನಿತ |
ಬಾಗಿಸಿದೆನರಸುಗಳ ಮಕುಟಮಂ ತಿರಿದುಣಲಿಕಟ್ಟಿದೆನು ಪಾಂಡವರನೂ ||
ಆ ಗರತಿ ದುರುಪದಿಯ ಸೊಕ್ಕಮುರಿದಿಕ್ಕಿಸಿದೆ |
ಮೇಗರೆಯ ಮಾತಲ್ಲ ರಿಪುಹನನ ಕಾರ್ಯದು |
ದ್ಯೋಗಕೊರ್ವೊರ್ವರೇ ಸಾಕೆಂದು ಸಾಕಿದೆನು ಗುರುಭೀಷ್ಮರಮರವೃತರಾ || ೪೦ ||

ರಾಗ ಆರಭಿ ರೂಪಕತಾಳ

ಸಾಯಲಾರದ ಕಾರ್ಮುಕ ಶಿವನೆಂದು ಪೇಳ್ವರು | ಮಾಯಕಾರನಾ ದ್ರೌಣಿಯನೂ ||
ಬಾಯ್ಬಡಿಕಗೇನೆಂಬೆ ಕಲಶಜನ ರಥದಿಂದ | ನಾಯ್ಮರಿಯನೆಳೆವಂತೆ ಸೆಳೆದೂ || ೪೧ ||

ಅಸಿಯಿಂದ ದ್ರುಪದಜನಿರಿಯಲ್ಕೆ ತಿರುವಾಯ್ಗೆ | ಕಿಸಲಂಬತಂದುದಿಲ್ಲವನೂ ||
ಪೆಸರಾಂತ ಪಾರ್ವರೀ ದ್ರೋಹಿಗಳ ನೆರೆನಂಬಿ | ಜಸವಳಿದು ಬೆಂಡಾದೆನಿನಿತೂ || ೪೨ ||

ಸುತಸೋದರರು ಪೋದರಿವರಿಂದ ಕಪಟಿಗಳ | ಜೊತೆಗೊಳ್ಳಲಹುದೆನ್ನಗತಿಯೂ ||
ಖತಿಗೊಂಡಡಿರಿಯಲ್ಕೆ ಹಿತವರಿದಡೀಯಲ್ಕೆ | ಗತಿಯಿಲ್ಲ ಶರಣೆಂದು ಪೇಳೆ || ೪೩ ||

ಕಾಯಲು ಕ್ಷತ್ರಿಯರೆ ನಿಜವೀರ‍್ಯರಪ್ಪಂತೆ | ಭೋಯೆನುವ ಬೊಮ್ಮರ್ಕಳಹರೇ ||
ಧೋಯೆನುತೆ ಕೊಲುವಲ್ಲಿ ಬಾಯ್ಬಿಡುವ ಬಲ್ಲಿದರು | ಸಾಯಕದೊಳಿರಿವರೇನವರೂ || ೪೪ ||

ಬಣ್ಣ ನಾಲ್ಕರೊಳುಂಟು ಭೂದಿವಿಜಸಂತತಿಗೆ | ರನ್ನವಾ ದರ್ಭಾಧಿಕಾರಾ ||
ಚೆನ್ನಹುದೆ ನೃಪರಂತೆ ಶಸ್ತ್ರಾಸ್ತ್ರದರಿವಿಜಯ | ದೌನ್ನತಿಕೆ ಸಲ್ಲದಾ ಕುಲಕೇ || ೪೫ ||

ಗೆಲಲಾರ್ಪೊಡಿರಿದರಿಯ ಕೊಲುವುದಲ್ಲದೆ ಪೋದ | ಡಳಿಗೊಂಬುದಾಳ್ಗಿನಿತೆ ಗುಣವೂ ||
ಗೆಲಲೂ ಸಾಯಲು ತೀರದಿರ್ಪಂಗೆ ಸಿರಿಮೈಯ್ಯ | ತೊಲಗದೇನ್ನೆಗಳ್ತೆಯು ನೆಲದೀ || ೪೬ ||

ವಚನ || ಎಂದರಸನವರ್ಗೆ ವಿರಸಮಾಗಿ ಪರುಷಂ ನುಡಿಯೆ ಸಂಜಯಂ ತನ್ನಂತರ್ಗತದೊಳ್ ||

ಕಂದ

ಗುರುಸುತನಂ ನಿಂದಿಪನೀ |
ದುರುಳಂ ರುದ್ರವತಾರಮೂರ್ತಿಯನಮಮಾ ||
ಪೊರೆದರ್ಗೆರಡೆಣಿಸಿದಖಲ ||
ನರಿದನೆ ಗುರುಭೀಷ್ಮ ಕರ್ಣರಿವರಳಿದುದನುಂ  || ೪೭ ||

ವಚನ || ಎಂದು ಸ್ವಗತಾಲೋಚನೆಯಂಮಾಡಿ ಸಂಜಯಂ ಕುರುರಾಜನೊಡನಿಂತೆಂದಂ ||

[ಸೂಚನೆ : ಭಾರತ ಯುದ್ಧದಲ್ಲಿ ಕೌರವಮಹಾರಾಜನ ಪಕ್ಷವನ್ನು ವಹಿಸಿ ವೀರಸ್ವರ್ಗವನ್ನು ಪಡೆದ ಗಣನೀಯರಾದ ವ್ಯಕ್ತಿಗಳಲ್ಲಿ ಕೆಲವರನ್ನು ದುರ್ಯೋಧನನು ಸ್ಮರಿಸಿ ಚಿಂತಿಸುವನು : () ಭೀಷ್ಮರು ಶಂತನು ಚಕ್ರವರ್ತಿಯಿಂದ ದೇವಗಂಗೆಯಲ್ಲಿ ಹುಟ್ಟಿದವರು, ವಸಿಷ್ಠನ ಶಾಪಭ್ರಮಣೆಯಿಂದವತರಿಸಿದ ಎಂಟನೇಯವರು, ಪಾಂಡವ ಕೌರವರ ಮುತ್ತಾತನು – () ದ್ರೋಣಾಚಾರ‍್ಯರು, ಭರದ್ವಾಜ ಮುನಿಯ ವೀರ‍್ಯದಿಂದ ಕಲಶದಲ್ಲಿ ಹುಟ್ಟಿದವರು, ಬಿಲ್ಲಗುರು () ಸೈಂಧವನು ಸಿಂಧೂದೇಶದ ರಾಜನು. ಕೌರವನ ತಂಗಿ ದುಸ್ಸಳೆಯ ಗಂಡ – () ಭಗದತ್ತಪ್ರಾಗ್ಜೋತಿಷದ ರಾಜನು – () ದುಶ್ಶಾಸನಕೌರವನ ಸೋದರನು – () ಮಾದ್ರೇಶ ಮದ್ರಾನಗರದ ರಾಜನಾದ ಶಲ್ಯನು – () ಭೂರಿ ಶ್ರವಸ್ಸುಶಂತನು ಚಕ್ರವರ್ತಿಯ ಸಹೋದರನಾದ, ಬಾಹ್ಲಿಕನ ಮಗನಾದ, ಸೋಮದತ್ತನ ಪುತ್ರನು –  () ಬೃಹದ್ಬಲಕೌಸಲ ದೇಶಾಧಿಪತಿಯು – () ಕುರುವಿಂದ, ವಿಂದ, ಅನುವಿಂದ, ಇವರು ಆವಂತೀದೇಶದ ರಾಜನಾದ ಜಯತ್ಸೇನನ ಮಕ್ಕಳು. ಮಿತ್ರವಿಂದೆ, ಜಯತ್ಸೇನನ ಮಗಳು. ಕೃಷ್ಣನ ಪತ್ನಿಯು. ಇವರ ತಾಯಿಯಾದ ರಾಜಾಧಿದೇವಿಯು ಕುಂತೀದೇವಿಯ ಸಹೋದರಿಯು. (೧೦) ಕರ್ಣಕುಂತೀದೇವಿಯ ಮಗನು, ಸೂರ್ಯಪುತ್ರನು, ಇನ್ನು ಕಾಂಭೋಜರಾಜನಾದ ಸುದಕ್ಷಿಣ. ಕಳಿಂಗರಾಜನಾದ ಶ್ರುತಾಯುಸ್ಸು, ಮಗಧದೇಶದ ರಾಜನಾದ ಜಯತ್ಸೇನ, ತ್ರಿಗರ್ತರಾಜನಾದ ಸುಶರ್ಮ ಇವರೆಲ್ಲರೂ ಕೌರವನ ಪಕ್ಷವನ್ನು ಸೇರಿ ಯುದ್ಧದಲ್ಲಿ ಮೃತಪಟ್ಟವರು. ಭಾರತಯುದ್ಧವು ರಾಕ್ಷಸಸಂವತ್ಸರದ ಮಾರ್ಗಶಿರ ಶು. ೧೩ ಭರಣಿ ನಕ್ಷತ್ರದಲ್ಲಿ ಪ್ರಾರಂಭವಾಗಿ ಮಾರ್ಗಶಿರ ಬ. ೩೦ ಮೂಲಾನಕ್ಷತ್ರಕ್ಕೆ ಅಂತ್ಯವಾಯಿತು. ೧೮ ದಿವಸಗಳ ಯುದ್ಧವಾಗಿದೆ.]

 

ರಾಗ ಬಿಲಹರಿ ಅಷ್ಟತಾಳ
ಅಹ | ಏನ್ವಿಚಾರವಿದಯ್ಯ | ಭೂಪ ಎನ್ನೊಡೆಯನೆ ಕುರುವಂಶ ದೀಪಾ || ಪಲ್ಲವಿ ||

ಬರಿದೇಕೆ ದೂರುವೆಯಹಗುರುವ ನೀನೂ | ನರಕಭಾಜನನಾಗ ಬೇಡ ಕೇಳಿದನೂ ||
ಧರೆಗೆ ತಾನಾರಾಧ್ಯನೆನಿಸಿದ ಜಸಕೇ | ಪರಶುರಾಮನ ಚಾಪಧರಿಸಿದದ್ಭುತಕೇ || ಅಹಹ  || ೪೮ ||

ಪೌರವೇಯರ ಪಾದಕೆರಗಿಸಿದುದಕೇ | ವೀರಬಿಲ್ಲೊವಜನೇನ್ ಪಾರ್ಥನಧುರಕೇ ||
ಜಾರಿ ಪೋದನೆ ಪೇಳು ಅರಿಯೆಯ ನೀನೂ | ಮೀರಿಕಾದುತೆ ದೇಹಕೊಡನವನೇನೂ || ೪೯ ||

ಪೆತ್ತಮಾತೆಯ ಭವ್ಯನಾಮದ ಗುಣಕೇ | ಉತ್ತಮೋತ್ತಮ ಭೀಷ್ಮ ಬಿರುದಿನ ಛಲಕೇ ||
ಮತ್ತೆ ಪಾರ್ಥಿವ ಪಂಥದೌನ್ನತ ಬಲಕೇ | ಹತ್ತು ಸಾವಿರ ರಾಜಪುತ್ರರ ದಿನಕೇ || ೫೦ ||

ಬಲಿಗೊಟ್ಟ ಧುರಧೀರ ಭಾರತಹವದೀ | ಭಳಿರೆಂಬ ಪೆಸರಾಂತನಾತನು ರಣದೀ ||
ಗಳಿಸಲಾರದ ಕೀರ್ತಿವಡೆದನು ಜಗದೀ | ಯಿಳಿಕೆ ಗೈಯ್ಯದೆ ಪೋದ ಪಾರ್ಥನ ಧುರದೀ || ೫೧ ||

ಕಂದ

ಅಂತಕನುಮಿಂದ್ರನುಂ ಕಾ ||
ಮಾಂತಕನುಂಭಾನುಸೂನುವುಂ ಕಳಶಜನುಂ ||
ಶಂತನು ತನೂಜನಾರದೆ ||
ಕುಂತೀಸುತನಂಗೆಲಲ್ಕೆ ಪೆರರಾರ್ತಪರೇ  || ೫೨ ||

ರಾಗ ಕೇತಾರಗೌಳ ಅಷ್ಟತಾಳ

ಅವನೀಶಕೇಳಿನ್ನು ಭುವನ ಮೂರರೊಳುಂಟೆ | ಪವನಸಂಭವ ಮಲ್ಲರೂ ||
ಅವನ ಬಣ್ಣಿಸಲೇನು ಜವನವಿಕ್ರಮಭೀಮ | ದಿವಿಜವಂದಿತ ರುದ್ರನು || ೫೩ ||

ತಿರೆಯೊಳಾರಿಗೆ ಸಾಧ್ಯಪುರುಷಾಖ್ಯ ಮೃಗವನ್ನು | ತರುವನೊರ್ವನ ತೋರಿಸೂ ||
ಗರುವ ನೀನರಿಯೆಯ ಸೌಗಂಧಿಪುಷ್ಪವ | ತರಿದು ತಂದಿಹ ಯಕ್ಷರಾ || ೫೪ ||

ಬಕ ಹಿಡಿಂಬಿಕನು ಕೀಚಕ ಮತ್ತಕಿಮ್ಮೀರ | ಮುಖಜಟಾಸುರ ವರ್ಗವಾ ||
ಚಕಿತಗೊಳ್ಳಿಸಿಕೊಂದ ಪ್ರಕಟಜರಾಸಂಧ | ರಕುತಲಾಂಛಿತ ಭೀಮನೂ || ೫೫ ||

ರಾಗ ಆನಂದಭೈರವಿ ಏಕತಾಳ

ಕುರುನರಪಾಲಕ ಲಾಲಿಸುಮಾತಾ | ದೊರೆನಿನಗೀವಿಧಿಯಾದುದೆ ತಾತಾ || ಪಲ್ಲವಿ ||

ಅರಿದರಿದಿದ ನೀಪೇಳುವದೇನಹ | ಪರಿಕಿಸಲಿಲ್ಲವೆ ಪಾಂಚಾಲೆಯ ವೈವಾಹ ||
ಇರಿಸಿದಲಾಂಛನ ಮತ್ಸ್ಯವಭೇದಿಸಿ | ಕರ ಪಿಡಿದಾಕೆಯ ವರಿಸಿದ ವಿಜಯನ || ೫೬ ||

ಕೇತುಕೃತಾಂಜನೆ ತನಯನು ಸಿರಿವರ | ಸೂತನುಮದನಾರಾತಿ ಕೃತಾಸ್ತ್ರಧರಾ ||
ಪಿತೃಪುರುಹೂತನು ಭುವನಕೃತಾರ್ಥನು | ಕೃತಿಪೂರಣ ಮಹಿಮಾನ್ವಿತ ಫಲುಗುಣ || ೫೭ ||

ಕಂದ

ಪವನಸುತಂ ಗದೆಗೊಳೆ ಗಾಂ |
ಡಿವಿಬಿಲ್ಗೊಳೆ ಕೆಯ್ದುಕೊಳ್ವಮಾರ್ಕೊಳ್ವಧಟರ್ ||
ಭುವನದೊಳಿಲ್ಲವರ್ಗಳಬಾ |
ಹುವಿಕ್ರಮಂ ನಿನಗೆ ಪೊಸತೆ ಕೌರವರಾಜಾ  || ೫೮ ||

ವಚನ || ಧಾರ್ಮಿಕ ಯಮಜಂ, ಯಮಳರದ್ಭುತರ್, ಸಂಧಿಯನೆಸಗೆನೆ, ಫಣಿರಾಜಕೇತನಂ ಸಿಡಿಲ್ದವಗಿಂತೆಂದಂ ||

ರಾಗ ಮಾರವಿ ಏಕತಾಳ

ಸ್ಥಿರವೃತಿ ಸತ್ಯಕೆ ಧರ್ಮಜನೆಂದೆಯ | ಪರಿಕಿಸದಾತನನೂ ||
ಗುರುವಧೆಗಳುಕದೆ ಪುಸಿನುಡಿಯಾಡಿದ | ಗರುವನೆ ಧಾರ್ಮಿಕನೂ || ೫೯ ||

ಅವನೆಹತಾಶ್ವತ್ಥಾಮನದೆಂಬಾ | ತವಕದ ಸತ್ಯವನೂ ||
ಪವಣರಿದುಸುರಲುಕೇಳುತೆ ಕುಂಭಜ | ಜವನೆಡೆಗಾತುರದೀ  || ೬೦ ||

ತೆರಳಲು ಪೇಳ್ದನು ಕುಂಜರನೆಂದಾ | ದುರುಳನು ಸೂನೃತವಾ ||
ಅರಮಗನರುಹಿದ ಸಟೆಯನು ಪೇಳಲು | ಗುರುವರಿದಂತಕಗೇ  || ೬೧ ||

ಬೋಧಿಸೆ ಪೋದನದಲ್ಲದೆ ಪುತ್ರನ | ಶೋಧಿಸೆಪೋಗಿಹನೇ ||
ಚೋದ್ಯವಿದಲ್ಲವೆ ಕಪಟಿಯಧರ್ಮದ | ಸಾಧಕನೆನ್ನುವುದೂ  || ೬೨ ||

ಕಂದ

ಬಿಡುಕಪಟಿಯಪೇರ್ವೆಸರಂ |
ಕಡೆಗಣಿಸುವೆನಾ ವೃಕೋದರನಿರಲಿಜವನೇಂ ||
ತುಡುಗುಣಿ ವನಿತೆಯತುರುಬಂ |
ಪಿಡಿದೆನ್ನನುಜಂ ಸೆಳೆಯಲವನದೇಂ ಗೈದಂ  || ೬೩ ||

ವಾರ್ಧಕ

ಜಗವರಿಯಲಾಸುಪ್ರತೀಕಗಜ ಪಿಳಿಯುತಿರೆ |
ಪೆಗೆಗಿರಿವ ಕಟ್ಟಾಳುತನವೆಲ್ಲಿ ಪೋಯ್ತವನ |
ಪೊಗಳದಿರು ಸಾಹಸವನಂಗಪತಿ ಕಾರ್ಮುಕದೆ ಕೋದೆಳೆದ ಸುಭಟಜವನಾ ||
ವಿಗಡನೇ ಬಾಣಸಿಗ ಮಂದಮತಿ ಮರುತಸುತ |
ಪಗರಣದೆ ಕುರುಬಾಲರಂಕೊಂದಡೇನವಂ |
ಜಗಜಟ್ಟಿ ಕಲಿತಮನೆಪಿರಿತಿನಿಗ ಪೈಶಾಚ ರಕ್ಕಸಿಯ ಗಂಡನಲ್ತೇ  || ೬೪ ||

ರಾಗ ಕೇತಾರಗೌಳ ತ್ರಿವುಡೆತಾಳ

ಎನಗೆ ಜೂಜಿನೊಳಗ್ರಜಾನುಜ | ರನಿತನೆಲ್ಲವ ಸೋತು ತಿರುಕುಳ ||
ತನದೊಳಟವಿಯ ಸೇರಿಬದುಕಿದ | ಬಿನುಗರವರೂ  || ೬೫ ||

ಜಟೆಯವಲ್ಕಲವೇಷಿ ತರಗೆಲೆ | ದಟಿಯ ತಾಪಸನಾಗಿ ಮೆಟ್ಟಲು |
ನಿಟಿಲಲೋಚನ ನಿತ್ತಬಾಣವ | ದಿಟವುನರಗೇ  || ೬೬ ||

ಸುರಪನಾಸನವಿತ್ತಪುತ್ರಗೆ | ಮರುಳುತನವದು ನೂರು ಯಜ್ಞದ |
ಬಿರಿದರೇರುವ ತಾಣವೆಂತದ | ಕರುಹನಹನೂ  || ೬೭ ||

ಸೋವುಗೊಡದಾ ನಾಲ್ಕುತಿಂಗಳ | ಕಾವಿವಸನದ ಜೋಗಿಯಾಗುತೆ ||
ದೇವಕೃಷ್ಣನ ಭಗಿನಿಗೊಲಿಸಿದ | ಸಾವೆಸಹಸಾ  || ೬೮ ||

ಕೈಗೆ ಬಳೆಯನುತೊಟ್ಟು ಸೀರೆಯ | ಮೈಗೆ ನಿರಿವಿಡಿದುಟ್ಟು ಜಡೆ ಮುಡಿ ||
ಯಾಗಿ ತೈತಕಕುಣಿದ ಷಂಡನ | ದಾರ್ಗೆವಿಜಯಾ  || ೬೯ ||

ಕಾಲನಾತ್ಮಜ ಕಂಕನಾಗನೆ | ಮೇಳದೊಲ್ಲಭೆ ಗಂಧದಾಯಿನಿ ||
ಖೂಳಪವನಜ ಕಂಚುಗರ್ಚಕ | ಬಾಲರಿರಲೀ  || ೭೦ ||

ವೇಷಪಲ್ಲಟಗೊಳಿಸಿ ಪುಸಿನುಡಿ | ದೋಷವಲ್ಲೆನುತಾ ವಿರಾಟನ ||
ದಾಸರಾಗಿರುತಿರ್ದ ಪಾಂಡವ | ರೈಸೆಭಟರೂ  || ೭೧ ||

ಕಂದ

ಬಾರದ ಬನ್ನಂಗೊಳಿಸಿದೆ |
ತೀರಿತು ಪೋಧೂರ್ತರ ಪೊಗಳಲ್ಬೇಡವರಂ ||
ಮೀರಿದ ಕಪಟಿಗಳವದಿರ್ |
ವೀರರೆ ಪೇಳ್ಸಂಜಯ ಕೆಸರಿನ ಬೆಳ್ ನೀರೊಲ್  || ೭೨ ||

ವಚನ || ಎಂದು ದುರ‍್ಯೋಧನಂ, ಶಿವನಂ, ಸುರಪಾಲಕನಂ, ಕೌಂತೇಯರುಮನೆಲ್ಲರಂ ನಿರಾಕರಣಂ ಗೈದು ಸಮರೋದ್ಯೋಗಂ ಗೈಯ್ಯೆ, ಸಂಜಯನಂಜದೆ ಮಾರ್ಕೊಳುತಂ ||

ಭಾಮಿನಿ

ಎಲೆ ಧರಾಧಿಪ ಛಲವಿದೊಳ್ಳಿತೆ |
ಬಲದೊಳಧಿಕರು ಭೀಮಪಾರ್ಥರು |
ತಿಳಿದು ನೋಡತಿರಥರು  ಮಹರಥರವರು ಸಮರದಲೀ ||
ಬಲದಿ ನೀಸಮರಥನು ಕಾಳಗ |
ದೊಳಗೆ ರಿಪುಗಳ ಗೆಲಲಸಾಧ್ಯವು |
ನೆಲನೊಳರ್ಧವನಿತ್ತು ಸಂಧಿಯನೆಸಗು ಕೈಮುಗಿವೇ  || ೭೩ ||

ವಚನ || ಎನೆಕೇಳ್ದು ಪಿಂಗಾಕ್ಷನತಿ ವಿಷಮಪರುಷಾವೇಶಧರನಾಗಿ ||

ರಾಗ ತಿಲಾನ ಏಕತಾಳ

ಛೀ ಪೆರರಂ ಪೊಗಳುವ ಧೂರ್ತನೆ ಬಿಡುಬಿಡು | ಆ |
ಗುರುಸಿಂಧುಜರುಪದೇಶವೆ ನಿನಗಿದು | ಕಾ |
ಪುರುಷನೆ ಕಿರಿದೇನ್ ಗೊಳಿಸುವೆ ಮಾರುತಿ | ಮಾ |
ಗರುವನೆ ನುಡಿನುಡಿ || ಛೀಪೆರರಂ  || ೭೪ ||

ನರಮಾಂಸಕೆ ಮಹಮಾಂಸವದೆನ್ನರೆ | ನರತೈಲಕೆ ಮಹತೈಲವದೆನ್ನರೆ |
ನರಬಲಿ ನಿದ್ರೆಗೆ ಮಹದಹಶಬ್ದವ | ಬೆರಸರೆ ನಿರಸವ || ಛೀಪೆರರಂ || ೭೫ ||

ಸ್ನುಹಿಮಹ ವೃಕ್ಷವೆ ಪೆಸರದಕಿಲ್ಲವೆ | ಬಹಿರಾವರಣದ ಬೆಳ್ನುಡಿ, ಭೀಮನ |
ಮಹರಥನೆನುವುದೆ ನಾಚಿಕೆ ಸುಡುಸುಡು | ಸಹಿಗೊಡೆನಿನಿತಕೆ || ಛೀಪೆರರಂ || ೭೬ ||

ವಚನ || ಎನೆ ಸಂಜಯಂ ಸ್ವಗತಾಲೋಚನೆಯಂಮಾಡಿ ||