[1]ಶಾಕ್ವರ ಚಿಹ್ನ | ಪೇಳ್ವೆ ಕೇಳ್ಸುಪ್ರಖ್ಯಾತಾ || ಕೇಳುಕೇಳೆನ್ನ ಮಾತಾ ||ಪ||
ಚೆನ್ನಾಯ್ತು ಕೇಳಯ್ಯಯೆನ್ನಾದಿ ಕಥೆಯ |
ಮುನ್ನೀರ ಕಡೆಯಲ್ಕೆ ಮುನ್ನೊಂದು ಯುಗದೀ |
ಕನ್ನೆನಾಜನಿಸುತ್ತೆ ಪುಣ್ಯಾತ್ಮ ಹರಿಯಾ |
ಪೊನ್ನೀರ್ದವುರಕೇರ್ದೆ ಯಿನ್ನೇನು ಜಗದಾ || ಕೇಳು ಕೇಳೆನ್ನ || ೨೯೬ |
ಜನನಿ ತಾನೆನ್ನುವರ್ ಜನರೆಲ್ಲ ತಿರೆಯಾ |
ಜನಪಾಲ ದುರ್ಯೋಧನನ ಸೇರಿ ಮುದದೀ ||
ಇನಿತೊಂದು ದಿನವಿರ್ದೆ ಕೊನೆಗೀಗ ತೊರೆದೂ |
ಜನನಾಥ ಯಮಜಾತ ನನು ಸೇರಲೊಲಿದೂ || ಕೇಳು ಕೇಳೆನ್ನ || ೨೯೭ ||
ವಸುದೇವಸುತನಿಂದು | ಬೆಸಸಲ್ಕೆ ಪೊರಟೇ |
ಕಸುವಿರ್ಪ ಕಲಿವೀರ | ರೆಸದಂತೆ ಹಿತದೇ ||
ವಶವಾಗಿ ನೆಲಸಿರ್ಪೆ | ಪೊಸತಲ್ಲ ಜಗದೀ |
ವಸುಧೀಶನನು ಸೇರ್ವೆ | ಬಿಸಜಾಕ್ಷ ಮತದೀ || ಕೇಳುಕೇಳೆನ್ನ || ೨೯೮ ||
ಕಂದ
ಇಂದಿರೆಯಾಡಿದ ಮಾತಂ |
ಕಂದುಗೊರಳನೇರ್ಪಿನ ಗುರುಜಂ ಕೇಳ್ದಾಗಳ್ |
ಬೆಂದೊಡಲಿನ ಮರುಕದೊಳಾ |
ಕುಂದೊರೆದವಳಂ ಕನಲ್ದು ಮಗುಳಿಂತೆಂದಂ || ೨೯೯ ||
ರಾಗ ಸುರುಟಿ ಅಷ್ಟತಾಳ
ಸಿರಿಯೆ ನಿನ್ನಯ ಲೀಲೆ ಬಹುಚೋದ್ಯವಾಗಿಹುದೂ || ಪಲ್ಲವಿ ||
ಅರಿಯಲಾರಿಗೆ ಸಾಧ್ಯ | ನಿನ್ನಯನಂಟು | ಬರೆಗಂಟು || ಸಿರಿಯೆ || ಅ. ಪಲ್ಲವಿ ||
ಜಡದಿ ಪುಟ್ಟಿದೆ ನೀನು | ಜಡಜದಿನೆಲಸಿದೆ | ಜಡಗುಣದಾಕೆಯಾದೇ ||
ಬಡವರ್ಗೆ ಕೊಡದೆನೀ | ಬೆಡಗ ತೋರಿಸುತೆ | ಪೊಡವಿಗೆ ಮಾತೆಯಾದೇ |
ಸಿರಿಯೆ ನಿನ್ನಯ ಲೀಲೆ || ೩೦೦ ||
ಕಲಿವೀರರನು ಪಂದೆ | ಗೊಳಿಸಿ ನೀನಲಿದು | ಕುಲಜರ ಬಿಟ್ಟುಪೋದೇ ||
ಕುಲಹೀನರನು ಸೇರ್ದೆ | ವೊಲಿದುನೀ ವೃದ್ಧರ | ಚೆಲುವಿನ ವಿಟರಗೈದೇ ||
ಸಿರಿಯೆ ನಿನ್ನ ಲೀಲೆ || ೩೦೧ ||
ತಂದೆ ಮಕ್ಕಳ ಜುಟ್ಟ | ನೊಂದುಗೂಡಿಸಿದೆ | ಕೊಂದೆನೀಗುರುಶಿಷ್ಯರಾ ||
ಬಂದುನಿಂದೆಡೆಯಲ್ಲಿ | ಹಿಂದುಮುಂದೆನದೆ | ಗೊಂದಲಗೈದೆ ಜನರಾ ||
ಸಿರಿಯೆ ನಿನ್ನಯ ಲೀಲೆ || ೩೦೨ ||
ವಾರ್ಧಕ
ಸುರಗಜದ ವಿಪರೀತ ಕೌಸ್ತುಭದ ಕಾಠಿಣ್ಯ |
ಸರಸತಿಯವಾಚಾಳ ಚಂದ್ರಮನ ಕೌಟಿಲ್ಯ |
ಗರಳದತಿ ಚಿತ್ರವಧೆ ನಾರದನ ಕಲಹತ್ವಸುರೆಯ ಸೊರ್ಕೆಂಬುದಿನಿತೂ ||
ಸರಿನಿನಗೆ ಸಂಸರ್ಗಪಾಲ್ಗಡಲ ಮಥನದೊಳ್ |
ಸಿರಿನಿನ್ನ ಜೊತೆಪುಟ್ಟಿದರಗುಣಂ ನಿನಗಿರ್ಕೆ |
ಹರಿಯಿದಕೆ ಮೆಚ್ಚಿದನೆ ಸಾಧ್ವಿಯೇ ಕಡುಧೂರ್ತೆ ನೀಲೋಕಮಾತೆಯಹುದೇ || ೩೦೩ ||
ರಾಗ ಮಾರವಿ ಏಕತಾಳ
ನಡೆನಡೆಮೂಳಿಯೆ | ನುಡಿಯದಿರೆನ್ನೊಳು | ಬೆಡಗನು ಪಾಂಡವರಾ ||
ಕಡುಗಲಿಯೇನ್ನರ | ಗಡಭೀಮನೆ ಬಿಡು | ಜಡಮತಿ ಧರ್ಮಜನಾ || ೩೦೪ ||
ಗುರುಸುತನಾರಿಹನೆಂಬುದನರಿವೆಯ | ಬರಡರ ಗಣಿಸುವೆನೇ ||
ಪೊರೆದಾ ಕುರುಪತಿ ಬಳಿಯಿಂ ನಿನ್ನನು | ಮುರಹರ ತೊಲಗಿಪನೇ || ೩೦೫ ||
ಪುರುಷೋತ್ತಮನಳವರಿವೆನು ಕಪಟಿಯ | ತುರುಗಳ ಕಾವವನಾ ||
ಕುರುಕುಲದೊಲ್ಲಭನಿರುತಿರೆ ನಿನ್ನನು | ಕರೆಯುವ ಚೌರ್ಯಗನಾ || ೩ ||
ಕೇಳದೆ ಪೋದರೆ ಸೀಳುವೆ ನಿನ್ನಯ | ಬಾಳಿನ ಮುಂದಲೆಯಾ ||
ತೋಳಿನ ಬಲದೊಳು ಪಾಲಿಪನಾರಿಹ | ಪೇಳ್ಮಲೆಯುವತಲೆಯಾ || ೩೦೬ ||
ವಚನ || ಎಂದಶ್ವತ್ಥಾಮಂ ಕೋಪಾಟೋದಿಂದಾಡಲ್ ||
ಕಂದ
ಅತ್ತಲಸುರಾರಿ ಬೆಸಸಿದ |
ನಿತ್ತಲ್ ರುದ್ರಾವತಾರ ನೆಳೆದೊಯ್ದಪನೆಂ ||
ದತ್ತಪುಲಿಯಿತ್ತದರಿಯೆಂ |
ದತ್ತಿತ್ತಡಿಯಿಡದೆ ಲಕ್ಷ್ಮಿತಳವೆಳಗಾದಳ್ || ೩೦೭ ||
ಭಾಮಿನಿ
ಬೆದರುತಿಂದಿರೆಯಳುಕಿನಿಂದಿರೆ |
ಗದರಿಸುತ ಗುರುಸುತನು ಕೋಪದಿ |
ಪದುಮನಾಭನ ಸತಿಯ ಮುಂದಲೆವಿಡಿದು ರಭಸದಲೀ ||
ಮದದ ಮೋಡಿಗೆ ಮದ್ದಿದೆನುತಲಿ |
ಸುದತಿಯನು ಸೆಳೆದೊಯ್ದು ತಂದನು |
ಕದನರಂಗದೆ ಬಿದ್ದನೃಪನೆಡೆಗಾಗ ತವಕದಲೀ || ೩೦೮ ||
ರಾಗ ಆರಭಿ ರೂಪಕತಾಳ
ಗದೆಯ ಘಾತದೊಳೂರು | ಪದದ ಘಾತದೆಮಕುಟ | ಸದೆದಲ್ಲಿ ಭಂಗಮಾಗಿರ್ದಾ ||
ಅಧಿರಾಜ ಕೌರವೇಶ್ವರನಿರ್ಪ ದುಸ್ಥಿತಿಯ || ಮದನಾರಿ ಪ್ರತಿರೂಪನೋಡೇ || ೩೦೯ ||
ನೆತ್ತಿಯೊಳ್ಮಿದುಳೊಡೆದು | ನೆತ್ತರಿನಧಾರೆಗಳ್ | ಮೆತ್ತಿರಲು ಸುರಿಯುತ್ತೆ ಮೊಗದೀ ||
ನೆತ್ತರನೆಕಾರುತ್ತ ಕುರುಭೂಪ ಮುಳುಗಿರ್ದ | ನೆತ್ತರಿನ ಕೆಸರೊಳಾಕಣದೀ || ೩೧೦ ||
ಕಳಶಸಂಭವ ಪುತ್ರನಿಂತಿರ್ಪಭೂವರನ | ಗಳಿತಾಶ್ರುಲೋಚನದೊಳಾಗಾ ||
ತಲೆದೂಗುತೀಕ್ಷಿಸುತೆ ಕಾಣಲಾರದೆನೊಂದು | ಬಳಿ ಸಾರ್ದುಪಳಿದೆಂದವಿಧಿಯಾ || ೩೧೧ ||
ರಾಗ ನೀಲಾಂಬರಿ ರೂಪಕತಾಳ
ಹಾ ಕುರುಕುಲ ಚೂಡಾಮಣಿ | ಹಾ ಕುರುನೃಪಕುಲಸಿಂಹನೆ |
ಹಾ ಕುರುನೃಪಗಣಕೌಸ್ತುಭ | ಹಾ ಕುಂಭಜ ಶಿಷ್ಯಾ || ಹಾ ಕುರುಕುಲ || || ೩೧೨ ||
ಹಾ ಕೃಪಚರಣಾನತಶಿರ | ಹಾ ಕುಲನೃಪತತಿಪೂಜಿತ |
ಹಾ ಕುರುವಂಶ ಮಹಾಕಮ | ಲಾಕರಹಂಸಾ ||
ಏಕಾದುದೋ ನಿನಗೀವಿಧಿ | ನಾಕೇಶನ ಸಮದಂಡಿಗ |
ಮಾಕಾಮಿನಿಯನು ತಂದಿಹೆ | ಬೇಕೇನೊರೆ ಜನಪಾ || ಹಾ ಕುರುಕುಲ || ೩೧೩ ||
ಎಂದಳ್ಗತೆ ಗುರುನಂದನ | ಕಂದಿದಪದಹತ ಧೂಳಿ |
ಮುಂದಲೆಯನು ಸೆರಗಿನ ತುದಿ | ಯಿಂದೊರೆಸುತೆ ಮರುಗೀ ||
ಸಂದುದೆ ತನ್ನನುವಂಚಿಸಿ | ಬಂದುದರಿನ್ನಿನಗೀಗತಿ |
ಮುಂದೆನಗರುಹೈ ಕಜ್ಜವ | ನೆಂದೆನೆನೃಪನುಡಿದಾ || ಹಾಕುರುಕುಲ || ೩೧೪ ||
ಕಂದ
ಅರಿಚರಣಪಾಂಸುಪತ್ತಿರೆ |
ಕರಾಗ್ರದಿಂ ತೊಡೆದು ಕಳೆದೆ ವಸ್ತ್ರಾಂಚಲದಿಂ ||
ಗುರುನಂದನನೀನೆನ್ನೀ |
ಪರಿಭವಪಾಂಸುವನದೆಂದು ಪೇಳ್ಕಳೆದಪೆಯಾ || ೩೧೫ ||
ಭಾಮಿನಿ
ಕ್ರಾಂತಿಗೊದಗಿದ ಜೀವನದೊಳೀ |
ಕ್ರಾಂತಿಯಾದುದು ಪಾಂಡುಪುತ್ರರ |
ಕ್ರಾಂತಿಯೊದಗಿದ ಪಂಚಪಂದಲೆಗಳನು ಕಂಡೊಮ್ಮೇ ||
ಶಾಂತಿಯಿಂದಸುವಿದನು ನೀಗುವೆ |
ಕಾಂತಿಗುಂದುವ ಮೊದಲೆ ನೀನು |
ತ್ಕ್ರಾಂತಿಯಿಂದಿದನೆಸಗು ಪೋಗೆನೆ ಗುರುಜನಾಕ್ಷಣದೀ || ೩೧೬ ||
ವಚನ || ಅಂತೆಸಗುವೆನೆಂದಶ್ವತ್ಥಾಮಂ, ಧೈರ್ಯವನೊರೆದಲ್ಲಿಂದಂ ಪೊರವಂಟತಿಸಹಸ ದೊಳಂ ||
ಕಂದ
ಚಂದಿರ ನಿಲ್ಲದೆಬಾನೊಳ್ ||
ಕಂದಿರೆ ಮೀಂಗಳಮವಾಸಿಯಮಹಾತಮದೊಳ್ ||
ಮಂದಿಗಳೊರಗಿರೆ ಬಳಲಿದ |
ಪಿಂದಣಲವರದತಿಬೇಸರದೆ ಗಜಪುರದೊಳ್ || ೩೧೭ ||
ಭಾಮಿನಿ
ಸಮಯವರಿದಾ ರುದ್ರರೂಪನು |
ಯಮನೆತಾನೆನುವಂತೆ ಪೊಗುತಲಿ |
ಸಮದೆಮಲಗಿಹ ಪುರದಕಾವಲ ಭಟರಕುರಿದರಿಯೇ ||
ಭ್ರಮೆಯೊಳೊರಗಿದ ಪಲರುನಿದ್ದೆಯೊ |
ಳಮಮಹಾಯೆನುತೆದ್ದು ಕಣ್ಗಳ |
ನಿಮಿರೆ ಪೊಸೆಯುತ ಕೈದುಗೊಂಡರು ತಲೆಯದಿಸೆಗಿರ್ದಾ || ೩೧೮ ||
ರಾಗ ತುಜಾವಂತು ಮಟ್ಟೆತಾಳ
ಆರೆಲೋ ದುರಾತ್ಮಚೋರನೇ || ಪಲ್ಲವಿ ||
ಮೀರಿರಜನಿಯೊಳಗೆ ಬಂದು | ಸೇರಿಪುರವಧಾಳಿಗೊಡುವ |
ಚೋರನಾರು ತಲೆಯಕಡಿದು | ಮಾರಿಗುಣಿಸಮಾಳ್ಪೆನೆಂದು |
ವೀರ ದ್ರುಪದಸುತನುಪೇಳಲೂ | ಕೇಳುತ್ತ ಗುರುಜ |
ಹಾರಿಪೊಯ್ದನವನ ಶಿರವನೂ | ಕಾಣುತ್ತ ಭರದೊ |
ಳೇರಿಬಂದಡಾಶಿಖಂಡನೂ || ಆರೆಲೋ || ೩೧೯ ||
ಕರದಬಾಳ ಬೀಸುತವನ | ತರಿಯೆಗುರುಜ ಚೇಕಿತಾನ |
ನುರಿದು ಬಂದಡವನ ಶಿರವ | ಧರೆಗೆಕೆಡಹಿ ಭಟರನೆಲ್ಲ |
ಬರಿದುಗೈದನೊಂದೆ ಚಣದೊಳೂ || ಶ್ರುತಸೋಮಕಾದಿ |
ಕಿರಿಯಪಂಚಪಾಂಡವರ್ಕಳಾ | ಮೇಲೇರಿಪಿಡಿದು |
ಶಿರವನೆಣಿಸಿ ಕಡಿದನೈಗಳಾ || ಆರೆಲೋ || ೩೨೦ ||
ಭಾಮಿನಿ
ಸಂದುದೆನ್ನಯ ಭಾಷೆ ಕೌರವ |
ಗಿಂದುವಿಜಯದಹಬ್ಬವಾಗಲಿ |
ಕೊಂದೆನೈವರನೆನುತ ಮಂಡೆಗಳೈದ ಕೈಗೊಳಿಸೀ ||
ಮುಂದೆನೇಸರು ಮೂಡುವನ್ನೆಗೆ |
ಬಂದು ಭೂಪನ ಚರಣಕರ್ಪಿಸು |
ತೆಂದಕೊಳ್ಳಿದೊ ನಿನ್ನ ಪಾಂಡವರೈದು ತಲೆಗಳನೂ || ೩೨೧ ||
ಕಂದ
ನನ್ನಿಯೊಳಾಡಿದ ಗುರುಜನ |
ಮನ್ನಿಸಿಮತ್ತಾ ಸುಯೋಧನ ಮುದದೊಳಾಗಂ ||
ಕಣ್ಣರೆತೆರೆದದ ನೀಕ್ಷಿಸಿ |
ಬಣ್ಣವನರಿದತಿ ವಿಷಾದಗೊಳುತಂಮನದೊಳ್ || ೩೨೨ ||
ರಾಗ ನೀಲಾಂಬರಿ ರೂಪಕತಾಳ
ಗುರುವರಸುತನೇನೆಸಗಿದೆ | ಹರಹರ ಬಾಲರವಧೆಯನು |
ಮರುತಜನಾಸ್ಯವಿದಾದೊಡೆ | ಪರಿಕಿಸಲೊಪ್ಪುವುದೇ ||
ಮಿರುಗುತ ಪಟ್ಟದೆನೋಳ್ಪದು | ಅರಿವಿಲ್ಲದೆ ನೀಗೈದುದು
ಗುರುತಿಸಲಿದು ಕೃಷ್ಣೆಯ ತರ | ಳರಶಿರಗಳೆ ನಿಜವು || ೩೨೩ ||
ಪರಮೇಶ್ವರನವತಾರನೆ | ಪರಮಪವಿತ್ರನೆ ಭೂಸುರ |
ಬರಿದೀ ವಿಕಳರ ಕಾರ್ಯವ | ಗುರುಜನೀನೆಸಗುವುದೇ ||
ತರಳರ ಶಿರವಿದ ತರಿದೆಯ | ದೊರಕೊಳದೇನ್ಪಾತಕನಿನ |
ಗರಿಯದೆ ದುಷ್ಕೀರ್ತಿಯಕರೆ | ಮಿರುಗದೆ ಇಹಪರದೀ || ೩೨೪ ||
ಕ್ರಾಂತಿಯಿದಾಯಿದು ಮನಕತಿ | ಶಾಂತಿಯಿದಾಯಿತು ಶಿವ ಶಿವ |
ಕುಂತಿಯ ಸುತರೊಳು ತೀರಿತು | ಪಂಥಗಳಿಲ್ಲೆನಗೇ ||
ಸಂತಸವಾದುದು ನಡೆನೀ | ನಿಂತಿರಬೇಡೆನೆ ಮರುಕದೆ |
ಪಿಂತಿರುಗಿದ ಕಲಶಜಸುತ | ಚಿಂತೆಯ ಪರಿಭವದೀ || ೩೨೫ ||
ಕಂದ
ಗುರುಜಂ ಮರೆದಿಹ ಭೋಗವ |
ತೆರಳಿದತುಹಿನಾಚಲದೆಡೆಗಂ ತಪಮೆಸಗಲ್ ||
ಕುರುಪತಿ ಯೋಗಧ್ಯಾನದೆ |
ತೊರೆದವನೆಲ್ಲವ ದಿನಾವಸಾನದೆ ಬಳಿಕಂ || ೩೨೬ ||
ನಗೆಮೊಗದಿಂ ಮಾಡಿದಕ |
ರ್ಮಗಳಂ ತಿಳಿಯಲ್ರುದದ್ಭಿರನು ಭೂಯಾತ್ತೆಂ ||
ದೊಗುಮಿಗೆಯಿಂದುಣೆಲೋಕಂ |
ಬಗೆಗೊಳೆನದನೆಂದಸುವನು ತೊಲಗಿಸೆ ಜಡದಿಂ || ೩೨೭ ||
ಭಾಮಿನಿ
ಬಳಿಕ ಮರುದಿನ ಪಾಂಡುತನನಯರು |
ತಿಳಿದರೊದಗಿದ ವಿಘ್ನಕೋಟಿಯ |
ನಳಿನನಾಭನೊಳರುಹೆ ವಾರ್ತೆಯ ಕೇಳ್ದು ಮುರಹರನೂ ||
ಕಳೆದ ರಜನಿಯೊಳಾಯ್ತೆ ವಿಧಿಹಾ |
ಕಳಶಸಂಭವ ಪುತ್ರನಲ್ಲದೆ |
ಕೊಲುವರಿಲ್ಲೆನುತಿಳಿದ ನೀಲಾಚಲವ ರಭಸದಲೀ || ೩೨೮ ||
ರಾಗ ಕಾಂಭೋಜಿ ಝಂಪೆತಾಳ
ಇತ್ತಲಸುರಾಂತಕನು | ಮತ್ತವರನೊಡಗೊಂಡು | ತತ್ತರಿಸುತೈತರಲುಪುರಕೇ ||
ಕತ್ತಲೆಯೆ ಕವಿದಂತೆ | ಚಿತ್ತವಿರೆ ಧರ್ಮಜನ | ಹತ್ತಿರಕೆ ಹರಿ ಬಂದು ನುಡಿದಾ || ೩೨೯ ||
ಮರುಗದಿರು ಧರ್ಮಜನೆ | ಧುರದೊಳಿದೆ ಸದ್ಗತಿಯು | ನರನಾಥ ನೀನರಿಯದವನೇ ||
ಸಿರಿಮೆರೆವಳನುದಿನದಿ | ಚಿರಪರಾಕ್ರಮಸತ್ವ | ದುರುವಿನಯ ಶೀಲಗುಣ ಬಳಿಕಾ || ೩೩೦ ||
ವರಧರಾಪ್ರಣಯತ್ವ | ಪರಮೇಶಸಂಪ್ರೀತ | ಕರಮೆಸೆಯಲರ್ಥಿಯಿಂ ಜಗದೀ ||
ಪಿರಿದೆನಿಪುದೀಗುಣವು | ತಿರೆಯಾಣ್ಮಗತಿಶಯವು | ಧರಿಸಿರುವೆ ನೀನಿದನುಜನಪಾ || ೩೩೧ ||
ಆಕೆವಾಳರು ನಿನಗೆ | ಬೇಕೆನಿಪಸೋದರರು | ಭೂಕಾಂತೆ ಮಾಕಾಂತೆಯರನೂ ||
ಈಕಡೆಗೆ ಬರಿಸಿಹರು | ಸಾಕವರ ಸಾಹಸವ | ನಾಕೇಶ ಪೊಗಳುವನುಯಮಜಾ || ೩೩೨ ||
ಬಾರಿತ್ತ ಬಾಹುಬಲ | ವಾರಿಧಿಯೆ ಜಗಜಟ್ಟಿ | ಮಾರುತಿಯೆ ನಿನಗೆಣೆಯಕಾಣೆ ||
ಧಾರಿಣಿಯೊಳೇಕಾಂಗ | ವೀರರೊಳು ಸಲೆಕೀರ್ತಿ | ಮಾರಮಣಿ ಭೂಕಾಂತೆಯರನೂ || ೩೩೩ ||
ನಿನ್ನಂತೆ ನಿಜಭುಜದೆ | ಮುನ್ನಾಂತರಾರಿಲ್ಲ | ಪೊನ್ನಾಯ್ತು ನೀನುಡಿದ ಭಾಷೇ ||
ಕುನ್ನಿಗಳ ಸದೆಬಡಿದೆ | ಧನ್ಯಮತನೀನಾದೆ | ಸನ್ನುತನೆ ಕಲಿ ಭೀಮರಾಯಾ || ೩೩೪ ||
ಭಾಮಿನಿ
ಧರೆಯಭಾರವು ತಗ್ಗಿತಿಂದಿಗೆ |
ಧುರದಿವಿಜಯವ ಪಡೆದಿರೈವರು |
ಸರಸಿಜಾಂಬಕಿ ವೀರಮಾನಿನಿ ಮರುಗಲೇಕಿನ್ನೂ ||
ತಿರಿಯೊಳೊರಗಿದ ವೀರಭಟರಿಗೆ |
ಪಿರಿದುಸಂಸ್ಕಾರವನು ಮಾಡಿಸು |
ನೆರೆವಿಚಾರಿಸಿ ಶಾಸ್ತ್ರಮಾರ್ಗದೆ ಧರ್ಮನಂದನನೇ || ೩೩೫ ||
ವಚನ || ಎನೆಧರ್ಮನಂದನಂ ಹರಿಯಾಜ್ಞೆಯಂ ಕೈಕೊಳ್ಳುತ್ತಂ ||
ವಾರ್ಧಕ
ಅಳಿದಖಿಲಸುಭಟರ್ಗೆ ಜಲದಾನತರ್ಪಣವ |
ಬಳಿಕಿತ್ತು ಸದ್ಗತಿಯಗೊಳಿಸಲ್ಕೆ ನೃಪವರಂ |
ತಿಳಿದಲ್ಲಿ ಗಾಂಧಾರಿ ಧೃತರಾಷ್ಟ್ರ ಕೌರವನ ಮಡದಿಯರ್ ಕೊಂತಿ ಸಹಿತಾ ||
ಮಲಿನ ಜಡದೇಹಮಂ ಮರೆದುಗ್ರ ದೀಕ್ಷೆಯಂ |
ತಳೆದವರ್ ಪ್ರಾಯೋಪವೇಶದಿಂದಾತ್ಮನಂ |
ತಿಳಿದೊಲಿಸಿ ನಿತ್ಯಸುಖ ಸಾಮ್ರಾಜ್ಯಮಂ ಪಡೆಯೆ ತೆರಳಿದರ್ ವಿಪಿನಕಾಗೀ || ೩೩೬ ||
ವಚನ || ಮತ್ತಾ ಧರ್ಮನಂದನಂ ಮುಕುಂದಂಗೆ ಕೈಯ್ಯಂ ಮುಗಿದು ||
ರಾಗ ನೀಲಾಂಬರಿ ಮಾತ್ರಾ ಝಂಪೆತಾಳ
ಶ್ರೀ ರಮಾಧವಾ | ಮಹದುದಾರನೇ || ಪಲ್ಲವಿ ||
ಭಾರತಾಹವ ತೀರಿತಲ್ಲವೆ | ಸೇರಿತೆಮ್ಮೊಳು ಜಯದ ಕೀರ್ತಿಯೂ ||
ಭಾರತಾಬ್ಧಿಯ ಮಥನವೆಸಗಿದಾ | ಭಾರ ನಿನ್ನದೂ || ಶ್ರೀರಮಾಧವಾ || ೩೩೭ ||
ಕಿರಿಯನಿರ್ಪನು ಪಾರ್ಥನಚ್ಯುತ | ತೊರೆದೆ ನಾನಿದ ರಾಜ್ಯಭೋಗವ |
ಕುರಕುಲೇಂದ್ರರ ತರಿದ ವೀರನು | ಭರಿತ ಸತ್ವನೂ || ಶ್ರೀರಮಾಧವಾ || ೩೩೮ ||
ದಿಟ್ಟನೀತನು ಭೀಮಸೇನನು | ಪಟ್ಟವೀತಗೆ ಕಟ್ಟು ದೇವನೆ |
ನೆಟ್ಟನೊದಗುತೇ ಶೀಘ್ರದಿಂದಲಿ | ಇಷ್ಟವೆನಗಿದೂ || ಶ್ರೀರಮಾಧವಾ || ೩೩೯ ||
ಇಳೆಯು ಬೆಳಗಲಿ ಧರ್ಮ ನೆಲಸಲಿ | ನಳಿನನಾಭನೇ ಪಾಲಿಸೆಮ್ಮನು |
ದಳಿತ ಬಾಂಧವ ನಿನ್ನ ಮರೆಯದ | ನೆಲೆಯದೋರಿಸು || ಶ್ರೀರಮಾಧವಾ || ೩೪೦ ||
ಕಂದ
ಧರ್ಮಜನಾಡಿದ ನುಡಿಗಂ |
ಧರ್ಮಮಿದೆನುತೆಲ್ಲರೊಪ್ಪಲಾ ಸಹದೇವಂ ||
ಕರ್ಮಾಂಗವನರಿದಾಗಳ್ |
ಧರ್ಮಾಂಗದ ಶುಭ ಮಹೂರ್ತಮಂ ಪೇಳಲೊಡಂ || ೩೪೧ ||
ವಚನ || ಎಂಬುದು ಭೀಮಂಗೆ ಪಟ್ಟಬಂಧಮಂ ಮಾಳ್ಪುದೆಂದು ವಾಸುದೇವಂ ಮುಂತಾಗಿ, ಸಹದೇವಂ ನಿರೂಪಿಸಿದ ಭವ್ಯ ಮುಹೂರ್ತದೊಳ್ ಹಸ್ತಿನಾಪುರಮಂ ಪೊಕ್ಕು ||
ಮತ್ತೇಭವಿಕ್ರೀಡಿತ ವೃತ್ತಂ
ದೆಸೆಯಂ ತೆಕ್ಕನೆ ತೀವೆತಾಟಿತ ಮಹಾಭೇರೀರವಂ ವಿಪ್ರರೇ |
ಣ್ದೆಸೆಯೊಳ್ವೇದ ನಿನಾದದಿಂ ಪರಸೆ, ಪಂಕೇಜಾಕ್ಷಿಯರ್ಕೂಡಿಸಂ ||
ತಸದಿಂ ಸೇಸೆಯನಿಕ್ಕೆ ಪಾಂಡವ ಬಲಪ್ರಾಕಾರ ವೀರಂಗ ಸಾ |
ಹಸಭೀಮಂಗೆ ಮನೋಮುದಂ ಬೆರಸುಕೃಷ್ಣಂ ಕಟ್ಟಿದಂ ಪಟ್ಟಮಂ || ೩೪೨ ||
ರಾಗ ಢವಳಾರ ಏಕತಾಳ
ಈಶನ ಸಮಬಲಗೇ | ಕುರುಕುಲ | ಭೂಷಣ ಪವನಜಗೆ ||
ಭಾಸುರ ಮಣಿಗಣ | ಭಾಸವಿನೂತನ | ದೋಷವಿನಾಶನ | ವಾಸವನುತನಿಗೆ ||
ತೋಷದೊಳಂಗನೆಯ | ರಾರತಿಯ ಬೆಳಗಿರೆ || ಶೋಭಾನಂ || ೩೪೩ ||
ನೀರಜಗಂಧಿಯರು | ಕುಣಿಯುತೆ | ಮಾರಮಯೂರಿಯರೂ |
ವಾರಿಜನಾಭಗೆ | ವೀರವಿನೋದಗೆ | ಭಾರತದೈವರ | ಭಾರವನಾಂತಗೆ ||
ವಾರಿಜಾಕ್ಷಿಯರುಗ | ಳಾರತಿಯ ಬೆಳಗಿರೆ || ಶೋಭಾನಂ || ೩೪೪ ||
ಕಂದ
ಸುಲಲಿತ ಜನಕಂ ಪೇಳ್ದೀ |
ಚೆಲುವಿನ ಕೃತಿಯ ಗಿರಿಜಾವರಂತೂರ್ಮೆಯೊಳಂ ||
ಸಲೆಪರಸುಗೆಸಬ್ಬಾಣಿಯೆ |
ನಲವಿಂದೊಲಿದೊಲ್ಮೆವೆತ್ತು ಸಲಹುಗೆ ಸತತಂ || ೩೪೫ ||
ಭಾಮಿನಿ
ಶರಧಿಯಂಬರ ಹಸ್ತಿ ಚಂದ್ರಮ |
ರಿರವು ನೃಪಶಕಶಾಲಿವಾಹನ |
ಕಿರಲು ಪಾರ್ಥಿವನಾಮ ವತ್ಸರ ಮಾಸ ಧನುವಿನೊಳೂ ||
ಸರಿದ ದಿನವೇಳೆನಿಪ ರವಿ ವಾ |
ಸರದಿ ರೋಹಿಣಿ ಧವಳ ಶುಭ ತಿಥಿ |
ವರ ಚತುರ್ದಶಿ ಶುದ್ಧಪಕ್ಷದ ಮಾರ್ಗಶೀರ್ಷದೊಳೂ || ೩೪೬ ||
[ಶಾ. ಶ. ೧೮೦೭ ಇಸವಿ ೧೮೮೫]
ಜನಕ ಸಂಕಪ್ಪಾಖ್ಯ ಸೆಟ್ಟಿಗೆ | ಜನಿಸಿದಾತನು ಜನನಿ ಮುಂಡ್ಯಕೆ |
ತನಗೆ ವೆಂಕಪ್ಪಾಖ್ಯೆ ಸಂದಿರೆ ತಾಯಜನಕನದೂ ||
ಜನನಗೊಂಡಿಹ ನಾಡು ಪಾವೂ | ರೆನುವ ಪಳೆಮನೆ ಬೀಡು ಮೂಲದ |
ಮನೆಯು ಮುನ್ನೂರಾಯ ಮನೆತನಗುತ್ತು ಕುತ್ತ್ಯಾರಾ || ೩೪೭ ||
ರಾಗ ಕಾಂಬೋಧಿ ತ್ರಿವುಡೆತಾಳ
ಶಾಲ್ಯಗೋತ್ರದ ಭಟರ ಕುಲದೊಳು | ತಾಳ್ದೆ ಜನ್ಮವ ಬರೆದೆನೀ ಮಹ |
ಮೂಲ್ಯ ಕಥೆಯನು ಯಕ್ಷಗಾನದ | ನಲ್ಮೆಯಿಂದಾ || ೩೪೮ ||
ತೊಳಪ ರನ್ನನ ಕರದ ಕೈಪಿಡಿ | ಮಲಿನಗೊಂಡಿರಲೆನ್ನ ಕರದೊಳು ||
ಪೊಳೆವ ತೆರನಿದನೊಪ್ಪುಗೊಂಬುದು | ತಿಳಿದ ಬುಧರೂ || ೩೪೯ ||
ಧಾತೃನಾಮದ ವತ್ಸರದೆ ಕೃತಿ | ಪೂರ್ತಿಗೊಂಡುದು ಕಣ್ವಪುರ ಪತಿ |
ದಾತಗರ್ಪಿತಗೈದೆ ಕೃಷ್ಣಗೆ | ಪ್ರೀತಿಯಿಂದಾ || ೩೫೦ ||
ರಾಗ ಸಾವೇರಿ ಝಂಪೆತಾಳ
ಭರತವಾಕ್ಯ
ಮಂಗಳಂ ಶ್ರೀಕಾಂತ ಪದ ಪದ್ಮಕೇ | ನಿತ್ಯ ಶುಭಮಂಗಲಂ | ಶ್ರೀಕಾಂತ ಪದಪದ್ಮಕೇ || ಪ ||
ಪದಿನೆಂಟಕ್ಷೆಹಿಣಿಯ | ಬಲಗಳನು ಧುರಕಿಕ್ಕಿ |
ಪದಿನೆಂಟು ದಿನದೊಳಗೆ ನೆಲಕುಣಿಸಿ ಕೈತವದೆ |
ಸಹೃದಯಿ ಪಾಂಡವರಿಗೀ ಧರೆಯ ನೊಲಿದಿತ್ತ್ತ |
ಮಾಧವಗೆ ಮಂಗಳಂ | ಶ್ರೀಕಾಂತ ಪದ ಪದ್ಮಕೇ || ೩೫೧ ||
ಯುಗ ಯುಗದೊಳವತರಿಸಿ | ಪಗೆಗೊಂಡ ದುರುಳರನು |
ಬಗಿದಿಕ್ಕಿ ಸಾಧುಗಳ | ತೆಗೆದೆತ್ತಿ ಪಾಲಿಸಿದ |
ಜಗದೇಕನಾಥನಿಗೆ | ಖಗವರೂಥನಿಗೆ ಕವಿ
ಭೂಷಣಗೆ ಮಂಗಳಂ | ಶ್ರೀಕಾಂತ ಪದಪದ್ಮಕೇ || ೩೫೨ ||
– ಸಂಪೂರ್ಣಂ –
[1] ೧ ಶಾಕ್ವರ ಚಿಹ್ನ = ವೃಷಭಧ್ವಜ
Leave A Comment