ರಾಗ ಶಂಕರಾಭರಣ ಮಟ್ಟೆತಾಳ
ಧಿರುರೆಲಾ ಸುಧನ್ವ ಇದಕೊ ಧುರಕೆ ಬಂದೆನು |
ಅರಿವೆಯಾನುಸಾಲ್ವನೆಂದು ಧರೆಯೊಳೆನ್ನನು ||
ಹರಣದಾಸೆಯಿರೆ ಮಖಾಶ್ವ ಮರಳಿಯೊಪ್ಪಿಸಿ |
ತೆರಳಿ ಧರ್ಮರಾಯಗೆರಗಿ ಇರು ನೀ ಜೀವಿಸಿ ||೩೨೧||

ಎನಗಿಲ್ಲೆಲವೊ ಧರ್ಮಸುತನ ಗಣನೆಗೊಳ್ಳೆನು |
ನಿನಗೆ ಮೂಲ ಧರ್ಮರಾಯನ ಕಾಣಿಸುವೆನು ||
ಕ್ಷಣದಿ ನೋಡೆನುತ ಸುಧನ್ವ ಕಣೆಯನೆಚ್ಚನು |
ದನುಜನದ ಕತ್ತರಿಸಲಾಗ ಕನಲುತೆಂದನು    ||೩೨೨||

ಬಡ ನೃಪಾಲ ಪಡೆದ ಸಣ್ಣ ಹುಡುಗನೆನುತಲಿ |
ಬಿಡೆಯಕಾನು ಬಿಟ್ಟರೀಗ ಸಿಡಿದೆ ಮನದಲಿ ||
ತಡೆದುಕೊಳ್ಳೆನುತಲಸ್ತ್ರ ಬಿಡೆ ಮೈಮರೆವುತ |
ಪೊಡವಿಗಾ ಸುಧನ್ವ ಬೀಳುತೊಡನೆಚ್ಚರಿವುತ ||೩೨೩||

ದುರುಳಗೆಂದ ಪೆಣನೆ ನಿನ್ನ ಶರಕೆ ಬೆದರ್ವೆನೆ |
ಧುರದಿ ಯಮನಪುರವ ಪೊಗಿಸದಿರದೆ ಬಿಡುವೆನೆ ||
ತೆರನ ನೋಡೆನುತ್ತ ವೈಷ್ಣವಾಸ್ತ್ರವೆಸೆಯಲು |
ಭರದೊಳಾನುಸಾಲ್ವ ಬಿದ್ದ ತಿರುಗಿ ರಥದೊಳು ||        ||೩೨೪||

ವಾರ್ಧಕ
ವೀರ ವೈಷ್ಣವ ಸುಧನ್ವಾಸ್ತ್ರದಿಂದನುಸಾಲ್ವ |
ಶಾರೀರಮಂ ಮರೆದು ಮೂರ್ಛೆಗೊಳ್ಳಲು ಬಳಿಕ |
ಹಾರಿಸಿದ ರಥವನರ್ಜುನನ ಹುಡುಕುತ ಪರಬಲವ ಪೊಕ್ಕು ಸವರುತಿರಲು ||
ಕಾರಣವ ಕಲಿಯೌವನಾಶ್ವಾದಿಗಳು ಕಂಡು |
ತೇರನಡರುತ್ತಲಾಹವಕಯ್ದಲನುವಾಗ |
ಲಾರಿಗಂಜುವನಲ್ಲವೆನುತವರ ನಿಲಿಸುತರ್ಜುನ ತಾನೆ ಪೊರಟ ರಣಕೆ     ||೩೨೫||

ರಾಗ ಆಹೇರಿ ಝಂಪೆತಾಳ
ರಥವೇರಿ ನಡೆದಜರ್ನುನನು | ಅತಿ | ರಥ ಸುಧನ್ವನಿದಿರಾಗುತರಿವಿಜಯನು ||
ರಥವೇರಿ ನಡೆದನುರ್ಜುನನು         || ಪ ||

ತೇರ ಚಮತ್ಕೃತಿ ತುರಗಗಳ ಖುರ ಪುಟಾಧ್ವಾನ |
ಭೋರಿಡುವ ದೇವದತ್ತದ ಘೋಷ ಬಿಲ್ಲ ಠೇಂ |
ಕಾರ ಸಿಂಧದ ತುದಿಯ ಹನುಮನಬ್ಬರಣೆ ಕರ |
ವೇರಿಸುತ ಪೊಗಳ್ವ ಪಾಠಕರ ಜಯ ನಿನದಗಳ |
ವಾರ ಮುಂಬರಿವ ಗಜಘಟೆಯ ಘಂಟಾರವಗ |
ಳೋರಣಿಪ ಶಸ್ತ್ರಪಾಣಿಗಳ ಕಣಿಕಟಿಲ |
ವೀರಭಟರತಿ ಕೀರು ಕಿಲರವಗಳೊಂದಾಗಿ |
ಈರೇಳು ಲೋಕ ಬೆದರಿಸಲು ಬೀಭತ್ಸುವಿನ |
ಘೋರ ಸಂಗ್ರಾಮವೆಂದರಿದಬುಜಭವಮುಖ್ಯ |
ರೇರಿ ವೈಮಾನಿಕದಿ ನಿಂದು ನೋಡಿದರು || ರಥವೇರಿ  ||೩೨೬||

ಸುರಪಾಲಕನ ಮಿತ್ರ ಸೋಮವಂಶಪವಿತ್ರ |
ತರುಣಿಕುಂತಿಕುಮಾರ ತ್ರಿಜಗಕೇಕೋವೀರ  |
ಧುರವಿಜಯ ದೋರ್ದಂಡ ಧರಣಿಪಾಲರ ಗಂಡ |
ಮರೆಹೊಕ್ಕವರ ಕಾಯ್ವ ಮಾರಾಂತವರ ಕೊಲ್ವ |
ಶರಧಿಸಮಗಂಭೀರ ಸುಜನಜನಮಂದಾರ |
ಕುರು ಕುಲಾಂಬುಧಿಚಂದ್ರ ಕುಜನೇಭಕೆ ಮೃಗೇಂದ್ರ |
ವರ ವೃಕೋದರನನುಜ ಒಲಿದವರ ಸುರಭೂಜ |
ಮುರಮರ್ದನನ ಮಿತ್ರ ಮಾನನಿಧಿ ಸುಚರಿತ್ರ |
ಸರಿಯಿಲ್ಲನಿನಗೆಂದು ಸಕಲವಂದಿಗಳಂದು |
ಕರವೆತ್ತಿ ಪೊಗಳಿದರು ಕೂಡೆ ಪಾಠಕರು || ರಥವೇರಿ    ||೩೨೭||

ಧುರದಿ ದ್ರುಪದನ ಕಟ್ಟಿ ತಂದ ಧೀರನ ತೋಟಿ |
ಹೊಡೆದು ಲಾಂಛನವ ನೃಪಪಡೆಯ ಗೆಲ್ದನ ತೋಟಿ |
ಬಿಡದೆ ಖಾಂಡವವನವ ಅನಲಗಿತ್ತನ ತೋಟಿ |
ಅಡಸಿ ನವಖಂಡಾಧಿಪರ ಜಯಿಸಿದನ ತೋಟಿ |
ಮೃಡನ ಮೆಚ್ಚಿಸಿ ಪಾಶುಪತವ ಪಡೆದನ ತೋಟಿ |
ನಡೆಸುತೈರಾವತವ ಚರಿಸುತದವನ ತೋಟಿ |
ತೊಡಕು ಬೇಡೊಂದೊದರಿದವು ಕಹಳೆ ಕೋಟಿ || ರಥವೇರಿ      ||೩೨೮||

ರಾಗ ಕೇದಾರಗೌಳ ಅಷ್ಟತಾಳ
ಸಡಗರದಮಿತ ಸಂಭ್ರಮದಿ ವರೂಥವ | ನಡೆಸುತುತ್ಸಾಹದಿಂದ ||
ತಡೆದು ಸುಧನ್ವನಿದಿರು ನಿಲಿಸೆ ಕಂಡು | ನುಡಿಸಿದನರ್ಜುನನ    ||೩೨೯||

ಸೃಷ್ಟಿಗರ್ಜುನನೆಂಬವನೆ ನೀನು ನಿನ್ನಶ್ವ | ಕಟ್ಟಿಕೊಂಡಿಹೆವು ನಾವು ||
ಬಿಟ್ಟು ಪೋಪೆಯೊ ಬಿಡಿಸುವೆನೆಂಬ ಬಿಂಕವೊ | ತಟ್ಟನೆ ಪೇಳೆಂದನು       ||೩೩೦||

ಹುಡುಗ ನೀನು ನಿನ್ನ ಬೆಡಗಿನ ನುಡಿಯ ಕ | ಟ್ಟಿಡು ನಮ್ಮ ಹಯವ ಬಿಡು ||
ಪಡೆಯನ್ನು ಕೊಂಡು ನಮ್ಮೊಡನೆ ತೆರಳು ನಿನ್ನ | ಒಡಗೊಂಬೆ ಧನವ ಕೊಡು        ||೩೩೧||

ಮೂಢನೆಂಬೆನೆ ನಿನ್ನ ರೂಢಿಯ ಭಟನೆಂದು | ಆಡುತಿಹರು ಕೆಲರು ||
ಮಾಡದೆ ಯುದ್ಧವ ಹಯವನು ದ್ರವ್ಯವ | ಬೇಡುವ ದ್ವಿಜನೆ ನೀನು           ||೩೩೨||

ಭೂತಳದಲಿ ಸಾರಿ ಕೊಲ್ಲುವುದಿದು ರಾಜ | ನೀತಿಯ ಧರ್ಮವಿದು ||
ನೀ ತರಳನು ನಿನ್ನೊಳೊಲ್ಲೆ ರಣವ ನಿನ್ನ | ತಾತನ ಕರೆಸಿಕೊಡು            ||೩೩೩||

ರನ್ನದುಪ್ಪರಿಗೆಯನೇರಲರಿಯದೆ ಮೇರು | ವನ್ನು ಬಯಸುವಂದದಿ ||
ಎನ್ನೊಳು ಸೆಣಸಿ ಜಯಿಸದೆ ಪಿತನನು ಕರೆ | ಸೆನ್ನುವರೇ ಧುರದಿ            ||೩೩೪||

ಎಳೆಯವ ನಿನ್ನನು ಕೊಲಲನುಚಿತವೆಂದು | ತಿಳುಹಿದೆ ಧರ್ಮವನು ||
ಕೊಳುಗುಳದಲಿ ಸಾವ ಛಲವುಳ್ಳಡದು ಪುಣ್ಯ | ಫಲವೆಂದು ತೆಗೆದೆಚ್ಚನು   ||೩೩೫||

ರಾಗ ಶಂಕರಾಭರಣ ಮಟ್ಟೆತಾಳ
ಸೋಜಿಗವೇನೆಂಬೆನು ಸುಧನ್ವಾರ್ಜುನರಾಹವವ |
ಮೂಜಗದೊಳೆಣೆಗಾಣೆನು ಹೇ ಜನಮೇಜಯನೆ     || ಪ ||

ಕ್ರೂರತ್ವದಿ ನರನೆಸೆದಿಹ ಕೂರಂಬುಗಳನು ಕಡಿಯುತ |
ತೂರುತ ಶರಗಳ ಕುಂತಿಕುಮಾರನೊಳಿಂತೆಂದ ||
ಮಾರಮಣನ ಕರೆಸಿಕೊ ಹುಲು ಸಾರಥಿಯಿಂದಲಿ ಬರಿದೇ |
ಹೋರಲುಬೇಡೆನುತಸ್ತ್ರವ ಹೇರಿದನಾ ಕ್ಷಣದಿ  ||೩೩೬||

ಹುಲು ಭೂಪನ ಹುಡುಗನೆ ನಿನ್ನಳುಕಿಸುವರೆ ಹರಿಯೇತಕೆ |
ಬಲುಹುಳ್ಳಡೆ ತಡೆಗಡೆ ಕೇಳೆಲೊ ಎನುತಸ್ತ್ರಗಳ ||
ತುಳುಕಿದ ವರ್ಷಾಕಾಲದ ಮಳೆಯಂದದಿ ಮೇಲ್ವರಿಯಲು |
ಬಳಿಕದ ಕತ್ತರಿಸಿದ ಥಳಥಳಿಸುವ ಶರಗಳಲಿ  ||೩೩೭||

ದಿಟ್ಟ ಸುಧನ್ವನು ಶರಗಳ ತೊಟ್ಟರ್ಜುನಗೆಂದನು ನಿ |
ನ್ನೊಟ್ಟಿಗೆ ಬೇಗದಿ ದನುಜಘರಟ್ಟನು ಒದಗದಿರೆ |
ಕೆಟ್ಟವ ನೀನಹೆ ಕೇಳ್ ಮನಮುಟ್ಟೀಗಲೆ ಹರಿಯನು ನೆನೆ |
ಕುಟ್ಟುವೆ ನೋಡೆನುತಸ್ತ್ರಗಳೊಟ್ಟಿದನಂಗದಲಿ             ||೩೩೮||

ಪೊಸ ಮಸೆಯತಿ ವಿಶಿಖಂಗಳು ಮೊಸೆಗಾಣಿಸಲೊಸರುತ ಬಿಸಿ |
ಬಿಸಿನೆತ್ತರು ಪಸರಿಸೆ ರೋಷಿಸುತರ್ಜುನ ಕಡುಗಿ ||
ಪಸುಳೆಯನಸಮಸೆಯೆನು ತಾಗಿಸಿ ರಸೆಗೊರಗಿಸುವೆನು ತಾ |
ತಸಮದ ರವಿರಸುಮೆಯ ಶರವೆಸೆದನು ಸಾಹಸದಿ     ||೩೩೯||

ಕೊಚ್ಚಿದ ಶರವ ಸುಧನ್ವನು ಎಚ್ಚನು ಪುನರಪಿ ಪಾರ್ಥನು |
ಕೊಚ್ಚಿದರವನೆಚ್ಚನು ಬಳಿಕೆಚ್ಚರೆ ಕೊಚ್ಚಿದನು |
ಎಚ್ಚರಿಕೆಯಲೆಚ್ಚನು ತಟ್ಟಚ್ಚುತ ಶರವಚ್ಯುತಸಖ |
ನೆಚ್ಚರಿಯಂ ಮುಚ್ಚುತ ಬಲು ಚುಚ್ಚಿದವಸ್ತ್ರಗಳು           ||೩೪೦||

ರಾಗ ಭೈರವಿ ಅಷ್ಟತಾಳ
ಭೂಪಾಲತನುಜ ಸುಧನ್ವನೆ | ಕೇ | ಳಾಪೇಕ್ಷಿಸುವೆ ಯುದ್ಧ ಸುಮ್ಮನೆ ||
ತಾಪಿನಾಕಿಯು ಬಂದಡೊಮ್ಮೆಗೆ | ನಿಲ | ಲಾಪನೆಯೆನ್ನಯ ಮುಳಿಸಿಗೆ    ||೩೪೧||

ನೀನಪ್ರಬುದ್ಧನು ಜಗದೊಳು | ದೈತ್ಯ | ಮಾನವರೊಳಗೆನ್ನ ಹಗೆಯೊಳು ||
ಹಾನಿಯಾಗದೆ ಬದುಕಿದರಾರು | ಸು | ಮ್ಮಾನದ ವಿಕ್ರಮಗಳ ತೋರು    ||೩೪೨||

ದ್ರೋಣ ಭೀಷ್ಮಾದಿಗಳೇನಾದ | ರೆಂದು | ಕಾಣದೆ ಪೋದೆಯ ನೀನದ ||
ತ್ರಾಣವ ತೋರ್ಪೆ ನಾ ನಿನಗೆಂದು | ಪೊಸ | ಸಾಣೆಯ ಕೋಲ್ಗರೆದನು ನಿಂದು       ||೩೪೩||

ಸೂತನ ಬಲ್ಮೆಯಿಂ ಕೌರವ | ರುರು | ಚಾರುರಂಗವ ಗೆಲ್ದ ಗೌರವ ||
ಭೂತ ನೀನಾದೆಯದಲ್ಲದೆ | ನಿನ್ನ | ಮಾತಾಡಿಸುವರಾರಿನ್ನಿಲ್ಲದೆ ||೩೪೪||

ವಾರಿಜಾಕ್ಷನ ಕರೆಸೆನ್ನೊಳು | ನಿನ್ನ | ಆರುಭಟೆಯ ತೋರು ಧುರದೊಳು ||
ಸಾರನ್ನೆಗ ಬರಿಯ ಬಳಲದೆ | ಎಂದು | ವೀರ ಸುಧನ್ವನು ತಡೆಯದೆ       ||೩೪೫||

ಸರ್ರನೆ ಸೆಳೆದೊಂದು ಬಾಣವ | ಬಿಡೆ | ಬಿರ್ರನೆ ಪೋಗಿ ವರೂಥವ ||
ಧಿರ್ರನೆ ಬುಗುರಿಯ ತೆರದೊಳು | ಗಾಲಿ | ಚಿರ್ರನೆ ತಿರುಗಿತಾ ಕ್ಷಣದೊಳು  ||೩೪೬||

ವಾರ್ಧಕ
ಪೂತುರೆ ಸುಧನ್ವ ಸತ್ತ್ವಾತಿಶಯದಿಂದ ವಿ |
ಖ್ಯಾತನಹೆ ಮದ್ರಥವನೀ ತೆರದೊಳೆಸುವರಂ |
ಪಾತಾಳ ಸುರನಿಳಯ ಭೂತಳದ ಪಟುಭಟರ ವ್ರಾತದೊಳ್ ಕಾಣೆನಿನ್ನು ||
ನೀ ತರಳನಕಟ ಬರಿದೇತಕಳಿದಪೆ ನಿನ್ನ |
ತಾತನಂ ಬರಹೇಳು ಘಾತಿಸುವರಲ್ಲ ನ |
ಮ್ಮೀ ತುರಂಗಮವ ಬಿಡು ಧಾತುಗೆಡಬೇಡೆನುತಲಾತನಂ ನರನೆಚ್ಚನು    ||೩೪೭||

ಭಾಮಿನಿ
ಎಲೆ ಧನಂಜಯ ಕೇಳು ನಿನ್ನಲಿ |
ಹಲಬರಿರ್ದಡದೇನು ಕೃಷ್ಣನ |
ಲಲಿತ ಸಾರಥ್ಯಂಗಳಿಲ್ಲದೆ ಸಮರಮಧ್ಯದೊಳು ||
ಹುಲು ಪರಾಕ್ರಮಿ ಸೂತನಿಂದಲಿ |
ಗೆಲವಹುದೆ ನೀ ಮರುಳೆಲಾ ಬರಿ |
ದಲಸದಿರು ನಡೆ ಹಸ್ತಿನಾವತಿಗೆಂದು ತೆಗೆದೆಚ್ಚ            ||೩೪೮||

ವಾರ್ಧಕ
ಈ ತೆರದೊಳಖಿಳ ದಿವ್ಯಾಸ್ತ್ರಂಗಳೆಸುಗೆಯಿಂ |
ಚಾತುರ್ಯದಿಂದೊರ್ವರೊರ್ವರಂ ಗೆಲ್ವ ಸ |
ತ್ತ್ವಾತಿಶಯದಿಂದ ಕಾದಿದರಾ ಸುಧನ್ವಾರ್ಜುನರು ಬಳಿಕ ರೋಷದಿಂದ ||
ಭೀತಿಗೊಳೆ ಮೂಜಗಂ ತೆಗೆದು ಬ್ರಹ್ಮಾಸ್ತ್ರಮಂ |
ಶ್ವೇತವಾಹನನಾರ್ದೆಸಲ್ಕೆ ಹಂಸಧ್ವಜನ |
ಜಾತಂ ಪ್ರತೀಕಾರಕಾ ಪಿತಾಮಹ ಶರದೊಳೆಚ್ಚೊಡನೆ ಬೊಬ್ಬಿರಿದನು      ||೩೪೯||

ಭಾಮಿನಿ
ಕಣದಿ ಬ್ರಹ್ಮಾಸ್ತ್ರಂಗಳೆರಡುರೆ |
ಹೆಣಗಿ ತಾವಡಗಲ್ಕೆ ರೋಷದಿ |
ಕುಣಿವ ತುಟಿಗಳನೌಡುಗಚ್ಚುತ ಪಾರ್ಥನಕ್ಷಯದ ||
ಕಣೆಯ ಮಳೆಯನು ಕರೆಯೆ ತುಂಬಿತು |
ಗಣನೆಯಿಲ್ಲದೆ ಧರೆಯ ಮೇಲದು |
ಕ್ಷಣದಿ ಸವರಿ ಸುಧನ್ವ ನುಡಿದನು ಸಲೆ ಪಚಾರಿಸುತ    ||೩೫೦||

ರಾಗ ಯಮುನಾಕಲ್ಯಾಣಿ ಮಟ್ಟೆತಾಳ
ಭಲಾ ವೀರನೇ | ನೋಳ್ಪುದೇನು ಧೀರನೆ ||
ಕಿರೀಟಿ | ಭಲಾ ಧೀರನೆ                || ಪ ||

ಭಲ ಭಲರೆ ಶೂರನೆ | ಕಲಹದಲ್ಲಿ ಮೆಚ್ಚಿದೆ ||
ಭಲಾ ವೀರನೆ             || ಅ.ಪ ||

ಶಿವನ ಕೂಡೆ ಸೆಣಸಿದಂಥ | ಹವಣವೆಲ್ಲಿದೆ ||
ದಾ | ನವ ನಿವಾತಕವಚರ್ಗೆಲಿದ | ಶೌರ್ಯಮೆಲ್ಲಿದೆ || ಭಲಾ     ||೩೫೧||

ಕೌರವಾದಿ ಸುಭಟರನ್ನು | ಸವರಿ ರಣದೊಳು ||
ನೀ | ಸೈರಿಸಿರ್ದ ಪೌರುಷಂಗಳ್ಯಾತಕೆನ್ನೊಳು || ಭಲಾ            ||೩೫೨||

ಬರಿದೆ ಬಳಲಬೇಡ ಸಾಕು | ಕರೆಸು ಕೃಷ್ಣನ ||
ಮುಂ | ದಿರದೆ ನಿನ್ನಯ ಪರಾ | ಕ್ರಮವ ತೋರ್ ಭಲಾ || ಭಲಾ            ||೩೫೩||

ಕಂದ
ಎನುತೆಚ್ಚಂಬುಗಳ್ಭರಕಂ |
ಘನ ರಥಮುಂ ಕುಲಾಲಚಕ್ರದವೋಲ್ ತಿರುಗಲ್ ||
ಹನುಮಂ ಭ್ರಮಣೆಯ ತಾಳ್ದಿರ |
ಲನುಪಮ ಹಯುಮಂ ಬಳಲಲು ಸಾರಥಿ ಮಡಿದಂ     ||೩೫೪||

ರಾಗ ನಾದನಾಮಕ್ರಿಯೆ ರೂಪಕತಾಳ
ವ್ಯಥಿಸಿ ಸೂತನಳಿಯೆ ಸಾ | ರಥಿಕೆಯನ್ನು ತಾನೆ ಗೆಯ್ದು |
ಪ್ರತುಳ ಬಲ ಕಿರೀಟಿ ಮಹಾ | ರಥದಿ ಗಜರುತ ||
ಪ್ರತುಳ ಬಲ ಕಿರೀಟಿ ಮಹಾ | ರಥದಿ ಗಜರುತೆಂದನಿವನ |
ಮಥಿಸದಿರಲು ವ್ಯರ್ಥವೆನ್ನ | ಪೃಥೆಯು ಪಡೆದುದು | ಪೃಥೆಯು ಪಡೆದುದು            ||೩೫೫||

ನೆಲಕೆ ಭಾರವಾಗಿ ಇಂದು | ಕುಲಪರಂಪರೆಯ ನೃಪರ |
ವಿಲಸತ್ಕೀರ್ತಿಯೆನ್ನ ಕಡೆಯಿಂ | ಮಲಿನವಾಯಿತೆ ||
ವಿಲಸತ್ಕೀರ್ತಿಯೆನ್ನ ಕಡೆಯಿಂ | ಮಲಿನವಾಯ್ತೆ ಶಿವ ಶಿವಿನ್ನು |
ಸುಲಲಿತಾಶ್ವಮೇಧ ಕೆಡುವ | ಕೆಲಸವಾಯಿತೆ | ಕೆಲಸವಾಯಿತೆ  ||೩೫೬||

ದೇವ ಕೃಷ್ಣ ನೀನು ನಮ್ಮ | ಭಾವನೆಂದು ನಂಬಿ ಜಗದಿ |
ಕೋವಿದಶ್ವವನ್ನು ಪಿಡಿದು | ಜೀವಿಸಿದೆವಲೈ ||
ಕೋವಿದಶ್ವವನ್ನು ಪಿಡಿದು | ಜೀವಿಸಿದೆವಲಯ್ಯ ಮುಂದಿ |
ನ್ನೀ ವಿರೋಧಿಯೊಡನೆ ಕಾದ | ಲಾವ ಪರಿಯೊಳು | ಆವ ಪರಿಯೊಳು      ||೩೫೭||

ಭಾಮಿನಿ
ಅರಸ ಕೇಳರ್ಜುನನು ಧ್ಯಾನಿಸ |
ಲರಿತನಚ್ಯುತನಿಭಪುರದೊಳೆ |
ಚ್ಚರಿಸಿದನು ಹಂಸಧ್ವಜನ ಧರಧುರವ ಧರ್ಮಜಗೆ ||
ಒರೆದು ಧೈರ್ಯವ ವಹಿಲದಲಿ ತಾ |
ಗರುಡವಾಹನನಾಗಿ ಭಕ್ತೋ |
ದ್ಧರಣನಯ್ತಂದೊದಗಿದನು ಪಾರ್ಥಂಗೆಯತಿ ಜವದಿ     ||೩೫೮||

ರಾಗ ಪಂತುವರಾಳಿ ಆದಿತಾಳ
ಬಂದ ತತ್‌ಕ್ಷಣದೊಳಲ್ಲಿಗೆ | ಗೋವಿಂದನೊಲಿದು |
ಬಂದ ತತ್‌ಕ್ಷಣದೊಳಲ್ಲಿಗೆ                                  || ಪಲ್ಲವಿ ||

ಕಶ್ಯಪ ಮುಖ್ಯ ಮುನೀಶ್ವರರುಗಳಾ | ಲಸ್ಯಮಿಲ್ಲದೆ ತಾವ್ ಮಾಡುವ ಧ್ಯಾನಕ |
ದೃಶ್ಯವೆನಿಪ ಪರಬ್ರಹ್ಮನು ಪಾರ್ಥಗೆ | ವಶ್ಯನೆಂಬುದ ನಿರ್ಧರಿಸುವ ತೆರದಿ ||
ಬಂದ ತತ್‌ಕ್ಷಣದೊಳಲ್ಲಿಗೆ  ||೩೫೯||

ಗರುಡನ ಗರಿಗಳ ಬೀಸುವ ಗಾಳಿಗೆ | ಜರಿದುದಜಾಂಡಘಟವದು ದುರ್ಜನ |
ರುರಸ್ಥಳವನುಂ ಗದಗದಿಸಲು ಭಕ್ತರ | ನೆರೆ ಸಲಹುವ ಬಿರುದ್ಹೊಗಳಿಸಿಕೊಳುತ ||
ಬಂದ ತತ್ ಕ್ಷಣದೊಳಲ್ಲಿಗೆ ||೩೬೦||

ಸಂಗರದೊಳು ನೆರೆದಿರುತಿಹ ಸರ್ವರ | ಕಂಗಳಿಗಚ್ಚರಿಯಾಗುವ ತೆರದಿಂ ||
ತುಂಗ ಪರಾಕ್ರಮಿ ಪಾರ್ಥನ ರಥದೊಳು | ಹಿಂಗದೆ ಮಂಡಿಸಲೆನುತ ವಿನೋದದಿ ||
ಬಂದ ತತ್‌ಕ್ಷಣದೊಳಲ್ಲಿಗೆ  ||೩೬೧||

ಭಾಮಿನಿ
ಮೊಳಗಿದವು ನಿಸ್ಸಾಳಕೋಟಿಯು |
ದಳದೊಳಗೆ ತಮತಮಗೆರಗುತಿರೆ |
ಕಳಕಳಿಸುತುತ್ಸಹದ ರಭಸವನಬ್ಧಿ ಘೋಷದಲಿ ||
ಬಳಿಕ ಚರಣಕೆ ಮಣಿದ ಪಾರ್ಥನ |
ಸೆಳೆದು ಬಿಗಿದಪ್ಪುತಲೆ ತಾ ರಥ |
ದೊಳಗೆ ಕುಳಿತಶ್ವಗಳ ವಾಘೆಯ ಕೊಂಡನಾ ಹರಿಯು ||೩೬೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಇನಿತು ನೋಡುತಲಾಗ ಭೂಪನ | ತನುಜ ತನ್ನಂತರದೊಳ್ ನಿತ್ಯದಿ ||
ನೆನೆವ ಮೂರ್ತಿಯು ನರನ ರಥದೊಳು | ಮಿನುಗುತಿಹುದ       ||೩೬೩||

ಕಂಡು ಪುಳಕೋತ್ಸವದ ಹರುಷದಿ | ದಿಂಡುಗೆಡೆದುರೆ ನಮಿಸಿ ತನ್ನಯ |
ಗಂಡುತನಕಿದು ಸಾಕು ತಾ ಕೈ | ಕೊಂಡ ಕೆಲಸ         ||೩೬೪||

ಆಯಿತಿನ್ನೇನೆನುತ ಕರದೊಳು | ಸಾಯಕವ ತಿರುಹತ್ತ ಮುಂದಿಹ |
ತೋಯಜಾಕ್ಷನ ನುತಿಸುತಿರ್ದನು | ಬಾಯೊಳಂದು    ||೩೬೫||

ವಾರ್ಧಕ
ಜಯ ಚತುರ್ಮುಖಜನಕ ಜಯ ಚಾರು ಚಾರಿತ್ರ |
ಜಯ ಚಿದಾನಂದ ಜಯ ಚೀರಾಂಬರಾಜ್ಞೇಯ |
ಜಯ ಜಯ ಚ್ಯುತಿದೂರ ಜಯ ಚೂಡಬರ್ಹ ಶೋಭಿತ ಚೇತನಸ್ವರೂಪ ||
ಜಯ ಚೈದ್ಯಮಥನ ಜಯ ಚೋದಿತಾಖಿಳ ಲೋಕ |
ಜಯ ಚೌರ್ಯಕೃತವಿಲಯ ಜಯ ಚಂಡಶತಕಿರಣ |
ಜಯ ಚಕ್ರಧರನೆಂದು ಕಲಿ ಸುಧನ್ವಂ ಪೊಗಳ್ದನತಿ ತೋಷದಿಂ ಮನದೊಳು         ||೩೬೬||

ಕಂದ
ಘೋರತ್ರಯತಾಪದ ಸಂ |
ಸಾರವು ಸ್ಥಿರವಲ್ಲ ಸಂಗ್ರಾಮದಿ ತಡೆಯದೆ ದುರಿ ||
ತಾರಿಯ ಮೆಚ್ಚಿಸಿ ಮುಕ್ತಿಯ |
ಸೂರೆಯ ಕೊಂಬೆನೆನುತ್ತಚ್ಯುತಗಿಂತೆಂದಂ    ||೩೬೭||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಂದನಾಗ ಸುಧನ್ವ ಶ್ರೀಗೋ | ವಿಂದ ಲಾಲಿಸು ಸತತ ಕುಂತೀ |
ನಂದನರ ಪಾಲಿಸುವೆಯಪಜಯ | ಪೊಂದಗೊಡದೆ     ||೩೬೮||

ಜಯವ ಪಾರ್ಥಗೆ ಪಾಲಿಸುವೆ ನಿ | ರ್ಣಯವ ಬಲ್ಲೆನು ದೇವ ಕೇಳ್ ಪ್ರತಿ |
ಜ್ಞೆಯನು ಮಾಡಲಿಯೆನಲು ಕೇಳ್ದಾ | ವಿಜಯ ನುಡಿದ   ||೩೬೯||

ಎಲವೊ ನಿನ್ನನು ಮೂರು ಬಾಣದಿ | ಕೊಲಲರಿಯದಾನುಳಿದೆನಾದರೆ |
ಇಳೆಯೊಳತಿ ಕಿಲ್ಬಿಷರ ಗತಿಗಾ | ನಿಳಿವೆನೆಂದ            ||೩೭೦||

ಎನಲು ಹರಿ ಕೋಪಿಸಿದ ನೀನೆ | ನ್ನನು ನುಡಿಸದಾಡಿದೆಯ ಭಾಷೆಯ |
ಮಣಿವನಲ್ಲಿವನಾರ್ಗೆನಲು ನೃಪ | ತನಯ ನುಡಿದ       ||೩೭೧||

ಇತ್ತ ಕೇಳೆಲೊ ಪಾರ್ಥ ನೀನೆಸು | ವಸ್ತ್ರ ಮೂರರ ನಡುವೆ ನಾನದ |
ಕತ್ತರಿಸದಿರೆ ಕೃಷ್ಣರಾಯನ | ಭಕ್ತನಲ್ಲ            ||೩೭೨||