ಶಾರ್ದೂಲ ವಿಕ್ರೀಡಿತಂ
ಭಾಮಾಭೈಷ್ಮಿನಿಷೇವಿತಂ ಯದುವರಂ ಭೀಮಾದಿಮೋದಪ್ರದಂ
ಸೀಮಾತೀತಗುಣಂ ಕಿರೀಟಿಜಯದಂ ಕಾಮಸ್ಯ ತಾತಂ ಪರಮ್ |
ಸೋಮಸ್ಯಾನ್ವಯದೀಪಕಂ ಮುರಹರಂ ರಾಮಾನುಜಂ ಕಾಮದಂ
ಶ್ಯಾಮಂ ಪಾಂಡವಯಜ್ಞ ಹೇತುಮತುಲಂ ಕೃಷ್ಣಂ ಸುಸೇವ್ಯಂ ಭಜೇ ||   ||೧||

ಭಾಮಿನಿ
ಶ್ರೀ ಮಹಾಗಣಪತಿ ಗುಣವ್ರಜ |
ಧಾಮ ಭಕುತ ಪ್ರೇಮ ತ್ರಿದಶ |
ಸ್ತೋಮ ವಿನುತಸನಾಮ ಭವವಿಶ್ರಾಮ ನಿಸ್ಸೀಮ ||
ಕಾಮಿತಾರ್ಥ ಫಲಪ್ರದಾಯಕ |
ಸೋಮಸೂರ್ಯಯಮಾತರುಚಿ ತವ |
ಕೋಮಲಾಂಘ್ರಿಗೆ ನಮಿಸಿ ಪೇಳುವೆ ಸ್ವಾಮಿಯೆನಗೊಲಿದು        ||೨||

ರಾಗ ನಾಟಿ ಝಂಪೆತಾಳ
ಜಯ ಜಯತು ಶ್ರೀಕಾಂತ | ಜಯತು ದುರಿತಧ್ವಾಂತ |
ಜಯ ಸುಜನ ಜನಘೋಷ | ಜಯ ವೇಂಕಟೇಶ       || ಪ ||

ರಾಜನಿಭವದನ ಗ್ರಹ | ರಾಜಶತ ಕೋಟಿನಿಭ |
ರಾಜ ಶರಣ್ಯ ಕರಿ | ರಾಜರಕ್ಷಣ್ಯ ||
ರಾಜಪೀಠನಿಲಯ ಸುರ | ರಾಜನುತಚರಣ ಅಹಿ |
ರಾಜಶಯನಖಿಲಾಂಡ | ರಾಜಾಧಿರಾಜ         ||೩||

ಗುರುಕುಜನವ್ಯಾಳದ್ವಿಜ | ಗುರುವ ಸಜ್ಜನಪಾಲ |
ಗರುವ ದೇವರ ದೇವ | ಗರುವಿಕೆಯ ಮೆರೆವ ||
ಗುರುವರಾರ್ಚಿತ ತ್ರಿಜಗ | ಗುರು ಸಾರ್ವಭೌಮ ಸ |
ದ್ಗುರು ಮೂಲಿಕೆನಿವಾಸ | ಗುರು ವೆಂಕಟೇಶ   ||೪||

ವಾರ್ಧಕ
ಶರಣವತ್ಸಲೆ ರಮಾ ವಾಗ್ದೇವಿ ದ್ರುಹಿಣೆ ಶಂ |
ಕರಿ ಶಂಭು ಸುರಪ ಸುರಮುನಿ ಗರುಡ ಗಂಧರ್ವ|
ಪರಮ ವೇದವ್ಯಾಸ ಶುಕ ಶೌನಕಾದಿಗಳ ಚರಣಂಗಳಂ ಸ್ಮರಿಸುತ ||
ವರ ಭಾರತಾಶ್ವಮೇಧಾಗಮದೊಳು ಸುಧನ್ವ |
ಸುರಥರಂ ಶ್ವೇತವಾಹನ ಗೆಲ್ದ ಕಥೆಯ ವಿ |
ಸ್ತರಿಪೆ ಮೂಲಿಕೆಯ ನರಸಿಂಹ ಗುರುವೇಂಕಟೇಶ್ವರನ ಸತ್ಕರುಣದಿಂದ    ||೫||

ಹಸ್ತಿನಾವತಿಯ ಜನಮೇಜಯಂ ಪೂರ್ವಜರ |
ವೃತ್ತಾಂತಮಂ ಮಹಾಭಾರತಶ್ರವಣ ಗೈ |
ವುತ್ತಶ್ವಮೇಧಿಕದಿ ಜೈಮಿನಿ ಮುನಿಪನ ಬೆಸಗೊಂಡನತಿ ಭಕ್ತಿಯಿಂದ ||
ಮತ್ತೆ ಪಾಂಡವರಶ್ವಮೇಧ ಹಯಮಂ ಬಿಟ್ಟು |
ಉತ್ತಮ ಸುಧನ್ವ ಸುರಥರನುಂ ರಣಾಗ್ರದೊಳ್ |
ಪಾರ್ಥಜಯಿಸಿದ ಕಥೆಯ ಬಿತ್ತರಿಪುದೆನುತರಸ ಕೇಳ್ದಡವನಿಂತೆಂದನು     ||೬||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರಸ ಕೇಳ್ ಶ್ರೀ ಕೃಷ್ಣಭಕ್ತರ | ಚರಿತೆಯನು ಕೌರವರ ಬಳಗವ |
ಧುರದಿ ಜಯಿಸಿದ ಬಳಿಕ ಕುಂತೀ | ತರುಣರಾಗ         ||೭||

ಮೆರೆವ ಹಸ್ತಿನಪುರದಿ ಹರಿವಿ | ಷ್ಟರವ ಧರ್ಮಜನೇರಿ ವಿಭವದಿ |
ಧರೆಯನಾಳುತ್ತಿರ್ದ ನಿಜಸೋ | ದರರು ಸಹಿತ           ||೮||

ಒಂದು ದಿನ ರಾಜಾಲಯಕೆ ಜಗ | ದ್ವಂದ್ಯ ವೇದವ್ಯಾಸ ಮುನಿ ನಡೆ |
ತಂದನೆಂಬುದ ಕೇಳಿ ಭೂಮಿಪ | ನಂದದಿಂದ ||೯||

ರಾಗ ಸಾಂಗತ್ಯ ರೂಪಕತಾಳ
ಮುನಿಯ ಬರವ ಕಾಣುತಿದಿರೇಳುತರಸ ತ | ನ್ನನುಜರು ಸಹಿತ ವಂದಿಸಲು |
ಮಣಿದರನೆತ್ತಿ ಹರಸಿ ಮಂತ್ರಾಕ್ಷತೆಯಿತ್ತು | ಅನಿಬರ ಸಂತೈಸಿ ಬಳಿಕ      ||೧೦||

ಉಚಿತದಿ ಸತ್ಕರಿಸುತ ಮುನಿಪನ ರತ್ನ | ಖಚಿತ ಪೀಠದಿ ಕುಳ್ಳಿರಿಸುತ ||
ವಚಿಸದೆ ಮೌನದೊಳಿಹ ನೃಪತಿಯ ಕಂಡು | ಪ್ರಚುರ ಮೌನೀಶನಿಂತೆಂದ           ||೧೧||

ಭೂಪಲಾಲಿಸು ನಿನ್ನೈಶ್ವರ್ಯ ಸಂಪದಕೀಗ | ಲೀ ಪೊಡವಿಯೊಳ್ ಎಣೆಗಾಣೆ ||
ತಾಪಿಸಿ ಮೊಗಸಿರಿ ಕಂದಿದಂತಿದೆ ಪೇಳ್ ಹೃ | ತ್ತಾಪವನೆನ್ನ ಕೂಡರಸ    ||೧೨||

ರಾಗ ಶಂಕರಾಭರಣ ಏಕತಾಳ
ಎನಲಿಂತೆಂದ ಭೂಪ ಗೋತ್ರ | ಹನನಗೆಯ್ದ ಪಾಪವೆನ್ನ |
ಮನದೊಳುರಿವುತಿದೆ ಸಂತಾಪ | ಮುನಿಕುಲವರ್ಯ ||
ರಣದಿ ಕಾದಿ ವೈರಿಗಳನು | ಹನನಗೆಯ್ದಡಿದುವೆ ಕ್ಷತ್ರಿ |
ಜನರ ಧರ್ಮ ದುರಿತವೆಂಬೆ | ನಿನಗೆಂತು ಭೂಪ         ||೧೩||

ಮುತ್ತಾತ ಮಾವ ಮೈದುನ | ಒತ್ತಿನಣ್ಣ ಗುರುಗಳನ್ನು |
ವ್ಯರ್ಥ ಕೊಂದ ಪಾಪ ಪೋಪು | ದೆತ್ತ ಮುನಿರಾಯ ||
ಸೂತ್ರಧಾರಿ ಕೃಷ್ಣನ ವಿ | ಚಿತ್ರಲೀಲೆಯಿದುವೆಬರಿದೆ |
ಚಿತ್ತ ಚಂಚಲವೇಕೋ ಭೂಪೋತ್ತಮ ಕೇಳು   ||೧೪||

ಬಂಧುಗಳ ಕೊಂದು ಪಾಂಡು | ನಂದನರು ರಾಜ್ಯವಾಳ್ವ |
ರೆಂದು ಜನರು ನುಡಿಯದಿಹರೆಂ | ದೆಂದು ಮುನಿರಾಯ ||
ಅಂದದಲಶ್ವಮೇಧವ | ಚಂದದಿಂದ ರಚಿಸೈ ಲೋಕ |
ನಿಂದೆಯಳಿವು ದುರಿತ ನಿನಗೆ | ಪೊಂದದು ಭೂಪ       ||೧೫||

ಭಾಮಿನಿ
ಬಂಧುಹತ್ಯಾದೋಷ ನಿನಗದು |
ಪೊಂದದಂದದಿಯಶ್ವಮೇಧವ |
ನಿಂದು ರಚಿಸೆನುತದರ ಸಾಂಗೋಪಾಂಗವಿಧಿಗಳನು ||
ಚಂದದಿಂ ವಿವರಿಸಲು ಕೇಳುತ |
ಲಂದು ಭೂಪತಿ ಮಖಕೆ ಮನವನು |
ತಂದು ಬಾಗುತ ಬಿನ್ನವಿಸಿದನು ಬಾದರಾಯಣಗೆ        ||೧೬||

ರಾಗ ಕಾಂಭೋಜಿ ಝಂಪೆತಾಳ
ಜೀಯ ಲಾಲಿಪುದಮಿತ ದ್ರವ್ಯ ಸಂಗ್ರಹವಿಲ್ಲ | ವಯ್ಯ ದಿವ್ಯಾಶ್ವ ಮುನ್ನಿಲ್ಲ |
ಈ ಯಜ್ಞವೆಂತು ನಡೆಸಲಿ ತಿಳಿಯೆ ಶ್ರೀಕೃಷ್ಣ | ರಾಯನಪ್ಪಣೆ ಕೇಳಲಿಲ್ಲ     ||೧೭||

ಮನವ ಚಂಚಲಿಸಬೇಡವನೀಶ ಕೇಳು ಬಹು | ಧನವು ದಿವ್ಯಾಶ್ವವಿಹ ಬಳಿಯ ||
ನಿನಗೆ ತೋರಿಸುವೆ ತರಿಸೀ ಕ್ಷಣದಿ ಹಯಮೇಧ | ವನು ರಚಿಸಲುದ್ಯೋಗಿಸಯ್ಯ    ||೧೮||

ಭದ್ರಾವತಿಯ ಪುರದ ಯೌವನಾಶ್ವನೊಳು ಸೌ | ಭದ್ರ ದಿವ್ಯಾಶ್ವವಿಹುದಲ್ಲಿ ||
ಭದ್ರಕಾಯನು ಭೀಮ ಮೊದಲಾದವರು ನಡೆದು | ಪದ್ರವಿಲ್ಲದೆ ತರುವುದಿಲ್ಲಿ           ||೧೯||

ರಾಗ ಮಾರವಿ ಏಕತಾಳ
ಎನಲೆಂದನು ಭೂಪತಿಗೆ ವೃಕೋದರ | ಇನಿತೀ ಕೆಲಸಕ್ಕೆ ||
ಅನುಮಾನಿಸದಿರು ಮನದೊಳಗೀ ಕ್ಷಣ | ವನುಕರಿಸೈ ಮಖಕೆ   ||೨೦||

ಬಿಡು ಚಿಂತೆಯ ಹಿಡಿ ತರುವೆ ಮಖಾಶ್ವವ | ಕೊಡಿಸೆನಗಪ್ಪಣೆಯ ||
ಮೃಡಮುಖ್ಯಾಮರಗಡಣವು ತಡೆದರೆ | ಬಿಡಿಸಿ ತಹೆನು ಜೀಯ   ||೨೧||

ತುರಗವ ತಂದೊಪ್ಪಿಸದಿರೆ ಕೇಳಾ | ನೊರೆವ ಪ್ರತಿಜ್ಞೆಯನು ||
ಸುರಲೋಕಕೆ ಬಾಹಿರನೆನುತಲಿ ಗದೆ | ತಿರುಹ್ಯಬ್ಬರಿಸಿದನು       ||೨೨||

ದೋಷನಿವಾರಣ ಮಖದೀಕ್ಷೆಯ ಹಿಡಿ | ಲೇಸೆಮಗೆನುತ ಮಿಗೆ ||
ಆಶುಗನಾತ್ಮಜ ನುಡಿಯಲು ವೇದ | ವ್ಯಾಸನೊರೆದ ನೃಪಗೆ      ||೨೩||

ರಾಗ ಕೇದಾರಗೌಳ ಅಷ್ಟತಾಳ
ರಾಜಶೇಖರ ಮಹಾರಾಜ ಧರ್ಮಜ ಕೇಳು | ವಾಜಿ ದೊರಕಿತಿನ್ನೇನು ||
ತೇಜನೆ ದ್ರವ್ಯ ಸಂಗ್ರಹವಿರ್ಪ ಠಾವನ್ನು | ಮಾಜದಾನೊರೆವೆನಿನ್ನು          ||೨೪||

ಅರಸ ಕೇಳ್ ಮುನ್ನ ಮರುತ್ತ ದ್ವಿಜರಿಗಿತ್ತ | ಪರಿಮಿತದ್ರವ್ಯವನು ||
ಹೊರಲಾರದಲ್ಲಿ ಬಿಟ್ಟಯ್ದಿದರತಿ ಧನ | ವಿರುವುದು ತರಿಸದನು    ||೨೫||

ಆ ಮರುತ್ತನು ಬ್ರಾಹ್ಮಣರಿಗಿತ್ತ ಧನವನ್ನು | ಈ ಮಹಾಯಜ್ಞಕದು ||
ಹೋಮಿಸಲುಚಿತವೆ ಹನನ ದೋಷಗಳು ನಿ | ರ್ಧೂಮವದೆಂತಹುದು      ||೨೬||

ಅರಸ ಕೇಳ್ ಧನವ ವಿಪ್ರರದೆಂಬೆ ನೀನಾಳ್ವ | ಧರಣಿ ದ್ವಿಜರದಲ್ಲವೆ ||
ದೊರೆಗಳ ತರಿದು ಪರಶುರಾಮ ಧಾತ್ರಿಯ | ಧರಣೀಸುರರಿಗೀಯನೆ       ||೨೭||

ಗುರುವರ್ಯ ಕೇಳು ವಿಪ್ರರಿಗಾದ ಮೇಲೆ ಈ | ಧರಣಿಯಾಸೆಯು ತನಗೆ ||
ಇರುವುದೆ ಮನದಿ ಶ್ರೀಹರಿಯ ಧ್ಯಾನದೊಳಿರ್ಪೆ | ಕರುಣಿಸಪ್ಪಣೆಯೆನಗೆ   ||೨೮||

ಜನಪ ಕೇಳ್ ದೋಷ ಕಾರಣವಿಲ್ಲ ಬ್ರಾಹ್ಮಣ | ಧನವದು ನಿನ್ನದಯ್ಯ ||
ಅನುಮಾನವಿಲ್ಲದೆ ತರಿಸೆನುತಾಕ್ಷಣ | ಮುನಿಪತಿ ಬೀಳ್ಗೊಂಡನು            ||೨೯||

ವಾರ್ಧಕ
ಬಾದರಾಯಣ ತೆರಳಲಿತ್ತಲಾ ಸಮಯಕಂ |
ಶ್ರೀಧರಂ ತೆರಳಿ ಬರಲೀ ವಾರ್ತೆಯರುಹುತ ವೃ |
ಕೋದರ ವೃಷಧ್ವಜರ್ ಮೇಘನಾದರ ಕೂಡಿ ಬೀಳ್ಗೊಟ್ಟು ಕಳುಹಲಾಗ ||
ಪೋದರಾ ಭದ್ರಾವತಿಗೆ ಹಯವ ಕೋಳ್ವಿಡಿದು |
ಕಾದಿ ಕಲಿ ಯೌವನಾಶ್ವನ ಕೂಡಿಕೊಂಡು ಹರು |
ಷೋದಯದಿ ಹಸ್ತಿನಾವತಿಗಯ್ದಿ ಭೀಮನೊಪ್ಪಿಸಿದನಾ ಹಯವ ನೃಪಗೆ     ||೩೦||

ನಳಿನಾಕ್ಷನೊರೆದ ಯಮಜಗೆ ಪೋದುದಿದು ಚೈತ್ರ |
ವುಳಿದ ಪನ್ನೊಂದು ತಿಂಗಳೊಳೆಲ್ಲ ಸಂಗ್ರಹಂ
ಗಳನೊದಗಿಸಲು ತಾನು ಬರ್ಪೆನೆಂದೆನುತಾಗ ಹರಿಯು ದ್ವಾರಕೆಗೆ ತೆರಳೆ ||
ಬಳಿಕಿತ್ತಲಿವರು ಪೋಗುತ ಹಿಮಾತಟದಿ ಗುರು |
ತಿಳುಪಿದಾ ಸ್ಥಳವ ಶೋಧಿಸಿಯೊಂಟೆಭಂಡಿಯಲಿ |
ಪೊಳೆವ ದ್ರವ್ಯವ ಸಾಗಿಸುತ ಮಖಕೆ ಸರ್ವಾನುಕೂಲಮಂ ಗೆಯ್ದರಾಗ     ||೩೧||

ರಾಗ ಭೈರವಿ ಝಂಪೆತಾಳ
ಇನಿತು ಧರ್ಮಜ ಯಜ್ಞ | ಕನುಕೂಲವೆಸಗಿ ಮುನಿ |
ಜನ ಭೂಮಿಪರ ಬರಿಸು | ತನಿಲಜನೊಳೆಂದ ||೩೨||

ತಮ್ಮ ಪೋಗಯ್ಯ ಪರ | ಬೊಮ್ಮ ಶ್ರೀ ಕೃಷ್ಣನಿಹ |
ನಿರ್ಮಲದ ದ್ವಾರಕೆಗೆ | ಕೂರ್ಮೆಯಿಂದೀಗ    ||೩೩||

ತೆರಳಿ ಶ್ರೀವರನ ಪದ | ದರುಶನವ ಗೆಯ್ದರುಹಿ |
ಕರೆತಹುದು ಸಕಲ ಯದು | ವರನುತ್ಸಹದಿ    ||೩೪||

ದೇವಿ ರುಗ್ಮಿಣಿ ಮುಖ್ಯ | ದೇವಿಯರನೊಡಗೊಂಡು |
ದೇವ ತೆರಳೆಂದೆನುತ | ದೇವನಿಂಗರುಹು     ||೩೫||

ಭಾಮಿನಿ
ಅನುಜಗಪ್ಪಣೆ ಕೊಡಲು ಮಾರುತ |
ತನಯನತಿ ಸಂತೋಷದಿಂ ಮಣಿ |
ಗಣವಿಭೂಷಣ ದಿವ್ಯವಸ್ತ್ರಾಲಂಕೃತಿಯ ಗೆಯ್ದು ||
ಕನಕರಥವೇರುತ್ತ ಸೇವಕ |
ಜನಸಹಿತ ಪೊರಮಟ್ಟು ಪಾಠಕ |
ರನುಗೊಳಿಸುತಯ್ತರುತ ಪೊಕ್ಕನು ದ್ವಾರಕಾಪುರವ     ||೩೬||

ದ್ವಿಪದಿ
ಚಾರುತರ ವಿಭವದಿಂದುದಧಿಯೊಳಗಿರುವ |
ಆರು ಬಣ್ಣಿಸಬಹುದು ದ್ವಾರಕಾಪುರವ           ||೩೭||

ವಿಶ್ವಕರ್ಮನು ಕಲಿತ ಕಯ್ಮಾಯೆಗಳನು |
ವಿಸ್ತಾರದಿಂ ಜಗಕೆ ರಚಿಸಿ ತೋರಿದನು          ||೩೮||

ಕೇರಿಕೇರಿಯಲಿ ವಿಸ್ತರವ ನೋಡುತ್ತ |
ಮಾರುತಿಯು ನಡೆತಂದ ಮನದಿ ಹರುಷಿಸುತ           ||೩೯||

ನಾರಾಯಣನ ರಾಜ ಮಂದಿರದ ಮುಂದೆ |
ತೇರನಿಳಿದೊಳಪೊಕ್ಕನತಿ ಭಕ್ತಿಯಿಂದೆ          ||೪೦||

ಶ್ರೀರಮಣ ಶ್ರೀಕೃಷ್ಣ ಹರಿಯೆನ್ನುತಾಗ |
ಮಾರುತಿಯು ಪೊಗಳುತಯ್ತಂದನತಿ ಬೇಗ   ||೪೧||

ವಾರ್ಧಕ
ಇಂತೆಂದು ಕೃಷ್ಣನರಮನೆ ರತ್ನಮಯದ ಮೇ |
ಲ್ಜಂತಿಗಳ ನೋಡುತ್ತ ಬಾಗಿಲುಗಳಂ ಕಳೆದು |
ಕುಂತಿತನಯನು ಹರುಷಗೊಳುತ ಬರಲಾ ಸಮಯಕಚ್ಯುತಂ ಒಳಭವನದಿ ||
ಸಂತಸದೊಳಾರೋಗಣೆಯ ಗೆಯ್ಯಲಾಗ ಬರ |
ಲುಂತಡೆಸಿದಂ ಭೀಮನಂ ಬಾಗಿಲೊಳ್ ಬಾರ |
ದಂತೆ ದೂತಿಗೆ ಸೂಚಿಸುತ್ತ ತಾನರಿಯದೊಲ್ ಸುಮ್ಮಾನದ ವಿನೋದಕೆ ||೪೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಇತ್ತ ಭೀಮನು ಹರಿಯ ನೆನೆನೆನೆ | ದರ್ತಿಯೊಳಗಯ್ತರಲು ದ್ವಾರದಿ |
ಮತ್ತೆ ದೂತಿಯು ನುಡಿದಳಾಶುಗ | ಪುತ್ರನೊಡನೆ       ||೪೩||

ದೇವನಾರೋಗಣೆಯ ಸಮಯವು | ನೀವು ನಿಲಿಯೆಂದೆನುತ ದೂತಿಯು |
ಪಾವಮಾನಿಗೆ ನುಡಿಯೆ ತಾನಾ | ಸೋವನರಿದು        ||೪೪||

ಇನಿತು ದುರ್ಭಿಕ್ಷಗಳೆಯಾರೋ | ಗಣೆಯ ಸಮಯವಿದಾಗಲೆಮ್ಮನು |
ಮುನಿದು ತಡೆಸಲಿದೇತಕೆಂದನು | ಅನಿಲಸೂನು        ||೪೫||

ಭಕ್ತವತ್ಸಲನೆಂಬ ಬಿರುದನು | ಎತ್ತ ಪೋಗಾಡಿದೆಯೋ ನಿತ್ಯ |
ತೃಪ್ತನಾರೋಗಣೆಯ ಸವಿಗತಿ | ಮತ್ತನಹನೆ  ||೪೬||

ಬೆಳೆಯವೇ ಬೆಳೆಫಲಗಳೀಯೂ | ರೊಳಗೆ ಕ್ಷಾಮಗಳಿಂದ ಸುರಿಯದೆ |
ಮಳೆಯುಯೆನೆ ಕೇಳ್ದಾಗ ನುಡಿದನು | ನಳಿನನೇತ್ರ      ||೪೭||

ಈಗ ಬಂದನೆ ಭೀಮ ಕರೆ ಕರೆ | ಬಾಗಿಲಲಿ ತಡೆದವರದಾರೆನು |
ತಾಗಲರಿಯದ ತೆರದೊಳುಚಿತದಿ | ಬೇಗ ಕರೆದ         ||೪೮||

ತೇಜನಿಧಿ ಬಾರೆನುತ ಮನ್ನಿಸಿ | ಭೋಜನವ ಗೆಯ್ಸಿದನು ಭೀಮನ |
ಪೂಜ್ಯನೆನಿಸುತ ನುಡಿಸಿದನು ಯದು | ರಾಜನೊಲಿದು ||೪೯||

ರಾಗ ಕಾಂಭೋಜಿ ಝಂಪೆತಾಳ
ಇಂದುಕುಲತಿಲಕ ಧರ್ಮಜ ಪಾರ್ಥ ಯಮಳರರ |
ವಿಂದಮುಖಿ ದ್ರುಪದಸುತೆ ಸಹಿತ ||
ಚಂದದಿಂದಿಹರೆ ಸರಸಕೆ ತಡೆಸಿದರೆ ಮನದಿ |
ನೊಂದೆಯಾ ಎನೆ ಕೇಳುತೆಂದ                   ||೫೦||

ಮನದಿ ನೋಯುವುದೇಕೆ ಬಿನುಗು ಜನರಿಂಗರಸು |
ತನವು ಬಂದಡರೆ ಬಡವರಲಿ ||
ಕಣು ಕಾಂಬುದೇ ಕಾಮಜನಕ ಪುಸಿಯದೆ ಪೇಳು |
ಜನರ ನಡತೆಗಳು ಲೋಕದಲಿ                    ||೫೧||

ಗೋವಳನ ಮಗನೆನಿಸಿ ಗೋವಳರ ಒಡನಾಡಿ |
ಗೋವುಗಳ ಕಾಯ್ದು ಮನದೊಳಗೆ ||
ಹಾವು ಹದ್ದನೆ ಏರಿ ಮೆರೆವವಗೆ ಮಹಾರಾಜ |
ಠೀವಿ ಬಂದೆಡೆಗೊಂಡುದೀಗ                       ||೫೨||

ಬುತ್ತಿಕೂಳನೆ ಉಂಡು ಬೆಳೆದವಗೆ ಮೃಷ್ಟಾನ್ನ |
ಪ್ರಾಪ್ತವಾಗಲು ನೆಂಟರುಗಳ ||
ಎತ್ತ ಕಾಂಬನು ಎಲೆ ಮುರಾರಿ ಲೋಕದ ನಡತೆ |
ಚಿತ್ತದಲಿ ಬೇಸರಿಸಬೇಡ                ||೫೩||

ಕುಲಹೀನಗೈಶ್ವರ್ಯಲಕ್ಷ್ಮಿ ದೊರಕಲು ತನ್ನ |
ಬಳಗ ಬಂಧುಗಳ ಮನ್ನಿಪನೆ ||
ಸಲುಗೆ ನಮಗೆತ್ತಣದು ಶ್ರೀಕಾಂತ ನಿನ್ನ ಪದ |
ದೊಲವಿರ್ದರದುವೆ ಸಾಕೆಂದ                      ||೫೪||

ಕಂದ
ಭಕ್ತನ ಬಿನ್ನಾಣಗಳಂ |
ಬಿತ್ತರಿಸಲ್ ಮುರರಿಪು ಸಮ ಮನದಂದಾಗಳ್ ||
ಮತ್ತಪ್ಪುತ ಮೈದುನನಂ |
ಕೃತ್ಯದಿ ಭೀಮನೊಳ್ ಸರಸದಿ ನುಡಿವುತ್ತಿರ್ದಂ          ||೫೫||

ರಾಗ ಭೈರವಿ ಝಂಪೆತಾಳ
ಮಾತಿಗಳುಕುವೆ ಯಾಕೆ | ವಾತಸುತ ನೃಪ ನಿನ್ನ |
ಏತಕಟ್ಟಿದ ಪೇಳು | ಪ್ರೀತಿಯಿಂದೆನಗೆ           ||೫೬||

ದೇವ ತವ ಕರುಣಸಂ | ಜೀವನವನುಂಡ ಬಳಿ |
ಕಾವು ಅಳುಕುವುದೇಕೆ | ಶ್ರೀವರನೆ ಕೇಳು      ||೫೭||

ತುರಗಾಧ್ವರಕೆ ಸಕಲ | ಪರಿಕರವನೆಸಗಿ ಶ್ರೀ |
ಹರಿ ನಿಮ್ಮ ಕರೆತರಲು | ಅರಸ ಕಳುಹಿದನು  ||೫೮||

ದೇವಿ ರುಗ್ಮಿಣಿ ಮುಖ್ಯ | ದೇವಿಯರು ಸಕಲ ಯದು |
ಭೂವರರು ಸಹ ಮಖಕೆ | ದೇವ ತೆರಳುವುದು            ||೫೯||

ವಾದಿಸಿದ ನುಡಿಯನಪ | ರಾಧವನು ಕ್ಷಮಿಸೀಗ |
ಹೇ ದಯಾಂಬುಧಿಯೆಂದು | ಪಾದಕೆರಗಿದನು ||೬೦||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಮರುಳಲಾಯೆಲೆ ಭೀಮ ಭಕ್ತರು | ಸರಸದಿಂದೆನ್ನುವನು ಅನುದಿನ |
ಜರೆದು ವಾದಿಸಿ ನುಡಿದೊಡದು ಹಿತ | ಕರವು ಎನಗೆ                ||೬೧|

ಭಕ್ತರೊಡನೆ ವಿವಾದಿಸುವ ಸರ | ಸೋಕ್ತಿ ಸವಿಗಳಿಗಿನ್ನು ಸರಿಯಹ |
ತೃಪ್ತಿಗಾಣೆಯೆನುತಲಪ್ಪಿ ಮ | ರುತ್ತಸುತನ                 ||೬೨||

ಮನ್ನಿಸುತಲನಿಲಜನ ಯಾದವ | ಸೈನ್ಯ ರುಗ್ಮಿಣಿ ಮುಖ್ಯ ದೇವಿಯ |
ರನ್ನು ಒಡಗೊಳುತಾ ಭಕುತಸಂ | ಪನ್ನ ಪೊರಟ                     ||೬೩||