ಭಾಮಿನಿ
ಸಕಲಜನ ವಿಭವದಲಿ ಬರುತಿರೆ |
ಬಕವಿರೋಧಿಯ ಮುಂದೆ ಕಳುಹಿದ |
ಯುಕುತದಿಂದಾಗಮನವಾರ್ತೆಯ ನೃಪತಿಗರುಹೆನುತ ||
ಪ್ರಕಟ ಪುರಬಾಹ್ಯದಲಿ ನಿಜಸೈ |
ನಿಕವ ಬೀಡಿಗೆ ಬಿಡಿಸಿ ಹರುಷದಿ |
ರುಕುಮಿಣಿಯ ಕರೆದಾಗಲಿಂತೆಂದನು ಮುರಧ್ವಂಸಿ      ||೬೪||

ರಾಗ ಕೇದಾರಗೌಳ ಅಷ್ಟತಾಳ
ಅರಸಿ ನೋಡೀ ಸರಸಿಯ | ಅರವಿಂದ |
ಕೆರಗುತಿಹ ಭ್ರಮರತತಿಯ ||
ತರುಣಿಯರ ಕಂಡು ವಿಟರು | ಈ ತೆರದಿ |
ಮರುಳಾಗಿ ಭ್ರಮಿಸುತಿಹರು           ||೬೫||

ಕಮಲಮಕರಂದ ಸವಿಗೆ | ಸಹಜದಿಂ |
ಭ್ರಮರಾಳಿಯೆರಗಲು ಮಿಗೆ ||
ರಮಣಿ ಪದ್ಮಿನಿಗೆ ದೋಷ | ವೆಂತಹುದು |
ಅಮಿತ ಗುಣನಿಧಿ ಪರೇಶ   ||೬೬||

ಮಿಂಡೆಯರ ಅಧರಸುಧೆಯ | ವಿಟಜನಗ |
ಳುಂಡು ಮೆರೆಯುತ ವಿರಹವ ||
ಪುಂಡರೀಕದೊಳು ಪೊಗುತ | ಸವಿವಾಳಿ |
ಉಂಡಮೃತವನು ನಲಿವುತ           ||೬೭||

ಶಿಶು ತಾಯ ಮೊಲೆಯನುಂಡು | | ಜೀವಿಪಂ |
ತೆಸೆವ ಅಳಿಕುಲದ ಹಿಂಡು ||
ಬಿಸಜರಸ ಪೀರ್ದುಳಿವುವು | ದೇವ ದೋ |
ಷಿಸಲುಚಿತವಲ್ಲ ಕೇಳು       ||೬೮||

ರಮಣಿ ನೋಡೀ ವಿನೋದ | ಹಂಸೆಗಳು |
ರಮಿಸಿ ನಲಿವುತ್ತಲಿಹುದ ||
ರಮಣಿಯರ ಕಪಟವಿಂತು | ರವಿಗಿವಳು |
ರಮಣಿಯೆನಿಸುವಳದೆಂತು ||೬೯||

ನಳಿನವನು ಕಂಡು ಮುದದಿ | ಹಂಸೆಗಳು |
ನಲಿವುತಿರುವುವು ಸಹಜದಿ ||
ಪಳಿಯ ಬೇಡೆನ್ನ ಮನೆಯ | ನೆನುತಪ್ಪಿ |
ಕೊಳುತೆರಗಿದಳು ಪಾದವ ||೭೦||

ಭಾಮಿನಿ
ಇತ್ತ ಭೀಮನು ಬಂದು ಧರ್ಮಜ |
ನುತ್ತಮಾಂಗದಿ ನಮಿಸಿ ಮುರರಿಪು |
ಮತ್ತಕಾಶಿನಿಯರ ಸಹಿತ ನೆರಹುತ್ತ ಬಂದುದನು ||
ಬಿತ್ತರಿಸೆ ಹರುಷದೊಳು ಯಮಸುತ |
ಚಿತ್ತ ಹಿಗ್ಗುತ ಮುರಹರನ ಕಾಂ |
ಬರ್ತಿಯಲಿ ಸಹಜಾತರೊಡನೆ ಸಮಸ್ತ ಬಲಸಹಿತ                   ||೭೧||

ರಾಗ ಕೇದಾರಗೌಳ ಅಷ್ಟತಾಳ
ಪೊಳಲ ಸಿಂಗರಗೆಯ್ಸಿ ಕಲಶಗನ್ನಡಿಯಿಂದ | ಲಲನೆಯರೊಡಗೊಳ್ಳುತ ||
ಇಳೆಯಧಿಪರ ಸರ್ವ ದಳ ಸಹ ಭೂಪತಿ | ಘಳಿಲನೆ ಪೊರಮಡುತ         ||೭೨||

ಚೆಲುವ ಮಖದ ಹಯ ಸಹಿತ ಬಹಳ ವಾದ್ಯ | ಗಳ ನಿನಾದದ ಘೋಷದಿ ||
ತಳುವದಯ್ತಂದು ಕಂಡರು ಕಾಮಪಿತನ ನಿ | ಶ್ಚಲ ಭಕ್ತಿಯೊಳು ಮುದದಿ ||೭೩||

ನಳಿನದಳಾಕ್ಷನ ಚರಣಕ್ಕೆ ಭೂಪತಿ | ತಲೆವಾಗುತಿರೆ ಕಾಣುತ ||
ತೊಲಗುತೊಯ್ಯನೆ ಬರಸೆಳೆದಪ್ಪುತಲೆ ನೃಪ | ತಿಲಕನ ಮನ್ನಿಸುತ        ||೭೪||

ಬಳಿಕರ್ಜುನನ ಯಮಳರ ವಂದನೆಯ ಕೊಂಡು | ಇಳೆಯಧಿಪರ ಮನ್ನಿಸಿ ||
ನಿಲುವ ನೀಲಚ್ಛವಿ ಏಕಕರ್ಣದ ಹಯ | ಚೆಲುವಿಕೆಯನು ಕಂಡರು            ||೭೫||

ದೇವಿ ರುಗ್ಮಿಣಿ ಸತ್ಯಭಾಮಾದಿಗಳನು ಸ | ದ್ಭಾವದಿ ದ್ರುಪದಜೆಯು ||
ಭಾವಿಸುತುಪಚರಿಸಿದಳತಿ ವಿನಯದಿ | ದೇವಿ ಸುವಚನದೊಳು  ||೭೬||

ಆ ವೇಳೆಯಲಿ ಸತ್ಯಭಾಮಾ ದೇವಿಯು ಸ್ವಾ | ಭಾವಿಕ ನಗೆಯಿಂದಲಿ ||
ಕೋವಿದ ಪಾಂಚಾಲೆಯನು ನುಡಿಸಿದಳು  ಸ | ದ್ಭಾವ ನಟನೆಗಳಲಿ        ||೭೭||

ರಾಗ ನೀಲಾಂಬರಿ ಆದಿತಾಳ
ಏನವ್ವ ದ್ರುಪದಸುತೆ | ನಿನಗೆಯೆಣೆ | ಗಾಣೆ ಬಹು ಪತಿವ್ರತೆ ||
ಜಾಣೆಯೆಂದೆನಿಪ ಮಾನಿನಿಯರ ಕುಲದೊಳು | ನೀನೆ ಜಗದಿ ಪ್ರಖ್ಯಾತೆ    ||೭೮||

ಪಾತಿವ್ರತ್ಯದ ಧರ್ಮವು | ಕಾಯ್ದ ಶ್ರೀ | ನಾಥನೆನ್ನಯ ಸತ್ಯವು ||
ಆತನೆ ಬಲ್ಲ ತ್ರೈಜಗದೊಳಗೀಗ ಪ್ರ | ಖ್ಯಾತಗೆಯ್ಸಿದ ನಿಜವು                  ||೭೯||

ಮಡದಿಯರನಿಬರಾವು | ಕೃಷ್ಣನೊಡಂ | ಬಡಿಸಲು ಅಳವಲ್ಲವು ||
ಪೊಡವಿಪರೈವರ ಮನವೊಡಂಬಡಿಸುವೆ | ಕಡು ಪತಿವ್ರತೆ ದೃಢವು         ||೮೦||

ಪೂರುವಧೃತ ಶಾಪದಿ | ಪುರುಷರೈವರ್ | ಸಾರಸಭವಕೃತದಿ ||
ನಾರದಮುನಿಪಗೆ ಪತಿಯನ್ನು ಮಾರಿದೆ | ಧೀರೆ ನೀನೌ ಜಗದಿ   ||೮೧||

ಏಕಪತಿಗೆ ಸುದತಿ | ಅನೇಕರು | ಲೋಕದೊಳಿಹ ಪದ್ಧತಿ ||
ಏಕಸತಿಗೆ ಬಹುಪತಿಗಳಾಗಿಹುದೆಂಬ | ವಾಕು ಕಾಣೆನು ಶಾಸ್ತ್ರದಿ                        ||೮೨||

ಮುನಿಯಿತ್ತ ಮಂತ್ರದಿಂದಾ | ದೇವತೆಗಳು | ಅನುಸರಿಸಿದರು ಅಂದ ||
ಇನಿತು ಕೃತಕದ ಕಲ್ಪನೆ ನುಡಿಗಳು ನಿನ್ನ | ಮನಸಿಗೆ ದಿಟವು ಚಂದ        ||೮೩||

ವಾರ್ಧಕ
ಜನಪನರಸಿಯ ಮಾತಿಗಾ ಭಾಮೆ ಬದಲು ನುಡಿ |
ವನಿತರೊಳ್ ತಂದು ನಿಲಿಸಿದರಾ ಮಖಾಶ್ವಮಂ |
ವನಿತೆಯರು ನೆರೆದು ನೋಡುತಲಿರ್ದರೇಕಕರ್ಣದ ದಿವ್ಯತರ ವಾಜಿಯ ||
ಮುನುಜೇಶ ಕೇಳತ್ತ ಸಾಲ್ವದೇಶಾಧಿಪತಿ |
ಯನುಸಾಲ್ವಖಳನ ಬೇಹಿನ ಚರರು ಹರಿ ಧರ್ಮ |
ಜನ ಬಳಿಗೆ ಬಹ ಪರಿಯನರಿತೊಡೆಯನೆಡೆಗಯ್ದಿ ಮಣಿದೆಂದರೀ ವಾರ್ತೆಯ         ||೮೪||

ರಾಗ ಮುಖಾರಿ ಆದಿತಾಳ
ಕೇಳಯ್ಯ ಸಾಲ್ವದೇಶದೊಡೆಯ | ನಾವೆಂಬ ನುಡಿಯ |
ಕೇಳಯ್ಯ ಸಾಲ್ವ ದೇಶದೊಡೆಯ     || ಪ ||

ದೇಶದೇಶವ ತಿರುಗಿ ಬರುತ | ಕಂಡೆವು ಮತ್ತಾ |
ವಾಸುದೇವನು ಸೈನ್ಯ ಸಹಿತ ||
ಆಶುಗಸುತನೊಡನೀ ಸಮಯದೊಳಾ |
ಕೇಶವ ರವಿ ಶತ ಭಾಸುರ ರಥದಿ ಸು |
ವಾಸಿನಿಯರೊಳು ವಿಲಾಸದಿ ಗಜಪುರ |
ಧೀಶನ ನೋಳ್ಪಭಿಲಾಷೆಯೊಳಯ್ದಿದ || ಕೇಳಯ್ಯ        ||೮೫||

ತುರಗಮೇಧಕೆ ಪೋಪರಂತೆ | ಅತಿರಥರೆಲ್ಲ |
ಪುರದ ಕಾವಲಿಗಿರುವರಂತೆ ||
ಭರದಲಿ ನೀನಾ ಹರಿಯನು ಮಾರ್ಗದಿ |
ಧುರದೊಳು ಗೆಲಿದಾ ತರುಣಿಯರನು ಕಯ್ |
ಸೆರೆಯನು ಪಿಡಿದರೆ ಮರಳಿ ಬಿಡಿಸುವ ಭ |
ಟರುಗಳದಾರೆಂದೆರಗಿದರವರು || ಕೇಳಯ್ಯ   ||೮೬||

ರಾಗ ನಾದನಾಮಕ್ರಿಯೆ ಅಷ್ಟತಾಳ
ಚರರೆಂದ ವಚನವ ಕೇಳುತ್ತ | ಘನ | ಹರುಷದಿ ಸಭೆಯನ್ನು ನೋಡುತ್ತ ||
ಭರದಿ ತದ್ದೂತರಿಗುಚಿತವ | ನಿತ್ತು | ಒರೆದ ಮಂತ್ರಿಯೊಳೊಂದು ವಾಕ್ಯವ            ||೮೭||

ಬಾರಯ್ಯ ಧೀರ ಮಂತ್ರೀಶನೆ | ಗೋಪೀ | ಚೋರನು ನಮ್ಮಗ್ರಭವನನ್ನೇ |
ಸೇರಿಸಿದನು ಯಮಪುರವನ್ನು | ಈಗ | ಮಾರಿಗೆ ಕೊಡುವೆನು ಬಲಿಯನ್ನು            ||೮೮||

ಕರಿಪುರಕಯ್ದುವಂತೀಗ | ನಾವು | ತೆರಳಿ ಮಾರ್ಗದೊಳವರನು ಬೇಗ ||
ತರುಬಿ ಯುದ್ಧದಿ ನಮ್ಮ ಹಗೆಯನು | ಕೊಂದು | ಬರುವ ಕೂಡಿಸು ಸೈನ್ಯಗಳ ನೀನು          ||೮೯||

ರಾಗ ಭೈರವಿ ಝಂಪೆತಾಳ
ಕೇಳುತಾಕ್ಷಣ ಸಚಿವ | ಮೇಳವಿಸೆ ನಿಜಬಲವ |
ಪಾಳಯವು ಸಹಿತಾಗ | ಖೂಳ ನಡೆತಂದ    ||೯೦||

ದೂರದಲಿ ಕಂಡು ಹರಿ | ವೀರ ಪಾಂಡವರೊಡನೆ |
ಸೇರಿರಲು ಮನದೊಳಗೆ | ಬೇರೆ ಯೋಚಿಸಿದ ||೯೧||

ಮಖತುರಗವನು ಮಾಯೆ | ಶಕುತಿಯಲಿ ತರಲಾಗ |
ಬಕವೈರಿ ಬಹನು ಯು | ದ್ಧಕೆ ನಿಮಿಷದೊಳಗೆ ||೯೨||

ವಾರ್ಧಕ
ಬಿನುಗು ಕೃಷ್ಣನ ಬಲುಹ ನಿಲಿಸುವೆನು ತಾನೆಂದು |
ಘನ ಮಾಯೆಯಿಂದ ನಭಕಡರುತೀಕ್ಷಿಸೆ ಹಯವು |
ವನಿತೆಯರ ಮಧ್ಯದೊಳಗಿರಲು ಲೇಸಾಯ್ತೆಂದು ಮನದಿ ಸಂತಸ ತಾಳುತ ||
ಅನುಸಾಲ್ವನಾಗಲತಿ ವೇಗದಿಂದಾ ಕುದುರೆ |
ಯನು ಕೊಂಡು ಚಿಗಿದನಾಗಸಕೆ ಮಗುಳಲ್ಲಿ ಮಾ |
ನಿನಿಯರೆಲ್ಲರು ಬೆದರಿ ಶ್ರೀ ಹರಿಯ ಸ್ತುತಿಸಿ ಖಳನುರವಣಿಸುತಿರ್ದ ಧುರಕೆ            ||೯೩||

ರಾಗ ಶಂಕರಾಭರಣ ಮಟ್ಟೆತಾಳ
ಖಳನು ಹಯವನೊಯ್ದು ಕಟ್ಟಿ | ಕೊಳುತ ಕಾಳಗಕ್ಕೆ ತನ್ನ |
ಬಲವ ಪದ್ಮದಾಕೃತಿಯಲಿ | ನಿಲಿಸಿ ತವಕದಿ ||
ಅಳುಕದೆನ್ನಗ್ರಜರ ಕೊಂದ | ನಳಿನನೇತ್ರನೊಡನೆ ಕಾದಿ |
ಕೊಲುತ ಪಾಂಡುಸುತರ ಗರ್ವ | ವಿಳಿಪೆನೆನ್ನುತ         ||೯೪||

ಭಾರಿ ಭುಜವ ಹೊಯ್ಯುತಸುರ | ಧಾರನೆಂಬ ಸಚಿವನೊಡನೆ |
ಭೂರಿಸೈನ್ಯ ನೆರೆವುದೆನ್ನು | ತಾರುಭಟಿಸುತ ||
ಧೀರನಿದಿರು ನಿಲಲು ಚಕ್ರ | ಧಾರಿ ಕಾಣುತಾಗ ಖಳನ |
ಕಾರಣವನು ತಿಳಿದು ಸುಭಟ | ವಾರಕೆಂದನು ||೯೫||

ರಾಗ ಕಾಂಭೋಜಿ ಝಂಪೆತಾಳ
ನೋಡಿದಿರೆಯನುಸಾಲ್ವನೆಂಬ ರಕ್ಕಸನಿವನು | ಮಾಡಿದೀ ಯತ್ನ ಮಖಹಯವ ||
ಗಾಢದಿಂ ಪಿಡಿದು ನಭಕಡರಿ ನಮ್ಮೊಳು ಯುದ್ಧ | ಮಾಡಲೊದಗಿದ ಪರಾಕ್ರಮವ   ||೯೬||

ಯಾರಿವನ ಗೆಲ್ದು ಕುದುರೆಯ ಬಿಡಿಸಿ ತಹೆನೆಂಬ | ಧೀರರಾರೆಮ್ಮ ಸೈನ್ಯದಲಿ ||
ಶೌರ್ಯವಂತರು ವೀಳ್ಯ ಪಿಡಿಯಿರೆನೆ ಭಟರುಸಿರ | ಲಾರದಂಜುತ ಸುಮ್ಮನಿರಲು  ||೯೭||

ಅನಿತರೊಳು ಪ್ರದ್ಯುಮ್ನ ಧನುವನೊದರಿಸುತೆಂದ | ದನುಜನನು ರಣದಿ ತತ್ ಕ್ಷಣದಿ ||
ಕ್ಷಣದಿ ಪರಿಭವಿಸಿ ಕುದುರೆಯ ಬಿಡಿಸಿ ತಾರದಿರೆ | ಮನವಂಚಿಸದೆ ಪೇಳ್ವೆ ಶಪಥ    ||೯೮||

ಚಾರು ಕುದುರೆಯನು ತಂದೊಪ್ಪಿಸದೆಯಿರಲು ವೃಷ | ಳೀರಮಣಗಾದ ದುರ್ಗತಿಗೆ ||
ಸೇರುವೆನು ಎಂದೆನುತ ಪಿತನನುಜ್ಞೆಯಲಿ ರಥ | ವೇರಿ ಬೀಳ್ಗೊಂಡನಾಗಳಿಗೆ        ||೯೯||

ರಾಗ ಕಾಂಭೋಜಿ ಮಟ್ಟೆತಾಳ
ಇನಿತು ಭಾಷೆಯಾಡಿ ಕಂದರ್ಪ ರೋಷದಿ |
ಕ್ಷಣದಿ ರಥವ ನಡೆಸಿ ಬರಲು ದನುಜ ದೂರದಿ ||
ಮನದೊಳೆಂದ ರಕ್ಕಸಾರಿತನಯನೀತನು |
ಎನುತ ಬಲ ಪಿಂದಿಕ್ಕಿ ಮುಂದೆ ಕನಲಿ ನಿಂದನು          ||೧೦೦||

ತಳುವದೆಂದ ಸ್ಮರನುಯೆಲವೊ ಖಳನೆ ನೆರೆದಿಹ |
ಬಲದ ಮಧ್ಯದಿಂದಲಶ್ವ ಕಳವಿಲೊಯ್ದೆಯ ||
ಉಳಿವೆಯೆಂತು ರಣದೊಳೀಗ ನಿನ್ನ ದೇಹವ |
ಕಳಚಿ ಬಿಡುವೆನೆಂದು ಬಿಟ್ಟ ಕಡು ಶರೌಘವ    ||೧೦೧||

ಮದನ ನಿನ್ನ ಶರಕೆ ಸತಿಯರ್ ಬೆದರ್ವರಲ್ಲದೆ |
ಕದನಕಲಿಗಳಂಜುತಿಹರೆಯದಕೆ ತಡೆಯದೆ |
ಒದಗಿದಸ್ತ್ರ ಕಡಿದು ದೈತ್ಯ ಗದಗದಿಸುತಲಿ |
ಚದುರ ಸರಳ ಬಿಟ್ಟನಾಗ ಬದುಕುಯೆನುತಲಿ  ||೧೦೨||

ದುರುಳನೆಚ್ಚ ಶರವು ಮಾರನುರಕೆ ನಾಂಟಲು |
ಶಿರವು ತಿರುಗಿ ಒರಗಿದನು ಮೈಮರೆದು ರಥದಲಿ ||
ಭರದಿ ಸೂತ ರಥವ ಪಿಂತೆ ತಿರುಗಿಸುತ ಬರೆ |
ಪರಿಯ ಕಾಣುತಾಗ ಮಗನ ಜರೆದ ಶ್ರೀಹರಿ   ||೧೦೩||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಭಳಿರೆ ಭಾಷೆಯನಾಡಿ ದೈತ್ಯನ | ಕಲಹಕಂಗಯ್ಸುತಲಿ ದೇಹವ |
ನುಳುಹಿ ಕೊಂಡೆಯ ಜುಣುಗಿ ಸಾಕಿ | ನ್ನಿಳೆಯೊಳೀಗ   ||೧೦೪||

ದ್ವಾರಕೆಯೊಳಿಂತಬಲೆಯರ್ಗೆ ನೀ | ಮೋರೆಯನು ತೋರುವೆಯೊ ಕಾನನ |
ಸೇರಿದರೆಯಾ ಋಷಿಗಳಾಶ್ರಮ | ಸೇರಗೊಡರು         ||೧೦೫||

ನಿಂದಿಗನುಯೆಂದೆನುತ ಕೂಡರು | ಮುಂದೆಗತಿ ನಿನಗಾರು ಬಾಣಸಂ |
ಬಂಧಿಗನುಯೆನುತೆಯ್ದೆ ಕೊಲಲಿಹ | ನಿಂದುಧರನು      ||೧೦೬||

ಎಡೆಗೊಡರು ಇನ್ನೇನ ಮಾಡುವೆ | ಸುಡು ಪರಾಕ್ರಮವೆನುತ ಹರಿ ತ |
ನ್ನೆಡದ ಕಾಲಿಂದೊದ್ದ ಜರೆವುತ | ನುಡಿದ ಮಗನ         ||೧೦೭||

ಮತ್ತೆ ಸಾತ್ಯಕಿ ಸಾಂಬ ಗದ ಬಲ | ನತ್ಯಧಿಕ ಭೀಮಾರ್ಜುನರ ಪುರು |
ಷೋತ್ತಮನು ತಾ ಕೂಡಿ ಕದನಕೆ | ನುತ್ತ ನಡೆದ         ||೧೦೮||

ವಾರ್ಧಕ
ದರ್ಪದಿಂ ಕುದುರೆಯಂ ಕೊಂಡು ಬಹೆನೆಂದು ಕಂ |
ದರ್ಪನೊಂದೆಸೆಯೊಳುರವಣಿಸಿದಂ ಕೂಡೆ ನಡೆ |
ದರ್ಪರ ಬಲಕೆ ಸಾಂಬ ಕೃತವರ್ಮನನಿರುದ್ಧ ಪ್ರಮುಖ ಸಾತ್ಯಕಿ ವೀರರು ||
ಸರ್ಪವೈರಿಧ್ವಜರ ರಥಮೈದೆ ಕಂಡು ಸೇ |
ನರ್ಪಲವ ನಡುಗಿದುದು ಚಿತ್ರದಿಂ ದೈತ್ಯರ ಪೆ |
ಸರ್ಪೆರೆಯದಂತೆ ಮಾಡುವ ಕೃಷ್ಣನಿವನೆಂದು ಅರಿತಾಗಲನುಸಾಲ್ವನು     ||೧೦೯||

ರಾಗ ಭೈರವಿ ಏಕತಾಳ
ವ್ಯಗ್ರದಿ ಬಹ ಕೃಷ್ಣನನು | ಖಳ | ನುಗ್ರ ರೋಷದಿ ನುಡಿಸಿದನು ||
ಅಗ್ರಜರ ಕೊಂದೆ ಮುನ್ನ | ನಾ | ನಿಗ್ರಹಿಸದೆ ಬಿಡೆ ನಿನ್ನ            ||೧೧೦||

ಮದದೊಳಾಡದಿರು ಕೇಳಸುರ | ನಿ | ನ್ನುದರವ ಬಗಿವೆ ನೋಡ್ ಕರುಳ ||
ಕುದುರೆಯ ಬಿಡುಧರ್ಮಜನ | ಮಖ | ಕೊದಗಿದರುಳುಹುವೆ ನಿನ್ನ           ||೧೧೧||

ವ್ಯರ್ಥ ಗೋವಳ ನೀ ಹೆಂಗಸಿನ | ಎತ್ತು | ಕತ್ತೆ ಕುದುರೆ ಆ ಫಣಿಪನ ||
ಮೃತ್ಯುಗಾಣಿಸಿದಹಂ ಕೃತದಿ | ಎನ | ಗುತ್ತರವೀವೆಯ ಧುರದಿ   ||೧೧೨||

ಬಿಡು ವೈರವನೆನ್ನೊಡನೆ | ನೀ | ಕೆಡಬೇಡೆಲೊ ರಕ್ಕಸನೆ ||
ದೃಢಮನ ಜಯಿಸಲಿಕಿರಲು | ಧನು | ವಿಡಿದಿದಿರಾಗಿ ನಿಲ್ಲೆನಲು   ||೧೧೩||

ದುರುಳನು ರೋಷದೊಳಾಗ | ಬಿಡ | ದುರವಣಿಸುತಲಿ ಶರೌಘ |
ಸುರಿಸಲು ಹರಿ ಕಂಡದನು | ಕ  | ತ್ತರಿಸಿ ಬಿಟ್ಟನು ಶಸ್ತ್ರವನು      ||೧೧೪||

ಭರದೊಳಸುರ ಮದದಿಂದ | ಹರಿ | ಯುರಕೆಸೆಯಲು ಸರಳೊಂದ ||
ಕರುಣಾಕರ ಕೌಳಿಕದಿ | ಮೈ | ಮರೆದೊರಗಿದನಾ ರಥದಿ          ||೧೧೫||

ಕಂದ
ದನುಜನ ಶರಹತಿಯಿಂದಲೆ |
ದನುಜಾರಿಯು ಮೈಮರೆದೊರಗಿರಲಾಸಮಯಂ ||
ವನಿತಾಮಣಿ ಭಾಮೆಯು ತಾ |
ರಣರಂಗದೊಳೈತಂದೆಂದಳ್ ಕೃಷ್ಣನೊಳಂ   ||೧೧೬||

ರಾಗ ನೀಲಾಂಬರಿ ಏಕತಾಳ
ರಮಣ ಏನಿದು ಕಾಂತ ಯಾತಕೊ ಇಂಥ |
ಭ್ರಮಣೆ ಹೊಂದಿಹುದ್ಯಾಕೆ ಕೇಶವ ಪರಾಕೆ      ||೧೧೭||

ಮಗನ ಜರೆದು ನೀನು ಕದನಕೆ ಪೋಗಿ |
ಬದುಕಿ ಬಂದುದು ಸಾಕು | ಖಳನೊಳು ಸಾಗಿ            ||೧೧೮||
ಕುದುರೆಯ ಬಿಡಿಸಿ ನೀವ್ ತಂದುದೆ ಸಾಕು |
ಸುದತಿಯರೆಲ್ಲರು ನಗುವರ್ ಪರಾಕು           ||೧೧೯||

ಭಾಮಿನಿ
ಹರಿಯು ಮೂರ್ಛಿತನಾಗೆ ಕಾಣುತ |
ವರ ಮಹಾ ಯಾದವರು ರೋಷದೊ |
ಳುರಿಯ ಮಸಗುತ ಭೀಮಪಾರ್ಥರು ಗರ್ವದಿಂ ಧುರಕೆ ||
ಶರ ಶರಾಸನಗೊಂಡು ರಥಕೈ |
ತರುತ ಮುಂಮಾಡಲ್ಕೆ ಹೇಳಲು |
ಹರಿಗನಿತರೊಳು ಕರ್ಣಸುತ ಬಿನ್ನೈಸಿದನು ಮುದದಿ    ||೧೨೦||

ರಾಗ ಕೇದಾರಗೌಳ ಅಷ್ಟತಾಳ
ಸರಸಿಜಾಕ್ಷನ ಪಾದಕೆರಗಿ ಕರ್ಣಜನೆಂದ | ಧುರಕೆನಗಪ್ಪಣೆಯ ||
ಕರುಣಿಸಬೇಕು  ಆ ದೈತ್ಯನ ಗರ್ವವ | ಮುರಿವೆ ಕೇಳ್ ದಿಟವು ಜೀಯ     ||೧೨೧||

ಬಿಡು ಎನ್ನನೀಗ ಯುದ್ಧಕೆಯನುಸಾಲ್ವನ | ಹೆಡಗೈಯ ಬಿಗಿದು ತಂದು ||
ತಡೆಯದೆ ದೇವ ನಿಮ್ಮಡಿಗೊಪ್ಪಿಸದಿರೆನ್ನ | ಕಡುದ್ರೋಹಿಯೆನ್ನಿರೀಗ         ||೧೨೨||

ವಪ್ರಹತ್ಯವನು ಮಾಡಿದ ದೋಷ ನುಡಿಗೆ ನಾ | ತಪ್ಪಿದರೆನೆ ಕೇಳುತ ||
ಸರ್ಪಶಯನನೆದ್ದು ಬಾರೆನ್ನ ಮಗುವೆಯೆಂ | ದಪ್ಪಿಕೊಂಡನು ನಗುತ        ||೧೨೩||

ಧಡಿಗನ ಧುರದೊಳು ಜಯಿಸು ಪೋಗೆನುತ ಮೈ | ದಡವಿ ವೃಷಧ್ವಜನ ||
ಕಡು ಕೃಪೆಯಲಿ ವೀಳ್ಯವಿತ್ತು ಶ್ರೀಹರಿಯು ಬೀ | ಳ್ಗೊಡಲು ಹರಸಿ ವೀರನ ||೧೨೪||

ಘನರಥವೇರಿ ಬಂದಾಕ್ಷಣ ವೃಷಕೇತು | ಅನುಸಾಲ್ವಗಿದಿರಾಗುತ ||
ಬಣಗು ರಕ್ಕಸನೆ ಸೈರಿಸಿಕೊಳ್ಳೆನುತ್ತ ಕೂ | ರ್ಗಣೆಗಳ ಸುರಿದ ಮತ್ತೆ        ||೧೨೫||