ರಾಗ ಕಾಂಭೋಜಿ ಝಂಪೆತಾಳ
ಕಂಜಭವ ಭವ ಮುಖ್ಯ ಸುರವಂದ್ಯ ಭಕ್ತಜನ |
ಸಂಜೀವ ಶ್ರುತಿಶಿರೋರತುನ ||
ಮಂಜುಳಾಂಗ ಶ್ರೀಕಾಂತ ಕೃಷ್ಣ ಕರುಣಿಸು ವಜ್ರ |
ಪಂಜರಾಂಚಿತ ಪಾಪರಹಿತ                        ||೧೮೪||

ರಾಜವಂಶಾಂಬುನಿಧಿ ರಾಜಾಧಿರಾಜ ಮಹ |
ರಾಜನಾಗಿಹ ಯುಧಿಷ್ಠಿರನ ||
ರಾಜಿಸುವ ಹಯಮೇಧದಶ್ವಮಿದು ಮಿಡುಕುಳ್ಳ |
ರಾಜರಿದ ಕಟ್ಟಿ ಕಾದುವುದು                        ||೧೮೫||

ಬಲ್ಪುಳ್ಳವರು ಕಾದುವುದು ಕಾದಲಸದಳವಾ |
ಗಿರ್ಪವರು ಪಾರ್ಥನನು ಕಂಡು ||
ಕಪ್ಪಗಳ ಕೊಟ್ಟು ಕೊಂಡೊದಗಿ ಬಹುದೆಂದೆನುತ  |
ಲಿಪ್ಪುದನು ವಾಚಿಸಿದರಂದು                       ||೧೮೬||

ಇಂತು ಹಯದಾ ಫಣೆಯ ಪಟ್ಟೆಲಿಖಿತವನು ಭೂ |
ಕಾಂತ ಹಂಸಧ್ವಜನು ಕೇಳಿ ||
ಸಂತಸವ ತಾಳ್ದು ಸಭ್ಯಸ್ಥರಾಗಿಹ ತನ್ನ |
ಮಂತ್ರಿಗಳಿಗೆಂದ ಮುದ ತಾಳಿ                    ||೧೮೭||

ರಾಗ ಪಂತುವರಾಳಿ ಅಷ್ಟತಾಳ
ಮಂತ್ರಿಗಳಿರ ಕೇಳಿರೀಗ | ಶ್ರೀ | ಕಾಂತನ ಕಾಣುವ ಯೋಗ ||
ಬಂತು ಮುತ್ಪುಣ್ಯವನೇನೆಂಬೆ ವಹಿಲದಿ |
ಕುಂತಿಸುತನಧ್ವರದ ಹಯ ತ | ನ್ನಂತೆ ತಾನೇ ಬಂದುದಲ್ಲಿಗೆ     ||೧೮೮||

ಪಾಂಡುತನಯರ ಹರಿಬವ | ಕರ | ದಂಡದಳಾಕ್ಷ ಪೊತ್ತಿರುವ ||
ಕಂಡುದಿಲ್ಲನ್ನೆಗಂ ಕೃಷ್ಣನ ಬರಿಸುವ |
ಗಂಡುತನದ ಉಪಾಯ ಮುಂದಿಹು | ದಂಡಲೆಯದಚ್ಯುತನ ಕರೆಸುವೆ    ||೧೮೯||

ಕುದುರೆಯ ಕಟ್ಟಿ ಕಾಹುರದಿ | ಪಾರ್ಥ | ಗಿದಿರಾಗಿ ಸೆಣಸುತಾಹವದಿ ||
ಬೆದರದೆ ನರನ ಬಿಂಕದ ಶೌರ‍್ಯ ನಿಲಿಸಲು |
ಒದಗಿ ಬಹನಾ ಯದುಕುಲೋತ್ತಮ | ನಿದಿರಿನಲಿ ತೋರುವೆನು ಸಾಹಸ  ||೧೯೦||

ಅಳುಕದೆ ನರನ ಬೆಚ್ಚಿಸುವೆ | ಆ | ನಳಿನಲೋಚನನ ಮೆಚ್ಚಿಸುವೆ ||
ಇಳೆಯೊಳು ಖ್ಯಾತಿಯ ತಳೆವೆನನಿತರ ಮೇಲ್ |
ಅಳಿದರೇಂ ತನು ನೆಲೆಯಲ್ಲಚ್ಯುತ | ನೊಲುಮೆಗಳ ಪಡೆವುದೆ ಮಹಾಫಲ            ||೧೯೧||

ಮನುಮಥನಯ್ಯನ ನೋಡಿ | ತನು | ಮನವ ಸಮರ್ಪಣೆ ಮಾಡಿ ||
ಜನುಮ ಸಾರ್ಥಕಗೆಯ್ದು ಜನನ ಮೃತ್ಯುವ ಗೆಲ್ದು |
ಅನುಪಮನ ಚಿದ್ಘನ ಕೈವಲ್ಯವ | ನನುಸರಿಸುತೀ ಕ್ಷಣದಿ ಪಡೆವೆನು         ||೧೯೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಯುದ್ಧ ಸನ್ನಹ ಗೆಯ್ವುದೆನುತಲೆ | ಬುದ್ಧಿ ಪೇಳಿದ ಮಂತ್ರಿಗಳಿಗೆ ಪ್ರ |
ಸಿದ್ಧ ಹರಿದರುಶನಕೆನುತ ಮನ | ನಿರ್ಧರಿಸಿದ ||೧೯೩||

ಎಲೆ ಧರಾಧಿಪ ಲಾಲಿಸಾ ನೃಪ | ಕಲಹವೇ ನಿಶ್ಚಯಿಸಿ ಕರೆಸಿದ |
ದಳಪತಿಗಳನು ನರನ ಸನ್ನಿಧಿ | ಯಳವಿಗೆನುತ          ||೧೯೪||

ಹೊಡೆಸಿದನು ಡಂಗುರವ ದ್ರವ್ಯವ | ಕೊಡಿಸಿದನು ಸೈನಿಕರ ತೃಪ್ತಿಯ |
ಪಡಿಸಿದನು ಬೇಗವರ ಯುದ್ಧಕೆ | ನಡೆಯಿರೆಂದು         ||೧೯೫||

ಮತ್ತೆ ಕೇಳ್ ನೃಪಕಾಯ್ದು ಉಕ್ಕುವ | ತಪ್ತತೈಲದ ಕೊಪ್ಪರಿಗೆಯೊಳ |
ಗೆತ್ತಿ ಬೀಸಾಡುವುದು ರಣಕೆ ಹಿ | ನ್ನಿತ್ತ ಜನರ  ||೧೯೬||

ನೆರೆದಿರುವ ಸಭೆಯೊಳಗೆ ತನ್ನಯ | ತರಳನನು ಕಾಣದಿರೆಯಾಕ್ಷಣ |
ಕರೆತರಲು ಕಳುಹಿದನು ಚರರನು | ಭರದೊಳಾಗ ||
ಕರೆಸುತಾಗ ಸುಧನ್ವನನು ಸಂ | ಗರಕೆ ತೆರಳೆನುತರುಹಿ ತಾನತಿ |
ಭರದಿ ಪೊರಟನು ಸಕಲ ಸೈನಿಕ | ವೆರಸಿ ಮುದದಿ     ||೧೯೭||

ರಾಗ ಮಾರವಿ ಏಕತಾಳ
ಆಗ ಸುಧನ್ವನು ಬೇಗದಿ ರಣಕನು | ವಾಗುತ ಮುದದಿಂದ ||
ಬಾಗುತ ಜನನಿಗೊಂದಿಸುತಲೆ ವಿನಮಿತ | ನಾಗುತಲಿಂತೆಂದ   ||೧೯೮||

ಜವನಾತ್ಮಜನಧ್ವರ ಹಯಮಿಲ್ಲಿಗೆ | ಹವಣಿಸಿ ಬರೆ ಪಿತನು ||
ತವಕದಿ ಕಟ್ಟಿಸಿ ರಣಕಯ್ದಿದನಾ | ಹವಕೊದಗುವೆ ನಾನು          ||೧೯೯||

ತುರಗರಕ್ಷಾರ್ಥಕೆ ನರನಯ್ತಂದಿಹ | ಸುರರು ಮೆಚ್ಚುವ ತೆರದಿ ||
ಧುರದೊಳವನ ಮದ ಮುರಿವೆನು ಎನ್ನನು | ಪರಸಿ ಕಳುಹು ಮುದದಿ      ||೨೦೦||

ನೋಡು ಪರಾಕ್ರಮ ಕೂಡಿರುವಧಟರ | ಝಾಡಿಸುವಾಗಮವ ||
ನೀಡಪ್ಪಣೆಯನು ಗಾಢದಿ ನೀ ಕೃಪೆ | ಮಾಡುತಲೆನ್ನವ್ವ ||೨೦೧||

ಭಾಮಿನಿ
ಅಳುಕದಾಹವದೊಳಗೆ ನರನ |
ಗ್ಗಳಿಕೆಯನು ನಿಲಿಸುವೆನು ಸುಭಟರ |
ಕಲಕುವೆನು ಸಾಕೆನಿಸುವೆನು ಸಂಸಾರವಿಭ್ರಮವ ||
ಬಳಿಕವರ ಹರಿಬಕ್ಕೆ ಹುರುಡಿಸಿ |
ನಳಿನಲೋಚನ ಬಂದರೆಯು ಪದ |
ದೊಲವ ಪಡೆವೆನೆನಲ್ಕೆ ತಿಳಿದಿಂತೆಂದಳಾ ಜನನಿ                   ||೨೦೨||

ರಾಗ ಕೇದಾರಗೌಳ ಅಷ್ಟತಾಳ
ಲೇಸು ಮಗನೆ ಪಾಂಡುಸುತರ ರಕ್ಷಿಸುತಿಹ | ವಾಸುದೇವನು ದಯದಿ ||
ಮೈಸಿರಿಯನು ತೋರಲೀಕ್ಷಿಸಬಹುದೆಂಬ | ಆಸೆಯೆನ್ನಯ ಮನದಿ          ||೨೦೩||

ತಾಯೆಕೇಳ್ ಶ್ರೀಕೃಷ್ಣರಾಯನ ಬರಿಸಲು | ಪಾಯವುಂಟದ ಬಲ್ಲೆನು ||
ಬೀಯಗ ಪಾರ್ಥನ ನೋಯಿಸಲಾಕ್ಷಣ | ಆ ಯದುವರ ಬಹನು  ||೨೦೪||

ನರನ ನೋಯಿಸಲ್ಮುರಹರ ಬರುವನು ದಿಟ | ಬರುತ ಸಾರಥಿಯಾಹನು ||
ಧುರದಿ ಹಿಮ್ಮೆಟ್ಟಿ ನೀ ಹರಿಗೆ ವಿಮುಖನಾಗೆ | ಜರೆವರ್ ಬಂಧುಗಳೆನ್ನನು   ||೨೦೫||

ಅಚ್ಯುತನಿದಿರೊಳು ಆಶ್ಚರ್ಯವನು ತೋರು | ತೆಚ್ಚುತ ಕಣೆಗಳನು ||
ಚುಚ್ಚಿಸಿ ಪಾರ್ಥನ ಮುಚ್ಚುವೆ ರಣದಲ್ಲಿ | ಬೆಚ್ಚುವನಲ್ಲ ತಾನು      ||೨೦೬||

ಬಾಲಕ ಕೇಳು ಶ್ರೀಲೋಲನಿರಲು ರಣ | ಸೋಲು ಪಾಂಡವರಿಗುಂಟೆ ||
ಕಾಳಗದಲಿ ಹಿಂದೆ ಕಾಲಿಕ್ಕಿದರೆ ಮುಕ್ತಿ | ಯೋಲಗದಲ್ಲಿ ಉಂಟೆ   ||೨೦೭||

ಅಳುಕದೆ ಕೇಳ್ ಕೊಳುಗುಳದೊಳು ಪಾರ್ಥನ | ಗ್ಗಳಿಕೆಯ ನಿಲಿಸುವೆನು ||
ಅಳಿವು ಉಳಿವು ಪುಣ್ಯವಶವದು ಮೆಚ್ಚಿಪೆ | ನಳಿನದಳಾಕ್ಷನನ್ನು   ||೨೦೮||

ದಿಟ್ಟ ಕೃಷ್ಣಾರ್ಜುನರಿದಿರಾಗಿ ಮುಕ್ತಿಯ | ಬಟ್ಟೆಯ ಧಾತ್ರಿಯೊಳು ||
ಹೊಟ್ಟೆಯ ಮರುಕವಿನ್ನೇನೆಂಬೆ ಮಗನೆ ಹಿ | ಮ್ಮೆಟ್ಟದಿರ್ ಪೋಗೆಂದಳು   ||೨೦೯||

ಹಿಂದೆ ಹಿಮ್ಮೆಟ್ಟಲು ಕಂದನೆ ನಿನ್ನ ಗೋ | ವಿಂದನ ಕಿಂಕರನೆ ||
ಇಂದೆನಗಪ್ಪಣೆಯೆಂದೆನುತಲಿ ತಾಯಿ | ಗೊಂದಿಸಿ ಪೊರಟ ತಾನೆ          ||೨೧೦||

ರಾಗ ಸಾಂಗತ್ಯ ರೂಪಕತಾಳ
ಅವನೀಶ ಕೇಳು ಸುಧನ್ವನ ಸೋದರಿ | ಕುವಲೆಯೆಂಬವಳಾ ಸಮಯದಿ ||
ನವಗಂಧಾಕ್ಷತೆ ವೀಳ್ಯವನು ಕೊಂಡು ಬರುತಗ್ರ | ಭವನೊಳಿಂತೆಂದಳಾ ತರಳೆ     ||೨೧೧||

ಅಣ್ಣ ಕೇಳಚ್ಯುತಾರ್ಜುನರಿಗೆ ರಣದಿ ನೀ | ಬೆನ್ನ ತೋರುತ ಹಿಮ್ಮೆಟ್ಟಿದರೆ ||
ಎನ್ನಯ ಮಾವಮೈದುನನಾದಿನಿಯರ್ಮುಂದೆ | ಇನ್ನೆಂತು ತಲೆಯೆತ್ತಿ ನಡೆವೆ        ||೨೧೨||

ಅಳುಕದೆ ಪಾರ್ಥನ ಬಿಂಕವ ಬಿಡಿಸು ಮ | ತ್ತೊಲಿಸು ಕೃಷ್ಣನ ಚರಣಗಳ ||
ಗೆಲಿದು ಬಾರೆಂದು ಜನನಿ ಸೋದರಿಯರ್ ಸೇಸೆ | ತಳಿದು ಪರಸಿ ಕಳುಹಿದರು      ||೨೧೩||

ಪರಿವರ್ಧಿನೀ
ಜನನಿ ಸೋದರಿಯ ಬೀಳ್ಗೊಂಡು ಸುಧ |
ನ್ವನು ತನ್ನಯ ಮಂದಿರಕೈತರುತಿರ |
ಲನಿತರೊಳಾತನ ರಾಣಿ ಪ್ರಭಾವತಿ ಕನಕದ ಪಾತ್ರೆಯೊಳು ||
ಅನುಲೇಪನ ಕಸ್ತುರಿ ವೀಳ್ಯಂಗಳ |
ಮಿನುಗುವ ಸಂಪಿಗೆ ಪೂಗಳಿರಿಸಿ ಕೊಂ |
ಡಿನಿಯನಿಗಿದಿರಾಗುತ ಬಂದಳು ಕಾಮನ ಮದದಾನೆಯೊಲು     ||೨೧೪||

ರಾಗ ಬೇಗಡೆ ತ್ರಿವುಡೆತಾಳ
ಸತಿಶಿರೋಮಣಿ ಪ್ರಭಾವತಿ ಸೊಬಗಿನಲಿ | ರತಿಯ ಸೋಲಿಪ ರೂಪಿನತಿ ಸೊಬಗಿನಲಿ |
ರತುನಾಭರಣಗಳ ದ್ಯುತಿ ಬೆಳಗುತಲಿ | ಪ್ರತಿಮದ ಗಜದಂತೆ ಗತಿಯನಿಡುತಲಿ ||
ಚತುರತೆಯ ನಿರಿಯುಡುಗೆಗಳ ಶೋ | ಭಿತದ ಚೆಲ್ವಿನ ಅರ್ಧಚಂದ್ರಾ |
ಕೃತಿಯ ಫಣೆ ಕಸ್ತುರಿತಿಲಕ ಭ್ರೂ | ಲತೆಯ ಮಾನಿನಿ ಅತಿ ಹರುಷದಲಿ |
ಪತಿಗೆ ಇದಿರಾಗುತಲಿ ಬಂದಳು                   ||೨೧೫||

ಬೆಚ್ಚಿದ ಮೃಗದಂತೆ  ಬಲು ಚಪಳೆಗಳ | ವಚ್ಚೋರೆ ಕಣ್ಣಿನ ಓರೆ ನೋಟಗಳ |
ನಿಚ್ಚಳ ಕದಪು ಸುರದನ ಪಂಕ್ತಿಗಳ | ಪೊಚ್ಚ ಪವಳದಂತೆ ಪೊಳೆವಧರಗಳ ||
ಅಚ್ಚ ಪಂಜರದೋಲೆ ಮುತ್ತಿನ | ಕುಚ್ಚಿನಾ ಸರ ಮೌಕ್ತಿಕದ ಹೊಸ |
ಪಚ್ಚಗಪ್ಪಗಳೆಸೆವ ಚಂದ್ರಮ | ನಚ್ಚವಿಯ ಮುಗುಳ್ನಗೆಯ ಮಾನಿನಿ |
ಇಚ್ಛಿಸುತ ಪತಿಯೆಡೆಗೆ ಬಂದಳು || [ಪತಿಗೆ ಇದಿರಾಗುತಲಿ ಬಂದಳು]       ||೨೧೬||

ಮಲ್ಲಿಗೆ ಗಂಧಿ ಮೋಹನೆ ಕೀರವಾಣಿ | ಸಲ್ಲಲಿತಾಂಗಿ ಸರೀಸೃಪವೇಣಿ |
ಪಲ್ಲವಪಾಣಿ ಪದಕಗಳ ಕಟ್ಟಾಣಿ | ಎಲ್ಲಾಲಂಕೃತೆ ಕಂಬುಕಂಠಿ ಕಲ್ಯಾಣಿ ||
ಮೆಲ್ಲನಡಿಯಿಡುತುಲ್ಲಸದಿ ಬರ | ಲಲ್ಲಿ ನೂಪುರ ಗೆಜ್ಜೆ ಘಲ್ ಘಲ್ |
ಘಲ್ಲೆನಲು ನಿಜ ವಲ್ಲಭನ ಮನ | ತಲ್ಲಣಿಸಲು ತತ್ಫುಲ್ಲಲೋಚನೆ  |
ಒಳ್ಳೆ ರೂಪಿನೊಳಾಗ ಬಂದಳು || [ಪತಿಗೆ ಇದಿರಾಗುತಲಿ ಬಂದಳು]        ||೨೧೭||

ತೋರ ಕುಚಗಳ ಭಾರಕೆ ಬಳುಕುತಲಿ | ವೈ | ಯಾರದಿಂದವಳತಿ ನಡೆವ ಭಾರದಲಿ |
ವಾರಣಾಧಿಪನಂತೆ ವಲವ ಗತಿಯಲಿ | ಜಾರಿಹ ಮುಡಿಗೆ ಪೂಸರವ ಸೂಸುತಲಿ ||
ಸಾರಿ ಬರಲೀಕ್ಷಿಸುತ ಗಂಧಕ | ಸ್ತೂರಿ ಕರ್ದಮ ಪೂವುಗಳ ಕ |
ರ್ಪೂರ ವೀಳ್ಯವ ಕೊಂಡು ಹರುಷದಿ | ನಾರಿಯಳ ಕಾಣುತ್ತ ಮುದ್ದಿಸಿ |
ಧೀರನಹ ಸುಧನ್ವನೆಂದನು [ಕುರುಳ ತಿದ್ದುತಲೆಂದನು]            ||೨೧೮||

ರಾಗ ನೀಲಾಂಬರಿ ಏಕತಾಳ
ಆವಲ್ಲಿಗೆ ಪಯಣವಯ್ಯ | ಪ್ರಾಣಕಾಂತ || ರಾಜ |
ಠೀವಿಯಿಂದ ಪೊರಟೆಯೆಲ್ಲಿ | ಪ್ರಾಣಕಾಂತ                 ||೨೧೯||

ಸ್ಯಂದನವಡರಿಕೊಂಡು | ಪ್ರಾಣಕಾಂತ || ಬಲು
ಚಂದದಿಂದ ಪೋಪುದೆಲ್ಲಿ | ಪ್ರಾಣಕಾಂತ                   ||೨೨೦||

ಎಂದಿನಂದವಲ್ಲವಿಂದು | ಪ್ರಾಣಕಾಂತ || ಮನದಿ
ಸಂದೇಹಗೊಳ್ಳದೆ ನೀನು | ಪ್ರಾಣಕಾಂತ                   ||೨೨೧||

ನೂತನವಾಯ್ತದನು ಕಂಡು | ಪ್ರಾಣಕಾಂತ || ಸುಮ |
ಹಾತಿಶಯ ಗುಣವಂತ | ಪ್ರಾಣಕಾಂತ                      ||೨೨೨||

ಭಾವಭಕ್ತಿಯಿಂದಲಾನು | ಪ್ರಾಣಕಾಂತ || ಕೇಳ್ವೆ |
ನೀನೊಲಿದು ಪೇಳ್ವುದೆನಗೆ | ಪ್ರಾಣಕಾಂತ                 ||೨೨೩||

ರಾಗ ಕೇದಾರಗೌಳ ಝಂಪೆತಾಳ
ನಳಿನಾಕ್ಷಿ ಕೇಳೆ ಈಗ | ನರನೊಡನೆ | ಕಲಹಕಯ್ದುವೆನು ಬೇಗ ||
ಕಳವಳಿಸಬೇಡ ಮನದಿ | ಕುಂತಿಸುತ | ಗಳುಕುವವನಲ್ಲ ರಣದಿ ||೨೨೪||

ಕಾಂತ ಕೇಳೆನ್ನಸೊಲ್ಲ | ಪಾರ್ಥನನು | ಕಂತುಪಿತ ಬಿಡುವನಲ್ಲ ||
ಎಂತು ಗೆಲುವಹುದೊ ನಿನಗೆ | ಶ್ರೀಕೃಷ್ಣ | ಸಂತಸದಿ ಸಾಧ್ಯನವಗೆ          ||೨೨೫||

ನರನ ಹರಿಬಕೆ ಕೃಷ್ಣನು | ಬರಲವನ | ಧುರದಿ ನಾ ಮೆಚ್ಚಿಸುವೆನು ||
ಗರುವವನು ಮುರಿವೆ ದಿಟವು | ಸೋಲುಗೆಲ | ವಿರಲದುವೆ ವಿಧಿಯ ಪಟವು           ||೨೨೬||

ಹರಿಯ ಕರುಣದ ಕವಚವು | ಪಾಂಡವರ | ಹರಣಕೊಪ್ಪಿಹುದು ನಿಜವು ||
ಅರಸ ಕೇಳ್ ನರನ ಯುದ್ಧ | ಮುಕ್ತಿಪದ | ಕುರು ಮಾರ್ಗವು ಪ್ರಸಿದ್ಧ        ||೨೨೭||

ಸೆಣಸಿ ಕೃಷ್ಣಾರ್ಜುನರನು | ಸಾಹಸದಿ | ದಣಿಸಿ ಹಿಮ್ಮೆಟ್ಟಿಸುವೆನು ||
ವನಿತೆ ತನು ಸ್ಥಿರವಲ್ಲಿದು | ರವಿಶಶಿಯು | ಳ್ಳನಕ ಸತ್ಕೀರ್ತಿ ಬಹುದು       ||೨೨೮||

ಇದನೆಲ್ಲನರಿತೆ ನಿಜವು  | ಸುತಹೀನ | ಗುದಿಸುವುದೆ ಕೈವಲ್ಯವು ||
ಇದುವೆ ಋತುಸಮಯವೆನಗೆ | ಲಾಲಿಪುದು | ಹದಗಾಲ ಬೆಳೆಮಾಳ್ಕೆಗೆ   ||೨೨೯||

ಭದ್ರೆ ಹಿತವಲ್ಲ ಹಿಂದೆ | ಇಹುದು ಕೇ | ಳಾರ್ದ್ರಾ ಪ್ರವೇಶ ಮುಂದೆ ||
ಭದ್ರಿಸಲ್ಕುಚಿತವಾಗ | ಎನ್ನನುವು | ಪದ್ರಿಸಲು ಬೇಡವೀಗ          ||೨೩೦||

ಸಾಕು ಸಾಕಿನ್ನು ಇಂತು | ತುದಿಮಳೆ ವಿ | ಶಾಖೆಯೊದಗುತ್ತ ಬಂತು ||
ನೀ ಕೇಳು ನಿನ್ನ ಸ್ಥಳದಿ | ಬೀಜವನು | ಬೇಕಾಗಿ ಬಿತ್ತು ಮುದದಿ   ||೨೩೧||

ನಿನ್ನೊಡನೆ ದಿನ ಕಳೆಯಲು | ಪಿತನಾಜ್ಞೆ | ಯಿನ್ನು ತನಗಿಹುದು ಕೇಳು ||
ಮುನ್ನ ಪೊರಟಿಹನು ಜನಕ | ನಾ ಪೋಗ | ದನ್ನೆಗೊದಗದು ಸೈನಿಕ        ||೨೩೨||

ಬಿಡೆ ಬಿಡೆನು ಬಿಡೆನು ಈಗ | ಎನ್ನ ಕೂ | ಡೊಡಗೂಡು ಕೂಡು ಬೇಗ ||
ನಡೆಯೆಂದು ಬಿಗಿದಪ್ಪುತ | ಕಾಂತನನು | ಒಡಬಡಿಸಿದಳು ಒಪ್ಪುತ          ||೨೩೩||

ಭಾಮಿನಿ
ಪರಿಪರಿಯೊಳೊಡಬಡಿಸಲಾ ಸತಿ |
ಸ್ಮರನ ತಾಪದೊಳಾಳ್ದು ತನ್ನಯ |
ಗುರುಕುಚಗಳೆದೆಗೊತ್ತಿ ಬಾಹುಗಳಿಂದಲುರೆ ಬಿಗಿದು ||
ಸರಸದಲಿ ಚುಂಬನವ ಕೊಡುತಲಿ |
ಚರಣದಂದುಗೆ ಗೆಜ್ಜೆ ಘಲ್ಲೆನೆ |
ಭರದೊಳಂತಃಪುರವ ಪೊಗಿಸಿದಳಬಲೆ ಕಾಂತನನು                ||೨೩೪||

ವಾರ್ಧಕ
ಸತಿಗೆ ಷೋಡಶದ ಋತುಸಮಯಮೇಕಾದಶೀ |
ವ್ರತಮಲಂಘ್ಯ ಶ್ರಾದ್ಧಮಿನಿತೊಂದು ದಿನಮೆ ಸಂ |
ಗತಮಾದೊಡೆಂತು ಕರ್ತವ್ಯಮೆನೆ ಪೈತೃಕದ ಶೇಷಾನ್ನಮಾಘ್ರಾಣಿಸೆ ||
ಕೃತಭೋಜ್ಯಮಾದಪುದು ನಡುವಿರುಳ್ಗಳೆದಾ ವ |
ನಿತೆಯನೊಡಗೂಡಬಹುದದರಿಂದ ಧರ್ಮಪ |
ದ್ಧತಿಯನೀಕ್ಷಿಸಲಿವಳನಿಂದು ಮೀರುವುದು ಮತಮಲ್ಲೆಂದವಂ ತಿಳಿದನು   ||೨೩೫||

ರಾಗ ಸೌರಾಷ್ಟ್ರ ಏಕತಾಳ
ಜನಕನಾಜ್ಞೆಯ ಮೀರಿ | ವನಿತೆಗೆ ಋತುದಾನ |
ವನು ಕೊಟ್ಟುದರಿಂದ ಪಾತಕವು ||
ತನಗಿಲ್ಲವೆನುತಲಿ | ಮನದಿ ನಿಶ್ಚಯಗೊಳ್ಳು |
ತನುವದಿತ್ತೆಡೆಗವಳೊಡನೆ ||೨೩೬||

ಬಗೆ ಬಗೆ ಬಂಧದಿ | ಸೊಗಸನು ತೋರಿ ಚ |
ಳ್ಳುಗರಿಂ ಮೊಲೆಗಳ ಮರ್ದಿಸುತ ||
ಮೊಗವನು ಮುದ್ದಿಸಿ | ನಗುತ ಚೆಂದುಟಿ ಸವಿ |
ದಗಲದಾತನು ರಮಿಸಿದನು           ||೨೩೭||

ವಾರ್ಧಕ
ತವಕದಿಂ ತರಳೆಯಂ ತಕ್ಕಯಿಸಿಕೊಂಡು ಸತಿ |
ಯವಯವ ಸುವೃಕ್ಷಕಾಶ್ರಯಿಸಿ ಸುತ್ತಿಹ ದಿವ್ಯ |
ನವಮಲ್ಲಿಕಾಲತೆಯುಯೆಂಬಂತೆ ಸುತ್ತಿ ಬಿಗಿದಪ್ಪುತೆಳೆದೊಯ್ಯೆ ಗೃಹಕೆ ||
ಯುವತಿಯರ ಋತುಸಮಯ ಮೀರಲನುಚಿತಮೆಂದು |
ವಿವಿಧಪೌರಾಣೋಕ್ತಿಯಂ ಗ್ರಹಿಸಿ ನಿಶ್ಚಯಿಸಿ |
ನವಕಲಾಪ್ರೌಢಿಯಿಂದಾ ಸುಧನ್ವಂ ತನ್ನ ಕಾಂತೆಯಂ ರಮಿಸುತಿರ್ದಂ    ||೨೩೮||

ಕಾವನಾಗಮದಿ ಕುಂದಿಲ್ಲದಲೆ ಸರಸದಿ ಪ್ರ |
ಭಾವತಿಯನೊಡಗೂಡುತವಳಿಚ್ಛೆಯಂ ಸಲಿಸಿ |
ಕೋವಿದ ಸುಧನ್ವನಾಲಯವ ಪೊರಮಟ್ಟು ಕರಚರಣಾಬ್ಜಗಳನು ತೊಳೆದು ||
ಶ್ರೀವಧೂವರನ ಧ್ಯಾನಿಸಿ ಪೊರಡುತಿಹ ಸಮಯ |
ಕಾ ವಸುಮತೀಶ ಹಂಸಧ್ವಜಂ ಕಂಡು ಸೇ |
ನಾವ್ಯೂಹಮಧ್ಯದೊಳ್ ಸುತನ ಕಾಣದೆ ಕನಲ್ದಾಗಳಿಂತೆನುತಿರ್ದನು       ||೨೩೯||

ರಾಗ ಕೇದಾರಗೌಳ ಅಷ್ಟತಾಳ
ಹಿಂದುಳಿದನೆ ಹಿಡಿತರಿಸು ಸುತನ ಬೇಗ | ನೆಂದು ಕೋಪಿಸಿ ಭೂಪತಿ ||
ಅಂದತಿ ಕೆಡುಕನ ರಟ್ಟೆಯ ಕಟ್ಟಿ ತಾ | ರೆಂದೆನಲಾ ಸುಮತಿ      ||೨೪೦||

ಬಂದರು ಚರರು ಸುಧನ್ವನ ಪುಡುಕುತ್ತ | ಬಂಧಿಸಿ ಕರಗಳನು ||
ತಂದರೆಳೆವುತಲಿ ಜನರೆಲ್ಲ ಬೆರಗಾಗಿ | ನಿಂದು ನೋಡಿದರಿದನು ||೨೪೧||

ಯುದ್ಧದುತ್ಸಹ ಬಿಟ್ಟು ಯುವತಿಯ ಭೋಗಿಸು | ತಿದ್ದರೆಂತುಳಿವೆಯಿಂದು ||
ತಿದ್ದಿತು ತನುವಾಸೆಯೆನ್ನುತ ಚಾರರು | ಗದ್ದಲಿಸುತ ತಂದರು    ||೨೪೨||

ಕದ್ದ ಕಳ್ಳನ ಕಟ್ಟಿ ತರುವಂತೆ ತಂದರು | ಉದ್ಧತ ವೀರನನು ||
ಪೊದ್ದಿಸಲರಸನ ಪಾದಕಮಲದೊಳು | ಬಿದ್ದ ಸುಧನ್ವತಾನು       ||೨೪೩||

ಎಲವೊ ಬಾಹಿರ ರಣೋತ್ಸಹವನ್ನು ಬಿಟ್ಟು ಹಿಂ | ದುಳಿದೆ ನೀನೇಕೆನಲು ||
ಅಳುಕುತ್ತ ಲಜ್ಜೆಯಿಂದಯ್ಯಗೆ ನುಡಿದನು | ತಲೆಯ ಬಾಗಿಸುತಾಗಳು       ||೨೪೪||

ಲಲನೆ ಸಂತತಿಗಿಚ್ಛಿಸುತ ಋತುಸಮಯವೆಂ | ದೊಲಿಸಿ ತಡೆದಳೆನ್ನನು ||
ಸಲಿಸಿದೆನವಳ ಇಚ್ಛೆಯನಿಂದು ಅಪರಾಧ | ಗಳನು ಕ್ಷಮಿಸು ಎಂದನು     ||೨೪೫||

ಕೃತಕದ ನುಡಿಯಿದು ಕರೆಯಿರೆಮ್ಮಯ ಪುರೋ | ಹಿತ ಶಂಖಲಿಖಿತರನು ||
ಅತಿವೇಗದೊಳಗವರಯ್ತಂದು ನುಡಿದರು | ಕ್ಷಿತಿಪ ಕೇಳ್ ಧರ್ಮವನ್ನು     ||೨೪೬||

ನುಡಿಯೆರಡಾದರೆ ಪೊಡವಿ ಮೆಚ್ಚಳು ಸುರ | ಗಡಣ ನಿಂದಿಸುವುದಿನ್ನು ||
ನಡೆಯದು ನಿನ್ನ ಸಂಪತ್ತು ಕಾಲನ ಶಿಕ್ಷೆ | ಗೊಡೆಯನಾಗದಿರು ನೀನು      ||೨೪೭||

ಸುತನೆಂಬ ಮೋಹದಿ ಕ್ಷಮಿಸಲು ನಿನ್ನಯ | ಪೃಥಿವಿಯೊಳಾವಿರೆವು ||
ವಿತತ ಕಟ್ಟಾಜ್ಞೆಯ ಮೀರದಿರಿದುವೆ ಕೇಳ್ | ಹಿತ ಕೀರ್ತಿಯೆನಬಲ್ಲೆವು      ||೨೪೮||

ರಾಗ ಮಧುಮಾಧವಿ ತ್ರಿವುಡೆತಾಳ
ತಾತ ಲಾಲಿಪುದೆನ್ನ ಬಿನ್ನಪ | ಪ್ರೀತಿಯಿಂದಾ ತರುಣಿಯು ||
ಕಾತರಿಸಿ ನಡೆತಂದು ಸಂತತಿ | ಗಾತಿಶಯದ            ||೨೪೯||

ಋತುಸಮಯವಿಂದೆನಗೆ ತನ್ನಯ | ಜೊತೆಯೊಳಿರ್ದೂ ಮೋಹದಿ ||
ರತಿಸುಖವ ತೋರದಿರೆ ಮುಂದಿ | ನ್ನತುಳದಿನವು       ||೨೫೦||

ಎನುತ ತಡೆದುದರಿಂದ ನಿಂತೆನು | ಮನೆಯೊಳೀಗಾ ಕಾಂತೆಯ ||
ಮನದಭೀಷ್ಟವ ಸಲಿಸಿ ಬರುವುದ | ಕಿನಿತು ಕೇಳು        ||೨೫೧||

ಭಾಮಿನಿ
ಕಂದನಾಡಿದ ನುಡಿಯ ಕೇಳುತ |
ಲಂದು ಕ್ಷಿತಿಜ ಕನಲ್ದು ರೋಷದಿ |
ಮಂದಮತಿಯಿವನತ್ತ ನೂಕಿರೊ ಕೃಷ್ಣದರ್ಶನವ ||
ಹಿಂದುಳುಹಿ ತಾ ನಿರತ ಧರ್ಮವ |
ಪೊಂದುವನೆ ಗಡ ಕರೆ ಪುರೋಹಿತ |
ರಿಂದವರ ಬೆಸಗೊಂಬೆ ಪ್ರಾಯಶ್ಚಿತ್ತವೆನುತೆಂದ                      ||೨೫೨||

ಕಂದ
ಎನಲಾ ಚರರೈತಂದುಂ |
ಮನೆಯೊಳಗಿರ್ದ ಶಂಖಲಿಖಿತರೊಳಿದ ಪೇಳಲ್ ||
ಘನ ಹರುಷದೊಳವರಾಕ್ಷಣ |
ಜನಪನ ಬಳಿಗೈದುಸಿರಿದರತ್ಯುತ್ಸಹದೊಳ್   ||೨೫೩||

ರಾಗ ದೇಶಿ ಅಷ್ಟತಾಳ
ಕೇಳಯ್ಯ | ಭೂಪ | ಕೇಳಯ್ಯ     || ಪ ||

ಕೇಳಯ್ಯ ಭೂಪ ನಾವೆಂಬ ಮಾತ | ಆಲೋಚನೆಗಳಿನ್ನೇಕೆ ವಿಖ್ಯಾತ    || ಅ.ಪ ||

ಪುತ್ರನೆಂದೆಂಬಾಸೆಯಲ್ಲಿ ತೊಟ್ಟಿರುವ | ಕ್ಷತ್ರಿಕುಲದ ಭಾಷೆಯನಿಂದು ಮೆರೆವ ||
ಧಾತ್ರಿಯೊಳಗೆ ತಪ್ಪಿ ನಡೆದ ಪಾತಕಕೆ | ಪಾತ್ರನಾಗದಿರು ನೀ ಪೇಳ್ವೆವಾವಿದಕೆ      ||೨೫೪||

ಪಿಂತೆ ರುಕ್ಮಾಂಗದ ಹರಿಶ್ಚಂದ್ರಾದಿಗಳು | ಎಂಥೆಂಥ ಬವರದಿ ಸತ್ಯವಾದಿಗಳು ||
ಭ್ರಾಂತು ಬುದ್ಧಿಯ ತಾಳಿ ನೀತಿ ತಪ್ಪಿದರೆ | ಕಾಂತೆಯಾತ್ಮಜರೆಂದು ಮೊಗವ ನೋಡಿದರೆ    ||೨೫೫||

ಸಾವಿರವಾದರು ಮೊದಲಿನ ನುಡಿಗೆ | ನೀನದ ತಪ್ಪುವುದಾದರೆ ಕಡೆಗೆ |||
ನಾವಿರುವವರಲ್ಲ ನಿನ್ನ ರಾಜ್ಯದಲಿ | ಯಾವಲ್ಲಿಗಾದರು ಪೋಪೆವಿಂದಿನಲಿ  ||೨೫೬||

ರಾಗ ಶಂಕರಾಭರಣ ರೂಪಕತಾಳ
ವರ ಪುರೋಹಿತರಿಂತೆನ | ಲರಸನು ಸುಮತಿಗೆ ಪೇಳಿದ |
ಉರಿಯನು ಪ್ರಬಲಿಸುತೆಣ್ಣೆ ಕೊ | ಪ್ಪರಿಗೆಯೊಳೀತನನು            ||೨೫೭||

ಭರದಿಂ ಹಾಕಿಸು ಪೋಗೆನೆ | ಮರುಗುತ ಮನದಿ ಸುಧನ್ವನ |
ಕರವಿಡಿದೆಳೆದೆಳೆತಂದರು | ಚರರೊಡನಾ ಸ್ಥಳಕೆ        ||೨೫೮||

ಕೊರಡುಗಳನು ತೂರುತ ಬಲು | ಉರಿಯನು ಪ್ರಬಲಿಸುತಾ ಕ್ಷಣ |
ತರಹರಿಸದೆ ತಳಪಳನೆಂ | ದಿರದುಕ್ಕುತಲಿರಲು         ||೨೫೯||

ಭೀಕರ ತೈಲಕಟಾಹದಿ | ಹಾಕುವುದೆಂತೀ ಕುವರನ |
ಸಾಕಿದ ಭೂವರಗೇನವಿ | ವೇಕವು ಬಂತೀಗ   ||೨೬೦||

ಶಂಖಲಿಖಿತರೆಂದೆಂಬಾ | ಮಂಕುಗಳೇಕೀಯೂರಿಗೆ |
ಬಿಂಕದಿ ಬಂದೆಮ್ಮರಸಗೆ | ಸೋಂಕಿದರಕಟಕಟ          ||೨೬೧||

ಕೇಳದೆ ತೀರದು ಆಳ್ದನ | ಊಳಿಗ ಸುಡಿಸುವರೀತನ |
ಕಾಲಗೆ ಕೈ ಬರುವುದೆ ಪರ | ಸೇವೆಗಳತಿ ಕಷ್ಟ            ||೨೬೨||

ಕುಲ ರತ್ನವನುರಿಯೆಣ್ಣೆಯೊ | ಳಿಳುಹುವೆನೆಂತಕಟೆನ್ನುತ |
ಅಳಲುವ ಮಂತ್ರಿಗೆ ಪೇಳಿದ | ನಳುಕದಿರೆಲೊ ಸುಮತಿ            ||೨೬೩||

ಕೊಳುಗುಳದಲಿ ವೈರಿಗಳೆಂ | ದಳಿವೀತನು ಪಿತನಾಜ್ಞೆಗೆ |
ಪಳಿಯದೆ ತೆತ್ತರ ಮುಕ್ತಿಯು | ಸುಲಭದಿ ತನಗಹುದು ||೨೬೪||

ಬೆದರದೆ ಬಿಸುಡಿಸು ತಪ್ತತೈ | ಲದೊಳೆನ್ನನು ನೀನೆಂದಾ |
ಮಧುರಿಪು ಮುರಹರ ನರಹರಿ | ಪದವೇ ಗತಿಯೆಂದ   ||೨೬೫||

ಎತ್ತಿ ಬಿಸಾಡಲು ಕಾಣುತ | ಸುತ್ತಣ ಪುರಜನ ಪರಿಜನ |
ಮೊತ್ತವು ಹಾ ಹಾಯೆಂದೊದ | ರುತ್ತಲೆ ಬಾಯ್ಬಿಡುತ ||೨೬೬||

ಚಿತ್ತದಿ ಮರುಗುತ ಮಕ್ಕಳಾ | ಪೆತ್ತಬಲೆಯರಿದನೀಕ್ಷಿಸಿ |
ಕೃತ್ಯವಿದಲ್ಲವೆನುತಲೆ | ಗುತ್ತುತ ವನಿತೆಯರು            ||೨೬೭||

ಮಿಥ್ಯದಿಕಾರಣ ಮುಂದಿ | ನ್ನೆತ್ನಗಳಿಲ್ಲವೆನುತ್ತಲೆ |
ಮತ್ತಳುತಲೆ ತಾವ್ ತಮ್ಮೊಳು | ಬಿತ್ತರಿಸಿದರಾಗ        ||೨೬೮||