ರಾಗ ಸೌರಾಷ್ಟ್ರ ತ್ರಿವುಡೆತಾಳ
ಧರಣಿಸತಿ ಲಾಲಿಸು ಸುಧನ್ವನ | ಶಿರವಡಗಲಾನಂತರದಿ ಸಂ |
ಗರಕೆ ಸನ್ನಹವಾಗಿ ನಡೆದನು | ಸುರಥನಂದು ||೪೩೪||
ಇತ್ತ ಪಾಂಡವಸೇನೆಯೊಳು ಕನ | ಲುತ್ತಲೈತರುತಿಪ್ಪಸುರಥನ |
ಚಿತ್ತದಾಟೋಪವನು ನೆರೆ ಕಾ | ಣುತ್ತ ಹರಿಯು ||೪೩೫||
ಕ್ಷೋಣಿಯೊಳಗೀ ಭಟನ ಗೆಲುವರ | ಕಾಣೆ ಸಮರಂಗದೊಳು ಕಲಿಸು |
ತ್ರಾಣಿಯಹನೀ ವೀರರೊಡನಾ | ಹೂಣಿಸುತಲಿ ||೪೩೬||
ಸರಸಕೈದಿದೆವಾದರಿಂದಿಗೆ | ಪರಿಭವಂಗಳು ತಪ್ಪದೆಮಗೆಯು |
ಧುರದ ಮಧ್ಯದೊಳೆನುತ ನರಗೆ | ಚ್ಚರಿಸಿ ಬಳಿಕ ||೪೩೭||
ಸಾರಿ ನಿಜರಥವನ್ನು ಹಿಂದಣ | ಮೂರು ಯೋಜನದಲ್ಲಿ ನಿಲಿಸಿಯೆ |
ವೀರಪಟುಭಟರನ್ನು ಮುಂದಕೆ | ತೋರಿಸಿದನು ||೪೩೮||
ರಾಗ ಪಂತುವರಾಳಿ ಮಟ್ಟೆತಾಳ
ಬಂದು ನಿಂದ ರಣಕೆ ಭರದೊಳು | ಪ್ರದ್ಯುಮ್ನನಂದು || ಪ ||
ಒತ್ತಿ ಮಹಾಹವಕೆ ಮುಂ | ದೊತ್ತಿ ಬರುವ ವೀರ ಸುರಥ |
ನತ್ತಲಿತ್ತ ಸರಿಯೆ ನೋಡಿದ ||
ತೇರು ತೇಜಿ ಸೂತರನ್ನು | ಕತ್ತರಿಸುವ ತೆರದಿ ಬಾಣದ ||
ಮಳೆಯ ಕರೆದು | ಮತ್ತೆ ಕನಲಿ ಸುಭಟರಂಗದ |
ಕವಚವನ್ನು | ತೆತ್ತಿ ಜಜ್ಝರಿತ ಮಾಡಿದ ||೪೩೯||
ನೋಡಿ ನೃಪನ ಸೂನು ಮನದಿ | ರೋಷಗೊಂಡು ಬಿಲ್ಲಿಗಂಬ |
ಪೂಡಿ ಮಾರನೆಸೆದ ಶರವನು ||
ಎಲ್ಲ ನಿಮಿಷದಲ್ಲಿ ಪುಡಿಯ | ಮಾಡಿ ಮುಗುಳೆ ಬೇರೆ ಶರವನು |
ಎಸೆಯನವನು | ಖೋಡಿ ತಾಳ್ದು ಕೆಲಕೆ ಕೆರಳ್ದನು |
ಅರುಹಲೇನು | ಗಾಢದಿಂದ ಬಲವ ತರಿದನು ||೪೪೦||
ವಾರ್ಧಕ
ತಕವದಿಂ ಪ್ರದ್ಯುಮ್ನನಂ ಗೆಲ್ದು ಸಾತ್ಯಕಿಯ |
ನವಘಡಿಸಿ ಕೃತವರ್ಮ ಸಾಂಬಾನುಸಾಲ್ವರಂ |
ಜವಗೆಡಿಸಿ ಕಲಿಯೌವನಾಶ್ವನಂ ನಡೆದು ನೀಲಧ್ವಜನನುರೆ ಘಾತಿಸಿ ||
ರವಿಸುತನ ಸೂನುವಂ ಪರಿಭವಿಸಿ ನಿಖಿಳ ಯಾ |
ದವಸುಭಟರಂ ಜಯಿಸಿ ಚತುರಂಗಪುಂಗಮಂ |
ಸವರಿ ಸಮರಥ ಮಹಾರಥರನೊಂದೇ ರಥದೊಳಾ ಸುರಥನೊಡದುಳಿದನು ||೪೪೧||
ರಾಗ ಬಿಲಹರಿ ಏಕತಾಳ
ಏನು ಚಂದವೋ | ವೀರರು ಸು | ಯ್ದಾನಂದವೊ || ಪ ||
ಸೊಕ್ಕಾನೆಯು ಕಾಸಾರವನು | ಪೊಕ್ಕು ಕಲಕುವ ತೆರದಲ್ಲಿ |
ಇಕ್ಕೆಲದಿಂ ಹಾಯ್ದು ಸೇನೆ | ಚೊಕ್ಕಟಿಕ್ಕುತ ಭರದಲ್ಲಿ |
ಕಕ್ಕಸದ ವೀರರ ಬೊಬ್ಬೆ | ಯಿಕ್ಕೆ ಸಾರ್ದ ಧುರದಲ್ಲಿ |
ರಕ್ಕಸಾರಿ ಪಾರ್ಥರನ್ನು | ತಿಕ್ಕುತ ಸುರಥನು ಭರದಿ ||೪೪೨||
ಬಂದ ಸುರಥನ ವಿಕ್ರಮದಾ | ನಂದವನ್ನು ಕಾಣುತ್ತ |
ಕಂದುಗೊರಳನೊಲು ಕುಂತೀ | ನಂದನನು ಕೋಪಿಸುತ್ತ |
ಇಂದಿರೇಶನೊಡನೆಯಿವನ | ನಿಂದು ಜಯಿಸುವೆನೆನ್ನುತ್ತ |
ಮುಂದುವರಿದು ರಥವ ನಡೆಸು | ಎಂದು ಬಿಲ್ ಝೇಂಕರಿಸುತಾಗ ||೪೪೩||
ರಾಗ ಶಂಕರಾಭರಣ ಮಟ್ಟೆತಾಳ
ಎಲವೊ ಸೋದರನು ನಮ್ಮೊಳ್ | ಮಲೆತು ಮಡಿದು ಪೋದನಿನ್ನು |
ಕಲಹದೊಳಗೆ ನಿನ್ನ ನಾವು | ಗೆಲುವುದನುಚಿತ ||
ಕಲಹದಲ್ಲಿ ನಿನ್ನ ನಾವು | ಗೆಲುವದುಚಿತವಲ್ಲವೆಂದು |
ತೊಲಗಿ ನಿಂತರೀಗ ಬಂದು | ತಲೆಯ ಕೊಡುವೆಯಾ ||೪೪೪||
ಬಿಡು ಬಿಡೆಲವೊ ಪಾರ್ಥ ನಿನ್ನ | ಕಡುಹ ಬಲ್ಲೆನಗ್ರಜಂಗೆ |
ಬಿಡೌಜ ಮುಖ್ಯ ದಿವಿಜರಿದಿರೆ | ಫಡ ರಣಾಗ್ರದಿ ||
ಬಿಡೌಜಮುಖ್ಯ ದಿವಿಜರಿದಿರೆ | ಫಡರಣಾಗ್ರದಲ್ಲಿ ಹರಿಯು |
ತಡೆಯದಿತ್ತ ಪುಣ್ಯದಿಂದ | ಮಡಿದನಿಂದಿಗೆ ||೪೪೫||
ಅಳಿದನಗ್ರಜಾತನೊಡನೆ | ಕಳುಹಿಸುವೆನು ನಿನ್ನ ನೋ |
ಡಳುಕಬೇಡ ನಿಲ್ಲು ನಿಲ್ಲು | ಕೊಳುಗುಳಕ್ಕೆಲೋ ||
ಅಳುಕಬೇಡ ನಿಲ್ಲು ನಿಲ್ಲು | ಕೊಳುಗುಳಕ್ಕೆಂದು ಸುರಥ |
ಪೊಳೆವ ಸ್ವರ್ಣಪುಂಖದಸ್ತ್ರ | ಗಳನು ಕರೆದನು ||೪೪೬||
ಸುರಿದ ಬಾಣವನ್ನು ಕಡಿದು | ನರನು ರೋಷವೇರ್ದು ಕನಲು |
ತುರಿಯ ವಿಶಿಖಗಳನು ಬಿಟ್ಟ | ನುರು ಪ್ರತಾಪದಿ ||
ಉರಿಯ ವಿಶಿಖಗಳನು ಬಿಟ್ಟ | ರಿರದೆ ತೇರು ಧ್ವಜಪತಾಕೆ |
ತುರಗ ಸಹಿತ ಮಡಿಯೆ ಸುರಥ | ವಿರಥನಾದನು ||೪೪೭||
ಪೊಸ ಮಹಾವರೂಥವೇರು | ತಸಮ ವೀರ ಸುರಥ ಕನಲ್ದು |
ಎಸೆದ ಬಾಣದಿಂದ ಪಾರ್ಥ | ನಸುವ ಕಂಪಿಸಿ ||
ಎಸೆದ ಬಾಣದಿಂದ ಪಾರ್ಥ | ನಸುವ ಕಂಪಿಸಲ್ಕೆ ಕಂಡು |
ಕುಸುಮನಾಭನಾಗ ಸಂತ | ವಿಸುತ ನುಡಿದನು ||೪೪೮||
ಇವನ ತೋಳ್ಗಳನ್ನು ಬಿಡದೆ | ಸವರಲೀಗ ದಿವ್ಯ ಮಹಾ |
ಸ್ತ್ರವನು ಪೂಡೆನುತ್ತ ತಾನು | ಜವದಿ ಶಂಖವಾ ||
ಸ್ತ್ರವನು ಪೂಡೆನುತ್ತ ತಾನು | ಜವದಿ ಶಂಖನಾದ ಗೆಯ್ಯೆ |
ಕವಲು ಶರಗಳೆಚ್ಚು ತೋಳ್ಗ | ಳವನಿಗಿಳುಹಿದ ||೪೪೯||
ತೋಳ್ಗಳುಡಿಯೆ ಕಂಡು ಕ | ಟ್ಟಾಳ್ಗಳೊಡೆಯ ಸುರಥ ಶೌರ್ಯ |
ದೇಳ್ಗೆಯಿಂದ ತೊಡೆಯೊಳಾರ್ದು | ಗೋಳ್ಗುಡಿಸುತಲೆ ||
ಏಳ್ಗೆಯಿಂದ ತೊಡೆಯೊಳಾರ್ದು | ಗೋಳ್ಗುಡಿಸುತಲಿರಲು ಪಾರ್ಥ |
ಸೀಳ್ಗೋಲಿಂದಲೆಚ್ಚುತವನ | ಬಾಳ್ಗೆಡಿಸಿದನು ||೪೫೦||
ವಾರ್ಧಕ
ಆಗ ಮುರಹರನಾಜ್ಞೆಯಿಂದೆಚ್ಚು ಫಲುಗುಣಂ |
ಬೇಗ ಸುರಥನ ಶಿರವನರಿಯಲಾ ತಲೆ ಬಂದು |
ತಾಗುತಲಿ ಭರದೊಳಾ ಫಲುಗುಣನ ವಕ್ಷಮಂ ಕೆಡಹಿತಾಸ್ಯಂದನದಲಿ ||
ನೀಗಿದಂ ಮರವೆಯೆಂದರಿದಾ ಧನಂಜಯಂ |
ಬೇಗ ಕೃಷ್ಣನ ಚರಣಕೈತಂದು ಬಿದ್ದು ಹರಿ |
ರಾಘವ ಜನಾರ್ದನ ಮುಕುಂದ ಎನುತಿರ್ದುದಾ ಶಿರಮುರೆ ವಿಕಾಸದಿಂದ ||೪೫೧||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರಸ ಕೇಳ್ ಫಲುಗುಣನ ಬಾಣದೊ | ಳರಿದು ನೃಪಜನ ತಲೆಯು ಬಂದಾ |
ಹರಿಯ ಪದದೊಳು ಬೀಳೆ ಕಾಣುತ | ಕರದೊಳೆತ್ತಿ ||೪೫೨||
ತೋಷದಿಂದೀಕ್ಷಿಸುತ ಬಳಿಕಾ | ಕಾಶದೊಳಗಿಹ ಗರುಡನಂ ಕರೆ |
ದೀ ಶಿರಕೆ ಬೇಗ ಪ್ರಯಾಗ ಪ್ರ | ವೇಶಿಸುತಲಿ ||೪೫೩||
ಬಾರೆನಲು ಕೇಳ್ದಾ ಸುಪರ್ಣನು | ವೀರ ಸುರಥನ ತಲೆಯ ಕೈಗೊಂ |
ಡೇರಲಂಬರಕಾಗಲಿತ್ತಲು | ದಾರ ಶಿವನು ||೪೫೪||
ಕಂಡು ಈ ತಲೆಯನ್ನು ತನ್ನಯ | ರುಂಡಮಾಲೆಗೆ ಬೇಕು ತವಕದಿ |
ಕೊಂಡು ಬಾರೆನೆ ಕೇಳ್ದು ಪೊರಟ ಪ್ರ | ಚಂಡ ಭೃಂಗಿ ||೪೫೫||
ಬಂದು ಗರುಡನ ಕೂಡೆ ಶಿರವನು | ನಿಂದು ಕೇಳಲಿಕವನ ಪಕ್ಕಗ |
ಳಿಂದ ಬೀಸುವ ಗಾಳಿಯಲಿ ಬಲು | ನೊಂದನಿವನು ||೪೫೬||
ವಾರ್ಧಕ
ಗರುಡನ ಗರಿಯ ಗಾಳಿಯೊಳ್ ಸಿಕ್ಕಿ ಬೆಂಡಾಗಿ |
ತಿರುಗಿ ಬಂದಭವಂಗೆ ಭೃಂಗಿಯುಂ ಬಿನ್ನಯಿಸು |
ತಿರೆ ಕೇಳ್ದು ಗಿರಿಜೆ ನಸುನಗುತ ಹರಿವಾಹನದ ಬಲ್ಮೆಯಂ ನೆರೆ ಪೊಗಳ್ದು |
ಪಿರಿದಾತನಂ ಜರೆಯೆ ತಲೆವಾಗಿ ಲಜ್ಜಿಸಲ್ |
ಪುರಹರಂ ಕೃಪೆಯೊಳವನಂ ಮತ್ತೆ ಸಂತಯಿಸಿ |
ಕರೆದು ವೃಷರಾಜಂಗೆ ಬೆಸಸೆ ಬೆಂಬತ್ತಿದಂ ಪಕ್ಷೀಂದ್ರನಂ ಮುದದೊಳು ||೪೫೭||
ರಾಗ ಭೈರವಿ ಅಷ್ಟತಾಳ
ಗರಡ ನೀ ಪೋಗದಿರೊ | ನಿಲ್ಲೆಲೊ ನಾನು | ಬರುವೆ ಮುಂದರಿಯದಿರೊ ||
ಸುರಥನ ತಲೆಯ ನಮ್ಮಾಳ್ದನ ಚರಣಕ್ಕೆ | ತರುವುದೆಂದಟ್ಟಿದನು ||೪೫೮||
ಆಗಲೇನೆಲವೊ ನಂದಿ | ನಮ್ಮರಸ ಪ್ರ | ಯಾಗದೊಳಿದನು ಪೊಂದಿ ||
ಸೀಗ ಬಾರೆಂದು ನೇಮಿಸಿದರಿಂದಲೆ ಕೊಂಡು | ನಾ ಗಮಿಸುವೆನೀ ಕ್ಷಣ ||೪೫೯||
ವಿಹಗೇಂದ್ರ ಕೇಳೆನಗೆ | ಈಯದೆ ಪೋದ | ರಹುದುಪತಿ ನಿನಗೆ ||
ಸಹಸ ತೋರದಿರ್ ಬಿಡು ನಿಲ್ಲು ನಿಷ್ಕಾರಣ | ಬಹುದೆನ್ನ ವಿಕ್ರಮವ ||೪೬೦||
ವೃಷಭೇಶ ಕೇಳು ನೀನು | ಈಯಲಿಕೆನ್ನ | ವಶವಲ್ಲ ಎಂದು ನಾನು ||
ಎಸೆವ ಪ್ರಯಾಗದೊಳ್ ಹಾಕುವೆನಲ್ಲಿಂದ | ಲೆಸೆದೆತ್ತಿಕೊಂಡು ಪೋಗು ||೪೬೧||
ಎನುತ ಮಾರುತ ವೇಗದಿ | ಪೋಗುವ ಗರು | ಡನ ಕಂಡನತಿ ವೇಗದಿ ||
ಕನಲುತ್ತ ಬೆನ್ನಟ್ಟಿದನು ವೃಷಭನು ಹುತಾ | ಶನನಂತೆ ಗರ್ಜಿಸುತ ||೪೬೨||
ಭಾಮಿನಿ
ತ್ರಿಭುವನವನಲ್ಲಾಡಿಸುವ ಮಹ |
ರಭಸದಿಂದೈದುವ ಸುಪರ್ಣ ವೃ |
ಷಭರ ಮುಖ ದುಃಶ್ವಾಸ ಮಾರುತನಿಂದಲಳವಳಿದು ||
ನಭದೊಳಾಯಸಪಟ್ಟು ಮಿಸುದು |
ರ್ಲಭವೆನಿಸುತಿರ್ಪ ಪ್ರಯಾಗದೊ |
ಳಭವವಾಹನಗೀಯದಾ ತಲೆ ಬಿಸುಟನಾ ಗರುಡ ||೪೬೩||
ಕಂದ
ಆ ಗರುಡಾ ಶಿರಮಂ ಬಿಸು |
ಟಾ ಗಗನದೊಳಾರ್ಭಟಿಸುತ ಕೃಷ್ಣನ ಬಳಿಗಂ ||
ಪೋಗಲ್ಕಿತ್ತಲು ವೃಷಭಂ |
ಬೇಗದೊಳದನೆತ್ತಿಕೊಂಡೊಡೆಯಂಗಿತ್ತಂ ||೪೬೪||
ರಾಗ ಕೇದಾರಗೌಳ ಅಷ್ಟತಾಳ
ವೃಷಭ ತಂದಿರ್ದ ಕರೋಠವ ಶಿವ ತಾನು | ಕುಶಲದಿ ಕೊರಳೊಳಗೆ ||
ಪಸರಿಪ ಮಾಲೆಯೊಳಾಂತಾ ಸುಧನ್ವನ | ಎಸೆದಿರ್ಪ ಶಿರದೊಡನೆ ||೪೬೫||
ಇತ್ತಲರ್ಜುನ ಕೃಷ್ಣರಿಂದಲಿ ಸುರಥ ತಾ | ಸತ್ತನು ರಣದೊಳೆಂಬ ||
ವೃತ್ತಾಂತವನು ಕೇಳ್ದು ಹಂಸಕೇತನು ತನ್ನ | ಚಿತ್ತದಿ ಮರುಗತಲೆ ||೪೬೬||
ಸಲೆ ಮರಣವನು ನಿಶ್ಚಯಿಸಿ ಸಂತಾಪದಿ | ಕಲಹಕೆಂದಿದಿರಾಗುತ್ತ ||
ಜಲಜನಾಭನ ಮೆಚ್ಚಿಸುತ ಗತಿಗಡರುವೆ | ಸುಲಭದೊಳೆಂದೆನುತ ||೪೬೭||
ರಥವೇರಿ ಬಾಗೊತ್ತಿ ಧನುವನ್ನು ಝೇಗೈದು | ನ್ಮತನಾಗಿ ಕಾಳಗಕೆ ||
ಪೃಥಿವಿಪನೈತರುತಿಹ ಸಂಭ್ರಮವ ದೈತ್ಯ | ಮಥನನೀಕ್ಷಿಸುತಲಾಗ ||೪೬೮||
ವಾರ್ಧಕ
ಮುಳಿದು ಹಂಸಧ್ವಜಂ ಕಾಳಗಕೆ ನಿಲಲಾಗ |
ನಳಿನಭವನಳುಕಿದಂ ಲೋಕ ಸೃಷ್ಟಿಗೆ ಮತ್ತೆ |
ಬಳಲಬೇಕೆಂದು ರವಿಮಂಡಲಂ ನಡುಗಿತೊಡನಯ್ತಪ್ಪ ಕಲಿ ರಭಸಕೆ ||
ಪ್ರಳಯಮಿಂದಹುದೆಂದು ಕಂಪಿಸಿತು ಧರೆ ಸ್ವರ್ಗ |
ದೊಳಗೊಳಗೆ ತೆರಪಿಲ್ಲಮೆಂದು ಗಜಬಜಿಸಿ ಸುರ |
ಕುಲವಯ್ದೆ ಕಂಗೆಟ್ಟುದಸುರಾರಿ ಚಿಂತಿಸಿದನರಸ ಕೇಳ್ ಕೌತುಕವನು ||೪೬೯||
ರಾಗ ಶಂಕರಾಭರಣ ತ್ರಿವುಡೆತಾಳ
ರಣದಿ ಹಂಸಧ್ವಜನು ಮುಳಿದರೆ | ಸೆಣಸಲಾಪವರಿಲ್ಲ ಕೇಳ್ ಫಲು |
ಗುಣನೆ ಸೈರಿಸು ಸೈರಿಸೆನುತಾ | ಕ್ಷಣದಿ ಹರಿಯು ||೬೭೦||
ಕುದುರೆಗಳ ವಾಘೆಯನು ಬಿಸುಡುತ | ಮುದದಿ ಪೀತಾಂಬರವ ಮೇಲ್ ನೆರಿ |
ವಿಡಿದೊರೂಥವನಿಳಿದು ನಡೆದತಿ | ವದಗಿನಿಂದ ||೬೭೧||
ಬರುವ ಮುಕ್ತೀಶನನು ಕಾಣುತ | ಅರಸ ನಿಜರಥವಿಳಿದು ತವಕದಿ |
ಹರಿ ಮುರಾರಿ ಮುಕುಂದಯೆನುತಲಿ | ಸ್ಮರಿಸುತಾಗ ||೪೭೨||
ನಂದನರ ಮರಣವನು ಮರೆದಾ | ನಂದವನು ತಾಳ್ದಾಗ ಹರಿಯೊಡ |
ನೆಂದನೆಲೆ ಪಂಕೇಜಭವನಿಗೆ | ತಂದೆಯಾಗಿ ||೪೭೩||
ನೀನು ನಡೆಸಿದ ಕೃತ್ಯ ಸಂಗತಿ | ಗಾನು ಮನದಲೆ ತಳೆದೆ ತೋಷವ |
ಶ್ರೀನಿವಾಸನೆ ಭಕ್ತರನು ಬಲು | ಮಾನದಿಂದ ||೪೭೪||
ಪಾಲಿಸುವ ಬಿರುದುಗಳನರಿತೆನು | ಶ್ರೀಲಲಾಮನೆ ನಿನ್ನ ಚರಣಕೆ |
ಕಾಳಗದಿ ತನ್ನಸುವನೀವೆನು | ಕೇಳೆನಲ್ಕೆ ||೪೭೫||
ಭಾಮಿನಿ
ಭೂಮಿಪಾಲನ ನುಡಿಯ ಕೇಳ್ದು ರ |
ಮಾಮನೋಹರ ನಗುತಲಾ ಸಂ |
ಗ್ರಾಮದೊಳು ಪಾರ್ಥನಿಗೆ ಮಾಳ್ಪ ಸಹಾಯವನು ತಿಳಿದು ||
ನೀ ಮರುಳುತನಗೊಂಡು ಮಕ್ಕಳ |
ತಾಮಸದಿ ಕೊಲ್ಲಿಸಿದೆ ಸಾಕಿ |
ನ್ನಾಮಹಾತ್ಮನ ಕಂಡು ಮಿತ್ರತ್ವವನು ಪಡೆಯೆಂದ ||೪೭೬||
ರಾಗ ಆರ್ಯಾ ಸವಾಯ್
ಈ ತೆರದಿಂ ಸ್ಮರತಾತನು ಪೇಳ್ದಾ |
ಮಾತಿಗೆ ಹಂಸಧ್ವಜನಾಗಳ್ ||
ತಾ ತಳುವದೆ ಮಹಾತಿಶಯದ ಸಂ |
ಪ್ರೀತಿಯೊಳಿಂತೆಂದನು ಭರದೊಳ್ ||೪೭೭||
ರಾಗ ಸೌರಾಷ್ಟ್ರ ಅಷ್ಟತಾಳ
ಲಾಲಿಸು ಬಿನ್ನಹವನ್ನು ಕಾರುಣ್ಯದಿ | ಮಾರತಾತ | ದಯ |
ಲಾಲಿಸಿ ಬಂದರಿಂ ಕೃತಕೃತ್ಯನಾದೆನು | ಮಾರತಾತ ||೪೭೮||
ಕ್ಷತ್ರಿಯೆಂಬಿರುದಿನೊಳ್ ಹಯವ ಕಟ್ಟಿದ ಮೇಲೆ | ಮಾರತಾತ | ಈಗ |
ಧಾತ್ರಿಯೊಳ್ ಗೆದ್ದಡೇನಳಿದಡೇನದರಿಂದ | ಮಾರತಾತ ||೪೭೯||
ಕೇಡಾವುದಾತಂಗೆ ಸಾಕದಂತಿರಲದು | ಮಾರತಾತ | ನಿನ್ನ |
ನೋಡಲಿನ್ನಿರ್ಪುದೆ ಪುತ್ರ ಶೋಕದ ಕ್ಲೇಶ | ಮಾರತಾತ ||೪೮೦||
ಜಾಹ್ನವಿಯೊಳಗಾಳ್ದನಿಂಗೆ ದಾಹಗಳುಂಟೆ | ಮಾರತಾತ | ಪೇ |
ಳೆನ್ನೊಳು ಕೃಪೆಯಿಂದ ಕರುಣಾವಾರಿಧಿ ನೀನು | ಮಾರತಾತ ||೪೮೧||
ವಾರ್ಧಕ
ಆದಡೆಲೆ ನೃಪ ಸೌಖ್ಯದಿಂದೆಮ್ಮನೀಗ ನೀ |
ನಾದರಿಸಿ ಪಾರ್ಥನಂ ಕಂಡು ಧರ್ಮಜನ ಹಯ |
ಮೇಧಕೆ ಸಹಾಯಮಾಗಿಹುದೆಂದು ಕೃಷ್ಣನವನಂ ತೆಗೆದು ತಕ್ಕಯಿಸಲು ||
ಕಾದಿ ಮಡಿದಾತ್ಮಜರ ಶೋಕಮಂ ಮರೆದು ಮಧು |
ಸೂದನಂಗೆರಗಿದಡೆ ಸಂತೈಸಿ ಮಗುಳಪ್ಪಿ |
ಯಾ ದಯಾಂಬುಧಿ ವಿಜಯನಂ ಕರೆದು ಮೈತ್ರಿಯಿಂದಾತನಂ ಕೂಡಿಸಿದನು ||೪೮೨||
ರಾಗ ಪಂತುವರಾಳಿ ರೂಪಕತಾಳ
ಧರಣಿಪ ಕೇಳ್ ಬಳಿಕುಳಿದ ಸೇನೆಯು ಸಹೋ |
ದರ ಬಂಧು ಸುತ ಮಂತ್ರಿನಿವಹ ||
ಗುರು ಪುರೋಹಿತ ಚಮೂಪರನೆಲ್ಲ ಕರೆಸಿಯೆ |
ಹರಿ ಪಾರ್ಥರಿಗೆ ಕಾಣಿಸಿದನು ||೪೮೩||
ನಗರದಿಂ ತರಿಸಿ ಭಂಡಾರದರ್ಥಂಗಳ |
ಬಗೆ ಬಗೆ ವಸ್ತು ಧಾನ್ಯಗಳ ||
ಸೊಗಸಿನ ಯುವತಿಯರಿಭಹಯರಥ ಸಹಿ |
ತಗಣಿತವನು ಕೊಟ್ಟನಂದು ||೪೮೪||
ನುಡಿವುದಿನ್ನೇನು ನಾ ಸಪ್ತಮಾಕೃತಿಗಳ |
ತಡೆಯದೆಲ್ಲವನವರ್ಗಿತ್ತು ||
ಕಡೆಗಯ್ದು ದಿನವಿದ್ದು ಮುಂದಕೆ ತೆರಳಲು |
ಪಡೆಸಹಿತನುವಾದರೊಲಿದು ||೪೮೫||
ಹಂಸಕೇತನ ಕೂಡಿ ಕೊಟ್ಟು ಪಾರ್ಥಗೆ ಸೇನೆ |
ಯಂ ಸಹಿತಲೆ ಮುಂದಕಾಗ ||
ಲುಂ ಸನ್ನಾಹದಿ ಕಳುಹಿಸಿ ವಸ್ತುಗಳ ಕೊಂಡು |
ಕಂಸಾರಿ ಹಸ್ತಿನಾವತಿಗೆ ||೪೮೬||
ಬಂದು ಸಂಭ್ರಮದೊಳಾ ಚಿಂತೆಯೊಳಿಹ ಧರ್ಮ |
ನಂದನನಿಗೆ ಸಂತೈಸುತಲಿ ||
ಚಂದದೊಳ್ ಧುರದ ವಾರ್ತೆಗಳೆಲ್ಲ ಬಿಡದೆ ತಾ |
ನೊಂದುಳಿಯದೆ ವಿಸ್ತರಿಸಿದ ||೪೮೭||
ವಾರ್ಧಕ
ವಿಸ್ತರಿಪೆನಿನ್ನು ಮೇಲ್ ಕಥೆಯನಾಲಿಸು ನೃಪರ |
ಮಸ್ತಕದ ಮಣಿಯೆ ಜನಮೇಜಯ ಧರಾನಾಥ |
ಹಸ್ತಿನಾವತಿಗೆ ಬಂದಸುರಾರಿ ಹಂಸಧ್ವಜನ ದೇಶದಿಂದ ತಂದ ||
ವಸ್ತುಗಳನವನಿಪತಿಗೊಪ್ಪಿಸಿದನಲ್ಲಿಯ ಸ |
ಮಸ್ತ ವೃತ್ತಾಂತಮಂ ವಿವರಿಸಿರಲಿತ್ತ ಸುಭ |
ಟಸ್ತೋಮ ಸಹಿತರ್ಜುನಂ ತಿರುಗಿದಂ ಬಡಗ ಮುಖಮಾಗಿ ತುರಗದೊಡನೆ ||೪೮೮||
ಮಂಗಳ
ರಾಗ ಕಾಂಭೋಜಿ ಝಂಪೆತಾಳ
ಜಯ ಮಂಗಳಂ | ನಿತ್ಯ | ಶುಭ ಮಂಗಳಂ || ಪ ||
ನೀಲಮೇಘಾಂಗನಿಗೆ ನಿಜಶರಣಸಾಂಗನಿಗೆ |
ಕಾಲಭಯಶಿಕ್ಷನಿಗೆ ಕಮಲಾಕ್ಷಗೆ ||
ಬಾಲಾರ್ಕಚಂದ್ರನಿಭ ಬಲುಕೋಟಿ ತೇಜನಿಗೆ |
ಮೂಲೋಕದೊಡೆಯನಿಗೆ ಮುರವೈರಿಗೆ ||
ಜಯ ಮಂಗಳಂ | ನಿತ್ಯ | ಶುಭ ಮಂಗಳಂ ||೪೮೯||
ಕಾಮಪಿತನಾದವಗೆ ಕಡುಚೆಲುವ ಮಾಧವಗೆ |
ಸಾಮಗಾನವಿಲೋಲ ಸರ್ವೇಶಗೆ ||
ವಾಮದೇವನ ಮಿತ್ರ ವಸುದೇವಪುತ್ರನಿಗೆ |
ಶ್ರೀಮಹಾಗೋವಿಂದ ಗೋಪಾಲಗೆ ||
ಜಯ ಮಂಗಳಂ | ನಿತ್ಯ | ಶುಭ ಮಂಗಳಂ ||೪೯೦||
ವರಹಾವತಾರನಿಗೆ ದುರಿತಸಂಹಾರನಿಗೆ |
ಪರಮಪಾವನಗೆ ಪಾತಕನಾಶಗೆ ||
ಧರೆಯೊಳತ್ಯಧಿಕವೆನಿಸುವ ಕಣ್ವಪುರದೊಳಗೆ |
ಸ್ಥಿರವಾಗಿ ನೆಲಸಿರುವ ಶ್ರೀಕೃಷ್ಣಗೆ ||
ಜಯ ಮಂಗಳಂ | ನಿತ್ಯ | ಶುಭ ಮಂಗಲಂ ||೪೯೧||
ಯಕ್ಷಗಾನ ಸುಧನ್ವಸುರಥರ ಕಾಳಗ ಮುಗಿದುದು
|| ಶ್ರೀಕೃಷ್ಣಾರ್ಪಣಮಸ್ತು ||
Leave A Comment