ರಾಗ ಭೈರವಿ ಝಂಪೆತಾಳ
ದನುಜನು ರೋಷಾತುರದಿ | ಬಲು | ಕಣೆಗಳ ಸುರಿದನು ಭರದಿ |
ಇನ ತನುಜನ ಸುತ ಮುಳಿದು | ಕಡಿ | ದನು ಖಳನಾಗಲೆ ತಿಳಿದು          ||೧೨೬||

ಮೊನೆಗಾಣಿಸಿ ಶರಗಳನು | ಕಂ | ಡಿನಸುತಸುತನುಸಿರಿದನು ||
ರಣದಲಿ ಕೇಳ್ ಖಳ ನಿನ್ನ | ಈ | ಕ್ಷಣ ಸೆರೆಪಿಡಿಯುವೆ ಮುನ್ನ    ||೧೨೭||

ಘನತರ ಮೇಘಾಸ್ತ್ರವನು | ಎ | ಚ್ಚನು ದಾನವನ ವಕ್ಷವನು ||
ಮೊನೆಗೊಂಡವು ಬೆನ್ನಿನಲಿ | ಧೊ | ಪ್ಪನೆ ಮಲಗಿದನು ರಥದಲಿ ||೧೨೮||

ದನುಜನ ಕರಯುಗವನ್ನು | ಕ | ಟ್ಟೆಳೆತಂದನು ಕರ್ಣಜನು ||
ಮನಮುಟ್ಟಿ ವೃಷಧ್ವಜನ | ಪೊಗ | ಳ್ದನು ದಾನವಕುಲಮಥನ    ||೧೨೯||

ಅಷ್ಟರೊಳಗೆ ಮೀನಾಂಕ | ನಿಜ | ಗುಟ್ಟನುಳುಹೆ ನಿಶ್ಯಂಕ ||
ಕುಟ್ಟಿದನುಳಿದ ಖಳರನು | ತಾ | ಕಟ್ಟಿ ತಂದ ತುರಗವನು         ||೧೩೦||

ಕೊಟ್ಟಾ ಭಾಷೆಯ ಸಲಿಸೆ | ಶ್ರೀ | ಕೃಷ್ಣನ ಮನವನ್ನೊಲಿಸೆ |
ತಟ್ಟಿತು ಹರಿಯ ಸ್ಮರಣೆಯು | ಖಳ | ನಟ್ಟಹಾಸಗಳಡಗಿದವು    ||೧೩೧||

ಕಂದೆರೆದನು ದಾನವನು | ಹರಿ | ಗೊಂದನೆಯನು ಮಾಡಿದನು ||
ಬಂದುದು ನಿರ್ಮಲ ಮತಿಯ | ಗೋ | ವಿಂದಗೊಪ್ಪಿಸಿದನು ಸ್ಥಿತಿಯ        ||೧೩೨||

ಇಂದಿರೆಯರಸೆನ್ನಿಂದ | ಅ | ಯ್ತಂದಪ ಕೃತಿ ಕ್ಷಮಿಸೆಂದ ||
ಎಂದಡಗೆಡಹಿದ ತನುವ | ಮು | ಕುಂದನೊಳಿಟ್ಟನು ಮನವ      ||೧೩೩||

ಭಾಮಿನಿ
ದನುಜಪತಿ ಕೇಳಿನ್ನು ನೀನಿಂ |
ದಿನ ಮೊದಲು ದ್ವಿಜದೇವಕುಲಹಗೆ |
ಯನು ಬಿಡುವುದೆಮ್ಮೀ ಯುಧಿಷ್ಠಿರನೆಸಗುತಿಹ ಮಖಕೆ ||
ಮನಸಹಾಯವ ಮಾಡಿಕೊಂಡೆ |
ನ್ನನವರತ ಧ್ಯಾನಿಸುತ ನಿಶ್ಚಲ |
ನೆನಿಸೆನುತ ಸಂತಯಿಸಿ ಗಜಪುರಕಾಗಿ ನಡೆತಂದ       ||೧೩೪||

ರಾಗ ಸುರುಟಿ ಏಕತಾಳ
ಬಂದನು ಭಾಗ್ಯನಿಧಿ | ಗಜಪುರ | ಕಂದತಿ ವೈಭವದಿ ||
ವೃಂದಾರಕರು | ದುಂದುಭಿ ಮೊಳಗಿಸಿ |
ಚಂದದಿ ಪೂಮಳೆ | ಯಂದು ಸುರಿವುತಿರೆ || ಬಂದನು ಭಾಗ್ಯನಿಧಿ           ||೧೩೫||

ಕೇರಿಕೇರಿಯ ಸ್ತ್ರೀಯರು | ನೋಡುತ | ಆರತಿ ಎತ್ತಿದರು ||
ಮಾರಜನಕನನ್ನು | ಧಾರಿಣಿಪತಿ ತನ್ನ |
ಚಾರು ಮಂದಿರಕುಪ | ಚಾರದಿಂದೊಯ್ದನು || ಬಂದನು ಭಾಗ್ಯನಿಧಿ        ||೧೩೬||

ಶ್ರೀರಮಣನ ಮುದದಿ | ಸಕಲ ಸ | ತ್ಕಾರದ ಸಂಭ್ರಮದಿ ||
ರಾರಾಜಿಪ ಮಂ | ಟಪದಿ ಕುಳ್ಳಿರಿಸಿ ಪ |
ದಾರವಿಂದಗಳ | ಪೂಜಿಸಿ ನಮಿಸಿದ || ಬಂದನು ಭಾಗ್ಯನಿಧಿ      ||೧೩೭||

ವಾರ್ಧಕ
ಧರಣಿಪತಿ ಕೇಳಾಗ ಕೃಷ್ಣ ವೇದವ್ಯಾಸ |
ವರಪುರೋಹಿತ ಧೌಮ್ಯ ವಾಸಿಷ್ಠ ಮುಖ್ಯ ಮುನಿ |
ವರರನುಜ್ಞೆಯ ಕೊಂಡು ವಿಧ್ಯುಕ್ತದಿಂದಲಧ್ವರಶಾಲೆಯಂ ರಚಿಸುತ ||
ಮೆರೆವ ಶಾಸ್ತ್ರೋಕ್ತದಿಂ ಮಖದೀಕ್ಷೆಯಂ ಕೊಂಡು |
ಅರಸನತಿ ಸಂಭ್ರಮದಿ ಚೈತ್ರಸಿತಪೌರ್ಣಮಿಯೊ |
ಳುರುವ ವಾಜಿಯನು ಸಿಂಗರಿಸುತ್ತ ಬಿಡಲಿಕುದ್ಯೋಗಿಸಿದನತಿ ಮೋದದಿ  ||೧೩೮||

ರಾಗ ಶಂಕರಾಭರಣ ತ್ರಿವುಡೆತಾಳ
ಮಖದ ಹಯವನು ತಂದು ಗಂಧೋ | ದಕದಿ ಮೀಯಿಸಿ ವಜ್ರದ ||
ಮುಕುರಮೊಗರಂಬವನು ಇಟ್ಟರು | ಯುಕುತವಾಗಿ     ||೧೩೯||

ನವರತುನ ಮಣಿಖಚಿತ ಪಾವಡ | ವವಚಿ ಬಿಗಿದರು ಬೆನ್ನಿಗೆ ||
ವಿವಿಧ ಮಾಣಿಕ್ಯದ ಸರಗಳನು | ಸವನಿಸಿದರು           ||೧೪೦||

ಮೇಲು ದಿವ್ಯಾಂಬರವ ಹೊಂದಿಸಿ | ಜಾಲಿಬಿಡುತಲಿ ಮುತ್ತಿನ ||
ಜಾಲಿಗಳು ಹೊಂಗೆಜ್ಜೆ ಮಣಿಸರ | ಮಾಲೆ ಪೊಳೆಯೆ    ||೧೪೧||

ಕೊರಳ ಸರಪಣಿ ಪದಕ ತಾಳೀ | ಸರಗಳಿಟ್ಟರು ರಾಜಿಪ ||
ಹಿರಿಯ ಮುತ್ತಿನ ಹಾರಗಳು ಸಿಂ | ಗರದೊಳೆಸೆಯೆ     ||೧೪೨||

ಕಾಲಸರಪಣಿ ಕಡಗಗಳನನು | ಕೂಲವಾಗಿಯೆ ಇಡುತಲಿ ||
ಮೇಲುಪೆಂಡೆಯೊಳೆಸೆಯೆ ಸಿಂಗರ | ಮೇಳವಿಸಿತು      ||೧೪೩||

ವಚನ   ||          ಈ ರೀತಿಯಿಂದ ಮಖಾಶ್ವಮಂ ಶೃಂಗಾರಗೆಯ್ದು ಧರ್ಮರಾಯನು ಶ್ರೀಕೃಷ್ಣನ ಚರಣಂಗಳಿಗೆ ನಮಸ್ಕರಿಸಿ ಬಿನ್ನವಿಸುತಿರ್ದನದೆಂತೆನೆ –

ರಾಗ ಕೇದಾರಗೌಳ ಅಷ್ಟತಾಳ
ಸುರವರಾರ್ಚಿತ ಕೇಳು ತುರಗರಕ್ಷಾರ್ಥಕ್ಕೆ | ಧುರಧೀರರನು ಬೆಸಸಿ |
ತೆರಳಿಸು ದೇವ ತಡೆಯಲೇಕೆನುತ ಭೂಪ | ಹರಿಗೆ ಪೇಳ್ದನು ಬಿನ್ನಯಿಸಿ   ||೧೪೪||

ನರನಲ್ಲದಾರು ಸಂಗರಧೀರರೊಳಗಿನ್ನು | ಪೊರಡಲಾತನೆ ಬೇಗದಿ ||
ಮೆರೆವ ಸೇನಾಧಿಪತ್ಯವ ಪ್ರದ್ಯುಮ್ನನು ಅಂಗೀ | ಕರಿಸಲೆಂದನು ದಯದಿ  ||೧೪೫||

ವೃಷಕೇತು ಯೌವನಾಶ್ವನನುಸಾಲ್ವ ಸಾಹಸ | ದ ಸುವೇಗನನಿಬರು ಬೇಗ ||
ಸಸಿನದಿ ಸಾತ್ಯಕಿ ಕೃತವರ್ಮನನಿರುದ್ಧ | ರೊಸೆದೆಲ್ಲ ಪೊರಡಲೀಗ          ||೧೪೬||

ಎಸೆವ ಸಕಲ ಸೈನ್ಯದೊಡನೆ ನಮ್ಮಯ ಯದು | ಪ್ರಸರ ಸಹಿತ ಕೂಡುತ ||
ಕುಶಲದಿ ಪೊರಡಲಿ ಪರಮೋತ್ಸವದೊಳಗೆಂ | ದಸುರಾರಿ ನೇಮಿಸಿದ      ||೧೪೭||

ಹರಿನಿರೂಪವ ಕೇಳ್ದು ಹರುಷದಿ ಪಾರ್ಥನಿ | ಗರಸ ನೇಮವ ಕೊಡಲು ||
ಪೊರಟನು ಪರಮ ಸಂಭ್ರಮದೊಳಗೆಲ್ಲರ | ಕರೆಸಿಕೊಳುತಲಾಗಲು        ||೧೪೮||

ಮೆರೆವ ನವಗ್ರಹಾರ್ಚನೆಯ ಗೈವುತ ಸುರ | ವರರನೆಲ್ಲರ ಪ್ರಾರ್ಥಿಸಿ ||
ಹರಿಯೊಳಪ್ಪಣೆಗೊಂಡು ಅಣ್ಣಗೊಂದನೆಗೈದು | ಪೊರಮಟ್ಟನುರೆ ಸಹಸಿ   ||೧೪೯||

ಭಾಮಿನಿ
ಇಂತು ವಿಭವದಿ ಪೊರಡುತಿರಲ |
ತ್ಯಂತ ಶೌರ್ಯಾನ್ವಿತ ಧನಂಜಯ |
ಕಂತು ಮುಖ್ಯಾದವರ ವೀರರ ಕಾಂತೆಯರು ಮುದದಿ ||
ಸಂತಸದಿ ದ್ರುಪದಜೆ ಸುಭದ್ರೆ ಸೀ |
ಮಂತಿನಿಗಳಾರತಿಗಳಕ್ಷತೆ |
ಯಂ ತಳಿದು ಹರಸಿದರು ತಾವ್ ತಂತಮ್ಮ ವಲ್ಲಭರ   ||೧೫೦||

ರಾಗ ಸೌರಾಷ್ಟ್ರ ಏಕತಾಳ
ಜಯ ಜಯ ಜಯ ದಿಗ್ವಿ | ಜಯವಾಗಲಿಯೆಂದು |
ಜಯ ಜಯವೆಂದು ವಿಜಯಗೆ ಹರಸಿದರು || ಜಯ ಜಯ || ಪ ||

ಸರ್ವಕಾರ್ಯಸಂಗ್ರಹ | ನಿರ್ವಿಘ್ನವಾಗಲಿ ಮುದದಿ |
ಉರ್ವಿಯೊಳಗೆ ಭುಜಬಲ ಶೌರ್ಯದಿ ||
ಗರ್ವದ ರಿಪುಗಳ ಮುರಿವ ಸಹಸವಾಗಲಿಯೆಂದು |
ಮೇರ್ವೆಯಾರತಿಗಳನೆತ್ತಿದರು        ||೧೫೧||

ಸಂತತ ಸಕಲ ಭೂಕಾಂತರೆಲ್ಲ ಪಾದಾ |
ಕ್ರಾಂತರಾಗುವ ನಿಮ್ಮ ಮರೆಯೊಗಲಿ ||
ಪಂಥ ಪಾಡು ಪೌರುಷ ಮೆರೆಯಲಿದೆಯೆಂದು |
ಕಾಂತೆಯರಾರತಿಯೆತ್ತಿದರು ||        ||೧೫೨||

ಪೊರಟ ತುರಗ ವೃಂದ ಬಲಸಹಿತ |
ವರುಷದೊಳಗೆ ತಿರುಗುತ ಬರಲಿ ||
ಹರುಷ ಹೆಚ್ಚಲಿ ಅನುದಿನ ನಿಮಗೆನುತಲಿ |
ಅರಸಿಯರಾರತಿಯೆತ್ತಿದರು            ||೧೫೩||

ವಾರ್ಧಕ
ಮೆರೆವ ದಧಿ ದೂರ್ವಾಂಕುರಾಕ್ಷತೆಗಳಿಂದಲಾ |
ಅರಸಿಯರ್ ತಂತಮ್ಮ ಪತಿಗಳಂ ಪರಸುತ್ತ |
ನೆರೆದು ಬೀಳ್ಗೊಡುತಿರಲ್ ಧರ್ಮಜನ ಬಿರುದುಗಳ ಬರೆದು ಕನಕದ ಪಟ್ಟೆಯ ||
ಹರುಷದಿಂ ಹಯದ ಫಣೆಯಲಿ ಕಟ್ಟಿ ಗಂಧ ಕ |
ಸ್ತುರಿಯಕ್ಷತೆಗಳಿಂದ ಪರಿಪರಿಯ ಪೂಗಳಿಂ |
ತುರಗಮಂ ಪೂಜೆಗೈವುತ್ತ ಬಿಟ್ಟರು ಶುಭಮುಹೂರ್ತದೊಳ್ ಸೇನೆ ಸಹಿತ            ||೧೫೪||

ಎಡೆಬಿಡದೆ ನಡೆಗೊಂಬ ಆನೆಗಳ ಸೇನೆಗಳ |
ನಡನಡುವೆ ಪಿಡಿದೆಳೆವ ಠಕ್ಕೆಗಳ ಪಕ್ಕೆಗಳ
ಲೊಡನೊಡನೆ ಅಡಿಯಿಡುವ ವಾಜಿಗಳ ತೇಜಿಗಳ ಕಡುಹುಗಳ ತೊಡವುಗಳಿಗೆ ||
ಅಡಿಗಡಿಗೆ ಬಿಡದೊದರ್ವ ಭೇರಿಗಳ ಭಾರಿಗಳ |
ಗಡಗಡನೆ ಚೀತ್ಕರಿಪ ತೇರುಗಳ ವಾರುಗಳ |
ಎಡೆಯೆಡೆಗೆ ಪಿಡಿದೆಸೆವ ಛತ್ರಗಳ ಚಿತ್ರಗಳ ಕಡುಪಿಂದ ಪಡೆ ನಡೆದುದು   ||೧೫೫||

ಗಿಡಿಬಿಡಿನೆ ಪೆಸರುಡುಕು ವಾದ್ಯಗಳ ಚೋದ್ಯಗಳ |
ಗುಡುಗುಡಿಪ ದುಂದುಭಿಯ ಫೋಷಗಳತೋಷಗಳ |
ಕಡುಸ್ವರದಿ ಪೊಗಳುತಿಹ ವಂದಿಗಳ ಮಂದಿಗಳ ಸಂದಣಿಯ ಗೊಂದಣಗಳ ||
ಬಿಡಬಿಡದೆ ನೋಳ್ಪ ಜನರಂದಗಳ ಚಂದಗಳ |
ನುಡಿ ನುಡಿಗೆ ಪಾಂಡವರ ಕೀರ್ತಿಗಳ ವಾರ್ತೆಗಳ |
ಪಡಿಯಿಡುವದರಿದೆಂಬ ಭಾಗ್ಯಗಳ ಭೋಗ್ಯಗಳ ಸಡಗರದಿ ನಡೆದರಾಗ   ||೧೫೬||

ರಾಗ ಭೈರವಿ ಆದಿತಾಳ
ಲಾಲಿಸಾಗ | ಭೂಪತಿ | ಲಾಲಿಸಾಗ    || ಪ ||

ಶ್ರೀಲಲಾಮನ ಕರುಣದಿಂ ಭೂ | ಪಾಲ ಹಯಮೇಧವನು ರಚಿಸಲು   || ಅ.ಪ ||

ತುರಗ ನಡೆದುದು ತೆಂಕಮುಖವಾ | ಗಿರಲು ಕಾಪಿನ ಜನರು ಸಹಿತಲಿ |
ತೆರಳಿತಾಗಲು ಪಿಂತೆ ಸೈನಿಕ | ಶರಧಿಘೋಷದಿ ಪೊರಡಿಸಿರ್ದುದು |
ತರಣಿಸುತಸುತ ಕಾಮ ಸಕಲ ಭೂ | ವರರ ಮೇಳದಿ ಪಾರ್ಥ ತನ್ನಯ |
ಮೆರೆವ ರಥವೇರಿದನು ಪೊಗಳುವ | ಪರಿಪರಿಯ ಪಾಠಕರ ಮೇಳದಿ |
ಪೊರಟನಾಗ | ವಿಜಯನು | ಪೊರಟನಾಗ     ||೧೫೭||

ಸೂಳವಿಸಿತುಗ್ಗಡಿಪ ಬಲು ನಿ | ಸ್ಸಾಳ ಕಹಳಾರವದಿ ಪಾಠಕ |
ರೇಳಿಗೆಯ ಸುಸ್ವರದಿ ಹರುಷವ | ತಾಳಿ ನರನೈತರುತಿರಲು ವೈ |
ಶಾಲ ಮಾಹೀಷ್ಮತಿಯ ಪುರಪತಿ | ನೀಲಕೇತುವೆನಿಪ್ಪ ಪೆಸರ ಭೂ |
ಪಾಲನಲ್ಲಿಗೆ ಪೊರಡುತಿಹ ಹಯ | ಮೇಲುಬಲ ಸಹಿತೊಲಿದು ವಹಿಲದಿ |
ಬಿಡದೆ ಹಯವ | ಕಟ್ಟಿದ | ಬಿಡದೆ ಹಯವ      ||೧೫೮||

ಮರುತಸಖ ಮನೆಯಳಿಯನೆನಿಸುತ | ಅರಸನಲ್ಲಿಹ ಮೂಲ ಬಲದಿಂ |
ತುರಗವನು ಕಟ್ಟಲ್ಕೆ ವೈಶ್ವಾ | ನರನು ಪಾರ್ಥವ ಬಲವ ಸುಡುತಿರ |
ಲಿರಲು ಪ್ರಾರ್ಥಿಸಲಾಗ ತೊಲಗುತ | ಕರೆದು ಮಾವಗೆ ಪೇಳ್ದ ನಮ್ಮೀ |
ನರನು ಕಾಣಿಸಿಕೊಳುಯೆನು ಭೂ | ವರನು ಕುದುರೆಯ ಕೊಟ್ಟು ಕೂಡಿಯೆ |
ಪೊರಟನಾಗ | ನೀಲ | ಧ್ವಜನು ಬೇಗ           ||೧೫೯||

ವಾರ್ಧಕ
ಇತ್ತಲರ್ಜುನನು ನೀಲಧ್ವಜನನೊಡಗೊಂಡು |
ಉತ್ತಮಾಧ್ವರವಾಜಿ ಸಹಿತ ಬರೆ ವಿಂಧ್ಯಾದ್ರಿ |
ಒತ್ತಿಲಿಹ ಆ ಚಂಡಿ ಶಿಲೆಯಾಗಿರಲ್ಕಂಡು ಪೊರೆವೆನೆಂದೆನುತಡರಲು ||
ಕೆತ್ತುದಾ ಹಯದ ಕಾಲ್ಗಳು ಕೀಳಲರಿದಾಯ್ತು |
ಮತ್ತೆ ಸೌಭರಿಯ ನುಡಿ ಕೇಳಿದಾಕ್ಷಣದಿ ಪುರು |
ಷೋತ್ತಮನ ನೆನೆಯಲಾ ಹಯಮಿಳಿಯೆ ಶಿಲೆಯನುಂ ಉದ್ಧರಿಸಿ ಬೀಳ್ಕೊಂಡನು   ||೧೬೦||

ತುರಗ ನಡೆದುದು ತೆಂಕಮುಖವಾಗಿ ಚಂಪಕಾ |
ಪುರಕಖಿಳಸೇನೆ ಸಹಿತರ್ಜುನಂ ವಹಿಲದಿಂ |
ಬರುತಲಾ ಪಟ್ಟಣದ ಬಾಹ್ಯಪ್ರದೇಶದೊಳ್ ಪಾಳೆಯವ ಬಿಡಿಸಿರಲ್ಕೆ ||
ಕರಮಸೆದುದಾ  ದುರ್ಗಮೇನೆಂಬೆನಾ ನಗರ |
ಸಿರಿಯುಡುಗೆಯುಟ್ಟ ಶ್ವೇತಾಂಬರವೊ ಭೂದೇವಿ |
ಕೊರಳಮೌಕ್ತಿಕಹಾರವೋಯೆನಲ್ ಕೋಟೆ ಕಣ್ಗೆಸೆದುದತಿ ಸಂಭ್ರಮದೊಳು           ||೧೬೧||

[ಕೇಳು ಜನಮೇಜಯನೆ ಮುರಹರನ ಬೀಳ್ಗೊಂಡು |
ಏಳಕ್ಷೌಹಿಣಿ ಬಲವನೊಡಗೊಂಡು ಫಲುಗುಣಂ |
ಘೀಳಿಡುತ ಕಪಿಯಬ್ಬರಣೆಯಿಂದ ರಥವೇರಿ ಧನುವಿಡಿದು ಝೇಗೈಯುತ ||
ಆಳುತನವುಬ್ಬೇರಿ ಸಾಲ್ವ ಸಾತ್ಯಕಿ ಸಾಂಬ |
ಮೇಳವಿಸೆ ವೃಷಕೇತು ಯೌವನಾಶ್ವ ಕೃತವರ್ಮ |
ಕಾಳಗಕೆ ರಥವೇರಿ ಪೊರಟರೈ ಪ್ರದ್ಯುಮ್ನನನಿರುದ್ಧರಾ ಸಮರಕೆ]            ||೧೬೨||

ರಾಗ ಕಾಂಭೋಜಿ ಝಂಪೆತಾಳ
[ಕಾಲಪಾಳಯದಂತೆ ಕಮಠನೆದೆ ಬಿರಿವಂತೆ |
ಮೂಲಬಲ ಮಖದ ಹಯಸಹಿತ ||
ಮೂರುಲೋಕದ ಗಂಡ ನರ ತೆಂಕುಮುಖವಾಗಿ |
ಸಾರೆ ನೀಲಧ್ವಜನ ಪುರಕೆ   ||೧೬೩||

ಕಟ್ಟಿ ಕುದುರೆಯ ಕಾದಿ ಜಯವ ಕಾಣದೆ ಕಪ್ಪ |
ಗೊಟ್ಟು ನೀಲಧ್ವಜನು ಇರಲು ||
ದಿಟ್ಟೆಯಾತನ ಕಾಂತೆಯಿಂದ ಸುರನದಿಶಾಪ |
ತಟ್ಟಿತರ್ಜುನಗೆ ಬೆಂಬಿಡದೆ ||೧೬೪||

ರಕ್ಕಸಾರಿಯ ನೆನೆದು ವಿಜಯ ನೀಲಧ್ವಜನ |
ಪಕ್ಷದೊಡಗೂಡಿ ಬಲಸಹಿತ ||
ದೀಕ್ಷೆ ತುರಗವು ಬೆಂಬಳಿಯ ಮಾರ್ಬಲವ ಕೂಡಿ |
ದಕ್ಷಿಣದ ಮುಖವಾಗಿ ನಡೆದ           ||೧೬೫||

ಪುಂಡರಿಕವದನೆ ಪುರುಷನ ಶಾಪ ಸರಿವುದಕೆ |
ಪಾಂಡವರ ಮಖದ ಹಯವಿಡಿದು ||
ಕಂಡು ಸಿತವಾಹನನು ಮುನಿಯಾಜ್ಞೆಯಿಂದಲಾ |
ಚಂಡಿಯನು ಬಿಡಿಸಿ ಬೀಳ್ಗೊಡಲು    ||೧೬೬||

ಕಾಮಿನಿಯನುದ್ಧರಿಸಿ ಬಲ ಸಹಿತ ನಡೆತಂದು |
ಆ ಮರಾಳಧ್ವಜನ ಪುರಕೆ ||
ಭೀಮನನುಜನು ಪಾಳ್ಯ ಹೊರಬಾಹೆಯಲಿ ನಿಲಿಸಿ |
ಶ್ಯಾಮಕೇತನನ ಬೆಸಗೊಂಡ]        ||೧೬೭||

ನೋಡಿ ಫಲುಗುಣನೀಲಕೇತನೊಡನೆಂದನೀ |
ರೂಢಿಗಧಿಪತಿಯಾದರೆಂದು  || ಪ ||

ಹಯವ ತಡೆದೆಮ್ಮೊಡನೆ ಬವರಗೈಯುವನೆ ಪೇಳ್ |
ಅವನೀಶನೆಂದೆನಲವನು ||
ದಿವಿಜೇಂದ್ರ ಜಾತನೊಳು ನಯದಿ ಪೇಳಿದನಂದು |
ಭುವಿಯಾಣ್ಮನಾ ಚರಿತೆಗಳನು       ||೧೬೮||

ಭಾಮಿನಿ
ಅರಸ ಕೇಳಾ ಚಂಪಕಾಪುರ |
ದರಸ ಹಂಸಧ್ವಜನೃಪಾಲನು |
ಧುರವಿಜಯ ಭುಜಶೌರ್ಯ ಸಾಹಸ ಮಲ್ಲ ನಿಶ್ಯಂಕ ||
ಪರಮ ಧಾರ್ಮಿಕ ಸತ್ಯವ್ರತ ಸ |
ಚ್ಚರಿತ ಸದ್ವೈಷ್ಣವನು ಧರ್ಮದಿ |
ಧರೆಯನಾಳುತಲಿರ್ದ ನಿಗಮಾಗಮವಿಚಾರದಲಿ         ||೧೬೯||

ರಾಗ ಸಾಂಗತ್ಯ ರೂಪಕತಾಳ
ನರನೆ ಕೇಳೀ ರಾಜ್ಯದರಸು ಹಂಸಧ್ವಜ | ಪರಮಧಾರ್ಮಿಕ ಸತ್ಯಶೀಲ ||
ಧುರಪರಾಕ್ರಮಿ ಹರಿಶರಣನೀತಗೆ ಬಲು | ದೊರೆಗಳು ಕಷ್ಟವೀಯುವರು   ||೧೭೦||

ಧರಣಿಪಾಲನ ಸತಿ ಪರಮ ಪತಿವ್ರತೆ | ವರ ಸುಗರ್ಭೆಯೊಳು ಜನಿಸಿರುವ ||
ಸುರಥ ಸುಧನ್ವ ಸುದರ್ಶನ ಸುಮರೆಂಬ | ತರಳರು ನಾಲ್ವರಾ ನೃಪಗೆ    ||೧೭೧||

ವರ ವೇದಶಾಸ್ತ್ರಪುರಾಣಸಂಪನ್ನರು | ಧನುರ್ವಿದ್ಯೆ ಬತ್ತೀಸಾಯುಧದಿ ||
ಧುರಧೀರರೆನಿಸಿ ರಂಜಿಸಿದರೇನೆಂಬೆ ನಾ | ಧರಣಿಪಾಲನ ಪುಣ್ಯೋದಯವ          ||೧೭೨||

ಧನಬಲ ಚಂದ್ರಸೇನನು ಚಂದ್ರಕೇತನು | ಘನ ಚಂದ್ರದೇವ ವಿಡೂರಥ ||
ಗುಣ ಧರ್ಮವಾಹನು ನ್ಯಾಯವರ್ತಿಗಳೆಂಬ | ಅನುಜರು ಏಳ್ವರಾ ನೃಪಗೆ            ||೧೭೩||

ಸುಮತಿಯು ಪ್ರಮತಿಗಳೆಂಬ ಮಂತ್ರಿಗಳಾಗ | ಲಮಿತ ಸುಗುಣನೀತಿಯುತರು ||
ಯಮಿಪುರೋಹಿತ ಶಂಖಲಿಖಿತರೆಂದೆನಿಪರ | ಸಮನಿಸೀ ಕ್ಷಿತಿಯನಾಳುವನು        ||೧೭೪||

ನಿತ್ಯಕಾಹಿಂಗೆಪ್ಪತ್ತೊಂದು ಸಾವಿರ ರಥ | ಮತ್ತಷ್ಟೆ ಗಜಲಕ್ಷಹಯವು ||
ಪ್ರತ್ಯೇಕದ್ವಯಲಕ್ಷದಳವೊಬ್ಬೊಬ್ಬರೊಳಿಂತೆ | ಪ್ಪತ್ತು ಮಂದಿಯು ಸೇನಾಧಿಪರು    ||೧೭೫||

ದಿವಿಜೇಂದ್ರತನಯನಧ್ವರವಾಜಿ ಪುರಬಾಹೆ | ಗವಚಿಕೊಂಡಿರ್ದವಾರ್ತೆಯುನು ||
ಜವದೊಳಂಜುತ ಹೊರಗಾವಲರಯ್ತಂದು | ಅವನೀಶಗೊರೆದರಾ ಕ್ಷಣದಿ  ||೧೭೬||

ಭಾಮಿನಿ
ಇಂತು ಪೇಳ್ದುದ ಕೇಳ್ದು ಪಾರ್ಥನು |
ಕಂತುಜನಕನ ಕರುಣವಿರಲಿದ ||
ಕಿಂತು ಬೆದರುವುದೇಕೆನುತ ಪೊಗಿಸಿದನು ಕುದುರೆಯನು ||
ಕುಂತಿಸುತನಧ್ವರದ ವಾಜಿಯ |
ನಿಂತು ನೋಡುತ ಚರರು ತಾವ್ ಭೂ |
ಕಾಂತನಲ್ಲಿಗೆ ಬಂದು ಬಿನ್ನವಿಸಿದರು ವಿಧವಿಧದಿ           ||೧೭೭||

ರಾಗ ಮುಖಾರಿ ಏಕತಾಳ
ಮಹರಾಜ ಕೇಳ್ವುದೀ ಕಲಾಪ | ಬಹು ಚೋದಿಗ ಭೂಪ ||
ಮಹರಾಜ ಕೇಳ್ವುದೀ ಕಲಾಪ         || ಪ ||

ಆನೆಪುರದ ದೊರೆ ಪ್ರಖ್ಯಾತ | ತಾನೆ ಧರ್ಮಪ್ಪನೆಂಬಾತ ||
ಏನನೆಂಬೆವಾ | ಭೂಪನ ಕಡೆ ಮಹ |
ಸೇನೆ ಬಂದು ನಮ್ಮ | ತಾಣವ ಮುತ್ತಿತು                  ||೧೭೮||

ತಮ್ಮ ಅರ್ಜುನಪ್ಪನಂತೆ | ಹಮ್ಮಿನವರಿರ್ಪರು ಮುಂತೆ ||
ಶರ್ಮೆ ನೋಳ್ಪೆವಾ | ವೊಮ್ಮೆಗೆನುತ ಬರೆ |
ಗುಮ್ಮಿಡುತಲಿ ನಮ್ಮ | ಹಮ್ಮನಿಲಿಸಿದರು                  ||೧೭೯||

ಸಿಂಧುಘೋಷದಿಂದ ಮಂದಿ | ಬಂದಿತೊಂದು ಕುದುರೆ ಮುಂದೆ ||
ಹಿಂದೆ ಬಡಿದು ಕಟಿ  | ಸಂದ ಕಳಚುವರು |
ಅಂದ ಕೇಳು ನಮ್ಮ | ತಂದೆ ಬೆದರದಿರು                   ||೧೮೦||

ಕದನಕಲಿಗಳ್ ಬೇರೆ ನಮ್ಮ | ಬದಲಿಗಿಟ್ಟ ಸೇನೆಯುಂಟು ||
ಒದಗಿತೊಂದು ಮದು | ವೆಗೆ ನಾವ್ ಪೋಗುವ |
ಮುದದೊಳಟ್ಟುವ | ರಿದಿರಿಗೆ ಆ ಬಲ                        ||೧೮೧||

ಗುಟ್ಟಿಲರಿಕೆ ಗೆಯ್ವೆ ಸೊಲ್ಲ | ದಿಟ್ಟರವರು ಕೇಳ್ ಸುಳ್ಳಲ್ಲ ||
ಪೆಟ್ಟನಿಕ್ಕುವ ಮೊದ | ಲಲ್ಲಿಹ ನಮ್ಮ ದಳ |
ಬಿಟ್ಟು ನೋಡುನಾವ್ | ಒಟ್ಟಿಗೆ ಪೋಗವ                   ||೧೮೨||

ಭಾಮಿನಿ
ಚರರ ನುಡಿಯನು ಕೇಳುತಲೆ ಭೂ |
ವರನು ನಸುನಗುತಭಯವೀಯುತ |
ಹರಿಯ ದರುಶನ ತನಗೆ ಇದರಿಂ ದೊರಕಿತೆಂದೆನುತ ||
ಅರಿತು ಮನದಲಿ ಆ ಕ್ಷಣವೆ ಮಖ |
ತುರಗವನು ಹಿಡಿತರಿಸಿ ಫಣಿಯೊಳ |
ಗಿರುವ ಲೇಖನ ಸಚಿವರಿಂದೋದಿಸುತ ಲಾಲಿಸಿದ       ||೧೮೩||