ರಾಗ ನೀಲಾಂಬರಿ ಆದಿತಾಳ
ನೋಡವ್ವ ಇಂಥಾ ಬಾಲನ | ತಪ್ತತೈಲದಿ | ದೂಡಿದರಲ್ಲೇಯೀತನ ||
ಮೂಢನೆ ಹಂಸಕೇತ | ಪರರ ವಾಕ್ಯದಿ | ಮಾಡಿದ ಬರಿದೆ ಘಾತ            ||೨೬೯||

ದುಷ್ಟ ಪಾಪಿಗಳವರು | ಶಂಖಲಿಖಿತರಿ | ನ್ನೆಷ್ಟು ದಿವಸ ಬಾಳ್ವರು ||
ನಷ್ಟಗೆಯ್ಸಿದರು ಜೀವ | ಧೂರ್ತರಿವರಿರ್ಪ | ಪಟ್ಟಣ ಲೇಸೇನವ್ವ ||೨೭೦||

ಹಲಗಾಲ ತಪವಗೆಯ್ಯೆ | ಸುಧನ್ವನಂಥ | ಚೆಲುವ ಪುಟ್ಟುವನೆ ತಾಯೆ ||
ಇಳೆಗೆ ಬಾಹಿರನೆಯೀತ | ಹಂಸಕೇತನ | ಕುಲವುದ್ಧರಿಸುವ ದಾತ           ||೨೭೧||

ಅರಿಗಳೆದೆಗೆ ಶೂಲನು | ಸುಧನ್ವನೀತ | ಧುರಕೆ ಕರ್ಕಶಧೀರನು ||
ನರಗಿದಿರ್ಯಾರು ಜಾಣೆ | ವ್ಯರ್ಥವೀ ಭೂಪ | ಪುರ ಹೋಗಾಡಿಸಿದ ಕಾಣೆ ||೨೭೨||

ಎಂತು ಬಾಳುವಳೊ ಮಾತೆ | ಉದಾರಾಗ್ನಿ ಇ | ನ್ನೆಂತು ತಾಳುವಳೊ ಖ್ಯಾತೆ ||
ಕಾಂತೆ ಚಿಕ್ಕವಳು ಕಾಣೆ | ತನ್ನಿಂದ ಪ್ರಿಯಗೆ | ಇಂತಾಯ್ತೆಂದುಳಿವಳೇನೆ  ||೨೭೩||

ಸುದತಿಸಂಕುಲಕೆ ಸಾಕು | ಮಕ್ಕಳಪೇಕ್ಷೆ | ಇದ ಕಂಡು ಮರೆಯಬೇಕು ||
ಒದರಲೇನುಂಟು ನಾವೀಗ | ಶ್ರೀಕೃಷ್ಣನಿವನ | ಒದಗಿ ರಕ್ಷಿಸಲಿ ಬೇಗ        ||೨೭೪||

ರಾಗ ರೇಗುಪ್ತಿ ಏಕತಾಳ
ಈ ಪರಿಯಲಿ ಪುರಜನ ಮರುಗಲು ಇತ್ತ | ಶ್ರೀಪತಿಭಜಕ ಸುಧನ್ವ ತಾನು ||
ತಾಪಿಸಿದೆಣ್ಣೆ ಕೊಪ್ಪರಿಗೆಯೊಳ್ಮುಳುಗಿ ಪ್ರ | ಲಾಪಿಸಿ ನುತಿಸಿದ ಹರಿಯನ್ನು ||೨೭೫||

ಮಾಧವಹರಿಮಧುಸೂದನ ವಿಷ್ಣು ದಾ | ಮೋದರ ಕೃಷ್ಣ ಶುಭೋದಯ ||
ಶ್ರೀಧರ ವಿಘ್ನ ವಿಚ್ಛೇದನ ಹರಿ ಪ್ರ | ಹ್ಲಾದವರದ ಈಕ್ಷಿಸೆನ್ನಯ     ||೨೭೬||

ವಾಸುದೇವಾಚ್ಯುತ ಕೇಶವ ಶ್ರೀಹೃಷೀ | ಕೇಶ ಸದ್ಭಕ್ತಸುಪೋಷಣ ||
ಸಾಸಿರನಾಮ ಸರ್ವೇಶ ಲಕ್ಷ್ಮೀಶಾಂಬ | ರೀಷವರದ ನಮೋ ಎಂದನು   ||೨೭೭||

ತ್ರಾಹಿ ಮುಕುಂದ ಗೋವಿಂದ ಸಚ್ಚಿದಾನಂದ | ತ್ರಾಹಿ ತ್ರಾಹಿ ನಂದನಂದನ ||
ತ್ರಾಹಿ ದುರ್ಜನಶಿಕ್ಷ ತ್ರಾಹಿ ಸಜ್ಜನರಕ್ಷ | ತ್ರಾಹಿ ಶ್ರೀಹರಿ ನಮೋ ಎಂದನು ||೨೭೮||

ಚೂರ್ಣಿಕೆ
ಹೇ ದೇವ | ಚರಾಚರಪ್ರಾಣಿಜೀವ |
ಸುರಾಸುರಸಿದ್ಧ ಸಾಧ್ಯಯಕ್ಷಗಂಧರ್ವಾದಿ ಸೇವ |
ರಿಪುಗಜಕಂಠೀರವ ಆಪದ್ಭಾಂಧವ |
ನಿರುಪಮಕೀರ್ತಿಗಂಭೀರ | ನಿಗಮಾಗಮಸಾರ |
ಭೂಭಾರಾಪಹಾರ | ದುರಿತಹರ |
ಕೋಟಿಮಾರ್ತಾಂಡ ತೇಜೋಮಯ | ಸಹೃದಯ |
ಪುಣ್ಯಾನಂದಚಿನ್ಮಯ | ಪುರಂದರಾರ್ಚಿತ |
ಪುರಾಣಪುರುಷೋತ್ತಮ | ಸಕಲಗುಣಾಭಿರಾಮ |
ನೀಲಮೇಘಶ್ಯಾಮ | ದೈತ್ಯಕುಲವಿರಾಮ |
ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ | ಮದನಜನಕ ||
ಪರಮಪಾವನ | ಪರಂಜ್ಯೋತಿಸ್ವರೂಪಕ | ಜಗದ್ವ್ಯಾಪಕ ||
ಯದುವಂಶದೀಪಕ ಷೋಡಶಸಹಸ್ರನಾರೀಜನಪ್ರಾಣವಲ್ಲಭ |
ಮೌನೀಜನದುರ್ಲಭ | ದೀನಜನ ಸುಲಭ |
ಶಂಖಚಕ್ರಗದಾಶಾಙ್ಗದಿಶೋಭಿತ | ಪೀತಾಂಬರಾಲಂಕೃತ |
ಸರ್ವಾಭರಣಭೂಷಿತ | ಕಮಲಾಸನಶಂಕರಾದಿವಿನುತಪಾದಾಂಬುಜ |
ವರ ಚತುರ್ಭುಜ | ವೈನತೇಯಧ್ವಜ | ಆಶ್ರಿತಜನಸುರಕುಜ |
ಧ್ರುವಪ್ರಹ್ಲಾದಾಂಬರೀಷ ಅಜಾಮಿಳಾದಿ ಸನಕಸನಂದನಪರಿಪಾಲ |
ಮಾಯಾಮನುಜಲೀಲ | ವಸುದೇವಬಾಲ | ಸಾಮಗಾನವಿಲೋಲ ||
ಹನುಮಂತ ಜಾಂಬವ ವಿಭೀಷಣ ವಿದುರ ಅಕ್ರೂರ ದ್ರೌಪದಿ ಅಹಲ್ಯಾದಿ ಭಕ್ತಜನರಕ್ಷ |
ಪುಂಡರೀಕಾಕ್ಷ ನಿನ್ನನೇ ಮರೆಹೊಕ್ಕೆ ನೀ ಕೃಪಾಕಟಾಕ್ಷದಿಂದೆನ್ನನುಂ ಪಾಲಿಸೋ ಹರಿ

ವಾರ್ಧಕ
ಧಾರಿಣೀಶ್ವರ ಲಾಲಿಸಚ್ಯುತನ ನೆನೆವರ್ಗೆ |
ಘೋರ ತಾಪತ್ರಯವು ಮುಟ್ಟಲರಿದೆಂದು ಶ್ರುತಿ |
ಸಾರುತಿರಲಾಗ ಕಾಲಾಗ್ನಿಯಂತಹ ತಪ್ತತೈಲ ಕೊಪ್ಪರಿಗೆಯೊಳಗೆ ||
ವೀರವೈಷ್ಣವನು ಶ್ರೀಹರಿಯ ನೆನೆಯಲ್ಕೆ ಪ |
ನ್ನೀರಂತೆ ತಂಪುಗೊಂಡುದು ತನುವು ಮುಖಕಾಂತಿ |
ಯೇರಿತೇನೆಂಬೆ ರಾಕೇಂದುವಿನ ತೆರದಿ ಥಳಥಳಿಸಿ ಬೆಳಗಿದನಾಗಲು      ||೨೭೯||

ಮುಡಿಗೆ ಮುಡಿದರಳಮೊಗ್ಗೆಗಳರಳಿದವು ಕಂಠ |
ದೆಡೆಯ ತುಳಸಿಯ ದಂಡೆ ಕೋಮಲಿಸಿತೇನೆಂಬೆ |
ಗುಡಿಗಟ್ಟಿದವು ರೋಮರಾಜಿಗಳು ಹಿಮಕಾಲವಡಸಿ ತಂಪೊಗೆವ ತೆರದಿ ||
ನುಡಿದ ನರಹರಿಯ ನಾಮಸ್ಮರಣೆ ಹೃದಯದೊಳ್ |
ಮಡಗಿ ಮಾಧವನ ಮೂರ್ತಿಧ್ಯಾನದಾನಂದ |
ಕಡಲೊಳಾಳುತ್ತಿರಲ್ಕಾ ಸುಧನ್ವನ ಕಂಡು ಬೆರಗಾದರಖಿಳ ಜನರು         ||೨೮೦||

ರಾಗ ಕಲ್ಯಾಣಿ ಝಂಪೆತಾಳ
ಹರಿಭಕ್ತರಿಂಗಿನ್ನು ಸರಿಗಾಣೆ ನಾನು |
ಧರಣೀಶ ನಿನ್ನೊಳ್ ನಿಧಾನಿಸೈ ನೀನು || ಪ ||

ಕುಂಭಿನೀಸುರ ಲಿಖಿತ ಕಂಡು ಖತಿಗೊಳುತಗ್ನಿ |
ಸ್ತಂಭವನು ಬಲ್ಲನಿವನೆನುತ ಕಡು ಮುಳಿದು ||
ಮುಂಬರಿದು ಎಳೆನೀರ್ಗಳುದಕವನು ಸುರಿಯಲುರಿ |
ಯಂಬರಕೆ ಹಾಯ್ದುದೇನೆಂಬೆ ಗುಳುಗುಳಿಸಿ   ||೨೮೧||

ಛಿಳಿ ಛಿಟಿಲು ಛಿಟಿಲೆಂದು ಸಿಡಿದ ಹನಿಗಳು ಗಂಡ |
ಸ್ಥಳವು ಸುಟ್ಟುದು ಲಿಖಿತನಳುಕಿ ತಾ ತೊಲಗೆ ||
ಬಳಿಕಾ ಸುಧನ್ವ ನಿಶ್ಚಲನಾಗಿ ಹರಿನಾಮ |
ಗಳನು ಜಪಿಸುತಲಿ ನಿರ್ಮಲದೊಳಿರುತಿರ್ದ  ||೨೮೨||

ಸುಖದಿಂ ಸುಧನ್ವನಿರಲೀಕ್ಷಿಸುತಲಾಗಲಾ |
ಲಿಖಿತನರಿತನು ಮನದಿ ಶ್ರೀ ಕೃಷ್ಣನ ||
ಭಕುತನಿವನಹುದೀತನಿಂಗೆ ದ್ರೋಹವ ಗೆಯ್ದೆ |
ಯುಕುತ ದೇಹಕೆ ಪ್ರಾಯಶ್ಚಿತ್ತವಿಧಿಗೆಂದ        ||೨೮೩||

ಹಾರಿದನು ತಪ್ತತೈಲದೊಳಾಗ ಬಳಿಕಲ್ಲಿ |
ತೋರೆ ತಂಪಚ್ಯುತನ ಶರಣಸಂಗದೊಳು ||
ಧಾರಿಣೀಸುರ ಹಿಮದಿ ನಡುಗಿ ಭಯಗೊಂಡು ಹರಿ |
ನಾರಾಯಣನ ಸ್ಮರಿಸುತಿರಲು ಸೌಖ್ಯದೊಳು ||೨೮೪||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಖ್ಯಾತನಹ ಹರಿಭಕ್ತಸಂಗವು | ಏತರತಿಶಯವಾಯ್ತೊ ಲಿಖಿತಗೆ |
ಶೀತಲವದಾಯ್ತುರಿವ ಎಣ್ಣೆಯು | ಭೂತಳೇಶ ||೨೮೫||

ಕೇಳಿ ವಿಸ್ಮಿತನಾಗಿ ಮಂತ್ರಿ ಜ | ನಾಳಿಯೊಡನಯ್ತಂದನಾಗ ಮ |
ರಾಳಧ್ವಜನೀಕ್ಷಿಸಿದನೀರ್ವರ | ಮೇಳವಿಹುದು  ||೨೮೬||

ಸುತಪುರೋಹಿತರಿಬ್ಬರನು ತೆಗೆ | ಸುತ ಕುಮಾರನನಪ್ಪುತೆಂದನು |
ಸುತನೆ ನಿನ್ನುಳುಹಿದನೆ ದೇವಕಿ | ಸುತನು ಇಂದು      ||೨೮೭||

ಅಚ್ಯುತನ ನಿರ್ಮಲ ಮನದಿ ನೀ | ಮೆಚ್ಚಿಸಿದನೆಂಬೀ ಪರೀಕ್ಷೆಯ |
ಎಚ್ಚರಿಕೆಯರಿಯದೆ ಮರುಳ್ತನ | ಹೆಚ್ಚಿತೆನಗೆ   ||೨೮೮||

ಆದರೊಳ್ಳಿತು ಮಗನೆ ಕೀರ್ತಿಯ | ಸಾಧಿಸಿದೆ ಲೋಕದೊಳು ನಿನಗೆಣೆ |
ಯಾದ ಸಾಧುಗಳಿಲ್ಲವೆಂದನು | ಮೇದಿನೀಶ   ||೨೮೯||

ಆರ್ಯ ಸವಾಯ್
ಉರಿವೆಣ್ಣೆಯನುಂ ಪೊಗುತೈತಂದಿಹ |
ತರುಣ ಪುರೋಹಿತರನು ಸಹಿತ ||
ಅರಸನು ಮನ್ನಿಸಲಾತನೊಡನೆಮತಿ |
ಹರುಷದಿ ಪೇಳ್ದನು ತಾ ಲಿಖಿತ        ||೨೯೦||

ರಾಗ ಆನಂದಭೈರವಿ ಏಕತಾಳ
ಹಂಸಕೇತನನೆ ನಿನ್ನ | ಸಂಭವನಿಂದ | ವಂಶವುದ್ಧರಿಸಿತಿನ್ನಾ ||
ಸಂಶಯವೇನು ಬೇಡ | ಈತನು ಮುರ | ಧ್ವಂಸಿಕಿಂಕರನು ನೋಡಾ       ||೨೯೧||

ಆಡುವುದೇನಿದೆಲ್ಲ | ನಿನ್ನಯ ನಾಡು | ಬೀಡು ಪರಿವಾರವೆಲ್ಲ ||
ಪಾಡಾಗಿ ಧರಣಿಯಲಿ | ಧನ್ಯರು ಖಯ | ಖೋಡಿಯಿಲ್ಲಿಂದಿನಲಿ   ||೨೯೨||

ಎನಲ್ಕಾತನನು ನಿಲಿಸಿ | ಪೇಳ್ದನು ಶಂಖ | ಘನ ಹರುಷವ ಧರಿಸಿ ||
ಜನಪ ಕೇಳ್ ತವಸುತನು | ತಾ ಜಗತ್ಪಾ | ವನ ಕೀರ್ತಿ ವಿಖ್ಯಾತನು       ||೨೯೩||

ತಳುವದೇತಕೆ ಈತನ | ನೇಮವನಿತ್ತು | ಕಳುಹಿಸಿ ಕೊಡು ಪಾರ್ಥನ ||
ದಳವನೆ ನಿರ್ಣಯಿಸಿ | ವಾಜಿಯ ತಹ | ಕೊಳಗುಳದಲಿ ಜಯಿಸಿ ||೨೯೪||

ಎಂದ ಮಾತಿಗೆ ಭೂಪನು | ಹಿಗ್ಗುತ ಸಾ | ನಂದದಿ ವೀಳ್ಯವನು ||
ಕಂದನಿಗೀಯಲಾಗ | ಸನ್ನಹವಾಗಿ | ಬಂದನು ರಣಕೆ ಬೇಗ       ||೨೯೫||

ವಾರ್ಧಕ
ಅರಸ ಕೇಳ್ ಬಳಿಕ ಹಂಸಧ್ವಜಂ ತನ್ನಣುಗ |
ಗೆರೆಸಿ ಪನ್ನೀರ ನವರತ್ನ ಭೂಷಣ ದಿವ್ಯ |
ಸುರುಚಿರಾಂಬರದಿಲಂಕರಿಸಿ ನರನಾಹವಕೆ ಪೊರಟನತಿ ಸಂಭ್ರಮದೊಳು ||
ವರ ಸುಧನ್ವನು ಪಿತನಿಗೆರಗಿ ಪರಕೆಯ ಗೊಂಡು |
ಗುರು ಶಂಖಲಿಖಿತರಿಗೆ ಮಣಿದು ವಂದನೆ ಗೆಯ್ದು |
ಹರುಷದಿಂ ಶಸ್ತ್ರಾಸ್ತ್ರ ಕೈಗೊಂಡು ತ್ವರಿತದಿಂ ರಥವೇರಿ ಪೊರಮಟ್ಟನು     ||೨೯೬||

ಸುತ್ತ ಪದ್ಮವ್ಯೂಹಮಂ ರಚಿಸಿ ನಡುವೆ ನರ |
ನುತ್ತಮ ತುರಂಗಮಂ ಕಟ್ಟಿ ಕಾಳಗಕೆ ಭಟ |
ರೊತ್ತಾಗಿ ನಿಂದರರಿವೀರರಂ ಬರಪೇಳೇನುತ್ತರಸನಾಜ್ಞೆಯಿಂದ ||
ಇತ್ತ ಪಾರ್ಥಂಗೆ ಚರರಯ್ತಂದು ನುಡಿದರೀ |
ವೃತ್ತಾಂತಮಂ ಬಳಿಕ ಪ್ರದ್ಯುಮ್ನನಂ ಕರೆದು |
ಮತ್ತೆ ಬಂದುದು ವಿಘ್ನಮಿದಕಿನ್ನುಪಾಯವೇನೆಂದೊಡವನಿಂತೆಂದನು       ||೨೯೭||

ರಾಗ ಶಂಕರಾಭರಣ ಅಷ್ಟತಾಳ
ಇಂದುಕುಲಜ ಲಾಲಿಸಯ್ಯ | ಇನಿತ್ಯಾಕೆ ಚಿಂತೆ ||
ಬಂದುದ ನಾ ನೋಡಿಕೊಂಬೆ | ಬಣಗು ನೃಪರೊಳ್ಮುಂತೆ          ||೨೯೮||

ನಿನ್ನ ಕಳುಹಿಸುವಾಗಲೆ | ನೀರಜಾಕ್ಷ ತಾನೊಲಿದು ||
ಎನ್ನನಟ್ಟಿದನಲ್ಲಾ ಈ | ಯeಶ್ವದಾರೈಕೆಗೆ      ||೨೯೯||

ಪನ್ನಗಾರಿಯನನಿತ್ತ | ಪ್ಪಣೆಯ ಹಿಂಗದೆ ತಾನು ||
ಮನ್ನಿಪನಲ್ಲದೆ ಮನದೊ | ಳನ್ಯವೆಣಿಸಬಹುದೆ            ||೩೦೦||

ಅಮಿತ ವಿಕ್ರಮದಿ ಬಂದ | ಅಖಿಳ ವೈರಿಬಲವನ್ನು ||
ಸಮರಭೂಮಿಗೌತಣವ | ಸಲಿಸಿ ಖಯಕೋಡಿಯಿಲ್ಲದೆ  ||೩೦೧||

ನಿಮಿಷದೊಳ್ವಾಜಿಯ ತಂದು ನಿ | ನ್ನಡಿಯೊಳೊಪ್ಪಿಸುವೆನು ||
ಗಮಕದಿ ನಿಂತು ನೋಡೆನ್ನ | ಅಗಣಿತ ಪರಾಕ್ರಮವೀಗ            ||೩೦೨||

ರಾಗ ಕೇತಾರಗೌಳ ಅಷ್ಟತಾಳ
ತಾತ ಚಿತ್ತೈಸು ಗೋಷ್ಪದಜಲಕ್ಹರಿಗೋಲ | ದ್ಯಾತಕಿಂದಿನಲಿ ತನ್ನ ||
ಜಾತನಾನಿರಲು ಸೇನೆಯ ನೋಯಿಸುವುದಿದು | ನೀತವೆ ಪೇಳು ಜೀಯ ||೩೦೩||

ಇವರೆಲ್ಲರನು ತೆಗೆಸೆನಗಪ್ಪಣೆಯ ನೀಡಾ | ಹವದೊಳು ಪರಬಲವ ||
ಸವರಿಸಿ ತುರಗವ ತಹೆನಲ್ಲದಿರೆ ಕರ್ಣ | ಕುವರನೆ ತಾನೆಂದನು ||೩೦೪||

ಎನುತರ್ಜುನನೊಳಪ್ಪಣೆಯಗೊಂಡು ವೃಷಕೇತು | ಘನವರೂಥವನಡರಿ ||
ಮುನಿದು ಪೇರಡವಿಗೈದುವ ದಾವಾಗ್ನಿಯವೊಲು | ಕನಲ್ದರಿಬಲವ ಪೊಕ್ಕ ||೩೦೫||

ರಾಗ ಪಂತುವರಾಳಿ ಮಟ್ಟೆತಾಳ
ಸೂರ್ಯಸುತನ ಸುತನು ರಥವ | ನೇರಿ ತವಕದಿಂದ ಬರುವ |
ಕ್ರೂರತನವನಾ ಸುಧನ್ವ | ದೂರದಿಂದ ಕಂಡು ಪೃಥೆಕು |
ಮಾರನೀತನಲ್ಲವೆನ್ನುತ || ವೃಷಧ್ವಜನ |
ವೀರನೀತನಾರುಯೆನ್ನುತ | ಮುದದಿ ತನ್ನ |
ತೇರನಿದಿರು ನಡೆಸಿ ನಿಲಿಸುತ | ತಿರುಹ ಬಿಲ್ಲಿ |
ಗೇರಿಸುತಲೆ ಕಣೆಯ ತಿರುಹುತ | ನಗುತ ನುಡಿದ |
ನೆಲವೊ ನೀನದಾರ ಕುವರನು | ನಿನ್ನ ಪೆಸರು | ಇಳೆಗೆದಾವ ಋಷಿಯ ಪ್ರವರನು  ||೩೦೬||

ಚಂಪಕಾಪುರಾಧಿಪತಿ ನಿ | ಶ್ಯಂಕ ಹಂಸಧ್ವಜಕುಮಾರ |
ನಾಂ ಪೆಸರು ಸುಧನ್ವನೆಂದು | ಸೊಂಪಿನಿಂದ ಕರೆವರೆನ್ನ |
ಗುಂಪಿನುಚಿತ ಪ್ರವರ ಕೇಳಿದು || ಮಧುಚ್ಛಂದನ ಪ |
ರಂಪೆಯ ವಂಶ ನಮ್ಮದು | ಅರಿಗಳೆದೆಯ |
ಬಿಂಪುಗಳನು ರಣದಿ ತರಿವುದು | ಎಂದು ಧರೆಯೊ |
ಳಂ ಪೆಸರ್ವಡೆದು ಮೆರೆವುದು | ಛಲದ ಬಿರುದು |
ಎಲವೊ ನೀನದಾರ ಕುವರನು | ನಿನ್ನ ಪೆಸರು | ಇಳಿಗೆದಾವ ಋಷಿಯ ಪ್ರವರನು   ||೩೦೭||

ಅಳುಕದಹಿತರೊಡನೆ ಕಾದಿ | ಗೆಲಿದು ಮೆಚ್ಚಿಸಬೇಕಲ್ಲದೆ |
ಕುಲದ ಬೆಡಗನುಸಿರೆ ಕೇಳಿ | ಕಲಿಗಳಳುಕುವರೆ ಕೇಳಾದ |
ಡೆಲವೊ ಕಾಶ್ಯಪಾ ಮುನೀಶನ || ವಂಶರಾವು
ಜಲಜಮಿತ್ರಪುತ್ರ ಕರ್ಣನ | ಕಂದ ಲೋಕ |
ದೊಳಗೆಯೆನ್ನ ವೃಷಭಕೇತನ | ನೆಂದು ಕರೆವ |
ರೊಲಿದು ದೇವಕಿಯ ನಂದನ | ಫಲುಗುಣನ |
ಕುದುರೆಯನ್ನು ಕಟ್ಟಿ ಕೆಡದಿರು | ಬಂದು ನರನ | ಪದದೊಳೆರಗಿ ಬದುಕಿಕೊಂಡಿರು |            ||೩೦೮||

ಬಿಡೆವು ನಾವಿನ್ನಶ್ವವನ್ನು | ಕೆಡುವ ನಿಮ್ಮ ಧರ್ಮಸುತನು |
ಜಡಜನೇತ್ರ ಜಗದಿ ಭಕ್ತ | ರೊಡೆಯನಲ್ಲದರ್ಜುನಗೆ ವಿಂ |
ಗಡಿಸಿ ಕೊಟ್ಟರುಂಟೆ ಪೇಳಿನ್ನು || ನಿನ್ನನೀಗ
ಬಡಿದು ರಣದಿ ಬೀಳಹೊಯ್ವೆನು | ನಿಮ್ಮವರನು |
ಬಿಡದೆ ಯಮನ ಬಳಿಯೊಳಿಡುವೆನು | ನರನ ಬಿಂಕ |
ಬಿಡಿಸಿ ಹರಿಯ ಬರಿಸಿಕೊಂಬೆನು | ನೋಡೆನುತ್ತ |
ಕಡಿದ ವೃಷಧ್ವಜನ ಧನುವನು ನೋಡೆನುತ್ತ | ಕಡಿದ ವೃಷಧ್ವಜನ ಧನುವನು         ||೩೦೯||

ರಾಗ ಮಾರವಿ ಏಕತಾಳ
ಭೂತಳೇಶ ಜನನಾಥ ಕೇಳು ವೃಷ |
ಕೇತು ಸುಧನ್ವರ ನೂತನ ರಣವ || ಭೂತ || ಪ ||

ಕರದ ಚಾಪ ಕತ್ತರಿಸಲು ಕೋಪದಿ | ಮೊರೆವುತ ಪೊಸ ಧನು ಶರಗಳ ಕೊಂಡತಿ |
ತ್ವರಿತದಿ ಶರಗಳ ಸುರಿದು ಸುಧನ್ವನ | ಕರಿ ರಥ ತುರಗಗಳ ತರಿದನು ರಣದಿ ||   ||೩೧೦||

ಹೊಡೆದಶ್ವಗಳಡಗೆಡಹಿದ ಸೂತನ | ಕೆಡಹಿದ ಸಿಂಧವ ಪುಡಿಗೆಯ್ದನು ರಥ |
ದೊಡನೆ ಚಾಪಮಿಕ್ಕಡಿ ಮಾಡುತವನ | ಒಡಲೊಳಗಂಬನು ನಡೆಸಿದ ಬಿಡದೆ ||     ||೩೧೧||

ಮಸೆಗಾಣಿಸಿ ರೋಷಿಸುತ ಸುಧನ್ವನು | ಪೊಸ ರಥವೇರಿ ಗರ್ಜಿಸಿ ಬಿಲ್ಗೊಂಡೆ |
ಬ್ಬಿಸಿದ ಸರಳ್ಗಳ ಮುಸುಕುತಾ ಕ್ಷಣದೊಳು | ವೃಷಕೇತುವಿನ ಸಾಹಸವ ನಿಲಿಸಿದ ||            ||೩೧೨||

ಧೀರ ನೀ ಕರ್ಣಕುಮಾರನಹುದೊ ಬಲು | ವೀರನಾದರೆ ಇದ ಸೈರಿಸೆನುತ ಮಹ |
ಕೂರಲಗೊಂದನು ತೂರಿದನೆದೆಯನು | ಡೋರುಗಳೆದು ಶರ ಪಾರುಗಾಣಿಸಿತು ||             ||೩೧೩||

ವಾರ್ಧಕ
ರಣಪರಾಕ್ರಮಿ ಸುಧನ್ವನ ಶರಹತಿಗೆ ಕರ್ಣ |
ತನಯ ಮೆಯ್ ಮರೆಯಲಾತನ ಸೂತನರಿವುತಾ |
ಕ್ಷಣದಿ ತಿರುಹಲು ರಥವ ಹಿನ್ನೆಲೆಗೆ ಬಳಿಕಲದ ಕಂಡು ಕಡು ರೋಷದಿಂದ ||
ಕನಕರಥವೇರಿ ಕಾರ್ಮುಕವನೊದರಿಸಿ ಪ್ರದ್ಯು |
ಮ್ನನು ನಡೆಯಲಾಹವಕೆ ಕಂಡಾ ಸುಧನ್ವ ಕೇ |
ತನದ ಕುರುಪಿಂದವಂ ಕೃಷ್ಣಸುತನೆಂದರಿದು ಇದಿರಾದನತಿ ತವಕದಿ       ||೩೧೪||

ರಾಗ ಶಂಕರಾಭರಣ ಮಟ್ಟೆತಾಳ
ಕಲಿ ಸುಧನ್ವ ಕಡುಗಿ ರಥವ | ನಿಲಿಸಿ ಶರವ ತೂಗುತೆಂದ |
ನೆಲೆ ಪ್ರದ್ಯುಮ್ನ ನಿನ್ನ ಬಾಣ | ಗಳಿಗೆ ಸ್ತ್ರೀಯರು ||
ಬಳಲ್ವರಲ್ಲದೆ ಭಾರಿಭುಜದ | ಗ್ಗಳಿಕೆಯುಳ್ಳ ವೀರರ್ ನಿನಗೆ |
ಅಳುಕರ್ ನೋಡೆನುತ್ತ ಸುರಿದ | ಬಲು ಶರಂಗಳ       ||೩೧೫||

ಶರಗಳಿಂದ ಶರಗಳನ್ನು | ತರಿವುತೆಂದನೆಲವೊಗಲ್ದ
ಪುರುಷಪ್ರಕೃತಿಗಳನು ತನ್ನ | ಉರುತರಾಸ್ತ್ರದಿ ||
ಬೆರಸುತೊಂದುಗೊಳಿಪೆ ಕೇಳ್ಸಂ | ಗರದೊಳಿದಿರಾಂತವರ ಸುರರ |
ಪುರಿಗಟ್ಟುವೆ ನೋಡೆನುತ ಸುರಿದ | ಸರಳಸಾರವ      ||೩೧೬||

ಪರಮ ಭಾಗವತರು ನಾವು | ಸುರರ ಹಂಗಿಲ್ಲೆಮಗೆ ನೀನು |
ಸುರತನುವನು ಶಿವನ ಫಣೆಗ | ಣ್ಣುರಿಗೆ ಒಪ್ಪಿಸಿ ||
ಮರಳಿ ಮನುಜನಾದೆ ನಿನ್ನ | ಸುರರ ಕೂಡಿಸುವೆನುಯೆಂದು ||
ಸರಳ ಕಡಿದು ಸುರಿದನಮಿತ | ಶರದ ಮಳೆಗಳ         ||೩೧೭||

ಫಡಫಡೆನುತಸ್ತ್ರಗಳ ಕಡಿದು | ನುಡಿದನೆಲೊ ಪರೋಪಕಾರ |
ಕೊಡಲನಿತ್ತೆ ಶಿವನ ಗಿರಿಜೆ | ಯೊಡಗೂಡಿಸಿದೆನು ||
ಮೃಡತಪಾರಿಯೆಂಬ ಪೆಸರ | ಪಡೆದೆ ನಿನ್ನ ತರಿದು ಪೆಸರ |
ಪಡೆವೆನೆಂದು ಸುರಿದನಾಗ | ನಿಡು ಸರಳ್ಗಳ ||೩೧೮||

ಕಡಲಶಾಯಿಯಣುಗನೆಂಬ | ಬಿಡೆಯಕಾನು ಇನಿತು ಕಯ್ಯ |
ತಡೆದೆ ವೀರನಾದೆಯೆನುತ | ಲೊಡನೆ ಕೋಪದಿ ||
ಜಡಿದು ದಿವ್ಯ ಶರವ ಕರ್ಣ | ಜಿಡಿಕೆಗೆಳೆದು ಬಿಡಲು ನೊಂದು |
ಅಡಚಿ ಮೂರ್ಛಿಸುತ್ತ ಮದನ | ನೊಡಲ ಮರೆದನು     ||೩೧೯||

ಭಾಮಿನಿ
ಧರಣಿಪತಿ ಕೇಳ್ದೈ ಸುಧನ್ವನ |
ಶರಹತಿಗೆ ಸೈರಿಸದೆ ಮೂರ್ಛೆಗೆ |
ಸ್ಮರನು ತೆರಳಲು ಕಾಣುತಾ ಕೃತವರ್ಮನಿದಿರಾದ ||
ಧುರದೊಳಾತನ ಪರಿಭವಿಸಿ ಸಂ |
ಗರದಿ ಸಾತ್ಯಕಿಯನ್ನು ಸೋಲಿಸ |
ಲರಿತು ಕೋಪಾಟೋಪದಿಂದಿದಿರಾದನನುಸಾಲ್ವ        ||೩೨೦||