ಶಾರ್ದೂಲವಿಕ್ರೀಡಿತಂ
ಪಾತ್ರೇ ಬ್ರಾಹ್ಮಣಗೋಧನಂ ನಿಶಿಪರಂ ಯಾತ್ರೇ ಚ ತೀರ್ಥಸ್ಥಳೀಃ
ಪಾತ್ರಾಯಾತ್ಮಸುಸೌಹದಸ್ಯ ಹದಯೇ ಧ್ಯಾತ್ರೇರ್ಜುನಾಯಾದರಾತ್ |
ಧಾತ್ರೇ ಸ್ವೀಯವಚೋಭಿರೇವ ಯಮಿನಾಂ ವೇಷಂ ಸುಭದ್ರಾಂ ಗಹೇ
ಸ್ಥಾತ್ರೇ ಸಂಘಟಯನ್ ವಿವಾಹವಿಧಿನಾ ನಸ್ತ್ರಾಯತಾಮಚ್ಯುತಃ ||
ಕಂದ
ಶ್ರೀಮಹಿಳೆಯ ಮನದೋಪಂ |
ಸಾಮಜವರದ ಸುರೇಂದ್ರವಂದಿತ ಚರಣಂ ||
ಶ್ಯಾಮಲಕೋಮಲಗಾತ್ರಂ |
ಕಾಮಿತಫಲವಿತ್ತು ಕರುಣದಿಂ ಪೊರೆಗೆಮ್ಮಂ ||1||
ರಾಗ ನಾಟಿ ರೂಪಕತಾಳ
ಶ್ರೀಗಜಮುಖ ಗಣನಾಯಕ | ಭೋಗಿವಿಭೂಷಣ ಕರುಣಾ |
ಸಾಗರ ಸದ್ಗುಣಯುತ ಸಕ | ಲಾಗಮನಿಗಮಜ್ಞ ||
ಯೋಗಿಜನಾನತಪದಯುಗ | ಭಾಗವತಪ್ರಿಯ ನೀನೆಮ |
ಗೀಗಳೆ ನಿರ್ವಿಘ್ನತೆಯನು | ಬೇಗದಿ ಕರುಣಿಪುದು | ಶ್ರೀಗಣಪತಿ ಶರಣು ||2||
ಪರಿಕಿಸಲಾವಗೆ ಭೂ ರಥ | ತರಣೀಂದುಗಳೇ ಗಾಲಿಯು |
ಸರಸಿಜಭವನೇ ಸಾರಥಿ | ಸುರಗಿರಿಯೇ ಧನುವು ||
ಹರಿಯೇ ಬಾಣವು ಸಿಂಜಿನಿ | ಯುರಗೇಂದ್ರನು ತಾನಾಗಿರೆ |
ವರ ಲೋಕಾಧೀಶನ ಸಿರಿ | ಚರಣಕೆ ವಂದಿಸುವೆ ||3||
ಕುಳಿರ್ವೆಟ್ಟಿನ ಕುವರಿಯ ಪದ | ನಳಿನಕೆ ತಲೆವಾಗುತ ಸಿರಿ |
ಲಲನೆಗೆ ವಂದಿಸಿ ವಾಣಿಯ | ನಲವಿಂದಲಿ ಸ್ಮರಿಸಿ ||
ನಳಿನಜ ಸುರಪಾದ್ಯಮರಾ | ವಳಿಗೆರಗುತ ಗುರುಹಿರಿಯರ |
ಬಲಗೊಂಡುಸಿರುವೆ ನಾನೀ | ಚೆಲುವಹ ಸತ್ಕಥೆಯ ||4||
ವಾರ್ಧಕ
ಮುನಿರಾಯದ್ವೈಪಾಯನಂಗೆರಗಿ ಸಕಲ ಕವಿ |
ಜನರೊಲುಮೆಯಂ ಪಡೆದು ಭಾರತಕಥಾಬ್ದಿಯೊಳ್ |
ವನಜಾಂಬಕಂ ಕಪೆಯೊಳೊಲಿದು ತನ್ನನುಜೆ ಸೌಭದ್ರೆಯಂ ಫಲುಗುಣಂಗೆ ||
ವಿನುತ ವೈವಾಹಮಂ ವಿರಚಿಸಿದುದಂ ಧರೆಯ |
ಜನರರಿಯೆ ಸಂಗ್ರಹಿಸಿ ಯಕ್ಷಗಾನದೊಳೊರೆವೆ |
ನನುನಯದಿ ಗೋಷ್ಠಪುರದೊಡೆಯನಾಗಿಹ ಲೋಕನಾಥನ ಕಟಾಕ್ಷದಿಂದ ||5||
ವಚನ
ಈ ಪ್ರಕಾರದಿಂ ದೇವತಾಪ್ರಾರ್ಥನೆಯಂ ಮಾಡಿ ತತ್ಕಥಾಪ್ರಸಂಗಮಂ ಪೇಳ್ವೆನದೆಂತೆನೆ –
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅನಘಮತಿ ಜನಮೇಜಯನು ಸ | ನ್ಮುನಿಪ ವೈಶಂಪಾಯನನ ಪದ |
ವನರುಹಕೆ ತಲೆವಾಗಿ ಪೇಳ್ದನು | ವಿನಯದಿಂದ ||6||
ಎಲೆ ಮುನಿಪ ಮುರುಹರನು ಕರುಣದೊ | ಳೊಲಿದು ತನ್ನನುಜಾತೆಯಾಗಿಹ |
ಜಲಜಮುಖಿ ಸೌಭದ್ರೆಯನು ವರ | ಫಲುಗುಣಂಗೆ ||7||
ಪರಿಣಯವನಾವಂಗದಿಂದಲಿ | ವಿರಚಿಸಿದನೆಂತೆನಗೆ ನೀವದ |
ನರುಹಬೇಕೆನೆ ಪೇಳ್ದನಾ ಮುನಿ | ವರನು ಮುದದಿ ||8||
ರಾಗ ಭೈರವಿ ಝಂಪೆತಾಳ
ಲಾಲಿಸೈ ಧಾರಿಣೀ | ಪಾಲ ಸದ್ಗುಣಶೀಲ |
ಪೇಳುವೆನು ಮುರಹರನ | ಲೀಲೆಯನು ಮುದದಿ ||9||
ಅರಗಿನಾಲಯದಿಂದ | ಪೊರೆದು ಗಂಟಿಕ್ಕಿದನು |
ವರಪಾಂಡುಪುತ್ರರಿಗೆ | ತರುಣಿ ದ್ರೌಪದಿಯ ||10||
ಭಗಿನಿ ಸೌಭದ್ರೆಯನು | ಸುಗುಣ ಪಾರ್ಥನಿಗೀವ |
ಬಗೆಯೊಳಿರ್ದನು ಹರಿಯು | ಮಿಗೆ ದ್ವಾರಕೆಯಲಿ ||11||
ರಾಗ ಮಧುಮಾಧವಿ – ತ್ರಿವುಡೆತಾಳ
ಪೃಥ್ವಿಪಾಲಕ ಕೇಳು ಮುರಹರ | ನಿತ್ತಲೀ ಪರಿಯಿಂದಲಿರುತಿರ |
ಲತ್ತ ಪಾಂಡುಕುಮಾರರಿಂದ್ರ | ಪ್ರಸ್ಥಪುರದೊಳಗಿರ್ದರು | ತೋಷದಿಂದ ||12||
ಘನಪರಾಕ್ರಮಿಯೆನಿಪ ಭೀಮಾ | ರ್ಜುನನಕುಲಸಹದೇವರೆಂಬೀ |
ಯನುಜರಿಗೆ ಸತಿ ದ್ರುಪದಸುತೆ ಸಹ | ಘನತರೋತ್ಸಹದಿಂದಲಿ | ಶೋಭಿಸಿದರು ||13||
ಭೂರಿ ವೈಭವದಿಂದಲಿಂತಾ | ಧಾರಿಣಿಪನಿರಲೊಂದು ದಿದಲಿ |
ನಾರದನು ನಡೆತಂದನಲ್ಲಿಗೆ | ಮಾರಜನಕನ ನಾಮವ | ಕೀರ್ತಿಸುತಲಿ ||14||
ಮತ್ತೇಭವಿಕ್ರೀಡಿತಂ
ಸುರಮೌನೀಶನನೀಕ್ಷಿಸುತ್ತ ಧರಣೀಪಾಲೇಂದ್ರ ಧರ್ಮಾತ್ಮಜಂ |
ಕರೆತಂದರ್ಚಿಸಿ ಪಾದಪದ್ಮಯುಗಕಂ ಮೆಯ್ಯಿಕ್ಕಿ ಸದ್ಭಕ್ತಿಯಿಂ ||
ಎರಗಲ್ ದತ್ತಸುಪೀಠವೇರಿ ಬಳಿಕಂ ಕುಳ್ಳಿರ್ದು ಸನ್ಮೌನಿಯುಂ |
ನೆರೆ ಮಂದಸ್ಮಿತದಿಂದ ಭೂಪತಿಯೊಳಂ ಸುಪ್ರೀತಿಯಿಂ ಪೇಳಿದಂ ||15||
ರಾಗ ತೋಡಿ ತ್ರಿವುಡೆತಾಳ
ಕೇಳು ನಪ ಕೆಲವಿಹುದು ನಿನ್ನಲಿ | ಪೇಳತಕ್ಕದು ಬಂದೆನದರಿಂ |
ಪೇಳುವೆನು ನಿನ್ನಂತರಂಗದಲಿ ||
ಆಳುವಿರಿ ಹರನಾಜ್ಞೆಯಿಂದಲಿ | ಲೋಲಲೋಚನೆಯೋರ್ವಳನು ನೀ |
ವಾಲಿಸಿಂದಿನ್ನಿಹುದು ಮತ್ತಲ್ಲಿ ||16||
ವರುಷಕೋರೋರುವರೆ ನಾಲ್ಕೈ | ವರು ಸಮಾನದಿ ಆಳ್ವುದಲ್ಲದೆ |
ಬೆರಕೆಯಲಿ ನೀವಿಂತು ರಚಿಸಲ್ಕೆ ||
ವಿರಸವಹುದದರಿಂದ ಹಿಂದಕೆ | ವರ ತಿಲೋತ್ತಮೆಗಾಗಿ ಪ್ರಾಣವ |
ತೊರೆದರಾ ಸುಂದೋಪಸುಂದರು ||17||
ಅದರಿನೀವೊಂದೊಂದು ವತ್ಸರ | ವಿಧುಮುಖಿಯನೋರೋರ್ವರಾಳ್ವುದು |
ಹದನವಿದು ಮತ್ತಾವನಾದರೂ ||
ಸುದತಿಪುರುಷರ ಸಜ್ಜೆ ಹೊಕ್ಕಡೆ | ವಿದಿತ ವತ್ಸರ ಭೂ ಪ್ರದಕ್ಷಿಣೆ |
ಗೊದಗಿ ಪೋಗಲು ಬೇಹುದವನೆಂದ ||18||
ವಾರ್ಧಕ
ಇಂತೆಂದು ನಾರದಂ ಪೇಳ್ದಮರನಗರಿಗಂ |
ತಾಂ ತೆರಳಲಿತ್ತಲುಂ ವರ ಧರ್ಮತನಯನ |
ತ್ಯಂತ ಸುಖದಿಂ ತತ್ಪ್ರಕಾರದಿಂ ದ್ರುಪದಾತ್ಮಜೆಯನಾಳುತಿಹ ಸಮಯಕೆ ||
ಪಂಥದಿಂ ಚೋರರೆಯ್ತಂದಗ್ರಹಾರಮಾ |
ದ್ಯಂತಮಂ ಸುಲಿವುತಿರೆ ಬೆದರಿ ಬಾಯಾರುತ್ತ |
ದಂತಿವಾಹನನ ಸುತನಿರ್ಪಲ್ಲಿಗೆಯ್ತಂದು ದೂರಿದುದು ವಿಪ್ರತತಿಯು ||19||
ರಾಗ ಸಾರಂಗ ಅಷ್ಟತಾಳ
ಲಾಲಿಸು ವೀರ ಪಾರ್ಥ | ಚೋರರು ನಮ್ಮ | ನಾಳಿಗೊಂಡಪರು ವ್ಯರ್ಥ ||
ಪೇಳಲೇನೂರೊಳು | ಪಾಳೆಯ ಬಿಟ್ಟಿೆ |
ಗೂಳೆಯ ತೆಗೆದಿದೆ | ಗೋಳಾಟ ತಳೆದಿದೆ ||20||
ಮನೆಯ ಸಂಬಾರಗಳ | ಬೇಕಾಗಿಹ | ಧನ ಧಾನ್ಯ ಒಡವೆಗಳ ||
ವಿನುತ ಸುವಸ್ತು ಗೋ | ಕನಕ ಭೂಷಣಗಳ |
ಗಣನೆಯಿಲ್ಲದೆ ಒಯ್ವ | ರಣಕಿಸುತೆಮ್ಮನು ||21||
ಸೂರೆಗೆಯ್ದಿರುವರನು | ಶಿಕ್ಷಿಸಿ ನಮ್ಮ | ಭೂರಿ ಸರ್ವಸ್ವವನು ||
ಕಾರುಣ್ಯದಿಂದಲಿ | ಕೊಡಿಸಬೇಹುದು ರಣ |
ಧೀರ ನೀನಲ್ಲದಿ | ನ್ನಾರು ರಕ್ಷಿಸುವರು ||22||
ಭಾಮಿನಿ
ಅರಸ ಕೇಳಿಂತೆಂದು ವಿಪ್ರರು |
ಮೊರೆಯನಿಡುತಿರೆ ಕೇಳಿ ಪಾರ್ಥನು |
ಬೆರಳ ಮೂಗಿನೊಳಿಟ್ಟು ಮುಕುಟವ ತೂಗುತಡಿಗಡಿಗೆ ||
ಹರ ಮಹಾದೇವಕಟ ತನಗೀ |
ತೆರದ ಸಂಗತಿಯಾಯ್ತೆ ಹಾಯೆಂ |
ದುರುತರದ ಚಿಂತೆಯಲಿ ತನ್ನೊಳು ತಾನೆ ಯೋಚಿಸಿದ ||23||
ರಾಗ ಘಂಟಾರವ ಏಕತಾಳ
ಏನ ಮಾಡಲಿ ಅಕಟಕಟ ಬತ್ತಳಿಕೆ ಶರ | ಸ್ಥಾನದೊಳಗಿರುವುದೀ ಮಧ್ಯರಾತ್ರೆಯಲಿ ||
ಭೂನಾಥ ದ್ರುಪದಜೆಯರು ಮಲಗಿಹರಲ್ಲಿ | ನಾನೆಂತು ಪೋಪೆನಾಕಸ್ಮಿಕದಿಂದ ||24||
ಸತಿಪತಿಯರ ಸಜ್ಜೆ ಹೊಕ್ಕಡೆ ಪಾಪಕ್ಕೆ ಹರ | ಚಿತವಿರ್ಪುದೊಂದು ವತ್ಸರ ತೀರ್ಥಾಚರಣೆ ||
ಅತುಳ ವಿಪ್ರರ ಕಾಯದಿರ್ದಡೆ ಪಾಪಕ್ಕೆ | ಪ್ರತಿಕೂಲವನು ಕಾಣೆನಾವ ಶಾಸ್ತ್ರದೊಳು ||25||
ವರುಷವೊಂದಾದರು ರಚಿಸಿ ತೀರ್ಥವ ಮಿಂದು | ದುರಿತವ ಕಳೆವೆನಣ್ಣನ ಸಜ್ಜೆ ಪೊಗಲು ||
ಧರೆಯಮರರನು ರಕ್ಷಿಸದಿರಲಾರೆನೆಂ | ದುರುತರದಸ್ತ್ರಮಂದಿರವ ಸಾರಿದನು ||26||
ರಾಗ ಸಾಂಗತ್ಯ ರೂಪಕತಾಳ
ಬಂದು ಸಜ್ಜಾಗಹದೆಡೆಗಯ್ದಿ ಶಸ್ತ್ರವ | ನಂದೊಯ್ದು ಕಂಡು ಶಕ್ರಜನ ||
ನಿಂದು ದೂರದಲಿ ಮಾರಮಣನ ನೆನೆವುತ್ತ | ಲೆಂದನು ಧರ್ಮನಂದನಗೆ ||27||
ಅಣ್ಣ ಕೇಳೆನಗೆ ನಾರದರೆಂದ ತೆರದಿಂದ | ಹಣ್ಣಿತ್ತು ವರ ತೀರ್ಥಾಚರಣೆ ||
ಪುಣ್ಯವಂತನೆ ದ್ವಿಜರಗ್ರಹಾರವನೆಲ್ಲ | ಮಿಣ್ಣನೆ ಚೋರರು ಸುಲಿಯೆ ||28||
ಸಕಲ ವಿಪ್ರರು ಬಂದು ಪೇಳಿದರಾ ಮದ | ಮುಖರ ಶಿಕ್ಷಿಸಿ ಕಾವುದೆನುತ ||
ಸುಕರ ಶಸ್ತ್ರಗಳು ಇಲ್ಲಿರಲು ಕೊಂಡೆನು ಚೋರ | ನಿಕರವೆಲ್ಲವ ಗೆಲ್ವೆನೆಂದು ||29||
ಅದರಿಂದ ಒಂದು ವತ್ಸರ ದೇಶಾಟನೆಯನ್ನು | ಮದಮುಖರನು ಕೊಂದು ಬಳಿಕ ||
ವಿಧಿವಿಧಾನವ ಗೆಯ್ದು ಬಂದಪೆನೆನಗೀಗ | ಮುದದಿಂದ ಪಾಲಿಸಪ್ಪಣೆಯ ||30||
ಕಂದ
ತಮ್ಮನ ನುಡಿಯಂ ಕೇಳುತ |
ಹಮ್ಮಿಯಿಸುತ ಧರ್ಮರಾಯನತಿಶೋಕದೊಳಂ ||
ಧಿಮ್ಮನೆ ಧರೆಯೊಳು ಮೂರ್ಛಿಸು |
ತುಮ್ಮಳಿಕೆಯೊಳಂ ಮರುಗಿದ ಬಹು ಪರಿಯಿಂದಂ ||31||
ರಾಗ ನೀಲಾಂಬರಿ ಏಕತಾಳ
ಇಂತು ಸವನಿಸಿತೆ ವಿಧಿಯು | ತಮ್ಮಾ ತಮ್ಮಾ | ಲಕ್ಷ್ಮೀ |
ಕಾಂತನ ಕರುಣೆಯು ಹೋಯ್ತೆ | ತಮ್ಮಾ ತಮ್ಮಾ ||
ಚಿಂತೆಗೊಡೆಯನಾದೆನಲ್ಲೋ | ತಮ್ಮಾ ತಮ್ಮಾ | ನಿನ್ನ |
ನೆಂತು ಬಿಟ್ಟು ಬಾಳಲಯ್ಯ | ತಮ್ಮಾ ತಮ್ಮಾ ||32||
ತೊರೆದು ಹಸಿವು ತಷೆಗಳನ್ನು | ತಮ್ಮಾ ತಮ್ಮಾ | ವಿಪಿನ |
ಗಿರಿಗಳಲ್ಲಿ ಪೋಪೆಯೆಂತೊ | ತಮ್ಮಾ ತಮ್ಮಾ ||
ವರುಷವೊಂದನು ನೀನೆಂತು | ತಮ್ಮಾ ತಮ್ಮಾ | ದೇಶಾಂ |
ತರದಿ ಕಾಲ ಕಳೆವೆಯೆಂತೊ | ತಮ್ಮಾ ತಮ್ಮಾ ||33||
ಮಹಿಯೊಳಿರುವ ತೀರ್ಥಕೆಲ್ಲ | ತಮ್ಮಾ ತಮ್ಮಾ | ವರುಷ |
ಕಹಹ ಪೋಗಿ ಬರುವೆಯೆಂತೊ | ತಮ್ಮಾ ತಮ್ಮಾ ||
ಸಹಜರೊಳತ್ಯಂತ ಪ್ರಿಯನೆ | ತಮ್ಮಾ ತಮ್ಮಾ | ಬಿಡ |
ಲಿಹೆನೆಂತು ನಾ ನಿನ್ನನಕಟಾ | ತಮ್ಮಾ ತಮ್ಮಾ ||34||
ಭಾಮಿನಿ
ಇಂತು ಮರುಗುವ ಧರ್ಮನಂದನ |
ನಂತರವನೀಕ್ಷಿಸುತ ಸುಮ್ಮನೆ |
ಭ್ರಾಂತಿಯೇಕೈ ವಿಧಿಯ ಬರೆಹವ ಮೀರ್ವರಾರ್ ಜಗದಿ ||
ಕಂತುಜನಕನ ಕರುಣವಿದ್ದರೆ |
ಮುಂತಿದನು ಕಳೆದಯ್ದುವೆನು ನಿ |
ಶ್ಚಿಂತನಾಗೆಂದೊಡಬಡಿಸಿ ಪೊರಮಟ್ಟನಾ ಪಾರ್ಥ ||35||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅಗ್ರಭವನಿಂಗೆರಗಿ ಫಲುಗುಣ | ನುಗ್ರಧನುಶರಗೊಂಡು ಪೊರಟನ |
ತ್ಯುಗ್ರ ಸಾಹಸದಿಂದ ಹರುಷ ಸ | ಮಗ್ರತೆಯೊಳು ||36||
ರಣಪರಾಕ್ರಮಿ ಬರುತ ವಿಪ್ರರ | ಗಣಕೆ ತೋರ್ದಭಯವನು ಚಾಪದ |
ಗುಣವ ಝೇಂಕತಿಗೆಯ್ಯುತಯ್ದಿದ | ನೆಣಿಕೆಗೊಳದೆ ||37||
ಕೇಳಿ ಬಿಲುಠಂಕಾರವನು ಚೋ | ರಾಳಿ ಬೆಂಗೊಟ್ಟೋಡುತಿರೆ ಹೀ |
ಯಾಳಿಸುತ ತಡೆಯೆಂದನಾ ಸುರ | ಪಾಲಸುತನ ||38||
ಭಾಮಿನಿ
ಅರರೆ ಚೋರಕಿರಾತರಿರ ನಡು |
ವಿರುಳು ಭೂಸುರರಗ್ರಹಾರವ |
ತರುಬಿ ಸರ್ವಸ್ವವನು ಕೊಂಡಾವಲ್ಲಿಗಯ್ದುವಿರಿ ||
ಕರುಳ ಬಗಿದೀ ಕ್ಷಣದಿ ನಿಮ್ಮನು |
ದುರುಳ ಶಾಕಿನಿ ಡಾಕಿನಿಯರಿಗೆ |
ಭರದಿ ಬಲಿಗಳನೀವೆನೆಂದೆನುತೆಚ್ಚನರ್ಜುನನು || ||39||
ರಾಗ ಶಂಕರಾಭರಣ ಮಟ್ಟೆತಾಳ
ಧರಣಿಪಾಲ ಕೇಳು ಬಳಿಕ ನರನ ಶರವನು |
ತರಿಯುತೆಂದನಾಗಲಾ ಕಿರಾತರೆರೆಯನು ||
ಧರಣಿಸುರರ ಸಕಲ ಧನವನೊಯ್ವೆ ನಮ್ಮನು |
ತರುಬಲೀಗ ಕೊಂಬೆ ನಿನ್ನ ಪ್ರಾಣಧನವನು ||40||
ಕಾಯದಾಸೆಯಿರಲು ಬೇಗ ಬಿಟ್ಟು ಮಾರ್ಗವ |
ನ್ಯಾಯ ತೆರದಿ ಪೋದರೀಗ ನಿನ್ನ ಪ್ರಾಣವ ||
ಕಾಯಿದಪೆನು ಪೋಗು ಪೋಗೆನುತ್ತಲಾತನು |
ಬಾಯ ಪೌರುಷವನು ನುಡಿಯೆ ಪಾರ್ಥನೆಂದನು ||41||
ಅರರೆ ಫಡ ಕಿರಾತ ಸಕಲ ಚೋರವರ್ಗದಿ |
ಹಿರಿಯ ಚೋರನಹೆಯೊ ನೀನು ಬರಿಯ ಗರ್ವದಿ ||
ಮೊರೆಯನಿಡುವುದೇಕೊ ಸತ್ತ್ವವಿರಲು ತೋರ್ಪುದು |
ಧುರಸಮರ್ಥನಾವನೆಂದು ಕಡೆಗೆ ಕಾಂಬುದು ||42||
ಎನುತ ಬಾಣವೈದರಿಂದ ವೀರ ಪಾರ್ಥನು ||
ಕನಲಿ ಗರ್ಜಿಸುತ್ತ ಹೊಯ್ದನೇನಂಬೆನು ||
ವಿನುತ ಬಾಣತತಿಯ ಭರಕೆ ಚೋರರೆಲ್ಲರು |
ತನುವ ನೀಗಿ ಶೈಮಿನಿಯ ಪುರವ ಸಾರ್ದರು ||43||
ಕಂದ
ಬಲದಳಿವನು ಕಾಣುತಲಾ |
ಖಳನುರುತರ ಕೋಪದಲುರಿಮಸಗುತ್ತಾಗಳ್ ||
ಕಲಿಪಾರ್ಥನನೀಕ್ಷಿಸುತಂ |
ಬಲಭುಜಮಂ ಪೊಯ್ದು ನುಡಿದನುಮ್ಮಹದಿಂದಂ || ||44||
ರಾಗ ಭೈರವಿ ಏಕತಾಳ
ಎಲೆ ಫಡ ಭಟ ಕೇಳಿತ್ತ | ಬಹು | ಬಲವನು ಸದೆದೆನೆನುತ್ತ ||
ಬಲುತರ ಗರ್ವವಿದೇಕೆ | ನಾ | ನಿಲಿಸುವೆನೊಂದೇ ಕ್ಷಣಕೆ ||44||
ಎನುತೆಚ್ಚಡೆ ಫಲುಗುಣನು | ವರ | ಧನುವಿಂಗಸಮಾಸ್ತ್ರವನು ||
ಘನಪೌರುಷದಿಂ ಪೂಡಿ | ನುಡಿ | ದನು ಮತ್ತಾತನ ನೋಡಿ ||45||
ಅಂತಾದಡೆ ನೀನಿದನು | ಬೇ | ಗಾಂತುಕೊಳೆನುತರ್ಜುನನು ||
ನಿಂತರಿದಾತನ ಶಿರವ | ತಾ | ಸಂತಯಿಸಿದ ದ್ವಿಜಕುಲವ ||46||
ಭಾಮಿನಿ
ಧಾರಿಣೀಸುರರಗ್ರಹಾರವ |
ಸೂರೆಗೊಳುತಿಹ ತಸ್ಕರರ ಯಮ |
ನೂರ ಹೊಂದಿಸಿ ಬಳಿಕ ರವಿಯುದಯದಲಿ ಫಲುಗುಣನು ||
ಸಾರಿ ಗಂಗೆಯ ಮೇಲೆ ಶೇಷ ಕು |
ಮಾರಿ ಲೂಪಿಯನೊಲಿಸಿಯವಳಲಿ
ಚಾರು ಸುತನನು ಪಡೆದು ಮುಂದಕೆ ತೆರಳ್ದನೊಲವಿನಲಿ ||47||
ರಾಗ ಕಾಂಭೋಜಿ ಝಂಪೆತಾಳ
ಪಾರ್ಥೀವಾಗ್ರಣಿ ಕೇಳು ಬಳಿಕಲ್ಲಲ್ಲಿರುವ |
ತೀರ್ಥತೀರ್ಥಂಗಳೆಲ್ಲರಲಿ ||
ಅರ್ತಿಯಲಿ ಮಿಂದು ತಾನಯ್ತಂದು ನೋಡಿದನು |
ಪಾರ್ಥನುರೆ ಸೇತುಬಂಧವನು ||48||
ಬಂದಲ್ಲಿ ರಘುವರ್ಯನಿಂದ ರಚಿಸಿದ ಸೇತು |
ಬಂಧವನು ಕಂಡು ನಸುನಗುತ ||
ಮುಂದೆ ಸೂಕ್ಷ್ಮಾಕಾರದಿಂದ ತಪಿಸುವ ಅನಿಲ |
ನಂದನನ ಕಂಡು ಬೆಸಗೊಂಡ ||49||
ಆರು ವನಚರ ನೀನು ಈ ರೀತಿಯಿಂದಬುಧಿ |
ತೀರದಲಿ ನೆಲಸಿಕೊಂಡಿರುವ ||
ಕಾರಣವ ಪೇಳೆನುತ ವೀರಪಾರ್ಥನು ಕೇಳೆ |
ಮಾರುತಾತ್ಮಜ ನುಡಿದನಾಗ ||50||
ಪ್ರಾಣರೂಪನೆನಿಪ್ಪ ವಾಯುವೇ ಜನಕನ |
ಕ್ಷೀಣಬಲ ಹನುಮನೆಂದೆನುತ ||
ಕ್ಷೋಣಿಯಲಿ ಪೆಸರಾದುದೆನಗೆ ಕೇಳೆನಲು ಸು |
ತ್ರಾಣ ಪಾರ್ಥನು ನುಡಿದ ನಗುತ ||51||
ಹನುಮ ನೀನೆಂದೆಂಬ ತನುವ ನೋಡಿದಡೆ ಬಡ |
ಜುಣುಗಿನಂದದೊಳಿರುವೆಯೇಕೆ ||
ಘನತರದ ಕಾಯಮಾತಂಗೆಂದು ಜನರುಸಿರ್ವ |
ರೆನಲು ಮಾರುತಿಯೆಂದನದಕೆ ||52||
ರಾಗ ಘಂಟಾರವ ಅಷ್ಟತಾಳ
ಕೇಳಯ್ಯ ನಮ್ಮ ತನು ಬಡವಾದುದ |
ಪೇಳಲೇನದ ಹಿಂದೆ ಶರಧಿಗೆ |
ನೀಲ ಸೇತುವ ಕಟ್ಟಲು ||53||
ತಾಳಿ ಪರ್ವತ ಪೊತ್ತು ಕಲ್ಮರಗಳ |
ಸ್ಥೂಲ ದೇಹವು ಸುರುಟಿದುದು ಕೈ |
ಕಾಲುಗಳು ಒಳಸರಿದವು ||54||
ಎಂದ ಮಾತನು ಕೇಳಿ ಪಾರ್ಥನು |
ಮಂದಹಾಸದಿ ನುಡಿದನಾಗಲೆ |
ಗಂಧವಾಹಾತ್ಮಜನೊಳು ||55||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಪೊತ್ತು ದಣಿಯಲದೇಕೆ ಗಿರಿಗಳ | ನೆತ್ತಲೇತಕೆ ಕಲ್ಮರಂಗಳ |
ಮತ್ತೆ ಬಳಲುವುದೇಕೆ ಸೇತುವೆ | ಬಿತ್ತರಿಪಡೆ ||56||
ಬಿಡು ಬಿಡೀ ಸೇತುವನು ಬಲಿವಡೆ | ಕಡು ಗಹನವೇ ಬಾಣಮುಖದಲಿ |
ಎಡೆಬಿಡದೆ ಸೇತುವನು ರಚಿಸುವೆ | ದಢತರದೊಳು ||57||
ಸುರಪನೈರಾವತವ ತರಿಸಿಹೆ | ತರುಚರರು ನೀವ್ ನಿಮಗೆ ಘನವಿದು |
ನೆರೆ ಪರಾಕ್ರಮಿಗೇನು ದೊಡ್ಡಿತು | ಪರಿಕಿಸುವಡೆ ||58||
ಕಿರಿದು ಬಲವುಳ್ಳವರು ನೀವೆಂ | ಬರಿಕೆಯೆಮಗಾಯ್ತೆಂಬ ಪಾರ್ಥನ |
ಬ್ಬರದ ನುಡಿಯನು ಕೇಳುತೆಂದನು | ಮರುತಸುತನು ||59||
ಕೇಳಿದಾಕ್ಷಣ ಪ್ರಳಯರುದ್ರನ | ಹೋಲುವೆಯ ಘನ ಕ್ರೋಧರೂಪವ |
ತಾಳಿ ಕೋಪದಿ ನುಡಿದನಾ ಸುರ | ಪಾಲಸುತೆಗೆ ||60||
ರಾಗ ಮಾರವಿ ಏಕತಾಳ
ಏನುವನೆಂದೆಯೊ | ಮಾನವ ಗರ್ವದಿ | ಸಾನುವ ನೀನಡರಿ ||
ಆನುವದಾರು ನಿ | ಧಾನದಿ ಪೇಳ್ ಸುರ | ಮಾನವರೊಳಗೆನಗೆ ||61||
ಮುಕ್ಕುವೆ ಜಗವನು | ತಿಕ್ಕುವೆ ಯಮನನು | ಸಿಕ್ಕಿಸಿ ಭೈರವನ ||
ಠಕ್ಕುಪಚಾರದ | ಗರ್ವವಿದೇತಕೆ | ಸೊಕ್ಕಿಲಿ ಗಳಹದಿರು ||62||
ಕಣೆಯಲಿ ನೀನಿದ | ಕೆಣೆಯಹ ಸೇತುವ | ಹಣಿವೆಯೆನಲ್ಕಳವೆ ||
ಜುಣುಗೆ ನೀ ಬಾಯ್ಬಡಿ | ವಾರವ ಬೀರುವೆ | ಎಣಿಸದೆ ಗರ್ವದೊಳು ||63||
ತೊಟ್ಟ ಶರಧಿ ನೀ | ಕಟ್ಟಿದ ಸೇತುವ | ನಿಟ್ಟಿಸಲಾನದನು ||
ಥಟ್ಟನೆ ಪಾದದಿ | ಮೆಟ್ಟಿ ಮುರಿಯದಿರೆ | ದಿಟ್ಟ ಹನುಮನಹೆನೆ ||64||
ರಾಗ ಭೈರವಿ ಅಷ್ಟತಾಳ
ಎಲವೊ ಮರ್ಕಟನೆ ಗರ್ವದಿ ನೀನು | ಸುಮ್ಮ |
ನುಲಿಯಲು ಕಾಣೆನು ಫಲವನು ||
ಬಲಿವೆನು ಶರದಿ ಸೇತುವನದ | ನೀನು |
ಬಲದಿ ಮುರಿಯದಿರಲೇನೆಂದ ||65||
ಸಾಕು ಸಾಕೆಲೊ ಮಂಕು ಮನುಜನೆ | ಇಂಥ |
ಕಾಕು ಪೌರುಷವೇಕೊ ಸುಮ್ಮನೆ ||
ನಾ ಕಾಣೆ ಸೇತುವ ಮುರಿಯಲು | ಕೇಳ್ವೆ |
ನೀ ಕಡೆಗೇನ ಮಾಡುವೆ ಹೇಳು ||66||
ಮೂರು ಬಾರಿಗೆ ಗೆಯ್ವೆನದರನು | ಕಾ |
ಲೂರಿ ನೀ ಮುರಿದ ಪಕ್ಷದಿ ನಾನು ||
ಹಾರುವೆನಗ್ನಿಕುಂಡವನೆಂದು | ರಣ |
ಧೀರ ಪಾರ್ಥನು ಪೇಳ್ದನವಗಂದು ||67||
ಶರದಿ ಮೂವೇಳೆ ನೀ ಸೇತುವ | ಮಾಡೆ |
ಮುರಿಯದಿರ್ದಡೆ ಕೇಳೊ ಮಾನವ ||
ನೆರೆ ನೀನು ಪೇಳಿದಂತಿಹೆನೆಂದು | ಪೇಳ್ದ |
ನುರು ಪರಾಕ್ರಮಿ ವಾಯುಸುತನಂದು ||68||
Leave A Comment