ರಾಗ ಮಾರವಿ ಏಕತಾಳ

ಎಂದಾ ನುಡಿ ಕೇ | ಳ್ದಂದಾ ಪಾರ್ಥನು |
ಸಂಧಿಸಿ ಶರದಲಿ | ಬಂಧಿಸೆ ಸೇತುವ |
ಗಂಧವಹಾತ್ಮಜ | ನಂದದ ಕಾಣುತ |
ಲೊಂದು ಕ್ಷಣದಿ ಮುರಿ | ದಂದಗೆಡಿಸಿದ || ಕೇಳೈ ಭೂಪ ||69||

ಕೂರ್ಗೊಂಡಿಹ ಶರ | ವರ್ಗದಿ ಪುನರಪಿ |
ಸ್ವರ್ಗಾಧಿಪಸುತ | ನರ್ಗಳ ಸೇತುವ |
ನೀರ್ಗೆ ರಚಿಸೆ ಸ | ನ್ಮಾರ್ಗಿ ಹನುಮನದ |
ಕೂರ್ಗಿಸಿ ಮುರಿದನು | ಭೋರ್ಗರೆಯುತಲಿ || ಕೇಳೈ ಭೂಪ ||70||

ಮತ್ತೆ ತೆರಳ್ದು ಮ | ಹತ್ತರ ಶರಮಯ |
ದುತ್ತಮ ಸೇತುವ | ಪಾರ್ಥನು ರಚಿಸಲು |
ಹತ್ತಿ ಹನುಮನದ | ನೊತ್ತಾಯದಿ ಮುರಿ |
ದೆತ್ತಲು ನಿನ್ನಯ | ಸತ್ತ್ವಗಳೆಂದ || ಕೇಳೈ ಭೂಪ ||71||

ರಾಗ ಆರ್ಯ ಸವಾಯ್

ಎಲೆ ಮಾನವ ನೀ | ಸಲೆ ಕೈಚಳಕದಿ |
ಬಲಿದಿಹ ಸೇತುವದೇನಾಯ್ತು ||
ಬಲಿಮುಖರೈ ನಾವ್ | ಬಲು ಭಟರೈ ನೀವ್ |
ಸಲುವುದೆ ನಿಮಗೀ ಪೌರುಷವು ||72||

ಆಡಿದ ಭಾಷೆಯ | ಮಾಡಲು ನಿನ್ನಲಿ |
ಕೂಡದಿದ್ದರೆ ನೀ ನಡೆ ಬೇಗ ||
ಕಾಡೆನು ನಿನ್ನಲಿ | ಹೇಡಿಪಡೆನುತಲಿ |
ಕೂಡೆ ಜರೆದನಾತನನಾಗ ||73||

ಕಂದ

ಇಂತಾ ಹನುಮಂತಂ ಕಡು |
ಪಂಥದಿ ಜರೆಯಲ್ ಕೇಳುತಲಿಂದ್ರಕುಮಾರಂ |
ಪಂಥವನೀ ಕಪಿಯೊಳಗಿಂ |
ದಾಂತೆನದೇಕೆಂದು ಚಿತ್ತದಿ ಚಿಂತಿಸಿದಂ ||74||

ರಾಗ ನೀಲಾಂಬರಿ ರೂಪಕತಾಳ

ಅಕ್ಕಟಕ್ಕಟಾ | ಏತಕಿವನಲಿ |
ಸೊಕ್ಕಿ ಪಂಥವ | ಗೆಯ್ದೆನಿಂದಿಲಿ ||
ಮಕ್ಕಾಳಟಿಕೆ | ಮುಂದುವರಿದುದೆ |
ಹಕ್ಕಿದೇರನ | ದಯವು ಮಾಣ್ದುದೆ ||75||

ಸಾಕು ತನ್ನಯ | ಬಾಳ್ವೆಗೀಪರಿ |
ಕಾಕು ಕಪಿಯೊಳು | ಸೋತು ಮೆಯ್ಸಿರಿ |
ನೂಕಿ ಕಳೆವೆನು | ಅಗ್ನಿಯಲಿ ತನು |
ಲೋಕ ನೋಡಲಿ | ಯೆನುತ ನಿಂದನು ||76||

ಭಾಮಿನಿ

ಮೂರು ಬಾರಿ ಶರೌಘದಿಂದು |
ಬ್ಬೇರಿ ಸೇತುವನೆಸಗಲದರನು |
ವೀರ ಹನುಮನು ಮುರಿಯಲಿದ ಕಾಣುತ್ತ ಫಲುಗುಣನು ||
ಹಾರಿದಪೆನಗ್ನಿಯನೆನುತ ಮನ |
ವಾರ ನಿಂದಿರೆ ವದ್ಧವಿಪ್ರಾ |
ಕಾರದಲಿ ಹರಿ ಬಂದು ನುಡಿದನಿದೇನಿದೇನೆನುತ ||77||

ರಾಗ ಘಂಟಾರವ ಅಷ್ಟತಾಳ

ಏನಿದು ನಿಮ್ಮಲಿ ಸಂವಾದ | ಸಾಕಯ್ಯ ತಡೆಯಿರಿ |
ನಾನು ಕೇಳಿಕೊಂಡಪೆನದ ||

ನೀನದೇಕಗ್ನಿಯನು ಮನದನು |
ಮಾನವಿಲ್ಲದೆ ಹಾರಿದಪೆ ಪೇ |
ಳೀ ನಿರೋಧವನಾರು ಮಾಳ್ಪರು |
ಮಾನವರೊಳಕಟಕಟ ಸುಮ್ಮನೆ ||78||

ಎಂದು ಕಪಟ ವಿಪ್ರ ನುಡಿಯಲು | ಕೇಳುತ್ತಲಾ ಸಂ |
ಕ್ರಂದನಾತ್ಮಜ ಪೇಳ್ದನವನೊಳು ||
ಬಂಧಿಸಿದೆ ಮೂವೇಳೆ ಕೂರ್ಗಣೆ |
ಯಿಂದ ಸೇತುವನದನು ಮುರಿದರೆ |
ಕುಂದದಗ್ನಿಯ ಪೊಕ್ಕಪೆನು ತಾ |
ನೆಂದೆನೀ ಕಪಿವರನ ಕೈಯಲಿ ||79||

ಶರದ ಸೇತುವ  ಮುರಿಯದಿರ್ದಡೆ | ನೀ ಪೇಳಿದಂದದೊ |
ಳಿರುವೆನೆಂದೀ ಪ್ಲವಗಪತಿಯಾಡೆ ||
ವಿರಚಿಸಿದೆ ಮೂವೇಳೆ ಸೇತುವ |
ಮುರಿದನೀ ಕಪಿವರ್ಯನಿನ್ನೇ |
ನುರಿಯ ಕುಂಡವ ಪೊಗುವೆನೆನಲಾ |
ಧರಣಿಸುರ ಗಹಗಹಿಸುತೆಂದನು ||80||

ರಾಗ ಬೇಗಡೆ ಏಕತಾಳ

ಚಂದವಾಯ್ತಿನ್ನೇನನುಸಿರಲಿ | ನಿನ್ನಯ ಶೌರ್ಯ |
ದಂದವನ್ನು ನೋಡಬೇಕಿಲ್ಲಿ ||
ಬಂಧಿಸಿದೆ ಗಡ ಮೂವೆ ಶರಮುಖ |
ದಿಂದ ಸೇತುವ ನೀನಿದನು ಬ |
ಲ್ಪಿಂದಲೀ ಕಪಿವರ್ಯ ಮುರಿದರೆ |
ಕುಂದದಗ್ನಿಯ ಹಾಯ್ದುದುಚಿತವೆ ||81||

ಬಾಣಮಯದಲಿ ಮೂವೆ ಸೇತುವ | ನೀನು ಬಲಿವಾಗ | ಮತ್ತೀ |
ವಾನರೇಂದ್ರನು ಸತ್ತ್ವದಿಂದದ | ನಾನಿ ಮುರಿವಾಗ | ಕಂಡಿಹ |
ಮಾನವನದಾರಯ್ಯ ಪೇಳು ನಿ | ದಾನವನು ಬೇಗ || ಮೂರ್ಖತೆ ||
ಗೇನನೆಂಬೆನು ಸಾಕ್ಷಿಯಿಲ್ಲದೆ |
ಹೀನತನದಿಂ ದೊಡ್ಡವನು ಗೆ |
ಯ್ದೀ ನಿರೋಧಕೆ ಪಾವಕನನನು |
ಮಾನವಿಲ್ಲದೆ ಹಾಯ್ದು ಮಡಿದರೆ ||82||

ಮಾಡು ನೀನಿನ್ನೊಮ್ಮೆ ಸೇತುವ | ನೋಡಿದಪೆ ನಾನು | ಶರದಲಿ |
ಹೂಡು ಬೇಗದಿ ಸತ್ತ್ವವಿದ್ದರೆ | ನೋಡಿ ಫಲವೇನು | ಮತ್ತೀ |
ರೂಢಿಸಿದ ಕಪಿವೀರ ಚೂರ್ಣವ | ಮಾಡಲದರನ್ನು || ಬಳಿಕಿನೊ |
ಳಾಡಿದಂದದೊಳಗ್ನಿಯಲಿ ಹೋ |
ಗಾಡಬಹುದೀ ನಿನ್ನ ಕಾಯವ |
ನೋಡಿರೆಂದೆನಲೊಪ್ಪಿದರು ಮುರ |
ಗೇಡಿ ವಿಪ್ರನ ಮಾತ ಕೇಳುತ ||83||

ರಾಗ ಶಂಕರಾಭರಣ ಮಟ್ಟೆತಾಳ

ವೀರಪಾರ್ಥ ಬಳಿಕ ತಾನು | ಬ್ಬೇರಿಯಕ್ಷಯಾಸ್ತ್ರದಿಂದ |
ವಾರಿನಿಧಿಗೆ ಸೇತುವೆಸಗೆ | ಮಾರಜನಕನು ||
ಭೂರಿ ದಯದಿ ಕೂರ್ಮನಾ | ಕಾರದಿಂದ ಬೆನ್ನೊಳಾ
ಧಾರವಾಗಿ ಪೊತ್ತನದನು | ದಾರ ಸತ್ತ್ವದಿ ||84||

ಮರಳಿ ಸತ್ತ್ವದಿಂದ ಹೊಯ್ದು | ಮುರಿಯಲಾರದದನು ಮನದಿ |
ಮರುಗುತೆಂದನಾ ಸಮೀರ | ವರಕುಮಾರನು ||
ಅರರೆ ರಾಮಭಕ್ತನೆಂಬ | ಬಿರುದು ಪೋಯ್ತೆಯಕಟ ದೇಹ |
ವಿರಲು ಸಫಲವಾವುದಿದನು | ತೊರೆವೆನೆಂದನು ||85||

ಪವನಸುತನ ಮನದ ತಾ | ಪವನು ಕಂಡು ಕಮಲನೇತ್ರ |
ನವಿರಳಕಟಾಕ್ಷರಸದ | ಸವಿಯ ಸೂಸುತ ||
ತವಕದಿಂದ ರಾಮರೂ | ಪವನು ತೋರಲದನು ಕಂಡು |
ನಮಿಸಿ ಭಕ್ತಿಭಾವದಿಂದ | ಲವನ ಸ್ತುತಿಸಿದ ||86||

ವಾರ್ಧಕ

ಜಯ ಜಯ ಜಗನ್ನಾಥ ಜಾನಕೀಸುಪ್ರೀತ |
ಜಯ ರಘುಕುಲಾಧ್ಯಕ್ಷ ರಾಕ್ಷಸಕುಲವಿಪಕ್ಷ |
ಜಯ ಜಯ ಸುರಾಧೀಶ ಸೂರ್ಯಶತಸಂಕಾಶ ಜಯ ಘನಶ್ಯಾಮ ರಾಮ ||
ಜಯ ಜಯ ದಯಾಸಾರ ದಿೀನಕುಲವುದ್ಧಾರ |
ಜಯ ವಿನಿರ್ಜಿತಪಾಪ ವಿಧತಮಾರ್ಗಣಚಾಪ |
ಜಯ ಜಯ ಚಿದಾಭಾಸ ಚಿನ್ಮಯ ಚಿದಾಕಾಶ ಜಯತೆಂದನಾ ಹನುಮನು ||87||

ರಾಗ ಕೇದಾರಗೌಳ ಅಷ್ಟತಾಳ

ಎಂದು ಸಂಸ್ತುತಿಸಿ ಭಕ್ತಿಯೊಳೆರಗಿದ ವಾಯು |
ನಂದನನನು ದಯದಿ ||
ಚಂದದೊಳೆತ್ತಿ ತಕ್ಕಯಿಸಿ ಮೆಯ್ದಡವುತ್ತಿಂ |
ತೆಂದನು ಮಾಧವನು ||88||

ವಾತಕುಮಾರ ಕೇಳ್ ಬರಿದೆ ನೀ ಮನದಲ್ಲಿ |
ಸೋತೆನೆಂದೆಣಿಸದಿರು ||
ಆತನ ಪಕ್ಷಪಾತದೊಳು ಮೆಯ್ಯಂತೆ ನಾ |
ಸೇತುವಿಗಿದು ದಿಟವು ||89||

ಈಗ ಕಷ್ಣಾವತಾರದಿ ಬಂದು ನಾ ಸಖ |
ನಾಗಿಹೆನೀ ಪಾರ್ಥಗೆ ||
ಲೋಗವಲ್ಲಿವನು ನಿನ್ನಂತೆ ಸದ್ಭಕ್ತನು |
ಹೇಗೆ ಬಿಟ್ಟಪೆನೀತನ  ||90||

ಇಹುದು ನಿನ್ನಿಂದ ಮುಂದಕೆ ಕಾರ್ಯವೀತಗೆ |
ಬಹುಮಾತಿನಿಂದಲೇನು ||
ಬಹುದೀತ ನೆನೆದಾಗಲೆಂದೊಡಂಬಡಿಸಿ ಸಂ |
ಗ್ರಹಿಸಿದನಾತನನು ||91||

ಭಾಮಿನಿ

ಇಂತು ಹನುಮನನೊಡಬಡಿಸಿ ಶ್ರೀ |
ಕಾಂತ ಬಳಿಕರ್ಜುನಗೆ ನಿಜರೂ |
ಪಾಂತಿದೆಲ್ಲವನರುಹಿ ತೆರಳಲು ಮೇಲೆ ಫಲುಗುಣನು ||
ಅಂತರಂಗದಿ ನಾಚಿ ಪವನಜ |
ನಂತಿಕಕೆ ನಡೆತಂದು ಭಯದಲಿ |
ನಿಂತು ಕರಗಳ ಮುಗಿದು ನುಡಿದನು ವಿನಯಪರನಾಗಿ ||92||

ರಾಗ ಸಾಂಗತ್ಯ ರೂಪಕತಾಳ

ವೀರ ಕೇಳಯ್ಯ ನಿನ್ನಯ ಸತ್ತ ್ವವರಿಯದೆ |
ಪೌರುಷವನು ಪೇಳ್ದೆ ಬರಿದೆ ||
ಆರಾದರುಂಟೆ ನಿನ್ನನು ಗೆಲುವವರು ವಂ |
ದಾರಕನರಭುಜಂಗರಲಿ ||93||

ಹಲವು ಮಾತಿಂದಲೇನೆನ್ನನು ಕರುಣದಿ |
ಸಲಹುವ ಭಾರ ನಿನಗೆಂದು ||
ಫಲುಗುಣ ಮಗುಳೆರಗಿದಡೆತ್ತಿ ಹರುಷದಿ |
ತಳುಕಿಸುತೆಂದ ವಾಯುಜನು ||94||

ನರನೆ ಕೇಳಯ್ಯ ನಿನ್ನನು ರಕ್ಷಿಸುವ ಭಾರ |
ಹರಿಗಲ್ಲದೆನ್ನಿಂದಲೇನು ||
ಬರುವೆ ನೀ ನೆನೆದಾಗಲೆಂದು ಬೀಳ್ಗೊಟ್ಟನಾ |
ಮರುತಜನಾ ಧನಂಜಯನ ||95||

ವಾರ್ಧಕ

ಪವನಸಂಜಾತನಂ ಬೀಳ್ಗೊಟ್ಟು ಬಳಿಕಲ್ಲಿ |
ತವೆ ಶಾಪದಿಂ ಜಲದಿ ನೆಗಳಾಗಿ ಬಿದ್ದಿರ್ದ |
ದಿವಿಜನಾರಿಯರನುದ್ಧರಿಸಿ ಬಳಿಕಾ ಶಕ್ರತನುಸಂಭವಂ ಮುದದೊಳು ||
ತವಕದಿಂದಾ ಪಾಂಡ್ಯದೇಶಕಯ್ತಂದಲ್ಲಿ |
ಯುವತಿಮಣಿ ಚಿತ್ರಾಂಗದೆಗೆ ರಮಣನೆಂದೆನಿಸಿ |
ಭುವನದೊಳಗಿಹ ಸಕಲ ತೀರ್ಥಮಂ ತೊಳಲುತ್ತ ದ್ವಾರಕೆಗೆ ನಡೆತಂದನು ||96||

ಸಿಂಧುವಸನಾಧೀಶ ಲಾಲಿಸಿಂತರ್ಜುನಗೆ |
ಸಂದುದೈ ಮಾಸವೆಂಟಾ ಸಮಯಕಾವರಿಸಿ |
ಬಂದುದು ವರುಷಕಾಲಮುಳಿದ ನಾಲ್ ತಿಂಗಳಂ ಕಳೆವುಪಾಯವ ಕಾಣದೆ ||
ಅಂದ ಮಿಗಲಾ ದ್ವಾರಕಾಪುರದ ಪೊರಗೆಸೆವ |
ನಂದನಕ್ಕೆಯ್ತಂದು ಯತಿವೇಷಮಾಂತು ಗೋ |
ವಿಂದ ಮುರಹರ ಜನಾರ್ದನನೆ ಶರಣೆನುತಿರ್ದನುರೆ ಭಕ್ತಿಭಾವದಿಂದ ||97||

ರಾಗ ಕಾಂಭೋಜಿ ಝಂಪೆತಾಳ

ನರನಿಂತು ಮಳೆಗೆ ಮೆಯ್ಸರಿಸಿ ನಡನಡುಗುತ್ತ |
ಹರಿ ಮುರಾಂತಕ ಎನ್ನುತಿರಲು ||
ಅರಿದಿತ್ತ ಮುರುಹರನು ತರುಣಿಯರ ಮೇಳದ |
ಲ್ಲಿರಲು ತನ್ನಲಿ ನಕ್ಕನಾಗ ||98||

ಸ್ಮೇರಮುಖನಾದ ಚಾಣೂರವೈರಿಯ ಕಂಡು |
ನಾರಿ ಭಾಮಾದೇವಿಯಂದು ||
ನೀರನನು ಬೆಸಗೊಂಡಳೀ ರೀತಿಯಲಿ ನಗುವ |
ಕಾರಣವಿದೇನು ಪೇಳೆಂದು ||99||

ರಾಗ ತುಜಾವಂತು ಝಂಪೆತಾಳ

ಆವ ನಾರಿಯ ಮೇಲೆ ಮನವಾಯ್ತು ನಿನಗೆ |
ಈ ವಿಧದಿ ನಗಲೇಕೆ ಕಾಂತ ಪೇಳೆನಗೆ ||100||

ನಾರಿಯರ ದೆಸೆಗಾಗಿ ನಕ್ಕುದಿಲ್ಲಬಲೆ |
ಬೇರೊಂದು ಪೊಸತಿಹುದು ಜಲಜಮುಖಿ ಕೇಳಿ ||101||

ಆಗಲದಕೇನಹುದು ಪೇಳಬೇಕದನೆ |
ನಾಗಶಯನ ಮುಕುಂದ ಸಕಲ ಕೋವಿದನೆ  ||102||

ಪೇಳಬಾರದು ಕಾಣೆನಾ ನಕ್ಕ ಪರಿಯ |
ಪೇಳಿದರೆ ನೀನನ್ಯರಿಂಗುಸಿರದಿರೆಯಾ ||103||

ಇನ್ನೊರ್ವಳಿಂಗೆ ನಾ ಪೇಳುವವಳಲ್ಲ |
ಚೆನ್ನಾಗಿ ಪೇಳಬೇಕೆನಗೆ ನೀ ನಲ್ಲ ||104||

ರಾಗ ತೋಡಿ ಅಷ್ಟತಾಳ

ತರುಣಿ ಕೇಳೆ ನಮ್ಮ ನಗರದ ಹೊರಗೆ |
ಪರಿಶೋಭಿಸುತ್ತಿಹ ನಂದನದೊಳಗೆ ||
ವರಯತಿವೇಷವನಾಂತಿಹ ನರನು |
ಬಿರುಮಳೆಯಲಿ ನೆನೆಯುತ್ತ ಕುಳ್ಳಿಹನು || ಕೇಳ್ದೆಯಾ ||105||

ಬಲನಿತ್ತಲನುಜೆ ಸುಭದ್ರೆಯ ಮುದದಿ |
ಖಳ ಕುರುಪತಿಗೀಯಬೇಕೆಂಬ ಮನದಿ ||
ಛಲದಿಂದಲಿರ್ಪನಾ ಕಾಮಿನಿ ನರಗೆ |
ಸಲೆ ವಧುವಹಳು ಸಂಶಯವಿಲ್ಲವಿದಕೆ || ಕೇಳ್ದೆಯಾ ||106||

ನಕ್ಕೆ ನಾನದರಿಂದಲೆಣಿಸಿಕೊಂಡದನು |
ಮಿಕ್ಕವರಿಂಗುಸಿರದಿರು ನೀನಿದನು |
ಚೊಕ್ಕಟಿಂದೆಲ್ಲವ ನೋಡು ನೀನೆಂದು |
ಹೊಕ್ಕಳ ಹೂವನಾಕೆಗೆ ಪೇಳ್ದನಂದು || ಕೇಳ್ದೆಯಾ ||107||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲೆ ಮುರಾಂತಕ ನಿನ್ನ ಮಹಿಮೆಯ |
ನೆಲೆಯ ಬಲ್ಲವರಾರು ಜಗದಲಿ |
ಜಲಜಸಂಭವ ಸುರಪಮುಖ್ಯರು | ತಿಳಿಯರೈಸೆ ||108||

ಆವ ಪರಿಯಲಿ ಪಾಂಡವರ ನೀ  |
ನೋವಿ ರಕ್ಷಿಪೆಯೆಂಬುದರಿಯೆನು |
ನಾವೆಯೆಂದಳು ಸತ್ಯಭಾಮಾ | ದೇವಿ ನಗುತ ||109||

ಭಾಮಿನಿ

ಭೂತಳಾಧಿಪ ಕೇಳು ಕಾಂತೆಯ |
ಮಾತನಾಲಿಸಿ ನಸುನಗುತ ನಲ |
ವೋತು ಮನ್ನಿಸಿಯಾಕೆಯನು ಬಳಿಕಾ ಮುರಾಂತಕನು ||
ಆ ತತುಕ್ಷಣ ಪೊರಟನಾ ಕಪಿ |
ಕೇತನನನೀಕ್ಷಿಸುವ ಭರದಲಿ |
ಪ್ರೀತಿಯೆಂತುಟೊ ಭಕ್ತರಲಿ ಲಕ್ಷ್ಮೀನಿವಾಸಂಗೆ ||110||

ರಾಗ ಬೇಗಡೆ ಅಷ್ಟತಾಳ

ಬಂದನು ಮುರಹರನಾಗ | ಶಕ್ರ | ನಂದನನೆಡೆಗತಿ ಬೇಗ ||
ವಂದಾರಕರು ಭಕ್ತಿ | ಯಿಂದಲಾಕಾಶದಿ |
ಮಂದಾರಸುಮವಷ್ಟಿ | ಯಂ ಧರೆಗಿಳಿಸಲು ||111||

ಮದನತಾತನು ಬರುವುದನು | ಕಾಣು | ತಧಿಕ ಭಕ್ತಿಯೊಳೆದ್ದು ನರನು ||
ಪದಕಮಲದೊಳೆರ | ಗಿದಡೆ ಕಾರುಣ್ಯ ಭಾ |
ವದೊಳೆತ್ತಿ ತಳ್ಕಿಸಿ | ಮುದದೊಳಿಂತೆಂದನು ||112||

ಎಲೆ ಪಾರ್ಥ ಯತಿವೇಷವನ್ನು | ನೀನು | ತಳೆದು ಬಂದಿಹ ಪರಿಯೇನು ||
ಉಳಿಯದೆ ಸಕಲವ | ತಿಳುಹೆಂದ ಮಾಧವ |
ನಲವಿಂದ ಬೆಸಗೊಳ್ಳೆ | ಫಲುಗುಣನೆಂದನು ||113||

ರಾಗ ಮಧ್ಯಮಾವತಿ ಆದಿತಾಳ

ಲಾಲಿಸು ದೇವರ ದೇವ ಮುಕುಂದ |
ನೀಲನಿಭಾಂಗ ಶಾಶ್ವತ ನಿತ್ಯಾನಂದ ||
ಭೂಲೋಲ ಧರ್ಮಜನೊಂದು ರಾತ್ರಿಯಲಿ | ಪಾಂ |
ಚಾಲೆ ಸಹಿತ ಮಲಗಿರುವ ವೇಳೆಯಲಿ ||114||

ಚೋರರ ಬಾಧೆಯೊಳ್ ದ್ವಿಜರೆಲ್ಲ ಬಂದು |
ದೂರಿದರೆನ್ನೊಳು ಬಳಿಕ ನಾನಂದು ||
ಧಾರಿಣೀಪತಿಯ ಸಜ್ಜೆಯೊಳಸ್ತ್ರವಿರಲು |
ಸಾರಿದೆ ಮಧ್ಯರಾತ್ರಿಯೊಳದ ತರಲು ||115||

ಆ ದೋಷಪರಿಹಾರಕಬುದವೊಂದರಲಿ |
ಮೇದಿನಿಯೊಳಗಿಹ ತೀರ್ಥವೆಲ್ಲರಲಿ ||
ಸಾದರದಲಿ ಮಿಂದು ಬರಬೇಕೆಂಬುದನು |
ಆ ದೇವಮುನಿಪನಪ್ಪಣೆಯನಿತ್ತಿಹನು ||116||

ಪೊರಟೆನಾ ಕಾರಣ ಸಕಲ ದೇಶವನು |
ಚರಿಸಿ ಮಿಂದೆನು ಸರ್ವಪುಣ್ಯತೀರ್ಥವನು ||
ವರುಷಕಿನ್ನಿಹುದು ನಾಲ್ ತಿಂಗಳು ಮುಂದೆ |
ಮರೆಸಿ ರೂಪವನದರಿಂದಿಲ್ಲಿ ಬಂದೆ ||117||

ಮಂದೆ ನಾ ಮನದಿ ಯೋಚಿಸಿದ ಕಾರ್ಯವನು |
ತಂದೆ ನೀನರಿಯೆಯ ಪೇಳಲೇನಿನ್ನು ||
ಕುಂದದೆ ಕೈಗೂಡಿಸುವುದೆನಗೆಂದು ||
ವಂದಿಸಿ ನರನೊಳೆಂದನು ಕಪಾಸಿಂಧು ||118||

ರಾಗ ಕೇದಾರಗೌಳ ಝಂಪೆತಾಳ

ಕೇಳಯ್ಯ ಪಾರ್ಥ ನೀನು | ಮನದೊಳಗೆ |
ತಾಳದಿರು ಯೋಚನೆಯನು ||
ಪೇಳಲೇನದನು ನೀನು | ನಿನ್ನ ಮನ |
ದಾಲೋಚನೆಯನರಿತೆನು ||119||

ಇರು ನೀನು ಯತಿವೇಷದಿ | ನಿನ್ನೆಡೆಗೆ |
ಬರುವನಾ ಬಲನು ಮುದದಿ ||
ಭರದಿಂದ ಕರೆದೊಯ್ವನು | ದ್ವಾರಕಾ |
ಪುರಕೆ ಮುದದಿಂದಲವನು ||120||

ಅಲ್ಲಿ ನೀ ಬಂದಿರಲ್ಕೆ | ನಿನ್ನ ಮನ |
ದಲ್ಲಿ ಪುಟ್ಟಿರ್ದ ಬಯಕೆ ||
ಎಲ್ಲ ಕೈಸೇರ್ವುದೆನುತ | ಪೇಳಿದನು |
ಫುಲ್ಲಲೋಚನನು ನಗುತ ||121||