ಭಾಮಿನಿ

ಎಂದು ವಿನಯೋಕ್ತಿಯಲಿ ಕುಂತೀ |
ನಂದನಗೆ ನೆರೆ ತಿಳುಪಿ ತನ್ನಯ |
ಮಂದಿರಕ್ಕೆಯ್ತಂದನಾ ಮುರಮಥನನೊಲವಿನಲಿ ||

ನಂದನದಿ ಕಲಿಪಾರ್ಥನಿತ್ತಲು |
ಸಂದ ಯತಿವೇಷದಲಿ ಕುಳ್ಳಿರೆ
ಬಂದು ನುಡಿಸಿದರಲ್ಲಿರುವ ವನಪಾಲರರ್ಜುನನ ||122||

ರಾಗ ಮಾರವಿ ಏಕತಾಳ

ಎಲೆ ಎಲೆ ಹಾರ್ವ ಯಾರ್ ಮ್ಯಾ ನೀನು |
ಹೊಲದೊಳಗೇನಾ ಮಾಡ್ತಿ ||
ಛಳಿಮಳೆಗಾಳಿಗೆ ಚಲಿಸದೆ ನೆಟ್ಟನೆ |
ಕುಳಿತೇನ್ ಮೇಲಕೆ ನೋಡ್ತಿ ||123||

ಮೂಗಿನ ಮ್ಯಾಗೆ ಮೂಬೆರಳಿಟ್ಟು |
ಮೂಗಾನಂದದಲಿರುವಿ ||
ಹೀಗೇತಕೆ ಮಿಣಮಿಣ್ಣನೆ ಬಾಯ |
ಗೂಗೆಯ ತೆರದಲಿ ತೆರೆವಿ ||124||

ಹಲವಂಗದಿ ನುಡಿಸಲು ಮಾತಾಡದೆ |
ಕುಳಿತಿರುವಾತನ ಕಂಡು ||
ಹೊಲಗಾಹಿಗಳಾಲೋಚಿಸುತಲಿ ತಾವ್ |
ತಿಳಿದೆಂದರ್ ಬಳಿಕಂದು ||125||

ವಾರ್ಧಕ

ಏಗೆಯ್ದರೆಮ್ಮೊಡನೆ ನುಡಿವನಲ್ಲಿವನಾವ |
ಯೋಗನಿಷ್ಠನೊ ತಿಳಿಯೆವಿವನಿರವ ನಮ್ಮೊಡೆಯ |
ನಾಗಿರ್ಪ ಬಲನೊಡನೆ ಪೇಳಬೇಕೆನುತಲಾ ವನಚರರ್ ಭೀತಿಯಿಂದ ||
ಆಗ ಬಲರಾಮನೊಡ್ಡೋಲಗಂಗೊಟ್ಟಿರ |
ಲ್ಕಾಗಳಿವರೆಲ್ಲರೊಂದಾಗಿ ನಡೆತಂದು ತಲೆ |
ವಾಗಿ ತನಿವಣ್ಗಳಂ ಕಾಣಿಕೆಯ ನೀಡಿ ಬಿನ್ನಯಿಸಿದರ್ ಬಂದ ಪರಿಯ ||126||

ರಾಗ ಮುಖಾರಿ ಏಕತಾಳ

ಲಾಲಿಸಬೇಕು ಜೀಯ | ಬಲಭದ್ರರಾಯ |
ಲಾಲಿಸಬೇಕು ಜೀಯ || ಪಲ್ಲವಿ ||

ಪುರದ ಬಾಹೆಯೊಳೊರ್ವ | ವರ ವನದೊಳಗೊರ್ವ ||
ನಿರತ ಸಂನ್ಯಾಸಿಪಾರ್ವ | ನೆಲಸಿಕೊಂಡಿರುವ ||127||

ಕಾವಿವಸ್ತ್ರವನುಟ್ಟು | ಕೈಯಲ್ಲಿ ಜಪಸರವ ತೊಟ್ಟು ||
ದೇವರನೆಣ್ಣುತಲಿ | ಕುಳಿತಿರ್ಪನಲ್ಲಿ ||128||

ಮಾತನಾಡಿಸಲ್ ನುಡಿಯ | ನೇತಕೊ ತಿಳಿಯೆವೆಮ್ಮೊಡೆಯ ||
ಆತನ ನೋಳ್ಪಡೀಗ | ದಯೆಮಾಡು ಬೇಗ ||129||

ರಾಗ ಸಾರಂಗ ಅಷ್ಟತಾಳ

ಚರರೆಂದ ನುಡಿ ಕೇಳುತ | ರಾಮನು ಘನ |
ಪರಿತೋಷವನು ತಾಳುತ ||
ವರ ಯತಿಗಳನು ಕಂ | ಡೆರಗದಾತನ ಜನ್ಮ |
ನರಕಭಾಜನವೆಂಬುದನು ನಾ | ನರಿತು ಸುಮ್ಮನೆ ಕುಳಿರೆ ಯೋಗ್ಯವೆ ||130||

ಎನುತಲಾ ಹಲಧರನು | ತನ್ನಯ ಪರಿ |
ಜನ ಸಹಿತಂದು ತಾನು ||
ವಿನಯದಿ ಪೊರಮಟ್ಟು | ಮುನಿವೇಷದಿಂದರ್ಪ |
ಅನಿಮಿಷಾಧೀಶ್ವರನ ಸುತನನು | ವನದ ಮಧ್ಯದಿ ಬಂದು ಕಂಡನು ||131||

ಭಾಮಿನಿ

ಅರಸ ಕೇಳೈ ಯೋಗನಿಷ್ಠರ |
ತೆರದಿ ಕುಳಿತಿಹ ಪಾರ್ಥನನು ಯತಿ |
ವರನುಯೆಂದೇ ಮನದಿ ಬಗೆದಾ ರೋಹಿಣೀಸುತನು ||
ಭರದಿ ಸಾಷ್ಟಾಂಗ ಪ್ರಣಾಮವ |
ವಿರಚಿಸುತ ಬಳಿಕೆದ್ದು ಭಕ್ತಿಯೊ |
ಳಿರದೆ ಕೈಮುಗಿದೆಂದನುರೆ ಗಂಭೀರವಚನದಲಿ ||132||

ರಾಗ ಕಾಂಭೋಜಿ ಝಂಪೆತಾಳ

ಹರ ಹರಾ ಈ ಮಹಾಪುರುಷರೋಪಾದಿಯವ |
ರಿರವನೀಕ್ಷಿಪೆನು ಇಂದಿನಲಿ ||
ವರಸಮಾಧಿಯಲಿ ಮೆಯ್ ಮರೆದವರ ನುಡಿಸುವಾ |
ಪರಿಯೆಂತೊ ತಿಳಿಯೆನಿಂದಿನಲಿ ||133||

ಸಾನುರಾಗದಲಿ ಮಾತಾಡಿಸಲು ಮುನಿದಪರೊ |
ಮಾನಿಪರೊ ಬಲ್ಲರಾರಿದನು ||
ಏನಾದಡಾಗಲೀಕ್ಷಿಪೆನೆನುತ ನುಡಿಸಿದನು |
ಮೌನಿವೇಷದೊಳಿರ್ಪ ನರನ ||134||

ಕರುಣವಾರಿಧಿಯೆ ಮಹಗುರುವರನೆ ಭವದೀಯ |
ವರವಚನದಮತವರ್ಷವನು ||
ಕರೆದು ತಾಪತ್ರಯದೊಳುರೆ ಜೀವಿಸುವರನು |
ದ್ಧರಿಸಬೇಹುದು ನಲವಿನಿಂದ ||135||

ಎಂದ ಭಕ್ತಿಯಲಿ ಬಲವಂದು ಪುನರಪಿ ಬಲನು |
ವಂದಿಸಲು ಸಾಷ್ಟಾಂಗದಿಂದ ||
ಸಂದ ಯೋಗವನಿಳುಹಿದಂದದಲಿ ಕಪಟಯತಿ |
ಯಂದು ಕಣ್ದೆರೆವುತಿಂತೆಂದ ||136||

ರಾಗ ಸಾಂಗತ್ಯ ರೂಪಕತಾಳ

ಯಾರಯ್ಯ ನಾನು ಯೋಗಾರೂಢನಾಗಿಹೆ |
ನೀ ರೀತಿ ಪ್ರಾರ್ಥನೆಗೆಯ್ವ ||
ಕಾರಣವೇನು ನಮ್ಮಿಂ ಪೇಳೈ ನಿನ್ನ |
ಚಾರು ಭಕ್ತಿಗೆ ನಾ ಮೆಚ್ಚಿದೆನು ||137||

ಗುರುವರ್ಯ ಬಿನ್ನಹ ಸಂಸಾರಿಗಳು ನಾವು |
ನೆರೆ ಗತಿಯೆಮಗೆ ನೀವೈಸೆ ||
ವರ ಚಾತುರ್ಮಾಸ್ಯವನೆಸಗಲು ಎಮ್ಮಯ |
ಪುರಕೆ ಬಂದರೆ ಧನ್ಯನಹೆನು ||138||

ಸಕಲವನುರೆ ಬಿಟ್ಟು ಗಹ್ವರಗಿರಿವನ |
ನಿಕರದೊಳಿಹ ಯತಿಗಳಿಗೆ ||
ಸುಕರಪಟ್ಟಣ ಗ್ರಾಮ ಗಹವಾಸವೆಮಗೆ ಬಾ |
ಧಕವೈಸೆ ತಪವನಾಚರಿಸೆ ||139||

ಪರಹಿತವನು ಮಾಳ್ಪ ಪುರುಷರ್ಗೆ ಕೇವಲ |
ಗಿರಿಗುಹೆವನಗಳಿಂದೇನು ||
ಪುರ ಗ್ರಾಮ ಗಹದೊಳಗಿರಲು ಮತ್ತವರಿಗೆ |
ಕೊರತೆಯೇನೆಂದನಾ ಬಲನು ||140||

ಮೆಚ್ಚಿದೆ ನಿನ್ನಯ ಭಕ್ತಿಭಾವಕೆ ನಾನು |
ಹೆಚ್ಚು ಮಾತಿನ್ನೇನು ಬಹೆನು ||
ನೆಚ್ಚಿನ ನಪಗೇಹ ಮಾತ್ರವದೊಂದನು |
ನಿಶ್ಚಯ ಪೊಗೆನೆಂದ ಯತಿಯು ||141||

ಭಾಮಿನಿ

ಆಯಿತದಕೆಂದೆನುತಲಾಗ ಹ |
ಲಾಯುಧನು ಸಂತಸದೊಳಾ ಯತಿ |
ರಾಯನನು ಬಳಿಕಂದು ಹೊನ್ನಂದಣದಿ ಕುಳ್ಳಿರಿಸಿ ||
ಆಯತದ ಗುಡಿತೋರಣಗಳ ವಿ |
ಡಾಯಿಯಲಿ ಬಹು ವಾದ್ಯರವದ ನ |
ವಾಯಿ ಮಿಗೆ ನಿಜಪುರವರಕೆ ಕರೆತಂದನೊಲವಿನಲಿ ||142||

ವಾರ್ಧಕ

ಧರಣಿಪಾಲಕ ಲಾಲಿಸಿಂತು ಬಲಭದ್ರ ತಾ |
ಗುರುಗಳೆಂದೇ ಬಗೆದು ಪಾರ್ಥನಂ ರಾಜಮಂ |
ದಿರದೆಡೆಗೆ ಕರೆತಂದು ಬಳಿಕಲ್ಲಿ ಶೋಭಿಸುವ ಪ್ರಮದಾವನಾಂತರದೊಳು ||
ಮೆರೆವ ಕಾಳಿಯ ಗುಡಿಯ ವರ ಸಮೀಪದೊಳಂದು |
ನೆರೆ ಶೋಭಿಸುತ್ತಿರ್ಪ ವಟವಕ್ಷ ಮೂಲದೊಳ್ |
ಮೆರೆವ ಮಣಿಖಚಿತ ವೇದಿಕೆಯ ವಿರಚಿಸಿ ನರನ ಪೀಠದೊಳ್ ಕುಳ್ಳಿರಿಸುತ ||143||

ರಾಗ ಕೇದಾರಗೌಳ ಅಷ್ಟತಾಳ

ಚರಣಪೂಜೆಯ ಗೆಯ್ದು ಮಂಗಳಾರತಿಯೆತ್ತಿ |
ಗುರುಗಳ್ಗೆ ಭಕ್ತಿಯಲಿ ||
ಎರಗಿ ಸಂತಸದಿಂದ ಮಗುಳೆದ್ದು ಮುಗಿದಿರ್ದ ||
ಕರಗಳಿಂ ಬಲನೆಂದನು ||144||

ವರ ತಪವೆಸಗಲು ನೆರೆ ಸುಖವಾಸವಾ |
ಗಿರುವುದೀ ಸ್ಥಳ ನಿಮಗೆ ||
ಪರಿಚಾರಕರನು ತಂದಿರಿಸುವೆನೆನಲು ಕೇ |
ಳ್ದರಿದೆಂದನಾ ಪಾರ್ಥನು ||145||

ನಿನಗತಿ ಪ್ರಿಯರಾಗಿ ಮನದಿ ಶ್ರೇಯೋವದ್ಧಿ |
ಯನು ಬಯಸುವರು ಕಂಡು ||
ವಿನಯದೊಳೆಮ್ಮ ಸೇವೆಗೆ ನೀಡಲವರಿಗೆ |
ಮನದಿಷ್ಟವಹುದೆಂದನು ||146||

ಕಂದ

ಎನಲಾ ಬಲಭದ್ರಂ ತಾ |
ಘನಹರುಷವನಾಂತು ಕರೆಸಲನುಜೆಯನಾಗಳ್ ||
ವಿನಯದೊಳೆಯ್ತಂದಣ್ಣನ |
ಚರಣದಿ ಸೌಭದ್ರೆಯು ತಾ ಮಣಿಯಲ್ಕೆಂದಂ || ||147||

ರಾಗ ತೋಡಿ ಆದಿತಾಳ

ತಂಗಿ ಬಾರವ್ವ ಸೌಭದ್ರೆ | ಮಂಗಲಸುಗಾತ್ರೆ |
ಅಂಗನಾಮಣಿಯೆ ಕು | ರಂಗಸಮನೇತ್ರೆ ||
ಭಂಗಚಿಕುರೆ ನೀನೀ ಯತಿ | ಪುಂಗವನ ಪದವ |
ಹಿಂಗದೆ ಸೇವಿಸಲು ಪಡೆವೆ | ತುಂಗತರ ಸಂಪದವ ||148||

ವರ ಮಹಾ ಸತ್ಪುರುಷರಿರುವರು | ತರುಣಿರನ್ನೆ ಕೇಳೆ |
ನೆರೆ ನಿನ್ನ ಮನದಿಷ್ಟವನ್ನು | ಕರುಣಿಸುವರು ಬಾಲೆ ||
ಅರಿತು ನೀನದರಿಂದಲಿವರ | ಪರಿಚರ್ಯವನೆಸಗಿ |
ಭರದಿಂದೊಲಿಸೆಂದೆನಲು ಬಲಗೆ | ತರಳೆ ನುಡಿದಳೆರಗಿ ||149||

ರಾಗ ರೇಗುಪ್ತಿ ಅಷ್ಟತಾಳ

ಅಣ್ಣ ಲಾಲಿಸು ಪರಗಂಡುಸರನ್ನು |
ಕಣ್ಣಿಂದ ಕಂಡೆಂದಿಗಾದರರಿಯೆನು ||
ತಿಣ್ಣಜವ್ವನೆಯರ್ಗೆ ಪರಪುರುಷರ ಸೇವೆ |
ಬಣ್ಣವೆ ಮನದಿ ಎಣ್ಣಿಸದೊರೆವೆ ||150||

ಈ ಯತೀಂದ್ರರು ನಿಸ್ಪೃಹರಾದರೆ ಅ |
ಸೂಯೆಯುಳ್ಳವರದ ನೋಡುವರೆ ||
ಬಾಯಬಡಿಕತನದಿಂದಲೇನಾದರು |
ಹೇಯದ ನುಡಿಗಳ ಪೇಳದೆ ಮಾಣರು ||151||

ರಾಗ ಬೇಗಡೆ ತ್ರಿವುಡೆತಾಳ

ಹೀಗೆ ಪೇಳುವರೆ ತಂಗಿ | ಕನಕಲತಾಂಗಿ |
ಹೀಗೆ ಪೇಳುವರೆ ತಂಗಿ  || ಪಲ್ಲವಿ ||

ಹೀಗೆ ಪೇಳುವರೇನೆ | ಯೋಗಿವರ್ಯರನು ಚೆ |
ನ್ನಾಗಿ ಸೇವಿಸಿ ಸರ್ವ | ಭೋಗವ ಪಡೆಯದೆ || ಹೀಗೆ ||152||

ವರಯತೀಶ್ವರ | ಚರಣ ತೀರ್ಥವನೀಂಟಿ |
ದರೆ ಕೋಟಿ ಜನ್ಮದಘ | ಪರಿಹಾರವಹುದೈಸೆ || ಹೀಗೆ ||153||

ಎಲ್ಲ ಯತಿಗಳ ತೆರ | ನಲ್ಲ ಇವರ ಮಹಿಮೆ |
ಬಲ್ಲವರೆ ಬಲ್ಲರು | ಖುಲ್ಲರೇನರಿವರು || ಹೀಗೆ ||154||

ಭಾಮಿನಿ

ಎಂದು ತಂಗಿಯನೊಡಬಡಿಸಿ ಬಲ |
ನಂದು ಯತಿಗಳ ಪದದೊಳೆರಗಿಸಿ |
ಇಂದು ಮೊದಲಾಗಿರುವ ಪರಿಯಂತಿವಳ ಸೇವೆಯನು ||
ಅಂದದಿಂ ಕೈಗೊಂಬುದೀ ಪೂ |
ರ್ಣೇಂದುಮುಖಿ ಸಲೆ ನಿಮ್ಮ ವಶವೆಂ |
ದ್ಹೊಂದಿದುರುತರ ಭಕ್ತಿಯಲಿ ಕೈವರ್ತಿಸಿದನೊಲಿದು ||155||

ರಾಗ ಕಾಂಭೋಜಿ ಝಂಪೆತಾಳ

ತರುಣಿ ಬಾ ತ್ರೈಲೋಕ್ಯದಲಿ ವಿಜಯ ತಾನೆ ನಿ |
ನ್ನರಸನಾಗಿಯೆ ಬಾಳು ಮುದದಿ ||
ನಿರುತ ಸುಖಿಯಾಗೆಂದು ಪಾರ್ಥನಡಿಗೆರಗಿದಂ |
ಬುರುಹಲೋಚನೆಯ ಪರಸಿದನು  ||156||

ಆವಾವ ಕಾಲಕಿವರ್ಗೇನಾಗಬೇಕದನು |
ನೀನೊಲಿದು ಮಾಳ್ಪುದೆಂದೆನುತ ||
ತೀವಿದುತ್ಸಹದಲಾ ಸೌಭದ್ರೆಗರುಹಿ ಬಲ |
ದೇವನರಮನೆಗೆ ನಡೆತಂದ  ||157||

ಬರಲಲ್ಲಿ ರಾಜಮಂದಿರದಿ ಮುರಹರನಿಲ್ಲ |
ದಿರೆ ಕಾಣುತಾಗ ಹಲಧರನು ||
ಉರಿ ಮಸಗಿ ಖತಿಯೊಳಬ್ಬರಿಸಿ ರೋಮಂಗಳ |
ಲ್ಲಿರುವವರ ಕೇಳ್ದು ಇಂತೆಂದ ||158||

ಎಲ್ಲಿ ಪೋದನು ಕೃಷ್ಣನಿಲ್ಲಿ ಕಾಣಿಸನು ಯತಿ |
ವಲ್ಲಭರು ಬಂದಿರ್ಪರವರ ||
ಎಲ್ಲವರು ಕಂಡು ಪದಪಲ್ಲವಕೆ ವಂದಿಸಿದ |
ರಲ್ಲಿ ಬಂದುದ ಕಾಣೆನವನ ||159||

ಆವಾಗ ನೋಡಿದರು ಕಾಮಮೋಹಿತನಾಗಿ |
ಭಾವೆಯರ ವಶದಿ ಬಿದ್ದಿಹನು ||
ದೇವಗುರುವಿಪ್ರರಲಿ ಲವ ಮಾತ್ರ ಭಕುತಿಯಿ |
ಲ್ಲೆೀವೇಳ್ವೆನೆನುತ ಹಲು ಮೊರೆದ ||160||

ಕಂದ

ಎಂದಾ ಬಲಭದ್ರನ ಮನ |
ದಂದವ ತಾನೇ ತಿಳಿಯುತಲೊಯ್ಯನೆ ಬಳಿಕಂ ||
ಬಂದಾ ಮುರಮಥನಂ ಸಾ |
ನಂದದೊಳು ಪೂರ್ವಭವನನೀಕ್ಷಿಸಿ ನುಡಿದಂ || ||161||

ರಾಗ ಸಾರಂಗ ತ್ರಿವುಡೆತಾಳ

ಏತಕೆ ಮರುಳಾಹಿರಿ | ಅಣ್ಣಯ್ಯ ನೀ |
ವೇತಕೆ ಮರುಳಾಹಿರಿ || ಪಲ್ಲವಿ ||

ಏತಕೀ ಪರಿ ಮರುಳಹಿರಿ ಬಂ |
ದಾ ತಿರುಕುಳನ ನೆಲೆಯನರಿಯದೆ |
ನೀತಿಬಾಹಿರರಾಗಿ ತಂಗಿಯ |
ನೋತು ಒಪ್ಪಿಸಿ ಕೊಡುವರೇ ದಿಟ  || ಅನು ಪಲ್ಲವಿ ||

ಆವ ದೇಶಗಳಹುದೋ | ಆರದು ಬುದ್ಧಿ |
ಆವಂಗದಲಿ ಇಹುದೋ | ಆತನ ಚಿತ್ತ |
ನಾವರಿಯಲು ಬಹುದೋ |  ಎಂತಿರುವುದೋ ||
ಈ ವಿಧವನರಿಯದೆ ಸುಭದ್ರಾ |
ದೇವಿಯನು ಬಂದವನ ಸೇವೆಗೆ |
ನೀವು ಪರುಠವ ಗೆಯ್ದು ಭಂಡರ |
ಭಾವರಾದಿರಿ ಭಾವಿಸದೆ ಬರಿ || ದೇತಕೆ ||162||

ರಾಗ ಕಲ್ಯಾಣಿ ಅಷ್ಟತಾಳ

ಏನನುಸಿರಿದೆಯೊ | ಎಲೊ ತಮ್ಮ | ಏನನುಸಿರಿದೆಯೊ  || ಪಲ್ಲವಿ ||

ಏನನುಸಿರಿದೆಯೆಲವೊ ತಮ್ಮ ನಿ |
ದಾನಿಸದೆ ಶ್ರೀಗುರುವರರ ಮಹಿ |
ಮಾನುಭಾವವನರಿಯದೆನ್ನೊಳು |
ಹೀನ ಕಟಕಿಯೆ ಬರಿದೆಯೆನ್ನೊಡ || ನೇನ ||163||

ಈ ಸಮಸ್ತ ಪ್ರಪಂಚವನು ಬಿ |
ಟ್ಟಾಸೆಯನು ತೊರೆದಖಿಳ ವಿಷಯದ |
ವಾಸನೆಗೆ ಮೆಯ್ಗಡದಿರುವ ಸಂ |
ನ್ಯಾಸಿಗಳ ಮೇಲೋಸರಿಸಿ ನೀ || ನೇನ ||164||

ಕದ್ದು ಗೊಲ್ಲರ ಮನೆಯ ಬೆಣ್ಣೆಯ |
ಮುದ್ದೆ ಪಾಲ್ ಮೊಸರುಗಳನೆಲ್ಲವ |
ಮೆದ್ದು ಕೊಬ್ಬಿದ ಡೊಳ್ಳು ತೋರುತ |
ಉದ್ದುರುಟುತನದಿಂದಲೆನ್ನೊಡ || ನೇನ ||165||

ರಾಗ ಶಂಕರಾಭರಣ ಏಕತಾಳ

ಕಂಡುದ ನುಡಿದರೆ ಖಾತಿ | ಗೊಂಡು ಕುಣಿಯಲೇತಕಣ್ಣ |
ಗಂಡನ ಮಾಡನುಜೆಗವನ | ಗಂಡುಸಲ್ಲವೆ ||
ಪುಂಡ ಕೆಲಸಾರೆಲವೊ ಇಂಥಾ | ಭಂಡು ಮಾತನಾಡಿ ನರಕ |
ಕುಂಡದಲ್ಲಿ ಬೀಳದಿರು | ದ್ದಂಡಗರ್ವದಿ ||166||

ಆರು ಪುಂಡರೆಂಬ ಪರಿಯ | ನಾರಿಯನ್ನು ಕದ್ದೊಯ್ವಗ |
ತೋರಿಕೊಡುವೆನೇತಕೀಗ | ಭೂರಿ ಸಂವಾದ ||
ಶ್ರೀರಾಮ ಶಿವ ಶಿವಾ ಇಂಥ | ಕ್ರೂರವಾಕ್ಯವನ್ನು ಕೇಳ್ವ |
ರಾರು ಯತಿಗಳೊಯ್ವುದುಂಟೆ | ಚಾರುನೇತ್ರೆಯ ||167||

ಹಿಂದೆ ಕಪಟಯತಿ ವೇಷದಿ | ಬಂದು ದಶಕಂಧರನು ಧರಣೀ |
ನಂದನೆಯನೊಯ್ದುದ ಕೇ | ಳ್ದಿಂದು ಮರೆವೆಯ ||
ಮುಂದೆ ನಿಲದಿರೆಲವೊ ಯತಿಗ | ಳಂದವನರಿಯದೆ ಪತ್ತು  |
ಕಂಧರನ ಪೋಲ್ವೆಗೆಯ್ದು | ನಿಂದಿಸದಿರು ||168||

ಖುಲ್ಲಯತಿಯ ಸೇವೆಗಿಡುವು | ದೊಳ್ಳಿತಲ್ಲವೆಂದು ತಿಳಿದು |
ದೆಲ್ಲವನ್ನು ಪೇಳ್ದೆನು ಮುಂ | ದಲ್ಲವೆನದಿರು ||
ಅಲ್ಲವೆನಲೇಕದಕೆ ಬಂದು | ದೆಲ್ಲ ಬರಲಿ ನೋಳ್ಪೆನು ನಿ |
ನ್ನಲ್ಲಿ ಕೇಳೆನೆನುತ ಬಲನು | ಸೊಲ್ಲಿಸಿದನು ||169||

ವಾರ್ಧಕ

ಇಂತೆಂದು ಹಲಧರಂ ಮೊಗದಿರುಹೆ ಮುರಹರಂ |
ಮುಂತಪ್ಪ ಕಜ್ಜಕೆ ನಿರಾತಂಕಮಾಯ್ತೆಂದು |
ಸಂತೋಷಮಂ ತಾಳ್ದು ತೆರಳಿದಂ ರಾಜಮಂದಿರಕಾಗಿ ಬಳಿಕತ್ತಲು ||
ಕುಂತೀಕುಮಾರನಿವನೆಂಬುದಂ ತಿಳಿಯದಾ |
ಕಾಂತೆ ಸೌಭದ್ರೆ ಬಳಿಕಾ ಯತಿಯ ಪಾದವ ಮ |
ಹಾಂತಭಕ್ತಿಯಲಿ ಮನವೊಲಿದು ಸೇವಿಸುತಿರ್ದಳರಸ ಕೇಳ್ ದಿನದಿನದೊಳು ||170||

ರಾಗ ಮಧುಮಾಧವಿ ತ್ರಿವುಡೆತಾಳ

ಈ ತೆರದಿ ದಿನದಿನದೊಳಾ ಜಲ | ಜಾತಮುಖಿ ಸೇವಿಸುತಲಿರೆ ಪುರು |
ಹೂತತಯಂಗಾಕೆಯಲಿ ಮನ | ಸೋತುದಿನ್ನೇನೆಂಬೆನು ||171||

ಚಪಲನೇತ್ರೆಯ ಸ್ಮರಣೆಯಂಥಾ | ಜಪವು ತದ್ವಿರಹದಲಿ ಕುದಿವುದು |
ತಪವೆನಿಸಿ ನೋಳ್ಪರಿಗೆ ತೋರ್ಪುದು | ಕಪಟಯೋಗೀಶ್ವರನದು ||172||

ಸಂದುದೀಪರಿ ಮಾಸ ಮೂರದ | ರಿಂದ ಮೇಲಣ ಕಥೆಯನೊರೆದಪೆ |
ನಂದ ಮಿಗೆ ಲಾಲಿಸು ಪರೀಕ್ಷಿತ | ನಂದನನ ನೀ ಮುದದೊಳು ||173||

ಬಳಿಕ ಹಲಧರನೊಂದು ದಿನ ಮನ | ದೊಲವು ಮಿಗಿಲೋಲಗದೊಳೊಪ್ಪಿರೆ |
ಕೆಳದಿಯರ ಕೂಡಾಡುತೆಯ್ತಂ | ದಳು ಸುಭದ್ರೆಯು ಮೆಲ್ಲಗೆ ||174||

ಹೊಗರೊಗುವ ಜವ್ವನದ ಸೊಬಗಿನ | ನಗುಮೊಗದ ನವಮೋಹನಾಂಗದ |
ಮಗನಯನೆಯನು ಕಂಡು ಮನದಲಿ | ಬಗೆದನೀ ತೆರದಿಂದಲಿ ||175||

ತಂಗಿಗುರೆ ಜವ್ವನದ ಬೆಳೆ ಸಿರಿ | ಯಂಗಲತೆಯಲಿ ಫಲಿಸಿತಿನ್ನಿವ |
ಳಿಂಗೆ ಮದುವೆಯನೆಸಗದಿರ್ದಡೆ | ಯಂಗವಲ್ಲಿದು ನೋಡಲು ||176||

ಎಂದು ತಿಳಿದಾ ಬಲನು ಬಳಿಕೆಲೆ | ಮಂದಗಮನೆ ನೀನೇತಕಿಲ್ಲಿಗೆ |
ಬಂದೆ ಬಿನ್ನಯಿಸೆನಲು ಕೇಳ್ದಾ | ಚಂದಿರಾನನೆ ನುಡಿದಳು ||177||

ರಾಗ ತೋಡಿ ಏಕತಾಳ

ಅಣ್ಣ ಲಾಲಿಸು ಯತಿವರರಿಗಾಗುವ ಹಾಲು |
ಹಣ್ಣನೊಯ್ಯಲಿಕರಮನೆಗೆ ಬಂದಿಹೆನು ||
ಪುಣ್ಯವಂತನೆ ನಿನ್ನ ಕಾಣಲೆಂಬೀ ಮನ |
ದೆಣ್ಣಿಕೆಯಿಂದಲಿ ಬಂದೆ ನಾನಿಲ್ಲಿ ||178||

ಒಳಿತಾಯ್ತು ತಂಗಿ ಕುಳ್ಳಿರು ಲಲಿತಾಂಗಿಯೆ |
ಚೆಲ್ಲೆಗಂಗಳ ಬಾಲೆ ಚದುರೆ ಸುಶೀಲೆ ||
ಬಲ್ಲರ್ಷಿಗಳ ಪಾದ ಪಲ್ಲವದಲಿ ಭೇದ |
ವಿಲ್ಲದ ಭಕುತಿ ನಿನ್ನಲ್ಲಿ ಸಿದ್ಧಿಸಿತೆ ||179||

ಭಾಮಿನಿ

ಇಂತೆನುತ ವಿನಯೋಕ್ತಿಯಲಿ ನಲ |
ವಾಂತು ಸಹಭವೆಯಳನು ಮನ್ನಿಸಿ |
ಸಂತಸದಿ ಮಿಗೆ ಕಳುಹಿ ಬಳಿಕಾ ರೋಹಿಣೀಸುತನು ||
ಮುಂತೆ ಮಾಡುವ ರಾಜಕಾರ್ಯವ |
ಚಿಂತಿಸುತ ಕತವರ್ಮಮಂತ್ರಿಯ |
ನಂತರಂಗದಿ ಕರೆಸುತಾಲೋಚಿಸಿದನವನೊಡನೆ ||180||

ರಾಗ ತುಜಾವಂತು ಝಂಪೆತಾಳ

ಕೇಳಯ್ಯ ಕತವರ್ಮ ಮಂತ್ರಿಶೇಖರನೆ |
ಆಲೋಚನೆಯನೊಂದ ಪೇಳ್ವೆ ನಿನ್ನೊಡನೆ || ಕೇಳಯ್ಯ  || ಪಲ್ಲವಿ ||

ಅನುಜೆ ಸೌಭದ್ರೆಗಿನ್ನಿನಿಯನನು ಮಾಡಬೇ |
ಕನುದಿನದಿ ಯೌವನವು ಮೊನೊದೋರ್ದುದವಳ್ಗೆ ||181||

ತರಳಾಕ್ಷಿಗೆಣೆಯಾಹ ವರನೆಲ್ಲಯು ಕಾಣೆ |
ಇರುವುದಿನ್ನೊಂದು ಮನವರುಹಿದಪೆನದನು ||182||

ಕುರುಪತಿಗೆ ಸರಿಯಾದ ದೊರೆಗಳಿಲ್ಲವನಿಯಲಿ |
ತರುಣಿಯನು ಕೊಡುವೆನಾ ಧರಣಿಪಾಲಕಗೆ ||183||

ಭಾಮಿನಿ

ಜಲಜಮುಖಿ ಸೌಭದ್ರೆಯನು ಕುರು |
ತಿಲಕನಿಗೆ ಪರಿಣಯವ ಗೆಯ್ವುದು |
ಸಲೆ ಸುಯೋಗ್ಯವದಾಗಿ ತೋರ್ಪುದಿದೊಂದು ಮನ್ಮನಕೆ ||
ತಿಳಿಯಲಿದು ಹೊರತಾಗಿ ಧರಣೀ |
ತಳದೊಳಾರನು ಕಾಣೆನೆಂದಾ |
ಬಲನು ಪೇಳು ಕೇಳುತಾ ಕತವರ್ಮನಿಂತೆಂದ ||184||