ರಾಗ ಬೇಗಡೆ ಏಕತಾಳ
ಏತಕಿದಕೆ ಸಂದೇಹವು | ಕಾಮಪಾಲ | ಕುರು |
ಭೂತಳೇಂದ್ರಗೆಣೆ ಯಾರುಂಟು | ಕಾಮಪಾಲ ||
ನೂತನದ ಮಾತಿದಲ್ಲ | ಕಾಮಪಾಲ | ನಿನ್ನ |
ಖ್ಯಾತಿವಂತನೆಂಬರ್ ಜಗದಿ | ಕಾಮಪಾಲ ||185||
ಕರೆಸು ಧರಣಿವಿಬುಧರನ್ನು | ಕಾಮಪಾಲ | ಲಗ್ನ |
ಕ್ಕಿರಿಸು ತಕ್ಕ ಸುದಿನವನ್ನು | ಕಾಲಪಾಲ ||
ಬರೆಸಿ ಕಳುಹು ಪತ್ರಿಕೆಯನು | ಕಾಮಪಾಲ | ಕುರು |
ಧರಣೀಶನ ಬಳಿಗೆ ಬೇಗ | ಕಾಮಪಾಲ ||186||
ರಾಗ ಭೈರವಿ ಝಂಪೆತಾಳ
ಕತವರ್ಮನಿಂತೆನಲು | ಅತಿ ಹರುಷದಲಿ ಬಲನು |
ಪಥಿವಿಯಮರರ ಕರೆಸಿ | ಹಿತದಿ ಲಗ್ನವನು ||187||
ಕೇಳಲವರೆಂದರಾ | ತಾಳಾಂಕನೊಡನಂದು |
ನಾಳೆ ಸಪ್ತಮಿಯೊಳಾ | ಮೇಲೆ ದಶಮಿಯಲಿ ||188||
ಇರುವುದೈ ಲಗ್ನವೆರ | ಡರೊಳೊಂದು ಸಿದ್ಧಿಪುದು |
ಪರಮ ವೈವಾಹಕೆಂ | ದರು ಧರಣಿಸುರರು ||189||
ದ್ವಿಪದಿ
ಧರಣಿಸುರರಿಂತೆನಲು ಕೇಳ್ದು ಹಲಧರನು |
ಪರಮ ಹರುಷವನಾಂತು ಪೌರೋಹಿತರನು ||190||
ಕರೆಸಿ ಲಗ್ನವನಿರಿಸಿ ಕುರುಪತಿಯ ಬಳಿಗೆ |
ಬರೆಸಿ ಕಳುಹಿದನು ಪತ್ರಿಕೆಯ ನಲವು ಮಿಗೆ ||191||
ಓಲೆಯುಡುಗೊರೆ ಸಹಿತಲಾ ಪುರೋಹಿತನು |
ಆಳೊಡನೆ ಬಂದನಾ ಗಜಪುರಿಗೆ ತಾನು ||192||
ರಾಗ ಶಂಕರಾಭರಣ ಏಕತಾಳ
ಇತ್ತಲಾ ಗಾರ್ಗ್ಯರು ಬಂದ | ವತ್ತಾಂತವ ಕೇಳ್ದು ಭೂಪಾ |
ಲೋತ್ಮ ಕೌರವ ತೋಷ | ವೆತ್ತು ಮನದಲಿ ||
ಅರ್ತಿಯಿಂದಾಲಯಕೆ ಕರೆದೊ | ಯ್ಯುತ್ತ ಪೂಜೆ ಗೆಯ್ದು ಭಾವ |
ಭಕ್ತಿಯಿಂದ ಪದಕೆ ಮಣಿದು | ಮತ್ತಿಂತೆಂದನು ||193||
ಕ್ಷೇಮವೇ ದ್ವಾರಕೆಯೊಳ್ ಬಲ | ರಾಮದೇವನಿಂಗೆ ಮತ್ತಾ |
ಕಾಮ ಕತವರ್ಮರ್ಗೆ ಪರಿ | ಣಾಮವೇನಯ್ಯ ||
ಭೂಮಿಸುರವರ್ಯರ್ ನೀವು | ಪ್ರೇಮದಿಂದಿಲ್ಲಿಗೆ ಬಂದ |
ನೇಮವ ಪೇಳ್ವುದೀಗೆಂದ | ನಾ ಮಹೀಪಾಲ ||194||
ರಾಗ ಸಾಂಗತ್ಯ ರೂಪಕತಾಳ
ಕುರುರಾಯ ಕೇಳ್ ದ್ವಾರಕೆಯೊಳಿರ್ಪರೆಲ್ಲರ್ಗೆ |
ಪರಿಣಾಮವಯ್ಯ ಭಾವಿಪುದು ||
ಇರುವುದು ಶುಭಕಾರ್ಯವದರಿಂದ ನಿನ್ನೆಡೆ |
ಗಿರದೆಮ್ಮ ಕಳುಹಿದ ಬಲನು ||195||
ಅನುಜೆ ಸೌಭದ್ರೆಯ ನಿನಗೀಯಬೇೆಂಬ |
ಮನದಂದು ಲಗ್ನವನಿರಿಸಿ ||
ವಿನಯದಿಂದೋಲೆಯ ಬರೆದೆಮ್ಮ ಕಳುಹಿಸ |
ಲನುನಯದಿಂದೆಯ್ತಂದಿಹೆವು ||196||
ಎನುತ ಪತ್ರಿಕೆಯನೀಯಲು ಕೌರವೇಂದ್ರನು |
ಘನತೋಷದಿಂದ ಮುಂದಿರುವ |
ಇನಸೂನು ಗುರು ಭೀಷ್ಮ ಅಶ್ವತ್ಥಾಮರ್ಗೆ ತಾ |
ನನುನಯದಿಂದಲಿಂತೆಂದ ||197||
ಕೇಳಿದಿರಲ್ಲ ಕರ್ಣಾದ್ಯರು ಬಲಭದ್ರ |
ನಾಲೋಚಿಸಿದ ಸತ್ಕಾರ್ಯವನು ||
ಓಲೆಯನವಧರಿಸುವುದೀಗಲೆಂದು ಭೂ |
ಪಾಲನೋದಿಸಿದ ತೋಷದಲಿ ||198||
ರಾಗ ಕಾಂಭೋಜಿ ಝಂಪೆತಾಳ
ಶ್ರೀಮತ್ಸಮಸ್ತಸದ್ಗುಣಭರಿತ ಕುರುವಂಶ |
ತಾಮರಸತರಣಿಯೆಂದೆನಿಪ ||
ಭೂಮಿಪತಿ ಕೌರವೇಶ್ವರಗೆ ಹಲಧರನು ಸು |
ಪ್ರೇಮದಲಿ ಬರೆದ ಪತ್ರಿಕೆಯು ||199||
ನಾಳೆ ಬಹ ಸಪ್ತಮಿಯ ಲಗ್ನಕನ್ನನುಜೆಯಹ |
ಲೋಲಲೋಚನೆ ಸುಭದ್ರೆಯನು ||
ಲೀಲೆಯಲಿ ನಿಮಗೆ ಧಾರೆಯನೆರೆದು ಕೊಡುವೆ ಜನ |
ಜಾಲ ವೀಕ್ಷಿಸಲಿದುವೆ ಸಿದ್ಧ ||200||
ಆ ವಿವಾಹೋತ್ಸವಕೆ ನಿಮಗೆ ಬೇಕಾಗಿರುವ |
ಭೂವರರನೊಡಗೊಂಡು ಮುದದಿ ||
ಠೀವಿಯಲಿ ಮದುವಣಿಗನಾಗಿ ನಡೆತಂದು ರಾ |
ಜೀವಲೋಚನೆಯ ವರಿಸುವುದು ||201||
ಇಂತೆಂದು ಬರೆದ ಪತ್ರಿಕೆಯನೀಕ್ಷಿಸುವ ಘನ |
ಸಂತಸದಿ ಕೌರವೇಶ್ವರನು ||
ಮುಂತಿರ್ಪ ಕರ್ಣ ಸೌಬಲರ ಮೊಗ ನೋಡಿ ನಲ |
ವಾಂತು ನಸುನಗುತ ಪೇಳಿದನು ||202||
ರಾಗ ಸುರುಟಿ ಏಕತಾಳ
ಏನನೆಂಬೆನಯ್ಯ | ಹರುಷವ | ನೇನನೆಂಬೆನಯ್ಯ ||
ಸಾನುರಾಗದಿ ಬಲ ತನ್ನನುಜೆಂು ಬಹು | ಮಾನದೊಳಿಂದೆನಗೀಯಲ್ಕೆಣಿಸಿದ || ಪಲ್ಲವಿ ||
ಬಲನ ನೆಂಟತನವು | ಸೇರಲು | ಬಲುಹು ನಮಗೆ ಘನವು ||
ಬಳಿಕಾ ಪಾಂಡು ಕುಮಾರರ ಬಗೆವೆನೆ | ಸೆಳೆದುಕೊಳದೆ ಬಿಡೆ ಶಕ್ರಪ್ರಸ್ಥವ ||203||
ಹರಿ ಮತ್ತೋರುವನು | ಪಾಂಡುಸು | ತರ ವಶವಾಗಿಹನು ||
ಇರಲದಕೇನಾಯ್ತುರುಗಾವಲ ಮಾ | ಳ್ಪನ ಪರಿ ನಾವೀಗರಿತಿಹೆವೈ ಸಲೆ ||204||
ವನದೊಳುದಿಸಿದವರ್ಗೆ | ವಿಪಿನವೆ | ಮನೆಯಲ್ಲದವರ್ಗೆ ||
ಮನವೊಲಿದೆಮ್ಮಯ ರಾಜ್ಯದಿ ಸೂಜಿಯ |
ಮೊನೆಯಷ್ಟನಿಯನೀಯೆನು ದಿಟವಿದು || ||205||
ಕಂದ
ಎಂದರಸಂ ಸೌಬಲ ರವಿ |
ನಂದನರೊಳ್ ಪೇಳೆ ಕೇಳ್ದು ಗಂಗಾತನಯಂ ||
ಮುಂದಿಹ ಗುರುಕೃಪರಿಗೆ ಕ |
ಣ್ಣಿಂದವೆ ಸೂಚಿಸೆ ಕುರುಪತಿಗೀಪರಿ ನುಡಿದರ್ ||206||
ರಾಗ ಕಾಪಿ ಅಷ್ಟತಾಳ
ಜನನಾಥ ಕೇಳೆಮ್ಮ ಸೊಲ್ಲ | ಕೃಷ್ಣ |
ನನುಜೆ ಸೇರುವಳೆಂತೊ ನಿನಗೀಶ ಬಲ್ಲ || ಪಲ್ಲವಿ ||
ಹರಿ ಬಲು ಕಪಟನಾಟಕನು | ಹಲ |
ಧರನೆಣಿಕೆಗೆ ಎರಡನು ತಾರದಿರನು ||
ಅರಿಯೆವೀ ಕಾರ್ಯವೆಂತಹುದೊ | ಮೇಣ್ |
ವರ ವಸುದೇವನ ಮನಸು ಹೇಗಿಹುದೊ || ಜನನಾಥ ||207||
ದೇವಕಿಯಿದಕೆ ಮನತಹಳೆ | ಸತ್ಯ |
ಭಾಮೆಯೊಪ್ಪುವಳೆ ರುಗ್ಮಿಣಿ ಸುಮ್ಮನಿಹಳೆ ||
ನೀವು ವಿಚಾರಿಸದಿಂತು | ಬಲ |
ದೇವನೋರ್ವನ ಮಾತಿಗೊಪ್ಪುವುದೆಂತು || ಜನನಾಥ ||208||
ಮದುವೆಯ ಕಾರ್ಯವಂತಿರಲಿ | ನೀವು |
ಕದನವನೆಸಗುವಿರಾ ಪಾಂಡವರಲಿ ||
ಇದು ನಿಮಗುಚಿತವೆ ನೋಡು | ಮುಂದ |
ಭ್ಯುದಯದ ಕೆಲಸವನರಿತು ಮಾತಾಡು | ಜನನಾಥ ||209||
ರಾಗ ಮಾರವಿ ಏಕತಾಳ
ಗುರುಕೃಪರೆಂದುದ ಕೇಳುತಲಾ ಭಾ | ಸ್ಕರನಂದನ ತಾನು ||
ಅರಸನ ಚಿತ್ತಕೆ ಸರಿಬರದವರನು | ಪರಿಹಾಸಿಸಿ ನುಡಿದ ||210||
ನಿವಗೇತಕೆ ಹಾರುವರಿಗೆ ರಾಜ | ಪ್ರವರದ ಮಾತುಗಳು ||
ತೊವೆ ಶಾಲ್ಯೋಗರ ಘತ ಭಕ್ಷ್ಯಂಗಳ | ಸವಿದಂತಲ್ಲವಿದು ||211||
ಉಂಡ ಮನೆಗೆ ನೆರೆ ವಿಷಮವನೆಣಿಸುತ | ಕಂಡವರನು ಹೊಗಳಿ ||
ಗಂಡುಗೆಡುವಿರಲ್ಲದೆ ನೀವ್ ನಪ ಕೈ | ಗೊಂಡದಕೊದಗುವಿರೆ ||212||
ಹಲಧರನೊರ್ವನ ಒಲುಮೆಯು ನಮಗಿರ | ಲುಳಿದವರಿಂದೇನು ||
ತಿಳಿಯದೆ ನೀವ್ ಸಲೆ ಗಳಹುವಿರೆಂದನು | ಮುಳಿದಾ ರವಿಸೂನು ||213||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸರಸಿರುಹಸಖನಣುಗನೀ ಪರಿ |
ಜರೆದು ನುಡಿಯಲು ಕೇಳಿ ಮನದೊಳ |
ಗುರಿ ಮಸಗಿ ಗುರುಸೂನು ನುಡಿದನು | ಭರದೊಳವಗೆ ||214||
ಎಲವೊ ಸೂತನ ಮಗನೆ ನಿನ್ನಯ |
ಕುಲವನೆಣಿಸಿಕೊ ಸಾಕು ಸುಮ್ಮನೆ |
ಗಳಹದಿರು ನಿನ್ನಂತವರ ನಾವ್ | ತಿಳಿಯದವರೆ ||215||
ಕಂಡುದನು ಪಿತನರಸಗೆಂದಡೆ |
ಕೊಂಡು ಕೊನರುತ ಖತಿಯೊಳವರನು |
ಗಂಡುಗೆಡಿಸಿಯೆ ನುಡಿದೆಯೈ ಸಲೆ | ಭಂಡತನದಿ ||216||
ಹಲವು ಮಾತೇನಯ್ಯನನು ನೆರೆ |
ಹಳಿದ ನಿನ್ನಯ ನಾಲಿಗೆಯ ಹೆಡ |
ತಲೆಯಲುಗಿವೆನೆನುತ್ತ ಖಡುಗವ | ಝಳಪಿಸಿದನು ||217||
ಫಡ ದ್ವಿಜಾಧಮ ನಿನ್ನ ರಕ್ತವ |
ಕುಡಿಸುವೆನು ಕೂರಸಿಗೆನುತ್ತವ |
ಘಡದಿ ರವಿಸುತನೊಡನೆ ಖಡುಗುವ | ಝಡಿದು ನಿಂದು ||218||
ಅಹಹ ಕೆಟ್ಟಿತು ಕಾರ್ಯವೆನುತಲಿ |
ವಹಿಲದಿಂದಲಿ ಕೌರವೇಂದ್ರನು |
ಸಹಸಿಗನೆ ಮಾಣೆನುತ ಹಿಡಿದನು | ಮಿಹಿರಸುತನ ||219||
ಭಾಮಿನಿ
ಬಿಡು ಬಿಡವನೀಪಾಲ ಗುರುಸುತ |
ನೊಡಲೊಳುಗಿವೆನು ಕರುಳನೆನ್ನನು |
ತಡೆದು ಕೆಡಿಸಿದೆಯಕಟೆನುತ ದುಡುಕಿದನು ರವಿಸೂನು ||
ಮಿಡುಕುತಿರ್ದನು ದ್ರೌಣಿ ಬಳಿಕವ |
ಗಡೆಯಲೀರ್ವರ ಮಧ್ಯದಲಿ ನಿಂ |
ದೊಡಬಡಿಸಿದನು ಕೌರವೇಶ್ವರನಂದು ಸಾಮದಲಿ ||220||
ರಾಗ ಪಂತುವರಾಳಿ ಏಕತಾಳ
ಹೋ ಹೋ ಮೆಚ್ಚಿದೆನಿದಕೆ | ನಿಮ್ಮಯ ಘನ |
ಸಾಹಸ ಶುಭಗುಣಕೆ ||
ಈ ಹದನ ನೆನೆದರೆ | ನಾ ಹೇಳುವೆನು ಮುಂದಾ |
ವಾಹಿಸಿಕೊಂಡ ವಿ | ವಾಹಕೆ ನಿಮ್ಮಿಂ |
ದಾಹುದ ಮಾಳ್ಪಿರಿ | ಬಾಹುಬಲಾಢ್ಯರು || ಹೋ ಹೋ ||221||
ಬಲುಹು ನಿಮ್ಮೊಳಿರಲದು | ಮೇಲೆಮ್ಮ ವೈರಿ |
ಗಳ ಮೇಲೆ ತೋರಬಹುದು ||
ಒಳಗೊಳಗೇಕಿಂತು | ಕೆಲದಾಡಿಕೊಂಬಿರಯ್ಯ |
ಕೊಳಗುಳವಲ್ಲಿದು | ಸಲೆ ಶುಭಲಗ್ನದಿ |
ಕೆಲಸಕೆ ವಿಘ್ನಂ | ಗಳ ಮಾಡುವಿರೆ || ಹೋ ಹೋ ||222||
ವಾರ್ಧಕ
ಎಂದು ಗುರುಸುತ ತರಣಿತನಯರಂ ಸಂತಿವಿಸಿ |
ಮುಂದಣ ಸುಕಾರ್ಯಮಂ ನಿಶ್ಚಯಿಸಿ ಮನದೊಳಾ |
ನಂದದಿಂದಾ ಕೌರವೇಶ್ವರಂ ತನ್ನ ಪಿತನಾದ ಧತರಾಷ್ಟ್ರನೆಡೆಗೆ |
ಬಂದು ಪದಕೆರಗಿ ವೈವಾಹವತ್ತಾಂತಮ |
ನ್ನೊಂದುಳಿಯದರುಹೆ ಕೇಳುತ್ತ ಚಾಂಚಲ್ಯಮನ |
ದಿಂದಲೊಯ್ಯನೆ ನುಡಿದನಾ ಮಹೀಪಾಲಕಂ ತನ್ನ ನಿಜನಂದನನೊಳು ||223||
ರಾಗ ಶಂಕರಾಭರಣ ತ್ರಿವುಡೆತಾಳ
ಸೊಗಸೆ ಸಿಂಹದ ಕೂಸು ನರಿಯನು |
ಬಗೆಗೆ ತಹುದೇ ವ್ಯಾಘ್ರನ ||
ಮಗುವು ಕುರಿಯನು ಕೂಡಬಲ್ಲುದೆ | ಜಗತಿಯೊಳಗೆ ||224||
ಮಗನೆ ನಿನಗಾ ಕಮಲನೇತ್ರನ |
ಭಗಿನಿ ಮುದದೀ ವಧುವಹ ||
ಬಗೆಯ ಕಾಣೆನದೇಕೆ ಮರುಳಹೆ | ಮುಗುದತನದಿ ||225||
ತರಣಿಯಿಹ ಠಾಣದಲಿ ಕತ್ತಲೆ |
ಮೆರೆವುದುಂಟೇ ಖಗಪತಿ ||
ಅರವಟಿಗೆಯುದಕಕ್ಕೆ ಫಣಿ ಬಾ | ಯ್ದೆರೆವುದುಂಟೆ ||226||
ಹರಿಯ ಕೌಳಿಕವಿದ್ಯವನು ನೀ |
ನರಿಯದಿಂತು ಪೋದರೆ ||
ಬರುವುದಪಜಯವೆಂದನಣುಗಂ | ಗರಸನಂದು ||227||
ರಾಗ ಕೇದಾರಗೌಳ ಅಷ್ಟತಾಳ
ಧತರಾಷ್ಟ್ರನಿಂತೆನೆ ಕೇಳುತ ಮನದಲಿ |
ಖತಿಗೊಂಡು ಕುರುರಾಯನು ||
ಅತಿವದ್ಧನೆಂದುದನತಿಗಳೆದವರುಂಟೆ |
ಹಿತವನಾಡಿದಿರೆಂದನು ||228||
ಹಿರಿಯರು ನೀವೆಂಬ ಪರಿಗಾಗಿ ಕೇಳಿದ |
ಡರಿಯದೆ ನುಡಿದಿರಲ್ಲ ||
ನೆರೆ ನಮ್ಮ ಚಿತ್ತಕೆ ಸರಿ ಬಂದ ತೆರದೊಳು |
ವಿರಚಿಪೆನಿದನೆಂದನು ||229||
ಎಂದು ಕೌರವರಾಯನುಸಿರಲು ಕೇಳುತ್ತ |
ಲಂಧನಪಾಲಕರು ||
ಚಂದವಾಯ್ತೆಮಗೇನು ನಿನ್ನ ಚಿತ್ತಕೆ ಸರಿ |
ಬಂದವೋಲೆಸಗೆಂದನು ||230||
ಭಾಮಿನಿ
ಕೇಳು ಜನಮೇಜಯ ಧರಿತ್ರೀ |
ಪಾಲ ಬಳಿಕ ಗತಾಕ್ಷನಪತಿಯ |
ಬೀಳುಗೊಟ್ಟಾ ಕೌರವನು ವೈವಾಹದುತ್ಸವಕೆ ||
ಮೇಲ್ವರಿದು ಮಗಧಾದಿ ಪಥ್ವೀ |
ಪಾಲರಲ್ಲಿಗೆ ಚರರನಟ್ಟಿದ |
ನೋಲೆಯುಡುಗೊರೆ ಸಹಿತ ಕರೆಯಲ್ಕಧಿಕ ಹರುಷದಲಿ || ||231||
ರಾಗ ಮಧ್ಯಮಾವತಿ ತ್ರಿವುಡೆತಾಳ
ಬಳಿಕ ಬಲನ ಪುರೋಹಿತರು ಮನ |
ವೊಲಿಯೆ ಮನ್ನಣೆಗೆಯ್ದು ಕೌರವ |
ಕುಲಶಿರೋಮಣಿ ನುಡಿದನಾ ಮುನಿ | ತಿಲಕನೊಡನೀ ತೆರದಲಿ ||232||
ಬಹೆವು ನಾಳಿನ ಸಪ್ತಮಿಗೆ ಸ |
ನ್ನಿಹಿತರಾಗಿಯೆ ಮಾಗಧಾದ್ಯರು |
ಸಹಿತ ನೀವಿದನರುಹುವುದು ಘನ | ಮಹಿಮ ನೀಲಾಂಬರನೊಳು ||233||
ಎಂದು ಗಾರ್ಗ್ಯರ ಕಳುಹಿ ಬಳಿಕಾ |
ನಂದದಲಿ ವೈವಾಹವಸ್ತುವ |
ನಂದು ಜೋಡಣೆಗೆಯ್ದು ಪುರವನು | ಚಂದದಲಿ ಶಂಗರಿಸಿದ ||234||
ಕಂದ
ಧರಣಿಪ ಕೇಳಿತ್ತಲು ಕುರು |
ವರನಂ ಬೀಳ್ಗೊಟ್ಟಯ್ದುತಲಾ ದ್ವಾರಕೆಗಂ ||
ಅರುಹಿದನಾ ಗಾರ್ಗ್ಯಂ ಹಲ |
ಧರನೊಡನಾಗ ಸಕಲ ವಾರ್ತೆಯ ಸನ್ಮುದದಿಂ || ||235||
ರಾಗ ಮುಖಾರಿ ಏಕತಾಳ
ಕೇಳು ಕೇಳಯ್ಯ ಬಲಭದ್ರ | ಕರುಣಾಸಮುದ್ರ |
ಕೇಳು ಕೇಳಯ್ಯ ಬಲಭದ್ರ ||
ಶೀಲಗುಣೈಕವಿಶಾಲ ಕುರುಕ್ಷಿತಿ |
ಪಾಲನನೀಕ್ಷಿಸಿ ಓಲೆಯನಿತ್ತೆನು ||236||
ಕಂಡು ನೀ ಬರೆದ ಪತ್ರಿಕೆಯನು | ಚಿತ್ತದಿ ತೋಷ |
ಗೊಂಡನಾ ಕುರುಕುಲಾಧೀಶ್ವರನು | ಪೇಳಲೇನದನು ||
ಖಂಡಿತದಲಿ ಮಾರ್ತಂಡಸುತಾದಿ ಸು |
ಮಂಡಲಿಕರು ಕೈಗೊಂಡರಿದುವನು ||237||
ಮಾಗಧ ಮುಖ್ಯ ನಪಕುಲಕೆ | ಲೇಖನವ ಬರೆಸಿ |
ಸಾಗಿಸಿದನು ಪರಿಣಯಕೆ | ಕರೆಸಲೆಂಬುದಕೆ ||
ಮೇಗೆಮ್ಮುವನು ಸರಾಗದಿ ಬಹು ಪರಿ |
ಯಾಗುಪಚರಿಸಿದನಾ ಗುಣಮಣಿಯು ||238||
ಭಾಮಿನಿ
ಲೀಲೆ ಮಿಗೆ ಬಹೆವೆಂದು ಮನ್ನಿಸಿ |
ಮೇಲೆ ನಮ್ಮನು ಕಳುಹಿದನು ಭೂ |
ಪಾಲ ಕೌರವನೆಂದು ಸಾಂಗದೊಳಖಿಲವಾರ್ತೆಗಳ ||
ಪೇಳೆ ಗಾರ್ಗ್ಯನ ನುಡಿಯ ಕೇಳ್ದು ವಿ |
ಶಾಲತರ ಸಂತೋಷದಿಂದಾ |
ತಾಳಕೇತನ ತನ್ನ ಮಂತ್ರಿಯ ಕರೆದು ನೇಮಿಸಿದ ||239||
ರಾಗ ಭೈರವಿ ಝಂಪೆತಾಳ
ಕತವರ್ಮ ಕೇಳು ಕುರು | ಪತಿ ಸುಭದ್ರೆಯ ವರಿಸೆ |
ಮತಿಗೆಯ್ದನಂತೆ ಬಲು | ಹಿತವಾಯ್ತು ಮನಕೆ ||240||
ಶಂಗರಿಸು ಪುರವ ವಾ | ರಾಂಗನೆಯರೆಲ್ಲವರು |
ಮಂಗಲಾಂಬರ ಭೂಷ | ಣಂಗಳಿಂದಿರಲಿ ||241||
ಸಕಲ ದೇಶದ ನಪಾ | ಲಕರಿಗೋಲೆಯನು ಚಾ |
ರಕರ ಮುಖದಲಿ ವಿವಾ | ಹಕೆ ಬರೆಸಿ ಕಳುಹು ||242||
ವಚನ
ಈ ಪ್ರಕಾರದಿಂ ಬಲಭದ್ರಂ ನಿರೂಪಿಸಲಾ ಕತವರ್ಮಮಂತ್ರೀಶ್ವರಂ ಸಮಸ್ತ ಪಥ್ವೀಪಾಲರಿಂಗೋಲೆಯಂ ಬರೆಸಿ ಕಳುಹಿ ಬಳಿಕ ಪುರವ ಶಂಗರಿಸಿದನದೆಂತೆನೆ –
ರಾಗ ಸಾಂಗತ್ಯ ರೂಪಕತಾಳ
ಚಾರು ಸೌರಭದ ಕಸ್ತುರಿಯ ಸಾರಣೆಯ ಪ |
ನ್ನೀರಿನ ಛಳಿಯ ತಂಪುಗಳ ||
ಸಾರಮುತ್ತಿನ ರಂಗವಲ್ಲಿಗಳ ಸೊಬಗಿನಿಂದ |
ದ್ವಾರಕಾನಗರವೊಪ್ಪಿದುದು ||243||
ಕಳಶಗನ್ನಡಿ ಗುಡಿ ತೋರಣ ಸೀಗುರಿ |
ಚಲಿತ ಪತಾಕೆ ಶೋಭಿಸುವ ||
ತಳಿರುತೋರಣ ಪೊನ್ನಮದನಕೈಯಿಂದಲಿ |
ಪೊಳಲೆಸೆದುದು ರಮ್ಯವೆನಿಸಿ ||244||
ಮುಲ್ಲೆ ಮಲ್ಲಿಗೆ ಜಾಜಿ ಸೇವಂತಿಪೂಗಳ |
ಝಲ್ಲಿ ರಂಜಿಸಿತು ಬೀದಿಯಲಿ ||
ಎಲ್ಲಿ ನೋಡಿದರು ತೂರ್ಯತ್ರಯರವದಿಂದ ||
ಚೆಲ್ವಾದುದಾ ಪುರವರವು ||245||
ವಾರ್ಧಕ
ಅವನಿಪಾಲಕ ಲಾಲಿಸಿಂತು ವೈವಾಹದು |
ತ್ಸವಕೆ ಸನ್ನಹಮಾಗೆ ಬಳಿಕ ಕತವರ್ಮಕನ |
ಕುವರಿಯೊರ್ವಳ್ ಕಲಾವತಿಯೆಂಬಳಿಹಳು ಸೌಭದ್ರೆಗತಿ ಮಿತ್ರೆಯೆನಿಸಿ ||
ಅವಳೀ ಸಮಸ್ತ ವತ್ತಾಂತಮಂ ಕೇಳುತ್ತ |
ಯುವತಿಯರ ಕುಲಶಿರೋಮಣಿ ಸುಭದ್ರೆಯ ಪೊರೆಗೆ |
ತವಕದಿಂದೆಯ್ತಂದು ಕಿರುನಗೆಯ ಸೂಸುತಿಂತೆಂದಳೀ ಮಾತನಂದು ||246||
ರಾಗ ನಾದನಾಮಕ್ರಿಯೆ ಮಟ್ಟೆತಾಳ
ಏನೆ ಚಂದ್ರಮುಖಿ ಸೌಭದ್ರೆ | ಮಾನವಂತೆ ಇಂದು ನಿನ್ನ |
ಆನನವು ಪ್ರಕಾಶವಾಗಿ | ಕಾಣಿಸುತಲಿದೆ ||247||
ಧರಣಿಪಾಲ ಕೌರವೇಂದ್ರ | ನರಸಿಯಾಹೆ ನೀನೆಂದೆಂಬ |
ಹರುಷದಿಂದ ಮುಖದ ಕಾಂತಿ | ಹಿರಿದು ಹೆಚ್ಚಿತೆ ||248||
ಎಂದ ಮಂತ್ರಿಸುತೆಯ ಮಾತಿ | ನಂದನ್ನು ಕೇಳ್ದು ಖಾತಿ |
ಯಿಂದ ನುಡಿದಳಾ ಸುಭದ್ರೆ | ನಿಂದು ಕನಲುತ ||249||
ರಾಗ ಪಂತುವರಾಳಿ ಏಕತಾಳ
ಈ ರೀತಿ ಪೇಳ್ವರೇನೆ | ಮಾನಿನಿರನ್ನೆ | ಈ ರೀತಿ ಪೇಳ್ವರೇನೆ || ಪಲ್ಲವಿ ||
ಈ ರೀತಿ ಪೇಳ್ವರೇನೆ | ವಾರಣಸನ್ನಿಭಯಾನೆ |
ಕ್ರೂರವಾದ ವಾಕ್ಯವ ವಿ | ಚಾರಿಸದೆ ನುಡಿದೆಯಲ್ಲ ||
ಈ ರೀತಿ ಪೇಳ್ವರೇನೆ ||250||
ತರಣಿ ತಣ್ಣಗಾದರೇನು | ಶರಧಿಯೇಳೊಂದಾದರೇನು |
ದುರುಳ ಕೌರವ ಕುನ್ನಿಗಾ | ನರಸಿಯಹ ಪರಿಯುಂಟೇನೆ ||
ಈ ರೀತಿ ಪೇಳ್ವರೇನೆ ||251||
ಸಲ್ಲದಂಥ ನುಡಿಗಳಾ ನೀ | ನಲ್ಲದಿನ್ನಾರು ಪೇಳಿರಲು |
ಹಲ್ಲ ಮುರಿದು ಕೊಡುವೆನು ಸು | ಳ್ಳಲ್ಲ ಕೇಳೆ ಫುಲ್ಲನೇತ್ರೆ ||
ಈ ರೀತಿ ಪೇಳ್ವರೇನೆ ||252||
Leave A Comment