ವಾರ್ಧಕ

ಪರಿಪರಿಯ ಪಕ್ವಫಲಭಾರದಿಂ ಕೀರದಿಂ |
ಮೆರೆವ ನಾನಾವಿಧದ ತರುಗಳಿಂ |
ದರಳಿರ್ಪ ಸೌರಭ ಸುಮಂಗಳಿಂ ಹಿಮಗಳಿಂದೊಪ್ಪುತಿಹ ಕೊಳಗಳಿಂದ ||
ಮೆರೆದಿರ್ಪ ಷಟ್ಪದಗಳಂದದಿಂ ಚಂದದಿಂ |
ನೆರೆ ಬೀಸುತಿರ್ಪ ತಂಗಾಳಿಯಿಂ ಕೇಳಿಯಿಂ |
ದಿರದೆ ಕುಣಿಕುಣಿವ ಪೊಮ್ಮಿಗಗಳಿಂ ಖಗಗಳಿಂದುದ್ಯಾನ ಕಣ್ಗೆಸೆದುದು ||378||

ಕಂದ

ಇಂತೊಪ್ಪುವ ಪ್ರಮದಾವನ |
ಕಂ ತಾಂ ತಳುವದೆಯ್ದಿ ಬಾಗಿಲೊಳ್ ಸತಿಯರನುಂ ||
ನಿಂತಿರಿಸಿಯೆ ತಾ ಮುಂದಕೆ |
ಚಿಂತಿಸುತಡಿಯಿಟ್ಟಳಾ ಕಪಟಯತಿಯೆಡೆಗಂ ||379||

ರಾಗ ಸಾಂಗತ್ಯ ರೂಪಕತಾಳ

ಅಕಟಕಟೇಕೆ ಪುಟ್ಟಿದೆನೊ ಸ್ತ್ರೀ ಜನ್ಮದಿ |
ಸುಖಹೀನೆಯಾಗಿ ಪೃಥ್ವಿಯಲಿ ||
ಸಕಲಗುಣಾಢ್ಯ ಪಾರ್ಥನ ಕಾಣೆ ಕರದಿ ಮಾ |
ಲಿಕೆ ಸೇರ್ದುದೇನ ಮಾಡುವೆನು ||380||

ಹರ ಹರ ನಾರದಮುನಿಯೆಂದ ಮಾತೆಲ್ಲ |
ಬರಡಾದುದೈಸೆ ಇನ್ನೇನು ||
ಗುರುಗಳ ಕಂಡು ವಂದನೆಗೆಯ್ದ ಮೇಲೆ ನಾ |
ತೊರೆವೆನಿಲ್ಲಿಯೆ ಪ್ರಾಣವನ್ನು ||381||

ಎಂದು ಚಿತ್ತದಲಿ ನಿಶ್ಚಯಿಸಿ ಸೌಭದ್ರೆ ತಾ |
ನಂದು ತಾಪಸರೂಪವೆತ್ತ ||
ವಂದಾರಕೇಂದ್ರನಂದನನೆಡೆಗೆಯ್ತಂದು |
ವಂದನೆಯನು ಗೆಯ್ದಳಳುತ ||382||

ಅಳುತ ಬಂದಡಿಗೆರಗಿದ ಕಮಲಾಕ್ಷಿಯ |
ನಲವಿಂದ ಪಿಡಿದೆತ್ತಿ ಬೇಗ ||
ಸುಲಲಿತ ವಾಕ್ಯದಿ ಮಾತನಾಡಿಸಿದನು |
ಫಲುಗುಣನಾಕೆಯನಾಗ ||383||

ರಾಗ ಕಲ್ಯಾಣಿ ಏಕತಾಳ

ಮಗವಿಲೋಚನೇ | ನಿನ್ನಯ ಚಿತ್ತದ |
ದುಗುಡವೇನು ಪೇಳೆ ||
ಸುಗುಣೆ ನಿನ್ನ ಸಿರಿ | ಮೊಗವೇನು ಕಂದಿದೆ |
ಬೆಡಗುಗೊಂಬೆ ಬಹು | ಬಗೆಯೊಳಿದೇತಕೆ || ಮಗವಿಲೋಚನೇ ||384||

ವಿನುತ ಸುವೈವಾಹದ | ಶುಭಕಾಲದೊ |
ಳಿನಿತು ದುಃಖಿಸುವರೆ ||
ವನಜಗಂಧಿ ನಿ | ನ್ನನುವನದೆಲ್ಲವ |
ನೆನಗೆ ಪೇಳೆ ಸು | ಮ್ಮನೆ ಭಯಗೊಳದಿರು || ಮಗವಿಲೋಚನೇ ||385||

ರಾಗ ಕೇದಾರಗೌಳ ಅಷ್ಟತಾಳ

ಎಂದು ಕೇಳಲು ಬಿಕ್ಕಿಬಿರಿದಳಲುತ್ತಲಾ |
ಸುಂದರಿ ದುಗುಡದೊಳು ||
ಬಂದ ಹರಿಬವನ್ನು ಪೇಳ್ದಳು ಯತಿವೇಷ |
ದಿಂದಿರ್ಪ ಪಾರ್ಥನೊಳು ||386||

ಖೂಳ ಕೌರವಗೆನ್ನನೀವರೆಂಬುದಕೆ ನಾ |
ತಾಳಿರ್ಪೆ ಚಿಂತೆಯನು ||
ಪೇಳಿದ ನಾರದಮುನಿ ಬಂದು ನರನೆ ನಿ |
ನ್ನಾಳಿದನಾಹನೆಂದು ||387||

ಅವರ ಮಾತಿನ ಭರವಸದೊಳಗಿರ್ದೇನೀ |
ವರೆಗೆ ಪಾರ್ಥನ ಕಾಣೆನು ||
ಸವನಿಸಿಕೊಂಡೀಗ ಬಂದುದು ಪಾಪಿ ಕೌ |
ರವನ ದಿಬ್ಬಣವಿನ್ನೇನು ||388||

ಧುರಧೀರ ವಿಜಯನಲ್ಲದೆ ಮಿಕ್ಕ ಖಳರಿಗೆ |
ಧರಿಸೆನು ಮಾಲೆಯನು ||
ವರಯತಿಗಳು ನಿಮ್ಮ ಕಂಡೆನು ಸಾಕಿನ್ನು |
ತೊರೆವೆನೀ ಪ್ರಾಣವನ್ನು ||389||

ಇಂತಳುತಿಹಳನು ಕಂಡು ನೀ ಪಾರ್ಥನ |
ನೆಂತರಿದಪೆಯೆನಲು ||
ದಂತಿನೋಹಿಲಿ ಕಂಡ ಕುರುಹುವುಂಟೆನುತಲಾ |
ಕಾಂತೆಯಾತಗೆ ಪೇಳ್ದಳು ||390||

ಭಾಮಿನಿ

ಎನಲು ನಸುನಗುತೆಂದನೆಲೆ ಕಾ |
ಮಿನಿಶಿರೋಮಣಿ ಪುಸಿಯಹುದೆ ಸುರ |
ಮುನಿಯ ವಚನವು ಬೇಡಿಕೊಳ್ಳೀ ಚಂಡಿಕೆಯನೆನಲು ||
ನಿನಗೆ ವಶವಹ ಫಲುಗುಣನು ಸು |
ಮ್ಮನೆ ಶರೀರವ ತೊರೆವೆಯೇಕೆಂ |
ದನುನಯದೊಳೊಡಬಡಿಸಿ ಕಾಳಿಯ ಗುಡಿಗೆ ಕರೆತಂದ ||391||

ರಾಗ ಕಾಂಭೋಜಿ ಝಂಪೆತಾಳ

ಧರಣೀಂದ್ರ ಲಾಲಿಸಿಂತಲ್ಲಿಗೆಯ್ತಂದವಳು |
ಪರಿ ಪರಿಯೊಳಾ ಚಂಡಿಕೆಯನು ||
ಭರದಿ ಸಂಸ್ತುತಿಸಿ ಸಾಷ್ಟಾಂಗದಿಂದೆರಗಿರಲು |
ನರನು ನಿಜರೂಪವನು ತಳೆದು || ||392||

ಸುರಸುತನೇ ತನಗೆ ವರನಾಗಬೇಕೆಂದು |
ಚರಣಕೆರಗಿಯೆ ಬೇಡಿ ಬಳಿಕ ||
ತ್ವರಿತದಿಂದೇಳುತ್ತ ಸೌಭದ್ರೆ ಕಂಡಳಿದಿ |
ರುರೆ ಸಂಭ್ರಮದಿ ಮೆರೆವ ನರನ ||393||

ಮಿಸುಪ ಮಣಿಮುಕುಟದೆಳೆನಗೆ ಮೊಗದ ನವರತ್ನ |
ವೆಸೆದು ಶೋಭಿಸುವ ಭೂಷಣದ ||
ಅಸಮ ಕಾಂತಿಯಲಿ ರಂಜಿಸುವ ಪಾರ್ಥನ ಕಂಡ |
ಳಸುರಹರನನುಜೆ ಮುಂದಿನಲಿ ||394||

ಹೆಚ್ಚಿದಳು ಸಂತೋಷದಿಂದ ಮಿಗೆ ಕಂಡು ಕ |
ಣ್ಮುಚ್ಚಿದಳು ರೂಪಾತಿಶಯಕೆ ||
ಮೆಚ್ಚಿದಳು ಪಾರ್ಥನಾಳ್ತನಕೆ ಸ್ಮರನುರುಬೆಗುರೆ |
ಬೆಚ್ಚಿ ನಾಚಿದಳು ಲಲಿತಾಂಗಿ ||395||

ಸುರದುಂದುಭಿಯು ಮೊಳಗೆ ಸುಮವಷ್ಟಿ ಸೂಸಲ |
ಪ್ಸರೆಯರಂಬರದಿ ನಲಿದಾಡೆ ||
ಪರಮ ಸಂತಸದಿಂದ ಪುಷ್ಪಮಾಲೆಯ ನರನ |
ಕೊರಳಿಗಿಕ್ಕಿದಳು ಸೌಭದ್ರೆ ||396||

ಭಾಮಿನಿ

ಕೇಳು ಜನಮೇಜಯ ಧರಿತ್ರೀ |
ಪಾಲ ಬಳಿಕಾ ಪಾರ್ಥನೊಲಿದಾ |
ಲೋಲನೇತ್ರೆಯನಪ್ಪಿ ಮುದ್ದಿಸಿ ಬೆರಳಿನುಂಗುರವ ||
ಲೀಲೆಯಿಂದಿತ್ತಾಗ ಮನ್ನಿಸ |
ಲಾ ಲತಾಂಗಿಯು ಮರುಗಿ ವಿಜಯನ |
ಕಾಲಿಗೆರಗುತಲೆಂದಳೊಯ್ಯನೆ ಮಧುರವಚನದಲಿ ||397||

ರಾಗ ಸುರುಟಿ ಏಕತಾಳ

ಇನಿಯ ಲಾಲಿಸಿನ್ನು ಹೆಚ್ಚು ಮಾತಿದೇನು | ನಿನ್ನ |
ಘನಲಾಘವವ ಕಂಡು ಬೆರಗಾದೆ ನಾನು ||
ಜನರು ತಿಳಿಯದಂತಿಲ್ಲಿಂದ ತಪ್ಪುವಂತೆ | ಮುಂದಿ |
ನ್ನನುವ ನೋಳ್ಪುದೆಂದಳು ಕೈ ಮುಗಿದು ಕಾಂತೆ ||398||

ಕೆಳದಿಯರ ಮಂಡೆಯ ಮಾಣಿಕವೆ ನೀನು | ಮನದಿ |
ತಳೆಯದಿರು ಭಯವನೆನ್ನ ಸಹಸವನ್ನು ||
ತಳುವದೀಗ ತೋರುವೆನು ನೋಳ್ಪುದೆಂದು | ವೀರ |
ಫಲುಗುಣನು ಹನುಮನನ್ನು ನೆನೆದನಂದು || ||399||

ರಾಗ ಮಾರವಿ ಏಕತಾಳ

ಅವನಿಪ ಕೇಳೈ ನೆನಸಿದ ಮಾತ್ರದಿ | ಪವನಕುಮಾರಕನು ||
ತವಕದೊಳೆಯ್ತಂದೇನೆಂದನು ವಾ | ಸವನ ಕುಮಾರನೊಳು ||400||

ಸುರಪಾತ್ಮಜ ನೀನೇತಕೆಯೆನ್ನನು | ಸ್ಮರಿಸಿದೆಯೈ ಮನದಿ ||
ನೆರೆ ಎನ್ನಿಂದಹ ಕಾರಿಯವೇನದ | ನರುಹೈ ಶೀಘ್ರದಲಿ ||401||

ಹಿಂದೆ ಶರದಿ ಸೇತುವ ನೀ ಹರಿಕಪೆ | ಯಿಂದಲಿ ವಿರಚಿಸಲು ||
ಅಂದದ ಮುರಿಯಲು ಹರಿಯದಿರಲ್ಕಾ | ನೆಂದೆನು ನಿನ್ನೊಡನೆ ||402||

ಸ್ಮರಿಸಿದ ವೇಳೆಗೆ ಬರುವೆನು ನಿನ್ನಯ | ಹರಿಬಕೆ ನಾನೆಂದೆ ||
ಅರುಹೀಗಳು ಬಂದಿರುವುದನೆನಲಾ | ನರ ಕೈಮುಗಿದೆಂದ ||403||

ರಾಗ ಭೈರವಿ ಝಂಪೆತಾಳ

ಕೇಳಯ್ಯ ಕಪಿವೀರ | ಬಾಲಬುದ್ಧಿಯೊಳೊಂದು |
ಊಳಿಗವ ಮಾಡಿದೆನು | ಪೇಳಲಂಜುವೆನು ||404||

ಈ ಲೋಲನೇತ್ರೆ ಸಹಿ | ತಿಲ್ಲಿಂದ ತಪ್ಪಿಸಿ ಕ |
ಪಾವಲೋಕನದಿ ನೀ | ಸಲಹಬೇಕೆಮ್ಮ ||405||

ಬಲವಂತರಿಹರವರ ಗೆಲಿದು ಪೋಗುವುದಕ್ಕೆ |
ನೆಲೆಗಾಣದಿರೆ ನೆನೆದೆ | ನೆಲೆ ತಾತ ನಿನ್ನ ||406||

ಒಲಿದು ನಮ್ಮೀರ್ವರನು | ಸಲಹಬೇಕೆನುತೆರಗೆ |
ಫಲುಗುಣನೊಳೆಂದನಾ | ಕಲಿ ಹನುಮನಂದು ||407||

ರಾಗ ಆಹೇರಿ ಝಂಪೆತಾಳ

ಏಕಿದಕೆ ಚಿಂತಿಸುವೆ ನೀನು | ಪಾರ್ಥ |
ನಾ ಕಾಯ್ದುಕೊಡುವೆನಿಂದಿನಲಿ ನಿಮ್ಮುವನು ||
ಏಕಿದಕೆ ಚಿಂತಿಸುವೆ ನೀನು  || ಪಲ್ಲವಿ ||

ಢಾಳಿಸುವ ವಜ್ರ ಹಿಡಿದಿಂದ್ರನಿದಿರಾದಡೆಯು |
ಕಾಲದಂಡವನಾಂತು ಯಮನು ಮಾರಾಂತಡೆಯು |
ಶೂಲವನು ತುಡುಕಿ ಶಂಕರನಡ್ಡಹಾಯ್ದಡೆಯು |
ತೋಳ ಬಲುಹನು ತೋರಗೊಡೆನು | ನಿನ್ನ |
ನಾಳಿಗೊಳಲವರಿಂಗೆ ಸರ್ವಥಾ ಬಿಡೆನು ||
ಏಕಿದಕೆ ಚಿಂತಿಸುವೆ ನೀನು ||408||

ಎಂದವರ ಹೆಗಲನೇರಿಸಿಕೊಂಡು ತತ್‌ಕ್ಷಣದಿ |
ಗಂಧವಾಹಕುಮಾರನಿರದೆ ಮುಂದರಿಯಲ್ಕೆ |
ನಂದನದ ಹೊರಗಿರ್ಪ ಸತಿಯರದನೀಕ್ಷಿಸುತ
ಲಂದು ಬಲರಾಮನಿದ್ದೆಡೆಗೆ | ತ್ವರಿತದಿಂ |
ಬಂದು ಪೇಳಿದರು ಭೀತಿಯಲಿ ನಡನಡುಗೆ ||
ಕೇಳು ಜನಮೇಜಯ ನಪಾಲ ||409||

ರಾಗ ಮಧ್ಯಮಾವತಿ ಅಷ್ಟತಾಳ

ಕಾಮಪಾಲಕ ಕೇಳು ಬಿನ್ನಪವ |
ರಾಮಣೀಯಕ ಗುಣಭರಿತ ಸದ್ವಿಭವ || ಕಾಮಪಾಲಕ  || ಪಲ್ಲವಿ ||

ಹಿಂದೆ ರಾವಣನೆಂಬ ಖಳನು | ಕಪಟದಿ ಭೂ |
ನಂದನೆಯನು ಕೊಂಡುಪೋದಂದದಿ ||
ಇಂದು ನಿಮ್ಮನುಜೆ ಸೌಭದ್ರೆಯ ಯತಿವೇಷ |
ದಿಂದಿರ್ಪಾತನು ಕದ್ದೊಯ್ದನು ಘೋರರೂಪದಿ || ಕಾಮಪಾಲಕ ||410||

ಭಾಮಿನಿ

ಕೇಳುತಲಿ ಬಲನೆದ್ದನಾಗಳೆ |
ಕಾಲಭೈರವನಂತೆ ಖತಿಯಲಿ |
ಬೀಳಹೊಯ್ವೆನು ಹಲದಿ ನಾರೀಚೋರಕನನೆನುತ ||
ಪೇಳಲೇನದ ಸಾಂಬ ಮದನ ವಿ |
ಶಾಲ ಬಲನನಿರುದ್ಧ ಸಾತ್ಯಕಿ |
ಶೀಲ ಕತವರ್ಮಾದಿ ಯಾದವ ಸುಭಟರೊದಗಿದರು ||411||

ರಾಗ ಕೇದಾರಗೌಳ ಅಷ್ಟತಾಳ

ಹೆಣ್ಣು ತಪ್ಪಿದ ಸುದ್ದಿ ಕೇಳುತ್ತ ಮಗಧನು |
ಕಣ್ಣೊಳು ಕಿಡಿಗೆದರಿ ||
ಮಿಣ್ಣನೆ ಸತಿಯನೊಯ್ದ ಖೂಳ ಯತಿಯನ್ನು |
ಮಣ್ಣಗೂಡಿಸುವೆನೆಂದ ||412||

ಎನುತ ಶಸ್ತ್ರವ ಕೊಂಡು ಮಾಗಧನೇಳಲು |
ಇನಸೂನುವದನು ಕಂಡು ||
ಇನಿತು ಕಾರ್ಯಕೆ ನೀವು ಪೋಪುದಿಂದೇತಕೆ |
ವನಿತೆಯ ಕದ್ದೊಯ್ದನ ||413||

ಶಿವನಾದಡೇನೊಂದೆ ಕ್ಷಣದಲಿ ಸೋಲಿಸಿ |
ಯುವತಿಯ ತರುವೆನೀಗ ||
ಅವನಿಪನೊಡನೆ ನೀವಿಹುದೆಂದು ಪಡೆಗೂಡಿ |
ತವಕದಿ ಪೊರಟನಾಗ ||414||

ರಾಗ ಭೈರವಿ ತ್ರಿವುಡೆತಾಳ

ಅರಸ ಕೇಳಿಂತೆಂದು ಮಗಧನ | ಧರಣಿಪಾಲನ ರಕ್ಷೆಗಿಟ್ಟಾ |
ಕುರುಬದಿ ಸೌಬಲ ಜಯದ್ರಥ | ಧರಧುರದ ಕರ್ಣಾದಿ ನಾಯಕ |
ರಿರದೆ ಮದವಾರಣದಿ ನಿಜರಥ | ತುರಗಗಳಲುರೆ ಕುಳಿತು ಧನುವನು |
ಧರಿಸಿ ಸತಿಯನು ತರುವೆನೆನುತಲೆ | ಭರವಸವ ಪೇಳ್ದಾಗ ನಪತಿಗೆ |
ನಡೆದರಾಗ | ಸಮರಕೆ | ನಡೆದರಾಗ ||415||

ಮಸಗಿದುದು ಕುರುಸೈನಿಕವು ವೊಂ | ದೆಸೆಯೊಳಗೆ ಯಾದವಮಹಾಬಲ |
ವಸಮಸಂಭ್ರಮದಿಂದ ಬೇರೊಂ | ದೆಸೆಯೊಳಗೆ ಮದವೇರಿ ಶರ ಪ |
ಟ್ಟಿಸ ಪರಶ್ವಧ ಈಟಿ ತೋಮರ | ಮುಸಲ ಮುದ್ಗರ ಕುಂತ ಮುಂತಾ |
ದಸಮ ಕೈದುಗಳನು ಪಿಡಿದು ಗ | ರ್ಜಿಸುತ ವೀರಾವೇಶದಿಂದಲಿ |
ನಡೆದರಾಗ | ಸಮರಕೆ | ನಡೆದರಾಗ ||416||

ರಾಗ ಶಂಕರಾಭರಣ ಮಟ್ಟೆತಾಳ

ಅವನಿಪತಿಯೆ ಕೇಳು ಸುಭಟ | ನಿವಹವನ್ನು ಮಿಕ್ಕಿ ಸ್ಮರನು |
ಜವದಿ ಮುಂದೆ ನಡೆದು ತಡೆದು | ದಿವಿಜರೇಂದ್ರನ ||
ಕುವರನೀತನೆಂಬುದರಿತು | ಬವರಕಾಂತು ನಿಂದು ಸಿಂಹ |
ರವವ ಗೆಯ್ಯುತೆಂದನವನೊ | ಳವಗಡಿಸುತಲಿ ||417||

ನಿಲ್ಲು ನಿಲ್ಲು ಪಾರ್ಥ ಬಹಳ | ಬಲ್ಲಿದಾತನಾದೆ ಹೆಂ |
ಗಳ್ಳತನವನಾರ ಗರಡಿ | ಯಲ್ಲಿ ಕಲಿತೆಲಾ ||
ಸಲ್ಲದೀಗ ನಿನ್ನ ವಿದ್ಯ | ವಿಲ್ಲಿ ನಮ್ಮೊಳೆನುತ ಭಾರಿ |
ಫುಲ್ಲಕಣೆಯೊಳೆಚ್ಚನಾಗ | ಫುಲ್ಲಬಾಣನು ||418||

ಎಲವೊ ಮದನ ಕೇಳು ಹಿಂದೆ | ಕಳವಿನಿಂದ ನಿನ್ನ ತಾಯ |
ನೊಲಿದು ತಂದ ಕೃಷ್ಣನೊಡನೆ | ಕಲಿತೆನಿದರನು ||
ಕಲಹದೊಳಗೆ ನಿನಗೆ ಹಿಂ | ದುಳಿವನಲ್ಲ ನೋಡೆನುತ್ತ |
ಬಲು ಶರಾಳಿಯಿಂದಲೆಚ್ಚ | ನುಲಿದು ಪಾರ್ಥನು ||419||

ಎಸೆವ ಕೋಲ್ಗಳನ್ನು ಕಡಿದು | ಕುಸುಮಶರನನೇಕ ಬಾಣ |
ವಿಸರವನ್ನು ಮುಸುಕಲದನು | ನಸುನಗುತ್ತಲಿ ||
ಕುಸುರಿದರಿದು ನರನು ದಿವ್ಯ | ವಿಶಿಖದಿಂದಲವನ ಧನುವ |
ನಸಮಸತ್ತ್ವದಿಂದ ಖಂ | ಡಿಸಿದನಾ ಕ್ಷಣ ||420||

ಭಾಮಿನಿ

ಧನು ಮುರಿಯಲಾ ಕುಸುಮಬಾಣನು |
ಮನದಿ ಲಜ್ಜಿತನಾಗಿ ತಿರುಗಲು |
ಅನಿತರೊಳಗನಿರುದ್ಧನೆಯ್ತಂದಧಿಕ ರೋಷದಲಿ ||
ಅನಿಮಿಷಾಧೀಶ್ವರನ ವರನಂ |
ದನನಿಗಿದಿರಾಂತೊಡನೆ ಕರದಲಿ |
ಕನಕಪುಂಖದ ಶರವ ನಾರಿಗೆ ತೊಡಿಸುತಿಂತೆಂದ ||421||

ರಾಗ ನಾದನಾಮಕ್ರಿಯೆ ಮೆಚ್ಚು ಅಷ್ಟತಾಳ

ಎಲವೊ ಪಾರ್ಥನೆ ಕೇಳು ಹೆಣ್ಣನು | ಕೊಂಡು |
ಕಳವಿಲಿ ಪೋದರೆ ನಿನ್ನನು ||
ಬಳಸಿ ಬಿಟ್ಟಪೆನೆ ನೋಡೆನುತಲಿ | ಕೋಲ |
ಮಳೆಗರೆದನು ಕನಲುತ್ತಲಿ ||422||

ವಿಹಿತ ಮಾವನ ಮಗಳೊಯ್ವೆನು | ನಿನ್ನಂ |
ತಹಿತವಾದುದನೇನ ಮಾಡೆನು ||
ಬಹಳ ಮಾತುಗಳೇತಕೀಗಲು | ನಿನ್ನ |
ಸಹಸವನಿರದೆ ತೋರೆನ್ನೊಳು ||423||

ಎನುತ ಪಾರ್ಥನು ಮೂರು ಶರದೊಳು | ಕಾಮ |
ತನಯನ ರಥವ ಪೋಳ್ಗಳೆಯಲು ||
ಮನದೊಳು ನಾಚಿಕೆಗೊಳುತಲಿ | ತನ್ನ |
ಮನೆಗಾಗಿ ಬಂದನಾ ಕ್ಷಣದಲಿ ||424||

ವಾರ್ಧಕ

ಕ್ಷೋಣೀಂದ್ರ ಕೇಳ್ ಕಾಮಜಂ ತಿರುಗಲಿತ್ತಲುಂ |
ದ್ರೋಣ ಭೀಷ್ಮ ಕಪಾದ್ಯರೀಗ ಪಾರ್ಥನೊಳಾವು |
ಹೂಣೆ ಹೊಕ್ಕೆಚ್ಚಾಡಿ ಜಯಹೊದ್ದದೆಂಬುದಂ ತಿಳಿದು ಹಿಂದಕೆ ಸರಿಯಲು ||
ಕಾಣುತೊಡನಿನಜ ಸೌಬಲ ಸೈಂಧವಾದಿಗಳ್ |
ಬಾಣವರ್ಷವನೆಯ್ದೆ ಕರೆವುತಂ ತರುಬಿದರ್ |
ಮಾಣು ಮುಂದಕೆ ಪೋಗಬೇಡೆನುತ ಸುರಪತಿಯ ತನಯನಂ ಖಾತಿಯಿಂ ||425||

ಕಂದ

ಖತಿಯಿಂದಂ ಕರ್ಣಂ ನಿಜ |
ರಥಮಂ ತಾ ಮುಂದರಿಸುತ ಮಾರಾಂತಾಗಳ್ ||
ವಿತರಣದಿಂ ಧನುವಂ ಝೇಂ |
ಕತಿಯಂ ಗೆಯ್ವುತ ನುಡಿದಂ ಕಲಿಪಾರ್ಥನೊಳಂ || ||426||

ರಾಗ ಭೈರವಿ ಅಷ್ಟತಾಳ

ಎಲವೋ ಕೌಂತೇಯ ಕೇಳೊ | ನಮ್ಮಯ ತೋಳ |
ಬಲೆಯೊಳು ಸಿಲುಕಿದೆಲೋ ||
ಗೆಲಿದು ಪೋಗುವುದಕ್ಕೆ ಬಲು ಧೀರ ಕರ್ಣ ತಾ |
ತಿಳಿದುಕೊ ಎನುತೆಚ್ಚನು ||427||

ಕರ್ಣ ನೀನಾದರೇನು | ನಿನ್ನಯ ಸತ್ತ್ವ |
ದುನ್ನತಿಕೆಯ ಬಲ್ಲೆನು ||
ಪನ್ನಿಯ ಮಾತಿದು ಕುಲಕೆ ತಕ್ಕುದೆನುತ್ತ |
ಮನ್ನಿಸದವನೆಚ್ಚನು ||428||

ಆತನ ಕಣೆಗಳನು | ಖಂಡಿಸಿ ಕರ್ಣ |
ಖಾತಿಯೊಳಿಂತೆಂದನು ||
ಏತಕೆ ಕೆಡುವೆ ಹೆಣ್ಣನು ಬಿಟ್ಟು ಪೋದರೆ |
ಮಾತನಾಡಿಸೆ ನಿನ್ನನು ||429||

ಫುಲ್ಲನೇತ್ರೆಯ ಬಿಡಲು | ನಪುಂಸಕ |
ನಲ್ಲ ತಾನೆಲವೊ ಕೇಳು ||
ಬಿಲ್ಲಿನಂಬಿನಲಿ ಮಾತಾಡುವೆನೆನುತಲಿ |
ಸೊಲ್ಲಿಸಿ ನರನೆಚ್ಚನು ||430||

ಏನ ನೋಡುವಿರವನ | ಮುತ್ತಿರಿ ಬಲು |
ಸೇನೆಯೆಂದೆನುತ ಕರ್ಣ |
ಆ ನಿಜಬಲ ಸಹ ಮುಸುಕಿಕೊಂಡನು ಶಕ್ರ |
ಸೂನುವ ಹಿಡಿರೆನ್ನುತ ||431||

ಭಾಮಿನಿ

ಮುಂದೆ ಕುರುಸೈನಿಕರು ಬೆಂಗಡೆ |
ಸಂದಣಿಸಿ ಯಾದವ ಮಹಾಬಲ |
ಬಂದು ಕವಿದೆಚ್ಚಾಡುತಿರೆ ಕಾಣುತ ಕಪೀಶ್ವರನು ||
ಹಿಂದೆ ಸೀತೆಯು ತನಗೆ ಕೊಟ್ಟಿಹ |
ಸಂದ ಮೋಹನಮಂತ್ರವನು ತಾ |
ನೊಂದು ರೋಮವ ಕಿತ್ತು ಮಂತ್ರಿಸಿ ಜಯಕೆ ನರಗಿತ್ತ ||432||

ರಾಗ ಭೈರವಿ ಏಕತಾಳ

ಕೊಂಡದ ನರನತಿಬೇಗ | ಕೋ |
ದಂಡಕೆ ತೊಡಿಸುತಲಾಗ ||
ಅಂಡಲೆದರಿ ಸುಭಟರನು | ಮಿಗೆ |
ಕಂಡು ನಗುತ ಪೇಳಿದನು ||433||

ವರ ಸಿಂಹೇಂದ್ರನ ಭರದಿ | ಮದ |
ಕರಿಗಳು ಕೆಣಕುವ ತೆರದಿ ||
ಮರುಳುತನದಿ ನೀವ್ ಬಂದು | ಮಮ |
ಶರದಲಿ ಭಂಗಿಪಿರಿಂದು ||434||

ಉದ್ರೇಕದೊಳೆಸೆಯಲ್ಕೆ | ಬಲು |
ನಿದ್ರೆಯೊಳೆಲ್ಲರು ನೆಲಕೆ ||
ಮುದ್ರಿತ ಮೋಹನದಿಂದ | ಒರ |
ಗಿರ್ದರು ರಣದೊಳಗಂದು ||435||

ಭಾಮಿನಿ

ಸೋಮವಂಶಲಲಾಮ ಕೇಳಿಂ |
ತಾ ಮಹಾಸಮ್ಮೋಹನಾಸ್ತ್ರದಿ |
ಭೂಮಿಯೊಳಗರಿಸುಭಟರೆಲ್ಲರು ನಿದ್ರೆಯಲಿ ಮಲಗೆ ||
ಪ್ರೇಮದಲಿ ಮುಂದೇಳುತಿಹ ಸು |
ತ್ರಾಮತನಯನ ಖಾತಿಯೊಳು ಬಲ |
ರಾಮನೆಯ್ತಂದೊಡನೆ ತಡೆದೆಂದನು ಸಗಾಢದಲಿ ||436||

ರಾಗ ಶಂಕರಾಭರಣ ಅಷ್ಟತಾಳ

ನಿಲ್ಲು ನಿಲ್ಲು ಪಾರ್ಥ ಮುಂದಾ | ವಲ್ಲಿ ಪೋಪೆಯೆಲವೊ ಹೀಗೆ |
ಸಲ್ಲದ ಕಾರ್ಯವ ಮಾಳ್ಪು | ದೊಳ್ಳಿತೆ ನೀನು ||
ಸಲ್ಲದ ಕಾರ್ಯವ ಮಾಳ್ಪ | ರಲ್ಲವೈ ಮಾವನ ಮಗಳ |
ನಿಲ್ಲದೀಗ ಒಯ್ದಪೆನು | ತಲ್ಲಣ ಬೇಡ ||437||

ಮಾವನವರ ಮಗಳಾದರೆ | ನಾವು ಮೆಚ್ಚಿ ಧಾರೆಯೆರೆಯ |
ದೀ ವಿಧದಿ ಕದ್ದೊಯ್ವುದಿ | ದಾವ ಘನವಯ್ಯ ||
ನೀವು ಮೆಚ್ಚಿ ಕೊಡದ ಮೇಲೆ | ನಾವು ಕದ್ದೊಯ್ವುದೇ ಘನವು |
ಲಾವಕರ ಮಾತ ಕೇಳಿ | ನ್ನಾವುದ ಮಾಳ್ವೆ ||438||