ರಾಗ ಪಂಚಾಗತಿ ಮಟ್ಟೆತಾಳ

ಎನಲು ರಾಮನು | ಎಸಲು ಪಾರ್ಥನ |
ವಿನಯದಿಂದಲಿ | ಪೇಳ್ದನವನಲಿ ||439||

ಕೋಪವೇಕಯ್ಯ | ಕ್ಷಮಿಸು ತನ್ನಯ |
ವೈಪರೀತ್ಯದ ವಿದ್ಯವೊಂದಿದ ||440||

ಯತಿಯ ವೇಷದಿ | ಬಂದು ಮೋಸದಿ |
ಸತಿಯನೊಯ್ದರೆ | ನಿನ್ನ ಬಿಡುವರೆ ||441||

ತಪ್ಪು ನಮ್ಮದು | ಕ್ಷಮಿಸಿಕೊಂಬುದು |
ಪುಷ್ಪಗಂಧಿಯ | ಒಯ್ವೆ ನಾನಯ್ಯ ||442||

ಕುಟಿಲತನದಲಿ | ಹೆಣ್ಣ ತಂದಿಲ್ಲಿ |
ಕಟಿಕಿಯಾಡುವೆ | ಬೇಡ ಸಾರುವೆ ||443||

ಭಾವನಲ್ಲವೆ | ಸರಸವಿಲ್ಲವೆ |
ಈ ವಿಧಾನಕೆ | ಮುನಿವುದೇತಕೆ ||444||

ವಿನಯ ದಾರೊಳು | ಬಿಟ್ಟು ಪೋಗೆಲೊ |
ವನಜನೇತ್ರೆಯ | ವರ ಸುಭದ್ರೆಯ ||445||

ಬಂದುದೇನನು | ನೋಡಿಕೊಂಬೆನು |
ಇಂದುವದನೆಯ | ಬಿಡುವನಲ್ಲಯ್ಯ ||446||

ರಾಗ ಶಂಕರಾಭರಣ ಮಟ್ಟೆತಾಳ

ಎಂದ ಮಾತ ಕೇಳ್ದು ಖಾತಿವೆತ್ತು ರಾಮನು |
ಮುಂದುವರಿದು ತಾಳಿಕೊಳ್ಳೆನುತ್ತಲೆಚ್ಚನು ||
ಬಂದ ಶರಗಳೆಲ್ಲ ನಡುವೆ ತರಿದು ಪಾರ್ಥನು |
ಮಂದಹಾಸದಿಂದ ಕೋಲಮಳೆಯ ಕರೆದನು ||447||

ಕಡೆಯ ಕಾಲವೆಲವೊ ನಿಮಗೆ ನೋಡೆನುತ್ತಲಿ |
ಕಡಿದು ನರನ ಬಾಣಗಳನು ಬಲನು ಖತಿಯಲಿ ||
ಒಡನೆ ಘೋರ ಮುಸಲವನ್ನು ತೆಗೆದು ಭರದಲಿ |
ಬಿಡಲು ಮೊರೆದುದಾಗ ಬಂದು ಸಿಡಿಲ ತೆರದಲಿ ||469||

ಭರದಿ ಬಂದು ನರನ ಮೇಲೆ ಬೀಳ್ವ ಮುಸಲವ |
ಮರುತಸುತನು ಕಂಡು ತನ್ನ ಬಾಲದಂಡವ ||
ತ್ವರೆಯೊಳೊಡ್ಡಿ ಬಿಗಿದು ಹಾರಿಸಲ್ಕೆ ಬಳಿಕದು |
ಶರಧಿಯೊಳಗೆ ಘೋಷವೆತ್ತು ಪೋಗಿ ಬಿದ್ದುದು ||448||

ಭಾಮಿನಿ

ಬಿಟ್ಟ ಮುಸಲವ ಹನುಮ ಾಲದಿ |
ಕಟ್ಟಿ ಶರಧಿಗೆ ಬಿಸುಡೆ ಕಾಣುತ |
ತೊಟ್ಟು ದುಗುಡವನೆಡಬಲವನೀಕ್ಷಿಸುತ ಹಲಧರನು ||
ಕೆಟ್ಟುಪೋದುದು ಕಾರ್ಯವಿನ್ನೆನು |
ವಷ್ಟರಲಿ ಮುರಹರನು ಬಂದಾ |
ಮುಷ್ಟಿಕಾರಿಯ ನೋಡಿ ನುಡಿದನು ಮಧುರವಚನದಲಿ ||449||

ರಾಗ ಮಾರವಿ ಅಷ್ಟತಾಳ

ನೋಡಿದಿರೆ ಅಣ್ಣ ನೋಡಿದಿರೆ | ನರನು |
ಮಾಡಿದಂಥ ವಿದ್ಯವನ್ನು | ಆಡಲು ಫಲವಾವುದಿನ್ನು  || ಪಲ್ಲವಿ ||

ತಂಗಿಯ ಶುಶ್ರೂಷೆಗೀವು | ದಂಗವಲ್ಲ ಯತಿಗೆಂದು ನಾ |
ನಿಂಗಿತವರಿದು ಹಿಂದೆ | ಯಂಗೈಸಿದರೆ ||
ಹೆಂಗಳ್ಳನ ತಹೆನೆಂದೀಗ | ಅಂಗವಣೆಯಿಂದ ಕಾದಿ |
ಭಂಗಿತರಾಗಿ ಮುಸಲವ | ಕಂಗಾಣದೆ ಕಳೆದಿರಲ್ಲ ||450||

ಸಾಕಿನ್ನು ಚಿತ್ತದಿ ಬರಿದೆ | ಕಾಕಬಳಸಲಾಹ ಫಲಗ |
ಳಾ ಕಣೆನು ಪೇಳ್ವೆನೊಂದ | ನಾ ಕಂಡುದನ್ನು ||
ಕೋಕಸದಶಕುಚದ ಸೌಭ | ದ್ರಾ ಕನ್ಯೆಯನೊಲವಿನಿಂದ |
ಲೀ ಕೌಂತೇಯಗೀವುದು ವಿ | ವೇಕವೆಂದು ತೋರ್ಪುದೆನಗೆ ||451||

ಭಾಮಿನಿ

ಅಣ್ಣ ಕೇಳೈ ಬರಿದೆ ಮನದೊಳ |
ಗೆಣ್ಣಿಕೆಯ ಕೊಳಲೇಕೆ ಕುಂತಿಯ |
ಚಿಣ್ಣನನು ಕರೆತಂದು ಧಾರೆಯನೆರೆಸು ಬೇಗದಲಿ ||
ಬಣ್ಣ ನಮಗಿದು ತಿಳಿಯೆನುತ ಪೂ |
ಗಣ್ಣನುಸಿರಿದ ನುಡಿಯ ಕೇಳುತ |
ಕಣ್ಣೊಳಗೆ ಕಿಡಿಗೆದರುತೆಂದನು ಬಲನು ಖಾತಿಯಲಿ ||452||

ರಾಗ ಭೈರವಿ ಅಷ್ಟತಾಳ

ಸಾಕು ಸಾಕತ್ತ ಸಾರೊ | ನೀನೆನಗೆ ವಿ |
ವೇಕವ ಪೇಳದಿರೊ ||
ಆಕೆವಾಳರ ಪಕ್ಷಪಾತದಿ ಸುಮ್ಮನಿ |
ದೇಕಿಂತು ಕುಣಿದಪೆಯೊ ||453||

ಏನ ಪೇಳಿದರಿನ್ನೇನು | ಇದೆಲ್ಲವ |
ನೀನೆ ಮಾಡಿಸಿದವನು ||
ಮಾನವಂತರಿಗೀಗ | ಕಾಲವಲ್ಲೆನುತ ದು |
ಮ್ಮಾನದೊಳಿರಲು ಕಂಡು ||454||

ತರಿಸಲು ಮುಸಲವನು | ಪಾರ್ಥನನಾಗ |
ಕರೆತಂದು ಮಾಧವನು ||455||

ಇರದೆ ಕೊಡಿಸಿ ರಾ | ಮನ ಪಾದಕೆರಗಿಸಿ |
ಭರದಿ ಸಂಧಿಯ ಗೆಯ್ದನು ||456||

ವಾರ್ಧಕ

ಹರಿಣಾಂಕಕುಲತಿಲಕ ಕೇಳಿಂತು ಮುರಹರಂ |
ಭರದೊಳವರೀರ್ವರ್ಗೆ ಸಂಧಿಯಂ ಗೆಯ್ಯೆ ಬಳಿ |
ಕುರುತರದ ತೋಷದಿಂ ಪಾರ್ಥನಂ ತೆಗೆದು ಬಿಗಿದಪ್ಪಿದಂ ಬಲರಾಮನು ||
ಅರಿಯದಾದೆನು ನಿನ್ನ ಸಹಸಮಂ ಸಾಕಿನ್ನು |
ಮರೆದು ಕಳೆ ಹಿಂದಣ ದುರುಕ್ತಿಗಳನೆಂದು ಸೋ |
ದರಿ ಸವ್ಯಸಾಚಿಯಂ ವೈವಾಹಮಂಟಪಕೆ ಹರುಷದಿಂ ಕರೆತಂದನು ||457||

ಕಂದ

ಆ ಸಮಯದಿ ಹನುಮಂ ಜಗ |
ದೀಶನ ಪದಕೆಯ್ದೆ ನಮಿಸಿ ನೇಮವನಾಂತು ||
ಲ್ಲಾಸದಿ ನರನಂ ಮನ್ನಿಸಿ |
ತಾ ಸರಿದಂ ನಿಜವಾಸಕೆ ಸನ್ಮುದದಿಂದಂ || ||458||

ರಾಗ ನಾದನಾಮಕ್ರಿಯೆ ಮೆಚ್ಚು ಅಷ್ಟತಾಳ

ಹರಿ ಹಲಧರರಿತ್ತ ನರನನ್ನು | ಕರೆ |
ತರೆ ಕಂಡು ಕನಲುತ್ತ ಮಗಧನು ||
ಕುರುರಾಯನೊಡನೆ ಬಂದವರೆಲ್ಲ | ಬಿಡು |
ದೊರೆಗಳೆಂದೆನುತ ಮಾಡಿದರಲ್ಲ ||459||

ಹಿಡಿದು ಕೌರವಗೀವೆ ಹೆಣ್ಣನು | ಎನ್ನ |
ತಡೆವರಾರೆಂಬುದ ನೋಳ್ಪೆನು ||
ಕಡೆಯ ಮಾತವರೊಡನೆನುತಲಿ | ಬಿಲ್ಲ |
ಹಿಡಿಯುತಲೆದ್ದನಾ ಕ್ಷಣದಲಿ ||460||

ಅದ ಕಾಣುತೊಡನೆ ಗೋವಿಂದನು | ಆತ |
ಗಿದಿರಾಗಿ ನಸುನಗುತೆಂದನು ||
ಎದೆಗೊಬ್ಬಿನಿಂದಲಿ ಸುಮ್ಮನೆ | ನೀನು |
ಒದರದೆ ನಡೆ ನಡೆ ಗಮ್ಮನೆ ||461||

ತರುಣಿಯ ಕೊಡುೆನೆಂದೆನುತಲಿ | ಕುರು |
ವರನನ್ನು ಬರಹೇಳಿ ನೀವಿಲ್ಲಿ ||
ಪರರಿಗೀಯಲು ಹೆಣ್ಣ ನಿಮ್ಮನು | ಇಂದು |
ಇರಗೊಡೆನೆಂದನು ಮಗಧನು ||462||

ಮೆಲ್ಲನೆ ಬಂದೆಮ್ಮ ನಗರವ | ಪೊಕ್ಕು |
ಸೊಲ್ಲಿಸುತಿಹೆ ನಿನ್ನ ಗರ್ವವ ||
ಇಲ್ಲಿ ತೋರಿಸು ನಾವು ನೋಳ್ಪೆವು | ನಮ್ಮ |
ನಿಲ್ಲಲುಗೊಡೆನೆಂಬ ಸಹಸವು ||463||

ಎಂದು ಕೃಷ್ಣನು ವಾಯುಶರವನು | ಎಸೆ |
ದಂದು ಮಾಗಧನ ಹಾರಿಸಿತೇನು ||
ಸಿಂಧುವಿನಾಚೆಗೆ ಹಾಕಿತು | ಸುರ |
ವಂದವೀಕ್ಷಿಸಿ ನಲಿದಾಡಿತು ||464||

ಭಾಮಿನಿ

ಇತ್ತ ಮೋಹನದಿಂದ ಬಿಡುಗಡೆ |
ವೆತ್ತು ಸೌಬಲ ಕರ್ಣ ಮುಖ್ಯರು |
ಚಿತ್ತದಲಿ ಕಡು ನಾಚಿ ದುಗುಡದೊಳಿರ್ಪ ಕುರುಪತಿಯ ||
ಹತ್ತಿರಕೆ ನಡೆತಂದು ಭೂಪ ಕು |
ಲೋತ್ತಮನೆ ಬರಿದೇಕೆ ಮನದಲಿ |
ತೆತ್ತುಕೊಂಡಿಹೆ ವಿಧಿಪುರಾಕತವೆಂದು ಪೇಳಿದರು ||465||

ರಾಗ ತೋಡಿ ಅಷ್ಟತಾಳ

ಚಿಂತೆಯೇತಕೆ ಕುರುಕುಲವರ್ಯ |
ಎಂತೂ ಕೆಟ್ಟುದು ಕಾರ್ಯ | ಪೋಗುವವಯ್ಯ  || ಪಲ್ಲವಿ ||

ಕಲಹವ ನರನೊಳಿನ್ನೊಮ್ಮೆ | ಮಾಡುವರೆ |
ಬಲಭದ್ರನಾತನ ವಶವಾದ ನಮಗೆ ಬೆಂ |
ಬಲವಿಲ್ಲದಾಯ್ತು ಮೇಲೆ | ಭೀಷ್ಮಾದಿಗ |
ಳಲಸಿ ಬಿಟ್ಟರು ಮೊದಲೆ | ಒಮ್ಮೆಗೆ ಸೋಲಿ |
ಗೊಳಗಾದೆವೆನದಿರು ಗುಣವಿರ್ಪುದದರಿಂದ || ಚಿಂತೆಯೇತಕೆ ||466||

ತುಂಟುತನದಿ ಹೆಣ್ಣ ಕದ್ದೊಯ್ದ ಪಾರ್ಥನ |
ತುಂಟತೆ ನಿಲಿಸಿ ಮಾಂಸದಿ ಭೂತನಿಚಯವ |
ಪಂಟಿಸಿ ದಣಿಸುವೆವು | ನಿನ್ನನು ಭಾರಿ |
ಬಂಟನೆಂದೆನಿಸುವೆವು | ಮುಂದೆಮಗಿಂತ |
ಎಂಟು ಮಡಿಯ ದುಗುಡವನು ಮಾಡಿಸುವೆವು || ಚಿಂತೆಯೇತಕೆ ||467||

ವಾರ್ಧಕ

ಎಂದು ಬಹುಪರಿಯಿಂದೊಡಂಬಡಿಸಿ ಶಕುನಿ ರವಿ |
ನಂದನಾದಿಗಳಿರದೆ ಕುರುಪತಿಯನೊಡಗೊಂಡು |
ಬಂದರಿಭಪುರಿಗೆ ಕಡುಲಜ್ಜೆಯಿಂದೊಡಗೂಡುತಾಗ ತಲೆಮುಸುಕಿನಿಂದ ||
ಇಂದೀವರಶ್ಯಾಮಬಲರು ಬಳಿಕಿತ್ತಲಾ |
ನಂದ ಮಿಗೆ ಪಾರ್ಥ ಸೌಭದ್ರೆಯರನೊಲಿದು ಕರೆ |
ತಂದು ಭೀಷ್ಮ ಕಪಾದ್ಯರನುಮತದೊಳಾದುದು ವಿವಾಹಮತ್ಯುತ್ಸಹದೊಳು ||468||

ಭಾಮಿನಿ

ವರ ಪುರೋಹಿತರಿಂದ ವೈಶ್ವಾ |
ನರನ ಸಾಕ್ಷಿಯೊಳಖಿಲ ಧರಣೀ |
ಸುರರ ಭೂಮಿಪರನುಮತದಿ ವಸುದೇವನೊಲವಿನಲಿ ||
ಅರಸಿ ದೇವಕಿ ಸಹಿತ ಸುತೆಯಾ |
ಗಿರುವ ಸೌಭದ್ರೆಯನು ಧಾರೆಯ |
ನೆರೆದನಾ ಫಲುಗುಣಗೆ ವಿದ್ಯುಕ್ತಪ್ರಕಾರದಲಿ ||469||

ದ್ವಿಪದಿ

ಆ ಸಮಯದಲ್ಲಿಹ ಸುವಾಸಿನಿಯರ್ ವೆರಸಿ |
ಲೇಸೆನಿಪ ಮಣಿವಿರಾಜಿತದ ಹಸೆ ಹಾಸಿ ||470||

ಕೂಡೆ ಸುಸ್ವರವೆತ್ತಿ ಶೋಭಾನಗಳನು |
ಪಾಡುತಿಂದ್ರಕುಮಾರಸೌಭದ್ರೆಯರನು ||471||

ಹರುಷದಲಿ ಕುಳ್ಳಿರಿಸಿ ಹಸೆಯ ಮೇಲಂದು |
ಸರಸದಲಿ ಪೊಸ ಮುತ್ತಿನಾರತಿಯ ತಂದು ||472||

ಪಿಡಿದು ಕೆಂದಾವರೆಯ ಪೋಲ್ವ ಕರತಳದಿ |
ಕಡು ಜಾಣೆಯರು ನಗುತಲೆತ್ತಿದರು ಮುದದಿ ||473||

ಶೋಭಾನೆ

ರಾಗ ಢವಳಾರ ತ್ರಿವುಡೆತಾಳ

ಚಂಚಲನೇತ್ರದ  ಶಶಿವದನದ |
ಕುಂಚಿತಚಿಕುರದ ಕರಿಗಮನದ |
ಮಿಂಚುವ ಭೂಷಣದ ಮಡದಿಯರು ||
ಮಡದಿಯರೊಡಗೂಡಿ ವಿನೋದದಿ ||
ಕಾಂಚನದಾರತಿಯ ಬೆಳಗಿರೆ | ಶೋಭಾನೆ ||474||

ಹರಿಯನುಜೆಗೆ ಹರಿನಿಭಮಧ್ಯೆಗೆ |
ಹರಿಸುಮವಾಣಿಗೆ ಹರಿಣಲೋಚನೆಗೆ |
ಹರಿಣಾಂಕಮುಖಿಗೆ ಸುಗುಣೆಗೆ ||
ಸುಗುಣೆ ಸೌಭದ್ರೆಗೆ ಸತಿಯರು |
ಕುರುಜಿನಾರತಿಯ ಬೆಳಗಿರೆ | ಶೋಭಾನೆ ||475||

ಶ್ವೇತಾಶ್ವಗೆ ವಿಜಯನಿಗೆ ಕಪಿ |
ಕೇತನಿಗೆ ಮೂರ್ಲೋಕದಿ ನೆರೆ |
ಖ್ಯಾತಿಪಟ್ಟವಗೆ ನರನಿಗೆ ||
ನರನಿಗೆ ಶತಸ್ಮರಸುಂದರನಿಗೆ |
ನೂತನದಾರತಿಯ ಬೆಳಗಿರೆ | ಶೋಭಾನೆ ||476||

ಭಾಮಿನಿ

ಧಾರಿಣೀಪತಿ ಲಾಲಿಸೀ ಪರಿ |
ಭೂರಿವೈಭವದಿಂದ ಸಾಂಗದಿ |
ಪೂರವಾಯ್ತು ವಿವಾಹ ಮಂಗಲಮಜ್ಜನದ ವರೆಗೆ ||
ಆರು ಪೊಗಳುವರಮಮ ಭೂಸುರ |
ವಾರ ಷಡ್ರಸಭಕ್ಷ್ಯದಲಿ ಬಹು |
ಭಾರ ದಕ್ಷಿಣೆಯಿಂದ ದಣಿದರು ತಪ್ತರೆಂದೆನಿಸಿ || ||477||

ವಾರ್ಧಕ

ಭೂರಿವೈಭವದಿಂದಲಿಂತು ವೈವಾಹಮಂ |
ಪೂರಾಯಮಂಗೊಳಿಸಿ ಬಳಿಕಿತ್ತ ಮೋಹದ ಕು |
ಮಾರಿ ಸೌಭದ್ರೆಗಂ ಬಳುವಳಿಯನಾ ಶೂರಕುಲ ಸಂಭವಂ ಮುದದೊಳು ||
ಆರು ಸಾವಿರ ಗೋವ್ಗಳೊಡನೆ ದಾಸಿಯರ ನಾ |
ನೂರನಾಲಯಕಾಹ ಕನಕಪಾತ್ರದಲಿ ಸಂ |
ಭಾರಗಳನೆಲ್ಲಮಂ ಕೊಟ್ಟನಗಣಿತವಸ್ತ್ರಮಣಿಮಯ ವಿಭೂಷಣವನು ||478||

ರಾಗ ಕಾಂಭೋಜಿ ಝಂಪೆತಾಳ

ಧರಣಿಪತಿ ಕೇಳ್ ಬಳಿಕ ನರನು ನಿಜಸತಿವೆರಸಿ |
ಮುರಹರನನೊಡಗೊಂಡು ಮುದದಿ |
ಮಿರುಪ ಮಣಿರಥವನೇರಿರದೆ ಶಕ್ರಪ್ರಸ್ಥ |
ಪುರಕೆ ನಡೆತಂದನುತ್ಸವದಿ ||479||

ಬಂದು ಸೌಭದ್ರೆಯೊಡನೆಂದನಾ ಪಾರ್ಥನೆಲೆ |
ಚಂದಿರಾನನೆ ಕೇಳು ನೀನು ||
ಮುಂದಾಗಿ ಪೋಗು ಯಮನಂದನನ ಕುಂತಿಯರ |
ನಂದದಿ ಕಂಡು ವಂದಿಪುದು ||480||

ಅನಿಲಜನಿಗೆರಗಿ ದ್ರುಪದನ ಮಗಳ ಕಂಡು ವಂ |
ದನೆಯ ಮಾಡೆಂದು ಫಲುಗುಣನು ||
ವಿನಯದಲಿ ಬೀಳ್ಗೊಡಲು ವನಿತೆಯೆಯ್ತಂದಳರ |
ಮನೆಗಾಗಿ ಪರಮಸಂಭ್ರಮದಿ ||481||

ಬಂದು ಧರ್ಮಜನ ಪದಕಮಲಕೆರಗುತ ಸುರಪ |
ನಂದನನ ರಾಣಿ ತಾನೆನಲು ||
ಅಂದ ಮಿಗೆ ಪರಸಿ ಮೆಯ್ದಡವುತ್ತಲುಚಿತೋಕ್ತಿ |
ಯಿಂದ ಮನ್ನಿಸಿದನಾಕೆಯನು  ||482||

ಬಳಿಕ ಕುಂತಿಯ ಚರಣಕೆರಗಿ ಕಾಣಿಸಿಕೊಂಡು |
ಕಲಿವಕೋದರನಿಗಭಿನಮಿಸಿ ||
ತಳುವದೆಯ್ತಂದು ದ್ರೌಪದಿಗೆ ಮಣಿಯಲು ನಗೆಯ |
ಮೊಳೆ ಮಿನುಗುತಿಂತೆಂದಳೊಲಿದು ||483||

ರಾಗ ಸೌರಾಷ್ಟ್ರ ಏಕತಾಳ

ಚಾರುಚಂದಿರವಕ್ತ್ರೆ ವಾರಿಜದಳನೇತ್ರೆ |
ಯಾರವ್ವ ನೀನಿದನುಸಿರೆ ||
ನಾರಿ ಕೇಳಾನು ಗೋವಳನ ತಂಗಿಯು ಸುಮ್ಮ |
ನೇರಿಸಿ ನುಡಿಯಲೇನಹುದು ||484||

ಅರಿತೆ ನಾ ಪಾರ್ಥನ ಮಡದಿ ನೀನೆಂಬುದ |
ಬೆರೆವೆಯೇತಕೆ ಗರ್ವದಿಂದ ||
ಬೆರೆವರು ಬೇರವರಲ್ಲದೆ ಬೆರೆಯೆ ನಾ |
ನರನ ಹೆಂಡತಿಯಾದೆನೆಂದು ||485||

ಮಾತಿನ ಚಪಲತೆಗಸುರವೈರಿಯ ಸಹ |
ಜಾತೆಯಲ್ಲವೆ ತಂಗಿ ನೀನು ||
ಖಾತಿಯಿದೇಕೆ ನಾ ಕಂಡುದ ನುಡಿದರೆ |
ಶ್ವೇತಪಂಕಜದಳನೇತ್ರೆ ||486||

ಖತಿಯುಂಟೆ ಕಾಮಿನಿರನ್ನಳೆ ನಿನ್ನ ಕಂ |
ಡತಿಹಿತವಾದುದು ಕಾಣೆ ||
ಹಿತವಾದಡೆನ್ನನಾಲಿಂಗಿಪುದೆನುತಲಾ |
ಮತಿಯುತೆ ಮಗುಳೆರಗಿದಳು ||487||

ಭಾಮಿನಿ

ತಂಗಿ ಬಾ ತರಳಾಕ್ಷಿ ಬಾ ಬಾ |
ರಂಗದಸು ನೀನೆನಗೆನುತಲಾ |
ಲಿಂಗಿಸುತ ಸೌಭದ್ರೆಯನು ದ್ರೌಪದಿಯು ವಿನಯದಲಿ ||
ಅಂಗವರಿದುಪಚರಿಸಿದಳು ನಪ |
ಪುಂಗವನು ಬಳಿಕಿತ್ತಲಾ ಶ್ರೀ |
ರಂಗಪಾರ್ಥರನಿದಿರುಗೊಳಲೆಯ್ತಂದನುತ್ಸವದಿ || ||488||

ರಾಗ ಮಧ್ಯಮಾವತಿ ತ್ರಿವುಡೆತಾಳ

ಧರಣಿಪನನೀಕ್ಷಿಸುತ ಮುರಹರ | ನಿರದೆ ಮಣಿರಥವಿಳಿದು ಬಂದತಿ |
ಹರುಷ ಮಿಗೆಯಪ್ಪಿದನು ತನ್ನಯ | ಕರದಣಿಯೆ ಕಾರುಣ್ಯದಿ ||489||

ಬಂದು ಪಾರ್ಥನು ಚರಣಯುಗಳಕೆ | ವಂದಿಸಲು ಪಿಡಿದೆತ್ತುತಲಿ ಯಮ |
ನಂದನನು ಮುದದಿಂದಲಾ ಗೋ | ವಿಂದನೊಡನಿಂತೆಂದನು ||490||

ವರುಷ ತುಂಬಿತು ಇಂದಿಗೆಮ್ಮೀ | ನರನು ದೇಶಾಟನಕೆ ಪೊರಟೆಲೆ |
ಮುರಹರನೆ ಕೇಳಿಂದು ಪರಿಯಂ | ತರವು ನೀನೇ ಕರುಣದಿ ||491||

ಭೂರಿಕಂಟಕಗಳಲಿ ಕಾಯ್ದೀ | ಚಾರುನೇತ್ರೆ ಸುಭದ್ರೆಯನು ದಯೆ |
ದೋರಿ ಪಾರ್ಥಗೆ ರಮಣಿಯೆನಿಸಿದೆ | ಬೇರೆ ಮಾತೇನೆಂದನು ||492||

ಸಾಕು ಸಾಕುಪಚಾರವೆಲೆ ನಪ | ಶೇಖರನೆ ವಿಧಿಘಟನೆಯಿಂದಾ |
ದೀ ಕೆಲಸ ನಮ್ಮಿಂದೆಲಾಯ್ತೆನ | ಲೇಕೆನುತ ಹರಿ ನುಡಿದನು ||493||

ವಾರ್ಧಕ

ಭೂಮಿಪತಿ ಕೇಳ್ ಬಳಿಕಲರಮನೆಗೆ ಬಂದು ಸು |
ಪ್ರೇಮದಿಂ ಪಾರ್ಥನ ವಿವಾಹವತ್ತಾಂತಂಗ |
ಳಾ ಮಹೀಪತಿಗರುಹಿ ಕೆಲವು ದಿನಮಿರ್ದು ಶಕ್ತಪ್ರಸ್ಥಪುರವರದೊಳು ||
ಶ್ರೀಮನೋವಲ್ಲಭಂ ತೆರಳಿದಂ ದ್ವಾರಕೆಗೆ |
ಕ್ಷೇಮದಿಂದಿರುತಿರ್ದರಿತ್ತಲೀ ಯಮಸುತಂ |
ಭೀಮಸೇನ ಧನಂಜಯಾದಿಗಳ್ ಸಹಿತಲಾಗತ್ಯಂತ ತೋಷದಿಂದ ||494||

ಬಳಿಕಲಾ ಪಾರ್ಥಂಗೆ ಸೌಭದ್ರೆಗುದಿಸಿದಂ |
ಛಲದಂಕಮಲ್ಲನೆನಿಪಭಿನ್ಯುವೈವರ್ಗೆ |
ಜಲಜಮುಖಿ ದ್ರೌಪದಿಯೊಳಾದರೈವರು ಕುವರರಧಿಕ ಸಾಹಸವಂತರು ||
ನಲವು ಮಿಗೆ ಸಂತತಂ ಸುಖದಿಂದಲಿರುತಿರ್ದ |
ರೆಲೆ ಭೂಪ ಕೇಳ್ದವರ್ಗೆ ಸಿದ್ಧಿಪುದು ಗೋಷ್ಠಪುರ |
ನಿಲಯ ಲೋಕಾಧೀಶನಾಪ್ತನೆನಿಸುವ ರಮಾಧವನೊಲಿವ ಜೀವಿಗಳಿಗೆ ||495||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ಸುಖದಿಂದಿರ್ದರೆಂದಾ | ಶಾಂತಮತಿ ಜನಮೇಜಯಗೆ ನಲ |
ವಾಂತು ವೈಶಂಪಾಯನೊರೆದ ಮ | ಹಾಂತ ಕಥೆಯ ||496||

ವಿರಚಿಸಿದೆನಿದ ಯಕ್ಷಗಾನದಿ | ಮೆರೆವ ಕನ್ನಡ ಭಾಷೆಯಿಂದೀ |
ಧರಣಿಯೊಳಗಿಹ ಸಕಲ ಸಜ್ಜನ | ರರಿವ ತೆರದಿ ||497||

ಏಕಮಾನಸದಿಂದ ಕಿವಿಗೊ | ಟ್ಟೀ ಕಥೆಯ ನೆರೆ ಕೇಳಿ ಪೇಳುವ |
ಲೋಕಜನರನು ರಕ್ಷಿಪನು ಹರಿ | ತಾ ಕಪೆಯೊಳೂ ||498||

ರಾಗ ಸೌರಾಷ್ಟ್ರ ಏಕತಾಳ

ಸುರಮನುಮುನಿಜನವಂದಿತಗೆ | ಕರುಣಾಕರನಿಗೆ ಶಾಶ್ವತಗೆ ||
ದುರಿತವಿದೂರಗೆ ದೀನೋದ್ಧಾರಗೆ |
ಮುರಮಂಥನಗೆ ಸತ್ಕಥನನಿಗೆ || ಮಂಗಲಂ ಜಯ | ಮಂಗಲಂ ||499||

ಶಂಖಸುದರ್ಶನವಿಧತನಿಗೆ | ಪಂಕಜನೇತ್ರಗೆ ಸ್ಮರಪಿತಗೆ ||
ಸಂಕರುಷಣಸಹಭವನಿಗೆ ದಾನವ |
ಸಂಕುಲನಾಶಗೆ ಕೇಶವಗೆ || ಮಂಗಲಂ | ಜಯ | ಮಂಗಲಂ ||500||

ತರುಣಾರುಣಶತಭಾಸನಿಗೆ | ಶರಣಾಗತಪರಿಪೋಷನಿಗೆ ||
ವರವ್ರಜಪುರಮಂದಿರ ಲೋಕಾಧೀ |
ಶ್ವರಸಖನೆನಿಪ ರಮಾಧವಗೆ || ಮಂಗಲಂ | ಜಯ | ಮಂಗಲಂ ||501||

 

|| ಯಕ್ಷಗಾನ ಸುಭದ್ರಾಕಲ್ಯಾಣ ಮುಗಿದುದು ||