ರಾಗ ರೇಗುಪ್ತಿ ಅಷ್ಟತಾಳ

ಸಲ್ಲದಂಥ ನುಡಿಗಳ ನಿ | ನ್ನಲ್ಲಿ ಪೇಳುವವಳು ನಾ |
ನಲ್ಲ ಕಾಣೆ ಕೇಳ್ದುದೊಂದ | ಸೊಲ್ಲಿಸುವೆನು ಕೇಳ್ ಜಾಣೆ ||253||

ನಾರಿ ನಿನ್ನಗ್ರಜ ಬಲನು | ಕೌರವೇಂದ್ರಗೆ ನಿನ್ನನ್ನು |
ಧಾರೆಯೆರೆದು ಕೊಡುವೆನೆನುತಾ | ಕಾರಣದಿಂದೋಲೆಯನು ||254||

ಬರೆಸಿ ಕೌರವನೆಡೆಗೆ ತಾ | ನಿರದೆ ಕಳುಹೆ ನೋಡಿ |
ಭರದಿಂದೊಪ್ಪಿಕೊಂಡನಂತೆ | ಅರುಹಲೇನದ ಕಾಂತೆ ||255||

ನಾಡಿದು ಸಪ್ತಮಿಯ ದಿನ | ರೂಢಿಪ ಕೌರವಗೆ ನಿನ್ನ |
ಗಾಢದಿಂದ ಬಲರಾಮನು | ಮಾಡುವನಂತೆ ಲಗ್ನವನು ||256||

ಭಾಮಿನಿ

ಇಂದುವಂಶೋದ್ಭವನೆ ಕೇಳಿಂ |
ತೆಂದು ಮಂತ್ರಿಕುಮಾರಿ ನುಡಿಯ |
ಲ್ಕಂದದನು ಕೇಳುತ್ತಲಾ ಸೌಭದ್ರೆಯಾ ಕ್ಷಣದಿ ||
ಸಂದ ಪುಣ್ಯದ ತಾರೆ ಧರೆಗುರು |
ಳ್ವಂದದಿಂದಡಗೆಡೆದು ಬಹು ಪರಿ |
ಯಿಂದ ಮರುಗಿದಳಧಿಕ ಶೋಕಾತುರದಿ ಕಳವಳಿಸಿ ||257||

ರಾಗ ನೀಲಾಂಬರಿ ಆದಿತಾಳ

ಹರ ಹರಾ ಈ ಮಾತನಾರಿ | ಗರುಹುವೆನಯ್ಯಯ್ಯೋ ||
ಕುರುರಾಯಗೆನ್ನನು ಧಾರೆ | ಯೆರೆಯಲು ಬಾಳುವೆನೆ ||258||

ಒಡೆಯರಿಲ್ಲದೊಡವೆಯಾದೆ | ಪೊಡವಿಯೊಳಗಾನು ||
ಸುಡಲಿ ಹೆಣ್ಣುಜನ್ಮವನ್ನು | ಕಡುದುಃಖಭಾಜನವು || ||259||

ಮಾರಿಯಾದ ಹಿರಿಯಣ್ಣನು | ಆರು ಕೇಳ್ವರಿದನು ||
ವಾರಿಜಾಕ್ಷನೊಬ್ಬನೇ ವಿ | ಚಾರಿಸಬೇಕಿನ್ನು ||260||

ವಚನ

ಈ ಪ್ರಕಾರದಿಂದ ಸೌಭದ್ರೆ ಪ್ರಲಾಪಿಸುತ್ತಿರಲಾಗಿ ಮಂತ್ರಿಪುತ್ರಿಯಾದ ಕಲಾವತಿಯೇನೆಂದಳು ಎಂದರೆ-

ರಾಗ ಕಾಂಭೋಜಿ ಏಕತಾಳ

ಮರುಗಲೇಕವ್ವ ಸೌಭದ್ರೆ | ಸರಸೀರುಹನೇತ್ರೆ ||
ಅರುಹೆ ನಿನ್ನ ಮನದೊಳಿರುವ ಪರಿಯನಮಲಗಾತ್ರೆ ||261||

ಸ್ಮರಸಮಾನರೂಪ ಭೂಪಾ | ಲರೊಳಗುತ್ತಮನು ||
ಕುರುರಾಯನನೊಲ್ಲೆನೆಂಬೆ | ತರುಣಿರನ್ನೆ ನೀನು ||262||

ಅರಸನಾರ್ ನಿನಗೆಂದು ಪೇಳ್ದ | ಡರಿತುಕೊಂಬೆ ನಾನು ||
ಬರಿದೆ ಹಲುಬಲೇನು ಫಲ ಮುಂ | ದರಿದ ಕಾರ್ಯಕಿನ್ನು ||263||

ರಾಗ ಘಂಟಾರವ ಏಕತಾಳ

ಹರಿಣಲೋಚನೆ ಕೇಳೆ | ನ್ನರಸ ಪಾರ್ಥನಲ್ಲದೆ |
ದುರುಳ ಕೌರವನನ್ನು | ಮರೆದು ನೋಡುವೆನೆ ||264||

ಕರಿನೋಹಿಗಿಂದಪ್ರಸ್ಥ | ಪುರಕೆ ಪೋದಾಗ ಕಂಡೆ |
ಧುರಧೀರ ವಿಜಯನ | ಪರಿಯನೆಲ್ಲವನು ||265||

ರಾಗ ಸಾವೇರಿ ರೂಪಕತಾಳ

ಅಹುದವ್ವ ಮೂರುಲೋಕದೊಳೆಲ್ಲ ವಿಜಯನು |
ಬಹುಧೀರನೆಂಬರು ಸಟೆಯಲ್ಲೀ ಮಾತು  || ಪಲ್ಲವಿ ||
ಆದರೆ ನಿನ್ನಗ್ರಭವ ಬಲಭದ್ರನು |
ಭೂಧವ ಕೌರವಗೀಯಲು ನಿಶ್ಚಯಿಸಿಹ ||
ಆ ಧೀರ ನರಗೆ ನೀನರಿಸಿಯೆಂತಹೆಯೋ ಗೌ |
ರೀಧವನೊರ್ವನೆ ಬಲ್ಲನಿದನೆಲ್ಲ ||266||

ರಾಗ ಆನಂದಭೈರವಿ ಏಕತಾಳ

ಆಯುವಂತ ಪಾರ್ಥಗೆನ್ನ | ನೀಯದಿರಲು ಕಾಯವನ್ನು |
ತೊರೆವೆನು | ಕೀರ್ತಿ | ಮೆರೆವೆನು ||267||

ಹಲವು ಮಾತಿನ್ನೇನು ಕುರು | ಕುಲದ ಕುಹಕಿಯನ್ನು ಸೇರ |
ಲರಿವೆನೆ | ಬಾಳಿ | ಯಿರುವೆನೆ ||268||

ದ್ವಿಪದಿ

ಇಂತೆಂದು ಸೌಭದ್ರೆ ಮಂತ್ರಿಜೆಗೆ ಪೇಳ್ದು |
ಅಂತರಂಗದಲಿ ಘನ ಚಿಂತೆಯನು ತಾಳ್ದು ||269||

ಇಳಿವ ಕಂಬನಿಯಿಂದ ಕುಚವನದ್ದಿದಳು |
ಹಲವಂಗದಿಂದ ಹಂಬಲಿಸಿ ಮರುಗಿದಳು ||270||

ವಸನ ಭೂಷಣ ಗಂಧಮಾಲ್ಯಾದಿಗಳನು |
ವಸುಮತಿಯೊಳೀಡಾಡಿ ಕಳವಳಿಸಿ ತಾಣು ||271||

ಭರದಿಂದಲಯ್ತಂದು ಸಜ್ಜೆಮನೆಗಂದು |
ಧರೆಯೊಳಗೆ ಮಲಗಿದಳು ಶೋಕದಲಿ ನೊಂದು ||272||

ಕಂದ

ವನಿತಾಮಣಿ ಸೌಭದ್ರೆಯ |
ಅನುತಾಪವನೀಕ್ಷಿಸುತಲಿ ದೂತಿಯಳೋರ್ವಳ್ ||
ಘನವೇಗದಿ ವಸುದೇವನ |
ಮನೆಗೆಯ್ತಂದಾ ಸಮಸ್ತವಾರ್ತೆಯನೊರೆದಳ್ || ||273||

ರಾಗ ಯರಕಲ ಕಂಭೋಜಿ ಅಷ್ಟತಾಳ

ಜೀಯ ಲಾಲಿಸಯ್ಯ | ಬಿನ್ನಪವನ್ನು | ಸ್ವಾಮಿ ಲಾಲಿಸಯ್ಯ  || ಪಲ್ಲವಿ ||

ತವ ಕತವರ್ಮಕನ | ಕುಮಾರಿಯಿಂ | ದವೆ ಸುದ್ದಿಯೊಂದ ನಿನ್ನ ||
ಕುವರಿ ಸೌಭದ್ರೆ ಕೇಳ್ದವಳಾಗಿ ಭೂರಿ ತಾ |
ಪವನಾಂತು ಮರುಗುವಳು | ಶೋಕದೊಳು || ಜೀಯ ||274||

ವಸನಭೂಷಣಗಳನು | ಈಡಾಡಿ ದುಃ | ಖಿಸುತಾಗ ನಾರಿ ತಾನು ||
ಅಸಮ ಚಿಂತೆಯಲಿ ಮೇಲ್ಮುಸುಕಿಟ್ಟು ನುಡಿಸಿದ |
ಡುಸಿರದೆ ಮಲಗಿಹಳು | ಪೃಥ್ವಿಯೊಳು || ಜೀಯ ||275||

ಭಾಮಿನಿ

ದೂತಿಯೆಂದುದ ಕೇಳುತಲೆ ಕಡು |
ಭೀತಿಯಿಂ ದಂಪತಿಗಳೀರ್ವರು |
ಆ ತತುಕ್ಷಣ ಬಂದರಾ ಸೌಭದ್ರೆಯಿದ್ದೆಡೆಗೆ ||
ಭೀತಿರೋಷದಿ ಮಲಗಿರುವ ತನು |
ಜಾತೆಯನು ನೋಡುತ್ತಲೊಯ್ಯನೆ |
ಮಾತನಾಡಿಸಿದರು ನಯೋಕ್ತಿಗಳಿಂದಲವರಂದು ||276||

ರಾಗ ಸುರುಟಿ ಏಕತಾಳ

ಮಗುವೆ ನೀನಿಂತು ಗೆಯ್ವರೆ | ಹೀಗೆಂಬುದನ್ನು |
ಮೊಗವೆತ್ತಿ ಪೇಳದಿನಿತು | ದುಗುಡದಿಂದ ಸುಯ್ವರೆ || ಮಗವು ನೀ ||277||

ಆರಿಂದಲೇನು ಬವಣೆ ಬಂತೆ | ಸದ್ಗುಣವಂತೆ |
ವೀರೆ ಕವಿಗೆ ಚಿತ್ತದ ಮಮ | ಕಾರವನ್ನು ಸುವ್ರತೆ | ಮಗುವೆ ನೀ ||278||

ಮೀರದೆ ಮಾಳ್ಪೆವು ನಾವದನು | ನೀ ಪೇಳಿದುದನು |
ಚಾರುಗಾತ್ರೆ ಪದ್ಮನೇತ್ರೆ | ತೋರೆ ಮನಕುಲ್ಲಾಸವ || ಮಗುವೆ ನೀ ||279||

ರಾಗ ಶಂಕರಾಭರಣ ಏಕತಾಳ

ಏತಕೆನ್ನ ಮೇಲಣಾಸೆ | ಮಾತೆಪಿತರೀರ್ವರಿರ |
ಮಾತ ಕೇಳ್ದು ತನುವ ನಾನಿ | ನ್ನಾತುಕೊಂಬೆನೆ ||
ಸಾತಿರೇಕದಿಂದಲಿದನು | ಘಾತಿಸುವೆನಣ್ಣಗೆ ಸಂ |
ಪ್ರೀತಿಯಾಗಲೆಂದು ಪೇಳ್ದ | ಳಾ ತಳೋದರಿ ||280||

ಭಾಮಿನಿ

ಎಂದು ಮೌನವ ಹಿಡಿದು ಮಲಗಿದ |
ನಂದನೆಯನೀಕ್ಷಿಸುತಲಾ ತಾ |
ಯ್ತಂದೆಗಳು ಬೆರಗಾಗಿ ಮಿಗೆ ಕಂಗೆಟ್ಟದೇನೆನುತ ||
ನೊಂದುಕೊಳುತಿರೆ ಕಾಣುತಾ ಪೂ |
ರ್ಣೇಂದುವದನೆ ಕಲಾವತಿಯು ಸಾ |
ನಂದದಿಂ ಕೈಮುಗಿದು ಪೇಳಿದಳವಳ ಮನದಿರವ ||281||

ರಾಗ ನವರೋಜು ಏಕತಾಳ

ಲಾಲಿಪುದೆನ್ನಯ ಮಾತ | ಭೂ | ಲೋಲ ಸದ್ಗುಣಯುತ ||
ಈ ಲಲನಾಕುಲಮೌಳಿಮಣಿಯು ಮಿಗೆ |
ತಾಳಿದ ದುಗುಡವ ಪೇಳುವೆನೆಲ್ಲವ ||282||

ಭೂವರ ಕೌರವಗೊಲಿದು | ಬಲ | ದೇವನು ತನ್ನಲಿ ಒಲಿದು ||
ಈವನು ಗಡ ವೈವಾಹದಲೆಂದಖಿ |
ಳಾ ವಾರ್ತೆಯನುರೆ ತಿಳಿಯಲು ಕೇಳುತ || ಲಾಲಿಪುದೆನ್ನಯ ||283||

ಒಲ್ಲೆನಾತನನೆಂದು | ಈ | ಫುಲ್ಲಲೋಚನೆಯಿಂದು |
ತಲ್ಲಣಗೊಳುತಲಿ ಗಲ್ಲಿಪ ಚಿಂತೆಯೊ |
ಳಿಲ್ಲಿ ಮಲಗಿಹಳು ಮೆಲ್ಲನೆ ಧರೆಯೊಳು || ಲಾಲಿಪುದೆನ್ನಯ ||284||

ವಾರ್ಧಕ

ಎನಲೆಂದರವರೀರ್ವರೆಲೆ ತರುಣಿ ಕೇಳ್ ಕೌರ |
ವನನೊಲ್ಲಳಾದಡಿನ್ನಾವ ವೀರನಿಗೊಲಿವ |
ಮನದಿರವದೇನೆಂಬುದುಸಿರಾ ಪ್ರಕಾರದಿಂ ಮಾಡಿದಪೆವೆಂದೆನಲ್ಕೆ ||
ವಿನುತ ಶೌರ್ಯಾಟೋಪದತಿಜಸಂಬಡೆದ ಸುರ |
ಜನಪಸುಕುಮಾರ ಪಾರ್ಥನೆ ರಮಣನಲ್ಲದೀ |
ಬಿನುಗುಗಳನೊಲ್ಲೆನೆಂದೀಕೆ ಚಿಂತಿಸುತಿರ್ಪಳೆಂದಳಾ ಮಂತ್ರಿತನುಜೆ ||285||

ರಾಗ ಕಾಂಭೋಜಿ ಝಂಪೆತಾಳ

ಅಹುದು ಪ್ರೌಢಿಮೆಗೆ ದಿಟವೀವುದಿದು ಲೋಕದೊಳು |
ವಿಹಿತವಲ್ಲವೆ ಪಡೆದ ಮಗಳ ||
ಸಹಜಾತೆಯಣುಗನಲ್ಲವೆ ಪಾರ್ಥಗೀವುದೇ |
ಸಹಜವೆಂದನು ಸುತೆಗೆ ಶೌರಿ ||286||

ಬಿಡು ಶೋಕವನು ಮುದ್ದು ಮಗುವೆ ಪಾರ್ಥಗೆ ನಿನ್ನ |
ಕೊಡುವಂತೆ ಯತ್ನಗೆಯ್ಯುವೆನು ||
ಒಡಲ ಬಳಲಿಸದಿರೇಳೆಂದು ದೇವಕಿಸಹಿತ |
ಲೊಡಬಡಿಸಿದರು ಸುಭದ್ರೆಯನು ||287||

ಸುರಿವ ಕಂಬನಿಯ ಸೆರಗಿಂದೊರಸಿ ಮುಡಿಯ ನೇ |
ವರಿಸಿ ಹೊಂದೊಡವುಗಳ ತೊಡಿಸಿ ||
ಮಿರುಪ ಕಸ್ತುರಿಯ ಪಣೆಗಿಡಿಸಿಯಲರನು ಮುಡಿಸಿ |
ಭರದಿ ಸಂತಯಿಸಿದರು ಸುತೆಯ ||288||

ಕಂದ

ಇಂತಾ ಸುತೆಯಂ ಮನ್ನಿಸಿ |
ಮುಂತಹ ರಾಜಸುಕಾರ್ಯಕ್ಕಾ ವಸುದೇವಂ ||
ತಾಂ ತಳುವದೆ  ದೇವಕಿ ಸಹಿ |
ತಂ ತ್ವರಿತದಿ ಬಂದಾ ಬಲದೇವನ ಗಹಕಂ ||289||

ರಾಗ ಘಂಟಾರವ ಏಕತಾಳ

ಬರವ ಕಾಣುತಲೆದ್ದು ಕರೆತಂದು ಸಿಂಹವಿ |
ಷ್ಟರದಿ ಕುಳ್ಳಿರಿಸಿ ತೋಷದಿ ಹಲಧರನು ||
ಚರಣಪೂಜೆಯ ಗೆಯ್ದು ವಂದಿಸೆ ಪಿಡಿದೆತ್ತಿ |
ಪರಿಸುವ ಜನಕನೊಳೊಲಿದೆಂದನವನು ||290||

ತಂದೆ ಕೇಳನುಜೆ ಸೌಭದ್ರೆಯ ಪರಿಣಯ |
ಕೊಂದು ವಾಸರವಿರ್ಪುದದಕೆ ಮುಂದಿನ್ನು ||
ಸಂದೇಹವೇನುಂಟು ಮಗನೆ ಪಾರ್ಥನ ಕರೆ |
ತಂದು ಧಾರೆಯನಾತಂಗೆರೆಯಿದಕಿನ್ನು ||291||

ಅಹಹ ಹೀಗೇತಕೆಂಬಿರಿ ಬೊಪ್ಪ ಸೌಭದ್ರೆ |
ಮಹಿಳೆಯ ಫಲುಗುಣಗೀಯಲೊಪ್ಪುವೆನೆ ||
ಸಹಜಾತೆಯಣುಗನಿಗೀಯದೆ ಮಿಕ್ಕಿನ |
ಕುಹಕಿಗಳಿಗೆ ಹೆಣ್ಣ ಕೊಡುವೆಯ ಮಗನೆ ||292||

ಕುಲವಂತ ಬಲವಂತ ಸಿರಿವಂತ ಕುರುಕುಲ |
ತಿಲಕನಿಗೆಣೆಯಹರಾರುಂಟ ಪಿತನೆ ||
ಛಲದಿ ದ್ರೌಪದಿಯ ವೈವಾಹದೊಳವರನು |
ಗೆಲಿದ ಪಾರ್ಥನಿಗಿದಿರಾರಯ್ಯ ಸುತನೆ ||293||

ರಾಗ ಮಾರವಿ ಏಕತಾಳ

ತೆಗೆ ತೆಗೆ ಪಾಂಡವ | ಮುಗುಧರ ನಡತೆಯ | ಮಿಗೆ ನಾನರಿತಿಹೆನೈ ||
ಜಗದೊಳಗೊರ್ವಾ | ಕೆಗೆ ಪ್ರಿಯರೈವರು | ಸೊಗಯಿಪುದುಂಟೇನೈ ||294||

ಪರಪುರುಷರಿಗುದಿ | ಸಿರುವವರಲ್ಲದೆ | ವರಪಾಂಡುವಿಗವರು ||
ತರಳರದೆಂತಹ | ರರಿಯೆವೆ ನಾವವ | ದಿರ ಸಂಗತಿಗಳನು ||295||

ಗಿರಿ ಕಾನನ ಸಂ | ಚರರನುಚಿತದಲಿ | ಕರೆತಂದೂರಿನಲಿ |
ಇರಿಸಿದರಲ್ಲದೆ | ಪರಿಕಿಸಲವರಿಗೆ | ಪುರವಾಸೆಲ್ಲಿಹುದು ||296||

ಭಾಮಿನಿ

ಹಲವು ಮಾತಿಂದೇನು ಕುರುಕುಲ |
ತಿಲಕಗೊಲಿದನುಜೆಯನು ಕೊಡುವುದು |
ನಿಲುಗಡೆಯ ಮಾತೆಂದು ಮೌನವ ಹಿಡಿದು ನಿಂದಿರಲು ||
ಬಳಿಕ ದೇಶಾಂತರದ ಭೂಪರ |
ಬಳಿಗೆ ಕಳುಹಿದ ಚರರು ಬಂದಾ |
ಹಲಧರನನೀಕ್ಷಿಸುತ ಪೇಳಿದರಖಿಳ ವಾರ್ತೆಗಳ ||297||

ರಾಗ ಸಾರಂಗ ಅಷ್ಟತಾಳ

ಲಾಲಿಪುದೆಮ್ಮ ಬಿನ್ನಪವ | ಕಾಮ |
ಪಾಲಕ ಕಾರುಣ್ಯವಿಭವ || ಪಲ್ಲವಿ ||

ಸಕಲದೇಶದೊಳುಳ್ಳ ನಪರು | ಮತ್ತಾ |
ಮುಕುಟವರ್ಧನರರಸಿಯರು ||
ಪ್ರಕಟಿತ ವೇದವಾಚಕರು ವಿಪ್ರರು ಮೇಣು |
ಸಕಲರೀ ಪರಿಣಯಕೆ ನಾಳಿನೊಳಿ |
ದಕೊ ಬಹರು ನಿಶ್ಚಯವಿದು | ಲಾಲಿಪುದೆಮ್ಮ ||298||

ಗಮಿಸಿದೆ ವಿಭವಪುರವರಕೆ | ಅಲ್ಲಿ |
ಯಮಲಾಂಗ ಕುರುಭೂಮಿಪನಿದಕೆ ||
ಕ್ರಮದಿ ದಿಬ್ಬಣಗೊಂಡು ಬಹನು ಕೇಳ್ ಮೇಲಣ ||
ಅಮಲ ಶಕ್ರಪ್ರಸ್ಥದಲಿ ನರ |
ನಮಮ ಗೆಯ್ದನದೊಂದು ಚೋದ್ಯವು || ಲಾಲಿಪುದೆಮ್ಮ ||299||

ಸೋದರರೊಳು ಕಾದಿ ಛಲಕೆ | ಆತ |
ಪೋದನು ಗಡ ದೇಶಾಟನಕೆ ||
ಭೇದದಿ ಯಮತನಯಾದಿ ನಾಲ್ವರು ಕುಂತಿ |
ಈ ದ್ರೌಪದಿ ಸಹ ರೋದಿಸುವರಂ |
ತಾದ ಪರಿಯೇನೆಂಬುದರಿಯೆವು || ಲಾಲಿಪುದೆಮ್ಮ ||300||

ಕಂದ

ಇಂತೆನೆ ಕೇಳ್ದಾ ಬಲಭ |
ದ್ರಂ ತಾ ಕಡುಹರುಷವೆತ್ತು ಚಿತ್ತದೊಳಾಗಳ್ ||
ಕುಂತೀಸುತರಂ ಪೊಗಳುವಿ |
ರೆಂತೆನುತ ಜನಕನ ಪಚಾರಿಸುತಿಂತೆಂದಂ ||301||

ರಾಗ ಮಧುಮಾಧವಿ ಏಕತಾಳ

ಕೇಳ್ದಿರೆ ನಿಮ್ಮ ಸುರರಾಳ್ದನಣುಗನು |
ಪೇಳ್ದರೆ ನಿಮಗಿದು ತಿಳಿದಪುದೆ ||
ಆಳ್ದನ ಮಾಳ್ಪಿರಿ ಮಗಳಿಗೆ ಪಾರ್ಥನ ||
ಬಾಳ್ದವರೆಂಬುದಕಲ್ಲೆಂಬೆವು ನಾವು ||302||

ಇಂದೇ ನರನನು ಕರೆತಂದುಚಿತದಿ |
ಚಂದದಿ ವಿರಚಿಸಿ ಧಾರೆಯನು ||
ಹಿಂದವರನು ನಾವು ದೂಷಣೆ ಗೆಯ್ದರು |
ಕಂದರು ನಿಮ್ಮಯ ಪದಕೆರಗುವೆವೈ ||303||

ವದ್ಧರು ನೀವೇನ್ ಮುಂದರಿಯಿರಿ ಪರ |
ರಿದ್ದುದ ಪೇಳ್ದರೆ ಕೈಗೊಳಿರಿ ||
ಬುದ್ಧಿ ಬಂದಂತೆ ನಾ ವಿರಚಿಸುತಿಹೆನದ |
ಸದ್ದಿಲ್ಲದೆ ನೀವು ಭವನಕೆ ತೆರಳ್ವುದು ||304||

ವಾರ್ಧಕ

ಧರಣೀಂದ್ರ ಲಾಲಿಸೀ ನುಡಿಗುತ್ತರಂ ಕಾಣ |
ದಿರಲಾಗ ವಸುದೇವನಲ್ಲಿಂದ ಸತಿಸಹಿತ |
ತಿರುಗಿದಂ ಮುಂದೇನುಪಾಯಮಂ ಗೆಯ್ವೆ ತಾನೆಂದೆನುತ ಚಿಂತೆಗೊಳುತ ||
ಹರ ಹರಾ ಪಾರ್ಥನೇತಕೆ ಭೂಪ್ರದಕ್ಷಿಣೆಗೆ |
ತೆರಳಿದನೊ ತಿಳಿಯೆನೆಂದೆಣಿಸುತ್ತ ಮುರಹರನ |
ಪೊರೆಗೆ ಬರೆ ಕಂಡಿದಿರ್ಗೊಂಡು ಪದಕೆರಗಿ ಕೈಮುಗಿವುತ್ತಲಿಂತೆಂದನು ||305||

ರಾಗ ತೋಡಿ ಏಕತಾಳ

ಏನು ಬಂದಿರಿ ಮಹೋತ್ಸವದ ಕಾಲದಲಿ ದು |
ಮ್ಮಾನ ಕಾಣಿಸುತಲಿದೆ ಸಿರಿಮೊಗದೊಳಗೆ ||
ಸಾನುರಾಗದಿ ಪೇಳಬಹುದೆಂದೆನುತ್ತಲಾ |
ದಾನವಾಂತಕ ಬೆಸಗೊಳಲೆಂದನವಗೆ ||306||

ರಾಗ ತುಜಾವಂತು ಝಂಪೆತಾಳ

ಕೇಳಯ್ಯ ಸುಕುಮಾರ ಮಮ ಕುಲೋದ್ಧಾರ |
ಪೇಳಿ ಫಲವನು ಕಾಣೆ ಕೀರ್ತಿ ಸಾಕಾರ  || ಪಲ್ಲವಿ ||

ದುರುಳ ಕೌರವನಪಗೆ ತರಳೆ ಸೌಭದ್ರೆಯನು |
ಪರಿಣಯವ ಗೆಯ್ವೆನೆಂದೆಣಿಸಿಹನು ಬಲನು ||
ವರ ಪುಣ್ಯವಂತರಲ್ಲವದಿರಿಗೆ ದೈವಬಲ |
ವಿರದು ಅಲ್ಪಾಯುಷ್ಯವಂತರವರಹರು || ಕೇಳಯ್ಯ ||307||

ರಂಜಿಸುವ ಕುರುಕುಲಾಬ್ಧಿಗೆ ವಡಬನಂದದಿ ಪ್ರ |
ಭಂಜನಾತ್ಮಜ ಪಾರ್ಥರಿಹರು ಮತ್ತವರ್ಗೆ ||
ಸಂಜನಿಸಿಯಿರ್ಪುದಚ್ಯುತನ ಕಪೆಯಪಕೀರ್ತಿ |
ಯೆಂಜಲಿಸಲರಿಯದದರಿಂ ಧನಂಜಯಗೆ || ಕೇಳಯ್ಯ ||308||

ತಿಳಿದು ಸೋದರಿಕೆಗೀವನು ಹೆಣ್ಣನೆಂದೆನಲು |
ಗಳಹಿದನು ನಿನ್ನ ಸಹಭವ ಮರುಳರಂತೆ ||
ತಿಳುಹಿದರು ಚರರವಗೆ ತೀರ್ಥಯಾತ್ರೆಗೆ ಪೋದ |
ಫಲುಗುಣನೆನುತ ಕೇಳ್ದು ದುಗುಡದಿಂ ಬಂದೆ || ಕೇಳಯ್ಯ ||309||

ಭಾಮಿನಿ

ನಾನು ಮನದೊಳಗೊಂದ ನೆನೆದರೆ |
ತಾನದೊಂದಾಯ್ತಿದಕೆ ಮಾಡುವು |
ದೇನನೆಂದೆನುತಧಿಕ ಸಂತಾಪದೊಳು ಬೆದಬೆಂದು ||
ಮಾನನಿಧಿ ವಸುದೇವನೊಡನಂ |
ದಾ ನರಕಮರ್ದನನು ಮಿಗೆ ಸು |
ಮ್ಮಾನದಿಂದಲಿ ನುಡಿದನೊಯ್ಯನೆ ನಗೆಯ ಮೊಳೆ ಮಿನುಗೆ ||310||

ರಾಗ ಮಾರವಿ ಅಷ್ಟತಾಳ

ತಾತ ನೀವೇಕೆ ಚಿಂತಿಸುವಿರಿ ಸುಮ್ಮನೆ |
ಕಾತರಗೊಂಡು ಹೀಗೆ ||
ಧಾತುಗೆಟ್ಟಿಂತು ಚಿಂತಿಸಲೇನು ಫಲ ಭೂತ |
ನಾಥ ಗೆಯ್ದಂತಹುದು | ಕಾರ್ಯಗಳದು ||311||

ವಾರಿಜಪೀಠನು ಬರೆದಿಹ ಬರೆಹವ |
ಮೀರಲಾರಳವಹುದು ||
ಆರಿಗೆ ಪ್ರಾಪ್ತವಿದ್ದವಳೊ ಮತ್ತವಗೆ ಕೈ |
ಸೇರುವಳಬಲೆ ನೋಡಾ | ಸಂಶಯ ಬೇಡ ||312||

ಭಾಮಿನಿ

ಇದನರಿತು ನಾವಣ್ಣದೇವಗೆ |
ಹದಯವನು ತಿಳುಹಿದರೆ ನಿಮಗೆಂ |
ದುದನು ನಮಗೆನದಿಹರೆ ಸಾಕಾ ತೋಟಿ ನಮಗೇಕೆ ||
ಮುದದಿ ನೀವವರೀರ್ವರೊಲಿದಾ |
ವುದನು ಮಾಳ್ಪಿರೊ ನೋಳ್ಪೆವದರನು |
ತುದಿಗೆ ನಮ್ಮಯ ಮಾತಿದೆಂದನು ದನುಜರಿಪು ನಗುತ ||313||

ಪರಿವರ್ಧಿನಿ

ಇಂತಾ ಮುರಹರನೆಂದುದ ಕೇಳುತ |
ಚಿಂತಾತುರದಿಂದಾ ವಸುದೇವಂ |
ತಾಂ ತಳುವದೆ ಭವನಕೆ ಬರೆ ಕಂಡಾ ಸೌಭದ್ರಾಂಗನೆಯು ||
ಅಂತರದಲಿ ಪಿತನಿಂಗಿತವರಿವುತ |
ಸಂತಾಪವ ಸೈರಿಸಿಕೊಳಲಾರದೆ |
ಕುಂತವು ಮರು ಮೊನೆಗೊಂಡಂದದಿ ಬಾಯ್ಬಿಟ್ಟುರೆ ಮರುಗಿದಳು ||314||