ರಾಗ ನೀಲಂಬರಿ ಆದಿತಾಳ

ಅಕಟಾ ಇನ್ನೇನ ಮಾಳ್ಪೆನು | ತಂದೆಯ ಮಾತು |
ವಿಕಲಗೆಯ್ದನು ಬಲನು ||
ಮಕರಕುಂಡಲಧರನು | ಹೊರಗಿಂದ ಹೊರಗೆ |
ಸುಖವೆಂತು ನೋಡುವನು ||315||

ಆರೊಡನುಸಿರುವೆನು | ಇಂತಾದ ಮೇಲೆ |
ಆರು ಕೇಳುವರಿದನು ||
ಮೂರು ಲೋಕವು ಒಂದಾಗೆ | ಸೇರುವಳಲ್ಲ |
ಕ್ರೂರ ಕೌರವ ಮೂಳಗೆ ||316||

ಆವ ರೀತಿಯೊಳಾಗಲಿ | ನೀಗುವೆನೆನ್ನ |
ಜೀವವನಗ್ನಿಯಲಿ ||
ಆ ವೀರ ಬಲನ ಚಿತ್ತಕೆ | ಗೆಲುವಾಗಲೆಂದು |
ತೀವಿದಶಶ್ರುವಾಕೆ ||317||

ರಾಗ ಭೈರವಿ ಝಂಪೆತಾಳ

ವನಜಲೋಚನೆಯಿಂತು | ಘನತರದ ದುಃಖದಲಿ |
ತನುವ ನೀಗುವೆನೆಂದು | ಮನದಿ ನಿಶ್ಚಯಿಸೆ ||318||

ಅರಿದಿತ್ತ ಮುರಹರನು | ಸುರಮುನಿಪನನು ನೆನೆಯೆ |
ಬರೆ ಸುಭದ್ರೆಯ ಬೋಧಿ | ಸಿರದೆ ನೀನೆಂದು ||319||

ನೇಮಿಸೆ ಹಸಾದವೆನು | ತಾ ಮುನಿಪನಾಗಲಾ |
ಕಾಮಿನಿಯ ಗಹಕೆ ಸು | ಪ್ರೇಮದಲಿ ಬಂದ ||320||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಬಂದ ನಾರದಮುನಿಯ ಚರಣ |
ದ್ವಂದ್ವಕಾನತೆಯಾಗಲೆತ್ತುತ |
ಕಂದುಮೊಗದಬಲೆಯೊಳು ಬಳಿಕಿಂ | ತೆಂದನೊಲಿದು ||321||

ವಿನುತ ವೈವಾಹದ ಸುಕಾಲದೊ |
ಳಿನಿತು ದುಃಖಿಪರುಂಟೆ ನುಡಿ ನಿ |
ನ್ನನುವನೆನೆ ಕೈಮುಗಿದು ಪೇಳ್ದಳು | ವನಜಮುಖಿಯು ||322||

ದುರುಳ ಕೌರವಗೆನ್ನ ಧಾರೆಯ |
ನೆರೆವನಗ್ರಜ ಗಡ ಶರೀರವ |
ತೊರೆವೆನಾತನನೊಲ್ಲೆನೆಂದಳು | ಹರಿಣನೇತ್ರೆ ||323||

ರಾಗ ಸಾಂಗತ್ಯ ರೂಪಕತಾಳ

ಎಲಗೆ ಸೌಭದ್ರೆ ನೀ ಮರುಳಾದೆಯೇನವ್ವ |
ಫಲುಗುಣನಲ್ಲದೆ ನಿನಗೆ ||
ಉಳಿದವರರಸರಾದಪರೆಂಬೀ ಯೋಚನೆ |
ಗೊಳದಿರು ಕೇಳು ಪೇಳುವೆನು ||324||

ಹಿಂದೆ ಸಹಸ್ರಕವಚನೆಂಬ ಖಳನ ಕೊ |
ಲ್ವಂದಕೋಸುಗ ನಾರಾಯಣನು ||
ಚಂದದಿ ತನ್ನಯ ಛಾಯೆಗೆಯ್ದಗ ತ |
ನ್ನೊಂದು ರೂಪವನು ಕಾಳಗಕೆ ||325||

ಹರಿಯನುಜ್ಞೆಯನೀಯೆ ಖಳನೊಳು ಕಾದೆ ಮೇಣ್ |
ಮರೆಹೊಕ್ಕನಾತನಚ್ಯುತನ ||
ಮರಳಿ ಛಾಯಾರೂಪ ತನಗೆ ಮುಂದೇನೆನೆ |
ನರನಾಗಿ ಜನಿಸೆಂದ ಹರಿಯು ||326||

ಅದರಿಂದ ವಿಷ್ಣುಛಾಯೆಯೆ ಪಾರ್ಥನೆಂಬ ನಾ |
ಮದೊಳು ವರ್ತಿಸಿದ ಭೂಮಿಯಲಿ ||
ಸುದತಿ ನಿನ್ನಿನಿಯನಾದಪನೆಂಬನೆಂತೆನ |
ಲದಕೆ ಕೇಳಿನ್ನೊಂದು ಕಥೆಯ ||327||

ಮಗವನ್ನು ತರಲೆಂದು ವನದಿ ಪೂರ್ವದಿ ರಾಮ |
ನಗಲೆ ಲಕ್ಷ್ಮಣನಿಲ್ಲದಿರಲು ||
ಮಗನೇತ್ರೆ ಸೀತೆಯ ಬಳಿಗೆ ಭಿಕ್ಷುಕನಾಗಿ |
ವಿಗಡ ದಶಾಸ್ಯನೆಯ್ತಂದ ||328||

ತಿಳಿದು ತಾ ಚಿತ್‌ಶಕ್ತಿಯಾದ ಕಾರಣದಿಂದ |
ಎಲೆಮನೆಯನು ಪೊಗೆ ಸುರರು ||
ತಳೆದಣುರೂಪದಿ ಬಂದು ಪ್ರಾರ್ಥನೆಗೆಯ್ದ |
ರೆಲೆ ತಾಯೆ ನೀ ಪೋಗದಿರಲು ||329||

ಹರಿಸನು ದಶಗಳನನು ರಾಮನೆನೆ ಕೇಳ್ದು |
ತ್ವರಿತದಿ ಬಳಿಕ ಜಾನಕಿಯು ||
ವಿರಚಿಸಿ ನಿಜಛಾಯೆಯಿಂದ ಸೀತೆಯ ತಾನು |
ಧರಣಿಯೊಳಿಳಿದಳಾ ಕ್ಷಣದಿ ||330||

ಮೇಲೆ ಛಾಯಾಸೀತೆಯನು ದಶಶಿರನೊಯ್ಯೆ ||
ಕಾಳಗದಲಿ ರಘುವರನು ||
ಬೀಳುಗೊಟ್ಟನು ಅಂಬಿಗವನಸುವನು ಬಳಿ |
ಕಾ ಲತಾಂಗಿಯ ಸೆರೆಬಿಡಿಸಿ ||331||

ಅನಲನ ಮುಖದಿ ಪರೀಕ್ಷಿಸಲೀರ್ವರೊಂ |
ದನುವಾಗಿ ಬರಲು ರಾಘವನು ||
ಮಿನುಗುವ ನಿಜಸೀತೆಯನು ಪರಿಗ್ರಹಿಸಿ ಮುಂ |
ದೆನಗೇನೆಂದಳು ಛಾಯಾಸೀತೆ ||332||

ಎನ್ನ ಛಾಯೆಯೆ ಪಾರ್ಥನೆಂದುದಿಸುವನು ನೀ |
ನುನ್ನತ ಸೌಭದ್ರಾಹ್ವಯದಿ ||

ಜನ್ಮವ ಪಡೆದಾತನರಸಿಯಾಗೆಂದು ಸಂ |
ಪನ್ನ ರಾಘವನು ನೇಮಿಸಿದ ||333||

ಭಾಮಿನಿ

ತಾಯೆ ನೀನದರಿಂದಲಾ ನಿಜ |
ಮಾಯೆಯಳ ಪ್ರತಿಬಿಂಬ ಶ್ರೀನಾ |
ರಾಯಣನ ಛಾಯಾಸ್ವರೂಪನು ಶಕ್ರನಂದನನು ||
ನೋಯದಿರು ನಿನಗಾತನೇ ಸು |
ಪ್ರೀಯನಹನೆಂದೊಡಬಡಿಸಿ ಕಮ |
ಲಾಯತಾಕ್ಷಿಯನಾ ಮುನೀಶ್ವರನಡರಿದನು ನಭಕೆ ||334||

ರಾಗ ಮಧ್ಯಮಾವತಿ ತ್ರಿವುಡೆತಾಳ

ಅರಸ ಕೇಳ್ ನಾರದನ ಮಾತಿನ | ಭರವಸದಿ ಸೌಭದ್ರೆ ಸುಖಿಯಾ |
ಗಿರಲು ರವಿ ಸಾರಿದನು ಪಶ್ಚಿಮ | ಗಿರಿಶಿಖರಕಾ ದಿನದಲಿ ||335||

ತರಣಿಯುದಯಾಚಲಕೆ ಬರುತಿರೆ | ಮರುದಿವಸ ಬಲಭದ್ರನಿತ್ತಲು |
ಹರುಷ ಮಿಗೆ ತನ್ನಾಪ್ತಜನಸಹ | ಭರದೊಳೋಲಗಗೊಟ್ಟನು ||336||

ಆ ಸಮಯಕನುವಾಗಿ ಬಂದರು | ದೇಶದೇಶದ ನಪರು ರಾಣೀ |
ವಾಸ ವರ ಸಾಮಂತ ಸಚಿವ ಕ | ಲಾಸುಕುಶಲರ ಗಡಣದಿ ||337||

ಮುನಿವರರು ಭೂಸುರರು ಗಾಯಕ | ಜನರು ನಾನಾ ಶಾಸ್ತ್ರಕುಶಲರು |
ತನತನಗೆ ನಡೆತಂದರಂದಾ | ವಿನುತ ಶುಭವೈವಾಹಕೆ ||338||

ರಾಗ ಪುನ್ನಾಗತೋಡಿ ಏಕತಾಳ

ಬಂದ ದೇಶದೇಶದ ಭೂಪಾಲರನೆಲ್ಲರನು |
ಅಂದಿದಿರುಗೊಂಡು ಕರೆತಂದೊಡನೆ ಹಲಧರನು ||
ಕುಂದದುತ್ಸಹದೊಳವರವರ್ಗೆ ಬೀಡಾರವನು |
ಚಂದದಿಂದಿತ್ತುಚಿತವರಿದು ಮನ್ನಿಸಿದನು ||339||

ರಾಗ ಕಾಂಭೋಜಿ ಝಂಪೆತಾಳ

ಇತ್ತ ಮದುವೆಗೆನುತ್ತ ಹಸ್ತಿನಾಪುರಕೆ ತ |
ನ್ನಾಪ್ತಜನ ಸಹಿತ ಮಾಗಧನು ||
ಅರ್ತಿಯಲಿ ಬರಲು ಕೇಳುತ್ತ ಕೌರವನು ಸುಮ |
ಹತ್ತರದ ಹರುಷದಿಂದಾಗ ||340||

ಇದಿರುಗೊಂಡಾಲಯಕೆ ಮುದದಿಂದ ಕರೆತಂದು |
ವಿಧದೊಳುಪಚರಣೆಗೆಯ್ದು ||
ವಿಧುಮುಖಿಯನೆನಗೊಲಿಸಿ ಮದುವೆಯನು ಮಾಡಿಸುವ |
ಡಿದು ನಿಮಗೆ ಕೂಡಿರುವುದೆಂದ ||341||

ಹರಿ ಬಹಳ ಕಪಟಿಯೆಂದರಿತು ನಿಮ್ಮನು ನಾನು |
ಕರೆಯಕಳುಹಿದರೆ ಕರುಣದಲಿ ||
ತೆರಳಿ ಬಂದಿರೆ ಮನಕೆ ಪರಿತೋಷವಾಯಿತೆನೆ |
ಕುರುಪತಿಗೆ ಪೇಳ್ದ ಮಾಗಧನು ||342||

ಬಿಡು ಬಿಡಾ ಗೋವಳರ ಹುಡುಗನೇತರ ಪಾಡು |
ಬಡವನೇ ನಾನು ಕೇಳ್ದರಿಯಾ ||
ಜಡಧಿಯಲಿ ಮನೆಗೆಯ್ದು  ಅಡಗಿಹನು ನಮಗಾಗಿ |
ಕಡು ಹೇಡಿಯೆಂದೆಂಬ ಪರಿಯ ||343||

ಆರೊಡಂಬಡದಿರಲು ನಾರಿಯನು ಹಿಡಿತಂದು |
ಧಾರೆಯನ್ನೆರೆಸುವೆನು ನಿನಗೆ ||
ಧಾರಿಣೀಪತಿಯಿನ್ನು ಬೇರೊಂದನೆಣಿಸದಿರು |
ಭೂರಿಸನ್ನಹವಾಗಿ ಪೊರಡು ||344||

ತೆರಳಯ್ಯ ದಿಬ್ಬಣವು ಬರಿದೆ ತಡವೇಕೆ ಸಿಂ |
ಗರವಾಗೆನುತ್ತ ಮಾಗಧನು ||
ಅರುಹೆ ಹರುಷಿತನಾಗಿ ಕುರುಾಯನೆಲ್ಲರನು |
ಕರೆಸಿ ಸನ್ನಹಗೆಯ್ದನೊಡನೆ ||345||

ರಾಗ ಕೇದಾರಗೌಳ ಅಷ್ಟತಾಳ

ಮತ್ತೆ ಕೌರವರಾಯಗೊಲಿದು ಭೀಷ್ಮಾದಿ ಸ |
ಮಸ್ತರ ಮತದೊಳಾಗ ||
ಸ್ವಸ್ತಿವಾಚನ ಪುರೋತ್ಸವದಿ ಬಾಸಿಗವನಿ |
ಡುತ್ತ ಸಂತಸದಿ ಬೇಗ ||346||

ಸಕಲ ಸಿಂಗರವೆತ್ತು ದಿಬ್ಬಣ ಪೊರಟು ಮುಂ |
ದಕೆ ನಡೆತರಲು ಕಂಡು ||
ವಿಕಟ ಉತ್ಸಾಹವು ಕಾಣಿಸಿ ಮತ್ತವ |
ಶಕುನವು ತಲೆದೋರ್ದುದು ||347||

ಕಳಚಿಬಿದ್ದಿಹ ಬಾಸಿಗವ ಸಮಗೆಯ್ದು ಮುಂ |
ದೊಲಿಯುತ್ತಲಿರಲಿದಿರೆ ||
ತಿಲ ದರ್ಭೆ ಹಿಡಿದು ಭೂಸುರನೋರ್ವ ಬಂದನು |
ತಲೆಯ ಮುಂಡನವ ಗೆಯ್ದು ||348||

ಪಥದೊಳಗಿದಿರಾಗಿ ನಡೆತಂದಳೊಬ್ಬಳು |
ಪತಿಶೂನ್ಯಳಾದವಳು ||
ಮಿತದಲ್ಲಿ ಕಾಷ್ಠಭಾರವ ಹೊತ್ತು ಶೂದ್ರನು |
ಹಿತದಿಂದಲೆಯ್ತಂದನು ||349||

ಬಿರುಗಾಳಿಯೊಡನೆ ನೆತ್ತರ ಮಳೆ ಸೂಸಿದು |
ದಿರದೆಯಂದಾಕಾಶದಿ ||
ಪರಿ ಪರಿಯಲುತ್ಪಾತ ಧೂಮಕೇತುಗಳೆಲ್ಲ |
ಭರದಿ ಕಣ್ಗೆಸೆದುವಾಗ ||350||

ಕಂದ

ಇಂತುತ್ಪಾತವನುರೆ ಕಂ |
ಡಂತರದೊಳ್ ಭೀತಿಬಟ್ಟು ಗಂಗಾತನಯಂ ||
ಎಂತೀ ಕಾರ್ಯವು ಸಿದ್ಧಿಪು |
ದಂತಕಹರನೇ ಬಲ್ಲನೆನುತ ನಪಗೆಂದಂ ||351||

ರಾಗ ಸೌರಾಷ್ಟ್ರ ಅಷ್ಟತಾಳ

ನೋಡಿದೆಯಾ ತೋರ್ಪ ಉತ್ಪಾತಗಳನೆಲ್ಲ | ಕೌರವೇಂದ್ರ | ಮುಂದೆ |
ಕೇಡು ಹೊದ್ದದೆ ಲೇಸುಗಾಣಿಸದಿದರಿಂದ | ಕೌರವೇಂದ್ರ ||352||

ಆಡಲು ಕೋಪಿಸಿಕೊಂಡರು ಕೊಳು ನೀನು | ಕೌರವೇಂದ್ರ | ಕೈ |
ಗೂಡದೀ ಕಾರ್ಯ ಸಂಗತಿಯು ನಿಶ್ಚಯವಿದು | ಕೌರವೇಂದ್ರ ||353||

ರಾಗ ಶಂಕರಾಭರಣ ಏಕತಾಳ

ವರಭೀಷ್ಮನೆಂದುದ ಕೇಳು | ತಿರದೆ ಸೂರ್ಯತನಯನಂದು |
ಪರಿಹಾಸ್ಯವ ಗೆಯ್ಯುತೆಂದ ಧರಣಿಪನೊಳು ತಾ ||
ನೆರೆ ವದ್ಧರು ಪೇಳ್ದ ನುಡಿಯ | ಸರಕುಮಾಳ್ಪರೇನೋ ಜೀಯ |
ತೆರಳಲೀ ದಿಬ್ಬಣವದೆಂದನುರುಸಂಭ್ರಮದಿ ||354||

ಭಾಮಿನಿ

ಎಲೆ ನಪತಿ ಸಜ್ಜನರ ಬೋಧೆಯು |
ಖಳರಿಗದು ಹಿತವಹುದೆ ಭೀಷ್ಮನು |
ತಿಳುಹಿದುದ ಕೈಗೊಳದೆ ನಡೆದುದು ದಿಬ್ಬಣವು ಮುಂದೆ ||
ಬಲುತರದ ವಾದ್ಯಗಳ ಘೋಷದಿ |
ನೆಲವು ಬಿರಿದುದು ಛತ್ರಚಾಮರ |
ವಳಿಗಳಂಬರತಳವು ತೋರದ ತೆರದೊಳೆಯ್ದಿದುದು ||355||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಪರಮವೈಭವದಿಂದಲೀ ಕುರು |
ವರನು ತದ್ವ್‌ರಾವತೀಪುರ |
ವರಕೆ ಬರೆ ಕೇಳುತ್ತಲಾ ಹಲ | ಧರನು ಮುದದಿ ||356||

ಕಳಸಗನ್ನಡಿ ವಾದ್ಯ ಪಾಠಕ |
ರೊಲವು ಮಿಗೆ ಪರಿವಾರ ಸಹಿತಾ |
ನಿಳಯವನು ಪೊರಟಿದಿರುಗೊಳಲಿ | ಕ್ಕೊಲಿದು ಬಂದ ||357||

ಖೇಳಮೇಳದೊಳಿದಿರುಗೊಂಡು ವಿ |
ಲೋಲಮತಿ ಮದುವಣಿಗನನು ಕೈ |
ಮೇಳವಿಸಿ ಕರೆತಂದರುತ್ಸಹ | ದೇಳಿಗೆಯೊಳು ||358||

ನೆರೆ ಬಿಡಾರವನಿತ್ತು ದಿಬ್ಬಣಿ |
ಗರನು ಸರಸೋಕ್ತಿಯಲಿ ಪಿರಿದುಪ |
ಚರಿಸಿದನು ಬೇಕಾದ ವಸ್ತೂ | ತ್ಕರಗಳಿಂದ ||359||

ಆ ದಿನದಿ ನಿಜ ದೇವಕಾರ್ಯವ |
ಸಾದರದೊಳನುಸರಿಸಿ ಮರುದಿನ |
ವಾದುದೆನೆ ಪರಿಣಯಕೆ ಸನ್ನಹ | ಗೆಯ್ದರೊಡನೆ ||360||

ಬಂದು ಮದುವಣಿಗನನು ಸಹಿತಾ |
ನಂದದಲಿ ಬೀಯಗರು ಮಿರುಗುವ |
ಚಂದ್ರಕಾಂತದ ಚಪ್ಪರದಿ ಕುಳಿ | ತೆಂದರೊಲಿದು ||361||

ತಡವಿದೇತಕೆ ಲಗ್ನಸಮಯವು |
ಅಡಸಿದುದು ಸಿಂಗರಿಸಿ ತರುವುದು |
ಹುಡುಗಿಯನು ನೀವೆಂದನಾ ಬಲ | ನೊಡನೆ ಮಗಧ ||362||

ಭಾಮಿನಿ

ಭೂಮಿಪತಿ ಕೇಳ್ ಬಳಿಕ ಮುಸಲಿಯ |
ನೇಮದಲಿ ನಾರಿಯರು ಬಂದರು |
ಕೋಮಲಾಂಗಿ ಸುಭದ್ರೆಯೆಡೆಗೆ ಮನೋನುರಾಗದಲಿ ||
ಪ್ರೇಮದಲಿ ಮಂಗಲೆಗೆ ಮಜ್ಜನ |
ಭಾಮಿನಿಯರೊಲಿದಾಗ ವಿರಚಿಸಿ |
ಸೌಮನಸ್ಯದಲೊಡನೆ ಸಿಂಗರಿಸಿದರು ಸೊಬಗಿನಲಿ ||363||

ರಾಗ ಸೌರಾಷ್ಟ್ರ ಏಕತಾಳ

ಶಂಗರಿಸಿದರಬಲೆಯರೊಲಿದು | ದಿ |
ವ್ಯಾಂಗನೆ ಸೌಭದ್ರೆಯ ನಲಿದು | ಶಂಗರಿಸಿದ || ಪಲ್ಲವಿ ||

ಪೊಂಬಟ್ಟೆಯ ನಿರಿವಿಡಿದುಡಿಸಿ |
ತುಂಬಿಗುರುಳೆಗುರೆ ಬಾಚಣಿಸಿ ||
ಸಂಭ್ರಮದಲಿ ಜಡೆವೆಣೆದು ಕಮಲಗಳ |
ಅಂಬುಜವದನೆಗೆ ಮುಡಿಸಿದರು ||364||

ಹಸಿರು ಕುಪ್ಪಸವನು ಬಲ್ಮೊಲೆಗೆ |
ಒಸೆದು ತೊಡಿಸಿ ತೊಳಗುವ ಫಣಿಗೆ ||
ಮಿಸುವ ಕಸ್ತುರಿಯನಿಡಿಸಿ ವರ ಕರ್ಣಕೆ |
ಪೊಸ ವಜ್ರದೋಲೆಯ ಸಾರ್ಚಿದರು ||365||

ಅರಳೆಲೆ ಮಾಗಾಯ್ ಬಾವುಲಿಯ |
ಮಿರುಗುವ ಚಂದ್ರಮುಕ್ತಾವಳಿಯ ||
ಸರವೊಪ್ಪುವ ಚಿಂತಾಕಟ್ಟಣವನು |
ಹರಿಣ ನಿಭಾಂಬಕಿಗಿಡಿಸಿದರು ||366||

ಕಂಕಣ ತೋಳ್ಬಳೆ ಬಾಪುರಿಯ |
ಅಂಕಿತ ಮಣಿಮಯ ಮುದ್ರಿಕೆಯ ||
ಕಿಂಕಿಣಿ ಕಾಂಚೀದಾಮವ ವಿದಳಿತ |
ಪಂಕಜಗಂಧಿಗೆ ತೊಡಿಸಿದರು ||367||

ವರಪಾಡಂಗದ ನೂಪುರವ |
ಮಿರುಮಿಂಟಿಕೆ ಕಾಲುಂಗುರವ ||
ಪರಿಪರಿಯಾಭರಣವನೊಲವಿಂದಲಿ |
ಹರಿಯ ಸಹೋದರಿಗಿಡಿಸಿದರು ||368||

ಭಾಮಿನಿ

ವತ್ತಪೀನಸ್ತನೆಯರತಿ ನಲ |
ವೆತ್ತು ಬಳಿಕಾರತಿಯನೆತ್ತಿದ |
ರುತ್ತಮಾಂಗದ ಮೇಲೆ ತಳಿದರು ಮುತ್ತಿನಕ್ಷತೆಯ ||
ಮತ್ತೆ ಕರದಲಿ ಪುಷ್ಪಮಾಲೆಯ |
ನಿತ್ತು ತ್ರೈಲೋಕ್ಯದಲಿ ವಿಜಯಗೆ |
ಮತ್ತಕಾಶಿನಿ ಹಾಕೆನುತ ಪೇಳಿದರು ನಸುನಗುತ ||369||

ಪೊಡವಿಪತಿ ಕೇಳೆಲ್ಲರಿಗೆ ಪೊಡ |
ಮಡಿಸಿ ಕರೆತಂದಾ ಸುಭದ್ರೆಯ |
ನೊಡನೆ ಹಲಧರಗೆರಗಿಸಲ್ಕೆತ್ತುತ್ತಲಿಂತೆಂದ ||
ಮಡನ ಪೋಲುವ ನಮ್ಮ ಗುರುವರ |
ರಡಿಗೆ ವಂದಿಸಲಿಲ್ಲ ಬೇಗದಿ |
ತಡವ ಮಾಡದೆ ನಮಿಸಿ ಬಾರೆಂದಿತ್ತನಪ್ಪಣೆಯ ||370||

ಕಂದ

ಎಂದಪ್ಪಣೆಯಂ ಕೊಡಲಾ |
ಚಂದಿರಮುಖಿಯೆದ್ದು ಕಪಟ ಯತಿವರನೆಡೆಗಂ ||
ಕಂದರ್ಪನ ಮದಕರಿವೋ |
ಲಂದುಗೆ ಝಣರೆನಲು ಪೊರಟಳಬಲೆಯರೊಗ್ಗಿಂ ||371||

ರಾಗ ಘಂಟರವ ಅಷ್ಟತಾಳ

ಮಾನಿನೀಮಣಿ ಬಂದಳೊಯ್ಯಯ್ಯನೆ |
ಈ ನಳಿನಭವ ಸಷ್ಟಿಯೊಳಗಿ | ಲ್ಲೀ ನಿತಂಬಿನಿಗೆಣೆಯೆನೆ  || ಪಲ್ಲವಿ ||

ಮುಡಿದ ಮಲ್ಲಿಗೆಯುದುರುತ್ತಲೆದೆಯ ಪೊಂ |
ಗೊಡಮೊಲೆಯು ನಡುನಡುಗಲೊಪ್ಪಿಡಿ |
ನಡುವು ಬಳಕಲು ಹಸ್ತದೊಳ್ || ||372||

ಕಡಗಕಂಕಣಗಳು ಝಣಿರೆಂದಡಿ |
ಯಿಡುತ ಶಂಗರದುಡಿಯ ರಭಸದಿ |
ತೊಡವುಗಳ ಮೆಯ್‌ಸಾರದಿ || ಮಾನಿನೀ ||373||

ನಡೆಗೆ ರಾಯಂಚೆ ನುಡಿಗೆ ಜಾಣ್ವಕ್ಕಿ ಸೋ |
ಲ್ಮುಡಿಗೆ ಸೋಗೆಯ ಗಡಣ ಮೆರೆದಾ |
ರಡಿಗಳಿಗೆ ಮೆಯ್ಗಂಪಿಗೆ || ||374||

ಬಿಡದೆ ಸೋತು ಮುಂಗಡೆಯೊಳಗೆಸೆಯೆ ಕಾಂ |
ಬೆಡಬಲದ ವಿಟರೆದೆಯು ಕಂಪಿಸ |
ಲೊಡನೆ ಕಡುಬೆಡಗಿಂದಲಿ ||375||

ಹಾರ ಮಧ್ಯದ ನಾಯಕಮಣಿಯಂತೆ |
ತಾರಕಾಪರಿವಾರಮಧ್ಯದಿ |
ಪೌರ್ಣಮಿಯ ಶಶಿಯಂದದೆ || ||376||

ಸಾರಪಂಕಜದೆಸಳಿನ ನಡುವಣ |
ಚಾರು ಕೇಸರದಂತೆ ಬಳಸಿದ |
ಭೂರಿ ಸಖಿಯರ ಮಧ್ಯದಿ ||377||