ರಾಗ ಮಾರವಿ, ಏಕತಾಳ

ದನುಜನ ವಚನವ ಕೇಳುತ ಇಂದ್ರನು | ಘನರೋಷವ ತಾಳೀ ||
ಜನುಮವತೀರ್ಚುವೆನೆನ್ನುತ ಕುಲಿಶವ | ಪಣೆಗಿಟ್ಟನು ಜವದೀ    || ೧ ||

ಬರುವ ವಜ್ರವ ಕಂಡುರುತರ ರೋಷದಿ | ಕರದಿಂದಲಿ ತಡದೂ ||
ತಿರುಹುತ ಗದೆಯನು ಸುರಪನ ಅಂಗಕೆ | ಯರಗಿದ ತತ್‌ಕ್ಷಣದೀ         || ೨ ||

ಅನಿಮಿಷಧೀಶನವುದರಕೆ ಬಡಿಯಲು | ಘನತರ ಹತಿಗಾಗಾ ||
ತನು ನಡನಡುಗುತ ಮೂರ್ಛೆಯನಾಂತನು | ತನುಗುಂದುತಲಾಗಾ     || ೩ ||

ರಾಗ ಸಾಂಗತ್ಯ

ತಿಳಿದೆದ್ದು ಮೂರ್ಛೆಯ ಸುರಪನಾಕ್ಷಣದೊಳು |
ಕಳವಳಗೊಳುತಾ ಪೇಳಿದನೂ ||
ಉಳಿನ್ಯಾನು ದುರುಳಾನು ಪುರದೊಳಗೀರ್ದರೆ |
ಹಳುವನಕಾಗಿ ಪೋಗುವೆನೂ        || ೧ ||

ಯೆನುತಾ ನಿಶ್ಚೈಸಿ ತಾ ಪುರಕಾಗಿ ನಡೆತಂದೂ |
ಅನಿಮಿಷರನು ಕರದೆಂದಾ ||
ದನುಜಾನಟ್ಟುಳಿಯನ್ನು ತಾಳಲಸಾಧ್ಯವು |
ವನಕಾಗಿ ಪೋಗುವದಿಂದೂ         || ೨ ||

ಗರುಡ ಗಂಧರ್ವ ಗುಹ್ಯಕ ಯಕ್ಷ ಮೊದಲಾಗಿ |
ಬರುತಾ ತಮ್ಮಯ ಸತಿಸುತರಾ ||
ಸುರಪತಿ ಸಹಿತಾಲೇ ಸಕಲ ದೇವಾದ್ಯರು |
ಪೊರಟಾರು ಮರುಗುತ್ತ ವನಕೇ     || ೩ ||

ಭಾಮಿನಿ

ಸುರರು ಪುರವನು ಬಿಟ್ಟು ತೆರಳಿದ |
ಪರಿಯ ಕಾಣುತ ದೈತ್ಯ ತೋಷದಿ |
ಸುರಪಗದ್ದುಗೆಯೇರಿ ಸುರಪುರದರಸ ತಾನಿಂದೂ ||
ಪರಿಪರಿಯ ಡಂಗುರವ ಸಾರುತ |
ಧುರಪರಾಕ್ರಮಿಯಾಗ ಯೋಚಿಸಿ |
ಧರಣಿಯನು ತಾನೊದು ಪಾತಾಳದಲಿ ಇರಿಸುವೆನೂ  || ೧ ||

ಕಂದ ಪದ್ಯ

ಯೆನುತಾಕ್ಷಣದೊಳು ದೈತ್ಯನು |
ತನ್ನಯ ಘನರೋಷವ ನಾಂ ತುರೆ ಗದೆಯಿಂದಂ ||
ಘನಗರ್ವದಿ ಜಾಡಿಸಲಾಗ |
ವನಿತಾಕಾರದಿ ಬಂದೆಂದಳು ಶೋಕಿಸುತಂ  || ೧ ||

ರಾಗ ಕಾಂಬೋಧಿ, ಅಷ್ಟತಾಳ

ಯೇನಿದೇನಿದು ಕೋಪ ಮಾನಿನಿಯೊಳು ಈಗ | ದೈತ್ಯ ಕೇಳೂ ||
ಕೆಟ್ಟ | ಹೀನಕಾರ್ಯಗಳನ್ನು ನೀನು ಮಾಡುವರೇನೊ | ದೈತ್ಯ ಕೇಳೂ    || ೧ ||

ಅಬಲೆಯಾದೆನ್ನೊಳು ಅಭಯಾವಾ ದೋರಯ್ಯಾ | ದೈತ್ಯ ಕೇಳೂ ||
ನಿನ್ನ | ಭ್ಯುದಯಾವ ನೋಡಲು ಅದುಭುತವಾಗಿದೆ | ದೈತ್ಯ ಕೇಳೂ      || ೨ ||

ಯೇನಪರಾಧವ ನಾನೆಸಗಿದೆಯಿಂದು | ದೈತ್ಯ ಕೇಳೂ ||
ನಿನ | ಗೇನುಯೆನ್ನೊಳು ವೈರವೇನೆಂಬುದರಿಯೇನು | ದೈತ್ಯ ಕೇಳೂ     || ೩ ||

ಮಾನಹಾನಿಯ ಗೈದು ನೀನು ಕೊಂಡೊವಾರೆ | ದೈತ್ಯ ಕೇಳೂ ||
ಇಂಥಾ | ಹಾನಿಮಾಡಲುಬೇಡ ಮಾನವ ಕಾಯಯ್ಯಾ | ದೈತ್ಯ ಕೇಳೂ   || ೪ ||

ಧುರಪರಾಕ್ರಮಿಯಾಗಿ ತರಳೇಯೋನೊವಾರೆ | ದೈತ್ಯ ಕೇಳೂ ||
ಇದು | ಥರವಲ್ಲ ನೀನಿಂದು ಪರಿಹಾಸ್ಯಗೊಳಗಾದೆ | ದೈತ್ಯ ಕೇಳೂ       || ೫ ||

ರಾಗ ಯರಕಲಕಾಂಬೋಧಿ, ಏಕತಾಳ

ಯಾರೆಲೆ ನಾರಿ ನೀನೊಯ್ಯಾರೀ | ಬಹು |
ಭಾರಿ ಯೆನ್ನೊಳು ಕೇಳ್ವದೇನ್ ಪೋರೀ  || ಪಲ್ಲವಿ ||

ಭೂಮಿಯ ನಾನೊವದನು ಕಂಡೂ | ಯೆನ್ನ |
ನಾಮಾ ವುಚ್ಚರಿಸುವಾದ್ಯಾಕಿಂದೂ ||
ಭಾಮಿನಿ ನೀನ್ಯಾರು ಪೇಳು ಬಂದೂ | ಬಹು |
ಪ್ರೇಮವೊ ನಿನಗೆ ಭೂಮಿಯೊಳಿಂದೂ || ಯಾರೆಲೆ ||   || ೧ ||

ಪೆಸರೇನು ಪೇಳು ನಿನ್ನ ಪುರವೆಲ್ಲಿ | ಯೆನ್ನೂ |
ಳುಸುರು ನಿನ್ನಯ ಮಾತೆ ಪಿತರೆಲ್ಲಿ ||
ಬಿಸಜಾಲೋಚನೆ ನಿನ್ನ ಪತಿಯೆಲ್ಲಿ |
ಬಹು | ವ್ಯಸನಾವ ಬಿಟ್ಟು ನೀನುಸುರಿಲ್ಲಿ || ಯಾರೆಲೆ ||  || ೨ ||

ಧರಣಿಯೊಳೆಲ್ಲಿಯು ನೋಡಲಿಲ್ಲಾ | ಸುರ |
ಪುರದೊಳೆಲ್ಲಿಯು ನಿನ್ನಯ ಕಂಡುದಿಲ್ಲಾ ||
ಅರುಹು ನಿನ್ನಿರವನ್ನು ಯೆನ್ನೊಳೆಲ್ಲಾ |
ನಿನ್ನ ಹರುಷದಿ ಪುರಕೊವೆ ಸುಳ್ಳಲ್ಲಾ || ಯಾರೆಲೇ ||   || ೩ ||

ಸುರನರ ವಧುವಳೊ ಪೇಳು ಯಿಂದೂ | ಅಲ್ಲ |
ವರ ಕ್ಷಾತ್ರಿ ಕುಲದಲಿ ನೀನಿಂದೂ ||
ಪುಟ್ಟ | ವರನನ್ನು ಪುಡುಕುತ್ತಯಿಲ್ಲಿ ಬಂದೂ ಯೆನ್ನೊ |
ಳರುವರೆ ನಾಚಿಸಿ ತನು ಬೆಂದೂ || ಯಾರೆಲೆ ||        || ೪ ||

ಗುಟ್ಟಿ ನೀ ಮಾಡದೆ ಪೇಳು ಬೇಗಾ | ನಿನ್ನ |
ವಟ್ಟಿಗೆ ಕರಕೊಂಡು ನಾನೀಗಾ ||
ಇಷ್ಟವನರುಹಲು ಯೆನ್ನೊಳೀಗಾ | ಯೆನ್ನ |
ಪಟ್ಟದರಸೀ ನೀ ಯೆನ್ನುತೀಗಾ | ಯಾರೆಲೆ ನಾರಿ       || ೫ ||

ಕಂದ ಪದ್ಯ

ಎನುತಾದಾನವ ಪೇಳಿದ |
ವಿನಯದ ವಚನವ ಕೇಳುತಲಾಗಳೆ ಭೂಮಿಯು ||
ಮನವಿರಿಸಿದನಿವನಿಗೆಂಬೆ |
ವಿನಯೋಕ್ತಿಯ ನುಡಿ ಲಾಲಿಸು ನೀನೆನುತಾಗಳ್      || ೧ ||

ರಾಗ ಆನಂದಭೈರವಿ, ಅಷ್ಟತಾಳ
ಪೊರೆಯಬೇಹುದು ಯೆನ್ನನೂ | ದಾನವರಾಯ |
ಅರುಹುವೆ ನಿಜವ ನಾನೂ || ಪೊರೆಯಬೇಹುದು ಯೆನ್ನನೂ || ಪಲ್ಲ ||

ದಾನವ ಕೇಳೀಗ | ನಾನೆಂಬ ನುಡಿ ಬೇಗ ||
ಮಾನವಳಲ್ಲೀಗ | ಪ್ರಾಣವ ನೀನೀಗ ||
ಪೊರೆಯಬೇಹುದು         || ೧ ||

ಭೂದೇವಿ ಕೇಳು ನಾ | ಆದರಿಸುತ ಯೆನ್ನಾ ||
ಬಾಧಿಸದಿರು ಮುನ್ನಾ | ಸೋದರಿಯಂತೆನ್ನಾ ||
ಪೊರೆಯಬೇಹುದು         || ೨ ||

ನಿನ್ನ ಭೀತಿಗೆ ನಾನೂ | ಮುನ್ನ ಸ್ತ್ರೀರೂಪವನೂ ||
ಇನ್ನು ಧರಿಸಿಬಂದೆನೂ | ಎನ್ನಮಾನವ ನೀನೂ ||
ಪೊರೆಯಬೇಹುದು         || ೩ ||

ಈ ಪರಿಯೊಳುನೀನೂ | ರೂಪ ನೋಡುತ ಯಿನ್ನೂ ||
ತಾಪಿಸಿಕೊಂಡಿನ್ನೂ | ಪೋಪಳಾ ನೀನಿನ್ನೂ ||
ಪೊರೆಯಬೇಹುದು         || ೪ ||

ಧರಣೀಶರನು ನೀನೂ | ಧುರದೊಳು ತರಿದಿನ್ನೂ ||
ಅರಸ ನೀನೆಂದಿನ್ನೂ | ಇರುವೆ ನೀ ಹ್ಯಾಗಿನ್ನೂ ||
ಪೊರೆಯಬೇಹುದು         || ೫ ||

ರಾಗ ಕೇದಾರಗೌಳ, ಝಂಪೆತಾಳ

ನುಡಿದ ಮಾತನು ಕೇಳುತಾ | ದಾನವನು | ರೆಡಿಯೇರಿ ಗರ್ಜಿಸುತಾ ||
ಹುಡುಗಿಯಾಗುತ ಮೋಸದೀ | ಬಂದೀಗ | ನುಡಿಸುವೆಯ ಬಹು ಮೋಹದೀ        || ೧ ||

ಬಿಡೆನು ಬಿಡೆ ನಿನ್ನನೀಗಾ | ದಿತಿಸುತನು | ಹಿಡಿದ ಶಪಥವನು ಈಗಾ ||
ನಡಿಸದೆಯು ಬಿಡುವನೆನುತಾ | ಮನದಾಸೆ | ಬಿಡು ನೀನು ಕೇಳು ವ್ಯರ್ಥಾ        || ೨ ||

ಎನುತ ಕ್ರೋಧದಿ ಬೆರಸಲು | ಭೂ ದೇವಿ | ಮನದ ಭಯದೊಳಗೋಡಲೂ ||
ಕನಲುತಾರ್ಭಟಿಸುತಂದೂ | ಬಿಡೆನೆನುತ | ವನಿತೆಯನು ಬೆರಸಿ ಬಂದೂ || ೩ ||

ಓಡುತೋಡುತಲೊಯನೇ | ಬೆರಸುತಿರೆ | ಬಾಡಿ ಬಳಕುತ ಸುಮ್ಮನೇ ||
ಓಡಿದರೆ ಬಿಡೆನು ನಿನ್ನಾ | ಎಂದೆನಲು | ಕೂಡೆ ಮರುಗಿದಳು ತನ್ನಾ       || ೪ ||

ರಾಗ ನೀಲಾಂಬರಿ, ಏಕತಾಳ

ಪೊರವಾರಾರಿಲ್ಲಿ ಯೆನ್ನಾನೂ | ದಾನವನೆನ್ನಾ | ಬೆರಸಿ ಪಿಡಿವಾರೆ ಬರುವಾನೂ ||
ದುರುಳಾನಾ ಬಾಧೆಯನೂ | ಯಾರಿಗೆ ನಾನೂ | ಒರೆಯಲಿನ್ನೆಂತು ಇನ್ನೂ         || ೧ ||

ಕ್ರೂರಾ ಸ್ವಭಾವದೊಳೂ | ಬರಿದೆ ಬಂದೂ | ಗಾರುಗೆಡಿಸೂತೀಗಳೂ ||
ಮಾರಿಸ್ವರೂಪದೊಳೂ ಬೆನ್ನಟ್ಟಿ ಬರುವಾ | ದಾರಿಯೇನಿದಕೆಂದಳೂ      || ೨ ||

ಧೊರೆಗಳಿಗೀದೂರನೂ | ಪೇಳ್ವರೆ ಮೊದಲೆ | ತರಿದು | ಬಂದಿಹನೀತನೂ ||
ಸುರಪಾ ದಿಕ್ಪಾಲರಿಗೆ | ಅರುಹಾಲೀಗ | ಪುರಹೊರಡಿಸಿ ಅವರ್ಗೇ         || ೩ ||

ಸೃಷ್ಟಿಕರ್ತನಿಗೆಂಬೆನೇ ಈ ದುಷ್ಟನೀಗೇ | ಇಷ್ಟಾರ್ಥ ವರಗಳನೇ ||
ಕೊಟ್ಟಿರುವಾತನಿಗೆ | ಪೇಳ್ದರೆ ಯೆನ್ನಾ | ಕಷ್ಟಾವಾ ಬಿಡಿಸೂವಾನೇ         || ೪ ||

ಯಾರಿಗೆ ಪೇಳಲಿನ್ನೂ | ಯೆನ್ನಾನು ಬಂದೂ | ಯಾರು ಕಾಯುವರು ಇನ್ನೂ ||
ದಾರಿಯೇನಿದಕೇ ಮುಂದೇ | ಹರಹರಾ ಇಂಥಾ | ಕ್ರೂರ ಕಷ್ಟಾದಿ ನಾನಿಂದೇ      || ೫ ||

ದುಷ್ಟಾ ಪಾಪಿಯ ಕೈಯೊಳೂ | ಸಿಕ್ಕಿರುವಾಳ | ದೃಷ್ಟಿಸಿ ನೋಡುತೀಗಳೂ ||
ಕಷ್ಟಾವಾಪರಿಹರಿಸೂ | ಶ್ರೀಹರಿ ಬಂದೂ | ತಟ್ಟನೆ ನೀ ಬಿಡಿಸೂ || ೬ ||

ಆದಿನಾರಾಯಣನೇ | ದೇವರ ದೇವ | ಯೇ ದಯಾಂಬುಧಿಯೆ ನೀನೇ ||
ಬಾಧಿಸುತಿಹ ದೈತ್ಯನಾ | ಕೈಯಿಂದ ಬಿಡಿಸಿ | ಕಾದು ರಕ್ಷಿಸು ನೀ ಯೆನ್ನಾ || ೭ ||

ಭಾಮಿನಿ

ಧರಣಿಯೀಪರಿಯಿಂದ ಬಾಬಿಡು |
ತೊರಳಿ ಗೋಳಿಡುತಿರಲು ದಾನವ |
ಉರುತರದ ರೋಷದಲಿ ಗರ್ಜಿಸಿ ಬೆರಸಿ ಪಿಡಿಯುತಲೀ ||
ಭರದಿ ತನ್ನೊಶಗೈದು ಮುಂದಕೆ |
ತೆರಳಿ ಸಿದ್ಧಾವತಿಯ ಪುರಕಾ |
ತೆರಳಿ ಹೊಂಕರಿಸುತ್ತ ವರುಣನ ನೋಡುತಿಂತೆಂದಾ  || ೧ ||

ರಾಗ ಮಾರವಿ, ಏಕತಾಳ

ಉಳಿದ ದಿಕ್ಪಾಲರ ತೆರದೊಳು ಪೋಪೆಯೊ | ಕಲಹಕೆನ್ನೊಳಗಿಂದೂ ||
ಘಳಿಲನೆ ಬರುವೆಯೊ | ಪೇಳು ನೀನೀಕ್ಷಣ | ಉಳಿಸೆನು ಕೇಳಿಂದೂ       || ೧ ||

ನರ ಸುರರೆಲ್ಲರ ಧುರದಲಿ ಗೆಲಿದೀ | ಧರಣಿಯ ತಂದಿರುವೇ ||
ಧುರಸಮರ್ಥನು ಹಿರಣ್ಯಾಕ್ಷನು ನಾ | ಧುರಕನುವಾಗಿರುವೇ     || ೨ ||

ಸರಿಸರಿಯೆನ್ನೊಳು ಧುರವೆಸಗುವರ‍್ಯಾ | ರಿರುವರುಯೆಂದೆನುತಾ ||
ತಿರುತಿರುಗಾಡುತ ನಿಲುವವರಿಲ್ಲದೀ | ಪುರಕೈದಿದೆ ಯಿತ್ತಾ      || ೩ ||

ತೋರೆಲೊ ಯುದ್ಧವನೀಕ್ಷಣ ಯೆನ್ನಲಿ | ಧೀರತ್ವಗಳಿರಲೂ ||
ಭೋರನೆ ಬಂದಿಹೆ ನಿಲು ನೀ ಬೇಗದಿ | ವೀರನು ನೀನೆನುತಾ   || ೪ ||

ನುಡಿಯನು ಕೇಳುತ ಗಡಗಡ ನಡುಗುತ | ವಡನೆಂದನು ವರುಣಾ ||
ತಡೆಯದೆ ಸುಮ್ಮನೆ ದುಡುಕನು ಮಾಡದಿ | ರ್ನುಡಿವೆನು ನಿನ್ನೊಡನೇ    || ೫ ||

ರಾಗ ಮಾರವಿ, ಮಟ್ಟೆತಾಳ

ಕೋಪ ಬೇಡ ಸೈರಿಸಿನ್ನು ಮಾಪು ಮಾಡು ನಾ |
ವ್ಯಾಪಿಸೀದೆ ಮುದುಕತನವು ಪಾಪ ಕಾಣೊ ನಾ       || ೧ ||

ದ್ವೀಪದ್ವೀಪಜಯಿಸಿ ಬಂದೆ ಭೂಪನಹುದು ನೀ |
ಸ್ಥಾಪಿಸೀತು ನಿನ್ನ ಪೆಸರು ಯೀ ಪುರಕೆ ನೀ   || ೨ ||

ಬಂದುದೇಕೆ ನಿನ್ನ ಕೂಡೆ ಧುರವ ಗೈವರೇ |
ಎಂದು ನಿಲುವುದುಂಟೆ ಯೆನ್ನ ಯಿಂದು ಕರದರೇ       || ೩ ||

ಕಂದ ನಿನ್ನ ಕೂಡೆ ಸಮರ ನಿಂದು ಮಾಳ್ಪರೇ |
ಮುಂದುವರಿದುದೆನಗೆ ಮುಪ್ಪು ಹೊಂದುತಿರುವರೇ     || ೪ ||

ಬೇಡ ಯೆನಗೆ ಧೊರೆತನವು ಗಾಢದಿಂದಲೀ |
ರೂಢಿಪತಿಯೆ ನೀನೆ ಆಳಿ ಕೂಡಿಯೆನ್ನಲೀ     || ೫ ||

ಮಾಡಿ ಮಮತೆಯಿಂದಲೆನ್ನ ನೋಡಿ ಸಲಹಲೀ |
ಬೇಡಿಕೊಂಬೆ ಯೆನ್ನ ನೀನು ನೋಡುಮನದಲೀ        || ೬ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಯೆನುತ ದೈನ್ಯದಿ ವರುಣ ಪೇಳಲು | ಕನಿಕರದಿ ದೈತ್ಯೇಂದ್ರನಾತನ ||
ವಿನಯದಿಂದಲ್ಲಿರಿಸಿ ಮುಂದಕೆ | ಘನದಿಪೊರಟೂ      || ೧ ||

ಬಂದು ಪಾತಾಳದಲಿ ದಿತಿಜನು | ನಿಂದು ನೋಡಿದನ್ಯಾರ ಕಾಣದೆ ||
ಯೆಂದ ತನ್ನೊಳು ತಾನೆ ಪೌರುಷ | ದಿಂದ ಲಾಗಾ     || ೨ ||

ಧುರಪರಾಕ್ರಮಿಯಾಗಿಯೆನ್ನೊಳು | ಸರಿಸದೊಳು ಧುರಗೈವ ವೀರರ ||
ತಿರುಗಿ ಕಾಣಲು ಮೂರು ಲೋಕದಿ | ದೊರಕಲಿಲ್ಲಾ    || ೩ ||

ಯೆನುತ ಚಿಂತಿಸುತಿರುವ ಸಮಯಕೆ | ಘನಮುನಿಪ ನಾರದನು ವೀಣೆಯ ||
ಮನದಿ ನಾರಾಯಣನ ಸ್ತುತಿಸುತ | ವಿನಯದಿಂದಾ    || ೪ ||

ರಾಗ ಯರಕಲಕಾಂಬೋಧಿ, ಅಷ್ಟತಾಳ

ನಾರಾಯಣ ಹರಿ ಮುಕುಂದಾ ಮುರಾರೀ | ದಯ |
ದೋರಿ ರಕ್ಷಿಸು ನಮ್ಮ ನಿರತಾ ಈಸಾರೀ    || ಪಲ್ಲ ||

ದುರಿತ ಭಂಜನ ನೀನೆ ಕಲುಷಸಂಹಾರಾ |
ಚರಣ ನಂಬಿದ ಭಕ್ತಜನರ ಸಂಸಾರಾ | ನಾರಾಯಣ ಹರಿ       || ೧ ||

ದೋಷರಹಿತ ನೀನೆ ಪಾಪ ಸಂಹರಣಾ |
ಶೇಷಶಯನನಾಗಿ ಲೋಕಪಾಲಿಸುವೇ || ನಾರಾಯಣ ಹರಿ     || ೨ ||

ಮತ್ಸ್ಯವತಾರವ ತಾಳಿ ಲೋಕವನೂ |
ಪ್ರತ್ಯಕ್ಷ ವಿರಚಿಸಿ ಸಕಲ ಜೀವರನೂ || ನಾರಾಯಣ ಹರಿ         || ೩ ||

ಕೂರ್ಮವತಾರದಿ ಭೂಮಿಯ ನೀನೇ |
ಮಾರ್ಮಲದೆಲ್ಲರ ಸಲಹಿದಾತನೂ || ನಾರಾಯಣ ಹರಿ          || ೪ ||

ದುಷ್ಟನಾಶನ ನೀನೆ ದೃಷ್ಟಿಸಿ ನೋಡೂ |
ಕಷ್ಟವಾ ಬಡಿಸುವ ದುಷ್ಟಾತ್ಮನನ್ನೂ || ನಾರಾಯಣ ಹರಿ        || ೫ ||

ನಾಶವಗೈದೀಗ ತೋಷವ ಬಡಿಸೊ |
ವಾಸುದೇವನೆ ನೀನೆ ಕ್ಲೇಶವ ಬಿಡಿಸೂ || ನಾರಾಯಣ ಹರಿ ಮುಕುಂದ ಮುರಾರೀ || ೬ ||

ರಾಗ ಕೇದಾರಗೌಳ, ಅಷ್ಟತಾಳ

ಇನಿತು ಸಂಸ್ತುತಿಸುತ್ತ ಬರುತಿಹ ನಾರದ | ಮುನಿಪನಾ ಕಂಡು ದೈತ್ಯಾ ||
ಘನತರ ಭಕ್ತಿಯಿಂ ವಂದಿಸಿ ಕೈಮುಗಿದನುವಿಂದ ಕುಳ್ಳಿರಿಸೀ     || ೧ ||

ಪಾದಪೂಜೆಯ ಗೈದು ಸಾಧುವರೇಣ್ಯನೆ | ಪಾದತೀರ್ಥವನೆ ಗೊಂಡೂ ||
ಯೇದಿವ್ಯ ಮುನಿನಿನ್ನ ಪಾದಭೇಟಿಗಳಿಂದ | ಆದುದೆನ್ನಯ ಸಂಕಲ್ಪಾ      || ೨ ||

ದನುಜೇಶ ಲಾಲಿಸೂ ನಿನ್ನಯಾ ಭಕ್ತಿಗೆ | ಮನಸೋತೆನಿಂದಿನಲೀ ||
ಅನುಮಾನ ಮಾಡದೆ ಮಸುರುಯೆನ್ನೊಡನೀಗ | ವಿನಯಾದಿ ನೀನಿಲ್ಲಿಗೇ || ೩ ||

ಬಂದ ಕಾರಣವನ್ನು ಚಂದದಿಂದರುಹಾಲು | ಮುಂದೆ ನಿನ್ನಯ ಮನದಾ ||
ದಂದುಗವನು ಪೇಳು ಹೇಳೂವೆನೆಲ್ಲಾವಾ | ಸಂದೇಹ ಮಾಡದಿರೂ       || ೪ ||

ಮುನಿರಾಯಾ ನಿಮ್ಮಯಾ ಕರುಣದಿಂದಲಿ ನಾನೂ | ಜನಪಾಲರೆಲ್ಲರನೂ ||
ಅನುವರದಲಿ ಗೆಲ್ದು ಭೂಲೋಕ ವಶಗೈದು | ಅನಿಮಿಷಾಧಿಪರಾ ಇನ್ನೂ   || ೫ ||

ಧುರದೊಳು ವೋಡಿಸಿ ದೇವಲೋಕಕೆ ನಾನು | ಧೊರೆಯಾಗಿ ಭೂಮಿಯನೂ ||
ಇರದೆ ಕಂಕುಳೊಲೌಕಿ ತಂದಿಹೆನಿಲ್ಲಿಗೆ | ಧುರಸಮರ್ಥರು ಯಾರಿನ್ನೂ    || ೬ ||

ಭಾಮಿನಿ

ಯೆನ್ನ ಸಮರಾಂಗಣದಿ ಗೆಲುವರು |
ಮುನ್ನ ಯಾರಿಹರೆಂದು ಪುಡುಕಲು |
ಯೆನ್ನಿದಿರು ಧುರಗೈವ ಭಟರ‍್ಯಾರಿನ್ನು ದೊರಕದಿರೇ ||
ಸನ್ನುತಾಂಘ್ರಿಯೊಳರಿಕೆ ಗೈದೆನು |
ಇನ್ನಿರುವ ರ‍್ಯಾರೆಂದು ತೋರಿಸು |
ಇನ್ನವರ ಧುರದೊಳಗೆ ಈಕ್ಷಣ ಮಣ್ಣಕೂಡಿಸುವೇ       || ೧ ||

ರಾಗ ಬೇಗಡೆ, ಏಕತಾಳ
ಕೇಳು ದಾನವರಾಯ ನೀನಿಂದೂ | ನಾ ಪೇಳ್ವೆ ನುಡಿಯಾ |
ಜಾಲವಲ್ಲಿದು ನಿಜವು ಕೇಳಿಂದೂ || ಕೋಳುಗೊಂಡಿಹೆ ಮೂರು ಲೋಕವ |
ಬಾಳಿದವರ‍್ಯಾರುಂಟು ಯುದ್ಧದಿ | ಸೋಲಿಸಿದೆ ತ್ರೈಭುವನದಧಿಪರ |
ಮೇಲೆ ಯಾರೆಲ್ಲಿಹರು ಸುಮ್ಮನೇ    || ೧ ||

ಸೃಷ್ಟಿಸುವ ಅಜನೊಬ್ಬನಿಹನಾತಾ | ಯುದ್ಧಾವಾ ಗೈಯೆ |
ಕೊಟ್ಟಿರುವ ವರ ನಿನಗೆ ಕೇಳಿತ್ತಾ ||
ಸೃಷ್ಟಿಲಯ ಪರಮೇಷ್ಟಿಯನು ನೀ | ನಟ್ಟಿ ಬಂದಿಹೆ ಧುರಸಮರ್ಥರು |
ಯೆಷ್ಟು ಹೇಳಿದರಿಲ್ಲ ಯೆಂಬುದು | ದಿಟ್ಟ ಬಿಡು ಬಿಡು ಸಾಕು ಸುಮ್ಮನೇ    || ೨ ||

ಆದಿಮೂರುತಿಯೋರ್ವನಿಹನೂ | ವೈಕುಂಠಪುರಲಿ |
ಸಾಧಿಸುತ ನೀ ಪೋಗಿ ಅವನನ್ನೂ ||
ಕಾದಿ ಗೆಲಿದರೆ ನಿನಗೆ ಸರಿಸಮ | ರಾದವರ ನಾ ಕಾಣೆ ಲೋಕದಿ |
ಹಾದಿ ಹಿಡಿದೈದಿದರೆ ನಿನಗವ | ಮೋದದೊಳು ದೊರಕುವನು ಬೇಗದೀ  || ೪ ||

ನಿನ್ನ ವಾರ್ತೆಯ ಕೇಳಿಯೂ | ಮೊದಲೇ ತನ್ನಯ ರೂಪಾ |
ಮುನ್ನ ಅಡಗಿಸಿಕೊಂಡು ಇರುವನಲೇ ||
ಸಣ್ಣ ವರಹದ ತೆರನ ರೂಪವ | ಇನ್ನು ಧರಿಸಿಯೆ ಇರುವನಲ್ಲಿಯೆ |
ನನ್ನಿಯಿಂ ಸಂಹರಿಸಿದರೆ ನಿನ | ಗಿನ್ನು ಸರಿಸಮರ‍್ಯಾರು ಲೋಕದೀ       || ೪ ||

ಭಾಮಿನಿ

ನಾರದನ ನುಡಿ ಕೇಳಿದಾಕ್ಷಣ |
ಘೋರ ದೈತ್ಯನು ಮುನಿಗೆ ವಂದಿಸಿ |
ದಾರಿಹಿಡಿದೈತರುತ ಬಂದನು ನಾರಾಯಣಪುರಿಗೇ ||
ಕ್ಷೀರಸಾಗರವಾಸ ಮೊದಲೇ |
ಕಾರಣವನರಿತಾಗ ಮನದಲಿ |
ವೀರ ದನುಜಗೆ ವರಹರೂಪವ ತೋರುತಿರಲಂದೂ    || ೧ ||

ರಾಗ ಘಂಟಾರವ, ಅಷ್ಟತಾಳ

ಕಂಡು ದಾನವ ವರಹಮೂರುತಿಯನ್ನು |
ದ್ದಂಡ ಕೋಪವನಾಂತು ನುಡಿದನು | ಚಂಡವಿಕ್ರಮನಾರೆಲೋ  || ೧ ||

ಮೂರು ಲೋಕವ ಸೂರೆಗೊಳ್ಳುತ ನಾನೂ |
ಪಾರುಪತ್ಯವ ಮಾಳ್ಪೆಯೆನ್ನಲಿ | ಧೀರತನಗಳ ತೋರಿಸೋ     || ೨ ||

ಧರಣಿಪಾಲಕರೆಲ್ಲರಾ ಬಡಿದಿಂದೂ |
ಹರಣಗೊಳ್ಳುತ ಸೆರೆಯೊಳಿಟ್ಟಹೆ | ಪುರದ ಪಟ್ಟವನಾಳುವೆ       || ೩ ||

ದೇವಲೋಕಕೆ ಪೋಗಿ ದಿಕ್ಪಾಲರಾ |
ದೇವಪುರದಿಂದೋಡಿಸಿದೆ ನಾ | ದೇವಪದವಿಯೊಳೀರ್ಪೆನೂ    || ೪ ||

ಇಳಿದೆನಲ್ಲಿಂದ ಪಾತಾಳಲೋಕಕ್ಕೆ |
ನಿಳೆಯವನು ವಶಗೈದು ಪುರವನು | ಸೆಳೆದುಕೊಂಬಡೆ ಬಂದಿಹೇ         || ೫ ||

ಧೀರನಾದರೆ ಶೂರತ್ವ ತೋರಿಸೂ |
ಭೂರಿ ಯುದ್ಧವ ಗೈವೆ ನಿನ್ನಲಿ | ಬಾರೊ ಬಾರೆನ್ನೆದುರಿಗೆ         || ೬ ||

ಶಂಡನಂದಾದಿ ಹಂದಿರೂಪಿನೊಳ್ಯಾಕೆ |
ಭಂಡತನ ತೋರಿಸದೆ ನಿನ್ನು | ದ್ದಂಡ ರೂಪದಿ ಬಾರೆಲೊ       || ೭ ||

ರಾಗ ಮಾರವಿ, ಏಕತಾಳ

ಕೇಳುತ ನುಡಿಯನು ಬಾಳುವೆ ತೀರಿತು | ಖೂಳ ಖಳಾಧಮನೇ ||
ಕಾಳಗಕೆನ್ನೊಳಗಿದಿರಾದೀಕ್ಷಣ | ಸೀಳುವೆ ನಿನ್ನಸುವಾ  || ೧ ||

ಇದಕೋಸುಗ ನಾ ವಿಧದಲಿ ಬಂದಿಹೆ | ಅದುಭುತ ತೋರ್ನಿನ್ನಾ ||
ಮದಮುಖತನಗಳ ನಿಲಿಸುವೆನೀಕ್ಷಣ | ಕದನವ ಗೈದೆನ್ನಾ      || ೨ ||

ನುಡಿಯನು ಕೇಳುತ ಖಿಡಿಖಿಡಿಯಾಗುತ | ಬಡಸೂಕರ ನಿನ್ನಾ ||
ಬಡಿವಾರವ ಬಿಡು ಪುಡಿಪುಡಿಯೆಸಗುವೆ | ಪಿಡಿದೀ ಗದೆಯಿಂದಾ || ೩ ||

ಇದಿರಿಗೆ ಬಾರೆಲೊ ಮದಮುಖ ದೈತ್ಯನೆ | ಬದಿಯೆಲುಗಳ ತರಿವೆ ||
ಅದುಭುತಯೆನ್ನೊಳುನಡೆಯದು ಈ ಕ್ಷಣ | ತುದಿಗಾಲವ ತೋರ್ಪೇ      || ೪ ||

ರಾಗ ಮಾರವಿ, ಮಟ್ಟೆತಾಳ

ಯೆನಲು ದೈತ್ಯ ರೋಷದಿಂದ ಕನಲಿ ಗದೆಯನೂ |
ಅನುವಿನಿಂದ ಬೀಸಿ ಬಿಡಲು ಘನದಿ ವರಹನೂ         || ೧ ||

ತಡೆದುಕರದಿ ದಾಡೆಯಿಂದ ದಡಿಗನುರವನೂ |
ಖಿಡಿಯ ಸೂಸುತಾಗ ಸೀಳೆ ಬಡಿದು ಗದೆಯೊಳೂ     || ೨ ||

ಮರಳಿ ವರಹ ಭೋರುಗುಡಿಸಿ ಬೆರಸಿ ಹಾಯಲೂ |
ಹಿರಿದು ರೋಷದಿಂದ ಖಳನು ಮುಷ್ಟಿಯೆರಗಲೂ       || ೩ ||

ಹತಿಯ ತಾಳಿ ಖತಿಯನಾಂತು ಮತಿಸಿ ಬರುತಿರೇ |
ಗತಿಯು ತೀರಿತೆನುತಲಾಗ ಅತುಳ ಮಾಯೆಯಾ      || ೪ ||

ಮನದಿ ಯೋಚಿಸುತ್ತ ದೈತ್ಯ ನೆನೆಯೆ ವ್ಯಾಘ್ರನಾ |
ರಣಕೆ ಕಳುಹಲಾಗ ಬಂದು ಘನದಿ ವರದನಾ          || ೫ ||

ಕೆಣಕಿ ಗರ್ಜಿಸುತ್ತ ಬಂದು ಭೋರುಗುಡಿಸಲೂ |
ಕ್ಷಣದಿ ವರಹ ದಾಡೆಯಿಂದ ಸೀಳಿ ಬಿಸುಡಲೂ          || ೬ ||