ರಾಗ ಸೌರಾಷ್ಟ್ರ, ತ್ರಿವುಡೆತಾಳ
ಇಂತು ಕೆಲದಿನ ಗೈದು ನಂತರ | ನಿಂತು ಮೊಳಕಾಲೂರಿ ಬಳಿಕಿ ||
ನ್ನೆಂತು ಧರಣಿಯೊಳೊಂದೆ ಪಾದವ | ನಿಂತು ತಪದೀ || || ೧ ||
ಇರುವ ಸಮಯದಿ ಸುರರ ಪುರಕಾ | ವರಿಸಿದುದು ಭೋರ್ಗುಡಿಸಿ ಜ್ವಾಲೆಯ ||
ಅರಿತು ಅಜನೈತಂದು ದಿತಿಜರೋ | ಳೊರದನಾಗಾ || ೨ ||
ಘೋರತಪವಾಚರಿಪುದ್ಯಾತಕೆ | ಸೂರೆಯಾದೆನು ನಿಮ್ಮ ಮನದಾ ||
ಪಾರಮಾರ್ಥಿಕ ಸಾಕು ಬಿಡಿಬಿಡಿ | ಕಾರಣಿಕರೇ || ೩ ||
ಸೃಷ್ಟಿಕರ್ತನ ನುಡಿಯ ಕೇಳುತ | ದಿಟ್ಟ ದೈತ್ಯರು ತೆರದು ಕಣ್ಗಳ ||
ದೃಷ್ಟಿಯಿಂ ನೋಡುತ್ತ ಯೆರಗಲು | ಶ್ರೇಷ್ಠತನದೀ || ೪ ||
ಪಾದಕೊಂದಿಸುತಿರುವ ದನುಜರು | ಮೋದದಿಂ ಪಿಡಿದೆತ್ತಿ ಶಿರವನು ||
ಆದುದೆನ್ನಯ ಮನಕೆ ಸಂತಸ | ಗೈದ ಪರಿಯಾ || ೫ ||
ಪೇಳಿದರೆ ನಿಮ್ಮಿಷ್ಟವನು ನಾ | ಪಾಲಿಸುವೆನೆನಲಜನ ವಚನವ ||
ಕೇಳಿ ದನುಜರು ಹರುಷವೆತ್ತುತ | ಪೇಳಿದರಾಗ || ೬ ||
ರಾಗ ಕೇದಾರಗೌಳ, ಅಷ್ಟತಾಳ
ದೇವ ನಿಮ್ಮಡಿಯನ್ನು ಈವರೆಗಿಂದಲ್ಲಿ | ಸಾವಿಗಂಜದೆ ಧ್ಯಾನಿಸಿ ||
ಪಾವನಾಂಘ್ರಿಯ ಕಂಡೆವಿನ್ನು ನಮ್ಮಷ್ಟವಾ | ನೀವುದು ದಯದಿಂದಲೀ || ೧ ||
ಈರೇಳು ಲೋಕಾದಿ ನಮ್ಮಂಥ ಧುರಧೀರ | ರ್ಯಾರುಯಿಲ್ಲದ ತೆರೆದಾ ||
ಭೂರಿಪರಾಕ್ರಮದಿಂದಲಿ ಧಾರುಣೀ | ಸೂರೆಗೈವಂತೊರವಾ || ೨ ||
ಸುರರು ಮಾನವರೊಳು ಸರಿಯಾಗಿ ಕಾದಲು | ಧುರವನ್ನು ಜೈಸುವಂಥಾ ||
ಧುರ ಸಮರ್ಥರು ನಮಗಿದಿರಿಲ್ಲದಂದಾದಿ | ವರವನ್ನು ಕೊಡುವದಿತ್ತಾ || ೩ ||
ಯೆಂದ ಮಾತನು ಕೇಳುತಂದು ಅಜನು ಮನ | ನೊಂದು ತನ್ನೊಳು ಯೋಚಿಸಿ ||
ಇಂದಿವರಿಷ್ಟಾರ್ಥ ಕೊಡದಿರೆಯೆನ್ನಾನು | ಕೊಂದು ಕಳವರೆನುತಾ || ೪ ||
ದನುಜಾಧಿಪತಿಗಳು ವಿನಯದಿ ಕೇಳಿರಿ | ಮನದೊಳಗಿರ್ದುದನೂ ||
ಅನುಮಾನ ಮಾಡದೆ ಕೊಟ್ಟಿಹೆ ಬೇಗದಿ | ಮನೆಗೆ ಪೋಗಿರಿ ಮುಂದಿನ್ನು || ೫ ||
ಕೊಡುವೆನೀ ಗದೆಯಾನು | ಪಿಡಿದು ಯುದ್ಧದೊಳ್ಯಾರ ||
ವಡಲೀಗೆ ತಗಲುವದೋ | ಬಿಡದೆ ಆಹುತಿಗೊಂಬುದಿದರಾ ನೀ ಕೊಳ್ಳೆಂದೂ |
ಕೊಡಲದ ಹಿರಣ್ಯಾಕ್ಷನೂ || ೬ ||
ಪಡೆಯಲಾಕ್ಷಣ ಅಜ ಹಂಸೆಯ ನಡರಿ ತಾ | ನಡದಾನು ಪುರವರಕೆ ||
ದಡಿಗದಾನವರಾಗ | ನಡೆತಂದು ಪೊಕ್ಕಾರೂ | ಕಡುತವಕದಿ ಪುರಕೇ || ೭ ||
ಭಾಮಿನಿ
ಕಿರಿದನುಜನೊಂದಿನದೊಳಣ್ಣನೊ | ಳರುಹಿದನು ಭೂಲೋಕಪಾಲರ |
ತರಿದು ಧಾರುಣಿಯನ್ನು ನಮ್ಮೊಶಗೈವೆ ಧುರದೊಳಗೆ ||
ಸುರಪುರಕೆ ತೆರಳುತ್ತ ನಂತರ | ಸುರನರೋರಗ ಯಕ್ಷಕಿನ್ನರ |
ಗರುಡಗಂಧರ್ವರನು ಗೆಲಿದಾ ಪುರವನಾಳುವೆನೂ || ೧ ||
ಕಂದ ಪದ್ಯ
ಇಂತಗ್ರಜನೊಳು ಪೇಳುತ |
ಪಂಥದಿ ಹಿರಣ್ಯಾಕ್ಷನು ಗದೆಗೊಂಡಾಗಳೆ ||
ನಿಂತಾರ್ಭಟಿಸುತ ಪೊರಟಾ |
ತಾಂ ತವಕದಿ ನಡೆತಂದಂ ರೌದ್ರದೊಳಾಗಳ್ || ೧ ||
ರಾಗ ಭೈರವಿ, ತ್ರಿವುಡೆತಾಳ
ಬಂದನಾಗಾ | ಹಿರಣ್ಯಕ | ಬಂದನಾಗಾ || ಪಲ್ಲ ||
ಬಂದಭರಕಾನಂದು ಧರಣಿಯು | ನೊಂದು ಬಾಬಿಡುತಿರಲು ದೈತ್ಯನು |
ಅಂದುಗದೆಗೊಂಡಾರಭಟಿಸುತ | ನಿಂದು ಭೋರ್ಗರವುತ್ತ ರೌದ್ರದಿ |
ಸಿಂಧು ಕುದಿದುಕ್ಕಿದುದು ನಾಲ್ದೆಸೆ | ಬೆಂದುದೊ ಎಂಬಂತೆ ಜನರುಗ |
ಳಂದು ಹಾಹಾಕಾರ ಗೈಯ್ಯಲು | ನಿಂದನಾಗ || ೧ ||
ಬರಬರುತ ಕಾಶ್ಮೀರದರಸನು | ಧುರವ ಗೈಯಲು ದಾನವೇಂದ್ರನು |
ತರುಬುತಾತನ ಪುರವ ವಶಗೈ | ತರುತ ಮುಂದಕೆ ತೆರಳಿ ಮಗಧನ |
ಮುರಿದು ಸೌರಾಷ್ಟ್ರವನು ಗೆಲ್ಲುತ | ಭರದಿ ಕುಂತಳ ಆಂಧ್ರದೇಶದ |
ಧರಣಿಪಾಲರನೆಲ್ಲ ವೋಡಿಸಿ | ಪುರವ ತನ್ನೊಶಗೈವುತಾಗಳೆ |
ನಿರದೆ ಭಂಗಿಸುತಾಗ ದಾನವ | ಬಂದನಾಗಾ || ೨ ||
ಸಿಕ್ಕಿದವನಿಪರನ್ನು ಸೆರೆಯೊಳಗ | ಗಿಕ್ಕಿಸುತ ಮಿಕ್ಕವರ ಬಡಿದುರು |
ಳಿಕ್ಕಿ ಪುರವಶಗೊಂಡು ತಾ ಮೇ | ಲುಕ್ಕಿನಿಂದಲೆ ವಿಪ್ರರೆಜ್ಞವ |
ಸೊಕ್ಕಿನಲಿ ಕೆಡಿಸುತ್ತ ವಧಿಸಲು | ಲೆಖ್ಖವಿಲ್ಲದೆ ಸೈನಿಕರ ತಾ |
ಮುಕ್ಕುತಿರ್ದನು ಮಡದಿಯರ ಘೋ | ಳಿಕ್ಕಿಸುತ ಧರಣೀಶನಾದನು |
ಯಕ್ಕಸೊಕ್ಕಿನ ದಾನವೇಂದ್ರನು | ಬಂದನಾಗಾ || ೩ ||
ಧರಣಿಲೈವತ್ತಾರು ದೇಶಕೆ | ಧೊರೆಯು ತಾನೆಂತೆಂದು ಗರ್ವಲಿ |
ತರತರದ ದುರ್ನೀತಿಗಳನಾ ಚರಿಸಬೇಕೆಂದೆಲ್ಲ ಡಂಗುರ ||
ವೆರೆಸಿ ಸ್ತ್ರೀಗೋವಧೆಯಚರಿಸುತ | ಭರದಿ ವಿಪ್ರರ ಗಡಣವೆಲ್ಲವ |
ಮುರಿದು ನೀತಿಯ ತೊರೆದು ಮತ್ತಲ್ಲಿರುವ ಭೂಮಿವಿನಾಶಕಾಲವು |
ದೊರಕಿತೆಂದೆನುತೆಲ್ಲರಾಗಳೆ ಮರುಗುತಿರಲೂ | ಬಂದನಾಗಾ || ೪ ||
ಭಾಮಿನಿ
ಧರಣಿಪತಿ ತಾನೆನಿಸುತೊಯ್ಯನೆ |
ಹರುಷದಿಂದಿರುತಿರಲು ಮತ್ತಾ |
ಭರದಿ ಗದೆಗೊಂಡೆದ್ದು ನಡದನು ಸುರರ ತತ್ಪುರಕೇ ||
ಬರುತಯಕ್ಷರ ನೆರವಿಯನು ಧರೆಗೆ |
ಗೊರಸಿಗಂಧರ್ವರನು ಸೋಲಿಸಿ |
ಗರುಡ ಕಿನ್ನರರುಗಳ ಧುರದಲಿ ಸದೆದು ಸುರಪತಿಯಾ || ೧ ||
ಕಂದ ಪದ್ಯ
ದ್ವಾರದಿ ಬರಲಾಸಮಯದಿ |
ಚಾರರು ತಡೆಯಲ್ಕಾಣುತ ಘೋರನು ಗರ್ವದಿ ||
ಭೋರನೆ ವುಸುರಿದನವರೊಳ್ |
ಧೀರತ್ವದಿ ಬಹುಪರಿಯಿಂದಂ ದೈತ್ಯೇಂದ್ರಂ || ೧ ||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಚರರು ಕೇಳಿರಿ ನಿಮ್ಮ ಧೊರೆಯೊಳು | ಅರುಹಬೇಹುದು ಪುರದದ್ವಾರಕೆ ||
ಧರೆಯನಾಳುವ ವರಹಿರಣ್ಯಕ | ಧುರಕೆ ಬಂದೂ || ೧ ||
ಕರವ ನಿನ್ನನು ಬಾರದೀರ್ದಡೆ | ಪುರವ ಪೊರಟೈದುವದು ಬೇಗದಿ ||
ಅರುಹಿ ಕರತಾರೆಂದು ಉಸುರಲು | ಚರನು ನುಡಿದಾ || ೨ ||
ಕಳ್ಳದಾನವ ಕೇಳು ನಮ್ಮೊಳು | ಪಳ್ಳು ಮಾತುಗಳಾಡಬೇಡವೊ ||
ತಳ್ಳಿ ಬೇಡೆಂದೆನಿಸಿಬಿಡುವೆವು | ವಳ್ಳೆತನದೀ || ೩ ||
ತೆರಳಿಪೋಗದೆ ಉಳಿದೆಯಾದರೆ | ಮರುಳು ಗಣಗಳಿಗೀಗ ನಿನ್ನಯ ||
ಕರುಳ ಮಾಂಸವ ಉಣಿಸಿಬಿಡುವೆವು | ದುರುಳ ಕೇಳೂ || ೪ ||
ರಾಗ ಮಾರವಿ, ಮಟ್ಟೆತಾಳ
ಚರರು ಪೇಳ್ದ ನುಡಿಯ ಕೇಳಿ ದುರುಳದೈತ್ಯನೂ |
ಕರುಳ ತೆಗವ ಪರಿಯ ಕೇಳು ನಿನ್ನ ವಡಲನೂ || ೧ ||
ಸೀಳಿ ಬಿಸುಟುಪುರವ ಪೊಕ್ಕು ಕೋಳುಗೊಂಬೆನೂ |
ಕೀಳುಚರನೆ ನಿಲ್ಲು ಸಮರಗೈದು ಬದುಕಿನ್ನೂ || ೨ ||
ಯೆನುತ ಮುಷ್ಟಿಯಿಂದ ತಿವಿದು ಹನನಗೈಯದೆ |
ಕನಲುತಾಗ ಪಿಡಿಯೆ ಚರನು ಮನದಿ ಘೋಳಿಡೇ || ೩ ||
ಕರವ ಬಿಗಿದು ಪಣಿಗೆ ಮಶಿಯ ನಾಮವಿಕ್ಕುತಾ |
ಸುರಪನೊಡನೆ ಅರುಹಿ ಬೇಗ ಕರದುಕೊಳ್ಳುತಾ || ೪ ||
ಬರುವದೆಂದು ಕಳುಹಲಾಗ ಚರನು ಭಯದಲಿ |
ದುರುಳಗೈದ ಪರಿಯ ಮನದಿ ಮರುಗಿಕೊಳುತಲೀ || ೫ ||
ಭಾಮಿನಿ
ಸುರಪನೋಲಗಕಾಗಿ ಚಾರನು |
ಭರದಿ ದುಃಖದಿ ಬಂದು ಪಾದಕೆ |
ಶಿರವೆರಗಿ ನಡುನಡುಗಿ ನಿಂದಿಹ ಪರಿಯ ಕಾಣುತಲೀ ||
ಉರಿಮಸಗಿ ದಿಗುಪಾಲರೆಲ್ಲರು |
ತರತರದ ಗರ್ಜನೆಯ ಗೈಯಲು |
ಸುರಪತಿಯು ಚರನೊಡನೆ ಕೇಳಲು ಪರಿಯನುಸುರಿದನೂ || ೧ ||
ರಾಗ ಮುಖಾರಿ, ಏಕತಾಳ
ಸುರರಾಜಾ ಲಾಲಿಸೆಮ್ಮೊಡೆಯಾ | ನಾನೆಂಬ ನುಡಿಯಾ |
ಸುರರಾಜಾ ಲಾಲಿಸೆಮ್ಮ ನುಡಿಯಾ || ಪಲ್ಲ ||
ನಿನ್ನಾ ಅಪ್ಪಣೆಯಾ ಶಿರದೊಳಾಂತೂ | ದ್ವಾರದೊಳಿಂತೂ |
ಮುನ್ನೀನಂದಾದಿ ಕಾಯುತ ನಿಂತೂ ||
ಇನ್ನು ನಾನಿರುತಿರೆ ನಿನ್ನನು ಕರೆಯೆಂ |
ದೆನ್ನೊಳು ಪೇಳಿದ ಕುನ್ನಿಯು ಬಹುಪರಿ |
ಯೆನ್ನಲು ಬೆದರಿಕೆ ಬಹುಪರಿ ಮನಸಿಗೆ |
ಇನ್ನೇನಾದುದ ಕಣ್ಣಿಗೆ ತೋರ್ಪುದು |
ಯೆನ್ನುವದೇನ್ ನಾನ್ ಮನ್ನಿಸು ಒಡೆಯಾ || ಸುರರಾಜಾ || ೧ |
ಕರದೂ ತಾರೆಂದ ನಿಮ್ಮನಿಂದೂ | ದ್ವಾರದಿ ಬಂದೂ |
ಅರುಹಲು ಕೇಳಿ ನಾನವನೊಳಂದೂ ||
ಧೊರೆಗಳ ಕರಸುವ ಪರಿಯನುಯೆನ್ನೊಡ |
ನರುಹದೆ ನಡೆಯೆಂದರುಹಲು ಕೇಳದೆ |
ಧುರವೆಸಗುತ ಆ ದುರುಳನು ಈಪರಿ |
ಕರಗಳ ಬಂಧಿಸಿ ಹೊರಳಿಸಿ ಹೊದನು |
ಅರುಹಲಿನ್ನೇನಾಂ ಧೊರೆಯೆ ಪರಾಕೂ || ಸುರರಾಜಾ || ೨ ||
ನರಲೋಕಾ ಪಾಲಕರನೆಲ್ಲಾ | ಗೆದ್ದಿಹನಂತೇ |
ಅರಸಾನು ಭೂಲೋಕದೊಳಗೆಲ್ಲಾ ||
ನರಕಾರಿಯ ತೆರ ಕಾಣುವನಲ್ಲದೆ |
ದುರುಳ ಹಿರಣ್ಯಕನೆನ್ನುವನಾತನು |
ಧುರಕನುವಾಗುತ ಬರದಿರೆ ಈ ಪುರ |
ಹೊರಡಲು ಬೇಕೆಂದರುಹಿದ ಮತ್ತಿ |
ನ್ನಿರುವದು ಕಷ್ಟವು ಸರಿವೆವು ಜೀಯಾ || ಸುರರಾಜಾ || ೩ ||
ರಾಗ ಕೇದಾರಗೌಳ, ಝಂಪೆತಾಳ
ಚಾರರೆಂದುದ ಕೇಳುತಾ | ಸುರಪಾಲ |
ಭೂರಿ ಕೋಪವ ತಾಳುತಾ ||
ಚೋರ ದನುಜನು ಈಪರೀ | ನಮ್ಮ ಪುರ |
ದ್ವಾರಪಾಲರ ಬಹುಪರೀ || ೧ ||
ಭಂಗಿಸುತ ಕರಗಳನ್ನೂ | ಬಂಧಿಸಿದ | ಇಂಗಿತವ ಅರಿಯರಿನ್ನೂ |
ಭಂಗಬಡಿಸುತ ಆತನಾ | ಹಿಡಿತಹುದು | ಹಿಂಗದೆಲ್ಲರು ಈದಿನಾ || ೨ ||
ದಿಗುಪಾಲರೆಲ್ಲ ಕೂಡೀ | ಪೋಗಿ ಆ | ಪಗೆಮಾಳ್ಪ ದೈತ್ಯಖೋಡೀ ||
ಗೆಯ | ರಿತು ನಡಿಯಿರೆನುತಾ | ಸುರನಾಥ | ವಗುಮಿಗೆಯೊಳ್ಪೇಳ್ದ ಮಾತಾ || ೩ ||
ಕೇಳಿ ದಿಕ್ಪಾಲರೆಲ್ಲಾ | ಬಲಕೂಡಿ | ಕಾಳಗಕೆ ಪೊರಟುಯೆಲ್ಲಾ ||
ಪಾಳೆಯವ ಕೂಡಿಕೊಂಡೂ | ಯಮ ಮುಖ್ಯ | ರಾಳುಗಳು ಬರಲು ಕಂಡೂ || ೪ ||
ಕಂಡು ಸುರಸೇನೆಗಳನೂ | ದಿತಿಸುತನು | ಕೆಂಡವಾಗುತ ನುಡಿದನೂ ||
ಹಿಂಡುವೆನು ನಿಮ್ಮರುಧಿರಾ ಬಲುಬೇಗ | ಖಂಡಿಸದೆ ಬಿಡೆನು ಬವರಾ || ೫ ||
ಕಂದ ಪದ್ಯ
ನುಡಿಯನು ಕೇಳ್ದಾಯಮನಾ | ರ್ಭಟಿಸುತ ಸಮ್ಮುಖಕಾಗಳೆ ನಡೆತಂದುಸುರಿದ ||
ಬಡದೈತ್ಯನ ಬಂದಿಹೆನೆಮ್ಮೊಡನೇತಕೆ ಯೆಂಬುದೆ ನುಡಿ ಬೇಗದೊಳೆನುತಂ || ೧ ||
ರಾಗ ಪಂಚಾಗತಿ, ಮಟ್ಟೆತಾಳ
ಯೆನಲು ದೈತ್ಯನೂ | ರೋಷದಿಂದಲೀ |
ಕನಲಿ ಗರ್ಜಿಸುತ್ತ ನುಡಿದ | ದಿನಪಸುತನಿಗೇ || ೧ ||
ಮನುಜರೆಲ್ಲ ರಾ | ವೊದು ನಿನ್ನಯಾ |
ಮನೆಯೊಳಿಡುವ ಕೆಲಸ ಬಿಟ್ಟು | ರಣಕೆ ಬಂದೆಯಾ || ೨ ||
ನಿನಗೆ ಪಾಶವಾ | ಸರಿದು ಬೇಗದೀ |
ಘನದಿವೊವ ಕೆಲಸಕಾಗಿ | ಯಿನಿತು ಬಂದಿಹೇ || ೩ ||
ಮುಂದೆ ಪ್ರಾಣಿಗೆ | ಮರಣವಿಲ್ಲದಾ |
ದಂದ ಮಾಳ್ಪ ಪರಿಗೆ ನಿನ್ನ | ಕೊಂದು ಕಳವೆನೂ || ೪ ||
ದುಷ್ಟ ಪಾಪಿಯೇ | ಯೆನ್ನ ಪಾಶದೀ |
ಕಟ್ಟಿ ವೊವೆನೆಂಬ ಸಮಯ | ಕಿಟ್ಟ ಗದೆಯಲೀ || ೫ ||
ಗದೆಯ ಹೊಲನೂ | ತಾಳಲಾರದೇ |
ಬದಿಯ ಸಾರಲಾಗ ಅಗ್ನಿ | ವದಗಿ ಬರುತಿರೇ || ೬ ||
ಬರುವ ಅನಲಗೇ | ಯೆರಗೆ ದನುಜನೂ |
ಶಿರಕೆ ನಾಟಲಾಗ ಬಿದ್ದ | ಪರಿಯ ಕಾಣುತಾ || ೭ ||
ಭಾಮಿನಿ
ಕಾಲನನು ಮೈಮರಸಿ ಅಗ್ನಿಯ |
ಮೂಲವಡಗಿಸಲಾಗ ನೈರುತಿ |
ಬೀಳುಗೊಂಡೋಡಿದುದ | ಕಾಣುತ ಪಾಳೆಯವಗೊಂಡೂ ||
ಮೂಲಬಲ ಕೂಡುತ್ತಲಾ ಕೌ |
ಬೇರ ನಡೆತರೆ ಕಂಡು ದಿತಿಸುತ |
ಕಾಲರುದ್ರನ ತೆರದಿ ಗರ್ಜಿಸಿ ಸಮರಕಿದಿರಾದಾ || ೧ ||
ರಾಗ ಭೈರವಿ, ಅಷ್ಟತಾಳ
ಭಳಿರೆ ಮೆಚ್ಚಿದೆ ದಾನವಾ | ನಿನ್ನಯ ಶೌರ್ಯ | ಗಳ ನಿಲಿಸುವೆ ಮೌನವಾ ||
ತಳದರು ಯಮ ಅಗ್ನಿ | ಯೆಂಬಹಂಕೃತಿಬೇಡ | ಗಳಿಗೆಯೊಳ್ನಿಲಿಸುವೆನೂ || ೧ ||
ಅವರಾ ಜತೆಯೊಳ್ನಿನ್ನನೂ | ಕೂಡಿಸುವಡೆ | ತವಕಾದಿ ಬಂದಿಹೆನೂ ||
ಬವರಾವ ಸಾಕೆಂದು ನಿನ್ನ | ಬಾಯೊಳು ನಾನು | ವಿವರಿಸುವೆನು ಈ ಕ್ಷಣಾ || ೨ ||
ಮುಚ್ಚು ಮುಚ್ಚೆಲೆ ಬಾಯನೂ | ಪೌರುಷ ಬೇಡ | ಕೊಚ್ಚಿ ಕಳವೆ ನಿನ್ನನೂ ||
ಹೆಚ್ಚು ಮಾತುಗಳ್ಯಾಕೆ | ತಾಳಿಕೊಳ್ಳೆನುತಾಲಿ | ಚುಚ್ಚಿದಾ ಶರಗಳನ್ನೂ || ೩ ||
ಬರುವಸ್ತ್ರಗಳ ಖಂಡಿಸಿ | ಗದೆಯ ಗೊಂಡು | ಶಿರಕೆರಗಲು ಗರ್ಜಿಸಿ ||
ಹರಹರ ಯೆನುತಾಲಿ | ಧರೆಗೆ ಬಿದ್ದುರುಳಾಲು | ಸುರಪನೆಡೆಗೆಚರರೂ || ೪ ||
ಭಾಮಿನಿ
ಚಾರರಾಕ್ಷಣ ಬಂದು ಸುರಪಗೆ |
ಭೂರಿ ಶೋಕಾತುರದಿಪೇಳ್ದರು |
ಸೂರೆಗೊಂಡನು ದೈತ್ಯ ಸಮರದಿ ಸುರರನೆಲ್ಲರನೂ ||
ಕ್ರೂರ ತಾನಿನ್ನೇನು ಗೈವನೊ |
ಸಾರಿ ಸಮರವೆ ಗೈದು ಖಳನೆಮ |
ನೂರ ಪೊಗಿಸೆಂದೆರಗಿ ಪಾದದಿ ಮರುಗುತಿರಲಂದೂ || ೧ ||
ರಾಗ ಭೈರವಿ, ಏಕತಾಳ
ಚರರೆಂದುದ ಕೇಳ್ದಾಗಾ | ಪ | ಲ್ಮೊರವುತ ಕರಿಯಿರೊ ಬೇಗಾ ||
ತೆರಳಲಿ ಈಶಾನನನೂ | ಆ | ದುರುಳನ ಸದೆಬಡಿದವನೂ || ೧ ||
ಬರಲೆನ್ನುವದನು ಕೇಳೀ | ಅತಿ | ಭರದಲಿ ಚಾರರು ತೆರಳೀ ||
ಅರುಹಲು ಮೃತ್ಯುಂಜಯನೂ | ತಾ | ತೆರಳಿದ ಧುರಕೆನುತವನೂ || ೨ ||
ಪ್ರಳಯ ಕಾಲಾಗ್ನಿಯ ತೆರದೀ | ಬಂ | ದಳುಕಿಸಿದನು ಆ ಶರಧೀ ||
ಗುಳಗುಳ ಧ್ವನಿಗೈವುತಿರೇ | ಖಡುಗಲಿ | ಖಳ ಬಳಿಬಳಿರೇ || ೩ ||
ಯೆನುತೀಪರಿ ಬರುವದನೂ | ಕಂ | ಡನುಪಮ ಖಳ ನೋಡಿದನೂ ||
ಮನದೊಳು ಧೈರ್ಯವನಾಂತೂ | ಅತಿ | ಘನತರದಲಿ ಧುರಕಾಂತೂ || ೪ ||
ಬರುವದು ಕಾಣುತ ಈಶಾ | ಕಡು | ದುರುಳನೆ ಕೇಳೀರೋಷಾ ||
ತುರನಾಗದಿರೆನ್ನೊಡನೇ | ಸು | ಟ್ಟುರುಹುವೆ ಲೋಕವ ಖಳನೇ || ೫ ||
ಬರಿಮಾತುಗಳು ಆಡೀ | ಆ | ಕುರಿಗಳ ತೆರದಲಿ ವೋಡೀ ||
ತಿರುಗದಿರೆಲೊ ನಾ ನಿನ್ನಾ | ಈ | ಶಿರ ಚೆಂಡಾಡುವೆ ಮುನ್ನಾ || ೬ ||
ರಾಗ ಭೈರವಿ, ಅಷ್ಟತಾಳ
ಖಳಕುಲಾಧಮನೆ ಕೇಳೂ | ನಿನ್ನಾಯಾ ಶಿರ | ವುಳಿಸಿಕೊ ಬೇಗದೊಳೂ ||
ಖಳಕುಲಾವಳಿಗೆಲ್ಲಾ ದೇವ ನಾನಾಗಿರೆ | ಕಲಹಕೆ ಬಂದೆಯಲ್ಲಾ || ೧ ||
ದಿಗುಪಾಲರಲ್ಲಿ ನೀನೂ ವೋರ್ವನುಯೆಂದು | ಜಗವೆಲ್ಲ ತಿಳಿವುದಿನ್ನೂ ||
ಅಗಜೆಯರಸ ಜಗದೀಶನೆಂದರೆ ನಿನ್ನ | ಬಗೆವವನಲ್ಲ ನಾನೂ || ೨ ||
ಮರುಳಾರಂದದಿ ನುಡಿವೇ | ದಾನವ ನಿನ್ನಾ | ದುರುಳತನವು ಥರವೇ ||
ಬರಿದ್ಯಾಕೆ ಮೂಢತ್ವ ಜಗದೀಶ ನಾನೆಂದು ಅರಿತವರುಸುರುವರೂ || ೩ ||
ಮರುಳ ನಾನಲ್ಲ ಕೇಳೂ | ಈಶಾನನೆ | ಹರಣದಾಸೆಗೆ ಯೆನ್ನೊಳೂ ||
ಹರನೆಂದು ವರದರೆ ಬಿಡುವರ್ಯಾರ್ನ್ನಿನ್ನನು | ಶಿರವಾ | ನೀ ಯೆನಗಿತ್ತೆಯಾ || ೪ ||
ಕೇಳಿ ರೋಷವ ತಾಳ್ದಾಗಾ | ತ್ರಿಶೂಲವಾ | ಖೂಳನಾ ಶಿರಕೆ ಬೇಗಾ ||
ತಾಳದೆ ಬಿಡಲಾಗ ಕಂಡು ದಾನವ ತನ್ನ | ತೋಳಿಲಿ ತಡದೆಂದನೂ || ೫ ||
ಜಗದೀಶ ನಿನ್ನಾ ಶೂಲಾ | ನೋಡೀಗ ಈ | ಜಗವೆಲ್ಲ ಸುತ್ತಿದೆಲಾ ||
ಬಗೆಯಾದೆ ವುಸುರೀದೆ | ಜಗಕೆಲ್ಲ ನಾನಿನ್ನೂ | ಜಗದೇಕ ವೀರ ಕೇಳೂ || ೬ ||
ನುಡಿಯಾ ಕೇಳುತ ರೋಷದೀ | ಈಶಾನನಾ | ಘುಡುಘುಡಿಸುತ ಬೇಗದೀ ||
ವಡನೆ ಮುಷ್ಟಿಯಗೈದು ಪೊಯಲು ದಾನವ | ಬಡಿದಾನು ಗದೆಯಿಂದಲೀ || ೭ ||
ಭಾಮಿನಿ
ದಾನವೇಂದ್ರನ ಗದೆಯ ಘಾತವ |
ಆನಲಾರದೆ ಪಿಂತಿರುಗೆಹರ |
ತಾನೆ ಸಮರಕೆ ಪೊರಟು ಬಂದನು ಆನೆಯೇರುತಲೀ ||
ಸೇನೆ ಸಹಿತಲಿ ಬರುವ ಇಂದ್ರನ |
ಶೋಣಿತಾಧಿಪ ಕಂಡು ನುಡಿದನು |
ನೀನೆ ಸುರಪುರಧೀಶ ಆದಿತಿಯ ಸುತನೆ ಹೇಳೆಂದಾ || ೧ ||
ರಾಗ ಮಾರವಿ, ಮಟ್ಟೆತಾಳ
ದುರುಳ ಕೇಳು ದೇವಪುರಕೆ ಅರಸನಾಗಿಹೆ |
ಸುರರು ಯಕ್ಷ ಗುಹ್ಯಕಾದಿರಿರುವರಿಲ್ಲಿಯೆ || ೧ ||
ಅರಿತು ಬಂದೆ ದೇವಪುರದ ಧೊರೆಯತನವನೂ |
ಧರಿಸಿಕೊಂಬೆ ಯಕ್ಷರ್ಗಿಕ್ಷ ಸರಿದ ಪರಿಯನೂ || ೨ ||
ಗರುಡ ಗಂಧರ್ವ ಕಿನ್ನರರು ಸಹಿತಲಿ |
ಧುರಸಮರ್ಥರೆಲ್ಲರಿಂಗೆ ಧೊರೆಯು ನಾನಿಲ್ಲಿ || ೩ ||
ಮರುಳಕೇಳು ಗರುಡ ಕಿನ್ನರರನೆಲ್ಲರಾ |
ಪುರವ ಪೊರಡಿಸೀದೆ ಧುರದೊಳೆಲ್ಲರಾ || ೪ ||
ಅಷ್ಟು ಪಂಥ ಇರಲು ನಿನಗೆ ತಟ್ಟನೆನ್ನಲೀ |
ದಿಟ್ಟ ಬಾರೊ ನೋಳ್ಪೆ ನಿನ್ನ ಕುಟ್ಟಿ ಜವದಲೀ || ೫ ||
ಕೇಳಿರೋಷಗೊಂಡು ದೈತ್ಯ ನುಡಿದನೂ |
ಬಾಳಗೊಡೆನು ನಿನ್ನ ನಿಲ್ಲಿ ಸೀಳಿಬಿಡುವೆನೂ || ೬ ||
ಬಾಯ ಪೌರುಷವನು ನುಡಿದು ಸಾಯಬೇಡಲಾ |
ತಾಯ ಬಸುರೊಳಡೆಗೆ ನಿನ್ನ ಕಾಯ್ದರಾರೆಲಾ || ೭ ||
ಭೂಮಿಯೊಳಗೆ ಇರುವ ನೃಪರ ಹೋಮಿಸೀದೆನೂ |
ಭೂಮಿಪಾಲನಾಗಿ ಬಂದೆ ಕ್ಷೇಮದೊಳಗಿನ್ನೂ || ೮ ||
ಅವನಿಪಾಲರೆಲ್ಲ ನರರು ಅವರ ಗಲಿದಿಹಾ |
ಭವರದಲ್ಲಿ ಸುರರು ನಮ್ಮಾಹವವ ಬಲ್ಲೆಯಾ || ೯ ||
ಸುರರ ಯುದ್ಧವನ್ನು ನಾನೀವರೆಗೆ ನೋಡಿದೇ |
ಸರಕು ತೆಗದು ವೋಡಿದವರ ಪರಿಯ ತಿಳಿಯದೇ || ೧೦ ||
ಹಿಂದೆ ಬಂದ ಸುರಪನಲ್ಲ ಇಂದು ನೋಡಿಕೋ |
ಮಂದಮತಿಯೆ ಇಂದ್ರನೆಂದು ತಿಳಿಯದ್ಯಾತಕೋ || ೧೧ ||
ಇಂದ್ರ ಕೇಳು ನಿನ್ನನೀ ಗಜೇಂದ್ರ ಸಹಿತಲೀ |
ಒಂದೆ ಮುಷ್ಟಿಯಿಂದ ಬಡಿದು ಕೊಂದು ಭರದಲೀ || ೧೨ ||
ಮುಂದೆ ದೇವಪದವಿಯನಗೆ ಸಂದಿತೆನುತಲೀ |
ಯೆಂದು ತಿಳಿದುಕೊಳ್ಳೆ ಬೇಗ ಹಿಂದೆ ಸಾರಿಲ್ಲೀ || ೧೩ ||
Leave A Comment