ಸ್ರಗ್ಥರಾ ವೃತ್ತ

ದ್ವಾರೇ ವೈಕುಂಠಲೋಕೇ ವಿರಚಿತಃದಯೋ
ಭೂರಿಗರ್ವಾಂಧಯೋ; ಪ್ರಾಕ್ |
ಸಂರೋಧಂ ಕುರ್ವತೋರ್ಹಾ ಜಯಸುವಿಜಯಯೋ;
ಘೋರಶಾಪೇ ಮುನೀಂದ್ರೈಃ ||
ಸಂರೋಷಾತ್ ಪಾತಿತೇ ವೈ ಕಮಲಜನಿಪಿತಾ
ವೀರವಾರಾಹರೂಪೋ |
ಧೀರೋ ಭೂತ್ವಾ ನೃಸಿಂಹೋ ನಿಜಹಿತಮಕರೋತ್
ಯೋ ರಮೇಶಃ ಸ ಪಾಯಾತ್ ||

ಭಾಮಿನಿ

ಗಣಪತಿಯ ಪೂಜಿಸುತನಂತರ |
ಮಣಿದು ಗುರುಹಿರಿಯರನು ಪ್ರಾರ್ಥಿಸಿ |
ಮನದಿ ಹರಿಹರರನ್ನು ಸ್ತುತಿಸುತ ಮುನಿಜನಕೆ ಯೆರಗೀ ||
ಫಣಿವಶಯನನ ಚರಿತೆಯನು ನಾ |
ಗುಣಿಸಿ ಪೇಳಿದೆ ಯಕ್ಷಗಾನದಿ |
ಕಣ್ ದಣಿಯೆ ಬರದೋದಿ ಮೆರಸುವದೆಲ್ಲ ಸುಜನರಿದೂ          || ೧ ||

ರಾಗ ನಾಟಿ, ಝಂಪೆತಾಳ

ಜಯತೂ ಜಯ ಗಣನಾಥಾ | ಜಯತೂ ಸದ್ಗುಣದಾತಾ ||
ಜಯತೂ ಗೌರಿಯ ಜಾತಾ | ಕೀರ್ತಿ ವಿಖ್ಯಾತಾ || ಜಯತೂ ಜಯ ಜಯತೂ      || ೧ ||

ಸಕಲ ಲೋಕಾಧೀಶಾ | ಸುಖದಿ ಸರ್ವರ ಪೋಷಾ ||
ಯುಕುತಿದಾಯಕಧೀಶಾ | ಶಕುತಿ ಮಹೇಶಾ || ಜಯಜಯತೂ ಜಯತೂ         || ೨ ||

ಶೃಂಗಪುರುದೊಳು ವಾಸಾ | ತುಂಗವಿಕ್ರಮ ಭಾಸಾ ||
ಮಂಗಳಾಂಗನಿವಾಸಾ | ಸಂಗಸುಖದಾಸಾ || ಜಯಜಯತೂ ಜಯತೂ || ೩ ||

ದ್ವಿಪದಿ

ಸಕಲ ದೇವರ್ಕಳಿಗೆ ಮಣಿದು ನಾನಿಂದೂ  |
ಮುಕುತಿದಾಯಕ ಚರಿತೆಯನುತ ಬಲ ಬಂದೂ ||      || ೧ ||

ತಪ್ಪಿರಲು ತಿದ್ದು ವದು ಬಲ್ಲವರು ಮುದದೀ |
ವಪ್ಪಿ ಮೆರಸಲು ನಿಮ್ಮ ರಕ್ಷಿಪನು ಮುದದೀ || || ೨ ||

ವರಮಹಾ ಭಾಗವತ ಪುರಾಣ ಕಥನದಲೀ |
ಅರುಹಿದಂದದಿ ಪೇಳ್ವೆ ವೈಕುಂಠಪುರದೀ     || ೩ ||

ಆದಿನಾರಾಯಣನು ವೋಲಗದೊಳಿರಲೂ |
ಪಾದಭೇಟಿಗೆ ಸನಕಸನಂದರೈತರಲೂ ||     || ೪ ||

ದ್ವಾರದಲಿ ಜಯವಿಜಯರಡ್ಡಗಟ್ಟಿದರೂ |
ಕಾರುಣೀಕರು ಶಾಪ ಕೊಡಲು ಮತ್ತವರೂ ||  || ೫ ||

ಕೆಟ್ಟ ಲೋಭಿಗಳಾಗಿ ಜನಿಸಿ ಭೂಮಿಯೊಳೂ |
ಕಷ್ಟಬಡಿಸಿದರೆಲ್ಲ ಜನಕೆ ವೇಗದೊಳೂ ||      || ೬ ||

ತಿಳಿದು ಆಕ್ಷಣದೊಳಗೆ ವರಹರೂಪಿನೊಳೂ |
ಅಳಿದು ದೇವರ್ಕಳನು ಸಲಹಿ ವೇಗದೊಳೂ ||         || ೭ ||

ಹ್ಯಾಗೆಂಬಪರಿಗಳನು ಪೇಳಬೇಕೆನುತಾ |
ಬಾಗಿ ಶಿರವನು ಎದುರ ಕೇಳೆ ಬಳಿಕಿತ್ತಾ ||    || ೮ ||

ಮೈತ್ರೇಯ ಮುನಿವರನು ಪೇಳೀರ್ದ ಪರಿಯಾ |
ಧಾತ್ರಿಜನರರಿವಂತೆ ಪೇಳುವೆನು ಕಥೆಯಾ || || ೯ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಒಂದು ದಿನ ಮುನಿಪನೊಳು ವಿದರನು | ಬಂದು ಕೇಳಿದ ಭಾಗವತದೊಳೂ ||
ಮಂದರಧರ ವರಹವತಾರವ | ಹಿಂದೆ ತಾನೂ         || ೧ ||

ಯಾತಕೋಸುಗ ಗೈದನೆಂಬುದ | ಯೇ ತಪೋನಿಧಿ ಪೇಳಬೇಕನೆ ||
ಭೀತಿ ಬಡಿಸಿದವರ ಹಿರಣ್ಯಕ | ನಾಥನನ್ನೂ   || ೨ ||

ಮಡುಹಲೋಸುಗ ವರಹತಾರವ | ಬಿಡದೆ ರಚಿಸಿದನೆಂಬ ಮುನಿಪಗೆ ||
ಪೊಡಮಡುತ ಕೇಳಿದನು ಪುನರಪಿ | ವಡನೆ ಪೇಳೂ   || ೩ ||

ಯೆಂದು ಪಾದಕೆ ವಿದುರ ವಂದಿಸ | ಲಂದು ಪೇಳಿದ ಕೇಳು ಶ್ರೀಹರಿ ||
ಹಿಂದೆ ಗೈದಿಹ ಚರಿತೆಯೆಲ್ಲವ | ನಿಂದು ಕೇಳೂ         || ೪ ||

ಭಾಮಿನಿ

ಒಂದು ದಿನ ವೈಕುಂಠ ಪುರದಲಿ |
ಮಂದರಾಧರ ಲಕ್ಷ್ಮೀ ಸಹಿತಲೆ |
ಚಂದದಿಂದೋಲದೊಳೊಪ್ಪಿರಲಾಗ ಜಯವಿಜಯರೂ ||

ಅಂದದಲಿ ದ್ವಾರವನು ಕ್ವಾದಿರೆ |
ಬಂದರಲ್ಲಿಗೆ ಬಾಲರ್ನಾಲ್ವರು |
ಸಂದ ಮುನಿವರರೆಂಬುದರಿಯದೆ ಮಂದಹಾಸದಲೀ ||

ಕಂದ ಪದ್ಯ

ಜಯವಿಜಯರು ಕಾಣುತ ಮುನಿಗಳ |
ಭಯ ಭಕ್ತಿಯೊಳೆರಗದೆ ಕ್ರೋಧದೊಳಾಗಂ ||
ಭಯದೋರುತ ಗರ್ವದಿ ನುಡಿದರ್ |
ನಯನೀತಿಗಳಿಲ್ಲದೆ ಬಹುಪರಿ ಗರ್ಜಿಸುತಂ   || ೧ ||

ರಾಗ-ಮಾರವಿ, ಏಕತಾಳ

ಯಾರ‍್ಮ್ಯಾ ನೀವು ನಮ್ಮನು ನುಡಿಸದೆ |
ಪಾರುವದೆಲ್ಲಿಗೆ ಮುಂದೆ ||
ತೋರ‍್ಮ್ಯಾ ನಿಮ್ಮಯ ಹೆಮ್ಮೆಯ ನಿಲಿಪೆವು |
ಸಾರ‍್ಮ್ಯಾ ಹಿಂದಕೆಯಿಂದೇ || ೧ ||

ರಾಗ-ಕೇದಾರಗೌಳ, ಝಂಪೆತಾಳ

ಆದಿ ನಾರಾಯಣನನೂ | ನೋಡುವಡೆ | ಹಾದಿ ಹಿಡದೈದು ವರನೂ ||
ಯೇ ದುರಾತ್ಮಕರೆ ನೀವೂ | ದ್ವಾರ ತಡ | ಹಾದುವರೆ ಯಾರು ನೀವೂ   || ೧ ||

ರಾಗ ಮಾರವಿ, ಏಕತಾಳ

ಪುಟ್ಟಾ ಪ್ರಾಯದ ಹಾರುವರೆ ನಿಂ | ಮಪ್ಪನ ಮನೆಯೊ ಪೇಳಿ |
ಪಟ್ಟಾ ಆಳುವ ದೇವರ ಬಾಗಿಲ | ದಿಟ್ಟ ದೂತರು ನಾವು ಕೇಳಿ   || ೧ ||

ರಾಗ ಕೇದಾರಗೌಳ, ಝಂಪೆತಾಳ

ಆ ದೇವದೂತರಾದಡೆ ಯೀಪರಿಯ |
ಕ್ರೋಧ ನಿಮಗ್ಯಾಕೆ ಬಲರೇ ||
ಮಾಧವನ ಪಾದದೆಡೆಗೆ | ಪೋಗುವರ |
ಬೈದು ತಡೆವದು ನೀತಿಯೇ         || ೧ ||

ರಾಗ ಮಾರವಿ, ಏಕತಾಳ

ಬಾಗಿಲ ಕ್ಯಾವರ ಅಪ್ಪಣೆಯಿಲ್ಲದೆ |
ಪೋಗಲು ತೀರದು ಮುಂದೇ ||
ಬೇಗದಿ ಹಿಂದಕೆ ಸಾಗದೆಯಿರ್ದರೆ |
ನೀಗಿಸಿಬಿಡುವೆವು ಹಿಂದೇ  || ೧ ||

ರಾಗ ಕೇದಾರಗೌಳ, ಝಂಪೆತಾಳ

ಮೂಢಮತಿಗಳು ಕೇಳಿರಿ | ದೇವರನು |
ನೋಡಿ ಪೋಪೆವು ತಿಳಿದಿರೀ ||
ಗಾಢದಲಿ ದ್ವಾರ ಬಿಡಿರಿ | ಅಲ್ಲದಡೆ |
ಕೇಡು ಬರ್ಪುದು ಕೇಳಿರೀ  || ೧ ||

ರಾಗ ಮಾರವಿ, ಏಕತಾಳ

ಕೇಡನು ಮಾಡುವ ಹೇಡಿಗಳ್ಯಾರ್ ನೀವು |
ಜೋಡಿಸುವೆವು ಸಂಕಲೆಯಾ ||
ಆಡದೆ ಮಾತನು ಬೇಗದಿ ನಡೆಯಿರಿ |
ದೂಡಿಸಿ ಬಿಡುವೆವು ಯೀ ಪರಿಯಾ  || ೧ ||

ರಾಗ ಕೇದಾರಗೌಳ, ಝಂಪೆತಾಳ

ದುರುಳತನದಲಿ ವ್ಯರ್ಥದಿ | ಕೆಡಬ್ಯಾಡಿ |
ಅರಿಯದೆಮ್ಮನು ಗರ್ವದೀ ||
ಸರಿದಪೆವು ಮುಂದೆ ನಾಮಾ | ಯೆನುತಾಗ |
ವರದು ಮುಂದಕೆ ಬೇಗದೀ || ೧ ||

ರಾಗ ಮಾರವಿ, ಏಕತಾಳ

ಕಂಡಾಕ್ಷಣದೊಳು ಕೆಂಡದಂತೇಳುತ |
ದಂಡವ ಧರೆಗಿಡುತಾ ||
ಖಂಡಿತ ಮುಂದಕೆ ತೆರಳ್ದರೆ ನಿಮ್ಮನು |
ದಂಡಿಸುವೆವು ಮತ್ತಾ      || ೧ ||

ರಾಗ ಕೇದಾರಗೌಳ, ಝಂಪೆತಾಳ

ದ್ವಾರಪಾಲಕರೆಂದುದಾ | ಕೇಳ್ದಾಗ | ಭೂರಿ ಕೋಪದಿ ಪೇಳಿದಾ ||
ಕ್ರೂರ ಕರ್ಮಿಗಳಾಗುತಾ | ಧರೆಯೊಳಗೆ | ಘೋರಪಾಪಗಳೆಸಗುತಾ     || ೧ ||

ಪುಟ್ಟುವಿರಿ ಮುಂದೆನುತಲೀ | ಶಾಪವನು | ಕೊಟ್ಟರಾ ಕ್ಷಣಮನದಲೀ ||
ದಿಟ್ಟ ಚಾರರು ಭಯದಲೀ | ಮರುಗುತಿರೆ | ತಟ್ಟನೈದಲು ಪದದಲೀ      || ೨ ||

ಚರಣಕೆರಗಿನ ಚರರನೂ | ಶ್ರೀಹರಿಯು | ಕರುಣದಿಂ ಮನ್ನಿಸಿದನೂ ||
ವರ ಮುನೀಂದ್ರರಿಗೆಂದನೂ | ಕೋಪಬಿಡಿ | ತೆರಳಿ ಬರ್ಪುದುಯೆಂದನೂ || ೩ ||

ಭಾಮಿನಿ

ಸಾಧು ಮುನಿಗಳ ಕರದು ಪೀಠದಿ |
ಪಾದ ಪೂಜೆಯನೆಸಗುತಿರೆ ಕಂ |
ಡಾದಿ ಮೂರುತಿ ಪದಕೆ ಮಣಿದಿಂತೆಂದರಾದುದನೂ ||
ಯೇ ದಯಾನಿಧೆ ನಿಮ್ಮ ದರುಶನ |
ಪಾದದೆಡೆಗೆಂದೆನುತ ಬರುತಿರೆ |
ಆ ದುರಾತ್ಮಕರೆಮ್ಮ ತಡದರು ಹಾದಿ ಬಿಡದಿಂದೂ ||

ಕಂದಪದ್ಯ

ಮುನಿವರರೆಂದುದ ಕೇಳುತ |
ಚಿನುಮಯನುಸುರಿದನವರೊಳ್ ನಸುನಗುತಂ ||
ಮನಸಿನ ಕೋಪವ ಬಿಡಿರೆಂ |
ದೆನುತಲೆ ಉಪಚರಿಸದನನುನಯದಿಂದಾ    || ೧ ||

ರಾಗ ಮಧುಮಾಧವಿ, ಏಕತಾಳ

ಅಪರೂಪದಲಿ ನೀವು ಯೆನ್ನಯಾ ಬಳಿಗೆ |
ಕೃಪೆಯಿಂದ ಬಂದುದು ಲೇಸಾತು ನಿಮಗೆ ||
ಅಪರಾಧಗಳನೆಸಗಿದರ್ನಿಮಗಿಂದೂ |
ವಿಪರೀತವಾತೀಗ ಚಾರರನಿಂದೂ  || ೧ ||

ಆಲಿಸು ದೇವರದೇವ ನೀ ದಯದಿ |
ನೀಲಮೇಘಶ್ಯಾಮ ಕೇಳು ಈ ದಿನದೀ ||
ಮೂಲವರಿಯಾದೆಮ್ಮಾ ಬಾಳೂವೆಗಳನೂ |
ಪೇಳಬಾರದ ಮಾತಕೇಳಿ ಕ್ರೋಧವನೂ      || ೨ ||

ಸೈರಿಸಲಾರದೆ ದ್ವಾರಪಾಲರಿಗೆ |
ವೈರಮಾಡಿದೆವೀಗ ತವಪಾದ ಬಳಿಗೆ ||
ಬರೆಬಿಡದುದರಿಂದೀಪರಿಯಾಯ್ತು ಅವರ್ಗೆ |
ಶರಣರಕ್ಷಕ ದೇವಜಯಜಯೆಂದೆರಗೇ        || ೩ ||

ಯೆರಗೀದ ಮುನಿಗಳಾ ಕಾಣುತ್ತಲಾಗಾ |
ಶಿರವನ್ನು ಪಿಡಿದೆತ್ತಿ ನುಡಿದಾನು ಬೇಗಾ ||
ಅರುಹಬೇಕೆನ್ನೊಳು ಬಂದಿಹ ಪರಿಯನು |
ಮರೆಯದೆಲ್ಲವಾ ಪೇಳಿಪೋಗುವದಯ್ಯಾ

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಆದಿನಾರಾಯಣ ನುಡಿಯನು | ಸಾಧು ಸನಕಸನಂದ ಮುನಿವರ |
ರಾದಿಯರಿದೆಲ್ಲವನು ಪೇಳ್ದರು | ಸಾದರದೊಳೂ       || ೧ ||

ಮುಂದಿನ ಪರಿಯಲ್ಲಿ ಸೂಚಿಸಿ | ವಂದಿಸುತ ಕೈ ಮುಗಿದು ತೆರಳಲು |
ಬಂದರಾ ಜಯವಿಜಯರಲ್ಲಿಗೆ | ಕಂದಿಕೊಳುತಾ        ||೨||

ಬಂದು ಪಾದದಿ ವಂದಿಸಲ್ಕಾ | ನಂದದಿಂ ನುಡಿಸಿದನು ಶ್ರೀಹರಿ |
ಬಂದ ಕಾರಣ ಅರುಹಿರೆಂದನು | ಚಂದದಿಂದಾ         || ೩ ||

ರಾಗ ಯರಕಲಕಾಂಬೋಧಿ, ತ್ರಿವುಡೆತಾಳ

ಪಾಹಿ ಶ್ರೀವರ ಕೇಶವಾ | ನಾರಾಯಣ | ಪಾಹಿ ಶ್ರೀವರ ಮಾಧವಾ |
ಪಾಹಿ ಶ್ರೀಹರಿ ರಕ್ಷಿಸೆಮ್ಮನು | ಪಾಹಿ ಮುನಿವರರಿತ್ತ ಶಾಪವ |
ಪಾಹಿ ದೇವರದೇವ ನಿರತವೂ || ಪಾಹಿ ಶ್ರೀವರ ಕೇಶವಾ       || ೧ ||

ನಿನ್ನಾಜ್ಞೆಯೊಳು ಬಾಗಿಲಾ | ಈವರೆಗೆ ನಾವು | ಚೆನ್ನಾಗಿ ಕಾದಿರಲೂ |
ಸಣ್ಣಮುನಿವರರ್ ಬರಲು ದ್ವಾರವ | ನಿನ್ನ ಅಪ್ಪಣೆ ವಿನಹ  ಬಿಡದಿರೆ | ಮುನ್ನ
ವಳಪೊಗುವಾಗ ಕೋಲಿಲಿ | ಇನ್ನವರ ತಡೆಯಲ್ಕೆ ನುಡಿದರೂ || ಪಾಹಿ ಶ್ರೀವರಕೇಶವಾ     || ೨ ||

ದುರಿತಾ ಹೊದ್ದಲಿ ಯೆನುತಾ | ಭೂಮಿಯೊಳೀಗಾ | ದುರುಳತನದೊಳಿರುತಾ | ತರತರದಿ
ದೂಷಿಸುತ ಶಾಪವ | ನುರುತದಿ ಕೊಟ್ಟಹರು ನಮ್ಮನು | ತರಿದು ಶಾಪವ ನಮ್ಮ ಜನ್ಮವ |
ನಿರತ ಸುಖಿಸುವ ತೆರನ ಮಾಳ್ಪುದೂ || ಪಾಹಿ ಶ್ರೀವರ ಕೇಶವಾ         || ೩ ||

ರಾಗ ಕಾಂಬೋಧಿ, ಝಂಪೆತಾಳ

ಇಂದು ಬಹುಪರಿಯಿಂದ ವಂದಿಸುತ ಜಯವಿಜಯ |
ರಂದವನು ಕಂಡು ಮಿಗೆ ಯೆಂದನವರೊಡನೆ ||
ಇಂದು ಮುನಿವರರಿತ್ತ ಶಾಪ ಪುಸಿಯಾಗದೈ |
ಹೊಂದುವಿರಿ ಭೂಮಿಯೊಳುನಿಂದೆಗೊಳಗಾಗೀ        || ೧ ||

ಯೆನ್ನನೆ ಸ್ತುತಿಸುತಲಿ ಯೇಳ್ಜನ್ಮದೊಳು ಸುತ್ತಿ |
ಮುನ್ನ ಪಾದದ ಬಳಿಗೆ ಸನ್ನುತದಿ ಬಹದೂ ||
ಯೆನ್ನುವದ ಕೇಳಿ ಮನಮರುಗಿ ಘೋಳಿಡುತ್ತೆಂದರ್ |
ಚಿನ್ಮಯನೆ ಕೇಳೆಮ್ಮಬಿನ್ನಪವನಿಂದೂ         || ೨ ||

ದೇವ ನಿಮ್ಮಡಿ ಬಿಟ್ಟು ಆವಪರಿಯಂತರವು |
ಜೀವಿಸುವದೇತಕೀ ಭೂವಲಯದೊಳಗೇ ||
ಪಾವನಾಂಘ್ರಿಯ ತ್ಯಜಿಸಿ ಸೇವೆಗಯ್ಯದೆ ಬಾಳ್ವ |
ಜೀವಿಗಳು ನಾವಲ್ಲ ದೇವ ನೀನೆಮಗೇ        || ೩ ||

ಅಲ್ಲದಡೆ ಯೆನ್ನೊಡನೆ ನಿಲ್ಲಾದೆ ಮೂರ್ಜನ್ಮ |
ದಲ್ಲಿ ಪಗೆತನದಿಂದ ಮಲ್ಲಯುದ್ಧವನೂ ||
ಬುಲ್ಲವಣೆಯಿಂದೆಸಗೀ ಸಲ್ಲಲಿತ ಪಾದಬಳಿ |
ಯಲ್ಲಿ ಬಂದಪುದೆಂದು ಬಲ್ಲಿದನು ಪೇಳೇ      || ೪ ||

ಕಂದ ಪದ್ಯ

ನುಡಿಯ ಲಾಲಿಸಿ ಜಯವಿಜಯ |
ರೊಡೆಯನೆ ನೀನೆಮ್ಮ ನನುದಿನ ರಕ್ಷಿಪುದೆನುತಲಿ ||
ನಡತಂದರು ಭೂಲೋಕಕೆ |
ಬಿಡದಲೆ ಘೋಳಿಡುತಾಕ್ಷಣದೊಳಗವರಾಗಳ್          || ೧ ||

ವಾರ್ಧಿಕ್ಯ

ವಿದುರ ಕೇಳ್ಪೂರ್ವದಲಿ ದಿತಿಯಕಶ್ಯಪಮುನಿಯು |
ವಿಧಿವಶದಿ ಲಗ್ನಗಯ್ದಿರುತಿರಲು ಆ ದೆಸೆಗೆ |
ಮುದದಿ ಜಯವಿಜಯ ರೈತಂದು ದಿತಿಗರ್ಭವನು ಪದುಳದಿಂ ಪೊಕ್ಕರಂದೂ ||
ವಿಧ ವಿಧದಿ ಬೆಳದು ನವಮಾಸ ತುಂಬಲ್ಕಾಗ |
ಳುದುಭವಿಸೆ ಸುತರೀರ್ವರಾಕ್ಷಣವೆ ನಾಲ್ದೆಸೆಯು |
ಬೆದರಿತೇನೆಂಬೆ ಆ ಮದಮುಖರ ಕಾಣುತ್ತ ಸುದತಿ ಅಚ್ಚರಿಗೊಂಡಳೂ    || ೧ ||

ಕಂದ ಪದ್ಯ

ಘೋರಕಾರದಿ ಬೆಳದೀ |
ರ್ವರು ಭೋರೆನುತಾರ್ಭಟಿಸುತಾಗಳು ನಿಂದಿರೆ ||
ಕ್ರೂರತ್ವ ಕಂಡು ದಿತಿ ಬಂ |
ದೋರನೆ ಮುನಿಪತಿಗೊರದಳ್ ವಾರತೆಯಂ || ೧ ||

ರಾಗ ನೀಲಾಂಬರಿ, ರೂಪಕತಾಳ

ಯೇನಾನೆಂಬೆನು ಪತಿಯೆ | ಸೂನುಗಳಾಕೃತಿ ಬೇರೆ |
ಊನಾ ಬಂದುದು ವಿಧಿ | ತಾನೆಂತೂ ಬರದಾ         || ೧ ||

ಪುಟ್ಟಿದಾಕ್ಷಣದೊಳು | ದುಷ್ಟರಾಗುವರೆ ಈ |
ಕಷ್ಟಾವಾನೇನೆಂಬೆ | ಕೆಟ್ಟಿತಿನ್ನೇನೂ || ೨ ||

ತಿಂಬಾರೊ ಇವರೆನ್ನಾ | ಹಂಬಾಲು ತೀರಿತು |
ಮುಂಬರಿದೂ ಬರುತೀರ್ಪಾ | ರೆಂಬುದಿನ್ನೇನೂ        || ೩ ||

ರಾಗ ಭೈರವಿ, ಝಂಪೆತಾಳ

ನೋಡಿ ಮುನಿವರ ಸುತರಾ ಮಾಡದಿರು ದುಃಖವನು |
ಆದಿ ಫಲವೇನಿನ್ನೂ ಕೂಡಿಸಲಹುವದೂ ||
ವೋಡಿಬರುತಿಹಸುತರಾ ಗಾಢದಿಂ ಸಂತೈಸಿ |
ಆಡುತಿಹ ನುಡಿ ಕೇಳಿ ಪಾಡನರಿತವನೂ      || ೧ ||

ಹಿರಣ್ಯಕಶ್ಯಪನೆಂದೂ ಹಿರಿಯನಿಗೆ ಹೆಸರಿಟ್ಟೂ |
ಹಿರಣ್ಯಾಕ್ಷನೆಂದೂ ತಾ ಕಿರಿಯನನು ಕರೆದೂ ||
ಆರುಹಿದನು ಮಂತ್ರೋಪದೇಶ ಸಹ ಬಾಲರಿಗೆ |
ಪರಿಪರಿಯ ವಿದ್ಯೆಗಳ ತರಳರಿಗೆ ಪೇಳೀ      || ೨ ||

ಹರುಷದೊಳು ಮಾತೆಯೊಡಗೂಡಿ ನೀವಿರಬೇಕು |
ತೆರಳುವೆನು ವನಕೆ ನಾ ತಪವನಾಚರಿಸೆ ||
ಅರುಹುತಿಹ ಮುನಿಪದಕೆ ಶಿರಬಾಗಿ ಬಾಲಕರು |
ಥರವೆನಮ್ಮನ್ನು ಬಿಟ್ಟು ಪೊರಡುವದು ಪಿತನೇ          || ೩ ||

ಮಕ್ಕಳೆಂದುದಕೇಳಿ ಮುನಿಪಾ ಯೋಚಿಸುತಾಗ |
ತಕ್ಕುಪಾಯವ ಮಾಳ್ಪೆನೆಂದೂ ಆ ಕ್ಷಣದಿ ||
ಘಕ್ಕನೆ ಮನದೊಳಗೆ ಮಯನ ನೆನೆಯಲು ಆಗ |
ತಕ್ಕಸಮಯದಿ ಬಂದು ಯೆರಗಿದನು ಪದಕೇ || ೪ ||

ಭಾಮಿನಿ

ಯೆರಗಿದಸುರನ ಶಿರವನೆತ್ತುತ |
ಪರಸಿ ನುಡಿದನು ಪುರವನೀಕ್ಷಣ |
ತ್ವರಿತದಿಂ ರಚಿಸೆನಲು ಆಗಲೆ ರಚಿಸಿದನಂದೂ |
ತರದ ಮನೆಗಳಿಗೆ ಮೇಲು |
ಪ್ಪರಿಗೆ ಮೇಲ್ಗಟ್ಟುಗಳು ಸಹಿತಲೆ |
ಮೆರದಿರಲು ಮುನಿ ನೋಡಿ ಸುತರಿಗೆ ಅರುಹಿದನುಬಳಿಕಾ       || ೧ ||

ರಾಗ ಯರಕಲಕಾಂಬೋಧಿ, ಅಷ್ಟತಾಳ

ಬಾಲಕರೀಗ ಕೇಳುವದೂ | ಪುರ | ಪಾಲಕರಾಗಿ ಬಾಳುವದೂ ||
ಶೀಲಗುಣಗಳಿಂದ ಆಳುವದೀ | ಪರಿ | ಪಾಲಿಸಿ ಶೋಣಿತಪಟ್ಟಣಪುರವಿದೂ         || ೧ ||

ಯೆನುತಾ ಪಟ್ಟವಗಟ್ಟಿ ಪೊರಟೂ | ಪೋಗೆ |  ದನುಜೇಂದ್ರ ವೋಲಗಗೊಟ್ಟೂ ||
ಅನುಜಾನಕರದೆಂದ | ಮುನಿಯಾ ಕಟಾಕ್ಷದಿ |
ಇನಿತೂ ಕೈಗೂಡಿತು | ಮನದೊಳು ಯೋಚಿಸೇ       || ೨ ||

ಧುರಪರಾಕ್ರಮಿಯಾಗಿ ಪುರದೀ | ಸುಮ್ಮ |
ನಿರುವಾದು ಥರವಲ್ಲ ಧುರದೀ ||
ನರಲೋಕಾಧಿಪರನ್ನು ಗೆಲಿದು ನಂತರ ಸುರ |
ಪುರದಾಧಿಪತ್ಯವಾ ಕೈಕೊಂಡೂ ಮರೆಯಾದೇ         || ೩ ||

ಸುಮ್ಮಾನೆ ಕುಳಿತರೆ ಮುಂದೆ | ಪರ |
ಬ್ರಹ್ಮನ ತಪದಿಂದ ಇಂದೇ ||
ವಮ್ಮನದಿಂದಲಿ ವಲಿಸಿಬೇಕಾದಿಷ್ಟ |
ಗಮ್ಮಾನೆ ಪಡಕೊಂಡು | ದಿಮ್ಮಾನೆ ನಾವು ಮುಂದೇ  || ೪ ||

ನೆನಸಿದಂತೆಸಗಬೇಕೆನು ತಾ | ಪೇಳಿ |
ಅನುಜಾ ಸಹಿತ ಪೊರಮಡುತಾ ||
ಘನವಾದ ಕಾಂತಾರವನದಾ ಮಧ್ಯದಿ ಬಂದೂ |
ಹನನಾಗೈದರು ಹಶುತೃಷೆ ನಿದ್ರೆಸಹಿತಾಲೀ  || ೫ ||

ಬಿಟ್ಟು ತಪವಾ ಗೈವುತಂದೂ | ಕಣ್ಣ |
ದೃಷ್ಟಿಸಿ ನೋಡದೆನಿಂದೂ ||
ನಿಟ್ಟುಸುರಡಗಿಸಿ | ಸೃಷ್ಟಿಕರ್ತನ ಕಾಂಬಾ |
ಅಟ್ಟಹಾಸದಿ ಮನ | ಮುಟ್ಟಿ ಭಜಿಸುತಿರೇ     || ೬ ||