ಭಾಮಿನಿ

ವ್ಯಾಘ್ರ ಮಡಿದುದ ಕಂಡು ದಾನವ |
ಉಗ್ರ ಕೋಪವನಾಂತು ಸಿಂಹನ |
ಶೀಘ್ರದಲಿ ನೆನೆಯಲ್ಕೆ ಸಿಂಹನು ಭೋರ್ಗುಡಿಸುತಂದೂ ||
ದೀರ್ಘ ಸ್ವರದಿಂದೊರವುತೈತಹ |
ಮಾರ್ಗವನು ಕಾಣುತ್ತ ವರಹನು |
ಅರ್ಗಳದಿ ಇದಿರಾಗಿ ನುಡಿದನು ಭರ್ಗನಂದದಲೀ      || ೧ ||

ರಾಗ ಮಾರವಿ, ಏಕತಾಳ

ಇದಿರಿಗೆ ಬಂದ ವರಹನ ಕಾಣುತ | ಮುದಮುಖತನದಿಂದಾ ||
ವಧಿಸುವೆ ನಿನ್ನನೆನುತ್ತಲಿ ಸಿಂಹನು | ಅದುಭುತಸ್ವರದಿಂದಾ     || ೧ ||

ಗರ್ಜಿಸಿ ನುಡಿದುದ ಕೇಳುತ ವರಹನು | ಮೂರ್ಜಗ ನಡುಗುತಿರೇ ||
ಗರ್ಜನೆಯೊಳಗೇನೆಂಬೆನು ಸಿಂಹನ | ಜಜ್ಜರಿ ಮಾಡುತಿರೇ      || ೨ ||

ಉಬ್ಬಿದ ಕೋಪಾಟೋಪದಿ ಸಿಂಹನು | ಅಬ್ಬರಿಸುತಲೆಂದಾ ||
ಬೊಬ್ಬೆಗೆ ಬೆದರುವನಲ್ಲವು ನಿನ್ನಯ | ಅಬ್ಬರ ಸಾಕೆಂದಾ         || ೩ ||

ಯಾತಕೆ ಬಂದಿಹೆ ಸೋತಿಹ ದೈತ್ಯನ | ಮಾತನು ಕೇಳುತಲೀ ||
ಖಾತಿಯ ಬಿಡು ನೀ ಪೋಗದೆ ಉಳಿದರೆ | ಖ್ಯಾತಿಯು ಕಳೆದಿಲ್ಲೀ || ೪ ||

ಬಡಸೂಕರ ನೀ ನಡೆ ನಡೆ ಸುಮ್ಮನೆ | ಒಡೆಯನು ನಾ ನಿನಗೇ ||
ನಡೆಯದೆ ನೀ ಮುಂದಡಿಯಿಡೆ ನಿನ್ನನು | ಇಡಿ ನುಂಗುವೆ ಕಡೆಗೇ         || ೫ ||

ಮೃಗರಾಜನು ನೀನೆಂಬುವಹಂಕೃತಿ | ಬಗೆಯದೆ ಮನಸಿನಲೀ ||
ತೆಗೆದಿಡು ನಿನ್ನಯ ವಡಲನು ಕೇಳೆಲೊ | ಬಗಿವೆನು ನಿಮಿಷದಲೀ         || ೬ ||

ಮಾಯದ ಸಿಂಹನು ಬಾಯನು ಕಳವುತ | ಭೋಯೆನ್ನುತ ಬರಲೂ ||
ಭಾವಜಪಿತ ತಾ ಕಾಣುತ ಚಕ್ರದಿ | ಕಾಯವ ಕೆಡದಿರಲೂ        || ೭ ||

ವಾರ್ಧಿಕ್ಯ

ವಿದುರ ಕೇಳೇನೆಂಬೆ ಅದುಭುತದ ಮಾಯೆಯಂ |
ಕದನಕಿದಿರಾಗಿ ಪುಲಿ ಕರಡಿ ಶಾರ್ದೂಲಾದಿ |
ವಿಧವಿಧದ ಮೃಗ ಪಕ್ಷಿ ಹಾವುಗಳು ಬರುತಿರಲು ಇದನರಿತು ಕಂಡು ಬೇಗಾ ||
ತುದಿಗಾಲಮಂ ತೋರ್ಪೆನೆಂದು ನಿಶ್ಚೈಸುತ್ತ |
ಮದಮುಖನ ಮಾಯೆಯಂ ಮುದದಿ ಪರಿಹರಿಸೆಂದು |
ವದಗಿನಿಂ ಚಕ್ರಕಪ್ಪಣೆಯಿತ್ತು ಕಳುಹಿದಂ ಪದುಳದಿಂ ಸಂಹರಿಸಿದಾ       || ೧ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ದಾನವನ ಮಾಯೆಗಳ ಚಕ್ರವು | ಹಾನಿಗೈದುದ ಕಂಡು ತಾನಿ ||
ನ್ನೇನು ಗೈವುದೆನುತ್ತ ಮನದನು | ಮಾನದಿಂದಾ      || ೧ ||

ಭೂಮಿಪಾಲರನೆಲ್ಲ ನಿಮಿಷದಿ | ಹೋಮಿಸಿದೆ ಸುರಲೋಕಪಾಲರ ||
ಸೀಮೆಯಿಂದೋಡಿಸುತ ಭೂಮಿನಿ | ರ್ನಾಗೈದೇ       || ೨ ||

ಹಂದಿರೂಪಿನ ವೈರಿಯೊಳು ನಾ | ನಿಂದು ಸೋತರೆಯೆನ್ನ ಬಾಳ್ವೆಯು |
ಹೊಂದಿತಪಕೀರ್ತಿಯೊಳು ನಾ | ನೊಂದುಭಾರೀ      || ೩ ||

ಧುರವೆಸಗಿ ಸೂಕರನನಿಲ್ಲಿಯೆ | ಹರಣಗೊಂಬೆನೆನುತ್ತ ರೌದ್ರದೊ |
ಳುರ ತರದ ಗದೆಗೊಂಡು ಪೊರಟನು | ದುರುಳ ದೈತ್ಯಾ        || ೪ ||

ರಾಗ ಪಂಚಾಗತಿ, ಮಟ್ಟೆತಾಳ

ಬರುವ ದೈತ್ಯನಾ | ಕಂಡು ವರಹನೂ ||
ಉರುತರ ಖತಿಯನಾಂತು | ಬರುತಲೆಂದನೂ        || ೧ ||

ಬಣಗು ದೈತ್ಯನೇ ಗಣನೆಯಿಲ್ಲದೇ ||
ರಣಕೆ ಬಂದುದ್ಯಾಕೆ ಬಿದ್ದ | ಹೆಣನ ತಿನ್ನದೇ || || ೨ ||

ನರನೃಪಾಲರಾ | ಸುರಪ ಮುಖ್ಯರಾ ||
ಧುರದಿ ಗೆಲ್ದ ಗರ್ವವನ್ನು | ಬರಿಸು ಈಕ್ಷಣಾ   || ೩ ||

ಉರವ ಬಗಿವೆನೂ | ಕರುಳ ತೆಗಿವೆನೂ ||
ಪುರಕೆ ನಿನ್ನ | ತೆರಳಿಸೂವೆನೂ      || ೪ ||

ರಾಗ ಶಂಕರಾಭರಣ, ಮಟ್ಟೆತಾಳ

ಎಂದ ನುಡಿಯ ಕೇಳಿ ದೈತ್ಯ | ನೊಂದು ಕೋಪತಾಳಿ ಪೇಳ್ದ ||
ಹಂದಿ ನಿನ್ನ  ದೇಹವನ್ನು | ವಂದೆ ಕ್ಷಣದಲೀ   || ೧ ||

ಕೊಂದು ಕಳೆದು ನಿನ್ನ ಪುರಕೆ | ಇಂದು ನಾನು ಅರಸ ನೋಡು ||
ಯೆಂದೆನುತ್ತ ಮುಷ್ಟಿಯೊಳಗೆ | ವಂದು ಬಡಿಯಲೂ     || ೨ ||

ಹತಿಯ ತಾಳಿಕೊಂಡು ವರಹ | ಖತಿಯ ಗೊಂಡು ದೈತ್ಯನುರವ |
ಅತುಳಸತ್ವದಿಂದ ದಾಡೆ | ಮಸದು ಸೀಳಲೂ          || ೩ ||

ಘಾಯ ವಡದು ದೈತ್ಯನಾಗ | ಬಾಯ ಬಿಟ್ಟುವದರಿ ಕೊಳುತ ||
ಸಾಯೆನುತ್ತ ಗದೆಯೊಳಾಗ | ನೋಯಿಸೀದನು        || ೪ ||

ಭಾಮಿನಿ

ಇನಿತು ನಾನಾ ತೆರದಿ ಯುದ್ಧವ |
ನನುಕರಿಸುತಿರಲೋರ್ವನೋರ್ವರು |
ಘನತರದ ಕಡುಕೋಪದಿಂದಲಿ ಕನಲುತಾರ್ಭಟಿಸೀ ||
ಅನಿಮಿಷರು ಸಹಿತಾಗಿ ಅಜಿತಾ |
ಮನದಿ ತೋಷವ ತಾಳುತೊಯ್ಯನೆ |
ಘನ ವಿಮಾನದಿ ಕುಳಿತು ಜಯ ಜಯವೆನುತ ಪೊಗಳಿದರೂ    || ೧ ||

ರಾಗ ಮಾರವಿ, ಏಕತಾಳ

ಇತ್ತಲು ಸರಿಸರಿ ಯುದ್ಧವ ಗೈವುತ | ಚಿತ್ತದಿ ಚಿನುಮಯನು ||
ಮತ್ತೀ ದೈತ್ಯನ ಸಮರದಿ ಗೆಲುವರೆ | ಯಿತ್ತಿಹ ಅಜವರವಾ      || ೧ ||

ಅದರಿಂದೀತನು ಅದುಭುತ ದೋರುವ | ಕದನಕೆ ಚಕ್ರವನೂ ||
ಮುದದಿಂ ಕಳುಹುವೆನೆನುತಾಕ್ಷಣದಲಿ | ವದಗಿಲಿ ಕಳುಹಿದನು   || ೨ ||

ಬಾಯನು ಕಳೆವುತ ಭೋಯನುತಭ್ರದಿ | ಮಾಯಕದಿಂ ಬರುವ ||
ಆಯವ ನೋಡುತದಾನವನಾಕ್ಷಣ | ಘೇಯೆನುತಿಂತೆಂದಾ      || ೩ ||

ಸೂಕರನೊಳು ನಾ ಕಾದುವ ಸಮಯಕೆ | ಭೀಕರಿಸುತಯಿಂದೂ ||
ಬಾಕಳವುತ್ತೀಚಕ್ರವು ಬರುವದಿ |  ದ್ಯಾಕೆನುವದನರಿಯೆ || ೪ ||

ಮನದೊಳು ಯೋಚಿಸಿ ತಿಳಿದನು ಹಿಂದಿನ | ಜನುಮದ ಪರಿಯನ್ನೂ  ||
ಘನರೌದ್ರವ ತಾ ಬಿಟ್ಟಿಂತೆಂದನು | ಚಿನುಮಯನನು ನೆನದು   || ೫ ||

ರಾಗ ಮಧುಮಾಧವಿ, ಏಕತಾಳ

ಏನಿದಚ್ಚರಿಯಿದು ಸೂಕರನೊಡನೆ |
ನಾನು ಯುದ್ಧವ ಗೈವ ಸಮಯದಿ ನೀನೆ ||
ಪ್ರಾಣಗೊಂಬುವೆನೆಂದು ಈ ಪರಿಯೊಳಗೆ |
ನೀನೆ ಬಂದೆಯ ಬಾಯಿ ಕಳೆದು ಈವರೆಗೆ    || ೧ ||

ಸೂಕರನೊಳು ಧುರಗೈದರೆ ನೀನೂ |
ವ್ಯಾಕುಲಗೊಳುತಲಿ ಬಂದೆಯಾ ನೀನೂ ||
ಸಾಕಿನ್ನು ಕೊಲಬೇಡ ನೀನಿಂದುಯನ್ನ |
ಸೋಕದಿರೈ ಮುಂದೆ | ವೈರಿಯಾದಿವನಾ    || ೨ ||

ನಾಶವ ಗೈದು ನೀ ತೆರಳಬೇಕಿನ್ನು |
ವಾಸುದೇವನ ಕರಚಕ್ರವೆ ನೀನೂ ||
ದ್ವೇಷ ಸಾಧಿಸದಿರು ಯನ್ನಲಿಯಿಂದೂ |
ದೋಷಿಯು ನಾನಲ್ಲ ಕೇಳ್ದಯಾಸಿಂಧೂ       || ೩ ||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಇಂತು ನುತಿ ಗೈಯಲ್ಕೆ ಚಕ್ರವು | ನಿಂತುದಲ್ಲಿಯೆ ಕಂಡು ದೈತ್ಯನು ||
ಮುಂತೆಸವ ವರಹನನು ಕಾಣುತ | ಚಿಂತಿಸುತಲೀ     || ೧ ||

ಆದಿನಾರಾಯಣನೆ ಈತನು | ಸಾಧಿಸಿದೆ ವೈರತ್ವದಿಂದಲಿ ||
ಕಾದಿದಡೆ ಜಯವಹುದೆ ಇವನಲಿ | ಕ್ರೋಧಗೊಂಡೂ   || ೨ ||

ಇನಿತನೆಲ್ಲವ ತಂದು ಮನದೊಳು | ದನುಜ ಗರ್ವವ ಬಿಟ್ಟು ಮುಂದಿಹ ||
ಚಿನುಮಯಗೆ ಸಾಷ್ಟಾಂಗವೆರಗಿದ | ವಿನಯದಿಂದಾ    || ೩ ||

ಆದಿಮೂರುತಿಯನ್ನು ಕಾಣುತ | ಸಾದರದಿ ಮಗುಳೆರಗಿ ಯೆನ್ನಲಿ ||
ಖೇದಗೊಳ್ಳದೆ ರಕ್ಷಿಸೆಂದನು | ಮೋದದಿಂದಾ || ೪ ||

ಮೂಢ ಬುದ್ಧಿಗಳಿಂದ ನಾವೈ | ಮಾಡಿದಪರಾಧಗಳ ಕ್ಷಮಿಸುತ ||
ಬೇಡಿದಿಂದದಿ ಪಾದಸೇವೆಗೆ | ಕೂಡಿಸೆನ್ನಾ    || ೫ ||

ರಾಗ ಕಾಂಬೋಧಿ, ಅಷ್ಟತಾಳ

ದನುಜ ನೀನೆಂಬುದೇನು | ನೀಯನ್ನನೂ |
ಮನ ಒಂದ ತೆರದಿ ಇನ್ನು ||
ಘನ ಮದೋನ್ಮತ್ತದಿ | ಹನನ ಮಾಡುವೆನೆಂದು |
ಅನುವಿಂದ ನುಡಿದೆಯಲ್ಲಾ || ಮತ್ತಿದನೆಲ್ಲಾ   || ೧ ||

ಹಂದಿಯೆನುತ ಪೇಳಿದೆ | ಬಹು ಪರಿಯಿಂದ |
ನಿಂದಿಸಿ ಮಾತಾಡಿದೆ ||
ಇಂದು ನೀ ಯೆನ್ನೊಳು | ಧುರವನ್ನು ಗೈಯ್ಯದೆ |
ಬಂದು ಈ ಪರಿಯೊಳು ನಿಂದಿಹೆ ಯಾಕಿಲ್ಲಿ || ನೀಮತ್ತಿಲ್ಲಿ         || ೨ ||

ಮದಗರ್ವದಿಂದ ನೀನೂ | ಭೂಲೋಕದಿ |
ಕದನ ಗೈದರಸರನ್ನು ಮದಮುಖತನದಿಂದ | ವಧಿಸುತ್ತ ಲೋಕವಾ |
ವಿಧದಿಂದ ಕೆಡಿಸಿದೆಯಾ || ನೀನೆಲ್ಲವಾ        || ೩ ||

ಸುರದಿಕ್ಪಾಲರನೂ | ಮತ್ತಲ್ಲಿಹ | ಗರುಡಗಂಧರ್ವರನ್ನು ||
ಪೊರಡಿಸಿ ಧರಣಿಯು ಕೈಸೆರೆ | ಪಿಡಿದಿಲ್ಲಿ ತಂದಂತ |
ಧುರಪರಾಕ್ರಮಿ ನೀನೂ || ಈ ಪರಿಯನ್ನು     || ೪ ||

ಇಷ್ಟು ಸಾಹಸದಿಂದಲಿ || ತ್ರೈಭುವನಾವಾ | ಪಟ್ಟದರಸನೆಂದೆಲ್ಲಿ ||
ಅಟ್ಟಹಾಸದಿ ಎನಗಿದಿರಾಗಿಧುರಗೈವ | ದಿಟ್ಟರ‍್ಯಾರೆನುತಲಿ |
ಪುಡುಕುತ್ತ ಬಂದಿಲ್ಲಿ || ಸಮ್ಮುಖದಲ್ಲಿ || ೫ ||

ಧುರವ ಗೈದೀವರೆಗೆ | ಸುಮ್ಮನೆಯಾಕೆ | ಮರುಗುವೆ ಪೇಳೆನಗೆ ||
ಧುರಪರಾಕ್ರಮವೆತ್ತ | ಅಡಗಿ ಪೋದುದು ಈಗ |
ಸರಿಯಾಗಿಕಾದು ನೀ ಹರಣದಾಸೆಗಳ್ಯಾಕೆ || ಎರಗುವದ್ಯಾಕೆ    || ೬ ||

ಭಾಮಿನಿ

ಜೀಯ ತಪ್ಪನು ಪಾಲಿಸುತ ನೀ |
ನೋಯದೆನ್ನನು ಚಕ್ರಕಾಹುತಿ |
ಕಾವರಿಸು ಈ ದೇಹ ಬೇಗದಿ ಸಾಯಗೊಳಿಸೆಂದಾ ||
ದೇವ ದೇವರ ದೇವ ಚಕ್ರದಿ |
ಹೇಯವನು ಕತ್ತರಿಸಿ ಕಂಠವ |
ಘೇಯೆನುತ ದಾನವನ ದೇಹವು ಬಿದ್ದುದಾಕ್ಷಣಕೇ       || ೧ ||

ಕಂದ ಪದ್ಯ

ಇಂತೀಪರಿಯೊಳು ದೈತ್ಯನ |
ನಿಂತು ಗಲವನಂತಾತ್ಮನ ಚಕ್ರವರಿಯಲೂ ||
ಚಿಂತೆಯ ಬಿಟ್ಟಾಗಮರರು |
ಇಂತೆಂದರುಹಿದರು ನಾರಾಯಣನೊಡನಾಗಾ         || ೧ ||

ರಾಗ ಮಾಧುಮಾಧವಿ, ಏಕತಾಳ

ದೇವರ ದೇವನೆ | ನಮ್ಮಯ ದುಃಖ |
ಕಾವವರಿಲ್ಲದೆ ದನುಜನ ಸೊಕ್ಕ ||
ನೀವಡಗಿಸಿದ ಮೇಲಿನ್ನೇನು ನಮಗೆ |
ನೋವೆಲ್ಲ ಪೋದುದೆಂದನುತಲಿಯೆರಗೆ       || ೧ ||

ವಂದಿಸಿ ನುತಿಸಿದ ಸುರರನ್ನು ಬೇಗ |
ಚಂದದೊಳೆತ್ತಿದ ಶಿರವನು ಆಗಾ ||
ಹೊಂದಿ ಹೋದನು ನಿಮ್ಮ ದಣಿಸಿದ ದುರುಳಾ |
ಸಂದೇಹ ಮಾಡದೆ ಪುರಕಾಗಿ ತೆರಳಾ        || ೨ ||

ಮೊದಲಿನಂದದಿ ನಿಮ್ಮ ಪುರವಾಧಿಪತ್ಯಾ |
ವಿಧದಿಂದ ಗೈವುದಲ್ಲದೆ ನಿಮ್ಮ  ಸತ್ಯಾ ||
ವದಗಿ ಕೈಗೂಡಿತು ಪೋಗಿರಿ ನಿತ್ಯಾ |
ಮುದವನ್ನೆ ತಾಳಿಯೆ ಸುಖಿಸುದಗತ್ಯಾ       || ೩ ||

ಆದಿಮೂರುತಿಯೆಂದ ನುಡಿ ಕೇಳಿ ಸುರಪಾ |
ಏ ದಯಾಂಬುಧಿ ನಿನ್ನ ಸೇವೆಯೊಳಿರ್ಪಾ ||
ಸಾಧು ಸಜ್ಜನರನ್ನು ದುರುಳನಂತಿರ್ಪಾ |
ಬಾಧಿಸುವರೆ ದಿನದಿನಯೊಳು ಬರ್ಪಾ        || ೪ ||

ದೇವ ನೀನೋರ್ವನಲ್ಲದೆ ನಮಗಿನ್ನೂ |
ಕಾವ ಕರ್ತನು ಬೇರೆ ಯಾರೆಂಬುದನ್ನೂ ||
ನಾವರಿತಿಹೆವಲ್ಲಧನ್ಯರ‍್ಯಾರಿದನೂ |
ಭಾಸವಿದಿರರು ಯೆನ್ನುತ ಯೆರಗಿದನೂ       || ೫ ||

ಧರಣೀಯಾ ಸಂತೈಸಿ ಮೊದಲಿನಂದದಲಿ |
ಇರುವಂತೆಸಗಬೇಕೆನುತಾ ಪಾದದಲಿ ||
ಅರುಹೀದನು ಸುರಪಾಗೆ ತೆರಳು ಶೀಘ್ರದಲಿ |
ಸರಿಯಾಗಿ ಇರುವಂತೆ ಗೈದೆ ಬೇಗದಲೀ     || ೬ ||

ಪಾದಕೊಂದಿಸುತೆಲ್ಲ ಪೊರಟಾರೂ ತಮ್ಮಾ |
ಹಾದಿಯ ಹಿಡಿದೆಲ್ಲಾ ಪೋಗಲು ಬ್ರಹ್ಮಾ ||
ಆದಿಮಾರುತಿಗೆ ವಂದಿಸುತೆಂದ ನಿಮ್ಮಾ |
ಪಾದದ ಆಜ್ಞೆಯಂತೆಸಗೂವಾದೆಮ್ಮಾ        || ೭ ||

ಯೆನಗೀದೆಲ್ಲವ ನೀನು ಪೇಳುವಾದೇನೂ |
ಜನನಾಗೈಯುವಾ ಕಾರ್ಯದಲ್ಲಿರು ನೀನೂ ||
ಮನೆಗೆ ತೆರಳು ಬೇಗ ವಿನಯಾದಿ ಇನ್ನೂ |
ಯೆನಲೂ ಕೇಳುತ ಅಜಪೊರಟು ಪೋದುದನೂ        || ೮ ||

ಭಾಮಿನಿ

ನೋಡಿ ಧರಣಿಯ ಮೊದಲಿನಂದದಿ |
ಮಾಡಿ ಸರ್ವರ ಸುಖದೊಳಿಹುದೆನು |
ತಾಡಿ ನಾರಾಯಣನು ಮಡದಿಯ ಗೂಡಿಸಂತಸದೀ ||
ಆಡಿ ವೈಕುಂಠದಲಿ ವಾಸವ |
ಮಾಡಿರುವ ಕಥೆಯನ್ನು ವಿದುರನು |
ಬೇಡೆ ಮೈತ್ರೇಯನೊಳು ಪೇಳಿದ | ಪಾಡನೆಲ್ಲವನೂ  || ೧ ||

ಬರೆದೆ ನಾನಿದ ಯಕ್ಷಗಾನದಿ | ಪರಿಪರಿಯಲಯ | ತಾಳಭೇದವ |
ಅರಿಯೆ ನಾನೊಂದರನು ಜರೆಯದೆ ಕರುಣದಿಂದಿದರಾ ||
ಮೆರಸುವದು ಬಲ್ಲವರು ಮುದದಲಿ | ಪರಿಪರಿಯ ವಿಧದಿಂದ ನಿಮ್ಮನು |
ಪೊರೆವ ಲಕ್ಷ್ಮೀರಮಣನೆನುತಲಿವರದೆ ನಾನಿಂದೂ     || ೨ ||

ಮಂಗಲಪದ
ಮತ್ಸ್ಯವತಾರವ ತಾಳ್ದ ದೇವನೀಗೆ | ಪೃಥ್ವಿ ಪಾಲಿಸಿದಾತಗೆ ||
ನಿತ್ಯ ನಿರುಪಮ ನಿರ್ವಿಕಾರಗೆ | ವತ್ಸನನು ಕ್ವಾದೀರ್ದಗೆ ||
ಮಂಗಲಂ ಜಯ ಜಯತು ಜಯ ಜಯ ಮಂಗಲಂ ಹರಿಮೂರ್ತಿಗೇ      || ೧ ||

ಕೂರ್ಮವತಾರವ ತಾಳ್ದ ಮಹಾತ್ಮಗೆ | ಸಾರ್ವಪದವಿಯನಿತ್ತಗೆ ||
ಮಾರ್ಮಲತು ಸುರಪಾಲ ಭೂಮಿಗೆ | ನೀರ‍್ಯುರಿಯೆ ಗಿರಿ ಬೆನ್ನೊಳಾಂತಗೆ |
ಮಂಗಲಂ ಜಯ ಜಯತು ಜಯ ಜಯ ಮಂಗಲಂ ಹರಿಮೂರ್ತಿಗೇ      || ೨ ||

ವರಹವತಾರವ ತಾಳ್ದ ಪುರಷಗೆ | ಧರಣಿ ತಂದಿಹ ವರಹಗೆ ||
ವರದಹಮ್ಮಿನ ದಾನವೇಂದ್ರಗೆ | ಭರದಿ ಸೀಳಿದ ದೇವಗೆ ||
ಮಂಗಲಂ ಜಯ ಜಯತು ಜಯ ಜಯ ಮಂಗಲಂ ರಾಮಕೃಷ್ಣಗೇ        || ೩ ||

ಕುಂಜಾಲು ರಾಮಕೃಷ್ಣಯ್ಯನವರಿಂದ ವಿರಚಿತವಾದ
ಯಕ್ಷಗಾನ ಹಿರಣ್ಯಾಕ್ಷನ ವಧೆಯು
ಸಂಪೂರ್ಣವು.