೫. ಯಥಾಸಂಖ್ಯ
ವ್ಯತಿರೇಕ-ವಿಕಲ್ಪಮನನುಗತ-ಕ್ರಮ-ವಿಶೇಷ-ಗುಣ-ಕೃತಾಂತಮನಱಗೀ |
ಮತದಿಂ ಯಥಾಸಂಖ್ಯ-ಪ್ರತೀತಿಯಂ ತೋರ್ಪೆನನ್ವಿತಾನನ್ವಿತಮಂ ||೪೯||
i) ಅನುಗತ ಅಥವಾ ಅನ್ವಿತ
ಅಳಕಾನನ-ನಯನಂಗಳಿನಳಿ-ನಳಿನೋತ್ಪಲ-ವಿಳಾಸಮಂ ಗೆಲ್ದುದಱಂ |
ಕಳಹಂಸ-ಲೀಲ-ಗಮನೇ ಕೊಳನಂ ನೀಂ ಪೋಲ್ತೆಯೆಂಬುದನುಗತಮಕ್ಕುಂ ||೫೦||
ii) ಅನನ್ವಿತ
ನಳಿನೋತ್ಪಳಾಳಿ-ರುಚಿಗಳನಳಕ-ವಿಲೋಚನ-ಮುಖಂಗಳಿ[1]ೞ್ಕುಳಿಗೊಳೆ ನೀಂ |
ತಿಳಿಗೊಳನನೆ ಪೋಲ್ತರ್ದುಂ ತಿಳಿಯದುದೇಕೆಂಬುದಿಂತನನ್ವಯಮದಱೊಳ್ ||೫೧||
೪೯. ಮೇಲೆ ಹೇಳಿದ ಕ್ರಮದಲ್ಲಿ ವ್ಯತಿರೇಕದ ಪ್ರಭೇದಗಳನ್ನೂ ಒಂದೊಂದರ ವಿಶೇಷ ಗುಣವನ್ನೂ ಅರಿಯಬೇಕು. ಇನ್ನುಮುಂದೆ ‘ಅನ್ವಿತ’ ಮತ್ತು ‘ಅನನ್ವಿತ’ ಎಂಬ ‘ಯಥಾಸಂಖ್ಯ’ದ ಪ್ರತೀತಿಯನ್ನು ವಿವರಿಸುವೆನು-
೫೦. *‘ಅನುಗತ’ ಯಥಾಸಂಖ್ಯಕ್ಕೆ ಉದಾಹರಣೆ-ಇದು ಕೆಲವೊಂದು ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಬಿಟ್ಟರೆ ಈಗಾಗಲೇ ‘ಯಥಾಸಂಖ್ಯ’ಕ್ಕೆ ಉದಾಹರಿಸಿರುವ ‘ಅಳಿನಳಿನೋತ್ಪಳಂ’ (M-೮೯) ಎಂಬ ಲಕ್ಷ್ಯವೇ ಆಗಿದೆ.* ಕಳಹಂಸಯಾನೆಯೆ! (ನಿನ್ನ) ಕೂದಲು, ಮುಖ ಮತ್ತು ನೇತ್ರಗಳಿಂದ, ನೀನು ದುಂಬಿ, ಕಮಲ ಮತ್ತು ಕನ್ನೈದಿಲೆಗಳ ವಿಲಾಸವನ್ನು ಜಯಿಸುವುದರಿಂದ ನೀನು ದುಂಬಿ, ಕಮಲ ಮತ್ತು ಕನ್ನೈದಿಲೆಗಳ ವಿಲಾಸವನ್ನು ಜಯಿಸುವುದರಿಂದ ನೀನು ಕೊಳವನ್ನು ಹೋಲುತ್ತಿರುವೆ’ ಎಂಬುದು ‘ಅನುಗತ’ ಅಥವಾ ಅನ್ವಿತವಾದ ಯತಾಸಂಖ್ಯ’ *ಏಕೆಂದರೆ ಕೂದಲು-ದುಂಬಿ, ಮುಖ-ಕಮಲ ನೇತ್ರ-ಕನೈದಿಲೆ ಎಂಬ ಅನುಕ್ರಮಾನುಸಾರ ಮೊದಲು ಹೇಳಿದ ಮೂರೂ ಅನಂತರ ಹೇಳಿದ ಮೂರರೊಪಡನೆ ಅನ್ವಯಿಸುತ್ತಿವೆ*.
೫೧. *ಈ ಅನುಕ್ರಮ ವ್ಯತ್ಯಸ್ತ ಎಂದರೆ ತಿರುಗುಮುರುಗಾಗಿ ಅನ್ವಯಿಸುವ ಹಾಗಿದ್ದರೆ, ಅದು ‘ಅನನುಗತ’ ಯಥಾಸಂಖ್ಯ. ಅದಕ್ಕೆ ಉದಾಹರಣೆ-‘ಕಮಲ, ಕನ್ನೈದಿಲೆ, ದುಂಬಿಗಳ ಕಾಂತಿಗಳನ್ನು (ನಿನ್ನ) ಕೂದಲು, ಕಣ್ಣು ಮತ್ತು ಮುಖಗಳು ಕೀಳುಮಾಡುತ್ತಿರುವ ಕಾರಣ, ನೀನು ಕೊಳವನ್ನು ಹೋಲುತ್ತಿದ್ದರೂ ಕೂಡ, ಅದೇಕೆನ್ನುವುದು ತಿಳಿಯುತ್ತಿಲ್ಲ’ ಎಂಬುದು ‘ಅನನ್ವಿತ’ ಯಥಾಸಂಖ್ಯ. ಇಲ್ಲಿ ಮೊದಲು ಹೇಳಿದ ಕ್ರಮಕ್ಕೆ (೧, ೨, ೩) ವಿರುದ್ಧವಾದ ಕ್ರಮದಲ್ಲಿ (೩, ೨, ೧) ನಿರ್ದಿಷ್ಟ ವಿಷಯಗಳನ್ನು ಅನ್ವಯಿಸಬೇಕಾಗಿ ಬರುವುದರಿಂದ ಯಥಾಸಂಖ್ಯ ‘ಅನನುಗತ’ ಅಥವಾ ‘ಅನನ್ವಿತ’ವೆನಿಸುವುದು.*
ನಿಗದಿತ-ಯಥಾಸಂಖ್ಯಾನುಗತ-ವ್ಯತಿರೇಕ-ಯುಗಳ-ಲಕ್ಷ್ಯಮಿವಕ್ಕುಂ |
ಬಗೆಗಾ ದೀಪಕದ ವಿಭಾಗ-ಗತಿಯನೀ ಭೇದ-ಲಕ್ಷ್ಯ-ಲಕ್ಷಣ-ಯುಗದಿಂ ||೫೨||
೬. ದೀಪಕ
ಜಾತಿ-ಕ್ರಿಯಾ-ಗುಣ-ದ್ರವ್ಯಾತಿಶಯ-ವಿಶೇಷಿಯಪ್ಪ ಪದಮೊರ್ಬೞ ನಿಂ- |
ದೀ ತೆಱದಿನುೞದ ವಾ[2]ಕ್ಯಸಮೇತಿಗಮುಪಕಾರ-ಯೋಗ್ಯ-ದೀಪಕಮುಕ್ಕುಂ ||೫೩||
iii) ಜಾತ್ಯನುಗತ–ಆದಿದೀಪಕ
ಮಲಯಾನಿಲನೊಯ್ಯನೆ ಪಣ್ತೆಲೆಯಂ ನೆಲೆಯಿಂ ಕೞಲ್ಚುಗುಂ ವಿ[3]ಟಪಿಗಳೊಳ್ |
ವಿಲಸಿತ-ಕಳಿಕಾಕುಳ-ಕೋಮಲಾಂಕುರಮನಂತೆ ಪಡೆಗುಮವಱೆಡೆಯೆಡೆಯೊಳ್ ||೫೪||
೫೨. ಮೇಲೆ ಯಥಾಸಂಖ್ಯದ ಅನುಗತ ಮತ್ತು ವ್ಯತಿರಿಕ್ತ (=ಅನನುಗತ) ಎಂಬ ಎರಡು ಪ್ರಭೇದಗಳಿಗೂ ಲಕ್ಷ್ಯ ಕೊಡಲಾಯಿತು. ಮುಂದೆ ಹೇಳುವಂತೆ ‘ದೀಪಕ’ದ ಲಕ್ಷ್ಯಪ್ರಭೇದಗಳನ್ನೂ ಲಕ್ಷಣವನ್ನೂ ಅರಿಯುವುದು-
೫೩. ಜಾತಿ, ಕ್ರಿಯೆ, ಗುಣ, ದ್ರವ್ಯ-ಇವುಗಳ ವಾಚಕವಾದ ಪದವು (ವಾಕ್ಯದ) ಒಂದೆಡೆಯಲ್ಲಿ ಮಾತ್ರ ಪ್ರಯುಕ್ತವಾಗಿದ್ದರೂ ಇಡಿಯ ವಾಕ್ಯಸಮುದಾಯಕ್ಕೆಲ್ಲ ಉಪಕಾರವಾಗಿದ್ದರೆ. ಅದು ‘ದೀಪಕ’ *ಹೋಲಿಸಿ-ದಂಡಿ, II-೯೭. ದೀಪಕವಾದ ಪದವು ಪದ್ಯದ ಆದಿಯಲ್ಲಿ ಬಂದರೆ ‘ಆದಿದೀಪಕ’, ನಡುವೆ ಬಂದರೆ ‘ಮಧ್ಯದೀಪಕ’, ಕಡೆಗೆ ಬಂದರೆ ‘ಅಂತ್ಯದೀಪಕ’ ಎಮದು ಸಾಮಾನ್ಯವಾಗಿ ವ್ಯವಹಾರವಿದೆ.*
೫೪. ಮಲಯಮಾರುತನು ಮೆಲ್ಲನೆ ಮರಗಳಲ್ಲಿಯ ಹಣ್ಣೆಲೆಗಳನ್ನು ತೊಟ್ಟು ಕಳಚಿ ಉದುರಿಸುವನು; ಅಲ್ಲದೆ ಅವುಗಳಲ್ಲಿ ಎಡೆಯೆಡೆಗೂ ಮೊಗ್ಗುಗಳ ಕೋಮಲ ಮೊಳಕೆಗಳನ್ನು ಉಂಟುಮಾಡುವನು. *ಇಲ್ಲಿ ಹಣ್ಣೆಲೆಯನ್ನು ಉದುರಿಸುವ ತಂಗಾಳಿ ಮತ್ತು ಮೊಳಕೆ ಚಿಗುರುಗಳನ್ನು ಮೂಡಿಸುವ ತಂಗಾಳಿ ವಸ್ತುತಃ ಬೇರೆಬೇರೆಯಿದ್ದರೂ, ಎರಡೂ ಒಂದೇ ಎಂದು ಜಾತಿವಾಚಕವಾದ ಕರ್ತೃಪದವನ್ನು ಕವಿ ಪದ್ಯದ ಆದಿಯಲ್ಲಿ ಹೇಳಿದ್ದಾನೆ; ಎರಡನೆ ಕ್ರಿಯೆಗೂ ಅದೇ ಕರ್ತೃ ಅನ್ವಯಿಸುವಂತೆ ಪ್ರಯುಕ್ತವಾಗಿರುವುದರಿಂದ ‘ಆದಿದೀಪಕ’. ಹೋಲಿಸಿ-ದಂಡಿ, ಐಐ -೯೮.*.
iv) ಕ್ರಿಯಾನುಗತ–ಆದಿದೀಪಕ
ತಿರಿತರ್ಕುಮಮಳ-ಜಳನಿಧಿ-ಪರಿಖಾವೃತ-ಭೂಮಿ-ಭಾಗಮಂ[4]ಭರದೆ ಜಳಾ- |
ಕರ-ವಿಕ್ಷೇಪಕ-ಕಕುದಂತರಮಂ ಸವಿಶೇಷ-ರು[5]ಚಿಯಸಂಭವ-ವಿಧಿಯಂ(?) ||೫೫||
೫೫. *‘ಕ್ರಿಯಾದೀಪಕ’ಕ್ಕೆ ಉದಾಹರಣೆ-* ಈಗ ಹಸ್ತಪ್ರತಿಗಳಲ್ಲಿ ಉಪಲಬ್ಧ ಪಾಠ ತೀರಾ ಕೆಟ್ಟು ಅಪಪಾಠವಾಗಿದೆ. ಪೂರ್ವಾರ್ಧದ ಸ್ಪಷ್ಟ ಸಂವಾದವಿರುವುದರಿಂದ ಇದು ದಂಡಿಯ MM-೯೮ರ ಮಾದರಿಯಲ್ಲಿ ಬರೆದ ಲಕ್ಷ್ಯವೆಂಬುದು ನಿಸ್ಸಂಶಯ. ಅಲ್ಲಿಯ ಲಕ್ಷ್ಯವಿದು-
ಚರಂತಿ ಚತುರಂಭೋಧಿವೇಲೋದ್ಯಾನೇಷು ದಂತಿನಃ |
ಚಕ್ರವಾಲಾದ್ರಿಕುಂಜೇಷು ಕುಂದಭಾಸೋ ಗುಣಾಶ್ಚ ತೇ ||
ನಾಲ್ಕು ಸಮುದ್ರತೀರಗಳ ಉದ್ಯಾನಗಳಲ್ಲಿ ನಿನ್ನ ಆನೆಗಳೂ, ಲೋಕಾಲೋಕಪರ್ವತದ ನಿಕುಂಜಗಳಲ್ಲಿ ನಿನ್ನ ಕುಂದಧವಳ ಗುಣಗಳೂ ಸಂಚರಿಸುತ್ತಿವೆ’. ಮೂಲದಲ್ಲಿ ‘ಚರಂತಿ=ಸಂಚರಿಸುತ್ತಿವೆ’ ಎಂಬ ಕ್ರಿಯಾಪದ ಪದ್ಯಾದಿಯಲ್ಲೇ ಬಂದಿರುವುದರಿಂದ ‘ಕ್ರಿಯಾದೀಪಕ’ವಾಗಿದೆ. ಇಲ್ಲಿಯ ಅನುವಾದ ಪದ್ಯದಲ್ಲಿಯೂ ‘ತಿರಿತರ್ಕುಂ’ (ಸಂಚರಿಸುತ್ತಿದೆ) ಎಂಬ ಏಕವಚನಾಂತ ಕ್ರಿಯಾಪದ ಪದ್ಯಾದಲ್ಲಿಯೇ ಇದೆ. ಇಲ್ಲಿಯೂ ಮುಂದೆ ಕನಿಷ್ಠ ಎರಡು ಕರ್ತೃಗಳು ಇದರೊಡನೆ ಅನ್ವಯಿಸುವಂತಿಲ್ಲದಿದ್ದರೆ ದೀಪಕಾಲಂಕಾರವೇ ಆಗದು. ಇಲ್ಲಿರುವ ಮುಂದಿನ ಪದಗಳೆಲ್ಲ ಈಗ ದ್ವಿತೀಯಾಂತವಾಗಿಯೇ ಕಾಣಬರುತ್ತಿವೆ; ಒಂದು ಕರ್ತೃವೂ ಇಲ್ಲ. ಆದ್ದರಿಂದ ದಂಡಿಯ ಲಕ್ಷ್ಯಾನುಸಾರ ಈ ಪದ್ಯವನ್ನು ಇಡಿಯಾಗಿ ಪರಿಷ್ಕರಿಸಿದರೆ ಮಾತ್ರ ಅಲಂಕಾರದ ವಿವಕ್ಷಿತಾಂಶ ಉದಾಹೃತವಾದೀತು. ನಮ್ಮ ಪರಿಷ್ಕರಣೆ ಹೀಗೆ-
“ತಿರಿತರ್ಕುಮಮಳ ಜಳನಿಧಿ ಪರಿಖಾವೃತಭೂಮಿಭಾಗಮಂ ಭರದೆ ಜಳಾ- |
ಕರವಿಕ್ಷೇಪಕ ಕಕುದಂತರಮಂ ಗಜಸೈನ್ಯಮಂತೆ ನಿನ್ನಯ ಗುಣಮುಂ ||”
ಇದರ ಅನುವಾದ ಹೀಗೆ ಆಗುತ್ತದೆ-‘ನಿನ್ನ ಗಜಸೈನ್ಯ, ನಿನ್ನ ಗುಣ, ಒಂದೊಂದೂ ಜಲನಿಧಿಪರಿವೃತವಾದ ಭೂಪ್ರದೇಶವನ್ನೂ ಮೇಘಗಳು ಓಡಾಡುವ ದಿಗಂತರಾಳವನ್ನೂ ಆಕ್ರಮಿಸುತ್ತದೆ, ಅಥವಾ ಅಲ್ಲಿ ಅಲೆದಾಡುತ್ತದೆ’. ಮೂಲ ಕಂದಪದ್ಯದಲ್ಲಿ ಕ್ರಿಯಾಪದ ಆದಿಯಲ್ಲಿ ಬಂದು ಎರಡು ಕರ್ತೃಗಳಿಗೂ ಸಮಾನವಾಗಿ ಅನ್ವಯಿಸುವಂತಿರುವ ಕಾರಣ ಇದು ‘ಕ್ರಿಯಾದೀಪಕ’.*
iii) ಗುಣಾನುಗತ–ಆದಿದೀಪಕ
ವಿಶದತರಮಾಯ್ತ ಗುಣ-ಮಣಿ-ವಿಶೇಷ-ಭೂಷಣದಿನೀ ತ್ವದೀಯಾಕಾರಂ |
ಶಶಧರ-ಕಿರಣಾಭ-ಭವದ್ವಶೋವಿತಾನದಿನಶೇಷಮಾಶಾ-ವಳಯಂ ||೫೬||
iv) ದ್ರವ್ಯಾನುಗತ–ಆದಿದೀಪಕ
ದಿವಸ-ಕರನುದಯಗಿರಿ-ಶಿಖರ-ವಿಶೇಷ-ವಿಭೂಷಣಂ ತಮೋರಿಪು-ಬಳಮಂ |
ಪ್ರವಿಲೀನಂ ಮಾಡಿದನವಯವದೊಳ್ ತಾರಾ-ವಿತಾನ-ತೇಜಮನೞದಂ ||೫೭||
ದೀಪಕಮಾ ಜಾತ್ಯಾದಿ-ನಿರೂಪಕಮಿಂತಕ್ಕುಮಾದಿಯೊಳ್ ಮಧ್ಯಾಂತ-
ವ್ಯಾಪಕಮನದಂ ತಱಸಲ್ಗೀ ಪೇೞ್ದ ವಿಕಲ್ಪ-ಲಕ್ಷ್ಯದೊಳ್ ಕವಿ-ಮುಖ್ಯರ್ ||೫೮||
Leave A Comment