ಫಿರಂಗಿಯ ಅಬ್ಬರಗಳು
ತಣ್ಣಗಾಗಿವೆ
ಸಿಡಿಗುಂಡಿನ ಸದ್ದುಗಳು
ವಿರಳವಾಗಿವೆ
ಎಲ್ಲಿಂದಲೋ ಸುಸ್ತಾದ ತುತ್ತೂರಿಯ
ದನಿಗಳು ಕೇಳಿ ಬರುತ್ತಿವೆ:
ಹಿಮ್ಮೆಟ್ಟುವುದಕ್ಕಾಗಲೀ
ಮುನ್ನುಗ್ಗುವುದಕ್ಕಾಗಲೀ
ಅವು ಸೂಚನೆಗಳಲ್ಲ.

ಸಿಡಿಮದ್ದುಗಳ ದಟ್ಟ ಹೊಗೆ
ಗಾಳಿಯಲ್ಲಿ ಚದುರಿ ಹೋಗಿದೆ
ರಣರಂಗವನ್ನು
ನಿಶ್ಯಬ್ದ ಆವರಿಸಿಕೊಂಡಿದೆ
ಗಾಯಗೊಂಡವರ ಕಡೆ
ಗಮನ ಕೊಡುತ್ತಲಿದೆ
ಶುಶ್ರೂಷಕರ ಪಡೆ.

ದಣಿದು ನಿದ್ದಗೆ ಬಿದ್ದವರು
ಗೊರಕೆ ಹೊಡೆದಿದ್ದಾರೆ
ಸವಿಯಾದ ಕನಸು ಕಾಣುತ್ತ.
‘ಹೋ! ನೀನಿನ್ನೂ ಬದುಕಿದ್ದೀಯಾ’
ಅನ್ನುತ್ತಾರೆ ಕಿಡಿಗೇಡಿ ಹುಡುಗ ಸೈನಿಕರು.
ತಮಾಷೆ ಮಾಡುತ್ತಾರೆ
ತಮ್ಮ ಖುಷಿಗೆ.

ಯುದ್ಧಭೂಮಿಯ ಮೇಲೆ
ಯಾವುದೂ ಇದ್ದಂತೆಯೇ
ಇರುವುದಿಲ್ಲ ಯಾವಾಗಲೂ.
ಈಗೇನೋ ಸಿಡಿಗುಂಡುಗಳ ಕಿಡಿಯಿಲ್ಲ.
ಸದ್ದೂ ಇಲ್ಲ.

ಮೇಲೆ ಹಾರಾಡುತ್ತಿರುವ ಬಣ್ಣ ಬಣ್ಣದ
ಚಿಟ್ಟೆಯ ಜೋಡಿಗಳು
ಬಂದೂಕಿನ ನಳಿಗೆಯ ಸುತ್ತ
ಪಟಪಟನೆ ಸುತ್ತುತ್ತಿವೆ
ಕುದುರೆಗಳು ಕಾಲ ಕೆಳಗಿನ ನೆಲವನ್ನು
ಆಗಾಗ ಗೊರಸಿನಿಂದ ಒರಸುತ್ತಿವೆ.
-ಜಾಂಗ್ ಜಿಮಿನ್ (ಚೀನಾ)