ಹೈದ್ರಾಬಾದ ಕರ್ನಾಟಕ ಭಾಗದ ಹಿಂದುಳಿದ ಪ್ರದೇಶದಲ್ಲಿ ಹಿಂದೂಸ್ಥಾನಿ ಸಂಗೀತವನ್ನು ಜನಪ್ರಿಯಗೊಳಿಸಿದ ಶ್ರೀಮತಿ ಯಮನಮ್ಮ ಅವರು ಕರ್ನಾಟಕದ ಮಹಿಳಾ ಕಲಾವಿದರಲ್ಲೊಬ್ಬರಾಗಿದ್ದಾರೆ. ಎಂಬತ್ತರ ಅಂಗವಿಕಲ ವಯೋವೃದ್ಧೆ ಶ್ರೀಮತಿ ಯಮನಮ್ಮ ಉತ್ತರ ಕರ್ನಾಟಕದಲ್ಲಿ ಅದರಲ್ಲೂ ರಾಯಚೂರಿನ ಆಸುಪಾಸಿನಲ್ಲಿ ಬಹಳ ಜನಪ್ರಿಯತೆ ಪಡೆದಿರುವ ಹಿರಿಯ ಕಲಾವಿದೆ.

ಓದಿದ್ದು ನಾಲ್ಕನೇ ತರಗತಿಯಾದರೂ ಸಂಗೀತದಲ್ಲಿ ಯಮನಮ್ಮನವರ ಸಾಧನೆ ಬಹಳ ದೊಡ್ಡದು. ಶ್ರೀ ಸೀನಪ್ಪ ಆಚಾರ್ ಮತ್ತು ಶ್ರೀ ಲಕ್ಷ್ಮಣಗೌಡ್ರು ಮುಂತಾದ ವಿದ್ವಾಂಸರ ಬಳಿ ಕಠಿಣ ಸಾಧನೆ ಮಾಡಿರುವ ಯಮನಮ್ಮನವರು ಧಾರವಾಡ, ಗುಲ್ಬರ್ಗಾ, ಸೊಲ್ಲಾಪುರ, ಸೋವರಪೇಟೆ ಮಠ, ಕಿಲೇದ ಮಠ, ಬಿಚ್ಚಾಲಿ, ಕಲೀಡಿ ಮಿಷ್ಟ್ರರ್ಸ್ ಮುಂತಾದ ಕಡೆ ಕಾರ್ಯಕ್ರಮ ನೀಡಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.

ಹಲವು ಶಿಷ್ಯರನ್ನೂ ತಯಾರಿಸಿರುವ ಶ್ರೀಮತಿಯವರಿಗೆ ಇತರ ಸಂಘ ಸಂಸ್ಥೆಗಳೂ ಸನ್ಮಾನಿಸಿ ಗೌರವಿಸಿವೆ. ಶ್ರೀಮತಿ ಯಮನಮ್ಮನವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ೧೯೯೯-೨೦೦೦ನೇ ಸಾಲಿನ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.