ಯವಲೋಕದಲ್ಲೆ, ಯಮನ ಪ್ರವೇಶ.

ಯಮ
(ಸುತ್ತ ನೋಡಿ)
ಇದು ನನ್ನ ನೆಲದಲ್ಲೆ. — ನನ್ನ ದೇಶವು ಮುಂದೆ
ಕಂಗೊಳಿಪುದಲ್ಲಿ. ಮತ್ತಿದೇನಿದು ಸದ್ದು?
(ಹಿಂದೆ ನೋಡಿ)
ಸಾವಿತ್ರಿ!
(ಪ್ರವೇಶ.)
ನಾನಿನ್ನು ಸಹಿಸಲಾರೆನು, ದೇವಿ!
ಎರಡು ವರಗಳನಿತ್ತೆ. ಮತ್ತೆ ಹಿಂಬಲಿಸುವೆ.
ಪರರ ಪೀಡಿಪುದಿಂತು ಧರ್ಮವೇ, ಘನಶೀಲೆ,
ಸಾವಿತ್ರಿ?

ಸಾವಿತ್ರಿ
ಪತಿಯ ತ್ಯಜಿಪುದು ಸತಿಗೆ ಧರ್ಮವೇ,
ಯಮದೇವ? ನಾ ನಿನ್ನನುಸರಿಸುತ್ತಿಲ್ಲ.
ನೀನೆ ಎಳೆದೊಯ್ಯುತಿಹೆ. ನನ್ನ ಪತಿಯಲ್ಲಿಹುದು
ನನ್ನಾತ್ಮ! ಧರ್ಮಚ್ಯತಿಯನಿತಿಲ್ಲ ಇದರಲ್ಲಿ!

ಯಮ
ಸಾವಿತ್ರಿ, ನಿನ್ನ ಪತಿ ಸಗ್ಗಕಡರುವ ಬದಲು ೧೦
ನರಕಕಿಳಿದರೆ ನೀನು ಹಿಂದೆ ಹೋಗುವೆಯೇನು?

ಸಾವಿತ್ರಿ
ಸಂತಸದಿ ಹೋಗುವೆನು, ಯಮರಾಯ; ಹಿಗ್ಗಿ
ಆನಂದದಿಂದವನ ಗತಿಯನಪ್ಪುವೆನೆಂದು.
ಎಲ್ಲಿ ಪತಿಯಿದ್ದರದೆ ಸಗ್ಗ. ಅನುರಾಗ —
ವಿದ್ದಲ್ಲಿ ವೈಕುಂಠ. ಪ್ರೇಮವೆಲ್ಲಿರುವುದೋ
ಅಲ್ಲಿ ಕೈಲಾಸ. ಎದೆಯೊಲ್ಮೆ ಲ್ಲಿಹುದೊ
ಅಲ್ಲಿಹುದು ಮುಕ್ತಿ. ನಾಕವೆಂದರೆ ಏನು?
ನರಕವೆನಲೇನು? ನಾಕ ನರಕಗಳೆರಡ
ಸೃಜಿಸಬಲ್ಲುದು ಮನಸು.

ಯಮ
ಧನ್ಯಳಾದೌ, ದೇವಿ, ೨೦
ಸಾವಿತ್ರಿ, ನಿನ್ನ ನುಡಿಯೆ ವೇದ ಮೆಚ್ಚಿದೆನು.
ಮತ್ತೊಂದು ವರವೀಯುವೆನು, ಕೇಳು. ಮರೆಯದಿರು
ಸತ್ತ ಜೀವವು ಮತ್ತೆ ಬರುವುದಿಲ್ಲೆಂದು!

ಸಾವಿತ್ರಿ
ಮೆಚ್ಚಿ ವರವೀಯುವೊಡೆ, ಹೇ ಧರ್ಮದೇವ,
ನನ್ನ ಮಾವನ ವಂಶ ಹಾಳಾಗದಿರಲಿ;
ಅವನ ನೆಲ ಸತ್ಯವಾನನ ಸುತರ ಕೈಸೇರಲಿ,
ಎಂದು ಬೇಡುವೆನು; ನೀಡೆನಗೆ ವರವ!

ಯಮ
(ನಗುತ್ತಾ)
ತಥಾಸ್ತು! ಎಲೆ ತಾಯೆ, ನಿನ್ನೊಲುವೆ ಮೃತ್ಯುವನು
ಜಯಿಸಿತಿಂದು! ಧರ್ಮವೊಲವಿಗೆ ಮಣಿದು
ಶರಣಾಯಿತಿಂದು! ನಿಯಮವನುರಾಗಕ್ಕೆ
ಮೈಸೊತಿತಿಂದು! ಮಿರ್ತುವನು ಎದೆಯೊಲವು ೩೦
ಗೆದ್ದಿತಲೆ ತಾಯೆ! ನಿನ್ನಿನಿಯನನ್ನಿಗೋ
ಕೊಟ್ಟಿಹೆನು. ತೆರಳು, ಸುಖಿಯಾಗಿ ಬಾಳು.
ನಿನ್ನ ನಾಮವು ಜಗಕೆ ಶಕ್ತಿದಾಯಕವಾಗಿ
ಮುಂದೆಂದು ರಾಜಿಸಲಿ! ನಿನ್ನಂತೆ ಹಿಂದಾರು
ಒಲಿದಿಲ್ಲ. ಮುಂದಾರು ಒಲಿಯುವುದು ಕಷ್ಟ.
ನಿನ್ನ ಪ್ರೇಮದ ಮುಂದೆ ನನ್ನ ಶಕ್ತಿಯು ಜಳ್ಳು.
ಹೋಗಿ ಬರುವೆನು ತಾಯೆ, ಸುಖಿಯಾಗಿ ಬಾಳು.
ಯಮನ ಜಯಿಸಿದ ಕತೆಯ ಜಗಕೆಲ್ಲ ಹೇಳು.
(ಹೋಗುತ್ತಾನೆ.)

ಸಾವಿತ್ರಿ
ನಮಿಸುವೆನು, ಹೇ ಧರ್ಮ, ನೀನೀಗ ಧರ್ಮ!
ಧರ್ಮದಿಂ ಧರ್ಮವಂ ಗೆಲ್ಲುವುದೆ ಮರ್ಮ!