ಆಕಾಶಮಾರ್ಗದಲ್ಲಿ ಯಮದೂತನೊಬ್ಬನು ಅವಸರದಿಂದ ಬರುತ್ತಾನೆ.
ಅಭಿಮುಖವಾಗಿ ಹೋಗುವ ಯಕ್ಷನೊಬ್ಬನು ಅವನನ್ನು ಎದುರುಗೊಂಡು
ಮಾತನಾಡಿಸುತ್ತಾನೆ,

ಯಕ್ಷ
ಗಾಳಿವಟ್ಟೆಯೊಳಿಂತು ವೇಗದಿಂದೋಡುತಿಹೆ;
ಯಾವೆಡೆಗೆ, ಯಮದೂತ?

ದೂತ
ನೀರ ನೀರೆಯಾರಾದ
ಸತ್ಯವಾನ್ ಸಾವಿತ್ರಿ ಇವರಿರುವ ವನದೆಡೆಗೆ!

ಯಕ್ಷ
ವಿಶೇಷವೇನಲ್ಲಿ?

ದೂತ
ಸತ್ಯವಾನನಿಗಿದೇ
ಚರಮದಿನ. ನಮ್ಮ ರಾಯನ ಬಳಿಗೆ ಕೊಂಡೊಯ್ಯ
ಲಾತನನು ತೆರಳುತಿಹೆ, ಯಕ್ಷ.

ಯಕ್ಷ
ಅವನೇನು
ಮುದುಕನೇ

ದೂತ
ಇಲ್ಲ; ಯುವಕನೆ! ಮದುವೆಯಾ
ಗಿನ್ನೂ ಹನ್ನೆರಡು ತಿಂಗಖೂ ಕಳೆದಿಲ್ಲ.

ಯಕ್ಷ
ಹಾಗೆಂದ ಮೇಲೆ?

ದೂತ
ನಾನು ಮಾಡುವುದೇನು?
ಕ್ರೂರವಿಧಿ ಅವನ ಬಾಳಿನ ನೂಲ ಕತ್ತರಿಸಿ ೧೦
ಬಿಟ್ಟಿಹುದು. ಇಂದವನು ಕತ್ತಲಾಗುವ ಮುನ್ನ
ಸಂಜೆಒಳು ಸಾಯಲೇ ಬೇಕು!

ಯಕ್ಷ
ಪಾಪ, ಆ
ಸಾವಿತ್ರಿಗಿನ್ನು ಗತಿ ಏನು?

ದೂತ
ಇರುಳಲ್ಲಿ
ಕಂಡ ಕೂಪದ ಹಗಲು ಹಾರಿದಳು. ನಮ್ಮ
ತಪ್ಪೇನು? ಪತಿಯ ಈ ಗತಿಯನರಿತೂ ಅವನ
ಮೆಚ್ಚಿದಳು; ವರಿಸಿದಳು.

ಯಕ್ಷ
ಹಾಗಾದರೀ ಗತಿಯ
ಸಾವಿತ್ರಿಯರಿತಿಹಳೆ?

ದೂತ
ಚೆನ್ನಾಗಿ! ಚೆನ್ನಾಗಿ!

ಯಕ್ಷ
ಯಾರಾಕೆ? ಇಂತೇತಕೆಸಗಿದಳು? ತಿಳಿದೂ
ಸಾವನೇಕಪ್ಪಿದಳು? ತಿಳಿಸು, ಯಮಕಿಂಕರಾ.

ದೂತ
ವಿಶದವಾಗುಸುರಲೆನಗೀಗ ಹೊತ್ತಿಲ್ಲ.
ತಡಮಾಡಿದರೆ ಯಮನ ದಂಡನೆಗೆ ಗುರಿಯಾಗ ಬೇಕು.
ಸಂಕ್ಷೇಪವಾಗೊರೆಯುವೆನು ಕೇಳು.

ಯಕ್ಷ
ನಾನೂ ಕಾರ್ಯಾರ್ಥವಾಗಿಯೆ ಹೊರಟಿಹೆನು.
ಸಂಕ್ಷೇಪವಾಗಿಯೇ ಹೇಳು.

ದೂತ
ಸಾವಿತ್ರಿ
ಅಶ್ವಪತಿಯೆಂಬ ರಾಜನ ಕುವರಿ. ಭಕ್ತಿಯಿಂ
ದೀಶನಾರಾಧನೆಯ ಮಾಡೆ ಜನಿಸಿದಳು.
ಬ್ರಹ್ಮಸೃಷ್ಟಿಯೊಳೀಗ ಆ ಸತಿಯ ಸೊಬಗಿನಲಿ
ಮೀರುವವರಾರಿಲ್ಲ. ಪಾತಿವ್ರತ್ಯದೊಳವಳ
ಎಣೆಯಿಲ್ಲ. ಪ್ರಾಪ್ತವಯಸಾಗಲಾಕೆಗೆ, ದೊರೆಯು
ಅನುರೂಪನಾದ ವರನನೆಲ್ಲಿಯು ಹುಡುಕಿ ೩೦
ಕಾಣದೆಯೆ, ತನ್ನ ಪತಿಯನು ತಾನೆ ಒಲಿದರಸಿ
ತರುವಂತೆ ಬಿನ್ನವಿಸಿಯಾಕೆಯಂ ಕಳುಹಿದನು.
ದೇಶ ದೇಶವ ಚರಿಸಿ ತನಗೆ ಅನುರೂಪನಂ
ಎಲ್ಲಿಯೂ ಕಾಣದಿರೆ, ಕಡೆಗಾಕೆಯೈತಂದ
ಳೊಂದು ಋಷ್ಯಾಶ್ರಮಕೆ. ಅಲ್ಲಿ, ಶತ್ರುಗಳು
ರಾಜ್ಯವನ್ನಪಹರಿಸೆ, ಕುರುಡಾಗಿ, ಕಾನನಕೆ
ಬಂದು ಋಷಿಚರ್ಯೆಯಲ್ಲಿರುವ ರಾಜರ್ಷಿ
ದ್ಯುಮತ್ಸೇನ ಭೂಮಿಪನ ಸುತನಾದ ಸತ್ಯವಾನ್
ಎಂಬ ಶುದ್ಧಾತ್ಮನನ್ನೊಲಿದು ವರಿಸಿದಳು.

ಯಕ್ಷ
ಅವನಷ್ಟು ಸುಂದರನೆ?

ದೂತ
ಸುಂದರನು ಹೌದು; ೪೦
ಪೊಸ ಜೌವನದ ಸಿರಿಗೆ ಒಡೆಯನಾಗಿಯು ಇದ್ದ.
ಆದರಾ ಸಾವಿತ್ರಿ ಸೌಂದರಕೆ ಮರುಳಾಗ
ಲಿಲ್ಲ. ಸೌಂದರ್ಯವನು ಮೀರಿ ಆತನೊಳು
ಶುಚಿಶೀಲವಿತ್ತು.

ಯಕ್ಷ
ಆಮೇಲೆ?

ದೂತ
ಅಶ್ವಪತಿ
ಒಪ್ಪಿದನು. ಆದರಾಸ್ಥಾನಕೈತಂದ
ನಾರದರು, ಸಾವಿತ್ರಿಯೊಲಿದವನು ಅಲ್ಪಾಯು
ಎಂಬುದನು ಗುಟ್ಟಾಗಿ ತಿಳಿಸಿದರು. ದೊರೆಯು
ಬೆಚ್ಚಿದನು ಆ ನುಡಿಯ ಕೇಳಿ.

ಯಕ್ಷ
ಸಾವಿತ್ರಿ?

ದೂತ
ಪ್ರೇಮ ಮೃತ್ಯುಗೆ ಬೆದರಿ ಓಡುವುದೆ? ಪತಿಯ ಗತಿ
ಯನು ಕೇಳಿ ಆಕೆಯೊಲುಮೆಯು ಚೈತ್ರಮಾಸದೊಳು ೫೦
ತಳಿತೆಸೆವ ವನದಂತೆ ಹಿಗ್ಗಿದುದು.

ಯಕ್ಷ
ಹೌದು.
ಒಮ್ಮೆಯೊಬ್ಬನನೊಲಿದ ಶುಚಿಯೊಲವು ನೋಡುವುದೆ
ಕಣ್ಣೆತ್ತಿ ಮತ್ತೊಬ್ಬನೆಂತಿರುವನೆಂದು?
ಕಡೆಗೆ?

ದೂತ
ಸಾವಿತ್ರಿ ಸತ್ಯವಾನನ ಮದುವೆ
ಯಾಗಿ, ಅತ್ತೆಮಾವಂದಿರಿಗೆ ಉಪಚಾರ
ವೆಸಗಿ, ಪತಿಯನನುಸರಿಸುತ್ತ ಕಾದಿನೊಳ
ಗಿಹಳು. ತನ್ನ ಪತಿಗಿದೆ ಕಡೆಯ ದಿನವೆಂದು
ಮೂರು ದಿನದಿಂದ ಪೂಜೆಯುಪವಾಸಗಳ
ನೆಸಗಿಹಳು. ದಿನವು ಪರಮೇಶನಂ ಬೇಡು
ತಿಹಳು. ಆದರೇಂ? ಬಿದಿಯ ಕಟ್ಟಳೆಗಾರು
ಅಡ್ಡಬರುವರು, ಯಕ್ಷ? ನಾನು ಯಮದೂತ;
ನನ್ನೆದೆಯ ಕೂಡ ಮರುಗುತಿದೆ! ಆದರೇಂ?
ನಾನೇನು ಮಾಡಬಲ್ಲೆ? ಜವರಾಯನಿತ್ತ
ಕ್ರೂರಾಜ್ಞೆಯಂ ನಾನು ಮೀರಲಾರೆನು, ಯಕ್ಷ.
ತೆರಳುವೆನು ಹೊತ್ತಾಯ್ತು!

ಯಕ್ಷ
ಕೌತುಕದ ಸುದ್ದಿಯಿದು,
ಯಮದೂತ! ನನ್ನ ಇಂದಿನ ಕಜ್ಜವಂತಿರಲಿ!
ನಾನು ಬರುವೆನು ನಿನ್ನ ಕೂಡೆ, ಬಾಹೋಗೋಣ!

ದೂತ
ಬ್ರಹ್ಮಾಂಡದಾವ ಭಾಗದೊಳಿಹೆವು ನಾವೀಗ,
ಯಕ್ಷ?

ಯಕ್ಷ
ಮರ್ತ್ಯ ಲೋಕದ ಬಳಿಗೆ ಬಂದಿಹೆವು!
ನೋಡಲ್ಲಿ! ಕೋಟಿಯುಡುಗಳ ನಡುವೆ ಮಿಣುಕುತಿಹ ೭೦
ಮುದ್ದಾದ ಗ್ರಹವೊಂದು ತೋರುತಿದೆ. ಅದೆ ಭೂಮಿ!

ದೂತ
ಅದರ ಪಕ್ಕದೊಳೇನು ಪುಟ್ಟಸೊಡರಿನ ತೆರದಿ
ಮಿನುಗುತಿದೆ?

ಯಕ್ಷ
ಅದು ಚಂದ್ರಲೋಕ! ಬಾ, ತೆರಳೋಣ!

ಇಬ್ಬರೂ ಹೋಗುತ್ತಾರೆ.