ಬೆಳಗಿನ ಐದು ಗಂಟೆಯ ಹೊತ್ತಿಗೆ, ನಾವು ಉಳಿದುಕೊಂಡಿದ್ದ ಅತಿಥಿ ಗೃಹದ ಸುತ್ತಲೂ ದಟ್ಟವಾಗಿ ಬೆಳೆದ ಮರದ ಕೊಂಬೆ – ರೆಂಬೆಗಳಿಂದ ಹಲವಾರು ಬಗೆಯ ಹಕ್ಕಿಯ ಕೊರಳು ಸುಮಧುರವಾಗಿ ಹೊಮ್ಮತೊಡಗಿತ್ತು. ನಿಶ್ಯಬ್ದವಾದ ವಾತಾವರಣದಲ್ಲಿ, ದೂರದ ದೇವಾಲಯಗಳ ಪೂಜೆಯ ಘಂಟಾಧ್ವನಿಯೂ ತೇಲಿ ಬರುತ್ತಿತ್ತು. ಬಚ್ಚಲು ಮನೆಯ ನಲ್ಲಿಯ ಮೂಲಕ ಧುಮುಕುತ್ತಿದ್ದ ಗಂಗೆಯ ಹಿತವಾದ ನೀರಿನಲ್ಲಿ ಸ್ನಾನಮಾಡಿ, ಅಂದಿನಿಂದ (೧೪.೫.೧೯೮೪) ಹತ್ತು ದಿನಗಳ ಪ್ರಯಾಣಕ್ಕೆ ಅಗತ್ಯವಾದ ಪೂರ್ವಸಿದ್ಧತೆಗಳನ್ನು ತರಾತುರಿಯಿಂದ ಮಾಡಿಕೊಂಡು ನಮ್ಮನ್ನು ಕರೆದೊಯ್ಯಲು ಬರುವ ವಾಹನಕ್ಕೆ ಕಾದು ಕುಳಿತೆವು. ಪ್ರಯಾಣಕ್ಕೆ ಅಗತ್ಯವಾದ ಬೆಚ್ಚನೆಯ ಬಟ್ಟೆಗಳು; ದಾರಿ ಉದ್ದಕ್ಕೂ ‘ಕುರುಕಲು’ ಬೇಕಾದ ತಿಂಡಿ ಪದಾರ್ಥಗಳು; ನೀರಿನ ಜಗ್; ಹೊದೆಯಲು ರಗ್ಗುಗಳು; ಒಂದಷ್ಟು ಔಷದಿಗಳು; ಟಾರ್ಚು; ವ್ಯಾಕ್ಸಿನೇಷನ್ ಸರ್ಟಿಫಿಕೇಟುಗಳು; ಇತ್ಯಾದಿಗಳನ್ನೆಲ್ಲ ನೆನಪಿಟ್ಟುಕೊಂಡು ತೆಗೆದುಕೊಂಡೆವು. ಸರಿಯಾಗಿ ಏಳು ಗಂಟೆಯ ವೇಳೆಗೆ, ನಾವು ಮೊದಲೇ ಗೊತ್ತು ಮಾಡಿಕೊಂಡಿದ್ದ ಟ್ಯಾಕ್ಸಿ ಆಶ್ರಮದ ಆವರಣವನ್ನು ಪ್ರವೇಶಿಸಿತು. ಆಶ್ರಮದ ಸಾಧುಗಳ ಬ್ರಹ್ಮಚಾರಿಗಳ ಶುಭಾಶಯಗಳನ್ನು ಹೊತ್ತು, ಕಂಕಲ್ ಎಂದು ಕರೆಯಲಾಗಿರುವ ವಿಸ್ತರಣವನ್ನು ದಾಟಿ, ಹರಿದ್ವಾರದ ಕಡೆಗೆ ಹೊರಟೆವು. ವಾಸ್ತವವಾಗಿ ಕಂಕಲ್ ಎಂಬುದು ಹರಿದ್ವಾರದ ಒಂದು ಭಾಗವೇ. ಕಂಕಲ್‌ದಿಂದ ಸ್ವಲ್ಪ ದೂರ ಬರುತ್ತಲೇ, ಅಗಲವಾದ ಸೇತುವೆಯೊಂದರ ಕೆಳಗೆ ಹರಿಯುವ ಗಂಗೆಯನ್ನು ದಾಟಿದರೆ, ಹರಿದ್ವಾರದ ಒಳಗೆ ಬಂದಂತೆಯೇ. ಈ ಸೇತುವೆಯ ಕೆಳಗೆ ಮಹಾವೇಗದಿಂದ ಪ್ರವಹಿಸುವ ಗಂಗೆ, ದಕ್ಷಿಣೋತ್ತರವಾಗಿ ದೂರ ದೂರದವರೆಗೆ ಬೆಳಗಿನ ಬಿಸಿಲಿನಲ್ಲಿ ಥಳಥಳಿಸುತ್ತಿತ್ತು. ಕಂಕಲ್ ಬಳಿ ಹರಿಯುವ ಈ ನದಿಯನ್ನು ಕುರಿತು, ಕಾಳಿದಾಸನ ಮೇಘದೂತ ಕಾವ್ಯದಲ್ಲಿ ಬರುವ ವರ್ಣನೆಯೊಂದು ಮೋಹಕವಾಗಿದೆ. ‘ಮೇಘದೂತ’ದ ಯಕ್ಷ, ಉತ್ತರದ ಅಲಕಾವತಿಯಲ್ಲಿರುವ ತನ್ನ ನಲ್ಲೆಗೆ ಸಂದೇಶವನ್ನು ಕಳುಹಿಸಿದಾಗ, ದಕ್ಷಿಣದ ರಾಮಗಿರಿಯಿಂದ ಉತ್ತರದ ಹಿಮಾಲಯವನ್ನು ಪ್ರವೇಶಿಸುವವರೆಗೆ, ಮೇಘವು ಪ್ರಯಾಣ ಮಾಡುವ ದಾರಿಯಲ್ಲಿ ಕಾಣಬಹುದಾದ ಊರುಗಳ, ನದಿಗಳ, ಪರ್ವತಗಳ, ಹಾಗೂ ಪ್ರದೇಶಗಳ ನಿರ್ದೇಶನ ಮಾಡುವಾಗ, ಮೇಘವನ್ನು ಕುರಿತು ಹೇಳುತ್ತಾನೆ: ‘ಹಿಮಾಲಯದ ಕಡೆಯಿಂದ ಇಳಿದು ಬರುವ ಗಂಗೆಯನ್ನು ನೀನು ಕನಖಲದ ಹತ್ತಿರ ಕಾಣುತ್ತೀಯ. ಅಲ್ಲಿ ಗಂಗಾನದಿ ಸಗರ ತನಯರು ಸ್ವರ್ಗಕ್ಕೆ ಏರಲು ಮಾಡಿದ ಸೋಪಾನ ಪಂಕ್ತಿಯಂತೆ ತೋರುತ್ತದೆ.’ ಕಾಳಿದಾಸನ ಕಾವ್ಯದಲ್ಲಿ ಬರುವ ‘ಕನಖಲ’ವೇ ಈಗಿನ ಕಂಕಲ್. ಆತ ಮಾಡುವ ಗಂಗೆಯ ಈ ವರ್ಣನೆ ನೆಲದ ಮೇಲೆ ನಿಂತು ಮಾಡಿದ್ದಲ್ಲ, ಎತ್ತರದ ಆಕಾಶದಲ್ಲಿ ಸಂದೇಶವಾಹಕನಾಗಿ ತೇಲುವ ಮೋಡದ ಕಣ್ಣಿಗೆ ಕಂಡದ್ದು. ಆ ಎತ್ತರದಿಂದ ನೋಡುವ ಮೇಘಕ್ಕೆ, ಉತ್ತರದ  ಹಿಮಾಲಯದಿಂದ ಸ್ವರ್ಗಕ್ಕೆ ಏರಲು ಸಮೆದ ಸೋಪಾನ ಪಂಕ್ತಿಯಂತೆ ಕಂಡದ್ದು ಆಶ್ಚರ್ಯವಲ್ಲ. ಯಾಕೆಂದರೆ, ಗಂಗೆ ಹರಿದ್ವಾರದ ಈ ಸಮತಲ ಪ್ರದೇಶವನ್ನು ಪ್ರವೇಶಿಸುವ ಹೊತ್ತಿಗೆ, ಹಿಮಾಲಯದ ಎತ್ತರಗಳಿಂದ ಸುಮಾರು ಹನ್ನೆರಡು ಸಾವಿರ ಅಡಿಗಳಷ್ಟು ಕೆಳಗೆ ಇಳಿದು ಬಂದಿರುತ್ತದೆ.

ಹರಿದ್ವಾರದ ಮುಖ್ಯರಸ್ತೆಯಲ್ಲಿನ ಅಶ್ವಿನೀ ಟ್ರಾವಲ್ಸ್ ಸಂಸ್ಥೆಯ ಕಛೇರಿಯ ಮುಂದೆ ನಮ್ಮ ಟ್ಯಾಕ್ಸಿ ನಿಂತಿತು. ವ್ಯವಸ್ಥಾಪಕರ ಸೂಚನೆಯ ಮೇರೆಗೆ, ಇನ್ನಿಬ್ಬರು ಸಹಯಾತ್ರಿಕರು (ಅವರಿಬ್ಬರೂ ಪಾಟ್ನಾದ ಸಕ್ಕರೆಯ ಕಾರ್ಖಾನೆಗೆ ಸಂಬಂಧಿಸಿದವರು) ನಮ್ಮ ಜತೆಗೆ ಸೇರಿಕೊಂಡರು. ಅವರಿಬ್ಬರೂ ಮುಂದಿನ ಸೀಟಿನಲ್ಲಿ, ನಾವು ಮೂವರು ಹಿಂದಿನ ಸೀಟಿನಲ್ಲಿ. ರಜಪೂತ ಯುವಕ ಮದನಸಿಂಗ್ ನಮ್ಮ ಸಾರಥಿ. ಸರಿಯಾಗಿ ಏಳೂವರೆಗೆ ನಮ್ಮ ಟ್ಯಾಕ್ಸಿ ಯಮುನೋತ್ರಿಗೆಂದು ಹರಿದ್ವಾರವನ್ನು ಬಿಟ್ಟು ಹೊರಟಿತು.

ಹೊರಟ ಅರ್ಧಗಂಟೆಯೊಳಗಾಗಿ ನಾವು ಹೃಷಿಕೇಶವನ್ನು ತಲುಪಿದೆವು. ಹರಿದ್ವಾರದಿಂದ ಹೃಷಿಕೇಶ ಕೇವಲ ಇಪ್ಪತ್ತನಾಲ್ಕು ಕಿಲೋಮೀಟರುಗಳು. ಅಲ್ಲಿ ನಮ್ಮ ಟ್ಯಾಕ್ಸಿ ದೀರ್ಘಪ್ರಯಾಣಕ್ಕೆ ಅಗತ್ಯವಾದ ತೈಲೋಪಚಾರಗಳಿಗಾಗಿ ಮತ್ತಿತರ ‘ಚೆಕಪ್’ಗಳಿಗಾಗಿ ಒಂದಷ್ಟು ಹೊತ್ತು ನಿಲ್ಲಬೇಕಾಯಿತು. ಮತ್ತೆ ಒಂಬತ್ತು ಗಂಟೆಯ ಹೊತ್ತಿಗೆ ಹೃಷಿಕೇಶದ ರಸ್ತೆಗಳನ್ನು ಹಾದು, ಬಲಕ್ಕೆ ಹರಿಯುವ ಗಂಗೆಯನ್ನು ಬಿಟ್ಟು, ಮುಂದಿನ ಅರ್ಧಗಂಟೆಯೊಳಗೆ ಬೆಟ್ಟಗಳ ದಾರಿಯಲ್ಲಿ ಏರತೊಡಗಿತ್ತು. ನಿಧಾನಕ್ಕೆ ಏರತೊಡಗಿದಂತೆ, ಬೆಟ್ಟಗಳ ದಾರಿಯ ಎರಡೂ ಕಡೆಗೆ ಹಬ್ಬಿಕೊಂಡಿದ್ದ ಎತ್ತರದ ಮರಗಳಿಂದ ಜೀರುಂಡೆಯ ಶಬ್ದ ಕೇಳಿಸತೊಡಗಿತು. ಬೆಳಗಿನ ಆ ಬಿಸಿಲಿನಲ್ಲಿ ನೂರಾರು ಜೀರುಂಡೆಗಳ ಮೇಳ, ನಾವೀಗ ಇದುವರೆಗೂ ಪರಿಚಿತವಾದ ಪ್ರಪಂಚವನ್ನು ಹಿಂದಿಕ್ಕಿ ಬೇರೊಂದು ಜಗತ್ತನ್ನೇ ಪ್ರವೇಶಿಸುತ್ತಿದ್ದೇವೆ ಎಂಬುದನ್ನು ಘೋಷಿಸುವಂತಿತ್ತು. ಹೃಷಿಕೇಶದ ಬಯಲಿಂದ ಕೇವಲ ಹದಿನೈದು ಕಿಲೋಮೀಟರ್ ಬರುವ ವೇಳೆಗಾಗಲೇ ತಟಕ್ಕನೆ ನಾವು ಸುಮಾರು ಮೂರು ಸಾವಿರ ಅಡಿಗಳ ಆರೋಹಣದಲ್ಲಿದ್ದೆವು. ಹತ್ತು ಗಂಟೆಯ ಹೊತ್ತಿಗೆ ಬೆಟ್ಟದ ಏರುವೆಯಲ್ಲಿನ ನರೇಂದ್ರ ನಗರ ದೃಗ್ಗೋಚರವಾಯಿತು.  ನರೇಂದ್ರ ನಗರ ಟೆಹರಿ – ಘಡವಾಲ್ ಪ್ರದೇಶದ ಮುಖ್ಯಪಟ್ಟಣ. ಸಮುದ್ರ ಮಟ್ಟದಿಂದ ೩೮೫೦ ಅಡಿಗಳ ಎತ್ತರದಲ್ಲಿ ಹರಹಿಕೊಂಡ ಈ ನಗರ ಸಮಸ್ತ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ನರೇಂದ್ರನಗರವನ್ನು ದಾಟಿದ ಒಡನೆಯೇ  ಏರಿಳಿಯುವ ಹಿಮಾಲಯದ ಪರ್ವತ ಶ್ರೇಣಿಗಳು ಕಾಣತೊಡಗುತ್ತವೆ.

ನರೇಂದ್ರ ನಗರದಿಂದ ಮುಂದಕ್ಕೆ ಕಾಣುವ ಈ ಪರ್ವತ ಪ್ರದೇಶವನ್ನು ನಾವು ಪ್ರವೇಶ ಮಾಡುತ್ತಿದ್ದುದು, ನಾಲ್ಕು ಧಾಮ (‘ಚಾರೋಧಾಮ್’) ಗಳೆಂದು ಹೆಸರಾದ ಯಮುನೋತ್ರಿ, ಗಂಗೋತ್ರಿ, ಕೇದಾರ ಮತ್ತು ಬದರಿಗಳನ್ನು ಸಂದರ್ಶಿಸಲು. ಈ ನಾಲ್ಕು ಧಾಮಗಳಿರುವುದು ಮಧ್ಯ ಹಿಮಾಲಯದ ೧೮೫೩ ಚದರ ಮೈಲಿಗಳ ವಿಸ್ತೀರ್ಣದಲ್ಲಿ. ಈ ಭಾಗವನ್ನು ಉತ್ತರಖಂಡ ಎಂದು ಕರೆಯಲಾಗಿದೆ. ಚಮೋಲಿ, ಉತ್ತರಕಾಶಿ, ಪಿಥೋರ್‌ಘರ್, ನೈನಿತಾಲ್, ಅಲ್ಮೋರಾ, ಪೌರಿ, ತೆಹರಿ ಮತ್ತು ಡೆಹರಾಡೂನ್ ಜಿಲ್ಲೆಗಳನ್ನು ಒಳಗೊಳ್ಳುವ ಈ ವಿಸ್ತಾರವೇ ಉತ್ತರಖಂಡ. ಪುರಾಣಗಳಲ್ಲಿ ಈ ಪ್ರದೇಶವನ್ನು ಕೇದಾರಖಂಡ, ಕಿನ್ನರದೇಶ ಎಂದು ಕರೆಯಲಾಗಿದೆ. ಈ ಕೇದಾರಖಂಡಕ್ಕೆ ಇವತ್ತಿನ ಹೆಸರು ಘಡವಾಲ್. ಬ್ರಾಹ್ಮಣಗಳ ಕಾಲದಲ್ಲಿ (ಅಂದರೆ ವೇದಗಳ ಕಾಲಾನಂತರ) ಈ ಪ್ರದೇಶವನ್ನು ಬ್ರಹ್ಮರ್ಷಿದೇಶ ಎಂದು ಹೇಳಲಾಗಿದೆ. ಮಹಾಭಾರತದಲ್ಲಿ ಇದನ್ನೇ ಪಾಂಚಾಲ ದೇಶ ಎಂದು ಉಲ್ಲೇಖಿಸಲಾಗಿದೆ. ಪಂಚಪಾಂಡವರು ಈ ಮಾರ್ಗವಾಗಿಯೇ ಸ್ವರ್ಗಾರೋಹಣಕ್ಕೆ ಹೋದದ್ದು.

ಅಂದಿನ ಪಾಂಡವರು ಈ ಮಾರ್ಗವಾಗಿ ಸ್ವರ್ಗಕ್ಕೆ ಪ್ರಯಾಣ ಮಾಡಿದರೆ, ಟ್ಯಾಕ್ಸಿಯಲ್ಲಿ ಕೂತು ಪರ್ವತದ ಏರಿಳಿವುಗಳಲ್ಲಿ ಪ್ರಯಾಣಮಾಡುತ್ತಿದ್ದ ನಮಗಂತೂ, ಈ ನಿಸರ್ಗ ವೈಭವ ಸ್ವರ್ಗೀಯವಾಗಿತ್ತು. ಮುಂದಕ್ಕೆ ಏರುತ್ತಾ ಇಳಿಯುತ್ತಾ ಹೋದ ಹಾಗೆ, ತಟಕ್ಕನೆ ಒಂದರ ಹಿಂದೊಂದು ಪರ್ವತ ಪಂಕ್ತಿಗಳು ಪ್ರತ್ಯಕ್ಷವಾಗುತ್ತಿದ್ದವು. ಹೋದ ಹೋದಂತೆ ಇಕ್ಕೆಲಗಳಲ್ಲಿ ನಮ್ಮನ್ನು ತಬ್ಬಿ ಹಿಡಿದುಕೊಂಡಂತಿದ್ದ ಪರ್ವತ ಪಂಕ್ತಿಗಳು ಥಟ್ಟನೆ ಮಾಯವಾಗಿ, ಮತ್ತೆ ಬೇರೊಂದು ದಿಕ್ಕಿನಲ್ಲಿ ಮೈಲಿ ಮೈಲಿಗಳಗಲಕ್ಕೆ ತೆರೆದುಕೊಳ್ಳುವ ಕಂದರಗಳೂ, ಅವುಗಳ ನಡುವೆ ಮಧ್ಯಾಹ್ನದ ಬಿಸಿಲಲ್ಲಿ ಥಳಥಳಿಸಿ ಹೊಳೆಯುವ ಎಷ್ಟೋ ಹೊಳೆಗಳೂ ನಮ್ಮನ್ನು  ಸೆಳೆದುಕೊಳ್ಳುತ್ತಿದ್ದವು. ಮತ್ತೆ ಇದ್ದಕ್ಕಿದ್ದಂತೆ ಆಮರಿಕೊಳ್ಳುವ ಬೆಟ್ಟದ ಗೋಡೆಗಳಲ್ಲಿ ಈ ಎತ್ತರದ ಬೆಟ್ಟಗಳನ್ನು ಹೇಗೋ ಓಲೈಸಿಕೊಂಡು, ಅವುಗಳು ಕನಿಕರದಿಂದ ಅನುಗ್ರಹಿಸಿದ ಅವಕಾಶಗಳಲ್ಲಿ ತೆವಳುತ್ತಿದ್ದ ರಸ್ತೆಯಂಚಿಗೆ, ಆಳವಾಗಿ ಬಾಯ್ದೆರೆದ ಕಮರಿಗಳೂ, ಆ ಕಮರಿಗಳ ತಳದಲ್ಲಿ ಕನವರಿಸುವ ಒಂದೋ ಎರಡೋ ಮನೆಗಳೂ ಗೋಚರಿಸುತ್ತಿದ್ದವು. ಮತ್ತೆ ಆ ಕಮರಿಗಳ ತಳದಿಂದ ನಿಧಾನವಾಗಿ, ಧೀರವಾಗಿ ಮೇಲಕ್ಕೆದ್ದು ಮೈಕೊಡವಿಕೊಂಡು ಕೋಡುಗಳನ್ನೆತ್ತಿ ನಿಲ್ಲುವ ಬೃಹದಾಕಾರದ ಪರ್ವತಗಳ ತುಂಬಾ ದೇವದಾರು ವೃಕ್ಷಗಳು, ಕೆಲವೆಡೆ ದಟ್ಟವಾಗಿ ಮತ್ತೆ ಕೆಲವೆಡೆ ವಿರಳವಾಗಿ ಬೆಳೆದುಕೊಂಡಿದ್ದವು. ಮತ್ತೆ ಕೆಲವೆಡೆ ಏನೊಂದೂ ಬೆಳೆಯದ ನಿರ್ಭಾವ ಬೃಹದಾಕಾರಗಳು ! ಇಂಥ ಬೋಳು ಬೆಟ್ಟಗಳ ಮೈಯನ್ನು, ನೆತ್ತಿಯಿಂದ ತಳದವರೆಗೆ ಕೃಷಿಗಾಗಿ ಮೆಟ್ಟಿಲುಮೆಟ್ಟಲಾಗಿ ಅಗಲಕ್ಕೆ ಕಡಿದು ರೂಪಿಸಿದ ಸಾಹಸವೂ ಬೆರಗುಗೊಳಿಸುವಂತಿತ್ತು. ಈ ಸೋಪಾನ ಪಂಕ್ತಿ ವಿಸ್ತಾರಗಳಲ್ಲಿ ತಮಗೆ ಅಗತ್ಯವಾದ ಬೆಳೆಯನ್ನು ಇಲ್ಲಿನ ರೈತರು ತೆಗೆಯುತ್ತಾರೆ. ಅದರಲ್ಲಿ ಮುಖ್ಯವಾದದ್ದು ಅಲೂಗಡ್ಡೆ. ಈ ಆಲೂಗಡ್ಡೆ ಅನ್ನುವುದು ನಮ್ಮ ಈ ಹಿಮಾಲಯದ ಪ್ರವಾಸದ ಉದ್ದಕ್ಕೂ ಎಲ್ಲೆಂದರೆ ಅಲ್ಲಿ ನಮ್ಮ ಊಟದ ತಟ್ಟೆಯಲ್ಲಿ ಪ್ರತ್ಯಕ್ಷವಾಗುತ್ತಿದ್ದ ಒಂದು ಅನಿವಾರ್ಯ ವಸ್ತುವಾಗಿತ್ತು. ಹಿಮಾಲಯದ ಶೀತಲ ಶಿಖರಗಳಲ್ಲಿ, ತಮ್ಮ ಪಾಡಿಗೆ ತಾವು ನಿರ್ಜನ ಪ್ರದೇಶಗಳಲ್ಲಿ ತಪಸ್ಸು ಮಾಡುವ ಯೋಗಿಗಳಿಗೂ ಈ ಆಲೂಗಡ್ಡೆಯೆ ಮುಖ್ಯ ಆಹಾರವಾಗಿದೆಯಂತೆ. ಹಿಮಾಲಯದ ಎತ್ತರಗಳಲ್ಲಿ ವರ್ಷದಲ್ಲಿ ಹನ್ನೆರಡು ತಿಂಗಳೂ ವಾಸ ಮಾಡುವ ಸಾಧುಗಳಿಗೆ (ಇವರನ್ನು ಬಾರಾಮಾಸಿಗಳೆಂದು ಕರೆಯುತ್ತಾರೆ) ಭಕ್ತಾದಿಗಳು ಯಾರಾದರೂ, ಒಂದು  ಝೋಪಡಿ ಕಟ್ಟಿಸಿ, ಒಂದು ಮೂಟೆ ಆಲೂಗಡ್ಡೆಯನ್ನು ಕಾಣಿಕೆ ಎಂದು ಇರಿಸುತ್ತಾರಂತೆ. ಛಳಿಗಾಲದ, ದಟ್ಟ  ಹಿಮಾಚ್ಛಾದಿತವಾದ ಕಾಲಗಳಲ್ಲಿ, ಈ ಸಾಧುಗಳು ಅಗ್ಗಿಷ್ಟಿಕೆಯಲ್ಲಿ ದಿನಕ್ಕೊಂದು  ಆಲೂಗಡ್ಡೆಯನ್ನು ಬೇಯಿಸಿ ತಿಂದು, ತಮ್ಮ ತಪಸ್ಸನ್ನು ನಿರ್ವಿಘ್ನವಾಗಿ ಸಾಗಿಸುತ್ತಾರಂತೆ.

ಇಂಥ ಯೋಗೀಜನಪ್ರಿಯವಾದ ಆಲೂಗಡ್ಡೆಯ ಬಾಜಿ ಮತ್ತು ಒಂದಷ್ಟು ಚಪಾತಿಯನ್ನು ಮಧ್ಯಾಹ್ನ ಒಂದೂವರೆ ಗಂಟೆಯ ವೇಳೆಗೆ, ದಾರಿಯಲ್ಲಿ ಸಿಕ್ಕ ಹೋಟೆಲೊಂದರಲ್ಲಿ ತಿಂದು, ನಮ್ಮ ಪ್ರಯಾಣದ ಹಾದಿಯ ಮೊದಲ ಭೋಜನವನ್ನು ಮುಗಿಸಿದ್ದಾಯಿತು. ನಡುದಾರಿಯ ಕಣಿವೆಯಲ್ಲಿ ಒಂದೆಡೆ, ಕೆಂಪು ಬಾವುಟವೊಂದು ತಡೆದು ನಿಲ್ಲಿಸಿದಾಗ, ಅದು ನಮ್ಮ ಇನ್ಯಾಕ್ಯುಲೇಷನ್ ಸರ್ಟಿಫಿಕೇಟುಗಳನ್ನು ತಪಾಸಣೆ ಮಾಡುವ ಆರೋಗ್ಯ ಇಲಾಖೆಯ ಉಕ್ಕಡ ಅನ್ನುವುದು ಗೊತ್ತಾಯಿತು.  ದಾರಿಬದಿಯ ಒಂದು ಪುಟ್ಟ ಕಟ್ಟಡದಲ್ಲಿ ಕೂತ ವೈದ್ಯರು ಮತ್ತು ಅವರ ಸಹಾಯಕರು, ನಾವು ಇಲ್ಲಿಗೆ ಬರುವ ಮೊದಲು ಕಾಲರಾ ಚುಚ್ಚು ಮದ್ದನ್ನು ಹಾಕಿಸಿಕೊಂಡಿದ್ದೇವೆಯೇ ಎನ್ನುವುದನ್ನು ಖಚಿತಪಡಿಸಿಕೊಂಡು, ನಮ್ಮ ಬಳಿ ಇದ್ದ ಸರ್ಟಿಫಿಕೇಟುಗಳಿಗೆ  ಅಂಗೀಕಾರದ ಮುದ್ರೆಯೊತ್ತಿದರು. ಈ ಬಗೆಯ ಸರ್ಟಿಫಿಕೇಟು ಇಲ್ಲದಿದ್ದರೆ, ಅಂಥವರಿಗೆ ಅಲ್ಲೇ ಕಾಲರಾ ಚುಚ್ಚುಮದ್ದನ್ನು ಹಾಕುವ ವ್ಯವಸ್ಥೆಯೂ ಇತ್ತು. ಈ  ಪರಿಸ್ಥಿತಿಗೆ ನಾವು ಯಾರೂ ಒಳಗಾಗುವ ಭಯವಿರಲಿಲ್ಲ. ಮತ್ತೆ ನಮ್ಮ ವಾಹನದ ಗಾಲಿಗಳುರಳಿ, ಕಣಿವೆಯಿಂದ ಮತ್ತೆ ಎದುರಿನ ಪರ್ವತಗಳ ಮೈಯನ್ನು ನಾವು ಏರತೊಡಗಿದೆವು.  ಅಂಕುಡೊಂಕಿನ ಹಾವುದಾರಿಗಳಲ್ಲಿ ಚಲಿಸತೊಡಗಿದಂತೆ, ಮತ್ತೆ ಶಿಖರಗಳು, ಕಂದರಗಳು, ಏರುವೆಗಳು, ಇಳಕಲುಗಳು, ಪರ್ವತ ಪಂಕ್ತಿಗಳು, ದಟ್ಟವಾದ ಕಾಡುಗಳು, ಒಂದೇ ಸಮನೆ ಮನಸ್ಸಿನ ಮೇಲೆ ಧಾಳಿ ಮಾಡುತ್ತಿದ್ದವು. ಈ ದಾರಿಯಲ್ಲಿ ನೇರ, ಸರಳ ಎಂಬ ಮಾತಿಗೆ ಅರ್ಥವೇ ಇಲ್ಲ. ಒಂದಷ್ಟು ದೂರ ನೇರವಾಗಿ ಕಾಣಿಸಿಕೊಂಡ  ಈ ಕಗ್ಗಾಡಿನ ರಸ್ತೆ, ಕ್ಷಣಾರ್ಧದಲ್ಲಿ ಮತ್ತಾವುದೋ ಅನಿರೀಕ್ಷಿತ ತಿರುವುಗಳಲ್ಲಿ  ಮಾಯವಾಗುತ್ತಿತ್ತು. ಜತೆಗೇ ಅದು ತೆರೆಯುವ ಆಳವಾದ ಕಂದರಗಳು, ಆಕಾಶಸ್ಪರ್ಧಿಯಾದ ಎತ್ತರಗಳು, ಒಂದರೊಳಗೊಂದು ಬೆರೆತೂ ಮತ್ತೆ ಮೈದೋರುವ ಪ್ರತ್ಯೇಕತೆಗಳು. ಪರ್ವತಾರಣ್ಯಗಳನ್ನು ಕಣ್ಣಿಗೆ ಕಟ್ಟಿ ಗಿರಗಿರನೆ ತಿರುಗಿಸಿ ಅಪ್ಪಾಲೆ ತಿಪ್ಪಾಲೆ ಆಡಿಸಿದಂಥ ಅನುಭವ. ಕಾಡು, ಕಣಿವೆ, ನದಿ, ಹಸಿರು, ಶಿಖರ ಇತ್ಯಾದಿಗಳು ಒಂದರ ಮೇಲೊಂದು ಮುದ್ರೆಯೊತ್ತಿ, ಎಲ್ಲ ಅಸ್ತವ್ಯಸ್ತ ಕಲಸುಮೇಲೋಗರವಾಗಿ, ನಾವು ಅದರೊಳಗೋ, ಅದೇ ನಮ್ಮೊಳಗೋ, ನಾವೂ ಮತ್ತು ಅದು ಇನ್ನಾವುದರ ಒಳಗೋ ಎಂಬ ಭ್ರಮೆಯ ಗುಂಗು ತಲೆಯನ್ನು ತುಂಬಿ ಜೋಲಿ ಹೊಡೆಯುವಂತಾದಾಗ, ಗಕ್ಕನೆ ನಮ್ಮ ಟ್ಯಾಕ್ಸಿ ಒಂದೆಡೆ ನಿಂತಿತ್ತು. ಅದು ನಿಂತ ಕೂಡಲೇ ತಲೆಯೊಳಗೆ ಗರಗರನೆ ತಿರುಗುತ್ತಿದ್ದ ಚಕ್ರ ನಿಧಾನವಾಗುತ್ತ ಒಂದು ನೆಲೆಗೆ ನಿಂತು, ನಾವೀಗ ಎಲ್ಲಿದ್ದೇವೆ ಎಂಬುದರ ಸ್ಪಷ್ಟ ಅರಿವಾಯಿತು. ನಾವು ಇದ್ದದ್ದು ಹಚ್ಚ ಹಸುರಿನ ಏರುವೆಯಲ್ಲಿ. ಎಲ್ಲಿಂದಲೋ ಧುಮುಕುವ ಸಣ್ಣ ಜಲಪಾತವೊಂದರ ಬದಿಯಲ್ಲಿ, ನಮ್ಮ  ಡ್ರೈವರ್ ಕಾದು ಭುಸುಗುಡುತ್ತಿದ್ದ ಟ್ಯಾಕ್ಸಿಯ ಎಂಜಿನ್‌ಗೆ ನೀರು ಕುಡಿಸುತ್ತಿದ್ದ. ನಾವು ಕೆಳಗಿಳಿದು, ಮರಗಟ್ಟಿದಂತಿದ್ದ ಕಾಲುಗಳಿಗೆ ಒಂದಷ್ಟು ಕೆಲಸ ಕೊಟ್ಟೆವು. ನಾವಿದ್ದದ್ದು ಎಂಥ ದಟ್ಟವಾದ ಅರಣ್ಯವೆಂದರೆ,  ಹೆಮ್ಮರಗಳ ಕೋಟೆಯ ನಡುವೆ ಹೊಕ್ಕ ಅನುಭವವಾಗಿತ್ತು ನಮಗೆ. ಎತ್ತರವಾದ ಹಾಗೂ ದಪ್ಪಕಾಂಡಗಳ ಮರಗಳ ತುಂಬ ಹೊನ್ನ ಬಣ್ಣದ ಕೇಸರಗಳು. ಒಂದೊಂದು ಮರವೂ ತೇರಿನಂತೆ ಎತ್ತರವಾಗಿ ನಿಂತಿದ್ದವು. ಈ ಮಹಾವೃಕ್ಷಗಳ ಕೇಸರೀ ಬಣ್ಣದ ಎಲೆಗಳ ಮೇಲೆ ಸಂಜೆಯಕಡೆ ಹೊರಳುತ್ತಿದ್ದ ಸೂರ್ಯನ  ಬಿಸಿಲು ಬಿದ್ದು, ಅವು ಇನ್ನೂ ರಮ್ಯವಾಗಿ ಕಾಣತೊಡಗಿದ್ದವು. ಎಲ್ಲಿಂದಲೋ ವಾಹನದ ಸದ್ದು  ಮೊದಲು ದೂರದ  ಗುಂಜಾರವದಂತೆ  ಕೇಳತೊಡಗಿ ಕ್ರಮ ಕ್ರಮೇಣ ಕಗ್ಗಾಡಿನ ಮರಮರಗಳ ಮೌನವನ್ನು ಕದಡುತ್ತಾ, ಕಡೆಗೆ ಪ್ರಯಾಣಿಕರ ಟ್ಯಾಕ್ಸಿಯಾಗಿ ನಮ್ಮೆದುರಿನ ತಿರುವಿನಲ್ಲಿ ಕಾಣಿಸಿಕೊಂಡು, ನಮ್ಮ ಪಕ್ಕದಲ್ಲೇ ಧೂಳೆಬ್ಬಿಸಿಕೊಂಡು ಹೊರಟು ಹೋಯಿತು. ಅದು ಹೋದ ಕೂಡಲೇ ಮತ್ತೆ  ಪರ್ವತಾರಣ್ಯಗಳ  ಸ್ತಬ್ಧತೆ  ನಮ್ಮನ್ನು ಆಕ್ರಮಿಸಿಕೊಂಡಿತು. ಅದರ ನಡುವೆ ಜಲಪಾತದ ನಿರಂತರ ಘೋಷ, ಮರ ಮರಗಳ ಮೈಯಿಂದ ಹೊರಡುವ ಜೀರುಂಡೆಗಳ ಮೇಳ, ಎಲ್ಲವೂ  ಪ್ರತ್ಯೇಕ ಪ್ರತ್ಯೇಕವಾಗಿ ಯಾವ ಗೊಂದಲವೂ ಇಲ್ಲದೆ ತಮ್ಮ  ವಿಶಿಷ್ಟತೆಯನ್ನು ಪ್ರಕಟಿಸುವಂತೆ ತೋರಿದವು. ಆ ಪರ್ವತಾರಣ್ಯಗಳ ಮಹಾಮೌನ ಮತ್ತು ಶಬ್ದಗಳು ಒಂದರ ಜತೆಗೊಂದು, ಏಕಕಾಲಕ್ಕೆ ಇರಬಲ್ಲವೆಂಬ ಆನುಭವ ನಮಗಾಯಿತು. ಶಬ್ದ ಎಂದರೆ ಮೌನದ ಅಭಾವವಲ್ಲ; ಮೌನ ಎಂದರೆ ಶಬ್ದದ ಅಭಾವವಲ್ಲ. ಶಬ್ದ ಮೌನಗಳೆರಡೂ  ವಾಸ್ತವವಾಗಿ ಒಂದಕ್ಕೊಂದು ವಿರುದ್ಧವಾದವುಗಳಲ್ಲ. ಆ ಎರಡೂ ಏಕಕಾಲಕ್ಕೆ ಜತೆ ಜತೆಗೇ ಇರಲು ಸಾಧ್ಯ.

ನೀರು ತೋರಿಸಿದ ನಂತರ ಟ್ಯಾಕ್ಸಿ ಮತ್ತೆ  ಹೊಸ ಹುರುಪಿನಿಂದ ಹೊರಟಿತು. ಒಂದರ್ಧ ಗಂಟೆಯ ಪಯಣದ ನಂತರ ಕೆಳಗೆಲ್ಲೋ ದೂರದಲ್ಲಿ ಅಂಕು ಡೊಂಕಾಗಿ ಗಿರಿ – ಕಂದರಗಳ ನಡುವೆ ಹರಿಯುತ್ತಿದ್ದ ನದಿಯೊಂದನ್ನು ತೋರಿಸಿ, ನಮ್ಮ ಚಾಲಕ ಅದೇ ಯಮುನಾ ನದಿ ಎಂದು ಹೇಳಿದ. ಸ್ವಲ್ಪ ಹೊತ್ತಿನ ನಂತರ, ಹಲವು ಹಳ್ಳಿಗಳನ್ನು ಹಾದು, ಅಲ್ಲಲ್ಲಿ ಮನೆಗಳಿಗೆ ಹಿಂದಿರುಗುತ್ತಿದ್ದ ಎಮ್ಮೆಗಳ ಹಿಂಡನ್ನು ತೂರಿಕೊಂಡು, ಕೆಳಗೆ ಗೋಚರಿಸುತ್ತಿದ್ದ ಯಮುನಾನದಿಯನ್ನು, ಅಷ್ಟೇನೂ ಅಗಲವಲ್ಲದ ಸೇತುವೆಯ ಮೂಲಕ ದಾಟಿ, ಆಚೆಯ ದಡದ ಬೆಟ್ಟದಂಚಿನ ದಾರಿಯಲ್ಲಿ ಧಾವಿಸತೊಡಗಿದೆವು. ಕೆಳಗೆ ಯಮುನಾನದಿ ಇನ್ನೂ ತನ್ನ ಬಾಲ್ಯಾವಸ್ಥೆಯಲ್ಲಿ ಪ್ರವಹಿಸುತ್ತಿತ್ತು. ನದಿಯ ಅಂಚಿನಲ್ಲೇ ಮತ್ತಷ್ಟು ದೂರ ಪ್ರಯಾಣ ನಡೆದನಂತರ, ಮತ್ತೊಂದು ಸೇತುವೆಯನ್ನು ದಾಟಿದ ಕೂಡಲೇ, ಇನ್ನೊಂದು ಬೆಟ್ಟದ ತಪ್ಪಲಿನಲ್ಲಿದ್ದ ಹಳ್ಳಿಯೊಂದನ್ನು ತಲುಪಿದೆವು. ಅದೇ ಸಯಾನ ಚಟ್ಟಿ. ಅಲ್ಲಿ ಆಗಲೇ ಪ್ರಯಾಣಿಕರನ್ನು ಕರೆದು ತಂದ ಹಲವು ಬಸ್ಸುಗಳು ನಿಂತದ್ದರಿಂದ ಅಲ್ಲಿನ ಸರ್ಕಾರೀ ವಸತಿ ಗೃಹದಲ್ಲಿ ತಂಗಲು ಸ್ಥಳವಿಲ್ಲವೆಂದು ತಿಳಿಯಿತು. ಅಲ್ಲಿಂದ ಮೇಲೆ, ಐದು ಕಿಲೋಮೀಟರ್ ದೂರದಲ್ಲಿರುವ ಹನುಮಾನ್‌ಚಟ್ಟಿಯಲ್ಲಿ ಸ್ಥಳವೇನಾದರೂ ದೊರೆಯಬಹುದೆ ಎಂದು ವಿಚಾರಿಸಿದ್ದರಲ್ಲಿ, ಅಲ್ಲಿ ಇಲ್ಲಿಗಿಂತ ಹೆಚ್ಚು ನೂಕು ನುಗ್ಗಲು ಇರುವುದಾಗಿ ತಿಳಿಯಿತು. ಆದರೆ ಸಯಾನಚಟ್ಟಿಯ ಅತಿಥಿಗೃಹದಲ್ಲೇ ಸಂಜೆ ಆರೂವರೆಯ ಹೊತ್ತಿಗೆ ಯಾರಾದರೂ ಖಾಲಿ ಮಾಡುವುದಾದರೆ, ತಂಗಲು ಅವಕಾಶ ಮಾಡಿಕೊಡುವುದಾಗಿ ದೊರೆತ ಆಶ್ವಾಸನೆಯನ್ನು ನಂಬಿ, ಅಲ್ಲೇ ಇದ್ದ ಕ್ಯಾಂಟೀನಿನಲ್ಲಿ ಒಂದಷ್ಟು ಚಹಾ ಕುಡಿದು, ಪಕ್ಕದಲ್ಲೇ ಪ್ರವಹಿಸುತ್ತಿದ್ದ ಯಮುನಾನದಿಯನ್ನು  ಸೇತುವೆಯ ಬದಿಗೆ ನಿಂತು ನೋಡತೊಡಗಿದೆವು. ಅಷ್ಟೇನೂ ಅಗಲವಲ್ಲದ ಕಣಿವೆಯಲ್ಲಿ ಯಮುನಾನದಿ, ಬಂಡೆಯಿಂದ ಬಂಡೆಗೆ ನೆಗೆದು, ಭೋರೆಂದು ಹರಿಯುತ್ತಿತ್ತು. ನದಿಯ ಎರಡೂ ಕಡೆಯ ಪರ್ವತಗಳು, ಈ ಮೊರೆತವನ್ನು ಕೇಳುತ್ತಾ, ಮೌನವಾಗಿ, ನಿಶ್ಚಲವಾಗಿ ಸಂಜೆಯ ಆಕಾಶವನ್ನು ಹೊದ್ದುಕೊಂಡು ಕುಳಿತಿದ್ದವು.

ಸಯಾನಚಟ್ಟಿ ಒಂದು ಸಣ್ಣ ಹಳ್ಳಿ.  ಹರಿದ್ವಾರದಿಂದ ಇಲ್ಲಿಗೆ ೨೨೮ ಕಿಲೋಮೀಟರ್. ಸಮುದ್ರ ಮಟ್ಟದಿಂದ ಸಯಾನಚಟ್ಟಿಯು ಸುಮಾರು ಆರು ಸಾವಿರದ ನಾಲ್ಕುನೂರ ಅಡಿಗಳ ಎತ್ತರದಲ್ಲಿದೆ. ಈ ಪರ್ವತಪ್ರದೇಶದ ಹಾದಿಯಲ್ಲಿರುವ ಇಂಥ ನೆಲೆಗಳನ್ನು ಚಟ್ಟಿ ಎಂದು ಕರೆಯುತ್ತಾರೆ. ಮೂಲತಃ ಚಟ್ಟಿ ಎಂದರೆ ತಂಗುವ ಸ್ಥಳ ಎಂದು ಅರ್ಥ. ಈ ಸಯಾನ ಚಟ್ಟಿ ಅಂಥದೊಂದು ತಂಗುದಾಣ. ಯಮುನೋತ್ರಿಗೆ  ಹೋಗಬೇಕಾದರೆ ಬರಬೇಕಾದದ್ದು ಇಲ್ಲಿಗೇ. ಕೆಲವು  ವರ್ಷಗಳ ಹಿಂದೆ, ಪ್ರಯಾಣಿಕರ ವಾಹನಗಳು ಇಲ್ಲಿಗೇ ನಿಂತು, ಯಮುನೋತ್ರಿಗೆ ಕಾಲ್ನಡಿಗೆ, ಕುದುರೆ ಇತ್ಯಾದಿಗಳ ಮೂಲಕ ಹೊರಡಬೇಕಾಗಿತ್ತು. ಆದರೆ,  ಈಗ ಮತ್ತೆ ಐದು ಕಿಲೊಮೀಟರ್ ದೂರಕ್ಕೆ ಇಲ್ಲಿಂದ ರಸ್ತೆಯನ್ನು ಹನುಮಾನ್‌ಚಟ್ಟಿಯವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಹನುಮಾನ್‌ಚಟ್ಟಿಯಿಂದ ಮುಂದಕ್ಕೆ ಯಮುನೋತ್ರಿಗೆ ಇರುವುದು, ಕೇವಲ ಕಾಲುದಾರಿ ಮಾತ್ರ.

ಇರುಳು ಇಳಿಯತೊಡಗಿದಂತೆ ಅದೆಲ್ಲಿಂದಲೋ ಭಯಂಕರ ಚಳಿ ಇಡೀ ಪರ್ವತ ಪ್ರಾಂತ್ಯದ ಮೇಲೆ ಅಮರಿಕೊಂಡಿತು. ನಾವು ನಡುಗುತ್ತ, ನದೀ ದಡದಿಂದ ಕ್ಯಾಂಟೀನಿನ ಜೋಪಡಿಗೆ ಹೆಜ್ಜೆ ಹಾಕಿದೆವು. ಆ ವೇಳೆಗೆ ವಸತಿಗೃಹದವರು, ಹೇಗೋ ಮಾಡಿ ಅತ್ಯಂತ ಇಕ್ಕಟ್ಟಾದ ಕೋಣೆಯೊಂದನ್ನು ತೆರವು ಮಾಡಿಕೊಟ್ಟರು. ಅಲ್ಲಿ ಮಂಚಗಳಿಲ್ಲ, ಒಂದು ವೇಳೆ ಅವರು ಮಂಚಗಳನ್ನು ಕೊಟ್ಟರೂ ಹಾಕುವುದಕ್ಕೂ ಜಾಗವಿಲ್ಲ. ನೆಲದ ಮೇಲೆ ಜಮಖಾನೆಗಳನ್ನು ಹಾಸಿ, ಅದರ ಮೇಲೆ ಒಂದಷ್ಟು ರಜಾಯಿಗಳನ್ನು ಹರಡಿದ್ದರು. ಈ ‘ಸೀಸನ್’ನಲ್ಲಿ ಇಷ್ಟರ ಮಟ್ಟಿಗೆ ವಸತಿ ಸಿಗುವುದೇ ಪುಣ್ಯ ಎಂದು ಸಮಾಧಾನ ಪಟ್ಟುಕೊಂಡದ್ದಾಯಿತು. ಮುಂದೆ ನಮ್ಮ ಪ್ರಯಾಣದ ಉದ್ದಕ್ಕೂ, ಇದಕ್ಕಿಂತಲೂ ಮಿಗಿಲಾದ ಅನಾನುಕೂಲಗಳನ್ನು ಎದುರಿಸ ಬೇಕಾಗುತ್ತದೆಂದು ಗೊತ್ತಿತ್ತು. ನಾವು, ಈ ನಾಲ್ಕು ಧಾಮಗಳಿಗೆ ಹೊರಟಾಗಲೇ ಹಿರಿಯರೊಬ್ಬರು ಹೇಳಿದ್ದರು. “ಈ ಕಾಲದಲ್ಲಿ ತುಂಬ ಜನಸಂದಣಿ ಇರುತ್ತದೆ, ಪ್ರಯಾಣ ಬೇರೆ ತುಂಬ ಕಷ್ಟ. ಈ ನಾಲ್ಕು ಸ್ಥಳಗಳಲ್ಲಿ ಬದರಿ ಕೇದಾರಗಳಿಗೆ ಮಾತ್ರ ಈಗ ಹೋಗಿ, ಬೇಕಾದರೆ ಸೆಪ್ಟೆಂಬರ್‌ನಲ್ಲಿ ಗಂಗೋತ್ರಿ – ಯಮುನೋತ್ರಿಗಳಿಗೆ ಹೋಗುವಿರಂತೆ’ ಎಂದು. ಆದರೆ, ದೂರದ ದಕ್ಷಿಣದಿಂದ ನಾವು ಇಷ್ಟಪಟ್ಟಾಗೆಲ್ಲ ಹೀಗೆ ಬರಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಈ ನಾಲ್ಕು ಧಾಮಗಳಿಗೆ ಟ್ಯಾಕ್ಸಿ ಬೇರೆ ಗೊತ್ತು ಮಾಡಿಕೊಂಡು ಆಗಿತ್ತು. ಹೇಗೋ ಹೊರಟಿದ್ದೇವೆ, ಆದದ್ದಾಗಲಿ ಎಂಬ ಯೋಚನೆ ನಮ್ಮದು.

ಕಿರಿಯ ಕೋಣೆಯೊಂದು ದೊರೆತ ನಂತರ, ಪ್ರವಾಸಿಮಂದಿರದ ಹತ್ತಿರ ತುಂಬ ಲವಲವಿಕೆಯ ಕಿರುಹರೆಯದ ಸಂಸಾರವೊಂದು ನಡೆಸುತ್ತಿದ್ದ ಕ್ಯಾಂಟೀನಿಗೆ ಹೋಗಿ, ಅವರು ಬೇಯಿಸಿ ಕೊಟ್ಟ ಬಿಸಿ ಬಿಸಿ ಚಪಾತಿ, ಪರೋಟ, ಅನ್ನ, ತರಕಾರಿಗಳಿಂದ ಗಡದ್ದಾದ ಊಟ ಮುಗಿಸಿದೆವು. ಊಟದ ನಂತರ ಕೈಗೆ ಬಂದ ‘ಬಿಲ್’ ಮಾತ್ರ ಸ್ವಲ್ಪ ದುಬಾರಿಯಾದ್ದೆಂಬಂತೆ ತೋರಿದರೂ, ವರ್ಷದಲ್ಲಿ ಕೇವಲ ಆರು ತಿಂಗಳ ಕಾಲ, ಯಾತ್ರಿಕರಿಗಾಗಿಯೇ ಹೀಗೆ ಇಂಥ ಪರ್ವತ ಪ್ರದೇಶದಲ್ಲಿ ಕ್ಯಾಂಟೀನ್ ನಡೆಸುವವರ ಕಷ್ಟಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಒಳ್ಳೆಯದು ಅನ್ನಿಸಿತು.

ಹಿಂದಿನ ದಿನ ಹರಿದ್ವಾರದ ಸಮತಲ ಪ್ರದೇಶದ ಬಿರುಬಿಸಿಲಿನಲ್ಲಿ ಬೆಂದ ನನಗೆ, ಈ ದಿನದ ಈ ಎತ್ತರದ ಛಳಿಗೆ ಒಳಗಾದದ್ದರಿಂದಲೋ ಏನೋ ಹಠಾತ್ತನೆ ವಿಲಕ್ಷಣವಾದ ವೇದನೆ ಶುರುವಾಯಿತು. ಕೈ ಕಾಲುಗಳು ನಡುಗತೊಡಗಿದವು, ಮೈಯೆಲ್ಲಾ ಬಿಸಿ ಬಿಸಿ. ಛಳಿಜ್ವರ ಬಂದಂಥ ಅನುಭವ. ಬೆಳಿಗ್ಗೆ ಯಮುನೋತ್ರಿಗೆ ಬೇರೆ ಹೋಗಬೇಕು. ಈ ನನ್ನ ಅನಾರೋಗ್ಯದಿಂದ ಗಾಬರಿಯಾದದ್ದು ನಮ್ಮ ಮನೆಯವರಿಗೆ. ಒಂದು ಕ್ರೋಸಿನ್ ನುಂಗಿ, ಸಾಕಷ್ಟು ಹೊದ್ದುಕೊಂಡು ಮಲಗಿದೆ. ವಸತಿಗೃಹದ ವಾಚ್‌ಮನ್ ಹೇಳಿದ, ‘ಬಾಬೂಜೀ ರಾತ್ರಿ ಹೊರಗೆ ಹೋಗಬೇಡಿ, ನಿನ್ನೆ ದಿನ ಹಾಡುಹಗಲಲ್ಲೇ ಒಂದು ಹುಲಿ ನಮ್ಮ ಚೌಕೀದಾರನ ಮೇಕೆಯೊಂದನ್ನು ಹೊತ್ತುಕೊಂಡು ಹೋಯಿತು’. ಆ ಹುಲಿಯನ್ನೂ, ಅದರ ಬಾಯಿಗೆ ಆಹಾರವಾದ ಮೇಕೆಯ ಪಾಡನ್ನೂ ನೆನೆಯುತ್ತಾ ತುಂಬ ಹೊದ್ದುಕೊಂಡು ಮಲಗಿದೆ. ಅಗಾಧವಾದ ನಿಶ್ಯಬ್ದವೊಂದು ಆ ಪ್ರವಾಸಿಮಂದಿರವನ್ನು ಆಕ್ರಮಿಸಿಕೊಂಡಿತ್ತು. ಯಾವಾಗಲೋ ಭಾರೀ ನಿದ್ದೆ ಹತ್ತಿತ್ತು.

ಬೆಳಗಾಗುವ  ಹೊತ್ತಿಗೆ (೧೫.೫.೧೯೮೪) ಆಶ್ಚರ್ಯಕರವಾಗಿ ಆರಾಮಾಗಿದ್ದೆ. ಹಿಂದಿನ ದಿನದ ಪ್ರಯಾಣ ಮತ್ತು ಹವಾಮಾನದ ಬದಲಾವಣೆಯಿಂದಾದ ಅಸ್ವಸ್ಥತೆ  ಮಾಯವಾಗಿ, ಈ ಎತ್ತರದ ಹವಾಮಾನಕ್ಕೆ ಶರೀರ ಹೊಂದಿಕೊಂಡಿತ್ತು. ಬೇಗ ಬೇಗ ಸಾಮಾನುಗಳನ್ನು ಪ್ಯಾಕ್ ಮಾಡಿ, ಒಂದಷ್ಟು ಉಪಹಾರ ಮುಗಿಸಿ, ಕೈಗೆ-ಕಾಲಿಗೆ – ಮೈ ಮುಖಕ್ಕೆ ಬೆಚ್ಚನೆಯ ಬಟ್ಟೆ ತೊಡಿಸಿ ಟ್ಯಾಕ್ಸಿಯಲ್ಲಿ ಕೂತು, ಐದು ಕಿಲೋಮೀಟರ್ ಪ್ರಯಾಣದ ಏರುವೆಯ ನಂತರ, ಸುಮಾರು ಏಳುಸಾವಿರದ ಆರುನೂರು ಅಡಿ ಎತ್ತರದಲ್ಲಿರುವ ಹನುಮಾನ್‌ಚಟ್ಟಿಯನ್ನು ತಲುಪಿದೆವು. ಅಲ್ಲಿ ಆಗಲೇ ಬಸ್ಸುಗಳು – ಕಾರುಗಳು ಜಮಾಯಿಸಿದ್ದವು. ನಮ್ಮ ಟ್ಯಾಕ್ಸಿ ನಿಂತ ಕೂಡಲೇ ಮುಂದಿನ ಪ್ರಯಾಣಕ್ಕೆ ಕಂಡಿಗಳನ್ನು, ದಂಡಿಗಳನ್ನು, ಕುದುರೆಗಳನ್ನು ವ್ಯವಸ್ಥೆ ಮಾಡಿಕೊಡುವ ದಳ್ಳಾಳಿಗಳು ನಮ್ಮನ್ನು ಮುತ್ತಿಕೊಂಡರು.

ಹನುಮಾನ್‌ಚಟ್ಟಿಯಿಂದ ಯಮುನೋತ್ರಿಗೆ ಹದಿಮೂರು ಕಿಲೋಮೀಟರ್ ಕಡಿದಾದ ಪರ್ವತಗಳ ಏರುವೆಯ ದಾರಿ. ಈ ದಾರಿಯಲ್ಲಿ ಯಾವುದೇ ವಾಹನಗಳು ಹೋಗುವಂತಿಲ್ಲ. ಮುಂದೆ ಏರಬೇಕಾದ ಎತ್ತರ ಸುಮಾರು ನಾಲ್ಕು ಸಾವಿರ ಅಡಿಗಳು. ಈ ದಾರಿಯಲ್ಲಿ ಕಾಲುನಡಿಗೆಯಿಂದ ಹತ್ತಬೇಕು. ಇಲ್ಲವೆ ಕಂಡಿ, ದಂಡಿ, ಪೋನಿ (ಕುದುರೆ) ಗಳ ಮೇಲೆ ಹೋಗಬೇಕು. ನಾನು ನನ್ನ ವಯೋಮಾನದ ಕಾರಣದಿಂದ ಕಾಲ್ನಡಿಗೆಯಲ್ಲಿ ಹೋಗುವುದು ಸಾಧ್ಯವಿಲ್ಲದ ಮಾತಾಗಿತ್ತು. ಅಲ್ಲದೆ ಮಾರನೆ ದಿನದ ಬೆಳಿಗ್ಗೆ ಹನ್ನೊಂದರ ವೇಳೆಗೆ ನಮ್ಮ ಟ್ಯಾಕ್ಸಿಯ ಬಳಿಗೆ ಹಿಂದಿರುಗಿ, ಮುಂದೆ ಹಲವು ದಿನಗಳ ದಾರಿಯನ್ನು ಸವೆಸಬೇಕಾಗಿತ್ತು. ನನಗೇನೋ ಕುದುರೆಯ ಮೇಲೆ ಯಮುನೋತ್ರಿಗೆ ಹೋಗುವ ಆಸೆಯಿತ್ತು. ಆದರೆ ನಮ್ಮ ಮನೆಯವರು ಆ ಬಗ್ಗೆ ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದರಿಂದ ನಾನು ಕುದುರೆ ಏರುವ ನನ್ನ ಯೋಚನೆಯನ್ನು ಕೈ ಬಿಡಬೇಕಾಯಿತು. ಇನ್ನುಳಿದದ್ದು ಕಂಡಿ ಮತ್ತು ದಂಡಿ. ದಂಡಿ ಎನ್ನುವುದು ನಾಲ್ಕು ಜನರು ಹೊತ್ತುಕೊಂಡು ಹೋಗುವ ಡೋಲಿಯಂಥ ಒಂದು ವ್ಯವಸ್ಥೆ. ಅದರ ಮೇಲೆ ಕೂತವರು ಮೊಗಲ್ ಬಾದಷಹನಂತೆ, ದಿಂಬಿಗೆ ಒರಗಿಕೊಂಡು, ಮುಂದೆ ಕಾಲು ಚಾಚಿ ಕೂರಬೇಕು. ಕೈಲಲ್ಲೊಂದು ಗುಲಾಬಿ ಹಿಡಿದು ಅದನ್ನು ಮೂಸಿ ನೋಡುತ್ತಾ ಕೂತರೆ, ಆತ ಸಾಕ್ಷಾತ್ ಬಾದ್‌ಷಹಾನೇ. ಆದರೆ, ಅದಕ್ಕೆ ಬಹಳ ಬೆಲೆ. ಬೆಳಿಗ್ಗೆ ಮೂರುನೂರು ರೂಪಾಯಿಗಳಿದ್ದ ಬೆಲೆ, ಎಂಟೂವರೆಯ ವೇಳೆಗೆ, ಪ್ರಯಾಣಿಕರ ಬೇಡಿಕೆಯಿಂದ, ನಾಲ್ಕುನೂರು ರೂಪಾಯಿಗಳಿಗೆ ಏರಿತ್ತು. ಅದರ ಯೋಚನೆಯನ್ನು ಬಿಟ್ಟು, ನಾವು ಐದು ಮಂದಿಯೂ ಒಂದೊಂದು ಕಂಡಿಯನ್ನೇ ಗೊತ್ತು ಮಾಡಿಕೊಂಡೆವು. ಕಂಡಿ ಎನ್ನುವುದು ಒಂದು ರೀತಿಯ ಬುಟ್ಟಿ, ಇಂಗ್ಲಿಷಿನ ‘ಯೂ’ – U – ಆಕಾರಕ್ಕೆ ತೆರೆದುಕೊಂಡ, ಒಂದರ್ಥದಲ್ಲಿ ಉದ್ದಕ್ಕೆ ನಿಲ್ಲಿಸಿದ ತೊಟ್ಟಿಲನ್ನು ಹೋಲುವ ಬುಟ್ಟಿ. ಇದರೊಳಗೆ ನಾವು ಬೆನ್ನೂರಿ ಕೂತು, ಅದರಿಂದ ಇಳಿಯಬಿಟ್ಟ ಅಡ್ಡ ಕೋಲಿನ ಮೇಲೆ ನಮ್ಮ ಪಾದಗಳನ್ನು ಇರಿಸಿಕೊಳ್ಳಬೇಕು. ಮತ್ತೆ ನಮ್ಮ ಎದೆಯ ಮಟ್ಟದಲ್ಲಿ ಬುಟ್ಟಿಯ ಮೇಲ್ಭಾಗದ ಎರಡೂ ಕಡೆಗಳನ್ನು ಕೂಡಿಸುವ ಹಗ್ಗ. ಪ್ರಯಾಣಿಕರು ಈ ಕಂಡಿಗಳಲ್ಲಿ ಕುಳಿತ ಕೂಡಲೆ ಸದೃಢರಾದ ನೇಪಾಳಿ ಕೂಲಿಯವರು ಈ ಬುಟ್ಟಿಗಳನ್ನು ಅನಾಮತ್ತಾಗಿ ಎತ್ತಿ ತಮ್ಮ ಬೆನ್ನುಗಳ ಮೇಲೆ ಏರಿಸಿಕೊಳ್ಳುತ್ತಾರೆ. ಆ ಬುಟ್ಟಿಗೆ ಎರಡೂ ಕಡೆಯಿಂದ ಬಿಗಿದ ಪಟ್ಟಿಗಳನ್ನು ತಮ್ಮ ಭುಜಗಳಿಗೆ ಜೋಡಿಸಿಕೊಳ್ಳುತ್ತಾರೆ. ಅದರೊಳಗೆ ಕೂತವರನ್ನು ಈ ನೇಪಾಳಿಗಳು ಸಲೀಸಾಗಿ ಪರ್ವತದ ಕಡಿದಾದ ದಾರಿಯಲ್ಲಿ ಹೊತ್ತುಕೊಂಡು ಏರುತ್ತಾರೆ. ಹದಿಮೂರು ಕಿಲೋಮೀಟರ್‌ಗಳ ದೂರದ ಯಮುನೋತ್ರಿಗೆ ಹೋಗಿ ಮತ್ತೆ ಹಿಂದಕ್ಕೆ ಬರಲು ನೂರು ರೂಪಾಯಿಗಳನ್ನು ಒಂದೊಂದು ಕಂಡಿಯವರಿಗೆ ಕೊಡಬೇಕಾಗುತ್ತದೆ.

ನಾವು ಗೊತ್ತುಮಾಡಿಕೊಂಡ ಐದು ಕಂಡಿಗಳವರೂ ನಮ್ಮನ್ನು ಬೆನ್ನಿಗೇರಿಸಿಕೊಂಡು ಹೊರಟರು. ಈ ಕಷ್ಟದ ಪ್ರಯಾಣಕ್ಕೆ ಅವರು ಕೇಳಿದ್ದಕ್ಕಿಂತ ಸ್ವಲ್ಪ ಹೆಚ್ಚನ್ನೇ ಕೊಡುವುದಾಗಿ ಒಪ್ಪಿಕೊಂಡಿದ್ದೆವು. ಕಂಡಿಯಲ್ಲಿ ನಾವು ನಮ್ಮನ್ನೇ ಪರಸ್ಪರ ಗುರುತು ಹತ್ತದಷ್ಟು, ಬಟ್ಟೆ ಬರೆಗಳಿಂದ ಸುತ್ತಿಕೊಂಡಿದ್ದೆವು. ದೃಢಕಾಯನಾದ ನೇಪಾಳಿಯ ಬೆನ್ನ ಮೇಲಿನ ಬುಟ್ಟಿಯಲ್ಲಿ ಕೂತ ನನಗೆ ಒಂದೆಡೆ ಮೇಲಿನ ನೀಲಿಯ ಆಕಾಶ, ಮತ್ತೊಂದೆಡೆ ಬಲಗಡೆಗೆ ಎದ್ದ ಬೆಟ್ಟದ ಏಣುಗಳು, ಮತ್ತು ಕೆಳಗೆಲ್ಲೊ ಮೊರೆಯುವ ನೀರಿನ ಪ್ರವಾಹ ಅನುಭವಕ್ಕೆ ಬರತೊಡಗಿದವು. ನನ್ನನ್ನು ಹೊತ್ತ ಕಂಡಿಯವನು ಇಡುವ ಒಂದೊಂದು ದೃಢವಾದ ಹೆಜ್ಜೆಯ ಅರಿವೂ ನನಗಾಗುತ್ತಿತ್ತು. ಸ್ವಲ್ಪ  ದೂರ ಹೋದ ಮೇಲೆ ಕಣ್ಣನ್ನು ನಡೆದು ಬಂದ ದಾರಿಯ ಕಡೆ ಹೊರಳಿಸಿ ನೋಡುತ್ತೇನೆ. ನಾವು ಹೋಗುತ್ತಿರುವ ದಾರಿ ಅತ್ಯಂತ ಅಪಾಯಕಾರಿಯಾದದ್ದಾಗಿ ತೋರಿತು. ಎರಡೂ ಕಡೆ ದೈತ್ಯಾಕಾರದ ಪರ್ವತ ಶ್ರೇಣಿಗಳು. ಒಂದು ಶ್ರೇಣಿಯ ಅಂಚಿನಲ್ಲೆ ನಮ್ಮ ಏರುವೆಯ ದಾರಿ. ಈ ದಾರಿಯೋ ಕೇವಲ ಮೂರು ನಾಲ್ಕು ಅಡಿಗಳ ಅಗಲದ್ದು. ಅದನ್ನು ದಾರಿ ಎಂದು ಕರೆಯುವುದು ಕೂಡ ಅದನ್ನು ಹೊಗಳಿದಂತೆಯೇ. ಕಲ್ಲು, ಮಣ್ಣು, ಅಲ್ಲಲ್ಲಿ ಬೆಟ್ಟದ ಮೇಲಿಂದ ಹರಿದು ಕೆಳಗೆ ಇಳಿಯುವ ನೀರಿನಿಂದಾದ ಕೆಸರು ಈ ದಾರಿಯನ್ನು ಅಲಂಕರಿಸಿದ್ದವು. ಈ ಕಾಲುದಾರಿಯ ಅಂಚಿನ ಕೆಳಗೆ ಸಾವಿರಾರು  ಅಡಿಗಳ ಕಣಿವೆ.  ಆ ಕಣಿವೆಯ ಉದ್ದಕ್ಕೂ ಕಣ್ಣಿಗೆ ಆಗಾಗ ಕಾಣಿಸುವ, ಕಿವಿಗೆ ಕೇಳಿಸುವ ಯಮುನೆಯ ಪ್ರವಾಹ. ಇಂಥ ಇಕ್ಕಟ್ಟಿನ ದಾರಿಯಲ್ಲಿ ನಮ್ಮ ಕಂಡಿಯ ವಾಹಕರು ಏದುಸಿರುಬಿಡುತ್ತಾ, ನಮ್ಮನ್ನು ಹೊತ್ತು ಕಣಿವೆಯಿಳಿದು ಬೆಟ್ಟವೇರಿ ನಡೆಯುತ್ತಾರೆ. ಈ ದಾರಿಯಂಚಿಗೆ ಕೆಲವೆಡೆ ಪರ್ವತದ ಮೈಯಿಂದ ಹೊರ ಚಾಚಿಕೊಂಡ ಬಂಡೆಗಳ ಕೆಳಗೆ ಹೋಗಬೇಕಾಗುತ್ತದೆ. ಕೆಲವೆಡೆ ಬೆಟ್ಟದ ಮೈಯಿಂದ ಹರಿದು ಬರುವ ನೀರಿನ ಝರಿಗಳು ಒದ್ದೆ ಮಾಡಿದ ಕೆಸರನ್ನು ತುಳಿದು ಅಥವಾ ಅದನ್ನು ದಾಟಲು ಹಾಸಿದ ಕಲ್ಲುಗಳ ಮೇಲೆ ಕಾಲಿಟ್ಟು ಹೋಗಬೇಕು. ಇಂಥಾ ಕಡೆ  ಅಥವಾ ಉದ್ದಕ್ಕೂ  ಎಲ್ಲಾದರೂ  ಆಕಸ್ಮಾತ್ ನಮ್ಮನ್ನು ಹೊತ್ತ ಈ ಮನುಷ್ಯ ಕಾಲುಜಾರಿದನೋ, ಮುಗ್ಗುರಿಸಿದನೋ,  ಮುಗಿಯಿತು ನಮ್ಮ ಗತಿ. ನಾವು ಮತ್ತು ನಮ್ಮನ್ನು ಹೊತ್ತವನು ಹಾಗೂ ಕಂಡಿ ಎಲ್ಲವೂ ಪ್ರಪಾತದೊಳಗಿನ ಪ್ರವಾಹಕ್ಕೆ ನೈವೇದ್ಯ. ಒಟ್ಟಿನಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಹೋಗಬೇಕು. ಈ ನಮ್ಮ ದಾರಿ, ಐದು ಕಿಲೋಮೀಟರ್‌ನಷ್ಟು ಸಾಗಿದಾಗ, ಪೂಲ್ ಚಟ್ಟಿ ಎಂಬ ಸಣ್ಣ ನಿಲುಗಡೆ ದೊರೆಯಿತು. ಕಂಡಿಯಿಂದ ಇಳಿದು, ಪೂಲ್ ಚಟ್ಟಿಯ ಚಹದಂಗಡಿಯ ಜಗುಲಿಯ ಮೇಲಿ ವಿಶ್ರಮಿಸಿ ಒಂದಷ್ಟು ಬಿಸಿ ಬಿಸಿ ಚಹ ಕುಡಿದು, ನಮ್ಮನ್ನು ಹೊತ್ತು ತಂದ ಕಂಡಿಯವರಿಗೂ ಚಹ ಕುಡಿಸಿ ಉತ್ತರ ದಿಕ್ಕಿಗೆ ನೋಡಿದರೆ, ದೂರದಲ್ಲಿ ಹೊಳೆಯುತ್ತಿವೆ ಹಿಮಾಚ್ಛಾದಿತ ಧವಳ ಶಿಖರ ಪಂಕ್ತಿಗಳು. ಇದುವರೆಗೆ ನಮ್ಮ ಪಯಣದ ಹಾದಿಯಲ್ಲಿ ಕಂಡ ಪರ್ವತಗಳೇನಿದ್ದರೂ ಬೃಹದಾಕಾರದ, ಕೆಲವೆಡೆ ಸಸ್ಯ ಸಮೃದ್ಧವಾದ, ಮತ್ತೆ ಕೆಲವೆಡೆ ಬೋಳು ಶಿಖರಗಳನ್ನೆತ್ತಿ ನಿಂತವುಗಳು. ಅಲ್ಲೆಲ್ಲೂ ಈ ಶುಭ್ರ ಶ್ವೇತ ಹಿಮವಿರಲಿಲ್ಲ. ಆದರೆ ಈಗ ನಾನು ಕಣ್ಣೆದುರಿಗೆ ಕಾಣುವ ಈ ‘ನಗಾಧಿರಾಜ’ ಸೌಂದರ್ಯವೇ ಬೇರೆ ರೀತಿಯದು. ಈ ದೂರದೆತ್ತರದ ಶಿಖರಗಳಲ್ಲಿ ಶತ ಶತಮಾನಗಳಿಂದ ಸಂಚಯಗೊಂಡ ಹಿಮ, ನುಣ್ಣಗೆ, ಬೆಳ್ಳಗೆ, ಹಾಲಿನಂತೆ ಇಳಿದು ಬೆಳಗಿನ ಬಿಸಿಲಿನಲ್ಲಿ ಥಳಥಳಿಸುತ್ತಿತ್ತು. ಅತ್ಯುತ್ತರದ ‘ದಿಶಿದೇವತಾತ್ಮ’ ಗಳಂತೆ ಹೊಳೆಯುವ ಆ ಮಹೋನ್ನತ ಪರ್ವತ ಪಂಕ್ತಿ ಯಮುನಾನದಿಯ ಜನ್ಮಭೂಮಿಯಾದ ‘ಬಂದೇರ್‌ಪೂಂಚ್’ ಎಂದು ಚಹದಂಗಡಿಯವರು ತಿಳಿಸಿದರು. ‘ಅಂಬರ ಚುಂಬಿತ ಫಾಲ ಹಿಮಾಚಲ’ದ ದೃಶ್ಯದಿಂದ ಸಂಭ್ರಮಿತರಾಗಿ, ಮತ್ತೆ ಕಂಡಿಯನ್ನೇರಿ ಕುಳಿತೆವು. ಆದರೆ ನಮ್ಮ ಮುಖ, ನಾವು ಕಂಡ ಆ ಧವಳ ಶಿಖರಗಳಿಗೆ ವಿರುದ್ಧ ದಿಕ್ಕಿಗೆ ಇದ್ದುದರಿಂದ, ಆ ದೃಶ್ಯವನ್ನು ಮತ್ತೆ ನೋಡಲು ಸಾಧ್ಯವಾಗಲಿಲ್ಲ; ಆದರೆ, ಈ ಶಿಖರಗಳ ದಿಕ್ಕಿಗೆ ನಡೆದು ಹೋಗುವವರಿಗೆ, ಅವುಗಳ ದರ್ಶನ ಸಾಧ್ಯ. ಕಂಡಿಗಳ ಮೇಲೆ ನಾವು ಸಾಗಿದಂತೆ, ಉದ್ದಕ್ಕೂ ಹಲವಾರು ಪುಟ್ಟ ಪುಟ್ಟ ಹಳ್ಳಿಗಳು, ಟೀ ಅಂಗಡಿಗಳು, ಬೆಟ್ಟದ ಇಳಿಜಾರಿನಲ್ಲಿ ಬೆಳೆದ ಹೊಲಗಳು. ನಮ್ಮ ಹಿಂದೆ, ಯಮುನೋತ್ರಿಗೆ ಹೊರಟ ಅನೇಕ ಪ್ರಯಾಣಿಕರು; ಮತ್ತೆ ಆಗಲೇ ಯಮುನೋತ್ರಿಯನ್ನು ನೋಡಿಕೊಂಡು ತಮ್ಮ ತಮ್ಮ ವಾಹನಗಳನ್ನು ಹಿಡಿಯಲು ಕೆಳಮುಖವಾಗಿ ಇಳಿಯುವ ಮತ್ತಷ್ಟು ಪ್ರಯಾಣಿಕರು. ಇಂಡಿಯಾದ  ಬೇರೆ ಬೇರೆ ಪ್ರಾಂತ್ಯಗಳವರು; ಬೇರೆ ಬೇರೆ ಭಾಷೆಗಳವರು; ದಂಡಿಯ ಮೇಲೆ ಕೂತು ಹಾಯಾಗಿ ಕಾಲು ಚಾಚಿದವರು; ಕಂಡಿಗಳ ಬುಟ್ಟಿಯಲ್ಲಿ ಕೂತು ಹೆದರಿ ಕಂಗಲಾಗಿ ಕಣ್ಣು ಮುಚ್ಚಿ ಮಂತ್ರ ಜಪಿಸುವವರು; ಕೋಲೂರಿಕೊಂಡು ಹತ್ತುವ ಹಾಗೂ ಇಳಿಯುವ ವಿವಿಧ ವಯೋಮಾನದ ಜನರು; ಶರೀರ ಜೀರ್ಣವಾದರೂ ಯಮುನೋತ್ರಿಗೆ ನಡೆದೇ ಹೋಗಿ ಬರುವುದು ಪುಣ್ಯವೆಂದು ಭಾವಿಸಿದವರು; ಕಂಡಿ, ದಂಡಿ ಇತ್ಯಾದಿಗಳಿಗೆ, ಹಣ ಕೊಡಲಾಗದೆ, ಹೆಂಡತಿ ಮಕ್ಕಳನ್ನು ನಡೆಯಿಸಿಕೊಂಡು ಹೊರಟ  ಜನ ಸಾಮಾನ್ಯರು; ಹೆಂಡತಿಯ  ಕೈ ಹಿಡಿದು ಅಲ್ಲಲ್ಲಿ ಸುಧಾರಿಸಿಕೊಳ್ಳುತ್ತ ನಡೆಯುವವರು; ಮಕ್ಕಳನ್ನು ಹೆಗಲ ಮೇಲೆ ಕೂರಿಸಿಕೊಂಡು ಕೋಲೂರಿ ತತ್ತರಿಸುತ್ತ ಬರುವವರು; ಕುದುರೆಗಳ ಮೇಲೆ ಸಲೀಸಾಗಿ ಕೂತವರು; ಅಭ್ಯಾಸವಿಲ್ಲದೆ  ಕುದುರೆಯ  ಮೇಲೆ  ಕೂತು,  ಅದನ್ನು ನಡೆಸುವವರನ್ನು ಗುಮಾನಿಯಿಂದ ನೋಡುವ ಹಲವರು; ಸಾಹಸಕ್ಕೆ ಹೊರಟ ತರುಣ ಪ್ರವಾಸಿಗಳು; ಬಾಬ್ ಕಟ್ಟಿನವರು, ಜೀನ್ಸ್ ಪ್ಯಾಂಟಿನವರು,  ನಾಮದವರು, ಜುಟ್ಟಿನವರು, ವಿಭೂತಿಯವರು, ಸಾಧುಗಳು, ಭಿಕ್ಷುಕರು, ಕಂಡಿಗಳು, ದಂಡಿಗಳು, ಕುದುರೆಗಳು, ಕಾಲ್ನಡಿಗೆಯವರು ಎಲ್ಲರೂ – ಈ ಕೇವಲ ಮೂರು ಅಥವಾ ನಾಲ್ಕು ಅಡಿಗಳಗಲದ ಕಾಲುದಾರಿಗಳಲ್ಲಿ ನಡೆದಿದ್ದರು. ಪಾತಾಳದಾಕಳಿಗೆಗಳ  ತುಟಿಯಂಚಿನಲ್ಲೆ ಉದ್ದಕ್ಕೂ ಸಾಗುವಾಗ,  ಅತ್ತ ಇತ್ತ ಸುತ್ತಿಗೆ ಬಡಿಯುವ ಬೆಟ್ಟದ ಔನ್ನತ್ಯಗಳು ನಿಷ್ಠುರವಾಗಿ  ನಮ್ಮನ್ನು ನೋಡುತ್ತವೆ. ಈ ಏರುವೆಯ ದಾರಿಗಳಲ್ಲಿ ಮೇಲಿಂದ ಕೆಳಕ್ಕೆ ಇಳಿದು ಬರುವವರ ಮುಖದಲ್ಲಿನ ಯಾವುದೋ ಒಂದು ಧನ್ಯತೆಯನ್ನು, ಈ ಕೆಳಗಿನಿಂದ ಮೇಲಕ್ಕೆ ಏದುಸಿರುಬಿಡುತ್ತಾ ಹತ್ತುವ ಪ್ರಯಾಣಿಕರು ಗುರುತಿಸುತ್ತಾರೆ. ಹಾಗೆ ಕಂಡೊಡನೆಯೇ ಮೇಲಿಂದ ಬರುವವರು ‘ಜೈ ಜಮುನಾ ಮಾಯೀಜಿ’ ಎನ್ನುತ್ತಾರೆ. ಹೀಗೆಯೇ ಮೇಲೆ ಹೋಗುವವರು ಅದೇ ಮಂತ್ರವನ್ನು ಉಗ್ಗಡಿಸುತ್ತಾರೆ. ನಮ್ಮನ್ನು ಹೊತ್ತ ನೇಪಾಳಿ ಕೂಲಿಗಳು ಏದುಸಿರು ಬಿಡುತ್ತಾ, ಬೆವರು ಸುರಿಸುತ್ತಾ ಹತ್ತು ಸಾವಿರದ ಎಂಟುನೂರು ಅಡಿ ಎತ್ತರದ ಯಮುನೋತ್ರಿಯ ದಾರಿಯನ್ನು ಹತ್ತುತ್ತಾರೆ. ಅವರ ಅವಸ್ಥೆಯನ್ನು ನೋಡಿ ನನಗೆ ತುಂಬಾ  ಕಿರಿಕಿರಿಯಾಗುತ್ತದೆ. ನಾನೂ ಒಬ್ಬ ಮನುಷ್ಯನಾಗಿ, ಈ ಮನುಷ್ಯರ ಬೆನ್ನ ಮೇಲೆ, ಬೆವರಿನ ಮೇಲೆ, ಹೋಗಬೇಕಾಗಿ ಬಂದದ್ದಕ್ಕೆ ನನಗೆ ತುಂಬ ನಾಚಿಕೆಯಾಗುತ್ತದೆ. ಹೇಳಲಾಗದ ಅವಮಾನವನ್ನು ನಾನು ಅನುಭವಿಸುತ್ತೇನೆ. ಆದರೆ ನಾವೂ ಅವರೂ ಈ ಯಾತ್ರೆಯಲ್ಲಿ ಪರಸ್ಪರ ಅವಲಂಬಿಸಿದವರು; ಪರಿಸ್ಥಿತಿಯ ಅನಿವಾರ್ಯತೆಗೆ ಬದ್ಧರಾದವರು. ಆದುದರಿಂದ ಈ ಬಗ್ಗೆ ಕೊರಗಿ ಪ್ರಯೋಜನವಿಲ್ಲ. ಹೀಗಾಗಿ ನಾವೂ ಅಲ್ಲಲ್ಲಿ ತೀರಾ ಕಡಿದಾದ ಎಡೆಗಳಲ್ಲಿ ಅಥವಾ ಸಮತಲವಾದ ಕಡೆಗಳಲ್ಲಿ ಕಂಡಿಯಿಂದ ಇಳಿದು ಅವರ ಜತೆ ಒಂದಷ್ಟು ದೂರ ನಡೆಯುವುದರ ಮೂಲಕ ಒಂದು ರೀತಿಯ ಸಮಾಧಾನ ಪಟ್ಟುಕೊಂಡದ್ದಾಯಿತು. ದಾರಿ ಉದ್ದಕ್ಕೂ ಅಲ್ಲಲ್ಲಿನ ಹಳ್ಳಿಗಳಲ್ಲಿನ ಪುಟ್ಟ ಪುಟ್ಟ ಮಕ್ಕಳು, ನೋಡಲು ಸುಂದರವಾದ ಮೈಬಣ್ಣದ ಪುಟ್ಟ ಪುಟ್ಟ ಮಕ್ಕಳು, ಯಾತ್ರಿಕರ ಹಿಂದೆ ಹಿಂದೆ ‘ಬಾಬೂಜೀ ಪಾಂಚ್ ಪೈಸಾ ದೇವ್’ ಎಂದು ಓಡಿ ಬರುತ್ತಿದ್ದವು. ಆದರೆ ಆ ಮಕ್ಕಳ ಮೈಮೇಲೆ ಹರಕು ಬಟ್ಟೆ, ಕಣ್ಣಲ್ಲಿ ದೈನ್ಯ. ಚಿಂದಿಯಲ್ಲಿ ಅರಳಿದ ಈ ಗುಲಾಬಿಗಳು, ಕೈ ಚಾಚಿ ಹಿಂದೆ ಹಿಂದೆ ಬರುವ ದೃಶ್ಯ ಕರುಣಾಜನಕವಾಗಿತ್ತು. ಅಲ್ಲಲ್ಲಿ ದಾರಿ ಬದಿಗೆ ಕೂತ ಈ ಪ್ರದೇಶದ ಜನ, ಈ ಪರ್ವತ ಪ್ರಪಂಚದಾಚೆಗೆ ಒಂದು ನಾಗರಿಕ ಲೋಕವಿದೆ ಎಂಬುದನ್ನು ಬಹುಶಃ ಅರಿಯದವರಂತೆ, ಅವರೇ ಬೇರೊಂದು ಜಗತ್ತಿಗೆ ಸೇರಿದವರಂತೆ ತೋರಿದರು.

ಜಾನಕಿಚಟ್ಟಿ ಎಂಬ ಸಣ್ಣ ಊರನ್ನು ತಲುಪುವ ಹೊತ್ತಿಗೆ ಆಗಲೇ ಮಧ್ಯಾಹ್ನದ ಒಂದು ಗಂಟೆ ಬಡಿದಿತ್ತು. ಹನುಮಾನ್‌ಚಟ್ಟಿಯಿಂದ ಇಲ್ಲಿಗೆ ಕೇವಲ ಏಳು ಕಿಲೋಮೀಟರ್ ದಾರಿ. ಅದು ನಾಲ್ಕೂವರೆ ಗಂಟೆಗಳನ್ನು ತೆಗೆದುಕೊಂಡಿತ್ತು. ಇಲ್ಲಿಂದ, ಯಮುನೋತ್ರಿಯ ಮುಂದಿನ ಆರು ಕಿಲೋಮೀಟರ್‌ಗಳ ದಾರಿ ತುಂಬ ಪ್ರಯಾಸದ್ದು. ಕೆಲವೆಡೆ ಬೆಟ್ಟದ ಅಂಚಿನ ಹಾದಿ ತೀರಾ ಕಿರಿದಾಗುತ್ತಾ, ಕೆಳಗಡೆ ಬೆಳ್ನೊರೆಯನ್ನು ತೂರುತ್ತ, ವೇಗವಾಗಿ ಪ್ರಪಾತದಲ್ಲಿ ಹರಿಯುವ ಯಮುನೆಯ ಪ್ರವಾಹದತ್ತ ನೋಡಿದರೆ, ತಲೆತಿರುಗಿ ನಾವೇ ಉರುಳಬಹುದೆಂಬ ಭಯ ಕವಿದುಕೊಂಡಿತು. ಎದುರಿಗೆ ರೂಕ್ಷವಾದ, ನಿರ್ದಯವಾದ, ಹಸುರಿನ ಹೆಸರೇ ಇಲ್ಲದ ಗ್ರಾನೈಟ್ ಶಿಲೆಯ ನೇರಳೆ ಬಣ್ಣದ ಪರ್ವತದ ಅಸ್ತವ್ಯಸ್ತಗಳು. ನಮ್ಮ ದಾರಿಯ ಬದಿಗೂ ಅಂಥದೇ ಬಂಡೆಗಳ ಚಾಚು ಮೈಗಳು. ಎರಡೂ ಕಡೆಯ ಈ ನಿಷ್ಠುರ ಶಿಲಾಭಿತ್ತಿಗಳ ನಡುವಣ ಆಳದ ಕಂದರದಲ್ಲಿ ಮೊರೆದು ಬರುವ ಯಮುನೆಯ ಪ್ರವಾಹ, ಈ ಬಂಡೆಗಳ ಕಾರಣದಿಂದ ಇನ್ನೂ ಅನುರಣನ ಪ್ರತಿಧ್ವನಿಗಳಿಂದ ಇಡೀ ಆವರಣವನ್ನು ನಾದಮಯವನ್ನಾಗಿ ಮಾಡುತ್ತಿತ್ತು. ಬಂಡೆ – ಬೆಟ್ಟಗಳ ಕೆಳಗಿನ ದಾರಿಯ ಇಕ್ಕಟ್ಟಿನಲ್ಲಿ,  ರಕ್ಷಣೆಗೆ  ಇರಲಿ ಎಂದು ಯಾವುದೋ ಕಾಲದಲ್ಲಿ ಯಾರೋ ಹಾಕಿಸಿದ ಕಬ್ಬಿಣದ ಕಂಬಿಗಳು ಕೆಲವೆಡೆ ಬಿದ್ದುಹೋಗಿವೆ. ಮತ್ತೆ ಅಂಥವುಗಳನ್ನು ಹಾಕಿಸಬೇಕೆಂದು ಯಾರಿಗೂ ಅನ್ನಿಸಿಲ್ಲ. ಹೀಗಾಗಿ ಇಂಥ ದಾರಿಯಲ್ಲಿ ಕಂಡಿಗಳಿಂದ, ಕುದುರೆಗಳಿಂದ ಕೆಳಗೆ ಇಳಿದು, ಬಂಡೆಗಳ ಮೈಗೆ ಒತ್ತಿಕೊಂಡು, ಹೇಗೋ ಈ ಪ್ರಪಾತದ ದಾರಿಯನ್ನು ಜನ ದಾಟುತ್ತಾರೆ.

ಈ ಪ್ರಪಾತ ಪಥವನ್ನು ದಾಟಿದ ನಂತರ, ಮುಂದಿನ ಅರ್ಧ ಕಿಲೋಮೀಟರಿನ ದೂರವಂತೂ ನೇರವಾಗಿ ಆಕಾಶದ ಕಡೆಗೇ ಏರುವಂಥದ್ದು. ನಾವು ಹೊರಟ ಆರು ಆರೂವರೆ ಗಂಟೆಗಳ ನಂತರ, ಅಂದರೆ ಮಧ್ಯಾಹ್ನ ಸುಮಾರು ಎರಡೂವರೆ ಮೂರು ಗಂಟೆಗಳ ಹೊತ್ತಿಗೆ ಭಾರೀ ಕಣಿವೆಯೊಂದನ್ನು ಪ್ರವೇಶಿಸಿದೆವು. ಅದುವರೆಗೂ ನಮ್ಮ ಜತೆಗೆ ಎರಡೂ ಕಡೆಯಿಂದ ಬಂದ ಪರ್ವತಗಳು ಇಲ್ಲಿ ಒಂದನ್ನೊಂದು ಸಂಧಿಸಿದ್ದವು. ಪೂಲ್‌ಚಟ್ಟಿಯಿಂದ ದೂರಕ್ಕೆ ನಾವು ಕಂಡ ಆ ಹಿಮಾಚ್ಛಾದಿತ ಪರ್ವತಗಳ ತಪ್ಪಲಿಗೇ ನಾವು ತಲುಪಿದ್ದೆವು; ಆದರೆ ದೂರದಿಂದ ನಾವು ಕಂಡ ಆ ಹಿಮಶಿಖರಗಳು, ನಮಗೆ ಕಾಣದ ಹಿನ್ನೆಲೆಗೆ ಸರಿದಿದ್ದವು. ಈ ಕಣಿವೆಯಲ್ಲಿ ಒಂದಷ್ಟು ಚಹದಂಗಡಿಗಳೂ, ಪ್ರವಾಸಿಗಳಿಗಾಗಿ ಕೆಲವು ಕಾಟೇಜ್‌ಗಳೂ ಕಾಣಿಸಿಕೊಂಡವು. ಆ ನಡುವೆ ಬೆಟ್ಟಗಳೆಡೆಯಿಂದ ಕಿರಿದಾಗಿ ನುಗ್ಗಿ ಬರುವ ಯಮುನಾನದಿಯೂ, ಅದರ ದಡದಲ್ಲಿ ಒಂದು ದೇವಸ್ಥಾನವೂ, ಇದೇ ‘ಯಮುನೋತ್ರಿ’, ಯಮುನಾನದಿಯ ಮೂಲ ಅನ್ನುವುದನ್ನು ಸಾರುವಂತಿತ್ತು. ಹರಿದ್ವಾರದಿಂದ ಇಲ್ಲಿಗೆ ಬರುವ ವೇಳೆಗೆ ನಾವು ೨೪೬ ಕಿಲೋಮೀಟರ್‌ಗಳಷ್ಟು ದೂರ ಪ್ರಯಾಣ ಮಾಡಿದ್ದೆವು.

ಅಲ್ಲೇ ಒಂದು ಝೋಪಡಿಯ ಕೆಳಗಿನ ಹೋಟಲಂಗಡಿಯಲ್ಲಿ ಒಂದಷ್ಟು ಬಿಸಿಬಿಸಿ ಚಪಾತಿ, ಆಲೂಗಡ್ಡೆ ಪಲ್ಯ ನಮ್ಮ ಪಾಲಿನ ಊಟಕ್ಕೆ ಒದಗಿಬಂದುವು. ಊಟ ಮುಗಿಸಿ ಸ್ವಲ್ಪ ಕೆಳಕ್ಕೆ ಇಳಿದು, ಬೆಟ್ಟಗಳ ನಡುವಣ ಕಣಿವೆಯಿಂದ ಕಾಣಿಸಿಕೊಂಡು ಹರಿದು ಬರುವ ಯಮುನೆಯ ಜಲೋಲ್ಲಾಸವನ್ನು ನೋಡುತ್ತ ನಿಂತೆವು. ಭಕ್ತಾದಿಗಳ ಪಾಲಿಗೆ ಇದೇ ‘ಯಮುನೋತ್ರಿ’, ಯಮುನೆಯ ಮೂಲ; ಅವರ ಪ್ರಯಾಣದ ಗುರಿ. ವಾಸ್ತವವಾಗಿ ಯಮುನೆ ಉಗಮಿಸುವುದು ಇನ್ನೂ ಮೇಲೆ, ಬಂದೇರ್ ಪೂಂಚ್ ಎಂದು ಕರೆಯಲಾಗುವ ೨೦,೭೩೧ ಅಡಿಗಳ ಮಹಾಪರ್ವತದ ಅವಳಿ ಶಿಖರಗಳ ಹಿಂದೆ ಇರುವ ಕಾಳಿಂದೀ ಪರ್ವತದ ಹಿಮದ ನಿತ್ಯ ನೆಲೆಗಳಿಂದ. ಆದುದರಿಂದಲೇ ಯಮುನೆಯನ್ನು ಕಾಳಿಂದೀ ಎಂದು  ಕರೆಯಲಾಗಿದೆ; ಮತ್ತು ಯಮುನೆಯ ನೀರು ಗಂಗೆಯ ನೀರಿಗೆ ಹೋಲಿಸಿದರೆ, ಕಪ್ಪಗಿದೆ ಎಂಬ ಪ್ರತೀತಿಯೂ, ಈ ಹೆಸರಿನಿಂದಲೇ ಹುಟ್ಟಿಕೊಂಡಿರಬಹುದು. ನಾವು, ‘ಯಮುನೋತ್ರಿ’ ಎಂದು ಕರೆಯಿಸಿಕೊಳ್ಳುವ ತಪ್ಪಲಲ್ಲಿ ನಿಂತಿದ್ದೇವಲ್ಲ ಇದು, ಯಮುನಾನದಿ ವಾಸ್ತವವಾಗಿ ಉಗಮಿಸುವ ಶಿಖರಗಳಿಂದ ಹತ್ತು ಸಾವಿರ ಅಡಿಗಳಿಗೂ ಕೆಳಗಿನದು. ಸಮುದ್ರ ಮಟ್ಟದಿಂದ ನಾವು ನಿಂತ ಈ ತಪ್ಪಲು ಹತ್ತು ಸಾವಿರದ ಎಂಟುನೂರ ಅಡಿಗಳ ಹಂತದಲ್ಲಿದೆ. ಇಲ್ಲಿ ಹರಿಯುವ ಯಮುನೆ ಗಾತ್ರದಲ್ಲಿ ಕಿರಿದಾಗಿದ್ದರೂ, ಮೇಲಿಂದ ಧುಮುಕಿ ಬರುವುದರಿಂದ, ಇಡೀ ಕಣಿವೆಯಲ್ಲಿ ಹೊಗೆ ಮಂಜನ್ನು ಹಬ್ಬಿಸಿ ಮಾರ್ಮೊಳಗುತ್ತದೆ. ಈ ನದಿಯ ಸೆಳವನ್ನು ಸಣ್ಣದೊಂದು ಸೇತುವೆಯ ಮೂಲಕ ಹಾದು ಆಚೆ ಕಡೆಗೆ ಹೋದರೆ, ಬೆಟ್ಟದ ಗೋಡೆಗೆ ಅಂಟಿಕೊಂಡಂತಿದ್ದ ಒಂದು ಬಿಸಿನೀರಿನ ಕುಂಡ ಕಾಣಿಸಿತು. ಗಂಧಕದ ವಾಸನೆ ಹೊರಡುತ್ತಿದ್ದ ಆ ಕುಂಡದಲ್ಲಿ, ನಮ್ಮನ್ನು ಹೊತ್ತು ತಂದ ಕಂಡಿಯವರು ಹಾಯಾಗಿ ಸ್ನಾನ ಮಾಡುತ್ತಿದ್ದರು. ಆ ಕುಂಡದ ಮೇಲುಗಡೆ ಒಂದು ಕಲ್ಲಿನ ಮಂಟಪ; ಆ ಮಂಟಪದ ಅಂಚಿಗೆ ಆತುಕೊಂಡು ಬೆಟ್ಟದ ಬಂಡೆಯಲ್ಲಿ ಭುಸ್ಸೆಂದು ಹೊಗೆ ಹೊರಡುವ ಎರಡು ಕಣ್ಣಿನಂಥ ತೂತುಗಳು. ಆ ಬಂಡೆಗೆ  ಅರಿಸಿನ ಕುಂಕುಮ ಬಳಿದು, ಒಂದಿಬ್ಬರು ಪೂಜಾರಿಗಳು, ಅಲ್ಲೇ ಕೂತು ಬಂದ ಭಕ್ತಾದಿಗಳಿಗೆ ತೀರ್ಥ ಪ್ರಸಾದಗಳನ್ನು ಕೊಡುತ್ತಿದ್ದರು. ಕೋಟು ತೊಟ್ಟು, ತಲೆಗೆ ಉಣ್ಣೆಯ ಟೋಪಿಯ ಮುಸುಕಿಟ್ಟು , ಎಲೆ ಅಡಿಕೆ ಜಗಿಯುತ್ತಾ ಕೂತ ಈ  ಪೂಜಾರಿಗಳು, ಆ ಛಳಿಯಲ್ಲಿ ಹೇಳುತ್ತಿದ್ದ ಮಂತ್ರ , ತನ್ನದೇ  ಆದ ರೂಪವನ್ನು ತಾಳುತ್ತಿತ್ತು. ಅವರು ಪೂಜಿಸುತ್ತಿದ್ದ ಆ ಬಂಡೆ, ಅದರಲ್ಲಿ ಹೊಗೆಯಾಡುತ್ತಿದ್ದ ಕಣ್ಣುಗಳು, ಬೇರೇನೂ ಅಲ್ಲ;              ಬೆಟ್ಟಬಂಡೆಯ ಒಳಗಿಂದ ಚಿಮ್ಮಿ ಹರಿದು ಬಂದು ಕೆಳಗಿನ ಕುಂಡಕ್ಕೆ ಬೀಳುತ್ತಿದ್ದ ಬಿಸಿನೀರಿನ ಬುಗ್ಗೆಯ ನೆಲೆಗಳು. ಆ ಬಂಡೆದೇವರ ಬದಿಗೆ ನಿಂತ ನಮಗೆ, ಆ ಮೈ ನಡುಗಿಸುವ ಛಳಿಯನ್ನು ಹೋಗಲಾಡಿಸುವ ಬೆಚ್ಚನೆಯ ಅನುಭವವಾಯಿತು. ಅಲ್ಲಿಂದ ನಾಲ್ಕು ಹೆಜ್ಜೆ ಪಕ್ಕಕ್ಕೆ ಬಂದರೆ, ಯಮುನೆಯ ಸ್ತ್ರೀ ವಿಗ್ರಹವನ್ನು ಒಳಗೊಂಡ ಒಂದು ಪುಟ್ಟ ದೇವಸ್ಥಾನ. ಆ ದೇವಸ್ಥಾನಕ್ಕಾಗಲೀ, ಆ ಮೂರ್ತಿಗಾಗಲಿ ಅಂಥ ವಿಶೇಷವಾದ ಕಲೆಗಾರಿಕೆಯೇನೂ ಕಾಣಲಿಲ್ಲ. ಆದರೆ ಆ ಕಣಿವೆ, ಆ ಕಣಿವೆಯಲ್ಲಿ ನಿತ್ಯರಾಗಿಣಿಯಾಗಿ ಪ್ರವಹಿಸುವ ಯಮುನೆಯ ಶುಭ್ರ ಜಲಕಲ್ಲೋಲ, ಆ ಕಣಿವೆಯ ಮುಂದಕ್ಕೆ ನದೀ ಪಾತ್ರದ ಉದ್ದಕ್ಕೂ ತೆರೆದುಕೊಳ್ಳುವ ನಿಸರ್ಗವೈಭವ ನಿಜವಾಗಿಯೂ ದಿವ್ಯವಾಗಿತ್ತು.

ಯಮುನಾ ನದಿ ನಮ್ಮ ದೇಶದ ಮುಖ್ಯ ನದಿಗಳಲ್ಲಿ ಒಂದು. ಪುರಾಣಗಳ ಪ್ರಕಾರ ಯಮುನಾ ಸೂರ್ಯಪುತ್ರಿ ; ಯಮನ ಸಹೋದರಿ. ಕ್ರಿ. ಶ. ಎರಡನೆ ಶತಮಾನದ ಗ್ರೀಕ್ ಭೂಗೋಳ ಶಾಸ್ತ್ರಜ್ಞನಾದ ಟಾಲಮಿಯಲ್ಲಿ ಯಮುನೆಯ ಉಲ್ಲೇಖವನ್ನು ಬಿಟ್ಟರೆ ಯಮುನೋತ್ರಿಯ ಬಗ್ಗೆ ಹೇಳಿಕೊಳ್ಳಬಹುದಾದ ಚಾರಿತ್ರಿಕ ಮಾಹಿತಿ ಇಲ್ಲ. ಯಮುನೋತ್ರಿಯ ಈ ಕಣಿವೆಯಲ್ಲಿ ಕಾಣಿಸಿಕೊಳ್ಳುವ ಈ ನದಿ, ಹಿಮಾಲಯದ ಗಿರಿಕಂದರಗಳಲ್ಲಿ ಎಂಭತ್ತು ಮೈಲಿ ಪ್ರವಹಿಸಿ, ಮುಂದೆ ಫಜಿಯಾಬಾದ್ ಹತ್ತಿರ ದೊಡ್ಡ ಪ್ರಮಾಣದಲ್ಲಿ ಗೋಚರವಾಗುತ್ತದೆ. ನಂತರ ದೆಹಲಿ, ಬಾಗ್‌ಪತ್, ಬೃಂದಾವನ, ಮಥುರಾ, ಆಗ್ರ, ಫಿರೋಜಾಬಾದ್, ಕಲ್ಪಿ, ಹಮೀರಪುರಗಳ ಬದಿಯಲ್ಲಿ ಹಾಯ್ದು, ಅಲಹಾಬಾದ್‌ನಲ್ಲಿ ತನ್ನ ಮೂಲದಿಂದ ೮೬೦ ಮೈಲಿಗಳ ದೂರದಲ್ಲಿ ಗಂಗೆಯನ್ನು ಸಂಗಮಿಸುತ್ತದೆ. ಪ್ರಯಾಗ ಎಂದು ಹೆಸರಾಗಿರುವ ಗಂಗಾ ಯಮುನೆಯರ ಸಂಗಮ, ಭಾರತದ ಒಂದು ಪವಿತ್ರವಾದ ತೀರ್ಥಕ್ಷೇತ್ರವೆಂದು ಪರಿಗಣಿತವಾಗಿದೆ. ಸ್ತೋತ್ರಗಳಲ್ಲಿ ಗಂಗೆಯ ಜತೆಗೆ ಪ್ರಾತಃ ಸ್ಮರಣೀಯಳಾದ ಯಮುನೆ, ಶಿಲ್ಪಗಳಲ್ಲಿಯೂ ಗಂಗೆಯ ಜತೆಗೆ ಕಾಣಿಸಿಕೊಳ್ಳುತ್ತಾಳೆ. ಗುಪ್ತರ ಕಾಲದ ಶಿಲ್ಪಗಳಲ್ಲಂತೂ, ಅದರಲ್ಲಿಯೂ ದೇವಸ್ಥಾನದ ಬಾಗಿಲುವಾಡಗಳ ಮೇಲೆ ಗಂಗಾಯಮುನೆಯರಿಬ್ಬರೂ ಮೂರ್ತಿಸ್ವರೂಪದಲ್ಲಿ, ಮಕರ, ಕಚ್ಛಪಗಳ ಮೇಲೆ ನಿಂತ ನದೀದೇವತೆಗಳಂತೆ ಚಿತ್ರಿತವಾಗಿರುವುದನ್ನು ಕಾಣಬಹುದು. ಶಿವನ ಸಂಸರ್ಗ ಹಾಗೂ ಸ್ಮರಣೆಯೊಂದಿಗೆ, ಗಂಗೆ ಬೆಸೆದುಕೊಂಡಿರುವಂತೆ ಶ್ರೀ ಕೃಷ್ಣನ ಸಂಸರ್ಗ ಹಾಗೂ ನೆನಪುಗಳಿಂದ ಯಮುನೆ ಭಾರತೀಯರ ಮನಸ್ಸಿನಲ್ಲಿ ಅಮರವಾಗಿದೆ. ಯಮುನಾ ತೀರ, ಶ್ರೀಕೃಷ್ಣನ ಬಾಲಲೀಲೆಗಳಿಂದ, ಗೋಪಿಯರ ಶೃಂಗಾರ ಪ್ರಸಂಗಗಳಿಂದ, ರಾಧೆ ಶ್ಯಾಮರ ಪ್ರೇಮದಿಂದ ಭಾರತೀಯ ಕವಿ ಹಾಗೂ ಭಾವುಕರ ಕಲ್ಪನೆಯ ಭಂಡಾರವಾಗಿದೆ.

ಯಮುನೆಯ ಈ ಸೊಗಸು ಹಾಗೂ ನೆನಪುಗಳನ್ನು ಮೆಲುಕು ಹಾಕುತ್ತ ಹೀಗೆ ನಿಂತರೆ, ನಾವು ಹನುಮಾನ್‌ಚಟ್ಟಿಯನ್ನು ಮರುದಿನ ಬೆಳಿಗ್ಗೆ ತಲುಪುವುದು ತುಂಬ ತಡವಾದೀತೆಂಬ ಆತಂಕದಿಂದ, ಸಾಧ್ಯವಾದಷ್ಟು ಬೇಗ ಆರು ಕಿಲೋಮೀಟರ್ ದೂರದ ಜಾನಕಿ ಚಟ್ಟಿಗೆ ಹೋಗಿ ರಾತ್ರಿ ತಂಗುವುದು ಒಳ್ಳೆಯದೆಂದು ನಿರ್ಧರಿಸಿದೆವು. ಕೂಡಲೇ ನಮ್ಮ ಕಂಡಿಯವರಿಗೆ ಉಪಹಾರ ಮಾಡಿ ಹೊರಡಲು ತಯಾರಾಗ ಬೇಕೆಂದು ತಿಳಿಸಿ, ಅವರ ಊಟ ಮುಗಿಯುವ ತನಕ, ಒಂದರ್ಧಗಂಟೆ ಆ ಪರ್ವತಗಳ ಮುಕ್ಕೂಟದ ಕಣಿವೆಯಲ್ಲಿ ಧುಮುಕಿ ಹರಿಯುವ ಯಮುನೆಯನ್ನು ವೀಕ್ಷಿಸುತ್ತ, ಬಿಸಿ ಬಿಸಿಯಾದ ಚಹ ಕುಡಿದು ಮರುಪ್ರಯಾಣಕ್ಕೆ ಸಿದ್ಧರಾದೆವು. ಯಮುನೋತ್ರಿಯ ಬಿಸಿ ನೀರಿನ ಕುಂಡದಲ್ಲಿ ತಮ್ಮ ಶರೀರ ಶ್ರಮವನ್ನು ತೊಳೆದುಕೊಂಡು ಲವಲವಿಕೆಯನ್ನು ಪಡೆದುಕೊಂಡ ಕಂಡಿಯವರು ಮತ್ತೆ ಹೊಸ ಹುರುಪಿನಿಂದ ನಮ್ಮನ್ನು ಬೆನ್ನಿಗೇರಿಸಿಕೊಂಡು ಅವರೋಹಣದ ದಾರಿಯಲ್ಲಿ ಹೊರಟರು. ಶಂಕರ ಭಯಂಕರವಾದ ಆ ಕಣಿವೆಯ ದಾರಿಯಲ್ಲಿ ಮತ್ತೆ ನಮ್ಮ ಪಯಣ ಮುಂದುವರಿಯಿತು. ಮೂರು ನಾಲ್ಕು ಕಿಲೋಮೀಟರ್ ಬರುವ ವೇಳೆಗೆ, ತಟಕ್ಕನೆ ಭಾರೀ ಮೋಡದ ದಂಡು ಅದೆಲ್ಲಿಂದಲೋ ಧಾವಿಸಿ ಬಂದು ಘರ್ಜಿಸತೊಡಗಿತು. ಆ ಮೋಡಗಳ ಗುಡುಗು, ಆ ಬೃಹತ್ ಶಿಲಾಪರ್ವತಗಳ ಕುಹರ ಕುಹರಗಳ ನಡುವೆ ಪ್ರತಿಧ್ವನಿತಗೊಂಡು, ಹತ್ತಾರು ಹುಲಿಗಳು ಏಕಕಾಲಕ್ಕೆ ಘರ್ಜಿಸುವಂತೆ ಭಾಸವಾಯಿತು. ಒಡನೆಯೇ ‘ಸೊಯ್’ ಎಂಬ ಮಳೆಯ ಧಾರೆ ಇಡೀ ಪರ್ವತವನ್ನು ಕವಿಯಿತು. ಅನಿರೀಕ್ಷಿತವಾದ ಈ ಮಳೆಯನ್ನೆದುರಿಸಲು ಬೇಕಾದ ಪ್ಲಾಸ್ಟಿಕ್ ಹೊದಿಕೆಗಳನ್ನು ತಂದಿರಲಿಲ್ಲವಾದುದರಿಂದ, ನಾವು ಕಂಡಿಗಳಿಂದ ಇಳಿದು, ಅತ್ಯಂತ ಇಕ್ಕಟ್ಟಾದ ದಾರಿಯ ಮೇಲೆ ಚಾಚಿಕೊಂಡ ಬೆಟ್ಟದ ಬಂಡೆಯ ದವಡೆಗಳಲ್ಲಿ ರಕ್ಷಣೆಪಡೆದು ಕೂತೆವು. ನಮ್ಮ ಕಂಡಿಯವರ ‘ಬಾಬೂಜೀ ಈ ಮಳೆ ಹೆಚ್ಚು ಹೊತ್ತು ಬರುವಂಥದಲ್ಲ; ಈ ಕಾಲದಲ್ಲಿ ಇದು ಹೀಗೆಯೇ, ಭಯಪಡಬೇಡಿ. ಜಾನಕೀಚಟ್ಟಿಗೆ ಏನಾದರೂ ಮಾಡಿ ಸಂಜೆಯೊಳಗೆ ಹೋಗಿಯೇ ಬಿಡೋಣ’ ಎಂದು ಆಶ್ವಾಸನೆ ನೀಡಿದರು. ಆಗಲೇ ಆರೂವರೆಯಾಗಿದ್ದರೂ, ಬೇಸಿಗೆಯ ಕಾಲವಾದ್ದರಿಂದ, ಇನ್ನೂ ಬೆಳಕಿತ್ತು, ಕೇವಲ ಹದಿನೈದು ನಿಮಿಷಗಳಲ್ಲಿ ರಪರಪನೆ ಬಡಿದ ಮಳೆ,  ತಟ್ಟನೆ ನಿಂತು, ಮೋಡಗಳು ತೆಳ್ಳನೆಯ ಮಂಜಾಗಿ, ಎದುರಿನ ಗ್ರಾನೈಟ್ ಬಂಡೆಯ ಬೆಟ್ಟಗಳ ಮೇಲೆ ಸಂಜೆಯ ಬೆಳಕು ತಂಪಾಗಿ ಹಬ್ಬಿಕೊಂಡು, ನಾವು ಕೂತ  ನೆಲೆಯ ಕೆಳಗಿನ ಪ್ರಪಾತದಲ್ಲಿ ಹರಿಯುವ ಯಮುನೆಯ ಪ್ರವಾಹ ದೃಗ್ಗೋಚರವಾಗತೊಡಗಿತ್ತು. ಮತ್ತೆ ಈ ಪ್ರವಾಹದ ಅಂಚಿನಲ್ಲಿ ನಮ್ಮ ಪ್ರಯಾಣ ಮುಂದುವರೆದು, ಏಳು ಗಂಟೆಯ ಹೊತ್ತಿಗೆ ಜಾನಕೀಚಟ್ಟಿಯನ್ನು ತಲುಪಿದೆವು.

ಜಾನಕೀಚಟ್ಟಿಯಲ್ಲಿ ನಮ್ಮ ವಾಸಕ್ಕೆ ದೊರೆತದ್ದು ಒಂದು ಸಣ್ಣ ಮನೆ. ಅದು ಪೂರಾ ಮರದ್ದು. ಅದರ ನೆಲೆಗಟ್ಟು, ಗೋಡೆ, ಛಾವಣಿ ಎಲ್ಲ ಮರದ್ದು. ಆ ಕೋಣೆಗೆ ಒಂದೇ ಒಂದು ಕಿಟಕಿ. ಹತ್ತು ರೂಪಾಯಿ ಬಾಡಿಗೆಯ ಜತೆಗೆ, ಹಾಸಲು ಹೊದೆಯಲು ವ್ಯವಸ್ಥಾಪಕರು ಒದಗಿಸಿದ ಒಂದೊಂದು ಜತೆ ರಜಾಯಿಗೆ ಐದೈದು ರೂಪಾಯಿ. ಸುತ್ತ ಹೊರಗೆ ಕತ್ತಲು, ಒಳಗಿನ ಕತ್ತಲನ್ನು  ಕಳೆಯಲು ಒಂದು  ಸೀಮೆಎಣ್ಣೆ ಬುಡ್ಡಿಯನ್ನು ಕೊಡಲಾಗಿತ್ತು. ಈ ಲಾಡ್ಜಿಂಗ್ ಎದುರಿನ ತಿರುವಿನಲ್ಲೇ ಒಂದ ಝೋಪಡಿ ಹೋಟಲು. ಗ್ಯಾಸ್ ದೀಪದ ಬೆಳಕಿನಲ್ಲಿ ತತ್ತರಿಸಿ ಅದುರುವ ನಾಲ್ಕಾರು ಬೆಂಚು. ಯಾವುದೇ ಪರಿಷ್ಕಾರವಿಲ್ಲದ ಕುರ್ಚಿ ಮೇಜುಗಳು. ಎಲ್ಲಾ ಯಾತ್ರೆಯ ಈ ಕೆಲವು ತಿಂಗಳುಗಳಿಗಾಗಿ ಹೇಳಿ ಮಾಡಿಸಿದಂತಹ ಸಾಮಾನುಗಳು. ಒಂದು ದೊಡ್ಡ ಒಲೆಯಲ್ಲಿ ಸದಾ ಉರಿಯುವ ಕೊಳ್ಳಿಯ ಮುಂದೆ ಕೂತು, ನಮ್ಮ ಎದುರಿಗೇ  ಗೋಧಿ ಹಿಟ್ಟು ಕಲಸಿ, ಅಡಿಗೆಯವನು ಬಿಸಿಬಿಸಿಯಾಗಿ ಒಂದಷ್ಟು ರೊಟ್ಟಿ ಬೇಯಿಸಿ ಕೊಟ್ಟ. ಜತೆಗೆ ಆಲೂಗೆಡ್ಡೆಯ ಸಬ್ಜಿ ಮತ್ತು ದಾಲ್ (ಬೇಳೆ). ಮೂರು ಜನದ ಈ ಊಟಕ್ಕೆ ಕೇವಲ ಆರೇಳು ರೂಪಾಯಿ. ಈ ದಾರಿಯಲ್ಲಿ ಇಂಥ ಊಟ ಇಷ್ಟು ಅಗ್ಗವಾಗಿ ದೊರೆತೀತೆಂದು ನಾವು ಎಣಿಸಿರಲಿಲ್ಲ.

ಊಟ ಮುಗಿಸಿ, ಗದಗದ ನಡುಗಿಸುವ ಛಳಿಯಲ್ಲಿ ನಮ್ಮ ವಸತಿಗೆ ಬಂದು, ಹಾಸಲು ಹೊದೆಯಲು ಒದಗಿಸಿದ್ದ ರಜಾಯಿಗಳ ಒಳಗೆ, ಆಮೆ ತನ್ನ ಚಿಪ್ಪಿನೊಳಗೆ ಅಂಗಾಂಗಗಳನ್ನೆಳೆದುಕೊಳ್ಳುವಂತೆ, ಮುದುರಿಕೊಂಡು ಮಲಗಿದೆವು. ಆದರೆ, ಅಲ್ಲಿ ನಮಗೆ ಒದಗಿಸಲಾದ, ಬೂಷ್ಟು ಹಿಡಿದ ಹಾಸಿಗೆ – ಹೊದಿಕೆಗಳಲ್ಲಿ ನಿದ್ದೆ ಮಾಡುವುದು  ಅಂತಹ ನಿಶ್ಚಿಂತವಾದ ವಿಚಾರವಾಗಿರಲಿಲ್ಲ. ಈ ದಾರಿಗಳಲ್ಲಿ ದಿನಾ ಬಂದು ಹೋಗುವ ಎಷ್ಟೆಷ್ಟು ಮತ್ತು ಎಂತೆಂಥ ಜನ ಇವುಗಳನ್ನು ಹಾಸಿ ಹೊದ್ದುಕೊಂಡಿದ್ದರೋ ಎಂಬ ಆಲೋಚನೆ ನಮಗೆ ಆ ಛಳಿಯಲ್ಲೂ ಒಂದಷ್ಟು ಬೆವರು ಬರಿಸುವ ಸಂಗತಿಯಾಗಿದ್ದರೂ, ಇಂಥ ಕಡೆ ಏನಾದರಾಗಲಿ, ದೇವರೇ ಕಾಪಾಡಬೇಕು ಅಂದುಕೊಂಡು, ಜತೆಗೆ ನಾವು ಪ್ರಯಾಣಕ್ಕೆ ಬರುವಾಗ ಜತೆಗೆ ತಂದಿದ್ದ ರಗ್ಗುಗಳನ್ನು ಒಳಗೆ ಜೋಡಿಸಿಕೊಂಡು ಮಲಗಿದ್ದಾಯಿತು. ಇದರ ಮೇಲೆ ಹೇಗೂ, ಇನ್ಯಾಕ್ಯುಲೇಷನ್ ಮಾಡಿಸಿಕೊಂಡು ಬಂದಿದ್ದೇವಲ್ಲ ಎಂಬ ಸಂಗತಿಯನ್ನು ನೆನೆಸಿಕೊಂಡು ನಿದ್ದೆಮಾಡಲು ಪ್ರಯತ್ನಿಸಿದೆವು.

ಹೇಗೋ ಆ ಭಯಂಕರ ಛಳಿಯಲ್ಲಿ ನಿದ್ದೆ ಕವಿದುಕೊಂಡಿತು. ಆದರೆ ಯಾವಾಗಲೋ ಏನೋ ಕನಸಿನಲ್ಲೆಂಬಂತೆ ನಮಗೆ ತಿಳಿಯದ ಭಾಷೆಯಲ್ಲಿ ಒಂದು ಸಾಮೂಹಿಕ ಭಜನೆ ಶುರುವಾಯಿತು. ಹಾಗೇ ಕಿವಿಗೊಟ್ಟು ಕೇಳಿದರೆ ಆ ಭಜನೆ ನಮ್ಮ ಹಾಸಿಗೆಯ ಕೆಳಗೇ ನಡೆದಿತ್ತು !  ಹಿಂದಿನ ರಾತ್ರಿಯ ಕತ್ತಲಲ್ಲಿ ಈ ಕೋಣೆಯನ್ನು ಹಿಡಿದ ನಮಗೆ, ನಾವಿದ್ದ ಕೋಣೆಯ ಕೆಳಗೆ ಇನ್ನೂ ಒಂದು ಕೋಣೆ ನೆಲಮಟ್ಟದಲ್ಲಿರುವುದು ತಿಳಿದಿರಲಿಲ್ಲ. ಆ ಕೆಳಹಂತದ ಕೋಣೆಯಲ್ಲಿ ಯಮುನೋತ್ರಿಗೆ ಹೊರಟ ಯಾತ್ರಿಕರ ತಂಡವೊಂದು, ಬೆಳಗಿನ ಜಾವಕ್ಕೆ ಎದ್ದು ಭಜನೆಗೆ ತೊಡಗಿತ್ತು. ಮತ್ತೆ ಯಾವಾಗಲೋ ಆ ಭಜನೆ ಯಮುನೋತ್ರಿಯ ಕಡೆಗೆ ಹೋಯಿತೆಂದು ತೋರುತ್ತದೆ.