ಈ ಸಾರಿ ಸುರಿಯುತ್ತಿದ್ದ ಆಶ್ಲೇಷಾ ಮಳೆ ನಿಲ್ಲುವ ಲಕ್ಷಣವೇ ಕಾಣುತ್ತಿರಲಿಲ್ಲ.  ಸಾಗರ ತಾಲ್ಲೂಕಿನ ಯಲದುಂದ್ಲಿ, ಶುಂಠಿಕೊಪ್ಪ, ಸೂರಗುಪ್ಪೆ, ತಡಗಳಲೆ, ಕಾನಲೆ, ಮಂಡಗಳಲೆ ಹೀಗೆ ಭತ್ತದ ಸಾಲಿನ ಊರುಗಳೆಲ್ಲಾ ನದಿಯಲ್ಲಿ ಮುಳುಗಿಹೋಗುವಷ್ಟು ಮಳೆ.  ಸಾಗರದಲ್ಲಿ ಹುಟ್ಟುವ ವರದಾನದಿ ಈ ಊರುಗಳ ದಾರಿಯಲ್ಲಿ ಹೋಗುವಾಗ ಹುಣಸೆಹೊಳೆ, ಮಾವಿನಹೊಳೆ ಹಾಗೂ ಕನ್ನೊಳೆಗಳು ಸೇರಿಕೊಳ್ಳುತ್ತವೆ.  ಈ ಎಲ್ಲಾ ಹೊಳೆಗಳ ಸಂಗಮ ಯಲಕುಂದ್ಲಿಯ ಸಮೀಪದಲ್ಲಿದೆ.  ಮಳೆಗಾಲ ಬಂತೆಂದರೆ ಈ ಊರುಗಳಲ್ಲಿ ನೆರೆ ಬಂದೇ ಬರುತ್ತದೆ.

ಈ ಹೊಳೆದಂಡೆ ಪ್ರದೇಶವೆಲ್ಲಾ ಭತ್ತದ ಬಯಲು.  ಈ ಹೊಳೆ ನದಿಗಳ ಸುತ್ತಲಿನ ೪,೦೦೦ ಎಕರೆ ಪ್ರದೇಶಗಳಲ್ಲಿ ಭತ್ತ ಬೆಳೆಯುತ್ತಾರೆ.  ಈ ಪ್ರದೇಶದ ಯಾವ ರೈತರೂ ಮಲೆನಾಡಿನ ಹಣದ ಬೆಳೆ ಅಡಿಕೆ ಹಾಕಿಲ್ಲ.  ಭತ್ತ ಬಿಟ್ಟು ಬೇರೇನೂ ಬೆಳೆಯುವುದಿಲ್ಲ.  ಕಾರಣ ಪ್ರತಿವರ್ಷವೂ ಬಿಡದ ನೆರೆಹಾವಳಿ, ಬೇಸಿಗೆಯಲ್ಲಿ ನೀರಿಲ್ಲದ ಬರಗಾಲ.

ಮಳೆಗಾಲದಲ್ಲಿ ನೆರೆ ಬಂದರೆ ಕನಿಷ್ಠ ೪೦ ದಿನಗಳ ಕಾಲ ಈ ಪ್ರದೇಶದಲ್ಲಿ ನೀರು ನಿಂತೇ ಇರುತ್ತದೆ.  ಈ ಸಾರಿ ಸಹ ಸುಮಾರು ೨೦೦೦ ಎಕರೆ ಪ್ರದೇಶ ನೀರಿನಲ್ಲಿ ಮುಳುಗಿಹೋಗಿತ್ತು.  ಮಳೆಗಾಲ ಬಂತೆಂದರೆ ತಗ್ಗಿನ ಗದ್ದೆಗಳೆಲ್ಲಾ ನೀರುಪಾಲು.  ಇದು ಇಲ್ಲಿನ ಪ್ರತಿಯೊಬ್ಬ ರೈತರಿಗೂ ಗೊತ್ತು.  ಆದರೂ ಭತ್ತದ ನಾಟಿಯನ್ನು ಕಾಲಕ್ಕೆ ಸರಿಯಾಗಿ ಮಾಡುತ್ತಲೇ ಹೋಗುತ್ತಾರೆ.  ನೆರೆಗೆ ಸ್ವಲ್ಪವೂ ಅಂಜುವುದಿಲ್ಲ.  ಪ್ರತಿವರ್ಷ ಮಾರ್ಚ್‌‌ನಲ್ಲಿ ಹೂಟಿ, ಬಿತ್ತನೆ, ಜೂನ್‌ನಲ್ಲಿ ಹರಗಿ ಕುಂಟೆ ಹೊಡೆದು ಕಳೆ ತೆಗೆಯುತ್ತಾರೆ.  ಸಸಿಗಳು ನಾಲ್ಕೆಲೆ ಬಿಟ್ಟು ಚಿಗಿಯುವ ಸಮಯಕ್ಕೆ ಮಳೆಗಾಲದ ಅಬ್ಬರ ಪ್ರಾರಂಭ.  ಮಳೆ ಹೊಯ್ದರೆ ಹೆಚ್ಚಾ?  ಮಗ ಉಂಡರೆ ಹೆಚ್ಚಾ? ಎನ್ನುತ್ತಾ ಮಳೆಹಬ್ಬ ಆಚರಿಸುತ್ತಾ ಹಬ್ಬಗಳ ಸರಮಾಲೆಗೆ ನಾಂದಿ ಹಾಡುತ್ತಾರೆ.  ತಿಂಗಳುಗಟ್ಟಲೆ ಮಳೆ ಸುರಿದು, ನೀರು ನೆರೆಗದ್ದೆಯ ಮೇಲೆ ನಿಂತರೂ ನಿಶ್ಚಿಂತೆಯಿಂದ ಇರುತ್ತಾರೆ.  ಆಗಾಗ ನೆರೆ ನೀರು ಎಷ್ಟು ಏರಿದೆ ಎಂದು ನೋಡಿ ಬರುತ್ತಾರೆ.

ನೀರಿನಲ್ಲಿ ಮುಳುಗಿದ ಗದ್ದೆಗಳು ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಗುತ್ತದೆ.  ರೈತರಿಗೆ ಪರಿಹಾರ ಬರುತ್ತದೆ.  ಅನೇಕ ಮಧ್ಯವರ್ತಿಗಳ ಹೊಟ್ಟೆ ಉಬ್ಬುತ್ತದೆ.

ಮಳೆ ನಿಂತು ತಿಂಗಳಾದರೂ ನೆರೆ ಇಳಿಯುವುದಿಲ್ಲ.  ಭತ್ತದ ಸಸಿಗಳು ನೆರೆಯ ನೀರನ್ನೂ ಮೀರಿ ಮೇಲೇಳುತ್ತವೆ.  ಹಸಿರು ಎಲೆಗಳು ತೇಲುತ್ತಾ ಜೀವ ಬಿಗಿಯಾಗಿ ಹಿಡಿದಿಟ್ಟುಕೊಂಡಿರುತ್ತವೆ.  ನೆರೆಯಿಂದ ಜಮೀನು ಕೊಚ್ಚಿಹೋಗುವುದಿಲ್ಲ.  ಆದರೆ ಮಳೆಯ ರಭಸಕ್ಕೆ ಜಮೀನು ಕೊಚ್ಚಿಹೋಗುವ ಸಾಧ್ಯತೆ ಹೆಚ್ಚು.  ಆದರೆ ನೆರೆ ನೀರು ಮೇಲೆ ಬರುತ್ತಿರುವಷ್ಟು ಕಾಲ ತಣ್ಣಗೆ ಇರುತ್ತದೆ.  ಇದು ಸಸಿಗಳಿಗೆ ಅಪಾಯಕಾರಿಯಲ್ಲ.  ಆದರೆ ಮಳೆ ನಿಂತು ಬಿಸಿಲು ಬಂದರೆ, ನೆರೆಯ ನೀರು ಬಿಸಿಯಾಗತೊಡಗುತ್ತದೆ.  ಈ ಬಿಸಿಗೆ, ಧಗೆಗೆ ನೀರಿನೊಳಗಿದ್ದ ಸಸಿಗಳು ಬೆಂದುಹೋಗುತ್ತವೆ.  ಆಮೇಲೆ ನಿಧಾನ ಕೊಳೆಯತೊಡಗುತ್ತವೆ.  ಹೀಗೆ ಸಸಿಗಳೆಲ್ಲಾ ನಾಶ.

ಆದರೆ ಯಲದುಂದ್ಲಿಯಲ್ಲಿ ರೈತರು ನಾಟೀ ತಳಿಗಳ ಭಂಡಾರವನ್ನೇ ಹೊಂದಿದ್ದಾರೆ.  ಈ ನಾಟೀ ತಳಿಗಳು ಎಂತಹ ನೆರೆಯನ್ನು ಬೇಕಾದರೂ ಎದುರಿಸಬಲ್ಲವು.  ನೆರೆಯ ನೀರಿಗೆ ಎಲೆಗಳು ಕೊಳೆತರೂ ಸಸಿಗಳ ಬುಡ, ಬೇರು ಕೊಳೆಯುವುದಿಲ್ಲ.  ನೆರೆ ಇಳಿದ ಮೇಲೆ ಸಸಿಗಳು ಚಿಗಿತು ಏಳುತ್ತವೆ.  ಮರುಜನ್ಮ ಪಡೆದಂತೆ ಸೊಕ್ಕಿ ಬೆಳೆಯುತ್ತವೆ.  ಇದೇ ಪರಂಪರೆಯಿಂದಲೂ ಉಳಿದುಬಂದಿರುವ ನಾಟೀ ತಳಿಗಳ ಪವಾಡ.

ನೆರೆಗೂಳಿ, ನೆಟ್ಟಿಜಡ್ಡು, ಕರಿಜೆಡ್ಡು, ಕರೇಕಂಟಕ, ಕರೇಕಾಲ್‌ ದಡಿಗೆ, ಜೇನುಗೂಡು, ಕರೆಇಸಡಿ, ಕಳವೆ, ಕೆಂಪುದಡಿ ಬುಡ್ಡ, ನ್ಯಾರೇಮಿಂಡ, ಮದ್ರಾಸ್‌ ಸಣ್ಣ, ಮಟ್ಟಳಗ, ಸೋಮಸಾಲೆ. . .  ಹೀಗೆ ಬರನಿರೋಧಕ ತಳಿಗಳ ಸಮೂಹವೇ ಈ ಊರುಗಳಲ್ಲಿ ಲಭ್ಯ.

ಈ ತಳಿಗಳಿಗೆ ಹೆಚ್ಚು ಉಪಚಾರವಿಲ್ಲ.  ಬಿತ್ತುವಾಗ ಹಾಕಿದಷ್ಟೇ ಗೊಬ್ಬರ.  ಬಿತ್ತನೆಯ ನಂತರ ಹರಗಿ, ಕಳೆ ತೆಗೆದು, ಸಸಿಗಳ ಅಂತರ ಸರಿಪಡಿಸಿಬಿಡುತ್ತಾರೆ.  ನೆರೆಯ ನೀರಿನೊಳಗೆ ದಿನೇ ದಿನೇ ಮುಳುಗುತ್ತಿದ್ದಂತೆ, ಸಸಿಗಳ ’ ಬದುಕಿಗಾಗಿ ಹೋರಾಟ ’ ಪ್ರಾರಂಭವಾಗುತ್ತದೆ.

ಕೆಲವು ೧೦ ದಿನಗಳ ಕಾಲ ನೆರೆ ಎದುರಿಸಿ ಸೋಲುತ್ತವೆ.  ಕೆಲವು ೨೦ ದಿನಗಳವರೆಗೂ ಹೋರಾಡುತ್ತವೆ.  ನೆಟ್ಟಿಜೆಡ್ಡು, ನೆರೆಗೂಳಿಗಳು ೪೦ ದಿನಗಳಾದರೂ ತಮ್ಮ ಹೋರಾಟ ಮುಂದುವರಿಸಿಯೇ ಇರುತ್ತವೆ.  ಮಳೆ ನಿಂತರೂ ನೆರೆ ಇಳಿಯಲು ಅನೇಕ ದಿನಗಳು ಬೇಕು.  ಈ ದಿನಗಳೇ ಭತ್ತ ಸಸಿಗಳಿಗೆ ಮಾರಕ ದಿನಗಳು.  ಬಿಸಿಲಿನ ಧಗಗೆ ಬಿಸಿ ಏರುವ ನೆರೆ ನೀರು ಸಸಿಗಳ ಎಲೆಗಳನ್ನು ಬೇಯಿಸಿಬಿಡುತ್ತದೆ.  ಆದರೆ ನೆರೆಗೂಳಿ ಮಾತ್ರ ಇದಕ್ಕೆ ಹೆದರುವುದಿಲ್ಲ.  ಎಲೆಗಳು ಕೊಳೆತರೂ ಕಾಂಡವಿದೆಯಲ್ಲಾ ಎನ್ನುತ್ತದೆ.  ಕಾಂಡ ಕೊಳೆತರೂ ಬುಡ ಗಟ್ಟಿ, ಬೇರುಗಟ್ಟಿ ಎನ್ನುತ್ತದೆ.  ನೆರೆ ನೀರು ಇಳಿಯುತ್ತಿದ್ದಂತೆ ಮತ್ತೆ ಚಿಗಿತುಬಿಡುತ್ತದೆ.  ನೆರೆಯ ತಳದಲ್ಲಿ ತಂಪಿರುವ ಕಾರಣ ಬುಡ ಸಾಯದೇ ಇರುತ್ತದೆ.  ಹೊಡೆಯೊಡೆದು ಎದ್ದುಬಿಡುವಷ್ಟು ಗಟ್ಟಿತನ ನೆರೆಗೂಳಿಯದು.   ಭಾರೀ ಮಳೆಯಿಂದ ಹರಿವ ನೀರು ಫಲವತ್ತಾದ ಮಣ್ಣನ್ನು ಕೊಚ್ಚಿ ತರುತ್ತದೆ.   ನೆರೆಯ ಜಾಗದಲ್ಲಿ ನೀರು ನಿಲ್ಲುವ ಕಾರಣ ಮಣ್ಣೆಲ್ಲಾ ಗದ್ದೆಗೆ ಇಳಿಯುತ್ತದೆ.  ಗದ್ದೆ ಫಲವತ್ತಾಗುತ್ತದೆ.  ತಿಳಿನೀರು ಹರಿದುಹೋಗುತ್ತದೆ.  ಸಸಿಗಳಿಗೆ ಉತ್ತಮ ಆಹಾರ ದೊರೆತಂತಾಗುತ್ತದೆ.

ಹೀಗಾಗಿ ನೆರೆ ನಿರೋಧಕ ತಳಿಗಳು ನೆರೆ ಇಳಿದ ಮೇಲೆ ಫಲವತ್ತಾದ ಮಣ್ಣು ಸಿಕ್ಕಿ ಸೊಕ್ಕಿ ಬೆಳೆಯುತ್ತವೆ.  ಇವುಗಳಿಗೆ ಯಾವುದೇ ಗೊಬ್ಬರದ ಅವಶ್ಯಕತೆಯಿಲ್ಲ.  ಸೋತು ಸಾಯುವ ಹಂತ ತಲುಪಿದ್ದ ಸಸಿಗಳು ಕೆಲವೇ ದಿನಗಳಲ್ಲಿ ಹೊಸ ಚಿಗುರಿನಿಂದ ಕಂಗೊಳಿಸುತ್ತವೆ.  ತಿಂಗಳು ಕಳೆಯುವುದರೊಳಗೆ ನಳನಳಿಸುತ್ತವೆ.

ನೆರೆ ಇಳಿದ ನಂತರ ಈ ತಳಿಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಹಾಕುವದಿಲ್ಲ.  ಕಳೆಯೂ ಬೆಳೆಯುವುದಿಲ್ಲ,   ಕೀಟಬಾಧೆ, ರೋಗಬಾಧೆ ಇಲ್ಲದ ಕಾರಣ ಕೀಟನಾಶಕಗಳ ಸಿಂಪಡಣೆಯೂ ಇಲ್ಲ.  ಕೇವಲ ಇಳುವರಿ ಪಡೆಯುವುದೊಂದೇ ಕೆಲಸ.

ಈ ತಳಿಗಳಲ್ಲಿ ಹುಲ್ಲಿನ ಪ್ರಮಾಣ ಹೆಚ್ಚು.  ಸುಮಾರು ೧೨ ಕ್ವಿಂಟಾಲ್‌ನಿಂದ ೧೬ ಕ್ವಿಂಟಾಲ್‌ವರೆಗೆ ಒಂದು ಎಕರೆ ಪ್ರದೇಶದಲ್ಲಿ ಇಳುವರಿಯನ್ನು ನಿರೀಕ್ಷೆ ಮಾಡಬಹುದು.  ದಪ್ಪ ಅಕ್ಕಿ ಭತ್ತವಾದ ಕಾರಣ ಅಧಿಕ ಬೆಲೆಯಂತೂ ಸಿಕ್ಕೇಸಿಗುತ್ತದೆ.

ಯಲಕುಂದ್ಲಿಯ ರೈತ, ವ್ಯಾಪಾರಿ ದೇವೇಂದ್ರಪ್ಪ ಹೇಳುವಂತೆ, ಸುತ್ತಮುತ್ತಲ ಹಳ್ಳಿಗಳಲ್ಲಿ ಹೆಚ್ಚಿನ ರೈತರು ನಾಟೀ ತಳಿಗಳನ್ನೇ ನೆಚ್ಚಿಕೊಂಡಿದ್ದಾರೆ.  ಇಲ್ಲಿನ ನೆರೆಹಾವಳಿಗೆ ಬೇರೆ ತಳಿಗಳನ್ನು ಹಾಕಿದರೂ ವ್ಯರ್ಥ.  ಹೊಸತಳಿಗಳು ನಾಲ್ಕು ದಿನಗಳ ನೆರೆಹಾವಗಳಿಗೇ ಸೋತು ಸತ್ತುಹೋಗುತ್ತವೆ.  ಮತ್ತೆ ಹೊಸದಾಗಿ ನೆಟ್ಟಿ ಮಾಡಬೇಕಾಗುತ್ತದೆ.

ದೂರದ ಹಕ್ಲು, ಖುಷ್ಕಿಗಳಲ್ಲಿ ಬೆಳೆಯುವವರು ಪದ್ಮರೇಖ, ಅಭಿಲಾಷ ಮುಂತಾದ ಹೊಸ ತಳಿಗಳನ್ನು ಬೆಳೆಸುತ್ತಿದ್ದಾರೆ. ಇದರಲ್ಲಿ ಇಳುವರಿ ಹೆಚ್ಚು.  ಭತ್ತಕ್ಕೆ ಬೆಲೆ ಕಡಿಮೆ.  ಮನೆಯಲ್ಲಿ ಉಣ್ಣಲು ಇದರ ಬಳಕೆ.

ನೆರೆ ಮೇಲಿನವರೆಗೆ ಬರುವುದಿಲ್ಲವಾದ ಕಾರಣ ಇವು ಬದುಕುತ್ತವೆ.  ಈ ಹೊಸ ತಳಿಗಳಿಗೆ ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಅತ್ಯವಶ್ಯ ಬೇಕು.  ಇಳುವರಿ ಹೆಚ್ಚಾದರೂ ಹುಲ್ಲು ಕಡಿಮೆ.  ’ಹೊಸಬರು ದಪ್ಪಕ್ಕಿ ಉಣ್ಣದ ಕಾರಣ ಸಣ್ಣಕ್ಕಿ ಬೆಳೆಯುವಿಕೆ ಹೆಚ್ಚುತ್ತಿದೆ’ ಎನ್ನುತ್ತಾರೆ ಯಲಕುಂದ್ಲಿಯ ಗುರುಗಂಡಿ ಮಂಜಪ್ಪನವರು.

ರೈತರು ನೆರೆ ಪ್ರದೇಶದ ಗದ್ದೆಗಳನ್ನು ಮೂರು ಭಾಗಗಳಾಗಿ ವಿಂಗಡಿಸುತ್ತಾರೆ.  ಹೆಚ್ಚು ನೀರು, ಹೆಚ್ಚು ದಿನ ನಿಲ್ಲುವ ತಂಪುಗದ್ದೆ, ನೀರು ಬೇಗ ಇಳಿದುಹೋಗುವ ಮಧ್ಯಗದ್ದೆ, ಎಷ್ಟು ಮಳೆ ಬಂದರೂ ನೀರು ನಿಲ್ಲದ ಮಕ್ಕಿಗದ್ದೆ ಅಥವಾ ಹಕ್ಲು ಗದ್ದೆ.

ಹೊಳೆ ನದಿಗಳಿಗೆ ಹತ್ತಿರದ ಗದ್ದೆಯೇ ತಂಪುಗದ್ದೆ.  ನೆರೆಯ ನೀರು ಅತ್ಯಂತ ಹೆಚ್ಚು ದಿನಗಳು ಇಲ್ಲಿ ನಿಲ್ಲುತ್ತದೆ.  ಇಂತಹ ಕಡೆ ನೆರೆಗೂಳಿ, ಕರೆಜಡ್ಡೆ, ನೆಟ್ಟಿಜೆಡ್ಡುಗಳನ್ನು ಹಾಕುತ್ತಾರೆ.  ಇವುಗಳು ೧೮೦ರಿಂದ ೧೯೦ ದಿನಗಳ ಬೆಳೆ.  ಸುಮಾರು ೨೦ರಿಂದ ೪೦ ದಿನಗಳ ಕಾಲ ನೀರಲ್ಲಿ ನಿಂತರೂ ಇಳುವರಿಗೆ ತೊಂದರೆ ಇಲ್ಲ.

ಮಧ್ಯ ಗದ್ದೆಗೆ ಜೇನುಗೂಡು, ಮದ್ರಾಸ್‌ ಸಣ್ಣ, ಸೋಮಸಾಲೆ, ಕರೆಜಡ್ಡು ಮೊದಲಾದ ತಳಿಗಳು ಸೂಕ್ತ.  ಎಂಟರಿಂದ ಹದಿನೈದು ದಿನಗಳ ನೆರೆಯನ್ನು ಇವು ಎದುರಿಸಬಲ್ಲದು.  ಆದರೆ ಬಿಸಿಲು ಹೆಚ್ಚಾದರೂ ಕಷ್ಟ.  ಈ ಪ್ರದೇಶದಲ್ಲಿ ಸುಮಾರು ೧೫೦ರಿಂದ ೧೮೦ ದಿನಗಳಿಗೆ ಇಳುವರಿ ಬರುವ ತಳಿಗಳು ಸೂಕ್ತ.

ಮಕ್ಕಿ ಗದ್ದೆ ಒಂದು ರೀತಿಯಲ್ಲಿ ಬರದ ಗದ್ದೆಯೂ ಹೌದು.  ಮಳೆ ಬರುತ್ತಿರುವಾಗ ಮಾತ್ರ ಈ ಗದ್ದೆ ತಂಪಾಗಿರುತ್ತದೆ.  ಉಳಿದ ಕಾಲ ನೀರೆಲ್ಲಾ ಬಸಿದುಹೋಗಿ ಗದ್ದೆ, ಮಣ್ಣು ಒಣಗಿಹೋಗುತ್ತದೆ.  ಸುತ್ತಲಿನ ತೇವಾಂಶವೇ ಗಿಡಗಳಿಗೆ ರಕ್ಷೆ.  ಇಂತಹ ಕಡೆ ೯೦ ದಿನಗಳಿಗೆ ಇಳುವರಿ ಬರುವ ತಳಿಗಳೇ ಒಳ್ಳೆಯದು.  ಏಡಿಕುಣಿ, ಬುಡ್ಡ, ಮಟ್ಟಳಗ, ಹೊನಸು ಮೊದಲಾದವುಗಳನ್ನೂ ಇಲ್ಲಿ ಬಿತ್ತುತ್ತಾರೆ. ಈ ತಳಿಗಳು ಭಾರಿ ಮಳೆಯೊಂದಿಗೆ ಒಂದೆರಡು ದಿನಗಳ ನೆರೆಯನ್ನೂ ತಡೆದುಕೊಳ್ಳಬಲ್ಲವು.  ಹೀಗೆ ಯಲಕುಂದ್ಲಿಯೊಂದರಲ್ಲೇ ಮೂರು ರೀತಿಯ ಪ್ರದೇಶಗಳಿಗೆ ಅನುಗುಣವಾಗಿ ಬೆಳೆಯಬಲ್ಲ ೧೫ಕ್ಕೂ ಹೆಚ್ಚು ನಾಟೀ ತಳಿಗಳಿವೆ.  ಹಾಗೇ ಹೊಸ ತಳಿಗಳೂ ಇವೆ.

ನಾಟೀ ತಳಿಗಳು ಹೆಚ್ಚಾಗಿ ದಪ್ಪ ಅಕ್ಕಿ ಭತ್ತ.  ಇವುಗಳಲ್ಲಿ ಯಾವುದೇ ರಾಸಾಯನಿಕ ಅಂಶಗಳಿಲ್ಲ.  ರೋಗ ನಿರೋಧಕ ಗುಣ ಹೊಂದಿರುತ್ತವೆ.  ದಪ್ಪ ಭತ್ತ ಕುಚ್ಚಲು ಅಕ್ಕಿ ಮಾಡಲು ಬಳಸುತ್ತಾರೆ.  ಹೀಗಾಗಿ ಬೆಲೆ ಹೆಚ್ಚು.  ಬೀಟ್‌ರೂಟ್‌ ಬಣ್ಣ ಅಥವಾ ಕಂದುಕೆಂಪು ಬಣ್ಣದ ಅಕ್ಕಿಯ ಅನ್ನ ಬಲುರುಚಿ.  ಪರಿಮಳ.  ಕಜ್ಜಾಯ, ಕಡುಬು, ದೋಸೆ, ಉಪ್ಪಿಟ್ಟು, ಗಂಜಿಗಳಿಗೆ ಒಂದೊಂದು ತಳಿಗಳು ಮೀಸಲು.

ಒಂದಿಷ್ಟು ಪ್ರಮುಖ ಭತ್ತಗಳ ಗುಣಲಕ್ಷಣಗಳು ಹೀಗಿವೆ

ನೆರೆಗೂಳಿ: ೪೨ ದಿನಗಳವರೆಗೆ ನೀರಿನೊಳಗಿದ್ದು ಬದುಕಿದ ದಾಖಲೆ ಇಲ್ಲಿನ ರೈತರಲ್ಲಿದೆ.  ಐದರಿಂದ ಆರು ಅಡಿಗಳವರೆಗೆ ಬೆಳೆಯಬಲ್ಲದು.  ದಪ್ಪ ಕಾಂಡ.  ದಪ್ಪ ತೆನೆ, ಉದ್ದನೆಯ ಕಾಳುಗಳು, ಹಸಿರು ಇರುವಾಗಲೇ ಕೊಯ್ಲು ಮಾಡುವುದು ಪದ್ಧತಿ.  ಇಲ್ಲದಿದ್ದರೆ ಕಾಳು ಉದುರುವ ಸಾಧ್ಯತೆ ಹೆಚ್ಚು.  ಸುಮಾರು ೧೮೦ ದಿವಸಗಳಿಗೆ ಕೊಯ್ಲಿಗೆ ಬರುತ್ತದೆ.  ಸುಮಾರು ೧೨ ಕ್ವಿಂಟಾಲ್‌ ಇಳುವರಿ.  ಆರು ಗಾಡಿ ತುಂಬಾ ಹುಲ್ಲು ಒಂದು ಎಕರೆಗೆ ಸಿಗುತ್ತದೆ.

ಕರಿಜೆಡ್ಡು: ಸುಮಾರು ೩೦ ದಿನಗಳವರೆಗೆ ನೆರೆ ಎದುರಿಸುವ ಸಾಮರ್ಥ್ಯ ಹೊಂದಿದೆ.  ೧೬೫ ದಿವಸಗಳಿಗೆ ಫಸಲು ನೀಡುತ್ತದೆ.  ನೆರೆ ಇಳಿದ ಮೇಲೆ ಮಳೆ ಒಮ್ಮೆಯೂ ಆಗದೆ ಬರ ಬಿದ್ದರೂ ಇದರ ಬೆಳವಣಿಗೆಗೆ, ಇಳುವರಿಗೆ ತೊಂದರೆ ಇಲ್ಲ, ಕಾಳಿನ ತೂಕ ಅಧಿಕ.

ಒಂದು ಎಕರೆಗೆ ೧೨ ಕ್ವಿಂಟಾಲ್ ಭತ್ತ, ಆರು ಗಾಡಿ ಹುಲ್ಲು ಸಿಗುತ್ತದೆ.

ನೆಟ್ಟಿಜಡ್ಡು/ನೆಟ್ಟಿ ಭತ್ತ: ೨೦ ದಿವಸಗಳವರೆಗೆ ನೀರಿನೊಳಗಿದ್ದೂ ಬದುಕುವ ಛಲ ಹೊಂದಿದೆ.  ಒಂದೊಮ್ಮೆ ನೆರೆ ಹೆಚ್ಚು ದಿನಗಳಿದ್ದು ಸಸಿಗಳೆಲ್ಲಾ ಸತ್ತರೂ ಈ ತಳಿಯು ಬಿತ್ತನೆಗಷ್ಟೇ ಅಲ್ಲ, ನೆಟ್ಟಿಗೂ ಯೋಗ್ಯವಾಗಿದ್ದು, ತಕ್ಷಣ ನೆಟ್ಟಿ ಮಾಡಿದರಾಯಿತು.  ಬಲುಬೇಗ ಸಸಿಗಳೆದ್ದು ಬೆಳೆಯುತ್ತದೆ.  ಬಿಳಿ ಅಕ್ಕಿ, ರುಚಿ ಹೆಚ್ಚು.  ಒಂದು ಎಕರೆಗೆ ೧೨ ಕ್ವಿಂಟಾಲ್‌ ಭತ್ತ, ೫ ಗಾಡಿ ಹುಲ್ಲು ಸಿಗುತ್ತದೆ.  ಇದೂ ಸುಮಾರು ೧೭೦ ದಿನಗಳಿಗೆ ಫಸಲು ನೀಡುತ್ತದೆ.

ಸಣ್ಣವಾಳ್ಯ: ೨೦ ದಿವಸಗಳವರೆಗೆ ನೆರೆ ನೀರನೊಂದಿಗೆ ಹೋರಾಡಬಲ್ಲದು.  ನೆರೆ ನೀರಿಗಿಂತಲೂ ಮೇಲೆದ್ದು ಕೊರಳು ಚಾಚಿ ನಿಲ್ಲಬಲ್ಲದು.  ಉದ್ದವಾದ ತೆನೆ, ಗಟ್ಟಿಕಾಳುಗಳು, ಬಿಳಿ ಅಕ್ಕಿ, ಬಲು ರುಚಿ.  ೧೮೦ ದಿನಗಳಿಗೆ ಫಸಲು ದೊರೆಯುತ್ತದೆ.  ಒಂದು ಎಕರೆಗೆ ಒಮ್ಮೊಮ್ಮೆ ೧೫ ಕ್ವಿಂಟಾಲ್‌ವರೆಗೂ ಬಂದಿದ್ದುಂಟು.  ಸರಾಸರಿ ೧೩ ಕ್ವಿಂಟಾಲ್‌ ೫ ಗಾಡಿಯಷ್ಟು ಹುಲ್ಲು ಖಂಡಿತಾ ಸಿಗುತ್ತದೆ.

ಸೋಮಸಾಲೆ: ೨೦ ದಿನಗಳವರೆಗೆ ನೆರೆ ತಡೆಯಬಲ್ಲದು.  ೧೫೦ರಿಂದ ೧೮೦ ದಿನಗಳ ಬೆಳವಣಿಗೆ.  ಕಪ್ಪು ಭತ್ತ, ಕೆಂಪು ಅಕ್ಕಿ.  ವಿಶೇಷ ಪರಿಮಳವಿದೆ.  ಕುಚ್ಚಿಗೆ ಅಕ್ಕಿಗೆ ಬಳಕೆ.  ಅಕ್ಕಿಯ ತೂಕ ಹೆಚ್ಚು.  ಹೀಗಾಗಿ ಬೇಡಿಕೆಯೂ ಹೆಚ್ಚು.  ಒಂದು ಎಕರೆಗೆ ೧೨ ಕ್ವಿಂಟಾಲ್‌ ಭತ್ತ, ೫ ಗಾಡಿ ಹುಲ್ಲು ಸಿಗುತ್ತದೆ.

ನ್ಯಾರೆಮಿಂಡ: ೨೫ ದಿನಗಳವರೆಗೆ ನೆರೆ ಎದುರಿಸಿ ನಿಲ್ಲಬಲ್ಲದು.  ನ್ಯಾರೆ ಎಂದರೆ ಮೂಲತಳಿ ಬೆಳೆಯುವ ಮೊದಲೇ ನ್ಯಾರೆ ಸಸಿಗಳು ಬೆಳೆದು ನಿಲ್ಲುತ್ತವೆ.  ಕಾಳುಗಳೆಲ್ಲಾ ಉದುರಿಹೋಗುತ್ತವೆ.  ಆದರೆ ಇವು ಮೂಲಭತ್ತದ ತದ್ರೂಪಿ.

ನ್ಯಾರೆಮಿಂಡದಲ್ಲಿ ಈ ನ್ಯಾರೆ ಸಸಿಗಳು ಮೂಲಭತ್ತದ ಸಸಿಗಳಿಗಿಂತ ಎತ್ತರವಾಗಿ ಬೆಳೆಯುತ್ತವೆ.  ಆಗ ತಕ್ಷಣ ಅದನ್ನು ಕಿತ್ತುಹಾಕಿ ಮೂಲಸಸಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬಹುದು.

ಕಾಳು ಕಟ್ಟುವ ಮೊದಲೇ ನ್ಯಾರೆಗಳನ್ನು ಹೀಗೆ ಗುರುತಿಸಲು ಸಾಧ್ಯ.  ನ್ಯಾರೆಮಿಂಡ ಕಪ್ಪುಬಣ್ಣದ ದಪ್ಪ ಜಾತಿಯ ಭತ್ತ.  ಆರು ಅಡಿಗಳವರೆಗೂ ಬೆಳೆಯಬಲ್ಲದು.  ನಸುಗೆಂಪು ಬಣ್ಣದ ಅಕ್ಕಿ.  ಕುಚ್ಚಿಗೆಗೆ ಉಪಯುಕ್ತ.  ೧೫೦ ದಿನಗಳಿಗೆ ಇಳುವರಿ.  ಒಂದು ಎಕರೆಗೆ ೧೦ ಕ್ವಿಂಟಾಲ್‌ ಭತ್ತ ಬರುತ್ತದೆ.  ಆದರೆ ಎಂಟು ಗಾಡಿ ಹುಲ್ಲು ಸಿಗುತ್ತದೆ.

ನೆರೆಪ್ರದೇಶಗಳಲ್ಲಿ ನಾಟೀ ತಳಿಗಳನ್ನು ಬಿತ್ತನೆ ಮಾಡುವುದು ಸಾಮಾನ್ಯ.  ಮಾರ್ಚ್‌-ಏಪ್ರಿಲ್‌ನಲ್ಲೇ ಉಳುಮೆ ಮಾಡಿದ ಗದ್ದೆಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಹರಡುತ್ತಾರೆ.  ಸಮನಾಗಿ ಹರಡುವಂತೆ ಕೊರಡು ಹೊಡೆಯುತ್ತಾರೆ.  ಕೆಲವರು ಬೀಜದೊಂದಿಗೆ ಗೊಬ್ಬರ ಬೆರೆಸಿ ಬಿತ್ತನೆ ಮಾಡುವುದೂ ಇದೆ.  ಒಂದು ಎಕರೆಗೆ ೨೦ ಗಿದ್ನ ಅಂದರೆ ೫೦ ಕಿಲೋಗ್ರಾಂ ಬೀಜ ಬೇಕು.  ಆರು ಇಂಚುಗಳ ಅಂತರದಲ್ಲಿ ಸಾಲು ಬಿತ್ತನೆ ಮಾಡುತ್ತಾರೆ.

ಮಳೆ ಬೀಳುವ ಸಮಯಕ್ಕೆ ಸಸಿಗಳು ನಾಲ್ಕೆಲೆ ಬಿಟ್ಟು ನಿಂತಿರುತ್ತವೆ.  ಮಳೆ ಬೀಳುವ ಮೊದಲೇ ಕುಂಟೆ ಹೊಡೆಯುತ್ತಾರೆ.  ಈ ವಿಧಾನದಿಂದ ಕಳೆ ನಾಶ.  ಬೇರುಗಳ ಉಸಿರಾಟಕ್ಕೆ ಅನುಕೂಲ.  ಸಸಿಗಳ ಅಂತರ ಸರಿಯಾಗಿರಲು ಉಪಯುಕ್ತ.  ಒಂದು ಸಾರಿ ಕುಂಟೆ ಹೊಡೆಯುತ್ತಿದ್ದಂತೆ ಮಳೆ ಬಂದುಬಿಡುತ್ತದೆ.  ಆದರೆ ಮೂರು ಸಾರಿ ಕುಂಟೆ ಹೊಡೆಯಲು ಸಿಕ್ಕಿದರೆ ಸಸಿಗಳು ಬೇರನ್ನು ಭದ್ರವಾಗಿ ನೆಲದೊಳಗಿಳಿಸಲು ಸಹಕಾರಿ ಎನ್ನುತ್ತಾರೆ ತಡಗಳಲೆ ಪಟೇಲ ಶಾಂತಪ್ಪಗೌಡರು.

ಇದೇ ರೀತಿ ನೆಟ್ಟಿಯ ಪದ್ಧತಿಯಲ್ಲಿ ಗದ್ದೆಯಲ್ಲಿ ನಾಲ್ಕು ಬೆರಳು ನೀರು ನಿಲ್ಲಿಸಿ ಕೊರಡು ಹೊಡೆಯುವ ಪದ್ಧತಿಯಿದೆ.  ಇದೂ ಸಹ ಕಳೆನಾಶಕ್ಕೆ, ಸಮಾನಾಂತರದಲ್ಲಿ ಸಸಿಗಳು ಉಳಿಯಲು ಹಾಗೂ ಬೀಜಗಳ ಉಸಿರಾಟಕ್ಕೆ ಸಹಕಾರಿ.

ಹೀಗೆ ಕೊರಡು ಹೊಡೆದು, ಕುಂಟೆ ಹೊಡೆದು ಸಸಿಗಳನ್ನು ನೋಯಿಸಿದರೆ, ಸಸಿಗಳ, ಬೇರು, ಎಲೆಗಳು, ಕಾಂಡ ಹೆಚ್ಚು ಗಟ್ಟಿಯಾಗಿ ಹೋರಾಡಲು ಸಿದ್ಧವಾಗುತ್ತವೆ ಎನ್ನುವ ಆಶಯ ರೈತರದು.

ನಾಟೀ ತಳಿಗಳಿಗೆ ಯಾವುದೇ ರೋಗಬಾಧೆ, ಕೀಟಬಾಧೆಗಳು ಇಲ್ಲದ ಕಾರಣ ಕೀಟನಾಶಕಗಳ ಗೆಳೆತನವಿಲ್ಲ.  ಯಲಕುಂದ್ಲಿಯಲ್ಲಿ ನಾಟೀ ತಳಿಗಳನ್ನು ಬೆಳೆಯುವೊದೊಂದೇ ಅಲ್ಲ, ಇಲ್ಲಿನ ರೈತರು ಉತ್ತಮ ಬೆಲೆಯನ್ನು ಪಡೆಯುವಷ್ಟು ಚಾಣಾಕ್ಷರು.  ಊರಿನ ಕೆಲವು ರೈತರೇ ವ್ಯಾಪಾರಿಗಳು.  ನಾಟೀ ತಳಿಗಳಿಗೆ ಎಂದೂ ಬೆಲೆ ಇರುವ ಗುಟ್ಟು ಗೊತ್ತು.  ಹೀಗಾಗಿ ಬೆಲೆ ಏರುವವರೆಗೆ ಕಾಯುತ್ತಾರೆ.  ಊರಿನ ಭತ್ತವನ್ನೆಲ್ಲಾ ಕೊಂಡು ಸಂಗ್ರಹಿಸಿ, ಒಮ್ಮೆಲೇ ದೊಡ್ಡ ವ್ಯಾಪಾರಿಗೆ ಮನೆ ಬಾಗಿಲಲ್ಲೇ ಮಾರಾಟ ಮಾಡುತ್ತಾರೆ.

ಕೇವಲ ಯಲಕುಂದ್ಲಿ ಹಳ್ಳಿಯೊಂದರಿಂದಲೇ ಪ್ರತಿವರ್ಷ ೬,೦೦೦ ಕ್ವಿಂಟಾಲ್‌ ಭತ್ತದ ವ್ಯಾಪಾರವಿದೆ.  ಸುತ್ತಲಿನ ೧೫ ಹಳ್ಳಿಗಳು (ಭತ್ತದ ಬಯಲಿನ ಹಳ್ಳಿಗಳು) ಸುಮಾರು ಒಂದು ಲಕ್ಷ ಕ್ವಿಂಟಾಲ್‌ ಭತ್ತದ ವಹಿವಾಟು ನಡೆಸುತ್ತವೆ.

ಇಲ್ಲಿನ ರೈತರದು ಉಣ್ಣಲು ಸಣ್ಣಕ್ಕಿ, ಮಾರಲು ದಪ್ಪಕ್ಕಿ ಎನ್ನುವ ನೀತಿ.

ಸಾಗರ ತಾಲ್ಲೂಕಿನಲ್ಲಿ ೫೦ಕ್ಕೂ ಹೆಚ್ಚು ಭತ್ತದ ಮಿಲ್‌ಗಳಿವೆ.  ಹಳ್ಳಿಗಳಲ್ಲಿ ಸಂಗ್ರಹವಾಗುವ ಭತ್ತದ ಖರೀದಿದಾರರು ಈ ಮಿಲ್‌ ಮಾಲೀಕರು.  ಈ ದಪ್ಪಭತ್ತವನ್ನು ಹದವಾಗಿ ಬೇಯಿಸಿ ಒಣಗಿಸಿ ಕುಚ್ಚಲು ಅಕ್ಕಿ ಮಾಡುತ್ತಾರೆ.  ಕುಂದಾಪುರದಿಂದ ಮಂಗಳೂರಿನವರೆಗೆ ರವಾನೆ.

ಇದು ರೋಗನಿರೋಧಕ, ಕೀಟನಿರೋಧಕ ಗುಣ ಹೊಂದಿರುವ ಅಕ್ಕಿ.  ಯಾವುದೇ ರಾಸಾಯನಿಕ ಗೊಬ್ಬರ, ವಿಷ ಬಳಸದ ಅಕ್ಕಿ.  ಪೌಷ್ಟಿಕವಾಗಿರುವ, ವಿಶೇಷ ರುಚಿ ಇರುವ ಅಕ್ಕಿ ಕರಾವಳಿಗೆ ಹೋಗುತ್ತದೆ.