ಯಲಬುರ್ಗಾ ತಾಲೂಕು-ವ್ಯಾಪ್ತಿಯಲ್ಲಿ ಚಿಕ್ಕದಿದ್ದರೂ ಐತಿಹಾಸಿಕವಾಗಿ ಬೃಹತ್ತಾಗಿ ಗುರುತಿಸಿಕೊಂಡಿದೆ. ಯಲಬುರ್ಗಾ ಪಟ್ಟಣ, ಕಲ್ಲೂರು, ಮುಧೋಳ, ವಜ್ರಬಂಡಿ, ಲಿಂಗನಬಂಡಿ, ಶಿರೂರು,ಇಟಗಿ, ಹಿರೇಮ್ಯಾಗೇರಿ ಈ ಗ್ರಾಮಗಳು  ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ತಾಣಗಳಾಗಿವೆ.

 

ಶ್ರೀ ಮಹದೇವ ದೇವಾಲಯ ಇಟಗಿ

ದೂರ 
ತಾಲೂಕಿನಿಂದ : ೩೦ ಕಿ.ಮೀ.
ಜಿಲ್ಲೆಯಿಂದ : ೨೦ ಕಿ.ಮೀ.

ಕಲ್ಯಾಣಿ ಚಾಲುಕ್ಯರ ಕಾಲದ ವಾಸ್ತು ಶಿಲ್ಪಕ್ಕೆ ಕಲಾ ಕುಸರಿಯ ಶ್ರೇಷ್ಟತೆಗೆ ಇದು ಸಾಕ್ಷಿಯಾಗಿದೆ. ಶಾಸನದಲ್ಲಿ ಇದನ್ನು ದೇವಾಲಯಗಳ ಚಕ್ರವರ್ತಿ ಎಂದು ಕರೆಯಲಾಗುತ್ತದೆ.

ಕರ್ನಾಟಕದಲ್ಲಿ ಹಳೇಬೀಡಿನ ದೇವಾಲಯ ಬಿಟ್ಟರೆ ಅತ್ಯಂತ ಸುಂದರವಾದ ದೇವಾಲಯ ಇದಾಗಿದೆ. ಇಟಗಿ ಮೂಲತ:ಅಗ್ರಹಾರ. ೬ನೇಯ ವಿಕ್ರಮಾದಿತ್ಯನ ದಂಡನಾಯಕ ನಂದಿವಿಗ್ರಹಿ ಮಹಾದೇವನು ತನ್ನ ಹೆಸರಿನಿಂದ ಕ್ರಿ,ಶ,೧೧೧೨ ರಲ್ಲಿ ಇದನ್ನು ನಿರ್ಮಿಸಿದನು. ಪೂರ್ವಾಭಿಮುಖವಾಗಿರುವ ಈ ದೇವಾಲಯವು ಮಹಾಮಂಟಪ, ನವರಂಗ, ಗರ್ಭಗುಡಿ, ಸುಖನಾಸಿ ಹೊಂದಿದ್ದು ೬೮ ಕಂಬಗಳ ಮೇಲೆ ರಚನೆಗೊಂಡಿದೆ. ೨೩ ದೊಡ್ಡ ಕಂಬಗಳು ನೆಲದ ಮೇಲಿಂದ ಚಾವಣಿಗೆ ಪ್ರಮುಖ ಆಧಾರ ಒದಗಿಸಿವೆ. ಇಲ್ಲಿನ ವೈಶಿಷ್ಟವೆಂದರೆ ಕಂಬಗಳಲ್ಲಿ ಅರಳಿರುವ ಕಲಾ ವೈಶಿಷ್ಟತೆ ಚೌಕಾಕಾರದ ದುಂಡಗಿನ ನುಣುಪಾದ ಹಸಿರು ಕಲ್ಲಿನಿಂದಾಗಿ ಕನ್ನಡಿಯಂತೆ ಹೊಳೆಯುತ್ತದೆ. ಮಹಾಮಂಟಪದಲ್ಲಿ ಅಷ್ಟಕೋನಾಕೃತಿಯಲ್ಲಿ ಭುವನೇಶ್ವರಿ ಮೂರ್ತಿ ಇದೆ. ಚಾಮುಂಡಿ, ನಟರಾಜ, ನರಸಿಂಹ, ಗಣೇಶ ಶಿಲ್ಪಗಳನ್ನು ಕಂಬಗಳಲ್ಲಿ ಕೆತ್ತಲಾಗಿದೆ ಗರ್ಭಗುಡಿ ೧೨೦ ಅಡಿ, ೬೦ ಅಡಿ ಅಗಲವಿದ್ದು, ಇಲ್ಲಿ ಲಿಂಗವಿದ್ದು ಎದರು ಬೀದಿಯಲ್ಲಿ ನಂದಿ ವಿಗ್ರಹವಿದೆ. ಮುಂಭಾಗದಲ್ಲಿ ಪುಷ್ಕರಣಿ ಇದೆ. ಕಲ್ಯಾಣಿಚಾಲಕ್ಯ ಕಾಲದಲ್ಲಿ ಕಲ್ಲೂರು, ಕವಿತಾಳ, ಬಳಗಾನೂರು, ಮಕ್ಕುಂದಿ, ರೌಡಕುಂದಿ ದೇವರಗುಡಿಗಳಲ್ಲಿ ಇರುವ ವಾಸ್ತುಶಿಲ್ಪ ಮಾದರಿಗಳಿವೆ.

ಮಹಾದೇವ ದೇವಾಲಯ 40 ಅಡಿ ಎತ್ತರವಿದೆ. ಮೆಟ್ಟಲುಗಳ ಮೇಲೇರಿ ಸ್ತುಪದಲ್ಲಿ ಒಂದಾಗುತ್ತವೆ.ಶಿಖರದಲ್ಲಿ 3 ಅಂತಸ್ತುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಗೋಪುರ ಸುತ್ತಲೂ ಚಿಕ್ಕ ಚಿಕ್ಕ ವಿಗ್ರಹಗಳಿದ್ದು ಹೆಚ್ಚಿನವು ಭಗ್ನಗೊಂಡಿವೆ. ಸೂತ್ತಲೂ 11 ಗುಡಿಗಳಿದ್ದು ಉತ್ತಮ ಸ್ಥಿತಿಯಲ್ಲಿಲ್ಲ. ಮುಂಭಾಗದಲ್ಲಿ ದೊಡ್ಡ ಪುಷ್ಕರಣಿ ಇದೆ. ದಂಡೆಗುಂಟ ಮಂಟಪಗಳು ನಾಶಗೊಂಡಿವೆ.

 

ಕುಕನೂರಿನ ಮಹಾಮಾಯೆ ದೇವಾಲಯ

ದೂರ 
ತಾಲೂಕಿನಿಂದ : ೨೫ ಕಿ.ಮೀ.
ಜಿಲ್ಲೆಯಿಂದ : ೨೦ ಕಿ.ಮೀ

ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಈ ನಗರ ಸಹಸ್ರ ಮಹಾಜನಗಳ ಬೀಡಾಗಿತ್ತು ಇದನ್ನು ಮಹಾ ಅಗ್ರಹಾರ ಎಂದು ಉಲ್ಲೇಖಿಸಲಾಗಿದೆ.  ಕ್ರಿ.ಶ.೧೧೧೨ರಲ್ಲಿ ಚಾಲುಕ್ಯರ ಚಕ್ರವರ್ತಿಯಾದ ೬ನೇ ವಿಕ್ರಮಾರ್ಜುನನ ದಂಡನಾಯಕ ಮಹಾದೇವ ಇದನ್ನು ಕಟ್ಟಿಸಿದನು  ಎಂದು ಇತಿಹಾಸಕಾರರ ಅಭಿಪ್ರಾಯವಾಗಿದೆ. ಯಲಬುರ್ಗಾ ತಾಲೂಕಿನ ಪ್ರಮುಖ ವಾಣಿಜ್ಯ ಹಾಗೂ ಐತಿಹಾಸಿಕ ಸ್ಥಳ. ಇತಿಹಾಸದಲ್ಲಿ ಇದನ್ನು ಕುಕ್ಕನೂರು ಮತ್ತು ಕುಂತಳಪುರವೆಂದು  ಕರೆಯಲಾಗುತ್ತಿದ್ದು, 30 ಹಳ್ಳಿಗಳನ್ನೊಳಗೊಂಡ ಆಡಳಿತ  ವಲಯ ಇದಾಗಿತ್ತು. ಇಲ್ಲಿ  ಕಲ್ಲೇಶ್ವರ, ಚಳ್ಳೇಶ್ವರ, ಬಿಂದು ಮಾಧವ ಮಲ್ಲಿಕಾರ್ಜುನ ಮತ್ತು ಮಹಾಮಾಯೆ ದೇವಸ್ಥಾನಗಳು ಅತ್ಯಂತ ಪ್ರಸಿದ್ದಿಯನ್ನು ಪಡೆದಿವೆ. ಕುಕನೂರಿನ ಮಹಾಮಾಯೆ  ದೇವಾಲಯವು ಪ್ರಾಚೀನ ಕಾಲದಿಂದ ಆದಿಶಕ್ತಿಯ ಆರಾಧನೆಯ ಪ್ರತೀಕವಾಗಿ ನಿರ್ಮಾಣಗೊಂಡಿದೆ. ದಸರಾ ಹಬ್ಬದಲ್ಲಿ ಕುಮ್ಮಟದುರ್ಗದ ಮುಕುಂಪ, ಹುಲಗಿ ಹಾಗೂ  ಕುಕನೂರಿನ ಮಹಾಮಾಯ ದೇವಾಲಯದಲ್ಲಿ ವಿಶೇಷ ಪೂಜೆ ದಸರಾ ಆಚರಣೆ ಆರಂಭಗೊಂಡಿದ್ದೇ ಈ ಮೂರು ಸ್ಥಳದಲ್ಲಿ ಎಂಬುದು ಇತಿಹಾಸಕಾರರ ಅಂಬೋಣ ಈ ಗ್ರಾಮವು ಪ್ರಾಚೀನ ಕಾಲದಲ್ಲಿ ಅಗ್ರಹಾರವಾಗಿತ್ತಾದರೂ  ಪ್ರಖ್ಯಾತ ವಿದ್ಯಾ ಕೇಂದ್ರವೆಂತಲೂ ಇದು ಗುರುತಿಸಿ ಕೊಂಡಿದೆ.

ದಕ್ಷಿಣಾಭಿಮುಖವಾಗಿರುವ ಇದು ಶಾಸನದಲ್ಲಿ ಜೇಷ್ಟತಾ ದೇವಿ ಎಂದು ಕರೆಸಿ ಕೊಂಡಿರುವ ಈ ದೇವತೆ ಶಕ್ತಿ ದೇವತೆ ಮತ್ತು ಶಕ್ತಿಪೀಠದ ಸ್ಥಾನಾಧಿಪತಿ ಎಂದು ಕರೆಯಲಾಗುತ್ತಿತ್ತು.

ಕುಂತಳಪುರ (ಚಂದ್ರಹಾಸನ ರಾಜಧಾನಿ) ರಾಕೂಟರ ಕಾಲದಲ್ಲಿ ಇಲ್ಲಿ ನವಲಿಂಗೇಶ್ವರ ದೇವಾಲಯ ೯ ಶಿವಲಿಂಗಗಳನ್ನು ಹೊಂದಿದೆ. ನವಲಿಂಗ ವೆಂತಲೂ ಮತ್ತು ಒಂಭತ್ತೇಶ್ವರ ಗುಡಿಯೆಂತಲೂ ಕರೆಯುವರು,ಇವರ ಕಾಲದಲ್ಲಿನ ರಾಜೂರು, ಕುಕನೂರಿನ ದೇವಾಲಯಗಳು ಮಹತ್ವ ಪಡೆದಿವೆ.

 

ಕಲ್ಲೂರ ಶ್ರೀ ಕಲ್ಲಿನಾಥೇಶ್ವರ ದೇವಾಲಯ

ದೂರ 
ತಾಲೂಕಿನಿಂದ : ೩೪ ಕಿ.ಮೀ.
ಜಿಲ್ಲೆಯಿಂದ : ೦೬ ಕಿ.ಮೀ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲ್ಲೂರ ಒಂದು ಪುಟ್ಟ ಗ್ರಾಮ. ಅಲ್ಲಿನ ಜನಸಂಖ್ಯೆ ಸುಮಾರು ೪೦೦೦. ಈ ಗ್ರಾಮ ಪ್ರಾಚೀನ ಕಾಲದಿಂದಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಅದಕ್ಕೆ ಕಾರಣ ಆದಿದೇವನಾದ ಶ್ರೀ ಕಲ್ಲಿನಾಥೇಶ್ವರ. ಕುಕನೂರ ಹಾಗೂ ಯಲಬುರ್ಗಾದ ಮಾರ್ಗದಲ್ಲಿದೆ.

ವೈಶಿಷ್ಠ್ಯ: ಸುಮಾರು ಕ್ರಿ.ಶ.೧೦೯೮ರಲ್ಲಿ ಈ ದೇವಾಲಯ ನಿರ್ಮಾಣವಾಗಿರಬಹುದೆಂದು ದೇವಾಲಯದ ಗರ್ಭಗುಡಿಯ ಒಳಗಿರುವ ಶಾಸನ ನಂ. ೧೭ರಲ್ಲಿ ಮಾಹಿತಿ ಇದೆ. ಮೊದಮೊದಲು ಈ ದೇವರನ್ನು ಸ್ವಯಂಬು ಕಲಿದೇವಸ್ವಾಮಿ ಎಂದು ಕರೆಯಲಾಗಿದೆ. ಸು ಕ್ರಿ.ಶ.೧೧೮೬ರವರೆಗೆ ಇದೇ ಹೆಸರು ಇತ್ತು. ಆದರೆ ಸು ಕ್ರಿ.ಶ.೧೪೭೨ರಲ್ಲಿ ಈ ಹೆಸರು ಕಲ್ಲೂರು ಕಲ್ಲಯ್ಯ ದೇವರು ಎಂದು ಬದಲಾಗಿದ್ದು ತಿಳಿಯುತ್ತದೆ.

ಈ ದೇವಾಲಯವನ್ನು ಯಾರು? ಯಾವಾಗ ನಿರ್ಮಿಸಿದರು ಎಂಬ ಮಾಹಿತಿ ಇನ್ನು ದೊರೆತಿಲ್ಲ. ಆದರೆ ಕಾಲಕಾಲಕ್ಕೆ ಇತಿಹಾಸ ಬದಲಾದಂತೆ ಈ ದೇವಾಲಯದ ಸಮುಚ್ಛಯದಲ್ಲಿ ಗರ್ಭಗುಡಿಯ ಸುಖನಾಸಿಗಳ ಶಿಲ್ಪಕಲೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಈ ದೇವಾಲಯವು “ಬಾದಾಮಿ ಚಾಲುಕ್ಯರ” ಕಾಲ (ಸು. ಕ್ರಿ.ಶ. ೮, ೯ನೇ ಶತಮಾನ)ದಲ್ಲಿ ನಿರ್ಮಾಣವಾಗಿರಬಹುದು.