Categories
ಕನ್ನಡ ವ್ಯಕ್ತಿ ಪರಿಚಯ

ವ್ಯಕ್ತಿ ಪರಿಚಯ – ಯಶವಂತ ಚಿತ್ತಾಲ

ಯಶವಂತ ಚಿತ್ತಾಲರು ಜನಿಸಿದ್ದು ೩ ಆಗಸ್ಟ್ ೧೯೨೮ ರಂದು ಉತ್ತರ ಕನ್ನಡ ಜಿಲ್ಲೆಯ ಗೋಕರ್ಣತಾಲ್ಲೂಕಿನ ಹನೇಹಳ್ಳಿಯಲ್ಲಿ. ಹುಟ್ಟೂರು, ಕುಮಟಾ, ಧಾರವಾಡ ಮತ್ತು ಮುಂಬಯಿಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರು. ಇವರ ಕೃತಿಗಳ ಮೇಲೆ ಗಂಗಾಧರ ಚಿತ್ತಾಲ, ಗೌರೀಶ ಕಾಯುಣಿ, ಶಾಂತಿನಾತದೇಸಾಯಿಯವರ ದಟ್ಟವಾದ ಪ್ರಭಾವವನ್ನು ಕಾಣಬಹುದು. ಅಧುನಿಕ ಕನ್ನಡ ನವ್ಯಸಾಹಿತ್ಯದ ಪ್ರಮುಖರಾದ ಯಶವಂತ ಚಿತ್ತಾಲರ ಕೃತಿಗಳಲ್ಲಿ ಮುಂಬಯಿಯ ಯಾಂತ್ರೀಕೃತ ಬದುಕು, ಒಂಟಿತನ, ಹಣದಾಹ, ಅಂತರ್ಮುಖತೆ, ಅನಾಥಪ್ರಜ್ಞೆಗಳು ಎದ್ದು ಕಾಣುವ ಅಂಶಗಳು. ಅವರಿಗಿರುವ ವೈಚಾರಿಕ ಪರಿಣತಿ ಮತ್ತು ಮಾಧ್ಯಮ ನಿಷ್ಟೆಗಳ ನಡುವಿನ ಕರ್ಷಣವೇ ಅವರ ಬರವಣಿಗೆಯ ಜೀವಂತಿಕೆ ಕಾರಣವಾಗಿದೆ. ಯಶವಂತ ಚಿತ್ತಾಲರ ಕಥಾಸಂಕಲನಗಳು-ಸಂದರ್ಶನ (೧೯೫೭), ಆಟ(೧೯೬೯), ಕಥೆಯಾದಳು ಹುಡುಗಿ(೧೯೮೦), ಬೇನ್ಯಾ(೧೯೮೩), ಈ ಸಂಕಲನಗಳ ಕಥೆಗಳಾದ ಪೀಜೀ, ಸಂದರ್ಶನ, ಅಡ್ಡಬಿದ್ದಮರ, ಖಾಲೀ ಕೋಣೆ, ಯಂತಹ ಕಥೆಗಳಲ್ಲಿ ಕಥನದ ಕೇಂದ್ರ ನಗರಕ್ಕೆ ಚಲಿಸುತ್ತದೆ.

ಅನುಭವ ಸ್ವರೂಪದಲ್ಲಿ ಆದ ಬದಲಾವಣೆ ಕಥೆಯ ಶಿಲ್ಪ, ಹಾಗೂ ನಿರೂಪಣಾ ವಿಧಾನಗಳ ಮೇಲೆಯೂ ತನ್ನದೇ ಆದ ಪ್ರಭಾವವನ್ನು ಬೀರುತ್ತದೆ. ಇಲ್ಲಿನದು ನಾಗರೀಕ ಜೀವನದ ಒತ್ತಡದಿಂದ ಕೂಡಿದ ವ್ಯಕ್ತಿಗಳ ಜಗತ್ತು. ಅದೇರೀತಿ ಕಥೆಯಾದಳು ಹುಡುಗಿ, ಬೇನ್ಯಾ, ಸಿದ್ಧಾರ್ಥ, ಈ ಕಥೆಗಳ ಸಂಕಲನದಲ್ಲಿ ಸಮಾಜದ ಸಮಸ್ಯೆಗಳನ್ನು ಕಲಾತ್ಮಕವಾಗಿ ಬಿಂಬಿಸಿದ್ದಾರೆ.

ಮೂರು ದಾರಿಗಳು(೧೯೬೮), ಶಿಕಾರಿ(೧೯೭೯), ಛೇದ(೧೯೮೫), ಮತ್ತು ಪುರುಷೋತ್ತಮ(೧೯೯೦), ಇವರ ಕಾದಂಬರಿಗಳು ಚಿತ್ತಾಲರ ಕಥಾಜಗತ್ತಿಗೂ ಕಾದಂಬರೀ ಜಗತ್ತಿಗೂ ನಿಖಟ ಸಂಬಂಧವಿರುವುದು ಕಂಡುಬರುತ್ತದೆ. ಶಿಕಾರಿಯು ಕನ್ನಡದ ಅಂದಿನ ಸಂದರ್ಭದ ಸಾಮಾಜಿಕ ಸಾಂಸ್ಕೃತಿಕ ಹಾಗೂ ಸಾಹಿತ್ತಿಕ ಸನ್ನಿವೇಶಕ್ಕೆ ಸೃಜನಶೀಲ ಪ್ರತಿಕ್ರಿಯೆ ಎಂಬಂತೆ ಮೂಡಿಬಂದಿದೆ. ಅಷ್ಟೆ ಅಲ್ಲದೆ ಆಧುನಿಕ ಮಾನವನ ಎಚ್ಚರದ ಕ್ಷಣಗಳೆಲ್ಲವನ್ನೂ ಆತಂಕಮಯವಾಗಿ ಭಯಗ್ರಸ್ತವಾಗಿ ಮಾಡಿಬಿಟ್ಟಿರುವ ಕ್ರೂರ ಶಕ್ತಿಗಳ ಅನ್ವೇಷಣೆ ಹಾಗೂ ಅವುಗಳೊಂದಿಗಿನ ಮುಖಾಮುಖಿಯಲ್ಲಿ ಕೂಡ ಈ ಕೃತಿ ನಿರತವಾಗಿದೆ.

೧೯೮೧ ರಲ್ಲಿ ಪ್ರಕಟವಾದ ಸಾಹಿತ್ಯ ಸೃಜನಶೀಲತೆ ಮತ್ತು ನಾನು, ಎನ್ನುವ ಪ್ರಬಂಧ ಸಂಕಲನ ಕೃತಿ ಮಹತ್ವವಾದದ್ದು. ಮೂರುದಾರಿಗಳು ಚಲನಚಿತ್ರವಾಗಿದೆ. ೧೯೮೩ ರ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಬಂದಿದೆ. ೧೯೮೧ ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.