೧೧

ಜನ್ನನ ‘ಯಶೋಧರ ಚರಿತೆ’ ಕಾವ್ಯವನ್ನು ಕುರಿತು ನವೋದಯದ ಲೇಖಕರಿಂದ ಹಿಡಿದು ಇದುವರೆಗೂ ಅನೇಕ ವಿದ್ವಾಂಸರು ಚರ್ಚಿಸಿದ್ದಾರೆ. ಇದರ ಬಗೆ ಪರ – ವಿರೋಧ, ವಾದ -ವಿವಾದಗಳು ನಡೆದಿವೆ; ಇನ್ನೂ ನಡೆಯುತ್ತಲೇ ಇವೆ. ಅದರಲ್ಲೂ ಈ ಕಾವ್ಯದಲ್ಲಿ ಬರುವ ಅಮೃತಮತಿಯ ಪ್ರಣಯ ಪ್ರಸಂಗವಂತು ಒಂದು ದೊಡ್ಡ ಸಮಸ್ಯೆಯಾಗಿ ಬಹುಪಾಲು ವಿದ್ವಾಂಸರನ್ನು ಕಾಡಿದೆ. ಅಮೃತಮತಿ ಮತ್ತು ಅಷ್ಟಾವಂಕನ ನಡುವಿನ ಸಂಬಂಧವನ್ನು ಹೇಗೆ ವಿವರಿಸಿದರೂ ಅದು ಕೊನೆಗೂ ಸಮಸ್ಯೆಯಾಗಿಯೇ ಉಳಿಯುತ್ತದೆ. ಅವಳ ನಡತೆ ವೈಯಕ್ತಿಕವೋ, ಅವಳನ್ನು ಮೀರಿ ನಡೆದು ಹೋದ ವಿಧಿಯ ಕೈವಾಡವೋ ಎಂದೆಲ್ಲಾ ಚರ್ಚೆಗಳು ನಡೆದಿವೆ. ‘ಯಶೋಧರನ ಚರಿತೆ’ಯಷ್ಟು ಸಮಸ್ಯಾತ್ಮಕವಾದ ಕೃತಿ ಕನ್ನಡ ಸಾಹಿತ್ಯದಲ್ಲಿ ಇನ್ನೊಂದು ಇಲ್ಲ ಅನ್ನಿಸಿದೆ. ಇಂದಿಗೂ ಈ ಕೃತಿ ವಿದ್ವಾಂಸರಿಗೆ ಸವಾಲಾಗಿದೆ ಮತ್ತು ಅನೇಕ ವಿದ್ವಾಂಸರನ್ನು ಕಾಡಿದೆ. ಇನ್ನೂ ಕಾಡುತ್ತಲೇ ಇದೆ. ನಿಜವಾದ ಕಾವ್ಯದ ಒಳಗುಟ್ಟು ಇದೇ ಇರಬೇಕಲ್ಲವೆ? ಅದು ಏಕಾಏಕಿ ತನ್ನ ಎಲ್ಲಾ ಗುಟ್ಟುಗಳನ್ನೆಲ್ಲಾ ಬಿಟ್ಟು ಕೊಟ್ಟು ಬಿಟ್ಟರೆ ಆಗ ಅದು ನಿಜವಾದ ಕಾವ್ಯವೆನ್ನಿಸದೋ ಏನೋ. ಕಾವ್ಯದಲ್ಲಿರುವ ಓದು, ಅರ್ಥೈಸುವಿಕೆ, ಶ್ರದ್ಧೆ, ಶಿಸ್ತು ಬೇಕಾಗುತ್ತದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಡಾ. ಗಿರಡ್ಡಿ ಗೋವಿಂದರಾಜರ ಸಂಪಾದಕತ್ವದಲ್ಲಿ ಹೊರತಂದಿರುವ ‘ಜನ್ನ’ (೨೦೦೮) ಎಂಬು ಎಂಟು ಜನ ವಿದ್ವಾಂಸರು ಬರೆದ ಲೇಖನಗಳ ಸಂಕಲನ ಒಂದು ಗಮನಾರ್ಹವಾದ ಮಹತ್ವದ ಕೃತಿಯಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಜನ್ನನನ್ನು ಕುರಿತು ನಡೆಸಿದ ವಿಚಾರ‍ಸಂಕಿರಣದಲ್ಲಿ ವಿದ್ವಾಂಸರು ಮಂಡಿಸಿದ ಲೇಖನಗಳ ಸಂಕಲನ ಇದು. ಇಲ್ಲಿನ ಲೇಖನಗಳು ಹಿಂದಿನ ಚರ್ಚೆಗಳನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ, ಹೊಸತನದಿಂದ ಚರ್ಚಿಸುತ್ತವೆ. ಇದುವರೆಗೆ ಅಷ್ಟಾಗಿ ಚರ್ಚಿತವಾಗದೆ ಇದ್ದ ಹಿಂಸೆಯ ಸ್ವರೂಪ, ಮತಾಂತರ ಪ್ರಕ್ರಿಯೆ, ಪಾತ್ರಗಳ ಮನೋಧರ್ಮ, ಲೌಕಿಕ – ಆಗಮಿಕಗಳ ಪರಂಪರೆ, ಭವಾವಳಿ ಇತ್ಯಾದಿ ವಿಷಯಗಳನ್ನು ಕುರಿತು ಈ ಲೇಖನಗಳಲ್ಲಿ ಚರ್ಚೆ ನಡೆದಿದೆ. ಜನ್ನನನ್ನು ಹೊಸ ದೃಷ್ಟಿಕೋನಗಳಿಂದ ನೋಡಿರುವುದು ಈ ಲೇಖನಗಳಿಂದ ತಿಳಿದುಬರುತ್ತದೆ.

ಇಲ್ಲಿ ಹಂಪನಾಗರಾಜಯ್ಯನವರು ‘ಜನ್ನನ ಕಾವ್ಯಗಳ ಅನನ್ಯತೆಯ ವಿನ್ಯಾಸ’ವನ್ನು ಕನ್ನಡ ಜೈನ ಕಾವ್ಯಗಳ ಸಂದರ್ಭದಲ್ಲಿಟ್ಟು ವಿಶ್ಲೇಷಣೆ ಮಾಡಿದರೆ, ಕೆ. ಚಿನ್ನಪ್ಪಗೌಡರು ಜನ್ನನ ಕಾವ್ಯಗಳಿಗಿಂತ ಹೇಗೆ ಭಿನ್ನ ಎಂಬುದನ್ನು ವಿವರಿಸುತ್ತಾರೆ. ಸಿ.ಎನ್. ರಾಮಚಂದ್ರನ್ ಅವರು ‘ಯಶೋಧರ ಚರಿತೆ ಕಾವ್ಯದ ಕಥನ – ಸಂಕಥನ’ವನ್ನು ಕುರಿತು ತಮ್ಮ ಲೇಖನದಲ್ಲಿ ವಿವರಿಸುವ ಯತ್ನ ಮಾಡಿದರೆ, ಬಸವರಾಜ ಕಲ್ಗುಡಿ ಅವರು ವಾದಿರಾಜ ಮತ್ತು ಜನ್ನರಲ್ಲಿ ಯಶೋಧರ ಚರಿತೆಯ ಕಥನ ಸ್ವರೂಪದ ಸಮಾನ ಹಾಗೂ ಭಿನ್ನವಾದ ಆಶಯಗಳನ್ನು ವಿವರಿಸಿದ್ದಾರೆ. ಸೋಮದೇವ, ವಾದಿರಾಜ ಮತ್ತು ಜನ್ನರಲ್ಲಿ ಈ ಕಾವ್ಯದ ಕಥೆಗಳಲ್ಲಿ ಇರುವ ಅನೇಕ ಸಮಾನ ಆಶಯಗಳನ್ನು ಇವರು ಗುರುತಿಸಿದ್ದಾರೆ. ಈ ಮೂರು ಕಾವ್ಯಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಳ್ಳುವ ಅಮೃತಮತಿಯ ಪಾತ್ರ ಮತ್ತು ದಾಂಪತ್ಯ ಸಂಬಂಧದ ವಿಷಮತೆ ಮತ್ತು ಹಿಂಸೆಗೆ ನೇರವಾಗಿ ಕಲ್ಪಿತವಾಗಿರುವ ಪ್ರಶ್ನೆಗಳನ್ನೂ ಸಂಬಂಧಗಳನ್ನೂ ಕುರಿತು ಕಲ್ಗುಡಿಯವರು ಇಲ್ಲಿ ಗುರುತಿಸಿದ್ದಾರೆ. ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರು ತಮ್ಮ ‘ಯಶೋಧರ ಚರಿತೆಯಲ್ಲಿ ಹಿಂಸೆಯ ಪರಿಕಲ್ಪನೆ’ ಎಂಬ ಲೇಖನದಲ್ಲಿ ಜನ್ನ ತನ್ನ ಕಾವ್ಯ ಬರೆಯುವ ವೇಳೆಯಲ್ಲಿ ಜೈನಧರ್ಮ ತನ್ನ ಪ್ರಭೆಯನ್ನೂ ಕಳೆದುಕೊಂಡಿದ್ದು, ವೀರಶೈವ ಧರ್ಮ ಪ್ರಬಲವಾಗಿದುದ್ದನ್ನು ಗುರುತಿಸುತ್ತಾರೆ. ಇಂತಹ ಸಂದರ್ಭದಲ್ಲಿ ಜೈನಧರ್ಮವನ್ನು ಜನ್ನ ಪ್ರತಿಪಾದಿಸಬೇಕಾಗಿತ್ತು ಎನ್ನುತ್ತಾರೆ. ಚಾರಿತ್ರಿಕ ಹಿನ್ನೆಲೆಯಲ್ಲಿ ಜನ್ನನ ಕಾವ್ಯದಲ್ಲಿ ಕಾಣಿಸುವ ಹಿಂಸೆಯ ನೆಲೆಗಳನ್ನು ಗುರುತಿಸಿ, ಅದರ ಸೂಕ್ಷ್ಮತೆಗಳನ್ನು ಚರ್ಚಿಸುವ ಜನ್ನನಿಗೆ ಕೊನೆಗೆ ಹಿಂಸೆಯನ್ನು ಮೀರುವುದಕ್ಕೆ ಅವನಿಗೆ ಇದ್ದ ಒಂದೇ ಒಂದು ಮಾರ್ಗವೆಂದರೆ ಜೈನಧರ್ಮವಾಗಿತ್ತೆಂದು ಅಭಿಪ್ರಾಯ ಪಡುತ್ತಾರೆ. ಆದ್ದರಿಂದ ಜನ್ನ ಹಿಂಸೆಯ ಪ್ರತಿಪಾದನೆಯನ್ನು ಹಿಂಸೆಯ ಕಟ್ಟಡದ ಮೇಲೆ ನಡೆಸುತ್ತಾನೆ ಎಂಬ ತೀರ್ಮಾನಕ್ಕೆ ಬರುತ್ತಾರೆ.

‘ಜನ್ನನ ಕಾವ್ಯಗಳಲ್ಲಿ ಜೈನಧರ್ಮದ ನೆಲೆಗಳು’ ಎಂಬ ತಮ್ಮ ಲೇಖನದಲ್ಲಿ ಎನ್.ಎಸ್. ತಾರಾನಾಥರು ಕೆಲವು ವಿಶಿಷ್ಟ ಅಂಶಗಳನ್ನು ಗುರುತಿಸುತ್ತಾರೆ. ಯಶೋಮತಿ ಭೇಟೆಯಾಡಿ ಬಗೆಬಗೆಯ ಪ್ರಾಣಿಗಳನ್ನು ಕೊಲ್ಲುತ್ತಿದ್ದ. ಅವನು ಜೈನನೇ ಆಗಿರಲಿಲ್ಲ ಎಂಬುದಕ್ಕೆ ಪುರಾವೆಗಳಿವೆ. ಮಾರಿದತ್ತ ಕೂಡ ಕೊನೆಯಲ್ಲಿ ಜೈನ ದೀಕ್ಷೆ ಕೈಗೊಳ್ಳುತ್ತಾನೆ. ಹೀಗೆ ಒಂದು ಕುಟುಂಬದಲ್ಲಿ ಮಗ, ತಾಯಿ, ಸೋದರಮಾವ, ಅನ್ಯಧರ್ಮವನ್ನು ಅವಲಂಬಿಸಿ, ಯಶೋಧರ ಮಾತ್ರ ಜೈನ ಧರ್ಮವನ್ನು ಅವಲಂಬಿಸಿರುವ ಒಂದು ಚಿತ್ರವನ್ನು ಈ ಕಾವ್ಯದಲ್ಲಿ ಕಾಣುವುದರಿಂದ ಈ ಕೃತಿಯನ್ನು ಮತಾಂತರದ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಇವರು ಅಭಿಪ್ರಾಯಪಡುತ್ತಾರೆ. ಮಾರಿದೇವತೆ ಕೂಡ ಇಲ್ಲಿ ಮತಾಂತರವಾಗುವುದನ್ನು ಇಲ್ಲಿ ಕಾಣಬಹುದು ಎಂದು ಹೇಳುತ್ತಾರೆ. ಜೈನಧರ್ಮದಿಂದ ದೂರ ಹೋಗಿದ್ದವರನ್ನು ಮತ್ತೆ ಜೈನಧರ್ಮದ ತೆಕ್ಕೆಗೆ ಎಳೆದುಕೊಳ್ಳುವ ಉದ್ದೇಶವೂ ಈ ಕಾವ್ಯದ ಹಿಂದೆ ಇರಬಹುದು ಎಂದು ಸೂಚಿಸುತ್ತಾರೆ.

ಈ ಕೃತಿಯಲ್ಲಿನ ರಾಜೇಂದ್ರ ಚೆನ್ನಿ ಅವರ ‘ಯಶೋಧರ ಚರಿತೆಯಲ್ಲಿ ಪ್ರೇಮ, ಕಾಮ, ದಾಂಪತ್ಯ’ ಎಂಬ ಲೇಖನದಲ್ಲಿ ಮತ್ತು ಸಬೀಹಾಭೂಮಿ ಗೌಡ ಅವರ ‘ಸ್ತ್ರೀವಾದಿ ನೆಲೆಯಲ್ಲಿ ಜನ್ನನ ಕಾವ್ಯಗಳು’ ಎಂಬ ಲೇಖನದಲ್ಲೂ ಹೊಸದೃಷ್ಟಿಕೋನದಿಂದ ಜನ್ನನ ಈ ಕಾವ್ಯವನ್ನು ವಿಶ್ಲೇಷಿಸುವ ಪ್ರಯತ್ನ ಮಾಡಿರುವುದನ್ನು ಕಾಣುತ್ತೇವೆ. ಸ್ತ್ರೀವಾದಿ ಲೇಖಕಿಯರು ಮತ್ತು ಕವಯಿತ್ರಿಯರು ಅಮೃತಮತಿಯನ್ನು ತಮ್ಮ ಸ್ತ್ರೀವಾದದ ಮಾದರಿ ರೂಪಕವನ್ನಾಗಿ ಪರಿಭಾವಿಸಿ ನೋಡಿರುವುದನ್ನು ಆಧುನಿಕ ಕನ್ನಡ ಸಾಹಿತ್ಯದಲ್ಲಿ ನೋಡುತ್ತೇವೆ. ಸ್ತ್ರೀವಾದಿ ಲೇಖಕಿಯರು ಮಾತ್ರವಲ್ಲ, ಗಿರೀಶ್ ಕಾರ್ನಾಡ್ ರಂತಹ ಹಿರಿಯ ನಾಟಕಕಾರರೂ ಅಮೃತಮತಿಯ ಪಾತ್ರವನ್ನು ತಮ್ಮ ಸೃಜನಶೀಲ ಕೃತಿಗಳಲ್ಲಿ ಭಿನ್ನ ನೆಲೆಯಿಂದ ವಿಶ್ಲೇಷಿಸಿರುವುದುಂಟು. ಯಶೋಧರ ಚರಿತೆಯ ಸ್ತ್ರೀಪಾತ್ರಗಳು ಮಾತೃತ್ವದ ನೆಲೆಯಲ್ಲಿ, ಧರ್ಮಪತ್ನಿ ನೆಲೆಯಲ್ಲಿ, ದೇವಿಯ ನೆಲೆಯಲ್ಲಿ ತಮ್ಮದೇ ಆದ ಆಲೋಚನೆ, ನಂಬಿಕೆ, ನಿಷ್ಠೆ, ಬದುಕಿನ ಆಯ್ಕೆಗಳ ಮೂಲಕ ತಮ್ಮ ಅಸ್ತಿತ್ವದ ಹುಡುಕಾಟವನ್ನು ನಡೆಸುವುದನ್ನು ಸಬೀಹಾ ಅವರು ತಮ್ಮ ಲೇಖನದಲ್ಲಿ ಗುರುತಿಸುವ ಪ್ರಯತ್ನ ಮಾಡಿದ್ದಾರೆ.

ಈ ಕಾವ್ಯದಲ್ಲಿ ಕಾಣಿಸಿಕೊಳ್ಳುವ ಪಿತೃಪ್ರಧಾನ ವ್ಯವಸ್ಥೆ, ಸ್ತ್ರೀಯರನ್ನು ಮೃಗೀಯಗಳಂತೆ ಪುರುಷರು ನಡೆಸಿಕೊಳ್ಳುವ ಪ್ರಸಂಗಗಳು ಪ್ರಾಚೀನ ಕಾವ್ಯಗಳ ಸ್ತ್ರೀವಾದಿ ಅಧ್ಯಯನಕ್ಕೆ ಹೊಸ ಪ್ರವೇಶವೊಂದನ್ನು ಒದಗಿಸಬಲ್ಲವು ಎಂದು ಸಬೀಹಾ ಅವರು ಅಭಿಪ್ರಾಯಪಡುತ್ತಾರೆ. ರಾಜೇಂದ್ರ ಚೆನ್ನಿ ಅವರು ತಮ್ಮ ಲೇಖನದಲ್ಲಿ ಈ ಕಾವ್ಯ ಒಂದು ರೀತಿಯಲ್ಲಿ ನೇರವಾಗಿಯೇ ಧರ್ಮ, ಮತಾಂತರಗಳನ್ನು ಕುರಿತಂತಹ ಕೃತಿ ಎಂದು ಹೇಳುತ್ತಾರೆ. ಜನ್ನ ತನ್ನ ಕಾಲದ ಸಮಕಾಲೀನತೆಯನ್ನು ಮತ್ತು ಹಿಂದಿನದನ್ನು ವಿವರಿಸುತ್ತಾ ಸಂಸ್ಕೃತಿಯ ಪಲ್ಲಟವನ್ನು, ಸ್ಥಿತ್ಯಂತರವನ್ನು ತನ್ನ ಕಾವ್ಯದಲ್ಲಿ ಹಿಂಸೆಯ ಪ್ರಶ್ನೆಯನ್ನು ವಿವರಿಸುತ್ತಾ ಕಾವ್ಯದಲ್ಲಿ ಬರುವ ದಾಂಪತ್ಯ ಮತ್ತು ಪ್ರೇಮಗಳ ಪ್ರಶ್ನೆಗಳನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುವ ಪ್ರಯತ್ನವನ್ನು ಮಾಡುತ್ತಾರೆ. ಚೆನ್ನಿ ಅವರು ಮುಖ್ಯವಾಗಿ ಕಾವ್ಯದ ಒಳಗಿನಿಂದ ಅದರ ರೂಪಕ, ಕಾವ್ಯದ ಮೌನದ ಹಿನ್ನೆಲೆಯಲ್ಲಿ ಅರ್ಥೈಸಲು ಯತ್ನಿಸಿದ್ದಾರೆ. ಇಷ್ಟಾಗಿಯೂ ‘ಜನ್ನ ಪ್ರೇಮ, ಕಾಮ, ದಾಂಪತ್ಯಗಳನ್ನು ಚಿತ್ರಿಸಿರುವ ರೀತಿ ಈ ಯಾವ ಪರಿಭಾಷೆಗೂ ಸಿಗುವುದಿಲ್ಲ ಎಂದು ನನ್ನ ಓದಿನ ಮಿತಿಗಳಲ್ಲಿ ನನಗೆ ಅನಿಸಿದೆ’ ಎಂಬ ನಿರ್ಣಯಕ್ಕೆ ಬಂದು, ಚೆನ್ನಿ ಅವರು “ಒಟ್ಟಿನಲ್ಲಿ ಈ ಕಾವ್ಯ ನಮಗೆ ಯಾಕೆ ಮುಖ್ಯವಾಗುತ್ತದೆ ಎಂದರೆ ದಾಂಪತ್ಯ ಇತ್ಯಾದಿ ಬಗೆಗಿನ ದುರಂತ ಕಥೆಯನ್ನು ಹೇಳುತ್ತಲೇ ಒಂದು ಪಡಿಯಚ್ಚಿನ ಚೌಕಟ್ಟನ್ನು ಬಳಸಿಕೊಂಡು ಜನ್ನ, ಹಿರಿದಾದ ಅರ್ಥದಲ್ಲಿ ಸಾಂಸ್ಕೃತಿಕ ಪಲ್ಲಟದಲ್ಲಿ ಒಂದು ಪಕ್ಷವನ್ನು ವಹಿಸಿದ್ದಾನೆ” ಎಂಬ ತೀರ್ಮಾನಕ್ಕೆ ಬಂದಿರುವುದನ್ನು ಕಾಣುತ್ತೇವೆ. ಹಿಂಸೆಯ ಹಲವಾರು ಮುಖಗಳನ್ನು ಈ ಕಾವ್ಯ ಒಂದು ರೂಪಕ ವಿಧಾನದಲ್ಲಿ ಹಿಡಿದಿರುವುದನ್ನು ಚೆನ್ನಿ ಅವರು ಗುರುತಿಸುತ್ತಾರೆ. ಪ್ರೀತಿ ಶುಭಚಂದ್ರ ಅವರು ತಮ್ಮ ‘ಜನ್ನನ ಕಾವ್ಯಗಳಲ್ಲಿ ಕಾಯ ಮತ್ತು ಜೀವಗಳ ಸಂಬಂಧ’ ಎಂಬ ಲೇಖನದಲ್ಲಿ ‘ಜೀವವಿಲ್ಲದಿರುವ ಕಾಯ (ಉದಾ: ಹಿಟ್ಟಿನ ಕೋಳಿ), ‘ಕಾಯಕವಿಲ್ಲದ ಜೀವ’ (ಬೆಂತರ) ಇವುಗಳ ‘ಜೀವ – ಕಾಯ’ ಸಂಬಂಧರ ತಾತ್ವಿಕತೆಯನ್ನು ಜೈನಧರ್ಮದ ನೆಲೆಯಲ್ಲಿ ಸ್ವೀಕರಿಸಿದ ಜನ್ನ ತನ್ನ ಸಮಕಾಲೀನ ವಾಸ್ತವದ ಅನುಭವಗಳ ಕಾವ್ಯಾತ್ಮಕ ಗ್ರಹಿಕೆಗೆ ಅದನ್ನು ಹೇಗೆ ಬಳಸಿಕೊಡಿದ್ದಾನೆ ಎಂಬುದನ್ನು ವಿವರವಾಗಿ ಚರ್ಚಿಸಿದ್ದಾನೆ. ಬಿ.ದಾಮೋದರರಾವ್ ಅವರು ‘ಜನ್ನನಲ್ಲಿ ಹಿಂಜರಿಕೆ’ ಎಂಬ ಲೇಖನದಲ್ಲಿ ಜನ್ನನಿಗೆ ಅನೇಕ ವಿಚಾರಗಳಲ್ಲಿ ‘ಹಿಂಜರಿಕೆ’ ಎನ್ನಬಹುದಾದ ಮನೋಸ್ಥಿತಿ ಇರಬಹುದು ಎಂದು ಅಭಿಪ್ರಾಯಪಡುತ್ತಾ ಯಶೋಧರ ಚರಿತೆಯಲ್ಲಿ ಜನ್ನ ಸಾವನ್ನು ನಿರ್ವಹಿಸುವ ರೀತಿಯನ್ನು ಜನಪದ ಕೃತಿ, ‘ಸಿರಿಪಾಡ್ದನ’ದ ಹಿನ್ನೆಲೆಯಲ್ಲಿ ನೋಡುವುದರಿಂದ ಇದರ ಕಥನದ ಸಂಕೀರ್ಣತೆಯ ರಹಸ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯತೆ ಇದೆ ಎಂದು ಊಹಿಸಿದ್ದಾರೆ.

ಈ ಸಂಕಲನದ ಮತ್ತೆರಡು ಗಮನಾರ್ಹವಾದ ಲೇಖನಗಳೆಂದರೆ ಬಿ.ಎ. ವಿವೇಕರೈ ಮತ್ತು ಎಚ್.ಎಸ್. ರಾಘವೇಂದ್ರರಾವ್ ಅವರ ಲೇಖನಗಳು, ಎಚ್.ಎಸ್. ರಾಘವೇಂದ್ರರಾವ್ ಅವರು ತಮ್ಮ ‘ಸಾಂಸ್ಕೃತಿಕ ಪಠ್ಯವಾಗಿ ಯಶೋಧರ ಚರಿತೆ’ ಎಂಬ ಲೇಖನದಲ್ಲಿ ಯಶೋದರ ಚರಿತೆಯನ್ನು ಒಂದು ಸಾಹಿತ್ಯ ಕೃತಿಯನ್ನಾಗಿ ಪರಿಗಣಿಸುವುದರ ಜೊತೆಗೆ ಅದನ್ನು ಒಂದು ಸಾಂಸ್ಕೃತಿಕ ಪಠ್ಯವನ್ನಾಗಿಯೂ ಪರಿಗಣಿಸಿ ನೋಡುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಯಶೋಧರ ಚರಿತೆಯನ್ನು ಕೇವಲ ಜನ್ನನ ಒಂದು ಸಾಹಿತ್ಯ ಕೃತಿಯನ್ನಾಗಿ ನೋಡದೆ, ಅದರ ಸೃಷ್ಟಿಗೆ ಕಾರಣವಾದ ಪೂರ್ವಸೂರಿಗಳ ಎಲ್ಲಾ ಆಕರಗಳ ಸಂದರ್ಭದಲ್ಲಿ ಮತ್ತು ಜನ್ನನ ಕಾಲದ ಸಾಂಸ್ಕೃತಿಕ ಸಂದರ್ಭದಲ್ಲಿಟ್ಟು ವಿಶ್ಲೇಷಿಸುವ ಪ್ರಯತ್ನವನ್ನೂ ರಾಘವೇಂದ್ರರಾವ್ ಅವರು ಇಲ್ಲಿ ಮಾಡಿದ್ದಾರೆ. ಇದರ ಜೊತೆಗೆ ಈ ಕಾವ್ಯದ ಮೂಲ ಆಶಯವು ಜಾನಪದ ಕಥೆಯಾಗಿ ವಿಶ್ವವ್ಯಾಪ್ತಿಯಾಗಿರುವುದನ್ನು ಗುರುತಿಸಿದ್ದಾರೆ. ‘ಅರೆಬೀಯನ್ ನೈಟ್ಸ್’ ಕಥೆಗಳಲ್ಲಿ ಕಾಣಿಸಿಕೊಳ್ಳುವ ಈ ಬಗೆಯ ವಿವಾಹಬಾಹಿತ ಸಂಬಂಧಗಳನ್ನು ರಾಘವೇಂದ್ರರಾವ್ ಅವರು ಉದಾಹರಿಸುತ್ತಾ, ಈ ಬಗೆಯ ವಿವಾಹಬಾಹಿತ ಸಂಬಂಧಗಳು ಆಧುನಿಕ ಕೃತಿಗಳಾದ ‘ಬಲಿ’, ‘ಕಾನೂರು ಹೆಗ್ಗಡತಿ’ ಮುಂತಾದ ಕೃತಿಗಳಲ್ಲಿ ಕಾಣಿಸಿಕೊಳ್ಳುವುದನ್ನು ನೆನಪಿಸುತ್ತಾರೆ. ಕಾವ್ಯದಲ್ಲಿ ಮೌನವಾಗಿರುವ ಕೆಲವು ಸಮುದಾಯಗಳ ವರ್ತನೆಯನ್ನು ಸಾಂಸ್ಕೃತಿಕ ಅಧ್ಯಯನಕ್ಕೆ ಒಳಪಡಿಸಿದರೆ ಅಲ್ಲಿ ಬರುವ ಪೂಜೆ, ಆಹಾರ, ಬೇಟೆ, ಕಾಮ, ಕಲೆ ಮೊದಲಾದ ಸಂಗತಿಗಳ ವಿವರಗಳ ಅಧ್ಯಯನ ಮೌಲಿಕವಾಗುತ್ತವೆ. ಸಾಂಸ್ಕೃತಿಕವಾದ ಸಂಗತಿಗಳಿಗೆ ಆಕರವಾಗುತ್ತವೆ ಎಂದು ಪಠ್ಯ ಹೊರಗಿನ ತಮ್ಮ ಮೌಲಿಕ ಅಭಿಪ್ರಾಯಗಳನ್ನು ಮಂಡಿಸುತ್ತಾರೆ.

ಇನ್ನು ಕೊನೆಯದಾಗಿ ಬಿ.ಎ. ವಿವೇಕ ರೈ ಅವರ ‘ಲೌಕಿಕ – ಆಗಮಿಕ ಕಾವ್ಯಗಳ ಪರಿಕಲ್ಪನೆ ಮತ್ತು ಜನ್ನನ ಕಾವ್ಯಗಳು’ ಎಂಬ ಲೇಖನ ತಾತ್ವಿಕವಾಗಿ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ. ಲೌಕಿಕ – ಆಗಮಿಕ, ಮಾರ್ಗ – ದೇಸಿ ಬಗ್ಗೆ ಇದುವರೆಗೆ ಕನ್ನಡ ವಿಮರ್ಶೆ ನಂಬಿಕೊಂಡು ಬಂದಿರುವ ಪರಿಕಲ್ಪನೆಗಳ ಬಗ್ಗೆ ಗಾಢವಾಗಿ ಮರುಚಿಂತನೆ ಮಾಡುವಂತೆ ಈ ಲೇಖನ ಪ್ರೇರೇಪಿಸುತ್ತದೆ. “ಲೌಕಿಕ – ಧಾರ್ಮಿಕಗಳೆರಡೂ ಒಂದೇ ಕಡೇ ಇರುವುದು ಅನಿವಾರ್ಯ, ಇವೆರಡೂ ಪ್ರತ್ಯೇಕ ಜಗತ್ತುಗಳಲ್ಲ. ಮನುಷ್ಯನ ಮನಸ್ಸು ಒಂದೇ ಬದುಕಿನಲ್ಲಿ ಕಟ್ಟಿಕೊಳ್ಳುವ ಎರಡು ಆಲೋಚನಾ ಕ್ರಮಗಳು” ಎಂದು ಅನೇಕ ದೃಷ್ಟಾಂತಗಳನ್ನು ಉದಾಹರಿಸುವುದರ ಮೂಲಕ ತೀರ್ಮಾನಕ್ಕೆ ಬರುತ್ತಾರೆ. ಹತ್ತನೆಯ ಶತಮಾನದ ಕವಿಗಳಲ್ಲಿ ಈ ಬಗೆಯ ಲೌಕಿಕ – ಆಗಮಿಕ ವರ್ಗೀಕರಣವಿದ್ದರೆ ಈ ಮಾದರಿಯನ್ನು ನಂತರ ಒಡೆದವನು ನಾಗಚಂದ್ರ ಎಂದು ಹೇಳಿ ಅದಕ್ಕೆ ಅನೇಕ ಪುರಾವೆಗಳನ್ನು ಒದಗಿಸುತ್ತಾರೆ.

ಸ್ಥಳ, ಕಾಲ, ಸೃಷ್ಟಿಗೆ ಸಂಬಂಧಿಸಿದ ಮೂರು ವಿಷಯಗಳ ಮೂಲಕ ಮನುಷ್ಯರ ಬದುಕಿನ ಆಗು-ಹೋಗುಗಳನ್ನು ಜೈನ ಕಾವ್ಯಗಳು ಚರ್ಚೆ ಮಾಡುವುದನ್ನು ಗುರುತಿಸುತ್ತಾರೆ. ಈ ಎಲ್ಲಾ ಪರಿಕಲ್ಪನೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ‘ಯಶೋಧರ ಚರಿತೆ’ ಕಾವ್ಯವನ್ನು ನೋಡಿದರೆ, ‘ಈ ಕಾವ್ಯ ನಮ್ಮ ಲೌಕಿಕ ಬದುಕಿನ ಅನೇಕ ವಿಷಯಗಳನ್ನು ತಿಳಿಸಿಕೊಡಲು ಸಾಧ್ಯವಿದೆ’ ಎಂದು ರೈ ಅವರು ಅಭಿಪ್ರಾಯಪಡುತ್ತಾರೆ. ಒಂದು ನೋಂಪಿಯ ಕಥೆಯನ್ನಾಗಿ ಮತ್ತು ಹಿಂಸೆಯಿಂದ ಅಹಿಂಸೆಯ ಕಡೆಗೆ ತಿರುಗುವ ಕಥೆಯನ್ನಾಗಿ ನೋಡುವ ಈ ಕಾವ್ಯದ ಕಥೆಯ ಕವಚವನ್ನು ಒಡೆದು ಒಳಗಿನ ತಿರುಳನ್ನು ನೋಡಿದರೆ ಅಲ್ಲಿರುವುದು ಬಹಳ ದೇಶಿಯುಕ್ತವಾದ ಮಾರಿಗುಡಿಯ ವರ್ಣನೆ, ಬಲಿಗಳು, ಆಕ್ರಂದನ ಮತ್ತು ಆತ್ಮಬಲಿಯ ಪ್ರಕಾರಗಳು ಕಾಣಿಸುತ್ತವೆ ಎಂದು ವಿವರಿಸುತ್ತಾರೆ. ಇಡಿಯ ಕಾವ್ಯದಲ್ಲಿ ಜನ್ನ ಮಂಡಿಸುವ ಕ್ರಮ ಜೈನಧರ್ಮಗಳ ಕವಚವನ್ನು ತೊಟ್ಟುಕೊಂಡು ಲೌಕಿಕ ಬದುಕಿನ ಮುಖ್ಯ ಕಾಳಜಿಗಳನ್ನು ಚರ್ಚಿಸುವಂಥದು ಎಂದು ತಮ್ಮ ಪ್ರಮೇಯವನ್ನು ಮಂಡಿಸುತ್ತಾರೆ. ಯಶೋಧರ ಚರಿತೆಯಲ್ಲಿ ಹೆಣ್ಣು – ಗಂಡಿನ ಸಂಬಂಧವೇ ಮುಖ್ಯ ಕಾಳಜಿಯಾಗಿದೆ. ಇದು ಲೌಕಿಕದ ಕುರಿತು ಗಂಭೀರವಾಗಿ ಚರ್ಚಿಸುತ್ತಿದ್ದೇವೆ ಎಂಬ ನಿರ್ಣಯಕ್ಕೆ ಅವರು ಬರುತ್ತಾರೆ. ಇದರ ಜೊತೆಗೆ ವಿವೇಕ ರೈ ಅವರು ಹೇಳುವ ಹಾಗೆ, “ಯಶೋಧರ ಚರಿತೆಗೆ ಹಿನ್ನೆಲೆಯಾಗಿ ಎರಡು ಮುಖ್ಯ ಮೂಲಧಾರಗಳಿವೆ. ಜನಪದ ಕಥೆಗಳಿಂದ ಬಂದು, ಆಮೇಲೆ ಒಂದು ಪ್ರಣಯ ಕಥೆಯಾಗಿ ಬೆಳೆದದ್ದು ಒಂದು ಮೂಲ. ಹೆಣ್ಣಿನ ಪ್ರೀತಿ ಚಂಚಲ ಎಂಬುದು ಇದರ ಆಶಯ. ಎಲ್ಲಾ ಭಾಷೆಗಳ ಜನಪದ ಕಥೆಗಳಲ್ಲೂ ಈ ಆಶಯದ ಕಥೆಗಳಿವೆ. ಹೆಣ್ಣು ವಂಚಕಿ ಎಂದು ಹೇಳುವುದಕ್ಕಾಗಿ ಅನೇಕ ಕಥೆಗಳಲ್ಲಿ ಆಕೆಯ ಮಿಂಡನ ಬಗ್ಗೆ, ವಿಟನ ಬಗ್ಗೆ ಪ್ರಸ್ತಾಪಗಳು ಬರುತ್ತವೆ” ಎಂದು ಅವರು ಅಭಿಪ್ರಾಯಪಡುವುದು ಸಹಜವಾಗಿಯೇ ಇದೆ. ಇಂತಹ ಜನಪದ ಕಥೆಯನ್ನು ಮೂಲವಾಗಿಟ್ಟುಕೊಂಡು ಜನ್ನನ ಪೂರ್ವಸೂರಿಗಳೆಲ್ಲಾ ಅದಕ್ಕೆ ಜೈನಧರ್ಮದ ತಿರುಳನ್ನು, ಸ್ಪರ್ಶವನ್ನೂ ನೀಡಿದ್ದಾರೆ. ಆದರೆ ಎಷ್ಟೇ ಭೋಗದಿಂದ ವೈರಾಗ್ಯದ ಕಡೆಗೆ ತಿರುಗುವ ಜೈನಧರ್ಮದ ಸ್ವರ್ಶವನ್ನು ಕೊಟ್ಟರೂ ಗಂಡು – ಹೆಣ್ಣಿನ ಸಂಬಂಧಗಳು, ಮಾನವೀಯ ಕಾಳಜಿಯ ದೃಢೀಕರಣಗಳೇ ಈ ಕಾವ್ಯದಲ್ಲಿ ಮೇಲುಗೈ ಸಾಧಿಸಿವೆ. ಜನ್ನನ ಕಾವ್ಯಗಳನ್ನು ಕುರಿತು ಬಂದಿರುವ ಮಹತ್ವದ ಅಧ್ಯಯನ ಕೃತಿಗಳಲ್ಲಿ ಇದು ಒಂದಾಗಿದೆ.

೧೨

ಡಿ.ಎಲ್. ನರಸಿಂಹಚಾರ್ ಅವರು ‘ಜನ್ನನೂ ವಾದಿರಾಜನೋ’ (೧೯೩೧) ಎಂಬ ಒಂದು ತೌಲನಿಕ ಲೇಖನವನ್ನು ಬರೆದಿದ್ದಾರೆ. ಡಿ.ಎಲ್.ಎನ್. ಅವರು ಇದು ‘ಹದಿನಾರನೆಯ ಕರ್ನಾಟಕ ಸಾಹಿತ್ಯ ಸಮ್ಮೇಳನ’ಕ್ಕೆ ಬರೆದು ಓದಿದ ಲೇಖನ. ಇದು ‘ಕರ್ನಾಟಕ ಸಾಹಿತ್ಯ ಪರಿಷತ್ಪತ್ರಿಕೆ, ಸಂ. ೧೫, ಸಂಚಿಕೆ ೪’ರಲ್ಲಿ ಮುದ್ರಿತವಾಗಿ ತರುವಾಯ ಅವರ ‘ಪೀಠಿಕೆಗಳು ಮತ್ತು ಲೇಖನಗಳು’ (೧೯೭೧) ಎಂಬ ಬೃಹತ್ ಗ್ರಂಥದಲ್ಲಿ ಸೇರ್ಪಡೆಯಾಗಿದೆ. ಆ ಕಾಲಕ್ಕೆ ಜನ್ನ ಮತ್ತು ವಾದಿರಾಜರ ಯಶೋಧರ ಚರಿತೆಗಳ ಕಾವ್ಯಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿ ಬರೆದ ಒಂದು ಪ್ರಮುಖವಾದ ಲೇಖನ ಇದಾಗಿದೆ. ಇವತ್ತಿಗೂ ಈ ಲೇಖನ ತೌಲನಿಕ ಸಾಹಿತ್ಯ ಸಂಶೋಧನ ಕ್ಷೇತ್ರದಲ್ಲಿ ಬಹುಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ಮಧುರ ಕವಿ ತನ್ನ ಗ್ರಂಥದಲ್ಲಿ ಕವಿಚಕ್ರವರ್ತಿ ಜನ್ನನನ್ನು ‘ಕರ್ಣಾಟ ಕೃತಿಗೆ ಸೀಮಾ ಪುರುಷ’ ಎಂದು ಕರೆದಿರುವುದನ್ನು ನೋಡಿದರೆ ಕನ್ನಡದ ಅಭಿಜಾತ ಗ್ರಂಥಗಳ ಸಾಲಿನಲ್ಲಿ ಇವತ್ತಿಗೂ ‘ಯಶೋಧರ ಚರಿತೆ’ ನಿಜಕ್ಕೂ ‘ಕರ್ಣಾಟ ಕೃತಿ’ಯಾಗಿದೆ. ಜನ್ನನು ತನಗಿಂತಲೂ ಹಿಂದೆ ಪ್ರಚಾರದಲ್ಲಿದ್ದ ‘ಯಶೋಧರನ ಕಥೆ’ಗಳನ್ನೂ ಕೇಳಿ, ಓದಿ ಅಥವಾ ನೋಡಿ ತನ್ನ ಗ್ರಂಥ ‘ಯಶೋಧರ ಚರಿತೆ’ಯನ್ನು ಬರೆದನೆಂದು ತಾನೇ ತನ್ನ ಒಂದು ಪದ್ಯದಲ್ಲಿ (ಯ.ಚ: ೧೫) ಹೇಳಿಕೊಂಡಿದ್ದಾನೆ. ಜನ್ನನಿಗಿಂತ ಹಿಂದೆ ಕನ್ನಡದಲ್ಲಿ ಈ ಕಾವ್ಯ ಇದ್ದವೋ ಇಲ್ಲವೋ ತಿಳಿಯದು. ಪ್ರಾಕೃತ ಭಾಷೆಯಲ್ಲಿಯೂ ಈ ಕಾವ್ಯ ಇತ್ತೋ ಇಲ್ಲವೋ ಅದರ ಬಗ್ಗೆ ಮಾಹಿತಿ ಇಲ್ಲ. ಯಾಕೆಂದರೆ ಅವು ಯಾವೂ ಸಿಕ್ಕಿಲ್ಲ. ಜನ್ನ ಮಾತ್ರ ಈ ಕಥೆ ಕನ್ನಡದಲ್ಲಿ ಇತ್ತೆಂದು ಮೇಲಿನ ತನ್ನ ಪದ್ಯದಲ್ಲಿ ಹೇಳಿಕೊಂಡಿದ್ದಾನೆ. ಆದರೆ ಸಂಸ್ಕೃತ ಭಾಷೆಯಲ್ಲಿ ಮಾತ್ರ ಈ ಕಾವ್ಯ ವಾದಿರಾಜನಿಂದ ರಚಿತವಾಗಿತ್ತು.

ವಾದಿರಾಜನ ‘ಯಶೋಧರ ಚರಿತೆ’ ಕಾವ್ಯವನ್ನು ಅನುಸರಿಸಿ ಜನ್ನ ತನ್ನ ‘ಯಶೋಧರ ಚರಿತೆ’ಯನ್ನು ರಚಿಸಿದ್ದಾನೆ. ಡಿ.ಎಲ್.ಎನ್. ಅವರು “ಯಶೋಧರ ಕಥೆ”ಯು ಹುಟ್ಟಿದುದು ‘ಅಹಿಂಸಾ ಪರಮೋಧರ್ಮಃ’ ಎಂಬ ಸೂತ್ರಾರ್ಥವನ್ನು ವಿಶದವಾಗಿ ಮನಸ್ಸಿಗೆ ಹಿಡಿಯುವಂತೆ ತಿಳಿಯಪಡಿಸುವುದಕ್ಕಾಗಿ” ಎಂದು ಹೇಳುತ್ತಾ. ಈ ಲೇಖನದಲ್ಲಿ ‘ಯಶೋಧರನ ಚರಿತೆ’ಯ ಕಾವ್ಯದ ಕಥೆಯನ್ನು ವಿವರಿಸಿದ್ದಾರೆ. “ಈ ಶುಭ ಕಥನವು ಮಾರಿದತ್ತನಿಗೆ, ಹಿಂಸಾರಭಸಮತಿಗೆ ಸ್ವಯಂ ಪೇಳ್ದು ಧರ್ಮ”ಕ್ಕೆ ತಂದಿತು ಎಂದು ವಿವರಿಸುತ್ತಾರೆ. ಈ ಕಥಾವಸ್ತುವನ್ನೇ ಆಧಾರವಾಗಿಟ್ಟುಕೊಂಡು ಸಂಸ್ಕೃತದಲ್ಲಿ ಸೊಗಸಾದ ಕಾವ್ಯವನ್ನು ಬರೆದ ವಾದಿರಾಜನ ಕಾವ್ಯದ ಜೊತೆ ಜನ್ನನ ಕಾವ್ಯದ ಕೆಲವು ಭಾಗಗಳನ್ನು ಹೋಲಿಸಿ “ಜನ್ನನು ಇದನ್ನೇ ಅನುಸರಿಸಿ ವಾದಿರಾಜನ ಕಾವ್ಯಕ್ಕಿಂತಲೂ ಇಮ್ಮಡಿ ಸೊಗಸಾದ ಒಂದು ಕಾವ್ಯರತ್ನವನ್ನು ನಿರ್ಮಿಸಿರುವನು; ಜನ್ನನ ಕವಿತಾಪ್ರಜ್ಞೆಯು ವಾದಿರಾಜನ ಕವಿತಾ ಪ್ರಜ್ಞೆಗಿಂತ ಎಷ್ಟೋ ಮೇಲಾದುದು” ಎಂಬ ತೀರ್ಮಾನಕ್ಕೆ ಡಿ.ಎಲ್.ಎನ್. ಅವರು ಬರುತ್ತಾರೆ.

ಡಿ.ಎಲ್.ಎನ್. ಅವರು ತಮ್ಮ ತೀರ್ಮಾನವನ್ನು ತಮ್ಮ ಲೇಖನದಲ್ಲಿ ವಾದಿರಾಜ ಮತ್ತು ಜನ್ನನ ಕಾವ್ಯಗಳಿಂದ ಕೆಲವು ಭಾಗಗಳನ್ನು ತೌಲನಿಕವಾಗಿ ಉದಾಹರಿಸುವುದರ ಮೂಲಕ ಇದನ್ನು ಸಮರ್ಥಿಸುವುದನ್ನು ಇಲ್ಲಿ ಕಾಣುತ್ತೇವೆ. ‘ಯಶೋಧರ ಚರಿತೆ’ ಕಾವ್ಯ ಆರಂಭವಾಗುವ ಚೈತ್ರಮಾಸದ ಚಂಡಮಾರಿ ದೇವತೆಯ ಜಾತ್ರೆಯ ಹಾಗೂ ಜನರ ವರ್ಣನೆಯನ್ನು ಜನ್ನ ನಿರೂಪಿಸುವಲ್ಲಿ ಶ್ರೇಷ್ಠತೆ ಎದ್ದು ಕಾಣುವುದನ್ನು ಡಿ.ಎಲ್.ಎನ್. ಅವರು ಗುರುತಿಸುತ್ತಾರೆ. ಇದನ್ನು ವಾದಿರಾಜನು ತನ್ನ ಕಾವ್ಯದಲ್ಲಿ ಎರಡೆರಡು ಪದ್ಯಗಳಲ್ಲಿ ಹೇಳಿರುವುದನ್ನು ಜನ್ನ ಒಂದೇ ಒಂದು ಕಂದ ಪದ್ಯದಲ್ಲಿ ಬಣ್ಣಿಸಿರುವುದನ್ನು ಇಲ್ಲಿ ಕಾಣಿಸುತ್ತಾರೆ. ವಾದಿರಾಜನು ಅಭಯರುಚಿ ಮತ್ತು ಅಭಯಮತಿ ಅಣ್ಣ ತಂಗಿಯರ ಸಂಭಾಷಣೆಯನ್ನು ನಾಲ್ಕು ಶ್ಲೋಕಗಳಲ್ಲಿ ಮುಗಿಸಿದ್ದರೆ ಜನ್ನನು ಅದನ್ನು ಎರಡೇ ಪದ್ಯಗಳಲ್ಲಿ ಸಂಗ್ರಹವಾಗಿ ಹೇಳಿರುವುದನ್ನು ಡಿ.ಎಲ್.ಎನ್. ಅವರು ಗುರುತಿಸಿದ್ದಾರೆ.

‘ಯಶೋಧರ ಚರಿತೆ’ ಕಾವ್ಯದಲ್ಲಿ ಚಿತ್ರಿತವಾಗಿರುವ ಪಾತ್ರಗಳಲ್ಲಿ ಅಮೃತಮತಿಯ ಪಾತ್ರ ಬಹುಮುಖ್ಯವಾದುದು ಎಂಬುದು ಡಿ.ಎಲ್.ಎನ್. ಅವರ ಅಭಿಪ್ರಾಯವೂ ಸಹ ಆಗಿದೆ. ಇಂತಹ ಅಮೃತಮತಿಯ ಪಾತ್ರವನ್ನು ‘ವಾದಿರಾಜನೂ ಜನ್ನನೂ’ ಹೇಗೆ ಜೀವಕಳೆಯಿಂದ ತುಂಬಿರುವರೆಂಬುದನ್ನು ತೌಲನಿಕವಾಗಿ ಈ ಲೇಖನದಲ್ಲಿ ಡಿ.ಎಲ್.ಎನ್. ಅವರು ವಿಶ್ಲೇಷಿಸಿದ್ದಾರೆ. ಈ ಎಲ್ಲಾ ಪ್ರಸಂಗಗಳನ್ನು ನೋಡಿದರೆ ಸನ್ನಿವೇಶ ರಚನೆಯಲ್ಲಿ, ಪ್ರಕೃತಿ ವರ್ಣನೆಯಲ್ಲಿ ವಾದಿರಾಜನಿಗಿಂತ ಜನ್ನನೇ ಹೆಚ್ಚು ಶಕ್ತನು ಎಂದು ಡಿ.ಎಲ್.ಎನ್. ಅವರು ಅಭಿಪ್ರಾಯಪಡುತ್ತಾರೆ. ಅವರು ಹೆಳುವ ಹಾಗೆ ಜನ್ನನು ವಾದಿರಾಜನ ಕಾವ್ಯವನ್ನು ಅನುಸರಿಸಿದ್ದರೂ ತಾನು ಮುಟ್ಟಿದ್ದೆಲ್ಲವನ್ನೂ ಚಿನ್ನವನ್ನಾಗಿ ಮಾಡಿರುವನು. ಜನ್ನ ರೂಪಕ (ಯ.ಚ. ೩,೨೮)ಗಳನ್ನು ಬಳಸುವಲ್ಲಿ ಮತ್ತು ವರ್ಣನೆ (ಯ.ಚ. ೩.೩೭) ಯನ್ನು ಮಾಡುವಲ್ಲಿ ಅವನ ಸ್ವೋಪಜ್ಞತೆ ಎದ್ದು ಕಾಣುತ್ತದೆ ಎಂದು ಡಿ.ಎಲ್.ಎನ್. ಅವರು ನಿರ್ಣಯಿಸುತ್ತಾರೆ. ಒಟ್ಟಾರೆ ಈ ತೌಲನಿಕವಾದ ಲೇಖನದಲ್ಲಿ ಡಿ.ಎಲ್.ಎನ್. ಅವರು ಜನ್ನನು ವಾದಿರಾಜನಿಗಿಂತ ಉತ್ತಮನಾದ ಕವಿಯೆಂದು ನಿರ್ಣಯಿಸುತ್ತಾರೆ.

೧೩

ಕನ್ನಡದ ಹಿರಿಯ ವಿದ್ವಾಂಸರಾದ ಎಸ್.ವಿ. ರಂಗಣ್ಣ ಅವರು ತಮ್ಮ ‘ಜನ್ನನ ಶೈಲಿ – ಭಾಗ ೨’ (ಎ.ಮು. ೧೯೭೧)ರಲ್ಲಿ ಸುಮಾರು ೨೮-೩೦ ಪುಟಗಳ ದೀರ್ಘ ಲೇಖನದಲ್ಲಿ ಜನ್ನನ ಎರಡೂ ಕಾವ್ಯಗಳಿಂದ ಅನೇಕ ಮಾತುಗಳನ್ನು, ದೃಷ್ಟಾಂತಗಳನ್ನು ಉದಾಹರಿಸಿ ಅವನ ಶೈಲಿಯ ವೈಶಿಷ್ಟ್ಯವನ್ನು ವಿವರಿಸುವ ಪ್ರಯತ್ನ ಮಾಡಿದ್ದಾರೆ. “ಯಶೋಧರ ಚರಿತೆಯನ್ನು ಮೂರು ಸಾರಿ ಅತ್ತಲಿಂದ ಇತ್ತಲಾಗಿ ತಿರುಗಿಸಿ ನೋಡಿದ ಮೇಲೆ ದೊರೆತದ್ದು ಅದರ ಸ್ವರಭೇದ, ವ್ಯಂಜನ ವ್ಯತ್ಯಾಸ, ಅಕ್ಷರ ವೈವಿಧ್ಯಗಳೊಡನೆ ಬೆರೆತು ಲೀನವಾಗುವ ಒಳಪ್ರಾಸದ ಸೂಕ್ಷ್ಮ ಸಮನ್ವಯವೊಂದು ಮುಖ್ಯ ಕಾರಣ ಜನ್ನಿಗನ ಶಬ್ದ ಬಂಧದ ಗಂಭೀರ ಸಂಸ್ಕಾರಕ್ಕೆ; ಅವನ ಕಾವ್ಯದ ಯಾವ ಮೂಲೆಯಲ್ಲಿ ನಿಂತು ಬಾ ಎಂದು ಕರೆದರೂ ಇದೊ ಬಂದೆ ಎನ್ನುತ್ತದೆ. ಈ ನಿದರ್ಶನ’ ಎಂದು ರಂಗಣ್ಣನವರು ಜನ್ನನ ಶೈಲಿಯ ಬಗ್ಗೆ ಅಭಿಪ್ರಾಯಪಡುತ್ತಾ ಇದಕ್ಕೆ ಕಾವ್ಯದಿಂದ ಅನೇಕ ಮಾತುಗಳನ್ನು ಉದಾಹರಿಸುತ್ತಾರೆ.

ಜನ್ನನಲ್ಲಿರುವ ಚಮತ್ಕಾರ ಪ್ರದರ್ಶನದ ಪ್ರಸಂಗಗಳನ್ನು ರಂಗಣ್ಣನವರು ತಮ್ಮ ಈ ಲೇಖನದಲ್ಲಿ ಗುರುತಿಸಿದ್ದಾರೆ. ಆದರೂ ಜನ್ನ “ಸ್ಫುಟ ಸೂಚನೆಯ ಮೂಲಕ ಕಾರ್ಯಘಟನೆ ವ್ಯವಹಾರಗಳನ್ನು ಸಜೀವಗೊಳಿಸುವುದರಲ್ಲಿ ಜನ್ನನಿಗೆ ನವೀನ ಸೃಷ್ಟಿಕೌಶಲ್ಯವಿದೆ” ಎಂದು ರಂಗಣ್ಣ ಅವರು ಅಭಿಪ್ರಾಯಪಡುತ್ತಾರೆ. ಅನಿರೀಕ್ಷಿತವಾಗಿ, ಅರ್ಥವತ್ತಾಗಿ, ಸತ್ವಕೂಡಿ ಹುಟ್ಟಿಬರುವ ಅಂತಹ ಜನ್ನನ ಅನೇಕ ಮಾತುಗಳನ್ನು ದಾಖಲಿಸುತ್ತಾ ಅದು ಜನ್ನನ ಶೈಲಿಯ ವೈಶಿಷ್ಟ್ಯವೆನ್ನುತ್ತಾರೆ. ಜನ್ನನ ಎರಡೂ ಕಾವ್ಯಗಳಿಂದ ನೂರಾರು ಮಾತುಗಳನ್ನು, ‘ಕೋಟೇಷನ್’ಗಳನ್ನು ಹೆಕ್ಕಿ ತೆಗೆದು ಅವುಗಳ ವೈಶಿಷ್ಟ್ಯವನ್ನು ವಿವರಿಸುತ್ತಾರೆ. “ಸಾಹಿತ್ಯ ಸತ್ಯದ ಸುತ್ತಲೂ ಒಳಗೂ ಕೆಳಗೂ ಮೇಲೂ ಲೋಕಸತ್ಯವನ್ನು ಜನ್ನನಂತೆ ಹದಕೆಡದ ರೀತಿ ಹೊಂದಿಸುವವರು ದುರ್ಲಭ. ಅವನ ಎರಡೂ ಗ್ರಂಥಗಳಲ್ಲಿಯೂ ಹಾಸುಹೊಕ್ಕಾಗಿ ನೇಯ್ದುಕೊಂಡಿದೆ ಹಾಳತ ಪ್ರಮಾಣದಲ್ಲಿ ಕೂಡಿಸಿದ ಮಾನವ ಚರ್ಯೆಯ ನಿಜಾಂಶ” ಎಂದು ರಂಗಣ್ಣನವರು ಅಭಿಪ್ರಾಯಪಡುತ್ತಾರೆ. “ನಾಣ್ಣುಡಿಯಿಂದ ಹೇಳಿಕೆಗಳು ಜನ್ನನಲ್ಲಿ ಮರದ ಮೇಲಣ ಎಲೆಗಳಂತೆ ತುಂಬಿಕೊಂಡಿವೆ” ಎನ್ನುತ್ತಾ, ಜನ್ನನ ಪದ, ಪದಗುಚ್ಚಗಳನ್ನು ಗುರುತಿಸುತ್ತಾರೆ. “ಜನ್ನನ ಶೈಲಿ ಮಂಜುಳವಾದದ್ದು, ವಿನಯ ವೈಭವಪೂರಿತವಾದದ್ದು. ಪ್ರೌಢವಾದದ್ದು; ಮಿಗಿಲಾಗಿ ತನ್ನತನದಿಂದ ತುಂಬಿ ತುಳುಕಾಡುವ ವಾಕ್ಯ ರೀತಿ, ವಚನ ರಾಜ್ಯಭಾರ” ಎಂದು ಜನ್ನನ ಶೈಲಿಯನ್ನು ಸರಿಯಾಗಿಯೇ ಗುರುತಿಸುವ ರಂಗಣ್ಣನವರು ಜನ್ನ ಮಹಾಕವಿಯೆ? ಜನ್ನನ ಶೈಲಿ ಮಹಾಶೈಲಿಯೆ? ಎಂದು ಪ್ರಶ್ನೆಗಳನ್ನು ಎತ್ತುವ ಅವರು ಇಲ್ಲಿ ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ. ಆದರೆ “ಜನ್ನ ಮಾತಾಡುವ ಕನ್ನಡ, ಗ್ರಾಂಥಿಕ ಕನ್ನಡ, ಸಮಸಂಸ್ಕೃತ ಮೂರೂ ತಮ್ಮ ತಮ್ಮ ಕಟಾವನ್ನು ತಂದು ಸುರಿದು ತುಂಬಿಸಿವೆ ಜನ್ನನ ಶಬ್ದ ಕಣಜ” ವನ್ನು ಎಂಬ ನಿರ್ಣಯಕ್ಕೆ ರಂಗಣ್ಣನವರು ಈ ಲೇಖನದಲ್ಲಿ ಸಮಯೋಚಿತವಾಗಿಯೇ ಬರುತ್ತಾರೆ.

೧೪

ಕೆ.ವೈ. ಶಿವಕುಮಾರ್ ಅವರ ‘ಜನ್ನ; ಒಂದು ಅಧ್ಯಯನ’ (೨೦೦೦) ಒಂದು ಪ್ರಮುಖ ಸಂಶೋಧನ ಗ್ರಂಥ. ಜನ್ನನನ್ನು ಕುರಿತು ವಿಸ್ತಾರವಾಗಿ ಅಧ್ಯಯನ ಮಾಡಿ ಬರೆದ ಒಂದು ಸಮಗ್ರ ಅಧ್ಯಯನ ಇದು. ಜನ್ನನ ಕಾಲ, ದೇಶ, ವ್ಯಕ್ತಿತ್ವ, ಅವನ ಕೃತಿಗಳು, ಅವುಗಳ ವೈಶಿಷ್ಟ್ಯ – ಹೀಗೆ ಜನ್ನನನ್ನು ಕುರಿತು ನಡೆಸಿರುವ ಅಧ್ಯಯನ ಇದಾಗಿದೆ. ತಮಗಿಂತ ಹಿಂದಿನವರು ಜನ್ನನನ್ನು ಕುರಿತು ಬರೆದಿರುವ ಲೇಖನಗಳು, ಪುಸ್ತಕಗಳನ್ನೆಲ್ಲಾ ಇವರು ತಮ್ಮ ಅಧ್ಯಯನದ ಸಂದರ್ಭದಲ್ಲಿ ಅವಲೋಕಿಸಿ ಅವುಗಳ ನೆರವನ್ನು ತಮ್ಮ ಅಧ್ಯಯನದ ಸಹಾಯಕ್ಕೆ ಉಪಯೋಗಿಸಿಕೊಂಡಿದ್ದಾರೆ. ಜನ್ನನಿಗೆ ಹಿನ್ನೆಲೆಯಾಗಿದ್ದ ಕನ್ನಡನಾಡಿನ ಸಾಮಾಜಿಕ, ರಾಜಕೀಯ, ಧಾರ್ಮಿಕ ಸ್ಥಿತಿಗತಿಗಳ ವಿವರಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಿಸಿದ್ದಾರೆ. ‘ಯಶೋಧರ ಚರಿತೆ’ ಮತ್ತು ‘ಅನಂತನಾಥ ಪುರಾಣ’ ಕಾವ್ಯಗಳನ್ನು ಇಲ್ಲಿ ಸುದೀರ್ಘವಾಗಿ ಅಧ್ಯಯನಕ್ಕೆ ಗುರಿಮಾಡಿದ್ದಾರೆ. ‘ಯಶೋಧರ ಚರಿತೆ’ ಕಾವ್ಯದ ಯಶೋಧರನ ಕಥೆಯ ಉಗಮವನ್ನು ಗುರುತಿಸುತ್ತಾ ಹರಿಭದ್ರಸೂರಿಯ, ಹರಿಷೇಣನ, ಸೋಮದೇವಸೂರಿಯ, ಪುಷ್ಪದಂತನ ಮತ್ತು ವಾದಿರಾಜನ ಯಶೋಧರ ಚರಿತೆ ಕೃತಿಗಳ ಪರಂಪರೆಯನ್ನು ಸ್ವಾರಸ್ಯಕರವಾಗಿ ಪರಿಚಯ ಮಾಡಿಕೊಡಲಾಗಿದೆ. ಇಲ್ಲಿನ ಜನ್ನನ ‘ಯಶೋಧರ ಚರಿತೆ’ಯ ಕಥಾಪರಂಪರೆ ಭಾಗವು ಹೆಚ್ಚು ಮೌಲಿಕವಾಗಿದೆ. ಸಂಸ್ಕೃತ – ಪ್ರಾಕೃತ – ಅಪಭ್ರಂಶ ಭಾಷೆಗಳಲ್ಲಿ ದೊರೆಯುವ ಯಶೋಧರನ ಕಥೆಯ ಭಿನ್ನ ಪಾಠಗಳನ್ನು ಸಂಗ್ರಹಿಸಲಾಗಿದೆ. ‘ಯಶೋಧರ ಚರಿತೆ’ ಕಾವ್ಯದ ವರ್ಣನೆ, ಪಾತ್ರಗಳು, ರಸನಿರೂಪಣೆಗಳನ್ನು ಕುರಿತು ನಡೆದಿರುವ ಜಿಜ್ಞಾಸೆಯನ್ನು ಕುರಿತು ಇಲ್ಲಿ ವಿವೇಚಿಸಿದ್ದಾರೆ. ವಾದಿರಾಜ ಮತ್ತು ಜನ್ನನ ‘ಯಶೋಧರ ಚರಿತೆ’ಯನ್ನು ವಾದಿರಾಜನ ಸಂಸ್ಕೃತ ಮೂಲಕೃತಿಯ ಜೊತೆಗೆ ಹೋಲಿಕೆ ಮಾಡಿ ಬರೆದಿರುವ ತೌಲನಿಕ ಅಧ್ಯಯನ ಒಂದು ಉತ್ತಮ ಅಧ್ಯಯನದ ಭಾಗವಾಗಿದೆ.

‘ಜನ್ನನ ಕಾವ್ಯಗಳಲ್ಲಿ ಪ್ರಣಯ ನಿರೂಪಣೆ’ ಎನ್ನುವ ಪರಿಕಲ್ಪನೆ ತೀನಂಶ್ರೀ ಅವರಿಂದ ಆರಂಭವಾಗಿ ಕನ್ನಡ ವಿಮರ್ಶೆಯಲ್ಲಿ ಹೆಚ್ಚು ವಾದ, ವಿವಾದ, ಚರ್ಚೆಗಳಿಗೆ ಗ್ರಾಸ ಒದಗಿಸಿದ ಲೇಖನ ಈ ಬಗೆಗಿನ ಎಲ್ಲಾ ಚರ್ಚೆಗಳನ್ನು, ಅಭಿಪ್ರಾಯಗಳನ್ನು ಇಲ್ಲಿ ಈ ಅಧ್ಯಾಯದಲ್ಲಿ ಶಿವಕುಮಾರ್ ಅವರು ಗಮನಿಸಿರುವುದು ಗಮನಾರ್ಹವಾಗಿದೆ. ಈ ಸಂಶೋಧಕರು ‘ವೈರಾಗ್ಯ ಮತ್ತು ಹೆಣ್ಣು’ ಇವುಗಳ ಸಂಬಂಧವನ್ನು ಈ ವಿಷಯದ ಚರ್ಚೆಯಲ್ಲಿ ಬಹುಮುಖ್ಯ ಎಂದು ಪರಿಗಣಿಸುವುದನ್ನು ಕಾಣುತ್ತೇವೆ. ಜನ್ನನ ಎರಡೂ ಕಾವ್ಯಗಳನ್ನು ಮುಂದಿಟ್ಟುಕೊಂಡು ‘ಜನ್ನನ ಕಾವ್ಯಮೀಮಾಂಸೆ’, ‘ಜನ್ನನ ಕಾವ್ಯಗಳಲ್ಲಿ ಪ್ರಣಯ ನಿರೂಪಣೆ’ ಹಾಗೂ ‘ಜನ್ನನ ಭಾಷೆ ಮತ್ತು ಶೈಲಿ’ ಇವುಗಳನ್ನು ಕುರಿತು ಸಂಶೋಧಕರು ಇಲ್ಲಿ ತೌಲನಿಕವಾಗಿ ಸಮಾಲೋಚನೆ ಮಾಡಿದ್ದಾರೆ. ಜನ್ನನ ವೈಶಿಷ್ಟ್ಯ ಮತ್ತು ಅವನ ಕೊಡಿಗೆಗಳ ಮೂಲಕ ಕನ್ನಡ ಸಾಹಿತ್ಯದ ಅವನ ಸ್ಥಾನವನ್ನು ಕುರಿತು ಈ ಸಂಶೋಧಕರು “ಆಗನ ಕೃತಿಗಳು ಮಹಾಕಾವ್ಯಗಳಲ್ಲದಿದ್ದರೂ ಅವನದು ಮಹಾಕವಿಯ ಚೇತನವೆಂದು ಧಾರಾಳವಾಗಿ ಹೇಳಬಹುದು” ಎಂದು ನಿರ್ದೇಶನ ಮಾಡುವುದನ್ನು ಕಾಣುತ್ತೇವೆ. ಕನ್ನಡ ವಿಮರ್ಶೆಯಲ್ಲಿ ಹೆಚ್ಚು ಚರ್ಚೆಗೆ, ವಿಶ್ಲೇಷಣೆಗೆ ಒಳಗಾಗದೆ ಇದ್ದ ಜನ್ನನ ಇನ್ನೊಂದು ಕಾವ್ಯ ‘ಅನಂತನಾಥ ಪುರಾಣ’ವನ್ನು ತಮ್ಮದೇ ಆದ ಹೊಸ ಅಧ್ಯಯನವೆಂಬಂತೆ ಹಲವಾರು ದೃಷ್ಟಿಕೋನಗಳಿಂದ ಅದನ್ನು ಅಧ್ಯಯನಕ್ಕೆ ಒಳಪಡಿಸಿ ಇವರು ಬರೆದಿರುವ ಭಾಗ ಬೆಲೆಯುಳ್ಳದ್ದಾಗಿದೆ. ಪೂರ್ವಸೂರಿಗಳ ಚರ್ಚೆ, ವಿಮರ್ಶೆ, ಅಭಿಪ್ರಾಯಗಳನ್ನು ಒಳಗೊಂಡು ತಮ್ಮದೇ ಆದ ಔಚಿತ್ಯಪೂರ್ಣ ವಿವೇಚನೆಯಿಂದ ನಡೆಸಿರುವ ಶಿವಕುಮಾರ್ ಅವರು ಜನ್ನನನ್ನು ಕುರಿತ ಈ ಅಧ್ಯಯನ ಒಂದು ಉಪಯುಕ್ತ ಬರಹವಾಗಿದೆ.

೧೫

ಜನ್ನನ ಯಶೋಧರ ಚರಿತೆ ಕಾವ್ಯವನ್ನು ಜಿ.ಎಸ್. ಸಿದ್ಧಲಿಂಗಯ್ಯ ಅವರಿಂದ ಕೇಂದ್ರ ಸಾಹಿತ್ಯ ಅಕಾಡೆಮಿಯು ಸಂಪಾದಿಸಿ (೨೦೦೯) ಪ್ರಕಟಿಸಿದೆ. ಜಿ.ಎಸ್. ಸಿದ್ಧಲಿಂಗಯ್ಯನವರು ಈ ಕ್ಷೇತ್ರದಲ್ಲಿ ತಮಗಿಂತ ಹಿಂದೆ ಕೆಲಸ ಮಾಡಿದ ವಿದ್ವಾಂಸರ ಗ್ರಂಥಗಳನ್ನೆಲ್ಲಾ ಪರಿಶೀಲಿಸಿ ಅಚ್ಚುಕಟ್ಟಾಗಿ ಈ ಕಾವ್ಯವನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಪಾಠಾಂತರಗಳನ್ನೂ, ವಿವರವಾದ ಶಬ್ದಕೋಶವನ್ನೂ ನೀಡಿದ್ದಾರೆ. ಇದರ ಜೊತೆಗೆ ದೀರ್ಘವಾದ ಸುಮಾರು ಮೂವತ್ತೈದು ಪುಟದ ದೀರ್ಘವಾದ ಪ್ರಸ್ತಾವನೆಯನ್ನು ‘ಲೇಖಕರ ಮಾತು’ ಎಂಬ ಬರಹದಲ್ಲಿ ಬರೆದಿದ್ದಾರೆ. ಇದರಲ್ಲಿ ಜನ್ನ ಮತ್ತು ಅವನ ಕಾವ್ಯಗಳ ಬಗ್ಗೆ ಪರಿಚಯ, ಯಶೋಧರ ಚರಿತೆಯ ಕಥೆ ಹಾಗೂ ಅದರಲ್ಲಿ ಬರುವ ಜನ್ಮಾಂತರಗಳನ್ನು ವಿವರಿಸಿದ್ದಾರೆ.

ಜಿ.ಎಸ್. ಸಿದ್ಧಲಿಂಗಯ್ಯನವರು ಇಲ್ಲಿ ಈ ಕಾವ್ಯದ ಬಗ್ಗೆ ಬರೆಯುತ್ತಾ “ಯಶೋಧರ ಚರಿತೆಯ ಚಾಲಕ ಶಕ್ತಿಯೇ ಯಶೋಧರ – ಅಮೃತಮತಿ ಮತ್ತು ಅಷ್ಟಾವಂಕರ ತ್ರಿಕೋಣ ವ್ಯವಹಾರ. ಯಶೋಧರ ಮತ್ತು ಅಮೃತಮತಿಯರ ಕೌಟುಂಬಿಕ ಬದುಕು ಅಮೃತಮತಿಯಲ್ಲುಂಟಾದ ಬದಗನ ಮೇಲಿನ ಮೋಹದ ಕಾರಣಕ್ಕಾಗಿ ಉಂಟಾಗುವ ಕಲ್ಲೋಲ ಕಥೆಯ ಮೂಲ ಸೆಲೆಯಾಗಿ ಬಿಡುತ್ತದೆ. ಯಶೋಧರ ಮತ್ತು ಅಮೃತಮತಿ ಹಾಗೂ ಅಷ್ಟಾವಂಕರ ಸಂಬಂಧಗಳನ್ನು ಪ್ರಣಯವೆನ್ನುವುದಕ್ಕಿಂತ ಕಾಮವಿಕಾರ ಎನ್ನುವುದೇ ಸರಿ ಎಂಬ ತೀರ್ಮಾನಕ್ಕೆ ಕುವೆಂಪು ಮೊದಲಾದವರು ಬಂದಿದ್ದಾರೆ” ಎಂದು ಅಭಿಪ್ರಾಯಪಡುತ್ತಾರೆ. ಅಮೃತಮತಿ ಮತ್ತು ಅಷ್ಟಾವಂಕರ ಸಂಬಂಧ ಮನುಷ್ಯನ ನಿಗೂಢ ಸ್ವಭಾವಕ್ಕೆ ಭಿತ್ತಿ ಎಂದು ಅಭಿಪ್ರಾಯ ತಳೆಯುತ್ತಾ. ಅವರು ಈ ಕಾವ್ಯದಲ್ಲಿ ಒಂದು ಕಡೆ ಹಿಂಸೆ, ಕ್ರೌರ್ಯ, ಭಯಾನಕತೆಗಳಿದ್ದರೆ ಮತ್ತೊಂದು ಕಡೆ ಜೀವದಯೆ ಇದೆ ಹೇಳುತ್ತಾರೆ. ಇಷ್ಟಾದರೂ ಈ ಕಾವ್ಯದಲ್ಲಿ ‘ವಿಧಿ’ ಮತ್ತು ‘ಅಹಿಂಸೆ’ಯ ಮಹತ್ವವನ್ನು, ಹಿಂಸೆಯ ಅನಾಹುತವನ್ನು ಧ್ವನಿಸಲಾಗಿದೆ. ಈ ದೃಷ್ಟಿಯಿಂದ ಈ ಕಥಾನಕ ಕಿರಿದಾದರೂ ಅತ್ಯಂತ ಪರಿಣಾಮಕಾರಿಯಾದ ಕಾವ್ಯವಾಗಿ ರೂಪುಗೊಂಡಿದೆ ಎಂಬ ತೀರ್ಮಾನಕ್ಕೆ ಬರುತ್ತಾರೆ.

ಇದೆಲ್ಲದಕ್ಕಿಂತ ಹೆಚ್ಚಾಗಿ ‘ವಾದಿರಾಜ – ಜನ್ನ’ ಎಂಬ ಉಪಶೀರ್ಷಿಕೆಯಡಿಯಲ್ಲಿ ವಾದಿರಾಜ ಮತ್ತು ಜನ್ನರ ಕಾವ್ಯಗಳಿಗೆ ಇರುವ ವ್ಯತ್ಯಾಸ, ಸ್ವಂತಿಕೆ, ಸಂಕ್ಷಿಪ್ತತೆ, ವಿಸ್ತರಣೆ ಕಥನದ ರೀತಿ, ವರ್ಣನೆ, ಚಿತ್ರಕಶಕ್ತಿ, ಅಭಿವ್ಯಕ್ತಿ ಶಕ್ತಿ, ರೂಪಕಶಕ್ತಿ ಮುಂತಾದ ವಿಷಯಗಳನ್ನೆಲ್ಲಾ ಕುರಿತು ದೀರ್ಘವಾಗಿ ಚರ್ಚಿಸಿದ್ದಾರೆ. ಈ ಭಾಗವು ತೌಲನಿಕ ಅಧ್ಯಯನ ಕ್ಷೇತ್ರಕ್ಕೆ ಒಂದು ಅಪೂರ್ವ ಕಾಣಿಕೆಯಾಗಿದೆ.

೧೬

ಜಾನಪದ ವಿದ್ವಾಂಸರಾದ ಎಲ್.ಆರ್. ಹೆಗಡೆ ಅವರು ತಮ್ಮ ವಿಮರ್ಶಾ ಕೃತಿ ‘ಕಾವ್ಯವ್ಯಾಸಂಗ’ದಲ್ಲಿ ‘ಜನ್ನನ ಅಮೃತಮತಿ’ಯ ಪಾತ್ರವನ್ನು ಕುರಿತು ವಿಶ್ಲೇಷಣೆ ಮಾಡಿದ್ದಾರೆ. ಅಮೃತಮತಿಯು ಅಷ್ಟಾವಂಕನ ಸಂಗೀತದ ಗಾನಕ್ಕೆ ಮೋಹಿತಳಾಗಿ ತನ್ನ ಸರ್ವಸ್ವವನ್ನು ಅರ್ಪಿಸಿಕೊಂಡಳು. ಇಂತಹ ಕಥೆಗಳು ಜನಪದ ಸಾಹಿತ್ಯದಲ್ಲಿ ಹೇರಳವಾಗಿ ಸಿಗುತ್ತವೆ ಎಂದು ಅಭಿಪ್ರಾಯಪಡುತ್ತಾರೆ. ಜನ್ನನ ಶೈಲಿಯನ್ನು ಕುರಿತು ರಾ.ಯ. ಧಾರವಾಡಕರ ಅವರು ತಮ್ಮ ‘ಸಾಹಿತ್ಯ ಸಮೀಕ್ಷೆ’ಯ ವಿಮರ್ಶಾ ಕೃತಿಯಲ್ಲಿ ಜನ್ನನ ಶೈಲಿ ದೇಸಿ ನುಡಿಗಟ್ಟುಗಳನ್ನು ಬಳಸಿಕೊಂಡು ವಿಶಿಷ್ಟವಾದ ರಚನೆಯಾಗಿದೆ ಎಂದು ಹೇಳುತ್ತಾರೆ. ಜನ್ನನ ಕಾವ್ಯಗಳನ್ನು ಕುರಿತು ವಿವಿಧ ವಿದ್ವಾಂಸರಾದ ವಿವಿಧ ನಿಟ್ಟಿನಿಂದ ಬರೆಸಿದ ಕೃತಿಯೊಂದನ್ನು ‘ಜನ್ನ’ ಎಂಬ ಹೆಸರಿನಿಂದ ವಿ. ಸೀತಾರಾಮಯ್ಯನವರು ಅಚ್ಚುಕಟ್ಟಾಗಿ ಸಂಪಾದಿಸಿದ್ದಾರೆ. ಇದು ಜನ್ನನ ಬಗ್ಗೆ ಬಂದ ಮೌಲಿಕವಾದ ಕೃತಿಗಳಲ್ಲೊಂದಾಗಿದೆ. ಜಿ. ರಾಜಶೇಖರ್ ಅವರು ‘ರುಜುವಾತು – ೬’ರ ಸಂಚಿಕೆಯಲ್ಲಿ ಯಶೋಧರ ಚರಿತೆಯ ಅಮೃತಮತಿಯ ಪಾತ್ರವನ್ನು ಕುರಿತು ಬರೆದಿರುವ ವಿಶ್ಲೇಷಣೆ ನವೀನ ದೃಷ್ಟಿಕೋನದಿಂದ ಕೂಡಿದೆ.

ಆಧುನಿಕ ಕನ್ನಡ ಸಾಹಿತ್ಯದ ಕಥೆ, ಕವಿತೆ, ನಾಟಕ ಮುಂತಾದ ಪ್ರಕಾರಗಳಲ್ಲಿ ಅಮೃತಮತಿಯ ಪಾತ್ರವನ್ನು ಕುರಿತು ಕನ್ನಡದ ಲೇಖಕರು ಸೃಜನಾತ್ಮಕವಾಗಿ ಪ್ರತಿಕ್ರಿಯೆ ಮಾಡುತ್ತಾ ಬಂದಿದ್ದಾರೆ. ನವೋದಯದ ಲೇಖಕರಿಂದ ಹಿಡಿದು ಬಂಡಾಯದ ಲೇಖಕರವರೆಗೆ ಇದರ ಬೆಳೆ ಇದೆ. ಮುಖ್ಯವಾಗಿ ಗಿರೀಶ್ ಕಾರ್ನಾಡರು ತಮ್ಮ ‘ಬಲಿ’ (೨೦೦೭) ನಾಟಕದಲ್ಲಿ ಮತ್ತು ಎಚ್.ಎಲ್. ಪುಷ್ಪ ಅವರು ತಮ್ಮ ‘ಅಮೃತಮತಿಯ ಸ್ವಗತ’ (೧೯೯೨) ಕವಿತೆ (ಇದು ಅವರ ಕವನ ಸಂಕಲನದ ಹೆಸರೂ ಹೌದು) ಯಲ್ಲಿ ಮತ್ತು ತಮ್ಮ ‘ಭೂಮಿಯೆಲ್ಲ ಇವಳು’ (೨೦೦೪) ನಾಟಕದಲ್ಲಿ ಅಮೃತಮತಿಯ ಪಾತ್ರದ ಭೂಮಿ ಗಾತ್ರದ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಅವಳ ದಿಟ್ಟತನವನ್ನು ಕುರಿತು ವಿಶ್ಲೇಷಿಸಿದ್ದಾರೆ. ರಾಣಿಯಾಗಿದ್ದು ಕೂಡ ತನ್ನ ಆಯ್ಕೆ, ಸ್ವಂತ ತೀರ್ಮಾನಗಳನ್ನು ಅಮೃತಮತಿ ನಿರ್ಭೀತಿಯಿಂದ ತೆಗೆದುಕೊಳ್ಳುವುದನ್ನು ಪುಷ್ಪ ಅವರು ತಮ್ಮ ನಾಟಕದಲ್ಲಿ ನಿರೂಪಿಸಿದ್ದಾರೆ. ಮತ್ತೊಬ್ಬ ಪ್ರಮುಖ ಲೇಖಕಿ ಶಶಿಕಲಾ ವೀರಯ್ಯಸ್ವಾಮಿ ಅವರು ಸಹ ಅಮೃತಮತಿಯನ್ನು ಕುರಿತು ತಮ್ಮ ‘ಮಾವುತ ಮತ್ತು ಮದ್ದಾನೆ’ ಎಂಬ ಕವಿತೆಯಲ್ಲಿ ಮಾವುತನ ನಿಯಂತ್ರಣ ಮತ್ತು ಪಳಗಿಸುವಿಕೆಯ ಕ್ರಿಯೆಗಳನ್ನು ಅರ್ಥಪೂರ್ಣವಾದ ರೂಪಕಗಳ ಮೂಲಕ ಹಿಡಿದಿಟ್ಟಿದ್ದಾರೆ. ಮುಂದಿನ ಅಧ್ಯಾಯವೊಂದರಲ್ಲಿ ಗಿರೀಶ್ ಕಾರ್ನಾಡರ ‘ಬಲಿ’ ಮತ್ತು ಪುಷ್ಪ ಅವರ ‘ಅಮೃತಮತಿಯ ಸ್ವಗತ’ ಕವಿತೆಯನ್ನು ಕುರಿತು ಪ್ರಾತಿನಿಧಿಕವಾಗಿ ವಿಶ್ಲೇಷಣೆಗೆ ಒಳಗು ಮಾಡಲಾಗಿದೆ.

ಜನ್ನನ ಕಾವ್ಯಗಳ ಆಯ್ದ ಭಾಗಗಳನ್ನು ಟಿ.ಆರ್.ಎಸ್. ಶರ್ಮ ಅವರು ಇಂಗ್ಲಿಷಿಗೆ ಅನುವಾದಿಸಿರುವ ‘Janna’ (೧೯೯೪) ಕೃತಿಯು ಗಮನ ಸೆಳೆಯುತ್ತದೆ. ಶರ್ಮ ಅವರು ‘ಕನ್ನಡ ಕಾವ್ಯದ ಲಯವನ್ನು ಇಂಗ್ಲೀಷಿಗೆ ಅನುವಾದಿಸುವುದು ತುಂಬಾ ಕಷ್ಟದ ಕೆಲಸ. ಆದ್ದರಿಂದ ಯಶೋಧರ ಚರಿತೆಯ ಮುಖ್ಯ ಭಾಗವನ್ನು ಮತ್ತು ಅನಂತನಾಥ ಪುರಾಣದ ಚಂಡಶಾಸನದ ಮುಖ್ಯ ಭಾಗವನ್ನು ಇಂಗ್ಲೀಷಿಗೆ ಅನುವಾದಿಸುವ ಹೆಚ್ಚು ಸ್ವಾತಂತ್ರ್ಯ ವಹಿಸಿ ಆ ಗದ್ಯಕ್ಕೆ ದೃಶ್ಯಾತ್ಮಕ ಸ್ವರೂಪವನ್ನು (Visual shape of the Verse) ತರಲು ಯತ್ನಿಸಿದ್ದೇನೆ. ಹಾಗಾಗಿ ಇದು ಅನುಸೃಷ್ಟಿ (Transliteration) ಸ್ವರೂಪದ ಭಾಷಾಂತರವಾಗಿದೆ’ ಎಂದು ತಮ್ಮ ಈ ಕೃತಿಯ ಪ್ರಸ್ತಾವನೆಯಲ್ಲಿ ಹೇಳಿಕೊಂಡಿದ್ದಾರೆ.