೧) ಯಶೋಧರನ ವಿಷಯವಾಗಿ ಈಗ ನಮಗೆ ತಿಳಿದುಬಂದಿರುವ ಮಟ್ಟಿಗೆ ಮೊತ್ತಮೊದಲ ಗ್ರಂಥರೂಪದಲ್ಲಿ ಕಾಣಬರುವುದು ಹರಿಭದ್ರನ ‘ಸಮರಾಇಚ್ಚ ಕಹಾ’ (ಸಮರಾದಿತ್ಯ ಕಥಾ) ಎಂಬ ೮ನೆಯ ಶತಮಾನದ ಪ್ರಾಕೃತ ಗ್ರಂಥದಲ್ಲಿ. ಇದು ಗದ್ಯ ಗ್ರಂಥ. ಅಲ್ಲಲ್ಲಿ ನಡು ನಡುವೆ ಕೆಲವು ಪದ್ಯಗಳೂ ಹೆಣೆದುಕೊಂಡಿವೆ. ಗದ್ಯದ ಪ್ರಾಕೃತವನ್ನು ಜೈನ ಮಹಾರಾಷ್ಟ್ರೀ ಎಂಬ ಪ್ರತ್ಯೇಕ ಹೆಸರಿನಿಂದ ಒಮ್ಮೊಮ್ಮೆ ಕೆಲವರು ಕರೆಯುವುದುಂಟು. ಪದ್ಯಗಳು ಸಾಮಾನ್ಯ ಜೈನ ಪ್ರಾಕೃತದಲ್ಲಿ ಬರೆದಿವೆ. ಪೀಠಿಕೆಯಲ್ಲಿ ಪುರಾತನರೆಂದು ಹೇಳಿ, ಕಥಾವಸ್ತುವನ್ನು ಸಂಕ್ಷೇಪವಾಗಿ ನಿರೂಪಿಸುವ ಕೆಲವು ಪದ್ಯಗಳನ್ನು ಎತ್ತಿಕಟ್ಟಿದ್ದಾನೆ. ಇದರಿಂದ ಹರಿಭದ್ರನು ಕಥೆಗಳನ್ನು ಸ್ವಂತವಾಗಿ ಕಲ್ಪಿಸಿ ಕಟ್ಟಲಿಲ್ಲವೆಂದೂ ಬಲು ಹಿಂದಿನಿಂದ ಬಂದ ಪ್ರಸಿದ್ಧ ಕಥೆಗಳಿಗೆ ಒಂದು ಸಾಹಿತ್ಯರೂಪ ಕೊಟ್ಟನೆಂದೂ ತಿಳಿಯಬಹುದು. ಗ್ರಂಥವನ್ನು ಬರೆದದ್ದು ಜೈನ ಧರ್ಮ ನಿರೂಪಣೆಗಾಗಿ. ಕವಿಯೇ ಹೇಳಿರುವಂತೆ ‘ಸಮರಾಇಚ್ಚ ಕಹಾ’ ಧರ್ಮಕಥೆ. ಇದರ ಕಥೆಗಳಲ್ಲಿ ಬರುವ ನಾಯಕ ನಾಯಕಿಯರೆಲ್ಲರೂ ಕೊನೆಗೆ ಸಂಸಾರ ತೊರೆದು ಸಂನ್ಯಾಸದಲ್ಲಿ ಬಿಡುಗಡೆ ಕಾಣುವ ಮಹಾವ್ಯಕ್ತಿಗಳು. ಒಬ್ಬೊಬ್ಬರ ಬಾಳಿನಲ್ಲೂ ಪ್ರಾಚೀನಕರ್ಮ ಹೇಗೆ ಹೆಣೆದುಕೊಂಡಿದೆ. ಈ ಕರ್ಮದಿಂದ ಹೇಗೆ ಜನ್ಮಾಂತರಗಳು ಬರುತ್ತವೆ. ಕ್ರಮೇಣ ಪಾಪಕ್ಷಯವಾಗಿ ಹೇಗೆ ಮುಕ್ತಿ ದೊರೆಯುತ್ತದೆ ಎಂಬುದನ್ನೇ ಪ್ರತಿಯೊಂದು ಕಥೆಯಲ್ಲೂ ವಿವರಿಸಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರ ಭವಾವಳಿಯಲ್ಲಿಯೂ ಅವರವರ ಒಂಬತ್ತು ಜನ್ಮಗಳ ಕಥೆ ಬರುತ್ತದೆ.

ಯಶೋಧರ ದೊರೆ ಒಂದು ಹಗಲು ತನ್ನ ತಲೆಯಲ್ಲಿ ಒಂದು ನರೆಗೂದಲನ್ನು ಕಂಡು, ಅದೇ ನಿರ್ವೇಗ ಕಾರಣವಾಗಿ, ಸಂನ್ಯಾಸಿಯಾಗಲು ತೀರ್ಮಾನಿಸುತ್ತಾನೆ. ಇರುಳು ಅವನ ಹೆಂಡತಿ ಹಾಸಿಗೆ ಬಿಟ್ಟು ಮುದುಗೂನನೊಬ್ಬನ್ನಲ್ಲಿಗೆ ಕದ್ದು ಹೋಗುವುದನ್ನೂ, ಅಲ್ಲಿ ಆ ಪಾಪಿ ಅವಳನ್ನು ಬೈದು ಹೊಡೆಯುವುದನ್ನೂ ಅವಳು ಆ ಅವಮಾನವನ್ನೆಲ್ಲಾ ತಾಳಿಕೊಂಡು ತನ್ನನ್ನು ಅವನಿಗೆ ಅರ್ಪಿಸಿಕೊಳ್ಳುವುದನ್ನೂ ಕಣ್ಣಾರೆ ಕಂಡು ಅಸಹ್ಯವಾಗಿ, ಅವನ ಮೊದಲ ತೀರ್ಮಾನ ಮತ್ತೂ ದೃಢವಾಗಿ ಬಿಡುತ್ತದೆ. ತಾಯನ್ನು ಒಪ್ಪಿಸುವುದಕ್ಕಾಗಿ ಒಂದು ಸಣ್ಣ ಸುಳ್ಳನ್ನು ಸೃಷ್ಟಿಸುತ್ತಾನೆ. ತಾನು ಸಂನ್ಯಾಸ ತೆಗೆದುಕೊಂಡಂತೆ ಕನಸು ಬಿತ್ತೆಂದು ಹೇಳುತ್ತಾನೆ. ತಾಯಿ ತಲ್ಲಣಿಸಿ ಪರಿಹಾರಕ್ಕಾಗಿ ಸಂನ್ಯಾಸಿ ವೇಷದಲ್ಲಿ ಕುಲದೇವತೆಗೆ ಹಲವು ಬಲಿಗಳನ್ನು ಕೊಟ್ಟು ಶಾಂತಿ ಮಾಡಿಕೊಳ್ಳುವಂತೆ ಬೋಧಿಸುತ್ತಾಳೆ. ಮಗನಿಗೆ ಪ್ರಾಣಿಹತ್ಯೆ ಇಷ್ಟವಿಲ್ಲದೆ. ಕೊನೆಗೆ ತಾಯ ಪ್ರೀತ್ಯರ್ಥವಾಗಿ ಒಂದು ಹಿಟ್ಟಿನ ಕೋಳಿಯನ್ನು ಬಲಿಕೊಟ್ಟು ಅದರ ‘ಮಾಂಸ’ ಪ್ರಸಾದವನ್ನು ತಿನ್ನುತ್ತಾನೆ. ಈ ಮಾನಸಿಕ ಪಾಪದ ಫಲವಾಗಿ ಅವನೂ ಅವನ ತಾಯೂ ನವಿಲು, ಎರಲೆ, ಮೀನು ಮೊದಲಾದ ಹಲವು ಹುಟ್ಟುಗಳನ್ನು ತಳೆದು. ಕೊನೆಗೆ ಕೋಳಿಮರಿಗಳಾಗಿ ಹುಟ್ಟಿ ತಮ್ಮ ಪೂರ್ವಜನ್ಮಗಳನ್ನೆಲ್ಲ ಸ್ಮರಿಸಿಕೊಂಡು, ಮುಂದೆ ರಾಣಿಯೊಬ್ಬಳ ಹೊಟ್ಟೆಯಲ್ಲಿ ಅವಳಿ ಮಕ್ಕಳಾಗಿ ಹುಟ್ಟಿ ಎಳವೆಯಲ್ಲೇ ಅಣ್ಣತಂಗಿಯರಿಬ್ಬರೂ ಜೈನಭಿಕ್ಷುಗಳಾಗಿ ಕಡೆಗೆ ಇಬ್ಬರೂ ಸ್ವರ್ಗದಲ್ಲಿ ದೇವತೆಗಳಾಗುತ್ತಾರೆ.

  1. (೧) ತ್ರಿಷಷ್ಟಿಲಕ್ಷಣ ಮಹಾಪುರಾಣ ಎಂಬ ೯ನೆಯ ಶತಮಾನದ ಸಂಸ್ಕೃತ ಗ್ರಂಥದಲ್ಲಿ ಯಶೋಧರ ಕಥೆ ಬರುತ್ತದೆ. ಈ ಗ್ರಂಥವನ್ನು ಸಂಕ್ಷೇಪವಾಗಿ ‘ಮಹಪುರಾಣ’ ಎಂದು ಕರೆಯುವುದು ವಾಡಿಕೆ. ಇದರಲ್ಲಿ ಆದಿಪುರಾಣ, ಉತ್ತರ ಪುರಾಣ ಎಂದು ಎರಡು ಭಾಗಗಳಿವೆ. ಆದಿಪುರಾಣದ ಮೊದಲ ೪೨ ಅಧ್ಯಾಯಗಳನ್ನು ಬರೆದವನು ಜಿನಸೇನ. ಅದರ ಕೊನೆಯ ೫ ಅಧ್ಯಾಯಗಳೂ ಇಡಿಯ ಉತ್ತರ ಪುರಾಣವೂ ಅವನ ಶಿಷ್ಯ ಗುಣಭದ್ರ ಬರೆದುವು. ಈ ಮಹಾಪುರಾಣದಲ್ಲಿ ೨೪ ತೀರ್ಥಂಕರರು, ೧೨ ಚಕ್ರವರ್ತಿಗಳು, ೯ ಬಲದೇವರು, ೯ ವಾಸುದೇವರು, ೯ ಪ್ರತಿವಾಸು ದೇವರು – ಹೀಗೆ ೬೩ ಶಲಾಕಾಪುರುಷರ ಚರಿತ್ರೆ ಅಡಕವಾಗಿದೆ. ಈ ಮಹಾಪುರಾಣವನ್ನು ಮೊದಲು ಮಹಾವೀರ ಜಿನನು ಗೌತಮಗಣಧರನಿಗೆ ಹೇಳಿದ್ದಾಗಿಯೂ, ತರುವಾಯ ಆ ಮುನಿ ಅದನ್ನು ಶ್ರೇಣಿಕ ಮಹಾರಾಜನಿಗೆ ಹೇಳಿದ್ದಾಗಿಯೂ ಪ್ರತೀತಿ. ವಾದಿರಾಜನ ಸಂಸ್ಕೃತ ‘ಯಶೋಧರ ಚರಿತ’ಕ್ಕೆ ಗುಣಭದ್ರನ ಈ ಉತ್ತರ ಪುರಾಣದಲ್ಲಿಯ ಕಥೆಯೇ ಮೂಲ.

(೨) ತಿಸಟ್ಟಿ ಮಹಾಪುರಿಸ ಗುಣಾಲಂಕಾರ ಎಂಬ ಮತ್ತೊಂದು ಮಹಾಪುರಾಣ ಅಪಭ್ರಂಶ ಭಾಷೆಯಲ್ಲಿದೆ. ಈ ಮೂಲಪುರಾಣದ ಮೂಲ ‘ದೃಷ್ಟಿಪಾದ’ದ ಮೂರನೆಯ ಭಾಗವಾದ ‘ಪ್ರಥಮಾನುಯೋಗ’. ಇದು ೧೦ನೆಯ ಶತಮಾನದ ಗ್ರಂಥ. ಇದರಲ್ಲಿಯೂ ಆದಿಪುರಾಣ, ಉತ್ತರಪುರಾಣ ಎಂದು ಎರಡು ಭಾಗವಿದೆ. ಇದನ್ನು ಬರೆದ ಪುಷ್ಫಯಂತ ಅಥವಾ ಪುಷ್ಪದಂತನೇ ‘ಜಸಹರ ಚರಿತೆ’ ಎಂಬ ಹೆಸರಿನ ‘ಯಶೋಧರ ಚರಿತೆ’ ಯೊಂದನ್ನು ಪ್ರತ್ಯೇಕವಾಗಿ ಅಪಭ್ರಂಶ ಭಾಷೆಯಲ್ಲಿ ಬರೆದಿದ್ದಾನೆ.

III. ‘ಯಶಸ್ತಿಲಕ ಚಂಪು ಜೈನರಲ್ಲಿ ಬಹು ಪ್ರಸಿದ್ಧವಾದ ಚಂಪು, ಇದನ್ನು ಬರೆದವನು ಹತ್ತನೆಯ ಶತಮಾನದ ಮಧ್ಯದಲ್ಲಿದ್ದ ಸೋಮದೇವ ಸೂರಿ. ಇವನು ದಿಗಂಬರ ಜೈನ. ಇವನ ಚಂಪುವಿಗೆ ಮೂಲ ಗುಣಭದ್ರನ ಉತ್ತರಪುರಾಣದಲ್ಲಿಯ ಯಶೋಧರ ಕಥೆ. ಸಾಂಪ್ರದಾಯಿಕ ಮಹಾಕಾವ್ಯ ಲಕ್ಷಣಗಳನ್ನೆಲ್ಲಾ ಒಳಗೊಂಡ ಈ ‘ಯಶಸ್ ತಿಲಕ’ ಚಂಪು ಬಹು ವಿಸ್ತಾರವಾದ ಪ್ರೌಢಗ್ರಂಥ. ಇದನ್ನು ಬಲು ಹುರುಡಿನಿಂದ ಬರೆದಂತೆ ಕಾಣುತ್ತದೆ. ಕೇವಲ ಸರಸಕಾವ್ಯ ದೃಷ್ಟಿಯೊಂದರಿಂದಲೇ ನೋಡುವುದಾದರೆ ಸುಂದರ ಲಘುಕಾವ್ಯವಸ್ತು ಯಾವಾಗಲೂ ಎಲ್ಲರ ಕೈಯಲ್ಲೂ ಒಂದೇ ಸಮನಾಗಿ ಸೌಂದರ್ಯ ಸ್ವಾರಸ್ಯಗಳು ಕೆಡದೆ ಹಿಗ್ಗಿ ಹೆಣೆದು ಬರಲಾರದು ಎಂಬುದಕ್ಕೆ ಈ ಚಂಪು ನಿದರ್ಶನವಾಗಬಹುದಾಗಿದೆ. ಇದರಲ್ಲಿಯ ಹಲವು ಅಧ್ಯಾಯಗಳು ಕಥೆಗೆ ಅಷ್ಟಾಗಿ ಅವಶ್ಯಕವಿಲ್ಲದೆ ಕೇವಲ ನೀತಿ ನಿರೂಪಣೆಗಾಗಿಯೂ ಮತತತ್ವ ಪ್ರತಿಪಾದನೆಗಾಗಿಯೂ ಮೀಸಲಾಗಿ ಹೋಗಿದೆ. ಒಟ್ಟಿನಲ್ಲಿ ಈ ಚಂಪು ಪ್ರೌಢಪಂಡಿತರಿಗೆ ಬಲು ಮೆಚ್ಚಿಗೆಯಾಗುವುದಾದರೂ ಕೇವಲ ಕಾವ್ಯಾನಂದದ ಸವಿಯೊರತೆಯನ್ನೇ ಅರಸುವವರಿಗೆ ಬೇಸರವಾಗುತ್ತದೆ.

ಭರತ ವರ್ಷದಲ್ಲಿ ಯೌಧೇನು ಜನಪದ; ಅದಕ್ಕೆ ರಾಜಪುರ ರಾಜಧಾನಿ. ಅಲ್ಲಿ ಹರಿವಂಶದ ಚಂಡಮಹಾಸೇನನ ಮಗ ಮಾರಿದತ್ತ ಕಿರಿಯಂದಿನಲ್ಲೇ ಸಿಂಹಾಸನಕ್ಕೆ ಬಂದು ರಾಜ್ಯವಾಳುತ್ತಿರುತ್ತಾನೆ. ರಾಜನಿಗೆ ವಿದ್ಯೆ, ಬುದ್ದಿ, ಅಷ್ಟಷ್ಟೆ; ಕೆಟ್ಟ ಸಹವಾಸ. ವಿಷಯಲಂಪಟವಾದ ಈ ದೊರೆಗೆ ಮೂರು ಹೊತ್ತೂ ಭೋಗಲಾಲಸ ಕೇಳಿಗಳೆ. ಆಂದ್ರ, ಕೇರಳ, ಜೋಳ, ಸಿಂಹಳ, ಕರ್ನಾಟ, ಸೌರಾಷ್ಟ್ರ, ಕಾಂಭೋಜ, ಪಲ್ಲವ, ಕಳಿಂಗಾದಿ ದೇಶಗಳ ವಿಲಾಸಿನಿಯರಲ್ಲಿ ಕ್ರೀಡಿಸಿ ಸ್ಮರನನ್ನೂ ಮೀರಿಸಿ ಮೆರೆಯುತ್ತಿರುತ್ತಾನೆ ಮಾರಿದತ್ತ. ವಿದ್ಯಾಧರಲೋಕವನು ಗೆದ್ದುಕೊಡುವ ಕತ್ತಿಯ ಸಿದ್ದಿಗಾಗಿಯೂ ಅದರ ಫಲವಾಗಿ ಬರುವ ಖೇಚರಿಯರ ಲೋಚನಾವಲೋಕನಾದಿ ಭೋಗಪ್ರಾಪ್ತಿಯಾಗಿಯೂ ಕುಲಾಚಾರ್ಯನಾದ ವೀರಭೈರವನ ಪ್ರೇರಣೆಯಿಂದ ಕುಲದೇವತೆಯಾದ ಚಂಡಮಾರಿಗೆ ಪಶುಬಲಿ ನರಬಲಿ ಕೊಡಲು ಅನುವಾಗುತ್ತಾನೆ. ಆ ಹೊತ್ತಿಗೆ ಆ ಪಟ್ಟಣದ ಬಳಿಯ ಹೊರವನದಲ್ಲಿ ಬಂದಿಳಿದಿದ್ದ ಜೈನಯತಿ ಸುದತ್ತಾಚಾರ್ಯರು ಊರೊಳಗೆ ನಡೆಯಲಿರುವ ಪ್ರಾಣಿವಧೆಯನ್ನು ಅವಧಿ ಜ್ಞಾನದಿಂದ ಅರಿತು, ಅವರಿಗೆ ಧರ್ಮೋಪದೇಶ ಬುದ್ಧಿ ಹುಟ್ಟುತ್ತದೆ. ತನ್ನ ಶಿಷ್ಯ ಕುಲಕ್ಕೆ ಸೇರಿದ ಅಭಯರುಚಿ ಅಭಯಮತಿ ಎಂಬ ಮುನಿಕುಮಾರ ಯುಗಳದಿಂದ ಅಂದು ಆ ರಾಜಪುರದ ದೇವತೆಗಳಿಗೆ ಉಪಶಮ ಅಥವಾ ಸಮ್ಯಕ್ತ್ವ ಬರುತ್ತದೆಂದು ಅವಧಿಯಿಂದ ತಿಳಿದು ಆ ಅಣ್ಣತಂಗಿಯರನ್ನು ಚರಿತೆಗಾಗಿ ಕಳಿಸುತ್ತಾರೆ. ಆ ಅವಳಿಗಳು ಕುಸುಮಾವಳಿಯ ಮಕ್ಕಳು. ಕುಸುಮಾವಳಿ ಮಾರಿದತ್ತನ ತಂಗಿ, ಯಶೋಮತಿಯ ಪಟ್ಟದರಸಿ. ಯಶೋಮತಿ ಯಶೋಧರನ ಮಗ. ಮಕ್ಕಳಿಬ್ಬರಿಗೂ ಪೂರ್ವಜನ್ಮ ಸ್ಮೃತಿಯುಂಟಾಗಿ, ಸಂಸಾರದ ಅಸಾರತೆಯಿಂದ ಬಾಲ್ಯದಲ್ಲಿಯೇ ವೈರಾಗ್ಯ ಹುಟ್ಟಿ ಸುದತ್ತಾಚಾರ್ಯರಲ್ಲಿ ಮುನಿವಟುಗಳಾದವರು. ಆ ಮಕ್ಕಳನ್ನು ವಧೆಗಾಗಿ ಮನುಷ್ಯ ಯುಗಳವನ್ನು ಹುಡುಕಾಡುತ್ತಿದ್ದ ಮಾರಿದತ್ತನ ಭಟ್ಟರು ಹಿಡಿದುಕೊಂಡು ಹೋಗುತ್ತಾರೆ. ವಟುಗಳನ್ನು ಕಂಡೊಡನೆ ಮಾರಿದತ್ತನಿಗೆ ಆನಂದಬಾಷ್ಪ ಸುರಿಯುತ್ತದೆ. ತನ್ನ ತಂಗಿಯ ಮಕ್ಕಳಿರಬಹುದೆ ಎಂಬ ಶಂಕೆ ಬರುತ್ತದೆ. ಕೊಲೆಗೆ ಎತ್ತಿದ ಕತ್ತಿಯನ್ನು ಕೆಳಗಿಟ್ಟು ಅವರ ಕಥೆ ಹೇಳಬೇಕೆಂದು ದೊರೆ ಕೇಳುತ್ತಾನೆ. ಯಶೋಧರಚರನಾದ ಅಭಯಮತಿ ಹೇಳಿದ ಕಥೆ ಕೇಳಿ ಅವರು ತನ್ನ ತಂಗಿಯ ಮಕ್ಕಳೆಂದು ತಿಳಿದು ಸಂತೋಷಪಡುತ್ತಾನೆ. ಕೊನೆಗೆ ಮಾರಿದತ್ತನೆ ಅಲ್ಲದೆ ಅವನ ಕುಲದೇವತೆ ಚಂಡಮಾರಿಯೂ ಹಿಂಸಾಧರ್ಮ ಬಿಟ್ಟು ಜೈನಧರ್ಮ ಸ್ವೀಕರಿಸುತ್ತಾಳೆ.

ಈ ಚಂಪುವಿನ ವಿಸ್ತಾರ ವಿಲಂಬಶೈಲಿಗೆ ಒಂದೆರಡು ಉದಾಹರಣೆಗಳನ್ನು ಕೊಡಬಹುದು : ಉಜ್ಜಯನಿಯಲ್ಲಿ ಆಳುತ್ತಿದ್ದ ಯಶೌಘ ಮಹಾರಾಜನು ನರೆಕೂದಲು ಕಂಡು ಸಂಸಾರದಲ್ಲಿ ವೈರಾಗ್ಯ ಹುಟ್ಟಿ ತಪಸ್ಸಿಗೆ ಹೋಗಲು ನಿಶ್ಚಯಿಸಿದ್ದರಿಂದ, ಅವನ ಮಗ ಯಶೋಧರನು ರಾಜ್ಯ ಸ್ವೀಕರಿಸಿ ಅವನೂ ಅವನ ಹೆಂಡತಿ ಅಮೃತಮತಿಯೂ ಅನ್ಯೋನ್ಯ ಪ್ರೇಮದಿಂದ ಕೂಡಿಕೊಂಡಿದ್ದರು ಎಂಬಲ್ಲಿಯವರೆಗಿನ ಕಥೆಯನ್ನು ಬಲು ಸೊಗಸಾಗಿಯೂ ಅಚ್ಚುಕಟ್ಟಾಗಿಯೂ ವಾದಿರಾಜನು ಸುಮಾರು ೨೦ ಸಣ್ಣ ವೃತ್ತಗಳಲ್ಲಿಯೂ, ಜನ್ನನು ಸುಮಾರು ೨೦ ಕಂದಗಳಲ್ಲಿಯೂ ವಿಪುಲವಾಗಿ ಬರುವ ದೀರ್ಘಗದ್ಯಗಳಲ್ಲಿಯೂ ಹಿಗ್ಗಿಲಿಸಿ ಹೊಸೆದಿದ್ದಾನೆ. ಚಂಡಮಾರಿದೇವತೆಯ ಮುಂದೆ ಕತ್ತಿ ಹಿಡಿದು ನಿಂತಿರುವ ಮಾರಿದತ್ತನನ್ನು ಹರಸಬೇಕಾದ ಅಭಯರುಚಿಯ ಬಾಯಲ್ಲಿ ವಾದಿರಾಜನು ‘ಸರ್ವಸತ್ವಹಿತೋಯಸ್ತು ಸರ್ವಲೋಕಸುಖಪ್ರದಃ | ವಿದಧ್ಯಾಸ್ತೇನಧರ್ಮೇಣ ರಾಜನ್ ರಾಜನ್ವತೀಂ ಕ್ಷಿತಿಂ’ ಎಂದೂ ಜನ್ನನು ‘ನೃಪವರ ನಿರ್ಮಲ ಧರ್ಮದಿಂದೆ ಪಾಲಿಸು ಧರೆಯನ್’ ಎಂದೂ ನುಡಿಸುತ್ತಾರೆ. ಇದೇ ಸನ್ನಿವೇಶದಲ್ಲಿ ಸೋಮದೇವಸೂರಿ ಅಭಯರುಚಿ ಬಾಯಲ್ಲಿ ಹಲವು ಪದ್ಯಗಳನ್ನೂ ಅಭಯಮತಿಯ ಬಾಯಲ್ಲಿ ಹಲವು ಪದ್ಯಗಳನ್ನೂ ಹೇಳಿಸಿದ್ದಾನೆ. ಅಷ್ಟೇ ಅಲ್ಲ. ಅಭಯಮತಿಯ ಬಾಯಲ್ಲಿ ಬರುವ ಮಾತುಗಳು ಎಳೆಯ ಹೆಣ್ಣಿಗೆ ಅದರಲ್ಲಿಯೂ ಮುನಿಶಿಷ್ಯೆಗೆ. ಕೇವಲ ಅನುಚಿತವಾದುವು.

  1. ಜಲಹರ ಚರಿಉ‘ (ಯಶೋಧರ ಚರಿತೆ) ೧೦ನೆಯ ಶತಮಾನದ ಅಪಭ್ರಂಶ ಕಾವ್ಯ. ಅದನ್ನು ಬರೆದವನು ‘ತಿಸಟ್ಟಿ ಮಹಪುರಿಸ ಗುಣಾಲಂಕಾರ’ವನ್ನೂ, ‘ನಾಗಕುಮಾರ ಚರಿತ’ವನ್ನೂ ಬರೆದು ಪ್ರಸಿದ್ಧನಾಗಿರುವ ಪುಷ್ಪದಂತ. ಈ ಪುಷ್ಪದಂತ ವೈದಿಕ ಬ್ರಾಹ್ಮಣನಾಗಿ ಹುಟ್ಟಿ ದಿಗಂಬರ ಜೈನಧರ್ಮವನ್ನು ಸ್ವೀಕರಿಸಿದವನು. ರಾಷ್ಟ್ರಕೂಟ ದೊರೆ ಮೂರನೆಯ ಕೃಷ್ಣನ ಮಂತ್ರಿಯಾಗಿದ್ದ ಭರತನ ಮತ್ತು ಅವನ ತರುವಾಯ ಅವನ ಮಗ ನನ್ನನ್ನ ಆಶ್ರಯದಲ್ಲಿ ಮಾನ್ಯಖೇಟದಲ್ಲಿ ನೆಲೆಸಿದ್ದನು. ಬಲು ಹಿಂದಿನಿಂದಲೂ ಇವನ ಈ ಗ್ರಂಥದ ಎರಡು ಪಾಠಗಳು ಸಮಪ್ರಚಾರದಲ್ಲಿದ್ದಂತೆ ಕಾಣುತ್ತದೆ: ೧ ಸೇನಗಣಪಾಠವೇ ಪುಷ್ಫದಂತ ಬರೆದ ಮೂಲಪಾಠ. ಬಲಾತ್ಕಾರ ಗಣದ ಪಾಠದಲ್ಲಿ ಹೆಚ್ಚಾಗಿರುವ ಅಂಶಗಳು ತರುವಾಯ ಗಂಧವ್ವ (ಗಂಧರ್ವ)ನೆಂಬುವನು ೧೪ನೆಯ ಶತಮಾನದ ಆದಿಯಲ್ಲಿ ಸೇರಿಸಿದ್ದು. ಆ ಅಂಶಗಳನ್ನು ಅದೇ ವಿಷಯದ ವತ್ಸರಾಜನ ಗ್ರಂಥದಿಂದ ತೆಗೆದು ಸೇರಿಸಿದ್ದಾಗಿ ಗಂಧರ್ವನೇ ಹೇಳಿದ್ದಾನೆ. ಮೂಲದಲ್ಲಿಲ್ಲದೆ ಹೀಗೆ ಹೆಚ್ಚಾಗಿ ಸೇರಿರುವ ಅಂಶಗಳು ಮೂರು (೧) ಕಾಪಾಲಿಕಾಚಾರ್ಯನಾದ ಭೈರವಾನಂದನು ಮಾರಿದತ್ತನ ರಾಜಧಾನಿಗೆ ಬಂದು ಕಾಪಾಲಿಕಮತದ ಪ್ರಚಾರ ನಡೆಸುತ್ತಿರುವುದು; ಈ ಸುದ್ಧಿ ದೊರೆಯ ಕಿವಿಮುಟ್ಟಿ, ಅವನಿಂದ ಕರೆಬಂದು ಭೈರವಾನಂದ ಅರಮನೆಗೆ ಹೋಗುವುದು; ಮಾರಿದತ್ತ ತನಗೆ ಖೇಚರವಿದ್ಯೆ ಸಿದ್ಧಿಸಬೇಕೆಂದು ಕೇಳಲು ಆ ಕಾಪಾಲಿಕನು ಸಾಧಿಸಿಕೊಡುವುದಾಗಿ ಹೇಳಿ, ಅದಕ್ಕಾಗಿ ಚಂಡಮಾರಿ ದೇವತೆಯನ್ನು ಪಶುಬಲಿ ನರಬಲಿಯಿಂದ ಪೂಜಿಸುವಂತೆ ಪ್ರೇರಿಸುವುದು. (೨) ಯಶೋಧರನ ಮದುವೆಯ ವಿಸ್ತಾರ ವರ್ಣನೆ. (೩) ಗೋವರ್ಧನ ವರ್ತಕ, ಚಂಡಮಾರಿದೇವತೆ, ಭೈರವಾನಂದ, ಮಾರಿದತ್ತ – ಇವರ ಭವಾಂತರಗಳನ್ನು ಸುದತ್ತಾಚಾರ್ಯರು ಮಾರಿದತ್ತನಿಗೆ ಹೇಳುವುದು.

ಈ ಗ್ರಂಥದಲ್ಲಿ ೪ ಪರಿಚ್ಛೇದಗಳೂ ಒಟ್ಟು ೧೩೮ಕಡವಕಗಳೂ ಇವೆ. ಸಾಮಾನ್ಯವಾಗಿ ಒಂದೊಂದು ಕಡವಕದಲ್ಲಿಯೂ ಸುಮಾರು ೧೦-೧೫ ಸಾಲುಗಳಿವೆ; ೨೫-೩೯ಸಾಲುಗಳ ಕಡವಕಗಳೂ ಕೆಲವು ಮಾತ್ರ ಉಂಟು. ಪ್ರತಿ ಕಡವಕದ ಕೊನೆಯಲ್ಲಿಯೂ ಒಂದು ಘಟ್ಟ ಇದೆ. ಈ ಕಾವ್ಯದಲ್ಲಿ ಬಳಸಿರುವ ಹಲವು ದೇಶೀ ಛಂದಸ್ಸುಗಳ ವೈವಿಧ್ಯ ಬಹಳ ಸೊಗಸಾಗಿದೆ. ಈ ಛಂದಸ್ಸುಗಳು ಕನ್ನಡದ ರಗಳೆಗಳ ರೀತಿಯವು. ಒಟ್ಟು ಶೈಲಿಯೂ ಅಲ್ಲಲ್ಲಿ ಬರುವ ವರ್ಣನೆ ಅಲಂಕಾರಗಳೂ ಬಲು ಚೆನ್ನಾಗಿವೆ.

  1. ವಾದಿರಾಜನ ಯಶೋಧರ ಚರಿತೆ: ೧೧ನೆಯ ಶತಮಾನದ ಆದಿಭಾಗದಲ್ಲಿದ್ದ ವಾದಿರಾಜಸೂರಿ (ಇವನಿಗೆ ಕನಕಸೇನ ವಾದಿರಾಜನೆಂದೂ ಹೆಸರು.) ಸಂಸ್ಕೃತದಲ್ಲಿ ನಾಲ್ಕು ಸರ್ಗಗಳ ಯಶೋಧರ ಚರಿತೆಯೊಂದನ್ನು ಬರೆದಿದ್ದಾನೆ. ಇದಕ್ಕೆ ಮೂಲ ಗುನಭದ್ರನ ಉತ್ತರ ಪುರಾಣದಲ್ಲಿಯ ಯಶೋಧರ ಕಥೆ. ಈ ಕಾವ್ಯದಲ್ಲಿ ಒಟ್ಟು ೩೦೦ಕ್ಕಿಂತ ಕಡಿಮೆ ಪದ್ಯಗಳಿವೆ. ಮೊದನೆಯ ಸರ್ಗ ಅನುಷ್ಟುಷ್ಟಿನಲ್ಲೂ ಎರಡನೆಯದು ಉಪಜಾತಿ ವೃತ್ತದಲ್ಲೂ ಮೂರನೆಯದು ಸ್ವಾಗತ ವೃತ್ತದಲ್ಲೂ ನಾಲ್ಕನೆಯದು ವಂಶಸ್ಥ ಮತ್ತು ಉಪಜಾತಿ ವೃತ್ತಗಳಲ್ಲೂ ಬರೆದಿವೆ. ಕವಿ ಕಾವ್ಯದ ಕೊನೆಯಲ್ಲಿ ‘ಯಶೋಧರ ಚರಿತೆ ಮಹಾಕಾವ್ಯ’ ಎಂದು ಹೆಳುತ್ತಾನೆ. ವಿಷಯಮಹತ್ವದಿಂದ ಅದು ಮಹಾಕಾವ್ಯವೋ ಹೊರತು. ಸಂಪ್ರದಾಯ ಮಾರ್ಗದ ಮಹಾಕಾವ್ಯ ಲಕ್ಷಣಗಳೆಲ್ಲವನ್ನೂ ಒಳಕೊಂಡಲ್ಲ. ಉದ್ದಾಮಶೈಲಿಯ ಪ್ರೌಢಮಹಾಕಾವ್ಯಗಳಲ್ಲಿ ಬರುವ ಅಷ್ಟಾದಶವರ್ಣನೆಗಳು ಅಲ್ಲಿಲ್ಲ. ಕೇವಲ ಕೃತಕ ಕವಿಸಮಯಗಳು, ವಿಚಿತ್ರಾಲಂಕಾರ ಚಮತ್ಕಾರಗಳು, ಅನಾವಶ್ಯಕ ಆಗಂತುಕ ವರ್ಣನೆಗಳು ಇಲ್ಲ. ಭಾಷೆ ಸರಳವಾಗಿಯೂ ಸುಲಭವಾಗಿಯೂ ಇದೆ. ಸೋಮದೇವಸೂರಿಯ ಯಶಸ್ತಿಲಕ ಚಂಪುವಿನ ಹೆಗ್ಗಾಡು ಬೆಳವಣಿಗೆಯ ತರುವಾಯ, ವಾದಿರಾಜಸೂರಿಯ ಕಸಿಮಾಡಿದ ಕೈತೋಟ ಅವಶ್ಯಕವಾಗಿತ್ತು, ಅನಿವಾರ್ಯವಾಗಿತ್ತು. ವಾದಿರಾಜನ ‘ಯಶೋಧರ ಚರಿತೆ’ ಮುದ್ದು ಶೈಲಿಯ ಸುಂದರ ಲಘುಕಾವ್ಯ. ಜನ್ನನ ಯಶೋಧರ ಚರಿತೆಗೆ ಇದೇ ಮೂಲ ಮತ್ತು ಮಾದರಿಯಾಗಿರುವಂತೆ ತೋರುತ್ತದೆ.
  2. ಸಂಸ್ಕೃತದಲ್ಲಿ ಇನ್ನೂ ಎಷ್ಟೋ ಕವಿಗಳು ಯಶೋಧರ ಕಥೆಯನ್ನು ತೆಗೆದುಕೊಂಡು ದೊಡ್ಡದಾಗಿಯೋ ಚಿಕ್ಕದಾಗಿಯೋ ಬರೆದಿದ್ದಾರೆ. ಆ ಪ್ರತಿಯೊಂದರ ವಿವರ ವಿಚಾರವನ್ನು ಇಲ್ಲಿ ಮಾಡದೆ ಅಡಕಪಟ್ಟಿಯನ್ನು ಮಾತ್ರ ಕೊಟ್ಟಿದೆ:

೧. ವಾಸವಸೇನನ ೮ ಸರ್ಗಗಳ ಕಾವ್ಯ: ಬಹುಪಾಲು ಅನುಷ್ಟಪ್ ಛಂದಸ್ಸು: ಪೂರ್ವದಲ್ಲಿ ಪ್ರಭಂಜನ ಹರಿಸೇಣಾದಿಗಳಿಂದ ಉಕ್ತವಾದ ಕಥೆಯನ್ನೇ ತನ್ನ ಬಾಲಭಾಷೆಯಲ್ಲಿ ಬರೆಯಲು ಉದ್ಯುಕ್ತನಾದದ್ದಾಗಿ ವಾಸನಸೇನನು ಗ್ರಂಥಾರಂಭದಲ್ಲಿ ಹೇಳುತ್ತಾನೆ. (ಪುಷ್ಪದಂತನ ‘ಜಸಹರ ಚರಿಉ’ ಜಸಹರನ ಮದುವೆಯ ವರ್ಣನೆಯನ್ನು ಸೇರಿಸಿದ ಕವಿ ಗಂಧರ್ವರು ಆ ಪ್ರಕರಣವನ್ನು ವಾಶವಸೇನನಿಂದ ತೆಗೆದುಕೊಂಡದ್ದೆಂದು ತಾನೇ ಹೇಳಿದ್ದಾನೆ.)

೨. ಸಕಲಕೀರ್ತಿಯ ೮ ಸರ್ಗಗಳ ಕಾವ್ಯ: ಅನುಷ್ಟಪ್ ಛಂದಸ್ಸು, ಕ್ರಿ.ಶ. ೧೫ನೆಯ ಶತಮಾನದ್ದಿರಬಹುದು.

೩. ಸೋಮಕೀರ್ತಿ ಮುನಿಯ ೮ ಸರ್ಗಗಳ ಕಾವ್ಯ: ಕ್ರಿ. ಶ. ೧೪೭೯ರಲ್ಲಿ ಬರೆದದ್ದು.

೪. ಮಾಣಿಕ್ಯಸೂರಿಯ ೧೪ ಸರ್ಗಗಳ ಕಾವ್ಯ: ಕ್ರಿ.ಶ. ೧೩೫೦ರಲ್ಲಿ ಬರೆದದ್ದು; ಪೂರ್ವ ಕವಿಗಳಲ್ಲಿ ಹರಿಭದ್ರನನ್ನು ಸ್ಮರಿಸಿದ್ದಾನೆ.

೫. ಪದ್ಮನಾಭನ ೯ ಸರ್ಗಗಳ ಕಾವ್ಯ: ಕಾಲ ಗೊತ್ತಿಲ್ಲ.

೬. ಪೂರ್ಣದೇವನ ೩೧೧ ಪದ್ಮಗಳ ಕಾವ್ಯ: ಕಾಲ ಗೊತ್ತಿಲ್ಲ.

೭. ಕ್ಷಮಾಕಲ್ಯಾಣನ ೮ ಅಧ್ಯಾಯಗಳ ಗದ್ಯ ಕಾವ್ಯ: ಗ್ರಂಥಾರಂಭದಲ್ಲಿ ಹರಿಭದ್ರನ ಪಾಕೃತ ಕಾವ್ಯವನ್ನೂ ಇತರರ ಸಂಸ್ಕೃತ ಪದ್ಮಕಾವ್ಯಗಳನ್ನೂ ಅನುಸರಿಸಿ ತಾನು ಗದ್ಯದಲ್ಲಿ ಬರೆದಿದ್ದಾಗಿ ಹೇಳುತ್ತಾನೆ. ಕ್ರಿ.ಶ ೧೭೮೨ರಲ್ಲಿ ಬರೆದದ್ದು.

ಇದಲ್ಲದೆ ಮಲ್ಲಿಭೂಷ, ಬ್ರಹ್ಮ, ನೇಮಿದತ್ತ, ಶ್ರುತಸಾಗರ, ಹೇಮಕುಂಜರ ಮೊದಲಾದ ಇನ್ನೂ ಹಲವು ಕವಿಗಳು ಯಶೋಧರ ಕಾವ್ಯಗಳನ್ನು ಬರೆದಿದ್ದಾರೆ.

VII. ದೇಶಭಾಷೆ : ಸಂಸ್ಕೃತ ಪ್ರಾಕೃತಗಳಲ್ಲೇ ಅಲ್ಲದೆ ಹಲವು ಪ್ರಾಂತ (ದೇಶ) ಭಾಷೆಗಳಲ್ಲಿಯೂ ಯಶೋಧರ ಕಥೆ ಬರೆದಿರುವುದಾಗಿ ಮೊದಲೆ ಹೇಳಿದೆ. ಅವುಗಳಲ್ಲಿ ಮುಖ್ಯವಾದುವು:

೧. ತಮಿಳು ಯಶೋಧರ ಕಾವ್ಯ : ಇದು ಯಾವ ಕಾಲದ್ದು, ಯಾರು ಬರೆದದ್ದು ಸರಿಯಾಗಿ ಗೊತ್ತಿಲ್ಲ. ಕ್ರಿ.ಶ. ೧೦-೧೧ನೆಯ ಶತಮಾನದ್ದಿರಬಹುದೆಂದು ಊಹೆ. ವಾದಿರಾಜನೇ ಇದರ ಕರ್ತೃವೂ ಆಗಿರಬಹುದೆಂದೂ ಒಬ್ಬಿಬ್ಬರ ಊಹೆ. ಈ ಕಾವ್ಯದಲ್ಲಿ ೫ ಸರ್ಗಗಳಾಗಿ ವಿಭಾಗವಾಗಿ, ಒಟ್ಟು ೩೨೦ ಪದ್ಯಗಳಿವೆ. ಪದ್ಯಗಳು ಸಾಮಾನ್ಯವಾಗಿ ವೃತ್ತ ಛಂದಸ್ಸಿನಲ್ಲಿವೆ. ಕಥೆಯ ಓಟ ಹೆಚ್ಚು ಕಡಿಮೆ ವಾದಿರಾಜನ ಸಂಸ್ಕೃತ ಯಶೋಧರ ಚರಿತೆಯನ್ನೇ ಅನುಸರಿಸಿ ಜನ್ನನ ಯಶೋಧರ ಚರಿತೆಯನ್ನು ಹೋಲುತ್ತದೆ. ಕಥನ ಶೈಲಿ ಸರಳವಾಗಿಯೂ ಸುಲಭವಾಗಿಯೂ ಇದೆ.

೨. ಗುಜರಾತೀ ಭಾಷೆಯಲ್ಲಿ ಹಲವು ಯಶೋಧರ ಚರಿತೆಗಳು ಸಿಕ್ಕಿವೆ. ಜಿನಚಂದ್ರಸೂರಿ (ಸುಮಾರು ಕ್ರಿ.ಶ.೧೬ನೆಯ ಶತಮಾನ), ದೇವೇಂದ್ರ, ಲಾವಣ್ಯರತ್ನ (೧೬ನೆಯ ಶ.ಮಾ.) ಮನೋಹರದಾಸ (೧೭ನೆಯ ಶ.ಮ.) ಮೊದಲಾದವರು ಬರೆದಿದ್ದಾರೆ.

೩. ಪಂಡಿತ ಲಕ್ಷ್ಮಿದಾಸ ಹಿಂದಿಯಲ್ಲಿ ಒಂದು ಯಶೋಧರ ಚರಿತೆ ಬರೆದಿದ್ದಾನೆ ಇದರ ಕಾಲ ಕ್ರಿ.ಶ. ೧೮ನೆಯ ಶತಮಾನದ ಆದಿಭಾಗ. ಈತ ಪದ್ಮನಾಭನ ಮಾದರಿಯನ್ನು ಹಿಡಿದು ರಚಿಸಿದ್ದಾಗಿ ಹೇಳುತ್ತಾನೆ.

VIII. ಕನ್ನಡದಲ್ಲಿ ಹಲವು ಯಶೋಧರ ಚರಿತೆಗಳಿವೆ. ಜನ್ನನೇ ತನ್ನ ‘ಯಶೋಧರ ಚರಿತೆ’ ಕಾವ್ಯಾರಂಭದಲ್ಲಿ ‘ಕ್ಷಿತಿಯೊಳ್ ಸಂಸ್ಕೃತದಿನ್ ಪ್ರಾಕೃತದಿನ್ ಕನ್ನಡದಿನ್ ಆದ್ಯರ್ ಆರ್ ಈ ಕೃತಿಯನ್ನು ಮಾಡಿದ ರ್ಅವರ್ಗಳ ಸನ್ ಮತಿ ಕೈಗುಡುಗೆಮಗೆ’ ಎಂದು ಹೇಳಿದ್ದಾನೆ. ಆ ಕನ್ನಡ ಕೃತಿ ಯಾವುದೋ ಇನ್ನೂ ಬೆಳಕಿಗೆ ಬಂದಂತೆ ಕಾಣಲಿಲ್ಲ. ಜನ್ನನ ತರುವಾಯ ಹಲವರು ಯಶೋಧರ ಕಥೆಯನ್ನು ಕುರಿತು ಬರೆದಿದ್ದಾರೆ.

೧. ಯಶೋಧರ: ಪದುಮ (ನಾಭ)ನು ಭಾಮಿನೀ ಷಟ್ಪದಿಯಲ್ಲಿ ನಾಲ್ಕು ಸಂಧಿಗಳ ಕಾವ್ಯ ಬರೆದಿದ್ದಾನೆ. ಒಟ್ಟು ೪೦೦ಕ್ಕೆ ಮೇಲ್ಪಟ್ಟು ಪದ್ಯಗಳಿವೆ. ಈಗ ದೊರೆತಿರುವ ಪ್ರತಿಯಲ್ಲಿ ಕೆಲವು ಓಲೆಗಳು ಕಳಚಿಹೋಗಿವೆ, ಕೆಲವು ಹರಿದುಹೋಗಿವೆ: ಪ್ರತಿಯಲ್ಲಿ ‘ಱ’ ಇದೆ. ಕವಿಯ ಕಾಲ ಸರಿಯಾಗಿ ತಿಳಿಯದು. ೧೫-೧೭ನೆಯ ಶತಮಾನವಿರಬಹುದು. ಜನ್ನನ ಕೃತಿಯನ್ನು ಪದುಮನಾಭ ನೋಡಿರಬೇಕೆನ್ನುವುದಕ್ಕೆ ಹಲವು ನಿದರ್ಶನಗಳಿವೆ. ಚಂಪುಕಾವ್ಯಗಳಲ್ಲಿ ಕಂಡುಬರುವ ವರ್ಣನೆ, ಅಲಂಕಾರ, ಶೈಲಿ ಮೊದಲಾದವುಗಳ ಅನುಕರಣೆ ಅಲ್ಲಲ್ಲಿ ಕಂಡುಬರುತ್ತದೆ. ಮಹಾಕಾವ್ಯಗಳಲ್ಲಿ ಚಿರಪರಿಚಿತವಾದ ಅಷ್ಟಾದಶ ವರ್ಣನೆ ಇದರಲ್ಲಿದೆ; ಕೆಲವು ಕೊಂಚ ನೀಳವಾಗಿವೆ. ಕೆಲವು ಶಾಸ್ತ್ರಕ್ಕಾದರೂ ಇವೆ. ಆದರೆ, ಅವುಗಳ ಹೊರೆಯಿಂದ ಓಟಕ್ಕೆ ಅಷ್ಟೇನೂ ತೊಡಕಿಲ್ಲ, ಕುಂಟಿಲ್ಲ. ಕಾವ್ಯ ಚೆನ್ನಾಗಿ ತಿಳಿಯಾಗಿ ಬಂದಿದೆ. ಕವಿ ತನ್ನನ್ನು ‘ವರ್ಣಕವಿ ತಿಲಕ’ ಎಂದು ಕರೆದುಕೊಂಡಿದ್ದಾನೆ. ಕವಿಯ ವಿಷಯವನ್ನು ತಿಳಿಸುವ ಕೆಲವು ಪದ್ಯಗಳನ್ನೂ ಪದ್ಯಭಾಗಗಳನ್ನೂ ಕೆಳಗೆ ಎತ್ತಿ ಕೊಟ್ಟಿದೆ:

………….. ಹೊಯ್ಸಳನಾ ಮಂಡಲವರಿಯೆ……….ಡು
ದೋರಸಮುದ್ರದೊಳಗೆ
ಅಖಂಡ ತಪೋನಿಧಿ ನಿಧಾನದ ಪಡೆದನಾ ಮುನಿಯು ||

……….. ಗುರು ಶ್ರುತಕೀರ್ತಿ…… ಬೆಸಸೆ ಕವಿ ಪದುಮನಾಭನು….
ವಿರಚಿಸಲು ಮನದಂದನಲ್ಲದೆ | ವಿರಚಿಸುವನೆಂಬವಗೆ ಸೂರೆಯೆ
ಸರಸ ಕವಿಗಳು ಮುನ್ನೆ ರಚಿಸಿದ ಕೃತಿಗೆ ಪ್ರತಿಯೆನಲು ||

ಚತುರ ಕವಿಜನ ಜನಕರೆನ್ನೀ | ಕೃತಿಯ ತಿರ್ದುಗೆ ಕೇಳಿ ಪದಪ
ದ್ಧತಿಯ ತೋಱಗೆ ಸಲೆ ಯಶೋಧರರಾಯ ಚರಿತೆಯೊಳು ||

ಹೀನರೆಂದೆನಿಪ ಪ್ರಥಮಗುಣ | ಸ್ಥಾನವರ್ತಿಗಳೀವುತಿರೆ ಕೈ
ಯಾನ ಜಿನಮತದವರನಲ್ಲದೆ ಬಗೆದು ಮಿಗೆ ಹೊಗಳಾ ||

ದಾನನಿಧಿ ಬ್ರಗನಿಧಿ ವಿಮಳಸು | ಜ್ಞಾನನಿಧಿ ಗುಣನಿಧಿ ದಯಾನಿಧಿ
ಮಾನನಿಧಿ ಸಮ್ಯಕ್ತ ರತ್ನಾಕರ ಸುಕವಿ ಪದುಮ ||

ಸಕಲ ಮುನಿಜನ ಬೆಸಸೆ ಕರ್ನಾ | ಟಕದ ಭಾಷೆಯಾಳೊಪ್ಪೆ ಜಿನಪದ
ಭಕುತಿ ಸುಲಲಿತ ಪದವೆಸೆವ ಗತಿ ಪದವೆ ಮುಂದಿಡಲು
ಸುಕರ ಕವಿಗಳು ಮುನ್ನ ಪೇಳಿದ | ಸುಕಥೆಯೆಂಬ ಸುವರ್ಣರಂಗದೊ
ಳೆಸೆದು ನರ್ತಿಪ ರಂಭೆಯೊಡನಾ ಸಿಂಬೆ ನಲಿವಂತೆ ||

…….. ಜಿನಮುನಿ ಶ್ರುತಕೀರ್ತಿ ತ್ರೈವಿದ್ಯದೇವರ ಸುತ ಕವಿ ಪದುಮನಾಭ
ವಿಭು ವಿರಚಿತ ಯಶೋಧರನು ||
…….. ಜೈನರು ಕೊಂಡು ಪಾಲಿಸುಕೀರ್ತೆ ಜೀವದಯಾಷ್ಟಮಿ ಕಥೆಯ ||

ಇವನ ಕೃತಿಯಲ್ಲಿಯ ಮಾರಿಗುಡಿ ವರ್ಣನೆಯಿಂದ ಕೆಲವು ಪದ್ಯಗಳು :

ಪುರದ ದಕ್ಷಿಣಭಾಗದೊಳು ಯಮ | ಪುರವಿದೆಂದೆನೆ ಚಂಡಮಾರಿಯ
ಪುರ ಭಯಂಕರ ಜಡಜನಂಗಳಿಗದ್ಬುತವಿದೆಂದೆನಲು
ಕರಿಯ ದಂತದ ಕಂಬಬೋದಿಗೆ | ಹರಿಯ ಮೂಳೆಯ ಹಲಗೆ ಪೆಟ್ಟಿಗೆ
ನರರ ಮೂಳೆಯ ಜಂತಿ ಕಲಕಾಳಿಕೆಯ ಮುಚ್ಚಣವು ||

ಸುತ್ತುಗೋಡೆಯ ಮೇಲೆ ತೆನೆಯೆನೆ | ತೆತ್ತಿಸಿದ ಪಂದಲೆಗಳೋಳಿಯ
ಸ್ತುತಿ ಜೋಲುವ ಕರುಳಮಾಲೆಯ ನೆಣದ ಗೊಂಡೆಯಕೆ
ಮುತ್ತಿ ಮುಸುರುವ ಹದ್ದು ಕಾಗೆಯ | ಮೊತ್ತ ಬಳಸಿರೆ ನರಕಗಾಮಿಯ
ನಿತ್ಯ ಬರಹೇಳೆಂದು ಕರೆವಂತುಲಿವ ಭೈರವರು ||

ಕೊಱೆದ ಖಂಡದ ಕೃತಕ ಗಿರಿಗಳು | ಮುಱೆದ ಹಲುಗಳ ರಾಶಿಗಳು ತಲೆ
ಪಱೆದ ಮುಂಡದ ಬಣಬೆಗಳ ಕಳುನೆಣದ ಬಾವಿಗಳು
ಜುಱೆತು ದೊಱ್ರೆನೆ ಸುರಿವ ರಕುತದ | ತೊಱೆಗಳದ್ಭುತ ರೌದ್ರರಸ ಕಣ್
ದೆಱೆಯಲೊಱೆಗಟ್ಟಿತು ನರಕದ ಗಂಡನದು ಕೇಳು ||

ಅಗೆದು ಹೊಳಿಸಿಕೊಂಬ ಬಸುಱೆಂ | ತೆಗೆವ ಜಂತ್ರದ ಮೆಯಿಗಳಲಿ ಸೂ
ಜಿಗಳ ಸಂದಿಸಿಕೊಂಬ ಗರಳವನುಂಬ ಕೆಂಡದೊಳು
ಹೊಗುವ ಹಾಳವ ಮೊಗೆವ ಸೂಲನ | ನೆಗೆವ ತಲೆಗಳ ಬಿಗಿವ ಚರ್ಮವ
ನುಗಿವ ವೀರರು ಮುಂದೆ ನರಕವ ಹೋಗುವುದಕೆ ಕುಱುಹು ||

ವಸುಧೆಯೊಳಗಣ ಜೀವರಾಶಿಗ | ಳಸುವ ನುಂಗಿದಡಕ್ಕಟೀ ತೆಳು
ಮಸುಱು ತೀವದು ನೋಡ ಪಾಪಿಯ ರೂಪನೆಂಬಂತೆ
ಮಿಸುಗೆ ಬರಿಯೆಲು ಚಂಡಮಾರಿಯ| ನೊಸೆದು ನಂಬಿದ ಪಾತಕರು ಸಲು
ವ ಸುಗತಿಯ ಬಿಲದಂತೆ ಬೆನ್ನನೆ ಪತ್ತಿಹುದು ನೋಡ ||

‘ಕೋಟ ಸಿರವ ಬಲಿಗೊಡಲು’ ತಂದಿದ್ದ ಪ್ರಾಣಿಗಳು ‘ಮಾರಿಯ ಕಾಡಿನೊಳು ನೆರೆದಳುತ ಕರುಣದ ಕೋಡಿವರಿಸಲು’ ‘ಹರುಷ ಕೈಮಿಗೆ ಮಾರಿದತ್ತನು’ ‘ಕರಿ ತುರಗ ರಥ ಬಲ ಸಹಿತ’ ‘ನೆಲ ಬಿರಿದು ಬಾಯ್ ಬಿಡೆ ನರಕವೆಂಬಾ ಪುರಕೆ ನಡೆವಂತೆ’ ಪೊಱಮಟ್ಟನು ಪುರೋಹಿತ ಮಂತ್ರಿಗಳು ಸಹಿತ. ಮಾರಿದತ್ತನು ‘ತೀರ್ಥಪ್ರಸಾದವ ತಂದು ಕೊಟ್ಟದೆ ತನ್ನ ತಲೆಗವ ತಂದನಾ ಜೀವಿಗಳ ತಲೆಗೆ ತಂದ.’

೨. ಚಂದಣವರ್ಣಿಯ ಯಶೋಧರ ಕಥೆ: ಇದಕ್ಕೆ ಜೀವದಯಾಷ್ಟಮಿಯ ಕಥೆಯೆಂದೂ ಹೆಸರು. ಭಾಮಿನೀ ಷಟ್ಪದಿಯಲ್ಲಿದೆ; ಸಂಧಿ ವಿಭಾಗವಿಲ್ಲ: ಒಟ್ಟು ೧೦೮ ಪದ್ಯಗಳು. ಕವಿಯ ಕಾಲ ದೇಶ ಒಂದೂ ಗೊತ್ತಿಲ್ಲ. ೧೫-೧೭ನೆಯ ಶತಮಾನವಿರಬಹುದು. ಈ ಗ್ರಂಥದಿಂದ ಕವಿಯ ವಿಷಯ ತಿಳಿಯಬರುವುದು ಅರ್ಧ ಪದ್ಯದಲ್ಲಿ ಮಾತ್ರ: ‘ಶ್ರುತ ಮುನೀಶ್ವರವರ ತನೂಭವ ಜಿತಮದನ ಶುಭಚಂದ್ರ ಮುನಿಪನ ಸುತನು ಚಂದಣವರ್ಣಿ ರಚಿಸಿದ ಕಥೆ ಯಶೋಧರನಾ. ‘ಇದೇ ಕವಿ ಚಂಪುವಿನಲ್ಲಿ ಬರೆದಿರುವ ‘ನಂದೀಶ್ವರ’ದ ನೋಂಪಿಯ ಕಥೆಯಿಂದ ಕವಿಯ ವಿಷಯ ಹೇಳುವ ಕೆಲವು ಪದ್ಯಗಳನ್ನು ಇಲ್ಲಿ ಗಮನಿಸಬಹುದು.

ಜಿನವರ ಸತ್ ಪುರಾಣತತಿಯಂ ಪರಮಾಗಮಮಂ ರಥಾಂಗಭೃನ್
ಮನಸಿಜ ಸೀರಿ ಪಾಂಡುತನಯಾದಿ ಕಥಾನ್ವಿತಮಂ ಸುಕಾವ್ಯಮಂ
ಮುನಿಸದುಪಾಸಕಾಚರಣಮಂ ಸಲೆ ಪೇಳ್ದ ಕವೀಶ ಭಾಸ್ಕರರ್
ಜನವಿನುತರ್ ಮದೀಯ ಮತಿಪದ್ಮಿನಿಗೀಗೊಲವಿಂ ವಿಕಾಸಮಂ

ರತಿಪತಿಮಾನಮರ್ಧಿ ಪರಮಾಗಮವಾರಿಧಿ ಪಾರದೃಶ್ವನಂ
ನುತಗುಣರತ್ನ ಲೋಹಣಶಿಲೋಚ್ಚಲ ಭವ್ಯ ಸರೋಜ ಭಾಸ್ಕರ
ಶ್ರುತಮುನಿರಾಜಸೂನು ನತಭವ್ಯಜನಾಮರಧೇನು ಭೂಮಿವಿ
ಶ್ರುತಶುಭಚಂದ್ರಯೋಗಿ ಸೆಲೆ ಕೀರ್ತಿಯನಾಳ್ದೆಸೆದಂ ಧರಿತ್ರಿಯೊಳ್

ಆ ಶುಭಚಂದ್ರಾಹ್ವಯ ಯೋ | ಗೀಶಾತ್ಮಜ ಚಂದಣಾಖ್ಯವರ್ಣಿ
ಬುಧಸ್ತೋಮಾಶಯಹರಮಂ ರಚಿಸಿದ | ನೀಶುಭ ನಂದೀಶ್ವರರಾಖ್ಯ
ಸದ್ ವ್ರತ ಕಥೆಯಂ

೩. ಯಶೋಧರ ಸಾಂಗತ್ಯ: ಕವಿಯ ಹೆಸರು ಗೊತ್ತಿಲ್ಲ; ಕಾಲ ಸುಮಾರು ಕ್ರಿ.ಶ. ೧೬೫೦. ಒಟ್ಟು ಮೂರು ಸಂಧಿಗಳೂ ೩೨೮ ಸಾಂಗತ್ಯಗಳೂ ಇವೆ. ಜನ್ನನ ಯಶೋಧರ ಕಥೆಯನ್ನೇ ಜನರಿಗೆ ಸುಲಭವಾಗಿ ತಿಳಿಯುವಂತೆಯೂ ಹಾಡಿಕೊಳ್ಳಲು ಅನುಕೂಲವಾಗುವಂತೆಯೂ ಸಾಂಗತ್ಯದಲ್ಲಿ ಬರೆದಂತೆ ಕಾಣುತ್ತದೆ.

೪. ಜೀವದಯಾಷ್ಟಮಿಯ ನೋಂಪಿಯ ಕಥೆ : ಮಿಕ್ಕವರಲ್ಲಿರುವಂತೆಯೇ ಜೈನರಲ್ಲಿಯೂ ಹಳೆಯಂದಿನಿಂದಲೂ ಹಲವು ನೋಂಪಿಗಳು ಆಚರಣೆಯಲ್ಲಿವೆ. ವ್ರತ ಎನ್ನುವುದಕ್ಕೆ ಅಚ್ಚ ಕನ್ನಡ ಮಾತಾದ ಈ ನೋಂಪಿ ಜೈನರಲ್ಲಿ ಹೆಚ್ಚು ಬಳಕೆ. ಈ ಎಷ್ಟೋ ನೋಂಪಿಗಳ ವಿಷಯದಲ್ಲಿ ಅವುಗಳನ್ನು ಆಚರಿಸುವ ವಿಧಾನ ಮಾತ್ರವಲ್ಲದೆ, ಅವುಗಳ ಸಂಬಂಧವಾದ ಕಥೆಗಳೂ ಬೆಳೆದು ಬಂದಿವೆ. ಇವುಗಳಿಗೆ ನೋಂಪಿಯ ಕಥೆಗಳು ಎಂದು ಹೆಸರು. ಕನ್ನಡದ ಈ ನೋಂಪಿಯ ಕಥೆಗಳನ್ನೆಲ್ಲಾ ಒಬ್ಬನೇ ಕರ್ತೃವಾಗಲಿ, ಒಂದೇ ಕಾಲದಲ್ಲಾಗಲಿ ಒಂದೇ ಬಗೆಯಲ್ಲಾಗಲಿ ಬರೆದಂತೆ ತೋರುವುದಿಲ್ಲ. ಬಲುಪಾಲು ಕಥೆಗಳು ವಚನ (ಗದ್ಯ) ರೂಪದಲ್ಲಿವೆ. ಕೆಲವು ಪದ್ಯರೂಪದಲ್ಲಿವೆ (ಉದಾಹರಣೆಗೆ: ಚಂದಣವರ್ಣಿಯ ನಂದೀಶ್ವರದ ನೋಂಪಿಯ ಕಥೆ ಒಂದು ಚಂಪೂ ಗ್ರಂಥ) ಈ ಬರಹಗಳ ಕಾಲ ೧೫-೧೮ನೆಯ ಶತಮಾನಗಳಿರಬಹುದು. ಸಾಮಾನ್ಯವಾಗಿ ಪ್ರತಿಯೊಂದು ನೋಂಪಿಯನ್ನೂ ಕುರಿತು ಮೊದಲು ಯಾರು ಯಾರಿಗೆ ಉಪದೇಶ ಮಾಡಿದರು, ಯಾರು ಆಚರಿಸಿ ಫಲಸಿದ್ಧಿ ಪಡೆದರು, ಆಚರಣೆಯ ದಿನ ಯಾವುದು, ಕ್ರಮ ಹೇಗೆ-ಇವೇ ಮೊದಲಾದ ಸಂಗತಿಗಳನ್ನು ಹೇಳಿದೆ. ನಾಲ್ಕು ಸಾಲಿನಿಂದ ಹಿಡಿದು ರಸವತ್ತಾದ ಕಥನವರೆಗಿನ ವಿವಿಧ ಸ್ವರೂಪದ ಕಥೆಗಳಿವೆ ಈ ಬರಹಗಳಲ್ಲಿ. ಕೆಲವಂತೂ ಸಾಹಿತ್ಯದೃಷ್ಟಿಯಿಂದ ಬಲು ಸೊಗಸಾಗಿವೆ, ಸ್ವಾರಸ್ಯವಾಗಿವೆ. ಇಂಥವುಗಳಲ್ಲಿ, ಯಶೋಧರನ ವೃತ್ತಾಂತ ಬರುವ ಜೀವದಯಾಷ್ಟಮಿಯ ನೋಂಪಿಯ ಕಥೆಯೂ ಒಂದಾಗಿದೆ.

ಜನರು ಪಶುಬಲಿ ನರಬಲಿ ಕೊಟ್ಟು ದುರ್ಗಾಷ್ಟಮಿಯನ್ನು ಹಿಂಸಾರೂಪದಲ್ಲಿ ಆಚರಿಸುತ್ತಿದ್ದದ್ದನ್ನು ಕಂಡು ಜೈನರು ಅಹಿಂಸಾರೂಪದ ಜೀವದಯಾಷ್ಟಮಿಯ ನೋಂಪಿಯನ್ನು ಆಚರಣೆಗೆ ತಂದಿರಬಹುದೆಂದೂ, ಅಹಿಂಸಾತತ್ವ ಬೋಧಿಸುವ ಯಶೋಧರ ವೃತ್ತಾಂತವನ್ನು ಅದಕ್ಕೆ ಹೊಂದಿಸಿಕೊಂಡಿರಬಹುದೆಂದೂ ಕೆಲವರ ಅಭಿಪ್ರಾಯ.

 – ಕ. ವೆಂ. ರಾಘವಾಚಾರ್
 (ಕೃಪೆ : ಯ.ಚ. ಪು.೬೩ -೭೫, ೧೯೪೯)