ಬಲಿ : ಗಿರೀಶ್ ಕಾರ್ನಾಡ್

ಕನ್ನಡದ ನಾಟಕಕಾರ ಗಿರೀಶ್ ಕಾರ್ನಾಡರ ಕಾಣಿಕೆ ಭಾರತೀಯ ಆಧುನಿಕ ರಂಗಭೂಮಿ, ಚಲನಚಿತ್ರ, ಇಂಗ್ಲೀಷ್ ಭಾಷೆಯ ಭಾರತೀಯ ನಾಟಕಗಳ ರಚನೆ, ನಟನಾಗಿ, ನಿರ್ದೇಶಕನಾಗಿ ಹೀಗೆ ಹಲವಾರು ರಂಗಗಳಲ್ಲಿ ಸಂದಿದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳೆರಡರಲ್ಲೂ ಇವರ ನಾಟಕಗಳು ಪ್ರಸಿದ್ಧಿ ಪಡೆದಿವೆ. ಇಂತಹ ಮಹತ್ವದ ನಾಟಕಕಾರನಿಗೆ ಕನ್ನಡದ ‘ಯಶೋಧರ ಚರಿತೆ’ ಕಾವ್ಯದ ‘ಯಶೋಧರನ ಕಥೆ’ಯು ಸುಮಾರು ಐವತ್ತು ವರ್ಷಗಳ ಕಾಲ ಕಾಡಿದೆ. ಆ ‘ಕಾವ್ಯ’ ಎತ್ತುವ ಭಾರತೀಯ ಪರಂಪರೆಯ ‘ನೈತಿಕ’ ಮೌಲ್ಯವು, ಗಿರೀಶ್ ಕಾರ್ನಾಡರನ್ನು ಇದರ ಬಗ್ಗೆ ತಮ್ಮದೇ ಆದ ಆಧುನಿಕವಾದ ಆಲೋಚನೆಯ ಮನೋಧರ್ಮದ ಹಿನ್ನೆಲೆಯಲ್ಲಿ ನಾಟಕವೊಂದನ್ನು ಬರೆಯಲು ಪ್ರೇರೇಪಿಸಿದೆ.

ಕಾರ್ನಾಡರು ತಮ್ಮ ‘ಬಲಿ’ (೨೦೦೭) ನಾಟಕದ ‘ಲೇಖಕರ ಮಾತು’ ಎಂಬ ಮಾತುಗಳಲ್ಲಿ ಇದರ ಬಗ್ಗೆ ಹೀಗೆ ದಾಖಲಿಸಿದ್ದಾರೆ: “ಒಂದು ದೃಷ್ಟಿಯಿಂದ ‘ಬಲಿ’ ನಾಟಕವನ್ನು ನಾನು ೧೯೫೬ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ‘ಯಶೋಧರ ಚರಿತೆ’ ಕಾವ್ಯ ಓದಿದ ಗಳಿಗೆಯಿಂದಲೇ ಬರೆಯಲಾರಂಭಿಸಿದೆ ಎನ್ನಬಹುದು. ಅದು ‘ಹಿಟ್ಟಿನ ಹುಂಜ’ ಎಂಬ ಹೆಸರಿನಲ್ಲಿ ಪ್ರಕಟವೂ ಆಯಿತು. ಅದನ್ನು ಬಿ.ವಿ. ಕಾರಂತ, ಪಿ. ಲಂಕೇಶ್, ಸಿಂಧುವಳ್ಳಿ ಅನಂತಮೂರ್ತಿ ಹಾಗೆಯೇ ಹಿಂದಿಯಲ್ಲಿ ಪ್ರೇಮಾ ಕಾರಂತ, ಸತ್ಯದೇವ ದುಬೇ – ರಂಗಭೂಮಿಗೆ ತಂದರು. ಆದರೆ ಅದು ನನಗೆ ತೃಪ್ತಿ ತರಲಿಲ್ಲ. ಕೊನೆಗೆ ೨೦೦೨ರಲ್ಲಿ ಬ್ರಿಟನಿನ್ನ ಲೆಸ್ಟರ್ ನಗರದ ಹೇ ಮಾರ್ಕೆಟ್ ಥಿಯೇಟರ್ ದವರು ಒಂದು ಹೊಸ ನಾಟಕ ಬರೆದು ಕೊಡಲು ನನ್ನನ್ನು ಕೇಳಿದಾಗ ಅದೇ ‘ಪ್ರಸಂಗ’ವನ್ನು ಹೊಸತಾಗಿ ಬರೆದೆ. ಸತ್ಯದೇವ ದುಬೆ ಸೂಚಿಸಿದಂತೆ ಅದಕ್ಕೆ ‘ಬಲಿ’ ಎಂದು ಹೊಸ ಹೆಸರು ಕೊಟ್ಟೆ, ಅದರ ಇಂಗ್ಲೀಷ್ ಪ್ರಯೋಗವನ್ನು ಸೋನಾ ಶೆಫರ್ಡ್ ಅವರು ನಿರ್ದೇಶಿಸಿದರು. ಅದರಲ್ಲಿ ನಷಿರುದ್ದೀನ್ ಶಹ ಮತ್ತು ರತ್ನಾಪಾಠಕ್ ಅವರು ಸಮರ್ಥವಾಗಿ ಪಾತ್ರ ವಹಿಸಿದ್ದರು” ಎಂದು ಈ ನಾಟಕದ ಭಾವಸಂದರ್ಭವನ್ನು ವಿವರಿಸಿದ್ದಾರೆ. ‘ಹಿಟ್ಟಿನ ಹುಂಜ’ ನಾಟಕವೇ ಅನೇಕ ತಿದ್ದುಪಡಿಗಳಿಗೆ, ಪರಿಷ್ಕಾರಕ್ಕೆ ಒಳಗಾಗಿ ‘ಬಲಿ’ ನಾಟಕವಾದ ಕಥೆ ಇದರಿಂದ ಗೊತ್ತಾಗುತ್ತದೆ.

ಭಾರತೀಯ ವೈಚಾರಿಕ ಪರಂಪರೆ ಮೊದಲಿನಿಂದಲೂ ಹಿಂಸೆಯನ್ನು ವಿರೋಧಿಸುತ್ತಾ ಅಹಿಂಸೆಯನ್ನು ಪ್ರತಿಪಾದಿಸುತ್ತಾ ಬಂದಿರುವುದು ಒಂದು ಚಾರಿತ್ರಿಕ ಸತ್ಯ. ಭಾರತೀಯ ಮನಸ್ಸುಗಳಿಗೆ ಹಿಂಸೆ ಒಗ್ಗುವುದಿಲ್ಲ. ಇದನ್ನು ಭಾರತೀಯ ಧರ್ಮಗಳು, ಕಾವ್ಯಗಳು, ತತ್ವ ಜ್ಞಾನಗಳು ಸಹ ಪ್ರತಿಪಾದಿಸುತ್ತಾ ಬಂದಿವೆ. ಮುಂದೆ ‘ಜೀವಂತ ಬಲಿ’ಗೆ ಬದಲಾಗಿ ‘ಸಂಕಲ್ಪ ಹಿಂಸೆ’ ಎಂಬ ಪರಿಕಲ್ಪನೆ ಕಾಣಿಸಿಕೊಂಡಿತು. ಇಲ್ಲಿನ ಗಿರೀಶ್ ಕಾರ್ನಾಡರ ‘ಬಲಿ’ ನಾಟಕದ ವಿಷಯವೂ ಹಿಂಸೆಯೇ; ಯಶೋಧರ (ರಾಜ್), ಅಮೃತಮತಿ (ರಾಣಿ), ಚಂದ್ರಮತಿ (ರಾಜಮಾತೆ), ಅಷ್ಟಾವಂಕ (ಮಾವುತ) ಹೀಗೆ ಈ ನಾಲ್ಕು ಪಾತ್ರಗಳು ಈ ಪ್ರಸಂಗದಲ್ಲಿ ಮುಖ್ಯ ಪಾತ್ರಗಳಾಗಿವೆ.

‘ಬಲಿ’ ನಾಟಕವು ರಾಣಿ ಅಮೃತಮತಿಯ ಹಾಡಿನಿಂದ ಆರಂಭವಾಗುತ್ತದೆ. ರಾಜ ಯಶೋಧರ ಆಕೆಯನ್ನು ಹಿಂಬಾಲಿಸುವುದರ ಮೂಲಕ ನಾಟಕ ತನ್ನ ಚಲನೆಯನ್ನು ಆರಂಭಿಸುತ್ತದೆ. ಮಾವುತ ಮತ್ತು ರಾಣಿ ಕತ್ತಲೆಯಲ್ಲಿರುವುದರಿಂದ ಅವರು ರಾಜನಿಗೆ ಎರಡು ಅಸ್ಪಷ್ಟ ಆಕೃತಿಗಳಂತೆ ಕಾಣಿಸುತ್ತಾರೆ. ಒಂದು ಮುರುಕಲು ಮಂದಿರದ ಗರ್ಭಗೃಹ ಅದು. ಅಲ್ಲಿದ್ದ ದೇವರ ವಿಗ್ರಹವೂ ಎಂದೋ ಮಣ್ಣು ಪಾಲಾಗಿದೆ. ಇದು ರಾಣಿ ಮತ್ತು ಮಾವುತನ ಕಾಮಕೇಳಿಗೆ ಸೂಕ್ತವಾದ ಜಾಗವಾಗಿದೆ. ರಾಣಿ ಪ್ರತಿರಾತ್ರಿ ಮಾವುತನ ಬಳಿಗೆ ಹೋಗಿ ಅವನ ಜೊತೆ ರತಿಯುತ್ಸಾಹದಲ್ಲಿ ತೊಡಗುತ್ತಾಳೆ. ಒಂದು ರಾತ್ರಿ ರಾಣಿಯನ್ನು ಹಿಂಬಾಲಿಸಿ ಬಂದ ರಾಜ ಆ ಮಂದಿರದ ದ್ವಾರದಲ್ಲಿ ಮರೆಯಾಗಿ ಕೂರುತ್ತಾನೆ. ಅವನು ಬಂದಿದ್ದು ರಾಣಿಗಾಗಲೀ, ಮಾವುತನಿಗಾಗಲೀ ತಿಳಿಯುವುದಿಲ್ಲ. ಆಗ ಅಲ್ಲಿಗೆ ‘ಮೇಳ’ ತನ್ನ ಹಾಡಿನೊಡನೆ ಪ್ರವೇಶಿಸುತ್ತದೆ. ‘ರಾಜ ಅಂಡಲೆಯುತ್ತಾನೆ /ಅರಸುತ್ತ ಓಣಿ – ಓಣಿ / ಹಾದರದ ಹಿಂಡಲಲ್ಲಿ / ಪರದಾಡತಾಳೆ ರಾಣಿ – ಹೀಗೆ ಆ ಹಾಡು ಮುಗಿಯುತ್ತದೆ. ಕತ್ತಲಲ್ಲಿ ಕುಳಿತಿದ್ದ ಮಾವುತ ಕತ್ತಲಲ್ಲಿಯೇ ಬಂದು ಹೋಗುವ ರಾಣಿಯನ್ನು ‘ಯಾರು ನೀನು?’ ಎಂದು ಆಕೆಯ ಕುಟುಂಬದ ಹಿನ್ನೆಲೆಯನ್ನು ಪ್ರಶ್ನಿಸುತ್ತಾನೆ. ಆದರೆ ರಾಣಿ ಮಾತ್ರ ತನ್ನ ಗುರುತನ್ನು, ತನ್ನ ಸ್ಥಾನಮಾನವನ್ನು ಅವನ ಬಳಿ ಹೇಳಿ ಗುರುತಿಸಿಕೊಳ್ಳಲು ಸಿದ್ಧಳಿಲ್ಲ. ಆಕೆ ತಾನು ಬೆಳಗಾಗುವುದರೊಳಗೆ ಮನೆ ಸೇರಿಕೊಳ್ಳಬೇಕು ಬಿಡು ಎಂದು ಕೇಳುತ್ತಾಳೆ. ಆಗ ಮಾವುತ ಬೆಳಗಾನ ಕೂಡಿ ನನ್ನ ಹೆಸರು ಸಹ ಕೇಳದೆ, ಹೇಳದೆ ಹೋಗೋದು ತಪ್ಪು ಎಂದು ಆಕೆಯನ್ನು ಆಕ್ಷೇಪಿಸುತ್ತಾನೆ. ರಾಣಿ, “ನನ್ನ ಸುತ್ತಮುತ್ತ ಮೇಣದ ಗೊಂಬೆಗಳು ಇಡೀ ದಿವಸ ಹರಿದಾಡುತ್ತಿರುತ್ತಾರೆ. ಅವರ ಬೆಡಗು ನೋಡಿ ನನಗೆ ವಾಕರಿಕೆ ಬಂದು ಹೋಗಿದೆ. ನೀನು ಯಾವ ಅವತಾರದಲ್ಲಾದರೂ ಇರು. ನನಗೇನೂ ವ್ಯತ್ಯಾಸ ಇಲ್ಲ. ನೀ ಹಾಡೋದು ಕೇಳಿಸಿತು. ನಿನ್ನ ಸಂಗೀತಕ್ಕೆ ಮೈಮರೆತು ಬಂದೆ” ಎನ್ನುತ್ತಾ, “ನಿನ್ನ ಒಂಟಿತನ ಕಂಡು, ನಿನಗೆ ಮಾತನಾಡಿಸಲು ಒಬ್ಬಳು ಸಂಗಾತಿ ಬೇಕು ಅನ್ನಿಸಿ ಬಂದೆ. ಅಣೆಯಿಟ್ಟು ಹೇಳುತ್ತೇನು. ನನ್ನ ಇಡೀ ಜನ್ಮದಲ್ಲಿ ಯಾರೂ ನನ್ನನ್ನು ನಿನ್ನ ಹಾಗೆ ಮಾತಾಡಿಸಿಲ್ಲ” ಎಂದು ಪದೇ ಪದೇ ಒತ್ತಿ ಒತ್ತಿ ಹೇಳುತ್ತಾಳೆ. ಹೀಗೆ ಆ ಗುಡಿಯಲ್ಲಿ ಅವರಿಬ್ಬರ ಮಾತುಕತೆ ರತಿಕ್ರೀಡೆ ನಡೆಯುತ್ತದೆ. ಮಾವುತ ಅವಳ ಗಂಡನನ್ನು ಕಾಣದೆ ಆ ಕತ್ತಲಲ್ಲೇ ಹೀಯಾಳಿಸಿದಾಗ “ನನ್ನ ಗಂಡನನ್ನು ಹೀಯಾಳಿಸಬೇಡ. ಅವನಂಥ ಗಂಡಸು ಭೂಮಿಯ ಮೇಲೆಯೇ ಇಲ್ಲ” ಎನ್ನುತ್ತಾಳೆ. ಆಗ ಆತ ವ್ಯಂಗ್ಯವಾಗಿ “ಭೂಮಿ ಮ್ಯಾಗೋ? ಸುಪ್ಪತ್ತಿಗೀ ಮ್ಯಾಗೋ?” ಎಂದು ಪ್ರಶ್ನಿಸುತ್ತಾನೆ. ಆಗ ಆಕೆ “ಎರಡೂ ಕಡೆ” ಎನ್ನುತ್ತಾಳೆ. ಆಗ ಆತ “ಹಂಗಾರ ನೀ ಯಾಕಿಲ್ಲೆ?” ಎಂದು ಪ್ರಶ್ನಿಸುತ್ತಾನೆ. ಆಗ ಆಕೆ “ನಿನಗೆ ತಿಳಿಯೋದಿಲ್ಲದು” ಎಂದು ಉತ್ತರಿಸುತ್ತಾ ತನ್ನ ಅಂತರಂಗದ ರತಿ ವ್ಯಾಮೋಹದ ಗುಟ್ಟನ್ನು ಮುಚ್ಚಿಡುತ್ತಾಳೆ.

ಮಾವುತ ದೇವರಗುಡಿ ಹೊರಗೆ ರಾಜಮಾತೆ ನಿಂತಿರುವುದನ್ನು ಗಮನಿಸುತ್ತಾನೆ. ಸ್ವಲ್ಪಹೊತ್ತಿನ ನಂತರ ರಾಜ ಸಹ ಅವನ ತಾಯಿ ಜೊತೆ ನಿಂತಿರುತ್ತಾನೆ. ಆ ರಾತ್ರಿಯಲ್ಲಿ ಗುಡಿಯೊಳಗೆ ಬಂದು ರಾಜ ಬಾಗಿಲು ಬಡಿಯುತ್ತಾನೆ. ಬಾಗಿಲು ತೆಗೆದು ಎದುರಾದ ಮಾವುತನನ್ನು ದೊರೆ ಪಕ್ಕಕ್ಕೆ ದೂಡಿ ‘ಅಮೃತಮತಿ’ ಎಂದು ಕೂಗುತ್ತಾನೆ. ಗುಡಿಯೊಳಗೆ ಅಮೃತಮತಿಯ ನರಳಾಟ ಕೇಳಿಸುತ್ತದೆ. ಆಗ ಮಾವುತ ‘ಕಾಲಿಗೆ ಬಿದ್ದೆ, ದಣಿ ಇಲ್ಲಿ ಯಾರೂ ಇಲ್ಲರೀ… ನಾ ಒಬ್ಬನ… ಅನಿ ಸಾಲ್ಯಾಗ ಗೂಗಿ ಹೊಕ್ಕಿತು ಅಂತ ಇಲ್ಲಿ ಮನಿಕ್ಕೊಣ್ಣಾಕ ಹತ್ತೀನು. ಇಲ್ಲಿ ಇನ್ಯಾರೂ ಇಲ್ಲ, ಒಡೆಯ….” ಎಂದು ಆತ ತನ್ನ ದಣಿಗೆ ಸುಳ್ಳು ಹೇಳುತ್ತಾನೆ. ಅಲ್ಲೇ ಮೂಲೆಯಲ್ಲಿದ್ದ ರಾಣಿ ಹೊರಬಂದು ರಾಜನಿಗೆ ಕಾಣಿಸಿಕೊಳ್ಳುತ್ತಾಳೆ. ಆಗ ಮಾವುತ ಗಾಬರಿಯಾಗಿ “ತೆಪ್ಪಾತು, ದಣಿ ತೆಪ್ಪಾತು ಯಾರಂತು ತಿಳೀಲಿಲ್ಲ… ಆದರ ದಣಿ, ನಾವೇನೂ ಮಾಡಿಲ್ಲ. ಅವರ ಮೈ ಮುಟ್ಟಿದ್ರೆ ಇಟ್ಟ ಅಣಿ, ಇಡೀ ರಾತ್ರಿ ಹಿಂಗಾ ಕೂತಿದ್ವಿ….ನಾ ಹಾಡತಿದ್ನಿ… ಅವರು ಕೇಳುತಿದ್ರು….” ಎಂದು ಮಾವುತ ತಾನು ರಾಣಿಗೆ ಏನನ್ನೂ ಮಾಡಲಿಲ್ಲ ಎಂದು ದೊರೆಗೆ ಉತ್ತರ ಕರ್ನಾಟಕದ ಭಾಷೆಯಲ್ಲಿ ಉತ್ತರ ಕೊಡುವುದನ್ನು ಕಾಣುತ್ತೇವೆ. ಆದರೆ ರಾಜ ದೀವಟಿಗೆಯ ಬೆಳಕಿನಲಿ ರಾಣಿಯ ಕೆನ್ನೆ ಹಿಡಿದು ನೋಡುತ್ತಾನೆ. ಅವನಿಗೆ ಅವಳ ಗುರುತೇ ಸಿಕ್ಕುತ್ತಿಲ್ಲ. ಆಗ ರಾಣಿ ರಾಜನನ್ನು “ಹೋಗೋಣ” ಎನ್ನುತ್ತಾಳೆ. “ಹೋಗೋಣ? ಎಲ್ಲಿಗೆ?” ಎಂದು ರಾಜ ಪ್ರಶ್ನಿಸುತ್ತಾನೆ. ರಾಣಿ “ನೀವು ಯಾಕೆ ಬಂದಿರಿ ಇಲ್ಲಿ?” ಎಂದು ಪ್ರಶ್ನಿಸಿ ಮೌನವಾಗುತ್ತಾಳೆ. “ನನಗೆ ನಿನ್ನ ಚಿಂತೆ, ನಿನಗೆ ಅವನ ಚಿಂತೆ” ಎಂದು ದೊರೆ ಒಗಟಿನ ರೀತಿ ಆಕೆಗೆ ಹೇಳುತ್ತಾನೆ. ಮಾವುತ “ನನ್ನದು ಏನೂ ತಪ್ಪಿಲ್ಲ, ನಾನು ಹಾಡಿಕೊಳ್ಳುತ್ತಾ ಸುಮ್ಮನ್ನೆ ಕೂತಿದ್ದೆ. ಅವರು ಬಂದು ನನ್ನ ತೆಕ್ಕೆ ಬಿದ್ದರು….” ಎನ್ನುತ್ತಾನೆ. ದೊರೆ ಮಾವುತನಿಗೆ ತಾನು ಸುಮ್ಮನೆ ಇದ್ದರೆ ದೊರೆ ನಾಳೆ ತನ್ನನ್ನು ಆನೆ ಕಾಲಿನಿಂದ ತುಳಿಸಿ ಸಾಯಿಸಬಹುದು ಎಂಬ ಗುಮಾನಿ. ಆದರೆ ದೊರೆ ತನಗೆ ಬಂದ ಸಿಟ್ಟನ್ನು ತಡೆಯಲಾಗದೆ ಅವನನ್ನು ಕೊಲ್ಲಲ್ಲು ಖಡ್ಗವೆತ್ತುತ್ತಾನೆ. ಆದರೆ ಮಾವುತ ತಕ್ಷಣ ರಾಜನಿಗೆ, “ಜೈನರು ನೀವು ಅಧ್ಯಾಂಗ ಕೊಲ್ಲತೀರಿ?” ಎಂದು ನೆನಪಿಸುತ್ತಾನೆ. ಇದನ್ನೆಲ್ಲಾ ದೂರದಲ್ಲಿ ಗುಡಿಯ ಬಾಗಿಲ ಮೆಟ್ಟಿಲ ಮೇಲೆ ಕುಳಿತಿರುವ ರಾಜಮಾತೆ ಚಂದ್ರಮತಿ ಗಮನಿಸುತ್ತಿದ್ದಾಳೆ. ಕೊನೆಗೆ ದೊರೆ ತನ್ನ ಧರ್ಮದ ತಿರುಳು ಅಹಿಂಸೆ ನೆನಪಾಗಿ ಕತ್ತಿಯನ್ನು ಇಳಿಸುತ್ತಾನೆ. ಆದರೆ ಈ ನಾಟಕದಲ್ಲಿ ಮಾವುತ ‘ದೇವರಿದ್ದಾನೆಂದು’ ಹೇಳಿದರೆ ಅಮೃತಮತಿ ‘ದೇವರಿಲ್ಲ ತೀರ್ಥಂಕರರಿದ್ದಾರೆ’ ಎಂದಾಗ ಆಕೆಯೂ ಜೈನಳೆಂದು ಆತನಿಗೆ ಗೊತ್ತಾಗುತ್ತದೆ.

ಮೂಲ ‘ಯಶೋಧರ’ನ ಕಥೆಗಿಂತ ಭಿನ್ನವಾಗಿ ಈ ಭಾಗದಲ್ಲಿ ಗಿರೀಶ್ ಕಾರ್ನಾಡರು ಅಮೃತಮತಿ ಮತ್ತು ಮಾವುತ ಅಷ್ಟಾವಂಕನ ಪ್ರಣಯ ಪ್ರಸಂಗವನ್ನಿ ನಿರ್ವಹಿಸಿದ್ದಾರೆ. ಮೂಲ ಕಾವ್ಯದಲ್ಲಿ ಅಷ್ಟಾವಂಕನ ಮಾತುಗಳು ಅಷ್ಟಾಗಿ ಇಲ್ಲ. ಅಲ್ಲಿ ಮೂವರೂ ಮುಖಾಮುಖಿಯಾದರೂ ಮೌನ ವಹಿಸುತ್ತಾರೆ. ಆದರೆ ಗಿರೀಶ್ ಕೃತಿ ನಾಟಕದ ಮಾಧ್ಯಮವಾಗಿರುವುದರಿಂದ ಇಲ್ಲಿ ಮೂವರೂ ಮುಖಾಮುಖಿಯಾಗುತ್ತಾರೆ. ಆದರೆ ಮೂವರೂ ತಮ್ಮ ತಮ್ಮ ನಿಜ ವ್ಯಕ್ತಿತ್ವವನ್ನು ಬಿಟ್ಟುಕೊಡಲಾರರು.

“ಮಹಾತ್ಮ ಗಾಂಧೀಜಿ ಕೂಡ ತಮ್ಮ ರಾಜಕೀಯ ದರ್ಶನದಲ್ಲಿ ಅಹಿಂಸೆಗೆ ಅಗ್ರಸ್ಥಾನವಿತ್ತರು” ಎಂದು ಗಿರೀಶ್ ಕಾರ್ನಾಡರು ಈ ನಾಟಕದ ‘ಮೊದಲು ಮಾತು’ವಿನಲ್ಲಿ ಹೇಳುತ್ತಾರೆ. ಆದರೆ ಈ ನಾಟಕದಲ್ಲಿ ‘ಹಿಂಸೆ -ಅಹಿಂಸೆ – ಮತಾಂತರ’ ಇವುಗಳ ಪರಿಕಲ್ಪನೆಯನ್ನು ‘ದ್ವಂದ್ವ’ದ ನೆಲೆಯಲ್ಲಿ ಶೋಧನೆಗೆ ನಾಟಕಕಾರರು ವಿರುದ್ಧ ಪಾತ್ರಗಳನ್ನು ಮುಖಾಮುಖಿ ಮಾಡುವುದರ ಮೂಲಕ ಮನುಷ್ಯ ಸಂಬಂಧಗಳ ಪೊಳ್ಳುತನವನ್ನು ಶೋಧಿಸುವುದನ್ನು ಕಾಣುತ್ತೇವೆ. ಮುಂದಿನ ಹಂತದಲ್ಲಿ ನಾಟಕವು ಹಿಂದಕ್ಕೆ (ಪ್ಲಾಶ್ ಬ್ಯಾಕ್) ಹೋಗುತ್ತದೆ. ಇದು ಮೂಲ ಕೃತಿಯಲ್ಲಿ ಇಲ್ಲದ ಪ್ರಸಂಗ. ಇದು ಗಿರೀಶ್ ಕಾರ್ನಾಡರ ಸ್ವತಂತ್ರ ಸೃಷ್ಟಿ. ಈ ಪ್ಲಾಶ್ ಬ್ಯಾಕ್‌ನಲ್ಲಿ ಬರುವ ದೊರೆ ರಾಜ ಮತ್ತು ರಾಣಿ ತಾವು ಮದುವೆ ಆಗುವುದಕ್ಕೆ ಮುಂಚೆ ಭೇಟಿಯಾದ ಮೊದಲ ಪ್ರಸಂಗ. ಮದುವೆಯ ಅನಂತರ ರಾಣಿ ಗರ್ಭಿಣಿಯಾಗಿದ್ದಾಳೆಂದು ಜನತೆಯಲ್ಲಿ ಸುದ್ಧಿ ಹರಡಿ ನಂತರ ಅದು ಸುಳ್ಳಾದಾಗ ಆಕೆ ಅನುಭವಿಸುವ ಅವಮಾನದ ಯಾತನೆ – ಇವೆರಡೂ ಪ್ರಸಂಗಗಳನ್ನು ಗಿರೀಶ್ ಕಾರ್ನಾಡರು ತಮ್ಮ ಈ ನಾಟಕದಲ್ಲಿ ತಂದಿದ್ದಾರೆ.

ರಾಣಿಯ ಮದುವೆಗೆ ಮುಂಚೆಯೇ ಬರುವ ರಾಜನು ಹಕ್ಕಿಯನ್ನು ತೋಟದಲ್ಲಿ ಭೇಟಿಯಾಡಿದ ಪ್ರಸಂಗ ಬರುತ್ತದೆ. ಆಗ ರಾಣಿ ರಾಜನನ್ನು “ಸಿಂಹದ ಬೇಟೆ ಆಡಲಿಕ್ಕೆ ಬರತದೇನು?” ಎಂದು ಕೇಳುತ್ತಾಳೆ. ಆಗ ರಾಜ “ನನಗೆ ಗೊತ್ತದ. ನೀವು ಜೈನರು, ಅಂದ ಹಾಂಗ ನಿಮ್ಮ ದೇವರು ಬರೆಬತ್ತಲೆ ಇರತಾನಂತಲಾ” ಎಂದು ಆಕೆಯನ್ನು ಛೇಡಿಸುವ ಧಾಟಿಯಲ್ಲಿ ಹೇಳಿ ನಕ್ಕು, ತನಗೆ ಬೇಟೆ ಆಡುವುದು ಬರುವುದನ್ನು ಒಪ್ಪಿಕೊಳ್ಳುತ್ತಾನೆ. ಆಗ ರಾಣಿ “ನಮ್ಮ ಮನ್ಯಾಗ ಯಾರಿಗೂ ಬ್ಯಾಟೆ ಆಡಲಿಕ್ಕೆ ಬಿಡೋದಿಲ್ಲ” ಎನ್ನುತ್ತಾ ಕನಲಿ, “ಮತ್ತ ನಿಮ್ಮ ದೇವಿ ಕೋಳಿಮಾಂಸ ತಿನ್ನತಾಳಂತಲ್ಲಾ” ಎಂದು ಚಂಡಮಾರಿ ದೇವತೆಯನ್ನು ಮೂದಲಿಸುತ್ತಾಳೆ. ಆಗ ರಾಜ “ತಿಂದರೇನಂತೆ?” ಎಂದು ತನ್ನ ದೇವತೆಯ ಆಚರಣೆಯನ್ನು ಆ ದೇವತೆಯ ವೈಭವ ಸಿರಿ, ಜಾತ್ರೆಯನ್ನು ಸಮರ್ಥಿಸುತ್ತಾನೆ. ಇದರಿಂದ ರಾಣಿಗೆ ಬೇಸರವಾಗುತ್ತದೆ.

ತೋಟದಲ್ಲಿ ಇಬ್ಬರೂ ತಿರುಗಾಡುವಾಗ ರಾಣಿ ಹಕ್ಕಿಯನ್ನು ನೋಡಿ ಬೆರಗಾಗಿ ತೋರಿಸುತ್ತಾಳೆ. ಆಗ ರಾಜ ‘ನೋಡ್ತಾ ಇರು’ ಎನ್ನುತ್ತಾ ಕಲ್ಲನ್ನೆತ್ತಿ ಗುರಿಯಿಟ್ಟು ಅದಕ್ಕೆ ಹೊಡೆಯುತ್ತಾನೆ. ಹಕ್ಕಿ ನೆಲಕ್ಕೆ ಬೀಳುತ್ತದೆ. ರಾಜನಿಗೆ ತನ್ನ ವಿಜಯವನ್ನು ಕಂಡು ಹೆಮ್ಮೆ. ಆದರೆ ರಾಣಿಗೆ ಭಯ, ರಾಣಿ ಸತ್ತುಬಿದ್ದ ಹಕ್ಕಿಯನ್ನು ಕಂಡು ಅಳುತ್ತಾ, “ಅಯ್ಯೋ, ಹಕ್ಕಿ, ಪುಟ್ಟ ಹಕ್ಕಿ ರಕ್ತ. ಅಯ್ಯೋ ಪಾಪ. ಅಯ್ಯೋ ನೀರು ತಾ ಬೇಗ – ನೀರು” ಎಂದು ಕೂಗುತ್ತಾ. ಹಕ್ಕಿಯನ್ನು ನವುರಾಗಿ ಕೈಗೆತ್ತಿಕೊಂಡು ನೋಡುತ್ತಾಳೆ. ರಾಜನೂ ಮೈಮರೆತು ನೋಡುತ್ತಾನೆ. ರಾಜ ಹಕ್ಕಿ -ಸತ್ತಿದೆ ಎಂದರೆ ರಾಣಿಗೆ ಅದು ಸತ್ತಿಲ್ಲ ಎಂಬ ಭ್ರಮೆ. ಆಗ ರಾಣಿ ಸಿಟ್ಟಾಗಿ ರಾಜನಿಗೆ “ಯಾಕೆ ಕೊಂದಿ ಅದನ್ನ?” ಎಂದು ಕನಲುತ್ತಾಳೆ. ರಾಜ, “ಹೌದು, ನನ್ನ ತಪ್ಪಾಯ್ತು” ಎನ್ನುತ್ತಾನೆ. “ನೀ ಹಿಂಗ ಗಾಯ ಮಾಡಲೇ ಅಂತ ಗೊತ್ತಿದ್ದಿಲ್ಲ” ಎನ್ನುತ್ತಾಳೆ. ಈ ಮಾತುಗಳು ನಾಟಕದ ಐರನಿ ಎನ್ನಬಹುದು. ಆಗ ರಾಣಿ ಆ ಸತ್ತ ಹಕ್ಕಿಯನ್ನು ಹೂಳಲು ರಾಜನ ಕೈಗೂ ಕೊಡದೆ ತೆಗೆದುಕೊಂಡು “ನಿನ್ನ ಕಣ್ಣಲ್ಲಿ ನೆತ್ತರೇ ಇಲ್ಲ – ಖೂಳ” ಎಂದು ಮೂದಲಿಸುತ್ತಾ ಅರಮನೆಯೊಳಕ್ಕೆ ಓಡಿಹೋಗುತ್ತಾಳೆ. ರಾಜನಿಗೆ ಮಾತೇ ಬಾರದೆ ನಿಂತಲ್ಲೇ ಗರಬಡಿದವನಂತೆ ಕ್ಷಣ ನಿಂತಿದ್ದು ನಂತರ “ನಾನು ತಪ್ಪು ಮಾಡಿಬಿಟ್ಟೆ! ಇನ್ನೊಮ್ಮೆ ನಾನು ಹೀಗೆ ಮಾಡೋದಿಲ್ಲ” ಎಂದು ಕಿರುಚಿ ಹೇಳುತ್ತಾನೆ. ಆದರೆ ಆ ವೇಳೆಗೆ ರಾಣಿ ಅಲ್ಲಿರುವುದಿಲ್ಲ. ಮೂಲ ಪಠ್ಯದಲ್ಲಿ ಇಲ್ಲದ ಪ್ರಸಂಗ ಇದು. ಮೂಲದಲ್ಲಿ ರಾಜ ಯಶೋಧರ ರಾಣಿ ಅಮೃತಮತಿಯನ್ನು ಮದುವೆಗೆ ಮುಂಚೆ ಭೇಟಿ ಮಾಡಿದ್ದಕ್ಕೆ ಸುಳಿವೇ ಬರುವುದಿಲ್ಲ. ಇದು ಗಿರೀಶರ ಹೊಸ ಸೇರ್ಪಡೆಯಾಗಿದೆ. ಇಲ್ಲಿ ಬಹಳ ಮುಗ್ಧವಾಗಿ ಇಬ್ಬರೂ ಹಿಂಸೆಗೆ ಬದ್ಧರಾಗುವುದನ್ನು ಕಾಣುತ್ತೇವೆ. ಮುಂದಿನ ಹಂತದಲ್ಲಿ ಈ ನಾಟಕವು ಹಿಂಸೆಯಿಂದ ಅಹಿಂಸೆಯ ಕಡೆಗೆ ಚಲಿಸಿ ಅಹಿಂಸೆಯೇ ಶ್ರೇಷ್ಠಾವಾದದ್ದು ಎಂಬ ಆಶಯವನ್ನು ಪ್ರಕಟಿಸುತ್ತದೆ.

ಈ ನಾಟಕದ ಮತ್ತೊಂದು ಮುಖ್ಯ ಪ್ರಸಂಗವೆಂದರೆ ರಾಣಿ ಗರ್ಭಿಣಿಯಾಗಿರುವ ಸುದ್ಧಿ ಕೇಳಿ ರಾಜ ಹರ್ಷಿತನಾಗುವ ಸಂಗತಿ. ರಾಣಿ ತಾನು ಗರ್ಭಿಣಿಯಾಗಿ ನಾಲ್ಕು ತಿಂಗಳಾಗಿದೆ ಎಂದು ಹೇಳಿದಾಗ ಅವನಿಗೆ ಆಶ್ಚರ್ಯ. ಇಷ್ಟು ದಿವಸ ನೀನು ನನಗೆ ಯಾಕೆ ಹೇಳಲಿಲ್ಲವೆಂದು ಅವನಿಗೆ ಸಿಟ್ಟು. “ನಾನು ಇನ್ನು ನಿನಗೆ ಭೂಮಿಯ ಮೇಲೆ ಕಾಲಿಡಲಿಕ್ಕೊ ಬಿಡೋದಿಲ್ಲ. ನೀನು ದೇವತೆ – ಬಸುರಿ! ನನ್ನ ರಾಣಿ!” ಎಂದು ಆತ ಸಂಭ್ರಮಿಸುತ್ತಾನೆ. ರಾಣಿ ಅವನಿಗೆ “ಸುಮ್ಮ ಸುಮ್ಮನೆ ಹುಚ್ಚು ಹೊಡ್ದುಕೊ ಬೇಡಿರಿ” ಎಂದು ಹೇಳಿದಾಗ ಆತ “ಹುಚ್ಚು ಹಿಡಿಯದೆ ಇನ್ನೇನಾಗಬೇಕು? ಹುಚ್ಚು, ಭ್ರಮೆ, ಭ್ರಾಂತಿ” ಎಂದು ಕುಣಿಯುತ್ತಾ ರಾಣಿಗೆ ಜೊತೆ ಆ ಸುದ್ಧಿಯನ್ನು ತನ್ನ ರಾಜಮಾತೆಗೆ ತಿಳಿಸಲು ಧಾವಿಸುತ್ತಾನೆ. “ಹೇಗೆ ಹೇಳಲಿ ಅವ್ವ? ಅಮೃತಮತಿಗೆ ದಿನ ತುಂಬಿದೆ” ಎನ್ನುತ್ತಾ ಅವ್ವನ ಬಳಿಗೆ ಬಂದಾಗ ಆಕೆ ವಿಷಯ ತಿಳಿದು “ಒಳ್ಳೆಯದಾಗಲಿ. ನಮ್ಮ ವಂಶವೃಕ್ಷದ ಕುಡಿ ಅರಳಿಸಿದ್ದೀಯ. ಎಂಟೂ ದಿಕ್ಕುಗಳ ಕಣ್ಣು ಕುಕ್ಕಿಸುವಂಥ ವೀರನ ತಾಯಿಯಾಗು!” ಎಂದು ಹರಸುತ್ತಾಳೆ. “ಇಂತಹ ಸುದ್ಧಿಯನ್ನು ಇಷ್ಟು ದಿನ ಯಾಕೆ ಗುಟ್ಟಾಗಿಟ್ಟೆ? ಇನ್ನು ನೀನು ಕಾಳಜಿ ವಹಿಸಬೇಕು. ರಾಜ್ಯದ ಭವಿಷ್ಯ ನಿನ್ನ ಉಡಿಯಲ್ಲಿದೆ” ಎಂದು ಸೊಸೆಗೆ ಎಚ್ಚರಿಕೆಯ ಮಾತುಗಳನ್ನು ಹೇಳಿ. ರಾಜಮಾತೆ ಊರಿನಲ್ಲಿ ನಡೆಯಲಿರುವ ಚಂಡಮಾರಿಯ ಉತ್ಸವಕ್ಕೆ ಸಂತೋಷದಿಂದ ಸಿದ್ಧತೆಯಲ್ಲಿ ತೊಡಗುತ್ತಾಳೆ. ರಾಜನೂ ರಾಜಮಾತೆಯೂ ನೆರವೇರಿಸಲು ಹೊರಡುವ ಆಚರಣೆಯಲ್ಲಿ ಭಾಗಿಯಾಗಲು ಹೊರಟಾಗ ರಾಣಿ ಅವನನ್ನು ತಡೆದು ಹೀಗೆ ಪ್ರಶ್ನಿಸುತ್ತಾಳೆ.

ರಾಣಿ : ಈ ಸಂತೋಷಕ್ಕಾಗಿ ದೇವಿಯ ಉತ್ಸವಕ್ಕೆ ಅಣೆಯಾಗಬೇಕು ಅಂದರಲ್ಲ. ಯಾವ ಬಗೆಯ ಉತ್ಸವ ಅದು?

ರಾಜ : (ಮೆಲ್ಲನೆ) ಅವಳ ಜೀವನ ವಿಧಿ ಅವಳಿಗೆ. ನನಗೇನೂ ಅದರಲ್ಲಿ ಪಾಲಾಗಲಿಕ್ಕೆ ಹೇಳತಾ ಇಲ್ಲವಲ್ಲ?

ರಾಣಿ : ಚಂಡಮಾರಿಯ ಪೂಜೆಯಲ್ಲಿ ಸಂದರ್ಭಕ್ಕೆ ತಕ್ಕ ಹಾಗೆ ಪ್ರಾಣಿಗಳ ಆಯ್ಕೆಯಾಗುತ್ತದೆ. ದಿನನಿತ್ಯದ ಪೂಜೆಗೆ ಕೋಳಿ. ಮಧ್ಯರಾತ್ರಿಯ ಪೂಜೆಗೆ ಕುರಿ, ಜಾತ್ರೆಗೆ ಕೋಣ –

ರಾಜ : ನಮ್ಮ ಮನೆತನದ ಹಳೆಯ ಸಂಪ್ರದಾಯ ಅದು.

ರಾಣಿ : ನರಬಲಿನೂ ಆಗತಿತ್ತಂತೆ, ಒಂದು ಕಾಲದಲ್ಲಿ!

ರಾಜ : ಅದು ಬಹಳ ಪುರಾತನ ಕಾಲದ ಸಂಗತಿ.

ರಾಣಿ : ಅಂದರೆ ಸಂಪ್ರದಾಯ ಬದಲಾಯಿಸೋದು ಸಾಧ್ಯ.

ರಾಜ : ಅದರ ಬಗ್ಗೆ ಬೇಕಾದಷ್ಟು ಕಡಿದಾಡಿದ್ದೇವಲ್ಲ, ದೇವಿ. ಅದನ್ನೆಲ್ಲ ಈಗ ಮತ್ತೆ ಕೆದಕಿ ಏನೂ ಪ್ರಯೋಜನ? ನಮ್ಮ ಪುರಾತನರ ತೃಪ್ತಿಗೆ ಅದೆಲ್ಲ ಆಗಲೇಬೇಕು ಅಂತ ಅವ್ವ ಹಠ ಹಿಡೀತಾಳೆ. ಅದಕ್ಕೇ ನಡೆದಿದೆ.

ರಾಣಿ : ಈಗ ಇರೋದು ವಿಷಯ ಪುರಾತನರದಲ್ಲ. ನಮ್ಮಗನದು. ರಾಜಪುತ್ರನ ಜನ್ಮಕ್ಕೆ ಯಾವ ಬಲಿ ಯೋಗ್ಯ ಇದ್ದೀತು? ನೀವು ಹುಟ್ಟಿದಾಗ ಇಡಿಯ ರಾಜಧಾನಿ ರಕ್ತದ ಕೆಸರಾಗಿತ್ತಂತೆ.

ರಾಜ : ಜನರು ಆಡಿಕೊಳ್ಳೋದನ್ನೆಲ್ಲಾ ನಂಬಬೇಡ.

ರಾಣಿ : ಹೌದು. ನೀವೆಂದದ್ದು ನಿಜ… ಆದರೆ ಒಂದು ರಕ್ತದ ಹನಿ ಬಿದ್ದರೂ ಅದು ಪಾಪವೇ… ನಮ್ಮ ಮಗನ ಹೆಸರಿನಲ್ಲಿ ಈ ಪಾತಕ ಬೇಡ.

ರಾಜ : ರಾಣಿ, ಅವ್ವ ತನ್ನ ಪಾಡಿಗೆ ತಾನು ಬದುಕುತ್ತಿದ್ದಾಳೆ. ನಾವು ಯಾಕೆ ತಲೆ ಹಾಕಿ ಆಕೆಯನ್ನು ಕೆಣಕಬೇಕು?

ರಾಣಿ : ಅವರನ್ನ ಕೆಣಕಬಾರದು, ನೋಯಿಸಬಾರದು ಅಂತನೇ ಇಷ್ಟೆಲ್ಲ ವರ್ಷ ಸಹಿಸಿಕೊಂಡದ್ದಾಯ್ತು. ಆದರೆ ನಾವು ಜೈನರು. ನಮ್ಮ ಮಗ ಜೈನ ಸಾಮ್ರಾಟ. ಅಹಿಂಸಾತತ್ವವನ್ನು ಜಗತ್ತಿಗೆ ಸಾರುವ ಹೊಣೆ ಹೊತ್ತು ಬರುತ್ತಾನೆ. ಅವನ ಸ್ವಾಗತಕ್ಕೆ ಹಿಂಸೆ? ಅಕ್ಷಮ್ಯ.

ಇಲ್ಲಿ ರಾಜ ಯಥಾಸ್ಥಿತಿ ವಾದಿ. ತನ್ನ ಅವ್ವನ ಆಚರಣೆಗಳನ್ನು ವಿರೋಧಿಸಲಾರ. ರಾಣಿ ಬದಲಾವಣೆಗೆ ತುಡಿಯುತ್ತಿದ್ದಾಳೆ. ರಾಣಿಯೂ ಹಿಂಸೆ ಅಕ್ಷಮ್ಯ ಅಪರಾಧ ಎಂದು ಇಲ್ಲಿ ವಾದ ಮಾಡುತ್ತಾಳೆ. ಆದರೆ ಜನ್ನನ ಕಾವ್ಯದಲ್ಲಿ ಈ ಬಗೆಯ ರಾಜ ಮತ್ತು ರಾಣಿಯ ನಡುವೆ ಚರ್ಚೆ ಬರುವುದಿಲ್ಲ. ರಾಜನಿಗಿಂತ ಹೆಚ್ಚಾಗಿ ರಾಣಿಯೇ ಜೈನಧರ್ಮದ ಪರವಾಗಿದ್ದಾಳೆ. ರಾಜನನ್ನು ಹಿಂಸೆಯಿಂದ ಅಹಿಂಸೆಯ ಕಡೆಗೆ ಬದಲಾಯಿಸುವ ಯತ್ನದಲ್ಲಿದ್ದಾಳೆ. ಇದು ಗಿರೀಶ್ ಕಾರ್ನಾಡರ ಸ್ತ್ರೀ ಪಾತ್ರದ ಬದಲಾವಣೆಯ ಆಧುನಿಕ ಚಿಂತನೆಯಾಗಿದೆ. ರಾಣಿ ಹಿಂಸೆಯ ವಿರುದ್ಧ ಸಿಟ್ಟು ಮಾಡಿಕೊಂಡಾಗ ಅಲ್ಲಿಂದ ರಾಜನೂ ತನ್ನ ಅವ್ವನ ಬಳಿಗೆ ಬಂದು ಅವ್ವನನ್ನು ಸಮಾಧಾನಗೊಳಿಸಲು ಯತ್ನಿಸಿ, “ನಮ್ಮ ಮಗುವಿನ ಜನ್ಮೋತ್ಸವದಲ್ಲಿ ರಕ್ತತರ್ಪಣ ಬೇಡ” ಎಂದು ಕೇಳುತ್ತಾನೆ. ಆಗ ರಾಜಮಾತೆ, “ನೀನು, ನಿನ್ನ ಹೆಂಡತಿ, ನನ್ನ ದೇವಿಯನ್ನ ಕಾಡು ದೈವದ ಹಾಗೆ ನಡೆಸಿಕೊಳ್ಳುತ್ತಿದ್ದೀರಿ. ದೇವಿಯ ಸಂತೃಪ್ತಿಯ ಹಾದಿಯಲ್ಲಿ ಬೇಕೆಂತಲೇ ತೊಡಕು ಒಡ್ಡುತ್ತಿದ್ದೀರಿ” ಎಂದು ಆಕ್ಷೀಪಿಸುತ್ತಾಳೆ. ಆದರೆ ರಾಜ ‘ಜೀವಬಲಿ’ ಮಾತ್ರ ಆಗಲೇ ಕೂಡದು ಎನ್ನುತ್ತಾನೆ. ಆಗ ರಾಜಮಾತೆ ಹೀಗೆ ಹೇಳುತ್ತಾಳೆ:

ರಾಜಮಾತೆ: ನೀನು ಹುಟ್ಟಿ ಜೈನನಲ್ಲ. ನೀನು ನನ್ನ ಮಗ – ಚಂಡಮಾರಿಯ ಪ್ರಸಾದ. ಆದರೆ ನೀನು ನನ್ನ ದೇವತೆಗಳಿಗೆ ಘಾತ ಬಗೆದೆ. ನಿನ್ನ ಹೆಂಡತಿಯ ಕೈಹಿಡಿದು ಆಕೆಯನ್ನ ನಿನ್ನ ಸಂಸ್ಕಾರಗಳಿಗೆ ಕರೆ ತರೋದರ ಬದಲಾಗಿ ನೀನೇ ಆಕೆಯ ಮೂಢನಂಬಿಕೆಗಳಿಗೆ ಮಾರುಹೋದೆ.

ರಾಜ: ನಾನು ಜೈನಧರ್ಮ ಸ್ವೀಕಾರ ಮಾಡಿದೆ – ಯಾಕೆಂದರೆ ಆ ಧರ್ಮದಲ್ಲಿ ಸತ್ಯ ಇದೆ. ಅಹಿಂಸೆಯಿದೆ. ಸಂಸಾರದ ಪ್ರತಿಯೊಂದು ಪ್ರಾಣಿಯ ಪರವಾಗಿ ತಳಮಳ ಇದೆ. ಜಗತ್ತಿನಲ್ಲಿರುವ ವೇದನೆಯನ್ನು ನಾನು ಇನ್ನಷ್ಟು ಹೆಚ್ಚಿಸುವುದಿಲ್ಲ. ಇನ್ನೊಬ್ಬರಿಗೂ ಆಸ್ಪದ ಕೊಡುವುದಿಲ್ಲ. ನನ್ನ ಮಗನ ಹೆಸರಿನಲ್ಲಂತೂ ಬಲಿ ಸಾಧ್ಯವೇ ಇಲ್ಲ.

ರಾಜಮಾತೆ: ಅವನು ನನ್ನ ಮೊಮ್ಮಗನೂ ಹೌದು. ನನ್ನ ವಂಶದ ಕುಡಿ – ನನ್ನ ದೇವಿಯ ಅನುಗ್ರಹ

ಹೀಗೆ ರಾಜಮಾತೆಯು ಮಗನೊಡನೆ ವಾದ ಮಾಡುತ್ತಾಳೆ. ರಾಣಿಯ ಮೂಢನಂಬಿಕೆಗಳಿಗೆ ನೀನು ಬಲಿಯಾದೆ ಎಂದು ಮಗನಿಗೆ ಆಕ್ಷೇಪಿಸುತ್ತಾಳೆ. ಆಕೆಯ ಮತಕ್ಕೆ ನೀನು ಮತಾಂತರನಾದೆ ಎನ್ನುತ್ತಾಳೆ. ರಾಜಮಾತೆಯ ಬಲಿ ಮುಂತಾದ ಆಚರಣೆಗಳು ರಾಣಿಗೂ ಮೌಢ್ಯವಾಗಿ ಕಾಣಿಸುತ್ತವೆ. ಹೀಗೆ ಒಬ್ಬರಿಗೊಬ್ಬರು ಪರಸ್ಪರವಾದ ವಿವಾದಕ್ಕೆ ಇಳಿಯುತ್ತಾರೆ. ಕೊನೆಗೆ ರಾಜಮಾತೆ ಸಿಟ್ಟಿಗೆದ್ದು “ನಾನು ಅರಮನೆ ಬಿಟ್ಟು ಹೋಗುತ್ತಾನೆ” ಎಂದು ಹೆದರಿಸುತ್ತಾಳೆ. ಆಗ ರಾಜ “ಅವ್ವ, ಇದು ನಿನ್ನ ಮನೆ. ನೀನು ನನಗೆ ಜನ್ಮ ಕೊಟ್ಟಿದ್ದು ಇದೇ ಮನೆಯಲ್ಲಿ. ನನ್ನ ಮಾತು ಕೇಳು. ಮನೆ ಬಿಡಬೇಡ” ಎಂದು ಕೇಳಿಕೊಳ್ಳುತ್ತಾನೆ. ರಾಜಮಾತೆಯ ಬಾಯಲ್ಲಿ ಅದು ‘ಅರಮನೆ’ಯಾದರೆ ರಾಜನ ಬಾಯಲಿ ಅದು ‘ಮನೆ’. ಆಗ ಆಕೆ ‘ಅರಮನೆ’ಯಾಚೆಗೆ ನನಗೆ ಗುಡಿಸಲು ಕಟ್ಟಿಕೊಡು. ಅಲ್ಲಿ ನನ್ನ ಪಾಡಿಗೆ ನಾನು ವಾಸ ಮಾಡುತ್ತೇನೆ” ಎಂದು ಆಕೆ ಕೇಳಿಕೊಳ್ಳುತ್ತಾಳೆ. ಆಗ ರಾಜಮಾತೆ ಅವನಿಗೆ ಒಂದು ಒಗಟಿನ ರೀತಿಯ ಪ್ರಶ್ನೆಯನ್ನು ಹಾಕುತ್ತಾಳೆ: “ನಿನ್ನ ಹೆಂಡತಿ ಬಸುರಿ ಅನ್ನೋದು ಖಚಿತ ಏನು?” ಎಂದು. ಹಿಂದೆ ರಾಣಿ ಬಸುರಿಯಾಗದೆಯೇ ‘ರಾಣಿಗೆ ತಿಂಗಳು ತುಂಬಿದೆ’ ಎಂದು ಸುದ್ದಿ ಹುಟ್ಟಿಸಿದ್ದು, ಆಮೇಲೆ ಅದು ಸುಳ್ಳು ಅಂತ ಗೊತ್ತಾಗಿದ್ದು ಎಲ್ಲಾ ರಾಜಮಾತೆಗೆ ಗೊತ್ತಿದೆ. ಆಗ ರಾಜ ಆಕೆ ಬಸುರಿ ಎಂಬುದು ನಿಜ ಅನ್ನುತ್ತಾನೆ. ಆಗ ರಾಜಮಾತೆ ಹೇಳುವ ಈ ಮಾತನ್ನು ನೋಡಿದಾಗ ಆಕೆಗೆ ರಾಣಿಯ ವರ್ತನೆ ಸ್ವಭಾವ ತಿಳಿದಿದೆ.

ರಾಜಮಾತೆ: ‘ರಾಣಿಗೆ ಕಳ್ಳ ಬಸಿರು!’ – ಒಂದು ದಿನ ಅರಮನೆಯ ದಾಸಿ ಪಿಸಿಪಿಸಿ ನಗುತ್ತಿದ್ದಳು: ‘ ಹುಂಜ ಇಲ್ಲದೇನೆ ಹೇಟೆ ತತ್ತಿ ಇಡತದಲ್ಲ. ಹಾಗೇ ಇದೂ ಇರಬೇಕು!’ ಅಂತ. ಇದು ನಿನ್ನ ಅರಮನೆ ಅಲ್ಲದೆ ಹೋಗಿದ್ದರೆ ಈ ತೊತ್ತಿನ ನಾಲಿಗೆ ಸೀಳಿ ಒಗೀತಿದ್ದೆ.

ರಾಜ ಆಮೇಲೆ ಮಾವುತ – ರಾಣಿಯರ ಸಂಬಂಧ ಕಂಡು ವಿಹ್ವಲನಾಗುತ್ತಾನೆ. ಬಳಿಕ ತನ್ನ ತಾಯಿಯ ಬಳಿಹೋಗಿ ತನಗೊಂದು ಕನಸು ಬಿತ್ತು. ಆ ಕನಸಿನಲ್ಲಿ ಉದ್ಯಾನದ ರಾಜಹಂಸ ಕೆಸರಿನಲ್ಲಿ ಸಿಕ್ಕಿಬಿದ್ದ ಹಾಗೆ ಕಾಣಿಸಿತು. ಅದು ತಪ್ಪಿಸಿಕೊಳ್ಳಲಿಕ್ಕಾಗದೆ ರೆಕ್ಕೆ ಬಡಿದು ಚಡಪಡಿಸುತ್ತಿತ್ತು’ – ಎಂದು ಸುಳ್ಳು ಹೇಳುತ್ತಾನೆ. ತಾಯಿ ಇದನ್ನು ಕೇಳಿ ‘ನಿನ್ನ ತಂದೆ ತೀರಿಕೊಳ್ಳುವ ಮೊದಲು ನನಗೆ ಇಂಥದೇ ಒಂದು ಕನಸು ಬಿದ್ದಿತ್ತು. ಆಗ ದುರ್ಲಕ್ಷ್ಯ ಮಾಡಿದೆ : ಅದರ ಫಲ ಅನುಭೋಗಿಸಿದೆ. ಮಗು, ಇಂಥ ಕನಸು ಒಂದು ಪಿಡಗು ಇದ್ದ ಹಾಗೆ,’ – ಎಂದು, ಹೇಳಿ ತಾನು ಅದಕ್ಕೆ ಪರಿಹಾರ ಹುಡುಕುವುದಾಗಿ ಮಗನಿಗೆ ಧೈರ್ಯ ಹೇಳುತ್ತಾನೆ. ಈ ದುಃಸ್ವಪ್ನದ ಪರಿಹಾರಕ್ಕೆ “ಚಂಡಮಾರಿಗೆ ನೂರು ಕುರಿ ಬಲಿ ಕೊಡಬೇಕು” ಎಂದು ಮಗನಿಗೆ ಸಲಹೆ ಮಾಡುತ್ತಾಳೆ. ಆದರೆ ರಾಜ ‘ಬಲಿ’ ಎಂಬ ಮಾತು ಕೇಳುತ್ತಿದ್ದಂತೆಯೇ ಹೌಹಾರುತ್ತಾನೆ. ಆಗ ರಾಜಮಾತೆ ‘ಜೀವಬಲಿ ಕೊಡಲೇಬೇಕು’ ಎನ್ನುತ್ತಾಳೆ. ಆಗ ರಾಣಿ ರಾಜನಿಗೆ “ಜೈನರಾಗಿ ನೀವು ರಕ್ತಪಾತಕ್ಕೆ ಒಪ್ಪುತೀರಿ. ನಾನು ಯಾಕೆ ಅವನ ಸಂಗೀತ ಮೆಚ್ಚಬಾರದು?” ಎಂದು ಮಾವುತನ ಪರ ವಹಿಸಿ ಸವಾಲು ಹಾಕುತ್ತಾಳೆ. ಆಗ ಮೂವರ ನಡುವೆ ಚರ್ಚೆ ನಡೆದು ರಾಜಮಾತೆ ಕೊನೆಗೆ “ಪ್ರಾಣಿಬಲಿ ಆಗದಿದ್ದರೆ, ಆತ್ಮ ಬಲಿ ಕೊಡುತ್ತೇನೆ” ಎಂದು ಹೇಳಿ ಆತ್ಮಹತ್ಯೆಯ ಮಾತನ್ನಾಡುತ್ತಾಳೆ. ರಾಣಿಯ ಅನೈತಿಕ ಸಂಬಂಧ ರಾಜಮಾತೆಗೆ ಗೊತ್ತಾಗಿ ರಾಣಿಯನ್ನು ‘ಹಾದರಗಿತ್ತಿ! ದಿಗಡುದಿಮ್ಮಿ!’ ಎಂದು ಬೈದು ಮಗನಿಗೆ ಅವಳನ್ನು ಕತ್ತರಿಸಿ ನಾಯಿಗೆ ಹಾಕಬೇಕಾಗಿತ್ತು ಎನ್ನುತ್ತಾಳೆ. ತನ್ನ ಮಗನನ್ನು “ಎಂಥಾ ಗಂಡಸು ನೀನು! ಷಂಡ – ನಪುಂಸಕ! ಥೂ -‘ ಎಂದು ಜರಿಯುತ್ತಾಳೆ. “ಅವಳನ್ನು ನೀನು ಮುಟ್ಟಬೇಕಾಗಿಲ್ಲ – ಅರಮನೆಯಿಂದ ಹೊರಗೆ ದಬ್ಬು, ತವರುಮನೆಗೆ ಓಡಿಸು. ನಿನಗಿನ್ನೊಬ್ಬಳ್ಳು ಹೆಣ್ಣು ತರೋಣ” ಎಂದು ರಾಜಮಾತೆ ಮಗನಿಗೆ ಈ ಕಾಲದ ಮಾತನ್ನು. “ಆಕೆಯನ್ನುಮತ್ತೆ ಹೊಸ್ತಿಲ ಒಳಗಡೆ ಬಿಡತೀಯೇನು?” ಎಂದು ಪ್ರಶ್ನಿಸುತ್ತಾಳೆ. ಆಗ ದೊರೆ “ನಾನೇನು ಮಾಡಬೇಕು? ನನಗೆ ಗೊತ್ತಿಲ್ಲ” ಎಂದು ಅಸಹಾಯಕತೆಯ ಮಾತನ್ನಾಡುತ್ತಾನೆ. ಆಗ ರಾಜಮಾತೆ “ಪ್ರೀತಿ! ಇಂಥ ಪ್ರೀತಿ ವೇಶ್ಯೆಯರಿಗೆ ಮೀಸಲು, ಮಗು ಹೆಂಡಂದಿರಿಗಲ್ಲ” ಎಂದು ವ್ಯಂಗ್ಯವಾಡುತ್ತಾಳೆ. ಮೂಲದಲ್ಲಿ ಇಲ್ಲದ ಈ ಭಾಗವು ಕಾರ್ನಾಡರ ಕೈಯಲ್ಲಿ ಸಮಕಾಲೀನ ಸಮಾಜದ ಚಿತ್ರಣದ ಬಿಂಬವಾಗಿ ಬಿಡುತ್ತದೆ. ಹಳೆಯ ಕಾಲದ ಚಿನ್ನದ ವಡವೆಯನ್ನು ತನ್ನ ಕಾಲದ ಸಮಾಜಕ್ಕೆ ತಕ್ಕಂತೆ ಕರಗಿಸಿ ಹೊಸ ವಡವೆಯನ್ನಾಗಿ ಪರಿವರ್ತಿಸುವಲ್ಲಿ ಕಾರ್ನಾಡರ ಪ್ರತಿಭೆ ಇಲ್ಲಿ ಅದ್ಭುತವಾಗಿ ಪ್ರಕಟವಾಗುತ್ತದೆ.

ರಾಜಮಾತೆ ಕೊನೆಗೂ ಗಾಸಿಯಾದ ಮಗನನ್ನು ತಾನು ಬಲಿಕೊಡಲು ಆಲೋಚಿಸಿರುವ ಪದ್ಧತಿಗೆ ಒಪ್ಪಿಸುತ್ತಾಳೆ. ತನ್ನ ಮತ್ತು ಮಗನ ಕರುಳಬಳ್ಳಿಯ ಸಂಬಂಧದ ಸೂತ್ರದ ಮಾತನ್ನಾಡಿ ಆತನನ್ನು ಬಂಧಿಸುತ್ತಾಳೆ. ಜೀವಬಲಿ ಕೊಡಲು ಒಪ್ಪದ ಮಗನಿಗೆ ಉಪಾಯವನ್ನು ಹೇಳಿ ಹಿಟ್ಟಿನ ಕೋಳಿಯನ್ನು ಬಲಿಕೊಡಲು ಒಪ್ಪಿಸುತ್ತಾಳೆ. ಆದರೆ ರಾಣಿಗೆ ತನ್ನ ಗಂಡ ಹಿಟ್ಟಿನಕೋಳಿ ಬಲಿಕೊಡುವುದೂ ಇಷ್ಟವಿಲ್ಲ. ಅದೂ ಕೂಡ ಆತ್ಮವಂಚನೆಯ ಕೆಲಸವೇ ಆಗಿರುತ್ತದೆ. ಎಂಬುದು ರಾಣಿಯ ವಾದ. ಆ ಪದ್ಧತಿಯಲ್ಲೂ ಕತ್ತಿ, ಇರಿತ ಇರುತ್ತದೆ ಎಂಬುದು ಅವಳ ವಾದ. “ಇದು ನಮ್ಮಿಬ್ಬರ ಸಮಸ್ಯೆ. ನಾವೇ ಬಿಡಿಸೋಣ. ಇದಕ್ಕೆ ನಿಮ್ಮ ಅವ್ವನ ನೆರವು ಯಾಕೆ ಬೇಕು” ಎಂಬುದು ಆಕೆಯ ಇಂಗಿತದ ಮಾತು. ಹೀಗೆ ರಾಜ ರಾಣಿಯ ನಡುವೆ ನಡೆಯುವ ದೀರ್ಘವಾದ ಚರ್ಚೆಯಲ್ಲಿ ರಾಜ ಅವ್ವನ ಮಾತನ್ನು ಮೀರಲಾರ. ಕೊನೆಗೆ ರಾಜಮಾತೆಯೇ ರಾಣಿಯನ್ನು ಭೇಟೆ ಮಾಡಿ ತಾವಿಬ್ಬರೂ ಇನ್ನು ಮುಂದೆ ‘ನೀವು – ತಾವು’ ಎಂಬ ಬಹುವಚನದ ಮಾತುಬಿಟ್ಟು ಬತ್ತಲಾಗುವ ಅನ್ನುತ್ತಾಳೆ. ಆಗ ರಾಣಿ “ಏನುಬೇಕು ನಿಮಗೆ?” ಎಂದು ರಾಜಮಾತೆ ಬಂದುದನ್ನು ಕಂಡು ಪ್ರಶ್ನಿಸುತ್ತಾಳೆ. “ನಿನ್ನ ಹತ್ತಿರ ಸ್ವಲ್ಪ ಮಾತಾಡೋದಿತ್ತು” ಎಂದು ರಾಜಮಾತೆ ಮಾತನ್ನು ಆರ‍ಂಭಿಸುತ್ತಿದ್ದಂತೆಯೇ ರಾಣಿ “ಇಷ್ಟು ವರ್ಷ ಮಾತು ಬಿಟ್ಟು ಕೂತಿದ್ದಿರಿ. ಹತ್ತು ವರ್ಷ ಒಂದೇ ಮನೆಯಲ್ಲಿದ್ದು ಒಂದು ಶಬ್ದ ಮಾತಾಡಿಲ್ಲ….” ಎನ್ನುತ್ತಾ ಆಕೆಯನ್ನು ಕೇಳುತ್ತಾಳೆ. ಆಗ ರಾಜಮಾತೆ “ನಿನ್ನ ಜೊತೆಗೆ ಮಾತು ಬಿಡಲಿಕ್ಕೂ ಒಂದು ಕಾರಣ ಇತ್ತು. ನನ್ನ ಮಗ ಕ್ಷತ್ರಿಯ. ಶಾಕ್ತಪಂಥದವ. ಅವನನ್ನು ನೀನು ಜೈನಧರ್ಮಕ್ಕೆ ಎಳೆದುಕೊಂಡು ಹೋದೆ….” ಎನ್ನುತ್ತಾಳೆ. ರಾಜಮಾತೆಗೆ ತನ್ನ ಮಗನನ್ನು ಆಕೆ ಮತಾಂತರಗೊಳಿಸಿದ್ದರ ಬಗ್ಗೆ ಮುನಿಸು, ಸಿಟ್ಟು ಬೇಸರ ಇದೆ. ಆದರೂ ರಾಜಮಾತೆ ಹೇಳುವುದು ಹೀಗೆ:

ರಾಜಮಾತೆ : ಮಗಳೇ …. ನೀನು ಆ ಹುಂಜದ ಬಲಿ ಹೇಗೆ ಕೊಡತೀ ಅನ್ನೋದನ್ನ ನೋಡಲಿಕ್ಕೆ ಬಂದೆ

ರಾಣಿ : ನಾನು ಹುಂಜದ ಬಲಿ ಕೊಡೋದಿಲ್ಲ

ರಾಜ : (ನಡುವೆ ಬಾಯಾಕಿ) ಹಾಗೆನ್ನಬೇಡ. ಇಲ್ಲ ಎನ್ನಬೇಡ!

ರಾಜಮಾತೆ : ನಾನೂ ನಿನಗೆ ಇದನ್ನೇ ಹೇಳಲಿಕ್ಕೆ ಬಂದೆ. ಹುಂಜದ ಬಲಿ ಕೊಡಬೇಡ. ಏನಾದರೂ ನಿನ್ನ ಗಂಡನ ಮಾತಿಗೆ ಒಪ್ಪಬೇಡ.

ರಾಣಿ : ಇದೇನಿದು? ಬಲಿ ಆಗಬೇಕು ಎಂದು ಇಷ್ಟೆಲ್ಲ ಹಗರಣ ಮಾಡಿದವರು ನೀವು.. ನೀವೇ ಈಗ ಬಲಿಕೊಡಬೇಡ ಅಂತ ಹೇಳತೀರಂದರೆ? ಯಾವ ಹೊಸ ಇಕ್ಕಟ್ಟಿನಲ್ಲಿ ನನ್ನನ್ನು ಸಿಗಿಸೋ ಪ್ರಯತ್ನ ಮಾಡತಿದ್ದೀರಿ?

ರಾಜಮಾತೆ : ಹೇಳಿದೆನಲ್ಲ. ನಾನು ಬತ್ತಲೆಯಾಗಿ ಬಂದಿದ್ದೀನಿ. ಪ್ರಾಮಾಣಿಕವಾಗಿ ಮಾತಾಡಲಿಕ್ಕೆ ಬಂದಿದ್ದೇನೆ. ನೀನು ಬಲಿಕೊಡಲಿಕ್ಕೆ ಒಪ್ಪದಿದ್ದರೆ ನನ್ನ ಮಗ ಗೋಳಾಡುತ್ತಾಳೆ. ಗೋಳಾಡಲಿ! ಅವನ ಮನಸ್ಸಿಗೆ ಹಿಂಸೆ ಆಗ್ತದೆ. ಹಿಂಸೆ ಆದಷ್ಟೂ ಒಳ್ಳೆಯದೇ. ಅವನಿಗೆ ಇನ್ನಷ್ಟು ಯಾತನೆ ಕೊಡು, ಹಿಂಸೆ ಮಾಡು, ಗೋಳಾಡಿಸು.

ರಾಣಿ: ಸುಮ್ಮನಿರಿ! ನನ್ನ ಗಂಡ ದೇವರಂಥ ಮನುಷ್ಯ, ನಾನು ಯಾಕೆ ಅವರಿಗೆ ಹಿಂಸೆ ಕೊಡಲಿ?

ರಾಜಮಾತೆ : ಹಿಂಸೆ? ನಿನಗೇನು ತಿಳೀತದೆ ಹಿಂಸೆ ಏನು ಅಂತ? ನೆತ್ತರು ಅಂದ ಗಳಿಗೆಗೆ ಹೆದರಿ ತತ್ತರಿಸೋ ನೀನು.

ಹೀಗೆ ಅತ್ತೆ – ಸೊಸೆಯರ ನಡುವೆ ಶುರುವಾದ ಮಾತು ಕೊನೆಗೆ ರಾಜಮಾತೆ ತನ್ನ ಸೊಸೆಯ ಬಸಿರನ್ನೂ ನೆನಪಿಸಿ ಹಂಗಿಸುವ ಮಟ್ಟಕ್ಕೆ ಹೋಗುತ್ತದೆ. “ನಿನ್ನ ಬಸಿರೇ ಸೋರು ಬಸಿರು! ನನ್ನದು ಉಕ್ಕಿನ ಗರ್ಭ” ಎಂದು ಹೆಳಿ ರಾಜಮಾತೆ ತನ್ನ ಮಗನನ್ನು ಹೇಗೆ ಹಡೆದೆ ಎಂಬುದರ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾಳೆ. ಕೊನೆಗೆ ‘ನೀನು ಅವನಿಗೆ ಯಾತನೆ ಕೊಟ್ಟಷ್ಟೂ ದೇವತೆಗಳಿಗೆ ಹೆಚ್ಚು ತೃಪ್ತಿಯಾಗುತ್ತದೆ’ ಎಂದು ಹೇಳಿ ಹೊರಟು ಹೋಗುತ್ತಾಳೆ.

ಅನಂತರ ಮಾವುತ – ರಾಣಿ – ರಾಜರ ನಡುವೆ ಮಾತುಕತೆ ಆರ‍ಂಭವಾಗುತ್ತದೆ. ರಾಣಿ ತಾನು ಮಾವುತನ ಜೊತೆ ಸೇರಿದ ಪ್ರಸಂಗವನ್ನು ಮುಚ್ಚು ಮರೆಯಿಲ್ಲದೆ ರಾಜನಿಗೆ ವಿವರಿಸುತ್ತಾಳೆ: “ಇಷ್ಟು ಹೊತ್ತು ನಿಮ್ಮನ್ನು ನೋಯಿಸಬಾರದು ಅಂತ ಹೇಳಲಿಲ್ಲ. ಈಗ ಅದನ್ನು ಒಪ್ಪಿಕೊಂಡು ಬಿಡುತ್ತೇನೆ… ಮಾವುತನ ಜೊತೆ ನಾನು ಸಂಗ ಮಾಡಿದೆ, ಹೌದು. ಆದರೆ ಆ ಬಗ್ಗೆ ನನಗೆ ಬೇಸರ ಇಲ್ಲ. ಪಶ್ಚಾತ್ತಾಪ ಇಲ್ಲ. ಪಾಪ ಭಾವನೆ ಇಲ್ಲ…. ನಿಮ್ಮ ಪಕ್ಕದಲ್ಲಿ ಮಲಗಿದ್ದೆ. ದೂರದಿಂದ ಅವರು ಹಾಡತಿರೋದು ಕೇಳಿಸಿತು. ಮೈ ಮುಳ್ಳೆದ್ದಿತು. ಹಾಸಿಗೆಯಿಂದು ಎದ್ದೆ. ಆ ಸಂಗೀತಕ್ಕೆ ನನ್ನನ್ನು ನಾನೇ ಮರೆತೆ… ನನ್ನ ಕನಸಿಗೊಂದು ಕಾಡುಬೇರು ಬೇಕಾಗಿತ್ತು. ಅದು ಅಕಸ್ಮಾತ್ತಾಗಿ ನನ್ನ ಪಾಲಿಗೆ ಬಂತು. ನಾನು ಕೇಳಲಿಲ್ಲ – ಬೇಡಲಿಲ್ಲ. ಬಂತು. ಆ ಸಾಕ್ಷಾತ್ಕಾರದಲ್ಲಿ ಮಿಂದು ಬಂದಿದ್ದೇನೆ” ಎಂದು ನಡೆದದ್ದನ್ನೆಲ್ಲಾ ಬಿಚ್ಚಿಡುತ್ತಾಳೆ. ಇಲ್ಲಿ ನಂಬಿಕೆ ಅಪನಂಬಿಕೆಗಳ ಬಗ್ಗೆ, ಪಾವಿತ್ರ್ಯ – ಪಾಪದ ಬಗ್ಗೆ, ಹೆಣ್ಣಿನ ಸ್ವಾತಂತ್ರ್ಯದ ಬಗ್ಗೆ, ಪುರುಷನಂತೆ ಹೆಣ್ಣಿಗೂ ಬೇಕಾದ ಮುಗ್ಧ ಪ್ರಣಯದ ಬಗ್ಗೆ ನಾಟಕಕಾರರು ಆಧುನಿಕ ದೃಷ್ಟಿಕೋನದಿಂದ ನಿರ್ವಹಿಸುವುದನ್ನು ಕಾಣುತ್ತೇವೆ. ಮಾವುತ – ರಾಜ – ರಾಣಿಯರ ನಡುವಿನ ಮಾತುಕತೆಯ ಭಾಗ ಮೂಲ ಪಠ್ಯದಲ್ಲಿ ಇಲ್ಲ. ಇಲ್ಲಿ ಗಿರೀಶ್ ಕಾರ್ನಾಡರು ಈ ಮೂರೂ ಪಾತ್ರಗಳನ್ನು ಹಿಂಸೆ ಮತ್ತು ಕಾಮದ ಎದುರು, ಪಾಪಪುಣ್ಯದ ಎದುರು, ಸಾಕ್ಷಾತ್ಕಾರದ ಎದುರು ತಂದು ಮುಖಾಮುಖಿಯಾಗಿಸುವುದನ್ನು ನೋಡುತ್ತೇವೆ. ಮಾವುತ ಹೋದ ಮೇಲೆ ರಾಣಿ ರಾಜನನ್ನು “ಅವನು ಹೋದ. ಆ ಗಳಿಗೆ ಹೋಯ್ತು. ನಾನೇನು ಮಾಡಲಿ? ಹೇಳಿರಿ ಮಾಡುತೇನೆ. ಬಲಿ ಕೊಡಬೇಕೇನು? ಕೊಡುತ್ತೇನೆ” ಎಂದು ಕೇಳುತ್ತಾಳೆ. ರಾಜನಿಗೆ “ಕೊಡುತೀ?” ಎಂದು ಆಶ್ಚರ್ಯಪಡುತ್ತಾನೆ. ಆಗ ರಾಜ ಹುಂಜದ ಮೇಲೆ ಕತ್ತಿ ಹಿಡಿಯುತ್ತಾನೆ. ರಾಣಿ ಕತ್ತಿಯ ಹಿಡಿಕೆಯ ಮೇಲಿದ್ದ ಅವನ ಬಲಮುಷ್ಠಿಯ ಮೇಲೆ ತನ್ನ ಬಲಗೈ ಇಡುತ್ತಾಳೆ. ಆಗ ಹಿಟ್ಟಿನ ಹುಂಜ ಕೂಗುತ್ತದೆ. ರಾಜ ಜೀವಂತ ಕೋಳಿಯನ್ನೇ ಕೊಂದನೆಂದು ತಿಳಿದು ರಾಣಿ ಅವನ ಮೇಲೆ ದ್ವೇಷದಿಂದ ಉರಿದೇಳುತ್ತಾಳೆ. ಕತ್ತಿಯನ್ನು ಎತ್ತಿ ರಾಜನನ್ನು ಇರಿಯ ಹೋಗುತ್ತಾಳೆ. ತನ್ನಲ್ಲಿ ಉರಿದೆದ್ದ ಕ್ರೌರ್ಯ ಅರ್ಥವಾಗದೆ ಅದನ್ನೇ ದಿಟ್ಟಿಸುತ್ತಾಳೆ. ರಾಜನೂ ಮುಖ ತಿರುವಿ ಗರಬಡಿದವನಂತೆ ನಿಲ್ಲುತ್ತಾನೆ. ಕೊನೆಗೆ ರಾಣಿ ತನ್ನಲ್ಲಿಯ ಹಿಂಸೆಗೆ ತಾನೇ ತನ್ನನ್ನೇ ಇರಿದುಕೊಳ್ಳುತ್ತಾಳೆ. ರಾಜ ಓಡಿಹೋಗಿ ಅವಳನ್ನು ತನ್ನ ಬಾಹುಗಳಿಂದ ಹಿಡಿದು ಎತ್ತಿಕೊಳ್ಳುತ್ತಾನೆ. ಮೂಲ ಜನ್ನನ ‘ಯಶೋಧರ ಚರಿತೆ’ಯ ಕಥೆಗಿಂತ ಈ ನಾಟಕ ಹೀಗೆ ಭಿನ್ನವಾಗಿದ್ದು ಸಮಕಾಲೀನವಾಗಿದೆ. ಇಲ್ಲಿ ಜನ್ನನ ಭವಾವಳಿಗಳ – ಜನ್ಮಾಂತರಗಳ ಕಥೆಗಳ ಪ್ರವೇಶವಿಲ್ಲ. ನಾಟಕದ ಆರಂಭದಲ್ಲಿ ಬರುವ ಹಾಡನ್ನೇ ಮತ್ತೆ ಅಂತ್ಯದಲ್ಲಿಯೂ ರಾಣಿ – ರಾಜರಿಬ್ಬರೂ ಒಟ್ಟಾಗಿ ಹಾಡುತ್ತಾರೆ. ನಾಟಕ ಮುಗಿಯುತ್ತದೆ. ಹೀಗೆ ನಾಟಕಕಾರ ಗಿರೀಶ್ ಕಾರ್ನಾಡರು ತಮ್ಮ ಈ ‘ಬಲಿ’ ನಾಟಕದ ಮೂಲಕ ಪ್ರಾಚೀನ ಅಭಿಜಾತ ಕಾವ್ಯದ ಆಕೃತಿಯನ್ನು ತಮ್ಮ ಕಾಲದ ನೈತಿಕ ಮೌಲ್ಯಗಳ ಶೋಧನೆಗೆ ಸಂರಚನೆಗೊಳಿಸಿದ್ದಾರೆ. ಅಹಿಂಸೆಯ ಪ್ರತಿಪಾದನೆಗೆ ಹೊರಟ ನಾಟಕದ ತಾತ್ವಿಕತೆ ಕೊನೆಗೆ ಮಾನಸಿಕ ಹಿಂಸೆಯಲ್ಲಿ ಆತ್ಮಾರ್ಪಣೆಯ ದುರಂತದಲ್ಲಿ ಮುಗಿಯುತ್ತದೆ. ಸಮಕಾಲೀನ ಸಾಮಾಜಿಕ ವ್ಯವಸ್ಥೆಯ ಕೌಟುಂಬಿಕ ಜೀವನದಲ್ಲಿ ನಿತ್ಯ ನಡೆಯುವ ಅತ್ತೆ -ಸೊಸೆ – ಮಗ ಇವರ ನಡುವೆ ನಡೆಯುವ ಕಲಹ, ಪ್ರೇಮ ಹಾಗೂ ಮಾನವೀಯ ಸಂಬಂಧದ ನೆಲೆಗಳನ್ನು ಈ ನಾಟಕದಲ್ಲಿ ಕಾಣುತ್ತೇವೆ. ರಾಜಮಾತೆ ಭಾರತೀಯ ಸಮಾಜದ ಅತ್ತೆಯನ್ನು ಬಿಂಬಿಸಿದರೆ ರಾಣಿ ತನ್ನ ಸ್ತ್ರೀ ಸ್ವಾತಂತ್ರ್ಯ ಹಾಗೂ ಮುಕ್ತ ಪ್ರಣಯವನ್ನು ಸೊಸೆಯಾಗಿ ಬಿಂಬಿಸುತ್ತಾಳೆ. ಅವ್ವ ಮತ್ತು ಹೆಂಡತಿಯ ನಡುವೆ ಸಿಕ್ಕಿಹಾಕಿಕೊಂಡ ರಾಜ ಇಲ್ಲಿ ಅಸಹಾಯಕತೆಯನ್ನು ಅನುಭವಿಸುವುದನು ನೋಡುತ್ತೇವೆ. ಕೊನೆಗೆ ವ್ಯವಸ್ಥೆ ಸೊಸೆಯನ್ನೇ ಆತ್ಮಹತ್ಯೆಗೆ ಅಥವಾ ಆತ್ಮಾರ್ಪಣೆ ಬಲಿತೆಗೆದುಕೊಳ್ಳುತ್ತದೆ.