ಉತ್ತರ ಕನ್ನಡ ಜಿಲ್ಲೆಯವರಾದ ಮತ್ತು ಕನ್ನಡ ಪ್ರಾಧ್ಯಾಪಕರಾದ ಎಲ್.ಆರ್. ಹೆಗಡೆ ಅವರು ಜನಪದ ಕ್ಷೇತ್ರದಲ್ಲಿ ಅವಿರತವಾಗಿ ಕೆಲಸ ಮಾಡಿದವರು. ಗಿರಿಜನರ, ಮುಕರಿ ಹಾಗೂ ಹೊಲೆಯರ ಕಥೆಗಳನ್ನು, ಕಥನ ಗೀತೆಗಳನ್ನು ಸಂಗ್ರಹಿಸಿ ಪ್ರಕಟಿಸುವುದರ ಮೂಲಕ ಜನಪದ ಸಾಹಿತ್ಯ ಕ್ಷೇತ್ರಕ್ಕೆ ಗಿರಿಜನ ಪ್ರಪಂಚದ ಜನರ ಅಪರೂಪದ ಸಾಂಸ್ಕೃತಿಕ ಬದುಕಿನ ಲೋಕದೃಷ್ಟಿಯನ್ನು ಅನಾವರಣ ಮಾಡಿದವರು. ಈ ದೃಷ್ಟಿಯಿಂದ ಎಂಬತ್ತರ ದಶಕದಲ್ಲಿ ಅವರು ಸಂಪಾದಿಸಿದ ‘ಮುಕರಿ ಮತ್ತು ಹೊಲೆಯರ ಪದಗಳು’ ಒಂದು ವಿಶೇಷವಾದ ಜನಪದ ಸಂಕಲನವಾಗಿದೆ. ಇದರಲ್ಲಿರುವ ‘ಯಲುರಾಜನ ಮಡದಿ’ ಎಂಬುದು ಒಂದು ಅಪರೂಪದ ‘ಕಥನಗೀತೆ’ಯಾಗಿದೆ. ಜನ್ನನ ‘ಯಶೋಧರ ಚರಿತೆ’ ಕಾವ್ಯದಲ್ಲಿ ಅಮೃತಮತಿ ಮಾವುತನ ಸಂಗೀತಕ್ಕೆ ಮನಸೋತು ತನ್ನನ್ನು ಥಟ್ಟನೆ ಅರ್ಪಿಸಿಕೊಂಡು ಬಿಟ್ಟರೆ, ಈ ‘ಯಲುರಾಜನ ಮಡದಿ’ಯ ಕಥನಗೀತೆಯಲ್ಲಿ ಈ ರಾಜನ ಮಡದಿ ಒಬ್ಬ ಕಲಾವಿದನ ಚಿತ್ರಕ್ಕೆ ಮನಸೋತು ಅವನ ಹಿಂದೆ ತನ್ನ ಸಹೋದರೆ ಬೇಡ ಅಂಥ ಹೇಳಿದರೂ ಜಾತಿ, ಅಂತಸ್ತು ಎಲ್ಲವನ್ನೂ ನಿರಕರಿಸಿ ಅವನ ಹಿಂದೆ ಹೋಗುವುದನ್ನು ಕಾಣುತ್ತೇವೆ.

ಈ ‘ಕಥನಗೀತೆ’ಯ ಕಥನ ಹೀಗಿದೆ  : ಅಕ್ಕತಂಗಿಯರಿಬ್ಬರು ನೀರು ತರಲು ಹೊಳೆಗೆ ಹೋಗಿರುತ್ತಾರೆ. ಹೊಳೆದಂಡೆಯ ಮೇಲೆ ಕಲಾವಿದನೊಬ್ಬ ಒಂದು ಚಿತ್ರವನ್ನು ನೆಲದ ಮೇಲೆಯೇ ಬಿಡಿಸಿರುತ್ತಾನೆ. ತಂಗಿ ಅದನ್ನು ಕಂಡು ಆ ಕಲಾವಿದನಲ್ಲಿ ಮೋಹಗೊಳ್ಳುತ್ತಾಳೆ. ಆಗ ಅಕ್ಕ ಆಕೆಗೆ ‘ಆತ ಹೊಲೆಯ, ಅವನ ಜೊತೆ ಹೋಗಬಾರದು’ ಅಂದಾಗ ತಂಗಿ ‘ಅವನು ಹೊಲೆಯನಾದರೇನು? ಅವನ ಸಂಗಡ ನಾನು ಹೋಗುತ್ತೇನೆ’ ಎನ್ನುತ್ತಾಳೆ. ಆಗ ಅಕ್ಕ ‘ನೀನು ಹೊಲೆಯನ ಜೊತೆ ಹೋದರ ಜಾತಿ ಬಿಡಬೇಕು’ ಎನ್ನುತ್ತಾಳೆ. ಅದಕ್ಕೆ ತಂಗಿ

’’ಜಾತಿ ಹೋದರೇನು? ಎಂದು ಪ್ರಶ್ನಿಸುತ್ತಾಳೆ. ಆಗ ಅಕ್ಕ ’ನಿನ್ನ ಗಂಡನು ದಂಡಿಗೆ ಹೋಗಿದ್ದಾನೆ. ಬಂದ ಮೇಲೆ ಆತನಿಗೆ ಇದು ಗೊತ್ತಾಗಿ ನಿನಗೆ ದಂಡಿಸುತ್ತಾನೆ ಎನ್ನುತ್ತಾಳೆ. ಆಗ ತಂಗಿ, ’ಹೊಡೆದ್ರೂ ಚಿಂತೆಯಿಲ್ಲ, ಬೈದರೂ ಚಿಂತೆಯಿಲ್ಲ. ನಾನು ಮಾತ್ರ ಹೊಲೆಯನ ಸಂಗಡ ಹೋಗುತ್ತೇನೆ’ ಎಂದು ತನ್ನ ಅಚಲವಾದ ನಿರ್ಧಾರವನ್ನು ಹೇಳುತ್ತಾಳೆ. ಆಗ ಆ ಕಲಾವಿದ ಅಶ್ವತ್ಥ ಕಟ್ಟೆಯ ಮೇಲೆ ಕೂತು ಕೊಳಲನ್ನು ಊದುತ್ತಾ ನೃತ್ಯ ಮಾಡುತ್ತಿರುತ್ತಾನೆ. ಆಗ ಆಕೆ ಹೀಗೆ ತಂಗಿ ಅಕ್ಕನ ಹಿತವಚನವನ್ನೂ ಲೆಕ್ಕಿಸದೆ ಆ ಕಲಾವಿದ ಹೊಲೆಯನ ಜೊತೆ ’ನಿಮ್ಮ ಸತಿ ನಾನೀವ ನೀವೇ ನನ್ನ ಸ್ವಾಮಿ’ ಎಂದು ಹೇಳಿ ಹೊರಟು ಹೋಗುತ್ತಾಳೆ. ಆತನೂ ಅವಳನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ.

ಯುದ್ಧಕ್ಕೆ ಹೋದ ಗಂಡನಿಗೆ ತನ್ನ ಹೆಂಡತಿಯ ವರ್ತನೆಯ ಸ್ವಪ್ನ ಬಿದ್ದು ಕೂಡಲೇ ಕುದುರೆ ಏರಿ ಊರಿಗೆ ಬರುತ್ತಾನೆ. ಮನೆಗೆ  ಬಂದಾಗ ತನ್ನ ಹೆಂಡತಿ ತನಗೆ ಕಾಣದೆ ಇದ್ದಾಗ ತನ್ನ ಅತ್ತಿಗೆಯನ್ನು ’ನಿನ್ನ ತಂಗಿ ಕಾಣ್ತ ಇಲ್ಲವಲ್ಲ, ನೀನೇ ನನಗೆ ಆರತಿ ತರ‍್ತಾ ಇದ್ದಿ, ನೀರು ತರ‍್ತಾ ಇದಿ, ಎಲ್ಲಿಗೆ ಹೋಯ್ತು? ಎಂದು ಸಂಯಮದಿಂದಲೇ ಪ್ರಶ್ನಿಸುತ್ತಾನೆ. ಆಗ ಅವನ ಅತ್ತಿಗೆ, ’ಕೇಳಲೊ ಭಾವಯ್ಯಾ, ನಿನ ಮಡದೀಯಾ ಸುದ್ದೀಯ’ ಎನ್ನುತ್ತಾ ತನ್ನ ತಂಗಿ ನಿನ್ನ ಅತ್ತೆ ಮನೆಗೆ ಹೋಗಿದ್ದಾಳೆಂದು ಸುಳ್ಳು ಹೇಳುತ್ತಾಳೆ. ಆಗ ಆತ ತನ್ನ ಕುದುರೆ ಏರಿ ’ಮುತ್ತಿನ ಕಣ್ಣೀರು’ ಹಾಕುತ್ತಾ ತನ್ನ ಅತ್ತೆಯ ಮನೆಗೆ ತೆರಳುವನು. ಈ ಯಲುರಾಜ ಅಲ್ಲಿಂದ ತನ್ನ ಅತ್ತೆಯ ಮನೆಗೆ ಹೋಗಿ ಅವಳನ್ನು ವಿಚಾರಿಸುವನು. ಆಗ ಆಕೆ ತನ್ನ ಮಗಳು ಹೊಲೆಯನ ಜೊತೆ ಹೋದ ನಿಜ ಸಂಗತಿಯನ್ನು ತನ್ನ ಅಳಿಯನಿಗೆ ವಿವರವಾಗಿ ಹೇಳುವಳು.

ಅಲ್ಲಿಂದ ಯಲುರಾಜ ಆ ಹೊಲೆಯನ ಮನೆಯ ದಾರಿ ಹಿಡಿದು ಹೋಗುವನು. ಆತ ಹೋಗಿ ಆ ಹೊಲೆಯನ್ನು ’ನನಗೆ ನಿನ್ನ ಮನೆಯ ಅಡಿಗೆ ಬೇಡ, ಲಡ್ಡು ಬೇಡ; ನಾನು ನಿನ್ನನ್ನು ಬೈಯಲ್ಲ, ಹೊಡೆಯಲ್ಲ, ಆದರೆ ನೀನು ನನ್ನ ಹೆಂಡತಿಯ ಜೋಪಾನ ಮಾಡಬೇಕು. ಆದರೆ ಆಕೆ ಯಾವತ್ತು ಸಾಯುತ್ತಾಳೋ, ಅವತ್ತು ನೀನು ಆಕೆಯ ಬೆಂಕಿಗೆ ಹಾಕಿ ಸುಡಬೇಡ, ಬದಲಾಗಿ ಆಕೆಯ ಮಣ್ಣಿಗೆ ಹಾಕು ಹೂತು ಹಾಕಬೇಕು. ಅನಂತರ ನಲವತ್ತೊಂದು ದಿನಕ್ಕೆ ಅವಳನ್ನು ಮಣ್ಣಿನಿಂದ ಹೊರ ತೆಗೆದು ಅವಳ ತಲೆಯನ್ನು ನನ್ನ ಕೈಗೆ ತಂದುಕೊಡಬೇಕು’ ಎಂದು ಯಾವ ಕ್ರೋಧವನ್ನೂ ತಾಳದೆ ಕೇಳಿಕೊಳ್ಳುತ್ತಾನೆ. ಅದಕ್ಕೆ ಆ ಹೊಲೆಯ ಒಪ್ಪಿ ಅದರಂತೆ ಆಕೆ ಕಾಲಾಂತರದಲ್ಲಿ ತೀರಿಕೊಂಡಾಗ ಆಕೆಯ ತಲೆಯನ್ನು ರಾಜನಿಗೆ ತೆಗೆದುಕೊಂಡು ಹೋಗಿ ಒಪ್ಪಿಸುತ್ತಾನೆ.

ಕಲಾವಿದ ಹೊಲೆಯ ತಂದುಕೊಟ್ಟ ಆಕೆಯ ತಲೆಯನ್ನು ರಾಜ ಈಸಿಕೊಂಡು ತನ್ನ ಅರಮನೆಯ  ಏಳು ಉಪ್ಪರಿಗೆಯಲ್ಲಿ ಏಕಾಂಗಿ ಕೂತು ಅದನ್ನು ಓದತೊಡಗಿದಾಗ ಆ  ತಲೆಯಲ್ಲಿ ’ಅರಸಾಗಿ ಹುಟ್ಟಿ, ರಾಜನಿಗೆ ಮದುವೆಯಾಗಿ, ರಾಜನಾಗಿ ಮೂರುವರ್ಷ ರಾಜ್ಯ ಆಳಿದ ಮೇಲೆ, ನಾಲ್ಕನೇ ವರ್ಷಕ್ಕೆ ದಂಡಿಗೆ ಹೋಗಬೇಕು, ನಾಲ್ಕನೇ ವರ್ಷಕ್ಕೆ ಹೊಲಿಯನ ಸಂಗಡ ಹೋಗಬೇಕು?’ ಎಂದು ಅವಳ ಹಣೆಯಲ್ಲಿ ಬರೆದಿರುತ್ತದೆ. ಓದಿ ’ಮುತ್ತಿನ ಕಣ್ಣೀರು’ ಹಾಕಿಕೊಂದು ಬಳಿಕ ಆ ತಲೆಯನ್ನು ಹಿಡಿದುಕೊಂಡು ಊರಿನ ಆಚಾರಿಯ ಮನೆಗೆ ಹೋಗುತ್ತಾನೆ.

ಊರಿನ ಆಚಾರಿಯ ಮನೆಗೆ ಹೋದ ಯಲುರಾಜ ತನಗೊಂದು ’ಗಂಧದ ಪೆಟ್ಟಿಗೆ”ಯನ್ನು ಮಾಡಿಕೊಡು ಎಂದು ಕೇಳಿಕೊಳ್ಳುತ್ತಾನೆ. ಅದನ್ನು ಮಾಡಿದ ಆಚಾರಿಗೆ ಅದಕ್ಕೆ ಹಣಕೊಟ್ಟು ರಾಜ ಅದನ್ನು ತನ್ನ ಅರಮನೆಗೆ ತೆಗೆದುಕೊಂಡು ಬರುತ್ತಾನೆ. ಆ ಪೆಟ್ಟಿಗೆಯನ್ನು ತನ್ನ ಅರಮನೆಯ ಏಳು ಉಪ್ಪರಿಗೆಯಲ್ಲಿಟ್ಟು ಬಳಿಕ ತನ್ನ ಅರಮನೆಯ ಉದ್ಯಾನದ ಸಂಪಿಗೆ ಬನದಿಂದ ಸಂಪಿಗೆ ಹೂವು, ಮಲ್ಲಿಗೆ ಬನದಿಂದ ಮಲ್ಲಿಗೆ ಹೂವು ಬಿಡಿಸಿ ತಂದು ದಂಡೆ ಕಟ್ಟಿಟ್ಟು, ಆಮೇಲೆ ತನ್ನ ಅರಮನೆಯಿಂದ ಕೊಬರಿಕಾಯಿ ತೆಗೆದುಕೊಂಡು ಊರಿನ ಗಾಣಿಗನ ಮನೆಗೆ ಹೋಗುತ್ತಾನೆ.

ಗಾಣಿಗನ ಮನೆಗೆ ಬಂದ ಯಲುರಾಜ ತಾನು ತಂದ ಕೊಬರಿಯಿಂದ ಗಾಣದಲ್ಲಿ ಅರೆದು ಎಣ್ಣೆ ತಗೊಂಡು ಎಂದು ಕೇಳಿಕೊಳ್ಳುತ್ತಾನೆ. ಆ ಗಾಣಿಗ ತನ್ನ ಗಾಣದಿಂದ ಕೊಬ್ಬರಿ ಎಣ್ಣೆ ತೆಗೆದು ರಾಜನಿಗೆ ಕೊಟ್ಟು ಕಳಿಸುತ್ತಾನೆ. ರಾಜ ಆತನಿಗೆ ಹಣಕೊಟ್ಟು ಎಣ್ಣೆ ಪಡೆದು ಹಿಂತಿರುಗಿ ಅರಮನೆ ಬರುವಾಗ ಚಿನ್ನದ ಅಂಗಡಿಗೆ ಹೋಗಿ ಹಣಕೊಟ್ಟು ಕೊರಳಿಗೆ ಹಾಕುವ ಚಿನ್ನದ ವಡವೆಯನ್ನು ಕೊಂಡುಕೊಳ್ಳುತ್ತಾನೆ. ಅಲ್ಲಿಂದ ಬಟ್ಟೆಯ ಅಂಗಡಿಗೆ ಹೋಗಿ ಸೀರೆ ಕೊಂಡುಕೊಳ್ಳುತ್ತಾನೆ. ಅಲ್ಲಿಂದ ಗುಡಿಗಾರನ ಮನೆಗೆ ಹೋಗಿ ಅಲ್ಲಿ ಅವನಿಂದ ಒಂದು ’ಹೆಣ್ಣು ಬೊಂಬೆ’ಯನ್ನು ಗೇಯಿಸಿಕೊಳ್ಳುತ್ತಾನೆ. ರಾಜ ಅವನಿಗೆ ಅದಕ್ಕೆ ಹಣತೆತ್ತು ಅದನ್ನು ತೆಗೆದುಕೊಂಡು ಅರಮನೆಗೆ ಹಿಂತಿರುಗಿ ಬರುವಾಗ  ಅಲ್ಲಿಂದ ಕುರುಬರ ಮನೆಗೆ ಹೋಗುತ್ತಾನೆ. ಕುರುಬನಿಂದ ಆ ತಲೆಗೆ ಕೂದಲಿನಿಂದ ಜಡೆಯನ್ನು (ಚವಲ) ಮಾಡಿಸಿಕೊಂಡು ಅವನಿಗೂ ಹಣಕೊಟ್ಟು ಬಳಿಕ ಅರಮನೆಗೆ ಮರಳುತ್ತಾನೆ.

ಅರಮನೆಗೆ ಬಂದ ರಾಜ ಆ ತಲೆ ಹುರಿಯನ್ನು ಚೆನ್ನಾಗಿ ಎಣ್ಣೆ ಹಾಕಿ ನಯಗೊಳಿಸಿ ಬಳಿಕ ಅದಕ್ಕೆ ಮಲ್ಲಿಗೆ ಹೂವನ್ನು ಮುಡಿಸಿ, ಕೊರಳಿಗೆ ಸಂಪಿಗೆ ಹಾರ ಹಾಕಿ, ತಾನು ತಂದ ತಲೆಯಿಲ್ಲದ ಗೊಂಬೆಯನ್ನು ಆಕೆಯ ತಲೆಗೆ ಸೇರಿಸಿ, ಸೀರೆಯನ್ನು ಆ ಗೊಂಬೆಗೆ ಉಡಿಸಿ, ಕುಂಕುಮ ಹಚ್ಚಿ, ಗಂಧದ ಎಣ್ಣೆ ಚಿಮುಕಿಸಿ ಅದನ್ನು ಆ ಗಂಧದ ಪೆಟ್ಟಿಗೆಯ ಮೇಲೆ ಇಟ್ಟು, ಅದರ ಸುತ್ತ ಪ್ರದಕ್ಷಿಣೆ ಹಾಕುತ್ತಾನೆ. ಆತ ಹಿಗೆ ಅದನ್ನು ಪ್ರತಿದಿನ ಪ್ರದಕ್ಷಿಣೆ ಹಾಕಿ, ಅದರ ಮುಂದೆ ’ಮುತ್ತಿನ ಕಣ್ಣೀರು’ ಹಾಕುತ್ತಾ ’ ’ನೀನು ಮಡಿದು ಹೋದೆಯಾ’ ಎಂದು ಕೂರುತ್ತಾನೆ.’ ಒಂದು ದಿನ ಅವನೂ ಮಡಿದು ಹೋಗುತ್ತಾನೆ.

ಇದು ‘ಯಲುರಾಜನ ಮಡದಿ’ ಕಥನಗೀತೆಯ ಕಥೆ. ಇಲ್ಲಿ ‘ಮಡದಿ’ ಎಂದರೆ ‘ಸಾವು’ ಎಂದೂ ಅರ್ಥವಿದೆ. ಯಲುರಾಜನ ಮಡದಿ ಮಡಿದರೂ ಆತ ಮಡಿಯದೆ ಬದುಕಿದ್ದರೂ ಅವನು ಅನುಭವಿಸುವ ಮಾನಸಿಕ ವೇದನೆ ಇಲ್ಲಿ ಎಷ್ಟು ತೀವ್ರವಾದದ್ದು ಎಂಬುದು ಅರ್ಥವಾಗುತ್ತದೆ. ಅವನು ಆಕೆಯ ಜೊತೆ ಮೂರುವರ್ಷ ಇದ್ದು ಆಮೇಲೆ ಯುದ್ದಕ್ಕೆ ಹೋಗಬೇಕಾಗಿ ಬಂದುದು ವಿಧಿಯೇ ಕಾರಣ ಎಂಬುದು ಈ ಗೀತೆಯಿಂದ ತಿಳಿದುಬರುತ್ತದೆ. ‘ಯಶೋಧರ ಚರಿತೆ’ಯಲ್ಲಿ ಬರುವ ವಿಧಿಯ ಕೈವಾಡದಂತೆ ಇದು. ಆಮೇಲೆ ಆಕೆಗೆ ಕಾಮೋದ್ರೇಕವಾಗುತ್ತದೆ.

ಈ ಗೀತೆಯ ವಸ್ತುಕಥನದಿಂದ ಇದೊಂದು ರಾಜತ್ವದ, ಪ್ರಭುತ್ವದ ಸಮಾಜವಾಗಿದೆ ಎನ್ನಬಹುದು. ಈ ಸಮಾಜದಲ್ಲಿ ಹೊಲೆಯ, ಕುರುಬ, ಎಂಬ ಜಾತಿಗಳು, ವೃತ್ತಿ  – ಕಸುಬುಗಳು ಕಾಣಿಸಿಕೊಳ್ಳುತ್ತವೆ. ಇಲ್ಲಿ ರಾಜ ವೃತ್ತಿಗಳನ್ನು ಗೌರವಿಸುವ ಮತ್ತು ಅದಕ್ಕೆ ತಕ್ಕ ಬೆಲೆ ಕೊಡುವ ಪದ್ಧತಿ ಇರುವುದನ್ನು ನೋಡುತ್ತೇವೆ. ಆದರೆ ಈ ಕಥೆಯಲ್ಲಿ ‘ಯಲುರಾಜ’ ಎಂಬ ಹೆಸರು ರಾಜನಿಗೆ ಇರುವುದನ್ನು ಬಿಟ್ಟರೆ ಬೇರೆ ಯಾರಿಗೂ ಹೆಸರುಗಳಿಲ್ಲ. ಅಕ್ಕ ತಂಗಿ, ಅತ್ತಿಗೆ ಎಂಬ ಭಾವಸಂಬಂಧದ ಸೂಚಗಳು, ಆಚಾರಿ ಅಥವಾ ಅಕ್ಕಸಾಲಿಗ, ಗಾಣಿಗ, ಗುಡಿಗಾರ, ವ್ಯಾಪಾರಿ ಮುಂತಾದ ವೃತ್ತಿ ಸೂಚಕಗಳು ಕಾಣಿಸಿಕೊಳ್ಳುವುದನ್ನು ಕಾಣುತ್ತೇವೆ. ಈ ದೃಷ್ಟಿಯಿಂದ ಇದೊಂದು ಮಧ್ಯಕಾಲೀನ ಸಮಾಜಕ್ಕೆ ಸೇರಿದ ಒಂದು ಕಥೆಯಾಗಿದೆ ಎನ್ನಬಹುದಾಗಿದೆ.

ಕಲಾಕೃತಿಯ ಸೊಬಗನ್ನು ಸೌಂದರ್ಯವನ್ನು ನೋಡಿ ಯಲುರಾಜನ ಮಡದಿ ಬಡ ಕಲಾವಿದ ಹೊಲೆಯನನ್ನೊಲಿಯುವ ಆಶಯವು ಇಲ್ಲಿ ನವೀನವಾಗಿದೆ. ಸಂಗೀತ ಕೇಳಿ, ವಾದನ ನೈಪುಣ್ಯಕ್ಕೆ ಮರುಳಾಗಿ, ಅನ್ಯ ಪುರುಷರನ್ನು ಒಲಿದ ಕಾಮಿನಿಯರ ಕಥೆಗಳು ಸಾಹಿತ್ಯದಲ್ಲಿ ಬರುತ್ತವೆ. ಆದರೆ ಇಲ್ಲಿಯ ಕಥೆ ಅವುಗಳಿಗಿಂತ ಭಿನ್ನವಾಗಿದೆ. ಎಲ್.ಆರ್. ಹೆಗಡೆ ಅವರು ಇದರ ಬಗ್ಗೆ ಹೇಳುವಂತೆ, “ಮೊದಲೇ ಜಾರುವ ಪ್ರವೃತ್ತಿಯನ್ನು ಬಹುಶಃ ಹೊಂದಿದ್ದ ಆ ನಾರಿಗೆ ಅದು ಉದ್ದೀಪನ ವಿಭಾವವಾಗುತ್ತದೆ. ಈ ವಿಷಮತಿಯಾದ ಹೆಣ್ಣು ಜನ್ನನ ಅಮೃತಮತಿಯ ನೆನಪನ್ನು ತರುತ್ತದೆ. ಹಾಗೆಯೇ ಯಲುರಾಜನ ತಿಳುವಳಿಕೆಯೂ, ವಿವೇಕವೂ ಯಶೋಧರ ರಾಜನನ್ನು ನೆನಪಿಗೆ ತರುತ್ತದೆ. ಇಲ್ಲಿ ಯಲುರಾಜನ ಮಡದಿ ಮೂರು ವರ್ಷಗಳ ಕಾಲ ಪುರುಷನ ಸುಖವನ್ನು ಪಡೆಯದೆ ಇದ್ದಾಗ ಅದಕ್ಕಾಗಿ ಆಕೆ ಉತ್ಕಟವಾದ ಆಕಾಂಕ್ಷೆಯನ್ನು ಹೊಮ್ದಿ, ಕಾದಿರಲಾರದ ಕಾಮದ ಉದ್ವೇಗವನ್ನು ಹೊಂದಿದ್ದಾಳೆ. ಇದು ಈ ಗೀತೆಯಲ್ಲಿ ಕಲಾತ್ಮಕವಾಗಿ ಮೂಡಿಬಂದಿದೆ. ಇಲ್ಲಿ ಮಡದಿಯ ಮೇಲಿನ ಯಲುರಾಜನ ಅನುಕಂಪವು ಅವಳ ಮೇಲಿನ ದುರ್ದಮ್ಯವಾದ ಪ್ರೇಮದ ಮೂಲಕ ಅಸಾಧಾರಣವಾಗಿ ಕಾಣುತ್ತದೆ” (ಮುಕರಿ ಮತ್ತು ಹೊಲೆಯರ ಪದಗಳು, ಪು ೧೧) ಎಂಬ ಮಾತನ್ನು ಈ ಸಂದರ್ಭದಲ್ಲಿ ಒಪ್ಪಿಕೊಳ್ಳಬಹುದಾಗಿದೆ.

ಯಲುರಾಜ ಇಲ್ಲಿ ಹಿಂಸೆಗೆ ಇಳಿಯುವುದಿಲ್ಲ. ಆತ ಮನಸ್ಸು ಮಾಡಿದ್ದರೆ ಆ ಹೊಲೆಯನಿಗೆ ಶಿಕ್ಷೆ ಕೊಡಬಹುದಿತ್ತು. ಕೊಲ್ಲಿಸಬಹುದಿತ್ತು. ಆದರೆ ಆತ ತನ್ನ ಹೆಂಡತಿ ಸತ್ತ ಮೇಲೆ ಅವಳ ತಲೆಯನ್ನು ಪಡೆದು ಅದಕ್ಕೆ ಮತ್ತು ಸ್ತ್ರೀ ಸ್ವರೂಪವನ್ನು ಪುನಾರಚಿಸಿ, ಅದನ್ನು ಒಂದು ದೈವದ ನೆಲೆಗೆ ಏರಿಸಿ, ಅದರ ಸುತ್ತಾ ನಿತ್ಯ ಪ್ರದಕ್ಷಿಣೆ ಹಾಕುತ್ತಾ, ಅಳುತ್ತಾ ಮುತ್ತಿನ ಕಣ್ಣೀರು ಸುರಿಸುವ ಚಿತ್ರ ಅವನ ಅಸಹಾಯಕತೆಗೆ ಬದಲಾಗಿ ಅವನ ಅಹಿಂಸೆಯ ಮಾರ್ಗಕ್ಕೆ ಹಿಡಿದ ಕನ್ನಡಿಯಾಗಿದೆ. ಜನ್ನನ ‘ಯಶೋಧರ ಚರಿತೆ’ಯಲ್ಲಿ ಯಶೋಧರ ರಾಜ ತನ್ನ ಹೆಂಡತಿಯ ಅನೈತಿಕ ಸಂಬಂಧವನ್ನು ಕಂಡಾಗ ಅವನು ಅದನ್ನು ವಿರೋಧಿಸುವ ಅಥವಾ ಗೌರವಿಸುವ ನೆಲೆಗೂ ಹೋಗುವುದಿಲ್ಲ. ಆದರೆ ಅಹಿಂಸೆ ಮಾಡಬಾರದೆಂದು ತನ್ನ ಜೈನ ಧರ್ಮವನ್ನು ಎಚ್ಚರಿಸಿದರೂ ಆ ಹಿಂಸೆಯಲ್ಲಿಯೇ ಆತ ಹಿಂಸೆಯನ್ನು ಅನುಭವಿಸುತ್ತಾನೆ. ಮಾಸ್ತಿಯವರ ‘ವೆಂಕಟಿಗನ ಹೆಂಡತಿ’ ಎಂಬ ಒಂದು ಕಥೆಯಿದೆ. ಆ ಕಥೆಯಲ್ಲಿ ವೆಂಕಟಿಗನ ಹೆಂಡತಿ ಊರಿನ ಗೌಡನ ಜೊತೆ ಓಡಿಹೋಗುತ್ತಾಳೆ. ಅವನಿಂದ ಮಗುವನ್ನು ಪಡೆಯುತ್ತಾಳೆ ಆದರೆ ವೆಂಕಟಿಗ ಇದರಿಂದ ಮಾನಸಿಕವಾದ ಹಿಂಸೆಯನ್ನು ಅನುಭವಿಸಿದರೂ ತನ್ನ ಹೆಂಡತಿಯ ಮೇಲಿನ ಪ್ರೀ, ವ್ಯಾಮೋಹವನ್ನು ಕಳೆದುಕೊಳ್ಳುವುದಿಲ್ಲ. ಒಂದು ದಿನ ಆತನ ಹೆಂಡತಿ ಆ ಗೌಡನನ್ನು ಬಿಟ್ಟು ಆತನ ಬಳಿಗೆ ಮರಳಿ ಬಂದಾಗ ಅವಳನ್ನು ಮಾತ್ರ ಸ್ವೀಕರಿಸುವುದಷ್ಟೇ ಅಲ್ಲದೆ, ಆ ಮಗುವನ್ನೂ ಆತ ಪ್ರೀತಿಯಿಂದ ತನಗೆ ಏನೂ ಆಗೇ ಇಲ್ಲವೆಂಬಂತೆ ಮುಗ್ಧವಾಗಿ, ಸ್ವಚ್ಛಂದವಾಗಿ ಸ್ವೀಕರಿಸುತ್ತಾನೆ. ಆಗ ಆ ಸಂದರ್ಭದಲ್ಲಿ ತನ್ನ ಹೆಂಡತಿಯ ಶೀಲದ ಬಗ್ಗೆ, ಅನೈತಿಕ ಸಂಬಂಧದ ಬಗ್ಗೆ ಯಾವುದೇ ಅನುಮಾನ, ಅಸಹ್ಯವನ್ನು ಪಡಲಾರ. ಇದು ಒಂದು ರೀತಿಯಲ್ಲಿ ವೆಂಕಟಿಅನ ಅಸಹಾಯಕತೆ ಅಥವಾ ಅವನ ಸಮಾಜದ ಒಪ್ಪಿತ ಮೌಲ್ಯವೆಂದು ಅಂದುಕೊಂಡರೂ ಇಲ್ಲಿ ಎಲ್ಲೂ ಹಿಂಸೆಗೆ ಅವಕಾಶ ಇಲ್ಲ. ಮೊದಲೆರಡು ಕಥೆಗಳು ಘಟಿಸುವುದು ರಾಜಪ್ರಭುತ್ವದ ಸಮಾಜದಲ್ಲಿ ; ಕೊನೆಯದು ನಡೆಯುವುದು ಜಮೀನುದಾರಿ ನಿಷ್ಠ ಸಮಾಜದಲ್ಲಿ ; ಒಂದು ಪ್ರೌಢ ಕಾವ್ಯ ಪರಂಪರೆಗೆ ಸೇರಿದ್ದರೆ, ಇನ್ನೊಂದು ಜಾನಪದ ಪರಂಪರೆಗೆ ಸೇರಿದ್ದು, ಕೊನೆಯದು ಆಧುನಿಕ ಸಮಾಜಕ್ಕೆ ಸೇರಿದ ಕಥೆಯಾಗಿದೆ. ಆದರೆ ಈ ಮೂರೂ ಕಥೆಗಳಲ್ಲಿ ನಿರಂತರವಾಗಿ ಹರಿಯುತ್ತಿರುವ ದ್ರವ್ಯವೆಂದರೆ ಅಭಿಜಾತ ಪರಂಪರೆ; ಅಹಿಂಸೆ ಮತ್ತು ಮಾನವ ಸ್ವಭಾವದ ಸಂಬಂಧಗಳು ; ಇದು ಸರ್ವಕಾಲಿಕವಾದ ಮತ್ತು ವಿಶ್ವಾತ್ಮಕವಾದ ಮೌಲ್ಯಗಳು.