ಪುರುದೇವಾದಿಗಳೊಲಿಸಿದ
ಪರಮಶ್ರೀವಧುವನೊಲಿಸಿಯುಂ ಪರವನಿತಾ
ನಿರಪೇಕ್ಷಕನೆನಿಸಿದ ದೇ
ವರ ದೇವಂ ಕುಡುಗೆ ಸುವ್ರತಂ ಸುವ್ರತಮಂ                           ೧
ಜಿನ ಸಿದ್ಧ ಸೂರಿ ದೇಶಿಕ
ಮುನಿಗಳ ಚರಣಂಗಳೆಂಬ ಸರಸಿಜವನಮೀ
ಮನಮೆಂಬ ತುಂಬಿಯೆಱಕಮ
ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ                            ೨

ಎನಗೆ ನಿಜಮಹಿಮೆಯಂ ನೆ
ಟ್ಟನೆ ಮಾಡುಗೆ ಕೂರ್ತು ವೀರಸೇನಾಚಾರ್ಯರ್
ಜಿನಸೇನಾಚಾರ್ಯರ್ ಸಿಂ
ಹನಂದಿಗಳ್ ಸಂದ ಕೊಂಡಕುಂದಾಚಾರ್ಯರ್                        ೩

ಗಣಧರರೋ ಸ್ವಾಮಿಗಳೋ
ಗುಣದಿಂದಾಮಱೆಯೆಮೆಱಗಿ ಶುಭ್ರರೆಮೆಮ್ಮಂ
ತಣಿಪುಗೆ ಸಮಂತಭದ್ರರ
ಗುಣಭದ್ರರ ಪೂಜ್ಯಪಾದರಾಖ್ಯಾನಂಗಳ್                               ೪

ಕ್ಷಿತಿಯೊಳ್ ಸಂಸ್ಕೃತದಿಂ ಪ್ರಾ
ಕೃತದಿಂ ಕನ್ನಡದಿನಾದ್ಯರಾರ್ ಈ ಕೃತಿಯಂ
ಕೃತಿಮಾಡಿದರವರ್ಗಳ ಸ
ನ್ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್                         ೫

ನಾಂದಿಯಿನನಂತರಂ ಕವಿ
ವೃಂದಾರಕವಾಸವಂಗೆ ಕವಿ ಕಲ್ಪಲತಾ
ಮಂದಾರಂಗೇಂ ಪ್ರಸ್ತುತ
ಮೆಂದೊಡೆ ಬಲ್ಲಾಳದೇವನನ್ವಯ ಕಥನಂ                             ೬

ಭಾವಕನತಿರಸಿಕಂ ಸಂ
ಭಾವಿತನಭ್ಯಸ್ತಶಾಸ್ತ್ರನನ್ವಿತನೆನಿಪಾ
ದೇವಂಗೆ ವಿಷಯವಲ್ಲದೆ
ದೇವಾನಾಂಪ್ರಿಯರ್ಗೆ ವಿಷಯಮೇ ಸತ್ಕಾವ್ಯಂ                         ೭

ಕೇಳಲೊಡಂ ಶಬ್ಧಾರ್ಥಗು
ಣಾಳಂಕೃತಿ ರೀತಿ ಭಾವ ರಸವೃತ್ತಿಗಳು
ಮೇಳವಿಸಲ್ ಬಲ್ಲಂ ಬ
ಲ್ಲಾಳಂ ಸಾಹಿತ್ಯಕಮಳಮತ್ತಮರಾಳಂ                                ೮

ಸಳನೆಂಬ ಯಾದವಂ ಹೊ
ಯ್ಸಳನಾದಂ ಶಶಕಪುರದ ವಾಸಂತಿಕೆಯೊಳ್
ಮುಳಿದು ಪುಲಿ ಪಾಯ್ವುದುಂ ಹೊಯ್
ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ                     ೯

ವಿನಯಾದಿತ್ಯನೆ ಹೊಯ್ಸಳ
ಜನಪತಿಗಳ ಕೀರ್ತಿಪುಂಡರೀಕಿಣಿಗುನ್ಮೀ
ಲಯಮನೊಡರ್ಚಿದನೆಱೆಯಂ
ಗನೃಪಾಲನ ತಂದೆ ಬಿಟ್ಟಿದೇವಂಗಜ್ಜಂ                               ೧೦

ಅರಸಾದಂ ಸಂವರಣೆಗೆ
ಪರರಾಷ್ಟ್ರಂ ಗಂಗವಾಡಿ ತೊಂಬತ್ತಱುಸಾ
ಸಿರಮುಂ ಬ್ರಾಹ್ಮಣದತ್ತಿಗೆ
ವರಸಪ್ತಮ ಚಕ್ರವರ್ತಿ ವಿಷ್ಣುನೃಪಾಲಂ                              ೧೧

ಈವಿಱೆವ ಕಾವ ಗುನದಿಂ
ದಾ ವಿಷ್ಣುವಿನೊರೆಗೆ ದೊರೆಗೆವರಲುಱೆದ ಧರಿ
ತ್ರೀವಲ್ಲಭರೇನೇಚಲ
ದೇವಿಗಮೆಱೆಯಂಗ ನೃಪತಿಗಂ ಪುಟ್ಟಿದರೇ                         ೧೨

ಧೀರನಿಧಿ ಬಿಟ್ಟಿದೇವನೊ
ಳೋರಗೆ ಬಲ್ಲಾಳನಿಂತು ನರಸಿಂಹಸುತಂ
ಗಾರೆಣೆ ಗಗನಂ ಗಗನಾ
ಕಾರಮೆನಲ್ ತಮ್ಮೊಳೆಣೆ ಪಿತಾಮಹ ಪೌತ್ರರ್                     ೧೩

ಆಚಾಱೆಗೆ ಬಲ್ಲಾಳನ
ದಾಱಿಯ ದಾವಣಿಯ ತುರಗದಱ ಖುರಹತಿಯಿಂ
ಪೇಱೆ ಪೆಸರಿಲ್ಲದಂತಿರೆ
ಪಾಱಾದುವು ವೈರಿದುರ್ಗಮೆನಿತೊಳವನಿತುಂ                     ೧೪

ಆರೆಣೆಯೆಂಬೆನಱುಂಬದ
ಬೀರಮನೀ ಜಗಮನಾವಗಂ ಸುತ್ತಿದ ಮು
ನ್ನೀರೆಂಬುದು ಬಿರುದಿನ ಬೆ
ಳ್ಳಾರೆನಿಸಿದುದದಟರಾಯ ಕೋಳಾಹಳನಾ                         ೧೫

ಚಲದ ಬಲದೆಸಕದಿಂ ಸೆಲೆ
ನಿಲೆ ನಾಲ್ಕುಂ ದೆಸೆಯ ಮೂಱುವರೆ ರಾಯರ ಮುಂ
ದಲೆಯೊಳಗುಂದಲೆಯೆನೆ ನಿಂ
ದಲೆವುದು ತೇಜಂ ಪ್ರತಾಪಚಕ್ರೇಶ್ವರನಾ                           ೧೬

ನೆಗಱ್ದಿ ನೃಪರೊಳಗೆ ಮುಂ ಕವಿ
ತೆಗೆ ಮುಂಜಂ ಭೋಜನುತ್ಪಲಂ ಶ್ರೀಹರ್ಷಂ
ಮಿಗಿಲವರಿಂ ಬಲ್ಲಾಳಂ
ದ್ವಿಗುಣಂ ತ್ರೀಗುಣಂ ಚತುರ್ಗುಣಂ ಪಂಚಗುಣಂ                  ೧೭

ಆ ನೃಪನ ಸಭೆಯೊಳಖಿಳ ಕ
ಳಾ ನಿಪುಣರ ನಟ್ಟನಡುವೆ ಬೊಟ್ಟೆತ್ತಿ ಗೆಲಲ್
ತಾನೆ ಚತುರ್ವಿಧ ಪಂಡಿತ
ನೇನೆಂಬುದೊ ಸುಕವಿ ಭಾಳಲೋಚನನಳವಂ                    ೧೮

ನವ ವೈಯಾಕರಣಂ ತ
ರ್ಕವಿನೋದಂ ಭರತ ಸುರತ ಶಾಸ್ತ್ರಾವಿಳಾಸಂ
ಕವಿರಾಜಶೇಖರಂ ಯಾ
ದವರಾಜಚ್ಛತ್ರನಖಿಳ ಬುಧಜನಮಿತ್ರಂ                             ೧೯

ಚದುರ ನಿಧಿ ಚಲದ ನೆಲೆ ಚಾ
ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ
ಪದಮಾಯದಾಯುವಾರೆಂ
ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ                   ೨೦

ಕನ್ನರನಾದರದಿಂ ಕುಡೆ
ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ
ಮನ್ನಿಸಿ ಬಲ್ಲಾಳಂ ಕುಡೆ
ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್                          ೨೧

ತ್ರೀಮತ್ಕಾಣೂರ್ಗಣ ಚಿಂ
ತಾಮಣಿಗಳ್ ರಾಮಚಂದ್ರ ಗಂಡವಿಮುಕ್ತರ್
ತಾಮೆ ಗಡ ಗುರುಗಳೆನಿಪ ಮ
ಹಾ ಮಹಿಮೆಗೆ ನೋಂತ ಭವ್ಯಚೂಡಾರತ್ನಂ                    ೨೨

ವಾಣೀ ಪಾರ್ವತಿ ಮಾಡಿದ
ಜಾಣೆಂತುಟೊ ಭಾಳಲೋಚನಂ ಕವಿ ಸುಮನೋ
ಬಾಣನ ಮಗನೆಂದಖಿಳ
ಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ               ೨೩

ಶ್ರಾವಕಜನದುಪವಾಸಂ
ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗ
ಳ್ಗೀ ವಸ್ತುಕಥನದಿಂದು
ದ್ಛಾವಿಸೆ ಕವಿಭಾಳಲೋಚನಂ ವಿರಚಿಸಿದಂ                     ೨೪

ಇತಿಹಾಸಮೆಂಬ ವಿಮಳಾ
ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ
ನ್ವಿತಮಾಗಿರೆ ಕಥೆ ಬುಧುಸಂ
ತತಿಗಕ್ಷಯಸುಖಮನೀವುದೊಂದಚ್ಚರಿಯೇ                     ೨೫

ಪರೆವುದು ದುರಿತತಮಿಸ್ರಂ
ಪೊರೆಯೇಱುವುದಮಳದೃಷ್ಟಿಕುವಳಯವನಮಾ
ಚರಿಪ ಜನಕ್ಕೆ ಯಶೋಧರ
ಚರಿತ ಕಥಾಶ್ರವಣಮೆಂಬ ಚಂದ್ರೋದಯದೊಳ್              ೨೬

ಶೀರ್ಷಾಭರಣಂ ಧರೆಗು
ತ್ಕರ್ಷು ವಿಳಾಸನದ ಭೂಮಿ ಸಕಲ ಜನಕ್ಕಂ
ಹರ್ಷಮನೀವುದು ಭಾರತ
ವರ್ಷದಯೋಧ್ಯಾ ಸುವಿಷಯದೊಳ್ ರಾಜಪುರಂ             ೨೭

ಮೇರುನೃಪ ಪ್ರಾಸಾದಂ
ವಾರಿಧಿ ನಿಜಪರಿಖೆ ವಜ್ರವೇದಿಕೆ ತತ್ ಪ್ರಾ
ಕಾರಂ ಜಂಬೂದ್ವೀಪಾ
ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ                    ೨೮

ಅದಱೊಳಗೆ ಮೆಱೆವ ಮಣಿಮಾ
ಡದ ಲೋವೆಗಳಲ್ಲಿ ಕೋದ ಪೊಸಮುತ್ತಿನ ಮೊ
ತ್ವದ ಬೆಳಗು ಚಂದನಾಲೇ
ಪದ ಪದನಂ ಕುಡುವುದುರಿವ ರವಿಗೆಡೆವಗಲೊಳ್          ೨೯

ಕಾರಿರುಳೊಳಮೆಳೆವಿಸಿಲಂ
ಪೂರಂಪರಿಯಿಪುವು ಬೀದಿಯೊಳ್ ನಿಜರುಚಿಯಿಂ
ಹೀರೆಯ ಹೂವಿನ ಬಣ್ಣದ
ನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್             ೩೦

ನೆಲೆಮಾಡಾದೊಳೆಡೆಯಾಡುವ
ಕಲಹಂಸಾಲಸ ವಿಳಾಸಮತಿಯರ ಮುಖ ಮಂ
ಡಲಕೆ ಸರಿಯಾಗಲಾಱದೆ
ಸಲೆ ಮಾಱ್ವಿಂ ಚಂದ್ರನಿಂತು ಚಾಂದ್ರಾಯಣಮಂ        ೩೧

ಪಗಲನಿರುಳೆ ನಿಜರುಚಿಯಿಂ
ಮಿಗಿಸುವ ಜಿನಭವನದರುಣಮಣಿ ಕಲಶಂಗಳ್
ನಗುವುವು ಕೇತುಗಳಿಂ ಕೇ
ತುಗಳೊಳ್ ಕೆಳೆಗೊಂಡು ನಿಂದು ರವಿಮಂಡಲಮಂ     ೩೨

ಅದು ಪಿರಿಯ ಸಿರಿಯ ಬಾಱ್ಮೊದ
ಲದು ಚಾಗದ ಭೋಗದಾಗರಂ ಸಕಲಸುಖ
ಕ್ಕದು ಜನ್ಮಭೂಮಿಯೆನಿಸಿದು
ದದನಾಳ್ವಂ ಮಾರಿದತ್ತನೆಂಬ ನೃಪಾಲಂ                ೩೩

ಆ ಪುರದ ತೆಂಕವಂಕದೊ
ಳಾಪೊತ್ತುಮನೇಕ ಜೀವಹತಿ ತನಗೆ ಸುಖೋ
ದ್ದೀಪನಮೆನಿಸುವ ಪಾಪಕ
ಳಾಪಂಡಿತೆ ಚಂಡಮಾರಿ ದೇವತೆಯಿರ್ಪಳ್             ೩೪

ತನಗರಸುವೆರಸು ಪುರಜನ
ಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಳಾ
ರ್ಚನೆವೆರಸು ಜಾತ್ರೆ ನೆರೆಯದೊ
ಡನಿತುಮನೊರ್ಮೊದಲೆ ವಿಳಯದೊಳ್ ನೆರೆಯಿಸುವಳ್ ೩೫

ಆ ದೇವಿಯ ಜಾತ್ರೆಗೆ ಮೊಳೆ
ವೋದೆಳೆವೆಱೆ ಸಿರದ ಗಾಳಮುರಿಯುಯ್ಯಲೆ ಕೈ
ವೋದಸುಕೆ ಕೋಕಿಲಧ್ನನಿ
ಮೂದಲೆಯುಲಿಯಾಗೆ ಬಂದುದಂದು ಬಸಂತಂ          ೩೬

ಸಿಸಿರಮನೆ ಪಿಡಿದು ಪರಕೆಗೆ
ಬಸಂತನಲರ್ವೋದ ಮಾವಿನನಡಿಮಂಚಿಕೆಯೊಳ್
ಕುಸುರಿದಱೆದಡಗಿನಂತೆವೊ
ಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್    ೩೭

ಮಾರಿ ಮಲಯಾನಿಳಂ ನವ
ನೀರಜವನಮೆಂಬ ಕೆಂಡದೊಳ್ ದಂಡನಮ
ಸ್ಕಾರದೆ ಬಂದಪನಿತ್ತವ
ಧಾರಿಪುದೆಂಬಂತಿರುಲಿದುವರಿಗಿಳಿ ಬನದೊಳ್           ೩೮

ಅಂತು ದೊರೆವೆತ್ತು ಬಂದ ಬ
ಸಂತದೊಳಾ ಮಾರಿದತ್ತನಂ ಪುರಜನಮುಂ
ತಂತಮಗೆ ಚಂಡಮಾರಿಗೆ
ಸಂತಸಮುಂ ಮಾಡಲೆಂದು ಜಾತ್ರೆಗೆ ನೆರೆದರ್         ೩೯

ಸುರಿಗಿಱಿದರ್ಚನೆಯಾಡುವ
ಪರಕೆಯನೊಪ್ಪಿಸುವ ಲಕ್ಕಲೆಕ್ಕದ ಲೆಂಕ
ರ್ವೆರಸು ಬಲವಂದು ದೇವಿಯ
ಚರಣಂಗಳ್ಗೆಱಿಗಿ ರಂಗಮಂಟಪದೆಡೆಯೊಳ್            ೪೦

ನಿಂದು ನರಪತಿ ತಳಾಱಂ
ಗೆಂದಂ ನೀನ್ ಬರಿಸು ಮನುಜಯುಗಮಂ ಮುನ್ನಂ
ಕೊಂದರ್ಚಿಸುವೆಂ ಪೂಜೆಯೊ
ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್            ೪೧

ತಡವಾದಪ್ಪುದು ಪೌರರ್
ಕುಡವೇಱ್ಟುದು ಪಲವು ಜೀವರಾಶಿಯ ಬಲಿಯಂ
ನಡೆಯೆನೆ ಹಸಾದಮಾಗಳೆ
ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ              ೪೨

ಕಿಱುವರೆಯದ ಶುಭಲಕ್ಷಣ
ಗಱಿಕೆಯ ಸತ್ಕುಲದ ಮರ್ತ್ಯಯುಗಲಕಮಂ ತಾ
ನಱಸಲ್ ಬಳರಿಯ ಬನದಿಂ
ಪೊಱಮಟ್ಟಂ ಚಂಡಕರ್ಮನೆಂಬ ತಳಾಱಂ             ೪೩

ಇತ್ತಲ್ ಬಱಿಕ್ಕೆ ಪಂಚಶ
ತೋತ್ತಮ ಯತಿಸಮಿತಿವೆರಸು ಗಮನಪ್ರಾಯ
ಶ್ಚಿತ್ತನಿಮಿತ್ತಂ ಬಂದು ಸು
ದತ್ತಾಚಾರ್ಯರ್ ಪುರೋಪವನಮಂ ಸಾರ್ದರ್        ೪೪

ಅವರ ಗುಣಮವರ ಸಂಯಮ
ಮವರ ತಪಶ್ಚರಣಮೆಂಬುದವರಿವರಳವ
ಲ್ಲವರ ಪೆಸರ್ಗೊಂಡ ನಾಲಗೆ
ಸವಿದಱೆಯದು ಬಱಿಕ ತಾಯ ಮೊಲೆವಾಲ್ವನಿಯಂ   ೪೫

ಮುನಿಸಮುದಾಯಸಮೇತಂ
ವಿನೇಯಜನ ವನಜವನ ದಿವಾಕರನಂತಾ
ಮುನಿಪನುಪವಾಸಮಂ ಪ
ರ್ವ ನಿಮಿತ್ತಂ ತಳೆದ ಬಱಿಕ ಬಾಲಕಯುಗಮಂ       ೪೬

ಚರಿಗೆಗೆ ಬೀಟ್ಕೊಡೆ ಗುರುಗಳ
ಚರಣಕ್ಕಾ ಯುಗಳಮೆಱಗಿ ಪೊಱಮಟ್ಟಾಗಳ್
ತರುಣ ವನಹರಿಣಯುಗಮಂ
ತರಕ್ಷು ಪಿಡಿವಂತೆ ಚಂಡಕರ್ಮಂ ಪಿಡಿದಂ             ೪೭

ಅಭಯರುಚಿಯಭಯಮತಿಯೆಂ
ಬುಭಯಮನಾ ಪಾಪಕರ್ಮನೊಯ್ವೆಡೆಯೊಳ್ ಮ
ತ್ತಭಯರುಚಿ ತಂಗೆಗೆಂದಪ
ನಭೀತೆಯಾಗೆಲೆಗೆ ತಾಯೆ ಮರಣದ ದೆಸೆಯೊಳ್    ೪೮

ನಿಯತಿಯನಾರ್ ಮೀಱೆದಪರ್
ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್
ನಯವಿದೆ ಪೆತ್ತ ಪರೀಷಹ
ಜಯಮೆ ತಪಂ ತಪಕೆ ಬೇಱೆ ಕೋಡೆರಡೊಳವೇ     ೪೯

ಅಣ್ಣನ ಮಾತಂ ಮನದೊಳ್
ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾ
ವುಣ್ಣದೆ ಪೋಕುಮೆ ಭಯಮೇ
ಕಣ್ಣ ಭವಪ್ರಕೃತಿ ವಿಕೃತಿ ನಾವಱೆಯದುದೇ           ೫೦

ಎನಿತೊಳವಪಾಯಕೋಟಿಗ
ಳನಿತರ್ಕಂ ಗೇಹಮಲ್ತೆ ದೇಹಮಿದಂ ನೆ
ಟ್ಟನೆ ಪೊತ್ತು ಸುಖಮನಱಸುವ
ಮನುಜಂ ಮೊರಡಿಯೊಳೆ ಮಾದುಪಱಮನಱಸದಿರಂ               ೫೧

ಬೇಡಿದ ಕಾಡೊಳ್ ಮಱೆಯಾ
ಯ್ತೀಡಾಡುವಮಿದಱ ಪೊಱೆಯನೆಮಗಂ ನಿಮಗಂ
ಮೂಡುವ ಮುಱುಗುವ ದಂದುಗ
ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ                     ೫೨

ಇಂತಿಂತೋರೊರ್ವರನೊರ್ವರ್
ಸಂತೈಸುತ್ತುಂ ನೃಪೇಂದ್ರತನುಜಾತರ್ ನಿ
ಶ್ಚಿಂತಂ ಪೊಕ್ಕರ್ ಪಸಿದ ಕೃ
ತಾಂತನ ಬಾಣಸುವೊಲಿರ್ದ ಮಾರಿಯ ಮನೆಯಂ                  ೫೩

ತಳಮನುಡಿದಿಡುವ ಕಣ್ಣಂ
ಕಳೆದೇಱೆಪ ಕರುಳ ತೋರಣಂಗಟ್ಟುವ ಕಾ
ಲ್ಗಳನುರಿಪಿ ನೆತ್ತರಾ ಕೂ
ಱ್ಗಳನಡುತಿಹ ವೀರರೆತ್ತ ನೋಱ್ಟೊಡಮದಱೊಳ್                    ೫೪

ತಾಳುಗೆಯನುರ್ಚಿ ನೆತ್ತಿಯ
ಗಾಳಂ ಗಗನದೊಳೆಱಲ್ವ ವಾರಿಯ ಬೀರರ್
ಪಾಳಿಯೊಳೆಸೆದರ್ ಪಾಪದ
ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಱದಿಂ                         ೫೫

ಆಡು ಕುಱಿ ಕೋಱಿ ಕೋಣನ
ಕೂಡಿದ ಪಿಂಡೊಳಱೆ ಪೆಳಱೆ ಮಾರ್ದನಿಯಿಂದಂ
ಕೂಡೆ ವನಮಱ್ತುದುರ್ವರೆ
ಬೀಡೆಯಿನೆರ್ದೆಯೊಡೆದುರವಱ ಕೋಟಲೆಗಾಗಳ್                   ೫೬

ದೆಸೆದೆಸೆಗೆ ನರಶಿರಂ ತೆ
ತ್ತಿಸಿ ಮೆಱೆದುವು ಮದಿಲೊಳಬ್ಬೆ ಪೇರಡಗಿನ ಪೆ
ರ್ಬೆಸನದೆ ಪೊಱಗಣ ಜೀವ
ಪ್ರಸರಮುಮಂ ಪಲವು ಮುಖದಿನವಳೋಕಿಪವೊಲ್                ೫೭

ಭೈರವನ ಜವನ ಮಾರಿಯ
ಮೂರಿಯವೊಲ್ ನಿಂದ ಮಾರಿದತ್ತಂ ಲಲಿತಾ
ಕಾರ‍ರ ಧೀರರ ಬಂದ ಕು
ಮಾರ‍ರ ರೂಪಿಂಗೆ ಠಕ್ಕುಗೊಂಡಂತಿರ್ದಂ                          ೫೮

ಅರಸನ ಕೆಲಬಲದವರ್ಗಳ್
ಪರಸಿರೆ ಪರಸಿರೆ ನೃಪೇಂದ್ರನಂ ನೀವೆನೆ ಮಂ
ದರಧೀರನಭಯರುಚಿ ನೃಪ
ವರ ನಿರ್ಮಲ ಧರ್ಮದಿಂದ ಪಾಲಿಸು ಧರೆಯಂ                     ೫೯

ಎಂದು ಪರಸಿದೊಡೆ ಪೊಯ್ಯದೆ
ನಿಂದು ನೃಪಂ ಮನದೊಳೆಂದನೀ ದೇಗುಲಮಂ
ಬಂದು ಪುಗಲೊಡನೆ ಜೀವಂ
ನಿಂದಱೆಯದು ಮುನ್ನಮಿನ್ನರಂ ಕಂಡಱೆಯೆಂ                      ೬೦

ಕಿಱ್ತ ಕರವಾಳ್ಗಮೆನಗಂ
ಮಿಱ್ತುವಿನಂತಿರ್ದ ಮಾರಿಗಂ ಬೆದಱದೆ ನಿಂ
ದಱ್ತೆಯನೆ ನುಡಿದರಿವರ ನೆ
ಗಱ್ತೆ ಕರಂ ಪಿರಿದು ಧೀರರಕಟ ಕುಮಾರರ್                         ೬೧

ಜವಳಿವೆಱೆ ಮನುಜ ರೂಪದಿ
ನವನಿಯೊಳೊಗೆದಂತೆ ಕಾಂತಿ ಮೆಱೆದಪುದಿಂದಿಂ
ತಿವರ್ಗಳ ಚೆಲ್ವಿಕೆ ಕಣ್ಗಳ
ತವರಾಜಮನಿಂದು ಕಂಡೆನೀ ಬಾಲಕರಂ                           ೬೨

ಆವ ಕುಲಮಾರ ತನಯರಿ
ದಾವೆಡೆಯಿಂ ಬಂದಿರೇಕೆ ಬಾಲ್ಯದೊಳೀ ಭಿ
ಕ್ಷಾವೃತ್ತಿಯೆಂದು ಬೆಸಗೊಳೆ
ಭೂವರ ಕೇಳೆಂದು ಕುವರನಂದಿಂತೆಂದಂ                          ೬೩

ಧರ್ಮಪರರ್ಗಲ್ಲದೆಮ್ಮಯ
ನಿರ್ಮಲ ಚಾರಿತ್ರಮಿಂಬುಕಯ್ಯದು ನಿನಗಾ
ಧರ್ಮದ ಪೋದ ಪೊಲುಬದು
ನರ್ಮದೆಯಿಂ ಗೆಂಟದೇಕೆ ಕೇಳ್ದಪೆಯೆಮ್ಮಂ                         ೬೪

ಆ ಮಾತನ್ನೆಗಮಿರ್ಕೆಲೆ
ಭೂಮೀಶ್ವರ ನಿನಗೆ ಪಥ್ಯಮಾವುದದಂ ಮಾ
ಡಾಮೂಲಚೂಲಮೆಮಗೆ ತ
ಳಾಮಲಕಂ ಭವನಿಬದ್ಧಮಱಲಿಸಿತೆಮ್ಮಂ                           ೬೫

ಗುಣಿಗಳ ಗುಣರತ್ನಂ ವಿಭೂ
ಷಣಮೆಸೆವುದೆ ವಿಕಳಹೃದಯರಾದವರ್ಗೆ ನೃಪಾ
ಗ್ರಣಿ ಪೇಱ್ ತುಪ್ಪೇಱೆದ ದ
ರ್ಪಣದೊಳ್ ಪಜ್ಜಳಿಸಲಾರ್ಪುದೇ ಪ್ರತಿಬಿಂಬಂ                      ೬೬

ಇಂತೆಂಬುದುಮಾ ಕುವರನ
ದಂತಪ್ರಭೆಯೆಂಬ ಶೀತಕರನುದಯದಘ
ಧ್ವಾಂತೌಘ ಮಧುಪಮಾಲಿಕೆ
ಯಂ ತೊಲಗಿಸೆ ಮುಗಿದುವವನ ಕರಸರಸಿರುಹಂ                  ೬೭

ಧನಮಂ ಕಂಡ ದರಿದ್ರನ
ಮನದವೊಲೆಱಗಿದುವು ಪರಿಜನಂಗಳ ನೂಸಲಾ
ವಿನಯನಿಧಿಗಾ ಕುಮಾರಕ
ನನುರಾಗದೆ ಮಾರಿದತ್ತವಿಭುಗಿಂತೆಂದಂ                            ೬೮

ಭಲರೆ ನೃಪೇಂದ್ರಾ ದಯೆಯೊಳ್
ನೆಲೆಗೊಳಿಸಿದೆ ಮನಮನಮಮ ನೀಂ ಕೇಳ್ದುದು ಸ
ತ್ಫಲಮಾಯ್ತು ಧರ್ಮಪಥದೊಳ್
ಸಲೆ ಸಂದಪೆ ಕಾಲಲಬ್ಧಿ ಪೊಲಗೆಡಿಸುವುದೇ                        ೬೯

ಎಂತು ಬೆಸಗೊಂಡೆ ಬೆಸಗೊಂ
ಡಂತಿರೆ ದತ್ತಾವಧಾನನಾಗು ಜಯಶ್ರೀ
ಕಾಂತೆಯುಮಂ ಪರಮಶ್ರೀ
ಕಾಂತೆಯುಮಂ ನಿನಗೆ ಕುಡುವುದೀ ಸತ್ಯಥನಂ                    ೭೦

ಶ್ರೀಮತ್ತೀರ್ಥಾಧಿಪನ ವದನಾಂಭೋಜದಿಂ ಸರ್ವಭಾಷಾ
ಸಾಮಾನ್ಯಂ ಶ್ರೀವಚನಮೊಗೆದತ್ತಾ ವಚೋಮಾರ್ಗದಿಂ ಮ
ತ್ತಾಮುಂ ಕಂಡುಂಡುದಱ ಕಥೆಯಂ ಪೇಱ್ದಪೆಂ ಕೇಳಿಮೆಂದಾ
ಭೂಮೀಶಂಗಂದಭಯರುಚಿಯಿಂತೆಂದು ಪೇಱಲ್ತಗುಳ್ದಂ           ೭೧

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ
ರಭಸಮತಿಗೆ ಸಯ್ಪಂ ಪೇಱ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ                   ೭೨

ಇದು ಜಿನಸಮಯ ಕುಮುದಿನೀ ಶರಶ್ಚಂದ್ರ
ಚೈತ್ರ ಚಂದ್ರಮ ಸದಮಲರಾಮಚಂದ್ರ ಮುನೀಂದ್ರ ಪದ
ಭಕ್ತಂ ಜಾನಕಿ ಮಾಡಿದ ಯಶೋಧರ ಚರಿತ್ರದೊಳ್
ಉದಾರಂ ಪ್ರಥಮಾವತಾರಂ ಸಂಪೂರ್ಣಂ