ಆ ಕಥೆ ಮತ್ತೆಂತೆಂದೊಡಿ
ಳಾಕಾಂತೆಗವಂತಿ ವಿಷಯಮಾಸ್ಯದವೊಲ್ ಶೋ
ಭಾಕರಮಾಯ್ತದಱೊಳ್ ನಾ
ಸಾಕುಟ್ಮಳದಂತೆ ಮೆಱೆವುದುಜ್ಜೇನಿಪುರಂ                         ೦೧

ಆ ಪುರದರಸಂ ನತಭೂ
ಮೀಪಾಲರ ಮಕುಟಮಸ್ತಕದ ನಿಜತೇಜೋ
ರೂಪಕಮೆ ಪದ್ಮರಾಗದ
ದೀಪದವೋಲ್ ಮೆಱೆವಿನಂ ಯಶೌಘಂ ಮೆಱೆವಂ                   ೨

ದೊರೆವಡೆದ ಯಶೌಘನ ಭೂ
ವರತಿಳಕನ ಕಣ್ಗಳಂಗರಕ್ಕರ್ ಮನಮಾ
ಭರಣಂ ರಾಜ್ಯಶ್ರೀ ಸಹ
ಚರಿಯೆನೆ ಸಂದತ್ತು ಚಂದ್ರಮತಿಗರಸಿತನಂ                        ೩

ಭರದಿಂದವರ್ಗಳ ಬೇಂಟಮ
ನಿರುಳಿಂದು ಪಗಲ್ ವಸಂತನಿರುಳುಂ ಪಗಲುಂ
ಸುರಭಿಶರನಂಗಜಾವಂ
ಗರಟಿಗೆ ಮೆಯ್ಗಾಪು ಮೆಱೆಯೆ ಬಿಡದೋಲಗಿಪರ್                   ೪

ಅನಿತೆಸೆವ ಚಂದ್ರಮತಿಗಂ
ಜನಪತಿಗಂ ಪುಟ್ಟಿದಂ ಯಶೋಧರನೆಂಬಂ
ಜನಮೋಹನಬಾಣಂ ಕ
ರ್ಬಿನ ಬಿಲ್ಗಂ ನನಯೆ ನಾರಿಗಂ ಪುಟ್ಟಿದವೊಳ್                     ೫

ನೋಡುವ ಕಣ್ಗಳ ಸಿರಿ ಮಾ
ತಾಡುವ ಬಾಯ್ಗಳ ರಸಾಯನಂ ಸಂತಸದಿಂ
ಕೊಡುವ ತೋಳ್ಗಳ ಪುಣ್ಯಂ
ನಾಡಾಡಿಯೆ ರೂಪು ಕುವರ ವಿದ್ಯಾಧರನಾ                         ೬

ಎಳವೆಳ್ದಿಂಗನ್ ನನೆಗಣೆ
ಮಳಯಾನಿಳನಿಲ್ಲಿ ಮೂವರೊಳಗಾರೊ ಕುತೂ
ಹಳಮಾದಪುದೆನ್ನದ ಕ
ಣ್ಣೊಳವೆ ಯಶೋಧರ ಕುಮಾರನಂ ಕಾಣಲೊಡಂ               ೭

ಪರನೃಪರ ರಾಜ್ಯಲಕ್ಷ್ಮಿಯ
ಕುರುಳಾಕರ್ಷಣದ ನೀಳ್ದ ತೋಳ್ ಮೆಱೆವುವು ಪೇ
ರುರದೊಳ್ ನೆಲಸಿದ ಲಕ್ಷ್ಮೀ
ಕರಿಣಿಗೆ ಬಾಳಿಸಿದ ರನ್ನದಮಳ್ಗಂಬದವೊಲ್                         ೮

ಅಮೃತಮತಿ ಗಡ ಯಶೋಧರ
ನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂ
ಸುಮನೋಬಾಣಂ ತದ್ಭೂ
ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ                      ೯

ಕವಚಹರನಾದ ತನಯನೊ
ಳವನೀಭರಮೆಂಬ ಕನಕಮಣಿಮಂಡನಭಾ
ರವನಿಱೆಪಿ ನೀಡುಮೋಲಾ
ಡುವನಂಗಜರಾಗಶರಧಿಯೊಳಗೆ ಯಶೌಘಂ                     ೧೦

ಅಗುಱ್ದೆಡಪುವ ಕಾಲದ ಗರ
ಟಿಗೆಯೊಳ್ ನೃಪಚಿತ್ತಚೋರನಂ ತೋಱುವ ದೀ
ವಿಗೆಯೆನೆ ಸಂಮುಖಮಾಯ್ತೋ
ಲಗದೊಳ್ ನಿರ್ದಿಷ್ಟ ಪಳಿತಚಿಕುರಂ ಮುಕುರಂ                  ೧೧

ನರೆಯೆಂಬ ಹೊಱಸು ಮೊಗಮೆಂ
ಬರಮನೆಯಂ ಪೊಕ್ಕೊಡಂಅನಾಲೋಕನಮೆಂ
ಬರಸೆಂತಿರ್ದಪನೆಂದಾ
ನರನಾಥಂ ತೊಱೆದನಖಿಳವಿಷಯಾಮಿಷಮಂ                   ೧೨

ಧರಣೀಭಾರಕ್ಕೆ ಯಶೋ
ಧರನನೊಡಂಬಡಿಸಿ ನೂರ್ವರರಸುಗಳೊಡನಾ
ದರದಿಂ ಕಂಬಂದಪ್ಪಿದ
ಕರಿಯಂತೆ ತಪೋವನಕ್ಕೆ ನಡೆದನಿಳೇಶಂ                        ೧೩

 

ಧರಣೀಗಣಿಕೆ ಯಶೌಘನ
ವಿರಹದ ಪರಿತಾಪಮಂ ಯಶೋಧರನ ಯಶೋ
ಹರಿಚಂದನ ಚರ್ಚೆಯಿನು
ದ್ದುರ ದಾನಾಸಾರಸೇಕದಿಂ ಮಗ್ಗಿಸಿದಳ್                         ೧೪

ಗುರು ಬಿಟ್ಟ ರಾಜ್ಯಲಕ್ಷಿಗೆ
ವರನಾದ್ಯೆ ಕಷ್ಟಮೆಲೆ ಯಶೋಧರ ನಿನ್ನೊಳ್
ನೆರೆದಿರ್ಪುದಲ್ಲದೆಂಬಂ
ತಿರೆ ಪೋದಳ್ ಕೀರ್ತಿಕಾಂತೆ ದೆಸೆಯಂತುವರಂ                  ೧೫

ಅಳುರ್ವ ನಿಜವಿಜಯ ತೇಜೋ
ಬಳದಿಂ ಪರನೃಪರ ಗಂಡಗಾಳಿಕೆಯನದೇಂ
ಕಳೆದನೊ ನೃಪತಿ ವಸುಂಧರೆ
ಪೊಳೆಪಂ ತಳೆದೆಯ್ದೆ ರಾಗಮಂ ಬೀಱುವಿನಂ                     ೧೬

ಅಳವಡೆ ಭುಜದೊಳ್ ಮೃಗಮದ
ತಿಳಕದವೊಲ್ ಸಕಲಧರಣಿ ಯೌವನ ಭೂಷಾ
ವಳಿಯನೆ ತಿರ್ದುವನಾ ನೃಪ
ಕುಲಶೇಖರನಮೃತಮತಿಯ ಮುಖದರ್ಪಣದೊಳ್                ೧೭

ಅವನಿಪನೊರ್ಮೆ ಸಭಾಮಣಿ
ಭವನದಿನಂಬರ ತರಂಗಿಣೀ ಪುಳಿನಮನೇ
ಱುವ ಹಂಸನಂತೆ ಶಯ್ಯಾ
ಧವಳ ಪ್ರಾಸಾದತಳಮನೇಱೆದನರಸಾ                          ೧೮

ಪರಿಮಳದ ತೂಂಬನೆತ್ತಿದ
ನರಲಂಬಂ ಜನಮನೋವನಕ್ಕೆನೆ ಕಾಳಾ
ಗರುಧೂಮಲತಿಕೆ ಜಾಲಾಂ
ದರದಿಂದೊಗೆದುದು ಕಪೋತ ಪಕ್ಷುಚ್ಛುರಿತಂ                      ೧೯

ಎಳದುಂಬಿ ಸುಱಿದು ಸುಟ್ಟುರೆ
ಗೊಳಿಸುವ ಕತ್ತುರಿಯ ಕಪ್ಪುರಂಗಳ ರಜಮು
ಚ್ಚಳಿಸಿದುವು ನೀಲ ಮುತ್ತಿನ
ಬೆಳಗಿನ ಕುಡಿ ರಾಗರಸದಿನಂಕುರಿಸುವವೊಲ್                  ೨೦

ಅಮೃತಮತಿ ಸಹಿತಮಾ ಚಂ
ದ್ರಮತಿಯ ಸುತನಂತು ಮೆಱೆವ ಧವಳಾರದೊಳ
ಭ್ರಮುವೆರಸಭ್ರಗಜಂ ವಿ
ಭ್ರಮದಿಂದಂ ಸೆಜ್ಜರಕ್ಕೆ ಬಂದವೊಲೆಸೆಗುಂ                      ೨೧

ವರಮಂಚಮಣಿದ್ಯುತಿಧೃತ
ಮರಾಳಿಕಾತೂಳತಳ್ಪದೊಳ್ ತಾಮೆಸೆದರ್
ಸುರಚಾಪಚ್ಛವಿ ಸುತ್ತಿದ
ಶರದಭ್ರದೊಳೆಸೆವ ಖಚರದಂಪತಿಗಳವೊಲ್                   ೨೨

ನಡೆ ಸೋಂಕಿದ ಕಡೆಗಣ್ಗಳ
ಕುಡಿವೆಳಗಿಂ ಬಿಡುವ ಬೆಮರೊಳಂ ಪದದೊಳಮೇಂ
ತಡವಾದರೊ ಕೌಮುದಿ ಕ
ಣ್ಣಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್               ೨೩

ತನುಸೋಂಕಾಲಿಂಗನ ಚುಂ
ಬನಮುಂ ಗಳರವದ ಸವಿರತ ಪ್ರೌಢಿಯಿನಾ
ತನುವಂ ಮಱೆಯಿಸೆಅಱಿಯದೆ
ಮನೋಜನಾಡಿಸುವ ಜಂತ್ರದಂತಿರೆ ನೆರೆದರ್                ೨೪

ಸುರತ ಸುಖಪಾರವಶ್ಯಂ
ತರೆ ನಿದ್ರಾಭರಮನಿರ್ವರುಂ ಶಿಥಿಲತನೂ
ಪರಿರಂಭಣದಚ್ಚಱಿಯದೆ
ಪರಿವೇಷ್ಟಿತ ಬಾಹುವಲಯದೊಳ್ ಕಣ್ಗಯ್ದರ್               ೨೫

ಪುರ್ವೆಂಬ ಜವಳಿಗಟ್ಟಿನ
ಕರ್ವಿನ ಬಿಲ್ಗಳ್ಗೆ ಬಿಗಿದ ಮಧುಕರಮಾಲಾ
ಮೌರ್ವಿಯೆನೆ ಮುಗಿದ ಕಣ್ಗಳ
ಪರ್ವುಗೆಯೊಳ್ ಮೆಱೆದುದವರ ತಳ್ತೆಮೆದುಱುಗಲ್           ೨೬

ಹೃದಯಪ್ರಿಯರಂತೊಱಗಿದ
ಪದದೊಳ್ ಗರಟಿಗೆಯ ಜಾವದುಕ್ಕಡದುಲಿ ಮ
ಱ್ಗಿದ ಪೊತ್ತು ಸೂಱ್ಗೆ ಕರುಮಾ
ಡದ ಪಕ್ಕದೊಳಿರ್ದ ಪಟ್ಟದಾನೆಯ ಬದಗಂ                  ೨೭

ಬಿನದಕೆ ಪಾಡುತ್ತಿರೆ ನುಣ್
ದನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋ
ಚನೆ ತಿಳಿದಾಲಿಸಿ ಮುಟ್ಟಿದ
ಮನಮಂ ತೊಟ್ಟನೆ ಪಸಾಯದಾನಂಗೊಟ್ಟಳ್              ೨೮

ಗಹಗಹಿಕೆವಡೆದ ವಹಣಿಯ
ಸುಹಾಹೆ ಝುಂಪೆಯದೊಳಮರೆ ಠಾಯದೊಳಂ ನಿ
ರ್ವಹಿಸಿ ನೆಲೆಗೊಳಿಸಿ ಬಯ್ಸಿಕೆ
ಮಹಚಾಳೆಯದಲ್ಲಿ ಮೂರ್ತಿವಡೆದುದು ರಾಗಂ             ೨೯

ಮಾಳಿಗೆಯೊಳಗಣ ಸೊಡರ್ಗುಡಿ
ಡಾಳಂಬಡೆದಂತೆ ರಂಗರಕ್ತಿಯೊಳವರ್ದುಂ
ಪಾಳಿಕೆವಡೆದು ಬಜಾವಣೆ
ಮಾಳವಸಿರಿಯೆಂಬ ರಾಗಮಂ ಚಾಳಿಸಿದಂ                ೩೦

ತಾಳದ ಲಯಮಂ ನೆನೆಯದೆ
ಕೇಳಲೊಡಂ ಠಾಯೆ ಜಾತಿಯೊಳ್ ಗ್ರಾಹಯುತಂ
ಕೇಳಲೊಡಂ ಗೀತಮನೆಂ
ದಾಳತಿಯೊಳ್ ಮೆಱೆದು ಪಾಡಿದಂ ರೂಪಕಮಂ           ೩೧

ಅಂತೆಸೆಯೆ ಪಾಡುತಿರೆ ತ
ದ್ದಂತಿಪನತಿನೂತ್ನಗೀತ ಪಾತನ ವಿಕಲ
ಸ್ವಾಂತೆಗೆ ನೋಡುವ ಕೂಡುವ
ಚಿಂತೆ ಕಡಲ್ವರಿದುದಂದು ಬೆಳಗಪ್ಪಿನೆಗಂ                   ೩೨

ಮನದನ್ನಳಪ್ಪ ಕೆಳದಿಗೆ
ಮನಮಂ ಮುಂದಿಟ್ಟು ಬಱಿಕ ಕಳಿಪಿದೊಡವಳಾ
ತನ ರೂಪುಗಂಡು ಕಣ್ಗಂ
ಮನಕ್ಕಮುದ್ಗಾರವೆತ್ತು ಭೋಂಕನೆ ಮುಗುಳ್ದಳ್            ೩೩

ಅಮೃತಮತಿಯೆತ್ತ ರೂಪಾ
ಧಮನಷ್ಟಾವಂಕನೆತ್ತ ಚಿತ್ರಮಪಾತ್ರೇ
ರಮತೇ ನಾರೀ ಎಂಬುದು
ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ                  ೩೪

ಎನುತುಂ ಬಂದು ವಿಷಣ್ಣಾ
ನನೆಯಂ ಮಾರ್ಗಾವಲಗ್ನ ನೇತ್ರೆಯನುಚ್ಛ್ವಾ
ಸ ನಿತಪ್ತಾಧರರುಚಿಯಂ
ಮನುಜೇಂದ್ರಾಂಗನೆಯನೆಯ್ದಿ ಕಂಡಿತೆಂದಳ್              ೩೫

ಕಂತುವಿನ ಕಯ್ಯ ಕೂರಸಿ
ಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀನ್
ಇಂತಪ್ಪ ಕಾಮದೇವಂ
ಗೆಂತೆಂತಾಯ್ದಱಸಿ ಕೂರ್ಗೆಯೆಂದಾನಱೆಯೆಂ              ೩೬

ಈ ದೊರೆಯನೆಂದು ತೋಱಲ್
ಮೇದಿನಿಯೊಳಗಾತನಲ್ಲದಿಲ್ಲೆನೆ ಪೇಱ್ ಪೇಱ್
ಕಾದಲನಂತಿರೆ ಚೆಲ್ವನೆ
ದೂದವಿ ನೀನೆನ್ನ ಕೊಂದೆಯೆಂದೊಡೆ ಪೇಱ್ದಳ್             ೩೭

ಪಱಿದಲೆ ಕುಱಿನೊಸಲಱಿಗ
ಣ್ಣೊಱೆವಾಯ್ ಹಪ್ಪಳಿಕೆಮೂಗು ಮುರುಟಿದ ಕಿವಿ ಬಿ
ಬ್ಬಿಱುವಲ್ ಕುಸಿಗೊರಲಿಱಿದೆರ್ದೆ
ಪೊಱೆಂಟ ಬೆನ್ ಬಾತ ಬಸಿಱಡಂಗಿದ ಜಘನಂ            ೩೮

ಕಱೆದೊವಲ ಪಱೆಯ ಕುಱಿಯಂ
ತೆಱೆದಂದದ ಮೆಯ್ಯ ನಾತಮಾತನ ಕಯ್ಗಳ್
ಕುಱುಗಣ್ಣು ಕೂನಬೆನ್ ಕಾಲ್
ಮಱೆಯಿಸುವುದು ಟೊಂಕ ಮುಱಿದ ಕತ್ತೆಯ ಕಾಲಂ      ೩೯

ಮುದುಗರಡಿಯ ಮುದುದೊವಲಂ
ದದ ಕರಿಯಂ ತಾಳಕಾಯ ಮೋಳಿಗೆಯೊಂದಂ
ದದ ಮುರುಡನಷ್ಟವಂಕಂ
ಮೊದಲೊಣಗಿದ ಕೂನಗೊರಡಿನಂದದ ಕೊಂಕಂ         ೪೦

ಎಂದೊಡೆ ದೂದವಿಗವಳಿಂ
ತೆಂದಳ್ ಗರಗರಿಕೆ ಕೊರಲೊಳೀಕ್ಷಣದೊಳ್ ವಾರ್
ಬಿಂದು ಮಿಡುಕೆರ್ದೆಯೊಳೊದವೆ ಪು
ಳಿಂದನ ಕಣೆಗಟ್ಟಿನಿಂದ ವನಹರಿಣಿಯವೊಲ್               ೪೧

ಕರಿದಾದೊಡೆ ಕತ್ತುರಿಯಂ
ಮುರುಡಾದೊಡೆ ಮಲಯಜಂಗಳಂ ಕೊಂಕಿದೊಡೇಂ
ಸ್ವರಚಾಪಮನಿಳಿಕಯ್ವರೆ
ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್         ೪೨

ಒಲವಾದೊಡೆ ರೂಪಿನ ಕೋ
ಟಲೆಯೇವುದೊ ಕಾರ್ಯಮಾಗೆ ಕಾರ‍ಣದಿಂದಂ
ಫಲಮೇನಿಂದೆನಗಾತನೆ
ಕುಲದೈವಂ ಕಾಮದೇವನಿಂದ್ರಂ ಚಂದ್ರಂ                 ೪೩

ಎಂದಾಕೆಗೆ ಲಂಚಮನಿ
ತ್ತೆಂದುದನೆಂದೆರವಿಗೊಂಡು ಕಱೆಪುವುದುಮವಳ್
ಸಂದಿಸಿದೊಡಮೃತಮತಿ ರಾ
ತ್ರಿಂದಿವಮಾತನೊಳೆ ಸಲಿಸಿದಳ್ ತೆಱಪುಗಳಂ            ೪೪

ಆ ವಿಕಟಾಂಗನೊಳಂತಾ
ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್
ಬೇವಂ ಮೆಚ್ಚಿದ ಕಾಗೆಗೆ
ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ            ೪೫

ನೋಡುವ ಮಾತಾಡುವ ಬಾ
ಯ್ಗೂಡುವ ಪದನಮೃತಮತಿಗೆ ಪೂರ್ವಸ್ಥಿತಿಯಂ
ಪಾಡಱೆಯುತ್ತಿರೆ ನೋಡಲ್
ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್        ೪೬

ಮಱೆದೊಱಗಿದನಂತೆವೊಲಿರೆ
ಪಱಮೆ ಪಗಲ್ ಮುಗಿಯೆ ಸಿಲ್ಕಿ ಕೈರವದಿನಿರುಳ್
ಪೊಱಮಡುವಂತರಸನ ತೋ
ಳ್ಸೆಱೆಯಿಂ ನುಸುಳ್ದರಸಿ ಜಾರ‍ನಲ್ಲಿಗೆ ಪೋದಳ್            ೪೭

ಬೆನ್ನೊಳೆ ಪೋದಂ ದೋಷದ
ಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರ
ಚ್ಛನ್ನದಿನುರ್ಚಿದ ಬಾಳ್ವೆರ
ಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ             ೪೮

ಮುಳಿದಾಕೆ ತಂದ ಮಾಲಾ
ಮಳಯಜ ತಾಂಬೂಲ ಜಾಲಮಂ ಕೆದಱೆ ಕುರು
ಳ್ಗಳನೆಱೆದು ಬೆನ್ನ ಮಿಳಿಯಿಂ
ಕಳಹಂಸೆಗೆ ಗಿಡಿಗನೆಱಗಿದಂತಿರೆ ಬಡಿದಂ                   ೪೯

ತೋರಮುಡಿವಿಡಿದು ಕುಡಿಯಂ
ನಾರ‍ಂ ತದೆವಂತೆ ತದೆದು ಬೀಟೆಯ ಕಾಲಿಂ
ಬಾರೇಱೆ ಬದಗನೊದೆದೊಡೆ
ಕೇರೆ ಪೊರಳ್ವಂತೆ ಕಾಲ ಮೇಲೆ ಪೊರಳ್ದಳ್                  ೫೦

ತಡವಾದುದುಂಟು ನಲ್ಲನೆ
ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ
ತೊಡೆಯೇಱೆಸಿ ಕೇಳಿಕೆಯಾ
ದೊಡೆ ನೋಡುತ್ತಿರ್ದೆನುಂತೆ ನಿಲಲಣ್ಮುವೆನೇ                ೫೧

ಕಿವಿಸವಿ ದನಿ ಕಣ್ಸವಿ ರೂ
ಪವಧರಿಸೆಲೆ ಗಜವೆಡಂಗ ನಿನುಱೆದೊಡೆ ಸಾ
ವವಳೆನಗೆ ಮಿಕ್ಕ ಗಂಡರ್
ಸವಸೋದರರೆಂದು ತಿಳಿಪಿದಳ್ ನಂಬುಗೆಯಂ               ೫೨

ಆಗಳ್ ಬಾಳ್ ನಿರ್ಮಿರ್ದುದು ತೋಳ್
ತೂಗಿದುದು ಮನಂ ಕನಲ್ಧುದಿರ್ವರುಮನೆರಱ್
ಬಾಗಂ ಮಾಡಲ್ ಧೃತಿ ಬಂ
ದಾಗಳ್ ಮಾಣೆಂಬ ತೆಱದೆ ಪೇಸಿದನರಸಂ                  ೫೩

ಪರನೃಪರನಲ್ಲದೀ ಪುಱು
ಕರನಿಱೆವುದೆ ಮದ್ಭುಜಾಸಿಯಿದು ಕೈಯಿಕ್ಕಲ್
ಕರಿ ಕರಿಗಲ್ಲದಿಱುಂಪೆಗೆ
ಪರಿವುದೆ ಹರಿ ಕರಿಯನಲ್ಲದಿಱೆವುದೆ ನರಿಯಂ                ೫೪

ಅಸಿಲತೆ ರಣಧೌತಮದೀ
ಮಸಿಮುಸುಡನ ಜೀವಕಪ್ಪಿನಿಂ ಕಂದಿದೊಡೆ
ಣ್ದೆಸೆಯನಡರ್ದೆನ್ನ ಕೀರ್ತಿ
ಪ್ರಸರದ ಕುಡಿ ಕಯ್ಪೆಸೊರೆಯ ಕುಡಿಯವೊಲಕ್ಕುಂ         ೫೫

ಅಳಿಪುಳ್ಳೊಡೆ ನೋಡಿಱೆದೊಡ
ನಱೆವುದೆ ಪೆಣ್ ತಪ್ಪಿ ನಡೆಯೆ ಚಿಃ ಕಿಸುಗುಳಮೆಂ
ದುಱಿವುದೆ ಗೆಲ್ಲಂಕೊಂದಾ
ಪುಱು ಪುಟ್ಟುವ ನರಕದೊಳಗೆ ಬೀಱ್ವಿನೆ ಚದುರಂ            ೫೬

ಎಂದು ನೆನೆದಿಱೆಯಲೊಲ್ಲದೆ
ಬಂದರಸಂ ಮುನ್ನಿನಂತೆ ಪವಡಿಸೆ ತಾನುಂ
ಬಂದು ಮಱೆದರಸನೊಱಗಿದ
ನೆಂದೊಯ್ಯನೆ ಸಾರ್ದು ಪೆಱಗೆ ಪಟ್ಟಿರ್ಪಾಗಳ್                              ೫೭

ಮುಟ್ಟಿದೊಡೆ ಸುಖದ ಸೋಂಕಂ
ಪುಟ್ಟಿಸುವಾ ವಾಮೆ ವಾಮೆಯಾದೊಡೆ ಮುನ್ನಂ
ಬಟ್ಟಿದುವೆನಿಸುವ ಮೊಲೆ ನಿರ್
ವೆಟ್ಟಿದುವಾದುವು ನೃಪಂಗೆ ಬೆನ್ ಸೋಂಕಲೊಡಂ                          ೫೮

ಬದಗುಳಿಗನ ತೋಳ್ಮುಟ್ಟಿದ
ಸುದತಿಯೊಳಿಂಬಾಗದಂತೆ ಕೆಟ್ಟುದು ಪುಱೆ ಮು
ಟ್ಟಿದ ದುಗ್ಧದಂತೆ ನೀರ್ ಮು
ಟ್ಟಿದ ಜೇನೆಯ್ಯಂತೆ ಪತಿಗೆ ಶಯ್ಯಾತಳದೊಳ್                               ೫೯

ಆ ಗಂಡನನಪ್ಪಿದ ತೋಳ್
ಪೋಗಂಡನನಪ್ಪುವಂತೆ ಮಾಡಿದ ಬಿದಿಯಂ
ಮೂಗಂ ಕೊಯ್ದಿಟ್ಟಿಗೆಯೊಳ್
ಪೋಗೊರಸದೆ ಕಂಡೆನಾದೊಡೇಂ ಬಿಟ್ಟಪೆನೇ                               ೬೦

ಎನೆ ಕೇಳ್ದು ಮಾರಿದತ್ತಾ
ವನಿಪನವಂಗಭಯರುಚಿ ಬಱೆಕ್ಕಿಂತೆಂದಂ
ಮನಸಿಜನ ಮಾಯೆ ವಿಧಿವಿಳ
ಸನದ ನೆರಂಬಡೆಯ ಕೊಂದು ಕೂಗದೆ ನರರಂ                             ೬೧

ಪದವಿಯ ರೂಪಿನ ಸೊಬಗಿನ
ಮದಮಂ ಮಾಡುವರ ಮೂಗಿನೊಳ್ ಪಾತ್ರಮನಾ
ಡದೆ ಮಾಣದನಂಗನ ಕೃತಿ
ಸುದತಿಯರ ವಿಕಾರಮೆಂಬ ವಿದ್ಯಾಬಲದಿಂ                                  ೬೨

ಆ ರಾಜಕುಮಾರಂ ಬಱೆ
ಕಾ ರೂಪಿನ ಪೆಂಡಿರಿಂತು ಕಱೆಪಾದೊಡೆ ಚಿಃ
ಕೂರಿಸುವ ಕೂರ್ಪ ಮಾತಂ
ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂದಂ                          ೬೩

ಒಲಿಸಿದ ಪೆಣ್ ಪೆಱರೊಳ್ ಸಂ
ಚಲಿಸಿದೊಡಿದು ಸುಖಮೆ ಪರಮಸುಖಸಂಪದಮಂ
ಸಲಿಸಿ ಸಲೆ ನೆರೆವ ಮುಕ್ತಿಯ
ನೊಲಿಸುವೆನಿನ್ನೊಲ್ಲೆನುಱೆದ ಪೆಂಡಿರ ನಣ್ಣಂ                                  ೬೪

ಎಂದಿಂತು ಬಹುವಿಕಲ್ಪದ
ದಂದುಗದೊಳೆ ಬೆಳಗು ಮಾಡಿ ಮೆಯ್ಮುರಿದೆರ್ದಂ
ಬಂದು ತೊಡೆವೊಯ್ದು ಬೋಧಿಸಿ
ದಂದದಿನೆಸಗಿತ್ತು ಸುಪ್ರಭಾತಾತೋದ್ಯಂ                                     ೬೫

ಕೃತನಿತ್ಯದಾನನಾವೀ
ಕ್ಷಿತಘೃತನಾಸ್ಟೃಷ್ಟಕಪಿಳನೊಯ್ಯನೆ ಸಾರ್ದಂ
ಕತಿಪಯ ಪರಿಚಿತ ಪರಿಜನ
ಚತುರವಚಃಪ್ರಚಯರುಚಿಯನರಸಿಯನರಸಂ                               ೬೬

ಲಂಪಣನವೊಲೇನಾನುಮ
ಲಂಪಿನ ನಗೆನುಡಿಯ ನೆವದೆ ನೆಯ್ದಿಲ ಪೂವಿಂ
ದಂ ಪೊಯ್ಯೆ ಮೂರ್ಛೆವೋದಳ್
ಸಂಪಗೆಯಲರ್ಗಂಪು ಪೊಯ್ದ ತುಂಬಿಯ ತೆಱದಿಂ                          ೬೭

ಅಕಟಕಟ ನೊಂದಳೆತ್ತಿರೆ
ಸುಕುಮಾರಿಯನೆನುತುಮಿನಿತು ಕೊಂಕಿಂ ನುಡಿದಂ
ಪ್ರಪಿತಚಿತ್ತಂ ಭೂನಾ
ಯಕನೇನಣಕಕ್ಕೆ ಸವಣನುಂ ಸ್ಕೆರಿಪನೇ                                    ೬೮

ದೈವದಿನೆಂತಕ್ಕಂದಿನ
ಸಾವೋಸರಿಸಿದುದು ಕರ್ಣಭೂಷಾವಳಿ ಭೂ
ಷಾವಳಿಯಾಗದೆ ಸೆಳೆದೊಡೆ
ಸಾವಲ್ಲಿಗೆ ಕೈಯ್ದುವಾಯ್ತು ನೆಯ್ದಿಲ ಕುಸುಮಂ                             ೬೯

ಪೋದಿರುಳಿನ ಕಿತ್ತಡಮಂ
ಮೂದಲೆಯಾಗಿಂತು ನುಡಿದೊಡಱೆದುದನಱೆದಾ
ಪಾದರಿಗೆ ಸತ್ತವೋಲಿರೆ
ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ                         ೭೦

ಮಗನ ಮೊಗಮಂ ನೀಡುಂ ನೋಡುತ್ತುಮಱ್ಕಱಳುರ್ಕೆಯಿಂ
ದುಗುವ ಮೊಲೆವಾಲ್ ಪುಣ್ಯಸ್ನಾನಾಂಬುವಾಗಿ ಪದಾಬ್ಜದಿಂ
ನೆಗಪಿ ಪಲವಪ್ಪಾಶೀರ್ವಾದಂಗಳಿಂದಮರ್ದಪ್ಪಿ ಜೋ
ಲ್ದುಗುವ ಕುರುಳಂ ತಿರ್ದುತ್ತುಮಿಂತೆಂದಳಂದಿನ ಭಂಗಿಯಂ               ೭೧

ಅಭಯರುಚಿಕುಮಾರ‍ಂ ಮಾರಿದತ್ತಂಗೆ ಹಿಂಸಾ
ರಭಸಮತಿಗೆ ಸಯ್ಪಂ ಪೇಱ್ದು ಧರ್ಮಕ್ಕೆ ತಂದೀ
ಶುಭಕಥನಮತ್ಯಾನಂದದಿಂ ಕೇಳ್ವ ಭವ್ಯ
ಪ್ರಭು ಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ                           ೭೨

ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ
ಸದಮಲ ರಾಮಚಂದ್ರ ಮುನೀಂದ್ರಪದಭಕ್ತಂ
ಜನ್ನಕವಿ ಜನಕ್ಕೆ ಮಾಡಿದ ಯಶೋಧರ ಚರಿತಾವತಾರಂ