ರತಿವೆರಸು ಮನಸಿಜಂ ಬನ
ದತಿಶಯಮಂ ನೋಡಲೆಂದು ಬರ್ಪಂತೆ ಯಶೋ
ಮತಿ ಕುಸುಮಾವಳಿವೆರಸು
ನ್ನತಪೀತಚ್ಚತ್ರನಂದನಂ ನಡೆತಂದಂ                                          ೦೧

ಬಾಳಲರ್ಗುಡಿ ಪಿಕರುತಿ ಬಾ
ಯ್ಕೇಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂ
ಪಾಳಂ ಬರೆ ಶೋಧಿಪ ವನ
ಪಾಳನವೊಲ್ ಮುಂದೆ ಬಂದುದಂದು ಬಸಂತಂ                               ೦೨

ತಳಿರ್ಗಳ ಚಾಳೆಯಮೆಳಲತೆ
ಗಳ ಲುಳಿ ತಿಳಿಗೊಳದ ತೆರೆಯ ತಾಳಂ ಪೊಸ ವೂ
ಗಳ ನೋಟಮಾಗೆ ನೃಪನಂ
ಮಳಯಾನಿಳನೆಂಬ ನಟ್ಟುವಂ ಕೇಳಿಸಿದಂ                                      ೦೩

ಅಗೆವೊಯ್ದ ಚಂದ್ರಮಂಡಲ
ದಗೆಗಳವೊಲ್ ಕಾರಮುಗಿಲ ಕಿಱ್ಸಿರಿಗಳವೊಲ್
ಸೊಗಯಿಸಿದುವು ಬೆಳ್ಗೊಡೆ ಕಂ
ಬಗಂಬದೊಳ್ ಕೊಂಬುಗೊಂಬಿನೊಳ್ ಪೆರ್ಮಿಡಿಗಳ್                          ೦೪

ಎಲೆ ಸುಲಿದೆಡೆಗಳ ಕಣ್ ಕ
ಣ್ಗೆಲೆಯೆಡೆ ಗಂಟೊಡೆದು ಮೊನಸಿ ನನೆದೋಱೆ ಮುಗು
ಳ್ತಲರ್ದು ಮಱೆದುಂಬಿಗಂ ತೆಂ
ಬೆಲರ್ಗಂ ಮುದ್ದಾದುವಲ್ಲಿ ಪೊಸ ಮಲ್ಲಿಗೆಗಳ್                                  ೦೫

ಪೊಂಬಾಱೆ ಚಾಮರಂ ಚಂ
ದ್ರಂ ಬೆಳ್ಗೊಡೆ ಕೇಳಿಶಿಖಿರಿ ಸಿಂಹಾಸನಮಾ
ಯ್ತೆಂಬಿನೆಗಮಂಗಜಂ ಮಾ
ವೆಂಬ ಕುಮಾರಂಗೆ ಪಟ್ಟಮಂ ಕಟ್ಟಿಸಿದಂ                                      ೦೬

ಕಡೆಗಣ್ಗಳ್ ಕೇದಗೆಯಂ
ಪಡೆದುವು ಮಲ್ಲಿಗೆಗೆ ಸೆಳ್ಳುಗುರ್ ಸಂಪಗೆಯಂ
ಪಡೆದುವು ಪಾದರಿಗೆನೆ ಸಂ
ಗಡದಿಂದಲರ್ಗೊಯ್ವ ವಾರವನಿತೆಯರೆಸೆದರ್                                ೦೭

ಮಳಯಜದ ಮೊಲೆಯ ಕುಂಕುಮ
ದಳಕದ ಕತ್ತುರಿಯ ಬಣ್ಣವಣ್ಣಿಗೆ ಕೊಳದೊಳ್
ತಳರ್ದಿರೆ ಜಲರುಹಮುಖಿಯರ್
ಜಳಕೇಳಿಯ ನೆವದೆ ದೂಳಿಚಿತ್ರಂ ಬರೆದರ್                                   ೦೮

ತೆರೆಮುಗಿಲಡರ್ವ ವಿದ್ಯಾ
ಧರಿಯೆಂಬಿನಮೊರ್ವಳೇಱೆ ಕೃತಕಾದ್ರಿಯನೇಂ
ದೊರೆಯಾದಳೊ ರತಿನಾಥನ
ಕರುಮಾಡದ ಮದನಮೋಹಿನೀ ಪುತ್ರಿಕೆವೊಲ್                               ೦೯

ಬೆಳತಿಗೆವಸದನಮೆಸೆದಿರೆ
ತಳಿರ್ಜೊಂಪದೊಳುಯ್ಯಲಾಡಿ ಮೆಱೆದಳದೊರ್ವಳ್
ಜಳಜದ ಮಣಿಮಂಡಪದೊಳ
ಗೆಳವೆಱೆಯಂ ತೂಗಿ ತೊಟ್ಟಿಲೊಳ್ ಸಾರ್ಚಿದವೊಲ್                         ೧೦

ಕೊಳದೊಳಗೋಲಾಡಿ ತಳಿ
ರ್ತೆಳ ಮಾವಿನೊಳುಯ್ಯಲಾಡಿ ನರಪತಿ ಕುಸುಮಾ
ವಳಿಯೊಳ್ ರತಿರಾಗದಿನೋ
ಕುಳಿಯಾಡಿ ವಿಲಾಸಗೋಷ್ಠಿಯೊಳ್ ಕುಳ್ಳಿರ್ದಂ                                ೧೧

ಗರಟಿಗೆಗಿತ್ತಲ್ ತದ್ವನ
ಪರಿಸರದೊಳ್ ಬರುತುಮಿರ್ದಕಂಪನರೆಂಬರ್
ತರುಮೂಲದೊಳಿರೆ ನಿಧಿಯಂ
ಕುರುಡಂ ಕಾಣ್ಬಂತೆ ಚಂಡಕರ್ಮಂ ಕಂಡಂ                                   ೧೨

ಮನಮಿರೆ ಪುರ್ವಿನ ಮೊದಲೊಳ್
ಮನದೊಳಗಿರೆ ವಾಯು ಕರಣತತಿ ವಾಯುವಿನೊಳ್
ಕುನಿದಿರೆ ಪದ್ಮಾಸನದೊಳ್
ತನುವಿರೆ ಯೋಗೀಂದ್ರನಾತ್ಮ ಚಿಂತೆಯೊಳಿರ್ದಂ                             ೧೩

ಎಱಗಿದನಾತಂ ಗೌರವ
ಮಱೆಯದೆಯುಂ ದೀಪವರ್ತಿ ನಿಧಿಗಾಣ್ಬುದುಮೊ
ಲ್ದೆಱಗುವ ತೆಱದಿಂ ಮುನಿ ಕಣ್
ದೆಱೆದೊಯ್ಯನೆ ನೋಡಿ ಪರಸೆ ಬಱೆಕಿಂತೆಂದಂ                              ೧೪

ಎಲೆ ದೇವರೆ ಪುತ್ತುಂ ಬ
ತ್ತಲೆಯುಂ ಬಱೆದಿಲ್ಲದೆಂಬರದು ಕಾರ‍ಣದಿಂ
ನೆಲೆಯಾಂದೆಯನಚ್ಚಿದವೋ
ಲೆಲೆ ಮಿಡುಕದೆ ನೆನೆಯುತಿರ್ದಿರೇನಂ ಮನದೊಳ್                          ೧೫

ಅವಧಾರಿಸಿ ಕೇಳ್ವುದುಮವ
ರವಧಿಯಿನಾಸನ್ನಭವ್ಯನೆಂಬುದನಱೆದಿಂ
ತವರಿಂತು ನುಡಿದರಾತ್ಮನ
ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ                                    ೧೬

ಆವೆಡೆಯೊಳಿರ್ದನಾತ್ಮಂ
ಗಾವುದು ಕುಱುಪೆಂದೊಡಾಂಗಿಯಂಗದೊಳೆಲ್ಲಂ
ತೀವಿರ್ಪಂ ಭೂತ ಚತು
ಷ್ಟಾವಯವದಿನನ್ಯನಾತ್ಮನತಿಚೈತನ್ಯಂ                                       ೧೭

ಎಂದೊಡೆ ತಳಾಱನಾಯಕ
ನೆಂದಂ ನೀಮೆಂದ ಮಾತು ಪೊಲ್ಲದು ನೋಡ
ಲ್ಕೆಂದು ಪಲರಂ ವಿಚಾರಿಸಿ
ಕೊಂದೆಂ ತನುವಲ್ಲದಾತ್ಮನಂ ಕಂಡಱೆಯೆಂ                                  ೧೮

ಕಡಿದು ಕಿಱೆಕಿಱಿದನೆಲುವಂ
ಪುಡಿಗುಟ್ಟಿಸಿ ತೊವಲನುಗಿದು ಕರುಳ ತೊಡಂಕಂ
ಬಿಡಿಸಿ ನಡೆ ನೋಱ್ದೆನೊಳಗೆ
ಲ್ಲಡಗಿರ್ಪುದು – ಜೀವನಿರ್ಪೊಡೆಲ್ಲಿಗೆ ಪೋದಂ                                ೧೯

ಕುದಿರೊಳ್ ಕಳ್ಳನನಿಕ್ಕಿಸಿ
ಸೊದೆಯಿಟ್ಟರೆ ಬಱಿದು ಬಱಿಕ ತೆಱೆದೊಳಗಂ ನೋ
ಡಿದೆನಾತ್ಮನಿಲ್ಲ ತನುವಿ
ರ್ಪುದು ಬೇಱೆಂಬಾತ್ಮನಂ ನೆಲಂ ನುಂಗಿದುದೋ                            ೨೦

ತೂಗಿಸಿ ತೊಲೆಯೊಳ್ ಬಾಯಂ
ಮೂಗುಮನಡೆಯೊತ್ತಿ ಕೊಂದ ಕಳ್ಳನ ದೇಹಂ
ತೂಗಿದೊಡೆ ಕುಂದದಾತ್ಮವಿ
ಭಾಗಂ ಬೇಱೆಲ್ಲ ಜೀವನಂತುಂ ದೇಹಂ                                      ೨೧

ಎಂದೊಡೆ ದಂಡಧರಂಗಿಂ
ತೆಂದರ್ ಗುರುಗಳ್ ವಿಮೋಹಮೃಗಮಂ ಮಿಥ್ಯಾ
ಕಂದರದೊಳ್ ಬೆದಱಟ್ಟುವ
ದುಂದುಭಿರವದಂತಿರೊಗೆಯ ಗಂಭೀರ ರವಂ                                ೨೨

ತಱೆದೊಡೆ ಕಡಿದೊಡೆ ಸೀಳ್ದೊಡೆ
ಪೊಱಮಡುವುದೆ ಕಿಚ್ಚು ಕಾಷ್ಠದಿಂ ಪೊಸೆಯಲೊಡಾಂ
ಪೊಱಮಾಡುವುದಂತೆ ಜೀವಂ
ಪೆಱತೊಡಲಿಂ ತೋಱಗುಂ ವಿವೇಕಕ್ರಿಯೆಯಿಂ                               ೨೩

ಕುದಿರೊಳಗಿರ್ದೂದಿದ ಶಂ
ಖದ ದನಿ ನಿಶ್ಛಿದ್ರಮಾದೊಡಂ ಪೊಣ್ಮದೆ ಶಂ
ಖದಿನನ್ಯಮಲ್ಲದೇಂ ಪೊ
ಣ್ಮಿದ ನಾದಂ ಕಾಯದಿಂದೆ ಜೀವನುಮನ್ಯಂ                                  ೨೪

ತೀವಿದ ತಿದಿಯಂ ತೂಗಿಯು
ಮಾ ವಾಯುವನಿಱೆಪಿ ತೂಗಿಯುಂ ಸರಿ ತಿದಿಯಿಂ
ದಾ ವಾಯು ಬೇಱೆ ತನುವಿಂ
ಜೀವಂ ಬೇಱೆಂದು ಮಗನೆ ಭಾವಿಸಿ ನೋಡಾ                                ೨೫

ಏ ದೊರೆಯನಾತ್ಮನೆಂದೊಡ
ನಾದಿಯನಂತಂ ನಿರತ್ಯಯಂ ಚಿನ್ಮಯ ನಿಃ
ಪ್ರಾದೇಶಿಕನೆಂದಾತನು
ಪಾದೇಯಂ ಮುಕ್ತಿಮುಕ್ತನಂ ಪರಮಾತ್ಮಂ                                  ೨೬

ಕಲ್ಲೊಳ್ ಪೊನ್ ಪಾಲೊಳ್ ಘೃತ
ಮಿಲ್ಲೆನವೇಡುಂಟು ದೇಹದೊಳಗಾತ್ಮನದೇ
ಕಿಲ್ಲ ಕುರುಡಂಗೆ ತೋಱದೊ
ಡಿಲ್ಲಪ್ಪುದೆ ವಸ್ತು ಭೇದಿಪಂಗಾತ್ಮನೊಳಂ                                     ೨೭

ಮಾಡುವನಾತ್ಮಂ ನೆಟ್ಟನೆ
ಮಾಡಿದುದುಣ್ಬಾತನಾತ್ಮ ನಘ ಜಲಧಿಯೊಳೋ
ಲಾಡುವೊಡಾಂ ಗುಣಗಣದೊಳ್
ಕುಡುವೊಡಂ ಜನ್ಮಜಲಧಿಯಂ ದಾಂಟುವೊಡಂ                            ೨೮

ಪರಮಾತ್ಮ ನೆನ್ನನೆಂದೊಡೆ
ಚರಮಾಂಗಪ್ರಮಿತನಖಿಲಲೋಕ ಸಮಾನಂ
ನಿರವಯವಂ ನಿತ್ಯಂ ನಿ
ರ್ದುರಿತನನಂತ ಪ್ರಭೋಧದರ್ಶನ ಸೌಖ್ಯಂ                                ೨೯

ಕೇವಲ ವಿಭೋಧನೇತ್ರನೆ
ದೇವನೆ ಪರಮಾತ್ಮನಾಗಮಂ ತದ್ವಚನಂ
ಜೀವದಯೆ ಧರ್ಮಮೆಂಬೀ
ಭಾವನೆಯಿಂ ನೆಱೆಯೆ ನಂಬುವುದು ಸಮ್ಯಕ್ತ್ವಂ                              ೩೦

ಕೊಲಲಾಗದು ಪುಸಿಯಾಗದು
ಕಳಲಾಗದು ಪೆಱರ ಪೆಂಡಿರೊಳ್ ತನ್ನ ಮನಂ
ಸಲಲಾಗದು ತೀರದುದ
ಕ್ಕಲವಱಲಾಗದು ಪರತ್ರೆಯಂ ಬಯಸುವವಂ                               ೩೧

ಇವು ಮೊತ್ತಮೊದಲಣುವ್ರತ
ಮಿವು ಮಸುಳದೆ ನಡೆದೊಡೈಹಿಕಾಮುತ್ರಿಕಮೆಂ
ಬಿವಱೊಳ್ ಸಮಸುಖಿಯಪ್ಪಂ
ಭವಭವದೊಳ್ ದುಃಖಿಯಪ್ಪನಿವು ಮಸುಳ್ದಾತಂ                             ೩೨

ಮಾಡಿದ ಕೋಱೆಯನಱೆದ
ರ್ಕಾಡಿ ಯಶೋಧರಂ ಚಂದ್ರಮತಿಯಿಂತಿರ್ಬರ್
ಗೂಡಿನ ಕೋಱೆಗಳಾದರೆ
ನೋಡಯ್ ಮತ್ತೊರ್ಮೆ ಬಱೆಲಿ ತಿರ್ಯಗ್ಗತಿಯೊಳ್                           ೩೩

ವ್ರತಹಾನಿ ಹಿಂಸೆಯೊಂದೀ
ಗತಿಗಿಕ್ಕಿದುದಱೆದ ನಾಲ್ಕುಮಾದೊಡೆ ಬಱೆಕೇಂ
ಚತುರಂಗಬಲ ಸಮೇತಂ
ಪ್ರಪಕ್ಶಂ ಶೂರನಾದೊಡೇನಂ ಮಾಡಂ                                      ೩೪

ಅದಱೆಂ ತನ್ನಂತಿರೆ ಬಗೆ
ವುದು ಪೆಱರಂ ಪ್ರಾಣಹಿಂಸೆಯಂ ಮಾಡಲ್ವೇ
ಡ ದಯಾಮೂಲಂ ಧರ್ಮಂ
ಪದುಳಿಸಿ ಕೇಳ್ ಮಗನೆ ಹಿತಮಿದುಭಯಭವಕ್ಕಂ                           ೩೫

ಗುರುವಿಂತು ಬೆಸಸೆ ಜಾತಿ
ಸ್ಮರಂಗಳಾಗಿರ್ದ ಪಕ್ಕಿಗಳ್ ಕೇಳ್ದೆರ್ದೆಯೊಳ್
ಪರಮೋತ್ಸವದಿಂ ವ್ರತಮಂ
ಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂ                             ೩೬

ಕಱಲೆ ನಿಜಹರ್ಷಬಾಷ್ಪದ
ಮಱೆವನಿ ಧರ್ಮಾನುರಾಗ ಮೇಘಧ್ವನಿವೊಲ್
ಮೊಱಗುವಿನಮೆಱಂಕೆಯ ಪೊಯಿಲ್
ಘಱೆಲನೆ ಕೂಗಿದುವು ಕೇಳ್ದನಿತ್ತ ನೃಪಾಲಂ                                 ೩೭

ಸ್ವರವೇಧಿ ವಿದ್ಯೆಯಂ ತ
ನ್ನರಸಿಗೆ ಮೆಱೆಯಲ್ಕೆ ದೇವಿ ನೋಡೆನುತೆಚ್ಚಂ
ಸರಲೆಯ್ದಿಸೆ ಕೆಡೆದುವವಂ
ತೆರಡರ್ಕಾಯುಃಪ್ರಮಾಣಮೊಂದಾದುದೆನಲ್                                ೩೮

ದೊರೆಕೊಳೆ ಸಮಾಧಿಮರಣಂ
ಚರಣಾಯುಧಯುಗಳಮಱೆದು ಕುಸುಮಾವಳಿಯೆಂ
ಬರಸಿಯ ಬಸಿಱೊಳ್ ಬಂದುವು
ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್                                 ೩೯

ಅಭಯಮತಿಯಭಯರುಚಿಯೆಂ
ಬಭಿಧಾನದೆ ಚಂದ್ರಮತಿ ಯಶೋಧರರಮಳ್ಗಳ್
ಶುಭಲಕ್ಷಣಮೊಪ್ಪುತ್ತಿರೆ
ಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ                                    ೪೦

ನುಣ್ಗುರುಳ ಪೊಳೆವ ಕಪ್ಪುಂ
ಕಣ್ಗಗ್ಗಳಮಾದ ಮೆಯ್ಯ ಬೆಳಗೆಸೆವಿನಮಾ
ಪೆಣ್ಗಂಡು ರಾಜ್ಯಲಕ್ಷ್ಮಿಯ
ಕಣ್ಗಳ ದೊರೆಯಾಗಿ ಸಮನೆ ಬಳೆವಿನಮಿತ್ತಲ್                             ೪೧

ಬೇಂಟೆಗೆ ನಡೆಯೆ ಯಶೋಮತಿ
ಗೆಂಟಱೊಳಾರಣ್ಯವಾಸಿಗಳ್ ನಿಲೆ ಕಂಡಾ
ಬೇಂಟೆ ಪರಿಯದೊಡೆ ಬಿನದದ
ಕಂಟಕನೀ ಸವಣನೆನುತೆ ಬರುತುಂ ಮುನಿದಂ                             ೪೨

ಮುನಿದೈನೂಱುಂ ಕುನ್ನಿಗ
ಳನಿತುಮನೊರ್ಮೊದಲೆ ತೋಱೆ ಕೊಳ್ಕೊಳಿಸೆ ಮಹಾ
ಮುನಿ ತಳರದೆ ಮೇರುವೊಲಿರೆ
ವನಮೃಗದವೊಲುರ್ಕನುಱೆದು ಸುಱೆದವು ನಾಯ್ಗಳ್                      ೪೩

ಆ ಯತಿಗಾಯತಿಗೆಡೆ ಕೌ
ಳೇಯಕತತಿ ನೃಪತಿ ಕೆಳರ್ದು ಮುಳಿದುರ್ಚಿದ ಕೌ
ಕ್ಷೇಯಕದೆ ಪೊಯ್ಯಲೆಯ್ದೆ ವಿ
ನೇಯಂ ಕಲ್ಯಾಣಮಿತ್ರನೆಂಬಂ ಪರದಂ                                      ೪೪

ಕೆಮ್ಮನಿ ಬಾಳಂ ಕಿಱ್ತಯ್
ಕಿಂ ಮಿತ್ರಂ ಯನ್ನಿವರ್ತಯತಿ ಪಾಪಾತ್ ಎಂ
ದಾನ್ ಮಾಣಿಸದೊಡೆ ಕೋಟಲೆ
ಯಂ ಮಾಡದೆ ದೇವ ನಿನಗೆ ದುರಿತಶತಂಗಳ್                              ೪೫

ಪೊಡೆಮಡಲೆತ್ತುವ ಕೈಗಳ್
ಪೊಡೆಯಲ್ಕೆತ್ತುಗುಮೆ ಮೂಱೆಂ ಲೋಕದ ಕೈಗ
ನ್ನಡಿ ಸಾಮರ್ಥ್ಯದ ಸದ್ಗುಣ
ದೊಡೆಯರೊಳದು ತಕ್ಕುದಲ್ಲದತ್ತಿಡು ಬಾಳಂ                                ೪೬

ಆ ರುಷಿಯ ಚರಣಕಮಲಮ
ನಾರಾಧಿಸಲೆಂದು ಬಂದು ಕಂಡೆಡೆವೊಕ್ಕು
ರ್ವೀರಮಣ ದುರ್ಬಲಸ್ಯ ಬ
ಲೋ ರಾಜಾ ಎನ್ನದಿವರ್ಗೆ ಮುಳಿವುದೆ ಮರುಳೇ                           ೪೭

ಇವರಾರೆಂದಿರ್ದಪೆ ನೀಂ
ಭುವನತ್ರಯ ತಿಳಕರಮಳಸದ್ಬೋಧ ಸುಧಾ
ರ್ಣವ ಪೂರ್ಣಚಂದ್ರರವನತ
ದಿವಿಜನರೋರಗರನನ್ಯ ಸಾಮಾನ್ಯಗುಣರ್                                ೪೮

ಅಱೆಯದೆ ಗೆಯ್ದೆಂ ಕ್ಷಮೆಯೆಂ
ದೆಱೆಗೆನೆ ನೃಪನೆಂದನಾವ ಜಾತಿಯದಾರೆಂ
ದಱೆಯದೆ ಮಿಂದು ಮುಱುಕಿಯು
ಮಱಿಯದ ಮಣಕಿನ ಅಣಂಬೆಗಾನೆಱಗುವೆನೇ                            ೪೯

ಒಂದು ಮೃಗಂ ಬೀಱದು ನೋ
ಡಿಂದಿನ ಬೇಂಟೆಯೊಳೆ ಸಿಂಟನಂ ಕಂಡುದಱೆಂ
ದೆಂದೊಡೆ ಪರದಂ ಪಾಪಂ
ಸಂದಿಸುವುದೆ ಪುಣ್ಯಮೂರ್ತಿಯಂ ಕಾಣಲೊಡಂ                           ೫೦

ತನುವಾರ್ಗಮಶುಚಿ ಶುದ್ಧಾ
ತ್ಮನೆ ಶುಚಿ ಕಾಗೆಯವೊಲೇನೊ ಮಿಂದವನೇಂ ಶು
ದ್ಧನೆ ಸಂಸ್ಕಾರಶತೇನಾ
ಪಿ ನ ಗೂಥಃ ಕುಂಕುಮಾಯತೇ ಎಂದಱೆಯಾ                           ೫೧

ಗಂಗಕುಲಚಕ್ರವರ್ತಿ ಕ
ಳಿಂಗಧರಾಧೀಶರಿವರಸಾರಂ ಸಂಸಾ
ರಂ ಗಡಮೆಂದಱೆದಱೆದು ತ
ಪಂಗೆಯ್ದರ್ ನಾಮದಿಂ ಸುದತ್ತಾಚಾರ್ಯರ್                             ೫೨

ಎಂಬುದುಮರಸಂ ಮುನಿವರ
ರಂ ಬಲಗೊಂಡೆಱಗಿ ನೆಗಱ್ದೆ ಪೊಲ್ಲಮೆಗೆ ತದೀ
ಯಾಂಬುಜಪದಮಂ ತನ್ನ ಶಿ
ರೋಂಬುಜದಿಂದರ್ಚಿಸಲ್ ಪರಿಚ್ಛೇದಿಸಿದಂ                              ೫೩

ಅದನವರವಧಿಯಿನಱೆದಾ
ಗದು ಬೇಡೆನೆ ನೃಪತಿ ಮತ್ತೆ ವಿಸ್ಮಯದಿಂ ಕೇ
ಳ್ವುದುಮುಸಿರ್ದರ್ ಭವದೊಳ್ ಬ
ರ್ದಿದ ಮಾತರ ಪಿತರರಂ ಪಿತಾಮಹರಿರವಂ                          ೫೪

ವೀರತಪಸ್ವಿ ಯಶೌಘ ಮ
ಹಾರಾಜಂ ನೋಂತು ಕಱೆದು ಸುರವರ ವನಿತಾ
ಸ್ನೇರಕಟಾಕ್ಷ ನಿರೀಕ್ಷಣ
ಕೈರವಶೀತಾಂಶು ದೇವನಾದಂ ದಿವದೊಳ್                              ೫೫

ಅಮೃತಮತಿಯಷ್ಟವಂಕಂ
ಗೆ ಮರುಳ್ಗೊಂಡತ್ತೆ ಗಂಡರಂ ವಿಷದಿಂ ಕೊಂ
ದು ಮುದಿರ್ತು ಕುಷ್ಠಿಕೊಳೆ ಪಂ
ಚಮ ನರಕದೊಳಱ್ದಳರಸ ಧೂಮಪ್ರಭೆಯೊಳ್                           ೫೬

ಜನಕಂ ಯಶೋಧರಂ ಪಿ
ಟ್ಟಿನ ಕೋಱೆಯನಱೆದು ಕಱೆದು ನವಿಲೆಯ್ ಮೀನಾ
ಡಿನ ಪೋರಿ ಪೋಂತು ಕುಕ್ಕುಟ
ಮೆನೆ ಪುಟ್ಟಿದನೀಗಳಭಯರುಚಿಯಾಗಿರ್ದಂ                             ೫೭

ನಿರವಿಸಿದ ಚಂದ್ರಮತಿಯೆಂ
ಬರಸಿಯೆ ನಾಯುರಗಿ ಮೊಸಳೆಯಾಡು ಲುಲಾಯಂ
ಚರಣಾಯುಧವಧುವಾದಳ್
ಗುರುವಚನದಿನೀಗಳಭಯಮತಿಯಾಗಿರ್ದಳ್                           ೫೮

ನಿನಗಂ ಕುಸುಮಾವಳಿಗಂ
ಜನಿಯಿಸಿದಮಳೆಂಬುವಭಯರುಚಿಮತಿಗಳ್ ಮು
ನ್ನಿನ ಜನ್ಮ ಮನಿತುಮಂ ನೆ
ಟ್ಟನೆ ಬಲ್ಲರ್ ಕೇಳ್ದು ನಂಬು ನೀನ್ ಧರಣಿಪತೀ                        ೫೯

ನೀನಱೆವೆ ಕೊಂದ ಘೋರಮ
ನೀ ನಿಗ್ರಹವಧೆಯಿನಂದು ಸತ್ತವರಱೆವರ್
ಮೀನಂ ಮೊಸಳೆಯುಮಾಡಂ
ತಾ ನೆಗಱ್ದಜಪೋತಮಹಿಷಮಾದಂದರಸಾ                            ೬೦

ಕೋಱೆಯ ಕೂಗೆತ್ತಲ್ ನೀನ್
ಸೂಱಱೆದವನೆಸೆವುದೆತ್ತಲಾ ಖಗಯುಗಳಂ
ಬೀಱಲೊಡನಾದ ಮಾನಸ
ವಾಱೆತ್ತಲ್ ನೋಡ ಧರ್ಮಮೊದವಿದ ಪದನಂ                           ೬೧

ಎನೆ ಮುನಿವಚನದೊಳಂ ನಂ
ದನರೊಳಮಾಗಳೆ ಯಶೋಮತಿ ಕ್ಷಿತಿಪಂ ತೆ
ಳ್ಳನೆ ತಿಳಿದು ಭಾಪು ಸಂಕ
ಲ್ಪನವಧೆಗಿನಿತಾಯ್ತು ದಿಟದಿನೇನೇನಾಗರ್                              ೬೨

ಎನಿತೊಳವು ಜೀವರಾಶಿಗ
ಳನಿತುಮನೋರಂತೆ ಕೊಂದು ತಿಂದು ತಣಿವಿ
ಲ್ಲೆನೆ ಬರ್ದೆನಿಂದುವರಮಿ
ನ್ನೆನಗಿನ್ನೆಂತಪ್ಪ ನರಕಮಿದಿರ್ವಂದಪುದೋ                              ೬೩

ಎಂದು ಸುದತ್ತಾಚಾರ್ಯರ
ಮುಂದಣಿನರಮನೆಗೆ ಪೋಗದುರ್ಮೀಭರಮಂ
ನಂದನನೊಳಭಯರುಚಿಯೊಳ್
ಸಂದಿಸಿ ತಾನ್ ಜೈನದೀಕ್ಷೆಯಂ ಕೈಕೊಂಡಂ                            ೬೪

ಶ್ರೀಜಿನದೀಕ್ಷೆಗೆ ತನುವಂ
ಯೋಜಿಸೆ ಕಲ್ಯಾಣಮಿತ್ರನುಂಬೆರಸು ಯಥಾ
ರಾಜಾ ತಥಾ ಪ್ರಜ ಎಂ
ಬೋಜೆಯಿನಂದರಸುಗಲ್ ಪಲರ್ ತಱೆಸಂದರ್                         ೬೫

ಆಗಳ್ ತಂದೆಯ ತಪದು
ದ್ಯೋಗಂ ತಡವಾಗದಂತೊಡಂಬಟ್ಟು ಮಹೀ
ಭೋಗಕ್ಕನುಜ ಯಶೋಧರ
ನಾಗಿರೆ ಬಱೆಕಭಯರುಚಿಯುಮನುಜೆಯ ಸಹಿತಂ                       ೬೬

ತಮದಿಂದಂ ಪೊಱಮಟ್ಟು
ತ್ತಮಚಾರಿತ್ರದೊಳೆ ನೆರೆದು ಮೆಯ್ಯಿಕ್ಕಿದ ಸಂ
ಯಮದೆ ಸುದತ್ತಾಚಾರ್ಯರ
ಸಮುದಾಯದೊಳಿರ್ದು ತತ್ತ್ವಪರಿಣತನಾದಂ                            ೬೭

ಆನಭಯರುಚಿಕುಮಾರನೆ
ಮೀ ನೆಗಳ್ದೆರ್ದಭಯಮತಿಯುಮೀಯಕ್ಕನೆ ದಲ್
ನಾನಾ ವಿಧ ಕರ್ಮದಿನಿ
ನ್ನೇನಂ ನೀನ್ ಕೇಳ್ವೆ ಮಾರಿದತ್ತನ್ಯಪೇಂದ್ರಾ          ೬೮

ಗುರುವಿಂದು ಬೆಸಸೆ ಭಿಕ್ಷೆಗೆ
ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ
ಪುರುಳಿಲ್ಲ ನಿನ್ನ ಕೇಡಂ
ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ                                ೬೯

ಸಂಕಲ್ಪಹಿಂಸೆಯೊಂದಱೊ
ಳಾನ್ ಕಂಡೆಂ ಭವದ ದುಃಖಮುಂಡೆಂ ನೀನ್ ನಿಃ
ಶಂಕತೆಯಿನಿನಿತು ದೇಹಿಗ
ಳಂ ಕೊಂದಪೆ ನರಕದೊಳ್ ನಿವಾರಣೆವಡೆದಯ್                             ೭೦

ಎಂದ ನುಡಿ ನೆರೆದ ಜೀವಕ
ದಂಬಂಗಳ್ಗಭಯಮೆಂಬ ಡಂಗುರದವೊಲೊ
ಪ್ಪಂಬಡೆಯ ಮಾರಿದತ್ತನೃ
ಪಂ ಬಿಲ್ಲುಂ ಬೆಱಗುಮಾದನುದ್ವೇಗಪರಂ                                     ೭೧

ಆ ಚಂಡಮಾರಿ ಲೋಚನ
ಗೋಚರತನುವಾಗಿ ಕುವರನಂ ಬಂದಿಸಿ ನೀ
ನಾಚಾರ್ಯನೆಯೆಂದಿಂತಿರೆ
ಸೂಚಿಸಿದಳ್ ನೆರೆದ ಜಾತ್ರೆ ನೆಱೆ ಕೇಳ್ವಿನೆಗಂ                                 ೭೨

ಪ್ರಜೆಯೆಲ್ಲಂ ಜಲಗಂಧ
ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ
ವ್ರಜದಿಂ ಪೂಜಿಸುವುದು ಜೀ
ವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ                                ೭೩

ಎಂದು ತಿರೋಹಿತೆಯಾದೊಡೆ
ತಂದಿರಿಸಿದ ಜೀವರಾಶಿಯಂ ಬಿಡಿಸಿ ಜನಾ
ನಂದನರಂ ತನ್ನನುಜೆಯ
ನಂದನರಂ ಮಾರಿದತ್ತ ವಿಭು ಲಾಲಿಸಿದಂ                                    ೭೪

ಗುಡುಗುಡನೆ ಸುರಿವ ಕಣ್ಬನಿ
ಯೊಡವಂದ ಶುಭಕ್ಕೆ ಮಂಗಳಸ್ನಾನಮನಂ
ದೊಡರಿಸೆ ಸೋದರಶಿಶುಗಳ
ನೊಡಲೊಳ್ ಮಡಗುವಿನಪ್ಪಿ ಬೆಚ್ಚನೆ ಸುಯ್ದಂ                               ೭೫

ತಾನಂದುವರೆಗಮೊದವಿಸಿ
ದೇನಂಗಳ್ಗಳ್ಕಿ ಕುಸುಮದತ್ತಂಗೆ ಧರಿ
ತ್ರೀನಾಥಪದವಿಯಂ ಕೊ
ಟ್ಟಾ ನರಪತಿ ಬಱಿಕೆ ದೀಕ್ಷೆಯಂ ಕೈಕೊಂಡಂ                                ೭೬

ಕೆಲಕಾಲಮುಗ್ರತಪಮಂ
ಸಲಿಸಿ ಸಮಾಧಿಯೊಳೆ ಮುಡಿಪಿ ಮೂಱೆನೆಯ ದಿವಂ
ನೆಲೆಯಾಗೆ ಮಾರಿದತ್ತಂ
ಕಲಿಯಂ ಮೂದಲಿಸಿದಂತೆ ದೇವನೆ ಆದಂ                                   ೭೭

ಅಮಳ್ಗಳ್ ಬಱೆಕೆ ಸುದತ್ತರ
ಸಮುದಾಯದೊಳಾಗಮೋಕ್ತಿಯಿಂ ನಡೆದು ತಪಂ
ತಮಗಮರೆ ನೋನ್ತು ಮುಡಿಪಿದ
ಸಮಯದೊಳೀಶಾನಕಲ್ಪದೊಳ್ ಜನಿಯಿಸಿದರ್                             ೭೮

ಮತ್ತಂ ಧರ್ಮವಿಹಾರ ನಿ
ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ
ದುತ್ತಮಗತಿಯಂ ಕೇಳ್ದು ಸು
ದತ್ತಾಚಾರ್ಯರ ಪದಾಬ್ಜಮಂ ಪೂಜಿಸಿದಂ                                   ೭೯

ಜೀವದಯೆ ಎಂಬುದೆಮ್ಮಯ
ಮಾವನ ಪೆಸರಿರ್ದ ನಾಡೊಳಿರದಾತಂಗಂ
ದೇವಗತಿಯಾಯ್ತು ಸೋದರ
ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ                             ೮೦
ಎಂದು ಮನಸಂದು ಜಿನಮತ
ನಂದನದೊಳ್ ದಾನಲತೆ ದಯಾರಸದೆ ಜಗಂ
ಪಂದರೆನೆ ಪರ್ವಿ ಪೊಸಜಸ
ದಿಂದಂ ಮರಲ್ದಿರೆ ಯಶೋಧರಂ ಬೆಳೆಯಿಸಿದಂ                             ೮೧

ಸಜ್ಜನ ಚೂಡಾಮಣಿ ತ
ಮ್ಮ ಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ
ಗುಜ್ಜಳಿಕೆವಡೆದ ಪೆರ್ಮೆಯೊ
ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ                                ೮೨

ತಾರಾತಾರ ಧರಾಧರ
ತಾರಾ ಧರತಾರಹಾರ ನೀಹಾರ ಪಯಃ
ಪೂರ ಹರಹಸನ ಶಾರದ
ನೀರದ ನಿರ್ಮಲಯಶೋಧರಂ ಕವಿತಿಲಕಂ                                 ೮೩

ಕ್ಷಯಮಂ ಪಿಟ್ಟಿನ ಕೋಱಿಗಿತ್ತು ನವಿಲುಂ ನಾಯಾದರೆಯ್ಯುಂ ವಿಷಾ
ಹಿಯುಮಾದರ್ ಪಗೆ ಸುತ್ತೆ ಮೀನ್ ಮೊಸಳೆಯಾದರ್ ಪೋಂತುಮಾಡಾದರ
ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಱೆಯಾದರ್ ತಪ
ಸ್ವಿಯ ಮಾತಿಂದಮಳಾದರಲ್ತೆ ಮಗನುಂ ತಾಯುಂ ಯಶೌಘಪ್ರಿಯರ್    ೮೪

ಅಭಯರುಚಿಕುಮಾರಂ ಮಾರಿದತ್ತಂತೆ ಹಿಂಸಾ
ರಭಸಮತಿಗೆ ಸಯ್ವಂ ಪೇಱ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ                           ೮೫

ಶ್ರೀಗಿರಿದುರ್ಗಮಲ್ಲನೃಪರಾಜ್ಯದೊಳುತ್ಸವಮುತ್ತರೋತ್ತರ
ಕ್ಕಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಯತಾರೆ ಪೂ
ರ್ಣಾ ಗುರುವಾಗೆ ಭೂತಳದೊಳೀ ಕೃತಿವೆತ್ತುದು ಸುಪ್ರತಿಷ್ಠೆಯಂ
ಚಾಗದ ಭೋಗದಗ್ಗಳಿಕೆಯಂ ಮಱೆದಂ ಕವಿಭಾಳಲೋಚನಂ             ೮೬

ಪರಮ ಜಿನೇಂದ್ರ ಶಾಸನವಸಂತದೊಳೀ ಕೃತಿಕೋಕಿಲಸ್ವನಂ
ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಗೆ ಸಂತತಂ
ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಳ್
ಸಿರಿ ನೆಲೆಸಿರ್ಕೆ ನಾಱ್ಟ್ರಭು ಜನಾರ್ಧನದೇವನ ವಕ್ತ್ರಪದ್ಮದೊಳ್           ೮೭

ಇದು ಪರಮ ಜಿನಸಮಯ ಕುಮುದಿನೀ ಶರಚ್ಛಂದ್ರ
ಸದಮಲ ರಾಮಚಂದ್ರ ಮುನೀಂದ್ರಪದಭಕ್ತಂ
ಜನ್ನಕವಿ ಜನಕ್ಕೆ ಮಾಡಿದ ಯಶೋಧರ ಚರಿತಾವತಾರಂ

               ಸಂಪೂರ್ಣಂ