ಶ್ರೀರಮಣಿ ತೋರಮುತ್ತಿನ
ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ
ಪೇರುರಮಾಗಿರೆ ತಾಳ್ದಿದ
ರಾರೋ ಯಶೋಧರನೃಪೇಂದ್ರ ನೀನಲ್ಲದವರ್                               ೧

ನಿನಗೆ ಶುಭವೆಂದ ವಂದಿಯ
ಮನೆಯಂಗಣದೊಳಗೆ ಪಣ್ತು ಪರ್ವಿದ ಮಂದಾ
ರ ನಮೇರಾ ಪಾರಿಜಾತದ
ಬನದೊಳ್ ಸಿರಿ ಮೆಱೆವುದಲ್ತೆ ವನಕೇಳಿಗಳಂ                                  ೨

ಮನಸಿಜ ಕಲ್ಪಲತಾನಂ
ದನಮೆನೆ ಬಿಂಕಕ್ಕೆ ಕೊಂಕಿದಬಲಾಜನಮಂ
ನನೆಕೊನೆವೋಗಿಸುತಿರ್ಪುದು
ಮನುಜ ಮನೋಭವ ಭವದ್ವಿಳಾಸವಸಂತಂ                                 ೩

ಬಳೆಗೋದುದು ಕೀರ್ತಿ ದಿಶಾ
ಕಳಭಂಗಳ ನಿಗ್ಗವಂಗಳೊಳ್ ರಿಪುಕಾಂತಾ
ವಳಿಯೊಳ್ ಭವತ್ಪ್ರತಾಪಂ
ಬಳೆಗಳೆಯಿಸೆ ತಾನದಕ್ಕೆ ಮಚ್ಚರಿಸುವವೋಲ್                               ೪

ಉದಧಿ ಪರಿಯಂತವಿಳೆಯೊಳ
ಗೊದವಿದ ನಿನ್ನಾಜ್ಞೆ ಮಣಿಕಿರೀಟಂಗಳನೀ
ಱ್ದೊದೆದುರುಳೆ ನೂಂಕಿ ಕುಳ್ಳಿ
ರ್ದುದು ನೆತ್ತಿಯ ಮೇಲೆ ಸಕಲಭೂಪಾಲಕರಾ                                  ೫

ಕೊಱತೆ ನಿನಗಿಲ್ಲದೇಕೆಂ
ದಱೆಯೆಂ ನೀರೋಡಿ ನಿನ್ನ ತನುವಿನ ಬಣ್ಣಂ
ಬಱುಗೊಳದವೊಲಾಯ್ತೀಕ್ಷಿಸಿ
ಮಱುಗಿದುದಱುನೀರ ಮೀನ್ದೊಲಿಂದೆನ್ನ ಮನಂ                                ೬

ಮಂದಸ್ಮಿತ ವರ ಕೌಮುದಿ
ನಿಂದುದು ಮೃಗನಾಭಿತಿಳಕಲಕ್ಷ್ಮದ ಪೊಳಪಿ
ಲ್ಲಿಂದೇಕೆ ಕಂದ ಪಗಲೊಗೆ
ದಿಂದುವಿನಂತಾಯ್ತು ನಿನ್ನ ಮಂಗಲವದನಂ                                   ೭

ಎಂದು ಬೆಸಗೊಂಡ ತಾಯ್ಗೆ ಮ
ನಂದೋಱದೆ ನೆವದಿನರಸನಿಂತುಸಿರ್ದಂ ಸುಯ್
ಕಂದಿಸಿದಧರಕ್ಕೆ ಸುಧಾ
ಬಿಂದುಗಳಂ ತಳಿಯೆ ದಂತಕಾಂತಿ ಪ್ರಸರಂ                                    ೮

ದೇವಿಯರ ಪರಕೆಯಿಂದೆನ
ಗಾವುದಱೊಳ್ ಕೊಱತೆಯಿಲ್ಲ ಪೋದಿರುಳೊಳ್ ಪೊಂ
ದಾವರೆಗೊಳದಂಚೆ ಕಱ
ಲ್ದಾವರೆಗೊಳದೊಳಗೆ ನಲಿವ ಕನಸಂ ಕಂಡೆಂ                                 ೯

ಗೋದಾಮೆಗಂಡ ನವಿಲಂ
ತಾದುದು ಕಾರ್ಗಂಡ ಹಂಸನವೊಲಾದುದಲರ್
ಪೋದ ಲತೆಗಂಡ ವಿರಹಿವೊ
ಲಾದುದು ದುರ್ನಯದ ಕಾಣ್ಕೆಗೆನ್ನಯ ಚಿತ್ತಂ                                 ೧೦

ವನಿತೆಯ ಕೇಡಂ ಜನಪತಿ
ಕನಸಿನ ನೆವದಿಂದೆ ಮಱಸೆ ತಲ್ಲಣದಿಂ ತಾಯ್
ನೆನೆದಳ್ ಪೊಲ್ಲಮೆಯಂ ವಂ
ಚನೆಯೆಲ್ಲಿಯುಮೊಳ್ವ ನಾಗಲೀಯದುಕಡೆಯೊಳ್                             ೧೧

ಅಡಸಿದ ನಲ್ಲಳ ತಪ್ಪಂ
ತಡವಿಕ್ಕಿದೊಡೇಱು ಭವದ ಕೇಡಡಸುವ ಕಿಱ್
ನುದಿಯಂ ನುಡಿದಳ್ ತಾಯೊಂ
ದಡಸಿದೊಡೇಱಡಸಿತೆಂಬ ನುಡಿ ತಪ್ಪುಗುಮೇ                                ೧೨

ದೇವ ಕನಸಿದು ಕರಂ ದೋ
ಷಾವಹಮಿಳಿಕಯ್ಯಲಾಗ ನಿನ್ನಸಿಮುಖದಿಂ
ದಾವಣಿಗುಱೆಯಂ ತಱೆದೊಡೆ
ದೇವಿ ಶುಭೇತರ ವಿನಾಶಯಂ ದಯೆಗೆಯ್ಗಂ                                  ೧೩

ಮುಂತಱೆಪೆ ತಾಯ ವಚನದೊ
ಳಂತು ಶುಭೇತರವಿನಾಶ ಶಬ್ದಮಿಳೇಶಂ
ಶಾಂತಂ ಪಾಪಮೆನುತ್ತುಂ
ಶಾಂತಮನಂ ಪೇಸಿ ಮುಚ್ಚಿಕೊಂಡಂ ಕಿವಿಯಂ                              ೧೪

ಮೇಗಂ ಬಗೆವೊಡೆ ವಧೆ ಹಿತ
ಮಾಗದು ಮರ್ತ್ಯಂಗೆ ನಿಟ್ಟೆಯೇ ಮಾನಸವಾಱ್
ಈಗಳೊ ಮೇಣ್ ಗಳೊ ಆ
ಸಾಗುದುರೆಗೆ ಪುಲ್ಲನಡಕಿ ಕಿಡುವನೆ ಚದುರಂ                                 ೧೫

ಎಂದೊಡೆ ಮುನಿದಂಬಿಕೆಯಿಂ
ತೆಂದಳ್ ನಿಜಮಪ್ಪಮೋಹದಿಂ ಸಲುಗೆಯಿನೆಯ್
ತಂದಳ್ ನಾಡೆ ನೃಪೇಂದ್ರನ
ಮುಂದಣಗತಿಗಪ್ಪ ಬಟ್ಟೆಯಂ ಕಟ್ಟುವವೊಲ್                                 ೧೬

ಪರಿಹರಿಪೆಯೆಮ್ಮ ನುಡಿಯಂ
ಗುರುವಚನಮಲಂಘನೀಯಮೆನ್ನದೆ ನೀನಾ
ದರದಿಂ ಕೈಕೊಳ್ ಧರ್ಮದೊ
ಳರಸುಗಳೇಂ ಶಾಂತಿಯೆಂದೊಡನುಸರಿಸರೆ ಪೇಱ್                         ೧೭

ಇವು ಧರ್ಮಮೆಂದು ಬಗೆವೊಡ
ಮವಿವೇಕದೆ ಶಾಂತಿಮಾಡೆ ಬೇತಾಳಂ ಮೂ
ಡುವ ತೆಱದೆ ಹಿಂಸೆಯಿಂ ಮೂ
ಡುವ ಮುಂತಣ ಕೇಡನೆಂತು ಕಱೆವೆಂ ಬಱೆಯಂ                           ೧೮

ಜೀವದಯೆ ಜೈನಧರ್ಮಂ
ಜೀವಹಿತಂ ನಂಬುವವರ್ಗೆ ಹಿಂಸೆಯಮೋಹಂ
ಭಾವಿತಮೆ ತಪ್ಪಿ ನುಡಿದಿರ್
ಕಾವರೆ ಕಣೆಗೊಳ್ವೆಡಬ್ಬೆ ಬಾರಿಪರೊಳರೇ                                    ೧೯

ಆದೊಡೆ ಪಿಟ್ಟಿನ ಕೋಱಿಯ
ನಾದೊಡಮಿಂದೊಂದನಿಕ್ಕವೇಱ್ಟುದು ಮಿಕ್ಕಂ
ದಾ ದೇವಿಗೆನ್ನನಿಕ್ಕಿಯು
ಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ                              ೨೦

ಎನೆ ತಾಯ ಮೋಹದಿಂದಂ
ಜನಪನೊಡಂಬಟ್ಟು ಮನದೊಳಿಂತೆಂದಂ ಭಾ
ವನೆಯಿಂದಮಪ್ಪುದಾಸ್ರವ
ಮೆನಗಿನ್ನೆಂತಪ್ಪ ಪಾಪಮಿದಿರ್ವಂದಪುದೋ                                  ೨೧

ಮಾಡದೊಡೆ ತಾಯ್ಗೆ ಮರಣಂ
ಮಾಡಿದೊಡೆನ್ನೊಂದು ಗತಿಗೆ ಕೇಡಿಂದೇನಂ
ಮಾಡುವೆನೆಂದಾಂದೋಳಮ
ನಾಡೆ ಮನಂ ತಮಮನಪ್ಪುಕೆಯ್ದನಿಳೇಶಂ                                  ೨೨

ಆ ನೃಪತಿ ಬಱೆಕೆ ತಾಯುಂ
ತಾನುಂ ಚಂಡಿಕೆಯ ಪೂಜೆಗೆಂದೆಱ್ತಂದಂ
ನಾನಾ ವಿಧದರ್ಚನೆಯಿಂ
ಮನೋಮಿಯ ಮುಂದೆ ಬಂದ ಭೌಮಾಷ್ಟಾಮಿಯೊಳ್                      ೨೩

ಕರಮೆಸೆಯೆ ಸಮೆದು ಬಂದುದು
ಚರಣಾಯುಧಮಱ ಚಿತ್ರಪರಿಶೋಭೆಗೆ ಬೆಂ
ತರನೊಂದಾಶ್ರಯಿಸಿರ್ದುದು
ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ                                   ೨೪

ತಲೆಯಿಂ ಕುಕ್ಕೂಕೂ ಎಂ
ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ
ಲ್ಲುಲಿಯೆನೆ ಪಿಟ್ಟಿನ ಕೋಱಿಯ
ತಲೆಯಿಂ ಪಿಡಿವಂತಿರಟ್ಟೆ ಪಾಱೆದುದಿನಿಸಂ                                  ೨೫

ಪೊಡೆಯ ಕೃಕವಾಕು ನಿನದಂ
ಬಿಡದುಣ್ಮುತಿರಲ್ಕೆ ಕಯ್ಯ ಬಾಳ್ ಬಿಱ್ತರೆ ಪೊಯ್
ವಡೆದಂತೆ ಪಂದೆಯಂ ಪಾ
ವಡರ್ದಂತಾಗಿರೆ ಯಶೋಧರಂ ಬೆಱಗಾದಂ                                 ೨೬

ಏಕೆ ಕನಸೆಂದು ನುಡಿದೆನಿ
ದೇಕಂಬಿಕೆ ಬಲಿಯನೊಡ್ಡಿದಳ್ ಕೂಗಿದುದೇ
ಕೀ ಕೃತಕತಾಮ್ರಚೂಡನಿ
ದೇಕೆಂದಾರಱೆವರಯ್ಯ ವಿಧಿವಿಳಸನಮಂ                                    ೨೭

ಅಮೃತಮತಿಯೆಂಬ ಪಾತಕಿ
ಯ ಮಾಯೆ ಬನಮಾಯ್ತು ಚಂದ್ರಮತಿ ಮಾತೆಯ ಮಾ
ತೆಮಗೆ ಬಲೆಯಾಯ್ತು ಹಿಂಸನ
ಮಮೋಘ ಶರಮಾಯ್ತು ಕೆಡೆದುದಾತ್ಮ ಕುರಂಗಂ                           ೨೮

ಎಂದು ಮನಂ ಮಱುಗುವಿನಂ
ನೊಂದಲ್ಲಿಂ ತಳರ್ದು ಮನೆಗೆಉಬ್ಬೆಗಮೆಱೆದೊ
ಯ್ವಂದದೆ ಬಂದೀ ರಾಜ್ಯದ
ದಂದುಗಮೇಕೆಂದು ತೊಱೆಯಲುದ್ಯತನಾದಂ                               ೨೯

ಪರಿವಾರಮಂ ಪ್ರಧಾನರ
ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ
ಧರನಿಂತು ತಪಕೆ ನಡೆಯ
ಲ್ಕಿರೆ ಮೃತ್ಯುವಿನಂತೆಯರಸಿ ಬಂದಿಂತೆಂದಳ್                              ೩೦

ದೇವರ ಬಱೆಹೊಳೆ ಬರ್ಪೆಂ
ಪೂವಿನ ಸೌರಭದ ಮಾಱ್ಕೆಯಿಂ ಗಮನ ಪ್ರ
ಸ್ತಾವನೆಯೊಳಿಂದು ನೀಮುಂ
ದೇವಿಯುಮಾರೊಗಿಸಲಕ್ಕೆ ಎನ್ನರಮನೆಯೊಳ್                              ೩೧

ಎನೆ ಜನಪತಿ ಮನಮಲ್ಲದ
ಮನದೊಳೊಡಂಬಟ್ಟು ಬಂದು ತಾಯೊಡಾನುಣೆ ನಂ
ಜಿನ ಲಡ್ಡುಗೆಯಿಂ ಮಾಡಿದು
ದನುಣ್ ಮಹಾರಾಜ ಎಂಬಿನಂ ಸವಿದುಂಡಂ                                 ೩೨

ಅರಸನ ಮೂದಲೆ ಮನದೊಳ
ಗಿರೆ ಮೇಳಿಸಿಕೊಂಡು ಬಂದು ಪಾತಕಿ ಕೊಂದಳ್
ಬೆರಗಿಂ ಗಂಡನನಾ ಸ್ತ್ರೀ
ಚರಿತಮದೇಂ ಕಳೆಯಲರಿದು ಪೆಂಡಿರ ಕೃತಕಂ                              ೩೩

ಆ ಪಕ್ವಾನ್ನಮೆ ಮೃತಿಗು
ದ್ದೀಪನ ಪಿಂಡಾದವೊಲಾಗೆ ಅಘದಿಂ ಬೀಜಾ
ವಾಪಮೆನೆ ಜನ್ಮಲತೆಗೆ ಕ
ಲಾಪಿಸ್ತ್ರೀಯುದರದಲ್ಲಿ ವಿಂಧ್ಯದೊಳೊಗೆದಂ                                  ೩೪

ಅಂತೊಗೆದು ಮೊಟ್ಟೆಯೊಡೆದ
ಲ್ಲಿಂ ತೊಲಗದು ತಪ್ಪುಱೆಡದು ಕಾಲ್ಬಲಿಯದು ಕ
ಣ್ಣಂ ತೆಱೆಯದೆಂಬ ಪದಕೆ ಕೃ
ತಾಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ                         ೩೫

ಬೇಡಂ ಪಿಳುಕೊತ್ತಿನ ತಾಯ್
ಓಡಲ್ ಬಿಟ್ಟಲ್ಲಿ ಕೊಂಡು ಬಂದಾ ಪಿಳುಕಂ
ಬೇಡಿತಿಗೆ ಸಲಹಲಿತ್ತೊಡೆ
ಗೂಡಿನೊಳದು ಬಳೆದು ತಳೆದುದಂಗಚ್ಛವಿಯಂ                              ೩೬

ನವರತ್ನದ ಪಂಜರದೊಳ್
ದಿವಿಜ ಶರಾಸನದ ಮಱೆಯನಿರಿಸಿದವೋಲೆ
ತ್ತುವ ಸೋಗೆಯ ಸುತ್ತಿನೊಳಾ
ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗುಂ                             ೩೭

ಕರಹಟದೊಳ್ ಬೇಂಟೆಯ ಕು
ಕ್ಕುರಿಯಾದಳ್ ಸತ್ತು ಚಂದ್ರಮತಿಯುಂ ಬಱೆಕಾ
ಯೆರಡುಮುಪಾಯನ ಘಟನೆಯಿ
ನರಮನೆಯಂ ಸರ್ದುವಾ ಯಶೋಧರ ಸುತನಾ                             ೩೮

ತವಗಂಜುವವರ್ಗೆ ತಾವಂ
ಜುವರೆಂಜಲನಾಯ್ಡು ತಿಂಬರೆಂಜಲತಾವ್ ತಿಂ
ಬವನಿಪರಾದಲ್ಲಿಯೆ ನಾಯ್
ನವಿಲಪ್ಪಂತಾಯ್ತು ನೋಡ ಪಾಪದ ಫಲದಿಂ                                 ೩೯

ನವಿಲಮೃಮತಿಯ ಸೆಜ್ಜೆಯ
ದವಳಾರದೊಳಾಡುತಿರ್ದು ಬದಗನುಮಂ ತ
ನ್ನವಳೊಡಗೂಡಿರೆ ನಿಟ್ಟಿಸೆ
ಭವರೋಷದಿನಿಱೆದುದಷ್ಟವಂಕನ ಕಣ್ಣಂ                                      ೪೦

ಆನ್ ಬೆಂದೆನೆಂದು ನವಿಲಂ
ಪಾಣ್ಣೆ ಕನಲ್ಡಡಸಿ ಪೊಯ್ಯೆ ಮೇಗಣ ನೆಲೆಯಿಂ
ದಂ ಬಿರ್ದುದು ಪಚ್ಚೆಯ ಪದ
ಕಂ ಬೀಱ್ವಿಂತಿರೆ ಸುಧಾಂಶು ಬಿಂಬದ ಕೊರಲಿಂ                             ೪೧

ಅರಸನುಮಾಗಳೆ ನೆತ್ತದ
ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂ
ದರೆಗೆತ್ತು ಪಿಡಿದುದಂಬಾ
ಚರಿ ಕುಕ್ಕುರಿ ನೊಂದು ಬೀಱ್ವೆ ನಂದನ ಚರನಂ                             ೪೨

ಮತ್ತೆ ನೃಪಂ ನಾಯ್ ತಿಂದುದು
ನೃತ್ಯ ಚಮತ್ಕಾರನಂ ಮಯೂರನನೆಂದಾ
ನೆತ್ತದ ಮಣೆಯಿಂದಿಱೆದೊಡೆ
ನೆತ್ತಿ ಪಿಸುಳ್ದತ್ತು ಸತ್ತುವಂತಾ ಎರಡುಂ                                       ೪೩

ಮಱುಗಿದನಿಳೇಶನಾ ಎರ
ಡಱ ಸಾವಿಂ ತಂದೆ ತಾಯ್ವಿರಱೆದಂತೆರೆ ಕ
ಣ್ಣಱಿಯದೊಡಂ ಕರುಳಱೆಯದೆ
ಮಱುಗಿಸದಿರ್ಪುದೆ ಭವಾಂತರ ವ್ಯಾಮೋಹಂ                               ೪೪

ಆ ವಿಂಧ್ಯನಗದೊಳಾ ನಾಯ್
ಪಾವಾಯ್ತಾ ನವಿಲುಮೆಯ್ಯ ಮೃಗಮಾಯ್ತಎಯ್
ಪಾವಂ ಪಗೆ ಮಿಗೆ ತಿಂದುದು
ಮೇವಂತಿರೆ ಪುಲ್ಲ ಸರವಿಯಂ ಪುಲಿಗೋಣಂ                                ೪೫

ಉರಗಿಯನೆಯ್ ಪಿಡಿದೊಡದಂ
ಕುರಂಗರಿಪು ಬೆಕ್ಕು ಕೊಕ್ಕನಂ ತವೆ ಪಿಡಿವಂ
ತಿರೆ ಪಿಡಿದುದು ಪರಚಿಂತಾ
ಕರ ಏಹಿ ಎನಿಪ್ಪ ಸೂಕ್ತಿ ತಪ್ಪದಮೋಘಂ                                     ೪೬

ಮೀನಾದುದೆಯ್ಯ ಮಿಗಮು
ಜ್ಜೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್
ತಾನಲ್ಲಿ ಮೊಸಳೆಯಾದ
ತ್ತಾನಾಗನುಮಾಗಿ ಬೆಳೆಯೆ ಮತ್ತೊಂದು ದಿನಂ                               ೪೭

ನದಿ ಕಣ್ಣೆಱೆದಂತೆ ಪೊಳಂ
ಕಿದ ಮೀನಂ ಮೊಸಳೆ ಪಾಯೆ ನರಪತಿಯ ವಿನೋ
ದದ ಗುಜ್ಜ ಸಿಲ್ಕೆ ಪಿಡಿದ
ತ್ತದನಧಿಪತಿ ಜಾಲಗಾಱರಿಂ ತೆಗೆಯಿಸಿದಂ                                    ೪೮

ಪಲವಂದದ ನಿಗ್ರಹದಿಂ
ಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಱೆಕ್ಕಾ
ಪೊಲಗೇರಿಯಾಡಿನೊಡಲೊಳ್
ನೆಲಸಿ ಬಱೆಕ್ಕೊಯ್ಯನೊಗೆದುದಾಡಿನ ರೂಪಿಂ                                ೪೯

ಮತ್ತೊರ್ಮೆ ಜಾಲದೊಳ್ ಸಿ
ಲ್ಕತ್ತೆಯ್ಯಾಗಿರ್ದ ಮೀನದಂ ಶ್ರಾದ್ಧಕ್ಕ
ತ್ಯುತ್ತಮಲೋಹಿತಮತ್ಸ್ಯಮ
ನುತ್ತಮಮೆಂದೊಂದು ಕಡೆಯಿನಡಿಸಿದನರಸಂ                               ೫೦

ಉಱೆದ ಕಡೆ ಜೀವಮೇಱು
ತ್ತಿಱಿಯುತ್ತಿರೆ ನೀರೊಳಿರಿಸಿ ಜೀವಶ್ರಾದ್ಧ
ಕ್ಕುಱೆದಿರ್ದ ಮಾಜನಂಗಳ್
ಕಱೆಯುಂಡಾಪೋಶಿಪಲ್ಲಿ ನೆನೆದುದು ತನ್ನಂ                                  ೫೧

ಮೀನಾಗಿ ಸಾಯುತಿರ್ದಪೆ
ನಾನೀ ಪಾರ್ವರ್ ಯಶೋಧರಂ ಸುಖದಿಂದಿ
ರ್ಕಾ ನಾಕದೊಳೆಂದೂಳ್ದಪ
ರೀ ನೃಪನುಂ ನಂಬಿದಪ್ಪನಕ್ಕಟ ವಿಧಿಯೇ                                    ೫೨

ಎನುತುಂ ಜಾತಿಸ್ಮರನ
ಪ್ಪನಿಮೇಷಂ ಜೀವಿತಾಂತ್ಯದೊಳ್ ಮುನ್ನೊಗೆದಾ
ಡಿನ ಬಲಿಱೊಳ್ ಬಂದುದು ಪೋಂ
ತಿನ ರೂಪಿಂ ಬೆಳೆದು ಬಱಿಕ ಮದನೋನ್ಮತ್ತಂ                                ೫೩

ಬೆದೆಯಾದ ತಾಯನೇಱೆ
ತ್ತದು ಸೊರ್ಕಿದ ಗೂಳಿ ತಾಯನೇಱೆತ್ತೆಂಬಂ
ದದೆ ಮತ್ತದೊಂದು ಬಸ್ತಕ
ಮದನಿಱೆಯಲ್ ಸತ್ತು ಪೊಕ್ಕುದಜೆಯೊಳ್ ಜೀವಂ                           ೫೪

ಅಲ್ಲಿಯೆ ಪೋಂತಪ್ಪುದುಮದು
ಮೆಲ್ಲನೆ ತೆನೆ ತೀವಿ ಸುಱೆಯೆ ಕಂಡೊರ್ಮೆ ಮಹೀ
ವಲ್ಲಭನುಂ ಬೇಂಟೆಯೊಳಡ
ಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ                                    ೫೫

ಇಸೆಪಸುಮಱೆ ಯೋನಿಮುಖ
ಪ್ರಸವಕ್ಕಲಸಿದವೊಲೇಱ ಬಾಯಿಂ ತಾಯೊಂ
ದಸುವೆರಸು ಬಿರ್ದುದಂ ರ
ಕ್ಷಿಸಲಿತ್ತಂ ಮಾದರಂಗೆ ಕರುಣ ದಿನರಸಂ                                     ೫೬

ಒರ್ಮೆ ಯಶೋಮತಿ ಮೃಗಯಾ
ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ
ದೆರ್ಮೆಯ ಪೋರಿಯನಿಕ್ಕಿದ
ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ                                    ೫೭

ಅದಱಡಗು ಮುಗ್ಗಿ ಪುಱು ಪ
ತ್ತಿದೊಡಾಱಲ್ ಪರಪ್ ಕಾಗೆಯುಂ ನಾಯುಂ ಮು
ಟ್ಟಿದುದದನೆ ಶುದ್ಧಮಂ ಮಾ
ಱ್ಟುದನಿಂತೆಂದೋದಿದರ್ ಪುರೋಹಿತರೆಲ್ಲಂ                                  ೫೮

ಶುಚಿರಜರಜಸಿ ಭವೇನ್ಮಾಸ್
ಪಚನೇ ಶ್ವಸ್ಪೃಷ್ಟದೋಷಮೆಂಬುದು ವೇದ
ಪ್ರಚುರಮೆನೆ ಕೇಳ್ದು ನೃಪನಾ
ವಚನಮುಮಂ ನಂಬಿ ನೆಱೆದ ಪೊಲೆಯರ ಪೋಂತಂ                        ೫೯

ತರಿಸಿ ಪರಿಶುದ್ಧಿಗೆಯ್ದದ
ನಿರಿಸಿದೊಡಾ ಪಾರ್ವರುಂಡು ತಣಿದೆರ್ದು ಯಶೋ
ಧರ ಚಂದ್ರಮತಿಗಳೊಸೆದು
ಣ್ಣರೆ ಸಗ್ಗದ ಸುಖಮನೆಂದೊಡೋಹೋಎಂದರ್                              ೬೦

ಆ ವಿಪ್ರಘೋಷಣಂ ಸ್ಮೃತಿ
ಗಾವಹನ ವಿಧಾನಮಾದವೋಲಜ ಪೋತಂ
ಭಾವಿಸಿದುದಾನ್ ಯಶೋಧರ
ದೇವನೆ ಎನ್ನಾತ್ಮಜಂ ಯಶೋಮತಿ ಈತಂ                                 ೬೧

ಪೋಂತಾದೆನಿಲ್ಲಿ ಸಗ್ಗದೊ
ಳೆಂತುಂಡಾಪೆನುಂಡ ಪಾರ್ವರೊಲಿದುದು ಗೆಡೆವರ್
ಪೋಂತಂ ಕೊಂದು ದಿವಕ್ಕದು
ಮುಂತಾಗಿಯೆ ಸಲ್ವುದೆಂಬರಿದನೇನೆನ್ನರ್                                    ೬೨

ಈ ನಗರಿಯಪ್ಪುದೆಮ್ಮು
ಜ್ಜೇನಿಯಿದಾನಿರ್ಪ ನೆಲೆಯ ದವಳಾರಮಿದುಂ
ತಾನಮೃತಮತಿಯ ಮಾಡಂ
ಮಾನಿನಿ ನಂಜಿಟ್ಟಳೆನಗೆ ಮುಡಿಪಿದೆನಿದಱೊಳ್                               ೬೩

ಇರ್ದಳೊ ಮೇಣ್ ಬರ್ದಳೊ ಮೇಣ್
ಅರ್ದಳೊ ಮೇಣ್ ಅಷ್ಟವಂಕನೊಳ್ ಕಷ್ಟೆ ಅದೆಂ
ತಿರ್ದಳೊ ಕಾಣೆನದೇಕೆನು
ತಿರ್ದುದು ಕೋಟಲೆಗೆ ಕೋಡು ಮೂಡಿದ ತೆಱದಿಂ                            ೬೪

ಇತ್ತಲ್ ನೃಪನಂದೆಚ್ಚೊಡೆ
ಸತ್ತಾಡು ಕಳಿಂಗದಲ್ಲಿ ಕೋಣನ ಮೆಯ್ಯಂ
ಪೆತ್ತಿರೆ ಬೆನ್ ಮುಱೆವಂತಿರೆ
ಪಿತ್ತಳೆಯಂ ಪೇಱೆ ತಂದು ಬಿಟ್ಟಂ ಪರದಂ                                   ೬೫

ನೀರಡಿಸಿ ಕುಡಿದು ಸಿಂಪೆಯ
ನೀರೊಳಗರೆಮುಱುಗಿ ಮಗ್ಗುಲಿಕ್ಕಿರ್ದುದು ಮು
ನ್ನೀರಂ ನೀಲಾಚಲದಿಂ
ಸಾರಂಗಟ್ಟಿದವೊಲಿರೆ ಬಱಲ್ದು ಲುಲಾಯಂ                                   ೬೬

ಆಯೆಡೆಗೆನೀರುಣಲ್ಪರೆ
ಜಾಯಿಲಮರಸನ ಪಸಾಯಿತಂ ಕೋಡೆರಡುಂ
ಕೋಯೆ ಸೆಳೆದಶ್ವಮಹಿಷ
ನ್ಯಾಯಂ ನಿಲೆ ಕೊಂದುದಂತದಂ ಕೇಳ್ದರಸಂ                                ೬೭

ಕಡೆಯೊಳ್ ಕೋಣನ ಪೋರ್ಕುಳಿ
ಗಿಡುವಿಗೆ ಮಿತ್ತೆಂಬ ತೆಱದೆ ಪರದನ ಬೀಡಂ
ಬಿಡೆ ಸೂಱೆಗೊಂಡು ತನ್ನಂ
ಪಿಡಿತರಿಸಿ ವಿಚಿತ್ರಮಪ್ಪ ಕೊಲೆಯಂ ಕೊಂದಂ                               ೬೮

ಸೊಣರಿಂ ಮುಡುಪಿಂದಂ ಪಿಂ
ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಿಯಂ
ನೆಣಮುರ್ಚಿ ಬೆಂಕಿಯಿಂ ಕೆಳ
ಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ                              ೬೯

ಆಸನದಿಂ ಬಾಯಿಂ ಪೊಯ್
ಸಾಸವೆ ಮೆಣಸುಪ್ಪುಗೂಡಿ ನಿಲವಿನ ಸೂಡಿಂ
ಲೇಸಾಗಿ ಬೆಂದ ಬಾಡಂ
ಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿದಂ                                     ೭೦

ಅದು ಸತ್ತು ಸವೆದೊಡಾ ಮಾಂ
ಸದ ಸವಿಗಂಡರಸಿ ಬಾಣಸಿನ ಮನೆಯೊಳ್ ಕ
ಟ್ಟದ ಪೋಂತಂ ತಿಂಗುಱೆ ಮಾ
ಡಿದಳದನರಿವಲ್ಲಿ ತೊತ್ತಿರೆಂಗುಂ ತಮ್ಮೊಳ್                                   ೭೧

ಬಸಿದಪುದು ಮೆಯ್ಯ ಕೀವುಂ
ರಸಿಗೆಯುಮೊಡಲಱೆದುದಾದೊಡಂ ಮಾಣಳೆ ನಾಯ್
ಬಸನಿಗತನಮಂ ಮಾಣ್ದೀ
ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ                            ೭೨

ಮದನನ ಮಾಱಂಕದ ಚಂ
ದದ ಗಂಡನನಮೃತದನ್ನಳತ್ತೆಯನಿವಳೋ
ವದೆ ಕೊಂದಳ್ ಪಾಪಂ ತಿ
ನ್ನದು ಪಾತಕಿ ಪುಱೆತೊಡಲ್ಲದೇಂ ಸತ್ತಪಳೇ                                 ೭೩

ತೊನ್ನನ ಕೂಟದಿನಾದುದು
ತೊನ್ನೀ ರೋಗಕ್ಕೆ ಬಾಡು ಕಳ್ ವಿಷಮೆನೆಯುಂ
ಮನ್ನಿಸಳೆ ಮಗನ ಮಾತನಿ
ದೇಂ ನಾಯಕನರಕಮೀಕೆಗೊಚ್ಚತಮಾಯ್ತೋ                               ೭೪

ಎಂಬ ನುಡಿಗೇಳ್ದುಮೋಪಳ್
ಪಾಣ್ಬನ ಕೂಡಿರ್ದ ನಣ್ಪುಗಂಡುಂ ತಮದಿಂ
ದಂ ಬೆಂದು ಸತ್ತುದರೆಗೂ
ಯ್ದುಣ್ಬುದಱೆಂ ನೊಂದು ಸತ್ತುದಿಲ್ಲಜಪೋತಂ                               ೭೫

ಆ ರೌದ್ರ ಹತಿಗೆ ತವೆ ಸಂ
ಸಾರಂ ತತ್ಪುರದ ಪೋಱಗೆ ಪುಟ್ಟಿದುವಂತಾ
ಸೈರಿಭಮುಂ ಪೋಂತುಂ ಪೊಲ
ಗೇರಿಯ ಮಾದಿಗರ ಮನೆಯ ಕೋಱೆಯ ಬಸಿಱೊಳ್                       ೭೬

ಕರಮೇಱ್ಗೆಯುಳ್ಳ ಪಿಳ್ಳೆಗ
ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾ
ದರನಿತ್ತು ಚಂಡಕರ್ಮಂ
ಗರಸನವಂ ನೋಡಿ ಸಲಹು ನೀನೆಂದಿತ್ತಂ                                   ೭೭

ಬಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ
ರ್ಪೆಸೆದುದು ಚಾಗಿಯಂತೆ ನೆಱೆ ಕೊಟ್ಟೆಸಿದೊಪ್ಪಿತು ರಾಧೆಯಂತೆ ಸಂ
ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದೆ ರಂ
ಜಿಸಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್           ೭೮

ಅಭಯರುಚಿಕುಮಾರಂ ಮಾರಿದತ್ತಂಗೆ ಹಿಂಸಾ
ರಭಸಮತಿಗೆ ಸಯ್ಪಂ ಪೇಱ್ದು ಧರ್ಮಕ್ಕೆ ತಂದೀ
ಶುಭಕಥನಮನತ್ಯಾನಂದದಿಂ ಕೇಳ್ವ ಭವ್ಯ
ಪ್ರಭುಸಭೆಗೆಸೆದಿರ್ಕುಂ ಮಂಗಳಂ ಶ್ರೀವಿಲಾಸಂ                             ೭೯

ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ
ಸದಮಲ ರಾಮಚಂದ್ರ ಮುನೀಂದ್ರಪದಭಕ್ತಂ
ಜನ್ನಕವಿ ಜನಕ್ಕೆ ಮಾಡಿದ ಯಶೋಧರ ಚರಿತಾವತಾರ‍ಂ