ಅಮೃತಮತಿಯ ಸ್ವಗತ : ಎಚ್.ಎಲ್.ಪುಷ್ಪ

ಕನ್ನಡದ ನವ್ಯೋತ್ತರ (ದಲಿತ – ಬಂಡಾಯ) ಕಾವ್ಯ ಚಳುವಳಿಯು ಕನ್ನಡ ನಾಡಿನ ಚರಿತ್ರೆಯಲ್ಲಿ ಎಪ್ಪತ್ತರ ದಶಕದ ನಂತರ ಕಾಣಿಸಿಕೊಂಡು ಕಥೆ, ಕವನ, ನಾಟಕ, ಆತ್ಮಚರಿತ್ರೆ ಪ್ರಕಾರಗಳಲ್ಲಿ ತನ್ನದೇ ಆದ ವಿಶಿಷ್ಟವಾದ ಚಹರೆಯನ್ನು ಸ್ಥಾಪಿಸಿಕೊಂಡಿದೆ. ಹನ್ನೆರಡನೆಯ ಶತಮಾನದ ಸಾಮಾಜಿಕತೆ, ಕೆಳಸಮುದಾಯದ ಸಾಂಸ್ಕೃತಿಕ ಅನನ್ಯತೆ, ಸಮಕಾಲೀನ ರಾಜಕಾರಣದ ಒತ್ತಾಯ, ಅಂಬೇಡ್ಕರ್, ಲೋಹಿಯಾ, ಕುವೆಂಪು ಮುಂತಾದವರ ವೈಚಾರಿಕತೆಯ ಪ್ರೇರಣೆ, ಕಟ್ಟಕಡೆಯ ಜನತೆಯ ನೋವು, ನಲಿವು, ಯಾತನೆಯ ಅನುಭವ ಇವುಗಳನ್ನೆಲ್ಲಾ ತನ್ನ ಸಂವೇದನೆಯಲ್ಲಿ ಗ್ರಹೀತ ಮಾಡಿಕೊಂಡು ಮೈದಾಳಿದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಳುವಳಿ ಇದು. ಇಪ್ಪತ್ತನೆಯ ಶತಮಾನದ ನವೋದಯ, ಪ್ರಗತಿಶೀಲ, ನವ್ಯ ಈ ಎಲ್ಲಾ ಕಾಲಘಟ್ಟದ ಸಾಹಿತ್ಯದ ಉತ್ತಮಾಂಶಗಳನ್ನೂ ಒಳಗೊಂಡು, ಎಪ್ಪತ್ತರ ದಶಕದ ನಂತರದಲ್ಲಿ ಕನ್ನಡದ ಸಾಂಸ್ಕೃತಿಕ ಚರಿತ್ರೆಯಲ್ಲಿ ಪಲ್ಲಟವಾದ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಸಾಹಿತ್ಯಕ ಅಂಶಗಳನ್ನೆಲ್ಲಾ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡು ಈ ದಲಿತ – ಬಂಡಾಯ ಸಾಹಿತ್ಯ ಸೃಷ್ಟಿಯಾಗತೊಡಗಿತು. ಕನ್ನಡ ಸಾಹಿತ್ಯದಲ್ಲಿ ಮೊದಲ ಬಾರಿಗೆ ಅನೇಕ ದಲಿತ – ಬಂಡಾಯ ಬರಹಗಾರರು, ಸ್ತ್ರೀ ಲೇಖಕಿಯರು, ಅಲ್ಪಸಂಖ್ಯಾತ ಲೇಖಕರು ಬರೆಯತೊಡಗಿದ್ದು ಮುಖ್ಯವಾಗಿ ಈ ಘಟ್ಟದಲ್ಲಿ; ಪ್ರಗತಿಪರ ಚಳುವಳಿಗಳು ಮತ್ತು ಸಾಹಿತ್ಯ ಸೃಷ್ಟಿ ಎರಡೂ ಒಂದಕ್ಕೊಂಡು ಪರಸ್ಪರ ಪೂರಕವಾಗಿ ಸಂಘಟಿಸುತ್ತಾ, ಸಂಭವಿಸುತ್ತಾ ಸಾಹಿತ್ಯ ಸೃಷ್ಟಿಯಾಗತೊಡಗಿದ್ದು ಒಂದು ಐತಿಹಾಸಿಕ ಸತ್ಯ ಹಾಗೂ ಆಕಸ್ಮಿಕವಾದ ಅಪೂರ್ವ ಘಟನೆಯಾಗಿದೆ.

ಇಂತಹ ಸಾಹಿತ್ಯ – ಸಾಂಸ್ಕೃತಿಕ ಸಂದರ್ಭದಲ್ಲಿ ಅನೇಕ ಸ್ತ್ರೀ ಲೇಖಕಿಯರು ಕಾಣಿಸಿಕೊಂಡರು. ಹನ್ನೆರಡನೆಯ ಶತಮಾನದಲ್ಲಿ ಅಕ್ಕ ಮಹಾದೇವಿ ಮತ್ತು ಕೆಳವರ್ಗದ ಹಾಗೂ ಕೆಳಜಾತಿಯ ವಚನಕಾರ್ತಿಯರು, ಇಪ್ಪತ್ತನೆಯ ಶತಮಾನದಲ್ಲಿ ತ್ರಿವೇಣಿ, ಗೌರಮ್ಮ, ರಾಜಲಕ್ಷ್ಮಿ, ಅನುಪಮಾ, ವೈದೇಹಿ, ಸರ್ವಮಂಗಳ, ಗೀತಾ, ಸಂಧ್ಯಾ, ಮುಕ್ತಾಯಕ್ಕ, ವೀಣಾ ಎಲಬುರ್ಗಿ, ಪ್ರತಿಭಾ, ಸಿ.ಉಷಾ, ಎಂ.ಆರ್. ಕಮಲ, ಸಬೀಹಾ, ರಜಿಯಾ, ಶಶಿಕಲಾ, ಎಚ್.ಎಲ್. ಪುಷ್ಪ ಮೊದಲಾದ ಮಹಿಳಾ ಲೇಖಕಿಯರು ವೈಚಾರಿಕತೆಯ ಜಗತ್ತನ್ನು ವಿಸ್ತರಿಸಿದ್ದಾರೆ. ಪ್ರಾಚೀನ ಕನ್ನಡದ ಅಭಿಜಾತ ಕಾವ್ಯಗಳಲ್ಲಿ, ಸಾಂಪ್ರದಾಯಿಕ ಹಾಗೂ ಧಾರ್ಮಿಕ ಚೌಕಟ್ಟಿನಲ್ಲಿ ಬರುವ ಸ್ತ್ರೀ ಪಾತ್ರಗಳನ್ನು ಮತ್ತು ಜಾನಪದ ಸಾಹಿತ್ಯದಲ್ಲಿ ಬರುವ ಆರಾಧನೆ, ಆಚರಣೆ, ನಂಬಿಕೆ, ಪುರಾಣ, ಐತಿಹ್ಯಗಳನ್ನು ತಮ್ಮ ಕಾವ್ಯ, ನಾಟಕ, ಕವಿತೆಗಳಿಗೆ ವಸ್ತುವಿಷಯವಾಗಿ ಮಾಡಿಕೊಂಡು ಅವುಗಳನ್ನು ತಮ್ಮ ಕಾಲದ ತುರ್ತುಗಳಿಗನುಗುಣವಾಗಿ ಪಲ್ಲಟಗೊಳಿಸಿ ನಿರೂಪಿಸುವ ಕಲೆಗಾರಿಕೆಯನ್ನು ನೋಡುತ್ತೇವೆ. ಇಂತಹ ಒಂದು ಪ್ರಮುಖ ಪ್ರಯತ್ನದ ಫಲವೆಂದರೆ ಎಚ್.ಎಲ್. ಪುಷ್ಪ ಅವರು ಬರೆದಿರುವ ‘ಅಮೃತಮತಿಯ ಸ್ವಗತ’ (೧೯೯೨) ಎಂಬ ಕವಿತೆ.

ಎಚ್.ಎಲ್.ಪುಷ್ಪ ಅವರು ಈಗಾಗಲೇ ಸಮಕಾಲೀನ ಕನ್ನಡ ಕಾವ್ಯ ಜಗತ್ತಿನಲ್ಲಿ ತಮ್ಮದೇ ಆದ ಸ್ತ್ರೀ ಚಹರೆಯ ದನಿಗಳನ್ನು ಸ್ಥಾಪಿಸಿದ್ದಾರೆ. ಮಹಿಳೆಯ ಸ್ವಾತಂತ್ರ್ಯದ ಬಗ್ಗೆ, ಅವಳ ಆದಮ್ಯ ಬಯಕೆಗಳ ಅನಾವರಣದ ಬಗ್ಗೆ, ಅವಳ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಆಯ್ಕೆಯ ಬಗ್ಗೆ, ಅವಳ ಲಿಂಗಭೇದ ನೀತಿ ಮತ್ತು ಅನುರಕ್ತಿಯ ಮುಕ್ತತೆಯ ಬಗ್ಗೆ ಪುಷ್ಪ ಅವರ ಕವಿತೆಗಳು ವಸ್ತು ವಿಷಯವಾಗಿದ್ದು, ಕನ್ನಡ ವಿಮರ್ಶಕರ ಗಮನ ಸೆಳೆದಿವೆ. ಮಹಿಳೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಮಾನತೆ ಮತ್ತು ವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಬೇಕು; ಅವಳಿಗೆ ಅವಳದೇ ಆದ ಆಯ್ಕೆಗಳು ಇದ್ದಾಗ ಆಕೆ ಬಲಿಷ್ಠಳಾಗುತ್ತಾಳೆ. ಆಕೆಯನ್ನು ಸಬಲೀಕರಣಗೊಳಿಸುವುದು ಎಂದರೆ ಆಕೆಯ ಸ್ತ್ರೀಭಾಷೆಯನ್ನು, ಸ್ತ್ರೀ ಅಭಿವ್ಯಕ್ತಿಯನ್ನು ಗೌರವಿಸಬೇಕು; ಪುರುಷ ಪ್ರಧಾನ ಸಮಾಜದಲ್ಲಿ ಆಕೆಗೆ ಆಯ್ಕೆಗಳೇ ಇರುವುದಿಲ್ಲ. ಅವುಗಳನ್ನು ಪುರುಷರು ಆಕೆಗೆ ಸಹಾನುಭೂತಿಯಿಂದ ಕೊಡುವುದಿಲ್ಲ; ಆಕೆ ಅವುಗಳನ್ನು ತನ್ನ ಧೀಮಂತಿಕೆಯಿಂದ ಪಡೆದುಕೊಳ್ಳಬೇಕು. ಅದು ಶಿಕ್ಷಣವಾಗಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯವಾಗಬಹುದು, ಉದ್ಯೋಗವಾಗಬಹುದು, ಆರ್ಥಿಕ ಸ್ವಾವಲಂಬನೆಯಾಗಬಹುದು, ಲಿಂಗತಾರತಮ್ಯದ ಸಮಾನತೆಯಾಗಬಹುದು – ಇತ್ಯಾದಿ.

ಎಚ್.ಎಲ್.ಪುಷ್ಪ ಅವರ ‘ಅಮೃತಮತಿಯ ಸ್ವಗತ’ ಕವಿತೆ ಈ ಹಲವು ಹತ್ತು ಚಿಂತನೆಗಳ ನೆಲೆಯಲ್ಲಿ ಮೈವೆತ ಕವಿತೆಯಾಗಿದೆ. ಜನ್ನನ ‘ಯಶೋಧರ ಚರಿತೆ’ ಕಾವ್ಯದಲ್ಲಿ ಬರುವ ಅಮೃತಮತಿಯ ಪಾತ್ರ ಈಗಾಗಲೇ ಕನ್ನಡ ಸಾಹಿತ್ಯದಲ್ಲಿ ಬಹುಚರ್ಚೆಗೆ ಒಳಗಾದ ಪಾತ್ರವಾಗಿದೆ. ಕನ್ನಡ ವಿಮರ್ಶೆ ಮುಖ್ಯವಾಗಿ ‘ಅಮೃತಮತಿಯ ಪ್ರಣಯದ ಪ್ರಸಂಗದ’ ಮೇಲೆಯೇ ಕೇಂದ್ರಿತವಾಗಿ ಚರ್ಚಿತವಾಗಿದೆ. ಆದರೆ ಆಧುನಿಕ ನಾಟಕಕಾರ ಗಿರೀಶ್ ಕಾರ್ನಾಡರು ತಮ್ಮ ‘ಬಲಿ’ ನಾಟಕದಲ್ಲಿ ಅಮೃತಮತಿಯ ಪಾತ್ರಕ್ಕೆ ತಮ್ಮದೇ ಆದ ಸೃಜನಾತ್ಮಕ ಸ್ವಾತಂತ್ರ್ಯವನ್ನು ಒದಗಿಸಿದ್ದಾರೆ. ಎಚ್.ಎಲ್. ಪುಷ್ಪ ಅವರು ತಮ ಈ ‘ಅಮೃತಮತಿಯ ಸ್ವಗತ’ ಕವಿತೆಯಲ್ಲಿ ಅಮೃತಮತಿಯೇ ತನ್ನ ವ್ಯಕ್ತಿತ್ವದ ಆಸೆ – ಆಕಾಂಕ್ಷೆಗಳನ್ನೆಲ್ಲಾ ಸ್ವಗತದ ಧಾಟಿಯಲ್ಲಿ ಬಿಚ್ಚಿಟ್ಟಿದ್ದಾಳೆ. ಅಮೃತಮತಿ ನೇರವಾಗಿ ತನ್ನ ಪತಿಯನ್ನು ಪ್ರಶ್ನಿಸುವುದರ ಮುಖೇನ ಈ ಕವಿತೆ ಆರಂಭವಾಗುತ್ತದೆ.

ಇದೊಂದು ಸ್ವಗತದ ಧಾಟಿಯ ದೀರ್ಘ ಕವಿತೆ. ಅಮೃತಮತಿಯ ಸಾಕಷ್ಟು ನೊಂದು ಬೆಂದು ಹೋಗಿದ್ದಾಳೆ. ಆಕೆಯ ಭಾವನೆಗಳು, ಕನಸುಗಳೆಲ್ಲಾ ಕರಗುತ್ತಾ ಬಂದಿವೆ. ಪತಿ ದೊರೆಯ ‘ಹಸನಾದ ನಗುವಿನ ಎದುರು’ ಇವೆಲ್ಲಾ ಸತ್ತು ಸೊರಗಿವೆ. ಅದು ಆಕೆಗೆ ಅವು ಹುಸಿಯ ನಗೆ ಮಾತ್ರವಾಗಿಯೇ ಉಳಿದಿದೆಯೇ ಹೊರತು ಆಕೆಯ ಹಸಿವೆಗಳನ್ನು ತಣಿಸಲಾರದು :

ತೆರೆದ ಬಾನೆದುರಲ್ಲಿ
ಮೃದು ಮೈಯ ಮಾಂಸಗಳ ಹಬೆಯಲ್ಲಿ
ಉಳಿದ ಭಾವಗಳೆಷ್ಟು, ತೇಲಿ ಹೋದವೆಷ್ಟು
ಹಸಿಹಸಿ ಕಾಡುಪೊದೆಯ ಪೊದರುಗಳಲ್ಲಿ
ಮುಳುಗುವುವು ರಾಗಗಳು ; ತೇಕುವುವು ಹಸಿವೆಗಳು
ಸತ್ತು ಸೊರಗುವುವು ಹಸನಾದ ನಿನ್ನ ನಗುವಿನೆದುರು

ಇದು ಜೀವ; ಪ್ರೇಮ ಕಾಮ ಒಳಗೊಂಡಿದ್ದು ಎಂಬುದು ಮಾನವ ಸಹಜವಾದ ಅದರಲ್ಲೂ ಸ್ತ್ರೀ ಸಹಜವಾದ ಜೀವದಲ್ಲಿರುವಂತಹದ್ದು. ಆದರೆ ಆಕೆಯ ಪ್ರೇಮ ಕಾಮಗಳೆಲ್ಲಾ ‘ಸತ್ತು ಸೊರಗುವುವು’ ಹಂತಕ್ಕೆ ತಲುಪಿಬಿಟ್ಟಿವೆ. ಇಂಥ ಹೆಣ್ಣಿನ ಪ್ರೇಮವನ್ನ, ಕಾಮವನ್ನ ಅರ್ಥಮಾಡಿಕೊಳ್ಳದ ಗಂಡನ ಮುಂದೆ ತಾನು ಸುಳಿದಾಡುವ ಬರೀ ಹಕ್ಕಿ ಮಾತ್ರ ಆಗಿದ್ದಾಳೆ ಆಕೆ :

ಇದು ಜೀವ ;
ಪ್ರೇಮ ಕಾಮ ಒಳಗೊಂಡಿದ್ದು.
ನಿನ್ನೆದುರು ಸುಳಿಯುವ ಈ ಹಕ್ಕಿ
ಅಷ್ಟಾವಕ್ರ ಹಸಿಹಸಿ ಬದಗನಲಿ
ರೆಕ್ಕೆ ಬಿಚ್ಚಿ ಹಾರುವುದೇಕೆ ?

ಈಗ ಆಕೆ ಹಸಿಹಸಿ ಕಾಡು ಪೊದೆಯ ಪೊದರುಗಳಿಂದ ಬರುತ್ತಿದ್ದ ಅಷ್ಟಾವಂಕನ ರಾಗಗಳಿಗೆ ಮರುಳಾಗಿದ್ದಾಳೆ. ಈಗ ಆಕೆ ಆ ಬದಗ ಅಷ್ಟಾವಂಕನ ಹಸಿಹಸಿ ಕಾಮದಲಿ ರೆಕ್ಕೆ ಬಿಚ್ಚಿ ಹಾರುತ್ತಿದ್ದಾಳೆ. ಇಂತಹ ಅಸಹ್ಯ ವ್ಯಕ್ತಿಯ ಜೊತೆ ಅನುರಕ್ತಳಾಗಿ ರೆಕ್ಕೆ ಬಿಚ್ಚಿ ಹಾರುವುದೇಕೆ? ಎಂದು ಆಕೆ ಪ್ರಶ್ನಿಸುತ್ತಾಳೆ. ಅದಕ್ಕೆ ತನ್ನದೇನೂ ತಪ್ಪಿಲ್ಲ, ಅದಕ್ಕೆ ತನಗೆ ಶಂಕೆಯೂ ಇಲ್ಲ. ಯಾಕೆಂದರೆ ಅದಕ್ಕೆಲ್ಲಾ ತಾನು ಕಾರಣವಲ್ಲ. ತನ್ನ ಪತಿಯೇ ಕಾರಣ ಎಂಬ ಧ್ವನಿ ಇಲ್ಲಿದೆ. ಆದರೆ ಆಕೆ ಆ ಬದಗನ ಒತೆ ‘ಸುರತಿ ಸಂಪ್ರೀತೆ’ಯಾಗಿದ್ದಾಳೆ. ಅವನ ಹಾಡು ಎಲ್ಲಿಯದೋ ಕೊರಳಾಗಿದೆ.

ಎಲ್ಲಿಯದೋ ಕೊರಳು,
ಎಲ್ಲಿಯದೋ ಗೆಜ್ಜೆ, ಯಾವುದೋ ಹೆಜ್ಜೆ
ತಂತಾನೆ ತಟ್ಟುವ ರಾಗಗಳು
ಯಾವ ಪಲ್ಲಂಗದ ಮೇಲೋ ಹೊರಳು
ಸುರತಿ ಸಂಪ್ರೀತೆ ಈ ಹೆಣ್ಣು.

ಆಕೆಗೆ ಆ ನಾದ, ಆ ರಾಗ, ಆ ಹೆಜ್ಜೆ, ಇವೆಲ್ಲಾ ಪ್ರಿಯವಾಗಿಬಿಟ್ಟಿವೆ. ಆಕೆಗೆ ಯಾವ ಮಂಚವಾದರೂ ಸರಿಯೆ, ಯಾವ ಪಲ್ಲಂಗವಾದರೂ ಸರಿಯೇ ಅದರಲ್ಲಿ ಆಕೆ ಸುರತಿ ಸಂಪ್ರೀತೆ ಈ ಹೆಣ್ಣು. ಆ ಎಲ್ಲಿಯದೋ ಕೊರಳ ಕರೆಗೆ ಈಕೆ ಹೆಡೆ ಬಿಚ್ಚಿ ತೂಗುವ ಹಾವಾಗಿದ್ದಾಳೆ. ಆ ವಕ್ರವ್ಯಕ್ತಿಯಲ್ಲಿಯೂ ತುಂಬಿರುವ ‘ಮೃದು ಕೊರಳ ಕರೆ’ಗೆ ತನ್ನ ಮನಸ್ಸು, ತನ್ನ ಮೃದು ಮೈ ಎಲ್ಲವನ್ನು ಅರ್ಪಿಸಿಕೊಂಡು ಸಂತೃಪ್ತಿ ಹೊಂದಿದ್ದಾಳೆ.

ಮರಳ ಕೊರಳ ಕರೆಗೆ
ಹೆಡೆ ಬಿಚ್ಚಿ ತೂಗುವುದು ಹಾವು.
ಮೃದು ಕೊರಳ ಕೆರೆಯಲ್ಲಿ
ಸಹಸ್ರ ಸಹಸ್ರ ನಾಗಸ್ವರ
ಯಾವ ಸ್ವರ ಕಚ್ಚಿತೋ
ಯಾವುದು ನುಂಗಿತೋ
ಕಾದಿದೆ ನೆರಳು, ಮೃದುಮೈಯ ಬದಿಯಲ್ಲಿ

ಆ ಮೃದು ಕೊರಳ ಕರೆಯಲ್ಲಿ ಹೊರಡುತ್ತಿರುವ ಸಾವಿರ ಸಾವಿರ ನಾಗಸ್ವರಕ್ಕೆ ಈಕೆ ಮನಸೋತಿದ್ದಾಳೆ. ಆ ಸ್ವರದಲ್ಲಿ ಯಾವ ಸ್ವರ ಆಕೆಯನ್ನು ಬಲಿ ತೆಗೆದುಕೊಳ್ಳುವುದೋ ಗುಟ್ಟಾಗಿದೆ. ಆಕೆಯ ಹಿಂದೆ, ಆಕೆಯ ಮೃದು ಮೈ ಬದಿಯಲ್ಲಿ ತನ್ನ ಗಂಡನ ಕತ್ತಿಯ ನೆರಳು ಕಾದಿದೆ ಎಂಬುದು ಆಕೆಗೆ ಅರಿವಿದೆ. ಕವಿತೆ ಈ ಹಂತದಲ್ಲಿ ಆಕೆಯ ಮೈಮರೆತ ಅನುರಕ್ತಿಯ ಉತ್ಕರ್ಷ ಸ್ಥಿತಿಯನ್ನು ಕಟ್ಟಿಕೊಡುತ್ತದೆ.

ಇಲ್ಲಿಂದ ಕವಿತೆ ಮತ್ತೊಂದು ಹಂತಕ್ಕೆ ದಾಟುತ್ತದೆ. ಈ ಹಂತದಲ್ಲಿ ಅಮೃತಮತಿ ಎಷ್ಟೇ ಒದೆತ, ಬಡಿತ, ಒರಟು, ಚಾಟಿ  ಏಟನ್ನು ಆ ಬದಗನಿಂದ ತಿಂದು ಅನುಭವಿಸಿದರೂ ಅದರಲ್ಲೂ ಆಕೆ ಒಂದು ರೀತಿಯ ತೃಪ್ತಿಯನ್ನೇ ಕಾಣುತ್ತಾಳೆ. ಆಕೆ ಅದರಲ್ಲಿ ಸವಿ ಇದೆ ಎನ್ನುತ್ತಾಳೆ. ಆ ಒರಟು ಚಾಟಿಯ ಏಟು ತನಗೆ ಚುಂಬನವಿದ್ದಂತೆ ಎಂದು ಭಾವಿಸುತ್ತಾಳೆ. ಅದರಲ್ಲಿ ನವಿರಿದೆ, ನಾದವಿದೆ ಎನ್ನುತ್ತಾಳೆ. ಆತನ ಒರಟು ಬೆರಳುಗಳ ಕಂಪನದಲ್ಲಿ ಮಿಡಿತವಿದೆ, ಅವನ ಮುಳ್ಳುಗಳ ಮುತ್ತಿನಲಿ ಸುಖವಿದೆ ಎನ್ನುತ್ತಾಳೆ. ಅರಮನೆಯಲ್ಲಿ ಸುಖವಾಗಿ ಬೆಳೆದರೂ ಪ್ರೀತಿ ಪ್ರೇಮ ಕಾಮದಿಂದ ವಂಚಿತಳಾದ, ತನ್ನ ಪತಿಯ ನಗೆಯ ಮುಂದೆ ಬರೀ ರೆಕ್ಕೆ ಬಿಚ್ಚಿ ಹಾರಾಡದ ಹಕ್ಕಿ ಆಗಿದ್ದ ಆಕೆಗೆ ಬದಗನ ತೋಳ ಹಸಿಹಸಿ ಸೆರೆಯಲ್ಲಿ ಸಂಪ್ರೀತ ಹೆಣ್ಣಾಗಿದ್ದಾಳೆ. ಆಗ ಆಕೆ ಸ್ವಗತದಲ್ಲಿ ಪತಿ ದೊರೆಗೆ ಹೀಗೆ ಹೇಳುತ್ತಾಳೆ.

ಸವಿಯಿದೆ ನೋಡು;
ಒರಟು ಚಾಟಿಯ ಚುಂಬನದಲ್ಲಿ
ಸವಿರಿದೆ ನೋಡು, ನಾದವಿದೆ ನೋಡು
ಒರಟು ಬೆರಳುಗಳ ಕಂಪನದ
ಏನಿದು ಮಿಡಿತ ಮುಳ್ಳುಗಳ ಮುತ್ತಿನಲಿ,
ಅದಕ್ಕೆ ನೋಡು ದೊರೆ,
ನಿನ್ನ ಚಂದನ, ಗಂಧ ಸುವಾಸಿತ ತೆಕ್ಕೆ
ಬಿಟ್ಟು ಈ ಕಾಡ ಪೊದೆಯ ಕರೆಗೆ
ಹಾಡಾಗಿ ಹಾಡಿದ್ದು,

ಅಮೃತಮತಿ ಕಾಡಪೊದೆಯ ಕರೆಗೆ ತಾನೆ ಹಾಡಾಗಿ ಹಾಡಿ ಕರಗಿ ಹೋಗಿದ್ದಾಳೆ. ತನ್ನಂತೆ ಆಸೆಯಿದ್ದೂ ಅನುಭವಿಸದೆ ನರಕ ಯಾತನೆ ಅನುಭವಿಸುವ ಅಸಂಖ್ಯಾತ ಹೂವಿನಂತಹ ಹೆಣ್ಣುಗಳನ್ನು ಕಂಡು ಸಿಟ್ಟಿಗೆದ್ದಿದ್ದೇನೆ ಎನ್ನುತ್ತಾಳೆ. ಆಕೆಯ ಸಿಟ್ಟು ಇರುವುದು ಹಸನಾದ ನಗುವಿನ ಪುರುಷರ ವಿರುದ್ಧ ಮಾತ್ರವಲ್ಲ, ‘ತಣ್ಣಗೆ ನಗುವ’ ಸ್ತ್ರೀ ಲೋಕದ ವಿರುದ್ಧ ಕೂಡ ಎಂಬುದು ಇಲ್ಲಿ ಧ್ವನಿತವಾಗುತ್ತದೆ:

ಹಸಿವಿದ್ದೂ ಒಡಲ ಮುಚ್ಚುವ
ಕಾತುರವಿದ್ದೂ ತಣ್ಣಗೆ ನಗುವ
ಈ ಹೂವುಗಳು
ಒಳಗೊಳಗೆ ಉಕ್ಕಿ ಜ್ವಲಿಸುವುದು ಕಂಡು
ಸಿಟ್ಟಿಗೆದ್ದಿದ್ದೇನೆ.

ಪಾವಿತ್ರ್ಯದ ಪರಿಕಲ್ಪನೆಯಲ್ಲಿ ಅಥವಾ ಪ್ರತಿಷ್ಠೆಯ ಹೆಸರಿನಲ್ಲಿ ಅಥವಾ ಸಾಮಾಜಿಕ ಆಚಾರದ ವ್ಯವಸ್ಥೆಯಲ್ಲಿ ಸಿಕ್ಕಿ ಪ್ರೀತಿಯ, ಪ್ರಣಯದ, ಕಾಮದ ಕಾತುರ ಹಸಿವಿದ್ದರೂ ಒಡಲ ಮುಚ್ಚಿಕೊಂಡು ‘ತಣ್ಣಗೆ ನಗುವ’ ಹೆಣ್ಣುಗಳು ಸಂಪ್ರದಾಯದ, ಕಟ್ಟು ಕಟ್ಟಳೆಯ ಮುಸುಕಿನಲ್ಲಿ ಸಿಕ್ಕಿ ಒಳಗೊಳಗೇ ಉರಿದು ಹೋಗುವವರ ವಿರುದ್ದವೂ ಅಮೃತಮತಿ ಸಿಟ್ಟಿಗೆದ್ದಿದ್ದಾಳೆ. ಈಕೆ ಸ್ತ್ರೀವಾದಿಯಾಗಿ ವ್ಯವಸ್ಥೆಯ ವಿರುದ್ಧ, ಪುರುಷ ಪ್ರಧಾನ ಸಮಾಜದ ವಿರುದ್ಧ ಬಂಡೆದಿದ್ದಾಳೆ.

ಆದರೆ ಅಮೃತಮತಿಯ ಈ ಮೈಯ ವಾಸನೆಗೆ ಇದು ತಪ್ಪು, ಪಾಪ, ಇದನ್ನೆಲ್ಲಾ ಮಾಡಿದರೆ ಕರ್ಮ, ಪ್ರಾಯಶ್ಚಿತ್ತ, ಯಾಕೆಂದರೆ ಜನ್ಮಾಂತರವನ್ನು ಅನುಭವಿಸಬೇಕಾಗುತ್ತದೆ ಎಂಬ ಭಯ ಭೀತಿಯೇನೂ ಇಲ್ಲ. ಆಕೆ ವಿಚಾರಶೀಲೆ, ಕಾಮದ ಹಸಿವಿನ ಮುಂದೆ ಭೀತಿ, ಕತ್ತಿ ಎರಡೂ ಅಳುಕುತ್ತದೆ ಎನ್ನುತ್ತಾಳೆ.

ಮೈಯ ವಾಸನೆಗೆ ಜನ್ಮಾಂತರಗಳಿಲ್ಲ
ಬಂಧನವಿಲ್ಲ ಈ ಪಾಡುಗಳಿಗೆ
ಹೊರುವ ಪಾಪಗಳಿಲ್ಲ
ಹಸಿವಿನೆದುರು ಏನಿಲ್ಲ, ಏನೆಲ್ಲ ಭೀತಿ
ಕತ್ತಿಯೂ ಕೂಡ ಅಳುಕುತ್ತದೆ.

ಆದರೆ ಇಂತಹ ಎದೆಗಾರಿಕೆಯ ಅಮೃತಮತಿಗೆ ಇನ್ನೂ ಕೆಲವು ಗೊಂದಲಗಳು ಉಳಿದುಕೊಂಡಿವೆ. ಧರ್ಮದ ಬಂಧನವನ್ನು ಕಳೆದುಕೊಳ್ಳಲು ಆಕೆಗೆ ಸಾಧ್ಯವಾಗಿಲ್ಲ. ಹೆಣ್ಣಿಗೆ ಇಷ್ಟೆಲ್ಲಾ ಮೀರುವ ಶಕ್ತಿಯಿದ್ದರೂ ಆಕೆ ಜನ್ಮವೆತ್ತಿದಾಗೆಲ್ಲಾ ಧರ್ಮದ ಸೂಕ್ಷ್ಮತೆಯಲ್ಲಿ ಬಂಧಿಯಾಗಿಯೇ ಇದ್ದಾಳೆ. ಆದರೆ ಧರ್ಮವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ಪಡೆದ ರಾಜನ ರಾಣಿಯಾಗಿದ್ದು ಇಂತಹ ಸುಖದಿಂದ ವಂಚಿತರಾದ ಹೆಣ್ಣುಗಳಿಗೆ ಎಲ್ಲಾ ಕಾಲದಲ್ಲೂ ಎಲ್ಲಾ ಸಮಾಜದಲ್ಲೂ ಬದಗನಂತಹ ಅಷ್ಟಾವಂಕರು ನ್ಯಾಯವನ್ನು ಒದಗಿಸಲು, ಅವರ ಪ್ರಶ್ನೆಗಳಿಗೆ ಉತ್ತರವನ್ನು ಕೊಡಲು ಇದ್ದೇ ಇರುತ್ತಾರೆ ಎಂಬ ನಂಬಿಕೆ, ವಿಶ್ವಾಸದಲ್ಲಿ ಅಮೃತಮತಿ ನಿಲುವು ತಾಳುತ್ತಾಳೆ :

ಧಮ್ಮದ ಸೂಕ್ಷ್ಮ ಜಂಜಾಟದಲ್ಲಿ
ನಾವು ಜನ್ಮವೆತ್ತುತ್ತಲೇ ಇದ್ದೇವೆ.
ಅಮೃತಮತಿಯಾಗಿ
ನಿನ್ನಂಥವನ ಗದ್ದುಗೆಯ ರಾಣಿಯರಾಗಿ
ಅವನು ಬದಗನಾಗಿ
ನಮಗುತ್ತರವಾಗಿ

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಅಮೃತಮತಿಯ ಪಾತ್ರ ಹೀಗೆ ಹೇಗೆ ಭಿನ್ನ ಭಿನ್ನ ಅಭಿವ್ಯಕ್ತಿಗಳಿಗೆ ಗುರಿಯಾಗಿದೆ. ಕವಿ ಜನ್ನನ ಅಮೃತಮತಿಯ ಪಾತ್ರ ಹೀಗೆ ವಿವರ್ಶೆಗೆ, ಸೃಜನಶೀಲ ಪ್ರಕ್ರಿಯೆಗೆ ಒಳಗಾದಷ್ಟು ನಮ್ಮ ಪ್ರಾಚೀನ ಅಭಿಜಾತ ಕಾವ್ಯಗಳ ಇತರೆ ಸ್ತ್ರೀಪಾತ್ರಗಳು ಒಳಗಾದದ್ದು ಕಡಿಮೆ ಇನ್ನಬಹುದು. ಇದಕ್ಕೆ ಬಹುಮುಖ್ಯ ಕಾರಣ ಆ ಪಾತ್ರಕ್ಕೆ ಇರುವ ಬಲವಾದ ಭಾವನೆ, ಉತ್ಸಾಹ ಮತ್ತು ಸಂಕೀರ್ಣತೆ.