ಕನ್ನಡ ಭಾಷೆಗೆ ಕನಿಷ್ಟ ಎರಡು ಸಾವಿರದ ಮುನ್ನೂರು ವರ್ಷಗಳ ನಿರಂತರವಾದ ಇತಿಹಾಸವಿದೆ. ಅದರ ಚರಿತ್ರೆಯಲ್ಲಿ ಪೂರ್ವದ ಹಳಗನ್ನಡ, ನಡುಗನ್ನಡ, ಆಧುನಿಕ ಕನ್ನಡ ಎಂಬ ಪ್ರಬೇಧಗಳನ್ನು ಗುರುತಿಸಬಹುದು. ಆದರೂ ಅದರ ಬೆಳವಣಿಗೆ ನಿರಂತರವಾಗಿದೆ, ಜೀವಂತವಾಗಿದೆ; ಹಲವು ಉಪಭಾಷೆಗಳನ್ನೂ ರೂಪಿಸಿಕೊಂಡಿದೆ. ಪೂರ್ವದ ಹಳಗನ್ನಡಕ್ಕೂ ಹೊಸಗನ್ನಡಕ್ಕೂ ವ್ಯತ್ಯಾಸವಿದ್ದರೂ ಒಳಗೆ ಇರುವ ದಟ್ಟವಾದುದು. ಇಪ್ಪತ್ತನೆಯ ಶತಮಾನದಲ್ಲಿ ಸಮೃದ್ಧವಾಗಿ ಬೆಳೆದಿರುವ ಆಧುನಿಕ ಕನ್ನಡ ಸಾಹಿತ್ಯಕ್ಕೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮಾನ್ಯತೆ, ಗೌರವ ಲಭ್ಯವಾಗಿದೆ.

ಕನ್ನಡ ಭಾಷೆಯ ಅತ್ಯಂತ ಪ್ರಾಚೀನವಾದ ಲಿಖಿತ ದಾಖಲೆಯೆಂದರೆ, ಡಿ.ಎಲ್. ನರಸಿಂಹಚಾರ್ ಅವರು ಗುರುತಿಸಿರುವಂತೆ ಕ್ರಿ.ಪೂ. ೨೫೨ರ ಅಶೋಕನ ಬ್ರಹ್ಮಗಿರಿ ಶಾಸನ. ಈ ಶಾಸನದಲ್ಲಿ ‘ಇಸಿಲ’ ಎಂಬ ಕನ್ನಡ ಸ್ಥಳನಾಮದ ಪದ. ‘ಕರ್ನಾಟಕ’ ಎಂಬ ಹೆಸರು ಅದಕ್ಕಿಂತ ಹಿಂದನ ಸಂಸ್ಕೃತ ಮಹಾಭಾರತದಲ್ಲಿ ದಾಖಲಾಗಿರುವುದನ್ನು ಪಂಡಿತರು ಗುರುತಿಸಿದ್ದಾರೆ. ಇದರ ಕಾಲ ಅನಿರ್ದಿಷ್ಟವಾಗಿ. ಕ್ರಿ.ಶ. ೧-೨ನೇ ಶತಮಾನಗಳು ಇರಬಹುದೆಂದು ವಿದ್ವಾಂಸರು ಊಹಿಸಿದ್ದಾರೆ. ‘ಅಕ್ಸಿರಿಂಖಸ್ ಪವ್ಕೆರಿ’ ಎಂದೇ ಹೆಸರಾದ ಗ್ರೀಕ್ ಪ್ರಹಸನ-ನಾಟಕದಲ್ಲಿ ಕನ್ನಡ ಭಾಷೆಯ ಮಾತುಗಳು ದಾಖಲಾಗಿರುವುದನ್ನು ವಿದ್ವಾಂಸರು ಗುರುತಿಸಿದ್ದಾರೆ. ಈ ಬಗ್ಗೆ ಎಂ.ಗೋವಿಂದ ಪೈ, ಸ್ಟಾನ್ ಫರ್ಡ್ ಬಿ.ಸ್ಟೀವರ್ ಮತ್ತು ತೀ.ನಂ. ಶ್ರೀಕಂಠಯ್ಯನವರು ದಾಖಲಿಸಿರುವಂತೆ ಕನ್ನಡ ಭಾಷೆಯ ಪ್ರಾಚೀನತೆ ಕ್ರಿಸ್ತಪೂರ್ವದಷ್ಟು ಹಿಂದಕ್ಕೆ ಹೋಗುತ್ತದೆ ಎಂಬುದು ವಿವಾದಿತವಾಗಿದೆ. ಕನ್ನಡದ ಮೊದಲನೆಯ ಪೂರ್ಣ ಪ್ರಮಾಣದ ದಾಖಲೆ ಎಂದರೆ, ಸುಮಾರು ಕ್ರಿ.ಶ. ೪೫೦ ರ ಹಲ್ಮಿಡಿ ಶಾಸನ (ಇದರ ನಿಜವಾದ ರೂಪ ‘ಹಲ್ಮಿಡಿ’ ಅಲ್ಲ ‘ಹನ್ಮಿಡಿ’ ಎಂದು ಸಂಶೋಧಕರು ಹೇಳಿದ್ದಾರೆ) ಇತಿಹಾಸತಜ್ಞ ಎಂ.ಎಚ್. ಕೃಷ್ಣ ಅವರು ಈ ಶಾಸನವು ಕ್ರಿ.ಶ. ೫ನೆಯ ಶತಮಾನದ್ದು ಎಂದು ಹೇಳಿರುವ ಅಭಿಪ್ರಾಯಕ್ಕೆ ಅನೇಕ ವಿದ್ವಾಂಸರು, ಭಾಷಾವಿಜ್ಞಾನಿಗಳು ಸಹಮತ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆ ತಮಿಳಿನಷ್ಟೇ ಪ್ರಾಚೀನವಾದುದು ಎಂಬುದು ಬಹುಜನ ವಿದ್ವಾಂಸರ ಅಭಿಪ್ರಾಯವಾಗಿದೆ. ಭಾಷಾವಿಜ್ಞಾನಿ ಪಿ.ಎಸ್. ಸುಬ್ರಹ್ಮಣ್ಯಂ ಅವರು ಸಹ ಈ ಅಭಿಪ್ರಾಯವನ್ನು ತಳೆದಿದ್ದಾರೆ. ಈ ಭಾಷಾವಿಜ್ಞಾನಿಯ ಪ್ರಕಾರ ಮೂಲ ದ್ರಾವಿಡದಿಂದ ಮೊದಲು ಮೂಲದಕ್ಷಿಣ ದ್ರಾವಿಡ ಭಾಷೆಯು ಕವಲೊಡೆದು ಆ ಮೂಲದಕ್ಷಿಣ ದ್ರಾವಿಡ ಭಾಷೆಯಿಂದ ಕನ್ನಡ ಮತ್ತು ತಮಿಳು ಭಾಷೆಗಳು ಬೇರೆಯಾದವು. ಅನಂತರ ಅವು ಕ್ರಮೇಣ ಸ್ವತಂತ್ರ ಭಾಷೆಗಳಾದವು. ಪಿ.ಎಸ್. ಸುಬ್ರಹ್ಮಣ್ಯಂ ಅವರ ಕೃತಿ ‘ದ್ರಾವಿಡಿಯನ್ ವರ್ಬ್ ಮಾರ್ಫಾಲಜಿ’ಯಲ್ಲಿ ನೀಡಿರುವ ದ್ರಾವಿಡ ಭಾಷಾವಂಶ ವೃಕ್ಷವು ಸ್ಪಷ್ಟ ಕುರುಹನ್ನು ನೀಡುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಈ ಎಲ್ಲಾ ಪುರಾವೆಗಳ ಆಧಾರದ ಮೇಲೆ ಎಂ.ಚಿದಾನಂದಮೂರ್ತಿ ಅವರು ‘ಪ್ರಾಚೀನತೆಯನ್ನು ಎರಡೂ ಸಮಾನ ದಾಖಲಿತ ಭಾಷೆಯಾಗಿ ತಮಿಳು ಕನ್ನಡಕ್ಕಿಂತ ಸ್ವಲ್ಪ ಹಿಂದಿನದಾಗಿರಬಹುದು ಅಷ್ಟೇ’ ಎಂಬ ಅಭಿಪ್ರಾಯವನ್ನು ತಳೆದಿದ್ದಾರೆ.

ಕ್ರಿ.ಪೂ. ೨-೧ನೆ ಶತಮಾನಗಳಿಗೆ ಸೇರಿದ ಶಾಸನಗಳಲ್ಲಿ ಒಂದು ತಮಿಳು ಶಾಸನ, ಇದು ತಮಿಳುನಾಡಿನ ಸಿತ್ತಿನ್ ವಾಸಲ್ ಎಂಬ ಸ್ಥಳದಲ್ಲಿದೆಯೆಂದು. ಇದನ್ನು ಅಂತಾರಾಷ್ಟ್ರೀಯ ಖ್ಯಾತಿಯ ತಮಿಳು ವಿದ್ವಾಂಸರಾದ ಆರ್.ಆರ್. ಮಹಾದೇವನ್ ಎಂಬುವರು ಓದಿದರೆಂದು ತಿಳಿದು ಬರುತ್ತದೆ. ಅವರು ಈ ಶಾಸನದಲ್ಲಿರುವ ಕೆಲವು ಪದಗಳು ತಮಿಳಿನವಲ್ಲ. ಅವು ಕನ್ನಡದಿಂದ ಸ್ವೀಕರಿಸಿದ ಪದಗಳೆಂದು ತೋರಿಸಿಕೊಟ್ಟಿದ್ದಾರೆ. ಕ್ರಿಸ್ತಪೂರ್ವದ ಉಲ್ಲೇಖ ಇದಾಗಿದೆ. ಉದಾಹರಣೆಗೆ ‘ಹೊಸ್ತಿಲ್’ ಅನ್ನುವ ಪದ, ‘ಗೌಂಡಿ’ ಅನ್ನುವುದು ತಮಿಳಿನವಲ್ಲ ಕನ್ನಡದವು ಎಂದು ಅವರು ತೋರಿಸಿಕೊಟ್ಟಿದ್ದಾರೆ. ಇದರ ಬಗ್ಗೆ ಭಾಷಾಶಾಸ್ತ್ರಜ್ಞರಾದ ಕೆ.ವಿ.ನಾರಾಯಣ ಅವರು ‘ವಿಚಿತ್ರ ಅಂದರೆ ಮಹಾದೇವನ್ ಅವರ ಈ ಅಭಿಪ್ರಾಯವನ್ನು ಕನ್ನಡದ ವಿದ್ವಾಂಸರು ಒಪ್ಪುತ್ತಿಲ್ಲ. ಆದರೆ ಹಾಗೆ ಅದನ್ನು ನಿರಾಕರಿಸಬೇಕಾಗಿದ್ದವರು ತಮಿಳಿನವರು. ಈ ಶಾಸನದ, ದಾಖಲೆಗಳನ್ನು ನಮ್ಮ ಕನ್ನಡ ಭಾಷೆಯ ಪ್ರಾಚೀನತೆಯ ಮಂಡನೆಗೆ ಸೇರಿಸಿಕೊಳ್ಳಬೇಕೋ ಬೇಡವೋ ಅನ್ನುವ ಗೊಂದಲ ಇದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗೆಯೇ ವಿದ್ವಾಂಸರು ಕ್ರಿ.ಶ.೧೧೫ ರ ಟಾಲೆಮಿಯು ತನ್ನ ‘ಪ್ರಾಚೀನ ಭಾರತದ ಭೂಗೋಳದ ವರ್ಣಯೆ’ಯ ಕೃತಿಯಲ್ಲಿ ಬಳಸುವ ಕನ್ನಡ ನಾಡಿನ ಸ್ಥಳನಾಮಗಳನ್ನು ಮತ್ತು ಸುಮಾರು ಕ್ರಿ.ಶ. ೧-೨ನೇ ಶತಮಾನಗಳ ಪ್ರಾಕೃತಕವಿ ಹಾಲನ ‘ಗಾಥಾಸಪ್ತಶತಿ’ಯಲ್ಲಿ ದೊರೆಯುವ ಕನ್ನಡದ ಪದಗಳನ್ನು ಮತ್ತು ಕ್ರಿ.ಶ. ೨ನೇ ಶತಮಾನದವಳೆಂದು ಹೇಳಲಾಗಿರುವ ತಮಿಳು ಕವಯಿತ್ರಿ ಅಲ್ವೈಯಾರ್ ತನ್ನ ಕೃತಿಯಲ್ಲಿ ಬಳಸುವ ಕನ್ನಡದ ಪದಗಳಿಂದ ಸಹ ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸಲು ಯತ್ನಿಸಿದ್ದಾರೆ.

ಕನ್ನಡ ಭಾಷೆ ಹಾಗೂ ಶಾಸನದ ಪ್ರಾಚೀನತೆಯ ಕಥೆ ಇದಾದರೆ, ಕನ್ನಡದ ಮೊಟ್ಟಮೊದಲ ಲಭ್ಯ ಕೃತಿ ‘ಕವಿರಾಜಮಾರ್ಗ’ (ಇದರ ಕಾಲ ಸುಮಾರು ಕ್ರಿ.ಶ. ೮೫೦)ವು ಒಂದು ಅಲಂಕಾರ ಶಾಸ್ತ್ರದ ಕೃತಿಯಾಗಿದೆ. ಇದರಲ್ಲಿ ಶ್ರೀವಿಜಯ, ಕವೀಶ್ವರ, ಲೋಕಪಾಲ ಇವರೇ ಮೊದಲಾದ ಗದ್ಯ ಪದ್ಯ ಕವಿಗಳನ್ನು ಹೆಸರಿಸಲಾಗಿರುವುದನ್ನು ನೋಡಿದರೆ. ಕನ್ನಡ ಸಾಹಿತ್ಯದ ಪ್ರಾಚೀನತೆಯು ಒಂಭತ್ತನೆಯ ಶತಮಾನಕ್ಕಿಂತಲೂ ಹಿಂದಿನದಾಗಿದೆ ಎಂದು ಊಹಿಸಬಹುದಾಗಿದೆ. ಆದರೆ ಇವರ ಕೃತಿಗಳು ಲಭ್ಯವಾಗಿಲ್ಲದೆ ಇರುವುದರಿಂದ ಏನನ್ನೂ ಇದಮಿತ್ಹಂ ಎಂದು ಹೇಳಲು ಬರುವುದಿಲ್ಲ. ಭಾರತದಲ್ಲಿ ಸಾಹಿತ್ಯದ ಪ್ರಾಚೀನತೆಯ ದೃಷ್ಟಿಯಿಂದ ಕನ್ನಡಭಾಷೆ ಮಾತ್ರ ಸಂಸ್ಕೃತ, ಪ್ರಾಕೃತಗಳಿಗಿಂತ ಈಚಿನದಾಗಿದ್ದು, ತಮಿಳಿನಷ್ಟೇ ಪ್ರಾಚೀನವಾಗಿದೆ ಎಂಬುದರ ಬಗ್ಗೆ ಅನುಮಾನಗಳಿಲ್ಲ. ಒಂಭತ್ತನೆಯ ಶತಮಾನದ ನಂತರ ಮುಂದೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರೌಢ ಕಾವ್ಯ ರಚನೆ, ಅಭಿಜಾತ ಕಾವ್ಯಗಳ ನಿರ್ಮಾಣ ನಡೆದು ಸುವರ್ಣ ಯುಗವೇ ಆರಂಭವಾಗಿ ಪಂಪ, ರನ್ನ, ಪೊನ್ನ, ನಾಗವರ್ಮ, ದುರ್ಗಸಿಂಹ, ನಯಸೇನ, ಹರಿಹರ ರಾಘವಾಂಕ, ಕುಮಾರವ್ಯಾಸ, ಚಾಮರಸ, ಲಕ್ಷ್ಮೀಶ, ರತ್ನಾಕರವರ್ಣಿ, ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ ಮುಂತಾದ ನೂರಾರು ಕವಿಗಳ, ಕಾದಂಬರಿಕಾರರ ಕೃತಿಗಳು ಸೃಷ್ಟಿಯಾಗಿವೆ. ಹನ್ನೆರಡನೆಯ ಶತಮಾನದ ವಚನ ಸಾಹಿತ್ಯ ಮತ್ತು ನಂತರದ ದಾಸ ಸಾಹಿತ್ಯ, ತತ್ವಪದ ಸಾಹಿತ್ಯ ಇವೆಲ್ಲಾ ವಿಶ್ವಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ನೀಡಿದ ವಿನೂತನ ಸಾಹಿತ್ಯ ಪ್ರಕಾರಗಳೆನ್ನಬಹುದು. ಕನ್ನಡ ಸಾಹಿತ್ಯದ ಅಭಿಜಾತ ಪರಂಪರೆಗೆ ಇವರೆಲ್ಲರ ಕೊಡುಗೆ ಅಪಾರ ಮತ್ತು ಅನನ್ಯವಾದುದು.

ಹೀಗೆ ‘ಕನ್ನಡ’ ಎಂಬುದು ಅಭಿಜಾತ ಭಾಷೆಯೂ ಹೌದು, ಅಭಿಜಾತ ಸಾಹಿತ್ಯವೂ ಹೌದು, ಜನವೂ ಹೌದು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳು ಜಗತ್ತಿನ ಹಳೆಯ ಮತ್ತು ಪ್ರಾಚೀನ ಭಾಷೆಗಳು. ಭಾರತದ ಪ್ರಾಚೀನ ಭಾಷೆಗಳಲ್ಲಿ ಸಂಸ್ಕೃತವನ್ನು ಬಿಟ್ಟರೆ ಬಳಿಕ ತಮಿಳು ಮತ್ತು ಕನ್ನಡ ಭಾಷೆಗಳಿಗೆ ಈ ಅಭಿಜಾತ ಪರಂಪರೆಯ ಪಟ್ಟ ಸಲ್ಲುತ್ತದೆ. ತಮಿಳಿನಷ್ಟೇ ಕನ್ನಡವೂ ಶ್ರಿಮಂತವಾದುದು. ಈ ಭಾಷೆಗಳು ತಮ್ಮದೇ ಆದ ಸಂಸ್ಕೃತಿ ಹಾಗೂ ಸ್ವಾಯತ್ತತೆಯ ಚಹರೆಯನ್ನು ಉಳಿಸಿಕೊಂಡಿವೆ. ಸಂಸ್ಕೃತಕ್ಕಿಂತ ಭಿನ್ನವಾದ ಪರಂಪರೆಯಲ್ಲಿ ಶ್ರೇಷ್ಠವಾದ ಸಾಹಿತ್ಯವನ್ನು ಸೃಷ್ಟಿಸಿಕೊಂಡಿರುವ ಹಿರಿಮೆ ಗರಿಮೆ ಕನ್ನಡಕ್ಕಿದೆ. ಕನ್ನಡ ಮತ್ತು ತಮಿಳು ಭಾಷೆಗಳು ಲಿಪಿ ಮತ್ತು ಸಾಹಿತ್ಯ ದಾಖಲೆಗಳ ಮೂಲಕ ದೀರ್ಘವಾದ ಪ್ರಾಚೀನತೆಯನ್ನು ಹೊಂದಿವೆ. ಇವು ಇಂದಿಗೂ ಬಳಕೆಯಲ್ಲಿವೆ. ಬದಲಾವಣೆಯಾಗುತ್ತಿವೆ, ಜೀವಂತವಾಗಿವೆ. ಭಾರತದ ಪ್ರಾಚೀನ ಸಾಹಿತ್ಯದ ಅಭಿಜಾತ ಪರಂಪರೆ ಸಮೃದ್ಧವಾಗಿ ಬೆಳೆದಿರುವ ಭಾಷೆಗಳಲ್ಲಿ ಸಂಸ್ಕೃತ ಮತ್ತು ಪ್ರಾಕೃತವನ್ನು ಬಿಟ್ಟರೆ ದ್ರಾವಿಡ ಭಾಷೆಗಳಾದ ತಮಿಳು, ಕನ್ನಡ, ತೆಲುಗು ಮತ್ತು ಮಲಯಾಳಂ ಭಾಷೆಗಳಾಗಿವೆ. ಆದರೆ ಬಹುಭಾಷಾ ವಿದ್ವಾಂಸರಾದ ಆರ್.ವಿ.ಎಸ್. ಸುಂದರಂ ಅವರು ಹೇಳುವ ಹಾಗೆ, ’ತಮಿಳನ್ನು ಕ್ರಿಸ್ತಪೂರ್ವಕ್ಕೆ ಕೊಂಡೊಯ್ಯುವ ಯಾವ ಆಧಾರವೂ ಇಲ್ಲ. ತಮಿಳು ಸಾಹಿತಿಗಳು ಕೊಡುವ ಆಧಾರಗಳು ಐತಿಹಾಸಿಕ ಅಥವಾ ವೈಜ್ಞಾನಿಕ ಹಿನ್ನೆಲೆಯಿಂದ ಸಮರ್ಥಿಸಲು ಯೋಗ್ಯವಾಗಿಲ್ಲ. ಐತಿಹ್ಯ ಆಧಾರಗಳಿಂದಲೇ ಸಾಹಿತ್ಯದ ಇತಿಹಾಸವನ್ನು ಸ್ಥಾಪಿಸಲು ಸಾಧ್ಯವಿಲ್ಲ. ತಮಿಳಿನಂತೆಯೇ ಕನ್ನಡದಲ್ಲಿ ಕ್ರಿಸ್ತ ಪೂರ್ವದಿಂದಲೂ ಮೌಖಿಕ ಪರಂಪರೆಯ ಸಾಹಿತ್ಯವಿದ್ದುದನ್ನು ಒಪ್ಪಲೇಬೇಕು’.

’ಕ್ಲಾಸಿಕಲ್’ ಎಂಬ ಇಂಗ್ಲೀಷಿನ ಪದಕ್ಕೆ ಸಮವಾಗಿ ಎಂಬಂತೆ, ಕನ್ನಡದ ಸಂದರ್ಭದಲ್ಲಿ ’ಶಾಸ್ತ್ರೀಯ’, ’ಅಭಿಜಾತ’ ಎಂಬ ಪದಗಳನ್ನು ವಿದ್ವಾಂಸರು ಬಳಸುತ್ತಿದ್ದಾರೆ. ’ಶಾಸ್ತ್ರೀಯ’ ಎಂಬ ಪದಕ್ಕೆ ಕಟ್ಟುನಿಟ್ಟಾದ ನಿಯಮಗಳಿಗೆ, ಶಾಸ್ತ್ರಕ್ಕೆ ಬದ್ಧವಾದ’ ಎಂಬ ಅರ್ಥವಿರುವುದು ಇದರಿಂದ ಗೊತ್ತಾಗುತ್ತದೆ. ಜಗತ್ತಿನ ಎಲ್ಲಾ ಭಾಷೆಗಳೂ ತಮ್ಮದೇ ಆದ ಇಂತಹ ಶಾಸ್ತ್ರೀಯವಾದ ಹಾಗೂ ನಿಯಮಬದ್ಧವಾದ ಕಟ್ಟುಕಟ್ಟಳೆಗಳನ್ನು ಹೊಂದಿರುತ್ತವೆ ಎಂಬುದು ಸಾಮಾನ್ಯವಾದ ಅಂಶ. ಆದರೆ ಕೆ.ವಿ. ನಾರಾಯಣ ಅವರು ಹೇಳುವಂತೆ, ’ಕೆಲವು ಭಾಷೆಗಳು ಮಾತ್ರ ’ಶಾಸ್ತ್ರೀಯ’ ಎಂದು ಕರೆಯಲು ಬರುವುದಿಲ್ಲ. ’ಅಭಿಜಾತ’ ಎಂಬ ಪದವೂ ಕೂಡ ಹೆಚ್ಚು ಸಾಹಿತ್ಯಕವಾದ ನೆಲೆಯನ್ನು ಹೊಂದಿದೆ. ಸರ್ವಶ್ರೇಷ್ಠವಾದ ಮತ್ತು ಕಾಲದ ಪರೀಕ್ಷೆಯನ್ನು ಗೆದ್ದು ನಿಂತ ಕೃತಿಗಳನ್ನು ಕ್ಲಾಸಿಕ್ ಎಂದು ಗುರುತಿಸುವುದುಂಟು. ಇವುಗಳನ್ನು ಅಭಿಜಾತ ಕೃತಿಗಳೆಂದು ಕನ್ನಡದಲ್ಲಿ ಕರೆಯಲಾಗುತ್ತಿದೆ’ ಎಂದು ಅಭಿಪ್ರಾಯಪಡುವುದು ಸಹಜವಾಗಿಯೇ ಇದೆ. ಈ ದೃಷ್ಟಿಯಿಂದ ಅವರು ’ಒಂದು ಭಾಷೆಯ ವಿಶಿಷ್ಟ ಲಕ್ಷಣಗಳನ್ನು ಹೇಳಲು ಸಾಧ್ಯವಿರುವ ಪದ ಇದು ಎನ್ನಿಸುವುದಿಲ್ಲ’ ಎನ್ನುತ್ತಾರೆ. ’ಕ್ಲಾಸಿಕ್ ಲಾಂಗ್ವೇಜ್ ಮತ್ತು ’ಕ್ಲಾಸಿಕಲ್ ಲಿಟರೇಚರ್’ ಇವುಗಳ ನಡುವೆ ಇರುವ ಈ ಬಗೆಯ ವ್ಯತ್ಯಾಸವನ್ನು ಗುರುತಿಸಬೇಕಾಗುತ್ತದೆ. ಜನ್ನನ ’ಯಶೋಧರ ಚರಿತೆ’ ಮತ್ತು ಕುವೆಂಪು ಅವರ ’ಮಲೆಗಳಲ್ಲಿ ಮದುಮಗಳು’ ಇವು ’ಕ್ಲಾಸಿಕಲ್ ಲಿಟರೇಚರ್’, ಅಂದರೆ ಅಭಿಜಾತ ಪರಂಪರೆಗೆ ಸೇರಿದ ಕೃತಿಗಳೆಂದು ತಿಳಿಯಬೇಕಾಗುತ್ತದೆ. ಭಾಷೆಯ ಆಧಾರದ ಮೇಲೆ ’ಕ್ಲಾಸಿಕಲ್ ಲಾಂಗ್ವೇಜ್’ ಅಥವಾ ’ಹೆರಿಟೇಜ್ ಲಾಂಗ್ವೇಜ್ (ಪಾರಂಪರಿಕ ಭಾಷೆ) ಎಂದು ವಿಂಗಡಣೆ ಮಾಡುವುದು ಸರಿಯಾದ ಕ್ರಮವಾಗಲಾರದು; ಭಾಷೆ ಮತ್ತು ಸಾಹಿತ್ಯ ಎರಡರ ಆಧಾರದ ಮೇಲೆಯೇ ಈ ’ಕ್ಲಾಸಿಕಲ್’ ಪರಿಕಲ್ಪನೆಯನ್ನು ವಿಸ್ತರಿಸಿಕೊಳ್ಳಬೇಕಾದ, ವಿವರಿಸಿಕೊಳ್ಳಬೇಕಾದ ಸನ್ನಿವೇಶ ಕನ್ನಡದ ಸಂದರ್ಭದಲ್ಲಿ ಹೆಚ್ಚು ಸಾಧ್ಯತೆಯನ್ನು ಹೊಂದಿದೆ.

ತಮಿಳಿನ ವಿದ್ವಾಂಸರು ಕ್ರಿ.ಪೂ. ಎರಡನೇ ಶತಮಾನದಿಂದ ಕ್ರಿ.ಶ. ೬೫೦ರ ವರೆಗಿನ ತಮಿಳನ್ನು ’ಕ್ಲಾಸಿಕಲ್’ ಎಂದು ಗುರುತಿಸಿಕೊಂಡಿದ್ದಾರೆ. ಈ ಅವಧಿಯಲ್ಲಿ ರಚಿತವಾದ ೪೧ ಕೃತಿಗಳನ್ನು ’ಶಾಸ್ತ್ರೀಯ ತಮಿಳು ಕೃತಿಗಳು’ ಎಂದು ಅವರು ಗುರುತಿಸಿಕೊಂಡಿದ್ದಾರೆ. ಆದರೆ ಕನ್ನಡದಂತಹ ಭಾಷೆಗೆ ನಿರಂತರತೆಯೇ ಒಂದು ಪ್ರಮುಖ ಲಕ್ಷಣ. ಕನ್ನಡದ ಇಂದಿನ ಉಪಭಾಷೆಗಳಲ್ಲಿ ಅಗಾಧವಾದ ಸಾಮಗ್ರಿ ಇದೆ.  ಆದ್ದರಿಂದ ಕನ್ನಡ ಭಾಷೆಯಲ್ಲಿ ಮೈಪಡೆದಿರುವ ಕೃತಿಗಳನ್ನು ಅಭಿಜಾತ ಅಥವಾ ಶಾಸ್ತ್ರೀಯ ಕೃತಿಗಳೆಂದು ಗುರುತಿಸುವಾಗ ಪ್ರಾಚೀನ ಸಾಹಿತ್ಯದ ಕಾಲದಿಂದ ಆಧುನಿಕ ಕಾಲದ ಸಾಹಿತ್ಯದ ತನಕ ಗುರುತಿಸಿ ಅಂತಹ ಮಹತ್ವದ ಪ್ರೌಢ ಕೃತಿಗಳನ್ನು ಪಟ್ಟಿಮಾಡಬೇಕಾಗುತ್ತದೆ. ಇಂತಹ ಲಿಖಿತ ಸಾಹಿತ್ಯದ ಜೊತೆಗೆ ಪ್ರಮುಖ ಶಾಸನಗಳು ಮತ್ತು ಮೌಖಿಕ ಸಾಹಿತ್ಯದ ಕೃತಿಗಳನ್ನೂ ಈ ಶಾಸ್ತ್ರೀಯ ಭಾಷೆ/ ಸಾಹಿತ್ಯ ಅಥವಾ ಅಭಿಜಾತ ಭಾಷೆ / ಸಾಹಿತ್ಯದ ಪರಿಧಿಯೊಳಗೆ ತರಬೇಕಾಗುತ್ತದೆ.

ಅಮೆರಿಕಾದ ಷಿಕಾಗೋ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರಜ್ಞರಾಗಿದ್ದ ರಾಬರ್ಟ್ ರೆಡ್‌ಫೀಲ್ಡ್‌ಅವರು ನಾಗರೀಕತೆಯ ಬಗ್ಗೆ ಅಧ್ಯಯನ ಮಾಡುತ್ತಾ, ’ಒಂದು ನಾಗರೀಕತೆಯಲ್ಲಿ ಚಿಂತನಶೀಲವಾದ ಹಿರಿಪರಂಪರೆ (Great Tradition) ಯೊಂದಿರುತ್ತದೆ. ಮತ್ತು ಚಿಂತನಶೀಲವಲ್ಲದ ಕಿರುಪರಂಪರೆ (Little Tradition) ಯೊಂದಿರುತ್ತದೆ’. ಎಂದು ಪ್ರತಿಪಾದಿಸಿದ್ದರು. ಹಿರಿಯ ಪರಂಪರೆ ಲಿಖಿತ ಪಠ್ಯಗಳಲ್ಲಿ, ಅಭಿಜಾತ ಕೃತಿಗಳಲ್ಲಿ ಪ್ರಕಟವಾಗುತ್ತದೆ; ಅಲಿಖಿತವಾದದ್ದು, ಮೌಖಿಕವಾದದ್ದು, ಕಿರುಪರಂಪರೆಯಲ್ಲಿ ಕಾಣಿಸುತ್ತದೆ ಎಂದು ಅವರು ಹೇಳಿದ್ದರು. ಆದರೆ ಈ ಮಾನವಶಾಸ್ತ್ರಜ್ಞರ ಅಧ್ಯಯನಗಳನ್ನೆಲ್ಲಾ ಜಾನಪದ ತಜ್ಞ ಎ.ಕೆ. ರಾಮಾನುಜನ್ ಅವರು ಈ ಪರಿಕಲ್ಪನೆಗಳನ್ನೆಲ್ಲಾ ಒಡೆದು ಪುನರ್ ರೂಪಿಸಿದರು. ’ಈಚಿನವರೆಗೂ ಭಾರತೀಯ ಸಂಸ್ಕೃತಿ, ನಾಗರೀಕತೆಯನ್ನು ಕುರಿತಾದ ನಮ್ಮ ಅನೇಕ ಅಧ್ಯಯನಗಳು ಸಂಸ್ಕೃತ ಭಾಷೆಯಲ್ಲಿ ಹಾಗೂ ಇನ್ನಿತರ ಲಿಖಿತ ಪಠ್ಯಗಳಲ್ಲಿ ’ದೀಪದಡಿ ಹುಡುಕು’ ಎಂಬ ತತ್ವಕ್ಕೆ ಅನುಸಾರವಾಗಿ ನಡೆದಿವೆ. ಆದರೆ, ಇಲ್ಲೂ ಅನೇಕ ಮೌಲಿಕ ಸಂಗತಿಗಳು, ವಿಚಾರಗಳು ಕಂಡು ಬಂದಿವೆ. ಆದರೆ, ಇನ್ನು ಮೇಲೆ ನಾವೀಗ ನಮ್ಮ ಮನೆಯ ಭಾವಪ್ರಧಾನ ಸಂಸ್ಕೃತಿಯ ಒಳಕೋಣೆಗಳಲ್ಲಿ ಕಳೆದುಹೋದ ಈ ಕೀಲಿಕೈಗಳನ್ನು ಎಷ್ಟೇ ಕತ್ತಲಕೋಣೆಗಳಾದರೂ ಅಲ್ಲೇ ಹುಡುಕಬೇಕಾಗಿದೆ’ ಎಂದು ಜಾನಪದವನ್ನು ತಮ್ಮ ಅಧ್ಯಯನದ ಶಿಸ್ತನ್ನಾಗಿ ಮಾಡಿಕೊಂಡು ಭಾರತದ ಮೌಖಿಕ ಜನಪದ ಸಾಹಿತ್ಯದ ಮೂಲಕ ರೆಡ್‌ಫೀಲ್ಡ್‌ರ ವಿಂಗಡಣೆಯ ದೋಷಗಳನ್ನು ಎತ್ತಿ ತೋರಿಸಿದರು. ಹೀಗೆ ಜನಪದ ಕಥೆ, ಗಾದೆ, ಪುರಾಣ, ಉಪನಿಷತ್ತುಗಳಲ್ಲಿ ಬರುವ ಕೆಲವು ಕಥೆಗಳನ್ನು ಒಡೆದು ’ಮತ್ತೆ ಹೇಳುವುದರ ಮೂಲಕ’ ಎ.ಕೆ. ರಾಮಾನುಜನ್ ಅವರು ತಮ್ಮ ಹೊಸ ಬಗೆಯ ಚಿಂತನೆಗಳನ್ನು ಮಂಡಿಸಿದರು. ಯಾವ ಸಂಸ್ಕೃತಿಯೂ ಪ್ರಧಾನವೂ ಅಲ್ಲ, ಅಧೀನವೂ ಅಲ್ಲ; ಮೇಲೂ ಅಲ್ಲ, ಕೀಳೂ ಅಲ್ಲ; ಕಿರಿಯದೂ ಅಲ್ಲ, ಹಿರಿಯದೂ ಅಲ್ಲ; ಅವು ಮೌಖಿಕ ಆಚರಣೆ, ನಂಬಿಕೆ, ಪ್ರದರ್ಶನ, ಪರಂಪರೆ ಮತ್ತು ಜನಪದ ಪ್ರಕಾರಗಳಿಗೆ ಋಣಿಯಾಗಿರುತ್ತವೆ. ಯಾವುದೇ ಪರಂಪರೆ ಮೂಲದಲ್ಲಿ ಪರಿಶಿಷ್ಟವಾಗಿದ್ದದ್ದು ತರುವಾಯ ದೇಶ, ಕಾಲ, ವ್ಯಕ್ತಿ ಪರಿಸರಕ್ಕೆ ಅನುಗುಣವಾಗಿ ಅದರ ಸಾಂಸ್ಕೃತಿಕ ವಿವರಗಳು ವ್ಯತ್ಯಯವಾಗುತ್ತಾ ಹೋಗುತ್ತವೆ. ಆಧುನಿಕತೆಯ ಪ್ರಭಾವದಿಂದ ಶಿಷ್ಟವಾಗುತ್ತಾ, ಸಂಸ್ಕೃತೀಕರಣಗೊಳ್ಳುತ್ತಾ ಹೋಗಬಹುದು. ಎಲ್ಲೆಲ್ಲಿ ಜನ ಇದ್ದಾರೋ, ಇರುತ್ತಾರೋ ಅಲ್ಲೆಲ್ಲಾ ಜಾನಪದ ಹುಟ್ಟುತ್ತಾ, ಬೆಳೆಯುತ್ತಾ ಹೋಗುತ್ತದೆ. ಜಾನಪದವು ಪ್ರತಿ ವ್ಯಕ್ತಿ. ಕುಟುಂಬ ಹಾಗೂ ಸಮುದಾಯಗಳ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತು ಹೋಗಿದೆ. ಇದು ನಿರಕ್ಷರುಕುಕ್ಷಿಗಳ ಜೀವನ ಹಾಗೂ ಅವರ ಆಚರಣೆ, ಸಂಪ್ರದಾಯ, ನಂಬಿಕೆ, ಪರಂಪರೆ, ಸಂಸ್ಕೃತಿ ಇವುಗಳಿಗೆ ಸಾಂಕೇತಿಕ ಅಭಿವ್ಯಕ್ತವಾಗಿದೆ” ಎಂದು ರಾಮಾನುಜನ್ ಅವರು ಪ್ರತಿಪಾದಿಸಿದರು.

ಪಳೆಯುಳಿಕೆ ಶಾಸ್ತ್ರ (Fosil, ಇತಿಹಾಸ ಪೂರ್ವಕಾಲದ ಪ್ರಾಣಿಯ ಅಥವಾ ಸಸ್ಯದ ಪಳೆಯುಳಿಕೆ), ಪುರಾತತ್ವಶಾಸ್ತ್ರ (Archaeology, ಪ್ರಾಚೀನ ಅವಶೇಷಗಳ ಅಧ್ಯಯನ) ಇವುಗಳಿಗಿಂತ ಜನ – ಜಾನಪದ (Folk-lore) ಭಿನ್ನವಾದುದು. ಯಾಕೆಂದರೆ ಅವೆರಡು ಶಾಸ್ತ್ರಗಳಿಗೆ ಜೀವಂತಿಕೆ ಇಲ್ಲ; ಅವು ಒಂದು ಕಾಲದ ಸಮಾಜದ, ಸಂಸ್ಕೃತಿಯ ಪ್ರತಿಮಾರೂಪವಷ್ಟೇ. ಆದರೆ ಜಾನಪದ ಅದು ಆಯಾ ಸಂಸ್ಕೃತಿ, ನಾಗರೀಕತೆ, ಆಚರಣೆಗಳ ಪ್ರತಿಮಾರೂಪ ಮಾತ್ರವಲ್ಲದೆ ಅದಕ್ಕೆ ಜೀವಂತಿಕೆ ಇರುತ್ತದೆ. ಸದಾ ಬದಲಾವಣೆಯೇ ಜಾನಪದದ ಮುಖ್ಯ ಲಕ್ಷಣ. ಸದಾ ಜೀವಂತಿಕೆ (Living) ಮತ್ತು ಸೃಷ್ಟಿಶೀಲತೆ (Creativity) ಇದರ ಮುಖ್ಯ ಗುಣ. ಇದಕ್ಕೆ ಜನಪದ ಸಾಹಿತ್ಯದ ಹಾಡು, ಕಥೆ ಇವೇ ಸಾಕ್ಷಿ. ಇವು ಅಯಾ ಸಂಸ್ಕೃತಿಯ ಅಭಿವ್ಯಕ್ತಿಗಳು. ಇಂತಹ ಸಾಹಿತ್ಯ ಪ್ರಕಾರವನ್ನು ‘ಅಭಿಜಾತ ಸಾಹಿತ್ಯ ಪರಂಪರೆ’ಯಿಂದ ಬೇರ್ಪಡಿಸಿ ನೋಡುವುದು ಸರಿಯಾದ ಕ್ರಮವಾಗಲಾರದು. ಆದರೆ ಈ ತನಕ ಭಾರತೀಯ ಸಂಸ್ಕೃತಿ, ನಾಗರೀಕತೆ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಿದವರು ಈ ‘ಹಿರಿ ಪರಂಪರೆ’ಗೇ ಹೆಚ್ಚು ಒತ್ತು ಕೊಟ್ಟಿರುವುದು ಕಂಡುಬರುತ್ತದೆ. ಈ ಹಿರಿಯ ಪರಂಪರೆ ಎಂಬ ಹೆಗ್ಗಳಿಕೆ ಗಳಿಸಿದ ಸಂಸ್ಕೃತವು ಪ್ರಾಚೀನತೆಯನ್ನು, ಅಖಿಲ ಭಾರತೀಯ ವ್ಯಾಪ್ತಿಯನ್ನು ಹಾಗೂ ಲಿಖಿತ ಪಠ್ಯಾಕರಗಳನ್ನು ಹೊಂದಿದೆ. ಆದರೆ, ಈ ‘ಕಿರುಪರಂಪರೆ’ ಎಂಬುದು ಒಂದಲ್ಲ, ಅದು ‘ಕಿರುಪರಂಪರೆಗಳು’. ಇವು ಸ್ಥಳೀಯವಾಗಿದ್ದು, ದೇಶೀಯವಾಗಿದ್ದು, ಬಹುಪಾಲು ಮೌಖಿಕ ರೂಪದಲ್ಲಿರುತ್ತವೆ. ಅನಕ್ಷರಸ್ಥ ಸಮುದಾಯ ಈ ‘ಬಹುರೂಪಿ ಕಿರುಪರಂಪರೆಗಳ’ನ್ನು ಜೀವಂತವಾಗಿ ಉಳಿಸಿಕೊಂಡು ಬರುತ್ತಿರುತ್ತದೆ. ಭಾರತದಂತಹ ಬಹು ಜನಾಂಗೀಯ, ಬಹುಭಾಷಿಕತೆ, ಬಹುಸಂಸ್ಕೃತಿ ಹಾಗೂ ಬಹುವಚನೀಯ ಸಮಾಜ (Pluralistic Society)ಗಳಲ್ಲಿ ಕೇವಲ ಲಿಖಿತ ಪಠ್ಯಗಳು ಮತ್ತು ಪವಿತ್ರ ಗ್ರಂಥಗಳಷ್ಟೇ. ಅಭಿಜಾತ ಪಠ್ಯಗಳಲ್ಲ. ಪ್ರತಿಯೊಂದು ಬಾಯ್ಮಾತಿನ, ತೋಂಡಿ ಸಂಪ್ರದಾಯದ ಪರಂಪರೆಯೂ ತನ್ನದೇ ಆದ ಅಭಿಜಾತ ಪಠ್ಯಗಳನ್ನು ಸೃಷ್ಟಿಸುತ್ತಿರುತ್ತದೆ. ಪ್ರತಿಯೊಂದು ಸಾಂಸ್ಕೃತಿಕ ಪ್ರದರ್ಶನವು ತನ್ನಷ್ಟಕ್ಕೇ ತಾನೇ ಒಂದು ಪಠ್ಯವಾಗುತ್ತಿರುತ್ತದೆ. ಇದರಿಂದ ಅನೇಕ ‘ಸಹಪಠ್ಯಗಳು’ (Co-Text) ಸೃಷ್ಟಿಯಾಗುತ್ತ ಹೋಗುತ್ತಿರುತ್ತವೆ. ಅದರ ‘ಆಕರ ಪಠ್ಯ’ (Source Text) ಗಳನ್ನು ಗಣನೆಗೆ ತೆಗೆದುಕೊಂದು ಅವುಗಳಲ್ಲಿ ನಿರಂತರವಾಗಿ ಹರಿಯುತ್ತಿರುವ ‘ಅಭಿಜಾತದ ಅಂಶ’ವನ್ನು ಅಧ್ಯಯನಕ್ಕೆ ಒಳಪಡಿಸುವುದು ಸೂಕ್ತವೆನಿಸುತ್ತದೆ.

‘ಹಿರಿ ಪರಂಪರೆ’ ಅಥವಾ ‘ಅಭಿಜಾತ ಪರಂಪರೆ’ ಎಂದು ಯಾವುದನ್ನೂ ಭಾವಿಸುತ್ತೇವೋ ಅದು ಕೂಡ ಏಕೈಕ ಅಥವಾ ಏಕಾಕೃತಿಯ ಸ್ವರೂಪದ್ದೇನೂ ಅಲ್ಲ; ಅದೂ ಸಹ ಬಹುರೂಪಿ ಸ್ವರೂಪದ್ದಾಗಿಯೇ ಇರುತ್ತದೆ. ಬೌದ್ದ, ಜೈನ, ಬ್ರಾಹ್ಮಣ ಎಂದು ಪರಸ್ಪರ ಸ್ಪಂದಿಸುವ ಅಖಿಲ ಭಾರತೀಯ ವ್ಯವಸ್ಥೆ ಅದು. ಇದರೊಂದಿಗೆ ತಂತ್ರ ಮತ್ತು ಭಕ್ತಿ ಕೂಡ ಬೇರೆ ಬೇರೆ ನೆಲೆಗಳಲ್ಲಿ ಪ್ರತಿಸ್ಪಂದಿಸುತ್ತದೆ. ಸಮಗ್ರತೆಯ ದೃಷ್ಟಿಯಿಂದ ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳು ಹಾಗೂ ಆಧುನಿಕತೆ ಇವು ಕೂಡ ಈ ‘ಕೊಡು – ತೆಗೆದುಕೊಳ್ಳುವ’ ವ್ಯವಹಾರಗಳಲ್ಲಿ ಭಾಗಿಗಳು ಎಂಬುದನ್ನು ಗಮನಿಸಬೇಕು. ಈ ಎಲ್ಲಾ ವ್ಯವಸ್ಥೆಗಳಲ್ಲಿ ಈ ಮೌಖಿಕ ಸಾಹಿತ್ಯ ಕಾಲಕಾಲಕ್ಕೆ ಭಾಗಿಯಾಗುತ್ತಲೇ ಬಂದಿದೆ ಎಂದು ರಾಮಾನುಜನ್ ಅವರು ತಮ್ಮ ಅಧ್ಯಯನಗಳ ಮೂಲಕ ನಿರೂಪಿಸಿದ್ದಾರೆ. ಅವರು ಇದುವರೆಗೂ ನಡೆದಿರುವ ಅಧ್ಯಯನಗಳು ಎಂತಹವು? ಮುಂದೆ ನಡೆಯಬೇಕಾದ ಅಧ್ಯಯನಗಳು ಹೇಗಿರಬೇಕು? ಎಂಬುದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಿದ್ದಾರೆ. ಇದಷ್ಟೇ ಅಲ್ಲದೆ, ಕನ್ನಡದ ಸಂದರ್ಭದಲ್ಲಿ ಎಲ್ಲಾ ಬಗೆಯ ಅಂತರ್ ಶಿಸ್ತೀಯ, ಬಹುಶಿಸ್ತೀಯ ಹಾಗೂ ಸ್ಥಳೀಯ ಜ್ಞಾನಶಾಖೆಗಳ ಅಧ್ಯಯನವನ್ನೂ ಈ ಕಕ್ಷೆಗೆ ತಂದುಕೊಳ್ಳಬೇಕಾದ ಅವಕಾಶ ಹಾಗೂ ಅನಿವಾರ್ಯತೆ ಇದೆ. ಜೊತೆಗೆ ಭಾರತದಂತಹ ಬಹುವಚನೀಯ ಸಮಾಜದ ಸಂದರ್ಭದಲ್ಲಿ ಮತ್ತು ಕನ್ನಡದ ಸಮಾಜದ ಸಂದರ್ಭದಲ್ಲಿ ಪ್ರಾಚೀನ ವೃತ್ತಿಗಳು ಹಾಗೂ ಕುಲಕಸುಬುಗಳನ್ನೂ ಈ ಅಭಿಜಾತ ಪರಂಪರೆಯ ಅನನ್ಯತೆಯ ಭಾಗವಾಗಿ ಅಧ್ಯಯನಕ್ಕೆ ಒಳಪಡಿಸಬೇಕಾದ ತುರ್ತು ಸಹ ಇದೆ.

ಎರಡು ಸಾವಿರಕ್ಕೂ ಮಿಕ್ಕು ಹಳೆಯದಾದ ಕನ್ನಡ ಭಾಷೆಗೆ ಕೇಂದ್ರ ಸರ್ಕಾರವು ‘ಶಾಸ್ತ್ರೀಯ ಭಾಷೆಯ ಮಾನ್ಯತೆ’ ಯನ್ನು ನೀಡಿರುವ ಈ ಚಾರಿತ್ರಿಕ ಸಂದರ್ಭದಲ್ಲಿ ಇದನ್ನು ಸದುಪಯೋಗಪಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಸಂಸ್ಕೃತವನ್ನು ಶಾಸ್ತ್ರೀಯ ಭಾಷೆಯ ಪಟ್ಟಕ್ಕೇರಿಸಿ ಅದರ ಬೆಳವಣಿಗೆಗಾಗಿ ಸರ್ಕಾರಗಳು ವಿದ್ಯಾರ್ಥಿವೇತನಗಳನ್ನೂ ನೀಡಿ ಶ್ರಮಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಭಾಷೆಯ ಹಾಗೂ ಸಾಹಿತ್ಯದ ಬೆಳವಣಿಗೆ ಮತ್ತು ಅಧ್ಯಯನಕ್ಕೆ ಸರ್ಕಾರಗಳು ಹೆಚ್ಚಿನ ಪ್ರೋತ್ಸಾಹ, ಬೆಂಬಲ ನೀಡಬೇಕಾಗಿದೆ. ಯಾಕೆಂದರೆ ಕನ್ನಡವು ಜನಭಾಷೆಯೂ ಹೌದು, ಸಾಹಿತ್ಯದ ಭಾಷೆಯೂ ಹೌದು. ಈ ದೃಷ್ಟಿಯಿಂದ ಕನ್ನಡ ವಿದ್ವಾಂಸರು ಹತ್ತಾರು ಬಗೆಯ ಯೋಜನೆಗಳನ್ನೂ ರೂಪಿಸಬೇಕಾದದು ಅವರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಕನ್ನಡ ಭಾಷೆ ಮತ್ತು ಸಾಹಿತ್ಯದ ಅಧ್ಯಯನ ಉನ್ನತ ಶಿಕ್ಷಣ ಭಾಗವಾಗಿಯೂ ನಿರಂತರವಾಗಿ ನಡೆಯಬೇಕಾಗಿದೆ.