ಪ್ರಾಚೀನ ಕನ್ನಡ ಸಾಹಿತ್ಯದ ಅಭಿಜಾತ ಪರಂಪರೆಯಲ್ಲಿ ಪಂಪ, ಪೊನ್ನ, ರನ್ನರ ಬಳಿಕ ಬಂದ ಜನ್ನ ಜೈನ ಕವಿಕಾವ್ಯ ಪರಂಪರೆಯೊಳಗೆ ಹೊಸಮಾರ್ಗವೊಂದನ್ನು ರೂಪಿಸಿದ ಕವಿ. ಜೈನಧರ್ಮೀಯನಾದ ಜನ್ನ ತನ್ನ ಕೃತಿಗಳಲ್ಲಿ ತಕ್ಕಮಟ್ಟಿಗೆ ಹೊಸಮಾರ್ಗವೊಂದನ್ನು ರೂಪಿಸಿದ ಕವಿ. ಜೈನಧರ್ಮೀಯನಾದ ಜನ್ನ ತನ್ನ ಕೃತಿಗಳಲ್ಲಿ ತಕ್ಕಮಟ್ಟಿಗೆ ತನ್ನ ವ್ಯಕ್ತಿವಿವರಗಳನ್ನು ಹೇಳಿಕೊಂಡಿದ್ದಾನೆ. ಅದರ ಪ್ರಕಾರ ಜನ್ನ ಕಮ್ಮೆ ವಂಶದ ಕಾಶ್ಯಪಗೋತ್ರದ ಒಂದು ಹಿರಿಯ ಮನೆತನಕ್ಕೆ ಸೇರಿದವನು.

ಜನ್ನನ ತಂದೆ ಶಂಕರ, ತಾಯಿ ಗಂಗಾದೇವಿ, ಹೆಂಡತಿ ಲಕುಮಾದೇವಿ. ಈತನ ಪಾರಮಾರ್ಥಿಕ ಗುರು ರಾಮಚಂದ್ರದೇವ ಮುನೀಂದ್ರ; ಈತನ ಲೌಕಿಕ ಗುರು; ಕವಿ ಸುಮನೋಬಾಣ’ ನೆಂಬ ಬಿರುದು ಹೊಂದಿದ್ದ ಇವನ ತಂದೆ ಶಂಕರ. ‘ಸೂಕ್ತಿ ಸುಧಾರರ್ಣವ’ ಕೃತಿಯನ್ನು ರಚಿಸಿದ ಮಲ್ಲಿಕಾರ್ಜುನ ಜನ್ನನ್ನ ಸೋದರಿಯ ಗಂಡ. ಈ ಮಲ್ಲಿಕಾರ್ಜುನನ ಮಗನಾದ ಮತ್ತು ‘ಶಬ್ದಮಣಿದರ್ಪಣ’ ಎಂಬ ವ್ಯಾಕರಣ ಗ್ರಂಥವನ್ನು ಬರೆದ ಕೇಶಿರಾಜ ಜನ್ನನ ಸೋದರಳಿಯ. ಹೀಗೆ ಜನ್ನ ವಿದ್ವತ್ ಪಂಡಿತ ಪರಂಪರೆಯ ಮನೆತನಕ್ಕೆ ಸೇರಿದವನಾಗಿದ್ದಾನೆ.

ಜನ್ನನ ಬರವಣಿಗೆಯು ಆರಂಭದಲ್ಲಿ ಶಾಸನಗಳನ್ನು ಬರೆಯುವ ಮೂಲಕ ಆರಂಭವಾಗಿ ಕಾವ್ಯ, ಶಾಸ್ತ್ರಗಳ ರಚನೆಯಲ್ಲಿ ತೊಡಗುವುದನ್ನು ಕಾಣುತ್ತೇವೆ. ಈತ ತನ್ನ ಚೆನ್ನಾರಾಯಪಟ್ಟಣದ ಶಾಸನ (ಕ್ರಿ.ಶ. ೧೧೯೧, ೧೭೯) ಮತ್ತು ತರೀಕೆರೆಯ ಶಾಸನ (ಕ್ರಿ.ಶ.೧೧೯೭, ೪೫)ಗಳಲ್ಲಿ ತನ್ನನ್ನು ಜನ್ನ, ಜನ್ನಿಗ, ಜನ್ನಯ್ಯ, ಜನ್ನಮಯ್ಯ, ಜಾನಕಿ, ಜನ್ನಮರಸ, ಜನಾರ್ಧದೇವ, ಜನ್ನಯ್ಯನ ಕವಿತೆ – ಎಂಬೆಲ್ಲಾ ಹೆಸರುಗಳಿಂದ ಕರೆದುಕೊಂಡಿದ್ದಾನೆ. ಶಾಸನಗಳನ್ನು ಬರೆದು ಪಳಗಿದ ಜನ್ನನ ಕೈ ‘ಯಶೋಧರ ಚರಿತೆ’ (ಕ್ರಿ.ಶ. ೧೨೦೯) ಮತ್ತು ‘ಅನಂತನಾಥ ಪುರಾಣ’ (ಕ್ರಿ.ಶ.೧೨೩೦) ಎಂಬ ಎರಡು ಕಾವ್ಯಗಳನ್ನು ಮತ್ತು ‘ಅನುಭವ ಮುಕುರ’ ಎಂಬ ಕಾಮಶಾಸ್ತ್ರ ಸಂಬಂಧಿಯಾದ ಒಂದು ಶಾಸ್ತ್ರಗ್ರಂಥವನ್ನು ಬರೆದುದು ಅವನ ಕಾವ್ಯಗಳ ಕೊನೆಯ ಪದ್ಯಗಳಿಂದ ತಿಳಿದುಬರುತ್ತದೆ.

ಜನ್ನನ ತಂದೆ ಶಂಕರನು ಹೊಯ್ಸಳ ದೊರೆ ನಾರಸಿಂಹ (ಕ್ರಿ.ಶ.೧೧೪೧-೭೩)ರಲ್ಲಿ ಕಟಕೋಪಾಧ್ಯಾಯನಾಗಿದ್ದವನು. ‘ಕವಿ ಸುಮನೋಬಾಣ’ ಎಂಬ ಬಿರುದನ್ನು ಹೊಂದಿದ್ದ ಈತನು ಮುಖ್ಯ ವಿದ್ವಾಂಸನೂ, ಕವಿಯೂ ಆಗಿದ್ದನು. ಅನಂತರ ಜನ್ನನೂ ರಾಜಾಶ್ರಯದಲ್ಲಿ ಕವಿಯೂ, ದಂಡಾಧೀಶನೂ, ಮಂತ್ರಿಯೂ ಆಗಿದ್ದನು. ವೀರಬಲ್ಲಾಳ (ಕ್ರಿ.ಶ. ೧೧೭೩-೧೨೨೦)ನ ಆಳ್ವಿಕೆಯ ಕಾಲದಲ್ಲಿ ತನ್ನ ‘ಯಶೋಧರ ಚರಿತೆ’ ಕಾವ್ಯವನ್ನೂ, ನಾರಸಿಂಹನ ಆಳ್ವಿಕೆಯ ಕಾಲದಲ್ಲಿ ತನ್ನ ‘ಅನಂತನಾಥ ಪುರಾಣ’ ಕಾವ್ಯವನ್ನೂ ಬರೆದುದಾಗಿಯಾ ಜನ್ನ ಹೇಳಿಕೊಂಡಿದ್ದಾನೆ. ಜನ್ನನಿಗೆ ಅನೇಕ ಬಿರುದುಗಳಿದ್ದವೆಂದು ತಿಳಿದು ಬಂದರೂ, ವೀರಬಲ್ಲಾಳನು ಅವನಿಗೆ ಕೊಟ್ಟಿದ್ದ ‘ಕವಿಚಕ್ರವರ್ತಿ’ ಎಂಬು ಬಿರುದು ಬಹುಮುಖ್ಯವಾದುದು.

ಜನ್ನನ ಶಾಸನಗಳೆಲ್ಲಾ ಚೆನ್ನಾರಾಯಪಟ್ಟಣ ಮತ್ತು ತರೀಕೆರೆಯ ಸುತ್ತಮುತ್ತಲ ಪ್ರದೇಶಗಳಲ್ಲಿಯೆ ಸಿಕ್ಕಿರುವುದರಿಂದ ಆತನು ದೋರೆಸಮುದ್ರ (ಈಗಿನ ಹಳೆಯಬೀಡು) ಪ್ರಾಂತ್ಯಕ್ಕೆ ಸೇರಿದವನಾಗಿರಬೇಕೆಂದು ಊಹಿಸಲಾಗಿದೆ. ಕುಲ, ಗೋತ್ರ, ರೂಪ, ಲಾವಣ್ಯ, ವಿದ್ಯೆ, ಪದವಿ, ಧನ, ಕೀರ್ತಿ ಎಲ್ಲದರಲ್ಲೂ ಜನ್ನ ಸಂತೃಪ್ತನೂ ಶ್ರೀಮಂತನೂ ಆಗಿದ್ದನು. ಅವನ ಮನೆತನ ವಿದ್ವತ್ ಪರಂಪರೆಗೆ ಸೇರಿದ್ದಾಗಿದ್ದರಿಂದ ಸಹಜವಾಗಿಯೇ ಆತನಿಗೆ ವಿದ್ವತ್ ಪೂರ್ಣವಾದ ಆ ಪರಿಸರವೂ ನೆರವಾಗಿರಬೇಕು. ಜೈನಧರ್ಮದ ಇಳೀಗಾಲ ಮತ್ತು ವಚನಯುಗದ ಏರುಗಾಲದ ಸಂಕ್ರಮಣ ಕಾಲಘಟ್ಟದಲ್ಲಿ ಜನ್ನ ತನ್ನ ‘ಯಶೋಧರ ಚರಿತೆ’ಯ ಕಾವ್ಯದ ವಸ್ತುವನ್ನು ನಿರ್ವಹಿಸಲು ಅವನ ಪಾಲಿಗೆ ಬಂದುದು ಒಂದು ಸಾಹಸವೇ ಆಗಿತ್ತು. ಕರ್ನಾಟಕದ ಜನಪದ ಧರ್ಮ, ಆಚರಣೆ, ಆರಾಧನೆಗಳನ್ನು ಜೈನಧರ್ಮದೊಂದಿಗೆ ಮುಖಾಮುಖಿಯಾಗಿಸುತ್ತಾ, ಕರ್ನಾಟಕದ ಜೈನಧರ್ಮದ ಇಳಿಗಾಲದ ಸಾಂಸ್ಕೃತಿಕ ಹಾಗೂ ನೋಂಪಿಯ ಆಚರಣೆಗಳ ಅವಸ್ಥಾಂತರಗಳ ಒತ್ತಡಗಳನ್ನು ಆತ ತನ್ನ ಕಾವ್ಯದಲ್ಲಿ ನಡೆಸಿಕೊಂಡು ಹೋಗಬೇಕಾದ ವಿಶಿಷ್ಟ ಐತಿಹಾಸಿಕ ಘಟ್ಟದಲ್ಲಿ ಆತ ತನ್ನ ಕಾವ್ಯವನ್ನು ಕಟ್ಟಬೇಕಾಗಿ ಬಂದಿತ್ತು.

ಜನ್ನನಿಗೆ ಜೈನಧರ್ಮದಲ್ಲಿ ಆಳವಾದ ಶ್ರದ್ಧೆ ಮತ್ತು ಭಕ್ತಿ ಎರಡೂ ಇತ್ತು. ಜನ್ನನ ಮೊದಲನೆಯ ಶಾಸನದ ಬರಹವೆಂದರೆ ಚೆನ್ನರಾಯಪಟ್ಟಣದ ಬಳಿಯ ದಂಡಿಗನಹಳ್ಳಿ ಹೋಬಳಿಯ ಆನೆಕೆರೆ ಗ್ರಾಮದಲ್ಲಿ ಸಿಕ್ಕಿರುವ ತಾಮ್ರಶಾಸನ (ಕ್ರಿ.ಶ. ೧೧೯೧). ಹೊಯ್ಸಳ ವೀರಬಲ್ಲಾಳನ ದಂಡಾಧೀಶನಾದ ಶ್ರೀಕರಣದ ಹೆಗ್ಗಡೆ ಮಾಚಣನು ಆನೆಕೆರೆಯನ್ನು ಅಗ್ರಹಾರವಾಗಿ ಬಿಟ್ಟಿದ್ದನ್ನು ಹೇಳುವ ಶಾಸನವಿದು. ಕಂದ, ವೃತ್ತ, ವಚನಗಳನ್ನು ಒಳಗೊಂಡು ಚಂಪೂ ಶೈಲಿಯಲ್ಲಿ ಬರೆದ ಶಾಸನ ಇದು. ಇನ್ನೂರು ನಿಡುಸಾಲುಗಳಿಗೂ ಮೇಲ್ಪಟ್ಟು ಕೆತ್ತಿರುವ ಶಾಸನ. ಇದರಲ್ಲಿ ಅಗ್ರಹಾರದ ಹರವು. ಗಡಿವಿವರ, ವೀರಬಲ್ಲಾಳ ದೊರೆಯ ವಂಶವರ್ಣನೆ ಹಾಗೂ ಮಾಚಿರಾಜನ ವಂಶವರ್ಣನೆಯನ್ನು ಹೇಳಲಾಗಿದೆ. ಶಾಸನದ ಕೊನೆಯಲ್ಲಿ ‘ಇದು ಜನ್ನಯ್ಯನ ಕವಿತೆ’ ಎಂದಿದೆ. ಇದರಿಂದ ಕವಿ ಜನ್ನನಿಗೆ ತನ್ನ ದೊರೆಯಾದ ಬಲ್ಲಾಳನಲ್ಲಿ ಭಕ್ತಿ, ಅಭಿಮಾನ, ಶ್ರದ್ಧೆ ಇದ್ದುವೆಂದೂ, ಮಾಚಿ ರ‍ಾಜನ ಮೈತ್ರಿ, ವಿಶ್ವಾಸ, ಆಶ್ರಯ – ಪ್ರೋತ್ಸಾಹಗಳೂ ಆತನಿಗೆ ದೊರೆತಿದ್ದವೆಂದೂ ವ್ಯಕ್ತವಾಗುತ್ತದೆ.

ಜನ್ನನ ಎರಡನೆಯ ಶಾಸನ ಬರಹವೆಂದರೆ, ತರೀಕೆರೆಯ ಅಮೃತಾಪುರದ ಅಮೃತೇಶ್ವರ ದೇವಾಲಯದಲ್ಲಿರುವ ಶಿಲಾಶಾಸನ (ಕ್ರಿ.ಶ.೧೯೯೭). ಹೊಯ್ಸಳ ವೀರಬಲ್ಲಾಳನ ದಂಡನಾಯಕನಾದ ಅಮಿತನು ತಾನೇ ಪ್ರತಿಷ್ಠಾಪನೆ ಮಾಡಿಸಿದ ಅಮೃತೇಶ್ವರ ದೇವರ ಅಂಗ ಭೋಗಾದಿಗಳಿಗೆ ಬಿಟ್ಟ, ದತಿಯ ವಿಷಯಗಳನ್ನು ಇದರಲ್ಲಿ ಹೇಳಲಾಗಿದೆ. ಇದರಲ್ಲಿ ವೀರಬಲ್ಲಾಳನ ಕುಲದ ವರ್ಣನೆಯನ್ನು ಉಜ್ವಲವಾಗಿ ವರ್ಣಿಸಲಾಗಿದೆ; ಮತ್ತು ಬಲ್ಲಾಳನ ಆಸ್ಥಾನದ ದಂಡನಾಥ ಚೂಡಾಮಣಿಯಾದ ಅಮಿತನ ಮಹಿಮೆಯನ್ನೂ ವರ್ಣನೆ ಮಾಡಲಾಗಿದೆ. ಇದರಲ್ಲಿ ನೂರ ಎಪ್ಪತ್ತಕ್ಕೂ ಮೇಲ್ಪಟ್ಟು ಉದ್ದ ಸಾಲುಗಳಿವೆ. ಈ ಶಾಸನವೂ ಕಂದ, ವೃತ್ತ, ವಚನಗಳನ್ನು ಒಳಗೊಂಡು ಚಂಪೂ ಶೈಲಿಯ ಪ್ರೌಢ ರಚನೆಯಾಗಿದೆ.

ಈ ಎರಡೂ ಶಾಸನಗಳಲ್ಲಿ ಅರ್ಧಭಾಗದಲ್ಲಿ ದಾತನ ಮತ್ತು ಅವನ ಮನೆತನದ ವರ್ಣನೆಯೂ ತುಂಬಿದೆ. ಈ ಶಾಸನಗಳನ್ನು ಬರೆಯುವ ಹೊತ್ತಿಗೆ ಜನ್ನನ ಮೇಲೆ ದೊರೆಯ ಕೃಪೆ ಬಿದ್ದಿರಬೇಕು; ವಿದ್ವಜ್ಜನರ ಮೆಚ್ಚುಗೆ, ಪ್ರಶಂಸೆಯೂ ದೊರೆತಿರಬೇಕು. ಅಮಿತನ ಸಹಾಯದಿಂದ ಜನ್ನ ರಾಜಸ್ಥಾನದ ಗೌರವ ಮರ್ಯಾದೆಗಳನ್ನು ಸಂಪಾದಿಸಿರಬೇಕು. ಕ್ರಮೇಣ ಜನ್ನನು ಹೊಯ್ಸಳ ವೀರಬಲ್ಲಾಳನ ಆಸ್ಥಾನ ಕವಿಯಾಗಿರಬೇಕು.

ಜನ್ನನಿಗೆ ತನ್ನ ಕುಲದ ಬಗ್ಗೆ, ತನ್ನ ಚೆಲುವಿನ ಬಗ್ಗೆ, ತನ್ನ ಕವಿತಾಶಕ್ತಿಯ ಬಗ್ಗೆ ಅಪಾರ ಹೆಮ್ಮೆ ಮತ್ತು ಸ್ವಾಭಿಮಾನ. ತನ್ನ ಹಿರಿಯ ಕವಿಗಳ ಬಗ್ಗೆ ಅವನಿಗೆ ಅಷ್ಟೇ ಪ್ರೀತಿ, ಗೌರವ, ವಿನಯ, ಜನ್ನನಲ್ಲಿ ಪಂಪನ ವಿನಯ ಹಾಗೂ ಪೊನ್ನ, ಕಾಳಿದಾಸರ ಕೃತಿಗಳಿಗಿಂತ ತನ್ನ ಕೃತಿಗಳು ‘ನೂರ್ಮಡಿ’ ಎಂದು ಬೀಗುವ ಹುಮ್ಮು ಎರಡೂ ಇದೆ. ಹಾಗೆಯೇ ಗುಣವರ್ಮನ ಜಾಣ್ನುಡಿ, ಪಂಪನಿಂಪು, ಪೊನ್ನನ, ಬಗೆ, ನಾಗವರ್ಮನ ಬಹುಜ್ಞತೆ, ರನ್ನನ ಕಾಂತಿ, ನಾಗಚಂದ್ರನ; ರಸಭಾವಂ, ಅಗ್ಗಳನ ವಕ್ರತೆ, ನೇಮಿಯ ದೇಸಿ, ಪುಷ್ಪಬಾಣನ ಮೃದುಬಂಧಂ – ಇವು ತನ್ನ ಕಾವ್ಯ ರಚನೆಯ ಅನುಕೂಲಕ್ಕೆ ಬಂದ ಮೀಮಾಂಸೆಯ ಪರಿಕರಗಳು ಎಂದು ಜನ್ನ ಸ್ಮರಿಸಿದ್ದಾನೆ.

ಜನ್ನನ್ನ ಕವಿಸತ್ವವನ್ನು ಕುರಿತು ಅವನ ನಂತರ ಬಂದ ಕನ್ನಡದ ಕವಿಗಳು ತಮ್ಮ ಕಾವ್ಯರಚನೆಯ ಸಂದರ್ಭದಲ್ಲಿ ಸ್ಮರಿಸುವುದನ್ನು ನೋಡಿದರೆ ಜನ್ನನ ಕವಿತಾ ಪ್ರತಿಭೆ ಎಷ್ಟು ಮೇಲುಮಟ್ಟದಲ್ಲಿದೆ ಎಂಬುದು ವ್ಯಕ್ತವಾಗುತ್ತದೆ. ಗುಣವರ್ಮನು ತನ್ನ ‘ಪುಷ್ಪದಂತ ಪುರಾಣ’ದಲ್ಲಿ ‘ಜನ್ನಿಗನಿಂಪು’ ಎಂದೂ, ಕಮಲಭವನು ತನ್ನ ‘ಶಾಂತೇಶ್ವರ ಪುರಾಣ’ದಲ್ಲಿ ‘ಜಗನ್ನುತ ಜನ್ನ’ ಎಂದೂ, ಮಲ್ಲಿಕಾರ್ಜುನನು ತನ್ನ ‘ಸೂಕ್ತಿ ಸುಧಾರ್ಣವ’ದಲ್ಲಿ ‘ಜನ್ನನ ದೇಸಿ’ ಎಂದೂ ಮಧುರನು ತನ್ನ ‘ಧರ್ಮನಾಥ ಪುರಾಣ’ದಲ್ಲಿ ‘ಶಾಸ್ತ್ರ ಲೌಕ ಕಲಿಯೊಳ್ ಬೇರ್ ವರಿದ ನೇಮಿ ಜನ್ನಮರ್ ಇರ್ವರೆ ಕರ್ನಾಟಕ ಕೃತಿಗೆ ಸೀಮಾಪುರುಷರ್’ ಎಂದೂ ಹಲವಾರು ಕವಿಗಳು ಹೊಗಳಿದ್ದಾರೆ.

ಜನ್ನ ತನ್ನ ಮೊದಲನೆಯ ‘ಯಶೋಧರ ಚರಿತೆ’ ಕಾವ್ಯವನ್ನು ಬರೆದ ಸುಮಾರು ಎಪ್ಪತ್ತು ವರ್ಷಗಳಾದ ಮೇಲೆ ತನ್ನ ಎರಡನೆಯ ‘ಅನಂತನಾಥ ಪುರಾಣ’ ಕಾವ್ಯವನ್ನು ರಚಿಸಿದ್ದಾನೆ. ಈ ವೇಳೆಗೆ ಅವನಿಗೆ ವಯಸ್ಸು ಸುಮಾರು ಷಷ್ಠಿಪೂರ್ತಿಯಾಗಿರಬೇಕು. ಈ ವಯಸ್ಸಿಗೆ ಅವನು ತಲುಪುವ ಹೊತ್ತಿಗೆ ಅವನ ವ್ಯಕ್ತಿತ್ವ ಮಾಗಿತ್ತು. ಲೌಕಿಕ ಬದುಕಿನಿಂದ ಅಲೌಕಿಕ ಬದುಕಿನ ಬಗ್ಗೆ ಅವನ ಮನಸ್ಸು ಪರಿಪಕ್ವಗೊಂಡಿತ್ತು. ಜನ್ನನ ಕಾಲಕ್ಕಾಗಲೇ ಪಂಪ, ರನ್ನ ಪೊನ್ನರ ಕೈಯಲ್ಲಿ ಜೈನಪುರಾಣ ಕಾವ್ಯಗಳ ರಚನೆಯ ಹೆದ್ದಾರಿ ನಿರ್ಮಾಣವಾಗಿತ್ತು. ಜನ್ನನಿಗೆ ತನ್ನ ಧರ್ಮವನ್ನು ಬೆಳಗುವುದಕ್ಕೆ ಇದು ಅವನಿಗೆ ಸುಸಂದರ್ಭವಾಗಿತ್ತು. ಆಗ ಜನ್ನ ಸಹಜವಾಗಿ ತನ್ನ ಧರ್ಮವನ್ನು ಬೆಳಗುವುದಕ್ಕೆ ಇದು ಅವನಿಗೆ ಸುಸಂದರ್ಭವಾಗಿತ್ತು. ಆಗ ಜನ್ನ ಸಹಜವಾಗಿ ತನ್ನ ‘ಅನಂತನಾಥ ಪುರಾಣ’ (ಕ್ರಿ.ಶ. ೧೨೩೦) ಕಾವ್ಯ ರಚನೆಗೆ ಕೈಹಾಕಿದ್ದಾನೆ. ಗುಣ ಭದ್ರಾಚಾರ್ಯರು ಸಂಸ್ಕೃತದಲ್ಲಿ ಪದ್ಯರೂಪದಲ್ಲಿ ಬರೆದಿರುವ ‘ಉತ್ತರ ಪುರಾಣ’ದಲ್ಲಿ ಮತ್ತು ಚಾವುಂಡರಾಯನು ಕನ್ನಡದಲ್ಲಿ ಗದ್ಯರೂಪದಲ್ಲಿ ಬರೆದಿರುವ ‘ತ್ರಿಷಷ್ಠಿ ಶಲಕಾಪುರುಷ ಪುರಾಣ’ ದಲ್ಲೀಯಾ ಬರುವ ಅಜಿತಜಿನನ ಕಥೆ ಜನ್ನನ ಈ ‘ಅನಂತನಾಥ ಪುರಾಣ’ ಕಾವ್ಯದ ರಚನೆಗೆ ಆಕರವಾಗಿರುವಂತಿದೆ. ಈ ಆಕರಗಳಿಂದ ಜನ್ನ ಸ್ಪೂರ್ತಿ ಹೊಂದ ತನ್ನ ವಿಸ್ತಾರವಾದ ‘ಅನಂತನಾಥ ಪುರಾಣ’ ಚಂಪೂ ಕಾವ್ಯವನ್ನು ರಚಿಸಿದ್ದಾನೆ. ಈ ಕಾವ್ಯದಲ್ಲಿ ಸಂದರ್ಭವಶವಾಗಿ ಬರುವ ‘ಚಂಡಶಾಸ’ನ ದುರಂತ ಕಥೆಯೇ ಒಂದು ಚೆಲುವಿನ ರಸದ ನಿರೂಪಣೆಯಾಗಿದೆ.

ಚಂಡಶಾಸನ ಮತ್ತು ವಸುಷೇಣ ಇಬ್ಬರೂ ಆಪ್ತ ಗೆಳೆಯರು. ವಸುಷೇಣನ ಸೌಂದರ್ಯವತಿ ಹೆಂಡತಿಯಾದ ಸುನಂದೆಯನ್ನು ಚಂಡಶಾಸನ ಕಂಡು ಮೋಹಗೊಂಡು ಅವಳನ್ನು ಮೋಹಿಸಿ ಮೋಸದಿಂದ ಕರೆದೊಯ್ಯುತ್ತಾನೆ: ಅವಳನ್ನು ಒಲಿಸಿಕೊಳ್ಳಲು ಅನೇಕ ತಂತ್ರಗಳನ್ನು ನಡೆಸುತ್ತಾನೆ. ಆದರೆ ಕೊನೆಗೆ ಅವರಿಬ್ಬರೂ ಒಬ್ಬರಿಗೊಬ್ಬರು ಅಪ್ಪಿ ಸಾಯುತ್ತಾರೆ. ಚಂಡಶಾಸನನ ಮೇಲೆ ಯುದ್ಧಕ್ಕೆ ಬಂದ ವಸುಷೇಣ ಕೊನೆಗೆ ಪ್ರಾಪಂಚಿಕವಾದ ಈ ವ್ಯವಹಾರಗಳಿಗೆ ಹೇಸಿ ರಾಜ್ಯವನ್ನು ತನ್ನ ಮಗನಿಗೆ ಒಪ್ಪಿಸಿ ತಪಸ್ಸಿಗೆ ಹೊರಟುಹೋಗುತ್ತಾನೆ. ಜನ್ನನು ಈ ಕಥಾಭಾಗದಲ್ಲಿ ತನ್ನ ಉನ್ನತ ಪ್ರತಿಭೆಯ ಶಕ್ತಿಯನ್ನು ತೋರಿದ್ದಾನೆ. ರಂ.ಶ್ರೀ. ಮುಗಳಿ ಅವರು ಹೇಳುವಂತೆ ‘ಅನಂತನಾಥ ಪುರಾಣ’ ಕಾವ್ಯವನ್ನು ಜನ್ನ ತನ್ನ ಪರಿಣತ ವಯಸ್ಸಿನಲ್ಲಿ ಬರೆದರೂ ಅದು ಪರಿಪಕ್ವ ಕೃತಿಯಲ್ಲ; ಆದರೆ ‘ಚಂಡಶಾಸನ’ ದ ಕಥೆಯು ದುರಂತ ದರ್ಶನಗಳಲ್ಲಿ ಪ್ರಣಯ ಸಮಸ್ಯೆಯ ಪುರುಷ ಮುಖವನ್ನು ತೋರಿಸುವ ಉಜ್ವಲ ಕೃತಿಯಾಗಿ ಪರಿಣಮಿಸಿದೆ (ಪು. ೧೯೦-೧೯೧, ೧೯೫೩). ಮಹಾಕಾವ್ಯದ ಲಕ್ಷಣಗಳನ್ನೆಲ್ಲಾ ಒಳಗೊಂಡು ರಚಿತವಾದ ‘ಅನಂತನಾಥ ಪುರಾಣ’ ಕಾವ್ಯವು ಜನ್ನನ ಪ್ರೌಢ ಪಂಡಿತಕಾವ್ಯವಾಗಿದೆ. ಇಲ್ಲಿ ಬರುವ ‘ಚಂಡಶಾಸನ’ನ ಕಥೆ ಜನ್ನನ ಕಲಾಪ್ರಜ್ಞೆಯಿಂದ ಕೂಡಿದ್ದರೂ ಅದು ಮನುಷ್ಯ ಸಂಬಂಧಗಳ ಪ್ರಣಯದ ಒಂದು ಮುಖವನ್ನು ಚಿತ್ರಿಸುವ ದುರಂತ ಕಥೆಯಾಗಿ ಬರುತ್ತದೆ. ಈ ದುರಂತಕ್ಕೆ ಜನ್ನ ಎಂದಿನಂತೆ ವಿಧಿವಿಲಾಸನದ ಅರಿವನ್ನು ಸೂಚಿಸುತ್ತಾ, ಚಂಡಶಾಸನನ ಜಾಗ್ರತನವನ್ನು ಇಲ್ಲಿ ವರ್ಣಿಸುತ್ತಾನೆ. ತೀನಂಶ್ರೀ ಅವರು ಹೇಳುವಂತೆ, ಕ್ರಾಂತಿಕಾರವಾದ ರೀತಿಯಲ್ಲಿ ಅದಮ್ಯಕಾಮದ ಧರ್ಮವಿರುದ್ಧ ಪ್ರಣಯದ ಸ್ತ್ರೀಮುಖ, ಪುರುಷ ಮುಖಗಳನ್ನು ಉಜ್ವಲವಾಗಿ ಚಿತ್ರಿಸಿ ಜನ್ನನು ಕನ್ನಡಕ್ಕೆ ಸ್ವಂತ ಕಾಣಿಕೆ ಸಲ್ಲಿಸಿದ್ದಾನೆ (ಪು.೫೫, ೧೯೪೭).

ಜನ್ನನ ‘ಯಶೋಧರ ಚರಿತೆ’ (ಕ್ರಿ.ಶ. ೧೨೦೯) ಪಂಪಮಾರ್ಗದ ಲೌಕಿಕ – ಆಗಮಿಕ ಕಾವ್ಯಮಾರ್ಗದ ವಿನ್ಯಾಸಕ್ಕಿಂತ ಭಿನ್ನವಾದ ಕಾವ್ಯ. ಪಂಪ, ರನ್ನರು ತಮ್ಮ ಕಾವ್ಯಕ್ಕೆ ‘ಮಹಾಭಾರತ’ ದಿಂದ ವಸ್ತುವನ್ನು ಸ್ವೀಕರಿಸಿ ಅದರ ಮೇಲೆ ತಮ್ಮ ಕಾಲದ ರಾಜಕೀಯ, ಪ್ರಭುತ್ವ, ಮೌಲ್ಯಗಳು ಹಾಗೂ ಸಾಂಸ್ಕೃತಿಕ ಒತ್ತಡಗಳನ್ನು ನಿರ್ವಹಿಸಿದರೆ, ಪೊನ್ನ, ನಾಗಚಂದ್ರ, ಜನ್ನರಂತಹ ಕವಿಗಳು ‘ರಾಮಾಯಣ’ದಿಂದ ಹಾಗೂ ದೇಸೀ ಪರಂಪರೆಯ ಮೌಖಿಕ ಸಾಹಿತ್ಯದಲ್ಲಿನ ಆಚರಣೆ, ಆರಾಧನೆ, ನಂಬಿಕೆಗಳನ್ನು ತಮ್ಮ ಮಾರ್ಗಕಾವ್ಯದ ವಿನ್ಯಾಸದೊಳಗೆ ತರಲು ಪ್ರಯತ್ನಿಸಿದವರು. ಇವರು ಕನ್ನಡ ಕಾವ್ಯದ ಪುರಾಣದ ವಸ್ತು ಜಗತ್ತನ್ನು ವಿಸ್ತರಿಸುತ್ತಾ ಕನ್ನಡದ ದೇಸೀ ಪರಂಪರೆಯ ಅಭಿಜಾತತೆಯನ್ನು ತಮ್ಮ ಸಂವೇದನೆಯಲ್ಲಿ ತಂದುಕೊಳ್ಳುವುದಕ್ಕೆ ಶುರುಮಾಡಿದರು. ಮಾರ್ಗವೆಂದರೆ ಸಂಸ್ಕೃತ ಪ್ರೌಢಿಮೆಯ ಶೈಲಿ ಎಂಬಂತೆ ಸಿದ್ಧಗೊಂಡಿದ್ದ ಪರಿಕಲ್ಪನೆಯನ್ನು ದಾಟಿ ದೇಸಿ ಛಂದಸ್ಸುಗಳ ಅಭಿವ್ಯಕ್ತಿಯ ಕಡೆಗೆ ತಮ್ಮ ಕಾವ್ಯದ ಭಿತ್ತಿಯನ್ನು ವಿಸ್ತರಿಸಿದ್ದು ಕನ್ನಡ ಕಾವ್ಯ ಪರಂಪರೆಯಲ್ಲಿ ಆದ ಒಂದು ಪ್ರಮುಖ ತಿರುವು.

ಜನ್ನನ ‘ಯಶೋಧರ ಚರಿತೆ’ ಮುನ್ನೂರು ಕಂದ ಪದ್ಯಗಳಲ್ಲಿ ಮತ್ತು ಹತ್ತು ಮೃತ್ತಗಳಲ್ಲಿ ನಾಲು, ಅವತಾರಗಳಲ್ಲಿ ಹಂಚಿಕೊಂಡು ರಚನೆಯಾದ ಸಣ್ಣಗಾತ್ರದ ಕಾವ್ಯವಾಗಿದೆ. ಪ್ರತಿಯೊಂದು ‘ಅವತಾರ’ದ ಕೊನೆಯಲ್ಲಿ ಈ ವೃತ್ತಗಳು ಬರುತ್ತವೆ. ಈ ಕಾವ್ಯದ ರೂಪ ಕನ್ನಡಕ್ಕೆ ಹೊಸದು. ಕನ್ನಡದ ಅಭಿಜಾತ ಪರಂಪರೆಯಲ್ಲಿಯೇ ವಿಶಿಷ್ಟವಾದದ್ದು. ಜೈನ ಪರಂಪರೆಯಲ್ಲಿ ರೂಢಮೂಲವಾದ ಪುರಾತನ ಕಥೆ ಇದು. ಕ.ವೆಂ. ರಾಘವಾಚಾರ್ ಅವರು ಹೇಳುವಂತೆ, ಸಂಸ್ಕೃತ, ಪ್ರಾಕೃತ, ಅಪಭ್ರಂಶ ಮೊದಲುಗೊಂಡು ಕನ್ನಡ, ತಮಿಳು, ಹಿಂದಿ, ಗುಜರಾತಿ ಮೊದಲಾದ ಹಲವು ದೇಶ ಭಾಷೆಗಳಲ್ಲಿ ಈ ಕಥೆಯನ್ನು ಕುರಿತು ಬರೆದ ಕಾವ್ಯಗಳು ಹಲವಿದೆ. ಈ ಕಥೆಯ ಸಂಬಂಧವಾದ ಗ್ರಂಥರಚನೆ ಈಗ ತಿಳಿದುಬಂದಿರುವ ಮಟ್ಟಿಗೆ ಸುಮಾರು ೮ನೆಯ ಶತಮಾನದಲ್ಲಿ ಆರಂಭವಾಗಿ ೧೮ನೆಯ ಶತಮಾನದ ಕೊನೆಯವರೆಗೂ ಒಂದಲ್ಲ ಒಂದು ರೂಪದಲ್ಲಿ, ಒಂದು ಸಾವಿರ ವರ್ಷಗಳ ಕಾಲ ಅವಿಚ್ಛಿನ್ನವಾಗಿ ನಡೆದು ಬಂದಿದೆ (ಪು. XLI, ೧೯೪೧).

ಈ ಯಶೋಧರನ ಕಥೆಯು ಅಭಿಜಾತ ಪರಂಪರೆಯಲ್ಲಿ ಮಾತ್ರವಲ್ಲದೆ ಮೌಖಿಕ ಪರಂಪರೆಯಲ್ಲಿಯೂ ಮತ್ತು ಆಧುನಿಕ ಕನ್ನಡ ಸಾಹಿತ್ಯದಲ್ಲಿಯಾ ವಿವಿಧ ಅಭಿವ್ಯಕ್ತಿ ಸ್ವರೂಪಗಳಲ್ಲಿ ಪ್ರಕಟವಾಗಿದೆ. ಆಧುನಿಕ ಕನ್ನಡ ಕಾವ್ಯದಲ್ಲಿ ಹಾಗೂ ನಾಟಕದಲ್ಲಿ ಮರುಸೃಷ್ಟಿಯಾಗುತ್ತಲೇ ಬಂದಿದೆ. ಅಮೃತಮತಿಯು ಕಾಲದ, ಸಂಸ್ಕೃತಿಯು, ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಹಾಗೂ ಕನ್ನಡದ ಸೃಜನಶೀಲತೆಯಲ್ಲಿ ವೈವಿಧ್ಯಮಯವಾಗಿ ಮರುರೂಪ ಪಡೆಯುತ್ತಲೇ ಬಂದಿದ್ದಾಳೆ. ಕನ್ನಡದ ಈ ಅಭಿಜಾತ ಪರಂಪರೆಗೆ ಹೀಗೆ ಸಮಕಾಲೀನದವರೆಗೂ ನಿರಂತರವಾಗಿ ಹರಿದುಬಂದಿದೆ.

ವಾದಿರಾಜ – ಜನ್ನ

ನಾಲ್ಕು ಸರ್ಗಗಳಲ್ಲಿರುವ ವಾದಿರಾಜನ ಸಂಸ್ಕೃತ ‘ಯಶೋಧರ ಚರಿತೆ’ ಕನ್ನಡದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದ ಕಾವ್ಯ. ನಾಲ್ಕು ಸರ್ಗಗಳಲ್ಲಿರುವ ಮೂಲಕೃತಿಯ ಪ್ರಥಮಸರ್ಗದಲ್ಲಿ ೬೨, ದ್ವಿತೀಯ ಸರ್ಗದಲ್ಲಿ ೭೫, ತೃತೀಯ ಸರ್ಗದಲ್ಲಿ ೮೩ ಮತು ಚತುರ್ಥ ಸರ್ಗದಲ್ಲಿ ೭೪ ಪದ್ಯಗಳಿವೆ ಒಟ್ಟು ೨೯೪ ಪದ್ಯಗಳ ಈ ಕಿರುಕಾವ್ಯವನ್ನು ಜನ್ನ ಆಯ್ಕೆ ಮಾಡಿಕೊಂಡಿದ್ದಾನೆ.

ವಾದಿರಾಜ ಉತ್ತಮ ಕವಿ. ಆತನಲ್ಲಿ ಬರುವ ವಸಂತಋತುವಿನ ವರ್ಣನೆ ಮಾರಿಯ ಜಾತ್ರೆಗೆ ಪೂರಕವಾಗಿ ಅರ್ಥವಂತಿಯಿಂದ ಕೂಡಿದೆ. ಜನ್ನ ತನ್ನ ಕಾವ್ಯವನ್ನು ನಾಲ್ಕು ಅವತಾರಗಳಲ್ಲಿ ಕನ್ನಡಿಸಿದ್ದಾನೆ. ಹೀಗೆ ಕನ್ನಡಕ್ಕೆ ತರುವಾಗ ಈತ ಪಂಪ, ರನ್ನರ ಪರಂಪರೆಯನ್ನು ಮುಂದುವರೆಸಿದ್ದಾನೆ.

ವಾದಿರಾಜ ತನ್ನ ಕಾವ್ಯ ಭಾಗಗಳನ್ನು ‘ಸರ್ಗಗಳು’ ಎಂದಿದ್ದರೆ ಜನ್ನ ‘ಅವತಾರಗಳು’ ಎಂದು ಕರೆದಿದ್ದಾನೆ. ವಾದಿರಾಜ ಮಾರಿಯ ಜಾತ್ರೆಯನ್ನು ವರ್ಣಿಸುತ್ತ ವಸಂತ ಬಂದುದನ್ನು ಹೀಗೆ ತನ್ನ ಪ್ರತಿಭೆಯಲ್ಲಿ ಹಿಡಿದಿಟ್ಟಿದ್ದಾನೆ :

ನೈವೇದಯದಿವಾಗತ್ಯ ಮಧುಸ್ತಸ್ಕೆ ನಿಜಾಗಮಮ್
ಮಾಕಂದಕಲಿಕಾಸ್ವಾದಮತ್ತಕೋಕಿಲ ನಿಸ್ವನೈಃ ೧-೧೮

ಉದ್ಗೀರನ್ ದಿಶಿ ದಿಶ್ಯುಚ್ಚೈಃ ರಕ್ತಾಶೋಕಸ್ಯ ಮಂಜರೀಃ
ಜಹಾರೇವ ಬಲಿಂ ತಸ್ಯೆ ಸಕಾಲಃ ಸ್ವಸ್ಯ ಶೋಣಿತೈಃ ೧-೧೯

ದೇವತಾವಾಸ ಚೂತಾನಾಂ ಸಾಖಾಸು ಪರಪುಷ್ಟಕೈಃ
ಶೂಲ್ಯಮಾಂಸ್ಕೆರಿವಾತಸ್ಥೇ ಮಧುನೋಪಾಯನೀಕೃತೈಃ೧-೨೦

ಈ ಮೂರು ಪದ್ಯಗಳ ಅನುವಾದ ಹೀಗಿದೆ.

  1. Spring came and announced as it were, his a advent to the goddess through the songs of cuckoos intoxicated by tasting the tender sprouts of mango trees.
  2. Causing the red asoka bunches to bloom earth on all sides, that season seemed to bring to the goddess his own blood as sacrifice.
  3. The cuckoos on the branches of the mango trees in the temple yard looked like offerings of meat, at the ends of spears, brought by spring (the devotees). *

ಜನ್ನ ಇದನ್ನು ಮೂರು ಕಂದಗಳಲ್ಲಿ ವರ್ಣಿಸಿರುವುದು ಹೀಗೆ :

ಆ ದೇವಿಯ ಜಾತ್ರೆಗೆ ಮೊಳೆ
ವೋದೆಳೆವೆಱೆ ಸಿರದ ಗಾಳಮುರಿಯುಯ್ಯಲೆ ಕೈ
ವೋದಸುಕೆ ಕೋಕಿಲ ಧ್ವನಿ
ಮೂದಲೆಯುಲಿಯಾಗೆ ಬಂದುದಂದು ಬಸಂತಂ

ಸಿಸಿರಮನೆ ಪಿಡಿದು ಪರಕೆಗೆ
ವಸಂತನಲರ್ವೋದ ಮಾವಿನಡಿಮಂಚಿಕೆಯೊಳ್
ಕುಸುರಿದಱೆದಡಗಿನಂತೆವೊ
ಲೆಸೆದುವು ತದ್ವನದೊಳುದಿರ್ದ ಮುತ್ತದ ಮುಗುಳ್ಗಳ್

ಮಾರಿ ಮಲಯಾನಿಳಂ ನವ
ನೀರಜವನಮೆಂಬ ಕೆಂಡದೊಳ್ ದಂದನಮ-
ಸ್ಕಾರದೆ ಬಂದಪನ್ನಿತವ-
ಧಾರಿಸುದೆಂಬಂತಿರುಲಿದವರಗಿಳಿ ಬನದೊಳ್

ವಾದಿರಾಜ ಕೊಟ್ಟಿರುವ ಚಿತ್ರಗಳಿಗಿಂತ ಹೆಚ್ಚು ಚಿತ್ರಕಗುಣವುಳ್ಳ ಸಹಜ ವರ್ಣನೆಗಳಾಗಿರುವುದು ಜನ್ನನ ಪ್ರತಿಭೆಯ ಕಾರಣವಾಗಿ. ಇಂತಹ ಕಡೆ ಜನ್ನ ಸೃಜನಶೀಲ ಕವಿಯಾಗಿ ಕಾಣಿಸಿಕೊಳ್ಳುತ್ತಾನೆ. ಮಾರಿಯಗುಡಿಯ ವರ್ಣನೆಯಲ್ಲಿ ಕೂಡ ಜನ್ನ ಇದೇ ಕೌಶಲವನ್ನು ಮೆರೆಯುತ್ತಾನೆ. ಮುಂದೆ ಎರಡನೆಯ ಸರ್ಗದಲ್ಲಿ ಯಶೋಧರನ ವರ್ಣನೆಗೆ ವಾದಿರಾಜ ಆರು ಪದ್ಯಗಳನ್ನು ಮೀಸಲಿರಿಸಿದ್ದಾನೆ. ಯಶೋಧರನ ಅಂಗಾಂಗಗಳ ಸೌಂದರ್ಯದ ವರ್ಣನೆಯನ್ನು ಸಂಕ್ಷಿಪ್ತವಾಗಿ ಮತ್ತು ಪರಿಣಾಮಕಾರಿಯಾಗಿ ಜನ್ನ ವರ್ಣಿಸುವುದನ್ನು ಕಾಣುತ್ತೇವೆ :

ನೋಡುವ ಕಣ್ಗಳ ಸಿರಿ ಮಾ
ತಾಡುವ ಬಾಯ್ಗಳ ರಸಾಯನಂ ಸಂತಸದಿಂ
ಕೂಡುವ ತೋಳ್ಗಳ ಪುಣ್ಯಂ
ನಾಡಾಡಿಯೆ ರೂಪು ಕುವರ ವಿದ್ಯಾಧರನಾ

ವಾದಿರಾಜ ಆರು ಪದ್ಯಗಳಲ್ಲಿ ಮಾಡಿರುವ ಯಶೋಧರನ ವರ್ಣನೆಯಲ್ಲಿ ಪಾರಂಪರಿಕನಾಗಿ ಅಂಗಗಳ ವರ್ಣನೆ ಮಾಡಿದ್ದಾನೆ. ಆದರೆ ಜನ್ನ ಆತನ ವ್ಯಕ್ತಿತ್ವವೆಲ್ಲಾ ಘನೀಭೂತವಾದಂತೆ ಒಂದೇ ಒಂದು ಕಂದ ಪದ್ಯದಲ್ಲಿ ಇದನ್ನು ಸೆರೆಹಿಡಿದಿದ್ದಾನೆ. ಅಮೃತಮತಿ ಅಷ್ಟಾವಂಕನ ಸಂಗೀತಕ್ಕೆ ಮಾರುಹೋದ ಎನ್ನುವುದಕ್ಕಿಂತ ಬಲಿಯಾಗಿ ಹೋದ ಸಂದರ್ಭವನ್ನು ವಾದಿರಾಜ ವರ್ಣಿಸುವ ಬಗೆ ಹೀಗಿದೆ :

ನಿಮೀಲಯಂತೀ ನಯನೋತ್ಪಲೇ ಸಾ
ದೇವೀ ಪರಿಮ್ಲಾನತನೂ ರತಾನ್ತೇ
ಆಕರ್ಣಯಾಮಾಸ ಸುಖಾವಹಂ ತತ್
ಚಕಾರ ತೃಷಾಮಪಿ ರಕೃತ ಕಂಠೇ

ಇದನ್ನು ಡಾ. ಕೃಷ್ಣಮೂರ್ತಿ ಹೀಗೆ ಅನುವಾದಿಸಿದ್ದಾರೆ :

The queen lying on her couch with half closed eyes, her body lanquida after the amorous sports, heard this ravishing song and at once took a fancy for the gifted singer.

ಇದನ್ನು ಜನ್ನ ನಿರೂಪಿಸಿರುವುದು ಹೀಗೆ :

ಬಿನದಕೆ ಪಾಡುತ್ತಿರೆ ನುಣ್
ದನಿ ನಿದ್ರೆಗೆ ಕತಕ ಬೀಜಮಾಯ್ತೆನ ಮೃಗಲೋ
ಚನೆ ತಿಳಿದಾಲಿಸಿ ಮುಟ್ಟಿದ
ಮನಮಂ ತೊಟ್ಟನೆ ಪಸಾಯದಾನಂಗೊಟ್ಟಳ್

ಜನ್ನನು ಬಳಸುವ ಉಪಮಾನಗಳ ಶಕ್ತಿ ಆತನ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ತನ್ನ ಮಡದಿಯ ಕಥೆಯನ್ನು ಹೇಳಿಕೊಳ್ಳಲಾಗದ ಸಂಕಟಕ್ಕೆ ಸಿಕ್ಕಿ ನೊಂದ ಯಶೋಧರನ ತಾಯಿ ಇದರ ಕಾರಣ ಕೇಳಿದಾಗ ವಾದಿರಾಜ ಒಂದು ಸ್ವಪ್ನದ ಚಿತ್ರವನ್ನು ಕೊಡುತ್ತಾನೆ. ಅದು ಹೀಗಿದೆ:

ಕಿಂ ತು ಕಾನ್ತಿರವಮುಚ್ಯ ಮೃಗಾಂಕಂ
ಬಿಭ್ರತಂ ಕುವಲಯೋರ್ಜಿತ ಲಕ್ಷ್ಮೀಮ್
ತ್ಯಕ್ತೇಮದ್ಯತು ಮಯಾ ನಿಶಿ ದೃಷ್ಟ್ವಾ
ದೇವಿ ಸಂಗಮಕರೀ ತಿಮಿರೇಣ

ಇದರ ಅನುವಾದ

But last night, O Mother I vividly saw that moonlight got itself separated from the moon, bearing the full glory of the opening night lotuses (also, of the illuminated earth below) and made union with darkness.

ಇದನ್ನು ಚನ್ನ ಚಿತ್ರಿಸಿರುವುದು ಹೀಗೆ :

ದೇವಿಯರ ಪರಕೆಯಿಂದೆನ
ಗಾವುದಜೊಳ್ ಕೊರತೆಯಿಲ್ಲ ಪೋದಿರುಳೊಳ್ ಪೊಂ
ದಾವರೆಗೊಳದಂಚೆ ಕಱಿ
ಲ್ದಾವರೆಗೊಳದೊಳಗೆ ನಲಿವ ಕನಸಂ ಕಂಡೆಂ

“ವಾದಿರಾಜನೂ ಸ್ವಪ್ನ ರೂಪದಲ್ಲೆ ತನ್ನ ಅಮೃತಮತಿಯ ವರ್ತನೆಯನ್ನು ಸೂಚಿಸುತ್ತಿದ್ದಾನೆ. ಜನ್ನನೂ ಅಷ್ಟೇ. ಆದರೆ ಮುಖ್ಯ ವ್ಯತ್ಯಾಸ ಇರುವುದು ಕನಸಿನಲ್ಲಿ ಕಂಡದ್ದೇನು ಎನ್ನುವುದರಲ್ಲಿ. ಅಮೃತಮತಿಯ ವರ್ತನೆ ನೈದಿಲೆಗಳನ್ನರಳಿಸುವ ಬೆಳದಿಂಗಳು ಚಂದ್ರನನ್ನು ಬಿಟ್ಟು ಕತ್ತಲನ್ನು ತಬ್ಬಿಕೊಂಡಿತು ಎಂದು ವಾದಿರಾಜ ಹೇಳಿದರೆ, ಜನ್ನ ಕಣ್ಣಿಗೆ ಕಟ್ಟುವಂಥ ಚಿತ್ರವೊಂದನ್ನು ನೀಡುತ್ತಾನೆ. ಬಂಗಾರದ ತಾವರೆಗಳ ಕೊಳದಲ್ಲಿ ನಲಿದಾಡುವ ಹಂಸೆ ಕೊಚ್ಚಿಯ ತಾವರೆಗೊಳದಲ್ಲಿ ನಲಿದಾಡಿದ ಚಿತ್ರವನ್ನೂ ನೀಡುತ್ತಾನೆ. ವಾದಿರಾಜನ ಚಿತ್ರ ಕವಿಸಮಯಕ್ಕೆ ಸಮೀಪದ್ದು. ಆದರೆ ಜನ್ನನದು ಕಣ್ಣಿಗೆ ಸುಳಿಯುವಂಥ ದೃಶ್ಯ ಚಿತ್ರ. ಇಲ್ಲಿ ಇನ್ನೂ ಒಂದು ವಿಶೇಷವಿದೆ. ಅದೆಂದರೆ ಇಲಿ ಹಂಸೆ ಕೊಳಚೆಯ ತಾವರೆಯ ಕೊಳದಲ್ಲಿ ನಲಿಯುವ ಚಿತ್ರವಾಗಿದ್ದು ಅಮೃತಮತಿಯ ವರ್ತನೆಯನ್ನು ಧ್ವನಿಸುತ್ತದೆ. ಜನ್ನ ಕವಿಯ ಕಾವ್ಯದ ತುಂಬ ಇಂಥದೇ ಚಿತ್ರಗಳು ತುಂಬಿಕೊಂಡು ವಾದಿರಾಜನ ಯಶೋಧರ ಚರಿತೆ ಮರುಹುತ್ಟು ಪಡೆದುಕೊಂಡು ಸ್ವಂತ ಸೃಷ್ಟಿ ಎಂಬಂತೆ ಆಗಿದೆ” (ಜಿ.ಎಸ್. ಸಿದ್ದಲಿಂಗಯ್ಯ, ೨೦೦೯) ಎಂಬ ಅಭಿಪ್ರಾಯವು ಸಹಜವಾಗಿದೆ.

ಜನ್ನ ರೂಪಕಗಳನ್ನು ಸೃಷ್ಟಿಸುವಲ್ಲಿ ಪ್ರತಿಭಾವಂತ ಕವಿ. ಯಶೋಧರನ ತಳಮಳವನ್ನು ಜನ್ನ ಚೆನ್ನಾಗಿ ಚಿತ್ರಿಸುತ್ತಾ ಕಥೆಯನ್ನು ಒಂದು ರೂಪಕವಾಗಿ ಮಾರ್ಪಡಿಸಿದ್ದು ಹೀಗಿದೆ :

ಅಮೃತಮತಿಯೆಂಬ ಪಾತಕಿ
ಯ ಮಾಯೆ ಬನಮಾಯ್ತು ಚಂದ್ರಮತಿ ಮಾತೆಯ ಮಾ
ತೆಮಗೆ ಬಲೆಯಾಯ್ತು ಹಿಂಸನ
ಮಮೋಘ ಶರಮಾಯ್ತು ಕೆಡೆದುದಾತ್ಮ ಕುರಂಗಂ

ಈ ಅಭಿವ್ಯಕ್ತಿ ಜನ್ನನ ಸ್ವಂತಿಕೆಗೆ ಸಾಕ್ಷಿಯಾಗಿದೆ. “ಜನ್ನ ವಾದಿರಾಜನ ಕಾವ್ಯ ಕನ್ನಡ ಜನಕ್ಕೆ ಪ್ರಿಯವಾಗಿದ್ದನ್ನು ಜನ್ನ ಗಮನಿಸಿದ್ದಾನೆ. ಈ ನೋಂಪಿಯ ಕಥೆ ಜನಪ್ರಿಯವಾಗಿದ್ದುದರ ಅರಿವು ಆತನಿಗಿದೆ. ಇದರ ಜೊತೆಗೆ ಸಂಸ್ಕೃತ ಹಾಗೂ ಪ್ರಾಕೃತಗಳಲ್ಲಿ ಈ ಕಥೆ ಪ್ರಚಾರವಾಗಿದ್ದುದೂ ತಿಳಿದಿದೆ. ಈ ಎಲ್ಲದರ ಪಾಕವಾಗಿ ಯಶೋಧರ ಅಮೃತಮತಿಯರ ವಿಷಮವಾದ ದಾಂಪತ್ಯದ ದಾರುಣಕಥೆಯನ್ನು ತಾನು ಕನ್ನಡಕ್ಕೆ ತಂದಿದ್ದಾನೆ. ಈ ಕಥೆ ತನ್ನ ಪರಿಣಾಮ ರಮಣೀಯತೆಯನ್ನು ಹೆಚ್ಚಿಸಿಕೊಂಡಿದ್ದು ಎರಡು ಕಾರಣಗಳಿಗಾಗಿ. ಮಾರಿಗೆ ಬಲಿಕೊಡುವ ಪದ್ಧತಿಯ ಹಿನ್ನೆಲೆಯಲ್ಲಿ ಈ ಕಥೆಯನ್ನು ಸಿಂಹಾವಲೋಕನ ಕ್ರಮವಿಟ್ಟಂತೆ ಯಶೋಧರ ಚಂದ್ರಮತಿಯರ ಜನ್ಮಾಂತರಗಳ ಕಥೆಗಳಿಂದ ಮತ್ತಷ್ಟು ಪರಿಣಾಮಗೊಳ್ಳುವಂತೆ ವಾದಿರಾಜ ಮಾಡಿದ್ದನು. ಜೊತೆಗೆ ಮಾರಿಯಗುಡಿಯ ವರ್ಣನೆಗೆ ಹಿನ್ನೆಲೆಯಾಗಿ ಬಂದ ಚೈತ್ರದ ವರ್ಣನೆ ಅತ್ಯಂತ ಕ್ರಿಯಾಶಾಲಿಯಾಗಿ ರೌದ್ರರಸ ಪೋಷಕವಾಗುವ ಚಿತ್ರಗಳಿಂದ ಇಡಿಕಿರಿದಿದ್ದುದು ಜನ್ನನಿಗೆ ಹಿಡಿಸಿದೆ. ಕೊನೆಗೆ ಆತ್ಮಚಿಂತನೆಗೆ ಕಾರಣವಾದ ಧಾರ್ಮಿಕ ಜಿಜ್ಞಾಸೆ ಇದನ್ನು ಹೊಸಕಥೆಯೆಂಬಂತೆ ಈ ಕೃತಿಯನ್ನು ರಚಿಸಿ ಯಶಸ್ವಿಯಾಗಿರುವನು” (ಜಿ.ಎಸ್. ಸಿದ್ಧಲಿಂಗಯ್ಯ, ೨೦೦೯) ಎಂಬ ಅಭಿಪ್ರಾಯಗಳು ಸೂಕ್ತವಾಗಿವೆ.

ವಾದಿರಾಜನ ಸಂಸ್ಕೃತ ಕೃತಿ ಮೂಲದಲ್ಲಿ ೨೯೪ ಪದ್ಯಗಳಿದ್ದರೆ ಜನ್ನ ಇದನ್ನು ೩೧೦ ಪದ್ಯಗಳಲ್ಲಿ ಕನ್ನಡಿಸಿದ್ದಾನೆ. ವಾದಿರಾಜನಲ್ಲಿ ಒಂದನೆಯ ಸರ್ಗ – ೬೨, ಎರಡನೆಯ ಸರ್ಗ – ೭೫, ಮೂರನೆಯ ಸರ್ಗ -೮೩, ನಾಲ್ಕನೆಯ ಸರ್ಗ -೭೪ ಕವಿತೆಗಳಿದ್ದರೆ, ಜನ್ನನಲಿ ಒಂದನೆಯ ಅವತಾರ – ೭೨, ಎರಡನೆಯ ಅವತಾರ -೭೨, ಮೂರನೆಯ ಅವತಾರ -೭೯, ನಾಲ್ಕನೆಯ ಅವತಾರ – ೮೭ ಕಂದಪದ್ಯಗಳಿವೆ. ಒಟ್ಟಾರೆ ಜನ್ನ ವಾದಿರಾಜನ ಯಶೋಧರ ಚರಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾನೆ ಎಂಬುದಕ್ಕಿಂತ ಜನ್ನ ವಾದಿರಾಜನ ಕಾವ್ಯಕ್ಕೆ ಅನುರೂಪ ನೀಡಿದ ಪ್ರತಿಭಾವಂತ ಕವಿಯಾಗಿದ್ದಾನೆ.

ಜನ್ನನಿಗೆ ತನ್ನ ಯಶೋಧರ ಚರಿತೆ’ ಕಾವ್ಯದ ರಚನೆಗೆ ಹತ್ತನೆಯ ಶತಮಾನದಲ್ಲಿ ಸಂಸ್ಕೃತದಲ್ಲಿ ರಚಿತವಾದ ಸೋಮದೇವ ಯಶಸ್ತಿಲಕ ಚಂಪೂ’ ಎಂಬ ಕಾವ್ಯವಿದ್ದರೂ, ಸೋಮದೇವನ ಸಮಕಾಲೀನನಾದ ಹಾಗೂ ಹೆಚ್ಚು ಕಡಿಮೆ ೧೧ನೆಯ ಶತಮಾನದವನಾದ ವಾದಿರಾಜನ ಯಶೋಧರ ಚರಿತೆ’ ಎಂಬ ಸಂಸ್ಕೃತ ಕಾವ್ಯವನ್ನೇ ೧೩ನೆಯ ಶತಮಾನದವನಾದ ಜನ್ನ ಅನುಸರಿಸುವುದನ್ನು ಕಾಣುತ್ತೇವೆ. ಈ ಮೂವರೂ ಕವಿಗಳು ಬರೆದ ಯಶೋಧರ ಚರಿತೆ’ಯ ಕಥೆಗಳಲ್ಲಿ ಅನೇಕ ಸಮಾನ ಅಂಶಗಳಿರುವುದು ಕಂಡುಬರುತ್ತದೆ. ಈ ಮೂವರ ಕಾವ್ಯಗಳಲ್ಲಿ ಅಮೃತಮತಿಯ ಪಾತ್ರವೇ ಪ್ರಧಾನವಾಗಿದೆ. ದಾಂಪತ್ಯ ಸಂಬಂಧದ ವಿಷಮತೆಗೆ ಮತ್ತು ಹಿಂಸೆಗೆ ಇಲ್ಲಿ ನೇರವಾದ ಸಂಬಂಧವನ್ನು ಕಲ್ಪಿಸಲಾಗಿದೆ. ಇಲ್ಲಿ ದಾಂಪತ್ಯದ ವಿಷಮತೆಯನ್ನು ದಾಟುವುದು ಹೇಗೆ ಎಂಬ ಪ್ರಶ್ನೆಯೂ ಇದೆ. ಈ ಲೌಕಿಕ ಸಮಸ್ಯೆಗೆ ಪರಿಹಾರ ಮಾರ್ಗಗಳಾಗಿ ಬಲಿ, ಅಹಿಂಸೆ ಮತ್ತು ಮೋಕ್ಷದ ಪರಿಕಲ್ಪನೆ ಬೆಸೆದುಕೊಂಡಿದೆ. ಈ ಲೌಕಿಕ ಸಮಸ್ಯೆಯ ವಿನ್ಯಾಸ, ಅದಕ್ಕೆ ಕಾರಣವಾದ ಸಮಸ್ಯೆಗಳು ತುಂಬಾ ನಿಗೂಢವೂ, ಸಂದಿಗ್ಧವೂ, ಮಾನಸಿಕವೂ ಆಗಿವೆ. ಮನುಷ್ಯನ ತಪ್ಪುಗಳಿಗೆ ವಿಧಿಯ ಕೈವಾಡವನ್ನೂ ಆರೋಪಿಸುವುದು ಇಲ್ಲಿ ವ್ಯಕ್ತವಾಗುತ್ತದೆ.

ವಾದಿರಾಜ ಈ ಸಮಸ್ಯೆಗಳನ್ನು ಸುಲಭವಾಗಿ ದಾಟಿದರೆ ಸೋಮದೇವ ಮತ್ತು ಜನ್ನನಿಗೆ ಈ ಸಮಸ್ಯೆಗಳು ತುಂಬಾ ಜಟಿಲವಾಗಿ ಕಾಡಿವೆ. ವಾದಿರಾಜ ಹೆಣ್ಣು ಮೂಲತಃ ಚಂಚಲೆ, ವ್ಯಭಿಚಾರಿ ಎಂಬ ಪೂರ್ವಗ್ರಹ ತಿಳುವಳಿಕೆಯಿಂದ ಈ ಸಮಸ್ಯೆಯನ್ನು ದಾಟಿಸಿಬಿಡುತ್ತಾನೆ. ಆದರೆ ಸೋಮದೇವ ಮತ್ತು ಜನ್ನ ಈ ಸಂದರ್ಭವನ್ನು ಭಿನ್ನವಾಗಿ ನಿರ್ವಹಿಸುವುದನ್ನು ನೋಡುತ್ತೇವೆ. ಆದರೆ ಜನ್ನ ತನ್ನ ಪೂರ್ವಸೂರಿಗಳಿಂದ ಏನೇ ಪ್ರೇರಣೆ, ಸ್ಫೂರ್ತಿ, ಆಕರಗಳನ್ನು ಪಡಿದಿದ್ದರೂ ’ಯಶೋಧರ ಚರಿತೆ’ ಕಾವ್ಯವನ್ನು ತನ್ನ ಕಾಲದ ಧರ್ಮ ಹಾಗೂ ಜನಪದ ಸಂಸ್ಕೃತಿಯ ಸಂದರ್ಭದಲ್ಲಿ ಅದನ್ನು ತನ್ನ ಒಂದು ಸೃಜನಾತ್ಮಕ ಕೃತಿಯನ್ನಾಗಿ ರೂಪಿಸಿದ್ದಾನೆ. ರಂ.ಶ್ರೀ. ಮುಗಳಿ ಅವರು ಹೇಳುವಂತೆ, ಉಪಲಬ್ದ ಕೃತಿಗಳನ್ನು ಪರೀಕ್ಷಿಸಿದರೆ ಸಂಸ್ಕೃತ- ಪ್ರಾಕೃತ ಮೂಲಗಳು ತಿಳಿದಿವೆ. ಆದರೆ ಕನ್ನಡದವು ದೊರೆತಿಲ್ಲ. ಜನ್ನನ ತರುವಾಯ ಕನ್ನಡ ಯಶೋಧರ ಚರಿತೆಗಳೂ ದೊರೆತಿವೆ. ಜನ್ನನಿಗೆ ಮುಂಚಿತವಾದುದು ದೊರೆಯದೆ ಈ ಕಾವ್ಯದ ತುಲನಾತ್ಮಕ ವಿಮರ್ಶೆ ಅಪೂರ್ಣವಾಗಿ ತೋರಿದರೆ ತಪ್ಪಲ್ಲ. ದೊರೆತ ಆಕರಗಳಲ್ಲಿ ವಾದಿರಾಜನ ಸಂಸ್ಕೃತ ’ಯಶೋಧರ ಚರಿತೆ’ ಈ ಕೃತಿಗೆ ಪ್ರತ್ಯಕ್ಷ ಮೂಲವೆಂದು ಸದ್ಯಕ್ಕೆ ತಿಳಿಯಬಹುದು (ಪು. ೧೮೬, ೧೯೫೩). ಎಂದು ತಳೆದಿರುವ ಅಭಿಪ್ರಾಯ ಸಹಜವಾಗಿದೆ.

ಜನ್ನ ತನ್ನ ಈ ಯಶೋಧರ ಚರಿತೆ’ ಕಾವ್ಯದ ನಿರೂಪಣೆಯಲ್ಲಿ, ಕಥೆಯ ತಂತ್ರದಲ್ಲಿ, ಬದುಕಿನ ದೃಷ್ಟಿಕೋನದಲ್ಲಿ ಮತ್ತು ತನ್ನ ಪ್ರತಿಭೆಯ ಕಲ್ಪನಾ ವಿಲಾಸದಲ್ಲಿ ತನ್ನ ಜನ್ನತ್ವವನ್ನು ಮೆರೆದಿದ್ದಾನೆ. ಕನ್ನಡದ ಛಂದಸ್ಸು, ನುಡಿಗಟ್ಟು, ಭಾಷೆ, ಗಾಧೆ, ರೂಪಕ, ಪ್ರತಿಮೆ, ಉಪಮೆ ಮತ್ತು ಜನಪದ ಸಂಸ್ಕೃತಿಯ ಆಚರಣೆ, ಆರಾಧನೆಗಳನ್ನು ಇದರಲ್ಲಿ ತುಂಬಿದ್ದಾನೆ. ಮಾರ್ಗ ಮತ್ತು ದೇಸೀ ಪರಿಕಲ್ಪನೆಗಳನ್ನು ಒಡೆದು ಮರುರೂಪಿಸುವ ಯತ್ನವನ್ನು ಮಾಡಿದ್ದಾನೆ. ಕ.ವೆಂ. ರಾಘವಾಚಾರ್ ಅವರು ಹೇಳುವಂತೆ. ಜನ್ನನ ಯಶೋಧರ ಚರಿತೆ ವಾದಿರಾಜನ ಕೃತಿಯ ಅನುವಾದವೆಂದ ಮಾತ್ರಕ್ಕೆ ಕನ್ನಡದ್ದು ಸಂಸ್ಕೃತದ್ದರ ಪಡಿಯಚ್ಚೆಂದಲ್ಲ; ಕನ್ನಡ ಕವಿಯ ಕೈವಾಡವಿಲ್ಲವೆಂದಲ್ಲ. ಜನ್ನ ಕವಿ ಎಡೆಯರಿತು ಕೆಲವನ್ನು ಹಿಗ್ಗಿಸಿದ್ದಾನೆ; ಕೆಲವನ್ನು ಅಡಕಿಸಿದ್ದಾನೆ. ಮೂಲದಲ್ಲಿಯ ಅನಗತ್ಯವೆಂದು ತೋರಿದ ಅಂಶಗಳನ್ನು ಕೈಬಿಟ್ಟಿದ್ದಾನೆ. ಭಾವಪುಷ್ಠಿಗಾಗಿಯೂ, ಅರ್ಥಪ್ರಸಾರಕ್ಕಾಗಿಯೂ ಮೂಲದಲ್ಲಿಲ್ಲದ್ದನ್ನು ಹೊಸದಾಗಿ ಸೇರಿಸಿದ್ದಾನೆ (ಪು.೧೯೪೧). ಡಿ.ಎಲ್. ನರಸಿಂಹಚಾರ್ ಅವರು ಹೇಳುವಂತೆ, ಜನ್ನನು ತನ್ನ ಯಶೋಧರ ಕಾವ್ಯದ ಪ್ರತಿಯೊಂದು ಪದ್ಯವನ್ನೂ ವಾದಿರಾಜನ ಯಶೋಧರ ಕಾವ್ಯದ ಪದ್ಯಗಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಬರೆದಿದ್ದರೂ ತಾನು ಮುಟ್ಟಿದುದೆಲ್ಲವನ್ನೂ ಚಿನ್ನವನ್ನಾಗಿ ಮಾಡಿರುವನು (ಕ.ಸಾ.ಪ.೧೫-೪, ಪು.೨೯೮) ಎಂಬ ಈ ಇಬ್ಬರು ವಿದ್ವಾಂಸರ ಹೇಳಿಕೆಗಳು ಯತಾರ್ಥವಾಗಿವೆ.

ಜನ್ನನ ಯಶೋಧರ ಚರಿತೆ’ಯಲ್ಲಿ ಅಮೃತಮತಿ ಒಂದು ದೊಡ್ಡ ಸಮಸ್ಯೆಯಾಗಿದ್ದಾಳೆ. ಈ ಕಾವ್ಯದ ರಚನೆಯ ಹಿಂದೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ – ಸಾಂಸ್ಕೃತಿಕ ಒತ್ತಡಗಳು ಬಲವಾಗಿ ಕೆಲಸ ಮಾಡಿವೆ. ರಂ.ಶ್ರೀ. ಮುಗಳಿ ಅವರು ಹೇಳುವ ಹಾಗೆ, ಇದು ನೀತಿಯನ್ನು ಬೋಧಿಸುವ ಧರ್ಮದ ಸಂಕಟವನ್ನು ವಿವರಿಸುವ ಅಸಾಧರಣ ಕಲೆಯ ಮತೀಯ ಮತ್ತು ಮತಾತೀತ ಕಥೆಯಾಗಿದೆ. ಜನ್ನ ಕಾವ್ಯಧರ್ಮವನ್ನು ನಿಷ್ಠೆಯಿಂದ ಪಾಲಿಸಿ ಜೈನಧರ್ಮ ತತ್ವವನ್ನು ಬೋಧಿಸಿದ್ಧಾನೆ. ವಿಶ್ವಧರ್ಮದ ರಹಸ್ಯವನ್ನು ಸೂಚಿಸಿದ್ದಾನೆ (ಪು. ೧೮೭, ೧೯೫೩). ಈ ರಹಸ್ಯವೇ ಯಶೋಧರ ಕಾವ್ಯದ ವಿಶ್ವತತ್ವವಾಗಿದೆ ಮತ್ತು ಕನ್ನಡ ಅಭಿಜಾತ ಪರಂಪರೆಯ ಸಾರ್ವಕಾಲೀಕವಾದ ತತ್ವವಾಗಿದೆ. ಜನ್ನನ ’ಯಶೋಧರ ಚರಿತೆ’ ಜೀವರಾಶಿಗೆ ಜೀವದಯೆ ತೋರುವ ಮೂಲಕ ವಿಶ್ವಾತ್ಮಕ ಮೌಲ್ಯಗಳನ್ನು ಪ್ರಕಟಿಸುವ ಅಭಿಜಾತ ಪರಂಪರೆಯ ಒಂದು ಮುಖ್ಯ ಕೃತಿಯಾಗಿದೆ.