ಯಶೋಧರ ಚರಿತೆ’ ಕಾವ್ಯದ ವಸ್ತುಕಥನ ಸಾರ್ವಕಾಲಿಕವಾದುದು; ಮಾರಿದತ್ತ ಅಯೋಧ್ಯಾ ದೇಶದ ದೊರೆ; ಅದರ ರಾಜಧಾನಿ ರಾಜಪುರ. ಮಾರಿದತ್ತನು ಈ ಅಯೋಧ್ಯಾ ದೇಶವನ್ನು ಆಳುತ್ತಿದ್ದ. ಆ ಪುರದ ದೇವತೆಯೆಂದರೆ ಚಂಡಮಾರಿ. ಪ್ರತಿ ಚೈತ್ರಮಾಸದಲ್ಲಿ ಜಾತ್ರೆ ನಡೆದಾಗಲೆಲ್ಲಾ ಆಕೆಯ ಸಂತೃಪ್ತಿಗಾಗಿ ಪುರಜನರು ಸೇರಿ ನರಬಲಿ, ಪಶುಬಲಿ ಮುಂತಾದ ಹಲವು ಜೀವರಾಶಿಯನ್ನು ಬಲಿ ಕೊಡುವ ಪದ್ಧತಿ ಇತ್ತು. ಎಂದಿನಂತೆ ವಸಂತಮಾಸ ಬಂದು ಜಾತ್ರೆ ಸೇರಲಿತ್ತು. ಊರಿನ ಅವನ ಪ್ರಜೆಗಳೆಲ್ಲಾ ಮಾರಿದೇವತೆಗೆ ಬಲಿಕೊಡಲು ಅನೇಕ ಪ್ರಾಣಿಗಳನ್ನು ತರುತ್ತಾರೆ. ಆಗ ಆ ಗ್ರಾಮದೇವತೆಗೆ ತೃಪ್ತಿಗಾಗಿ ಎಂದಿನ ಆಚರಣೆಯಂತೆ ನರಬಲಿ ಕೊಡಲು ದೊರೆ ಮಾರಿದತ್ತನ ಆಜ್ಞೆಯಂತೆ ಚಂಡಕರ್ಮನೆಂಬ ತಳವಾರನು ಇಬ್ಬರು ಎಳೆಯರನ್ನು ಹಿಡಿದುಕೊಂಡು ಬರುತ್ತಾನೆ. ಆ ಎಳೆಯ ಮಕ್ಕಳಿಬ್ಬರು ಗುರು ಸದತ್ತಾಚಾರ್ಯರ ಅಪ್ಪಣೆಯಂತೆ ಚರಿಗೆಗೆ ಹೊರಟವರು. ಹೀಗಿ ಭಿಕ್ಷಾವೃತ್ತಿಗೆ ಹೊರಟಿದ್ದ ಈ ಅಭಯರುಚಿ ಮತ್ತು ಅಭಯಮತಿ ಎಂಬ ಅರಸು ಮಕ್ಕಳಾದ ಅಣ್ಣತಂಗಿಯನ್ನು ಚಂಡಕರ್ಮ ಹಿಡಿದು ತರುತ್ತಾನೆ.

ಚಂಡಕರ್ಮ ಹಿಡಿದು ತಂದ ಈ ಅಣ್ಣ ತಂಗಿಯರಿಬ್ಬರೂ ಮೃತ್ಯುವಿನ ಮನೆಯಂತಿದ್ದ ಪಾಪಕಳಾಪಂಡಿತೆ ಚಂಡಮಾರಿ ದೇವತೆಯ ಗುಡಿಗೆ ಬರುತ್ತಾರೆ. ಆದರೆ ಅವರಿಬ್ಬರಲ್ಲಿ ಅಧೈರ್ಯವೇನೂ ಇಲ್ಲ. ಸಾವಿಗೆ ಅಂಜದೆ ಅವರಿಬ್ಬರೂ ಒಬ್ಬರಿಗೊಬ್ಬರೂ ಸಂತೈಸಿಕೊಳ್ಳುತ್ತಾ ಹಸಿದ ಕೃತಾಂತನ ಬಾಣಸುವಿನಂತಿದ್ದ ಮಾರಿಯ ಗುಡಿಯನ್ನು ನಿಶ್ಚಿಂತತೆಯಿಂದ ಪ್ರವೇಶ ಮಾಡುತ್ತಾರೆ. ಇಲ್ಲಿ ಅಣ್ಣ ತಂಗಿಗೆ ’ಮರಣಕ್ಕೆ ಹೆದರಬೇಡ ತಾಯಿ’ ಎಂದು ಸಂಬೋಧಿಸುವಲ್ಲಿ ಹಿಂದಿನ ಜನ್ನದಲ್ಲಿ ಅವರು ತಾಯಿ – ಮಗ ಆಗಿದ್ದರ ಸ್ಮೃತಿ ಇದೆ. ಆಗ ಆಕೆ ಅಣ್ಣನಿಗೆ ’ಭಯ ಯಾಕಣ್ಣ? ನಾವು ಮಾಡಿದ್ದನ್ನು ನಾವೇ ಉಣ್ಣಬೇಕು. ಈಗಾಗಲೇ ನಾವು ಮಾಡಿದ್ದ ತಪ್ಪಿಗೆ ಉಂಡಿದ್ದೇವಲ್ಲ’ ಎಂಬರ್ಥದಲ್ಲಿ ಹೇಳುತ್ತಾ, ’ಭವ ಪ್ರಕೃತಿ ವಿಕೃತಿ ನಾವು ಅರಿಯದುದೆ?’  ಎಂದು ಪ್ರಶ್ನಿಸುತ್ತಾಳೆ. ಆಗ ಮಾರಿದತ್ತನಿಗೆ ಆ ಎಳೆಯ ಮಕ್ಕಳನ್ನು ಕಂಡು ಬೆರಗಾಗುತ್ತದೆ. ಅವರು ಬಲಿಯಾಗುವುದಕ್ಕೆ ಮುಂಚೆ ದೊರೆಯನ್ನು ಹರಸಬೇಕೆಂಬುದು ಪದ್ಧತಿ. ಅದರಂತೆ ಹರಸಬೇಕೆಂದು ಆ ಮಕ್ಕಳೀಗೆ ಹೇಳಿದಾಗ ಧೀರನಾದ ಅಭಯರುಚಿಯು ಹರಸುತ್ತಾನೆ. ಈ ಪುಣ್ಯವಚನವನ್ನು ಕೇಳಿದ ಮಾರಿದತ್ತನ ಎತ್ತಿದ ಖಡ್ಗದ ಕೈ ಅವರನ್ನು ಕತ್ತರಿಸದೆ ನಿಲ್ಲುತ್ತದೆ. ದೊರೆಗೆ ಆಗ ಅವರ ಬಗ್ಗೆ ತಿಳಿಯಲು ಕುತೂಹಲ ಉಂಟಾಗುತ್ತದೆ. ದೊರೆ ಇವರಾರು ಎಂದು ಪ್ರಶ್ನಿಸಿದಾಗ ಅಭಯರುಚಿ ತಮ್ಮ ಜನ್ಮಾಂತರದ ಕಥೆಯನ್ನು ಹೇಳುತ್ತಾನೆ.

ಯಶೌಘನು ಅವಂತಿ ದೇಶದ ದೊರೆ; ರಾಜಧಾನಿ ಉಜ್ಜಯಿನಿ. ಅವನ ಮಡದಿ ಚಂದ್ರಮತಿ. ಅವರ ಮಗ ಯಶೋಧರ. ಅವನ ’ಮನಃಪ್ರಿಯೆ’ ಅಮೃತಮತಿ. ಒಮ್ಮೆ ಕನ್ನಡಿಯಲ್ಲಿ ತಲೆನೆರೆ ಕಂಡ ಯಶೌಘ ನಿರ್ವೇಗಗೊಂಡು ತನ್ನ ಮಗ ಯಶೋಧರನಿಗೆ ಪಟ್ಟಕಟ್ಟಿ ತಪಸ್ಸಿಗೆ ಹೊರಟುಹೋಗುತ್ತಾನೆ. ಆಮೇಲೆ ಯಶೋಧರ ಮತ್ತು ಆತನ ಪತ್ನಿ ಅಮೃತಮತಿ ಇಬ್ಬರೂ ಖಚರ ದಂಪತಿಗಳಂತೆ ವಿಹರಿಸುತ್ತಿದ್ದರು. ಹೀಗಿರುವಾಗ ಒಂದು ರಾತ್ರಿ ಅಮೃತಮತಿ ಅರಮನೆಯ ಮಂಚದ ಮೇಲೆ ದೊರೆಯ ಪಕ್ಕ ಮಲಗಿರುವಾಗ ಆ ರಾತ್ರಿಯ ನಿಶ್ಯಬ್ದತೆಯಲ್ಲಿ ಆಕೆಗೆ ಹೊರಗಿನ ಗಜಶಾಲೆಯ ಮಾವಟಿಗ ಅಷ್ಟಾವಂಕನ ಹಾಡಿನ ಇಂಚರ ಕೇಳಿ ಬರುತ್ತದೆ. ಆ ಗಾನ ಮಲಗಿದ್ದ ಅಮೃತಮತಿಯ ನಿದ್ದೆಯನ್ನು ಕಲಕುತ್ತದೆ. ಆಗ ಆ ರಾಣಿ ಆ ಗಾನಕ್ಕೆ ಮನಸೋತು, ಯಾವುದೇ ಪೂರ್ವಾಪರಗಳನ್ನು ಯೋಚಿಸದೆ ಕೂಡಲೇ ಅವನಿಗೆ ತನ್ನ ಮನಸ್ಸನ್ನು ಅರ್ಪಿಸಿಕೊಂಡು ಬಿಡುತ್ತಾಳೆ. ಆಮೇಲೆ ಅವನನ್ನು ನೋಡುವ ಕೂತೂಹಲ, ಕೂಡುವ ಹಂಬಲ ಮತ್ತು ಚಿಂತೆ ಕಡಲುವರಿಯುತ್ತದೆ.

ರಾತ್ರಿ ಕಳೆದ ಮೇಲೆ ಅಮೃತಮತಿ ಬೆಳಗಾದ ಮೇಲೆ ತನ್ನ ಮನದ ಕೆಳದಿಗೆ ಮನಬಿಚ್ಚಿ ಹೇಳಿ ಆಕೆಯನ್ನು ಅವನನ್ನು ನೋಡಿಬರಲು ಕಳುಹಿಸುತ್ತಾಳೆ. ಆ ಕೆಳದೈ ಅಷ್ಟಾವಂಕನ ರೂಪವನ್ನು ನೋಡಿ ಫಕ್ಕನೆ ನಕ್ಕು ಹೇಸಿ ಮರಳುತ್ತಾಳೆ; ವಿಧಿಯನ್ನೂ ಆಕೆ ಜರಿಯುತ್ತಾ ಮೌನದಲ್ಲಿಯೇ ರಾಣಿಯ ಬಳಿಗೆ ಮರಳೂತ್ತಾಳೆ. ತನ್ನ ದಾರಿಯನ್ನೇ ಕಾಯುತ್ತಾ ನಿಂತಿದ್ದ ರಾಣಿಯ ಬಳಿಗೆ ಕೆಳದಿ ಬಂದು ’ಇಂತಹ ಕಾಮದೇವನನ್ನು ಎಲ್ಲಿ ಹುಡುಕಿ ಒಲಿದೆ?’ ಎಂದು ವ್ಯಂಗ್ಯವಾಡುತ್ತಾಳೆ. ಗಾನಕ್ಕೆ ಮನಸೋತು ಮನಸ್ಸನ್ನೂ ಅರ್ಪಿಸಿ ನಿಂತ ಅಮೃತಮತಿಗೆ ತನ್ನ ಕೆಳದಿಯ ವ್ಯಂಗ್ಯದ ಮಾತಿನ ಅರ್ಥವನ್ನು ತಿಳಿಯಲಾರದೆ ಆ ನೂತನನಲ್ಲ ಮಾವಟಿಗನ ಚೆಲುವನ್ನು ಕೇಳಲು ತವಕಿಸುತ್ತಾಳೆ. ಕೆಳದಿಯ ಬಾಯಿಂದ ಅಷ್ಟಾವಂಕನ ವಿಕಾರದ ಕುಬ್ಜವರ್ಣನೆಯನ್ನು ಕೇಳಿದರೂ, ಕಾಮದ ಕೋಟಲೆಯಿಂದ ’ಪುಳಿಂದನ ಕಣೆಗೆಟ್ಟ ನಿಂತ ವನಹರಿಣಿ’ಯಂತೆ ನಿಶ್ಚೇಷ್ಟಳಾಗುತ್ತಾಳೆ. ತರುವಾಯ ’ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್’ ಎಂದು ಸಮಾಧಾನ ತಂದುಕೊಳ್ಳುತ್ತಾಳೆ. ಆಮೇಲೆ ಪ್ರತಿನಿತ್ಯ ಅಷ್ಟಾವಂಕನ ಜೊತೆ ಕೂಡತೊಡಗುತ್ತಾಳೆ; ಬರಬರುತ್ತಾ ತನ್ನ ಗಂಡ ಯಶೋಧರನಿಂದ ದೂರವಾಗುತ್ತಾ ಹೋಗುತ್ತಾಳೆ. ’ಬೇವನ್ನು ಮೆಚ್ಚಿದ ಕಾಗೆಗೆ ಮಾವು ಅಪ್ರಿಯ’ವಾಗುವಂತೆ ಅಷ್ಟಾವಂಕನನ್ನು ಒಲಿದ ಅಮೃತಮತಿಗೆ ತನ್ನ ಗಂಡ ಯಶೋಧರನ ಬಗ್ಗೆ ತಿರಸ್ಕಾರ ತಾಳುತ್ತಾ ಹೋಗುತ್ತಾಳೆ; ಆಕೆಗೆ ಅವನಲ್ಲಿ ದಿನದಿಂದ ದಿನಕ್ಕೆ ಅನುರಾಗ ಬತ್ತುತ್ತಾ ಹೋಗುತ್ತದೆ.

ಇದರ ಸುಳಿವು ಸಿಕ್ಕಿದ ಯಶೋಧರ ಒಂದು ರಾತ್ರಿ ಇದರ ಮರ್ಮವನ್ನು ತಿಳಿಯಲು ಅಲೋಚಿಸಿ, ಆ ರಾತ್ರಿ ನಿದ್ದೆ ಬಂದವನಂತೆ ನಟಿಸಿ ಮಲಗುತ್ತಾನೆ. ಆಗ ರಾಣಿ ಆತ ನಿದ್ದೆ ಬಂದು ಮಲಗಿದ್ದಾನೆಂದು ತಿಳಿದು ಮೆಲ್ಲನೆ ಅವನ ತೋಳ ಸೆರೆ ಬಿಡಿಸಿಕೊಂಡು ಎದ್ದು ಅಷ್ಟಾವಂಕನಲ್ಲಿಗೆ ಹೋಗುತ್ತಾಳೆ. ಆಗ ಅರಸನೂ ಎದ್ದು ಅವಳು ಅರಿಯದಂತೆ ಅವಳ ಬೆನ್ನ ಹಿಂದೆಯೇ ಖಡ್ಗ ಹಿಡಿದು ಹೋಗುತ್ತಾನೆ. ಆಗ ಅಷ್ಟಾವಂಕ ಆಕೆ ತಡವಾಗಿ ಬಂದುದನ್ನು ಕಂಡು ಆಕೆಯನ್ನು ಒಡೆದು ಬೆನ್ನ ಮೇಲೆ ಬಾರಿಸುತ್ತಾನೆ. ಆಗ ಆಕೆ ಕಳಹಂಸಕ್ಕೆ ಗಿಡುಗ ಎರಗುವಂತೆ ಎರಗಿ ಆಕೆಯನ್ನು ದಂಡಿಸುತ್ತಾನೆ. ರಾಣಿ ಅವನ ಕಾಲಮೇಲೆ ಬಿದ್ದು ಕೇರೆಹಾವಿನಂತೆ ಹೊರಳಾಡಿ ’ಪಾತಕಿ ದೊರೆಯಿಂದ ತಡವಾಯಿತು, ನೀನುಳೀದರೆ ಸಾಯುವವಳು ನಾನು. ಮಿಕ್ಕಗಂಡಸರು ಸಮಸೋದರರು ನನಗೆ’ ಎಂದು ಹೇಳಿ ಅವನನ್ನು ಸಮಾಧಾನ ಪಡಿಸುತ್ತಾಳೆ. ಆಗ ದೊರೆಗೆ ಅದನ್ನು ಕಂಡು ಸಿಟ್ಟು ಬಂದು ಅವರಿಬ್ಬರನ್ನೂ ಕತ್ತರಿಸಿ ಹಾಕಲು ಖಡ್ಗವನ್ನು ಎತ್ತುತ್ತಾನೆ. ಆಗ ಮರುಕ್ಷಣದಲ್ಲಿ ಆಗಬಹುದಾದ ಹಿಂಸೆಗೆ ಮತ್ತು ತನ್ನ ವರ್ತನೆಗೆ ಹೇಸಿ ಅವರನ್ನು ಕೊಲ್ಲದೆ ಮರಳಿ ಬಂದು ಮಲಗುತ್ತಾನೆ. ರಾಣಿಯೂ ನಂತರ ಬಂದು ಅವನ ಜೊತೆ ಮಲಗುತ್ತಾಳೆ.

ಮರುದಿನ ತನ್ನ ರಾತ್ರಿಯ ರಹಸ್ಯ ಬಯಲಾದುದು ಅಮೃತಮತಿಗೆ ಗೊತ್ತಾಗುತ್ತದೆ. ದೊರೆ ಎದ್ದಾಗ ಆಕೆಗೆ ನಗೆನುಡಿಯ ನೆಪವನ್ನು ತೆಗೆದು ನೈದಿಲೆಯ ಹೂವಿನಿಂದ ಹೊಡೆದಾಗ ಆಕೆ ಮೂರ್ಛೆ ಹೋದವಳಂತೆ ನಟಿಸುತ್ತಾಳೆ. ಆಗ ದೊರೆ ಅವಳ ಅಣಕಕ್ಕೆ ಅಸಹ್ಯಪಟ್ಟು ’ಅಯ್ಯೊ! ಅಂದಿನ ಸಾವು ದೈವದಿಂದ ತಪ್ಪಿತು; ಇಂದು ನೈದಿಲೆ ಸಾವಿಗೀಡಾಯಿತೆಂದು’ ಕೊಂಕಿ ನುಡಿಯುತ್ತಾನೆ. ಆಗ ಆತನ ಕೊಂಕಿನ ಮಾತಿನ ಹಿಂದಿನ ಸತ್ಯ ಅವಳಿಗೆ ಮನದಟ್ಟಾಗಿ ಮರುಮಾತನಾಡದೆ ಬೇಸರಗೊಂಡವಳಂತೆ ನಟಿಸಿ ಸುಮ್ಮನಾಗಿ ಬಿಡುತ್ತಾಳೆ.

ಇದರಿಂದ ಯಶೋಧರನ ಮನಸ್ಸು ಕದಡಿದ ನೀರಿನಂತಾಗಿ ತನ್ನ ತಾಯಿ ಚಂದ್ರಮತಿಯ ಬಳಿಗೆ ಹೋಗಿ ಹಿಂದಿನ ರಾತ್ರಿ ನಡೆದ, ತಾನು ಕಂಡ ವಾಸ್ತವ ಸಂಗತಿಯನ್ನು ಒಂದು ಕನಸಿನ ರೂಪದಲ್ಲಿ ಪುನರ್ ಸೃಷ್ಟಿಸಿ ಹೇಳುತ್ತಾನೆ. ರಾತ್ರಿ ತನ್ನ ಕನಸಿನಲ್ಲಿ ಹೊಂದಾವರೆ ಕೊಳದ ಹಂಸ ಕನಲಿ ಕೀಳುತಾವರೆಯ ಕೊಳದಲ್ಲಿ ನಲಿಯುವುದನ್ನು ಕಂಡೆ ಎಂದು ಹೇಳುತ್ತಾನೆ. ಆದರೆ ಮಗ ನೆನೆದದ್ದೆ ಒಂದಾದರೆ, ತಾಯಿ ನೆನೆದದ್ದು ಇನ್ನೊಂದಾಗುತ್ತದೆ. ಆಗ ಆಕೆ ಅದಕ್ಕೆ ಶಾಂತಿಗಾಗಿ ಪ್ರಾಣಿಬಲಿಯನ್ನು ಕೊಡಬೇಕೆಂದು ಪರಿಹಾರ ಸೂಚಿಸುತ್ತಾಳೆ. ಇಲ್ಲದಿದ್ದರೆ ಕೇಡು ಕಾದಿದೆ ಎಂಬಂತೆ ಹೇಳುತ್ತಾಳೆ. ಆದರೆ ತಾಯಿಯಿಂದ ’ಬಲಿ’ ಎಂಬ ಶಬ್ದವನ್ನು ಕೇಳುತ್ತಿದ್ದಂತೆಯೇ ಮಗ ಕಿವಿ ಮುಚ್ಚಿಕೊಳ್ಳುತ್ತಾನೆ. ವಧೆ ಹಿತವಾಗದು, ’ಜೀವದಯೆ ಜೈನಧರ್ಮ’ ಎಂದೆಲ್ಲಾ ಮಗ ತಾಯಿಗೆ ಎಷ್ಟೇಳಿದರೂ ಆಕೆ ಕಟ್ಟಕಡೆಗೆ ಹಿಟ್ಟಿನ ಕೋಳಿಯನ್ನು ಬಲಿಕೊಡುವ ನಿರ್ಧಾರಕ್ಕೆ ಬರುವಂತೆ ಹೇಳಿ ಮಗನನ್ನು ಒಪ್ಪಿಸುತ್ತಾಳೆ. ಹೆಂಡತಿಯ ಹಾದರವನ್ನು ತನ್ನ ತಾಯಿಯ ಬಳಿ ನೇರವಾಗಿ ಹೇಳಿಕೊಳ್ಳಲಾಗದ, ತನ್ನ ತಾಯಿಯು ಸೂಚಿಸುವ ಯಾವುದೇ ಬಗೆಯ ಬಲಿಯನ್ನು ನಿರಾಕರಿಸಲಾಗದ ಸಂದಿಗ್ದ ಪರಿಸ್ಥಿತಿಯಲ್ಲಿ ಅವನ ಮನಸ್ಸು ಕತ್ತರಿಯಲ್ಲಿ ಸಿಕ್ಕಿದ ಜೀವವೊಂದು ಒದ್ದಾಡುವಂತಾಗುತ್ತದೆ.

ಹಿಟ್ಟಿನ ಕೋಳಿಯ ಸಂಕಲ್ಪ ಹಿಂಸೆಗೆ ಒಪ್ಪಿದ ಯಶೋಧರ ಅದನ್ನು ದೇವಿಗೆ ಬಲಿಕೊಡಲು ವ್ಯವಸ್ಥೆ ಮಾಡುತ್ತಾನೆ. ಆದರೆ ಆ ಹಿಟ್ಟಿನ ಕೋಳಿಯ ಚೆಲುವು, ಸೌಂದರ್ಯಕ್ಕೆ ಆಕರ್ಷಿತವಾಗಿ ಬೆಂತರವೊಂದು ಒಳಹೊಕ್ಕಿ ಬಿಡುತ್ತದೆ. ಆಗ ಆ ಹಿಟ್ಟಿನ ಕೋಳಿಯನ್ನು ಕೊಂದು ಬಲಿಕೊಟ್ಟಾಗ ಅದು ನಿಜದ ಕೋಳಿಯನ್ನೇ ಬಲಿಕೊಟ್ಟಾಗ ಕೂಗಿಕೊಳ್ಳುವಂತೆ ಆ ಬೆಂತರ ’ಕುಕ್ಕೂಕ್ಕೂ’ ಎಂದು ಕೂಗಿಬಿಡುತ್ತದೆ. ದೊರೆ ಆ ವಿಕಾರದ ಕೂಗನ್ನು ಕೇಳಿ ದಿಗಿಲುಬಿದ್ದು, ವಿಧಿ ವಿಳಸನವನ್ನರಿಯದೆ ಮನೆಗೆ ಮರಳುತ್ತಾನೆ. ಕೊನೆಗೂ ತಾನು ಹಿಂಸೆ ಮಾಡಿ ಪಾಪ ಮಾಡಿದೆ ಎಂಬ ಸಂಕಟಕ್ಕೆ ಆತ ಒಳಗಾಗುತ್ತಾನೆ. ಅದಕ್ಕೆ ಪ್ರಾಯಶ್ಚಿತ್ತವೆಂಬಂತೆ ಆತ ತನ್ನ ಮಗ ಯಶೋಮತಿಗೆ ಪಟ್ಟಕಟ್ಟಿ ತಪಸ್ಸಿಗೆ ಹೋಗಲು ನಿಶ್ಚಯಿಸುತ್ತಾನೆ. ತನ್ನ ಗಂಡನ ಈ ನಿರ್ಧಾರವನ್ನು ಅರಿತ ಅಮೃತಮತಿ ಹೂವಿನ ಸೌರಭದಂತೆ ತಾನೂ ತನ್ನ ಗಂಡನನ್ನು ಹಿಂಬಾಲಿಸಿ ಬರುವುದಾಗಿ ಹೇಳಿ, ಹೊರಡುವ ಮುನ್ನ ತನ್ನರಮನೆಯಲ್ಲಿ ತಾನು ಮಾಡುವ ಔತಣ ಉಂಡು ಹೋಗಬೇಕೆಂದು ಹೇಳಿ ತನ್ನ ಗಂಡನನ್ನೂ ಅತ್ತೆಯನ್ನೂ ಒಪ್ಪಿಸುತ್ತಾಳೆ. ಆದರೆ ಅಮೃತಮತಿಯ ಉದ್ದೇಶ ತಾಯಿ – ಮಗನಿಗೆ ಅರ್ಥವಾಗದೆ ಅವರಿಬ್ಬರೂ ಅವಳು ವಿಷ ಹಾಕಿ ಬಡಿಸಿದ ಲಡ್ಡುಗಳನ್ನು ತಿಂದು ಸಾಯುತ್ತಾರೆ. ಹೀಗೆ ಅಮೃತಮತಿ ಅವರಿಬ್ಬರನ್ನೂ ಅರಮನೆಯಲ್ಲಿ ಕೊಲ್ಲುತ್ತಾಳೆ.

ಅಮೃತಮತಿ ಬಡಿಸಿದ ವಿಷದ ಲಡ್ಡುಗಳನ್ನು ತಿಂದು ಸತ್ತ ನಂತರ ಯಶೋಧರ ಮತ್ತು ಅವನ ತಾಯಿ ಚಂದ್ರಮತಿ ಇಬ್ಬರೂ ಮುಂದೆ ನಾನಾ ಪ್ರಾಣಿ ಪಕ್ಷಿಗಳಾಗಿ ಏಳೇಳು ಜನ್ಮಗಳನ್ನು ತಳೆದು, ಸಂಕಲ್ಪ ಹಿಂಸೆಯ ಪಾಪಕ್ಕೆ  ಪ್ರಾಯಶ್ಚಿತ ಹೊಂದಿ, ಕೊನೆಗೆ ಯಶೋಮತಿ ಮತ್ತು ಕುಸುಮಾವಳಿ ದಂಪತಿಗಳಿಗೆ ಅಭಯರುಚಿ ಮತ್ತು ಅಭಯಮತಿಗಳಾಗಿ ಅವಳಿ ಜವಳಿ ಮಕ್ಕಳಾಗಿ ಅಣ್ಣತಂಗಿಯರಾಗಿ ಹುಟ್ಟುತ್ತಾರೆ. ಈ ಇಬ್ಬರೂ ಬಾಲ್ಯದಲ್ಲಿಯೇ ಜೈನದೀಕ್ಷೆಯನ್ನು ಕೈಗೊಂಡು ಸುದತ್ತಾಚಾರ್ಯರಲ್ಲಿ ಶಿಷ್ಯವೃತ್ತಿಯನ್ನು ಸ್ವೀಕರಿಸಿರುತ್ತಾರೆ. ಇವರಿಬ್ಬರೂ ಭಿಕ್ಷೆಗೆ ಹೊರಟಾಗ ಮಾರಿದತ್ತನ ತಳವಾರನಾದ ಚಂಡಕರ್ಮನು ಇವರನ್ನು ಹಿಡಿದು ಚಂಡಮಾರಿಯ ದೇವತೆಗೆ ನರಬಲಿ ಕೊಡಲು ತಂದಿರುತ್ತಾನೆ. ಕೇವಲ ಮಾನಸಿಕ ಪಾಪವೊಂದಕ್ಕೆ, ಸಂಕಲ್ಪ ಹಿಂಸೆಗೆ ತಾವು ಪಟ್ಟ ಪಾಡಿನ ಕಥೆಯನ್ನು ಅಭಯರುಚಿ ಮಾರಿದತ್ತ ರಾಜನಿಗೆ ಹೇಳಿದಾಗ ಈ ಕಥೆಯನ್ನು ಕೇಳಿ ರಾಜ ಬೆರಗಾಗಿ ಉದ್ವೇಗಗೊಳಗಾಗುತ್ತಾನೆ. ಬರೀ ಸಂಕಲ್ಪ ಹಿಂಸೆಯನ್ನು ಮಾಡಿದ್ದಕ್ಕೇ ಜೀವ ಇಷ್ಟೆಲ್ಲಾ ಅವತಾರಗಳನ್ನು ಎತ್ತಿದೆಯಲ್ಲ, ಇನ್ನು ಪ್ರಾಣಿಬಲಿ, ನರಬಲಿ ಕೊಡುತ್ತಾ ಬಂದಿರುವ ತನ್ನ ಜೀವ ಇನ್ನೆಷ್ಟು ಅವತಾರಗಳನ್ನು ಎತ್ತಿ ಪ್ರಾಯಶ್ಚಿತ್ತ ಕಳೆಯಬೇಕಾಗಿ ಬರಬಹುದೋ ಎಂಬ ಶಂಕೆ ಮಾರಿದತ್ತನ ಮನಸ್ಸಿನಲ್ಲಿ ಬರದೆ ಇರದು.

ಇದರಿಂದ ಊರಿನ ಚಂಡಮಾರಿ ದೇವತೆಯೂ ತನಗೆ ಇನ್ನು ಮುಂದೆ ಹಿಂಸಾಪೂಜೆ ಬೇಡವೆಂದು, ಮುಂದೆ ತನಗೆ ಸಾತ್ವಿಕಪೂಜೆಯೇ ಸಾಕೆಂದು ನಿರ್ಧರಿಸುತ್ತಾಳೆ. ಮಾರಿದತ್ತನು ತನ್ನ ಮಗ ಕುಸುಮದತ್ತನಿಗೆ ಪಟ್ಟಕಟ್ಟಿ ಜೈನದೀಕ್ಷೆಯನ್ನು ಪಡೆಯುತ್ತಾನೆ. ಅವನ ಮನಸ್ಸನ್ನು ಹಿಂಸೆಯಿಂದ ಅಹಿಂಸೆಯ ಕಡೆಗೆ ಮಾರ್ಪಾಡು ಮಾಡಿದ್ದು ಆ ಎಳೆಯರು. ಮುಂದೆ ಮಾರಿದತ್ತ ಸತ್ತು ಮೂರನೆಯ ಸ್ವರ್ಗದಲ್ಲಿ ದೇವನೇ ಆಗುತ್ತಾನೆ. ಅಭಯಮತಿ ಮತ್ತು ಅಭಯರುಚಿಗಳಿಬ್ಬರೂ ತಮ್ಮ ತಪಸ್ಸು ಮುಗಿಸಿ ಕಾಲಾಂತರದಲ್ಲಿ ಈಶಾನ ಕಲ್ಪದಲ್ಲಿ ಹುಟ್ಟುತ್ತಾರೆ. ಪಾತಕಿ ಅಮೃತಮತಿ ಧೂಮಪ್ರಭೆ ಎಂಬ ನರಕಕ್ಕಿಳಿಯುತ್ತಾಳೆ.

’ಯಶೋಧರ ಚರಿತೆ’ ಕಾವ್ಯದ ವಸ್ತುಕಥನ ಇದು. ಪಾಪಕ್ಕೆ ಪ್ರಾಯಶ್ಚಿತ್ತವಿದೆ ಎಂಬುದು ಮಾರಿದತ್ತನ ವಿಷಯದಲ್ಲಿ ನಿಜವಾಗುತ್ತದೆ. ಆದರೆ ಅಮೃತಮತಿ ತಾನು ಮಾಡಿದ ಕಾರ್ಯಕ್ಕೆ ಎಂದೂ ಪ್ರಾಯಶ್ಚಿತ್ತದ ಬಗ್ಗೆ ಯೋಚಿಸಲೇ ಇಲ್ಲ. ಇದು ಈ ಕಾವ್ಯದ ಗುಟ್ಟು.