ಅಮೃತಮತಿ ಬಡಿಸಿದ ವಿಷದ ಲಡ್ದುಗಳನ್ನು ತಿಂದು ಸತ್ತ ಯಶೋಧರ ಮತ್ತು ಅವನ ತಾಯಿ ಚಂದ್ರಮತಿಯ ಭವಾವಳಿಗಳ ಕಥೆಯನ್ನು ಜನ್ನ ತನ್ನ ‘ಯಶೋಧರ ಚರಿತೆ’ ಕಾವ್ಯದ ಮೂರನೆಯ ಅವತಾರದ ಮಧ್ಯಭಾಗದಲ್ಲಿ ಆರಂಭಿಸುತ್ತಾನೆ. ಇಲ್ಲಿ ಜನ್ಮಾಂತರ ಅಥವಾ ಭವಾವಳಿ ಅವರು ಮಾಡಿದ ಪಾಪಕ್ಕೆ ಶಿಕ್ಷೆಯಾಗಿ ಬರುತ್ತದೆ. ಜೊತೆಗೆ ತಾವು ಮಾಡಿದ ತಪ್ಪಿಗಾಗಿಯೇ ಇದನ್ನೆಲ್ಲಾ ಅನುಭವಿಸುತ್ತಿದ್ದೇವೆ ಎಂಬ ಅರಿವೂ ಇದೆ. ಈ ಭವಾವಳಿಗಳಲ್ಲಿ ಅವರಿಗೆ ಪೂರ್ವಜನ್ಮಗಳ ಜಾತಿಸ್ಮರತ್ವವೂ ಇದೆ. ಹಿಂಸೆ – ರೋಷ – ಪ್ರತೀಕಾರದ ಭಾವನೆಗಳು ಈ ಭವಾವಳಿಗಳ ರಚನೆಯಲ್ಲಿ ಕಂಡುಬರುತ್ತದೆ. ಜನ್ನ ಇಲ್ಲಿ ವ್ಯಕ್ತಿಗಳು ಸತ್ತು ಪ್ರಾಣಿ – ಪಕ್ಷಿಗಳಾಗುವ ಜನ್ಮಾಂತರಗಳ ಮಾದರಿಗಳನ್ನು ಬಳಸಿಕೊಂಡಿದ್ದಾನೆ. ಇದು ಜನಪದ ಮಾದರಿಗೆ ಹತ್ತಿರವಾದ ಒಂದು ಮಾದರಿಯಾಗಿದೆ. ಯಶೋಧರ ಮತ್ತು ಚಂದ್ರಮತಿ ಅಕಾಲ ಮರಣಕ್ಕೆ ತುತ್ತಾಗಿ ಆರು ಜನ್ಮಗಳನ್ನು ಬಗೆಬಗೆಯ ಪ್ರಾಣಿ – ಪಕ್ಷಿಗಳ ರೂಪವನ್ನು ತಾಳಿ, ತರುವಾಯ ಏಳನೆಯ ಜನ್ಮದಲ್ಲಿ ಮನುಷ್ಯರಾಗಿ ಹುಟ್ಟುತ್ತಾರೆ. ಮೊದಲ ಈ ಆರು ಹುಟ್ಟುಗಳನ್ನು ಜನ್ಮ ’ಭವಾವಳಿ’ ಎಂದು ಕರೆಯದೆ ‘ಜನ್ಮಾಂತರ’ವೆಂದು ಕರೆಯುತ್ತಾನೆ. ಭವಾವಳಿ ಮತ್ತು ಜನ್ಮಾಂತರಗಳ ನಡುವಿನ ವ್ಯತ್ಯಾಸವನ್ನು ಜನ್ನ ಪಂಪನಿಗಿಂತ ಭಿನ್ನವಾಗಿ ನೋಡುತ್ತಾನೆ. ಜನಪದದಲ್ಲಿ ಪಾಪ ಮಾಡಿದ ಜೀವ ಅನೇಕ ಜನ್ಮಗಳನ್ನು ಎತ್ತುತ್ತದೆ ಎನ್ನುವ ರೂಢಿ ಇದೆ. ವ್ಯಕ್ತಿ ತನ್ನ ಬದುಕಿನಲ್ಲಿ ಏನಾದರೂ ತಪ್ಪು ಮಾಡಿದರೆ ಅದಕ್ಕೆ ಶಿಕ್ಷೆ ಎಂಬಂತೆ ಏಳೇಳು ಜನ್ಮಕ್ಕೂ ಈ ಪಾಪ ಮಾತ್ರ ಬೇಡ! ಎಂಬ ಮಾತು ಜನಪದರಲ್ಲಿ ರೂಢಿಯಲ್ಲಿದೆ. ಜನಪದರ ಈ ವಾಡಿಕೆಯ ಮಾತು ಜನ್ನನ ಈ ಜನ್ಮಾಂತರಗಳ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಪ್ರೇರಣೆಯಾಗಿ ಕೆಲಸ ಮಾಡಿರಬೇಕು ಎಂದು ಊಹಿಸಬಹುದಾಗಿದೆ. ‘ಭವಾವಳಿ’ ಎನ್ನುವುದು ಪಂಪನ ಪರಿಭಾಷೆಯಲ್ಲಿ ಹೇಳುವುದಾದರೆ ಅದು ‘ತೀರ್ಥಂಕರರ ಭವಾವಳಿ’ ಆದ್ದರಿಂದ ‘ಯಶೋಧರ ಚರಿತೆ’ಯಲ್ಲಿ ಜನ್ಮಾಂತರಗಳ ಕಥೆ ಬಹಳ ವಿಶಿಷ್ಟವಾದ ಅರ್ಥವನ್ನು ಪಡೆದುಕೊಂಡಿದೆ.

೧.  ಯಶೋಧರ ಸತ್ತ ಮೇಲೆ ವಿಂಧ್ಯ ಪರ್ವತದಲ್ಲಿ ನವಿಲಾಗಿ ಹುಟ್ಟುತ್ತಾನೆ. ತಾಯಿ ಚಂದ್ರಮತಿ ಕರಹಟದಲ್ಲಿ ಬೇಟೆ ನಾಯಿಯಾಗಿ ಹುಟ್ಟುತ್ತಾಳೆ. ತರುವಾಯ ಅವ್ವ ಮತ್ತು ಮಗ ಇಬ್ಬರೂ ನವಿಲು ಮತ್ತು ನಾಯಿಯ ರೂಪದಲ್ಲಿ ಉಡುಗೊರೆಯಾಗಿ ಯಶೋಮತಿಯ ಅರಮನೆ ಸೇರುತ್ತಾರೆ. ಒಮ್ಮೆ ಆ ಅರಮನೆಯಲ್ಲಿ ಯಶೋಮತಿಯ ತಾಯಿ ಅಮೃತಮತಿ ಅಷ್ಟಾವಂಕನ ಜೊತೆ ಸರಸ-ಸಲ್ಲಾಪದಲ್ಲಿದ್ದಾಗ ನವಿಲು ತನ್ನ ಪೂರ್ವಜನ್ಮ ಸ್ಮರಣೆಯ ರೋಷದಿಂದ ಅಷ್ಟಾವಂಕನ ಕಣ್ಣನ್ನು ಕುಕ್ಕುತ್ತದೆ. ಆಗ ಆಕೆ ಅದನ್ನು ಹೊಡೆಯುತ್ತಾಳೆ. ತರುವಾಯ ನಾಯಿ ನವಿಲಿನ ಮೇಲೆ ಎರಗಿ ನವಿಲನ್ನು ಕಚ್ಚಿ ಸಾಯಿಸುತ್ತದೆ. ಆಗ ಯಶೋಮತಿ ಕೋಪಗೊಂಡು ಆ ನಾಯಿಯನ್ನು ಬಡಿದು ಸಾಯಿಸುತ್ತಾನೆ. ಆಮೇಲೆ ಆ ನಾಯಿ ಮತ್ತು ನವಿಲು ಸತ್ತುದನ್ನು ಕಂಡು ದೊರೆ ಕಣ್ಣರಿಯದಿದ್ದರೂ ಕರುಳರಿಯತೆಂಬಂತೆ ಅ ಎರಡರ ಸಾವಿಗೆ ದುಃಖಪಡುತ್ತಾನೆ.

೨.  ನಾಯಿ ಸತ್ತು ವಿಂಧ್ಯ ಪರ್ವತದಲ್ಲಿ ಹಾವಾಗಿ ಹುಟ್ಟುತ್ತದೆ. ನವಿಲು ಕೂಡ ಅದೇ ಕಾಡಿನಲ್ಲಿ ಮುಳ್ಳುಹಂದಿಯಾಗಿ ಜನ್ಮವೆತ್ತುತ್ತದೆ. ಹಗೆ ಹೆಚ್ಚಿ ಮುಳ್ಳುಹಂದಿ ಹಾವನ್ನು ಹಗ್ಗದಂತೆ ಕೊಂದು ತಿಂದುಬಿಡುತ್ತದೆ. ಆ ಮುಳ್ಳುಹಂದಿಯನ್ನು ಹುಲಿಯೊಂದು ಹಿಡಿದು ಕೊಲ್ಲುತ್ತದೆ.

೩.  ಮುಳ್ಳುಹಂದಿ ಉಜ್ಜನಿಯ ಸಿಪ್ರಾ ನದಿಯಲ್ಲಿ ಮೀನಾಗಿ ಹುಟ್ಟುತ್ತದೆ. ಹಾವೂ ಅದೇ ನದಿಯಲ್ಲಿ ಮೊಸಳೆಯಾಗಿ ಜನಿಸುತ್ತದೆ. ಮೊಸಳೆ ಮೀನನ್ನು ನುಂಗಲು ಹೋದಾಗ ಯಶೋಮತಿಯ ತನ್ನ ಜಾಲಗಾರ‍ರಿಂದ ಅದನ್ನು ಹಿಡಿಸಿ ಹಿಂಸಿಸಿ ಕೊಲ್ಲಿಸುತ್ತಾನೆ. ನಂತರ ಬಲೆ ಬೀಸಿ ಹಿಡಿದ ಆ ಮೀನನ್ನು ರಾಜನು ಯಶೋಧರನ ಶ್ರಾದ್ಧಕ್ಕೆ ಶ್ರೇಷ್ಠವಾದ ‘ಕೆಂಪು ಮೀನು’ ಎಂದು ತಿಳಿದು ಅಡಿಗೆ ಮಾಡಿಸುತ್ತಾನೆ. ಶ್ರಾದ್ಧಕ್ಕೆ ಬಂದ ಮಹಾಜನಗಳು ಹೊಟ್ಟೆ ತುಂಬಾ ಉಣ್ಣುತ್ತಾರೆ. ಆಗ ಆ ಮೀನು, ‘ನಾನಿಲ್ಲಿ ಮೀನಾಗಿ ಹುಟ್ಟಿ ಸಾಯುತ್ತಿದ್ದೇನೆ. ಈ ಬ್ರಾಹ್ಮಣರು ಯಶೋಧರನು ಸ್ವರ್ಗದಲ್ಲಿ ಸುಖವಾಗಿ ಇರಲೆಂದು ಒದರುತ್ತಿದ್ದಾರೆ. ಇವರ ಮಾತನ್ನು ಈ ಭೂಪತಿಯು ಬೇರೆ ನಂಬಿದ್ದಾನೆ. ಅಯ್ಯೋ ವಿಧಿಯೇ! ಎಂದು ಯಶೋಧರನಾಗಿದ್ದ ಆ ಮೀನು ಅಡುಗೆ ಮನೆಯಲ್ಲಿ ಅರಜೀವವಾಗಿ ಬೇಯುತ್ತಾ ಮರುಗುತ್ತದೆ.

೪. ಸತ್ತ ಮೊಸಳೆ ಅದೇ ಊರಿನ ಹೊಲಗೇರಿಯಲ್ಲಿ ಒಂದು ಆಡಿನ ಹೊಟ್ಟೆಯಲ್ಲಿ ಆಡಾಗಿ ಹುಟ್ಟುತ್ತದೆ. ಆ ಮೀನೂ ಅದೇ ಆಡಿನ ಹೊಟ್ಟೆಯಲ್ಲಿ ಹೋತವಾಗಿ ಹುಟ್ಟುತ್ತದೆ. ಹೋತ ಕಾಮದಿಂದ ಸೊಕ್ಕಿ ಬೆದೆಗೆ ಬಂದ ತನ್ನ ತಾಯಿಯನ್ನೇ ಏರುತ್ತದೆ. ಆಗ ಇನ್ನೊಂದು ಹೋತ ಬಂದು ಈ ಹೋತದ ಜೀವ ತೆಗೆಯುತ್ತದೆ. ಹೀಗೆ ಸತ್ತ ಹೋತ ಮತ್ತೆ ಆ ತಾಯಿಯ ಬಸಿರನ್ನೇ ಸೇರುತ್ತದೆ. ಯಶೋಮತಿ ರಾಜ ಮಾಂಸಕ್ಕಾಗಿ ಗರ್ಭಿಣಿ ಆಡನ್ನು ಬಾಣಬಿಟ್ಟು ಕೊಲ್ಲುತ್ತಾನೆ.

೫. ಅದೇ ತಾಯಿಯ ಬಸಿರನ್ನೇ ಸೇರಿಕೊಂಡ ಆಡು ಬಾಣ ತಾಗಿದ ತಾಯಿಯ ಗಾಯದ ಮುಖಾಂತರ ಹೊಟ್ಟೆಯೊಳಗಿನಿಂದ ಕೆಳಕ್ಕೆ ಉದುರುತ್ತದೆ. ಆಗ ದೊರೆ ಆ ಆಡಿನ ಮರಿಯನ್ನು ಸಾಕಲು ಮಾದರನ್ನೊಬ್ಬನ ವಶಕ್ಕೆ ಒಪ್ಪಿಸುತ್ತಾನೆ. ಯಶೋಮತಿ ಬೇಟೆಯಾಡಿ ಕೋಣವನ್ನು ಊರಿನ ಮಾರಿದೇವತೆಗೆ ಬಲಿಕೊಟ್ಟು ನಂತರ ಅದನ್ನು ಮಹಾಲಯಕ್ಕೆ ನೀಡುತ್ತಾನೆ. ಅದರ ಮಾಂಸವು ಹಳತು ಅದರಲ್ಲಿ ಹುಳು ಹುಟ್ಟಿಕೊಳ್ಳುತ್ತದೆ. ನಂತರ ಅದನ್ನು ಒಣಗಿಸಲು ಬಿಸಿಲಿನಲ್ಲಿ ಹರಡಿದಾಗ ನಾಯಿ, ಕಾಗೆಗಳು ಎರಗಿ ಆ ಮಾಂಸವನ್ನು ಕುಕ್ಕಿ ಕೆಡಿಸುತ್ತವೆ. ಅದರ ಶುದ್ಧಿಗಾಗಿ ಶಾಸ್ತ್ರದ ಪ್ರಕಾರ ತಾಯ ಬಸಿರಲ್ಲಿ ಸ್ವಬೀಜದಿಂದ  ಹುಟ್ಟಿದ ಆಡುಬೇಕೆಂದು ಪುರೋಹಿತರು ಹೇಳಿದಾಗ ಆ ಮಾತನ್ನು ಕೇಳಿದ ಯಶೋಮತಿ ಹೊಲೆಯನಿಗೆ ಕೊಟ್ಟಿದ್ದ ಆಡನ್ನು ತರಿಸಿಕೊಂಡು ಆ ಮಾಂಸವನ್ನು ಶುದ್ಧ ಮಾಡಿಸುತ್ತಾನೆ. ನಂತರ ಅದನ್ನು ಉಂಡ ಬ್ರಾಹ್ಮಣರು ಚಂದ್ರಮತಿ – ಯಶೋಧರು ನಾಕದಲ್ಲಿ ಸುಖಸೌಖ್ಯದಿಂದ ಇದ್ದಾರೆಂದು ಹೇಳುತ್ತಾರೆ. ಆಗ ಅದನ್ನು ಕೇಳಿಸಿಕೊಂಡ ಆಡು ತನ್ನ ಮನದಲ್ಲಿಯೇ ಮರಗುತ್ತದೆ. ‘ಈ ನಗರ ನನ್ನ ಉಜ್ಜಯಿನಿ. ಇದು ನಾನಿದ್ದ ಮಾಳಿಗೆಯ ಧವಳಾಗಾರ. ಇದು ಅಮೃತಮತಿಯ ವಾಸದ ಭವನ. ಅವಳು ವಿಷವಿಕ್ಕಿದ್ದರಿಂದ ನಾನಿಲ್ಲಿಯೆ ಸತ್ತದ್ದು. ಅವಳು ಈಗಲೂ ಬದುಕಿದ್ದಾಳೋ? ಸತ್ತಿದ್ದಾಳೋ? ಅಥವಾ ಅಷ್ಟಾವಂಕನಲ್ಲಿ ಅನುರಕ್ತಳಾಗಿದ್ದಾಳೋ?’ ಎಂದೆಲ್ಲಾ ಯೋಚಿಸಿ ಸಂಕಟಪಡುತ್ತದೆ. ಯಶೋಮತಿ ರಾಜನ ಬಾಣಕ್ಕೆ ತುತ್ತಾಗಿ ಸತ್ತ ಆಡು (ಚಂದ್ರಮತಿಯ ಜನ್ಮಾಂತರ) ಕಳಿಂಗದಲ್ಲಿ ಕೋಣವಾಗಿ ಜನ್ಮವೆತ್ತುತ್ತದೆ. ಸಿಪ್ರಾನದಿಗೆ ನೀರು ಕುಡಿಯಲು ಬಂದ ಆ ಕೋಣ ರಾಜನ ಸಾಕುನಾಯಿಯನ್ನು ತನ್ನ ಕೊಂಬುಗಳಿಂದ ತಿವಿದು ಸಾಯಿಸುತ್ತದೆ. ಇದರಿಂದ ರಾಜನು ಕೋಪಗೊಂಡು ಆ ಕೋಣವನ್ನು ಹಿಡಿದು ತರಿಸಿ ಹಿಂಸಿಸಿ ಕೊಲ್ಲುತ್ತಾನೆ. ಆ ಕೋಣವನ್ನು ಇಡಿಯಾಗಿ ಬೇಯಿಸಿ ಆ ಮಾಂಸವನ್ನು ತನ್ನ ತಾಯಿ ಅಮೃತಮತಿಗೆ ಕೊಡಿಸುತ್ತಾನೆ. ಆ ಮಾಂಸದ ರುಚಿ ನೋಡಿದ ಅಮೃತಮತಿಯು ಆಡುಗೆ ಮನೆ ಬಳಿ ಕಟ್ಟಿದ್ದ ಆ ಹೋತವನ್ನು ತರಿಸಿ ಕೊಲ್ಲಿಸಿ ಬೇಯಿಸಿ ತಿನ್ನುತ್ತಾಳೆ.

೬. ತಾಯಿ – ಮಗ ಇಬ್ಬರೂ ಅಂದರೆ ಕೋಣ ಮತ್ತು ಹೋತ ಉಜ್ಜಯಿನಿಯ ಹೊರವಲಯದ ಹೊಲಗೇರಿಯಲ್ಲಿ ಮಾದಿಗರ ಮನೆಯಲ್ಲಿ ಕೋಳಿಯ ಗರ್ಭದಲ್ಲಿ ಕೋಳಿಪಿಳ್ಳೆಗಳಾಗಿ ಹುಟ್ಟುತ್ತಾರೆ. ಆ ಮಾದಿಗರು ಬಲಿತ ಮೇಲೆ ಆ ಎರಡು ಕೋಳಿಗಳನ್ನು ಯಶೋಮತಿ ರಾಜನಿಗೆ ಕೊಡುತ್ತಾನೆ. ರಾಜ ಅವುಗಳನ್ನು ಸಾಕಲು ಚಂಡಕರ್ಮನಿಗೆ ಕೊಡುತ್ತಾನೆ. ಒಮ್ಮೆ ಚಂಡಕರ್ಮನು ಉದ್ಯಾನವನದಲ್ಲಿ ತಿರುಗಾಡುತ್ತಿದ್ದಾಗ ಅಲ್ಲಿ ಮರದ ಕೆಳಗೆ ಕುಳಿತು ಆತ್ಮದ ಜಿಜ್ಞಾಸೆಯಲ್ಲಿ ತೊಡಗಿದ್ದ ಅಕಂಪನ ಮುನಿಯನ್ನು ನೋಡುತ್ತಾನೆ. ಆಗ ಆ ಮುನಿವರ್ಯರು ತಮ್ಮ ಆತ್ಮಜ್ಞಾನದ ವಿಚಾರಗಳನ್ನು ಜೈನತತ್ವಗಳನ್ನೂ ಅವನಿಗೆ ವಿವರಿಸಿ ಹಿಂದೆ ಹಿಟ್ಟಿನ ಕೋಳಿಯನ್ನು ಕೊಂದು, ಯಶೋಧರ – ಚಂದ್ರಮತಿಯರು ಸತ್ತು. ನಂತರ ಜನ್ಮಾಂತರಗಳನ್ನೆತ್ತಿ ಈಗ ಗೂಡಿನ ಕೋಳಿಗಳಾಗಿರುವ ವೃತ್ತಾಂತವನ್ನು ತಮ್ಮ ಅವಧಿಜ್ಞಾನದಿಂದ ಅವನಿಗೆ ವಿವರಿಸಿ ಹೇಳುತ್ತಾರೆ. ‘ಪರರನ್ನು ತನ್ನಂತೆ ಬಗೆಯಬೇಕು. ಪ್ರಾಣಿ ಹಿಂಸೆ ಮಾಡಬಾರದು; ಧರ್ಮವು ದಯಾಮೂಲವಾದುದು. ಇವುಗಳಿಂದ ಭವಕ್ಕೆ ಹಿತ’ ಎಂದು ಹೇಳಿದ ಮುನಿಯ ಮಾತುಗಳನ್ನು ಕೇಳುತ್ತಿದ್ದಂತೆಯೇ ಚಂಡಕರ್ಮನ ಬಳಿಯಿದ್ದ ಆ ಕೋಳಿಗಳನ್ನು ತಮ್ಮ ಪೂರ್ವಜನ್ಮದ ಸ್ಮರಣೆಯನ್ನು ಹೊಂದಿ ಅಂತರಂಗದಲ್ಲಿ ಆನಂದಗೊಂಡು ಅಹಿಂಸಾವ್ರತವನ್ನು ಧರಿಸಿ ನವಿಲಿನಿಂದ ಕೆಲೆಯುತ್ತವೆ. ಆಗ ಈ ಕೋಳಿಗಳ ಕೂಗು ಯಶೋಮತಿ ರಾಜನ ಕಿವಿಗೆ ಬಿದ್ದು ಅವನು ತನ್ನ ಶರವಿದ್ಯೆಯನ್ನು ತನ್ನ ಪತ್ನಿ ಕುಸುಮಾವಳಿಗೆ ತೋರಿಸಲು ಉದ್ದೇಶಿಸಿ ಬಾಣ ಬಿಡುತ್ತಾನೆ. ಆಗ ಆ ಬಾಣ ಆ ಎರಡು ಕೋಳಿಗಳನ್ನು ಕೊಲ್ಲುತ್ತದೆ.

೭.  ಆಗ ಆ ಕೋಳಿಗಳು ಹೀಗೆ ಸತ್ತು ಯಶೋಮತಿ ರಾಜನ ರಾಣಿ ಕುಸುಮಾವಳಿಯ ಗರ್ಭದಲ್ಲಿ ಅವಳಿ ಜವಳಿ ಮಕ್ಕಳಾಗಿ ಹುಟ್ಟುತ್ತವೆ. ಹೀಗೆ ಯಶೋಧರ – ಚಂದ್ರಮತಿಯರು ತಮ್ಮ ಏಳನೆಯ ಜನ್ಮದಲ್ಲಿ ಅಭಯರುಚಿ – ಅಭಯಮತಿಯರಾಗಿ ಜನ್ಮವೆತ್ತುತ್ತಾರೆ. ಎಳೆಯ ವಯಸ್ಸಿನಲ್ಲಿಯೇ ಅವರು ಜೈನದೀಕ್ಷೆ ವಹಿಸುತ್ತಾರೆ. ಈ ಭವಾವಳಿ – ಜನ್ಮಾಂತರದ ಕಥೆಯನ್ನು ಜನ್ನ ತನ್ನ ‘ಯಶೋಧರ ಚರಿತೆ’ ಕಾವ್ಯದ ಮೂರನೆಯ ಅವತಾರದ ಮೂವತ್ನಾಲ್ಕನೆಯ ಪದ್ಯದಿಂದ (೩:೩೪) ಆರಂಭಿಸಿ ನಾಲ್ಕನೆಯ ಅವತಾರದ ನಾಲವತ್ತನೆಯ (೪:೪೦) ಪದ್ಯದವರೆಗೆ ವರ್ಣಿಸುತ್ತಾನೆ. ಯಶೋಧರ ಮತ್ತು ಅಮೃತಮತಿ ಅಂದರೆ ಮಗ – ಇಬ್ಬರೂ ತಮ್ಮ ಏಳನೆಯ ಜನ್ಮದಲ್ಲಿ ಅಭಯರುಚಿ ಮತ್ತು ಅಭಯಮತಿ ಎಂಬ ಅಣ್ಣ – ತಂಗಿಯರಾಗಿ (ತಮ್ಮ ಮಗ – ಮೊಮ್ಮಗನ ಹೊಟ್ಟೆಯಲ್ಲಿ) ಜನ್ಮವೆತ್ತುತ್ತಾರೆ. ಇಬ್ಬರೂ ಲಕ್ಷಣವುಳ್ಳವರಾಗಿ ಬೆಳೆಯುತ್ತಾರೆ. ಇವರು ಸುದಾತ್ತಾಚಾರ್ಯ ಮುನಿಯಿಂದ ದೀಕ್ಷೆ ಪಡೆದು, ಯಶೋಧರ – ಅಮೃತಮತಿ ಹಿಂಸೆ ಮಾಡಿದ್ದಕ್ಕಾಗಿ ಅವರು ತಮ್ಮ ಪಾಪದ ಪ್ರಾಯಶ್ಚಿತ್ತಕ್ಕಾಗಿ ತಾವೇ ಸ್ವತಃ ಅನೇಕ ಜನ್ಮಾಂತರಗಳನ್ನು ಎತ್ತುವುದರ ಮೂಲಕ ಶಿಕ್ಷೆಯನ್ನು ಅನುಭವಿಸಿದ್ದನ್ನು ಮನವರಿಕೆ ಮಾಡಿಕೊಟ್ಟಾಗ ಹಿಂಸಾರತಿ ಮಾರಿದತ್ತನ ಮನಸ್ಸು ಪರಿವರ್ತನೆಯಾಗುತ್ತದೆ. ಧರ್ಮಶ್ರವಣದಿಂದ ಕೋಳಿಗಳೂ ಮಾನವ ಜನ್ಮ ಪಡೆದ ಕಥೆಯನ್ನು ಕೇಳಿದ ಯಶೋಮತಿಯೂ ತನ್ನ ರಾಜ್ಯಭಾರವನ್ನು ಮಗನಾದ ಅಭಯರುಚಿಗೆ ವಹಿಸಿ ತಾನೂ ಜೈನದೀಕ್ಷೆಯನ್ನು ಪಡೆಯುತ್ತಾನೆ.

ಈ ಭವಾವಳಿ – ಜನ್ಮಾಂತರಗಳ ಕಥೆಯ ಕೇಂದ್ರ ಉಜ್ಜಯಿನಿ. ಈ ಪರಿಸರದಲ್ಲಿಯೇ ಇವರು ಏಳು ಜನ್ಮಾಂತರಗಳನ್ನು ಎತ್ತುತ್ತಾರೆ. ಇದು ಕಾಲ ಮತ್ತು ಇತಿಹಾಸದ ಚಕ್ರಾಕಾರದ ವರ್ತುಲಗಳ ವಿನ್ಯಾಸದ ಸಂಬಂಧವನ್ನು ಸೂಚಿಸುತ್ತದೆ. ಜನ್ನನಿಗೆ ಈ ವಿಶಿಷ್ಟವಾದ ಪರಿಕಲ್ಪನೆ ಜಾನಪದ ಕಥಾಪರಂಪರೆಯ ಮೂಲದಿಂದ ಬಂದಿರಬೇಕು. ಹಿಟ್ಟಿನ ಕೋಳಿಯನ್ನು ಬಲಿಕೊಟ್ಟಿದ್ದಕ್ಕೆ ಕೊನೆಯ ಜನ್ಮಾಂತರದಲ್ಲಿ ಕೋಳಿಗಳಾಗಿಯೇ ಹುಟ್ಟುವುದು. ಆಡು ಮತ್ತು ಹೋತವಾಗಿ ಹುಟ್ಟಿದಾಗ ತನ್ನ ತಾಯಿ ಆಡಿನ ಮೇಲೆಯೇ ತನ್ನ ಮಗ ಹೋಗಿ ರತಿಕ್ರೀಡೆಗೆ ಹೋಗುವ ಪ್ರಾಣಿಗಳ ಸಹಜವಾದ ನಡವಳಿಕೆ (ಮಾನವರಲ್ಲೂ ಇರಬಹುದಾದ ತಾಯಿ ಮಗನ ಸಂಬಂಧದ ಸೆಕ್ಸ್ ನ್ನು ಪ್ರಾಯ್ದ ‘ಈಡಿಪಸ್ ಕಾಂಪ್ಲೆಕ್ಸ್’ ಎಂದು ಕರೆದದ್ದನ್ನು ಇಲ್ಲಿ ನೆನೆಯಬಹುದು. ತಾಯಿ ಚಂದ್ರಮತಿ ಮತ್ತು ಅವಳ ಮಗ ಯಶೋಧರ ಇವರ ಮಮತೆಯ ಸಂಬಂಧ ಒಂದು ರೀತಿಯಲ್ಲಿ ‘ಈಡಿಪಸ್ ಕಾಂಪ್ಲೆಕ್ಸ್’ ನಂತಹದ್ದೂ ಎಂದು ಕೆಲವು ವಿಮರ್ಶಕರು ಅಭಿಪ್ರಾಯ ಪಡುವುದನ್ನು ಕಾಣುತ್ತೇವೆ.) ಯನ್ನು ಚಿತ್ರಿಸುವ ಜನ್ನ ಈ ಸಹಜವಾದ ಸಂಗತಿಗಳನ್ನು ತನ್ನ ಕಾಲದ ಜನಪದೀಯ ಸಮಾಜದಲ್ಲಿ ಕಂಡಿರಬೇಕು. ಇಂತಹ ವಿಚಾರಗಳನ್ನು ಜನ್ನ ತನ್ನ ಕಾವ್ಯದಲ್ಲಿ ತರುವುದರ ಮೂಲಕ ತನಗೆ ಗೊತ್ತಿಲ್ಲದೆಯೇ ತನ್ನ ಕಾವ್ಯಕ್ಕೆ ಸಾರ್ವಕಾಲೀಕತೆಯನ್ನು ತಂದುಕೊಡುತ್ತಾನೆ. ಇಂತಹ ಅನೇಕ ವಿಷಯಗಳನ್ನು ಜನ್ನ ದೇಸಿಯ (ದ್ರಾವಿಡ) ವಾದ ಜಾನಪದ ಪರಂಪರೆಯಿಂದ ಪ್ರೇರಣೆಯನ್ನು ಪಡೆದಿದ್ದಾನೆ. ಸಿ.ಪಿ.ಕೆ. ಅವರು ಹೇಳುವಂತೆ, ಅಮೃತಮತಿಯ ವ್ಯಭಿಚಾರಕ್ಕೆ ಸಂಬಂಧಿಸಿದ ಕಥೆ ಮೂಲತಃ ಒಂದು ಜಾನಪದ ಕಥೆಯಾಗಿದ್ದಿರಬೇಕು. ಏಕೆಂದರೆ ಜಾರಸ್ತ್ರೀಯರನ್ನು ಕುರಿತ ಕಥೆಗಳು ಭಾರತೀಯ ಕಥಾಸಾಹಿತ್ಯದಲ್ಲಿ ಹೇರಳವಾಗಿ ಸಿಗುತ್ತವೆ. ಅನೇಕ ಪ್ರಾಚೀನವಾದ ಗ್ರಂಥಗಳು ಜಾನಪದ ಗ್ರಂಥಗಳ ಭಂಡಾರಗಳೇ ಆಗಿವೆ. ಈ ಜಾನಪದ ಕಥೆಗಳು ಜೈನ ಕವಿಗಳ ಕೈಗೆ ಸಿಕ್ಕಿ ಧಾರ್ಮಿಕ ಸ್ವರೂಪವನ್ನು ಪಡೆದುಕೊಂಡು ಅಹಿಂಸಾ ಪ್ರಚಾರಕ್ಕೆ ಮಾಧ್ಯಮವಾಗಿ ಪರಿಣಮಿಸಿದ್ದಿರಬೇಕು (ಪು. ೧೯೬೫) ಎಂಬ ಊಹೆ ಸಹಜವಾಗಿಯೇ ಇದೆ. ಜಾನಪದ ಪರಂಪರೆಯು ಅಭಿಜಾತ ಪರಂಪರೆಯನ್ನು ಪ್ರಭಾವಿಸಿರುವುದಕ್ಕೆ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ.

ಜನಪದ ಕಥೆಗಳಲ್ಲಿಯೂ ಜನ್ಮಾಂತರದ ಮತ್ತು ರೂಪಾಂತರದ ಕಥೆಗಳು ಹೇರಳವಾಗಿ ಸಿಗುತ್ತವೆ. ಜನಪದ ಸಾಹಿತ್ಯದಲ್ಲಿ ಇದು ಒಂದು ತುಂಬಾ ಜನಪ್ರಿಯವಾದ ಆಶಯವಾಗಿದೆ. ಜನ್ನ ಜನಪದ ಮೂಲದ ಇಂತಹ ಕಥೆಯನ್ನು ಆಕರವನ್ನಾಗಿಟ್ಟುಕೊಂಡು ಈ ಭವಾವಳಿ – ಜನ್ಮಾಂತರದ ವರ್ತುಲ ವಿನ್ಯಾಸವನ್ನು ರೂಪಿಸಿದ್ದಾನೆ ಅನ್ನಿಸುತ್ತದೆ. ಆದರೆ ಈ ಜೈನ ಕವಿಗಳಲ್ಲಿ ಈ ಭವಾವಳಿ – ಜನ್ಮಾಂತರದ ಕಥೆಗಳ ವಿನ್ಯಾಸವು ಪಠ್ಯದಿಂದ ಪಠ್ಯಕ್ಕೆ ಬದಲಾಗುತ್ತಾ ಹೋಗುವುದನ್ನು ಕಾಣುತ್ತೇವೆ. ಈ ಪ್ರಾಣಿ ರೂಪಕಗಳು ಜನ್ನನಲ್ಲಿ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತವೆ. ಹನ್ನೆರಡನೆಯ ಶತಮಾನದ ವಚನಕಾರರು ತಮ್ಮ ವಚನಗಳಲ್ಲಿ ಇಂತಹ ಅನೆಕ ಬಗೆಯ ಪ್ರಾಣಿ, ಪಕ್ಷಿ ರೂಪಕಗಳನ್ನು ಬಳಸುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ‘ಯಶೋಧರ ಚರಿತೆ’ ಕಾವ್ಯಗಳ ಪರಂಪರೆಯನ್ನು ನೋಡಿದರೆ, ಕೆ.ಚಿನ್ನಪ್ಪಗೌಡರು ಹೇಳುವಂತೆ, ಯಶೋಧರ – ಅಮೃತಮತಿಯರ ಕಥೆ ಜಾನಪದೀಯವಾದ, ಅಪಾರ ಜನಪ್ರಿಯತೆ ಪಡೆದ ಕಥೆಯಾಗಿದೆ (ಪು.೬೭, ೨೦೦೮) ಎಂಬ ಅಭಿಪ್ರಾಯವನ್ನು ಗಮನಿಸಿದಾಗ ಜನ್ನನು ದೇಶೀಯ ಕಥಾವಿನ್ಯಾಸವನ್ನು ತನ್ನ ಕಾವ್ಯದಲ್ಲಿ ಅನುಸರಿಸಿರುವುದು ಸ್ಪಷ್ಟವಾಗುತ್ತದೆ.