ಹಳಗನ್ನಡದ ಸಾಹಿತ್ಯದಲ್ಲಿ ಕವಿಚಕ್ರವರ್ತಿ ಜನ್ನನ ‘ಯಶೋಧರ ಚರಿತೆ’ ಒಂದು ಗಮನಾರ್ಹವಾದ ಕಥಾನಕ. ಇದು ಯಶೋಧರ – ಚಂದ್ರಮತಿಯರ ‘ಚರಿತಾವತಾರ’ದ ಜೊತೆಗೆ ಅಮೃತಮತಿ ಮತ್ತು ಅಷ್ಟಾವಂಕನ ಕಾಮ ನಿರೂಪಣೆಯೂ ಹೌದು. ಹನ್ನೊಂದನೆಯ ಶತಮಾನದ ಕೊನೆಗಾಲದಲ್ಲಿ ಜೈನಧರ್ಮದ ಇಳಿಗಾಲದ ಇಕ್ಕಟ್ಟಿನ ಸಂದರ್ಭದಲ್ಲಿ ಜನ್ನ ತನ್ನ ಈ ಕಾವ್ಯದ ವಸ್ತುವನ್ನು ನಿರ್ವಹಿಸಿದ್ದಾನೆ. ಆತ ಮುಖ್ಯವಾಗಿ ಈ ಕಾವ್ಯದಲ್ಲಿ ಎದುರಿಸುತ್ತಿರುವುದು ಹಿಂಸೆ – ಅಹಿಂಸೆಗಳ ಸಂಘರ್ಷವನ್ನು; ಮನುಷ್ಯನ ಮೂಲ ಪ್ರವೃತ್ತಿಗಳಾದ ಪ್ರಣಯ, ಪ್ರೇಮ, ಕಾಮ, ಮನೋವಿಕಾರ, ವ್ಯಾವೋಹ, ವಿಧಿ – ಇವುಗಳ ಶೋಧನೆ; ಇಲ್ಲಿ ಹಿಂಸೆಯು ಕಾವ್ಯದ ಶರೀರದುದ್ದಕ್ಕೂ ನಾನಾ ಬಗೆಗಳಲ್ಲಿ ಗೋಚರಿಸುತ್ತದೆ. ಆಡು, ಕೋಳಿ, ಕೋಣ, ನರಬಲಿ ಹಾಗೂ ಬೇಟೆಯಾಡುವ ಪ್ರಸಂಗಗಳಿಂದು ಹಿಡಿದು ಹಿಟ್ಟಿನ ಹುಂಜವನ್ನು ಬಲಿಕೊಡುವ ಸಂಕಲ್ಪ ಹಿಂಸೆಯ ತನಕ ಹಿಂಸೆಯ ವೈವಿಧ್ಯತೆಯಿದೆ. ಇಲ್ಲಿ ಶಾರೀರಕವಾದ ಹಿಂಸೆಗಿಂತ ಮಾನಸಿಕ ಹಾಗೂ ಸಂಕಲ್ಪ ಹಿಂಸೆಯ ಪರಿಣಾಮ ಭೀಕರವಾಗಿದೆ. ತನ್ನ ಮಮತೆಯ ಮಾತೆಯ ಬಲೆಯಲ್ಲಿ ಬೇಟೆಗೆ ಸಿಕ್ಕ ಚಿಗರೆಯ ಸ್ಥಿತಿ ಯಶೋಧರ ರಾಜನದು. ಕವಿ ಜೈನಧರ್ಮದ ಅಹಿಂಸೆಯ ರೀತಿಯನ್ನು ಎತ್ತಿ ಹಿಡಿಯುತ್ತಿದ್ದಾನೆಂದು ಹೇಳಿದರೆ ಕಾವ್ಯದ ಉದ್ದೇಶವನ್ನು ಸರಳಗೊಳಿಸಿದಂತಾಗುತ್ತದೆ. ಜನ್ನನ ಮುಖ್ಯ ಹುಡುಕಾಟ ಇರುವುದು ಜೈನಧರ್ಮದ ಸಮರ್ಥನೆಗಾಗಿ ಅಲ್ಲ; ಅದು ಇದ್ದರೂ ಕಾವ್ಯದಲ್ಲಿ ಕಣ್ಣಿಗೆ ಕಂಡರೂ ಕಾಣಕ್ಕಿಲ್ಲದ ಧ್ವನಿ. ಹಿಂಸೆಯ ಸಂಕಥನದ ಹಂದರದ ಮೇಲೆ ತನ್ನ ಸಮಕಾಲೀನ ಸಮಾಜದ ಬದುಕಿನ ಕ್ರೌರ್ಯ, ಹಿಂಸೆ ಹಾಗೂ ಮನುಷ್ಯನ ಮನೋಪ್ರವೃತ್ತಿಗಳನ್ನು ಕಾವ್ಯದ ಕಸುಬುಗಾರಿಕೆಯಲ್ಲಿ ಪರಿಶೋಧನೆಗೆ ಒಡ್ಡುವುದು ಕವಿಯ ಮುಖ್ಯ ಆಶಯವಾಗಿದೆ.

ಯಶೋಧರ ಈ ಕಾವ್ಯದ ನಾಯಕನಾದರೂ ಅವನಲ್ಲೂ ಪ್ರತಿನಾಯಕನ ಚಹರೆಗಳು ಉಳಿದುಕೊಂಡಿವೆ. (ಕಾವ್ಯದ ಪ್ರತಿನಾಯಕ ಅಷ್ಟಾವಂಕನಾದರೂ ಅವನಲ್ಲೂ ನಾಯಕನಿಗೆ ಇರಬೇಕಾದ ಸಂಗೀತದಂಥ ಕಲಾಗುಣ ಇದೆ. ಅಷ್ಟಾವಂಕನ ಸಂಗೀತಕ್ಕೆ ಅಮೃತಮತಿ ಮನಸೋತಳು ಎಂದು ಹೇಳುವುದಾದರೆ ಜನ್ನ ಅವನನ್ನು ಯಾಕೆ ಅಷ್ಟು ವಿಕೃತವಾಗಿ ಚಿತ್ರಿಸಿದ ಎಂಬ ಪ್ರಶ್ನೆ ಹೇಳುತ್ತದೆ) ಇದು ಯಶೋಧರನ ಒಂದು ಅವತಾರದ ಹಂತದಲ್ಲಿ ಸ್ಪಷ್ಟವಾಗಿ ಕಣ್ಣಿಗೆ ಒಡೆದು ಕಾಣುತ್ತದೆ. ಯಶೋಧರ ನವಿಲಾಗಿ ಅವತಾರ ಎತ್ತಿದ್ದಾಗ ಅಷ್ಟಾವಂಕನ ಕಣ್ಣನ್ನು ಕುಕ್ಕುವ ಪ್ರಸಂಗ ಬರುತ್ತದೆ. ಯಶೋಧರನಿಗೆ ಮರುಜನ್ಮದಲ್ಲೂ ಅಷ್ಟಾವಂಕನ ಮೇಲಿನ ಸಿಟ್ಟು ಹೋಗಿಲ್ಲ ಎಂಬುದಕ್ಕೆ ಈ ಪ್ರಸಂಗ ಗುರುತಾಗಿದೆ. ಅವತಾರದ ಸನ್ನಿವೇಶದಲ್ಲಿ ಕಾಮವೂ ಅಷ್ಟೇ ವಿಕೃತವಾಗಿ ಚಿತ್ರಿತವಾಗಿದೆ. ತಾಯಿ ಚಂದ್ರಮತಿ ಆಡಾಗಿ ಜನ್ಮವೆತ್ತಿದಾಗ, ಅವಳ ಹೊಟ್ಟೆಯಲ್ಲಿಯೇ ಹೋತವಾಗಿ ಜನ್ಮವೆತ್ತಿದ ಯಶೋಧರ ಆ ಹಂತದಲ್ಲಿ ತನ್ನ ತಾಯಿಯ ಮೇಲೆ ಹಾರುವ ಚಿತ್ರ ಬರುತ್ತದೆ. ಪ್ರಾಣಿಲೋಕದಲ್ಲಿ ಇದು ಸಹಜ ಪ್ರವೃತ್ತಿ ಅನ್ನಿಸಿದರೂ, ಅವರು ಹಿಂದಿನ ಜನ್ಮದಲ್ಲಿ ಅವ್ವ ಮಗರಾಗಿದ್ದರು ಎಂಬುದು ಓದುಗರ ನೆನಪಿಗೆ ಬರುತ್ತದೆ.

ಇಲ್ಲಿ ಅಮೃತಮತಿಯ ಹಾದರದ ಪಾಪಕ್ಕೆ ಪ್ರಾಯಶ್ಚಿತವಿಲ್ಲ. ಆದರೆ ಹಿಂಸಾಮತಿ ಮಾರಿದತ್ತನ ನರಬಲಿ ಪಾಪಕ್ಕೆ ಪ್ರಾಯಶ್ಚಿತ್ತವೆ. ಪಾಪ ಮತ್ತು ಪುಣ್ಯಗಳ ಜಿಜ್ಞಾಸೆ ಈ ಕಾವ್ಯದ ಶೋಧನೆಯ ನೆಲೆಯಲ್ಲಿದೆ. ಹಿಂಸಾಮತಿ ಮಾರಿದತ್ತನೂ ಕೊನೆಗೆ ದೇವಮಾನವನೇ ಆಗುತ್ತಾನೆ. ಮನುಷ್ಯ ತಾನು ಮಾಡುವ ಕಾಯಕದಿಂದ ದೇವರು. ದೇವಾಲಯವೇ ಆಗುವ ಸ್ವರೂಪವನ್ನು ವಚನಕಾರರಲ್ಲಿ ವಿಶೇಷವಾಗಿ ಕಾಣಬಹುದು. ಮನುಷ್ಯನ ಅಂತರಂಗದ ಪ್ರವೃತ್ತಿಗಳನ್ನು ಸ್ಪೋಟಿಸುವುದಕ್ಕಾಗಿ ಈ ‘ಶುಭಕಥನ’ ಒಂದು ನೆಪ ಮಾತ್ರ. ಹಿಂಸೆ ಇಲ್ಲಿ ಸೋತು ಅಹಿಂಸೆ ಮೇಲುಗೈ ಸಾಧಿಸುತ್ತದೆ. ಈ ಕಾವ್ಯ ಆರಂಭವಾಗುವ ಹೊತ್ತಿಗೆ ಇಡೀ ಕಾವ್ಯದ ಕಥೆ ನಡೆದು ಹೋಗಿದೆ. ಅಂತ್ಯದಿಂದ ಆರಂಭವಾಗುವ ಈ ಕಾವ್ಯದ ನಿರೂಪಣೆಯ ಕಥನದ ತಂತ್ರ ಅತ್ಯಂತ ನವೀನವಾಗಿದೆ. ಈ ಶತಮಾನದಲ್ಲಿ ಅಹಿಂಸೆ ಗಾಂಧೀಜಿಗೆ ತಮ್ಮ ಜೀವನದಲ್ಲಿ ಒಂದು ದೊಡ್ಡ ಮೌಲ್ಯವಾಗಿತ್ತು. ಇದು ಅವರ ಹೋರಾಟದ ಬದುಕಿನ ಒಂದು ಭಾಗವಾಗಿತ್ತು.

‘ಯಶೋಧರ ಚರಿತೆ’ ಹಿಂಸೆಯ ವಾತಾವರಣದಿಂದ ಆರಂಭವಾಗಿ ಅಹಿಂಸೆಯ ಸನ್ನಿವೇಶದಿಂದ ಮುಗಿಯುತ್ತದೆ. ವಸ್ತು ಗಾತ್ರಗಳಲ್ಲಿ ಇದರಿಂದ ಕಣ್ಣು ಕುಕ್ಕುವಷ್ಟು ಬೆಳವಣಿಗೆ ಇದೆ. ಮೊದಲಲ್ಲಿಯೇ ಬರುವ ವಸಂತದ ವರ್ಣನೆ ಒಟ್ಟು ಕಾವ್ಯದ ಸಂದರ್ಭದಲ್ಲಿಯೇ ಮರೆಯಲಾರದ ಒಂದು ಸನ್ನಿವೇಶ. ಶಿಶಿರ ಋತು ಕಳೆದು ಆಗ ತಾನೇ ವಸಂತ ಋತು ನಿಸರ್ಗದಲ್ಲಿ ಮೈದಾಳಿದೆ. ಇಲ್ಲಿ ಹಿಂಸೆಯ ಜೊತೆ ವಸಂತದ ವೈಭವವನ್ನು ಸಮೀಕರಿಸುವ ಕವಿಯ ಮನೋಧರ್ಮ ವಿಶಿಷ್ಟ ಗುಣದಿಂದ ಕೂಡಿದೆ. ಹಿಂಸೆಯ ಹಿನ್ನೆಲೆ ಹೀಗಿದೆ: ಅಯೋಧ್ಯೆ ದೇಶದ ರಾಜ ಮಾರಿದತ್ತ. ಆ ರಾಜ್ಯದ ರಾಜಧಾನಿ ರಾಜಪುರ. ಆ ಪುರದ ದೇವತೆ ಚಂಡಮಾರಿ. ಆಕೆ ಪಾಪ ಮಾಡುವುದರಲ್ಲಿ ದೊಡ್ಡ ಪಂಡಿತೆ. ಆಕೆಗೆ ಪ್ರತೀ ಚೈತ್ರಮಾಸದಲ್ಲಿ ಅದ್ದೂರಿ ಜಾತ್ರೆ. ಆಕೆಗೆ ಆ ಜಾತ್ರೆಯಲಿ ತಪ್ಪದೆ ಪಶುಬಲಿ, ನರಬಲಿ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ಸಾರಿಯ ಜಾತ್ರೆಯಲ್ಲಿ ಆ ಮಾರಿಗೆ ವಿಶೇಷವಾಗಿ ಅವಳಿ ಜವಳಿ ಮಕ್ಕಳನ್ನು (ಅದರಲ್ಲಿ ಒಂದು ಗಂಡು, ಒಂದು ಹೆಣ್ಣು) ಬಲಿ ಕೊಡಬೇಕೆಂದು ಮಾರಿದತ್ತ ರಾಜ ನಿರ್ಧರಿಸಿದ್ದಾನೆ. ರಾಜನ ಅಪ್ಪಣೆಯಂತೆ ಚಂಡಕರ್ಮ ಎಂಬ ತಳವಾರ‍ನು ಕಾಡಿನಲ್ಲಿ ಭಿಕ್ಷೆಗಾಗಿ ಹೊರಟಿದ್ದ ಸುದತ್ತಾಚಾರ್ಯರೆಂಬ ಮುನಿಯ ಶಿಷ್ಯರಾದ ಅಭಯರುಚಿ ಮತ್ತು ಅಭಯಮತಿ ಎಂಬ ಎಳೆಯ ಬಾಲಕ ಬಾಲಕಿಯನ್ನು ಹಿಡಿದು ಕರೆದುಕೊಂಡು ಮಾರಿಗುಡಿಗೆ ಬರುತ್ತಾನೆ. (ಅವರಿಬ್ಬರೂ ಮೊದಲ ಜನ್ಮದಲ್ಲಿ ಚಂದ್ರಮತಿ ಮತ್ತು ಯಶೋಧರ ಎಂಬ ತಾಯಿ ಮಗ).

ಈ ಅವಳಿ ಜವಳಿ ಬಾಲಕ ಬಾಲಕಿಯರು ಒಬ್ಬರಿಗೆ ಒಬ್ಬರು ಸಮಾಧಾನ ಮಾಡಿಕೊಂಡು, ಧೈರ್ಯ ತಂದುಕೊಂಡು ‘ಪಸಿದ ಕೃತಾಂತನ ಬಾಣಸುವೊಲಿರ್ದ ಮಾರಿಮನೆ’ಗೆ ಬರುತ್ತಾನೆ. ಮಾರಿಗೆ ಅವರಿಬ್ಬರ ತಲೆಕಡಿಯುವುದಕ್ಕೆ ಮುಂಚೆ ಅವರು ‘ಬೈರವನ ಜವನ ಮಾರಿಯ ಮೂರಿಯವೋಲ್’ ನಂತೆ ನಿಂತಿರುವ ಮಾರಿದತ್ತ ಪದ್ಧತಿಯಂತೆ ತನಗೆ ಹರಸಬೇಕೆಂದು ಕೇಳಿಕೊಂಡಾಗ, ಬಾಲಕ ಬಾಲಕಿಯರು ದೊರೆಗೆ ‘ನಿರ್ಮಲ ಧರ್ಮದಿಂದ ಪಾಲಿಸು ಧರೆಯಂ’ ಎಂದು ಹರಸುತ್ತಾರೆ. ಆ ಮಾತು ಕೇಳಿದ ರಾಜ ಕಳವಳಗೊಂಡು ಬಾಲಕ ಬಾಲಕಿಯರ ಹಿಂದಿನ ಚರಿತ್ರೆಯನ್ನು ಕೇಳಲು ಆಸಕ್ತಿ ತಾಳುತ್ತಾನೆ. ಆಗ ಅವರಿಬ್ಬರೂ ‘ಯಶೋಧರ ಚರಿತಾವತಾರ’ದ ಕಥೆಯನ್ನು ಹೇಳತೊಡಗುತ್ತಾರೆ. ಸಾವಿನ ಸಮೀಪ ತತ್ತರಿಸಿ ನಿಂತು, ಆ ಎಳೆಯ ಚೇತನಗಳು ಕಥೆ ಹೇಳುವ ರೀತಿ, ಹಿಂಸೆಯ ತುತ್ತ ತುದಿಯಲ್ಲಿ ನಿಂತು ಕಥೆ ಕೆಳುತ್ತಿರುವ ಮಾರಿದತ್ತನ ಮನಸ್ಸು ಕುತೂಹಲಕಾರಿಯಾಗಿದೆ. ಇದರಿಂದ ರಾಜ ಆ ಕಥೆಯನ್ನು ಕೇಳಿ ಕೊನೆಗೆ ತನ್ನ ಹಿಂಸಾಪ್ರವೃತ್ತಿಯನ್ನು ತೊರೆದು ಅಹಿಂಸೆಯ ದಾರಿಯನ್ನು ಹಿಡಿಯುತ್ತಾನೆ. ಆದರೆ ಈ ಕಥೆಯನ್ನು ಜನ್ನ ಕವಿ ಮಾರಿಗುಡಿಯ ಭಯದ ವಾತಾವರಣವನ್ನು ಮೊದಲು ಸೃಷ್ಟಿಸಿ ಅದರ ಹಿನ್ನೆಲೆಯಲ್ಲಿ ಅನಂತರ ವಸಂತ ಋತುವಿನ ವರ್ಣನೆಯನ್ನು ಕಟ್ಟಿಕೊಡುತ್ತಾನೆ. ವಾದಿರಾಜನ ಸಂಸ್ಕೃತ ‘ಯಶೋಧರ ಚರಿತೆ’ಯಲ್ಲಿ ಬರುವ ವಸಂತ ವರ್ಣನೆಗೆ ಜನ್ನ ಇನ್ನಷ್ಟು ಪ್ರಭೆಯನ್ನು ತಂದುಕೊಟ್ಟಿದ್ದಾನೆ.

ಹಿಂಸೆಯ ಹಿನ್ನೆಲೆಯಲ್ಲಿ ಗಿಳಿ, ಕೋಗಿಲೆಗಳ ದನಿಗಳೊಡನೆ ವಸಂತದ ಸಮೃದ್ಧಿಯನ್ನು ಬಣ್ಣಿಸಿದ ಕವಿ ಮುಂದಿನ ಪದ್ಯದಲ್ಲಿ ವಸಂತವನ್ನು ತನ್ನ ಕಾವ್ಯದ ವಸ್ತುವಿನ ಜೊತೆ ಒಂದು ರೂಪಕದಲ್ಲಿ ಕರಗಿಸಿ ಬಿಡುತ್ತಾನೆ. ಜನ್ನನ ಪ್ರತಿಭಾಶಕ್ತಿ, ಕಾವ್ಯ ಸೌಂದರ್ಯ ಹಾಗೂ ನೋಡುವಿಕೆ ಇಲ್ಲಿ ಅಸಾಧಾರಣವಾಗಿ ಪ್ರಕಟವಾಗಿದೆ. ಆತ ಇದನ್ನು ಬರೀ ಅಷ್ಟಾದಶ ವರ್ಣನೆಗಳಿಗೆ ಕಟ್ಟುಬಿದ್ದು ವರ್ಣಿಸುತ್ತಿಲ್ಲ. ಆ ಅರಣ್ಯದ ಮಾವಿನ ಮರದ ಕೆಳಗೆ ಇದ್ದ ಮಂಚಿಕೆ ಮೇಲೆ ಬಿದ್ದ ಲೆಕ್ಕವಿಲ್ಲದಷ್ಟು ಮುತ್ತುಗದ ಕೆಂಪು ಹೂವುಗಳು ಹರಕೆ ಸಲ್ಲಿಸಲೆಂದು ವಸಂತಮಾರಿಗೆ ಬಲಿಕೊಟ್ಟ ಶಿಶಿರಿನ ಮೈಮಾಂಸದ ಮುದ್ದೆಯಂತೆ ಕಾಣುತ್ತಿದ್ದವೆಂದು ಕವಿ ಮರೆಯಲಾಗದ ರೂಪಕದ ಮೂಲಕ ಬಣ್ಣಿಸಿದ್ದಾನೆ. ಶಿಶಿರದ ಅಂತ್ಯ, ವಸಂತ ಆದಿ; ಹಿಂಸೆಯ ಅಂತ್ಯ, ಅಹಿಂಸೆಯ ಆಯ್ಕೆ – ಹೀಗೆ ಎರಡನ್ನೂ ಒಂದೇ ಜಾಗಕ್ಕೆ ತಂದು ನಿಲ್ಲಿಸಿ ವಸಂತಮಾರಿಗೆ ಶಿಶಿರದ ಮಾಂಸದ ನೈವೇದ್ಯ ಅರ್ಪಿಸುವ ಚಿತ್ರ ಜನ್ನನ ಅದ್ಬುತ ರಚನೆಯಾಗಿದೆ. ಶಿಶಿರವನ್ನು ಪ್ರಾಣಿಗೂ, ವಸಂತವನ್ನು ಮಾರಿಗೂ ಹೋಲಿಸುವ ರೂಪಕ ಕವಿಯ ಸಹಜ ಪ್ರತಿಭೆಗೆ ದ್ಯೋತಕವಾಗಿದೆ. ಕಾವ್ಯದ ವಸ್ತುವಿನ ಜೊತೆ ಋತುಗಳ ಪಲ್ಲಟವನ್ನು ಸಮೀಕರಿಸಿ ಹೇಳುವುದರ ಮೂಲಕ ಕವಿ ರಮಣೀಯವಾದ ಸ್ವೋಪಜ್ಞವಾದ ಅರ್ಥವಂತಿಕೆಯನ್ನು ತಂದುಕೊಟ್ಟಿದ್ದಾನೆ.

ನಿಸರ್ಗವನ್ನು ವಿಶೇಷವಾಗಿ ಅನುಭವಿಸಿದ ಕನ್ನಡದ ಪಂಪನಂತಹ ಕೆಲವೇ ಕವಿಗಳ ಸಾಲಿನಲ್ಲಿ ಜನ್ನ ಇದ್ದಾನೆ; ಹಿಂಸೆಯ ಪ್ರಭಾವವನ್ನೂ ಅಷ್ಟೇ ಅದ್ಬುತ ಪ್ರಮಾಣದಲ್ಲಿ ಕಾವ್ಯದಲ್ಲಿ ತಂದಿದ್ದಾನೆ. ವಸಂತದ ವರ್ಣನೆಯನ್ನು ಬೆಂಕಿ, ಮುತ್ತುಗದ ಕೆಂಪು ಹೂವು, ಮಾಂಸ ಮುಂತಾದ ರೂಪಕಗಳ ಮೂಲಕ ಕವಿ ಜನ್ನ ನೋಡಿ ಅದಕ್ಕೆ ಹೊಸ ಆಯಾಮವನ್ನೇ ಅನುಸೃಷ್ಟಿಸಿದ್ದಾನೆ. ಈ ಸನ್ನಿವೇಶ ಕಲ್ಕತದ ಕಾಳಿಕಾದೇವಿ ಗುಡಿಯ ವರ್ಣನೆಯನ್ನು ನೆನಪಿಗೆ ತರುತ್ತದೆ. ಕಾಳಿಕಾದೇವಿ ಗುಡಿಯಲ್ಲಿ ನಡೆಯುವ ಭಯಾನಕವಾದ ಹಿಂಸೆಯ ಬಲಿಪದ್ಧತಿಯನ್ನು ಒಮ್ಮೆ ಗಾಂಧೀಜಿ ಅವರು ಕಂಡು ವಿಸ್ಮಯಗೊಂಡಿದ್ದರೆ, ಇದು ಭಾರತದ ಮೌಢ್ಯದ ಪ್ರತೀಕವೆಂದು ವಿದೇಶಿ ಪ್ರವಾಸಿಯೊಬ್ಬಳು ವರ್ಣಿಸಿದ್ದಾಳೆ. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಮತ್ತು ಜಾನಪದ ಸಾಹಿತ್ಯದಲ್ಲಿ ಸಿಕ್ಕುವ ಯಶೋಧರನ ಕಥೆಯನ್ನು ಜನ್ನ ಸೃಜನಾತ್ಮಕವಾಗಿ ಕನ್ನಡಕ್ಕೆ ಕಟ್ಟಿಕೊಟ್ಟಿದ್ದಾನೆ. ಇದರ ಇನ್ನೊಂದು ಸೃಜನಾತ್ಮಕವಾದ ಅನು ಸೃಷ್ಟಿಯನ್ನು ಗಿರೀಶ್ ಕಾರ್ನಾಡರು ತಮ್ಮ ‘ಬಲಿ’ ನಾಟಕದಲ್ಲಿ ನಿರ್ವಹಿಸಿದ್ದಾರೆ. (ಹಿಂಸೆ, ಅಹಿಂಸೆಗಿಂತ ‘ಸಂಕಲ್ಪ’ ಹಿಂಸೆ’ಯ ಪ್ರಭಾವ ಎಷ್ಟು ಗಾಢವಾದದ್ದು, ದುಗುಡವಾದದ್ದು ಎಂಬುದನ್ನು ಈ ನಾಟಕ ಮನದಟ್ಟು ಮಾಡಿಕೊಡುತ್ತದೆ.)