ಭೂಮಿ ಹಂಚುವುದು, ಭೂಮಿ ಹೋರಾಟ ಇತ್ಯಾದಿಗಳೆಲ್ಲ ಕಳೆದ ಶತಮಾನದ ಎಪ್ಪತ್ತು ಎಂಬತ್ತರ ದಶಕಗಳ ಸರಕುಗಳು. ಆವಾಗ ಈ ಸರಕುಗಳಿಗೆ ಎಲ್ಲಾ ಕಡೆ ಬೇಡಿಕೆ ಇತ್ತು. ಚೆನ್ನಾಗಿ ಬಿಕರಿ ಆಗುತ್ತಿದ್ದವು. ಕತೆ ಕಾಕಂಬರಿಗಳಿಂದ ಹಿಡಿದು ಚಲನ ಚಿತ್ರಗಳ ತನಕ ಭೂಮಿ ದೊಡ್ಡ ಕಥಾವಸ್ತು. ಮದರ್ ಇಂಡಿಯಾ, ಗಂಗಾ ಜಮುನ, ಉಪ್‌ಕಾರ್ ಇತ್ಯಾದಿ ಚಲನಚಿತ್ರಗಳನ್ನು ವಾರಗಟ್ಟಲೆ ಜನ ನೋಡಿದ್ದಾರೆ. ಆವಾಗ ಟಿವಿ ಇರಲಿಲ್ಲ. ಇರುತ್ತಿದ್ದರೆ ಅದರಲ್ಲೂ ಭೂಮಿ ಸಮಸ್ಯೆಯ ಸಾಕಷ್ಟು ಸೀರಿಯಲ್‌ಗಳು ವರ್ಷಗಟ್ಟಲೆ ಓಡುವ ಸಾಧ್ಯತೆ ಇತ್ತು. ಈಗಲೂ ಅಪರೂಪಕ್ಕೊಮ್ಮೆ ಪ್ರೇಮ್‌ಚಂದ್‌ಅವರ ಗೋದಾನ್‌ಟಿವಿಯಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಳ್ಳುತ್ತಿದೆ. ರಾಜಕೀಯ, ಆರ್ಥಿಕ ನೀತಿ ನಿರೂಪಣೆಗಳಲ್ಲಿ, ಪಂಚವಾರ್ಷಿಕ ಯೋಜನೆಗಳಲ್ಲಿ, ಅಭಿವೃದ್ಧಿ ತತ್ತ್ವ ಹಾಗೂ ಕಾರ್ಯಕ್ರಮಗಳಲ್ಲಿ, ಸಂಶೋಧಕರ ಓದು ಬರಹಗಳಲ್ಲಿ ಹೀಗೆ ಎಲ್ಲಾ ಕಡೆ ಭೂಮಿ ಪ್ರಶ್ನೆ ರಾರಾಜಿಸುತ್ತಿತ್ತು. ಎಂಬತ್ತರ ಮಧ್ಯಭಾಗದಿಂದಲೇ ಭೂಮಿ ಪ್ರಶ್ನೆ ನೇಪಥ್ಯಕ್ಕೆ ಸರಿಯಲಾರಂಭಿಸಿತು. ತೊಂಬತ್ತರ ನಂತರವಂತು ಭೂಮಿ, ಕೃಷಿ, ಗ್ರಾಮ, ಎಲ್ಲಾವು ಮಹತ್ವ ಕಳೆದುಕೊಂಡಿವೆ. ಕೈಗಾರಿಕೆ, ವ್ಯಾಪರ, ಐಟಿಬಿಟಿ ಉದ್ದಿಮೆಗಳು, ಶೇರುಮಾರುಕಟ್ಟೆ ಇತ್ಯಾದಿಗಳು ಮುಂಚೂಣಿಗೆ ಬಂದಿವೆ. ಭೂಮಿ ಪ್ರಶ್ನೆ ಅಂದರೆ ಭೂಮಿಯನ್ನು ಭೂಮಿ ಇಲ್ಲದವರಿಗೆ ಹಂಚುವ ಪ್ರಶ್ನೆ ಸಂಪೂರ್ಣ ತಿರುವುಮುರುವಾಗಿದೆ. ಈಗಾಗಲೇ ಹಂಚಿಕೆಯಾದ ಅಲ್ಪಸ್ವಲ್ಪ ಭೂಮಿಯನ್ನು ರೈತರಿಂದ ಕಿತ್ತುಕೊಂಡು ಉದ್ದಿಮೆದಾರರಿಗೆ ಕೊಡುವುದು, ನಗರವಾಸಿಗಳ ವಸತಿ ಸಮೂಚ್ಚಯಗಳ ನಿರ್ಮಾಣಕ್ಕೆ ಕೊಡುವುದು, ಸ್ಪೆಷಲ್ ಎಕಾನಮಿಕ್ ಜೋನ್ ಮಾಡುವುದು ಇತ್ಯಾದಿಗಳು ಇಂದಿನ ಫ್ಯಾಶನ್. ಕವಿಗಳಿಗೆ, ಚಲನಚಿತ್ರಗಳಿಗೆ, ಟಿವಿ ಸೀರಿಯಲ್‌ಗಳಿಗೆ ಭೂಮಿ ಇಂದು ಲಾಭದಾಯಕ ಕಥಾ ವಸ್ತುವಾಗಿ ಉಳಿದಿಲ್ಲ. ನಗರ ಪ್ರದೇಶದವರ, ಮಧ್ಯಮವರ್ಗದವರ, ವ್ಯಾಪಾರಸ್ಥರ ಕೌಟುಂಬಿಕ ಸಮಸ್ಯೆಗಳು ಇಂದು ಬಹುತೇಕ ಚಲನಚಿತ್ರ ಹಾಗೂ ಟಿವಿ ಸೀರಿಯಲ್‌ಗಳ ಕಥಾವಸ್ತುಗಳು. ಬಹುತೇಕ ರಾಜಕೀಯ ಪಕ್ಷಗಳಿಗೆ (ಎಡಪಂಥಿಯರನ್ನು ಹೊರತುಪಡಿಸಿ) ಭೂಮಿ ಇಂದು ಓಟು ತರುವ ಸಮಸ್ಯೆಯಾಗಿ ಉಳಿದಿಲ್ಲ. ತುಂಬಾ ನಿಖರವಾಗಿ ಹೇಳುವುದಾದರೆ ಜನರಿಗೆ ಭೂಮಿ ಕೊಟ್ಟು ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಕಾಯಕವನ್ನು ರಾಜಕೀಯ ಎಂದೋ ಮರೆತಿದೆ. ಭೂಮಿ ಪ್ರಶ್ನೆ ರಾಜಕೀಯದಿಂದ ದೂರ ಸರಿದಿರುವುದು ಇಂದಿನ ದುಡ್ಡು ಹಾಕಿ ದುಡ್ಡು ತೆಗೆಯುವ ರಾಜಕೀಯದ ದಂದೆಗೆ ತುಂಬಾ ಲಾಭದಾಯಕವಾಗಿದೆ. ಇಂದು ವ್ಯವಸ್ಥೆಯನ್ನು ಪರಿವರ್ತಿಸುವ ಪ್ರಶ್ನೆಗಳನ್ನು ಪಕ್ಷಗಳು ಮಾತಾಡುವ ಅಗತ್ಯವಿಲ್ಲ. ಯಾಕೆಂದರೆ ಕಳೆದ ಆರು ದಶಕಗಳಲ್ಲಿ ಅಭಿವೃದ್ಧಿಯ ಹೆಸರಲ್ಲಿ ಬಹುತೇಕರನ್ನು ಮೂರು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿಗೆ ತಳ್ಳಲಾಗಿದೆ. ಅವರ್ಯಾರಿಗೂ ವ್ಯವಸ್ಥೆ ಪರಿವರ್ತಿಸುವ ಕಕಾರ್ಯಕ್ರಮದೊಂದಿಗೆ ಗುರುತಿಸಿಕೊಳ್ಳುವಷ್ಟು ಶಕ್ತಿ, ತಾಳ್ಮೆಉಳಿದಿಲ್ಲ. ಅವರ ಬೇಡಿಕೆ ಏನಿದ್ದರೂ ಇಂದು, ಈಗ ಮತ್ತು ತಕ್ಷಣ . ಹತ್ತು ವರ್ಷ, ಇಪ್ಪತ್ತು ವರ್ಷ ಬಿಡಿ ನಾಳೆಯ ಪ್ರಶ್ನೆಯೇ ಇಲ್ಲ. ಎರಡು ರೂಪಾಯಿಗೆ ಕೇಜಿ ಅಕ್ಕಿ ಕೊಡುವುದು, ಇಪ್ಪತ್ತು ಚದರಿ ಅಡಿಯ ವಸತಿ ಕೊಡಿಸುವುದು, ಚರಂಡಿ ಮಾಡಿಸುವುದು, ಶೌಚಾಲಯ ಕೊಡಿಸುವುದು, ಸೈಕಲ್ ಕೊಡಿಸುವುದು, ಟಿವಿ ಕೊಡುವುದು, ಸೀರೆ ಕೊಡುವುದು ಇತ್ಯಾದಿಗಳು ಇಂದು ಚುನಾವಣೆ ಸಂದರ್ಭದಲ್ಲಿ ಕಿವಿಗೆ ರಾಚುವ ಭರವಸೆಗಳು. ಜಾಜಿ, ಧರ್ಮ, ಹಣ ಇತ್ಯಾದಿಗಳ ಜತೆಗೆ ಮೇಲಿನ ಭರವಸೆಗಳು ಚುನಾವಣೆ ಗೆಲ್ಲಲು ಸಾಕಾಗಿದೆ. ಅದುದರಿಂದ ಭೂಮಿ ಪ್ರಶ್ನೆಯನ್ನು ಬಹುತೇಕ ಪಕ್ಷಗಳು ಎತ್ತುವುದೇ ಇಲ್ಲ. ಇನ್ನೊಂದು ದೃಷ್ಟಿಯಿಂದಲು ಭೂಮಿ ಇಂದು ಮಹತ್ವದ ರಾಜಕೀಯ ಪ್ರಶ್ನೆಯಾಗಿ ಉಳಿದಿಲ್ಲ. ಎಪ್ಪತ್ತು ಎಂಬತ್ತರ ದಶಕದಲ್ಲಿ ಹಲವು ಭೂಸುಧಾರಣೆಗಳು ಬಂದು ಹೋಗಿವೆ. ಈ ಸುಧಾರಣೆಗಳಿಂದ ಜನರ ಭೂಸಂಬಂಧಗಳು ತುಂಬಾ ಸುಧಾರಣೆಗೊಂಡಿವೆ. ಇಂತಹ ಸಂದರ್ಭದಲ್ಲಿ ಇನ್ನೊಂದು ಭೂಸುಧಾರಣೆಯ ಅವಶ್ಯಕತೆಯಾದರೂ ಏನಿದೆ? ಎಂದು ಪ್ರಶ್ನಿಸುವವರೇ ಜಾಸ್ತಿ. ಈಗ ಭೂಸುಧಾರಣೆ ಪ್ರಶ್ನೆಯನ್ನು ಚರ್ಚಿಸುವುದು ಎಷ್ಟು ಸಮಂಜಸ ಎನ್ನುವ ಪ್ರಶ್ನೆ ಈ ಪುಸ್ತಕದ ಓದುಗರನ್ನೂ ಕಾಡಬಹುದು. ಇಂದೂ ಕೂಡ ನಮ್ಮ ಸಮಾಜದ ಬಹುತೇಕರ ಬದುಕನ್ನು ಸಕರಾತ್ಮಕವಾಗಿ ಬದಲಾಯಿಸುವ ಒಂದು ಸಾಧನ ಇದ್ದರೆ ಅದು ಭೂಮಿ ಮಾತ್ರ ಆದರೆ ಇಂತಹ ಪ್ರಮುಖ ಪ್ರಶ್ನೆಯನ್ನು ನಮ್ಮ ಅಭಿವೃದ್ಧಿ ರಾಜಕಾರಣ ಇನ್ನೂ ಕೂಡ ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಏಕೀಕರಣ ಸಂದರ್ಭದಲ್ಲಿನ ಭೂಮಿ ಸಂಬಂಧಗಳನ್ನು ಮೂಲಭೂತವಾಗಿ ಪರಿವರ್ತಿಸಲು ನಮಗೆ ಇನ್ನೂ ಸಾಧ್ಯವಾಗಿಲ್ಲ. ಈ ದಿಶೆಯಲ್ಲಿ ಈಗಾಗಲೇ ನಡೆದ ಭೂಸುಧಾರಣೆಗಳ ಸಾಧನೆ ಏನೇನೂ ಸಾಲದು. ಈ ಎಲ್ಲದರ ಹಿನ್ನೆಲೆಯಲ್ಲಿ ಮತ್ತೊಂದು ಭೂಸುಧಾರಣೆ ಅನಿವಾರ್ಯ ಎಂದು ವಾದಿಸುವುದು ಈ ಪುಸ್ತಕದ ಉದ್ದೇಶ.

ಸಕರಾತ್ಮಕ ರಾಜಕೀಯಕ್ಕೆ, ಆರ್ಥಿಕ ಅಭಿವೃದ್ಧಿಗೆ ಹಾಗೂ ಸಮಾಜಿಕ ಪರಿವರ್ತನೆಗೆ ಇಂದು ಕೂಡ ತಳಸ್ತರದ ಜನರು ಭೂಮಿ ಹೊಂದಿರುವುದು ಎಷ್ಟು ಮುಖ್ಯ ಎಂದು ಪುಸ್ತಕದ ಮೊದಲ ಅಧ್ಯಾಯದಲ್ಲಿ ವಾದಿಸಿದ್ದೇನೆ. ಕರ್ನಾಟಕದಲ್ಲಿ ಒಟ್ಟು ಮೂರು ಭೂಸುಧಾರಣ ಮಸೂದೆಗಳು ಬಂದು ಹೊದವು. ಅವು ಇನಾಂ ರದ್ಧತಿ ಮಸೂದೆ, ೧೯೬೧ರ ಭೂಸುಧಾರಣ ಮಸೂದೆ ಮತ್ತು ೧೯೭೪ರ ಭೂಸುಧಾರಣ ಮಸೂದೆಗಳು. ಈ ಮಸೂದೆಗಳು ಮತ್ತು ಅವುಗಳ ಕುಂದುಕೊರತೆಗಳನ್ನು ಎರಡನೇ ಅಧ್ಯಾಯದಲ್ಲಿ ಪರಿಚಯಿಸಿದ್ದೇನೆ. ೧೯೬೧ ಮಸೂದೆಯಲ್ಲಿಯೇ ಸಾಕಷ್ಟು ನ್ಯೂನತೆಗಳಿದ್ದವು. ಈ ಮಸೂದೆ ಎಷ್ಟೇ ಪರಿಣಾಮಕಾರಿಯಾಗಿ ಜಾರಿಗೊಳಿಸಿದರು ಮಸೂದೆಯಲ್ಲಿ ಅಂತರ್ಗತವಾಗಿದ್ದ ಕುಂದುಕೊರತೆಗಳಿಂದಾಗಿ ಅದು ಗೇಣಿದಾರರ ಪರ ಕೆಲಸ ಮಾಡುವಂತಿರಲಿಲ್ಲ. ಆದರೆ ೧೯೭೪ರ ಮಸೂದೆ ಆ ರೀತಿ ಇರಲಿಲ್ಲ. ೧೯೬೧ರ ಮಸೂದೆಯ ಎಲ್ಲಾ ಕುಂದು ಕೊರತೆಗಳನ್ನು ಪರಿಹರಿಸಿಕೊಂಡು ೧೯೭೪ರ ಮಸೂದೆ ರೂಪುಗೊಂಡಿದೆ. ಈ ಎರಡೂ ಮಸೂದೆಗಳು ಜಾರಿಗೊಂಡಾಗ ಗೇಣಿದಾರರು ಮತ್ತು ಭೂಮಾಲಿಕರ ಸಂಬಂಧಗಳಲ್ಲಿ ಆದ ಬದಲಾವಣೆಗಳನ್ನು ಮೂರನೇ ಅಧ್ಯಾಯದಲ್ಲಿ ವಿವರಿಸಿದ್ದೇನೆ. ೧೯೬೧ರ ಮಸೂದೆಯಿಂದ ದೊಡ್ಡ ಕ್ರಾಂತಿಯಾಗಲು ಸಾಧ್ಯವಿಲ್ಲ ಎನ್ನುವುದು ಮಸೂದೆಯಲ್ಲಿ ಅಡಕವಾಗಿದ್ದ ನ್ಯೂನತೆಗಳಿಂದಲೇ ಸ್ಪಷ್ಟವಾಗಿದೆ. ಆದರೆ ೧೯೭೪ರ ಭೂಸುಧಾರಣೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿತ್ತು. ಅಷ್ಟುಮಾತ್ರವಲ್ಲ ಬಹುತೇಕರ ನಿರೀಕ್ಷೆಗಳನ್ನು ೧೯೭೪ರ ಮಸೂದೆ ಹುಸಿಗೊಳಿಸಿಲ್ಲ ಎನ್ನುವ ಚಿತ್ರಣ ಕೂಡ ಇತ್ತು. ಈ ಚಿತ್ರಣ ಎಷ್ಟು ಸರಿ ಎನ್ನುವ ಚರ್ಚೆಯನ್ನು ಅಧ್ಯಾಯ ಮೂರಲ್ಲಿ ನೋಡಬಹುದು.

ಕರ್ನಾಟಕದಲ್ಲಿ ಎರಡು ಸಮುದಾಯಗಳು (ಲಿಂಗಾಯತರು ಮತ್ತು ಒಕ್ಕಲಿಗರು) ಏಕೀಕರಣ ಸಂದರ್ಭದಿಂದಲೂ ದೊಡ್ಡ ಪ್ರಮಾಣದ ಭೂಮಿಯನ್ನು ಹೊಂದಿದ್ದವು ಎಂದು ವಾದಿಸಲಾಗುತ್ತಿದೆ. ಭೂ ಸಂಬಂಧದ ಮತ್ತೊಂದು ತುದಿಯಲ್ಲಿ ದಲಿತರು ಮತ್ತು ಬುಡಕಟ್ಟು ಜನರನ್ನು ಗುರುತಿಸಲಾಗುತ್ತಿದೆ. ಇವರುಗಳಲ್ಲಿ ಬಹುತೇಕರು ಭೂರಹಿತ ಕೃಷಿ ಕಾರ್ಮಿಕರು. ಈ ಎರಡು ತುದಿಗಳ ನಡುವೆ ಬಹುತೇಕ ಹಿಂದುಳಿದ ಜಾತಿಗಳು – ಕುರುಬರು, ಈಡಿಗರು, ಗಾಣಿಗರು. ಉಪ್ಪಾರರು, ಕಮ್ಮರರು, ಕುಂಬಾರರು, ಮುಸ್ಲಿಮರು ಮುಂತಾದವರು ಬರುತ್ತಾರೆ. ಇವರುಗಳಲ್ಲಿ ಬಹುತೇಕರು ಗೇಣಿದಾರರು ಜಾತಿಗಳು ಮತ್ತು ಅವುಗಳ ನಡುವಿನ ಈ ಬಗೆಯ ಭೂಮಿ ಸಂಬಂಧಗಳನ್ನು ಕೇವಲ ವಾದ ಪ್ರತಿಪಾದನೆಯ ಪೂರ್ವ ತೀರ್ಮಾನದ ರೂಪದಲ್ಲಿ ನೋಡಲು ಸಾಧ್ಯವಿಲ್ಲ. ಅಂದರೆ ಜಾತಿಗಳು ಮತ್ತು ಅವುಗಳ ನಡುವಿನ ಭೂಮಿ ಸಂಬಂಧಗಳನ್ನು ಈಬಗೆಯಲ್ಲಿ ಅಚ್ಚುಕಟ್ಟಾಗಿ ವಿಂಗಡಿಸಲು ಸಾಧ್ಯವಿಲ್ಲ. ಇನ್ನೂ ಹೆಚ್ಚು ಸ್ಪಷ್ಟಪಡಿಸುವುದಾದರೆ ಎಲ್ಲಾ ಲಿಂಗಾಯತರು ಮತ್ತು ಒಕ್ಕಲಿಗರು ಭೂಮಾಲಿಕರು, ಅದೇ ರೀತಿಯಲ್ಲಿ ಎಲ್ಲಾ ದಲಿತರು ಮತ್ತು ಬುಡಕಟ್ಟು, ಜನರು ಕೃಷಿ ಕಾರ್ಮಿಕರು ಮತ್ತು ಹಿಂದುಳಿದ ಜಾತಿ ಜನರು ಗೇಣಿದಾರರು ಎನ್ನುವ ಪರಿಪೂರ್ಣ ವಿಂಗಡನೆ ಸಾಧ್ಯವಿಲ್ಲ. ಲಿಂಗಾಯತರು ಮತ್ತು ಒಕ್ಕಲಿಗರಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಭೂರಹಿತರು ಗೇಣಿದಾರರು ಮತ್ತು ಕೃಷಿ ಕಾರ್ಮಿಕರಿರಬಹುದು. ಅದೇ ರೀತಿಯಲ್ಲಿ ಹಿಂದುಳಿದ ಜಾತಿಗಳಲ್ಲೂ ಕೆಲವು ಭೂಮಾಲಿಕರಿರಬಹುದು. ಜಾತಿ ಮತ್ತು ಭೂಸಂಬಂಧದ ಬಗ್ಗೆ ನೀಟಾಗಿ ಗೆರೆ ಎಳೆದು ಇದು ಭೂಮಾಲಿಕ ಜಾತಿ ಇದು ಭೂರಹಿತ ಜಾತಿ ಎಂದು ವಿಂಗಡಿಸುವುದು ಕಷ್ಟವಾಗಬಹದು. ಆದಾಗ್ಯೂ ಭೂರಹಿತರಲ್ಲಿ ಮತ್ತು ಭೂಮಾಲಿಕರಲ್ಲಿ ಬಹುತೇಕರು ಯಾರಿದ್ದಾರೆಂದು ಗುರುತಿಸಲು ನಾಲ್ಕನೆ ಅಧ್ಯಾಯದಲ್ಲಿ ಪ್ರಯತ್ನಿಸಿದ್ದೇನೆ.

ಭೂರಹಿತರಲ್ಲಿ ಬಹುತೇಕರು ದಲಿತರು ಮತ್ತು ಭೂಮಾಲಿಕರಲ್ಲಿ ಬಹುತೇಕರು ಬಲಾಢ್ಯ ಸಮುದಾಯದವರೇ ಇದ್ದಾರೆ. ಹೀಗೆ ಏಕೀಕೃತ ಕರ್ನಾಟಕದಲ್ಲಿ ಬಂದು ಹೋದ ಮೂರು ಭೂಸುಧಾರಣ ಮಸೂದೆಗಳು ಏಕೀಕರಣ ಸಂದರ್ಭದಲ್ಲಿದ್ದ ಭೂಮಿ ಸಂಬಂಧವನ್ನು ಮೂಲಭೂತವಾಗಿ ಪರಿವರ್ತಿಸಲು ವಿಫಲವಾಗಿವೆ. ೧೯೬೧ರ ಭೂಸುಧಾರಣ ಮಸೂದೆಯ ವಿಫಲತೆಯನ್ನು ವಿವರಿಸುವುದು ದೊಡ್ಡ ಸಮಸ್ಯೆಯಲ್ಲ. ಯಾಕೆಂದರೆ ಆ ಮಸೂದೆಯ ಹುಟ್ಟಿನಲ್ಲೇ ಸಾಕಷ್ಟು ದೋಷಗಳಿದ್ದವು. ಅದು ಭೂಸಂಬಂಧವನ್ನು ದೊಡ್ಡ ಮಟ್ಟಿನಲ್ಲಿ ಬದಲಾವಣೆ ಮಾಡುವ ನಿರೀಕ್ಷೆ ಗಳಿರಲಿಲ್ಲ. ಆದರೆ ೨೯೭೪ರ ಭೂಸುಧಾರಣೆ ಕಾಯಿದೆ ಬಿಗಿಯಾಗಿತ್ತು ಮತ್ತು ಅಷ್ಟೇ ಅಚ್ಚುಕಟ್ಟಾಗಿ ಜಾರಿಗೆ ಬಂದಿದೆ ಎನ್ನು ಚಿತ್ರಣವಿತ್ತು. ಅಷ್ಟು ಮಾತ್ರವಲ್ಲ ೧೯೭೪ರ ಕಾಯಿದೆಯ ಅನುಷ್ಠಾನದ ಬಗ್ಗೆ ಸಾಕಷ್ಟು ಅಧ್ಯನಗಳು ನಡೆದಿವೆ. ಈ ಅಧ್ಯಯನಗಳಲ್ಲಿ ಬಹುತೇಕ ಅಧ್ಯಯನಗಳು ೧೯೭೪ರ ಕಾಯಿದೆ ಕರ್ನಾಟಕದ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆ ಎನ್ನು ತೀರ್ಮಾನವನ್ನು ಕೊಡುತ್ತಿವೆ. ಜತೆಗೆ ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಅಲ್ಲವಾದರೂ ರಾಜ್ಯದ ಕೆಲವು ಕಡೆ ೧೯೭೪ರ ಕಾಯಿದೆ ಭೂಮಿ ಸಂಬಂಧವನ್ನು ಅಮೂಲಾಗ್ರವಾಗಿ ಬದಲಾಯಿಸಿದೆ ಎನ್ನುವ ವಾದವನ್ನು ಮಂಡಿಸುತ್ತಿವೆ. ಈ ಎರಡೂ ತೀರ್ಮಾನಗಳನ್ನು ಪ್ರಶ್ನಿಸುವ ಕೆಲಸವನ್ನು ಐದನೇ ಅಧ್ಯಾಯದಲ್ಲಿ ಮಾಡಿದ್ದೇನೆ. ೧೯೬೧ರ ಕಾಯಿದೆಗೆ ಹೋಲಿಸಿದರೆ ೧೯೭೪ರ ಭೂಸುಧಾರಣ ಕಾಯಿದೆ ಉತ್ತಮ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಆದರೆ ೧೯೭೪ರ ಕಾಯಿದೆಯ ಅನುಷ್ಠಾನದಿಂದ ಕರ್ನಾಟಕದ ಭೂಸಂಬಂಧಗಳು ಸಂಪೂರ್ಣವಾಗಿ ಬದಲಾಗಿದೆ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ. ೧೯೭೪ರ ಕಾಯಿದೆ ಕೂಡ ಭೂರಹಿತರಿಗೆ ಭೂಮಿ ಕೊಡಿಸಲು ವಿಫಲವಾಗಿದೆ. ಯಾಕೆ ಹೀಗಾಯಿತು ಎನ್ನುವುದನ್ನು  ಇದೇ ಅಧ್ಯಾಯದಲ್ಲಿ ವಿಶ್ಲೇಷಿಸಿದ್ದೇನೆ. ಈ ಎಲ್ಲದರ ಹಿನ್ನೆಲೆಯಲ್ಲಿ ಮತ್ತೊಂದು ಭೂಸುಧಾರಣೆಯ ಅನಿವಾರ್ಯತೆ ಇದೆಯೆಂದು ಕೊನೆಯ ಅಧ್ಯಾಯದಲ್ಲಿ ವಾದಿಸಿದ್ದೇನೆ.