ಕರ್ನಾಟಕದ ಆಧುನಿಕ ‘ಚರಿತ್ರೆಯಲ್ಲಿ ಕರ್ನಾಟಕ ಏಕೀಕರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ – ಕನ್ನಡಿಗ – ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ಕನ್ನಡ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಿಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿವೆ. ಕರ್ನಾಟಕತ್ವದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ : ದೇಸಿ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಇದು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲಾ ವಯಲಯಗಳಲ್ಲಿ ಕನ್ನಡದ ಅನುಷಾವಿನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವು ಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್‌ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತವಾಗದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಈ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಈ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲಿಕ್ಕೆ ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾಧ್ಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸುಯುತ್ತಿರುವ ನಮ್ಮ ಬೇರುಗಳನ್ನು ವೈದ್ಯ ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾನವೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕಾದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕಾರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ಈ ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ : ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ.

ಭೂಸುಧಾರಣೆ ಕಳೆದ ಶತಮಾನದ ಎಪ್ಪತ್ತು ಎಂಬತ್ತರ ದಶಕದಲ್ಲಿ ಎಲ್ಲಾರ ಗಮನ ಸೆಳೆದ ಸಮಸ್ಯೆ ಹಲವು ಕಾಯಿದೆಗಳ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಲಾಗಿದೆ. ೧೯೬೧ರ ಸುಧಾರಣ ಮಸೂದೆ ಸಾಕಷ್ಟು ಸಾಧಿಸಿದೆ ಎನ್ನುವ ಚಿತ್ರಣ ಇದೆ. ಈ ಚಿತ್ರಣ ಎಷ್ಟು ಸೀಮಿತ ಮತ್ತು ಏಕೀಕರಣದ ಸಂದರ್ಭದ ಭೂಸಂಬಂಧಗಳು ವಿಶೇಷ ಬದಲಾಗಿಲ್ಲ ಎನ್ನುವ ವಾದವನ್ನು ಪುಸ್ತಕ ಮಂಡಿಸುತ್ತಿದೆ. ಭೂ ಸುಧಾರಣೆ ಮುಗಿದು ಹೋದ ಕತೆ. ಈಗ ಈ ಕುರಿತು ಆಲೋಚಿಸುವುದು ಅಥವಾ ಚರ್ಚಿಸುವುದು ಅನಗತ್ಯ ಎನ್ನುವ ನಿಲುವನ್ನು ಪುಸ್ತಕ ಪ್ರಶ್ನಿಸುತ್ತಿದೆ. ಇಂದು ಕೂಡ ಕುಟುಂಬವೊಂದರ ಬದುಕನ್ನು ಸಕರಾತ್ಮಕವಾಗಿ ಪರಿವರ್ತಿಸುವ ಸಾಧನವೊಂದಿದ್ದರೆ ಅದು ಭೂಮಿ ಮಾತ್ರ ಎನ್ನುವುದು ಈ ಪುಸ್ತಕದ ನಿಲುವು. ಇಂದು ಎಲ್ಲಾ ಕ್ಷೇತ್ರಗಳಲ್ಲಿ (ರಾಜಕೀಯ, ಆರ್ಥಿಕ ಇತ್ಯಾದಿ) ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳ ಹಿಂದೆ ಭೂಮಿಯ ಪಾತ್ರ ಇದೆ. ರಾಜ್ಯದ ನಾಲ್ಕನೇ ಒಂದರಷ್ಟು ಕುಟುಂಬಗಳ ಸ್ವಾಧೀನ ರಾಜ್ಯದ ಕೃಷಿ ಭೂಮಿಯ ಮೂರನೇ ಎರಡರಷ್ಟು ಭೂಮಿ ಇರುವುದು ಮತ್ತು ರಾಜ್ಯದ ಅರ್ಧದಷ್ಟು ಕುಟುಂಬಗಳ ಸ್ವಾಧೀನ ಹತ್ತನೇ ಒಂದರಷ್ಟು ಭೂಮಿ ಇರುವುದು ನಮ್ಮ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿದೆ. ಬಡತನ, ವಲಸೆ, ನಿರುದ್ಯೋಗ, ಕೊಳೆಗೇರಿ ಇತ್ಯಾದಿಗಳು ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಮೂರು ಹೊತ್ತಿನ ಊಟವನ್ನು ಗಳಿಸುವಷ್ಟು ಭೂಮಿ ಇಲ್ಲದಿರುವುದರ ಫಲ ಇದನ್ನೇ ಇನ್ನೊಂದು ವಿಧದಲ್ಲಿ ಹೇಳುವುದಾದರೆ ದುಡಿದು ತಿನ್ನುವವರಲ್ಲಿ ಭೂಮಿ ಇಲ್ಲ ಭೂಮಿ ಇದ್ದವರು (ಭೂಮಿಯಲ್ಲಿ) ದುಡಿದು ತಿನ್ನುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳಿಗೆ ದೂರಗಾಮಿ ಪರಿಹಾರ ಬೇಕಾದರೆ ಮತ್ತೊಂದು ಭೂ ಸುಧಾರಣೆ ಅನಿವಾರ್ಯ ಎನ್ನುವುದು ಪುಸ್ತಕದ ತೀರ್ಮಾನ. ಇದೇ ಸಂದರ್ಭದಲ್ಲಿ ಹಿಡುವಳಿಯ ಗಾತ್ರ ಅಥವಾ ಉತ್ಪಾದತೆಯ ನೆಪ ಒಡ್ಡಿ ಮತ್ತೊಂದು ಭೂ ಸುಧಾರಣೆಯನ್ನು ನಿರಾಕರಿಸುವುದು ಸರಿಯಲ್ಲ ಎನ್ನುವುದು ಲೇಕಕರ ವಾದ. ಏಕೆಂದರೆ ಲೇಖಕರ ಪ್ರಕಾರ ಉತ್ಪಾದಕತೆ ಕಡಿಮೆಯಾಗಿದ್ದರೆ ಅಥವಾ ಮಾರುಕಟ್ಟೆಯಲ್ಲಿ ವ್ಯವಹರಿಸಲು ಅವರಿಗೆ ಸಮಸ್ಯೆಯಾಗಿದ್ದರೆ ಅದು ಹಿಡುವಳಿಯ ಗಾತ್ರದ ಕಾರಣಕ್ಕಾಗಿ ಅಲ್ಲ; ಮೂಲಸೌಕರ್ಯಗಳ ಕೊರತೆಯಿಂದ. ಮೂಲಸೌಕರ್ಯಗಳನ್ನು ಕನಿಷ್ಠ ಪ್ರಮಾಣದಲ್ಲಿ ಸರಕಾರ ಪೂರೈಕೆ ಮಾಡಿದರೆ ರೈತರು ತಮ್ಮ ಸ್ವಾಧೀನ ಇರುವ ಅಲ್ಪಸ್ವಲ್ಪ ಹಿಡುವಳಿಯಲ್ಲಿ ತಮ್ಮ ಜೀವನಾಂಶಕ್ಕೆ ಬೇಕಾಗುವಷ್ಟು ಬೆಳೆಯ ಬಲ್ಲರು ಮತ್ತು ಮಾರುಕಟ್ಟೆಯಲ್ಲಿ ವ್ಯವರಿಸಬಲ್ಲರು ಎನ್ನುವುದು ಲೇಖಕರ ಬಲವಾದ ನಂಬಿಕೆ. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಬಿ.ಸುಜ್ಞಾನ ಮೂರ್ತಿ ಅವರಿಗೆ ಆಭಾರಿಯಾಗಿದ್ದೇನೆ.

ಡಾ. . ಮುರಿಗೆಪ್ಪ
ಕುಲಪತಿ