ಉತ್ಪಾದನೆ ಮತ್ತು ಅನುಭೋಗ ಎರಡರಲ್ಲೂ ಕರ್ನಾಟಕದ ಗ್ರಾಮೀಣ ಪ್ರದೇಶದ ಜನರು ತಮ್ಮದೇ ರಾಜ್ಯದ ನಗರ ಪ್ರದೇಶದ ಜನರಿಗಿಂತ ಗಾವುದ ದೂರ ಇದ್ದಾರೆ. ಕರ್ನಾಟಕದ ಗ್ರಾಮೀಣ ಮತ್ತು ನಗರ ನಡುವೆ ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರ ಈ ಕ್ರಮದ ವ್ಯತ್ಯಾಸ ಇರುವುದಲ್ಲ; ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲೂ ಇದೇ ಕ್ರಮದ ವ್ಯತ್ಯಾಸ ಇದೆ. ಆರೋಗ್ಯದ ಬಹುತೇಕ ಸೂಚ್ಯಾಂಕಗಳ ಪ್ರಕಾರ ಕರ್ನಾಟಕದ ಗ್ರಾಮೀಣ ಜನರು ತಮ್ಮದೇ ರಾಜ್ಯದ ನಗರ ಪ್ರದೇಶದ ಜನರಷ್ಟು ಅದೃಷ್ಟಶಾಲಿಗಳಿಲ್ಲ. ಶೇಕಡಾ ೬೦ ರಿಂದ ೬೫ ಜನ ವಾಸವಿರುವ ಗ್ರಾಮೀಣ ಪ್ರದೇಶದಲ್ಲಿ ಕೇವಲ ಶೇಕಡಾ ೨೫ರಷ್ಟು ವೈದ್ಯರು ಸೇವೆ ಸಲ್ಲಿಸಿದರೆ ಶೇಕಡಾ ೩೫ರಷ್ಟು ಜನಸಂಖ್ಯೆ ಇರುವ ಪೇಟೆ ಪಟ್ಟಣಗಳಲ್ಲಿ ಸೇವೆ ಸಲ್ಲಿಸಲು ಶೇಕಡಾ ೭೫ ರಷ್ಟು ವೈದ್ಯರು ತುದಿಗಾಲಲ್ಲಿ ನಿಂತಿದ್ದಾರೆ.[1] ಈ ರೀತಿಯ ವೈದ್ಯಕೀಯ ನೆರವಿನ ಅಂತರ ಜನರ ಆರೋಗ್ಯ ಸ್ಥಿತಿಯನ್ನು ಪ್ರಭಾವಿಸುತ್ತದೆ. ಉದಾಹರಣೆಗೆ ಕರ್ನಾಟಕ ಗ್ರಾಮೀಣ ಪ್ರದೇಶದಲ್ಲಿ ಹುಟ್ಟುವ ಪ್ರತಿ ಸಾವಿರ ಮಕ್ಕಳಲ್ಲಿ ೭೦ ಮಕ್ಕಳು ಮರಣ ಹೊಂದಿದರೆ ನಗರ ಪ್ರದೇಶದಲ್ಲಿ ಈ ರೀತಿ ಮರಣ ಹೊಂದುವ ಮಕ್ಕಳ ಸಂಖ್ಯೆ೨೫.[2] ಆದುದರಿಂದ ನಮ್ಮ ಜನರ ಅಭಿವೃದ್ಧಿ ಅಥವಾ ಉತ್ತಮ ಬದುಕು ಅಡಗಿರುವುದು ಕೈಗಾರಿಕೆ ಹಾಗೂ ಸೇವಾ ವಲಯಗಳ ಬೆಳವಣಿಗೆಯಲ್ಲೆಂದು ರಾಜಕೀಯ ಪಕ್ಷಗಳು, ಸಂಶೋಧಕರು, ಅಧ್ಯಯನಗಳು ವಾದಿಸುತ್ತವೆ. ಅದಕ್ಕನುಸಾರ ನಮ್ಮಲ್ಲಿ ಇಂದು ಅಭಿವೃದ್ಧಿಯೆಂದರೆ ನಗರೀಕರಣ, ಕೈಗಾರಿಕೆ ಹಾಗೂ ಸೇವಾ ವಲಯಗಳ ಬೆಳವಣಿಗೆ ಎಂದಾಗಿದೆ. ಹಾಗೆಂದ ಕೂಡಲೇ ಕೃಷಿಗೆ ಮಹತ್ವ ಇಲ್ಲವೆ ಇಲ್ಲ ಎಂದಲ್ಲ. ಅವುಗಳು ಕೂಡ ಉದ್ದಿಮೆಗಳ ರೂಪದಲ್ಲಿ ಕಾರ್ಯನಿರ್ವಹಿಸುವುದಾರೆ ಅವುಗಳಿಗೆ ಬೆಂಬಲ ಇದೆ. ಅದು ಬಿಟ್ಟು ಅವುಗಳು ಮೂರು ಹೊತ್ತಿನ ಊಟಗಳಿಸುವ ಒಂದು ಅಲ್ಪ ಸಾಧನವಾಗುವುದಾದರೆ ಅವುಗಳಿಗೆ ವಿಶೇಷ ಬೆಂಬಲ ಇಲ್ಲ ಎಂದು ಅಧಿಕಾರ ರೂಢರು ನೇರ ಹೇಳುತ್ತಿಲ್ಲ. ಆದರೆ ವಿವಿಧ ಕಾರ್ಯಕ್ರಮಗಳ ಮೂಲಕ ಮಾಡಿ ತೋರಿಸುತ್ತಿದ್ದಾರೆ. ಈ ಎಲ್ಲಾ ವಾದಗಳು ಹಾಗೂ ಅಂಕಿಅಂಶಗಳು ಭೂಸುಧಾರಣೆ ಬಗ್ಗೆ ಮಾತಾಡುವುದೇ ಅಸಂಭದ್ಧ ಎನ್ನುವ ವಾತಾವರಣ ಸೃಷ್ಟಿಸಿವೆ.

ಮೇಲಿನ ವಾದವನ್ನು ಅಲ್ಲಗೆಳೆಯುವುದು ಅಷ್ಟು ಸರಳವಲ್ಲ. ಮೇಲ್ನೋಟಕ್ಕೆ ಆ ವಾದಗಳಲ್ಲಿ ಶಕ್ತಿ ಇದೆ ಎಂದೆ ಕಾಣುತ್ತದೆ. ಆದರೆ ಅವುಗಳನ್ನು ವಿಮರ್ಶೆಗೆ ಒಡ್ಡಿದರೆ ಅವುಗಳ ಒಳಗಿನ ಟೊಳ್ಳುತನ ಬೆಳಕಿಗೆ ಬರುತ್ತದೆ. ಮೊದಲಿಗೆ ಬೆಳೆದು ನಿಂತಿರುವ ಇದೇ ಕೈಗಾರಿಕೆ ಹಾಗೂ ಸೇವಾವಲಯಗಳು ಎಷ್ಟು ಜನರಿಗೆ ಊಟ ಕೊಡುತ್ತಿವೆ ಎಂದು ನೋಡುವ. ಅವುಗಳು ಜನಸಾಮಾನ್ಯರಿಗೆ ಸೃಷ್ಟಿಸಿರುವ ಉದ್ಯೋಗಗಳು ಎಂತವು ಎನ್ನುವುದನ್ನು  ನಂತರ ಪರಿಶೀಲಿಸುವ. ಇವತ್ತು ಕೂಡ ರಾಜ್ಯದ ಶೇ. ೬೪ ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸಮಾಡುತ್ತಿದ್ದಾರೆ. ಶೇ. ೩೬ ರಷ್ಟು ಜನರು ಪೇಟೆ ಪಟ್ಟಣಗಳಲ್ಲಿ(?) ವಾಸ ಮಾಡುತ್ತಿದ್ದಾರೆ. ಈ ಎರಡು ಅಂಕಿಅಂಶಗಳನ್ನು ವಿಮರ್ಶೆಮಾಡದೆ ಅವುಗಳ ಮುಖಬೆಲೆಯಲ್ಲಿ ತೆಗೆದುಕೊಂಡರು ಕೈಗಾರಿಕೆ ಮತ್ತು ಸೇವಾವಲಯಗಳು ನೇರವಾಗಿ ಉದ್ಯೋಗ ಒದಗಿಸುತ್ತಿರುವುದು ಕೇವಲ ಮೂರನೇ ಒಂದರಷ್ಟು ಜನರಿಗೆ. ಇವತ್ತು ಕೂಡ ರಾಜ್ಯದ ಮೂರನೇ ಎರಡರಷ್ಟು ಜನರು ತಮ್ಮ ಮೂರು ಹೊತ್ತಿನ ಊಟಕ್ಕೆ ಕೃಷಿಯನ್ನು ನಂಬಬೇಕಾಗಿದೆ. ಹಲವಾರು ಕಾರಣಗಳಿಂದ ಕೃಷಿ ಕ್ಷೇತ್ರದ ಉತ್ಪಾದನೆ ಕಡಿಮೆ ಇದೆ. ಕೃಷಿ ಇಂದು ರಾಜ್ಯದ ಒಟ್ಟು ಉತ್ಪನ್ನದ ಶೇ.೨೦ ರಷ್ಟು ಮಾತ್ರ ಉತ್ಪಾದಿಸುತ್ತಿದೆ.[3] ಇಂತಹ ಕಡಿಮೆ ಉತ್ಪಾದನೆ ಕೃಷಿಯಲ್ಲಿ ತೊಡಗಿಸಿಕೊಂಡವರ ಆದಾಯವನ್ನು ಕುಂಠಿತಗೊಳಿಸುತ್ತಿದೆ. ಇನ್ನು ಶೇ. ೩೬ ರಷ್ಟು ಪೇಟೆ ಪಟ್ಟಣ ಎನ್ನುವ ಅಂಕಿಅಂಶವನ್ನು ಪರೀಕ್ಷಿಸಿದರೆ ಅದರಲ್ಲಿ ಒಂದನೇ ವರ್ಗದ ಸಿಟಿಯಿಂದ (ಬೆಂಗಳೂರು, ಮೈಸೂರು, ಮಂಗಳೂರು ಮುಂತಾದ ದೊಡ್ಡ ನಗರಗಳು) ಆರಂಭಗೊಂಡು ಐದನೇ ವರ್ಗದ ಪಟ್ಟಣ ಪಂಚಾಯತಿಗಳು ಸೇರುತ್ತವೆ.[4] ಒಂದು ಮತ್ತು ಎರಡನೇ ವರ್ಗದ ಸಿಟಿಗಳನ್ನು ನಾವು ಆರ್ಬನ್ ಎಂದು ಭಾವಿಸಿಕೊಂಡರೆ ನಮ್ಮಲ್ಲಿ ಇಂದು ಕೂಡ ಶೇ. ೮೦ರಷ್ಟು ಜನರು ಗ್ರಾಮೀಣ ಜನರೇ. ಯಾಕೆಂದರೆ ಮೂರು, ನಾಲ್ಕು ಮತ್ತು ಐದನೇ ವರ್ಗದ ಸಿಟಿಗಳಲ್ಲಿ ಬಹುತೇಕವು ತಾಲ್ಲೂಕು ಕೆಂದ್ರಗಳು ಹಾಗೂ ಪಟ್ಟಣ ಪಂಚಾಯಿತಿಗಳು. ಇವುಗಳಲ್ಲಿ ದೊರೆಯುವ ಕೃಷಿಯೇತರ ಉದ್ಯೋಗವೆಂದರೆ ಸಣ್ಣಪುಟ್ಟ ಕಟ್ಟಡದ ಕೆಲಸಗಳು, ಹೊಟೇಲು, ಗ್ಯಾರೇಜ್, ಸಣ್ಣಪುಟ್ಟ ಅಂಗಡಿಗಳು ಮುಂತಾದವುಗಳು ಕೃಷಿಯೇತರ ಉದ್ಯೋಗ ಕೊಡುವ ತಾಣಗಳು. ಇವುಗಳನ್ನು ಹೊರತುಪಡಿಸಿದರೆ ಇಲ್ಲಿ ದೊಡ್ಡ ಕೈಗಾರಿಕೆಗಳು ಅಥವಾ ಸೇವಾ ವಲಯದ ದೊಡ್ಡ ಉದ್ದಿಮೆಗಳಿಲ್ಲ. ಇವುಗಳು ಕೊಡುವ ಮೂರು ಕಾಸಿಗೆ ಯಾವುದೇ ಉದ್ಯೋಗದ ಅವಕಾಶಗಳಿಲ್ಲದವರು, ಭೂಮಿ ಇಲ್ಲದವರು ಮಾತ್ರ ದುಡಿಯಬಹುದು.

ಸೇವಾ ವಲಯ ಹಾಗೂ ಕೈಗಾರಿಕೆಗಳು ಸೃಷ್ಟಿಸುವ ಉದ್ಯೋಗದ ಗುಣಮಟ್ಟವಂತು ಊಹಿಸಲು ಅಸಾಧ್ಯ ಇವುಗಳು ನೀಡುವ ಬಹುಪಾಲು (ಶೇ.೯೦ ರಷ್ಟು) ಉದ್ಯೋಗಗಳು ಅಸಂಘಟಿತ ಉದ್ಯೋಗಗಳು. ಅಂದರೆ ಸರಕಾರಿ ನಿಯಮಾನುಸಾರ ಕೊಡಬೇಕಾಗಿರುವ ಸಂಬಳ, ರಜೆ, ಶಿಕ್ಷಣ, ಆರೋಗ್ಯ ವಸತಿ ಇತ್ಯಾದಿ ಯಾವ ಸವಲತ್ತುಗಳಿಲ್ಲದ ಉದ್ಯೋಗಗಳು.[5] ಉದ್ದಿಮೆದಾರರು ವ್ಯಪಾರ ಹೆಚ್ಚಿರುವಾಗ ನೇಮಕ ಮಾಡಿಕೊಂಡು ವ್ಯಾಪಾರ ಕಡಿಮೆ ಇರುವ ಸಂದರ್ಭದಲ್ಲಿ ಮನೆಗೆ ಕಳುಹಿಸುವ ಉದ್ಯೋಗಗಳು ಇವು. ಕೆಲಸದ ಸಂದರ್ಭದಲ್ಲಿ ಒಂದುವೇಳೆ ಅಪಘಾತವಾಗಿ ಕೆಲಸಗಾರರು ಕೈಕಾಲು ಕಳೆದುಕೊಂಡರೆ ಮಾಲಿಕರು ನೋಡಿಕೊಳ್ಳುವುದಿಲ್ಲ; ಸಣ್ಣಪುಟ್ಟ ಆಸ್ಪತ್ರೆ ಳನ್ನುಖರ್ಚುಗಳನ್ನು ಭರಿಸಿ ಮಾಲಿಕರು ತಮ್ಮ ಜವಾಬ್ದಾರಿ ಕಳಚಿಕೊಳ್ಳುತ್ತಾರೆ. ಕೆಲಸಗಾರರು ಗುಣಮುಖವಾಗುವವರೆಗೆ ಅವರ ಮನೆಯವರೇ ನೋಡಿಕೊಳ್ಳಬೇಕು. ಒಂದು ವೇಳೆ ಕೆಲಸಗಾರರು ದುಡಿಯುವ ಸಾಮರ್ಥ್ಯವನ್ನೇ ಕಳೆದುಕೊಂಡರೆ ಜೀವನ ಪರ್ಯಂತ ಕುಟುಂಬದವರೇ ನೋಡಿಕೊಳ್ಳಬೇಕು. ಇವನ್ನೆಲ್ಲ ಹೇಳಿದ ಕೂಡಲೇ ಅವರಿಗೆ ಇನ್ಯೂರೆನ್ಸ್ ಇದೆ, ಈ ಸವಲತ್ತಿದೆ, ಆ ಸವಲತ್ತಿದೆಯೆಂದು ಕಾರ್ಯಕ್ರಮಗಳ ದೊಡ್ಡ ಪಟ್ಟಿಯನ್ನು ನಿಡುವ ಅಭಿವೃದ್ಧಿ ಸಿದ್ದಾಂತಿಗಳಿದ್ದಾರೆ. ಆದರೆ ಈ ಎಲ್ಲಾ ಸವಲತ್ತುಗಳು ಎಷ್ಟು ಅಸಂಘಟಿತ ವಲಯದ ಕಾರ್ಮಿಕರನ್ನು ತಲುಪಿದೆ ಎಂದು ನೋಡಿದರೆ ದೊಡ್ಡ ಸಾಧನೆ ಕಾಣುವುದಿಲ್ಲ. ಅಂಗಡಿಗಳು, ಹೋಟೇಲ್‌ಗಳು, ಟೆಲಿಪೋನ್‌ಬೂತ್‌ಗಳು, ಗ್ಯಾರೇಜ್‌ಗಳು, ಎಲ್ಲಾ ವಾಹನಗಳ ಚಾಲಕರು, ಕಂಡಕ್ಟರ್‌ಗಳು, ಕ್ಲೀನರ್‌ಗಳು, ಆಯಾಗಳು, ಮನೆಕೆಲಸದವರು ಇವರೆಲ್ಲ ಸೇವಾ ವಲಯಗಳಲ್ಲಿ ದುಡಿಯುವವರು. ಇವರುಗಳಲ್ಲಿ ಬಹುತೇಕರ ತಿಂಗಳ ಸಂಬಳ ಎರಡರಿಂದ ಮೂರು ಸಾವಿರ ದಾಟಿದರೆ ಪುಣ್ಯ ಇವರುಗಳು ಬೆಳಿಗ್ಗೆ ಎಂಟು ಗಂಟೆಗೆ ಬಂದರೆ ಸಂಜೆ ಎಂಟು ಗಂಟೆ ತನಕ ದುಡಿಯಬೇಕು. ಎಂಟರಿಂದ ಹನ್ನೆರಡು ಗಂಟೆಗಳ ದಿನದ ದುಡಿತದ ನಡುವೆ ಒಂದು ಟೀ ಸಿಕ್ಕಿದರೆ ಇವರ ಪುಣ್ಯ ಶಾಲೆಗೆ ಹೋಗದವರು, ಪ್ರಾಥಮಿಕ ಅಥವಾ ಪ್ರೌಢಶಾಲೆ ಆಗಿ ಬಿಟ್ಟವರು ಇನ್ನು ಕೆಲವರು ಜನರಲ್ ಡಿಗ್ರಿ ಓದಿದವರು ಈ ಕ್ಷೇತ್ರದಲ್ಲಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ಕನಿಷ್ಠ ಕೂಲಿಗೆ ದುಡಿಯವ ಇವರ್ಯಾರು? ೨೦೦೧ರ ಸೆನ್ಸಸ್ ಪ್ರಕಾರ ಕರ್ನಾಟಕದಲ್ಲಿ ಸುಮಾರು ಒಂದು ಕೋಟಿ ನಾಲ್ಕು ಲಕ್ಷ ಕುಟುಂಬಗಳಿವೆ. ಭೂಮಿಯೇ ಇಲ್ಲದ ಸುಮಾರು ಮುವತ್ತನಾಲ್ಕು ಲಕ್ಷದ ಎಪ್ಪತ್ತೊಂದು ಸಾವಿರ ಕುಟುಂಬಗಳಿವೆ. ಅಂದರೆ ಶೇ.೩೩ ಕುಟುಂಬಗಳಿಗೆ ಭೂಮಿ ಇಲ್ಲ. ಭೂಮಿ ಇಲ್ಲದವರಲ್ಲಿ ಬಹುಪಾಲು ಜನರು ದಲಿತರು. ಬುಡಕಟ್ಟು. ಜನರು ಹಾಗೂ ಹಿಂದುಳಿದ ವರ್ಗದ ಜನರು. ಭೂಮಿ ಇವರು ಆರುವತ್ತೊಂಬತ್ತು ಲಕ್ಷ ಮೂವತ್ತು ಸಾವಿರ ಕುಟುಂಬಗಳಲ್ಲಿ ಶೇ. ೭೫ ಕುಟುಂಬಗಳು ಸಣ್ಣ ಮತ್ತು ಅತೀ ಸಣ್ಣ ಪ್ರಮಾಣದ ಭೂಮಿ ಹೊಂದಿದ್ದಾರೆ. ಶೇ. ೨೫ರಷ್ಟಿರುವ ಮಧ್ಯಮ ಮತ್ತು ಅರೆ ಮಧ್ಯಮ ಹಿಡುವಳಿದರರಲ್ಲಿ ಶೇ. ೫೩ ರಷ್ಟು ಭೂಮಿ ಇದೆ. ಇನ್ನುಳಿದ ಶೇ. ೧ ರಷ್ಟು ಕುಟುಂಬಗಳಲ್ಲಿ ಶೇ. ೯ರಷ್ಟು ಭೂಮಿ ಇದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ರಾಜ್ಯದ ಶೇ.೨೫ರಷ್ಟು ಹಿಡುವಳಿದಾರರಲ್ಲಿ ಶೇ.೬೩ರಷ್ಟು ಭೂಮಿ ಇದೆ.[6] ‌‌ಕೈಗಾರಿಕೆ ಹಾಗೂ ಸೇವಾವಲಯದ ಅಸಂಘಟಿತ ಕೂಲಿಯಾಗಿ ದುಡಿಯಲು ಯಾರು ಹೋಗಬಹುದೆನ್ನುವುದರ ಸಣ್ಣ ಸೂಚನೆಯನ್ನು ಈ ಅಂಕಿಅಂಶಗಳು ಕೊಡುತ್ತವೆ. ಪೇಟೆ ಪಟ್ಟಣಗಳ ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಲ್ಲಿ ಭೂಮಿ ಇಲ್ಲದವರು ಮತ್ತು ಸಣ್ಣ ಮತ್ತು ಅತೀ ಸಣ್ಣ ರೈತರ ಕುಟುಂಬದ ಜನರು ಹೆಚ್ಚಿರಲೇಬೇಕು. ನೀರಾವರಿ ಪ್ರದೇಶದ ಅರೆಮಧ್ಯ, ಮಧ್ಯಮ ಮತ್ತು ದೊಡ್ಡ ಕೃಷಿಕರು ಈ ಕಡೆ ಕಣ್ಣು ಹಾಯಿಸಿಯೂ ನೋಡಲಾರರು. ಯಾಕೆಂದರೆ ಅರೆ ಕೃಷಿಭೂಮಿಯಿಂದ ಈ ವಲಯಗಳು ನೀಡುವ ಕೂಲಿಗಿಂತ ಹೆಚ್ಚಿನ ಆದಾಯವನ್ನು ಬಹುತೇಕರು ಪಡೆಯಬಹುದು. ಇನ್ನು ನೀರಾವರಿ ಪ್ರದೇಶದ ಸಣ್ಣ ಮತ್ತು ಅತೀ ಸಣ್ಣ ರೈತರು ಕೃಷಿಕೆಲಸ ಇಲ್ಲದ ಸಂದರ್ಭದಲ್ಲಿ ಈ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದು. ಒಣಭೂಪ್ರದೇಶದ ಅರೆ ಮಧ್ಯಮ ಮತ್ತು ಮಧ್ಯಮ ರೈತರು ಕೂಡ ತಮ್ಮ ಕೃಷಿ ಮುಗಿಸಿ ದೂರದ ಪಟ್ಟಣಗಳಿಗೆ ವಲಸೆ ಹೋಗಿ ಕಟ್ಟೋಣ ಕೆಲಸಗಳಲ್ಲಿ ಅಥವಾ ಇತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಹೀಗೆ ಗ್ರಾಮೀಣ ಪ್ರದೇಶಗಳ ಭೂರಹಿತರು, ಸಣ್ಣ ಮತ್ತು ಅತೀ ಸಣ್ಣ ರೈತರು ಪೇಟೆ ಪಟ್ಟಣಗಳ ಅಸಂಘಟಿತ ವಲಯದಲ್ಲಿ ಹೆಚ್ಚಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಕೃಷಿಯೇತರ ಚಟುವಟಿಕೆಗಳ ಕೊರತೆಗಳು ಇವರನ್ನು ನಗರ ಪ್ರದೇಶಗಳ ಕನಿಷ್ಠ ಕೂಲಿ ಹಾಗೂ ಅಸಹನೀಯ ಬದುಕಿಗೆ ಒಡ್ಡಿಕೊಳ್ಳುವಂತೆ ಮಾಡಿವೆ.

ಹಾಗೆಂದು ಗ್ರಾಮೀಣ ಪ್ರದೇಶದಿಂದ ಪೇಟೆ ಪಟ್ಟಣಗಳಿಗೆ ವಲಸೆ ಹೋಗುವವರಿಗೆಲ್ಲ ಕನಿಷ್ಠ ಕೂಲಿ ಮತ್ತು ಅಸಹನೀಯ ಬದುಕೇ ಕಾದಿದೆ ಎನ್ನುವಂತಿಲ್ಲ ನಮ್ಮ ಪೇಟೆ ಪಟ್ಟಣಗಳು ಕೂಡ ಗ್ರಾಮೀಣ ಪ್ರದೇಶಗಳಂತೆ ಜಾತಿ ಧರ್ಮಗಳ ಓಣಿಗಳನ್ನು ರೂಢಿಸಿಕೊಂಡಿವೆ. ಬೆಳೆದು ನಿಂತ ಮಹಾನಗರಿಯಲ್ಲೂ ಬ್ರಾಹ್ಮಣರೇ ವಾಸಿಸುವ ಬೀದಿಗಳು, ಲಿಂಗಾಯತರೇ ತುಂಬಿರುವ ಪ್ರದೇಶಗಳು, ವಕ್ಕಲಿಗರೇ ಹೆಚ್ಚಿರುವ ರಸ್ತೆಗಳನ್ನು ಕಾಣಬಹುದು. ಊರಲ್ಲಿ ಕೇರಿ ಇದ್ದಂತೆ ಪೇಟೆ ಪಟ್ಟಣಗಳಲ್ಲಿ ಸ್ಲಂ ಅಥವಾ ಕೊಳೆಗೇರಿಗಳಿವೆ. ಊರಿನ ಕೇರಿಗಳಲ್ಲಿ ದಲಿತರಿರುವಂತೆ ಪೇಟಿಗಳ ಕೊಳೆಗೇರಿಗಳಲ್ಲು ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆವರು ಸುರಿಸಿ ಊರಿನ ಹೊಲಗದ್ದೆಗಳಲ್ಲಿ ಫಸಲು ತರುವ (ದಲಿತರು) ಶ್ರಮಿಕರು ಊರಲ್ಲೂ ಹೊರಗೆ. ಅದೇ ರೀತಿ ಪಟ್ಟಣದ ಸ್ವಚ್ಚತೆ, ಶ್ರಮ ಆಧಾರಿತ ಆಧಾರಿತ ಉದ್ಯೋಗಗಳ ಮೂಲಕ ಪಟ್ಟಣಾವನ್ನು ಉಸಿರಾಡುವಂತೆ ಮಾಡುವ ಶ್ರಮಿಕರು ಪೇಟೆಯಲ್ಲೂ ಹೊರಗೆ (ಕೊಳೆಗೇರಿಗಳಲ್ಲಿ ಇರಬೇಕು). ಹಳ್ಳಿಯ ನಿರುದ್ಯೋಗ ಜಾತಿ ಅವಮಾನ ಇತ್ಯಾದಿಗಳನ್ನು ತಾಳದೆ ಪೇಟೆಗೆ ಹೋಗುವ ದಲಿತರು ಕೊಳೆಗೇರಿಯಲ್ಲಿ ಆಶ್ರಮ ಪಡೆಯಬೇಕು. ಅರ ಪೈಕಿ ಸರಕಾಇ ಅಥವಾ ಇತರ ಸಂಘಟಿತ ವಲಯಗಳಲ್ಲಿ ದುಡಿಯುವ ಅವರ ಸಂಬಂಧಿಕರಿದ್ದರೆ ಅವರು ಕೊಳೆಗೇರಿ ಬಿಟ್ಟು ಬೇರೆ ಪ್ರದೇಶಗಳಲ್ಲಿ ಜೀವನ ಆರಂಭಿಸಬಹುದು. ಆದುದರಿಂದ ನಮ್ಮಲ್ಲಿನ ನಗರೀಕರಣ ಗ್ರಾಮೀಣ ಬದುಕಿನಿಂದ ಸಂಪೂರ್ಣವಾಗಿ ಭಿನ್ನವಾದ ಒಂದು ಲೋಕವನ್ನು ಸೃಷ್ಟಿಸಿಲ್ಲ. ಹೆಚ್ಚು ಕಡಿಮೆ ಗ್ರಾಮೀಣ ಪ್ರದೇಶದ ವಸತಿ, ಆದಾಯ ಇತ್ಯಾದಿಗಳ ಅಂತರಗಳನ್ನು ಯಥಾಸ್ಥಿತಿಯಲ್ಲಿಟ್ಟು ಕೊಂಡು ನಮ್ಮ ನಗರಗಳು ಬೆಳೆದಿವೆ. ಗ್ರಾಮೀಣ ಪ್ರದೇಶದಿಂದ ವಲಸೆ ಬರುವ ಜನರಿಗೆ ಎಲ್ಲಾರಿಗೂ ಉದ್ಯೊಗ, ವಸತಿ ಇತ್ಯಾದಿಗಳನ್ನು ಒದಗಿಸುವಷ್ಟು ನಮ್ಮ ನಗರಗಳು ಬೆಳೆದಿಲ್ಲ. ಇನ್ನು ಹಲವು ದಶಕರಗಳು ಕಳೆದರೂ ಅವುಗಳು ಆ ಮಟ್ಟಕ್ಕೆ ಬೆಳೆಯುವುದಿಲ್ಲ. ಆದುದರಿಂದ ಇಂತಹ ನಗರಗಳ ಸಂಖ್ಯೆ ಹೆಚ್ಚಾದಷ್ಟು ಸಮಾಜದ ತಳಸ್ತರದ ಜನರ ಬದುಕು ವಿಶೇ ಸುಧಾರಿಸುವುದಿಲ್ಲ. ಇದರ ಬದಲು ಅಥವಾ ಇವುಗಳ ಜತೆಗೆ ಕೃಷಿ ಕಾರ್ಮಿಕರಿಗೆ ದುಡಿದು ತಿನ್ನುವಷ್ಟು ಭೂಮಿ ಗ್ರಾಮೀಣ ಪ್ರದೇಶದಲ್ಲೇ ದೊರೆತರೆ ಅವರು ಪೇಟೆ ಪಟ್ಟಣಗಳ ಉಸಿರುಗಟ್ಟಿಸುವ ಜೀವನ ಬಯಸುವುದಿಲ್ಲ. ಇದರಿಂದ ಪೇಟೆಪಟ್ಟಣಗಳ ಸಮಸ್ಯೆನೂ ಕಡಿಮೆಯಾಗಬಹುದು.

ಅಧಿಕಾರದ ಸ್ಥಾನಮಾನ

ಭೂಸುಧಾರಣೆಯ ಮಹತ್ವನ್ನು ಕಡಿಮೆ ಮಾಡುವಲ್ಲಿ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ / ಅಧಿಕಾರ ನಡುವಿನ ಸಂಬಂಧ ಕುರಿತಂತೆ ಚಾಲ್ತಿಯಲ್ಲಿರುವ ನಿಲುವುಗಳು ಕೂಡ ತಮ್ಮದೇ ಪಾತ್ರ ವಹಿಸಿವೆ. ಸುಮಾರು ಎಪ್ಪತ್ತು ಎಂಬತ್ತರ ದಶಕದವರೆಗೆ ಆರ್ಥಿಕ ಅಭಿವೃದ್ಧಿಯಿಂದ ಸಾಮಜಿಕ ಪರಿವರ್ತನೆ ಸಾಧ್ಯ ಎನ್ನುವ ನಿಲುವುಗಳು ಹೆಚ್ಚು ಬಲಯುತವಾಗಿದ್ದವು. ಜನರು ಬದುಕುವ ಭೌತಿಕ ಪರಿಸರವನ್ನು ಸುಧಾರಿಸಿದರೆ ಅವರ ಪ್ರಜ್ಞೆ ಸುಧಾರಿಸುತ್ತದೆ. ಪ್ರಜ್ಞೆ ಸುಧಾರಿಸಿದರೆ ಅವರು ತಮ್ಮ ಭೌತಿಕ ಪರಿಸರವನ್ನು ಸುಧಾರಿಸಿಕೊಳ್ಳುತ್ತಾರೆ ಎನ್ನುವ ಗ್ರಹಿಕೆ ಈ ನಿಲುವಿನ ಹಿಂದೆ ಕೆಲಸ ಮಾಡಿದೆ. ಈ ವಿಚಾರಗಳು ಚಾಲ್ತಿಯಲ್ಲಿದ್ದಾಗ ಭೂಸುಧಾರಣೆ, ನಿರುದ್ಯೋಗ ನಿವಾರಣೆ, ಬಡತನ ನಿವಾರಣೆ, ವಸತಿ ವ್ಯವಸ್ಥೆ ಇತ್ಯಾದಿ ಕಾರ್ಯಕ್ರಮಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಆದರೆ ಬರಬರುತ್ತಾ ಆರ್ಥಿಕ ಪರಿವರ್ತನೆಯಿಂದ ಸಾಮಾಜಿಕ ಪರಿವರ್ತನೆ ಸಾಧ್ಯವಾಗುವುದಾದರೆ ಸಾಮಾಜಿಕ ಪರಿವರ್ತನೆಯಿಂದ ಆರ್ಥಿಕ ಪರಿವರ್ತನೆ ಕೂಡ ಸಾಧ್ಯ ಎನ್ನುವ ನಿಲುವುಗಳು ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಂದವು. ಇದರಿಂದಾಗಿ ಬಡವ ಶ್ರೀಮಂತ ಎನ್ನುವ ನೆಲೆಯಲ್ಲಿ ಸಂಘಟಿತರಾಗಿ ಹೋರಾಡಿದರೆ ಮಾತ್ರ ಪರಿವರ್ತನೆ ಸಾಧ್ಯ ಎನ್ನುವ ಆಲೋಚನ ಕ್ರಮಗಳು ಕ್ರಮೇಣ ಮೌಲ್ಯ ಕಳೆದುಕೊಂಡವು. ಅವುಗಳ ಜಾಗದಲ್ಲಿ ಜಾತಿ, ಧರ್ಮ ಇತ್ಯಾದಿ ಗುರುತುಗಳ ಮೂಲಕ ಜನರು ಸಂಘಟಿತರಾಗುವುದರಿಂದ ಪರಿವರ್ತನೆ ಸಾಧ್ಯ ಎನ್ನುವ ಪರಿಸರ ನಿರ್ಮಾಣವಾಯಿತು. ಭೌತಿಕ ಪರಿಸರ ಸುಧಾರಿಸುವುದರಿಂದ ಪ್ರಜ್ಞೆಯನ್ನು ಸುಧಾರಿಸಬಹುದಾದರೆ ಪ್ರಜ್ಞೆಯನ್ನು ಸುಧಾರಿಸುವ ಮೂಲಕ ಭೌತಿಕ ಪರಿಸರವನ್ನು ಸುಧಾರಿಸಬುಹುದೆನ್ನುವ ನಿಲುವು ಕೂಡ ಇದೇ ವಾದದ ಮುಂದುವರಿಕೆಯಾಗಿ ಬಂದಿದೆ. ಇದರಿಂದಾಗಿ ಭೂಮಿ ಹಂಚುವ ಅಥವಾ ನಿರುದ್ಯೋಗ ನಿವಾರಣೆ ಮಾಡುವ ಇತ್ಯಾದಿ ಜನರು ಬದುಕು ಪರಿಸರವನ್ನು ಸುಧಾರಿಸುವ ಕಾರ್ಯಕ್ರಮಗಳು ಮೂಲೆಗುಂಪಾದವು. ಇವುಗಳ ಸ್ಥಳದಲ್ಲಿ ಜನರ ಪ್ರಜ್ಞೆಯನ್ನು ಪ್ರಭಾವಿಸುವ ತರಬೇತಿ ಕಾರ್ಯಕ್ರಮಗಳು ಮುಂಚೂಣಿಗೆ ಬಂದವು.

ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ / ಅಧಿಕಾರಗಳ ನಡುವಿನ ಸಂಬಂಧಗಳನ್ನು ಸಮಸ್ಯೀಕರಿಸುವುದರಲ್ಲಿ ಸಮಾಜಶಾಸ್ತ್ರಜ್ಞರ ಪಾತ್ರವು ದೊಡ್ಡದಿದೆ. ಈ ಎರಡರ ನಡುವೆ (ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ / ಅಧಿಕಾರ ನಡುವೆ) ನೇರ ಸಂಬಂಧ ಇಲ್ಲ ಎನ್ನುವ ಥಿಯರಿಯನ್ನು ಡುಮೋ ಪರಿಣಾಮಕಾರಿಯಾಗಿ ಮಂಡಿಸಿದ. ಈತನ ವಾದ ಅಕಾಡೆಮಿಕ್ ವಲಯದಲ್ಲಿ ತುಂಬಾ ಪರಿಣಾಮ ಬೀರಿದೆ. ಎಲ್ಲಾ ಸಮಾಜಗಳಲ್ಲೂ ಏಣಿಶ್ರೇಣಿಗಳಿವೆ. ಈ ಏಣಿಶ್ರೇಣಿಗಳನ್ನು ಸಮರ್ಥಿಸುವ ವಾದಗಳಿವೆ. ನಮ್ಮಲ್ಲಿ ಜಾತಿ ಈ ಏಣಿಸ್ರೇಣಿಗಳನ್ನು ಗುರುತಿಸುವ ಲೇಬಲ್ ಮತ್ತು ಶುದ್ಧ ಅಶುದ್ಧಗಳು ಏಣಿಶ್ರೇಣಿಗಳನ್ನು ಸಮರ್ಥಿಸುವ ವಿವರಣೆ ಎಂದು ಡುಮೋ ವಾದಿಸುತ್ತಾನೆ.[7] ಏಣಿಶ್ರೇಣಿಗಳನ್ನು ಐಡಿಯ ಲಾಜಿಕಲ್ ಆಗಿಕಟ್ಟಿಕೊಳ್ಳಲಾಗಿದೆ. ಅವುಗಳ ಹಿಂದೆ ಆರ್ಥಿಕ ಅಥವಾ ಅಧಿಕಾರದ ಪ್ರಭಾವ ಇರಲೇ ಬೇಕೆಂದಿಲ್ಲ ಎನ್ನುವುದು ಆತನ ವಾದ. ಅದುದರಿಂದಲೇ ನಮ್ಮಲ್ಲಿ ಏನೇನೂ ಆರ್ಥಿಕ ಸಂಪನ್ಮೂಲ ಇಲ್ಲದ ಅಥವಾ ರಾಜಕೀಯ ಅಧಿಕಾರ ಇಲ್ಲದ ಬ್ರಾಹ್ಮಣರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿದ್ದರೆ ರಾಜಕೀಯ ಅಧಿಕಾರ ಇರುವ ಮತ್ತು ಆರ್ಥಿಕ ಒಡೆತನ ಇರುವ ರಾಜರುಗಳು ಬ್ರಾಹ್ಮಣರಿಗಿಂತ ಕೆಳಗೆ ಇದ್ದಾರೆ ಎಂದು ವಾದಿಸಲಾಯಿತು. ಎಂ ಎನ್ ಶ್ರೀನಿವಾಸ್ ಅವರ ಸಂಸ್ಕೃತಾನುಸರಣ ಸಿದ್ದಾಂತ ಹೆಚ್ಚು ಕಡಿಮೆ ಡುಮೋನ ಸಿದ್ದಾಂತದಿಂದ ಪ್ರಭಾವಿತಗೊಂಡಿದೆ ಎನ್ನಬಹುದು.[8] ಅವರು ಕೊಡಗಿನ ಅಮ್ಮ ಕೊಡವರನ್ನು ಅಧ್ಯಯನ ಮಾಡಿ ಸಮಾಜಿಕವಾಗಿ ಮೇಲ್ಮುಖ ಚಲನೆ ಬಯಸುವ ಕುಟುಂಬಗಳು / ಸಮುದಾಯಗಳು ಬ್ರಾಹ್ಮಣರ ಜೀವನ ಶೈಲಿಯನ್ನು ಅನುಸರಿಸುತ್ತಾರೆ ಎನ್ನುವುದು ಸಂಸ್ಕೃತಾನುಸರಣ ಸಿದ್ದಾಂತ ಸಂಕ್ಷಿಪ್ತ ರೂಪ. ಅಂದರೆ ಮೇಲ್ಮುಖ ಚಲನೆಗೆ ಜನರು ಅಧಿಕಾರ / ಆರ್ಥಿಕವಾಗಿ ಬಲಾಢ್ಯರಾಗುವುದು ಅಷ್ಟು ಮುಖ್ಯವಲ್ಲ ಎನ್ನುವುದನ್ನು ಎನ್ನುವುದನ್ನು ಸಂಸ್ಕೃತಾನುಸರ ಸಿದ್ದಾಂತ ಪರೋಕ್ಷವಾಗಿ ಮಂಡಿಸುತ್ತಿದೆ.

ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ ಸ್ಥಿತಿಗತಿ ನಡುವೆ ಸಂಬಂಧ ಇಲ್ಲ ಎನ್ನುವ ತೀರ್ಮಾನಕ್ಕೆ ಡುಮೋ ಬಂದಿರುವುದು ಭಾರತದ ಸಮಾಜಗಳನ್ನು ಅಧ್ಯಯನ ಮಾಡಿ ಅಲ್ಲ. ಭಾರತದ ಸಮಾಜ ಕುರಿತು ಇಂಡೋಲಜಿಸ್ಟ್‌ಗಳು ಉತ್ಪಾದಿಸಿದ ಜ್ಞಾನವನ್ನು ಬಳಸಿಕೊಂಡು ಆ ತೀರ್ಮಾನಕ್ಕೆ ಆತ ಬಂದಿರುವುದು.[9] ಸಮಾಜಶಾಸ್ತ್ರ ಹಾಗೂ ಮನವ ಶಾಸ್ತ್ರಗಳ ಹಿನ್ನೆಲೆಗಳಿಂದ ನಡೆಸಿದ ಅಧ್ಯಯನಗಳು ಭಾರತದ ಸಮಾಜ ಬಗ್ಗೆ ಬೇರೆಯದೇ ಚಿತ್ರಣ ನೀಡುತ್ತವೆ. ಅವುಗಳ ಪ್ರಕಾರ ಆರ್ಥಿಕ / ಅಧಿಕಾರ ಸ್ಥಿತಿಗತಿಗಳಿಗೂ ಸಾಮಾಜಿಕ ಸ್ಥಾನಮಾನಕ್ಕು ನೇರ ಸಂಬಂಧ ಇದೆ. ಆಸ್ತಿ ಪಾಸ್ತಿ ಇರುವ ಮೇಲ್‌ಜಾತಿಯವನಿಗೂ ಊಟಕ್ಕಿಲ್ಲದ ಮೇಲ್‌ಜಾತಿಯವನಿಗೂ ಒಂದೇ ಸ್ಥಾನಮಾನ ಯಾವುದೇ ಹಳ್ಳಿಯಲ್ಲೂ ಇಲ್ಲ. ಅದೇ ರೀತಿ ಊಟಕ್ಕಿಲ್ಲದೆ ಮೇಲ್‌ಜಾತಿಯವನಿಗೆ ಯಾವುದೇ ಹಳ್ಳಿಯಲ್ಲೂ ಮೇಲ್‌ಜಾತಿಯವ ಎನ್ನುವ ಕಾರಣಕ್ಕೆ ದೊಡ್ಡ ಮರ್ಯಾದೆ ಇಲ್ಲ. ಮೇಲ್‌ಜಾತಿಯವನಿಗೆ ಅವಮಾನವಾದರೆ ಆತ ನ್ಯಾಯಕ್ಕಾಗಿ ಊರಿನ ಪಟೇಲನ (ಬಹುತೇಕ ಸಂದರ್ಭದಲ್ಲಿ ಆತ ದೊಡ್ಡ ಭೂಮಾಲಿಕ ಕೂಡ) ಹತ್ತಿರ ಹೋಗಬೇಕು. ವಾಸ್ತವದಲ್ಲಿ ಸಾಮಾಜಿಕ ಏಣಿಶ್ರೇಣಿಗಳನ್ನು ಯಥಾಸ್ಥಿತಿಯಲ್ಲಿಡುವ ಕೆಲಸವನ್ನು ಪಟೇಲ (ಅಧಿಕಾರ) ಮಾಡುತ್ತಿರುತ್ತಾನೆ. ಹಿಂದೆ ಮತ್ತು ಇಂದು ಸಾಮಾಜಿಕ ಏಣಿಶ್ರೇಣಿಗಳನ್ನು ಕೇವಲ ಶಾಸ್ತ್ರ ಅಥವಾ ಕಥನಗಳ ಮೂಲಕ ಕಾಪಾಡಲು ಸಾಧ್ಯವಾಗುವುದಿಲ್ಲ.[10] ಸಾಮಾಜಿಕ ಏಣಿಶ್ರೇಣಿಯ ಮೇಲ್ಬಾಗದಲ್ಲಿರುವವರಿಗೆ ಹೆಚ್ಚಿನ ಸ್ಥಾನಮಾನ ಸವಲತ್ತುಗಳನ್ನು ನಿಡುವುದು ಒಟ್ಟಾರೆ ಸಮಾಜದ ಏಳಿಗೆಯಲ್ಲಿ ಅವರ ಕೊಡುಗೆ ದೊಡ್ಡದಿದೆ ಎನ್ನುವ ವಿವರಣೆಯಿಂದಾಗಿ. ಸಮಾಜದ ಒಟ್ಟಾರೆ ಏಳಿಗೆಗೆ ಅಧಿಕಾರದಲ್ಲಿದವರು ನಿಡುವಷ್ಟು ಕೊಡುಗೆಯನ್ನು ಅಧಿಕಾರ ಇಲ್ಲದವರಿಗೆ ನೀಡಲು ಸಾಧ್ಯವಾಗುವುದಿಲ್ಲ. ಹೀಗೆ ಅಧಿಕಾರಕ್ಕೆ ಸ್ಥಾನಮಾನ ಬರುವುದು ಸಮಾಜದ ಒಟ್ಟಾರೆ ಏಳಿಗೆಗೆ ಅದರ ಬಳಕೆಯಿದ. ಸಮಾಜದ ಒಟ್ಟಾರೆ ಏಳಿಗೆಗೆ ಅಧಿಕಾರ ಸತತವಾಗಿ ಬಳಕೆಯಾಗದಿದ್ದರೆ ಅಧಿಕಾರ ಸ್ಥಾನಮಾನ ಕಳೆದುಕೊಳ್ಳುತ್ತದೆ. ಇದನ್ನೆ ಕೆಲವರು ಅಧಿಕಾರಕ್ಕು ಸ್ಥಾನಮಾನಕ್ಕು ಸಂಬಂಧವಿಲ್ಲವೆಂದು ವ್ಯಾಖ್ಯಾನಿಸುತ್ತಾರೆ. ಅಧಿಕಾರ ಮತ್ತು ಸ್ಥಾನಮಾನವನ್ನು ಪ್ರತ್ಯೇಕಿಸುವ ಕಥನಗಳು ಎಷ್ಟೋ ಬಾರಿ ವಿವರಣೆ ಹಾಗೂ ವಾಸ್ತವದ ನಡುವೆ ದೊಡ್ಡ ಕಂದರ ಸೃಷ್ಟಿಸುತ್ತವೆ. ಅಂದರೆ ವಿವರಣೆ ಅಥವಾ ಕಥನಗಳು ಅವರ ಕೊಡುಗೆ ದೊಡ್ಡದಿದೆಯೆಂದು ಹೇಳುತ್ತವೆ ಆದರೆ ವಾಸ್ತವದಲ್ಲಿ ಅವರು ಪರಾವಲಂಬಿಗಳ ತರಹ ಬದುಕುತ್ತಿರಬಹುದು. ವಿವರಣೆಗಳು ಅಥವಾ ಕಥನಗಳು ಹೆಚ್ಚು ಸಮಯ ಈ ಕಂದರವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅದುದರಿಂದ ಸಾಮಾಜಿಕ ಸ್ಥಾನಮಾನ ಮತ್ತು ಆರ್ಥಿಕ / ಅಧಿಕಾರ ಸಂಬಂಧಗಳು ಹಿಂದೆ ಮತ್ತು ಇಂದು ನೇರವಾಗಿ ಸಂಬಂಧಿಸಿವೆ. ಈ ಹಿನ್ನೆಲೆಯಲ್ಲಿ ಭೂಮಿ ಇಲ್ಲದವರು ಕನಿಷ್ಠ ಭೂಮಿ ಹೊಂದುವುದು ಅವರ ಸಾಮಾಜಿಕ ಸ್ಥಾನಮಾನಗಳನ್ನು ಸುಧಾರಿಸಲು ಅನಿವಾರ್ಯ.

ಇದೇ ಕ್ರಮದಲ್ಲಿ ಆರ್ಥಿಕ ಸ್ಥಿತಿಗತಿ ಮತ್ತು ರಾಜಕೀಯ ಅಧಿಕಾರ ಕೂಡ ನೇರವಾಗಿ ಸಂಬಂಧಿಸಿವೆ. ಆದರೆ ಪಶ್ಚಿಮದ ಅನುಭವದ ಹಿನ್ನೆಲೆಯಲ್ಲಿ ನಮ್ಮಲ್ಲಿನ ರಾಜಕೀಯ ಪಾಲುಗೊಳ್ಳುವಿಕೆಯನ್ನು ನೋಡಿದರೆ ಹೊಸ ಸಮಸ್ಯೆ ಸೃಷ್ಟಿಯಾಗಬಹುದು. ಪಶ್ಚಿಮದ ಶ್ರೀಮಂತ ರಾಷ್ಟಗಳಲ್ಲಿ ಅನುಕೂಲಸ್ಥರು ಹೆಚ್ಚು ಹೆಚ್ಚು ರಾಜಕೀಯದಲ್ಲಿ ಪಾಲು ಗೊಳ್ಳುತ್ತಾರೆ. ಆದರೆ ನಮ್ಮಲ್ಲಿ ಅನುಕೂಲಸ್ಥರು ರಾಜಕೀಯದಲ್ಲಿ ಹೆಚ್ಚು ಪಾಲುಗೊಳ್ಳುವುದಿಲ್ಲ. ಅಂದರೆ ಓಟು ಹಾಕುವುದು, ಚುನಾವಣಾ ಪ್ರಚಾರದಲ್ಲಿ ಪಾಲುಗೊಳ್ಳುವುದು, ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸುವುದು,ಪ್ರತಿಭಟನ ಮೆರವಣಿಗಳಲ್ಲಿ ಭಾಗವಹಿಸುವುದು ಇತ್ಯಾದಿಗಳನ್ನು ಬಡವರು ಮಾಡಿದಷ್ಟು ನಮ್ಮ ಶ್ರಿಮಂತರು ಮಾಡುತ್ತಿಲ್ಲ.[11] ಅವರು ಚುನಾವಣ ಪ್ರಕ್ರಿಯೆಗಳಲ್ಲಿ ಮಾತ್ರ ಪಾಲುಗೊಳ್ಳುವುದಲ್ಲ, ನಾಯಕರುಗಳು ಸತ್ತಾಗ ಆತ್ಮಹತ್ಯೆ ಮಾಡಿಕೊಳ್ಳುವುದು ಕೂಡ ಬಡವರೇ. ಹಿಂದೆ ತಮಿಳುನಾಡಿನ ಮುಖ್ಯಮಂತ್ರಿ ಎಂ. ಜಿ. ರಾಮಚಂದ್ರನ್‌ಸತ್ತಾಗ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡರು. ಕೆಲವು ವರ್ಷಗಳ ಹಿಂದೆ ಆಂದ್ರದ ಮುಖ್ಯ ಮಂತ್ರಿ ರಾಜಶೇಖರ್ ರೆಡ್ಡಿ ಸತ್ತಾಗಲೂ ಹಲವಾರು ಮಂದಿ ಆತ್ಮಹತ್ಯೆ ಮಾಡಿಕೊಂಡರು. ಈ ಇಬ್ಬರು ಮುಖ್ಯಮಂತ್ರಿಗಳಿಂದ ಕೋಟಿಗಟ್ಟಲೆ ಲಾಭ ಪಡೆದ ಹಲವಾರು ಶ್ರೀಮಂತರಿದ್ದರು, ಸಣ್ಣಪುಟ್ಟ ಲಾಭ ಪಡೆದ ಮಧ್ಯಮವರ್ಗದವರಿದ್ದರು. ಆದರೆ ಅವರ್ಯಾರು ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ. ಮೂರು ಹೊತ್ತಿನ ಊಟಕ್ಕೆ ಪರದಾಡುವ ಬಡವರು ಆತ್ಮಹತ್ಯೆ ಮಾಡಿಕೊಳ್ಳತ್ತಾರೆ. ಇವರಿಗೆ ಈ ನಾಯಕರುಗಳಿಂದ ದೊಡ್ಡ ಮಟ್ಟಿನ ಲಾಭವಾಗಿರಲಿಕ್ಕಿಲ್ಲ. ಆದರೂ ಆತ್ಮಹತ್ಯ ಮಾಡಿಕೊಳ್ಳುತ್ತಾರೆ ಎಂದಾದರೆ ಅವರು ರಾಜಕೀಯವನ್ನು ಎಷ್ಟು ಗಂಭೀರವಾಗಿ ಪರಗಣಿಸುತ್ತಾರೆ ಮತ್ತು ರಾಜಕೀಯದಿಂದ ತಮ್ಮ ಬದುಕು ಹಸನಾಗುತ್ತದೆ ಎಂದು ನಂಬುತ್ತಾರೆ ಎನ್ನುವುದು ಸ್ಪಷ್ಟವಗುತ್ತದೆ. ಇಂತಹ ಬಡವರ ಓಟುಗಳನ್ನು ಎರಡು ಕೇಜಿ ಅಕ್ಕಿ, ಕುಡಿಯುವ ನೀರು, ವಸತಿ, ಶೌಚಾಲಯ, ಟಿವಿ ಇತ್ಯಾದಿಗಳನ್ನು ಕೊಡುವ ಭರವಸೆಯೊಂದಿಗೆ ಪಡೆಯಲಾಗುತ್ತದೆ. ಇವುಗಳೊಂದಿಗೆ ಜಾತಿ, ಧರ್ಮ, ದುಡ್ಡು, ಹೆಂಡ, ಸಾರಾಯಿಗಳು ಕೂಡ ತಮ್ಮದೇ ಪಾತ್ರವಹಿಸುತ್ತವೆ. ಜಾತಿ / ಧರ್ಮ / ಹಣ / ಹೆಂಡ ಇತ್ಯಾದಿಗಳು ಎಷ್ಟರ ಮಟ್ಟಿಗೆ ಚುನಾವಣೆ ಗೆಲ್ಲುತ್ತವೆ ಎನ್ನುವುದು ಕಷ್ಟ. ಯಾಕೆಂಧರೆ ಎಲ್ಲಾ ಪಕ್ಷಗಳು ಈ ಆಮಿಷಗಳನ್ನು ಒಡ್ಡುತ್ತಿವೆ. ಕಡಿಮೆ ಬೆಲೆಯ ಅಕ್ಕಿ, ಉದ್ಯೋಗ, ವಸತಿ ಇತ್ಯಾದಿಗಳು ಮೂಲಭೂತ ಸವಲತ್ತುಗಳನ್ನು ಒದಗಿಸುವ ಭರವಸೆಗಳು ಹಲವಾರು ಬಾರಿ ಹಲವು ನಾಯಕರುಗಳಿಗೆ ಚುನಾವಣೆಯನ್ನು ಗೆಲ್ಲಿಸಿ ಕೊಟ್ಟಿವೆ. ಆದರೆ ಇವು ಯಾವುವು ಕೂಡ ಬಡವರ ಬಡತನವನ್ನು ಮೂಲ ಭೂತವಾಗಿ ಹೋಗಲಾಡಿಸುವ ಕಾರ್ಯ ಕ್ರಮಗಳಲ್ಲ. ಇವುಗಳೆಲ್ಲ ಹಸಿದಾಗ ಸಿಗುವ ಒಪ್ಪೊತ್ತಿನ ಊಟಗಳು. ಇವುಗಳು ಬಡವರನ್ನು ಸತತ ಬಿಕ್ಷುರನ್ನಾಗಿಸುತ್ತಿವೆ. ಅವರನ್ನು ಅವರ ಕಾಲಮೇಲೆ ನಿಲ್ಲುವಂತೆ ಮಾಡುವ ಕಾರ್ಯಕ್ರಮಗಳು ಇವುಗಳಲ್ಲ. ಬಡತನವನ್ನು ಸೃಷ್ಟಿಸುವ ಪರಿಸರವನ್ನು ಸುಧಾರಿಸುವ ಉದ್ದೇಶವನ್ನು ಈ ಕಾರ್ಯಕ್ರಮಗಳು ಹೊಂದಿಲ್ಲ.

ಮೇಲಿನ ರಾಜಕೀಯವನ್ನು ಬಡತನದ ರಾಜಕೀಯ ಎನ್ನಬಹುದು. ಬಡವರ ಹೆಸರಲ್ಲಿ, ಬಡವರ ಸಕ್ರಿಯ ಪಾಲುಗೊಳ್ಳುವಿಕೆಯಿಂದ ಮತ್ತು ಬಹುತೇಕ ರಾಜಕೀಯ ಪಕ್ಷಗಳು ಬಡವರ ಬೆಂಬಲದಿಂದಲೇ ಅಧಿಕಾರಕ್ಕೇರುವ ರಾಜಕೀಯ ಪ್ರಕ್ರಿಯಯನ್ನು ಬಡತನದ ರಾಜಕೀಯ ಎನ್ನಬಹುದು. ಬಡತನದ ರಾಜಕೀಯ ಬಡತನವನ್ನು ಸೃಷ್ಟಿಸುವ ಪರಿಸರವನ್ನು ಸುಧಾರಿಸುವ ಕ್ರಮಗಳಿಗೆ ಮಹತ್ವ ನೀಡುವುದಿಲ್ಲ. ಎಷ್ಟೋ ಬಾರಿ ಅವುಗಳು ಬಡತನವನ್ನು ಸೃಷ್ಟಿಸುವ ಪರಿಸರವನ್ನು ಮುಂದುವರಿಸುವ ಕೆಲಸವನ್ನು ಮಾಡುತ್ತಿರುತ್ತವೆ. ರಾಜಕೀಯ ಪಕ್ಷಗಳ ಅಂತಹ ಕೆಲವು ಗುಣಗಳು ಇಂತಿವೆ. ಒಂದು, ರಾಜಕೀಯ ಪಕ್ಷಗಳಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕೊರತೆ. ಎರಡು, ತತ್ತ್ವ ಆಧಾರಿತ ರಾಜಕೀಯಕ್ಕಿಂತ ಜಾತಿ / ಧರ್ಮ, ಭಾಷೆ, ಪ್ರದೇಶ ಇತ್ಯಾದಿಗಳನ್ನು ಆಧರಿಸಿದ ರಾಜಕಕೀಯಕ್ಕೆ ಹೆಚ್ಚು ಮನ್ನಣೆ. ಮೂರು, ಕೆಲವೊಂದು ರಾಜಕೀಯ ಪಕ್ಷಗಳು ಸಾಂಪ್ರದಾಯಿಕ ಮೌಲ್ಯಗಳನ್ನು ಪುನರ್ ಸ್ಥಾಪಿಸಲು ಉದ್ದೇಶಪೂರಿತವಾಗಿ ಪ್ರಯತ್ನಿಸುವುದು.[12] ರಾಜಕೀಯದ ಇಂತಹ ಗುಣಗಳು ಸಾಮಾಜಿಕ / ರಾಜಕೀಯ/ ಆರ್ಥಿಕ ಅಸಮಾನತೆಗಳನ್ನು ಸೃಷ್ಟಿಸುತ್ತವೆ. ಸಾಮಾಜಿಕ / ರಾಜಕೀಯ / ಆರ್ಥಿಕ ಅಸಮಾನತೆಗಳನ್ನು ಸೃಷ್ಟಿಸುತ್ತವೆ. ಸಾಮಾಜಿಕ / ರಾಜಕೀಯ / ಆರ್ಥಿಕ ಅಸಮಾನತೆಗಳು ಅಸ್ವಾತಂತ್ರ್ಯಕ್ಕೆ ಕಾರಣವಾಗುತ್ತವೆ. ಅಸಮಾನತೆಗಳು ಮತ್ತು ಅಸ್ವಾತಂತ್ರ್ಯಗಳು ವ್ಯಕ್ತಿಯನ್ನು ಮತ್ತು ಕುಟುಂಬಗಳನ್ನು ಜನರಿಂದ ಮತ್ತು ಅವಕಾಶಗಳಿಂದ ದೂರ ಮಾಡುತ್ತವೆ. ತನ್ನ ಮತ್ತು ಕುಟುಂಬದ ಮೇಲೆ ನಡೆಯುವ ಅನ್ಯಾಯಗಳನ್ನು, ದೌರ್ಜನ್ಯಗಳನ್ನು ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತವೆ. ಈ ಎಲ್ಲಾ ಸಂಗತಿಗಳು ತನ್ನ ಪರಿಸರದಲ್ಲಿರುವ ಸಮುದಾಯದ ಸಂಪನ್ಮೂಲಗಳ ವಿತರಣೆ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ವ್ಯಕ್ತಿ / ಕುಟುಂಬ ಪರಿಣಾಮಕಾರಿಯಾಗಿ ಪಾಲುಗೊಳ್ಳುವ ಸಾಧ್ಯತೆಯನ್ನು ಕುಂಠಿತಗೊಳಿಸುತ್ತದೆ. ತನ್ನ ಬದುಕನ್ನು ಪ್ರಭಾವಿಸುವ ನಿರ್ಣಯಗಳನ್ನು ತಳೆಯುವ ಪ್ರಕ್ರಿಯೆಯಲ್ಲಿ ಪಾಲುಗೊಳ್ಳಲು ಅಸಮರ್ಥನಾದ ವ್ಯಕ್ತಿ ತನ್ನ ಮತ್ತು ಕುಟುಂಬದ ಅಭಿವೃದ್ಧಿ ಬಗ್ಗೆ ಸತತ ಪರಾವಲಂಬಿಯಾಗಬೇಕಾಗುತ್ತದೆ.[13] ಇಂತಹ ವ್ಯಕ್ತಿಗಳ ಬೆಂಬಲದಿಂದ ಅಧಿಕಾರದ ಸ್ಥಾನಕ್ಕೇರುವ ರಾಜಕೀಯ ಪಕ್ಷಗಳು ವ್ಯಕ್ತಿ / ಕುಟುಂಬ ಅನುಭವಿಸುವ ಈ ಬಗೆಯ ಅಸಮಾನತೆಗಳನ್ನು ಹೋಗಲಾಡಿಸಲು ಪ್ರಯತ್ನಿಸಬೇಕಿತ್ತು. ಆದರೆ ನಮ್ಮಲ್ಲಿ ಕಾರುಭಾರು ಮಾಡುವ ರಾಜಕೀಯ ಪಕ್ಷಗಳು ಬಡತನವನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಮಾಡುತ್ತಿವೆ. ಅಷ್ಟುಮಾತ್ರವಲ್ಲ ಬಹುತೇಕ ರಾಜಕೀಯ ಪಕ್ಷಗಳು ಬಡತನದ ಚೌಕಟ್ಟನ್ನು ಬಲಪಡಿಸುವ ಎಲ್ಲಾ ಮೌಲ್ಯಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಚರಿಸುತ್ತಿವೆ.[14] ಇದೊಂದು ಬಗೆಯ ವಿಷವರ್ತುಲದಂತೆ ಕೆಲಸ ಮಾಡುತ್ತಿದೆ. ಬಡವರ ಉದ್ದಾರದ ಘೋಷಣೆಯೊಂದಿಗೆ ಬಡವರ ಬೆಂಬಲದಿಂದ ಅಧಿಕಾರ ಪಡೆಯುವ ರಾಜಕೀಯ ಪಕ್ಷಗಳು ಬಡತನದ ಚೌಕಟ್ಟನ್ನು ಬಲಪಡಿಸುವ ಕಾರ್ಯಕ್ರಮಗಳನ್ನು ಮತ್ತು ಅಭಿವೃದ್ಧಿ ನೀತಿಗಳನ್ನು ಜಾರಿಗೆ ತರುತ್ತಿವೆ. ತಮ್ಮನ್ನು ಉದ್ದಾರ ಮಾಡುತ್ತಾರೆಂದು ನಂಬಿ ತಮ್ಮ ಆಸಕ್ತಿಗೆ ವಿರುದ್ದವಾದ ಅಭಿವೃದ್ಧಿ ನೀತಿಗಳನ್ನು ಜಾರಿಗೆ ತರುವ ರಾಜಕೀಯ ಪಕ್ಷಗಳ ಹಿಂದೆ ಬಡವರು ಹೋಗುತ್ತಾರೆ. ಈ ಸ್ಥಿತಿ ಬದಲಾಗಬೇಕಾದರೆ ಮೂರು ಹೊತ್ತಿನ ಊಟಕ್ಕು ಓಟಿಗೂ ಇರುವ ಸಂಬಂಧ ಬದಲಾಗಬೇಕು. ಅಂದರೆ ಮೂರು ಹೊತ್ತಿನ ಊಟ ಬಹುಜನರಿಗೆ ಸಮಸ್ಯೆಯಾಗಬಾರದು. ಇದು ಸಾಧ್ಯವಾಗಬೇಕಾದರೆ ಗ್ರಾಮೀಣ ಪ್ರದೇಶದಲ್ಲಿರುವ ಭೂರಹಿತರು ಕನಿಷ್ಠ ಭೂಮಿ ಹೊಂದಬೇಕು. ಅವರ ಸ್ವಾಧೀನ ಇರುವ ಭೂಮಿ ಅವರ ಅವಶ್ಯಕತೆಗಳನ್ನು ಪೂರೈಸಬೇಕು. ಆವಾಗ ಅವರು ಕೂಡ ನಾಳೆ ಬಗ್ಗೆ ಕನಸು ಕಾಣಬಹುದು.

ನಾಳಿನ ಸುಂದರ ಬದುಕಿನ ಕನಸು ಮತ್ತು ಭೂಮಿ ಸಂಬಂಧ ಇನ್ನೂ ಸ್ಪಷ್ಟವಾಗಿ ಅರ್ಥವಾಗಿಬೇಕಾದರೆ ನಮ್ಮ ಅಭಿವೃದ್ದಿಯ ತಳಹದಿ ಅರ್ಥವಾಗಬೇಕು. ವಸಾಹತ್ತೋತ್ತರ ಕರ್ನಾಟಕದಲ್ಲಿ ಅನುಸರಿಸುತ್ತಿರುವ ಅಭಿವೃದ್ಧಿಯ ಲಾಭ ಪಡೆಯಬೇಕಾದರೆ ಒಂದೋ ಬಂಡವಾಳ ಬೇಕು, ಇಲ್ಲವೇ ಭೂಮಿ ಬೇಕು ಅಥವಾ ಆದುನಿಕ ಸ್ಕಿಲ್ ಬೇಕು. ಇ ಮೂರರಲ್ಲಿ ಯಾವುದಾದರೂ ಒಂದಿದ್ದರೆ ಪರತಂತ್ರ ಜೀವನದಿಂದ ಪಾರಗಬಹುದು. ಈ ಮೂರರಲ್ಲಿ ಒಂದೂ ಇಲ್ಲದಿದ್ದರೆ ಸತತ ಬಿಕ್ಷುರಾಗಿ ಬದುಕಬೇಕಾಗುತ್ತದೆ. ನಮ್ಮಲ್ಲಿ ಈಗಾಗಲೇ ಶೇ. ೩೩ ರಷ್ಟು ಕುಟುಂಬಗಳಿಗೆ ಭೂಮಿ ಇಲ್ಲ. ಇವರೊಂದಿಗೆ ಅಲ್ಪಸ್ವಲ್ಲಪ ಭೂಮಿ ಇರುವವರನ್ನು ಸೇರಿಸಿದರೆ ಶೇ. ೬೦ಕ್ಕಿಂತಲೂ ಹೆಚ್ಚು ಕುಟುಂಬಗಳು ಒಂದು ವಿಧದ ಪರಾವಲಂಭಿ ಜೀವನ ಸಾಗಿಸುತ್ತಿದ್ದಾರೆ. ಭೂಮಿ ಇಲ್ಲದವರಲ್ಲಿ ಬಂಡವಾಳ ಇಲ್ಲ ಅಥವಾ ಆಧುನಿಕ ಸ್ಕಿಲ್‌ಕೂಡ ಇಲ್ಲ ಎನ್ನಲಾಗುವುದಿಲ್ಲ. ಆದರೆ ನಮ್ಮ ಸಮಾಜದಲ್ಲಿ ಭೂಮಿ ಮತ್ತು ಬಂಡವಾಳ ಮತ್ತು ಅಧುನಿಕ ಸ್ಕಿಲ್‌ನಡುವೆ ನೇರ ಸಂಬಂಧ ಇರುವುದರಿಂದ ಭೂಮಿ ಇಲ್ಲದ ಬಹುತೇಕರಲ್ಲಿ ಬಂಡವಾಳನೂ ಇಲ್ಲ ಆಧುನಿಕ ಸ್ಕಿಲ್ ಇಲ್ಲ ಎನ್ನುವ ಸ್ಥಿತಿ ಇದೆ. ಇದು ಯಾಕೆಂದರೆ ಭೂಮಿ ಇಲ್ಲಾದೆ ದೊಡ್ಡ ಮಟ್ಟಿನ ಬಂಡವಾಳ ಸಂಗ್ರಹ ಸಾಧ್ಯವಾಗುವುದು ವ್ಯಾಪಾರದಿಂದ ಮಾತ್ರ. ಇತ್ತೀಚಿನ ದಿನಗಳಲ್ಲಿ ಮತ್ತು ಹಿಂದೆ ಕೂಡ ನೌಕರಶಾಹಿ (ಬ್ಯುರೋಕ್ರೆಸಿ) ಭೂಮಿ ಇಲ್ಲದೆಯೂ ಸಣ್ಣಮಟ್ಟಿನ ಬಂಡವಾಳ ನಂಗ್ರಹ ಮಾಡುತ್ತಿದೆ. ಉತ್ತಮ ಸಂಭಳದ ನೌಕರಿಗೆ ಆಧುನಿಕ ಸ್ಕಿಲ್‌ಅಥವಾ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಸ್ಕಿಲ್ ಬೇಕು. ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಸ್ಕಿಲ್‌ನ್ನು ಆಧುನಿಕ ಶಿಕ್ಷಣದಿಂದ ಮಾತ್ರ ಪಡೆಯಲು ಸಾಧ್ಯ ಇಂತಹ ಶಿಕ್ಷಣ ಕೂಡ ತಂಬಾ ದುಬಾರಿಯಾಗಿವೆ. ಇವುಗಳನ್ನು ಭೂಮಿ ಅಥವಾ ಬಂಡವಾಳ ಇಲ್ಲದವರು ಪಡೆಯಲು ಸಾಧ್ಯವಿಲ್ಲ. ಆದುದರಿಂದ ನಮ್ಮಲ್ಲಿ ಭೂಮಿ ಇಲ್ಲದ ಬಹುತೇಕರು ಬಂಡವಾಳ ಮತ್ತು ಆಧುನಿಕ ಸ್ಕಿಲ್‌ಎರಡರಿಂದಲೂ ವಂಚಿತರಾಗಿದ್ದಾರೆ. ಭೂಸುಧಾರಣೆ ಮೂಲಕ ಭೂಮಿ ಇಲ್ಲದವರಿಗೆ ಕನಿಷ್ಠ ಐದು ಎಕರೆಯಷ್ಟು ಭೂಮಿ ನೀಡಿದರೆ ಮೇಲಿನ ಸಮಸ್ಯೆ ಪರಿಹಾರವಾಗಬಹುದು. ಇಂತಹ ಭೂಮಿಯಿಂದ ಅವರುಗಳು ಒಂದೋ ಬಂಡವಾಳ ಸಂಗ್ರಹ ಮಾಡಬಹುದು ಅಥವಾ ಆಧುನಿಕ ಸ್ಕಿಲ್‌ಪಡೆಯಬಹುದು. ಇದು ಸಾಧ್ಯವಾದರೆ ಮಾತ್ರ ಬಡತನವನ್ನು ಸೃಷ್ಟಿಸುವ ಪರಿಸರವನ್ನು ಸುಧಾರಿಸಲು ಸಾಧ್ಯ ಬಡತನವನ್ನು ಸೃಷ್ಟಿಸುವ ಪರಿಸರ ಸುಧಾರಣೆಯಾದರೆ ನಮ್ಮ ಪ್ರಜಾಪ್ರಭುತ್ವವು ಸುಧಾರಿಸಬಹುದು. ಇಂದು ಕಾಣುವ ಬಂಡವಾಳ ಹಾಕಿ ಬಂಡವಾಳ ತೆಗೆಯುವ ದಂದೆಯ ರೂಪದ ಪ್ರಜಾಪ್ರಭುತ್ವ ಮಹತ್ವ ಕಳೆದುಕೊಳ್ಳಬಹುದು. ಮೂಲಭೂತ ಪರಿವರ್ತನೆಗೆ ಕಾರಣವಾಗುವ ಇಂತಹ ಕಾರ್ಯಕ್ರಮಗಳನ್ನು ಬಿಟ್ಟು ಇಂದು ಪ್ರಜಾಪ್ರಭೂತ್ವವನ್ನು ಸುಧಾರಿಸಲು ಅನುಸರಿಸುತ್ತಿರುವ ಕಾರ್ಯಕ್ರಮಗಳು ಹೆಚ್ಚಿನ ಲಾಭವನ್ನು ಭೂಮಾಲಿಕರು / ಬಂಡವಾಳಗಾರರಿಗೆ ಒದಗಿಸಿದರೆ ಅಲ್ಪಸ್ವಲ್ಪ ಲಾಭವನ್ನು ಆಧುನಿಕ ಸ್ಕಿಲ್ ಹೊಂದಿದವರಿಗೆ ಒದಗಿಸುತ್ತಿವೆ. ಆದರೆ ಇವರಲ್ಲಿ ಬಹುತೇಕರು ಪ್ರಜಾಪ್ರಭುತ್ವವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಬಡವರು, ಭೂಮಿ ಇಲ್ಲದವರು, ಮೂರು ಹೊತ್ತಿನ ಊಟಕ್ಕೆ ಪರದಾಡುವವರು ಮಾತ್ರ ಸದ್ಯಕ್ಕೆ ನಮ್ಮಲ್ಲಿ ಪ್ರಜಾಪ್ರಭುತ್ವವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇವರ ಈ ಸಮಸ್ಯೆಗಳನ್ನೇ ರಾಜಕಾರಣಿಗಳೂ ಬಂಡವಾಳ ಮಾಡಿ ಕೊಂಡಿದ್ದಾರೆ. ಆದುದರಿಂದ ಪ್ರಜಾಪ್ರಭುತ್ವ ಸುಧಾರಣೆ ಆಗಬೇಕಾದರೆ ಮುರು ಹೊತ್ತಿನ ಊಟಕ್ಕೆ ಪರದಾಡುವವರಿಗೆ ಒಂದು ಶಾಸ್ವತ ಪರಿಹಾರ ಬೇಕು. ಅಂದರೆ ಅವರುಗಳು ತಮ್ಮ ಓಟನ್ನು ಒಪ್ಪೊತ್ತಿನ ಊಟಕ್ಕೆ ವಿನಿಮಯ ಮಾಡಿಕೊಳ್ಳೂವ ಸ್ಥಿತಿ ನಿರ್ಮಾಣವಾಗಿಬಾರದು. ಈ ಉದ್ದೇಶ ಈಡೇರಬೇಕಾದರೆ ಮತ್ತೊಂದು ಭೂಸುಧಾರಣೆ ಅನಿವಾರ್ಯವಾಗಿದೆ.

[1] ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿನ ಕುಟುಂಬಗಳ ಆರೋಗ್ಯ ಸ್ಥಿತಿಗತಿ ಕೆಡಲು ಎರಡು ಕಾರಣಗಳಿಗವೆ. ಒಂದು, ಗ್ರಾಮೀಣ ಪ್ರದೇಶದ ಬಹುತೇಕ ಕುಟುಂಬಗಳು ಸಾಂಪ್ರದಾಯಿಕ ಆರೋಗ್ಯ ಪದ್ಧತಿಗಳನ್ನು ಅವಲಂಬಿಸಿದ್ದರು. ಕಾಲಕ್ರಮೇಣ ಅವರುಗಳು ತಮ್ಮ ಸಾಂಪ್ರದಾಯಿಕ ಆರೋಗ್ಯ ಪದ್ಧತಿಯನ್ನು ಬಿಟ್ಟು ಆಧುನಿಕ ಆರೋಗ್ಯ ಪದ್ದತಿಯನ್ನು ಅವಲಂಬಿಸಲಾರಂಬಿಸಿದರು. ಎರಡು, ಜನರು ಆಧುನಿಕ ಆರೋಗ್ಯ ಪದ್ಧತಿಯತ್ತ ಬಂದಾಗ ಗುಣಮಟ್ಟದ ಮತ್ತು ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯ ಸವಲತ್ತುಗಳನ್ನು ಕೊಡಲು ಸರಕಾರ ವಿಫಲವಾಗಿದೆ. ಉತ್ತಮ ಗುಣ ಮಟ್ಟದ ಖಾಸಗಿ ಆರೋಗ್ಯ ಸವಲತ್ತಗಳು ಗ್ರಾಮೀಣ ಪ್ರದೇಶದಲ್ಲಿ ಲಭ್ಯವಿಲ್ಲ. ಆರೋಗ್ಯಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಕರ್ನಾಟಕ ಸರಕಾರ, ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೦೫ (ಬೆಂಗಳೂರು: ಯೋಜನೆ ಮತ್ತು ಸಂಖ್ಯಿಕ ಇಲಾಖೆ, ೨೦೦೬) ಇದರಲ್ಲಿ ನೋಡಬಹುದು.

[2] ಮರಣ ಹೊಂದುವ ಮಕ್ಕಳ ಜತೆಗೆ ಪೌಷ್ಟಿಕಾಂಶ ಕೊರತೆ ಇರುವ ಮಕ್ಕಳನ್ನು ಪರಿಗಣಿಸಿದರೆ ಕರ್ನಾಟಕದ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಅಂಕಿಅಂಶಗಳು ಇನ್ನೂ ಕೆಟ್ಟ ಸ್ಥಿತಿಯಲ್ಲಿದೆ. ಶೇಕಡಾ ೬೦ಕ್ಕಿಂತಲೂ ಹೆಚ್ಚು ಮಕ್ಕಳು ಒಂದನೇ ಮತ್ತು ಎರಡನೇ ಹಂತದ ಪೌಷ್ಟಿಕಾಂಶದ ಕೊರತೆಯನ್ನು ಅನುಭವಿಸುತ್ತಿವೆ. ಶೇಕಡಾ ೭೧ರಷ್ಟು ಮಕ್ಕಳು ಸಣ್ಣಪ್ರಮಾಣದ ರಕ್ತಹೀತೆಯನ್ನು ಹೊಂದಿದರೆ ಶೇಕಡಾ ೪೩ರಷ್ಟು ಮಕ್ಕಳು ಮಧ್ಯಪ್ರಮಾಣದ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅಂಕಿಅಂಶಗಳಿಗೆ ಈ ಕೆಳಗಿನ ವರದಿಯಗಳನ್ನು ನೋಡಬಹುದು. ಗವರ್ನ್‌ಮೆಂಟ್ ಆಫ್ ಇಂಡಿಯಾ, ನೇಶನಲ್ ಹೆಲ್ತ್ – ಫೆಮಿಲಿ ಸರ್ವೇ – ೧೯೯೮ – ೯೯, ನ್ಯೂಡೆಲ್ಲಿ: ಹೆಲ್ತ್‌ಮಿನಿಸ್ಟ್ರಿ, ೧೯೯೯ ಮತ್ತು ಕರ್ನಾಟಕ ಸರಕಾರ, ಕರ್ನಾಟಕ ಮಾನವ ಅಭಿವೃದ್ಧಿ ವರದಿ ೨೦೦೫, ಬೆಂಗಳೂರು: ಯೋಜನೆ ಮತ್ತು ಸಾಂಖ್ಯಿಕ ಇಲಾಖೆ, ೨೦೦೬

[3] ಕರ್ನಾಟಕ ಸರಕಾರ, ಮಾನವ ಅಭಿವೃದ್ಧಿ ವರದಿ – ೨೦೦೫, ಬೆಂಗಳೂರು: ಯೋಜನಾ ಇಲಾಖೆ, ೨೦೦೬

[4] ಜನಸಂಖ್ಯೆಯ ಆಧಾರದಲ್ಲಿ ನಮ್ಮ ನಗರಗಳನ್ನು ವಿಂಗಡಿಸಲಾಗಿದೆ. ಒಂದು ಲಕ್ಷಕ್ಕಿಂತ ಹೆಚ್ಚು ಜನ ಸಂಖ್ಯೆಯಿರುವ ಪಟ್ಟಿಗಳನ್ನು ದೊಡ್ಡ ನಗರಗಳೆಂದು ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಜನಸಂಖ್ಯೆ ಇರುವ ಪಟ್ಟಣಗಳನ್ನು ಎರಡನೇ ವರ್ಗದ ನಗರಗಳೆಂದು ವಿಂಗಡಿಸಿಲಾಗಿದೆ. ಐವತ್ತು ಸಾವಿರ ಜನಸಂಖ್ಯೆಯಿಂದ ಕಡಿಮೆ ಇರುವ ಪಟ್ಟಣಗಳು ಮೂರು, ನಾಲ್ಕು ಮತ್ತು ಐಥದನೇ ವರ್ಗದ ಪೇಟೆ ಪಟ್ಟಣಗಳು. ಒಂದುಮತ್ತು ಎರಡನೇ ವರ್ಗದ ಸುಮಾರು ೩೮ ನಗರಗಳು ಕರ್ನಾಟಕದಲ್ಲಿವೆ. ಅರ್ಬನ್ ಜನಸಂಖ್ಯೆಯ ಸೇ. ೭೦ರಷ್ಟು ಮಂದಿ ಈ ನಗರಗಳಲ್ಲೇ ಇದ್ದಾರೆ. ಉಳಿದ ೨೧೬ ಪೇಟಿಗಳಲ್ಲಿ (ಮೂರು, ನಾಲ್ಕು ಮತ್ತು ಐದನೇ ವರ್ಗದ ನಗರಗಳು) ಶೇ. ೩೦ರಷ್ಟು ಅರ್ಬನ್ ಜನ ಸಂಖ್ಯೆ ಇದೆ.

[5] ಕರ್ನಾಟಕ ಮಾತ್ರವಲ್ಲ ಇಡೀ ದೇಶದಲ್ಲೂ ಇದೇ ಸ್ಥಿತಿ. ಇದು ಇವತ್ತಿನ ಸ್ಥಿತಿ ಅಲ್ಲ. ಸಮಾಜವಾದಿ ಸಮಾಜ ಕಟ್ಟುವಾಗಲೂ ಶೇ. ೯೦ಕ್ಕಿಂತಲೂ ಹೆಚ್ಚಿನ ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದರು ತೊಂಬತ್ತರ ಖಾಸಗೀಕರಣ ಪ್ರಕ್ರಿಯೆ ಆರಂಭವಾದ ನಂತರ ಈ ಹಿಂದೆ ಸಂಘಟಿತವಲಯದಲ್ಲಿದ್ದ ಕಾರ್ಮಿಕರು ಕೂಡ ಅಸಂಘಟಿತ ನೌಕರರಾಗಿ ಪರಿವರ್ತನೆಗೊಂಡರು.

[6] ಕರ್ನಾಟಕ ಸರಕಾರ, ಎಗ್ರಿಕಲ್ಚರಲ್ ಸೆನ್ಸಸ್ ಅಬ್ಸ್ಟ್ರಕ್ಟ್ – ಕರ್ನಾಟಕ, ಬೆಂಗಳೂರು: ಡೈರೆಕ್ಟರೇಟ್ ಆಫ ಸೆನ್ಸಸ್ ಆಪರೇಶನ್, ೨೦೦೧.

[7] ಡಿಕ್ಲಾನ್ ಕಿಗ್ಲೇ, ದಿ ಇಂಟರ್ಪ್ರಟೇಷನ್ ಆಫ್ ಕಾಸ್ಟ್, ನ್ಯೂಯಾರ್ಕ್: ಆಕ್ಸ್‌ಫ್‌ರ್ಡ್‌ಯುನಿವರ್ಸಿಟಿ ಪ್ರೆಸ್, ೧೯೯೩

[8] ಎಮ್.ಎನ್. ಶ್ರೀ ನಿವಾಸ್, ರಿಲೀಜಿಯನ್ ಆಂಡ್ ಸೊಸೈಟಿ ಎಮಂಗ್ ದಿ ಕೊರ್ಗ್ಸ್ ಆಫ್ ಸೌತ್ ಇಂಡಿಯಾ, ಬಾಂಬೆ: ಮಿಡಿಯಾ ಪ್ರೊಮೊಟರ್ಸ್ ಆಂಡ್ ಪಬ್ಲಿಷರ್ಸ್, ೧೯೫೨

[9] ಇಂಡಲಾಜಿಸ್ಟ್‌ಗಳು ತಾವು ಅಧ್ಯಯನ ಮಾಡುವ ನಾಗರಿಕ ಸಮಾಜದೊಂದಿಗೆ ಯಾವುದೋ ಸಂಬಂಧ ಇಟ್ಟುಕೊಳ್ಳದೆ ಅಧ್ಯಯನಕಾರರು ಮತ್ತು ಅಧ್ಯಯನ ವಸ್ತುವಿನ ನಡುವಿನ ಅಂತರವನ್ನು ಕಾಪಾಡಿಕೊಂಡರು. ಧಾರ್ಮಿಕ ಗ್ರಂಥಗಳು ಅಥವಾ ಇತರ ಪ್ರಾಚೀನ ಗ್ರಂತಗಳು ಅವರ ಮುಖ್ಯ ಆಕರಗಳಾಗಿದ್ದವು. ಗ್ರಂಥಾಲಯದ ಯಾವುದೋ ಮೂಲೆಯಲ್ಲಿ ಕುಳಿತು (ಸಮಾಜ / ಸಂಸ್ಕೃತಿಯ ಸಂಪರ್ಕ ಇಲ್ಲದೆ) ಅದ್ಯಯನ ಮಾಡುವುದು ಅವರ ಮತ್ತು ಸಂಶೋಧನಾ ವಸ್ತುವಿನ ನಡುವಿನ ಅಂತರವನ್ನು ಕಾಪಾಡಲು ಸಹಕಾರಿಯಾಯಿತು. ವಿವರಗಳಿಗೆ ಇಮೆನ್ವಲ್ ವೆಲ್‌ಸ್ಟೇಯಿನ್ ಮತ್ತು ಇತರರು, ಒಪನ್ ದಿ ಸೋಶಿಯಲ್ ಸಯನ್ಸ್ರಿಪೋರ್ಟ್ ಆಫ್ ದಿ ಗುಲ್ಬೆಕಿಯನ್ ಕಮಿಶನ್ ಆನ್ ದಿ ರಿಸ್ಟ್ರಕ್ಚರಿಂಗ್ ಆಫ್ ದಿ ಸೋಶಿಯಲ್ ಸಯನ್ಸ್ಸಸ್, ನ್ಯೂಡೆಲ್ಲಿ: ವಿಸ್ತಾ ಪಬ್ಲಿಕೇಶನ್ಸ್, ೧೯೯೮

[10] ಎಮ್. ಎನ್. ಶ್ರೀನಿವಾಸ್, ದಿ ರಿಮೆಂಬರ್ಡ್ ವಿಲೇಜ್, ಡೆಲ್ಲಿ : ಆಕ್ಸ್‌ಫರ್ಡ್ ಯುನಿವರ್ಸಿಟಿ ಪ್ರೆಸ್, ೧೯೭೬

[11] ಜಾವೇದ್ ಆಲಂ, “ವಾಟ್ ಈಸ್ ಹೆಪನಿಂಗ್ ಇನ್ಸೈಡ್ ಇಂಡಿಯನ್ ಡೆಮಾಕ್ರಸಿ,’ ಇನ್ ರಾಜೆಂದ್ರ ವೋರಾ ಆಂಡ್ ಸುಹಾಸ್ ಪಲ್ಶಿಕರ್ (ಸಂ), ಇಂಡಿಯನ್ ಡೆಮಾಕ್ರಸಿ – ಮೀನಿಂಗ್ ಆಂಡ್ ಪ್ರಾಕ್ಟೀಸಸ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೨೦೦೪, ಪು. ೭೮ – ೯೪ ಮತ್ತು ಜಾವೇದ್ ಆಲಂ, ಹೂ ವಾಂಟ್ಸ್ ಡೆಮಾಕ್ರಸಿ, ನ್ಯೂಡೆಲ್ಲಿ: ಓರಿಯಂಟ್ ಲಾಂಗ್‌ಮೆನ್, ೨೦೦೪

[12] ಚಂದ್ರ ಪೂಜಾರಿ, ರಾಜಕೀಯದ ಬಡತನ, ಹೊಸಪೇಟೆ: ಸಿದ್ದಾರ್ಥ ಪ್ರಕಾಶನ, ೨೦೦೮

[13] ಚಂದ್ರ ಪೂಜಾರಿ, ರಾಜಕೀಯದ ಬಡತನ, ಪು. ೮೬ – ೧೧೪

[14] ಚಂದ್ರ ಪೂಜಾರಿ, ರಾಜಕೀಯದ ಬಡತನ, ಪು. ೮೬ – ೧೧೪