ಭೂಮಿ ಪ್ರಶ್ನೆ ಎಂದ ಕೂಡಲೇ ಈಗ ಎಲ್ಲರ ಗಮನ ಹರಿಯುವುದು ಒಂದೋ ಕರ್ನಾಟಕದಲ್ಲಿ ರಾಜಕಾರಣಿಗಳು ದಿನ ನಿತ್ಯ ನಡೆಸುವ ಭೂಹಗರಣದ ಕಡೆಗೆ ಅಥವಾ ಎಕರೆ ಗಟ್ಟಲೆ ಭೂಮಿ ನುಂಗಿ ನೀರು ಕುಡಿಯುವ ಭೂಮಾಫಿಯಗಳ ಮೇಲೆ ಅಥವಾ ಇತ್ತೀಚೆಗೆ ಬೆಂಗಳೂರು ನಗರದಲ್ಲೇ ಸಾವಿರಾರು ಎಕರೆ ಭೂಮಿ ಕಬಳಿಸಿದ ವ್ಯವಹಾರಗಳ ಮೇಲೆ. ವಾಸ್ತವದಲ್ಲಿ ನನ್ನ ಈ ಪುಸ್ತಕದ ಉದ್ದೇಶ ಮೇಲಿನ ಭೂಹಗರಣಗಳನ್ನು ಚರ್ಚಿಸುವುದಲ್ಲ. ಹಾಗೆ ನೋಡಿದರೆ ಮೇಲಿನ ಎಲ್ಲವು ರೋಗದ ಲಕ್ಷಣಗಳು. ಅವುಗಳೇ ರೋಗದ ಕಾರಣಗಳಲ್ಲ. ಈ ಪುಸ್ತಕ ರೋಗದ ಲಕ್ಷಣದ ಮೇಲೆ ಗಮನ ಹರಿಸುತ್ತಿಲ್ಲ. ಬದಲಿಗೆ ರೋಗದ ಮೂಲಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಮೇಲಿನ ಎಲ್ಲಾ ಹಗರಣಗಳು ಒಂದು ಸಂಗತಿಯತ್ತ ನಮ್ಮೆಲ್ಲರ ಗಮನ ಸೆಳೆಯುತ್ತಿದೆ. ಶೂನ್ಯದಿಂದ ಕೂಡ ಉತ್ಪಾದಿಸಬಹುದೆನ್ನುವ ಮಟ್ಟಕ್ಕೆ ವಿಜ್ಞಾನ ಬೆಳೆದು ನಿಂತ ಈ ಕಾಲದಲ್ಲಿ, ಐಟಿ ಬಿಟಿಗಳೇ ನಮ್ಮನ್ನು ಉದ್ಧಾರ ಮಾಡುವ ದೊಡ್ಡ ಉದ್ಯಮಗಳೆನ್ನುವ ಕಾಲದಲ್ಲಿ, ನಗರಗಳು ಮಾತ್ರ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ ಎನ್ನುವ ಕಾಲದಲ್ಲಿ ಮೂರಡಿ ಭೂಮಿ ಇಂದೂ ಕೂಡ ತುಂಬಾ ಬೆಲೆಬಾಳುವ ಸರಕಾಗಿದೆ ಎನ್ನುವುದನ್ನು ಎನ್ನುವುದನ್ನು ಮೇಲಿನ ಎಲ್ಲವು ಬೊಟ್ಟುಮಾಡಿ ತೋರಿಸುತ್ತಿವೆ. ಇಂದಿಗೂ ಕೂಡ ಪ್ರಪಂಚದಲ್ಲಿ ನಡೆಯುವ ಯುದ್ದಗಳಲ್ಲಿ, ಸಂಘರ್ಷಗಳಲ್ಲಿ, ಹೋರಾಟಗಳಲ್ಲಿ ಶೇಕಡಾ ಐವತ್ತಕ್ಕಿಂಲೂ ಹೆಚ್ಚಿನ ಯುದ್ದಗಳು, ಸಂಘರ್ಷಗಳು ಭೂಮಿಗಾಗಿ ನಡೆಯುತ್ತಿವೆ. ಬಹುತೇಕ ಅಭಿವೃದ್ಧಿ ಶೀಲ ರಾಷ್ಟ್ರಗಳ ರಾಜಕೀಯ ನಿಂತಿರುವುದೇ ಭೂಮಿ ಪ್ರಶ್ನೆ ಮೇಲೆ. ಕರ್ನಾಟಕದಲ್ಲಂತೂ ಇಂದೂ ಕೂಡ ರಾಜಕೀಯದ ಮೂಲ ಭೂಮಿ. ಬಹುತೇಕ ರಾಜಕಾಣಿಗಳು ಭೂಮಾಲಿಕ ಹಿನ್ನೆಲೆಯಿಂದ ಬಂದವರು ಎನ್ನುವ ಕಾರಣಕ್ಕಾಗಿ ಅಲ್ಲ. ವ್ಯಾಪರದ ದುಡ್ಡು, ಗಣಿ ದುಡ್ಡು, ಹೆಂಡದ ದುಡ್ಡು, ಭೂಮಾಫಿಯ ದುಡ್ಡು ಖಂಡಿತವಾಗಿ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಈ ಎಲ್ಲದರಎಲ್ಲದರ ಪ್ರಭಾವ ಬಂದು ಹೋಗುವ ಅಥವಾ ರಾಜಕೀಯದ ಮೇಲ್‌ಪದರದಲ್ಲಿ ಕೆಲವು ಸಮಯ ಅಲೆಗಳನ್ನು ಸೃಷ್ಟಿಸುವುದಕ್ಕೆ ಸೀಮಿತ. ಇವುಗಳು ಸೃಷ್ಟಿಸುವ ಅಲೆಗಳು ಮೇಲ್‌ಪದರದಲ್ಲಿ ಚಲನಶೀಲವಾಗಿರುವುದನ್ನು ಕಂಡು ಬಹುತೇಕರು ಇದುವೇ ರಾಜ್ಯ ರಾಜಕೀಯವನ್ನು ನಿರ್ಣಯಿಸುವ ಸಂಗತಿಗಳೆಂದು ತೀರ್ಮಾನಿಸುತ್ತಾರೆ. ಆದರೆ ಇದು ನಿಜವಲ್ಲ. ಇವುಗಳು ರಾಜ್ಯ ರಾಜಕೀಯ ಒಳ ಪ್ರವಾಹಗಳಲ್ಲ. ರಾಜ್ಯ ರಾಜಕೀಯದ ಬುನಾದಿಗಳಲ್ಲ. ಹಿಂದೆ ಮತ್ತು ಇಂದು ರಾಜ್ಯ ರಾಜಕೀಯದ ಆಧಾರ ಸ್ತಂಭ ಭೂಮಿ.

ಕರ್ನಾಟಕದ ಏಕೀಕರಣ ಚಳವಳಿ ಮೂಲತಃ ನಮ್ಮ ಭೂಮಾಲಿಕರ ಭೂಮಿ ಪ್ರಶ್ನೆ ಎಂದರೆ ಬಹುತೇಕರಿಗೆ ಆಶ್ಚರ್ಯವಾಗಬಹುದು. ಯಾಕೆಂದರೆ ಉಪರಾಷ್ಟ್ರೀಯತೆಯ ಪ್ರಶ್ನೆಯನ್ನು ನಾವು ಯಾವತ್ತು ಭೂಮಿ ಸಂಬಂಧದ ದೃಷ್ಟಿಯಿಂದ ನೋಡಲೇ ಇಲ್ಲ. ಕರ್ನಾಟಕದ ರಾಷ್ಟ್ರೀಯತೆಯ ಪ್ರಶ್ನೆಯನ್ನು ಕನ್ನಡ ಭಾಷೆ ಮಾತಾಡುವ ಎಲ್ಲಾರ ಸಮಸ್ಯೆಯೆಂದು ಬಿಂಬಿಸಲಾಗಿದೆ. ಕನ್ನಡ ಮಾತಾಡುವ ಎಲ್ಲರು ಒಂದಾದರೆ ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯದಾಗಬಹುದೆಂದು ನಾವೆಲ್ಲ ನಂಬಿದೆವು. ಆದರೆ ವಾಸ್ತವದಲ್ಲಿ ರಾಷ್ಟ್ರೀಯತೆಯ ಪ್ರಶ್ನೆ ಕೇವಲ ಭಾಷೆಯ ಸಮಸ್ಯೆಯಾಗಿರಲಿಲ್ಲ. ಏಕೀಕರಣ ಚಳವಳಿ ಹುಟ್ಟಿದ ಪ್ರದೇಶದ ಭೂಮಿ ಸಮಸ್ಯೆಯನ್ನು ಅರ್ಥಮಾಡಿಕೊಂಡರೆ ಭಾಷೆ ಹೇಗೆ ಭೂಮಾಲಿಕರ ಭೂಮಿ ಸಮಸ್ಯೆಯ ಮೇಲೆ ದಪ್ಪನೆಯ ಮುಸುಕು ಹಾಸಿದೆ ಎನ್ನುವುದು ಅರ್ಥವಾಗಬಹುದು. ಮುಂಬಯಿ ಪ್ರಾಂತ್ಯದಲ್ಲಿ ಏಕೀಕರಣ ಚಳವಳಿ ಹುಟ್ಟಿದೆ. ಅಲ್ಲಿ ಅದು ಕನ್ನಡ ವರ್ಸಸ್‌ಮರಾಠಿ ಭಾಷೆಗಳ ನಡುವಿನ ಹೋರಾಟದ ರೂಪದಲ್ಲಿ ಪ್ರಚಾರಗೊಂಡಿದೆ. ಆದರೆ ಯಾವತ್ತು ಕೂಡ ಅದು ಕನ್ನಡ ಮಾತನಾಡುವ ಕೃಷಿಕರು (ಲಿಂಗಾಯತರು) ಮತ್ತು ಮರಾಠಿ ಮಾತನಾಡುವ ಭೂಮಾಲಿಕರು (ದೇಸಾಯಿ, ಕುಲಕರ್ಣಿ) ನಡುವಿನ ಹೋರಾಟವೆಂದು ಬಿಂಬಿತವಾಗಿಲ್ಲ ಬ್ರಾಹ್ಮಣರೇ ಮುಂಚೂಣಿಯಲ್ಲಿದ್ದ ಭಾರತದ ರಾಷ್ಟ್ರೀಯ ಹೋರಾಟದಲ್ಲಾಗಲಿ ಅಥವಾ ಕನ್ನಡ ರಾಷ್ಟ್ರಿಯತೆಯ ಹೋರಾಟದಲ್ಲಾಗಲಿ ಲಿಂಗಾಯತರು ಆರಂಭದಲ್ಲಿ ಪಾಲುಗೊಳ್ಳಲಿಲ್ಲ. ಯಾಕೆಂದರೆ ಲಿಂಗಾಯತರು ಒಂದೆಡೆ ದಿನನಿತ್ಯದ ಬದುಕಿನಲ್ಲಿ ಬ್ರಾಹ್ಮಣ ಭೂಮಾಲಿಕರೊಂದಿಗೆ ಭೂಮಿ ಸಂಬಂಧವಾಗಿ ಏಗಬೇಕಿತ್ತು.[1] ಮತ್ತೊಂದೆಡೆ ಸಾಂಸ್ಕೃತಿಕವಾಗಿಯೂ ಬ್ರಾಹ್ಮಣರೊಂದಿಗೆ ಏಗಬೇಕಿತ್ತು.[2] ಆದುದರಿಂದಲೇ ಲಿಂಗಾಯತ ಮುಂದಾಳುಗಳು ಬ್ರಾಹ್ಮಣೇತರ ಚಳವಳಿಯಲ್ಲಿ ಸಕ್ರಿಯರಾಗಿದ್ದರು.[3] ಎರಡೂ ಹೋರಾಟಗಳಿಗೂ (ಕನ್ನಡ ಹೋರಾಟಕ್ಕು ರಾಷ್ಟ್ರೀಯ ಹೋರಾಟಕ್ಕು) ಸಂಖ್ಯಾಬಲ ಬೇಕಿತ್ತು. ಅದು ಬ್ರಾಹ್ಮಣರಲ್ಲಿ ಇರಲಿಲ್ಲ, ಲಿಂಗಾಯತರಲ್ಲಿ ಇತ್ತು. ಆದುದರಿಂದ ಹೇಗಾದರೂ ಮಾಡಿ ಎರಡೂ ಹೋರಾಟಗಳ ಮುಂಚೂಣಿಗೆ ಲಿಂಗಾಯತರನ್ನು ತರುವುದು ಅನಿವಾರ್ಯವಾಗಿತ್ತು.[4] ಹೀಗೆ ಕನ್ನಡ ರಾಷ್ಟ್ರೀಯತೆಯ ಪ್ರಶ್ನೆ ಒಂದು ವಿಧದಲ್ಲಿ ನಮ್ಮ ಸಮುದಾಯವೊಂದರ ಬಲಾಢ್ಯರ ಭೂಮಿ ಪ್ರಶ್ನೆ ಕೂಡ ಆಗಿತ್ತು.

ಕರ್ನಾಟಕದ ಮತ್ತೊಂದು ಸಮುದಾಯದ ಬಲಾಢ್ಯರು ಭೂಮಿ ಪ್ರಶ್ನೆಯನ್ನು ಮತ್ತೊಂದು ವಿಧದಲ್ಲಿ ಕೇಳಿಕೊಂಡಿದ್ದಾರೆ. ಉತ್ತರ ದಕ್ಷಿಣ ಕರ್ನಾಟಕ ಸೇರಿದರೆ ತಾವು ಅಲ್ಪಮತದವರಾಗುತ್ತೇವೆ. ಏಕೀಕರಣಪೂರ್ವ ರಾಜ್ಯದ ರಾಜಕಾರಣದ ಮೇಲಿದ್ದ ತಮ್ಮ ಹಿಂದಿನ ಏಕಸ್ವಾಮ್ಯತೆಯನ್ನು ಮುಂದುವರಿಸುವುದು ಕಷ್ಟವಾಗಬಹುದು. ಮತ್ತೊಂದು ಸಮುದಾಯದ ಬಲಾಢ್ಯರೊಂದಿಗೆ ರಾಜಕೀಯ ಅಧಿಕಾರವನ್ನು ಹಂಚಿಕೊಳ್ಳಬೇಕು. ಹಂಚಿಕೊಂಡ ಅಧಿಕಾರ ಈ ಹಿಂದೆ ಇದ್ದ ಏಕಸ್ವಾಮ್ಯ ಅಧಿಕಾರದಷ್ಟೇ ಪರಿಣಾಮಕಾರಿಯಾಗಿ ತಮ್ಮ ಆದ್ಯತೆಗಳನ್ನು ಪ್ರತಿನಿಧಿಕರಿಸುವ ಗ್ಯಾರಂಟಿ ಇರಲಿಲ್ಲ. ಈ ಎಲ್ಲದರ ಹಿನ್ನೆಲೆಯಲ್ಲಿ ಏಕೀಕರಣವನ್ನು ವಿರೋಧಿಸುವ ಮೂಲಕ ದಕ್ಷಿಣದ ಒಕ್ಕಲಿಗ ಬಲಾಢ್ಯರು ತಮ್ಮ ಭೂಮಿ ಪ್ರಶ್ನೆಯನ್ನು ಕೇಳಿಕೊಂಡಿದ್ದಾರೆ. ಒಂದು ನಿಲುವಿನ ಪ್ರಕಾರ ಏಕೀಕರಣ ನಂತರ ಸುಮಾರ ಎಪ್ಪತ್ತರ ದಶಕದವರೆಗೂ ಎರಡೂ ಸಮುದಾಯಗಳ ಬಲಾಢ್ಯರು ತಮ್ಮ ಭೂಮಿ ಪ್ರಶ್ನೆಯನ್ನು ತಮ್ಮ ಆಸಕ್ತಿಗೆ ಪೂರಕವಾಗಿ ಪರಿಹರಿಸಿಕೊಂಡಿದ್ದಾರೆ.[5] ಇನಾಂ ರದ್ದತಿ ಮಸೂದೆ ಇರಬಹುದು ಅಥವಾ ೧೯೬೧ರ ಭೂಸುಧಾರಣ ಮಸೂದೆ ಇರಬಹುದು ತಮ್ಮ ಆಸಕ್ತಿಗೆ ದಕ್ಕೆಯಾಗದಂತೆ ನೋಡಿಕೊಂಡಿದ್ದಾರೆ.[6] ಎಪ್ಪತ್ತರ ನಂತರ ಹಿಂದುಳಿದ ಜಾತಿಗಳು ನಿಧಾನವಾಗಿ ರಾಜಕೀಯವಾಗಿ ಬಲಯುತಗೊಂಡವು. ಹಿಂದುಳಿದವರಲ್ಲಿ ಬಹುತೇಕರು ಗೇಣಿದಾರು. ರಾಜಕೀಯವಾಗಿ ಬಲಗೊಂಡಂತೆ ತಮ್ಮ ಭೂಮಿ ಪ್ರಶ್ನೆಯನ್ನು ಅವರು ಮುಂದಿಟ್ಟರು. ದೇವರಾಜ ಅರಸು ಆಳ್ವಿಕೆಯಲ್ಲಿ ೧೯೭೪ರ ಭೂಸುಧಾರಣ ಮಸೂದೆ ಜಾರಿಗೆ ಬಂತು. ಬಹುತೇಕ ಗೇಣಿದಾರರು ತಾವು ಉಳುವ ಅಲ್ಪಸ್ವಲ್ಪ ಭೂಮಿಗೆ ಒಡೆಯರಾದರು.[7]

ಎಲ್ಲರೂ ತಮ್ಮ ತಮ್ಮ ಭೂಮಿ ಪ್ರಶ್ನೆಯನ್ನು ವಿವಿಧ ಚಾರಿತ್ರಿಕ ಸಂದರ್ಭಗಳಲ್ಲಿ ಕೇಳಿಕೊಂಡಿದ್ದಾರೆ. ಮತ್ತು ತಮ್ಮ ತಮ್ಮ ಶಕ್ತಿಯನುಸಾರ ಕೆಲವರು ಹೆಚ್ಚು ಮತ್ತೆ ಕೆಲವರು ಕಡಿಮೆ ಭೂಮಿ ಪಡೆದಿದ್ದಾರೆ. ಆದರೆ ನಿಜವಾದ ಉಳುವವ (ದಲಿತ) ಹೊಲದ ಒಡೆಯನಾಗಲೇ ಇಲ್ಲ. ದಲಿತರ ಭೂಮಿ ಪ್ರಶ್ನೆ ಶತಮಾನಗಳಿಂದ ನೆನೆಗುದಿಗೆ ಬಿದ್ದಿದೆ. ದಲಿತರ ಭೂಮಿ ಪ್ರಶ್ನೆ ಇನ್ನೂ ಸಾರ್ವಜನಿಕ ಚರ್ಚೆಯ ವಸ್ತುವಾಗಿಲ್ಲ. ಅವರ ಭೂಮಿ ಪ್ರಶ್ನೆ ಬಂದಾಗಲೆಲ್ಲ ಭೂಮಿಯೇ ಮಹತ್ವ ಕಳೆದುಕೊಂಡಿದೆ ಎನ್ನುವ ಚಿತ್ರಣ ನೀಡಲಾಗುತ್ತಿದೆ. ಹಳ್ಳಿಯಲ್ಲಿ ಮೂರು ಹೊತ್ತಿನ ಊಟಕ್ಕೆ ಪರದಾಡುವುದರಿಂದ ಪೇಟೆ ಪಟ್ಟಣ ಸೇರುವುದು ವಾಸಿ. ಕೈ ಕೆಸರಾದರೆ ಬಾಯಿ ಮೊಸರಾಗುತ್ತದೆ ಎನ್ನುವ ಚಿತ್ರಣ ನೀಡಲಾಗುತ್ತಿದೆ. ಹಳ್ಳಿಯಲ್ಲಿ ಮೂರು ಹೊತ್ತಿನ ಊಟಕ್ಕೆ ಪರದಾಡುವುದರಿಂದ ಪೇಟೆ ಪಟ್ಟಣ ಸೇರುವುದು ವಾಸಿ. ಕೈ ಕೆಸರಾದರೆ ಬಾಯಿ ಮೊಸರಾಗುತ್ತದೆ ಎನ್ನುವ ನಾಣ್ಣುಡಿ ಎಂದೋ ಸುಳ್ಳಾಗಿದೆ. ಬಾಯಿ ಮೊಸರಾಗಬೇಕಾದರೆ ಕೈಕೆಸರು ಮಾಡಿಕೊಳ್ಳುವುದಲ್ಲ; ವ್ಯಾಪಾರ ವಹಿವಾಟು ಮಾಡಬೇಕು. ಹೊಲಗದ್ದೆಗಳಲ್ಲಿ ದುಡಿಯಲು ಮುಂದಿನ ಪೀಳಿಗೆಯನ್ನು ಸಿದ್ದಗೊಳಿಸುವುದುಲ್ಲ; ಮಕ್ಕಳನ್ನು ಓದಿಸಿ ಡಾಕ್ಟರ್ ಎಂಜೀನಿಯರ್ ಮಾಡಿಸಬೇಕು. ಭೂಮಿ ಯಾರಿಗೂ ಇಂದು ಬೇಡವಾಗಿದೆ. ಇದ್ದ ಭೂಮಿಯನ್ನೇ ಕೃಷಿ ಮಾಡಲಾಗದೆ ಜನ ಭೂಮಿ ಮಾರಿ ಪೇಟೆ ಸೇರುತ್ತಿದ್ದಾರೆ. ಇಂದು ಭೂಮಿ ಹೊಂದುವುದು ಯಾರೊಬ್ಬರ ಆದ್ಯತೆಯಲ್ಲ ಎನ್ನುವ ಬಣ್ಣದ ಮಾತುಗಳ ಮೂಲಕ ಭೂರಹಿತರನ್ನು ಒಪ್ಪಿಸಲಾಗುತ್ತಿದೆ. ನಮ್ಮಲ್ಲಿ ಹಿಂದೆ ಮತ್ತು ಇಂದು ಕೂಡ ಭೂಮಿ ಇದ್ದವರು ವ್ಯಾಪರ ವಹಿವಾಟುಗಳಲ್ಲಿ ತೊಡಗಿಸಿಕೊಂಡಷ್ಟು ಮುರು ಹೊತ್ತಿನ ಊಟಕ್ಕೆ ಪರದಾಡುವ ಭೂರಹಿತರು ತೊಡಗಿಸಿಕೊಂಡಿಲ್ಲ. ಭೂಮಿ ಇದ್ದವರು ತಮ್ಮ ಮಕ್ಕಳನ್ನು ಡಾಕ್ಟರ್ ಎಂಜೀನಿಯರ್ ಓದಿಸಿದಷ್ಟು ಭೂರಹಿತರು ಓದಿಸಿಲ್ಲ. ಭೂಮಿ ಹೊಂದುವುದು ಎಲ್ಲಾ ವಿಧದ ಸಾಧನೆಗಳಿಗೂ ಅನಿವಾರ್ಯ. ಇಂದು ಕೂಡ ನಮ್ಮ ಸಮಾಜದ ಬಹುತೇಕರ ಬದುಕನ್ನು ಸಕರಾತ್ಮಕವಾಗಿ ಬದಲಾಯಿಸುವ ಒಂದು ಸಾಧನ ಇದ್ದರೆ ಅದು ಭೂಮಿ ಮಾತ್ರ. ಸಕರಾತ್ಮಕ ರಾಜಕೀಯಕ್ಕೆ, ಆರ್ಥಿಕ ಅಭಿವೃದ್ಧಿಗೆ ಹಾಗೂ ಸಾಮಾಜಿಕ ಪರಿವರ್ತನೆಗೆ ಇಂದು ಕೂಡ ತಳಸ್ತರದ ಜನರು ಭೂಮಿ ಹೊಂದಿರುವುದು ಎಷ್ಟು ಮುಖ್ಯ ಎಂದು ಈ ಅಧ್ಯಾಯದಲ್ಲಿ ವಾದಿಸಿದ್ದೇನೆ.

ಭೂಮಿ ಮತ್ತು ಅಭಿವೃದ್ಧಿ

ಒಂದು ಕಾಲದಲ್ಲಿ ಅಭಿವೃದ್ಧಿಗೂ ಭೂಸುಧಾರಣೆಗೂ ನೇರ ಸಂಬಂಧ ಹೆಣಿಯಲಾಗಿತ್ತು. ದೊಡ್ಡ ದೊಡ್ಡ ಭೂಮಾಲಿಕರು ಎಕರೆಗಟ್ಟಲೆ ಭೂಮಿಯನ್ನು ತಮ್ಮ ಸ್ವಾಧೀನ ಇಟ್ಟುಕೊಳ್ಳುವುದು ಹಾಗೂ ದುಡಿಯುವ ಜನರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವುದು ಎರಡೂ ಕೂಡ ಅಭಿವೃದ್ಧಗೆ ಪೂರಕವಲ್ಲ ಎಂದು ಗ್ರಹಿಸಲಾಗಿತ್ತು ಯಾಕೆಂದರೆ ಭೂಮಾಲಿಕರು ತಮ್ಮ ಸ್ವಾಧೀನ ಇದ್ದ ಭೂಮಿಯನ್ನು ಗೇಣಿಗೆ ಕೊಟ್ಟು ಕೃಷಿ ಮಾಡಿಸುತ್ತಿದ್ದರು. ಗೇಣಿದಾರರ ದುಡಿತದಲ್ಲಿ ಬಹುಪಾಲನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ಜತೆಗೆ ಕೃಷಿಯೇತರ ಚಟುವಟಿಕೆಗಳ ಕೊರತೆಯಿಂದ ಭೂರಹಿತ ಕೃಷಿ ಕಾರ್ಮಿಕರು ಇವರಲ್ಲಿ ಜೀತಕ್ಕೆ ಅಥವಾ ಕನಿಷ್ಠ ಕೂಲಿಗೆ ದುಡಿಯುವ ಅನಿವಾರ್ಯತೆ ಇತ್ತು. ಜೀತ ಅಥವಾ ಕನಿಷ್ಠ ಕೂಲಿಯ ದುಡಿತ ಮತ್ತು ಗೇಣಿಪದ್ಧತಿ ಎರಡೂ ಕೂಡ ಕೃಷಿ ಉತ್ಪಾದನೆಯ ದೃಷ್ಟಿಯಿಂದ ಮತ್ತು ಆರ್ಥಿಕ ಅಭಿವೃದ್ಧಿಯ ದೃಷ್ಟಿಯಿಂದ ಉತ್ತಮ ಪದ್ಧತಿಯಲ್ಲ. ಯಾಕೆಂದರೆ ಎರಡೂ ಪದ್ಧತಿಗಳಲ್ಲೂ ಉತ್ಪಾದನೆ ಹೆಚ್ಚುವುದಿಲ್ಲ. ಗೇಣಿಪದ್ಧತಿಯಲ್ಲಿ ರೈತರ ದುಡಿತದ ಬಹುಪಾಲನ್ನು ಭೂಮಾಲಿಕರು ಕಸಿದುಕೊಳ್ಳುತ್ತಿದ್ದರು. ಇದರಿಂದಾಗಿ ಗೇಣಿದಾರರು ತಮ್ಮ ಎಲ್ಲಾ ಶ್ರಮ ಹಾಕಿ ದುಡಿದು ಉತ್ಪಾದನೆ ಹೆಚ್ಚಿಸಲು ಪ್ರಯತ್ನಿಸುವುದಿಲ್ಲ. ಅದೇ ರೀತಿ ಅತ್ಯಲ್ಪ ಕೂಲಿಗೆ ದುಡಿಯುವ ಯಾರು ಕೂಡ ಉತ್ಪನ್ನ ಹೆಚ್ಚಿಸಲು ತಮ್ಮ ಶಕ್ತಿ ಮೀರಿ ಪ್ರಯತ್ನಿಸುವುದಿಲ್ಲ. ಕೃಷಿ ಉತ್ಪಾದನೆ ಹೆಚ್ಚಾಗಬೇಕಾದರೆ ಭೂಸುಧಾರಣೆ ತಂದು ಗೇಣಿದಾರಿಕೆಯನ್ನು ರದ್ದುಗೊಳಿಸಿ ಉಳುವವನನೇ ಹೊಲ ದೊಡೆಯನನ್ನಾಗಿ ಮಾಡಬೇಕೆಂದು ವಾದಿಸಲಾಯಿತು. ಭೂಮಾಲಿಕರ ಹಿಡಿತದಲ್ಲಿದ್ದ ಕೂಲಿ ಕಾರ್ಮಿಕರನ್ನು ಬಿಡುಗಡೆಗೊಳಿಸಿದರೆ ಅವರು ಸ್ವತಂತ್ರರಾಗುತ್ತಾರೆ. ಯಾರು ಸಂಬಳ ಹೆಚ್ಚು ಕೊಡುತ್ತಾರೋ ಅಲ್ಲಿ ಅವರುಗಳು ಕೂಲಿಗೆ ಹೋಗಬಹುದು. ಇದರಿಂದ ಕೃಷಿವಲಯದಲ್ಲಿ ತೊಡಗಿಸಿಕೊಂಡಿರುವ ಅಗತ್ಯಕ್ಕಿಂತ ಹೆಚ್ಚಿನ ಕೂಲಿ ಬಿಡುಗಡೆಗೊಳ್ಳುತ್ತದೆ. ಪೇಟೆ ಪಟ್ಟಣಗಳಲ್ಲಿನ ಕೈಗಾರಿಕೆ ಮತ್ತು ಸೇವಾ ವಲಯಗಳಿಗೆ ಶ್ರಮ ಪೂರೈಕೆಯಾಗುತ್ತದೆ. ಕೃಷಿಯೇತರ ವಲಯ ಅಭಿವೃದ್ಧಗೊಳ್ಳುತ್ತದೆ. ಹೀಗೆ ಭೂಸುಧಾರಣೆ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಉತ್ಪಾದನೆ ಹಚ್ಚಿಸುತ್ತದೆ. ಜೊತೆಗೆ ದುಡಿದು ತಿನ್ನುವವರು ಮುಕ್ತರಾಗಿ ತಮ್ಮ ಶ್ರಮವನ್ನು ಹೆಚ್ಚಿನ ಕೂಲಿಗೆ ಮರಿ ಉತ್ತಮ ಜೀವನ ಸಾಗಿಸಲು ಅವಕಾಶ ಮಾಡಿಕೊಡುತ್ತದೆ ಎಂದು ನಂಬಲಾಗಿತ್ತು. ಈ ಕಾರಣದಿಂದಲೇ ಸಮ್ಮಲ್ಲೂ ೧೯೪೮ರಿಂದಲೇ ಭೂ ಸುಧಾರಣೆಯ ಹಲವಾರು ಮಸೂದೆಗಳನ್ನು ರೂಪಿಸಿ ಜಾರಿಗೆ ತರಲಾಗಿದೆ. ೧೯೫೫ರಲ್ಲಿ ಇನಾಂ ರದ್ದತಿ ಮಸೂದೆ, ೧೯೬೧ರಲ್ಲಿ ಭೂಸುಧಾರಣ ಮಸೂದೆ ಮತ್ತು ೧೯೭೪ರಲ್ಲಿ ಮತ್ತೊಂದು ಭೂಸುಧಾರಣ ಮಸೂದೆ ಬಂದಿದೆ. ಹೀಗೆ ಸಾಲುಸಾಲಾಗಿ ಹಲವಾರು ಭೂಸುಧಾರಣೆಯ ಮಸೂದೆಗಳನ್ನು ಜಾರಿಗೆ ತರಲಾಗಿದೆ. ಈ ಭೂಸುಧಾರಣ ಮಸೂದೆಗಳಿಂದ ಉಳುವವರು ಹೊಲದ ಒಡೆಯರಾಗಿದ್ದಾರೆ, ಭೂರಹಿತರಿಗೆ ಭೂಮಿ ದೊರಕಿದೆ, ಕೃಷಿ ಕೂಲಿಗಳು ಸ್ವತಂತ್ರರಾಗಿ ಎಲ್ಲಿ ಕೂಲಿ ಜಾಸ್ತಿ ಸಿಗುತ್ತದೋ ಅಲ್ಲಿ ದುಡಿದು ಹೆಚ್ಚುಗಳಿಸುತ್ತಾರೆ, ಕರ್ನಾಟಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಇತ್ಯಾದಿ ಪ್ರಚಾರಗಳು ಮೇಲ್ ಪದರದ ಅಭಿವೃದ್ಧಿ ಚಿಂತನೆಯ ಭಾಗವಾಗಿದೆ.[8]

ಇಂದು ಅಭಿವೃದ್ಧಿಗೂ ಭೂಸುಧಾರಣೆಗೂ ನೇರ ಸಂಬಂಧ ಇಲ್ಲ, ಇನ್ನೊಂದು ವಿಧದಲ್ಲಿ ಹೇಳುವುದಾದರೆ ರಿವರ್ಸ್ ಭೂಸುಧಾರಣೆ ನಡೆದಿದೆ. ಅಂದರೆ ಎಪ್ಪತ್ತು ಎಂಬತ್ತರ ದಶಕದಲ್ಲಿ ಮಾಡಿದ ಉಳುವವನೇ ಹೊಲದೊಡೆಯ ಎನ್ನುವ ನೀತಿಯನ್ನು ತಿರುವುಮುರುವು ಮಾಡಲಾಗಿದೆ. ಗೇಣಿ ಪದ್ದತಿಯನ್ನು ವಾಪಸ್ ತರಲಾಗಿದೆ. ಇಂದಿನ ಅಭಿವೃದ್ಧಿಗೆ ಇವೆಲ್ಲವೂ ಅಗತ್ಯವಿದೆ ಎನ್ನುವ ವಾದವೂ ಇದೆ. ಇದರ ಪರಿಣಾಮವಾಗಿಯೇ ೧೯೭೪ರ ಭೂಸುಧಾರಣೆ ಮಸೂದೆಗೆ ೧೯೯೬ರಲ್ಲಿ ತಿದ್ದುಪಡಿಗೊಂಡಿದೆ. ತಿದ್ದುಪಡಿಗೊಂಡ ಮಸೂದೆ ಭೂಮಿಯನ್ನು ಗುತ್ತಿಗೆ ಕೊಡುವುದಕ್ಕೆ ಅಥವಾ ಭೂಮಿಯನ್ನು ಉಪರಭಾರೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.[9] ಇದಕ್ಕೆ ಬಹುಮುಖ್ಯ ಕಾರಣ ಇಂದು ಸರಕಾರ ಅನುಸರಿಸುತ್ತಿರುವ ಅಭಿವೃದ್ಧಿ ನೀತಿ. ಈ ಅಭಿವೃದ್ಧಿ ನೀತಿಯ ತಳಹದಿ ಅಂತರಾಷ್ಟ್ರೀಯ ವ್ಯಾಪಾರ ಸಿದ್ದಾಂತ. ಈ ಸಿದ್ದಾಂತದ ಅನುಸಾರ ಪ್ರತಿರಾಷ್ಟ್ರಗಳು ತಾವು ಯಾವ ಕ್ಷೇತ್ರದಲ್ಲಿ ಹೆಚ್ಚು ನೈಪುಣ್ಯತೆಯನ್ನು ಹೊಂದಿದೆಯೋ ಆಕ್ಷೇತ್ರದಲ್ಲಿ ತೊಡಗಿಸಿಕೊಂಡು ಉತ್ಪಾದನೆ ಹೆಚ್ಚಿಸಿಕೊಳ್ಳಬೇಕು. ಮಿಗತೆ ಉತ್ಪಾದನೆಯನ್ನು ಪರದೇಶಕ್ಕೆ ರಪ್ತುಮಾಡಬೇಕು. ತಮ್ಮಲ್ಲಿ ಯಾವುದು ಕಡಿಮೆ ವೆಚ್ಚದಲ್ಲಿ ಉತ್ಪಾದನೆ ಯಾಗುವುದಿಲ್ಲವೋ ಅವುಗಳನ್ನು ಮತ್ತೊಂದು ರಾಷ್ಟ್ರಿದಿಂದ ಆಮದುಮಾಡಿಕೊಳ್ಳಬೇಕು. ಪ್ರತಿಯೊಂದು ರಾಷ್ಟ್ರ ಕೂಡ ತಮ್ಮ ನೈಪುಣ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಉತ್ಪಾದನೆ ಹೆಚ್ಚಿಸುವುದರಿಂದ ಒಟ್ಟಾರೆ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ. ವೆಚ್ಚ ಕಡಿಮೆಯಾದರೆ ಸರಕಿನ ಬೆಲೆಯೂ ಕಡಿಮೆಯಾಗುತ್ತದೆ. ಈ ಎಲ್ಲದರ ಅಂತಿಮ ಲಾಭ ಕಟ್ಟಕಡೆಯ ವ್ಯಕ್ತಿಗೆ ಅಂದರೆ ಗ್ರಾಹಕರಿಗೆ ಸಿಗುತ್ತದೆ. ಇದು ಹೊಸ ಅಭಿವೃದ್ದಿ ದೃಷ್ಟಿಕೋನ. ಇಲ್ಲಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುವುದು ಅಥವಾ ಕಡಿಮೆ ವಚ್ಚದಲ್ಲಿ ಹೆಚ್ಚು ಉತ್ಪಾದಿಸುವುದು, ಉತ್ಪಾದಿಸಿದ್ದನ್ನು ರಪ್ತು ಮಾಡಿ ವಿದೇಶಿ ವಿನಿಮಯ ಗಳಿಸುವುದು, ಗಳಿಸಿದನ್ನು ಪುನಃ ವಿನಿಯೋಚಿಸಿ ಇನ್ನು ಹೆಚ್ಚು ಉತ್ಪಾದಿಸುವುದು ಇತ್ಯಾದಿಗಳು ಮುಖ್ಯ ಉತ್ಪಾದನೆಯ ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ಸಣ್ಣಪುಟ್ಟ ಹೊಲಗಳ ಬದಲು ಎಕರೆಗಟ್ಟಲೆ ಹೊಲಗಳನ್ನು ಒಟ್ಟು ಸೇರಿಸಿ ಕೃಷಿ ಮಾಡುವುದು ಅನುಕೂಲ. ಹಸಿರು ಕ್ರಾಂತಿಯ ಸಂದರ್ಭದಲ್ಲೇ ಕೃಷಿ ಭೂಮಿಯ ಗಾತ್ರದ ಸಮಸ್ಯೆ ತಲೆದೋರಿದೆ. ಕೆಲವರು ಹಸಿರು ಕ್ರಾಂತಿ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕಾದರೆ ಕೃಷಿಭೂಮಿಯ ಗಾತ್ರ ದೊಡ್ಡದಿರಬೇಕೆಂದು ವಾದಿಸಿದರು. ಇನ್ನು ಕೆಲವರ ಪ್ರಕಾರ ಕೃಷಿಭೂಮಿಯ ಗಾತ್ರಕ್ಕೂ ಹಸಿರು ಕ್ರಾಂತಿಗೂ ಸಂಬಂಧವಿಲ್ಲ. ಯಾವುದೇ ಗಾತ್ರದ ಭೂಮಿಯಲ್ಲೂ ಹಸಿರು ಕ್ರಾಂತಿ ಸಾಧ್ಯ ಎಂದು ವಾದಿಸಿದರು. ಆದರೆ ಈಗ ಹಾಗಲ್ಲ. ಉತ್ಪಾದನೆಯ ವೆಚ್ಚದ ಮೇಲೆ ಹಿಡಿತ ಸಾಧಿಸುವ ದೃಷ್ಟಿಯಿಂದ ಕೃಷಿಭೂಮಿಯ ಗಾತ್ರ ಹೆಚ್ಚಿರುವುದು ಅನಿವಾರ್ಯವೆಂದು ತಿಳಿಯಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ವರ್ಧಿಸಬೇಕಾದರೆ ವೆಚ್ಚದ ಮೇಲೆ ಹಿಡಿತ ಸಾಧಿಸುವುದು ಅನಿವಾರ್ಯವಾಗಿದೆಯೆಂದು ಪ್ರಚಾರ ಮಾಡಲಾಗುತ್ತಿದೆ.

ಈ ಎಲ್ಲಾ ಬದಲಾವಣೆಗಳಿಂದ ಇಂದು ಕೃಷಿ ಮೂರು ಹೊತ್ತಿನ ಊಟದ ಸಾಧನವಾಗಿ ಉಳಿದಿಲ್ಲ. ಕೃಷಿ ಕೂಡ ಇನ್ಯಾವುದೇ ಉದ್ದಿಮೆಯಂತೆ ಬಂಡವಾಳ ಹಾಕಿ ಬಂಡವಾಳ ತೆಗೆಯುವ ಒಂದು ಉದ್ದಿಮೆ. ಇಂತಹ ಕೃಷಿ ಉದ್ದಿಮೆ ನಡೆಸಲು ಕರಾವಳಿ ಪ್ರದೇಶಗಳಲ್ಲಿನ ಸೀಗಡಿ ಉದ್ದಿಮೆದಾರರಿಗೆ ಎಕರೆಗಟ್ಟಲೆ ನೀರಾವರಿ ಭೂಮಿ ಬೇಕು. ಅದೇ ರೀತಿಯಲ್ಲಿ ಬೆಂಗಳೂರು, ಮೈಸೂರು ಕಡೆಯ ಕೃಷಿ ಉದ್ದಿಮೆದಾರರಿಗೆ ಫಲಪುಷ್ಪಗಳ ಉದ್ದಿಮೆಗಳಿಗೆ ಎಕರೆಗಟ್ಟಲೆ ಭೂಮಿ ಬೇಕು. ಉತ್ತರ ಕರ್ನಾಟಕ ಪ್ರದೇಶಗಳಲ್ಲಿ ತೋಟಗಾರಿಕ ಬೆಳೆಗಳಿಗೆ ಭೂಮಿ ಬೇಕು. ಸ್ಥಳೀಯ ಉದ್ದಿಮೆಗಳ ಜತೆಗೆ ಪರದೇಶಿ ಉದ್ದಿಮೇಗಳು ಕೂಡ ಬೀಜ ಉತ್ಪಾದನೆಗೆ ಅಥವಾ ತರಕಾರಿ ಉತ್ಪಾದನೆಗೆ ಅಥವಾ ಇನ್ಯಾವುದೋ ಕೃಷಿಗೆ ಎಕರೆಗಟ್ಟಲೆ ಭೂಮಿ ಕೇಳುತ್ತಾರೆ. ಇವರೆಲ್ಲರಿಗೆ ಸರಕಾರವೇ ಭೂಮಿ ಕೊಡಲು ಸಾಧ್ಯವಿಲ್ಲ. ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಭೂಮಿಯನ್ನು ಇಂತಹ ಉದ್ದಿಮೆಗಳಿಗೆ ಗೇಣಿಗೆ ನಿಡುವುದರಿಂದ ಎರಡೂ ಪಕ್ಷಗಳಿಗೂ ಲಾಭ ಸಾಧ್ಯ ಎನ್ನುವುದು ನೇರವಾದ.[10] ಎಷ್ಟೋ ಸಂದರ್ಭದಲ್ಲಿ ಸಣ್ಣಪುಟ್ಟ ಭೂಮಿ ಹೊಂದಿದವರಲ್ಲಿ ಉದ್ಯಮತ್ವ ಇರುವುದಿಲ್ಲ. ಉದ್ಯಮತ್ವ ಹೊಂದಿದವರಲ್ಲಿ ಭೂಮಿ ಇರುವುದಿಲ್ಲ ಇಂತಹ ಸಂದರ್ಭದಲ್ಲಿ ಭೂಮಿ ಪರಭಾರೆಗೆ ಅವಕಾಶ ಮಾಡಿಕೊಡುವುದು ಒಟ್ಟಾರೆ ಅಭಿವೃದ್ಧಿಯ ದೃಷ್ಟಿಯಿಂದ ಅನಿವಾರ್ಯ ಎನ್ನವುದು ಪರೋಕ್ಷವಾದ. ಮಾರುಕಟ್ಟೆ ಪ್ರೇರಿತ ಅಭಿವೃದ್ದಿಗೆ ನೆರವಾಗಲು ೧೯೭೪ರ ಭೂಮಸೂದೆ ಕಾಯಿದೆಗೆ ತಿದ್ದುಪಡಿ ಮಾಡಿ ೧೯೯೬ರಲ್ಲಿ ಕರ್ನಾಟಕ ಲ್ಯಾಂಡ್ ಸೀಲಿಂಗ್ ಮಸೂದೆ ಜಾರಿಗೆ ತರಲಾಗಿದೆ.

ಹೆಚ್ಚು ಕಡಿಮೆ ರೈತರು ಕೂಡ ಮಾರುಕಟ್ಟೆಯತ್ತ ಮುಖ ಮಾಡಿದ ಕೃಷಿಗೆ ಪರವಾಗಿದ್ದಾರೆ ಎಂದು ಕೆಲವರು ವಾದಿಸುತ್ತಾರೆ. ಈ ಬದಲಾವಣೆಗೆ ಅವರು ಕೊಡುವ ಪುರಾವೆಗಳೆಂದರೆ ಅಂತರಾಷ್ಟ್ರೀಯ ಕೃಷಿ ಉದ್ದಿಮೆಗಳ ವಿರುದದ್ದ ನಡೆಯುತ್ತಿದ್ದ ಚಳವಳಿ ಪರ (ನಂಜುಂಡ ಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿದ್ದ) ಆರಂಭದಲ್ಲಿ ರೈತರಿದ್ದರು. ಆದರೆ ಬರಬರುತ್ತಾ ರೈತರು ಉದ್ದಿಮೆ ಪ್ರೇರಿತ ಕೃಷಿಪರ ಒಲವು ತೋರಿಸಲು ಆರಂಭಿಸಿದರು. ಈ ಬೆಳವಣಿಗೆಯಿಂದಾಗಿ ಉದ್ದಿಮೆ ಪ್ರೇರಿತ ಕೃಷಿ ವಿರುದ್ದ ಹೋರಾಟ ನಡೆಸಿದರೆ ರೈತರು ಸೇರುವುದಿಲ್ಲ ಎಂದು ವಾದಿಸುವವರಿದ್ದಾರೆ.[11] ಈ ವಾದಗಳಲ್ಲೂ ಸತ್ಯಾಂಶ ಇರಬಹುದು. ಇವುಗಳನ್ನು ಅಲ್ಲಗೆಳೆಯುವ ಅಗತ್ಯವಿಲ್ಲ. ಯಾಕೆಂದರೆ ಮೇಲಿನ ಯಾವುದೇ ಬೆಳವಣಿಗೆಗಳು ಭೂಸುಧಾರಣೆಯ ಮಹತ್ವವನ್ನು ಕುಗ್ಗಿಸುವುದಿಲ್ಲ. ಈ ವಾದಗಳನ್ನು ಒದೊಂದಾಗಿ ಪರಿಶೀಲಿಸುವ. ಮೊದಲಿಗೆ ಹಿಂದೆ ಅಭಿವೃದ್ಧಿಗೂ ಭೂಸುಧಾರಣೆಗೂ ನೇರ ಸಂಬಂಧ ಇತ್ತು. ಹಾಗೆಂದು ಭೂಸುಧಾರಣೆ ಮಾಡಲಾಗಿದೆ ಎಂದು ವಾದಿಸಲಾಗುತ್ತಿದೆ. ಬಹುದೊಡ್ಡ ಸಮಸ್ಯೆ ಇರುವುದೇ ಇಲ್ಲಿ . ಹಿಂದೆ ಭೂಸಂಬಂಧವನ್ನು ಅಡಿಮೇಲು ಮಾಡುವ ಭೂಸುಧಾರಣೆ ನಡೆದಿದೆ ಎಂದು ದೊಡ್ಡ ಪ್ರಚಾರ ನಡೆದಿದೆ ಮತ್ತು ಬಹುತೇಕರು ಅದನ್ನು ಯಥಾರೂಪದಲ್ಲಿ ನಂಬಿದ್ದಾರೆ. ಆದರೆ ವಾಸ್ತವದಲ್ಲಿ ಹಿಂದೆ ನಡೆದಿರುವ ಭೂಸುಧಾರಣೆಯ ಕೊರತೆಗಳನ್ನು ಪಟ್ಟಿ ಮಾಡುವ ಸಾಕಷ್ಟು ಅಧ್ಯಯನಗಳು ನಡೆದಿವೆ. ಅವುಗಳ ಪ್ರಕಾರ ಹಿಂದೆ ನಡೆದಿರುವ ಭೂಸುಧಾರಣೆ ಭೂಮಿಯನ್ನು ರೈತರಿಗೆ ಹಂಚಲಿಲ್ಲ. ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನಪಡಿಸಿಕೊಳ್ಳಲು ಭೂಮಾಲಿಕರಿಗೆ ಹಿಂದಿನ ಕೆಲವು ಮಸೂದೆಗಳು ನೆರವು ನೀಡಿವೆ. ಈ ಮಸೂದೆಗಳ ಪರಿಣಾಮದಿಂದಾಗಿ ದೊಡ್ಡ ಸಂಖ್ಯೆಯಲ್ಲಿ ರೈತರು ಕೃಷಿ ಕೂಲಿಗಳಾಗಿದ್ದಾರೆ. ಹಿಂದಿನ ಯಾವುದೇ ಮಸೂದೆಯಲ್ಲೂ ಕೃಷಿ ಕೂಲಿಗಳಿಗೆ ದೊಡ್ಡ ಮಟ್ಟಿನ ಲಾಭವಾಗಿಲ್ಲ. ಈ ಪರಸ್ತಕದ ಮುಖ್ಯ ಉದ್ದೇಶ ಹಿಂದಿನ ಮಸೂದೆಗಳ ವಿಶ್ಲೇಷಣೆ ಮತ್ತು ಇವುಗಳಿಂದ ಭೂಮಿ ಕಳೆದುಕೊಂಡವರು ಮತ್ತು ಪಡೆದವರನ್ನು ಗುರುತಿಸುವುದು. ಇವುಗಳ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿರುವ ಭೂಸುಧಾರಣೆಯನ್ನು ಪುನರರಾಂಭಿಸುವ ಅನಿವಾರ್ಯತೆಯನ್ನು ವಾದಿಸುವುದು ಈ ಪುಸ್ತಕದ ಮತ್ತೊಂದು ಉದ್ದೇಶ.

ಕೃಷಿ ಉದ್ದಿಮೆ

ಎರಡನೇ ವಾದದ ಪ್ರಕಾರ ತೊಂಬತ್ತರ ನಂತರ ಅಭಿವೃದ್ಧಿ ದೃಷ್ಟಿಕೋನಗಳು ಬದಲಾಗಿವೆ. ಇವುಗಳ ಹಿನ್ನೆಲೆಯಲ್ಲಿ ಭೂಮಿ ಪ್ರಶ್ನೆಯನ್ನು ನೋಡಬೇಕಾಗಿದೆ. ಇಂದು ಭೂಸುಧಾರಣೆಯನ್ನು ಕೃಷಿಕರಿಗೆ ಮಾರುಕಟ್ಟೆಯಲ್ಲಿ ವ್ಯವಹರಿಸಲು ನೆರವಾಗುವ ದೃಷ್ಟಿಯಿಂದ ನೋಡಬೇಕು. ಈ ದೃಷ್ಟಿಯಿಂದ ಭೂಸುಧಾರಣೆಯನ್ನು ನೋಡಿದರೆ ಇಂದು ಬೇಕಾಗಿರುವುದು ಭೂಮಿಯನ್ನು ಸಣ್ಣ ಸಣ್ಣ ತುಂಡುಗಳಾಗಿ ಹಂಚುವ ಭೂಸುಧಾರಣೆಯಲ್ಲ. ಎಕರೆಗಟ್ಟಲೆ ಭೂಮಿಯನ್ನು ಒಂದು ಕಡೆ ಸೇರಿಸುವ ಭೂಸುಧಾರಣೆ ಇಂದು ಬೇಕಾಗಿದೆ ಎನ್ನುವ ವಾದ ಇದು. ಇದು. ಎಷ್ಟರ ಮಟ್ಟಿಗೆ ಸರಿ ಎಂದು ಪರಿಶೀಲಿಸೋಣ. ಭೂಮಿ ಗಾತ್ರ ಮತ್ತು ಮಾರುಕಟ್ಟೆಯಲ್ಲಿ ವ್ಯವಹರಿಸುವ ಶಕ್ತಿಯ ನಡುವೆ ಸಂಬಂಧ ಕಲ್ಪಿಸಲಾಗಿದೆ. ಸಣ್ಣ ಮತ್ತು ಅತೀ ಸಣ್ಣ ರೈತರು ಮಾರಕಟ್ಟೆಯಲ್ಲಿ ನೇರವಾಗಿ ವ್ಯವಹರಿಸುವುದು ಕಷ್ಟ. ಅಂತವರು ತಮ್ಮ ಸಣ್ಣ ಭೂಮಿಯನ್ನು ಮರುಕಟ್ಟೆಯಲ್ಲಿ ವ್ಯವಹರಿಸುವ ದೊಡ್ಡ ರೈತರಿಗೆ ಪರಭಾರೆ ಮಾಡಿದರೆ ಸಣ್ಣ ರೈತರಿಗೆ ವಿಶೇಷ ರಿಸ್ಕ್ ಇಲ್ಲದ ಮಾರುಕಟ್ಟೆಯ ಲಾಭಗಳು ಹರಿದು ಬರುತ್ತವೆ ಎನ್ನುವ ಗ್ರಹಿಕೆ ಈ ವಾದದ ಹಿಂದೆ ಇದೆ. ಆದರೆ ವಾಸ್ತವದಲ್ಲಿ ರೈತರಿಗೆ ಮಾರುಕಟ್ಟೆಯಲ್ಲಿ ವ್ಯವಹರಿಸಲು ಕಷ್ಟವಾಗುತ್ತಿರುವುದು ಕೃಷಿ ಭೂಮಿಯ ಗಾತ್ರದಿಂದ ಅಲ್ಲ. ಸಣ್ಣ ಮತ್ತು ಅತೀ ಸಣ್ಣ ರೈತರು ಕೂಡ ಮಾರುಕಟ್ಟೆಯಲ್ಲಿ ವ್ಯವಹರಿಸಬಹುದು. ಕರ್ನಾಟಕದ ರೈತರ ಆತ್ಮಹತ್ಯೆಯನ್ನು ಅಧ್ಯಯನ ಮಾಡಿದವರ ಪ್ರಕಾರ ಆತ್ಮಹತ್ಯೆಗೂ ಕೃಷಿ ಭೂಮಿಯ ಗಾತ್ರಕ್ಕೂ ಸಂಬಂಧ ಇಲ್ಲ. ಅಂದರೆ ಸಣ್ಣ ರೈತರು ಹೆಚ್ಚು ಸಂಖ್ಯೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಎಲ್ಲಾ ಗಾತ್ರದ ರೈತರು ಆತ್ಮಹತ್ಯೆ ಮಾಡಿಕೊಂಡವರಲ್ಲಿ ಕಂಡು ಬರುತ್ತಾರೆ.[12] ಅದೇ ರೀತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಮಾರುಕಟ್ಟೆ ಆಳವಾಗಿ ಬೇರೂರಿದ ಪ್ರದೇಶಗಳ (ಕರಾವಳಿ ಕರ್ನಾಟಕ, ಬೆಂಗಳೂರು ಮುಂತಾದ ಪ್ರದೇಶದ) ರೈತರ ಸಂಖ್ಯೆ ಕಡಿಮೆ ಇದೆ. ಆದರೆ ಮಾರುಕಟ್ಟೆ ವಿಶೇಷವಾಗಿ ಬೆಳೆಯದಿರುವ ಪ್ರದೇಶಗಳ (ದಾವಣಗೆರೆ, ಹಾವೇರಿ) ರೈತರು ಹೆಚ್ಚು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[13] ಅದುದರಿಂದ ಮಾರುಕಟ್ಟೆ ವ್ಯವಹಾರ ಮತ್ತು ರೈತರ ಕೃಷಿ ಭೂಮಿ ಗಾತ್ರಕ್ಕು ಸಂಬಂಧ ಕಲ್ಪಿಸುವುದು ಸರಿಯಲ್ಲ. ಭೂಮಿಯ ಗಾತ್ರಕ್ಕಿಂತ ಸಣ್ಣ ರೈತರನ್ನು ಕಾಡುವ ದೊಡ್ಡ ಸಮಸ್ಯೆಗಳೆಂದರೆ (ಮಾರುಕಟ್ಟೆಯಲ್ಲಿ ವ್ಯವಹರಿಸುವ ದೃಷ್ಟಿಯಿಂದ) ಬೇಡಿಕೆ ಮತ್ತು ಪೂರೈಕೆ ಲೆಕ್ಕಚಾರ ಇಲ್ಲದಿರುವುದು, ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕಗಳ ಕೊರತೆ, ಬೆಳೆದಿರುವುದನ್ನು ಬೇಡಿಕೆ ಬರುವ ತನಕ ಕಾಯ್ದಿರಿಸಲು ಬೇಕಾಗಿರುವ ಕೋಲ್ಡ್ ಸ್ಟೋರೇಜ್ ಸೌಲಭ್ಯಗಳ ಕೊರತೆ, ನೀರಾವರಿಯ ಕೊರತೆ, ಮಾರುಕಟ್ಟೆ ಮಾಹಿತಿ ಕೊರತೆ, ಅಧಿಕೃತ ಹಣಕಾಸು ಸಂಸ್ಥೆಗಳಿಂದ ದೊರೆಯದಿರುವ ಹಣಕಾಸು ಸೌಲಭ್ಯ ಇತ್ಯಾದಿಗಳು ಸಣ್ಣ ರೈತರು ಮಾರುಕಟ್ಟೆಯಲ್ಲಿ ವ್ಯವಹರಿಸುವಲ್ಲಿ ದೊಡ್ಡ ತೊಡಕಾಗಿವೆ.[14] ಮೇಲಿನ ಎಲ್ಲಾ ಕೊರತೆಗಳು ವ್ಯವಹಾರದ ವೆಚ್ಚವನ್ನು (transaction cost) ಹೆಚ್ಚಿಸುತ್ತವೆ. ವ್ಯವಹಾರದ ವೆಚ್ಚ ಹೆಚ್ಚಿದಂತೆ ಮಾರುಕಟ್ಟೆಯಲ್ಲಿ ಸ್ಪರ್ಧಿಸುವ ಶಕ್ತಿ ಕಡಿಮೆ ಆಗುತ್ತದೆ.

ಉತ್ಪಾದಕತೆ ಮತ್ತು ಭೂಹಿಡುವಳಿ ನಡುವೆನೂ ಸಂಬಂಧ ಕಲ್ಪಿಸಲಾಗಿದೆ. ಅಧಿಕಾರ ರೂಢರ ಪ್ರಕಾರ ಸಣ್ಣ ಹಿಡುವಳಿಗಳು ಉತ್ಪಾದಕತೆಯನ್ನು ಕುಂಠಿಸುತ್ತವೆ. ಸಣ್ಣ ಸಣ್ಣ ತುಂಡು ಭೂಮಿಗಳು ಎಲ್ಲಾ ಖರ್ಚುವೆಚ್ಚಗಳನ್ನು ಅನಗತ್ಯವಾಗಿ ಪುನರಾವರ್ತಿಸುತ್ತವೆ. ಅಂದರೆ ಪ್ರತಿ ರೈತ ಕೂಡ ಉಳುಮೆಗಾಗಿ ಒಂದು ಜತೆ ಎತ್ತು ಸಾಕಬೇಕು, ತನ್ನದೇ ನೀರಾವರಿ ವ್ಯವಸ್ಥೆ ಹೊಂದಬೇಕು, ಗೊಬ್ಬರದ ವ್ಯವಸ್ಥೆ ಮಾಡಬೇಕು, ಬಿತ್ತನೆ ನಡೆಸಬೇಕು. ಹೀಗೆ ಎಲ್ಲಾವೂ ಸಣ್ಣ ಪ್ರಮಾಣದಲ್ಲಿ ಪುನರಾವರ್ತನೆಗೊಳ್ಳುತ್ತವೆ. ಇವೆಲ್ಲವೂ ಉತ್ಪಾದನೆಯ ವೆಚ್ಚವನ್ನು ಹೆಚ್ಚಿಸುವುದರ ಜತೆಗೆ ಉತ್ಪಾದಕತೆಯನ್ನು ಕುಂಠಿಸುತ್ತವೆ. ವೆಚ್ಚ ಕಡಿಮೆ ಮಾಡುವ ದೃಷ್ಟಿಯಿಂದ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹಿಡುವಳಿ ಗಾತ್ರ ದೊಡ್ಡದಿರಬೇಕೆನ್ನುವುದು ಇವರ ವಾದ. ಸಣ್ಣ ತುಂಡು ಭೂಮಿಯನ್ನು ಮೇಲಿನ ಕ್ರಮದಲ್ಲಿ ಕೃಷಿ ಮಾಡಿದರೆ ಖಂಡಿತವಾಗಿಯೂ ಉತ್ಪಾದನ ವೆಚ್ಚ ಹೆಚ್ಚಾಗುತ್ತದೆ ಮತ್ತು ಉತ್ಪಾದಕತೆ ಕಡಿಮೆಯಾಗುತ್ತದೆ. ಹಾಗೆಂದು ಉತ್ಪಾದನ ವೆಚ್ಚ ಹೆಚ್ಚಾಗಲು ಮತ್ತು ಉತ್ಪಾದಕತೆ ಕಡಿಮೆಯಾಗಲು ಹಿಡುವಳಿ ಗಾತ್ರ ಸಣ್ಣದಿರುವುದು ಕಾರಣವಲ್ಲ. ಕೃಷಿಗೆ ಅವಶ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಸರಕಾರ (ಸಮಷ್ಠಿ) ವಿಫಲವಾಗಿರುವುದು ಮುಖ್ಯ ಕಾರಣ. ನೀರು, ಬೀಜ, ಗೊಬ್ಬರ, ಉಳುಮೆ ಇತ್ಯಾದಿಗಳನ್ನು ಯಾವುದೋ ಏಜನ್ಸಿ ರೈತರಿಗೆ ಕನಿಷ್ಠದರದಲ್ಲಿ ಪೂರೈಕೆ ಮಾಡಿದರೆ ಉತ್ಪಾದನ ವೆಚ್ಚ ಹೆಚ್ಚಾಗುವುದಿಲ್ಲ. ನಮ್ಮದೇ ರಾಜ್ಯದಲ್ಲಿ ನೀರಾವರಿ ವ್ಯವಸ್ಥೆ ಇರುವ ರೈತರು ನೀರಿಗೆ ವಿನಿಯೋಜಿಸುವ ಮೊತ್ತವನ್ನು ನಿರಾವರಿ ಇಲ್ಲದ ರೈತರು ವಿನಿಯೋಜಿಸುವ ಮೊತ್ತದೊಂದಿಗೆ ಹೋಲಿಸಿದರೆ ಈ ಅಂಶ ಸ್ಪಷ್ಟವಾಗಬಹುದು. ನೀರಾವರಿ ಪ್ರದೇಶಗಳಲ್ಲಿ ಒಂದು ಎಕರೆ ಭೂಮಿಗೆ ನೀರಿನ ವ್ಯವಸ್ಥೆ ಮಾಡಲು ರೈತರಿಗೆ ಐನೂರರಿಂದ ಆರುನುರು ರೂಗಳು ಸಾಕಾದರೆ ಒಣ ಭೂಪ್ರದೇಶಗಳಲ್ಲಿ ಇದೇ ಒಂದು ಎಕರೆ ಭೂಮಿಗೆ ನೀರಿನ ವ್ಯವಸ್ಥೆ ಮಾಡಲು ಕನಿಷ್ಠ ಎರಡರಿಂದ ಮೂರು ಸಾವಿರ ರೂಗಳು ಬೇಕು. ಇದೇ ರೀತಿ, ಸಾಗಣೆ, ಸಂಪರ್ಕ, ಹಣಖಸು, ಗೋದಾಮು ಇತ್ಯಾದಿಗಳು ಕೂಡ ರೈತರ ಉತ್ಪಾದನ ವೆಚ್ಚವನ್ನು ಗಾಢವಾಗಿ ಕಾಡುತ್ತವೆ. ಈ ಎಲ್ಲಾ ಸವಲತ್ತುಗಳು ಧಾರಾಳವಾಗಿ ಇರುವ ಪ್ರದೇಶದ ರೈತರ ಉತ್ಪಾದನ ವೆಚ್ಚ ಕಡಿಮೆ ಇದ್ದು ಈ ಸವಲತ್ತುಗಳು ಕೊರತೆ ಇರುವ ಪ್ರದೇಶಗಳ ರೈತರ ಉತ್ಪಾದನ ವೆಚ್ಚ ಗಣನೀಯವಾಗಿ ಹೆಚ್ಚಿದೆ. ಉತ್ಪಾದಕತೆ ಮತ್ತು ಹಿಡುವಳಿಯ ಗಾತ್ರದ ನಡುವೆ ಸಂಬಂಧ ಇಲ್ಲ. ಮೂಲಸೌಕರ್ಯಗಳ ಕೊರತೆ ಮತ್ತು ಉತ್ಪಾದಕತೆಯ ನಡುವೆ ಸಂಬಂಧ ಇದೆ. ಕೃಷಿಕೆಗೆ ಅವಶ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಗಳು ಉತ್ಪಾದನ ವೆಚ್ಚವನ್ನು ಮತ್ತು ಉತ್ಪಾದಕತೆಯನ್ನು ಗಾಢವಾಗಿ ಪ್ರಭಾವಿಸುತ್ತಿವೆ. ಕೇರಳ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿದ್ದಾರೆ. ಅವರೆಲ್ಲ ಇದೆ ಸಣ್ಣ ಭೂಮಿಯಿಂದ ತಮ್ಮ ಸಂಸಾರ ಸಾಗಿಸುವಷ್ಟು ಬೆಳೆಯುತ್ತಿದ್ದಾರೆ. ಇತರ ಕಡೆಗಳಲ್ಲಿ ಇದು ಸಾಧ್ಯವಾಗುವುದಾದರೆ ನಮ್ಮಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವ ಪ್ರಶ್ನೆಯನ್ನು ಅಧಿಕಾರ ರೂಢರು ಕೇಳಿಕೊಳ್ಳಬೇಕಾಗಿದೆ. ಹಿಡುವಳಿಯ ಗಾತ್ರದಲ್ಲಿ ಸಮಸ್ಯೆಯನ್ನು ಹುಡುಕುವುದನ್ನು ಬಿಟ್ಟು ಮೂಲಸೌಕರ್ಯಗಳ ಕೊರತೆಯನ್ನು ಪರಿಹರಿಸಲು ಪ್ರಯತ್ನಿಸಿದರೆ ಉತ್ಪಾದಕತೆ ತನ್ನಿಂದ ತಾನೇ ಸುಧಾರಿಸುತ್ತದೆ.

ಇವುಗಳ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಇಂದು ಕೂಡ ಒಪ್ಪಂದಗಳು (contracts) ಏರ್ಪಡುವುದು ಸರಕಾರದ ನೀತಿನಿಯಮಗಳಾನುಸಾರ ಅಲ್ಲ.[15] ರಾಜ್ಯದಲ್ಲಿ ಕನಿಷ್ಠ ಕೂಲಿ ಕಾಯಿದೆ ಇದೆ. ಆದರೆ ಎಷ್ಟು ಗ್ರಾಮೀಣ ಪ್ರದೇಶಗಳಲ್ಲಿ (ಗ್ರಾಮೀಣ ಬಿಡಿ ಪೇಟೆ ಪಟ್ಟಣಗಳಲ್ಲಿ) ಮಸೂದೆ ಸೂಚಿಸುವ ಕನಿಷ್ಠ ಕೂಲಿ ನೀಡುತ್ತಾರೆ. ಅದೇ ಕಾಯಿದೆಯಲ್ಲಿ ಕೆಲಸದ ಅವಧಿಯನ್ನು ಸೂಚಿಸಲಾಗಿದೆ (ಎಷ್ಟು ಹೊತ್ತಿಗೆ ಬರಬೇಕು, ಎಷ್ಟು ಹೊತ್ತಿಗೆ ಹೋಗಬೇಕು, ವಾರದ ರಜೆ ಇತ್ಯಾದಿಗಳು). ಆದರೆ ಕಾಯಿದೆಯಲ್ಲಿರುವ ಪ್ರಕಾರ ಕೆಲಸದ ಅವಧಿಗಳು ಇರುವುದಿಲ್ಲ. ಇದೇ ಪ್ರಕಾರ ತೂಕ, ಆಳತೆ, ಬಡ್ಡಿ ವ್ಯವಹರ ಇತ್ಯಾದಿಗಳನ್ನು ನಿಯಂತ್ರಿಸುವ ಕಾಯಿದೆಗಳಿವೆ. ಆದರೆ ಈ ಕಾಯಿದೆಗಳನ್ನು ಸಾಲ ವ್ಯವಹಾರಗಳು ನಡೆಯುವುದೇ ಇಲ್ಲ.[16] ಇಂದು ಕೂಡ ಸ್ಥಳೀಯ ಬಲಾಢ್ಯರು (ದೊಡ್ಡ ಭೂಮಾಲಿಕರು, ಲೇವಾದೇವಿ ವ್ಯವಹಾರದವರು, ದೊಡ್ಡ ವ್ಯಪಾರಿಗಳು) ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ವ್ಯವಹಾರಗಳ ನೀತಿ ನಿಯಮಗಳನ್ನು ನಿರ್ಧರಿಸುತ್ತಾರೆ. ಈ ಎಲ್ಲಾ ಕಾರಣಗಳಿಂದ ಗ್ರಾಮೀಣ ಪ್ರದೇಶದ ಶೇಕಡಾ ಎಂಬತ್ತಕ್ಕಿಂತಲೂ ಹೆಚ್ಚಿನ ವ್ಯವಹಾರಗಳು ಸರಕಾರದ ನೀತಿ ನಿಯಮಗಳನುಸಾರ ನಡೆಯುವುದಿಲ್ಲ. ಆದೇನಿದ್ದರೂ ಸ್ಥಳಿಯ ಬಲಾಢ್ಯರ ಮರ್ಜಿಗನಸಾರ ನಡೆಯುತ್ತವೆ. ಇವರಿಗೆ ಇಂತಹ ಶಕ್ತಿ ಎಲ್ಲಿಂದ ಬಂದಿದೆ? ದೊಡ್ಡ ಪ್ರಮಾಣದಲ್ಲಿ ಭೂಮಿ ಹೊಂದಿರುವುದು ಮತ್ತು ಭೂಮಿ ಜತೆಗೆ ಜಾತಿ / ಧರ್ಮಗಳನ್ನು ಬೆರೆಸಿಕೊಂಡು ರಾಜಕೀಯ ಮಾಡುವುದರಿಂದ ಇವರಿಗೆ ಈ ಶಕ್ತಿ ಬಂದಿದೆ. ಇವರುಗಳು ತಮ್ಮ ಆಸಕ್ತಿಗಳಿಗೆ ವಿರುದ್ಧವಾದ ಮಸೂದೆಗಳು ಬರದಂತೆ ತಡೆಯುತ್ತಾರೆ. ಒಂದು ವೇಳೆ ಮಸೂದೆಗಳು ಬಂದರೂ ಅವುಗಳು ಮಸೂದೆಗಳ ಮೂಲ ಉದ್ದೇಶಕ್ಕನುಗುಣವಾಗಿ ಜಾರಿಗೆ ಬರದಂತೆ ನೋಡಿಕೊಳ್ಳುತ್ತಾರೆ. ಇಂತಹ ಸ್ಥಿತಿ ಬದಲಾಗಿ ಸಣ್ಣ ಮತ್ತು ಅತೀ ಸಣ್ಣ ರೈತರು ಕೂಡ ಮಾರುಕಟ್ಟೆಯಲ್ಲಿ ವ್ಯವಹರಿಸಬೇಕಾದರೆ ಮಾರುಕಟ್ಟೆ ಬೆಳವಣಿಗೆಗೆ ಪೂರಕವಾದ ಮೂಲಸೌಕರ್ಯಗಳು ಗ್ರಾಮೀಣ ಪ್ರದೇಶದಲ್ಲಿ ಧಾರಾಳವಾಗಿ ಸಿಗಬೇಕು. ಮಾರುಕಟ್ಟೆಯ ಆಧಾರ ಸ್ತಂಭ ಒಪ್ಪಂದ ಮತ್ತು ಒಪ್ಪಂದವನ್ನು ಅದರ ಶರತ್ತಿಗನುಸಾರ ಕಾರ್ಯರೂಪಕ್ಕೆ ತರುವುದು. ಗ್ರಾಮೀಣ ಪ್ರದೇಶದ ಬಲಾಢ್ಯರ ಪ್ರಭಾವದಿಂದ ಇಂದು ಒಪ್ಪಂದಗಳು ಮತ್ತು ಅವುಗಳ ಶರತ್ತುಗಳು ಸರಕಾರದ ನಿಯಮಾನುಸಾರ ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ಸ್ಥಿತಿ ಬದಲಾಗಿ ಕಾಯಿದೆಗಳಲ್ಲಿರುವ ನೀತಿನಿಯಮಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ಸ್ಥಿತಿ ಬದಲಾಗಿ ಕಾಯಿದೆಗಳಲ್ಲಿರುವ ನೀತಿನಿಯಮಗಳು ಕಾರ್ಯರೂಪಕ್ಕೆ ಬರುತ್ತಿಲ್ಲ. ಈ ಸ್ಥಿತಿ ಬದಲಾಗಿ ಕಾಯಿದೆಗಳಲ್ಲಿರುವ ನೀತಿನಿಯಮಗಳು ಕಾರ್ಯರೂಪಕ್ಕೆ ಬರಬೇಕಾದರೆ ನಿಜವಾದ ಅರ್ಥದಲ್ಲಿ ಭೂ ಸುಧಾರಣೆ ಜಾರಿಗೆ ಬರಬೇಕಾಗಿದೆ.

ಭೂಸುಧಾರಣೆ ಇಂದಿನ ಅನಿವಾರ್ಯತೆ ಅಲ್ಲ ಎಂದು ಸಾಧಿಸಲು ಬಳಸುವ ಎರಡನೇ ವಾದ ಅಭಿವೃದ್ಧಿಯ ವಿವಿಧ ಹಂತಗಳಿಗೆ ಸಂಬಂಧಿಸಿದೆ. ಶ್ರೀಮಂತ ದೇಶಗಳ ಅನುಭವದ ಹಿನ್ನೆಲೆಯಲ್ಲಿ ಅಭಿವೃದ್ದಿಯ ಹಂತಗಳನ್ನು ಈ ಕೆಳಗಿನಂತೆ ಗುರುತಿಸಲಾಗಿದೆ. ಮೊದಲಿಗೆ ಕೃಷಿಯ ಬೆಳವಣಿಗೆ – ನಂತರ ಕೈಗಾರಿಕೆ – ಕೊನೆಗೆ ಸೇವಾವಲಯದ ಅಭಿವೃದ್ಧಿ ಈ ಕ್ರಮದಲ್ಲಿ ಪಶ್ಚಿಮದ ಶ್ರೀಮಂತ ದೇಶಗಳು ಅಭಿವೃದ್ಧಿಯನ್ನು ಸಾಧಿಸಿವೆ. ಇದೇ ಕ್ರಮದಲ್ಲಿ ಪ್ರಪಂಚದ ಉಳಿದ ದೇಶಗಳು ತಮ್ಮ ಅಭಿವೃದ್ಧಿಯನ್ನು ಸಾಧಿಸಲಿವೆ ಎಂದು ಅಭಿವೃದ್ಧಿ ಸಿದ್ಧಾಂತಗಳು ಹೇಳುತ್ತವೆ. ಆದರೆ ಹಲವಾರು ಅಭಿವೃದ್ಧಿಶೀಲ ದೇಶಗಳು ಶ್ರೀಮಂತ ದೇಶಗಳ ಅಭಿವೃದ್ಧಿ ಹಂತಗಳನ್ನು ಯಥಾರೂಪದಲ್ಲಿ ಅನುಸರಿಸಿಲ್ಲ. ಬಹುತೇಕ ದೇಶಗಳಲ್ಲಿ ಕೈಗಾರಿಕೆ ಅಥವಾ ಕೃಷಿ ಸರಿಯಾಗಿ ನೆಲೆಯೂರುವ ಮೊದಲೇ ಸೇವಾವಲಯಗಳು ಬೆಳೆದು ತಮ್ಮ ಅಭಿವೃದ್ಧಿಯನ್ನು ಸಾಧಿಸಿಕೊಂಡಿವೆ. ನಮ್ಮದೇ ರಾಜ್ಯದ ಉದಾಹರಣೆ ತೆಗೆದುಕೊಂಡರೆ ಕಾಲಕ್ರಮೇಣ ರಾಜ್ಯದ ಒಟ್ಟು ಉತ್ಪಾದನೆಯಲ್ಲಿ ಕೃಷಿಯ ಪಾಲು ಸತತ ಕುಸಿತ ಕಂಡಿದೆ. ಹಾಗೆಂದು ಕೃಷಿಯ ಕುಸಿತವನ್ನು ಕೈಗಾರಿಕೆ ತುಂಬಲಿಲ್ಲ. ಬದಲಿಗೆ ಸೇವಾ ವಲಯ ತುಂಬಿದೆ. ರಾಜ್ಯದ ಒಟ್ಟು ಉತ್ಪನ್ನದ ಶೇ. ೫೩.೬ ರಷ್ಟು ಸೇವಾವಲಯದಿಂದ ಬಂದರೆ ಕೃಷಿಯಿಂದ ಶೇ. ೨೦,೯ ಮತ್ತು ಕೈಗಾರಿಕೆಯಿಂದ ಶೇ. ೨೫.೫ ರಷ್ಟು ಬಂದಿದೆ. ಕೃಷಿಗೆ ಹೋಲಿಸಿದರೆ ಕೈಗಾರಿಕೆ ಮತ್ತು ಸೇವಾವಲಯದಿಂದ ಶೇ. ೮೦ರಷ್ಟು ರಾಜ್ಯದ ಉತ್ಪನ್ನ ಬರುತ್ತಿದೆ. ಅಂದರೆ ಪರೋಕ್ಷವಾಗಿ ಕೃಷಿಯೇತರ ಚಟುವಟಿಕೆಗಳೇ ಇಂದು ರಾಜ್ಯದ ಒಟ್ಟಾರೆ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಜತೆಗೆ ಕೃಷಿಯೇತರ ಚಟುವಟಿಕೆ ರಾಜ್ಯದ ಜನರಿಗೆ ಉತ್ತಮ ಬದುಕನ್ನು ನೀಡದೆ. ಇದಕ್ಕೆ ಸಮರ್ಥನೆಯಾಗಿ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರ ಆದಾಯ, ಶಿಕ್ಷಣ, ಆರೋಗ್ಯ ವಸತಿ ಇತ್ಯಾದಿ ಸವಲತ್ತುಗಳಿಗೆ ಸಂಬಂಧಿಸಿದ ಅಂಕಿಅಂಶಗಳೇ ಸಾಕ್ಷಿ ಎಂದು ಸರಕಾರ ಪರೋಕ್ಷ ವಾದ ಮಂಡಿಸುತ್ತದೆ. ಕರ್ನಾಟಕದಲ್ಲಿ ಮಾಸಿಕ ಗ್ರಾಮೀಣ ತಲಾ ಉತ್ಪಾದನೆ ರೂ. ೯೮೭.೦೦ ಇದ್ದರೆ ನಗರ ಪ್ರದೇಶದ ಮಾಸಿಕ ತಲಾ ಉತ್ಪಾದನೆ ರೂ. ೧೮೧೫ ರಷ್ಟಿದೆ.[17] ಇದೇ ರೀತಿಯಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಅನುಭೋಗದಲ್ಲೂ ತುಂಬಾ ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಮಾಸಿಕ ಗ್ರಾಮೀಣ ತಲಾ ಅನುಭೋಗ ರೂ. ೯೧೨.೦೦ ಇದ್ದರೆ ನಗರ ಪ್ರದೇಶದ ಮಾಸಿಕ ತುಲಾ ಅನುಭೋಗ ರೂ. ೧೭೩೩.೦೦ರಷ್ಟಿದೆ.[18]

[1] ಅರಬಾಳ ರುದ್ರ ಗೌಡರ ಚರಿತ್ರೆ, ಇದನ್ನು ಬಸವಯ್ಯ ಚನ್ನಬಸವಯ್ಯ ಹಿರೇಮಠ ಇವರು ಟಿಪ್ಪಣಿಗಳ ಆಧಾರದಲ್ಲಿ ಬರೆದಿದ್ದಾರೆ. ಎಂ. ಎಂ. ಕಲಬುರ್ಗಿಯವರು ಈ ಟಿಪ್ಪಣಿಗಳನ್ನು ಪರುಷ್ಕರಿಸಿ ಪುಸ್ತಕ ರೂಪಕ್ಕೆ ತಂದಿದ್ದಾರೆ. ಪುಸ್ತಕವನ್ನು ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ, ಬೆಳಗಾವಿ ಇದು ಪ್ರಕಟಿಸಿದೆ, ೨೦೦೨

[2] ಅಡ್ಡಪಲ್ಲಕ್ಕಿ ಉತ್ಸವ, ವ್ಯಾಸನತೋಳು ಮೆರವಣಿಗೆ, ದೇವರ ಪೂಜೆಯ ಹಕ್ಕು ಇತ್ಯಾದಿ ಆಚರಣೆಗಳನ್ನು ಮಾಡಬೆಕಾದರೆ ಲಿಂಗಾಯತರು ಬ್ರಾಹ್ಮಣರೊಂದಿಗೆ ದೊಡ್ಡ ಹೋರಾಟವೇ ಮಾಡಬೇಕಿತ್ತು ಡೆಪ್ಯುಟಿ ಕಲೆಕ್ಟರ್ ಆಗಿದ್ದ ಅರಟಾಳ ರುದ್ರೆಗೌಡರು ಬ್ರಿಟಿಷರಿಗೆ ನಿಜ ಸಂಗತಿಯನ್ನು ಮನವರಿಕೆ ಮಾಡಿ, ಕೋರ್ಟ್‌ಕಚೇರಿ ಹೋರಾಟಕ್ಕೆ ಸಹಕರಿಸಿ ಲಿಂಗಾಯತರ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಅರಟಾಳ ರುದ್ರ ಗೌಡರ ಚರಿತ್ರೆ, ಪು.೧೧

[3] ರಾವ್ ಬಹದ್ದೂರ್ ಶಣ್ಮುಖಪ್ಪ ಅಂಗಡಿ, ಮೈ ಆಟೋಬಯಾಗ್ರಪಿ, ಸಂ. ಉಜ್ವಲ ಎಸ್, ಹಿರೇಮಠ, ಬೆಳಗಾಂ: ಕೆ. ಎಲ್. ಇ. ಸೊಸೈಟಿ, ೨೦೦೭

[4] ಶಿವಾನಂದ ಗುಬ್ಬನವರ್, ಪೊಲಿಟಿಕಲ್ ಐಡಿಯಸ್ ಆಫ್ ಹರ್ಡೇಕರ್ ಮಂಜಪ್ಪ, ಧಾರವಾರ್: ಕರ್ನಾಟಕ ಯುನಿರ್ವಸಿಟಿ, ೧೯೭೭

[5] ಜಿ ತಿಮ್ಮಯ್ಯ ಮತ್ತು ಆಜೀಜ್, ದಿ ಪೊಲಿಟಿಕಲ್ ಎಕಾನಮಿ ಆಪ್ ಲ್ಯಾಂಡ್ ರಿಫಾರ್ಮ್ಸ್ ಇನ್ ಕರ್ನಾಟಕ, ಎ ಸೌತ್ ಇಂಡಿಯನ್ ಸ್ಟೇಲ್, ಏಶಿಯನ್ ಸರ್ವೇ, ೨೩ (೭), ಜುಲೈ ೧೯೮೩, ಪು. ೧೦-೨೯

[6] ತಿಮ್ಮಯ್ಯ ಮತ್ತು ಆಜೀಜ್, ದಿ ಪೊಲಿಟಿಕಲ್ ಎಕಾನಮಿ ಆಫ್ ಲೇಂಡ್ ರಿಪೋರ್ಮ್ಸ್, ಪು. ೧೦-೨೯

[7] ಎಂ. ಎ. ಎಸ್. ರಾಜನ್, ಕರ್ನಾಟಕದಲ್ಲಿ ಭೂಸುಧಾರಣೆ – ನಾನು ಸಹ ಹತ್ತಿರದಿಂದ ಕಂಡೆ, ಬೆಂಗಳೂರು: ಐಬಿಹೆಚ್ ಪ್ರಕಾಶನ, ೧೯೮೭

[8] ಕರ್ನಾಟಕ ಯಾವತ್ತು ಕೂಡ ತನ್ನದೇ ಅಭಿವೃದ್ಧಿ ಚಿಂತನೆ ಅಥವಾ ಮಾದರಿಯನ್ನು ಮುಂದಿಟ್ಟಿಲ್ಲ ಕೇಂದ್ರ ಸರಕಾರ ಕೊಡುವ ಅಭಿವೃದ್ಧಿ ಮಾದರಿಯನ್ನು ಯಥಾ ರೂಪದಲ್ಲಿ ತರುವುದಕ್ಕೆ ಕರ್ನಾಟಕ ಎತ್ತಿದ ಕೈ. ಎಷ್ಟೋ ಬಾರಿ ಇಂತಹ ಮಾದರಿಗಳು ಕರ್ನಾಟಕದ ನೆಲ, ಜಲ, ಜನರಿಗೆ ಎಷ್ಟು ಅನುಕೂಲವಾಗುತ್ತದೆ ಎನ್ನುವ ಪ್ರಶ್ನೆಯನ್ನೇ ಕೇಳಿಕೊಳ್ಳುವುದಿಲ್ಲ.

[9] ಜಾನಕಿ ನಾಯರ್, ಪ್ರಡೇಟರಿ ಕ್ಯಾಪಿಟಲಿಸಂ ಅಂಡ್ ಲೀಗಲೈಸೈಡ್ ಲೇಂಡ್ ಗ್ರೇಟ್ – ಕರ್ನಾಟಕ ಲೇಂಡ್ ರೀಫೋರ್ಮ್ಸ್, ಎಕಾನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, ೩೧ (೫), ಫೆಬ್ರವರಿ ೧೯೯೬, ಪು. ೨೫೧ – ೫೨

[10] ಜಾನಕಿ ನಾಯರ್, ಪ್ರಿಡೇಟರಿ ಕ್ಯಾಪಿಟಲಿಸಂ, ಪು. ೨೫೧ – ೫೨

[11] ಎಮ್. ಎನ್. ಪಾನಿನಿ, ಟ್ರೆಂಡ್ಸ್ ಇನ್ ಕಲ್ಚರಲ್ ಗ್ಲೊಬಲೈಸೇಶನ್ – ಫ್ರೋರ್ಮ್ ಎಗ್ರಿಕಲ್ಚರ್ ಟು ಎಗ್ರಿಬುಸಿನೆಸ್ ಇನ್ ಕರ್ನಾಟಕ, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೩೪ (೩೧), ಜುಲೈ ೧೯೯೯, ಪು. ೨೧೬-೩

[12] ಆರ್. ಎಸ್. ದೇಶಪಾಂಡೆ, ಸುಸೈಡ್ ಬೈ ಫಾರ್ಮರ್ಸ್ ಇನ್ ಕರ್ನಾಟಕ – ಎಗ್ರಿರೇರಿಯನ್ ಡಿಸ್ಟ್ರೆಸ್ ಆಂಡ್ ಪೋಸಿಬ್ಲ್ ಎಲಿವಿಯೇಟರಿ ಸ್ಟೆಪ್ಸ್, ಎಕನಮಿಕರ್ ಆಂಡ್ ಪೊಲಿಟಿಕಲ್ ವೀಕ್ಲಿ. ೩ (೨೬), ಜೂನ್ – ಜುಲೈ,೨೦೦೨, ಪು. ೨೬೦೧ – ೧೦

[13] ಆರ್. ಎಸ್. ದೇಶಪಾಂಡೆ, ಸುಸೈಡ್ ಬೈ ಫಾರ್ಮರ್ಸ್, ಪು. ೨೬೦೧ – ೧೦

[14] ಚಂದ್ರ ಪೂಜಾರಿ, ರೈತರ ಮಾರುಕಟ್ಟೆ ಸಮಸ್ಯೆಗಳು ಮತ್ತು ಪರಿಹಾರಗಳು, ಅಭಿವೃದ್ದಿ ಅಧ್ಯಯನ, ೬ (೧), ಜನವರಿ –ಒ ಜೂನ್ ೨೦೦೬, ಪು. ೩- ೫

[15]ಬಾರ್ಬರ ಹೇರಿಸ್ ವೈಟ್, ಇಂಡಿಯಾ ವರ್ಕಿಂಗಎಸ್ಸೇಸ್ ಆನ್ ಸೊಸೈಟಿ ಆಂಡ್ ಎಕನಮಿ, ನ್ಯೂಡೆಲ್ಲಿ: ಕೇಂಬ್ರಿಡ್ಜ್ ಯುನಿರ್ವಸಿಟಿ ಪ್ರೆಸ್, ೨೦೦೪, ಪು. ೭೨ – ೧೦೨

[16] ಬಾರ್ಬರ ಹೇರಿಸ್ ವೈಟ್, ಇಂಡಿಯಾ ವರ್ಕಿಂಗ್, ಪು. ೭೨ – ೧೦೨

[17] ಕರ್ನಾಟಕದ ಗ್ರಾಮೀಣ ಮತ್ತು ನಗರದ ಕುಟುಂಬಗಳ ಅನುಭೋಗ, ಆದಾಯ, ಶಿಕ್ಷಣ, ಆರೋಗ್ಯ ಎನ್ನಲಾಗುವುದಿಲ್ಲ. ಬೆಂಗಳೂರು ಅರ್ಭನ್, ಕೋಸ್ಟಲ್ ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿ ಅಂತರ ಸ್ವಲ್ಪ ಕಡಿಮೆ ಪ್ರಮಾಣದಲ್ಲಿದ್ದರೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗ್ರಾಮೀಣ ಮತ್ತು ನಗರಗಳ ನಡುವಿನ ಅಭಿವೃದ್ಧಿ ಅಂತರ ದೊಡ್ಡ ಪ್ರಮಾಣದಲ್ಲಿದೆ. ರಾಜ್ಯದೊಳಗಿನ ಪ್ರದೇಶಗಳಲ್ಲಿನ ಗ್ರಾಮೀಣ ಮತ್ತು ನಗರ ಪ್ರದೇಶಗಳ ನಡುವಿನ ಅಭಿವೃದ್ಧಿ ಅಂತರಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಕರ್ನಾಟಕ ಸರಕಾರ ಪ್ರಕಟಿಸಿರುವ ಮಾನವ ಅಭಿವೃದ್ಧಿ ವರದಿ ೨೦೦೫(ಬೆಂಗಳೂರು: ಯೋಜನಾ ಇಲಾಖೆ, ೨೦೦೬)ರಲ್ಲಿ ನೋಡಬಹುದು ದೇಶದ ಇತರ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕದಲ್ಲಿರುವ ಗ್ರಾಮೀಣ ಮತ್ತು ನಗರ ಪ್ರದೇಶಗಳ ಅಭಿವೃದ್ಧಿ ಅಂತರಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಶ್ರೀಧರ್ ಕುಂದ್, ಪವರ್ಟಿ, ಇನ್‌ಕ್ವಾಲಿಟಿ ಆಂಡ್ ಸೋಶಿಯಲ್ ಡೆವಲಪ್‌ಮೆಂಟ್ ಇನ್ ರೂರಲ್ ಇಂಡಿಯಾ – ಎನ್ ಇಂಟರ್ ಸ್ಟೇಟ್ ಎನಾಲಿಸೀಸ್ ಅಫ್ ಟ್ರೆಂಡ್ಸ್‌ಆಂಡ್ ಪೆಟರ್ನ್ಸ್ ಇನ್ ದಿ ಪರಿಯೆಡ್ ಆಫ್ ಗ್ಲೋಬಲೈಶನ್ (ಪೇಪರ್ ಪ್ರಸೆಂಟೆಡ್ ಇನ್ ಇನ್. ಐ ಆರ್. ಡಿ. ಫೌಂಡೇಶನ ಡೇ ಸೆಮಿನಾರ್, ನವೆಂಬರ್ ೨೦೦೬.) ಪ್ರಬಂಧದಿಂದ ಪಡೆಯಲಾಗಿದೆ.

[18] ಶ್ರೀದರ್ ಕುಂದ್, ಪವರ್ಟಿ, ಇನ್‌ಕ್ವಾಲಿಟಿ ಅಂಡ್ ಸೋಶಿಯಲ್ ಡೆವಲಪ್‌ಮೆಂಟ್ ಇನ್ ರೂರಲ್ ಇಂಡಿಯಾ, ಪು. ೧೪-೨೧