ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ದೊಡ್ಡ ಮಟ್ಟಿಗೆ ಭೂಮಿ ಪ್ರಶ್ನೆ ಚರ್ಚೆಗೆ ಬಂದಿದೆ. ಆದರೆ ಬಹುತೇಕ ಆ ಎಲ್ಲಾ ಚರ್ಚೆಗಳು ಕೇಂದ್ರಿಕೃತಗೊಂಡಿರುವುದು ನೆರೆರಾಜ್ಯಗಳಿಂದ ಕರ್ನಾಟಕಕ್ಕೆ ಸೇರಬೇಕಾದ ಭೂಪ್ರದೇಶಗಳಿಗೆ ಸಂಬಂಧಿಸಿದಂತೆ ಕರ್ನಾಟಕದ ಗಡಿಗಳನ್ನು ನಿರ್ಧರಿಸುವ ಸಲುವಾಗಿ ಈ ಚರ್ಚೆಗಳು ನಡೆದಿವೆ. ಕರ್ನಾಟಕದ ಗಡಿಯೊಳಗೆ ಸೇರಿದ ಭೂಮಿಯನ್ನು ಕನ್ನಡಿಗರು ಹೇಗೆ ಹಂಚಿಕೊಳ್ಳಬೇಕೆಂದು ಚರ್ಚೆ ನಡೆದಿಲ್ಲ. ಭೂಮಾಲಿಕ ಕನ್ನಡಿಗ ಮತ್ತು ಗೇಣಿದಾರ ಕನ್ನಡಿಗನ ಸಂಬಂಧ ಹೇಗಿರಬೇಕೆಂದು ಚರ್ಚೆ ನಡೆದಿಲ್ಲ. ಎರಡು ಹೊತ್ತಿನ ಊಟಕ್ಕಾಗಿ ಮುಂಜಾನೆಯಿಂದ ಸಂಜೆತನಕ ದುಡಿಯುವ ಕನ್ನಡಿಗ ಮತ್ತು ದುಡಿಸುವ ಕನ್ನಡಿಗನ ನಡುವಿನ ಸಂಬಂಧ ಹೇಗಿರಬೇಕೆಂದು ದೊಡ್ಡ ಮಟ್ಟಿನ ಚರ್ಚೆ ನಡೆದಿಲ್ಲ. ಏಕೀಕೃತ ಕರ್ನಾಟಕದಲ್ಲಿ ಬಂದುಹೋದ ಭೂಸುಧಾರಣ ಮಸೂದೆಗಳು ಕರ್ನಾಟಕವನ್ನು ಕಟ್ಟಿಕೊಳ್ಳುವಾಗ ಹುಟ್ಟಿದ ಕೂಸು. ಹೀಗೆ ಹೇಳಿದ ಕೂಡಲೇ ದಿನಕರ ದೇಸಾಯಿವರ ನೇತೃತ್ವದಲ್ಲಿ (ಉತ್ತರ ಕನ್ನಡ ಜಿಲ್ಲೆಯಲ್ಲಿ) ನಡೆದ ಭೂಹೋರಾಟದ ಉದಾಹರಣೆಯನ್ನು ನೀಡಬಹುದು.[1] ಕಾಗೋಡು ಚಳವಳಿಯ ಹುಟ್ಟು ಕೂಡ ಏಕೀಕರಣ ಪೂರ್ವದಲ್ಲೇ ಇದೆ ಎಂದು ವಾದಿಸಬಹುದು.[2] ನೆರೆಯ ಕೇರಳದ ಎಡಪಂಥೀಯ ಚಳವಳಿಗಳಿಂದ ಪ್ರಭಾವಿತರಾಗಿ ದಕ್ಷಿಣ ಕನ್ನಡ ಜಿಲ್ಲೆಯ ಗೇಣಿದಾರರು ನಡೆಸಿದ ಪ್ರತಿಭಟನೆಗಳ ಉದಾಹರಣೆ ಕೊಡಬಹುದು. ಆದರೆ ಈ ಎಲ್ಲಾ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿದ್ದ ಜಾಗೀರುದಾರರಾಗಲಿ, ಜೋಡಿದಾರರಾಗಲಿ, ಇನಾಂದಾರರಾಗಲಿ ಅಥವಾ ಜಮೀನುದಾರರು ಇರಲಿಲ್ಲ ಇಲ್ಲೆಲ್ಲ ಸಣ್ಣಪುಟ್ಟ ರೈತರು ಮತ್ತು ನೂರು ಇನ್ನೂರು ಎಕರೆ ಭೂಮಿ ಒಡೆತನದ ಜಮೀನುದಾರರು ಇದ್ದರು. ಸಾವಿರಾರು ಎಕರೆ ಭೂಮಿ ಇದ್ದ ಜಾಗೀರುದಾರರು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿದ್ದರು. ಆದರೆ ಅಲೆಲ್ಲ ದೊಡ್ಡಮಟ್ಟಿನ ಗೇಣಿದಾರರ ಹೋರಾಟ ನಡೆಯಲಿಲ್ಲ ಬಾಂಬೆ ಕರ್ನಾಟಕ ಪ್ರಾಂತದಲ್ಲೂ ಸಾವಿರಾರು ಎಕರೆ ಭೂಮಿ ಹೊಂದಿದ್ದ ಸಂಸ್ಥಾನಗಳು ಇದ್ದವು, ಇನಾಂದಾರರು / ಜಮೀನುದಾರರು ಇದ್ದರು. ಬಾಂಬೆ ಪ್ರಾಂತದ ಸಂಸ್ಥಾನಗಳಲ್ಲಿ ಮತ್ತು ಇನಾಂ ಭೂಮಿ ಕೃಷಿ ಮಾಡುತ್ತಿದ್ದ ಗೇಣಿದಾರರು ತಮ್ಮನ್ನು ಶೋಷಿಸುತ್ತಿದ್ದ ಭೂಮಾಲಿಕರ ವಿರುದ್ಧ ಪ್ರತಿಭಟಿಸಿದ್ದಾರೆ. ಆದರೆ ಹಲವು ಬಾರಿ ಈ ಪ್ರತಿಭಟನೆಗಳು ಒಂದೋ ಸ್ವತಂತ್ರ ಅಥವಾ ಏಕೀಕರಣ ಹೋರಾಟದ ಹೆಸರಿನೊಂದಿಗೆ ಅಥವಾ ಬ್ರಾಹ್ಮಣೇತರ ಚಳವಳಿಯ ಹೆಸರಿನೊಂದಿಗೆ ತಳಕು ಹಾಕಿಕೊಂಡಿದ್ದವು. ಇದರಿಂದಾಗಿ ಅವುಗಳು ಗೇಣಿದಾರರ ಪ್ರತ್ಯೇಕ ಹೋರಾಟಗಳಾಗಿ ಮುಂಚೂಣಿಗೆ ಬರಲಿಲ್ಲ. ಅಷ್ಟೇ ಅಲ್ಲ ಅವುಗಳು ಏಕೀಕರಣ ಚಳವಳಿಯ ಅಜಾಂಡಗಳನ್ನು ರೂಪಿಸಲಿಲ್ಲ. ಏಕೀಕರತ ಕರ್ನಾಟಕದಲ್ಲಿನ ಭೂಮಿ ಪ್ರಶ್ನೆಯನ್ನು ಹೇಗೆ ನಿಭಾಯಿಸಬೇಕೆನ್ನುವ ಕನಿಷ್ಠ ಸೂಚನೆಯನ್ನು ಕೂಡ ಅವುಗಳು ನೀಡಲಿಲ್ಲ.

ವಿಪರ್ಯಾಸವೆಂದರೆ ಭೂಮಾಲಿಕರನ್ನು ದೊಡ್ಡ ಸಂಖ್ಯೆಯಲ್ಲಿ ತುಂಬಿಕೊಂಡಿದ್ದ ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಹೋರಾಟದಲ್ಲಿ ಭೂಸುಧಾರಣೆಯ ಪ್ರಶ್ನೆಯನ್ನು ಆಗೊಮ್ಮೆ ಈಗೊಮ್ಮೆ ಕನವರಿಸುತ್ತಿತ್ತು. ಕಾಂಗ್ರೆಸ್ ಪಕ್ಷದೊಳಗಿನ ಪ್ರಗತಿಪರರು ಭೂಸುಧಾರಣೆಯ ಪ್ರಶ್ನೆಯನ್ನು ಜೀವಂತ ಇರಿಸಿದ್ದರು. ಪಕ್ಷದೊಳಗಿನ ಪ್ರಗತಿಪರರ ಒತ್ತಡಕ್ಕೆ ಮಣಿಯ ಭೂಮಿ ಸಂಬಂಧವನ್ನು ಪರಿವರ್ತಿಸುವ ಠರಾವುಗಳು ಪಾಸಾಗುತ್ತಿದ್ದವು. ಜಯಪುರ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವತಂತ್ರ ನಂತರ ಪಕ್ಷ ಅನುಸರಿಸಲಿಚ್ಚಿಸುವ ಭೂಮಸುಧಾರಣೆ ಕುರಿತಂತೆ ಪಕ್ಷದ ಧೋರಣೆಯನ್ನು ಸ್ಪಷ್ಟಪಡಿಸಿಸಲಾಯಿತು. ಮಧ್ಯವರ್ತಿಗಳನ್ನು ರದ್ದುಗೊಳಿಸುವುದು, ಹಿಡುವಳಿಯ ಮೇಲೆ ಮಿತಿ ಹೇರುವುದು ಹಾಗೂ ಸಹಕಾರ ಬೇಸಾಯವನ್ನು ಅನುಸರಿಸುವುದು ಇತ್ಯಾದಿ ಕ್ರಮಗಳ ಮೂಲಕ ಕೃಷಿಯನ್ನು ಪುನರ್ ವ್ಯವಸ್ಥೆಗೊಳಿಸುವುದು ಕಾಂಗ್ರೆಸ್ ಪಕ್ಷದ ಧೋರಣೆಯಾಗಿತ್ತು. ಹೆಚ್ಚು ಕಡಿಮೆ ಇದೇ ನಿಲುವನ್ನು ಮೊದಲನೇ ಪಂಚವಾರ್ಷಿಕ ಯೋಜನೆಯಲ್ಲಿ ನೋಡಬಹುದು ಹಿಂದಿನಿಂದ ಬಂದ ಕೃಷಿ ವ್ಯವಸ್ಥೆಯಿಂದ ಹುಟ್ಟಿಬಂದ ತೊಡಕುಗಳನ್ನು ನಿವಾರಿಸುವುದರ ಮೂಲಕ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಸಾಧಿಸುವುದು ಮತ್ತು ಕೃಷಿ ವ್ಯವಸ್ಥೆಯಲ್ಲಿ ಅಡಕವಾಗಿದ್ದ ಶೋಷಣೆ ಹಾಗೂ ಸಾಮಾಜಿಕ ಅನ್ಯಾಯಗಳನ್ನು ತೊಡೆದು ಹಾಕುವುದು.[3] ಈ ಉದ್ದೇಶಗಳನ್ನು ಕಾರ್ಯರೂಪಕ್ಕೆ ತರಲು ಈ ಕೆಳಗಿನ ಕಾರ್ಯಕ್ರಮಗಳನ್ನು ಯೋಜನೆ ಸೂಚಿಸಿದೆ. ಗೇಣಿದಾರರಿಗೆ ಗೇಣಿ ಭದ್ರತೆ, ನ್ಯಾಯ ಸಮ್ಮತ ಗುತ್ತಿಗೆಗಳ ನಿಗಧಿ ಹಾಗೂ ಗೇಣಿದಾರನಿಗೆ ಭೂಮಿಯನ್ನು ಖರೀದಿಸುವ ಹಕ್ಕು ಇವುಗಳನ್ನು ಒಳಗೊಂಡ ಗೇಣಿದಾರಿಕೆ ಸುಧಾರಣೆಗಳು ಮತ್ತು ಕೃಷಿ ಕಾರ್ಮಿಕರ ಪರಿಸ್ಥಿತಿಯ ಸುಧಾರಣ ಕ್ರಮಗಳು ಸೇರಿದ್ದವು. ನಂತರದ ಪಂಚವಾರ್ಷಿಕ ಯೋಜನೆಗಳಲ್ಲೂ. ಭೂಸುಧಾರಣೆ ಬಗ್ಗೆ ಪ್ರಸ್ತಾವಗಳಿದ್ದವು. ಆದರೆ ಬರಬರುತ್ತಾ ಯೋಜನೆಗಳು ಕೈಗಾರಿಕೆ ಹಾಗೂ ಸೇವಾ ವಲಯದ ಅಭಿವೃದ್ದಯನ್ನು ಮುಖ್ಯ ಗುರಿಯನ್ನಾಗಿಸಿಕೊಂಡಂತೆ ಭೂಮಿ ಮತ್ತು ಭೂಸುಧಾರಣ ಪ್ರಶ್ನೆಗಳು ತೆರೆಮರೆಗೆ ಸರಿದವು.

ಭಾರತದ ಸಂವಿಧಾನ ಕೂಡ ಭೂಸುಧಾರಣೆಗೆ ಸಾಕಷ್ಟು ಮಹತ್ವ ನೀಡಿದೆ. ಸಮುದಾಯದ ಸಂಪನ್ನೂಲಗಳ ಒಡೆತನ ಹಾಗೂ ಸಂಘಟನೆ ಸಮಾಜದ ಪ್ರತಿಯೊಬ್ಬರ ಆಸಕ್ತಿಗಳನ್ನು ಸಮಾನವಾಗಿ ಈಡೇರಿಸುವಂತಿರಬೇಕೆಂದು ಸಂವಿಧಾನ ಸೂಚಿಸಿದೆ. ಸಂಪತ್ತು ಹಾಗೂ ಉತ್ಪಾದನ ಪರಿಕರಗಳು ಎಲ್ಲರಿಗೂ ಸಮಾನವಾಗಿ ಹಂಚುವಿಕೆಯಾಗುವ ಕ್ರಮದಲ್ಲಿ ಕ್ರಮದಲ್ಲಿ ಅರ್ಥ ವ್ಯವಸ್ಥೆಯನ್ನು ಸಂಘಟಿಸಬೇಕು. ಅರ್ಥ ವ್ಯವಸ್ಥೆಯ ಸಂಘಟನೆ ಕೆಲವೇ ವ್ಯಕ್ತಿಗಳ ಕೈಯಲ್ಲಿ ಸಂಪತ್ತು ಹಾಗೂ ಉತ್ಪಾದನ ಪರಿಕರಗಳು ಕೇಂದ್ರೀಕೃತವಾಗುವ ಹಾಗೆ ಇರಬಾರದು. ಬದುಕಿನ ಪರಿಕರಗಳು ಭಾರತದ ಪ್ರತಿಯೊಬ್ಬ ಪುರುಷ ಮತ್ತು ಮಹಿಳೆ ಪ್ರಜೆಗೂ ಸಮನವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ದೊರಕಬೇಕು. ಭೂಸುಧಾರಣೆ ರಾಜ್ಯದ ವ್ಯಾಪ್ತಿಗೆ ಬರುವ ಅಧಿಕಾರ. ಆದುದರಿಂದ ಪ್ರತಿ ರಾಜ್ಯ ಕೂಡ ಭೂಮಿ, ಅದರ ಮೇಲಿನ ಹಕ್ಕು, ಗೇಣಿ ಪದ್ದತಿ, ಭೂಮಾಲಿಕರು ಮತ್ತು ಗೇಣಿದಾರರ ನಡುವಿನ ಸಂಬಂಧ, ಗುತ್ತಿಗೆ ಸಂಗ್ರಹ, ಕೃಷಿ ಭೂಮಿಯ ಮಾರಾಟ ಮತ್ತು ವರ್ಗಾವಣೆ, ಕೃಷಿ ಸಾಲ, ಕೃಷಿ ಕಂದಾಯ, ಕಂದಾಯ ನಿರ್ಧಾರ ಮತ್ತು ಸಂಗ್ರಹ, ಕಂದಾಯ ದಾಖಲೆಗಳು ಇತ್ಯಾದಿಗಳನ್ನು ಉದ್ದೇಶಿತ ರೂಪದಲ್ಲಿ ನಿರ್ದೇಶಿಸಲು ಅವಶ್ಯವಿರುವ ದಾಖಲೆಗಳು ಇತ್ಯಾದಿಗಳನ್ನು ಉದ್ದೇಶಿತ ರೂಪದಲ್ಲಿ ನಿರ್ದೇಶಿಸಲು ಅವಶ್ಯವಿರುವ ಕಾನೂನುಗಳನ್ನು ಮಾಡಬೇಕೆಂದು ಸಂವಿಧಾನ ಸೂಚಿಸಿದೆ.[4] ಈ ಎಲ್ಲದರ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಂದುಹೋದ ಭೂಸುಧಾರಣ ಮಸೂದೆಗಳನ್ನು ನೋಡಬೇಕಾಗಿದೆ. ಕರ್ನಾಟಕದಲ್ಲಿ ಮೂರು ಹಂತಗಳ ಭೂಸುಧಾರಣ ಮಸೂದೆಗಳು ಬಂದಿವೆ. ಮೊದಲನೇ ಹಂತದಲ್ಲಿ ಇನಾಂ, ಜಾಗೀರು ಭೂಮಿಗಳ ಪದ್ದತಿ ಮಸೂದೆ ಬಂದಿದೆ. ಎರಡನೇ ಹಂತದಲ್ಲಿ ಏಕೀಕೃತ ಕರ್ನಾಟಕಕ್ಕೆ ಏಕರೂಪದ ಭೂಮಸೂದೆ ತರುವ ಪ್ರಯತ್ನನಡೆದಿದೆ. ಏಕೀಕೃತ ಕರ್ನಾಟಕಕ್ಕೆ ಏಕರೂಪದ ಭೂಮಸೂದೆ ತರುವ ಪ್ರಯತ್ನ ನಡೆದಿದೆ. ಏಕೀಕೃತ ಕರ್ನಾಟಕ ರೂಪುಗೊಳ್ಳುವ ಮುನ್ನ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಭೂಮಸೂದೆಗಳಿದ್ದವು. ಬಾಂಬೆ ಕರ್ನಾಟಕದಲ್ಲಿ (ಉತ್ತರ ಕನ್ನಡ, ಧಾರವಾಡ, ಬಿಜಾಪುರ ಬೆಳಗಾಂ ಜಿಲ್ಲೆಗಳಲ್ಲಿ), ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ (ರಾಯಚೂರು, ಬೀದರ್, ಗುಲ್ಬರ್ಗಾ), ಮೆಡ್ರಾಸ್ ಕರ್ನಾಟಕ ಭಾಗದಲ್ಲಿ (ದಕ್ಷಿಣ ಕನ್ನಡ, ಕೊಳ್ಳೇಗಾಲ, ಬಳ್ಳಾರಿ), ಮೈಸೂರು ಸಂಸ್ಥಾನದಲದ್ಲಿ ಆಯಾಯ ಪ್ರದೇಶಗಳ ಟೆನೆನ್ಸಿ ಆಂಡ್ ಎಗ್ರಿಕಲ್ಚರಲ್ ಲ್ಯಾಂಡ್ಸ್ ಆಕ್ಟ್‌ಗಳು ಚಲಾವಣೆಯಲ್ಲಿದ್ದವು. ಏಕೀಕರಣ ನಂತರ ಅವುಗಳ್ನನೆಲ್ಲ ಒಂದೇ ಚೌಕಟ್ಟಿನಲ್ಲಿ ತರುವ ಉದ್ದೇಶದಿಂದ ದಿ ಮೈಸೂರು ಟೆನ್‌ನ್ಸಿ ಆಗ್ರಿಕಲ್ಚರಲ್ ಲ್ಯಾಂಡ್ ಲಾಸ್ ಕಮಿಟಿಯನ್ನು ಮೈಸೂರು ಸರಕಾರದ ರಾಜ್ಯಪಾಲರು ಮೇ ೧೯೫೭ರಲ್ಲಿ ನೇಮಕ ಮಾಡಿದರು. ಈ ಸಮಿತಿಯು ಸೆಪ್ಟಂಬರ್ ೧೯೫೭ರಲ್ಲಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಆಧರಿಸಿ ೧೯೬೧ರ ಭೂಸುಧಾರಣ ಮಸೂದೆ ರೂಪುಗೊಂಡಿದೆ. ಮೂರನೇ ಹಂತದ ಭೂಸುಧಾರಣೆ ಅಂದರೆ ಉಳುವವನನ್ನೇ ಹೊಲದೊಡೆಯನನ್ನಾಗಿ ಮಾಡುವ ಭೂಸುಧಾರಣ ಮಸೂದೆ ೧೯೭೪ರಲ್ಲಿ ಬಂದಿದೆ. ಈ ಅಧ್ಯಾಯದಲ್ಲಿ ಈ ಮೂರು ಹಂತಗಳಲ್ಲಿ ಬಂದುಹೋದ ಭೂಸುಧಾರಣ ಮಸೂದೆಗಳನ್ನು ಪರಿಚಯಿಸಲಾಗಿದೆ.

ಇನಾಂ ರದ್ಧತಿ ಮಸೂದೆ

ಇನಾಂ ಭೂಮಿ ರಾಜ ಮಹಾರಾಜರುಗಳ ಆಡಳಿತದ ಪಳೆಯುಳಿಕೆ. ಕರ್ನಾಟಕದಲ್ಲಿ ಎರಡು ವಿಧದ ಇನಾಂ ಭೂಮಿಗಳಿದ್ದವು. ಒಂದು ಖಾಸಗಿ ಇನಾಂ. ಇನ್ನೊಂದು ದೇವಾಲಯಗಳಿಗೆ ನೀಡಿದ ಇನಾಂ ಭೂಮಿಗಳು. ರಾಜರುಗಳು, ಪಾಳೆಯಗಾರರು ದೇವಲಯಗಳಿಗೆ ಇನಾಂ ಭೂಮಿ ನೀಡುವುದರ ಜತೆಗೆ ತಮ್ಮ ಸೇವೆಯಲ್ಲಿದ್ದ ವ್ಯಕ್ತಿಗಳಿಗೆ ಖಾಸಗಿ ಇನಾಂ ಭೂಮಿಗಳನ್ನು ನೀಡುತಿದ್ದರು. ಒಂದೆರಡು ಹಳ್ಳಿಗಳನ್ನು ಅಥವಾ ಹಳ್ಳಿಯ ಭಾಗವೊಂದನ್ನು ಅಥವಾ ಕೆಲವು ಎಕರೆ ಭೂಮಿಯನ್ನು ಇನಾಂ ಭೂಮಿಯೆಂದು ನೀಡುವ ವಾಡಿಕೆ ಇತ್ತು. ಹಳ್ಳಿಗಳನ್ನು ಇನಾಂ ಆಗಿ ನೀಡುವಾಗ ಕೆಲವು ಬಾರಿ ರೈತಾಪಿಗಳ ಸಮೇತ ಇನಾಂ ಭೂಮಿ ನೀಡುವ ಕ್ರಮ ಕೂಡ ಇತ್ತು. ರೈತಾಪಿ ಸಮೇತ ಇನಾಂ ಭೂಮಿ ದಕ್ಕಿದರೆ ಇನಾಂದರರು ರೈತರಿಂದ ಗೇಣಿ ಪಡೆಯಲು ಹಕ್ಕುದಾರರಾಗುಯತ್ತಾರೆ. ಖಾಸಗಿ ಇನಾಂ ಪಡೆದವರ ಸಾಲಿನಲ್ಲಿ ಈ ಕೆಳಗಿನವರು ಬರುತ್ತಾರೆ. ಅಂಬಿಗ ಇನಾಂ, ಅಂಚೆ ಜವಾನ ಇನಾಂ, ಪಲ್ಲಕ್ಕಿ ಇನಾಂ, ಸಂಗೀತಗಾರ ಇನಾಂ, ಕಿಲ್ಲೆಕ್ಯಾತರ ಇನಾಂ, ಬುಡ್ಚುಡಿಕೆ ಇನಾಂ, ಹಜಾಮ ಇನಾಂ, ಕಮ್ಮಾರ ಇನಾಂ, ದೋಬಿ ಇನಾಂ, ಕುಂಬಾರ ಇನಾಂ ಇತ್ಯಾದಿಗಳು ಖಾಸಗಿ ಇನಾಂಗಳ ಸಾಲಲ್ಲಿ ಬರುತ್ತವೆ.[5] ಖಾಸಗಿ ಇನಾಂಗಳ ರದ್ದತಿಗಾಗಿ ದಿ ಮೈಸೂರು (ಪರ್ಸನಲ್ ಆಂಡ್ ಮಿಸಲೇನಿಯಸ್) ಇನಾಮ್ಸ್ ಅಬಾಲಿಶನ್ ಆಕ್ಟ್, ೧೯೫೪ನ್ನು ಜಾರಿಗೆ ತರಲಘಿದೆ. ದೇವಾಲಯಗಳಿಗೆ ಮತ್ತು ದತ್ತಿನಿಧಿಗಳಿಗೆ ನೀಡಿದ ಇನಾಂ ಭೂಮಿಗಳ ರದ್ದತಿಗಾಗಿ ದಿ ಮೈಸೂರು (ರಿಲೀಜಿಯಸ್ ಆಂಡ್ ಚಾರಿಟೇಬೆಲ್) ಇನಾಮ್ಸ್ ಅಬಾಲಿಶನ್ ಆಕ್ಟ್, ೧೯೫೫ ಜಾರಿಗೆ ಬಂದಿದೆ. ಖಾಸಗಿ ಇನಾಂ ಭೂಮಿಗಳು (ಹಜಾಮ, ದೋಬಿ, ಅಗಸ ಮುಂತಾದವರ ಇನಾಂ ಭೂಮಿಗಳು) ಒಂದೆರಡು ಎಕರೆಯಿಂದ ಹತ್ತಿಪ್ಪತ್ತು ಎಕರೆಯಷ್ಟು ಇದ್ದವು. ಅಗ್ರಹರ, ಬ್ರಹ್ಮದೇಯ, ದೇವಾಲಯ ಇತ್ಯಾದಿ ಇನಾಂ ಭೂಮಿಗಳೂ ಎಕರೆಗಟ್ಟಲೆ ಇದ್ದವು. ಅವುಗಳನ್ನು ಇನಾಂ ಪಡೆದವರೇ ಕೃಷಿ ಮಾಡುತ್ತಿರಲಿಲ್ಲ. ಇನಾಂ ಪಡೆದವರು ಅವುಗಳನ್ನು ಗೇಣಿಗೆ ಕೊಟ್ಟು ಕೃಷಿಮಾಡಿಸುತ್ತಿದ್ದರು. ಮತ್ತೆ ಕೆಲವು ಬಾರಿ ಗೇಣಿದಾರರೊಂದಿಗೆ ಇನಾಂ ಭೂಮಿ ದೊರೆಯುತ್ತಿತ್ತು. ಈ ಎರಡೂ ಸಂದರ್ಭಗಳಲ್ಲೂ ಇನಾಂದಾರರು ಗೇಣಿಗೆ ಹಕ್ಕುದಾರರಾಗುತ್ತಿದ್ದರು. ಸ್ವತಂತ್ರ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಪ್ರಥಮ ಸರಕಾರ ರಚಿಸಿದೆ. ಅಧಿಕಾರ ಗದ್ದುಗೆಗೆ ಏರಿದ ಕಾಂಗ್ರೆಸ್ ಪಕ್ಷ ೧೯೪೮ರಲ್ಲೇ ಇನಾಂ ರದ್ದತಿ ಮಸೂದೆ ತರಲು ತೀರ್ಮಾನಿಸಿದೆ. ಆದರೆ ೧೯೫೪ರವರೆಗೂ ಸರಕಾರದ ಈ ತೀರ್ಮಾನ ಕಾಯಿದೆರೂಪ ಪಡೆಯಲಿಲ್ಲ. ಇದೇ ಸಂದರ್ಭದಲ್ಲಿ ಇನಾಂ ಭೂಮಿಯನ್ನು ಕೃಷಿ ಮಾಡುತ್ತಿದ್ದ ಗೇಣಿದಾರರು ಇನಾಂದಾರರಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆಂದು ಶಾಸನ ಸಭೆಯಲ್ಲಿ ಚರ್ಚೆ ನಡೆಯುತ್ತಿತ್ತು. ಅಷ್ಟು ಮಾತ್ರವಲ್ಲ ಇನಾಂದಾರರು ಗೇಣಿದಾರರಿಗೆ ಕಿರುಕುಳಕೊಡುತ್ತಾರೆಂದು ಅಧಿಕಾರಗಳಿಗೆ ದೂರು ನೀಡಿದರೆ ಅವರು ಇನಾಂದಾರರ ಪರವಾಗಿ ಕಾರ್ಯನಿರ್ವಹಿಸುತ್ತದ್ದರು. ಈ ಹಿನ್ನೆಲೆಯಲ್ಲಿ ಗೇಣಿದಾರರ ಆಸಕ್ತಿಗಳನ್ನು ರಕ್ಷಿಸಲು ೧೯೫೦ರಲ್ಲಿ ಗೇಣಿದಾರರ ರಕ್ಷಣಾ ಮಸೂದೆ ತರಲಾಯಿತು. ಖಾಸಗಿ ಇನಾಂ ಭೂಮಿ ರದ್ದತಿ ಮಸೂದೆ ೧೯೫೪ರಲ್ಲಿ ಅಂಗೀಕೃತಗೊಂಡರೆ ಧಾರ್ಮಿಕ ಇನಾಂಗಳು ರದ್ದತಿ ಮಸೂದೆ ಒಂದು ವರ್ಷದ ನಂತರ ೧೯೫೫ ರಲ್ಲಿ ಅಂಗೀಕೃತ ಗೊಂಡಿದೆ. ೧೯೪೮ರಲ್ಲಿ ಆರಂಭಗೊಂಡ ಇನಾಂ ರದ್ದತಿ ಮಸೂದೆ ತರುವ ಪ್ರಕ್ರಿಯೆ ೧೯೫೫ ಕೊನೆಗೊಂಡಿದೆ ಹೆಚ್ಚುಕಡಿಮೆ ಏಳು ವರ್ಷಗಳು ಮಸೂದೆ ಅಂಗೀಕಾರಗೊಳ್ಳಲು ಬೇಕಾಯಿತು. ಹಾಗೆ ನೋಡಿದರೆ ಕರ್ನಾಟಕದಲ್ಲಿ ಖಾಸಗಿ ಹಾಗೂ ಧಾರ್ಮಿಕ ಇನಾಂಗಳು ತುಂಬಾ ಕಡಿಮೆ ಸಂಖ್ಯೆಯಲ್ಲಿದ್ದವು. ಇನಾಂ ಭೂಮಿಯನ್ನು ಕೃಷಿ ಮಾಡುತ್ತಿದ್ದ ಗೇಣಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರು ಮಾತ್ರವಲ್ಲ ಅವರುಗಳ ಆಸಕ್ತಿಗಳನ್ನು ಅಸೆಂಬ್ಲಿಯಲ್ಲಿ ಬಲಯುತವಾಗಿ ಮಂಡಿಸುವ ಜನಪ್ರತಿನಿಧಿಗಳಿದ್ದರು. ಆದಾಗ್ಯೂ ಮಸೂದೆ ಅಂಗೀಕಾರಗೊಳ್ಳಲು ಸಾಕಷ್ಟು ಕಾಲ ತೆಗೆದುಕೊಂಡಿದೆ. ಯಾಕೆ ಹೀಗಾಯಿತು? ಎನ್ನುವ ಪ್ರಶ್ನೆಗೆ ಹಲವಾರು ಉತ್ತರಗಳಿವೆ. ಅವುಗಳಲ್ಲಿ ಹೆಚ್ಚು ಪ್ರಚಲಿತದ್ದಲ್ಲಿದ್ದ ಅಭಿಪ್ರಾಯ – ಇನಾಂದಾರರ ಆಸಕ್ತಿಗಳನ್ನು ನೌಖರಶಾಹಿ ಪ್ರತಿನಿಧಿಸುತ್ತಿತ್ತು ಎನ್ನುವ ವಾದ. ಬಹುತೇಕ ಧಾರ್ಮಿಕ ಇನಾಂಭೂಮಿಗಳು ಬ್ರಾಹ್ಮಣ ಸಮುದಾಯಗಳ ಸ್ವಾಧೀನ ಇದ್ದವು. ಇವರು ನೌಖರಶಾಹಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕಂದಾಯ ಮತ್ತು ಇತರ ಇಲಾಖೆಯಲ್ಲಿದ್ದ ಇವರು ಈ ಮಸೂದೆ ಅಂಗೀಕಾರಗೊಳ್ಳುವುದನ್ನು ಆದಷ್ಟು ಮುಂದಕ್ಕೆ ದೂಡಿದರು. ಈ ವಾದಕ್ಕೆ ಪುಷ್ಟಿಕೊಡುವ ಮತ್ತೊಂದು ಅಂಶ ಇನಾಂ ರದ್ದತಿ ಮಸೂದೆ ಜಾರಿಗೆ ಬಂದ ವಿಧಾನ. ಈ ಕಾಯಿದೆ ಆಡಳಿತಾಂಗದ ಮೂಲಕ ಜಾರಿಗೆ ಬರಲಿಲ್ಲ. ಇನಾಂ ಭೂಮಿಯನ್ನು ಕೃಷಿ ಮಾಡುತ್ತಿದ್ದ ಗೇಣಿದಾರರು ಕೋರ್ಟ್ ಮೂಲಕ ಭೂಮಿ ಮೇಲಿನ ತಮ್ಮ ಹಕ್ಕನ್ನು ಪಡೆದು ಕೊಂಡಿದ್ದಾರೆ.[6]

೧೯೬೧ರ ಮಸೂದೆ

ಮೈಸೂರು ಸರಕಾರ ೧೯೫೭ರಲ್ಲಿ ಭೂಸುಧಾರಣ ಸಮಿತಿಯನ್ನು ನೇಮಕ ಮಾಡಿದೆ. ಇದರ ಅಧ್ಯಕ್ಷರಾಗಿ ಬಿ.ಡಿ. ಜತ್ತಿ ನೇಮಕಗೊಂಡರು. ಬಿ.ಡಿ. ಜತ್ತಿ ಸಮಿತಿಯೆಂದು ಇದು ಹೆಸರು ಮಾಡಿದೆ. ಈ ಸಮಿತಿ ನೇಮಕವಾದ ಒಂದೇ ವರ್ಷದಲ್ಲಿ ತನ್ನ ವರದಿ ಸಲ್ಲಿಸಿದೆ. ಈ ಸಮಿತಿಯ ಶಿಪಾರಸ್ಸುಗಳನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಭೂಸುಧಾರಣ ಬಿಲ್‌ನ್ನು ಸಿದ್ದಪಡಿಸಲಾಯಿತು. ಈ ಬಿಲ್ಲು ೧೯೬೧ರಲ್ಲಿ ಭೂಸುಧಾರಣ ಮಸೂದೆಯಾಗಿ ಶಾಸನಸಭೆಯಲ್ಲಿ ಅಂಗೀಕಾರಗೊಂಡಿದೆ. ಮಸೂದೆ ಅಂಗೀಕಾರಗೊಂಡ ಒಂದು ವರ್ಷದಲ್ಲಿ ರಾಷ್ಟ್ರಪತಿಗಳ ಅಂಕಿತ ದೊರೆಯಿತು. ಆದರೆ ಈ ಮಸೂದೆ ಜಾರಿಗೆ ಬಂದುದು ಮಾತ್ರ ೧೯೬೫ರಲ್ಲಿ. ಇಲ್ಲೂ ಮಸೂದೆ ರೂಪುಗೊಂಡು ಜಾರಿಗೆ ಬರಲು ಹೆಚ್ಚು ಕಡಿಮೆ ಎಂಟು ವರ್ಷ ತೆಗೆದುಕೊಂಡಿದೆ. ಈ ಮಸೂದೆಯನ್ನು ಭೂಸುಧಾರಣ ಮಸೂದೆ ಎನ್ನುವುದುಕ್ಕಿಂತ ಗೇಣಿಸುಧಾರಣಾ (ಟಿನೆನ್ಸಿ ರಿಫಾರ್ಮ್) ಮಸೂದೆ ಎನ್ನುವುದು ಹೆಚ್ಚು ಸೂಕ್ತ. ಯಾಕೆಂದರೆ ಈ ಮಸೂದೆ ಬರುವ ಮುನ್ನ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ವಿಭಿನ್ನ ಗೇಣಿದಾರಿಕೆ ಹಾಗೂ ಬೇಸಾಯ ಜಮೀನು ಕಾಯಿದೆಗಳಿದ್ದವು ಮುಂಬಯಿ ಕರ್ನಾಟಕದಲ್ಲಿ ಮುಂಬೈ ಗೇಣಿದಾರಿಕೆ ಹಾಗೂ ಬೇಸಾಯ ಜಮೀನು ಕಾಯಿದೆ, ೧೯೪೮, ಹೈದರಾಬಾದ್‌ಕರ್ನಾಟಕದ ಪ್ರದೇಶದಲ್ಲಿ ಹೈದರಾಬಾದ್ ಗೇಣಿದಾರಿಕೆ ಹಾಗೂ ಬೇಸಾಯ ಜಮೀನು ಕಾಯಿದೆ, ೧೯೫೦, ಮದರಾಸು ರಸಿಡೆನ್ಸಿಗೆ ಸೇರಿದ ಭಾಗಗಳಲ್ಲಿ ೧೯೫೬ರ ಮದರಾಸು ಬೇಸಾಯ ಮಾಡುತ್ತಿರುವ ಗೇಣಿದಾರ (ನ್ಯಾಯ ಗುತ್ತಿಗೆ ನೀಡಿಕೆ) ಕಾಯಿದೆ ಮತ್ತು ಮೈಸೂರು ಪ್ರದೇಶದಲ್ಲಿ ೧೯೫೨ರ ಮೈಸೂರು ಗೇಣಿದಾರಿಕೆ ಕಾಯಿದೆ ಚಾಲ್ತಿಯಲ್ಲಿದ್ದವು. ೧೯೬೧ರ ಕಾಯಿದೆ ಮೇಲಿನ ಎಲ್ಲಾ ಕಾಯಿದೆಗಳನ್ನು ಅನೂರ್ಜಿತಗೊಳಿಸಿ ಇಡೀ ರಾಜ್ಯಕ್ಕೇ ಏಕ ಭೂಮಸೂದೆಯನ್ನು ಜಾರಿ ಗೊಳಿಸಿದೆ.[7] ಈ ಕಾಯಿದೆಯ ಮುಖ್ಯಾಂಶಗಳು ಇಂತಿವೆ.[8]

೧. ಕೆಳಗಿನ ವಿಶೇಷ ಸಂದರ್ಭಗಳನ್ನು ಹೊರತು ಪಡಿಸಿದ ಸಂದರ್ಭಗಳಲ್ಲಿ ಗೇಣಿಗೆ ಜಮೀನು ಕೊಡುವ ಪದ್ದತಿಯನ್ನು ಕಾಯಿದೆ ಪ್ರತಿಬಂಧಿಸಿದೆ. ಭೂ ಸೈನಿಕರು, ಸಿಮೆನ್‌ಗಳು, ಮೆಜರಿಟಿಗೆ ಬಂದವರು, ಮದುವೆಯಾಗದ ಹೆಂಗಸರು, ವಿಧವೆಯರು, ಅಂಗ / ಬುದ್ದಿವಿಕಲರು, ಸಣ್ಣ ಹಿಡುವಳಿದಾರರು ಇವರುಗಳಿಗೆ ಗೇಣಿಗೆ ನೀಡುವ ನಿರ್ಬಂಧವನ್ನು ಕಾಯಿದೆ ಸಡಿಲಿಸಿದೆ.

೨. ಭೂಮಿಯ ಒಡೆತನ ಬದಲಾವಣೆ ಮಾಡುವಾಗ (ಭೂಮಲಿಕನಿಂದ ಗೇಣಿದಾರನಿಗೆ) ಮೊದಲ ಹಂತದಲ್ಲಿ ಜಮೀನಿನ ಸ್ವಾಮ್ಯವನ್ನು ಸರಕಾರವು ವಹಿಸಿಕೊಂಡು ನಂತರ ಅದನ್ನು ಗೇಣಿದಾರರಿಗೆ ವರ್ಗಾಯಿಸುವ ಕ್ರಮವನ್ನು ಕಾಯಿದೆ ಶಿಪಾರಸ್ಸು ಮಾಡಿದೆ. ಪರೋಕ್ಷವಾಗಿ ಎಲ್ಲಾ ಭೂಮಿ ಸರಕಾರಕ್ಕೆ ಸೇರಿದ್ದು ಮತ್ತು ಭೂಮಿಯ ಒಡೆತನದ ಅಂತಿಮ ತೀರ್ಮಾನ ಸರಕಾರದ್ದು ಎನ್ನುವ ಪರೋಕ್ಷ ಸಂದೇಶವನ್ನು ಈ ಶಿಫಾರಸ್ಸು ನೀಡಿದೆ.

೩. ಗೇಣಿದಾರ ಕೊಡಬೇಕಾದ ಗುತ್ತಿಗೆ (ಗೇಣಿ)ಯನ್ನು ಮಸೂದೆ ಈ ಕೆಳಗಿಂತೆ ನಿರ್ಧರಿಸಿದೆ. ನೀರಾವರಿ ಪ್ರದೇಶದಲ್ಲಿ ಬೆಳೆಯ ಶೇ. ೨೫ರಷ್ಟು ಮತ್ತು ಒಣ ಭೂಪ್ರದೇಶದಲ್ಲಿ ಬೇಳೆಯ ಶೇ. ೨೦ರಷ್ಟು ಗೇಣಿ ಕೂಡಬೇಕೆಂದು ತೀರ್ಮಾನಿಸಿದೆ.

೪. ಗೇಣಿಗೆ ನೀಡಿದ ಭೂಮಿತನ್ನು ಪುನರ್ ಸ್ವಾಧೀನ – ಪಡಿಸುವುದನ್ನು ಕಾಯಿದೆ ಭಾಗಶಃ ನಿಯಂತ್ರಿಸಿದೆ. ಈ ಕೆಳಗಿನ ಸಂದರ್ಭಗಳಲ್ಲಿ ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳುವ ಅವಕಾಶವನ್ನು ಕಾಯಿದೆ ನೀಡಿದೆ.

ಅ. ಭೂಮಾಲಿಕರು ಸ್ವಂತ ಬೇಸಾಯ ಮಾಡಲು ಇಚ್ಚಿಸಿದ ಸಂದರ್ಭದಲ್ಲಿ

ಆ. ಗೇಣಿದಾರರು ನೀಡಿದಾಗ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಸಮಯ ಬೇಸಾಯ ಮಾಡದಿದ್ದಾಗ

ಇ. ಉಗ್ರಾಣ, ಕಾಖಾನೆ ಅಥವಾ ಮನೆ ಕಟ್ಟುವಂತಹ ಕೃಷಿಯೇತರ ಉದ್ದೇಶಗಳಿಗೆ ಭೂಮಿ ಅವಶ್ಯವಾದಾಗ

ಈ. ಗೇಣಿಗೆ ನೀಡಿದ್ದ ಅರ್ಧ ಬಾಗವನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳಬಹುದು.

ಉ. ಗೇಣಿಗೆ ನೀಡಿರುವುದನ್ನು ಪುನರ್ ಸ್ವಾಧೀನ ಮಾಡುವುದರಿಂದ ಗೇಣಿದಾರ ಭೂರಹಿತನಗಬಾರದು. ಗೇಣಿದಾರ ಜೀವನ ಸಾಗಿಸಲು ಅವಶ್ಯವಿರುವಷ್ಟು ಭೂಮಿ ಅವನ ವಶ ಬಿಟ್ಟು ಉಳಿದುದನ್ನು ಮಾತ್ರ ಸ್ವಾಧೀನ ಪಡಿಸಿಕೊಳ್ಳ ಬಹುದು.

ಊ. ಗೇಣಿದಾರ ಸ್ವ ಇಚ್ಚೆಯಿಂದ ಗುತ್ತಿಗೆ ಭೂಮಿಯನ್ನು ಮಾಲಿಕನಿಗೆ ಬಿಟ್ಟುಕೊಡುವುದಾದರೆ ನ್ಯಾಯಮಂಡಳಿಯ ಗಮನಕ್ಕೆ ತರಬೇಕು. ಒತ್ತಡದಿಂದ ಗೇಣಿದಾರ ಭೂಮಿ ಬಿಟ್ಟುಕೊಡುತ್ತಿಲ್ಲ ಎನ್ನವುದನ್ನು ಖಚಿತಪಡಿಸಿಕೊಂಡು ಮಾಲಿಕನಿಗೆ ಸಲ್ಲಬೇಕಾದನ್ನು ಇತ್ತು ಬಾಕಿ ಇರುವ ಭೂಮಿಯನ್ನು ಸರಕಾರ ವಶಪಡಿಸಿ ಕೊಳ್ಳುವುದು.

೫. ಕಾಯಿದೆ ಪ್ರಥಮ ಬಾರಿಗೆ ಕೃಷಿಕರಲ್ಲದವರು ಅಥವಾ ಕೃಷಿಕಾರ್ಮಿಕರಲ್ಲದವರು ಕೃಷಿ ಭೂಮಿಹೊಂದುವದನ್ನು ಪ್ರತಿಬಂಧಿಸಿತು. ಒಂದು ವೇಳೆ ಮೇಲಿನ ಎರಡೂ ಅಲ್ಲದವರು ಸ್ವಂತ ಕೃಷಿ ಮಾಡು ಉದ್ದೇಶದಿಂದ ಭೂಮಿ ಹೊಂದುವ ಇಚ್ಚೆ ಪಟ್ಟರೆ ಅಂತವರಿಗೆ ಕನಿಷ್ಠ ಐದು ವರ್ಷ ಕೃಷಿ ಮಾಡುವ ಶರತ್ತಿನೊಂದಿಗೆ ಭೂಮಿ ಹೊಂದಲು ಅನುಮತಿ ನೀಡಲಾಯಿತು.

೬. ಒಂದು ಕುಟುಂಬ ಹೊಂದಿರಬಹುದಾದ ಗರಿಷ್ಠ ಭೂಮಿ ಮೇಲೂ ೧೯೬೧ರ ಕಾಯಿದೆ ಎಕರೆ ಭೂಮಿಯನ್ನು ಹೊಂದಿರಬಹುದು. ಒಂದು ಎಕರೆ ನೀರಾವರಿ ಭೂಮಿಯನ್ನು ಒಂದು ಸ್ಟ್ಯಾಂಡರ್ಡ್ ಎಕರೆ ಎಂದು ಗುರುತಿಸಲಾಗಿದೆ. ನೀರಾವರಿ ಇಲ್ಲದ (೨೫ ಇಂಚಿಗಿಂತ ಕಡಿಮೆ ಮಳೆಯಾಗುವ) ಪ್ರದೇಶದ ಎಂಟು ಎಕರೆ ಭೂಮಿಯು ಒಂದು ಸ್ಟ್ಯಾಂಡರ್ಡ್ ಎಕರೆ ಭೂಮಿಗೆ ಸಮ. ಅಂದರೆ ಒಣಭೂಪ್ರದೇಶದಲ್ಲಿ ಪ್ರತಿ ಐದು ಜನರಿರುವ ಒಂದು ಕುಟುಂಬವು ಗರಿಷ್ಠ ೨೧೬ ಎಕರೆ ಭೂಮಿಯನ್ನು ಹೊಂದಬಹುದು. ಕುಟುಂಬದ ಸದಸ್ಯರ ಸಂಖ್ಯೆ ಐದಕ್ಕಿಂತ ಹೆಚ್ಚಿದ್ದ ಸಂದರ್ಭದಲ್ಲಿ ಪ್ರತಿ ಸದಸ್ಯರಿಗೂ ನಿರ್ಧಿಷ್ಟ ಪ್ರಮಾಣದ ಹೆಚ್ಚುವರಿ ಭೂಮಿ ಹೊಂದುವ ಅವಕಾಶ ನೀಡಲಾಯಿತು. ಈ ರೀತಿಯ ಹೆಚ್ಚಳವು ಹತ್ತು ಸದಸ್ಯರಿರುವ ಒಂದು ಕುಟುಂಬಕ್ಕೆ ಗರಿಷ್ಠ ೫೪ ಎಕರೆ ನೀರಾವರಿ ಭೂಮಿಯನ್ನು (ಒಣಭೂಮಿಯಾದರೆ ಗರಿಷ್ಠ ೪೩೨ ಎಕರೆ) ಹೊಂದುವ ಅವಕಾಶವನ್ನು ನೀಡಿದೆ. ಈ ಕೆಳಗಿನ ಸಂಘಸಂಸ್ಥೆಗಳಿಗೆ ಮೇಲಿನ ಗರಿಷ್ಠಮಿತಿಯಿಂದ ವಿನಾಯಿತಿ ನೀಡಲಾಗಿದೆ.

೧. ಟೀ, ಕಾಫಿ, ರಬ್ಬರ್, ಏಲಕ್ಕಿ ಮತ್ತು ಮೆಣಸಿನ ತೋಟಗಳು

೨. ಶೈಕ್ಷಣಿಕ, ದತ್ತಿ ಮತ್ತು ಮತಧರ್ಮೀಯ ಸಂಸ್ಥೆಗಳು, ಸಹಕಾರಿ ಸಂಸ್ಥೆಗಳು

೩. ಕುದುರೆಗಾವಲುಗಳು, ಸರಕಾರದಿಂದ ಅನುಮತಿ ಪಡೆದ ಔದ್ಯಮಿಕ ಅಥವಾ ವಾಣಿಜ್ಯ ಸಂಸ್ಥೆಗಳು

೪. ೧೯೬೫ರ ಹಿಂದೆ ಅಸ್ತಿತ್ವದಲ್ಲಿದ್ದ ಸಕ್ಕರೆ ಕಾರ್ಖಾನೆಗಳು

೫. ಗರಿಷ್ಠಮಿತಿಗಿಂತ ಹೆಚ್ಚು ಇರುವ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ಭೂರಹಿತ ದಲಿತ, ಬುಡಕಟ್ಟು ಜನರು ಮತ್ತು ಈ ಕಾಯಿದೆಯ ಅನುಷ್ಠಾನದಿಂದ ಭೂಮಿ ಕಳೆದುಕೊಂಡ ಗೇಣಿದಾರರಿಗೆ ಹಂಚಲು ಕಾಯಿದೆ ಸೂಚಿಸಿದೆ.

ಕಾಯಿದೆಯೆ ಇತಿಮಿತಿಗಳು

೧೯೫೭ರಲ್ಲಿ ಬಿ.ಡಿ. ಜತ್ತಿ ಭೂಸುಧಾರಣ ಸಮಿತಿ ಸಲ್ಲಿಸಿದ ವರದಿಯನ್ನು ಆಧರಿಸಿ ೧೯೬೧ರ ಭೂಮಸೂದೆ ರೂಪುಗೊಂಡಿದೆ. ವರದಿ ಮಸೂದೆಯಾಗಿ ಜಾರಿಗೆ ಬರಲು ಸುಮಾರು ಎಂಟು ವರ್ಷಗಳ ಅವಧಿಯನ್ನು ತೆಗೆದುಕೊಂಡಿದೆ. ಈ ಎಂಟು ವರ್ಷಗಳಲ್ಲಿ ಭೂಮಸೂದೆ ಬಗ್ಗೆ ತಿಳವಳಿಕೆ ಇದ್ದವರು ತಮ್ಮ ಆಸಕ್ತಿಗಳನ್ನು ರಕ್ಷಿಸಿಕೊಳ್ಳಲು ಕ್ರಮ ಕೈಗೊಳ್ಳಬಹುದು ಎನ್ನುವುದನ್ನು  ಹೇಳಲು ದೊಡ್ಡ ಬುದ್ದವಂತಿಕೆ ಬೇಕಿಲ್ಲ. ಭೂಮಸೂದೆ ಅನುಷ್ಠಾನಗೊಂಡಾಗ ಆಗುವ ಲಾಭನಷ್ಟಗಳ ಬಗ್ಗೆ ಭೂಮಾಲಿಕರಿಗಿರುವಷ್ಟು ಮಾಹಿತಿ ಗೇಣಿದಾರರಿಗೆ ಇದೆ ಎನ್ನಲಾಗುವುದಿಲ್ಲ. ಭೂಮಾಲಿಕರ ಪೈಕಿ ಜನಪ್ರತಿನಿಧಿಗಳಿದ್ದರು. ಆಡಳಿತ ಅಧಿಕಾರಿಗಳೊಂದಿಗೆ ಭೂಮಾಲಿಕರಿಗೆ ಸಂಬಂಧ ಸುಲಭವಾಗಿತ್ತು ನ್ಯಾಯಾಂಗದ ಅಧಿಕಾರಶಾಹಿಯೊಂದಿಗೆ ಉತ್ತಮ ಸಂಬಂಧಗಳಿದ್ದವು. ಜನಪ್ರತಿನಿಧಿಗಳು, ಆಡಳಿತ ಹಾಗೂ ನ್ಯಾಯಾಂಗದ ಅಧಿಕಾರಶಾಹಿಗಳ ಸಂಬಂಧದ ದೃಷ್ಟಿಯಿಂದ ಗೇಣಿದಾರರು ಭೂಮಾಲಿಕರಿಗೆ ಹೋಲಿಸಿದರೆ ತುಂಬಾ ಹಿಂದೆ ಇದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ಕಾಯಿದೆ ರೂಪುಗೊಂಡು ಅನುಷ್ಠಾನಗೊಳ್ಳಲು ತೆಗೆದುಕೊಂಡ ಎಂಟು ವರ್ಷಗಳನ್ನು ನೋಡಿದರೆ ಈ ದೀರ್ಘಾವಧಿ ಗೇಣಿದಾರರ ಮೇಲೆ ಮಾಡಿರುವ ಪರಿಣಾಮವನ್ನು ಅರ್ಥಮಾಡಿಕೊಳ್ಳಬಹುದು.

ಕರ್ನಾಟಕದ ಎಲ್ಲಾ ಭಾಗದ ರೈತರಿಗೆ ಏಕರೂಪದ ಗುತ್ತಿಗೆಯನ್ನು ೧೯೬೧ರ ಕಾಯಿದೆ ನಿಗಧಿಪಡಿಸಿದೆ. ಈ ಕಾಯಿದೆ ಅನುಷ್ಠಾನಗೊಂಡ ನಂತರ ನೀರಾವರಿ ಪ್ರದೇಶದಲ್ಲಿ ಉತ್ಪನ್ನದ ಶೇ. ೨೫ರಷ್ಟು ಮತ್ತು ಒಣ ಭೂಪ್ರದೇಶದಲ್ಲಿ ಉತ್ಪನ್ನದ ಶೇ. ೨೦ ರಷ್ಟುನ್ನು ಗೇಣಿದಾರರು ಗುತ್ತಿಗೆ ನಿಡಬೇಕಾಯಿತು. ಈ ಕಾಯಿದೆ ಜಾರಿಗೆ ಬರುವ ಮುನ್ನ ರಾಜ್ಯದ ವಿಭಿನ್ನ ಪ್ರದೇಶಗಳಲ್ಲಿ ಬೇರೆ ಬೇರೆ ಗೇಣಿಕಾಯಿದೆಗಳಿದ್ದವು. ಅವುಗಳು ಬೇರೆ ಬೇರೆ ಗೇಣಿ ಮೊತ್ತವನ್ನು ನಿಗಧಿಗೊಳಿಸಿದ್ದವು. ಬಾಂಬೆ ಟಿನೆನ್ಸಿ ಆಂಡ್ ಆಗ್ರಿಕಲ್ಚರಲ್ ಲ್ಯಾಂಡ್ಸ್ ಆಕ್ಟ್, ೧೯೪೮ರ (ಬಾಂಬೆ ಪ್ರಾಂತ್ಯದಲ್ಲಿ) ಭೂಮಿಯ ಉತ್ಪನ್ನದ ಆರನೇ ಒಂದರಷ್ಟನ್ನು (ಶೇ. ೧೬.೬) ಗೇಣಿ ನೀಗದಿಗೊಳಿಸಿದೆ. ಈ ಗೇಣಿ ಎಲ್ಲಾ ಭೂಮಿಗಳಿಗೂ ನೀರಾವರಿ ಮತ್ತು ಒಣ ಭೂಮಿಗಳಿಗೆ ಏಕರೂಪದಲ್ಲಿ ಅನ್ವಯಿಸುತ್ತದೆ. ಉತ್ತರ ಕನ್ನಡ ಧಾರವಾಡ, ಬೆಳಗಾಂ, ಬಿಜಾಪುರ ಮುಂತಾದ ಜಿಲ್ಲೆಗಳಿಗೆ ಬಾಂಬೆ ಕಾಯಿದೆ ಅನ್ವಯವಾಗುತ್ತಿತ್ತು. ಜತ್ತಿಸಮಿತಿಯೂ ಎಲ್ಲಾ ಪ್ರದೇಶಗಳ (ಬಾಂಬೆ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮದರಾಸು ಪ್ರಾಂತ್ಯ ಮೈಸೂರು ಪ್ರಾಂತ್ಯ) ಗೇಣಿ ಕಾಯಿದೆಗಳನ್ನು ಪರಾಮರ್ಶನ ಮಾಡಿ ಮೇಲಿನ ಶೇ. ೨೫ ಮತ್ತು ಶೇ. ೨೦ ಗುತ್ತಿಗೆಯನ್ನು ನಿಗದಿಗೊಳಿಸಿದೆ. ಕರ್ನಾಟಕದ ಎಲ್ಲಾ ಪ್ರಾಂತಗಳ ಗುತ್ತಿಗೆಯನ್ನು ಹೋಲಿಸಿ ನೋಡಿದರೆ ಬಾಂಬೆ ಪ್ರಾಂತದ ಗುತ್ತಿಗೆ (ಶೇ. ೧೬.೬) ಅತೀ ಕಡಿಮೆಯಾಗಿತ್ತು[9] ಕರ್ನಾಟಕದ ಎಲ್ಲಾ ಗುತ್ತಿಗೆ ರೈತರಿಗೆ ನ್ಯಾಯ ಒದಗಿಸುವುದು ೧೯೬೧ರ ಕಾಯಿದೆಯ ಮೂಲ ಉದ್ದೇಶವಾಗಿದ್ದರೆ ಬಾಂಬೆ ಪ್ರಾಂತದ ಅತೀ ಕನಿಷ್ಠ ಗುತ್ತಿಗೆಯನ್ನು (ಶೇ. ೧೬.೬) ಹೊಸ ಕಾಯಿದೆ ಗುತ್ತಿಗೆಯೆಂದು ನಿಗಧಿಪಡಿಸಬಹುದಿತ್ತು. ಆದರೆ ಆ ರೀತಿ ಆಗಲಿಲ್ಲ. ಉತ್ಪನ್ನದ ಶೇ.೯ರಷ್ಟು (ಹೊಸ ಗುತ್ತಿಗೆ ಶೇ.೨೫ – ಹಳೇ ಗುತ್ತಿಗೆ ಶೇ. ೧೬.೬) ಹೆಚ್ಚಿನ ಗುತ್ತಿಗೆ ನೀಡುವಂತಾಯಿತು. ಇದನ್ನು ಈ ಪ್ರಾಂತದ ರೈತರು ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ರೈತರು ಬಲವಾಗಿ ಖಂಡಿಸಿದ್ದಾರೆ.[10]

ಗೇಣಿಗೆ ನೀಡಿರುವ ಭೂಮಿಯನ್ನು ಪುನರ್‌ಸ್ವಾಧೀನಪಡಿಸಿಕೊಳ್ಳಲು ೧೯೬೧ರ ಕಾಯಿದೆ ಸಾಕಷ್ಟು ಅವಕಾಶ ನೀಡಿದೆ. ಸ್ವಂತ ಬೇಸಾಯ ಮಾಡುವ ನೆಪದಲ್ಲಿ ಅಥವಾ ಕೃಷಿಯೇತರ ಉದ್ದೇಶಗಳಿಗೆ ಬಳಸುವ ಹೆಸರಲ್ಲಿ ಅಥವಾ ಗೇಣಿದಾರ ಶರತ್ತಿನಂತೆ ನಡೆದುಕೊಂಡಿಲ್ಲ ಎನ್ನುವ ಆರೋಪದ ಮೆಲೆ ಗೇಣಿಗೆ ನೀಡಿದ ಭೂಮಿಯನ್ನು ಮಾಲಿಕ ಪುನರ್‌ಸ್ವಾಧೀನ ಪಡಿಸಿಕೊಳ್ಳಬಹುದಿತ್ತು. ಪುನರ್‌ಸ್ವಾಧೀನ ಪಡಿಸುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕೆಲವು ಶರತ್ತುಗಳನ್ನು ಕಾಯಿದೆ ಹೇರಿದೆಯಾದರೂ ಅವುಗಳನ್ನು ಮುರಿಯುವುದು ಅಥವಾ ಕಾನೂನು ಪ್ರಕಾರ ಅಲ್ಲಗೆಳೆಯುವುದು ಪ್ರಭಾವಿ ಭೂಮಾಲಿಕರಿಗೆ ದೊಡ್ಡ ಸಮಸ್ಯೆಯಾಗಿರಲಿಲ್ಲ. ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ ರೈತನೊಬ್ಬ ತಾನು ಗೇಣಿದಾರನೆಂದು ಸಾಬೀತುಪಡಿಸುವುದೇ ದೊಡ್ಡ ಸಾಹಸ. ಬಾಯಿಮಾತಿನ ಮೂಲಕವೇ ಗೇಣಿ ಒಪ್ಪಂದಗಳು ನಡೆದಿರುತ್ತವೆ. ವರ್ಷಗಟ್ಟಲೆ ದುಡಿದು ತಪ್ಪದೇ ಪ್ರತಿ ವರ್ಷ ಗೇಣಿ ಸಂದಾಯ ಮಾಡಿದರೂ ಗೇಣಿ ಕೊಟ್ಟಿರುವುದಕ್ಕೆ ಆತನಲ್ಲಿ ಯವುದೇ ಪುರಾವೆಗಳಿರುವುದಿಲ್ಲ. ಇಂತಹ ರೈತರು ತಾವು ಗೇಣಿದಾರರೆಂದು ಸಾಧಿಸುವುದು ಹೇಗೆ? ಇಂತವರನ್ನು ವಕ್ಕಲೆಬ್ಬಿಸಲು ಕಾಯಿದೆಗಳು ಸೂಚಿಸುವ ನೆಪಗಳು ಬೇಕೆ? ಈ ಕಾಯಿದೆ ಗೇಣಿದಾರರ ಹಿತರಕ್ಷಣೆ ಮಾಡುವುದಕ್ಕಿಂತ ಹೆಚ್ಚು ತಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತಮಗೆ ತೊಂದರೆ ತಪ್ಪಿದಲ್ಲ ಎನ್ನುವ ಸೂಚನೆಯನ್ನು ಭೂಮಾಲಿಕರಿಗೆ ನೀಡುವಂತಿತ್ತು. ಎಚ್ಚೆತ್ತುಕೊಂಡು ಭೂಮಾಲಿಕರು ವಕ್ಕಲೆಬ್ಬಿಸಲು ಕಾನೂನು ಮತ್ತು ಕಾನೂನೇತರ ಮಾರ್ಗ ಅನುಸರಿಸಿ ಗೇಣಿದಾರರನ್ನು ಕೃಷಿ ಕೂಲಿಯನ್ನಾಗಿಸುವುದು ಸುಲಭ.

ಭೂಮಾಲಿಕರು ಹೊಂದಬಹುದಾದ ಗರಿಷ್ಠ ಭೂಮಿಯ ಪ್ರಮಾಣವನ್ನು ನಿರ್ಧರಿಸುವಾಗಿ ೧೯೬೧ರ ಕಾಯಿದೆ ಧಾರಾಳತನ ತೋರಿದೆ.[11] ನೀರಾವರಿ ಪ್ರದೇಶದಲ್ಲಿ ಐದು ಜನರಿರುವ ಒಂದು ಕುಟುಂಬ ಗರಿಷ್ಠ ೨೭ ಎಕರೆ ಭೂಮಿಯನ್ನು ಹೊಂದಬಹುದು. ಐದಕ್ಕಿಂತ ಹೆಚ್ಚು ಸದಸ್ಯರಿದ್ದ ಸಂದರ್ಭದಲ್ಲಿ ಪ್ರತಿ ಸದಸ್ಯರಿಗೆ ೫ ಎಕರೆಯಂತೆ ಹತ್ತು ಜನರಿರುವ ಕುಟುಂಬವೊಂದು ೫೪ ಎಕರೆ ಭೂಮಿಯನ್ನು ಹೊಂದಲು ಕಾಯಿದೆ ಅವಕಾಶ ನೀಡಿದೆ. ಒಣ ಭೂಪ್ರದೇಶದಲ್ಲಿ (೨೫ ಅಂಗುಲಕ್ಕಿಂತ ಕಡಿಮೆ ಮಳೆ ಇರುವ ಪ್ರದೇಶದಲ್ಲಿ) ಐದು ಜನರ ಕುಟುಂಬವೊಂದು ೨೧೬ ಎಕರೆ ಭೂಮಿಯನ್ನು ಮತ್ತು ಸದಸ್ಯರು ಹೆಚ್ಚಿದಂತೆ ಹೊಂದಬಹುದಾದ ಭೂಮಿಯ ಪ್ರಮಾಣ ಹೆಚ್ಚಿಸಿ ಹತ್ತು ಜನರಿರುವ ಕುಟುಂಬವೊಂದು ೪೩೨ ಎಕರೆ ಭೂಮಿಯನ್ನು ಹೊಂದಬಹುದಿತ್ತು. ಕಾಫಿ, ಟೀ, ರಬ್ಬರ್, ಏಲಕ್ಕಿ ಇತ್ಯಾದಿ ಪ್ಲಾಂಟೇಶನ್‌ಗಳಿಗೆ ಈ ಮಿತಿಯೂ ಇಲ್ಲ. ಕರ್ನಾಟಕದಲ್ಲಿ ಕರಾವಳಿ ಕರ್ನಾಟಕ(ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಗಳು) ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಈ ಜಿಲ್ಲೆಗಳನ್ನು ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳು. ಇನ್ನುಳಿದ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಹಾಗೆ ಕರ್ನಾಟಕದ ಮೂರನೇ ಎರಡರಷ್ಟು ಪ್ರದೇಶ ಒಣ ಭೂಪ್ರದೇಶವಾಗಿದೆ. ಅಂದರೆ ರಾಜ್ಯದ ಮೂರನೇ ಎರಡರಷ್ಟು ಪ್ರದೇಶದಲ್ಲಿ ಭೂಮಾಲಿಕ ಕಟುಂಬವೊಂದು ಹೊಂದಬಹುದಾದ ಗರಿಷ್ಠಮಿತಿ ೪೩೨ ಎಕರೆಗಳು. ರಾಜ್ಯದ ಮೂರನೇ ಒಂದು ಪ್ರದೇಶದಲ್ಲಿ ಮಾತ್ರ ಗರಿಷ್ಠ ಪ್ರಮಾಣ ೫೪ ಎಕರೆಗಳು. ಆದರೆ ಇದು ಕೂಡ ಸರಿಯಾದ ಲೆಕ್ಕಚಾರವಲ್ಲ. ಯಾಕೆಂದರೆ ಮೇಲೆ ಸೂಚಿಸಿರುವ ಕಾಫಿ, ಟೀ, ಏಲಕ್ಕಿ ಪ್ಲಾಂಟೇಶನ್‌ಗಳು ಹೆಚ್ಚಿನ ಪ್ರಮಾಣದಲ್ಲಿರುವುದು ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ. ಅಲ್ಪ ಪ್ರಮಾಣದಲ್ಲಿ ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿವೆ. ಪ್ಲಾಂಟೇಶನ್‌ಗಳು, ಸಕ್ಕರೆ ಕಾರ್ಖಾನೆಗಳು ಇತ್ಯಾದಿಗಳಿಗೆ ಗರಿಷ್ಠಮಿತಿ ಇಲ್ಲ. ಇದರಿಂದಾಗಿ ಹೆಚ್ಚು ಮಳೆ ಬೀಳುವ ಪ್ರದೇಶಗಳ ಭೂಮಾಲಿಕರು ಹೊಂದ ಬಹುದಾದ ಭೂಮಿ ಮಿತಿ ಮಳೆ ಕಡಿಮೆ ಇರುವ ಪ್ರದೇಶಕ್ಕೆ ಸಮ ಎಂದಾಯಿತು. ಭೂಸೈನಿಕರಿಗೆ, ಸಿಮೆನ್‌ಗಳಿಗೆ, ವಿಧವೆಯವರಿಗೆ, ಸಣ್ಣ ಹಿಡುವಳಿದಾರರಿಗೆ, ಬುದ್ದಿ / ಅಂಗ ವಿಕಲರಿಗೆ ಗುತ್ತಿಗೆ ನೀಡುವ ಅವಕಾಶವನ್ನು ಕಾಯಿದೆ ನೀಡಿದೆ. ಇದರಿಂದ ಗುತ್ತಿಗೆ ಪದ್ದತಿಯನ್ನು ರದ್ದು ಮಾಡಲು ಸಾಧ್ಯವಾಗಲಿಲ್ಲ. ಗುತ್ತಿಗೆ ನಿಡುವುದು ಕಾನೂನೂ ವ್ಯಾಪ್ತಿಯಲ್ಲಿ ಸಾಧ್ಯವಾದುದರಿಂದ ಗುತ್ತಿಗೆ ಪದ್ದತಿ ಮುಂದುವರಿಯಿತು.

೧೯೭೪ರ ಕಾಯಿದೆ

ಭೂಸುಧಾರಣೆಯ ಅಂತಿಮ ಗುರಿ ಉಳುವವರನ್ನೇ ಹೊಲದೊಡೆಯರನ್ನಾಗಿ ಮಾಡುವುದು. ಅಂತಿಮ ಗುರಿ ಸಾಧನೆಗೆ ಮುನ್ನ ಹಲವಾರು ಹಂತಗಳ ಸುಧಾರಣೆಗಳು ಸಾಧ್ಯ ಅವುಗಳಲ್ಲಿ ಭೂಮಾಲಿಕರು ಗುತ್ತಿಗೆ ನೀಡಿದ ಭೂಮಿಯನ್ನು ಮನಬಂದಂತೆ ಪುನರ್ ಸ್ವಾಧೀನ ಪಡಿಸಿದಂತೆ ತಡೆಯುವುದು, ಗೇಣಿ / ಗುತ್ತಿಗೆಯನ್ನು ನಿಯಂತ್ರಿಸುವುದು, ಭೂಮಾಲಿಕ ಹೊಂದಬಹುದಾದ ಗರಿಷ್ಠಭೂಮಿಯ ಪ್ರಮಾಣವನ್ನು ನಿಯಂತ್ರಿಸುವುದು, ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚುವುದು ಇತ್ಯಾದಿಗಳು ಸೇರಿವೆ. ಆದರೆ ೧೯೬೧ರ ಕಾಯಿದೆ ಮೇಲೆ ಸೂಚಿಸಿದ ಯವುದೇ ಉದ್ದೇಶಗಳನ್ನು ಈಡೇರಿಸುವಂತಿರಲಿಲ್ಲ. ಅದನ್ನು ಭೂಸುಧಾರಣ ಮಸೂದೆ ಎನ್ನಲು ಸಾಧ್ಯವೇ ಇಲ್ಲ. ಯಾಕೆಂದರೆ ಅದರಲ್ಲಿ ಉಳುವವರನ್ನು ಹೊಲದೊಡೆಯರನ್ನಾಗಿಸುವ ಯಾವುದೇ ಅಂಶಗಳಿರಲಿಲ್ಲ. ಉಳುವವರನ್ನು ಹೊಲದೊಡೆಯವರನ್ನಾಗಿಸುವ ಬದಲು ಅವರುಗಳನ್ನು ವಕ್ಕಲೆಬ್ಬಿಸಲು ಬೇಕಾಗಿರುವ ಎಲ್ಲಾ ಅಸ್ತ್ರಗಳನ್ನು ಕಾಯಿದೆ ಮಾಲಿಕರಿಗೆ ನೀಡಿದೆ. ಆ ಕಾಯಿದೆಯನ್ನು ಗೇಣಿ ಸುಧಾರಣ ಕಾಯಿದೆ ಎನ್ನಬಹುದೇ? ಸಾಧ್ಯವಿಲ್ಲ. ಯಾಕೆಂದರೆ ಗೇಣಿ ಸುಧಾರಣೆಯಲ್ಲಿ ಕನಿಷ್ಠ ಮಟ್ಟದ ಗೇಣಿ ನಿರ್ಣಯವಾಗಬೇಕು, ಗೇನಿದಾರರನ್ನು ಸುಲಭದಲ್ಲಿ ಬಿಡಿಸುವಂತಿರಬಾರದು ಇತ್ಯಾದಿ ಕ್ರಮಗಳು ಸೇರಿವೆ. ಕನಿಷ್ಠ ಗುತ್ತಿಗೆ ನಿಗಧಿಗೊಳಿಸುವ ಬದಲು ಈ ಕಾಯಿದೆ ಕರ್ನಾಟಕದ ಕೆಲವು ಭಾಗದಲ್ಲಿ ಚಾಲ್ತಿಯಲ್ಲಿದ್ದ ಕನಿಷ್ಠ ಗುತ್ತಿಗೆಯನ್ನು ಅಲ್ಲಗೆಳೆದು ಅದಕ್ಕಿಂತ ಹೆಚ್ಚಿನ ಮೊತ್ತದ ಗುತ್ತಿಗೆ ನಿಗಧಿಗೊಳಿಸಿದೆ. ಸ್ವಂತ ಕೃಷಿಯ ಹೆಸರಲ್ಲಿ ಅಥವಾ ಇನ್ಯಾವುದೋ ನೆಪವೊಡ್ಡಿ ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಳಳಲು ಸಾಕಷ್ಟು ಅವಕಾಶವನ್ನು ಕಾನೂನು ಭೂಮಾಲಿಕರಿಗೆ ನೀಡಿದೆ. ಭೂಮಾಲಿಕರು ಹೊಂದಬಹುದಾದ ಗರಿಷ್ಠಮಿತಿಯನ್ನು ನೂರಾರು ಎಕರೆಗಳಿಗೆ ಏರಿಸಿದೆ. ಇದರಿಂದ ಹೆಚ್ಚುವರಿ ಭೂಮಿಯನ್ನು ವಶಪಡಿಸಿಕೊಂಡು ಭೂರಹಿತರಿಗೆ ಹಂಚುವ ಸರಕಾರದ ಇರಾದೆ ಹಾಸ್ಯಾಸ್ಪದ ಎನ್ನುವಂತಾಯಿತು. ಏಕೀಕೃತ ಕರ್ನಾಟಕಕ್ಕೆ ಏಕ ಭೂಮಸೂದೆ ಜಾರಿಗೆ ತಂದ ಕೀರ್ತಿ ಮಾತ್ರ ಈ ಮಸೂದೆಗೆ ಸಲ್ಲಬಹುದು.

ಇದು ಕೇವಲ ಕರ್ನಾಟಕದ ಕತೆಯಲ್ಲ. ಇದೇ ಸಂದರ್ಭದಲ್ಲಿ ಭೂಸುಧಾರಣೆ ಜಾರಿಗೆ ತಂದ ಬಹುತೇಕ ರಾಜ್ಯಗಳ ಕತೆ (ಪಶ್ಚಿಮ ಬಂಗಾಳ ಮತ್ತು ಕೇರಳಗಳನ್ನು ಹೊರತುಪಡಿಸಿ) ಕೂಡ ಇದುವೇ ಆಗಿತ್ತು. ಭೂಸುಧಾರಣೆಯ ಈ ದುರಾವಶ್ಥೆ ಸೋಶಿಯಲಿಸ್ಟ್ ಸಮಾಜ ಕಟ್ಟಲು ಹೊರಟಿರಿವ (ಕಾಂಗ್ರೆಸ್ ಪಕ್ಷದ) ಕೇಂದ್ರ ಸರಕಾರಕ್ಕೆ ನುಂಗಲಾರದ ತುತ್ತಾಯಿತು. ಯಾಕೆಂದರೆ ಇಂತಹ ನಾಮಕಾವಸ್ಥೆ ಭೂಸುಧಾರಣೆ ಕಾನೂನುಗಳನ್ನು ಜಾರಿಗೆ ತಂದ ಬಹುತೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಆಳ್ವಿಕೆ ನಡೆಸುತ್ತಿತ್ತು. ಕರ್ನಾಟಕದಲ್ಲೂ ಕಾಂಗ್ರೆಸ್ ಪಕ್ಷವೇ ೧೯೬೧ರ ಭೂಸುಧಾರಣ ಮಸೂದೆಯನ್ನು ಜಾರಿಗೆ ತಂದಿದೆ. ವಸಾಹತು ಸರಕಾರದ ವಿರುದ್ದ ಹೋರಾಟ ನಡೆಸುವ ಸಂದರ್ಭದಿಂದಲೇ ಕಾಂಗ್ರೆಸ್ ಪಕ್ಷ ಭೂಸುಧಾರಣೆ ಮೇಲೆ ಹಲವು ಠರಾವುಗಳು ಪಾಸಾಗಿವೆ. ಇಷ್ಟೆಲ್ಲ ಆದ ಮೇಲೆ ಅದೇ ಪಕ್ಷ ಅಧಿಕಾರಕ್ಕೆ ಬಂದಾಗ ಇಂತಹ ಕೆಟ್ಟ ರೀತಿಯಲ್ಲಿ ಭೂಸುಧಾರಣೆ ನಡೆಯುವುದು ಆ ಪಕ್ಷದೊಳಗಿನ ಪ್ರಗತಿಪರರಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದುದರಿಂದ ೧೯೭೨ರಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಈಗಾಗಲೇ ನಡೆದ ಭೂಸುಧಾರಣೆಗಳ ವಿಮರ್ಶೆಗೆ ಒಂದು ಉನ್ನತ ಮಟ್ಟದ ಸಮಿತಿಯನ್ನು ನೇಮಕ ಮಾಡಿತು. ಉನ್ನತ ಮಟ್ಟದ ಸಮಿತಿಯ ವರದಿಯನ್ನು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಚರ್ಚಿಸಿ ಭೂಸುಧಾರಣಾ ಮಸೂದೆಯಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ತೀರ್ಮಾನಿಸಲಾಯಿತು.[12] ಈ ಸಭೆಯ ತೀರ್ಮಾನಗಳು ರಾಜ್ಯ ಸರಕಾರಗಳು ತಮ್ಮ ಭೂಮಸೂದೆಗಳನ್ನು ತಿದ್ದುಪಡಿ ಮಾಡಿಕೊಳ್ಳೂವಾಗ ಗಮನಿಸಬೇಕಾದ ಮಾರ್ಗಸೂಚಿಯಾಯಿತು.

ಈ ಮಾರ್ಗಸೂಚಿಯಂತೆ ಕರ್ನಾಟಕದ ೧೯೬೧ರ ಭೂಸುಧಾರಣ ಮಸೂದೆಯನ್ನು ಪುನರ್ ವಿಮರ್ಶೆಗೆ ಎತ್ತಿಕೊಳ್ಳಲಾಯಿತು. ಭೂಮಾಲಿಕರು ಹೊಂದಬಹುದಾದ ಭೂಮಿಯ ಗರಿಷ್ಠಮಿತಿಯನ್ನು ನಿಯಂತ್ರಿಸಲು ಕೇಂದ್ರದ ಮಾರ್ಗಸೂಚಿ ಹೆಚ್ಚು ಒತ್ತು ನೀಡಿದೆ. ಆದರೆ ಕರ್ನಾಟಕ ೧೯೬೧ರ ಕಾಯಿದೆಯನ್ನು ತಿದ್ದುಪಡಿ ಮಾಡುವಾಗ ಕೇವಲ ಸೀಲಿಂಗ್ ಮಿತಿಯನ್ನು ಮಾತ್ರ ಬದಲಾಯಿಸಲಿಲ್ಲ; ಇದರ ಜತೆಗೆ ಗೇಣಿ ಪದ್ದತಿಯನ್ನು ಅಮೂಲಾಗ್ರವಾಗಿ ಬದಲಾಯಿಸಲು ಕ್ರಮವಹಿಸಿತು. ಸಮಗ್ರವಾಗಿ ತಿದ್ದುಪಡಿಗೊಂಡ ಮಸೂದೆ ಶಾಸನ ಸಭೆಯಲ್ಲಿ ಪಾಸಾದ ಒಂದು ವರ್ಷದ ನಂತರ (೧೯೭೪ರಲ್ಲಿ) ರಾಷ್ಟ್ರಪತಿಗಳ ಅಂಕಿತ ಪಡೆದು ಶಾಸನವಾಯಿತು. ವಾಸ್ತವದಲ್ಲಿ ಇದು ೧೯೬೧ರ ತಿದ್ದುಪಡಿ ಮಸೂದೆಯಾದರೂ ಈ ಮಸೂದೆ ಒಳಗೊಂಡಿರುವ ದೂರಗಾಮಿ ಪ್ರಭಾವ ಬೀರುವ ಹಲವಾರುಹಲವಾರು ಕ್ರಮಗಳಿಂದ ಇದು ಹೊಸ ಶಾಸನದ ಸ್ಥಾನ ಪಡೆಯಿತು. ೧೯೭೪ರ ಕಾಯಿದೆ ಒಳಗೊಂಡಿರುವ ಪ್ರಮುಖ ಅಂಶಗಳು ಇಂತಿವೆ.[13]

೧. ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸುವುದು – ೧೯೬೧ರ ಕಾಯಿದೆಯಲ್ಲಿ ಹಲವಾರು ವ್ಯಕ್ತಿಗಳಿಗೆ ಭೂಮಿಯನ್ನು ಗುತ್ತಿಗೆ ನೀಡಲು ಅವಕಾಶ ನಿಡಲಾಗಿತ್ತು. ಹೊಸ ಮಸೂದೆಯಲ್ಲಿ ಸೈನಿಕರು ಮತ್ತು ಸಿಮೆನ್‌ಗಳನ್ನು ಹೊರತುಪಡಿಸಿ ಇನ್ಯಾರೂ ಗುತ್ತಿಗೆ ನೀಡುವಂತಿಲ್ಲ. ಸ್ವಂತ ಬೇಸಾಯ ಮಾಡುವವರು ಅಥವಾ ತಮ್ಮ ಕುಟುಂಬದ ಸದಸ್ಯರ ಸಹಾಯದಿಂದ ಬೇಸಾಯ ಮಾಡುವವರು ಅಥವಾ ಕೂಲಿ ಕೊಟ್ಟು ಆಳುಗಳ ಮೂಲಕ ಬೇಸಾಯ ಮಾಡುವವರು ಮಾತ್ರ ಕೃಷಿ ಭೂಮಿ ಹೊಂದಬಹುದು.

೨. ಕಾನೂನಿಗೆ ವಿರುದ್ದವಾಗಿ ಒಂದು ವೇಳೆ ಭೂಮಾಲಿಕರು ಗುತ್ತಿಗೆ ನೀಡಿದರೆ ಅಂತವರ ಭೂಮಿಯನ್ನು ಸರಕಾರ ಹೆಚ್ಚುವರಿ (ಸರ್‌ಪ್ಲಸ್) ಭೂಮಿಯೆಂಧು ಪರಿಗಣಿಸಿ ಮುಟ್ಟುಗೋಲು ಹಾಕಿಕೊಂಡು ಭೂರಹಿತರಿಗೆ ಹಂಚುತ್ತದೆ.

೩. ಗುತ್ತಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನಪಡಿಸಿಕೊಳ್ಳುವುದನ್ನು ಸಂಪೂರ್ಣ (ಸೈನಿಕರು / ಸಿಮೆನ್‌ಗಳನ್ನು ಹೊರತು ಪಡಿಸಿ) ನಿಷೇಧಿಸಲಾಯಿತು.

೪. ಗುತ್ತಿಗೆ ನೀಡಿರುವ ಎಲ್ಲಾ ಭೂಮಿ ಕಾಯಿದೆ ಜಾರಿಯಾದ ದಿನದಿಂದ (ಮಾರ್ಚ್‌೧೯೭೪ರಿಂದ) ಸರಕಾರದ ಸ್ವಾಧೀನವಾಗುತ್ತದೆ. ಗೇಣಿದಾರರು ಡಿಕ್ಲರೇಶನ್ ಫಾರ್ಮ್ ತುಂಬಿ ಸರಕಾರದಿಂದ ಭೂಮಿಯನ್ನು ಪಡೆಯಬೇಕು.

೫. ಡಿಕ್ಲರೇಶನ್ ಮೂಲಕ ಗೇಣಿದಾರರಿಗೆ ಭೂಮಿ ಹಕ್ಕನ್ನು ನೀಡುವ ಪ್ರಕ್ರಿಯೆಯ ಉಸ್ತುವರಿಗೆ ಪ್ರತಿ ತಾಲ್ಲೂಕಿನಲ್ಲಿ ಒಂದೊಂದು ಭೂನ್ಯಾಯ ಮಂಡಲಿಯನ್ನು (ಲ್ಯಾಂಡ್ ಟ್ರಿಬ್ಯೂನಲ್) ಸ್ಥಾಪಿಸಲಾಗುವುದು. ಈ ನ್ಯಾಯ ಮಂಡಳಿಯನ್ನು (ಲ್ಯಾಂಡ್ ಟ್ರಿಬ್ಯೂನಲ್) ಸ್ಥಾಪಿಸಲಾಗುವುದು. ಈ ನ್ಯಾಯ ಮಂಡಳಿಯಲ್ಲಿ ಒಟ್ಟು ಆರು ಸದಸ್ಯರಿದ್ದು ಆಸಿಸ್ಟೆಂಟ್ ಕಮಿಶನರ್ ಈ ಮಂಡಲಿಯ ಅಧ್ಯಕ್ಷರಾಗಿರುತ್ತಾರೆ ಮತ್ತು ತಹಸಿಲ್ದಾರರು ಕಾರ್ಯದರ್ಶಿಗಳು. ಸ್ಥಳೀಯ ಶಾಸಕರು ಹಾಗೂ ದಲಿತ / ಬುಡಕಟ್ಟು ಸಮುದಾಯದಿಂದ ಒಬ್ಬರು ಮತ್ತು ಇಬ್ಬರು ಇತರ ಸದಸ್ಯರಿರುತ್ತಾರೆ. ವಕೀಲರುಗಳು ಇಲ್ಲಿ ಪಾಲುಗೊಳ್ಳುವಂತಿಲ್ಲ. ಮಂಡಲಿಯ ತೀರ್ಮಾನ ಅಂತಿಮ. ಹೈಕೋರ್ಟ್‌ನಿಂದ ಕೆಳಗಿನ ಕೋರ್ಟ್‌ಗಳಲ್ಲಿ ಭೂನ್ಯಾಯ ಮಂಡಲಿಯ ತೀರ್ಪನ್ನು ಪ್ರಶ್ನಿಸುವಂತಿಲ್ಲ.

೬. ಭೂನ್ಯಾಯ ಮಂಡಲಿಯ ತೀರ್ಮಾನ ಕಾನೂನು ಬಾಹಿರ ಅಥವಾ ಕಾಯಿದೆಯ ಮೂಲ ಉದ್ದೇಶಕ್ಕೆ ಪೂರಕವಾಗಿಲ್ಲದ ಸಂದರ್ಭದಲ್ಲಿ ಸರಕಾರ ಹೈಕೋರ್ಟ್‌ಲ್ಲಿ ಅಂತಹ ತೀರ್ಮಾನಗಳನ್ನು ಪ್ರಶ್ನಿಸಿ ರದ್ದುಗೊಳಿಸಬಹುದು.

೭. ಹಿಡುವಳಿಯ ಗರಿಷ್ಠಮಿತಿ – ಐದು ಜನರಿರುವ ಒಂದು ಕುಟುಂಬವೊಂದು ೧೦ ಎಕರೆ ಭೂಮಿಯನ್ನು ಹೊಂದಬಹುದು. ಕುಟುಂಬದ ಸದಸ್ಯರ ಸಂಖ್ಯೆ ಐದು ಜನರಿಗಿಂತ ಹೆಚ್ಚಿದ್ದರೆ ಪ್ರತಿ ಹೆಚ್ಚುವರಿ ಸದಸ್ಯರಿಗೆ ೨ ಎಕರೆಯಂತೆ ಗರಿಷ್ಠ ೨೦ ಎಕರೆ ಭೂಮಿಯನ್ನು ಹೊಂದಬಹುದು. ಇಲ್ಲಿನ ಕುಟುಂಬದ ವ್ಯಾಖ್ಯಾನದಲ್ಲಿ ಗಂಡ, ಹೆಂಡತಿ, ಅಪ್ರಾಪ್ತ ವಯಸ್ಸಿನ ಮಕ್ಕಳು ಮಾತ್ರ ಸೇರುತ್ತಾರೆ. ಒಂದು ವೇಳೆ ವಯಸ್ಕ (ಮೆಜಾರಿಟಿಗೆ ಬಂದ) ಗಂಡು ಅಥವಾ ಹೆಣ್ಣು ಮಕ್ಕಳಿದ್ದಾರೆ ಅವರನ್ನು ಪ್ರತ್ಯೇಕ ಕುಟುಂಬವೆಂದು ಪರಿಗಣಿಸಲಾಗುವುದು. ಒಂದು ವೇಳೆ ವಿಧವೆ ತಾಯಿ ಇದ್ದರೆ ಅವಳು ಮತ್ತೊಂದು ಕುಟುಂಬ.

೮. ಭೂಮಿಯ ಗರಿಷ್ಠಮಿತಿಯನ್ನು ನಿರ್ಧರಿಸುವಾಗ ಮೂರು ವಿಧದ ಭೂಮಿಗಳನ್ನು (ಸರಕಾರಿ ನೀರಾವರಿಯಿಂದ ಕೃಷಿ ಮಾಡುವ ಭೂಮಿ. ಮಳೆ ನೀರಿನಿಂದ ಕೃಷಿ ಮಾಡುವ ಭೂಮಿ ಮತ್ತು ಒಣ ಭೂಮಿ) ಪರಿಗಣಿಸಲಾಗಿದೆ. ೧೦ ಎಕರೆಗಿಂತ ಹೆಚ್ಚು ಸರಕಾರಿ ನೀರಾವರಿ ವ್ಯವಸ್ಥೆಯುಳ್ಳ ಭೂಮಾಲಿಕರು, ೨೦ ಎಕರೆಗಿಂತ ಹೆಚ್ಚು ಮಳೆ ನೀರಿನಿಂದ ಕೃಷಿ ಮಾಡುವ ಮಾಲಿಕರು ಮತ್ತು ೪೦ ಎಕರೆಗಿಂತ ಹೆಚ್ಚು ಒಣ ಭೂಮಿಯುಳ್ಳ ಮಾಲಿಕರು ಕಡ್ಡಾಯವಾಗಿ ಗರಿಷ್ಠಮಿತಿಯ ಡಿಕ್ಲರೇಶನ್ ಸಲ್ಲಿಸಬೇಕು.

೯. ಒಂದು ವೇಳೆ ಗರಿಷ್ಠಮಿತಿಗಿಂತ ಹೆಚ್ಚು ಭೂಮಿ ಇದ್ದ ಮಾಲಿಕರು ನಿಗಧಿತ ದಿನಾಂಕದೊಳಗೆ ಡಿಕ್ಲರೇಶನ್ ಸಲ್ಲಿಸಲು ವಿಫಲರಾದರೆ ಅವರ ಹೆಚ್ಚವರಿ ಭೂಮಿಯನ್ನು ಏಕಪಕ್ಷೀಯವಾಗಿ ತೀರ್ಮಾನಿಸಿ ಸರಕಾರ ಮುಟ್ಟುಗೋಲು ಹಾಕುವುದು. ಈ ಬಗೆಯಲ್ಲಿ ಮುಟ್ಟುಗೊಲು ಹಾಕಿದ ಹೆಚ್ಚುವರಿ ಭೂಮಿ ಮೇಲೆ ಮಾಲಿಕರಿಗೆ ಯಾವುದೇ ಪರಿಹಾರಧನವನ್ನು ನೀಡಲಾಗುವುದಿಲ್ಲ. ಬದಲಿಗೆ ಭೂಮಾಲಿಕರ ಮೇಲೆ ಐನೂರು ರೂಗಳ ಜುಲ್ಮಾನೆ ಮತ್ತು ಜೈಲು ಶಿಕ್ಷೆ ವಿಧಿಸಲಾಗುವುದು.

೧೦. ಸರಕಾರ ಸ್ವಾಧೀನಪಡಿಸಿಕೊಂಡ ಹೆಚ್ಚುವರಿ (ಗರಿಷ್ಠಮಿತಿಗಿಂತ ಹೆಚ್ಚಿರುವ) ಭೂಮಿಯನ್ನು ಈ ಕೆಳಗಿನವರಿಗೆ ಈ ಕೆಳಗಿನಂತೆ ಹಂಚಲಾಗುವುದು. ಹಂಚಲು ಮೀಸಲಾಗಿಟ್ಟ ಭೂಮಿಯ ಶೇ. ೫೦ನ್ನು ದಲಿತರು ಮತ್ತು ಬುಡಕಟ್ಟು ಜನರಿಗೆ ಹಂಚಲಾಗುವುದು. ಉಳಿದ ಭೂಮಿಯನ್ನು ಇತರ ಸಮುದಾಯಗಳ ಭೂರಹಿತರಿಗೆ ಕಾಯಿದೆ ನಿಗಧಿಗೊಳಿಸಿದ ಪ್ರಮಾಣದಲ್ಲಿ ಹಂಚಬೇಕು.

೧೧. ಶೈಕ್ಷಣಿಕ, ಧಾರ್ಮಿಕ ಹಾಗೂ ಚಾರಿಟೆಬಲ್ ಸಂಸ್ಥೆಗಳು ಗರಿಷ್ಠ ೨೦ ಎಕರೆ ಭೂಮಿಯನ್ನು ಹೊಂದಬಹುದು. ಸಕ್ಕರೆ ಕಾರ್ಖಾನೆ ಸಂಶೋಧನ ಬಳಕೆಗಾಗಿ ೫೦ ಎಕರೆಗಳಷ್ಟು ಭೂಮಿ ಹೊಂದಬಹುದು.

೧೨. ಈ ಕೆಳಗಿನವುಗಳಿಗೆ ಗರಿಷ್ಠಮಿತಿಯನ್ನು ಸಡಿಸಲಾಗಿದೆ – ಸರಕಾರದ ಭೂಮಿಗಳು, ಕಾಫಿ, ಟೀ, ರಬ್ಬರ್, ಕೋಕೋ, ಏಲಕ್ಕಿ ಇತ್ಯಾದಿ ಪ್ಲಾಂಟೇಶನ್ ಬೆಳೆಗಳ ಭೂಮಿ.

೧೩. ಕೃಷಿಯೇತರ ಮೂಲಗಳಿಂದ ಹನ್ನೆರಡು ಸಾವಿರಗಳಿಗಿಂತ ಹೆಚ್ಚು ವಾರ್ಷಿಕ ಆದಾಯವುಳ್ಳ ಯಾರು ಕೂಡ ಕೃಷಿಭೂಮಿಯನ್ನು ಖರೀದಿಸುವುದು ಅಥವಾ ಧಾನವಾಗಿ ಪಡೆಯುವುದನ್ನು ಕಾಯಿದೆ ನಿಷೇಧಿಸಿದೆ. ಕೃಷಿಕರಲ್ಲದ ಅಥವಾ ಕೃಷಿ ಕಾರ್ಮಿಕರಲ್ಲದ ಆದರೆ ಕೃಷಿಯೇತರ ಮೂಲದಿಂದ ಹನ್ನೆರಡು ಸಾವಿರಕ್ಕಿಂತ ಕಡಿಮೆ ಆದಾಯವುಳ್ಳವರು ಸ್ವಂತ ಕೃಷಿ ಮಾಡುವ ಉದ್ದೇಶದಿಂದ ಕೃಷಿ ಭೂಮಿ ಖರೀದಿಸುವುದಾದರೆ ಸಂಬಂಧಪಟ್ಟ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬೇಕು. ಆ ರೀತಿ ಖರೀದಿಸಿದ ಭೂಮಿಯಲ್ಲಿ ಖರೀದಿಸಿದ ಒಂದು ವರ್ಷದೊಳಗೆ ಸ್ವಂತ ಕೃಷಿ ಆರಂಭಿಸಬೇಕು ಮತ್ತು ಕನಿಷ್ಠ ಐದು ವರ್ಷಗಳ ತನಕ ಕೃಷಿ ಮುಂದುರಿಸಬೇಕು.

೧೪. ೧೯೭೪ರ ಕಾಯಿದೆಯನ್ವಯ ಕೃಷಿ ಭೂಮಿಯ ಮಾರಾಟ / ಖರೀದಿ ನಡೆಯದಿದ್ದರೆ ಅಂತಹ ವ್ಯವಹಾರಗಳನ್ನು ಕಾನೂನುಬಾಹಿರವೆಂದು ಪರಿಗಣಿಸುತ್ತದೆ. ಮಾತ್ರವಲ್ಲ ಅಂತಹ ವ್ಯವಹಾರದಲ್ಲಿ ಸೇರಿರುವ ಭೂಮಿಯನ್ನು ಸರಕಾರ ಮುಟ್ಟುಗೋಲು ಹಾಕುತ್ತದೆ. ಈ ರೀತಿಯಲ್ಲಿ ಮುಟ್ಟುಗೋಲು ಹಾಕಿಕೊಂಡ ಭೂಮಿಗೆ ಪರಿಹಾರ ನೀಡಲಾಗುವುದಿಲ್ಲ.

೧೫. ಡಿಕ್ಲರೇಶನ್ ಮೂಲಕ ಪಡೆದುಕೊಂಡ ಭೂಮಿಯನ್ನು ಗೇಣಿದಾರರು ಕನಿಷ್ಠ ೧೫ ವರ್ಷಗಳ ತನಕ ಮಾರಾಟ ಮಾಡಬಾರದು. ಒಂದು ವೇಳೆ ಮಾರಾಟ ಮಾಡಲೇಬೇಕಾದರೆ ಭೂಮಿಯನ್ನು ಸರಕಾರಕ್ಕೆ ಹಿಂತಿರುಗಿಸಿ ತಾವು ಪಾವತಿಸಿದ ಪ್ರಿಮೀಯಮ್ ಮೊತ್ತವನ್ನು ಹಿಂದಕ್ಕೆ ಪಡೆಯಬಹುದು.

೧೬. ಕೃಷಿ ಕಾರ್ಮಿಕರು ತಾವು ವಾಸಿಸುವ ಮನೆಗಳನ್ನು ತಮ್ಮ ವಾಸಕ್ಕೆ ಉಳಿಸಿಕೊಳ್ಳಲು ಕಾಯಿದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಹಿಂದಿನ ಕಾಯಿದೆಗಳಿಗೆ ಹೋಲಿಸಿದರೆ ೧೯೭೪ರ ಕಾಯಿದೆ ಕ್ರಾಂತಿಕಾರಕವಾಗಿತ್ತು ಗೇಣಿಪದ್ದತಿಯನ್ನು ರದ್ದುಗೊಳಿಸಿದ್ದು ಮತ್ತು ಗೇಣಿಗೆ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು ಉಳುವವನೇ ಹೊಲದೊಡೆಯ ಎನ್ನುವ ಘೋಷಣೆಯನ್ನು ಕಾರ್ಯರೂಪಕ್ಕೆ ತರುವ ದೃಷ್ಟಿಯಿಂದ ಅಗತ್ಯವಾಗಿತ್ತು. ಭೂಮಾಲಿಕರು ಹೊಂದಬಹುದಾದ ಭೂಮಿಯ ಗರಿಷ್ಠ ಮಿತಿಯನ್ನು ಕಡಿಮೆಗೊಳಿಸಿದ್ದು ಅರ್ಥ ವ್ಯವಸ್ಥೆ ಕೆಲವರ ಹಿಡಿತದಲ್ಲಿರುವುದನ್ನು ತಪ್ಪಿಸಲು ಅಗತ್ಯವಿತ್ತು ಭೂನ್ಯಾಯಮಂಡಲಿಯ ಮೂಲಕ ಭೂಸುಧಾರಣೆಯ ಎಲ್ಲಾ ಪ್ರಕ್ರಿಯೆಗಳನ್ನು ಕಾರ್ಯ ರೂಪಕ್ಕೆ ತರಲು ಬಯಸಿದ್ದು ಪ್ರಗತಿಪರ. ಬಡರೈತರಿಗೆ ತಮ್ಮ ಹಳ್ಳಿ ತಾಲ್ಲೂಕಿನಿಂದ ದೂರ ಸರಿದಂತೆ ಎಲ್ಲಾವೂ ಅಪರಿಚಿತವಾಗುತ್ತವೆ ಮತ್ತು ಅಮೂರ್ತವಾಗುತ್ತವೆ. ಭೂನ್ಯಾಯಮಂಡಲಿ ಮತ್ತು ಅದರಲ್ಲಿನ ಸ್ಥಳೀಯ ಸದಸ್ಯರು ಗೇಣಿದಾರರ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯ ಕೋರ್ಟ್ ಕಛೇರಿ ವಕೀಲರು ಮುಂತಾದವರ ಮಧ್ಯ ಪ್ರವೇಶವನ್ನು ನಿಷೇಧಿಸುವ ಮೂಲಕ ತ್ವರಿತ ನ್ಯಾಯ ತೀರ್ಮಾನ ಸಾಧ್ಯವಾಗುವಂತೆ ನೋಡಿಕೊಳ್ಳಲಾಗಿದೆ. ೧೯೭೪ರ ಕಾಯಿದೆಯಲ್ಲಿ ದೊಡ್ಡಮಟ್ಟಿನ ಇತಿಮಿತಿಗಳನ್ನು ಗುರುತಿಸುವುದು ಕಷ್ಟ. ಆದಾಗ್ಯೂ ಈ ಕೆಳಗಿನ ಕುಂದುಕೊರತೆಗಳನ್ನು ಪಟ್ಟಿ ಮಾಡಬಹುದು.

೧೯೭೪ರ ಕಾಯಿದೆ ಭೂಮಾಲಿಕರು ಹೊಂದಬಹುದಾದ ಗರಿಷ್ಠಮಿತಿಯನ್ನು ಕಡಿತಗೊಳಿಸಿದರೂ ಪ್ಲಾಂಟೇಶನ್‌ಗಳಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ, ಧಾರ್ಮಿಕ ಹಾಗೂ ದತ್ತಿ ಸಂಸ್ಥೆಗಳಿಗೆ ವಿನಾಯಿತಿ ನೀಡಿದೆ. ಆರ್ಥಿಕ ಕಾರಣಗಳಿಗಾಗಿ ಪ್ಲಾಂಟೇಶನ್‌ಗಳಿಗೆ ವಿನಾಯಿತಿ ನೀಡಿರಬಹುದು. ಆದರೆ ಬಹುತೇಕ ಪ್ಲಾಂಟೇಶನ್‌ಗಳು ಹೆಚ್ಚು ಮಳೆಬೀಳುವ ಪ್ರದೇಶಗಳಲ್ಲಿದ್ದು ಕೆಲವೇ ವ್ಯಕ್ತಿಗಳ ಕೆಳಗೆ ಕ್ರೋಢಿಕರಣಗೊಂಡಿವೆ. ಇದೊಂದು ಬಗೆಯಲ್ಲಿ ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪ್ಲಾಂಟೇಶನ್‌ಗಳಲ್ಲಿ ದುಡಿಯುವ ಜೀವಗಳ ಧ್ವನಿಯೇ ಕಿತ್ತುಕೊಂಡ ಹಾಗೆ. ಇತರ ಕೃಷಿಗಳಲ್ಲಿ ಭೂಮಾಲಿಕತ್ವ ಹೇಗೆ ಗೇಣಿದಾರರನ್ನು ಕೂಲಿಕಾರ್ಮಿಕರನ್ನು ಶೋಷಣೆ ಮಾಡುತ್ತದೋ ಅದೇ ಪ್ರಮಾಣದಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಕೂಲಿಕಾರ್ಮಿಕರನ್ನು – ಪ್ಲಾಂಟೇಶನ್ ಮಾಲಿಕರು ಶೋಷಣೆ ಮಾಡುತ್ತಾರೆ. ವಿದೇಶ ವಿನಿಮಯ ಗಳಿಕೆ, ಗಾತ್ರದ ಅನಿವಾರ್ಯತೆ ಇತ್ಯಾದಿ ಕಾರಣಗಳನ್ನು ಮುಂದಿಟ್ಟು ಪ್ಲಾಂಟೇಶನ್‌ಗಳಿಗೆ ವಿನಾಯಿತಿ ನೀಡುವ ಮೂಲಕ ಇವುಗಳಲ್ಲಿ ದುಡಿಯುವವರ ಬದುಕು ಸತತ ಜೀತದ ರೂಪದಲ್ಲಿರುವಂತೆ ನೋಡಿಕೊಳ್ಳಲಾಗಿದೆ. ಇದೇ ರೀತಿಯಲ್ಲಿ ಶೆಕ್ಷಣಿಕ, ಧಾರ್ಮಿಕ ಸಂಸ್ಥೆಗಳು ಕೂಡ ಕರ್ನಾಟಕದ ಕೆಲವೊಂದು ಸಮುದಾಯಗಳ ಬಲಾಢ್ಯರ ಹಿಡಿತದಲ್ಲಿವೆ. ಇವುಗಳು ಹೊಂದಬಹುದಾದ ಗರಿಷ್ಠ ಮಿತಿಯನ್ನು ೧೯೭೪ರ ಕಾಯಿದೆ ಹತೋಟಿಗೆ ತಂದಿದೆಯಾದರೂ ಕಾನೂನು ಇನ್ನೂ ಹೆಚ್ಚು ಕಠಿಣವಾಗಬಹುದಿತ್ತು. ಗೇಣಿದಾರರಿಗೆ ಅನುಕೂಲವನ್ನು ಮಾಡುವ ಉದ್ದೇಶದಿಂದ ಭೂನ್ಯಾಯ ಮಂಡಲಿಗಳಿಗೆ ಅತೀ ಹೆಚ್ಚಿನ ಸ್ವಾಯತ್ತತೆ ನಿಡಲಾಗಿದೆ. ಆದರೆ ಈ ಸ್ವಾಯತ್ತತೆ ಎಲ್ಲಾ ಸಂದರ್ಭಗಳಲ್ಲೂ ಗೇಣಿದಾರರ ಪರ ಕೆಲಸ ಮಾಡತ್ತದೆಯೆಂದು ನಂಬುವುದು ಹೇಗೆ? ಭೂಮಾಲಿಕರ ಪರನೂ ಇದೇ ಸ್ವಾಯತ್ತತೆ ಬಳಕೆಗೆ ಬರಬಹುದು. ಮೊದಲಿಗೆ ಭೂನ್ಯಾಯ ಮಂಡಲಿಯ ಸದಸ್ಯತ್ವವನ್ನು ನೋಡೋಣ. ಅಧಿಕಾರಿಗಳನ್ನು ಹೊರತುಪಡಿಸಿ ಸ್ಥಳೀಯ ಶಾಸಕರು ಮತ್ತು ಮೂವರು ಸ್ಥಳೀಯರು ನ್ಯಾಯಮಂಡಲಿಯ ಸದಸ್ಯರು. ಬಹುತೇಕ ಸಂದರ್ಭಗಳಲ್ಲಿ ಭೂಮಾಲಿಕರೇ ಶಾಸಕರಾಗಿರುತ್ತಾರೆ. ಇವರು ತಮ್ಮದೇ ವರ್ಗದ ಜನರ ಆಸಕ್ತಿಗೆ ವಿರುದ್ದ ಮತ್ತು ಗೇಣಿದಾರರ ಪರವಹಿಸಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದು ಹೇಗೆ?[14] ಶಾಸಕರನ್ನು ಹೊರತುಪಡಿಸಿದ ಸದಸ್ಯರಲ್ಲಿ ಒಬ್ಬರು ದಲಿತ / ಬುಡಕಟ್ಟು ಸಮುದಾಯದವರು ಉಳಿದ ಇಬ್ಬರು ಇತರ ಹಿನ್ನೆಲೆಯಿಂದ ಬಂದವರು. ಇವರುಗಳು ಗೇಣಿದಾರರ ಪರ ನಿಲ್ಲದಿದ್ದರೆ ನ್ಯಾಯ ಮಂಡಲಿಯ ತೀರ್ಮಾನಗಳು ಸಮಾಜದ ತಳಸ್ತರದವರಿಗೆ ನ್ಯಾಯ ಒದಗಿಸುವುದು ಕಷ್ಟ. ನ್ಯಾಯ ಮಂಡಲಿಯನ್ನು ಹೈಕೋರ್ಟ್‌ನಲ್ಲಿ ಮಾತ್ರ ಪ್ರಶ್ನಿಸಬಹುದು. ಒಂದು ವೇಳೆ ನ್ಯಾಯ ಮಂಡಲಿಯ ತೀರ್ಮಾನ ಭೂಸುಧಾರಣೆ ಕಾಯಿದೆಯ ಮೂಲ ಉದ್ದೇಶಕ್ಕನುಗುಣವಾಗಿ ಇರದಿದ್ದರೆ ಎಷ್ಟು ಮಂದಿ ಗೇಣೀದಾರರು ಅಂತಹ ತೀರ್ಮಾನಗಳನ್ನು ಹೈಕೋರ್ಟಿನಲ್ಲಿ ಪ್ರಶ್ನಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ?

ಹೆಚ್ಚುವರಿ ಭೂಮಿ ವಶಪಡಿಸಿಕೊಳ್ಳಲು ಸರಕಾರ ಹಿಂದಿನ ಕಾಯಿದೆಗಳಿಗೆ ಹೋಲಿಸಿದರೆ ಈ ಕಾಯಿದೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದೆ. ಹೆಚ್ಚುವರಿ ಭೂಮಿ ಇದ್ದವರು ಘೋಷಿಸುವುದನ್ನು ಕಡ್ಡಾಯ ಮಾಡಿದೆ. ಘೋಷಿಸದೆ ಇದ್ದು ಒಂದು ವೇಳೆ ನಂತರ ಹೆಚ್ಚುವರಿ ಭೂಮಿ ಇರುವುದು ಸರಕಾರದ ಗಮನಕ್ಕೆ ಬಂದರೆ ಅಂತಹ ಭೂಮಿಯನ್ನು ಸರಕಾರ ಮುಟ್ಟುಗೋಲು ಹಾಕುವುದು ಮಾತ್ರವಲ್ಲ ಜಮೀನುದಾರರು ಶಿಕ್ಷೆಗೆ ಗುರಿಯಾಗುತ್ತಾರೆ. ಇವೆಲ್ಲ ಕಾನೂನು ರೂಪದಲ್ಲಿ ಇರುವುದು ಬೇರೆ ಅದೇ ರೂಪದಲ್ಲಿ ಅನುಷ್ಠಾನಕ್ಕೆ ಬರುವುದು ಬೇರೆ. ಕಾರ್ಯರೂಪಕ್ಕೆ ಬರುವಾಗ ಇಂತಹ ಬಿಗಿ ನೀತಿಗಳಲ್ಲೂ ಕೆಲವು ನ್ಯೂನತೆಗಳನ್ನು ಹುಡುಕುವುದು ಕಷ್ಟವಲ್ಲ ಹೆಚ್ಚುವರಿ ಭೂಮಿಯ ಗುಣಮಟ್ಟವೇನು? ಭೂಮಾಲಿಕರಲ್ಲಿ ಹಲವು ವಿಧದ ಭೂಮಿಗಳಿರಬಹುದು. ಕೆಲವು ಭೂಮಿ ಏನೇನೂ ಉಪಯೋಗವಿಲ್ಲದಿರಬಹುದು. ನೀರಾವರಿ ಇಲ್ಲದ, ಜೌಗು ಪ್ರದೇಶ, ಮರುಳುಗಾಡು ಇತ್ಯಾದಿಗಳು ಹೆಚ್ಚುವರಿ ಭೂಮಿಯಾಗಿ ಸರಕಾರದ ವಶ ಬಂದು ಭೂರಹಿತರಿಗೆ ಹೋದರೂ ಏನು ಪ್ರಯೊಜನ? ಹೆಚ್ಚುವರಿ ಉತ್ತಮ ಭೂಮಿಯನ್ನು ತಮ್ಮಲ್ಲೇ ಉಳಿಸಿಕೊಳ್ಳವಷ್ಟು ಅವಕಾಶವನ್ನು ೧೯೭೪ರ ಕಾಯಿದೆಯೂ ನೀಡಿದೆ. ಇದಕ್ಕೆ ದಾರಿ ಮಾಡಿಕೊಡುವ ದೊಡ್ಡ ಅಂಶವೆಂದರೆ ಕುಟುಂಬದ ವ್ಯಾಖ್ಯಾನ. ಗಂಡ ಹೆಂಡತಿ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳು ಮಾತ್ರ ಕುಟುಂಬದ ವ್ಯಾಖ್ಯಾನದೊಳಗೆ ಬರುತ್ತಾರೆ. ಮೆಜಾರಿಟಿಗೆ ಬಂದ ಗಂಡು ಅಥವಾ ಹೆಣ್ಣುಮಕ್ಕಳು ಅಥವಾ ವಿಧವೆ ಇವರೆಲ್ಲ ಪ್ರತ್ಯೇಕ ಕುಟುಂಬಗಳಾಗುತ್ತಾರೆ. ಇವರ ಹೆಸರಲ್ಲಿ ಹೆಚ್ಚುವರಿ ಭೂಮಿಯನ್ನು ನೋಂದಾಯಿಸಿದರೆ ಭೂಮಾಲಿಕರ ಸಮಸ್ಯೆ ಪರಿಹಾರವಾಗುತ್ತದೆ.[15] ಭೂರಹಿತರು ಮತ್ತು ಕೃಷಿ ಕಾರ್ಮಿಕರು ಆಸಕ್ತಿಗಳನ್ನು ರಕ್ಷಸಲು ಕಾಯಿದೆ ಮುತುವರ್ಜಿ ವಹಿಸಿದೆ. ಆದರೆ ಈ ಎಲ್ಲವು ಕಾಯಿದೆಯಲ್ಲಿ ಸೇರಿದ ಕೂಡಲೇ ಭೂರಹಿತರು ಅಥವಾ ಕೃಷಿ ಕಾರ್ಮಿಕರು ಭೂಮಿ ಪಡೆಯುತ್ತಾರೆ ಎನ್ನುವ ಗ್ಯಾರಂಟಿ ಏನು? ಈ ಹಿಂದೆ ಕೂಡ ಮಸೂದೆಗಳು ತಾಂತ್ರಿಕವಾಗಿ ಬಲಯುವಾಗಿದ್ದವು. ಆದರೆ ಅವುಗಳು ಕಾರ್ಯರೂಪಕ್ಕೆ ಬಂದಾಗ ಅವುಗಳ ಮೂಲ ಉದ್ದೇಶಕ್ಕನುಗುಣವಾಗಿ ಜಾರಿಗೆ ಬರಲೇ ಇಲ್ಲ. ೧೯೭೪ರ ಕಾಯಿದೆ ೧೯೬೧ರ ಕಾಯಿದೆ ಹೋಲಿಸಿದರೆ ಎಲ್ಲಾ ರೀತಿಯಿಂದಲೂ ಉತ್ತಮ ಕಾಯಿದೆ. ಕಟ್ಟುನಿಟ್ಟಾಗಿ ಕಾಯಿದೆ ಅನುಷ್ಠಾನಗೊಂಡರೆ ಹಿಂದಿನ ಕಾಯಿದೆಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಿದೆ ಗೇಣಿದಾರರಿಗೆ, ಭೂರಹಿತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ನ್ಯಾಯ ಒದಗಿಸಬಹದುಉ. ಮುಂದಿನ ಅಧ್ಯಾಯದಲ್ಲಿ ಕಾಯಿದೆಗಳ ಅನುಷ್ಠಾನವನ್ನು ವಿಶ್ಲೇಷಿಸುವ ಮೂಲಕ ಮೇಲೆ ಚರ್ಚಿಸಿದ ಆದರ್ಶಗಳು ಎಷ್ಟರ ಮಟ್ಟಿಗೆ ಸಾಧನೆ ಯಾಗಿವೆ ಎನ್ನುವುದನ್ನು  ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಾಗಿದೆ.

[1] ಜಿ.ವಿ.ಜೋಷಿ, “ಇಂಪ್ಲಿಮೆಂಟೇಶನ್ ಆಫ್ ಟೆನೆನ್ಸಿ ರಿಫೋರ್ಮ್ಸ್ – ದಿ ಕೇಸ್ ಆಫ್ ಉತ್ತರ ಕನ್ನಡ ಡಿಸ್ಟ್ರಿಸ್ಟ್, ಆಬ್ದುಲ್ ಮತ್ತು ಸುಧೀರ್ ಕೃಷ್ಣ (ಸಂ), ಲೇಂಡ್ ರಿಫೋರ್ಮ್ಸ್ ಇನ್ ಇಂಡಿಯಾವಾಲ್ಯೂಮ್ಕರ್ನಾಟಕಪ್ರೊಮಿಸಸ್ ಕೆಪ್ಟ್ ಆಂಡ್ ಮಿಸ್ಡ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೯೪, ಪು. ೧೩೫ – ೬೦

[2] ಹೆಚ್. ಗಣಪತಿಯಪ್ಪ, “ಕಾಗೋಡು ಸತ್ಯಾಗ್ರಹದ ಹುಟ್ಟು ಮತ್ತು ಬೆಳವಣಿಗೆ,’ ಹಿ.ಚಿ.ಬೋರಲಿಂಯ್ಯ ಮತ್ತು ಹುಚ್ಚಪ್ಪ ಮಾಸ್ತರ (ಸಂ), ಕಾಗೋಡು ಚಳವಳಿಸುವರ್ಣ ಸಂಪುಟ, ಸಾಗರ: ಮಲೆನಾಡು ಜಾನಪದ ಲೋಕ, ೨೦೦೨, ಪು. ೨೩ – ೨೯

[3] ಭಾರತ ಸರಕಾರ, ಮೊದಲನೆ ಪಂಚವಾರ್ಷಿಕ ಯೋಜನೆ – ೧೯೪೭ – ೫೨, ನ್ಯೂಡೆಲ್ಲಿ: ಯೋಜನ ಇಲಾಖೆ, ೧೯೫೦

[4] ಭಾರತಸಂವಿಧಾನದ ೧೯೭೭ರ ತಿದ್ದುಪಡಿಯಲ್ಲಿ ಭಾರತವನ್ನು ಸೋಶಿಯಲಿಸ್ಟ್ ಡೆಮಾಕ್ರಸಿಯೆಂದು ಘೋಷಿಸಲಾಯಿತು. ಸಂವಿಧಾನದ ಭಾಗ ನಾಲ್ಕರಲ್ಲಿನ ಹಲಾವಾರು ಸೆಕ್ಷನ್ ಹಾಗೂ ಕ್ಲಾಸ್, ಸಬ್ ಕ್ಲಾಸ್‌ಗಳು ಅರ್ಥ ವ್ಯವಸ್ಥೆಯನ್ನು ಸಮಾನತೆಯ ದೃಷ್ಟಿಯಿಂದ ಸಂಘಟಿಸುವುದರ ಕುರಿತು ಇದೆ. ಈ ಮಾಹಿತಿಯನ್ನು ಸುಧೀರ್ ಕೃಷ್ಣ. “ಲೇಂಡ್ ರಿಫೋರ್ಮ್ಸ್ ಡಿಬೇಟ್ – ಎನ್ ಒವರ್‌ವೀವ್,’ ಆಬ್ದುಲ್ ಆಜೀಜ್ ಮತ್ತು ಸುಧಿರ್ ಕೃಷ್ಣ (ಸಂ), ಲೇಂಡ್ ರಿಪೋರ್ಮ್ಸ್ ಇನ್ ಇಂಡಿಯಾ, ಪು. ೧೭ – ೨೬ ದಿಂದ ಪಡೆಯಲಾಗಿದೆ.

[5] ವಿ. ನಾರಾಯಣ ಸ್ವಾಮಿ, ಇನಾಮ್ಸ್ ಎಬೋಲಿಶನ್ ಲಾ ಇನ್ ಕರ್ನಾಟಕ, ಬೆಂಗಳೂರು: ಎಮ್ ಜೆ ಎಸ್ ಪಬ್ಲಿಕೇಶನ್ಸ್, ೨೦೧೦

[6] ಜಿ.ತಮ್ಮಯ್ಯ ಮತ್ತು ಆಬ್ದುಲ್ ಆಜೀಜ್, ದಿ ಪೊಲಿಟಿಕಲ್ ಎಕಾನಮಿ ಆಫ್ ಲೇಂಡ್ ರಿಫಾರ್ಮ್ಸ್ ಇನ್ ಕರ್ನಾಟಕ, ಎ ಸೌತ್ ಇಂಡಿಯನ್ ಸ್ಟೇಟ್, ಏಶಿಯನ್ ಸರ್ವೇ, ೨೩(೭), ಜುಲೈ ೧೯೮೩, ಪು. ೮೧೦ ೦ ೨೯

[7] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ ಅಗ್ರಿಕಲ್ಚರಲ್ ಲ್ಯಾಂಡ್ ಲಾಸ್ ಕಮಿಟಿ, ಬೆಂಗಳೂರು, ೧೯೫೭

[8] ೧೯೬೧ರ ಕಾಯಿದೆಯ ಮುಖ್ಯಾಂಶಗಳನ್ನು ಈ ಕೆಳಗಿನ ಮೂಲಗಳಿಂದ ಸಂಗ್ರಹಿಸಲಾಗಿದೆ. ಕೆ.ವಿ.ಶಿವಪ್ರಾಸದ, ದಿ ಕರ್ನಾಟಕ ಲೇಂಡ್ ರಿಫೋರ್ಮ್ಸ್ ಆಕ್ಟ್, ೧೯೬೧, ಬೆಂಗಳೂರು: ಎಮ್‌ಜೆಎಸ್ ಪಬ್ಲಿಕೇಶನ್ಸ್, ೨೦೦೯ ಮತ್ತು ಎಂ.ಎ. ಎಸ್. ರಾಜನ್, ಕರ್ನಾಟಕದಲ್ಲಿ ಭೂಸುಧಾರಣೆ – ನಾನು ಸಹ ಹತ್ತಿರದಿಂದ ಕಂಡೆ, ಬೆಂಗಳೂರು: ಐಬಿಹೆಚ್ ಪ್ರಕಾಶನ, ೧೯೮೭.

[9] ಮೈಸೂರು ಸರಕಾರ, ರಿಪೋರ್ಟ್ ಆಫ್ ದಿ ಮೈಸೂರು ಟೆನೆನ್ಸಿ, ಪು. ೨೨ – ೪೦

[10] ವೆಲೇರಿಯನ್ ರಾಡ್ರಿಗಸ್, ಭೂಸುಧಾರಣ ಕಾಯಿದೆಯ ರಾಜಕಾರಣ, ಕನ್ನಡ ವಿಶ್ವವಿದ್ಯಾಲಯದ ವಿಶ್ವಕೋಶ – ೪, ಚರಿತ್ರೆ, ಪ್ರಸಾರಾಂಗ: ಕನ್ನಡ ವಿಶ್ವವಿದ್ಯಾಲಯ, ೨೦೦೧, ಪು. ೮೬೩ – ೭೪

[11] ವೆಲೇರಿಯನ್ ರಾಡ್ರಿಗಸ್, ಭೂಸುಧಾರಣ ಕಾಯಿದೆಯ ರಾಜಕಾರಣ, ಪು. ೮೬೩ – ೭೪ ಮತ್ತು ಚಂದ್ರ ಶೇಖರ್ ದಾಮ್ಲೆ, “ಲೇಂಡ್ ರಿಫೋರ್ಮ್ಸ್ ಲೆಜಿಶ್ಲೇಶನ್ ಇನ್ ಕರ್ನಾಟಕ – ಮಿಥ್ ಆಪ್ ಸಕ್ಸಸ್,’ ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೪(೩೩), ಆಗೋಸ್ಟ್ ೧೯೮೯, ಪು ೧೮೯೬ – ೧೯೦೬

[12] ಎಂ. ಎ. ಎಸ್. ರಾಜನ್, ಕರ್ನಾಟಕದಲ್ಲಿ ಭೂಸುಧಾರನೆ, ಪು. ೩೧

[13] ೧೯೭೪ರ ಕಾಯಿದೆಯ ಮುಖ್ಯಾಂಶಗಳನ್ನು ಈ ಕೆಳಗಿನ ಮೂಲಗಳಿಂದ ಪಡೆಯಲಾಗಿದೆ. ಕೆ.ವಿ. ಶಿವ ಪ್ರಸಾ, ದಿ ಕರ್ನಾಟಕ ಲೇಂಡ್ ರಿಫೋರ್ಮ್ಸ್ ಆಕ್ಟ್, ೧೯೬೧ ಮತ್ತು ಎಂ.ಎ.ಎಸ್. ರಾಜನ್, ಕರ್ನಾಟಕದಲ್ಲಿ ಭೂಸುಧಾರಣೆ, ೧೯೮೭

[14] ಅಮಲ್ ರೇ ಮತ್ತು ಜಯಲಕ್ಷ್ಮಿ ಕುಮ್ಟಾಲ, “ಜಿಲ್ಲಾ ಪರಿಷದ್ ಪ್ರಸಿಡೆಂಟ್ಸ್ ಇನ್ ಕರ್ನಾಟಕ – ದಿಯರ್ ಸೋಶಿಯಲ್ ಬೇಕ್‌ಗ್ರೌಂಡ್ ಆಂಡ್ ಇಂಪ್ಲಿಕೇಶನ್ ಫಾರ್ ಡೆವಲಪ್‌ಮೆಂಟ್‌”, ಎಕಾನಮಿಕ್ ಆಂಡ್ ಪೊಲಿಟಿಕಲ್ ವಿಕ್ಲಿ, ೨೨ (೪೨ / ೪೩), ಆಕ್ಟೋಬರ್ ೧೯೮೭, ಪು. ೧೮೨೫ – ೩೦

[15] ವೆಲೇರಿಯನ್ ರಾಡ್ರಿಗಸ್, ಭೂಸುಧಾರಣ ಕಾಯಿದೆಯೆ ರಾಜಕಾರಣ, ಪು. ೮೬೩ – ೭೪