೧೯೭೪ರ ಕಾಯಿದೆ

೧೯೬೧ರ ಭೂಸುಧಾರಣ ಕಾಯಿದೆಗೆ ಹೋಲಿಸಿದರೆ ೧೯೭೪ರ ಭೂಸುಧಾರಣ ಕಾಯಿದೆ ಕ್ರಾಂತಿಕಾರಿಯಾಗಿತ್ತು. ೧೯೬೧ರ ಕಾಯಿದೆಯನ್ನು ಸಂಪೂರ್ಣವಾಗಿ ತಿದ್ದುಪಡಿ ಮಾಡಿ ೧೯೭೪ರ ಕಾಯಿದೆಯನ್ನು ರೂಪಿಸಲಾಗಿದೆ. ತಿದ್ದುಪಡಿ ಆದ ೧೯೬೧ರ ಕಾಯಿದೆ ತನ್ನ ಹಿಂದಿನ ಎಲ್ಲಾ ಲಕ್ಷಣಗಳನ್ನು ಕಳೆದುಕೊಂಡು ಹೊಸ ಕಾಯಿದೆಯಾಗಿದೆ. ಆದುದರಿಂದ ೧೯೭೪ರ ಕಾಯಿದೆಯನ್ನು ೧೯೬೧ರ ತಿದ್ದುಪಡಿ ಕಾಯಿದೆ ಎನ್ನುವುದುಕ್ಕಿಂತ ಹೊಸ ಭೂಸುಧಾರಣ ಕಾಯಿದೆ ಎಂದು ಗುರುತಿಸುವುದು ಹೆಚ್ಚು ಸೂಕ್ತ.[1] ಗೇಣಿ ಭದ್ರತೆ, ಗೇಣಿ ನೀಡಿದ ಭೂಮಿಯನ್ನು ಪುನರ್ ಸ್ವಾಧೀನ ಪಡಿಸಿಕೊಳ್ಳುವುದು, ಭೂಮಿಯ ಗರಿಷ್ಠಮಿತಿ ನಿಗಧಿಹೋಲಿಸುವುದು, ಹೆಚ್ಚುವರಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು, ಹೆಚ್ಚುವರಿ ಭೂಮಿಯನ್ನು ಹಂಚುವುದು ಇತ್ಯಾದಿಗಳ ಬಗ್ಗೆ ೧೯೬೧ರ ಕಾಯಿದೆ ಸಾಕಷ್ಟು ನ್ಯೂನತೆಗಳನ್ನು ಹೊಂದಿತ್ತು. ಕಾಯಿದೆಯಲ್ಲಿನ ಬಹುತೇಕ ನ್ಯೂನತೆಗಳು ಗೇಣಿದಾರರ ವಿರುದ್ದ ಮತ್ತು ಭೂಮಾಲಿಕರ ಪರ ಕೆಲಸ ಮಾಡುತ್ತಿದ್ದವು. ಕಾಯಿದೆಯಲ್ಲಿನ ನ್ಯೂನತೆಗಳ ಜತೆಗೆ ಅದನ್ನು ಅನುಷ್ಠಾನಗೊಳಿಸುವಾಗ ತಳೆಯುವ ಪಕ್ಷಪಾತಿ ಧೋರಣೆಗಳು ಭೂಸುಧಾರಣೆಯನ್ನು ತಮ್ಮದೇ ರೀತಿಯಲ್ಲಿ ಪ್ರಭಾವಿಸುತ್ತವೆ. ಅಧಿಕಾರಶಾಹಿಗಳ ಹಿನ್ನೆಲೆ ಹಾಗೂ ಭೂಮಾಲಿಕರ ಹಿನ್ನೆಲೆಗಳು ಒಂದೇ ಆಗಿದ್ದರೆ ಎಷ್ಟೇ ಪರಿಣಾಮಕಾರಿ ಕಾಯಿದೆ ಕೂಡ ಅನಷ್ಠಾನಗೊಳ್ಳುವಾಗ ವಿಫಲ ಆಗಬಹುದು. ಈ ಎರಡೂ ಸೇರಿ ೧೯೬೧ರ ಕಾಯಿದೆ ಭೂಸುಧಾರಣೆ ಮಾಡುವ ಬದಲು ಗೇಣಿದಾರರನ್ನು ಕೃಷಿ ಕಾರ್ಮಿಕರನ್ನಾಗಿ ಪರಿವರ್ತಿಸಿದೆ ಎಂದು ಹಿಂದಿನ ಪುಟಗಳಲ್ಲಿ ನೀಡಿದ ಅಂಕಿಅಂಶಗಳು ಸಾಬೀತು ಪಡಿಸುತ್ತವೆ. ಗೇಣಿಪದ್ದತಿಯನ್ನು ರದ್ದುಗೊಳಿಸುವುದು. ಭೂಮಿಯನ್ನು ಪುನರ್ ಸ್ವಾಧೀನಪಡಿಸುವುದನ್ನು ನಿರ್ಬಂಧಿಸುವುದು, ಭೂಮಿ ಗರಿಷ್ಠಮಿತಿಯನ್ನು ಕಡಿಮೆಗೊಳಿಸುವುದು, ಹೆಚ್ಚುವರಿ ಭೂಮಿಯನ್ನು ಸ್ವಾಧೀನಪಡಿಸುವುದು, ಸ್ವಾಧೀನಪಡಿಸಿಕೊಂಡ ಹೆಚ್ಚುವರಿ ಭೂಮಿಯನ್ನು ಭೂರಹಿತರಿಗೆ ಹಂಚುವುದು ಇತ್ಯಾದಿ ಪ್ರಗತಿಪರ ಅಂಶಗಳನ್ನು ೧೯೭೪ ಕಾಯಿದೆ ಹೊಂದಿದೆ. ಕಾಯಿದೆಯ ಈ ಪ್ರಗತಿಪರ ಅಂಶಗಳು ಎಷ್ಟರಮಟ್ಟಿಗೆ ಕಾರ್ಯರೂಪಕ್ಕೆ ಬಂದಿದೆಯೆಂದು ಅಧ್ಯಾಯದ ಈ ಭಾಗದಲ್ಲಿ ವಿಶ್ಲೇಷಿಸಲಾಗಿದೆ.

೧೯೭೪ರ ಭೂಸುಧಾರಣ ಮಸೂದೆ ಗುತ್ತಿಗೆ ಪದ್ದತಿಯನ್ನು ಸಂಪೂರ್ಣ ರದ್ದುಗೊಳಿಸಿದೆ. ಸೈನಿಕರು ಮತ್ತು ಸಿಮೆನ್‌ಗಳನ್ನು ಹೊರತುಪಡಿಸಿ ಇನ್ಯಾರೂ ಗುತ್ತಿಗೆ ನೀಡಿವಂತಿಲ್ಲ ಒಂದು ವೇಳೆ ಗುತ್ತಿಗೆ ನೀಡಿದರೆ ಅಂತಹ ಭೂಮಿಯನ್ನು ಹೆಚ್ಚುವರಿ ಭೂಮಿಯೆಂದು ಪರಿಗಣಿಸಿ ಸರಕಾರ ಮುಟ್ಟಗೋಲು ಕಾಕಬಹುದು. ಸ್ವಂತ ಬೇಸಾಯ ಮಾಡುವವರು ಅಥವಾ ಕೂಲಿ ಕೊಟ್ಟು ಆಳುಗಳ ಮೂಲಕ ಬೇಸಾಯ ಮಾಡುವವರು ಮಾತ್ರ ಕೃಷಿ ಭೂಮಿ ಹೊಂದಬಹುದು. ಕಾನೂನು ಜಾರಿಗೆ ಬಂದ ದಿನಾಂಕದಿಂದ ಗುತ್ತಿಗೆ ನೀಡಿದ ಎಲ್ಲಾ ಭೂಮಿ ಸರಕಾರದ ಸ್ವಾಧೀನ ಹೋಗುತ್ತದೆ. ಗೇಣಿದಾರರು ಸರಕಾರಕ್ಕೆ ಡಿಕ್ಲರೇಶನ್ ಸಲ್ಲಿಸಿ ತಾವು ಕೃಷಿ ಮಾಡುತ್ತಿದ್ದ ಭೂಮಿಯನ್ನು ತಮ್ಮ ವಶ ತೆಗೆದುಕೊಳ್ಳಬೇಕು. ಈ ಕಾನೂನು ಯಥಾರೂಪದಲ್ಲಿ ಅನುಷ್ಠಾನಗೊಂಡರೆ ಕರ್ನಾಟಕದಲ್ಲಿ ಗೇಣಿದಾರರೇ ಇರಲು ಸಾಧ್ಯವಿಲ್ಲ. ಆದರೆ ೧೯೮೧ – ೮೨ರ ನ್ಯಾಶನಲ್ ಸ್ಯಾಂಪಲ್ ಸರ್ವೇ ಕರ್ನಾಟಕದಲ್ಲಿ ಗೇಣಿಗೆ ನೀಡಿದ ಭೂಮಿ ಬಗ್ಗೆ ಬೇರೆಯದೇ ಚಿತ್ರಣ ಕೊಡುತ್ತದೆ. ನ್ಯಾಶನಲ್ ಸ್ಯಾಂಪಲ್ ಸರ್ವೇ ಪ್ರಕಾರ ೧೯೭೦ – ೭೧ರಲ್ಲಿ ೧೫.೮೦ರಷ್ಟು ಗೇಣಿದಾರರು ಕರ್ನಾಟಕದಲ್ಲಿದ್ದರು. ೧೯೭೪ರ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿದ್ದರೆ ಈ ಗೇಣಿದಾರರ ಸಂಖ್ಯೆ ಶೂನ್ಯ ಅಥವಾ ಒಂದೆರಡು ಪರ್ಸೆಂಟೇಜ್‌ಗೆ ಇಳಿಯಬೇಕಿತ್ತು. ಒಂದೆರಡು ಪರ್ಸೆಂಟೇಜ್ ಯಾಕೆಂದರೆ ಸೈನಿಕರಿಗೂ ಸಿಮೆನ್‌ಗಳಿಗೂ ಗೇಣಿಗೆ ಭೂಮಿ ಕೊಡುವ ಅವಕಾಶವನ್ನು ೧೯೭೪ರ ಕಾಯಿದೆ ನಿಡಿದೆ. ಅದರೆ ನ್ಯಾಶನಲ್ ಸ್ಯಾಂಪಲ್ ಸರ್ವೇ ಪ್ರಕಾರ ೧೯೮೧ – ೮೨ ರಲ್ಲಿ ಕರ್ನಾಟಕದಲ್ಲಿದ್ದ ಗೇಣಿದಾರರ ಸಂಖ್ಯೆ ಒಂದೆರಡು ಪರ್ಸೆಂಟೇಜ್ ಅಲ್ಲ. ೬.೦೪ ಪರ್ಸೆಂಟೇಜ್. ಸೈನಿಕರು ಮತ್ತು ಸಿಮೆನ್‌ಗಳು ಗೇಣಿಗೆ ನೀಡಿರುವುದರಿಂದ ಖಂಡಿತವಾಗಿಯೂ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಗೇಣಿದಾರರು ಇರಲು ಸಾಧ್ಯವಿಲ್ಲ.[2] ಕರ್ನಾಟಕದಲ್ಲಿರುವ ಈ ಬಗೆಯ ಮುಚ್ಚುಮರೆಯ ಗೇಣಿದಾರಿಕೆ ಬಗ್ಗೆ ೧೯೮೭ರಲ್ಲಿ ಒಂದು ಅಧ್ಯಯನ ನಡೆಯಿತು. ಆ ಅಧ್ಯಯನ ಪ್ರಕಾರ ಉತ್ತರ ಕರ್ನಾಟಕದ ಒಣಭೂಪ್ರದೇಶಗಳಲ್ಲಿ ಮುಚ್ಚುಮರೆಯ ಗೇಣಿದಾರಿಗೆ ಒಟ್ಟು ಸಾಗುವಳಿಯ ಶೇ. ೬ ರಿಂದ ೮ರಷ್ಟಿದೆ. ಕರ್ನಾಟಕದ ಕರಾವಳಿ ಮತ್ತು ಮಧ್ಯ ಭಾಗದಲ್ಲಿ ಶೇ. ೪ ರಿದಮ ೬ರಷ್ಟು ಮುಚ್ಚುಮರೆಯ ಗೇಣಿದಾರಿಗೆ ಇದೆ. ದಕ್ಷಿಣ ಭಾಗದಲ್ಲಿ ಶೇ.೨ರಿಂದ ೪ರಷ್ಟು ಮುಚ್ಚುಮರೆಯ ಗೇಣಿದಾರಿಕೆ ಇದೆಯೆಂದು ಈ ಅಧ್ಯಯನ ಗುರುತಿಸಿದೆ. ಮೂರು ಬಗೆಯ ಗುತ್ತಿಗೆ ನಡೆಯುತ್ತಿದೆ.[3] ಒಂದು, ಉತ್ಪಾದನ ವೆಚ್ಚ ಮತ್ತು ಉತ್ಪನ್ನವನ್ನು ಭೂಮಾಲಿಕರು ಮತ್ತು ಗುತ್ತಿಗೆದಾರರು ಸಮನಾಗಿ ಹಂಚಿ ಕೊಳ್ಳುವುದು. ಎರಡು, ಉತ್ಪಾದನೆಯ ಎಲ್ಲಾ ವೆಚ್ಚಗಳನ್ನು ಗುತ್ತಿಗೆದಾರ ಮಹಿಸಿಕೊಳ್ಳುವುದು, ಉತ್ಪನ್ನದ ಅರ್ಧಭಾಗ ಆತನ ಪಾಲು. ಮೂರು, ಉತ್ಪಾದನೆಯ ಎಲ್ಲಾ ವೆಚ್ಚಗಳನ್ನು ಭೂಮಾಲಿಕ ವಹಿಸುಕೊಳ್ಳುವುದು, ಉತ್ಪನ್ನದ ಮೂರನೇ ಒಂದು ಭಾಗವನ್ನು ಗುತ್ತಿಗೆದಾರ ಪಡೆಯುತ್ತಾನೆ.

೧೯೭೪ರ ಕಾಯಿದೆಯನ್ನು ಇಷ್ಟೊಂದು ಬಿಗಿಯಾಗಿ ಮೌಲ್ಯಮಾಪನ ಮಾಡುವುದು ಬೇಡ. ಸ್ವಲ್ಪ ಲಿಬರಲ್ ಆಗಿ ನೋಡುವ. ಈ ಕಾನೂನು ಯಥಾರೂಪದಲ್ಲಿ ಅನುಷ್ಠಾನಗೊಂಡರೆ ಗೇಣಿದಾರರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗಬೇಕು ಮತ್ತು ಕೃಷಿಕರ ಸಂಖ್ಯೆ ಹೆಚ್ಚಾಗಬೇಕು. ಈ ಕಾಯಿದೆಯಲ್ಲಿ ಹಿಂದೆ ಗೇಣಿದಾರರಾಗಿದ್ದು ಯಾವುದೋ ಕಾರಣಕ್ಕಾಗಿ ಗೇಣಿದಾರಿಕೆಯನ್ನು ಕಳೆದುಕೊಂಡವರನ್ನು ಕಲ್ಪಿತ ಗೇಣಿದಾರರೆಂದು (ಡೀಮ್ಡ್ ಟಿನೆನ್ಸ್) ಪರಿಗಣಿಸಲಾಗಿದೆ. ಇಂತವರು ಇತರ ಗೇಣಿದಾರಂತೆ ಹಿಂದೆ ಕೃಷಿ ಮಾಡುತ್ತಿದ್ದ ಭೂಮಿಗೆ ಡಿಕ್ಲರೇಶನ್ ಸಲ್ಲಿಸಲು ಅವಕಾಶ ನೀಡಲಾಗಿದೆ. ಇದರಿಂದಾಗಿ ಕೃಷಿಕರ ಸಂಖ್ಯೆ ಇನ್ನೂ ಹೆಚ್ಚಾಗಬೇಕು. ಹಿಂದೆ ಗೇಣಿದಾರರಂತೆ ಹಿಂದೆ ಕೃಷಿ ಮಾಡುತ್ತಿದ್ದ ಭೂಮಿಗೆ ಡಿಕ್ಲರೇಶನ್ ಸಲ್ಲಿಸಲು ಅವಕಶ ನೀಡಲಾಗಿದೆ. ಇದರಿಂದಾಗಿ ಕೃಷಿಕರ ಸಂಖ್ಯತೆ ಇನ್ನೂ ಹೆಚ್ಚಾಗಬೇಕು. ಹಿಂದೆ ಗೇಣಿದಾರಿಕೆ ಕಳೆದು ಕೊಂಡವರು ಕೃಷಿಕಾರ್ಮಿರಾಗಿದ್ದು ಅಂತವರು ಹೆಚ್ಚು ಸಂಖ್ಯೆಯಲ್ಲಿ ಕಲ್ಪಿತ ಗೇಣಿದಾರರ ರೂಪದಲ್ಲಿ ಡಿಕ್ಲರೇಶನ್ ಸಲ್ಲಿಸಿದರೆ ಕೃಷಿ ಕಾರ್ಮಿಕರ ಸಂಖ್ಯೆನೂ ಕಡಿಮೆ ಆಗಬೇಕು. ೨೯೭೪ರ ಭೂಸುಧಾರಣ ಕಾಯಿದೆಯ ಅನುಷ್ಠಾನದ ಮೇಲಿನ ಎಲ್ಲಾ ಅಂಕಿಅಂಶಗಳು ಮೊದಲಿನ ವಾದವನ್ನು (ಗೇಣಿದಾರರು ಕಡಿಮೆಯಾಗಿ ಕೃಷಿಕರು ಹೆಚ್ಚಾಗಬೇಕೆನ್ನುವ ವಾದವನ್ನು) ಸಮರ್ಥಿಸುವಂತಿದೆ. ೧೯೭೧ರಲ್ಲಿ ಕರ್ನಾಟಕದಲ್ಲಿ ಒಟ್ಟು ೪೦,೭೨,೮೭೯ ಕೃಷಿಕರಿದ್ದರು. ೧೯೮೧ರಲ್ಲಿ ಕರ್ನಾಟಕದಲ್ಲಿನ ಒಟ್ಟು ಕೃಷಿಕರ ಸಂಖ್ಯೆ ೫೨,೨೨,೦೩೨ಕ್ಕೆ ಏರಿದೆ (ಕೋಷ್ಟಕ -೩). ಕಾಯಿದೆ ಅನುಷ್ಠಾನಗೊಂಡ ನಂತರ ಕೃಷಿಕರ ಸಂಖ್ಯೆ ಶೇ. ೨೮ರಷ್ಟು ಏರಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಈ ಕಾಯಿದೆ ಎಷ್ಟು ಗೇಣಿದಾರರಿಗೆ ಭೂಮಿ ಒದಗಿಸಿದೆಯೆಂದು ನೋಡುವ. ಕರಾವಳಿ ಕರ್ನಾಟಕದಲ್ಲಿ ೧,೭೬,೨೩೫ ಗೇಣಿದಾರರು ಡಿಕ್ಲರೇಶನ್ ಸಲ್ಲಿಸಿದ್ದಾರೆ. ಅವರಲ್ಲಿ ೧,೩೬,೮೮೦ (ಶೇ. ೭೮) ಗೇಣಿದಾರರಿಗೆ ಭೂಮಿ ದೊರಕಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ೯೮,೯೭೬ ಗೇಣಿದಾರರು ಡಿಕ್ಲರೇಶನ್ ಸಲ್ಲಿಸಿದ್ದಾರೆ. ಅವರಲ್ಲಿ ೮೦,೯೬೮ (ಶೇ. ೮೨) ಗೇಣಿದಾರರಿಗೆ ಭೂಮಿ ದೊರಕಿದೆ (ಕೋಷ್ಟಕ – ೪). ಮಲೆನಾಡು ಪ್ರದೇಶದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ (೫೦,೫೬೮) ಗೇಣಿದಾರರು ಡಿಕ್ಲರೇಶನ್ ಸಲ್ಲಿಸಿದ್ದಾರೆ. ಡಿಕ್ಲರೇಶನ್ ಸಲ್ಲಿಸದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ(ಶೇ.೫೬) ಗೇಣಿದಾರರು ಹೊಲದ ಒಡೆಯರಾಗಿದ್ದಾರೆ (ಕೋಷ್ಟಕ – ೪). ಉತ್ತರ ಕರ್ನಾಟಕ ಪ್ರದೇಶದಲ್ಲಿ ಬೆಳಗಾಂ, ಧಾರವಾಡ ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲು ಆರವತ್ತು ಸಾವರಕ್ಕಿಂತ ಹೆಚ್ಚು ಗೇಣಿದಾರರು ಡಿಕ್ಲರೇಶನ್ ಸಲ್ಲಿಸಿದ್ದಾರೆ. ಬೆಳಗಾಂ ಜಿಲ್ಲೆಯಲ್ಲಿ ಶೇ. ೭೩ ಮತ್ತು ಧಾರವಾಡ ಜಿಲ್ಲೆಯಲ್ಲಿ ಶೇ. ೬೧ ಮಂದಿ ಗೇಣಿದಾರರಿಗೆ ಭೂಮಿ ಲಭ್ಯವಾಗಿದೆ (ಕೋಷ್ಟಕ – ೪). ಉತ್ತರ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿ ದೊಡ್ಡ ಮಟ್ಟಿನ ಸಾಧನೆಯಾಗಿಲ್ಲ ದಕ್ಷಿಣ ಕರ್ನಾಟಕದಲ್ಲಿ ಬೆಂಗಳೂರು ಜಿಲ್ಲೆಯಲ್ಲಿ ಮಾತ್ರ ಐವತ್ತು ಸಾವಿರಕ್ಕಿಂತ ಹೆಚ್ಚು (೫೯,೬೨೬) ಗೇಣಿದಾರರು ಡಿಕ್ಲರೇಶನ್ ಸಲ್ಲಿಸಿದ್ದಾರೆ. ಉಳಿದಂತೆ ಮೈಸೂರು ಮತ್ತು ಕೋಲಾರ ಜಿಲ್ಲೆಗಳಲ್ಲಿ ಕ್ರಮವಾಗಿ ೩೬,೬೦೨ ಮತ್ತು ೨೪,೬೬೦ ಗೇಣಿದಾರರು ಡಿಕ್ಲರೇಶನ್ ಸಲ್ಲಿಸಿದ್ದಾರೆ. ಬೆಂಗಳೂರು ಜಿಲ್ಲೆಯಲ್ಲಿ ಶೇ. ೪೩ರಷ್ಟು, ಮೈಸೂರಲ್ಲಿ ಶೇ.೫೬ರಷ್ಟು ಮತ್ತು ಕೋಲಾರದಲ್ಲಿ ಶೇ.೫೨ರಷ್ಟು ಗೇಣಿದಾರರು ತಾವು ಉಳುವ ಹೊಲದ ಒಡೆಯರಾಗಿದ್ದಾರೆ (ಕೋಷ್ಟಕ – ೪). ಇಡೀ ರಾಜ್ಯದಲ್ಲಿ ೧೯೭೯ರವರೆಗೆ ಒಟ್ಟು ೮,೧೫,೭೮೫ ಗೇಣಿದಾರರು ಅರ್ಜಿಸಲ್ಲಿಸಿದ್ದಾರೆ. ಅವರಲ್ಲಿ ೪,೮೫,೪೧೯ (ಶೇ.೫೦.೫೦) ಗೇಣಿದಾರರು ತಾವು ಉಳುವ ಹೊಲದ ಒಡೆಯರಾದರು.

೧೯೭೪ರ ಭೂಸುಧಾರಣ ಕಾಯಿದೆ ಮೇಲೆ ನಡೆದ ಬಹುತೇಕ ಅಧ್ಯಯನಗಳು ಕಾಯಿದೆ ಗಂಭೀರವಾಗಿ ಅನುಷ್ಠಾನಗೊಂಡಿದೆ ಮತ್ತು ಹೆಚ್ಚು ಸಂಖ್ಯೆಯ ಗೇಣಿದಾರರು ಭೂಮಿ ಪಡೆದಿದ್ದಾರೆ ಎನ್ನುವ ತೀರ್ಮಾನಕ್ಕೆ ಬಂದಿವೆ.[4] ೧೯೭೪ರ ಕಾಯಿದೆ ಕನಾಟಕದ ಭೂಸಂಬಂಧದಲ್ಲಿ ದೊಡ್ಡ ಮಟ್ಟಿನ ಬದಲಾವಣೆ ತಂದಿಲ್ಲ ಎಂದು ವಾದಿಸುವ ಕೆಲವೇ ಕೆಲವು ಅಧ್ಯಯನಗಳಿವೆ. ೧೯೭೪ರ ಸುಧಾರಣೆ ಭೂ ಸಂಬಂಧಗಳನ್ನು ಮೂಲಭೂತವಾಗಿ ಸುಧಾರಿಸಿಲ್ಲ ಎಂದು ಸಾಧಿಸಲು ಅವರು ನೀಡುವ ವಾದಗಳನ್ನು ಪರಿಶೀಲಿಸುವ. ಹೆಚ್ಚು ಸಂಖ್ಯೆಯ ಗೇಣಿದಾರರು ಭೂಮಿ ಪಡೆದಿದ್ದಾರೆ ಎನ್ನುವಾಗ ಭೂಮಿ ಪಡೆದವರು ಬಡ ಗೇಣಿದಾರರಿರುತ್ತಾರೆ ಎನ್ನುವ ಒಂದು ಸಾಮಾನ್ಯ ಗ್ರಹಿಕೆ ಇರುತ್ತದೆ. ಇದು ಸರಿಯಲ್ಲ ಎಂದು ನಾಡಕರ್ಣಿಯವರು ಅಭಿಪ್ರಾಯಪಡುತ್ತಾರೆ. ಅವರ ಅಧ್ಯಯನ ಪ್ರಕಾರ ೧೯೭೪ರಲ್ಲಿ ಡಿಕ್ಲರೇಶನ್‌ಗೆ ಅರ್ಜಿಸಲ್ಲಿಸಿದವರಲ್ಲಿ ಬಡ ಗೇಣಿದಾರರು ಮಾತ್ರವಲ್ಲ ದೊಡ್ಡ ಭೂಮಾಲಿಕರು ಸೇರಿದ್ದಾರೆ, ಬಡ ರೈತರಿಂದ ಗುತ್ತಿಗೆಗೆ ಪಡೆದ ಭೂಮಿಗಳಿಗೆ ದೊಡ್ಡ ಭೂಮಾಲಿಕರು ಡಿಕ್ಲರೇಶನ್ ಸಲ್ಲಿಸಿದ್ದಾರೆ. ಇದರಿಂದಾಗಿ ಬಡರೈತರು ತಮ್ಮ ವಶ ಇದ್ದ ಅಲ್ಪಸ್ವಲ್ಪ ಭೂಮಿಯನ್ನು ಕಳೆದುಕೊಂಡು ನಿರ್ಗತಿಕರಾದರು.[5] ನರೇಂದ್ರ ಪಾಣಿ ಕೂಡ ನಾಡಕರ್ಣಿಯವರ ಅಭಿಪ್ರಾಯವನ್ನು ಬೆಂಬಲಿಸುತ್ತಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾತ್ರ ಸಣ್ಣ ರೈತರು ೧೯೭೪ರ ಕಾಯಿದೆಯಿಂದ ಲಾಭ ಪಡೆದ್ದಾರೆ. ಉಳಿದ ಕಡೆಗಳಲ್ಲಿ ಸಣ್ಣ ರೈತರಿಗೆ ವಿಶೇಷ ಲಾಭವಾಗಿಲ್ಲ. ಸಣ್ಣ ರೈತರ ಬದಲು ಮಧ್ಯಮ ದೊಡ್ಡ ರೈತರು ೧೯೭೪ರ ಕಾಯಿದೆಯ ಹೆಚ್ಚಿನ ಲಾಭ ಪಡೆದಿದ್ದಾರೆ ಎನ್ನುವ ತೀಮಾನಕ್ಕೆ ನರೇಂದ್ರ ಪಾಣಿಯವರು ಬರುತ್ತಾರೆ.[6]

೧೯೭೪ರ ಕಾಯಿದೆಯ ಸಕರಾತ್ಮಕ ಪರಿಣಾಮವನ್ನು ಪ್ರಶ್ನಿಸುವಲ್ಲಿ ಚಂದ್ರಶೇಖರ್ ದಾಮ್ಲೆಯವರ ನಿಲುವುಗಳು ನಾಡಕರ್ಣಿ ಹಾಗೂ ನರೇಂದ್ರ ಪಾಣಿಯವರ ನಿಲುವುಗಳಿಗಿಂತ ಭಿನ್ನ ಮತ್ತು ವಾಸ್ತವಕ್ಕೆ ಹೆಚ್ಚು ಹತ್ತಿರವಿದ್ದಂತೆ ಕಾಣುತ್ತದೆ. ದಮ್ಲೆಯವರು ನಾಡಕರ್ಣಿ ಮತ್ತು ಪಾಣಿಯವರ ನಿಲುವುಗಳನ್ನು ಸಂಪೂರ್ಣವಾಗಿ ಅಲ್ಲಗೆಳೆಯುವುದಿಲ್ಲ. ಪಾಣಿಯ ಅವರು ತಮ್ಮ ವಾದವನ್ನು ಸಮರ್ಥಿಸಲು ಬಳಸಿದ ವಿಧಾನವನ್ನು ದಾಮ್ಲೆಯವರು ಪ್ರಶ್ನಿಸುತ್ತಾರೆ. ಪಾಣಿಯವರು ೧೯೭೧ರ ಅಗ್ರಿಕಲ್ಚರಲ್ ಸೆನ್ಸಸ್‌ಲ್ಲಿದ್ದ ಗೇಣಿದಾರರ ಸಂಖ್ಯೆಯನ್ನು ಬೇಸ್ ಪಾಯಿಂಟಾಗಿ ತೆಗೆದುಕೊಂಡು ೧೯೭೪ರ ಕಾಯಿದೆಯಲ್ಲಿ ಗೇಣಿದಾರರ ಪರ ಇತ್ಯರ್ಥವಾದ ಕೇಸುಗಳ ಸಂಖ್ಯೆಯೊಂದಿಗೆ ಹೋಲಿಸಿದ್ದಾರೆ. ಇವರಿಂದಾಗಿ ಕರ್ನಾಟಕದ ಆರು ಜಿಲ್ಲೆಗಳಲ್ಲಿ (ಬೆಂಗಳೂರು, ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ) ಶೇ. ೧೦೦ಕ್ಕಿಂತಲೂ ಹೆಚ್ಚು ಕೇಸುಗಳು ಗೇಣಿದಾರರ ಪರ ಇತ್ಯರ್ಥವಾದ ಅಂಕಿಅಂಶಗಳು ಬಂದಿವೆ.[7] ದಾಮ್ಲೆಯವರ ಪ್ರಕಾರ ಇದು ಸರಿಯಾದ ಕ್ರಮವಲ್ಲ. ಯಾಕೆಂದರೆ ೧೯೭೧ರ ಅಗ್ರಿಕಲ್ಚರಲ್ ಸೆನ್ಸಸ್‌೧೯೬೫ರ ಕಾಯಿದೆಯಿಂದಾಗಿ ಭೂಮಿ ಕಳೆದುಕೊಂಡ ಗೇಣಿದಾರರನ್ನು ಪರಿಗಣಿಸುವುದಿಲ್ಲ. ೧೯೬೧ರಲ್ಲಿ ಗೇಣಿದಾರರಾಗಿದ್ದವರಲ್ಲಿ ಶೇಕಡಾ ಎಪ್ಪತ್ತರಿಂದ ಎಂಬತ್ತರಷ್ಟು ರೈತರು ೧೯೭೧ರ ವೇಳೆಗೆ ಭೂಮಿ ಕಳೆದುಕೊಂಡಿದ್ದಾರೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ೧೯೭೪ರ ಕಾಯಿದೆ ಅನುಷ್ಠಾನಗೊಳ್ಳುವ ಸಂದರ್ಭದಲ್ಲಿ ೧೯೬೧ರಲ್ಲಿ ಗೇಣಿದಾರರಾಗಿದ್ದವರಲ್ಲಿ ಶೇ.೨೨ರಷ್ಟು ರೈತರು ಮಾತ್ರ ಡಿಕ್ಲರೇಶನ್ ಸಲ್ಲಿಸಲು ಸಾಧ್ಯವಾಗಿತ್ತು. ೧೯೭೪ರ ಕಾಯಿದೆ ಕಲ್ಪಿತ ಗೇಣಿದಾರು (ಡೀಮ್ಡ್ ಟಿನೆನ್ಸ್) ಎನ್ನುವ ಕೆಟಗರಿಯ ಕೆಳಗೆ ಹಿಂದೆ ಗೇಣಿದಾರರಾಗಿದ್ದು ಭೂಮಿ ಕಳೆದುಕೊಂಡವರಿಗೆ ಡಿಕ್ಲರೇಶನ್ ಸಲ್ಲಿಸಲು ಅವಕಾಶ ನೀಡುವುದರಿಂದ ಡಿಕ್ಲರೇಶನ್ ಸಲ್ಲಿಸಿದವರ ಸಂಖ್ಯೆ ಶೇ.೪೫ಕ್ಕೆ ಏರಿತು. ಅಂದರೆ ೧೯೭೧ರಲ್ಲಿ ಗೇಣಿದಾರಾಗಿದ್ದ ಶೇ.೨೨ಗೇಣಿದಾರರ ಜೊತೆಗೆ ಶೇ.೨೩ರಷ್ಟು ಹೆಚ್ಚಿನ (ಕಲ್ಪತ) ಗೇಣಿದಾರರು ಡಿಕ್ಲರೇಶನ್ ಸಲ್ಲಿಸಿದರು.[8] ೧೯೭೪ರ ಕಾಯಿದೆಯ ನಿಜವಾದ ಪರಿಣಾಮವನ್ನು ಮಾಪನಮಾಡ ಬೇಕಾದರೆ ಗೇಣಿದಾರರ ಸಂಖ್ಯೆಯ ಬೇಸ್ ಪಾಯಿಂಟ್ ೧೯೭೧ರ ಅಂಕಿಅಂಶಗಳಲ್ಲ; ೧೯೫೭ರ ಅಂಕಿಅಂಶಗಳಾಗ ಬೇಕೆಂದು ದಾಮ್ಲೆಯವರು ವಾದಿಸುತ್ತಾರೆ. ಪಣಿಯವರು ೨೯೭೧ರ ಗೇಣಿದಾರರ ಅಂಕಿಅಂಶಗಳನ್ನು ಗೇಣಿದಾರರ ಪರ ಇತ್ಯರ್ಥವಾದ ಅಂಕಿ ಅಂಶಗಳೊಂದಿಗೆ ಹೋಲಿಸುವುದರಿಂದ ೧೯೭೪ರ ಕಾಯಿದೆ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡ ಚಿತ್ರಣ ದೊರಕಿದೆ ಎಂದು ದಾಮ್ಲೆಯವರು ವಾದಿಸುತ್ತಾರೆ. ಒಂದು ವೇಳೆ ೧೯೫೭ರಲ್ಲಿದ್ದ ಗೇಣಿದಾರರ ಅಂಕಿಅಂಶಗಳನ್ನು ಗೇಣಿದಾರರಪರ ಇತ್ಯರ್ಥವಾದ ಕೇಸುಗಳ ಅಂಕಿಅಂಶಗಳೊಂದಿಗೆ ಹೋಲಿಸಿದರೆ ಸಂಪೂರ್ಣವಾಗಿ ಭಿನ್ನ ಚಿತ್ರಣ ದೊರೆಯುತ್ತದೆ ಎಂದು ದಾಮ್ಲೆವಾದಿಸುತ್ತರೆ. ೧೯೫೭ರಲ್ಲಿದ್ದ ಗೇಣಿದಾರರ ಸಂಖ್ಯೆಯನ್ನು ಗೇಣಿದಾರರ ಪರ ಇತ್ಯರ್ಥವಾದ ಸಂಖ್ಯೆಯೊಂದಿಗೆ ಹೋಲಿಸದರೆ ಇಡೀ ರಾಜ್ಯದಲ್ಲಿ ಶೇ. ೨೭ರಷ್ಟು ಗೇಣಿದಾರರು ಮಾತ್ರ ಭೂಮಿ ಪಡೆದಿದ್ದಾರೆ. ಇದರ ಬದಲು ೧೯೭೯ರವರೆಗೆ ಡಿಕ್ಲರೇಶನ್ ಸಲ್ಲಿಸಿದ ಗೇಣಿದಾರರ ಸಂಖ್ಯೆಯನ್ನು ಗೇಣಿದಾರರ ಪರ ಇತ್ಯರ್ಥವಾದ ಸಂಖ್ಯೆಯೊಂದಿಗೆ ಹೋಲಿಸಿದರೆ ಶೇ. ೬೦ ರಷ್ಟು ಗೇಣಿದಾರರು ಭೂಮಿ ಪಡೆದಿದ್ದಾರೆ ಎನ್ನುವ ಚಿತ್ರಣ ದೊರೆಯುತ್ತದೆ. ಆದುದರಿಂದ ೧೯೭೪ ಕಾಯಿದೆ ಕರ್ನಾಟಕದ ಸಾಂಪ್ರದಾಯಿಕ ಭೂಮಾಲಿಕರ ಶಕ್ತಿಗುಂದಿಸಿಲ್ಲ. ಅವರಲ್ಲಿ ಬಹುತೇಕರು ತಮ್ಮ ಭೂಮಿಯನ್ನು ತಮ್ಮಲ್ಲೇ ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ೧೯೫೭ರ ಗೇಣಿದಾರರ ಸಂಖ್ಯೆಗೆ ಹೋಲಿಸಿದರೆ ಅತ್ಯಲ್ಪ ಪ್ರಮಾಣದ ಗೇಣಿದಾರರು ಭೂಮಿ ಪಡೆದಿದ್ದಾರೆ ಎಂದು ದಾಮ್ಲೆ ವಾದಿಸುತ್ತಾರೆ.[9]

೧೯೭೪ರ ಭೂಸುಧಾರಣ ಕಾಯಿದೆಯ ಮತ್ತೊಂದು ಪ್ರಮುಖ ಅಂಶ ಮಾಲಿಕರು ಹೊಂದಬಹುದಾದ ಭೂಮಿಯ ಗರಿಷ್ಠಮಿತಿಯನ್ನು ಕನಿಷ್ಠ ಪ್ರಮಾಣದಲ್ಲಿ ನಿಗಧಿಗೊಳಿಸಿದ್ದು. ೧೯೭೨ರ ರಾಷ್ಟ್ರೀಯ ಮಾರ್ಗಸೂಚಿ ನೀರಾವರಿ ಪ್ರದೇಶದಲ್ಲಿ ೧೦ರಿಂದ ೨೦ ಎಕರೆಗಳ ತನಕ, ಅರೆ ನೀರಾವರಿ ಪ್ರದೇಶದಲ್ಲಿ ೨೭ ಎಕರೆಗಳಷ್ಟು ಮತ್ತು ಒಣ ಭೂಪ್ರದೇಶದಲ್ಲಿ ೫೩ ಎಕರೆಗಳಷ್ಟು ಭೂಮಿಯನ್ನು ಗರಷ್ಠಮಿತಿಯೆಂದು ನಿಗಧಿಗೊಳಿಸಿದೆ. ಆದರೆ ಕರ್ನಾಟಕ ಸರಕಾರದ ೧೯೭೪ರ ಭೂಸುಧಾರಣ ಮಸೂದೆ ನೀರಾವರಿ ಪ್ರದೇಶದಲ್ಲಿ ೧೦ ಎಕರ, ಅರೆ ನೀರಾವರಿ ಪ್ರದೇಶದಲ್ಲಿ ೨೦ ಎಕರೆ ಮತ್ತು ಒಣ ಭೂಪ್ರದೇಶದಲ್ಲಿ ೪೦ ಎಕರೆಗಳಿಗಿಂತ ಹೆಚ್ಚು ಭೂಮಿ ಇರುವ ಮಾಲಿಕರು ಗರಿಷ್ಠಮಿತಿಯ ಡಿಕ್ಲರೇಶನ್ ಸಲ್ಲಿಸುವುದನ್ನು ಕಡ್ಡಾಯಗೊಳಿಸದೆ. ಕಾಯಿದೆ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತಿದ್ದರೆ ದೊಡ್ಡ ಪ್ರಮಾಣದ ಹೆಚ್ಚುವರಿ ಭೂಮಿ ಸರಕಾರದ ಸ್ವಾಧೀನಕ್ಕೆ ಬರುತ್ತಿತ್ತು. ಆದರೆ ಆ ರೀತಿ ಆಗಲಿಲ್ಲ. ಇಡೀ ರಾಜ್ಯದಲ್ಲಿ ಒಟ್ಟು ೨,೯೪,೧೫೨ ಎಕರೆ ಹೆಚ್ಚುವರಿ ಭೂಮಿಯೊಂದು ಘೋಷಿಸಲ್ಪಟ್ಟಿದೆ (ಕೋಷ್ಟಕ – ೬). ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಮಳೆಬೆಳೆ ಚೆನ್ನಾಗಿ ಆಗುವ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಲ್ಪಪ್ರಮಾಣದ ಹೆಚ್ಚುವರಿ ಭೂಮಿ ಘೋಷಿತವಾಗಿದೆ. ಕೊಡಗಿನಲ್ಲಿ ೪೮೩ ಎಕರೆಗಳು, ಉತ್ತರ ಕನ್ನಡದಲ್ಲಿ ೩೭೧ ಎಕರೆಗಳು, ಚಿಕ್ಕಮಂಗಳೂರಲ್ಲಿ ೧೧೩೫ ಎಕರೆಗಳು, ಹಾಸನದಲ್ಲಿ ೧೨೩೪ ಎಕರೆಗಳು ಹೆಚ್ಚುವರಿ ಭೂಮಿ ಘೋಷಿತವಾಗಿದೆ (ಕೋಷ್ಟಕ – ೬). ಈ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳು ಸ್ವಲ್ಪವಾಸಿ. ಇಲ್ಲ ಕ್ರಮವಾಗಿ ೩೨೪೮ ಎಕರೆ ಮತ್ತು ೫,೦೭೯ ಎಕರೆ ಹೆಚ್ಚುವರಿ ಭೂಮಿ ಘೋಷಿತವಾಗದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳು ಕರಾವಳಿ ಮತ್ತು ಮಲೆನಡಿನ ಜಿಲ್ಲೆಗಳಿಗಿಂತ ವಿಶೇಷ ಭಿನ್ನ ಇಲ್ಲ. ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಅತ್ಯಲ್ಪ ಹೆಚ್ಚುವರಿ ಭೂಮಿ ಘೋಷಿತವಾಗಿದೆ. ಈ ಜಿಲ್ಲೆಗಳಲ್ಲಿ ಕ್ರಮವಾಗಿ ೬೩೧ ಮತ್ತು ೮೯೬ ಎಕರೆ ಹೆಚ್ಚುವರಿ ಭೂಮಿ ಘೋಷಿತವಾಗಿದೆ. ಕರ್ನಾಟಕದ ಇತರ ಪ್ರದೇಶಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ಹೆಚ್ಚುವರಿ ಭೂಮಿ ಘೋಷಿತವಾಗಿದೆ. ರಾಯಚೂರು ಜಿಲ್ಲೆಯಲ್ಲಿ ೮೬,೪೨೦ ಎಕರೆ, ಬಿಜಾಪುರದಲ್ಲಿ ೫೨,೨೦೪ ಎಕರೆ ಮತ್ತು ಗುಲ್ಬರ್ಗ ಜಿಲ್ಲೆಯಲ್ಲಿ ೪೪,೫೬೩ ಎಕರೆ ಹೆಚ್ಚುವರಿ ಭೂಮಿ ಘೋಷಿತವಾಗಿದೆ(ಕೋಷ್ಟಕ – ೬).

ಘೋಷಿತವಾದ ಎಲ್ಲಾ ಹೆಚ್ಚುವರಿ ಭೂಮಿಯನ್ನು ಸರಕಾರ ವಶಪಡಿಸಿಕೊಂಡಿಲ್ಲ. ಇಡೀ ರಾಜ್ಯದಲ್ಲಿ ಘೋಷಿತವಾದ ೨,೯೪,೧೫೨ ಎಕರೆಗಳಲ್ಲಿ ಕೇವಲ ೧,೫೪,೨೯೩ ಎಕರೆಗಳು ಅಥವಾ ಶೇ.೫೨ರಷ್ಟು ಘೋಷಿತ ಭೂಮಿಯನ್ನು ಮಾತ್ರ ಸರಕಾರ ಸ್ವಾಧೀನ ಪಡಿಸಿಕೊಂಡಿದೆ. ಕೆಲವು ಜಿಲ್ಲೆಗಳಲ್ಲಿ ಸ್ವಾಧೀನ ಪಡಿಸಿಕೊಂಡ ಭೂಮಿ ಪ್ರಮಾಣವನ್ನು ನೋಡಿದರೆ ನಮ್ಮಲ್ಲಿ ಅಧಿಕಾರಶಾಹಿ ಬಲಾಢ್ಯರೊಂದಿಗೆ ಶಾಮೀಲಾಗಿ ಏನೂ ಮಾಡಲು ಹೇಸುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಈ ಕೆಳಗಿನ ಜಿಲ್ಲೆಗಳಲ್ಲಿ ಘೋಷಿತಭೂಮಿಯೇ ಅತ್ಯಲ್ಪ. ಇಂತಹ ಅಲ್ಪಪ್ರಮಾಣವನ್ನು ಕೂಡ ಸಂಪೂರ್ಣ ಸ್ವಾಧೀನ ಪಡಿಸಿಕೊಂಡಿಲ್ಲ. ಕೊಡಗಿನಲ್ಲಿ ೦೨ ಎಕರೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ ೫೦೪ ಎಕರೆ, ಉತ್ತರಕನ್ನಡದಲ್ಲಿ ೨೩೫ ಎಕರೆ ಮತ್ತು ಶಿವಮೊಗ್ಗದಲ್ಲಿ ೧೮೭೬ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಬೆಂಗಳೂರಲ್ಲಿ ಘೋಷಿತ ೬೩೧ ಎಕರೆಯಲ್ಲಿ ಒಂದು ಎಕರೆನೂ ಸರಕಾರದ ಸ್ವಾಧೀನಕ್ಕೆ ಬರಲಿಲ್ಲ. ಕೋಲಾರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕ್ರಮವಾಗಿ ೪೧೯ ಮತ್ತು ೫೫೬ ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ (ಕೋಷ್ಟಕ – ೬). ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚು ಭೂಮಿ ಘೋಷಿತವಾದರೂ ಸ್ವಾಧಿನ ಪಡಿಸಿಕೊಂಡ ಭೂಮಿ ದೊಡ್ಡ ಪ್ರಮಾಣದಲ್ಲ, ಘೋಷಿತ ಭೂಮಿಯ ಶೆ. ೩೫ರಿಂದ ೬೦ರಷ್ಟು ಹೆಚ್ಚುವರಿ ಭೂಮಿಯನ್ನು ಸರಕಾರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸ್ವಾಧೀನ ಪಡಿಸಿಕೊಂಡಿದೆ. ಸ್ವಾಧೀನಪಡಿಸಿಕೊಂಡಿರುವುದನ್ನು ವಿತರಿಸಿರುವುದಕ್ಕೆ ಸಂಬಂಧಿಸಿದ ಅಂಕಿಅಂಶಗಳು ಇನ್ನೂ ಹಾಸ್ಯಾಸ್ಪದವಾಗಿವೆ. ಅರ್ಧಕರ್ಧ ಸ್ವಾಧೀನ ಪಡಿಸಿಕೊಂಡ ಭೂಮಿಯನ್ನು ಕೂಡ ಭೂರಹಿತರಿಗೆ ಹಂಚಿಲ್ಲ. ಸ್ವಾಧೀನಪಡಿಸಿಕೊಂಡ ೧,೫೪,೨೯೩ ಎಕರೆಗಳನ್ನು ೧,೦೪,೪೩೭ ಎಕರೆಗಳನ್ನು ಅಥವಾ ಸ್ವಾಧೀನ ಪಡಿಸಿಕೊಂಡ ಭೂಮಿಯ ಶೇ. ೬೭ ರಷ್ಟನ್ನು ಮಾತ್ರ ವಿತರಿಸಲಾಗಿದೆ (ಕೋಷ್ಟಕ – ೬). ವಿತರಣೆಯಾದ ೧,೦೪,೪೩೭ ಎಕರೆಗಳಲ್ಲಿ ಶೇ. ೬೨ರಷ್ಟು (೬೩,೮೯೧ ಎಕರೆ) ಭೂಮಿ ದಲಿತ ಮತ್ತು ಬುಡಕ್ಟಟು ಜನರಿಗೆ ಹೋಗಿದೆ ಎನ್ನುವುದು ಸಮಧಾನಕರ ಸಂಗತಿ. ಅದರೆ ದಲಿತ ಮತ್ತು ಬುಡಕಟ್ಟು ಜನರಿಗೆ ವಿತರಣೆಯಾದ ಭೂಮಿಯ ಗುಣಮಟ್ಟವನ್ನು ಪರೀಕ್ಷಿಸಿದರೆ ಇಡೀ ಭೂಸುದಾರಣ ಪ್ರಕ್ರಿಯೆಯ ಬಗ್ಗೆನೇ ಭ್ರಮೆ ನಿರಶನವಾಗುತ್ತದೆ. ದಲಿತ ಮತ್ತು ಬುಡಕಟ್ಟು ಜನರಿಗೆ ವಿತರಣೆಯಾದ ಭೂಮಿಯ ಶೇ. ೭೦ಕ್ಕಿಂತಲೂ ಹೆಚ್ಚಿನ ಭೂಮಿ ಒಣ ಭೂಮಿ. ನಲ್ಪತ್ತರಿಂದ ಐವತ್ತು ಎಕರೆಯಷ್ಟು ಇಂತಹ ಒಣ ಭೂಮಿ ಇರುವ ಭೂಮಾಲಿಕರೇ ಕೂಲಿಗಾಗಿ ವಲಸೆ ಹೋಗು ಪ್ರಸಂಗಗಳು ನಮ್ಮ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಕಾಣುತ್ತೇವೆ. ಇಂತಹ ಪರಿಸರದಲ್ಲಿ ಒಂದರಿಂದ ಎರಡು ಎಕರೆಯಷ್ಟು ದೊರೆಯುವ ಒಣಭೂಮಿಯಿಂದ ದಲಿತರು ಏನು ಮಾಡಬಹುದು. ಹೆಚ್ಚುವರಿ ಘೋಷಣೆ, ಸ್ವಾಧೀನ ಪಡಿಸಿಕೊಂಡಿರುವ ಭೂಮಿ ಮತ್ತು ಸ್ವಾಧೀನ ಪಡಿಸಿಕೊಂಡಿರುವುದರಲ್ಲಿ ವಿತರಿಸಿದ ಪ್ರಮಾಣ ಎಲ್ಲಾವನ್ನು ಪರಿಗಣಿಸಿದರೆ ವಿತರಿಸಿದ ಭೂಮಿಯಲ್ಲಿ ಶೇ. ೬೧ರಷ್ಟು ದಲಿತ ಮತ್ತು ಬುಡಕಟ್ಟು ಜನರಿಗೆ ಹೋಗಿರುವುದು ವಿಶೇಷವೇ ಸರಿ. ಹೆಚ್ಚುವರಿ ಭೂಮಿಯ ವಿತರಣೆಯನ್ನು ಕೇವಲ ಶೇಕಡವಾರು ಲೆಕ್ಕಚಾರಕ್ಕೆ ಸೀಮಿತಗೊಳಿಸಿದರೆ ದೊಡ್ಡ ಪ್ರಮಾಣದ ಭೂಮಿ ದಲಿತ ಮತ್ತು ಬುಡಕಟ್ಟು ಜನರಿಗೆ ಲಭ್ಯವಾಗಿದೆ ಎನ್ನುವ ಕಲ್ಪನೆ ಬರಬಹುದು. ಘೋಷಿತ ಭೂಮಿ, ಅದರಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿ ಮತ್ತು ಅದರಲ್ಲಿ ವಿತರಿಸಿದ ಭೂಮಿ ಈ ಎಲ್ಲದರ ಅಂಕೆಸಂಕೆಗಳನ್ನು ಜತೆಜತೆಗೆ ಇಟ್ಟು ಕೊಂಡು ನೋಡಿದರೆ ಮಾತ್ರ ಎಷ್ಟು ಅಲ್ಪಪ್ರಮಾಣದ (ಮತ್ತು ಅಲ್ಪ ಗುಣಮಟ್ಟದ) ಭೂಮಿ ಎಲ್ಲಾ ಹಂತಗಳಲ್ಲೂ ಭೂಮಾಲಿಕರ ಹಿಡಿತದಿಂದ ಹೊರಬಂದಿದೆ ಮತ್ತು ಭೂರಹಿತರ (ದಲಿತರ) ಕೈಸೇರಿದೆ ಎನ್ನುವುದು ಸ್ಪಷ್ಟವಾಗಬಹುದು.

ವೆಲೇರಿಯನ್ ರಾಡ್ರಿಗಸ್ ಪ್ರಕಾರ “ಗರಿಷ್ಠಭೂಮಿ ಮಿತಿಯ ಕಾನೂನಿನಡಿಯಲ್ಲಿ ಇದ್ದ ಹೆಚ್ಚುವರಿ ಭೂಮಿಯಲ್ಲಿ ಬಹಳ ಕಡಿಮೆ ಪ್ರಮಾಣದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ದೊಡ್ಡ ದೊಡ್ಡ ರೈತರಿಗೆ ಈ ಕಾಯಿದೆಯಿಂದಾಗಿ ಹೆಚ್ಚಿನ ಸಷ್ಟವೇನೂ ಆಗಲಿಲ್ಲ. ಇದರೊಂದಿಗೆ ಐದು ಜನರಿರುವ ಕುಟುಂಬಗಳಿಗೆ ಹೆಚ್ಚುವರಿ ಯುನಿಟ್‌ಗಳನ್ನು ನೀಡಿದ್ದು ಹಾಗೂ ಬೆಳೆದ ವಯಸ್ಸಿನ ಗಂಡು ಮಕ್ಕಳನ್ನು ಪ್ರತ್ಯೇಕ ಕುಟುಂಬ ಎಂದು ಪರಿಗಣಿಸಿದ್ದು ಅವರಿಗೆ ಹಸ್ತಕ್ಷೇಪ ಮಾಡಲು ಬಹಳ ಅವಕಶ ಮಾಡಿಕೊಟ್ಟಿತು. ಪ್ಲಾಂಟೇಶನ್‌ಗಳಿಗೆ ಗರಿಷ್ಠಮಿತಿ ಅನ್ವಯವಾಗಲಿಲ್ಲ ಭೂಮಿದಾಖಲೆಗಳನ್ನು ಕಾಲಕಾಲಕ್ಕೆ ಪರಿಶೀಲಿಸುವ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಗರಿಷ್ಠಮಿತಿಗಿಂತ ಹೆಚ್ಚಿನ ಭೂಮಿ ಇದ್ದರೂ ಅದನ್ನು ಗುರುತಿಸುವ ಸಾಧ್ಯತೆಗಳು ಕಡಿಮೆ ಇದ್ದವು. ನಿಖರವಾಗಿ ಹೆಳುವುದಾದರೆ ಕರ್ನಾಟಕದ ಬಂಡವಾಳಶಾಹಿ ಕೃಷಿಕ ವರ್ಗ ಎಂದಿನಂತೆಯೇ ಇತ್ತು.’[10] ಕೆಲವು ಜಿಲ್ಲೆಗಳಲ್ಲಿ ಘೋಷಿತವಾದ ಮತ್ತು ಅದರಲ್ಲಿ ಸ್ವಾಧೀನಪಡಿಸಿ ಕೊಂಡ ಹೆಚ್ಚುವರಿ ಭೂಮಿ ಪ್ರಮಾಣವನ್ನು ನೋಡಿದರೆ ಭೂಸುಧಾರಣೆಯನ್ನು ಜಾರಿಗೆ ತಂದಿರುವ ಅಧಿಕಾರಶಾಹಿ ಭೂಮಾಲಿಕರೊಂದಿಗೆ ಶಾಮೀಲಾಗಿರುವ ಸಾಧ್ಯತೆ ಹೆಚ್ಚು ಇದೆ. ಹೆಚ್ಚಿನ ಪ್ರಮಾಣದಲ್ಲಿ ಗೇಣಿದಾರಿಕೆ ರದ್ದಾದ ಕೆಲವು ಜಿಲ್ಲೆಗಳಲ್ಲೂ ಕೂಡ (ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ) ಹೆಚ್ಚುವರಿ ಭೂಮಿಯ ಘೋಷಣೆ ಮತ್ತು ಸ್ವಾಧೀನ ಪಡಿಸಿಕೊಂಡಿರುವುದು ಕಡಿಮೆ ಇದೆ. ಅಷ್ಟು ಮಾತ್ರವಲ್ಲ ಸ್ವಾಧೀನ ಪಡಿಸಿಕೊಂಡಿರುವುದನ್ನು ಸಂಪೂರ್ಣವಾಗಿ ಹಂಚಲು ಸರಕಾರ ವಿಫಲವಾಗಿದೆ.

೧೯೭೪ರ ಕಾಯಿದೆ ಭೂರಹಿತ ಕೃಷಿ ಕಾರ್ಮಿಕರ ಆಸಕ್ತಿಯನ್ನು ರಕ್ಷಿಸಲು ವಿಶೇಷ ಕ್ರಮವಹಿಸಿದೆ ಎನ್ನುವುದು ಕಾಯಿದೆಯ ಕೆಲವು ಸೆಕ್ಷನ್‌ಗಳಿಂದ ಅರ್ಥವಾಗುತ್ತದೆ. ಆದರೆ ಮೇಲಿನ ಅಂಕಿಅಂಶಗಳಿಂದ ಭೂರಹಿತರ ಅಸಕ್ತಿಯನ್ನು ವಿಶೇಷವಾಗಿ ಗಣನೆಗೆ ತೆಗೆದುಕೊಂಡಿರುವುದು ಕಂಡು ಬರುತ್ತಿಲ್ಲ. ಭೂರಹಿತರಿಗೆ ಅವರ ವಾಸದ ಮನೆಗಳನ್ನು ಕೊಡಿಸುವುದಕ್ಕೆ ಸಂಬಂಧಿಸಿದ ಅಂಕಿಅಂಶಗಳಿಂದಲೂ ಅವರ ಆಸಕ್ತಿಗಳನ್ನು ರಕ್ಷಿಸಲು ಭೂಸುಧಾರಣೆಯನ್ನು ಅನುಷ್ಠಾನಕ್ಕೆ ತಂದವರು ವಿಶೇಷ ಪ್ರಯತ್ನ ಪಟ್ಟಂತೆ ಕಾಣುವುದಿಲ್ಲ. ಇಡೀ ರಾಜ್ಯದಲ್ಲಿ ೨೫,೪೪೪ ಭೂರಹಿತ ಕಾರ್ಮಿಕರು ತಮ್ಮ ವಾಸದ ಮನೆ ಸ್ವಾಧೀನಕ್ಕೆ ಅಜಿ ಸಲ್ಲಿಸಿದ್ದರು. ೧೯೭೧ ಮತ್ತು ೧೯೮೧ರಲ್ಲಿ ರಾಜ್ಯದಲ್ಲಿದ್ದ ಕೃಷಿ ಕಾರ್ಮಿಕರ ಶೇ. ಒಂದಕ್ಕಿಂತಲೂ ಕಡಿಮೆ ಸಂಖ್ಯೆ ಕೃಷಿ ಕಾರ್ಮಿಕರು ಅರ್ಜಿ ಸಲ್ಲಿಸಿದ್ದಾರೆ (ಕೋಷ್ಟಕ – ೫). ಈ ಅರ್ಜಿಗಳಲ್ಲಿ ೨೨,೦೪೦ ಅರ್ಜಿಗಳು ಇತ್ಯರ್ಥಗೊಂಡಿವೆ. ಅರ್ಜಿದಾರರ ಪರವಾಗಿ ೧೩,೬೮೭ ಅರ್ಜಿಗಳು ಇತ್ಯರ್ಥಗೊಂಡವು. ಅಂದರೆ ಸಲ್ಲಿಸಿದ ಅರ್ಜಿಗಳಲ್ಲಿ ಶೇ. ೫೪ ಅರ್ಜಿಗಳು ಭೂರಹಿತರ ಪರ ಇತ್ಯರ್ಥಗೊಂಡವು. ಹೆಚ್ಚು ಕಡಿಮೆ ಸರಿ ಅರ್ಧಕರ್ಧ ಅರ್ಜಿ ಸಲ್ಲಿಸಿದ ಭೂರಹಿತರು ತಾವು ವಾಸಿಸುವ ಮನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ದಕ್ಷಿಣ ಕನ್ನಡ, ಉತ್ತರ ಕನ್ನಡ, ರಾಯಚೂರು ಮತ್ತು ಗುಲ್ಬರ್ಗ ಜಿಲ್ಲೆಗಳಲ್ಲಿ ಹೆಚ್ಚು ಸಂಖ್ಯೆಯ ಅರ್ಜಿಗಳು ಬಂದಿವೆ. ದ.ಕ.ದಲ್ಲಿ ೧೪,೩೦೬, ಉ.ಕ.ದಲ್ಲಿ ೩೭೬೯, ರಾಯಚೂರಿನಲ್ಲಿ ೨೭೪೬ ಮತ್ತು ಗುಲ್ಬರ್ಗದಲ್ಲಿ ೧೫೭೦ ಅರ್ಜಿಗಳು ಬಂದಿವೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಹೆಚ್ಚು ಭೂರಹಿತ ಕಾರ್ಮಿಕರು ತಮ್ಮ ವಾಸದ ಮನೆಗಳನ್ನು ಈ ಜಿಲ್ಲೆಗಳಲ್ಲಿ ಉಳಿಸಿಕೊಂಡಿದ್ದಾರೆ (ಕೋಷ್ಟಕ – ೫). ಕೋಲಾರ, ಮಂಡ್ಯ, ಮೈಸೂರು. ತುಮಕೂರು ಕೊಡಗು ಮುಂತಾದ ಜಿಲ್ಲೆಗಳಲ್ಲಿ ನೂರಕ್ಕಿಂತಲೂ ಕಡಿಮೆ ಅರ್ಜಿಗಳು ಬಂದಿವೆ. ಇಷ್ಟು ಕಡಿಮೆ ಸಂಖ್ಯೆಯಲ್ಲಿ ಬಂದ ಅರ್ಜಿಗಳಲ್ಲಿ ಕೂಡ ಅರ್ಧಕರ್ಧ ಅರ್ಜಿಗಳು ತಿರಸ್ಕೃತವಾಗಿವೆ. ಉಳಿದ ಜಿಲ್ಲೆಗಳಲ್ಲಿ ನೂರು ಇನ್ನೂರರ ರೇಂಜಲ್ಲಿ ಅರ್ಜಿಗಳು ಬಂದಿವೆ ಮತ್ತು ಅಲ್ಲೂ ಸರಾಸರಿ ಅರ್ಧದಷ್ಟು ಅರ್ಜಿದಾರರು ವಾಸದ ಮನೆಗಳನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ಭೂರಹಿತರಿಗೆ ಹಂಚಿದ ಭೂಮಿ ಪ್ರಮಾಣ, ಅದರ ಗುಣಮಟ್ಟ, ಭೂರಹಿತರು ಉಳಿಸಿಕೊಂಡ ವಾಸದ ಮನೆಗಳ ಪ್ರಮಾಣ ಇತ್ಯಾದಿಗಳಿಗೆ ಸಂಬಂಧಿಸಿದ ಅಂಕಿಅಂಶಗಳು ೧೯೭೪ರ ಕಾಯಿದೆ ಭೂರಹಿತರ ಹಿತಾಸಕ್ತಿ ರಕ್ಷಸಲು ವಿಶೇಷ ಪ್ರಯತ್ನ ಪಟ್ಟಿರುವುದಕ್ಕೆ ಸಾಕ್ಷಿಯಾಗಿಲ್ಲ. ೧೯೭೪ರ ಕಾಯಿದೆ ಬರಹ ರೂಪದಲ್ಲಿ ಕ್ರಾಂತಿಕಾರಿಯೇ ಆಗಿತ್ತು. ಆದರೆ ಅದು ಅನುಷ್ಠಾನಕ್ಕೆ ಬಂದಾಗ ಅದರಲ್ಲಿನ ಬಹುತೇಕ ಕ್ರಾಂತಿಕಾರಿ ಅಂಶಗಳು ಶಕ್ತಿ ಕಳೆದುಕೊಂಡು ಕೇವಲ ಕಾಗದದ ಹುಲಿಯಂತಾದವು.

[1] ಎಂ. ಎ. ಎಸ್. ರಾಜನ್, ಕರ್ನಾಟಕದಲ್ಲಿ ಭೂಸುಧಾರಣೆ, ೧೯೮೭, ಪು. ೩೧

[2] ಕೆ. ಗೋಪಾಲ ಆಯ್ಯರ್, “ಟೆನೆನ್ಸಿ ರಿಫಾರ್ಮ್ಸ್ – ದಿ ಫೀಲ್ದ್ ಪರ್‌ಸ್ಟೆಕ್ಟಿವ್ಸ್,’ ಆಬ್ದುಲ್ ಆಜೀಜ್ ಮತ್ತು ಸುಧೀರ್ ಕೃಷ್ಣ (ಸಂ), ಲೇಂಡ್ ರಿಫೋರ್ಮ್ಸ್ ಇನ್ ಇಂಡಿಯಾವಾಲ್ಯೂಮ್ಕರ್ನಾಟಕಪ್ರೊಮಿಸಸ್ ಕೆಪ್ಟ್ ಆಂಡ್ ಮಿಸ್ಡ್, ನ್ಯೂಡೆಲ್ಲಿ: ಸೇಜ್ ಪಬ್ಲಿಕೇಶನ್ಸ್, ೧೯೮೪, ಪು. ೧೭೭ – ೨೦೪

[3] ಕೆ. ಗೋಪಾಲ ಆಯ್ಯರ್, “ಟೆನೆನ್ಸಿ ರಿಪೋರ್ಮ್ಸ್, ಪು. ೧೭೭ – ೨೦೪

[4] ಜೇಮ್ಸ ಮೇನರ್, “ಪ್ರಾಗ್‌ಮೆಟಿಕ್ ಪ್ರೋಗ್ರೆಸಿವ್ ನೆಸ್ ಇನ್ ರೀಜನಲ್ ಪೊಲಿಟಿಕ್ಸ್,’ ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ಎನ್ವಲ್ ನಂಬರ್, ೧೫ (೫,೬,೭) ೧೯೮೦, ಪು. ೨೦೧ – ೧೩, ಎಂ. ಎನ್. ಶ್ರೀನಿವಾಸ್ ಮತ್ತು ಎಮ್. ಎನ್. ಪಾನಿನಿ, ಪೊಲಿಟಿಕ್ಸ್ ಆಂಡ್ ಸೊಸೈಟಿ ಇನ್ ಕರ್ನಾಟಕ, ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೧೯ (೨), ಜನವರಿ ೧೯೮೪, ಪು. ೬೯ – ೭೫, ಎಮ್. ಎ. ಎಸ್. ರಾಜನ್, ಲೇಂಡ್ ರಿಫಾರ್ಮ್ಸ್ ಇನ್ ಕರ್ನಾಟಕ – ಎನ್ ಎಕೌಂಟ್ ಬೈ ಪಾರ್ಟಿಸಿಪೆಂಟ್ ಒಬ್ಸ್‌‌ರ್ವರ್, ಡೆಲ್ಲಿ: ಹಿಂದುಸ್ಥಾನ್ ಪಬ್ಲಿಷಿಂಗ್ ಕಾರ್ಪೋರೇಶನ್, ೧೯೮೬.

[5] ಎಮ್. ವಿ. ನಾಡಕರ್ಣಿ, “ಟಿನೆನ್ಸ್ ಫ್ರೊರ್ಮ್ ದಿ ಡೊಮಿನೆಂಟ್ ಕ್ಲಾಸ್ –ಎ ಡೆವಲಪಿಂಗ್ ಕಾಂಟ್ರಡಿಕ್ಷನ್ ಇನ್ ಲೇಂಡ್ ರಿಫೋರ್ಮ್ಸ್,’ ಎಕಾನಮಿಕ್ ಆಂಡ್ ಪೊಲಟಿಕಲ್ ವೀಕ್ಲಿ, ೧೧, (೫೨), ಡಿಸೆಂಬರ್ ೧೯೭೬, ಪು. ೧೩೭ -೧೪೬

[6] ನರೇಂದ್ರ ಪಾಣಿ, “ರಿಫೋರ್ಮ್ಸ್‌ಟು ಪ್ರಯಾಮ್ಟ್ ಚೇಂಜ್,’ ರಾಜಪುರೋಹಿತ್ (ಸಂ), ಲೇಂಡ್ ರಿಫೋರ್ಮ್ಸ್ ಇನ್ ಇಂಡಿಯಾ, ನ್ಯೂಡೆಲ್ಲಿ: ಆಶಿಸ್ ಪಬ್ಲಿಷಿಂಗ್ ಹೌಸ್, ೧೯೮೪, ಪು. ೪೨ – ೪೪

[7] ಚಂದ್ರ ಶೇಖರ್ ದಾಮ್ಲೆ, “ಲೇಂಡ್ ರಿಪೋರ್ಮ್ಸ್ ಲೆಜಿಶ್ಲೇಷನ್ ಇನ್ ಕರ್ನಾಟಕ – ಮಿಥ್ ಆಪ್ ಸಕ್ಸಸ್,’ ಎಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ, ೨೪ (೩೩), ಆಗಸ್ಟ್ ೧೯೮೯, ಪು. ೧೮೯೬ – ೧೯೦೬

[8] ಚಂದ್ರ ಶೇಖರ್ ದಾಮ್ಲೆ, “ಲೇಂಡ್ ರಿಫೋರ್ಮ್ಸ್ ಲೆಜಿಶ್ಲೇಷನ್ ಇನ್ ಕರ್ನಾಟಕ, ಪು. ೧೮೯೬ – ೧೯೦೬

[9] ಚಂದ್ರ ಶೇಖರ್ ದಾಮ್ಲೆ, “ಲೇಂಡ್ ರಿಫೋರ್ಮ್ಸ್ ಲೆಜಿಶ್ಲೇಷನ್ ಇನ್ ಕರ್ನಾಟಕ, ಪು. ೧೮೯೬ – ೧೯೦೬

[10] ವೆಲೇರಿಯನ್ ರಾಡ್ರಿಗಸ್, ಭೂಸುಧಾರಣ ಕಾಯಿದೆಯ ರಾಜಕಾರಣ, ಪು. ೮೬೩ – ೭೪.